ಗುರುತು ಕೇಳುತ್ತಾರೆ

1
ನನ್ನನ್ನು-ನಿಮ್ಮನ್ನು
ಕೇಳುವುದಿಲ್ಲ ಲೋಕ, ಅದರ ಗತಿ ಅದಕ್ಕೆ
ದಿನದ ಪಾಡು ದಿನಕ್ಕೆ : ಬೀದಿಯಲ್ಲಿ ಗದ್ದಲ,
ಪ್ರತಿಭಟನೆ, ರಸ್ತೆ ತಡೆ, ಸಂಚಾರ ಅಸ್ತವ್ಯಸ್ತ,
ದಿಕ್ಕೆಟ್ಟ ಸಂದಣಿ, ಅರ್ಜೆಂಟು ಹೋಗಬೇಕು
ಆಸ್ಪತ್ರೆ ತುಂಬ ರೋಗಿಗಳು, ಕೆಲವರು
ಈಗಲೋ ಇನ್ನೊಂದು ಗಳಿಗೆಯೊ,
ಯಾರಿಗೆ ಹೇಳುವುದು ನಮ್ಮೊಡಲ ಸಂಕಟ
ರಸ್ತೆ ಬಂದಾಗಿದೆ, ಎಲ್ಲೆಲ್ಲೂ ತಪಾಸಣೆ
ಲಾಠಿ ಬೀಸುವ ಪೊಲೀಸರು, ಎಚ್ಚರ
ತಪ್ಪಿದರೆ ಬೀಳುವುದು ಏಟು ಬೆನ್ನಮೇಲೆ

2
ಗುರುತಿನ ಚೀಟಿ ಕೇಳುತ್ತಾರೆ ಅವರು
ಹುಟ್ಟು ಸಾವಿನ ಗುಟ್ಟು ಕೇಳುತ್ತಾರೆ
ಒಂದಲ್ಲ ಹತ್ತು ಕಡೆ ತೋರಿಸಬೇಕು:
ಗುರುತು-ಚಹರೆ, ನಕಲಿಯಲ್ಲದ ಅಸಲೀ ಮುಖ
ಪೆಚ್ಚುಮೋರೆಯಲ್ಲಿ ನಿಂತರೆ ಜಬರಿಸುತ್ತಾರೆ-
‘ತೆಗೆಯಯ್ಯ ನಿನ್ನ ಮುಖವಾಡ.’

ತಿಳಿದೇ ಇರಲಿಲ್ಲ ನಮಗೆ ಮುಖ-
ವಾಡದ ಪವಾಡ, ಯಾರೂ
ನೋಡಿರಲಿಲ್ಲ ನಮ್ಮ ಮುಖ
ತೆರೆಮರೆಯಲ್ಲಿಯೇ ಉಸಿರಾಡಿ
ಹೊಟ್ಟೆಯ ರಟ್ಟೆಯ ಒಂದುಮಾಡಿ
ಬಡಿದಾಡಿದ್ದೆವು ಹಗಲೂ ಇರುಳೂ
ತುತ್ತು ಅನ್ನಕ್ಕಾಗಿ, ಗೇಣು ಬಟ್ಟೆಗಾಗಿ
ಸೂರಿಲ್ಲದೆ ಬೀದಿಯಲ್ಲೇ ಬೆಳೆದ ನಾವು:
ಗುರುತಿಲ್ಲದ ಬರೀ ಗೆರೆಗಳು
ಬಣ್ಣವಿಲ್ಲದ ಚಿತ್ರಗಳು;
ಕುಣಿದರೂ ಹೆಜ್ಜೆಗಳಿಲ್ಲ
ಹೆಜ್ಜೆ ಗುರುತುಗಳೂ ಇಲ್ಲ
ಇರಬಹುದು ನಮಗೂ
ತಿರುಗಾಲ ಪಾದಗಳು
ಪ್ರೇತಾತ್ಮಗಳ ಸಂಗಾತ
ನಾವೂ
ಅಲೆಯುತ್ತಿರಬಹುದು
ನೆಲೆ ನೀರಿಲ್ಲದೆ ದಿಕ್ಕು ದೆಸೆಯಿಲ್ಲದೆ

3
ಬಂದೂಕು ಎದೆಗೆ ಹಿಡಿದು
ಕೇಳುತ್ತಾರೆ ಅವರು:
‘ಯಾರು ನೀನು?’
‘ಎಲ್ಲಿಂದ ಬಂದೆ?’

4
‘ನಾನು ಯಾರು?
‘ಎಲ್ಲಿಂದ ಬಂದೆ?’

ದಿನಗಳೆದು, ವರ್ಷಗಳು ಉರುಳಿ
ತಲೆ ಹಣ್ಣಾದರೂ ಹೊಳೆಯುವುದಿಲ್ಲ
‘ನಾನು ಯಾರು?
‘ಎಲ್ಲಿಂದ ಬಂದೆ?’

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ