ಹಿಂದೊಮ್ಮೆ ಗುಡಿಹಳ್ಳಿ ಸರ್ ಅವರ ಬಳಿ ಮಾತಾಡುವಾಗ ತಮಗೆ ಹುಷಾರಿಲ್ಲ ಅಂತ ಅವರು ಹೇಳಿದದ್ದು ನೆನಪಿಗೆ ಬಂತು. ಆದರೆ ಅದು ಸಾವಿನ ರೂಪದಲ್ಲಿ ಕೂತಿದೆ ಎನ್ನುವ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನೊಂದಿಗೆ ಮಾತಾಡುವಾಗಲೇ ಅವರ ಧ್ವನಿ ಕ್ಷೀಣಿಸಿದಂತೆ ಅನಿಸುತ್ತಿತ್ತು. ಹೀಗೇ ಏನೋ ವಯೋಮಾನ ಸಹಜವಾಗಿ ಖಾಯಿಲೆ ಅಡರಿಕೊಂಡಿರುತ್ತದೆ… ಕಾಲಕ್ರಮದಲ್ಲಿ ಸುಧಾರಿಸುತ್ತದೆ ಅಂದುಕೊಂಡಿದ್ದೆ. ಆದರೆ ಇದು ಅವರ ಚಿತ್ರವನ್ನು ಸಂಪೂರ್ಣ ಕಲಕಿಬಿಡಬಹುದು ಎಂಬ ಅಂದಾಜೂ ನನಗೆ ಇರಲಿಲ್ಲ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

 

ಇ-ಅಂಚೆ ಕಾಲ ಶುರುವಾದ ಮೇಲೆ ನಮ್ಮ ಮನೆ ಗೇಟಿಗೆ ಸಿಕ್ಕಿಸಿರುವ ಪುಟ್ಟ ಕೆಂಪು ಅಂಚೆ ಪೆಟ್ಟಿಗೆಯ ಹೊಟ್ಟೆ ತುಂಬುವುದು ಕಡಿಮೆಯಾಯಿತು. ಹಾಗಾಗಿ ಅದರ ಹೊಟ್ಟೆ ಕಡೆ ನಾನೂ ಅಷ್ಟು ಗಮನ ಹರಿಸುವುದನ್ನು ನಿಲ್ಲಿಸಿದ್ದೆ. ನಾವು ಸ್ವಯಂಸ್ಫೂರ್ತವಾಗಿ ಚಂದಾದಾರರಾದ ಕೆಲವು ಮ್ಯಾಗಜೀನ್‌ಗಳು ವಾರಕ್ಕೊಂದರಂತೋ ಅಥವಾ ತಿಂಗಳಿಗೊಂದರಂತೋ ಬಂದರಷ್ಟೇ ಅದರ ಹೊಟ್ಟೆಗೆ ಊಟ. ಇಲ್ಲದಿದ್ದರೆ ನಿತ್ಯ ಏಕಾದಶಿ. ಬಹುಶಃ ಇದೇ ಕಾರಣಕ್ಕೆ ಅದು ಮುಖ ಕೆಂಪಗೆ ಮಾಡಿಕೊಂಡಿದೆಯೇನೋ ಎಂದು ನನಗೆ ಬಹಳ ಸಲ ಅನಿಸಿಸುತ್ತಿತ್ತು.

ಅವತ್ತೇನೋ ನನ್ನ ಕಣ್ಣುಗಳು ಅಚಾನಕ್ಕಾಗಿ ನಮ್ಮನೆ ಗೇಟಿನ ಅಂಚೆಪೆಟ್ಟಿಗೆಯ ಹೊಟ್ಟೆ ಕಡೆಗೆ ಹೊರಳಿದವು. ನೋಡಿದರೆ ಅದು ಏನೋ ಒಂದಿಷ್ಟು ಆಹಾರ ತುಂಬಿಸಿಕೊಂಡಂತೆ ಇತ್ತು. ಅದರ ಹೊಟ್ಟೆಯ ಪುಟ್ಟ ಕದ ತೆರೆದು ನೋಡಿದೆ. ‘ರಂಗ ನೇಪಥ್ಯ’ದ ಸಂಚಿಕೆ ಅದಕ್ಕೆ ಆಹಾರವಾಗಿ ಒದಗಿತ್ತು. ಆ ಪೆಟ್ಟಿಗೆ ನಿಸ್ಪೃಹ. ತನಗೆ ದಕ್ಕಿದ್ದನ್ನು ತಿಂದು ಮುಗಿಸದೆ ಹಾಗೇ ಉಳಿಸಿಬಿಡುವಂಥದ್ದು.

ಸರಿ ಅಂದುಕೊಂಡು ಎಂದಿನಂತೆ ಸಹಜವಾಗಿ ಆ ಸಂಚಿಕೆ ಹಿಡಿದು ನನ್ನ ಕೋಣೆ ಹೊಕ್ಕೆ. ಇಷ್ಟರ ನಡುವೆ ಮನಸ್ಸಿನಲ್ಲಿ ಏನೇನೊ ಚಿತ್ರಗಳು ಕದಲಲು ಆರಂಭಿಸಿದ್ದವು. ಹೊಸ ಚಿತ್ರಗಳೇನಲ್ಲ. ಹಳೆಯ ಪುನರಾವರ್ತಿತ ಚಿತ್ರಗಳು. ರಂಗ ನೇಪಥ್ಯದ ಸಂಚಿಕೆಯ ಪುಟಗಳನ್ನು ತಿರುವಲು ಒಂದು ರೀತಿಯ ಮುಜುಗರ. ಮನಸ್ಸಿನಲ್ಲಿ ಪಾಪಪ್ರಜ್ಞೆಯ ಸುಳಿ. ಚಂದಾ ಹಣ ಕಳುಹಿಸದೆಯೂ ರಂಗ ನೇಪಥ್ಯದ ಸಂಚಿಕೆ ತಪ್ಪದೆ ಬರುತ್ತಿತ್ತು. ರಂಗಭೂಮಿಯ ಬಗೆಗೆ ನಿಜದ ಕಾಳಜಿ ಮತ್ತು ಪ್ರೀತಿ ಇರುವವರು ಮಾತ್ರ ಎಲ್ಲ ಅಭಾವ ಮತ್ತು ಮಿತಿಗಳ ನಡುವೆ ಕೂಡ ತರುತ್ತಿದ್ದ ಪತ್ರಿಕೆ ಅದು. ಗುಡಿಹಳ್ಳಿ ನಾಗರಾಜ್ ಸರ್ ಆ ಪತ್ರಿಕೆ ಸಂಪಾದಕರು. ಕೋವಿಡ್ ಆರಂಭವಾಗಿ ಬಹುತೇಕರ ಬದುಕು ಮಕಾಡೆ ಮಲಗಲು ಆರಂಭಿಸಿದಾಗಲೂ ರಂಗ ನೇಪಥ್ಯ ಸಂಚಿಕೆ ಅಂಚೆ ಪೆಟ್ಟಿಗೆಯ ಹೊಟ್ಟೆ ಸೇರುತ್ತಿತ್ತು.

ಕಳೆದ ಮೂರ್ನಾಲ್ಕು ಸಂಚಿಕೆಗಳಲ್ಲಿ ಗುಡಿಹಳ್ಳಿ ನಾಗರಾಜ್ ಸರ್ ತುಂಬ ಸೂಚ್ಯವಾಗಿ ‘ಚಂದಾ ನವೀಕರಿಸುವವರು ಮತ್ತು ಚಂದಾದಾರರಾಗುವವರು ಆಗಿ’ ಎಂದು ಪುಟ್ಟ ಪ್ರಕಟಣೆ ಹೊರಡಿಸುತ್ತಿದ್ದರು. ನನ್ನ ಚಂದಾ ಅವಧಿ ಮುಗಿದು ಕಾಲ ಆಗಿತ್ತು. ನವೀಕರಿಸುಷ್ಟರಲ್ಲಿ ಕೋವಿಡ್ ಆರಂಭವಾಗಿ ಅತಂತ್ರ ಶುರುವಾಯಿತು. ಸಂಬಳ ನಿಂತು ಅತಂತ್ರ ಸೃಷ್ಟಿ. ಮುಂದೆ ಏನು ಹೇಗೆ ಎಂದು ತಲೆಯಲ್ಲಿ ಸುಳಿ ನಿರಂತರ ತಿರುಗುತ್ತಿದ್ದ ಸಂದರ್ಭದಲ್ಲೇ ರಂಗ ನೇಪಥ್ಯದ ಸಂಚಿಕೆ ಬರುತ್ತಿತ್ತು. ಮತ್ತು ಚಂದಾ ಮನವಿ ಪ್ರಕಟಣೆ ಕಾಣಿಸಿ ನನ್ನನ್ನು ಆರಂಭದಲ್ಲಿ ಎಚ್ಚರಿಸಿದಂತೆ ಮಾಡಿ ನಂತರದಲ್ಲಿ ಮೆದುವಾಗಿ ಚುಚ್ಚಲು ಶುರುಮಾಡಿತು.

ಇದ್ಯಾಕೋ ತೀರಾ ಹಿಂಸೆ ಅನಿಸುತ್ತಿದೆ ಅನಿಸಿದ ಹೊತ್ತು ನೇರ ಗುಡಿಹಳ್ಳಿ ಸರ್ ಅವರಿಗೆ ಫೋನ್ ಮಾಡಿ ‘ಸರ್ ನನ್ನ ಚಂದಾ ಅವಧಿ ಮುಗಿದು ಕಾಲ ಆಗಿದೆ. ಆದರೂ ನೀವು ಪ್ರೀತಿಯಿಂದ ಸಂಚಿಕೆ ಕಳುಹಿಸುತ್ತಲೇ ಇದ್ದೀರಿ. ಆದರೆ ಪತ್ರಿಕೆ ಹೊರತರುವ ಕಷ್ಟ ಎಂಥದ್ದು ಎಂದು ನನಗೆ ಗೊತ್ತೇ ಇದೆ. ಇದೇನೋ ದರಿದ್ರ ಕೋವಿಡ್ ಶುರುವಾಗಿ ಬದುಕಿನ ಗತಿಯಲ್ಲಿ ಏರುಪೇರಾಗಿದೆ. ಕೊಂಚ ಸಮಯ ಕೊಡಿ, ಚಂದಾ ಹಣ ಕಳಿಸ್ತೇನೆ’ ಅಂತ ವಿನಂತಿಸಿದ್ದೆ.

ಅಂದು ಗುಡಿಹಳ್ಳಿ ಸರ್ ನನಗೆ ‘ನೀವು ಪತ್ರಿಕೆಯ ಆಜೀವ ಸದಸ್ಯರಾಗಿ’ ಅಂತೇನೋ ಹೇಳಿದ ನೆನಪು. ಆ ಕ್ಷಣಕ್ಕೆ ಆಜೀವ ಸದಸ್ಯ ಆಗಿಬಿಡಬೇಕು ಅಂತೇನೋ ಅನಿಸಿತು. ಆದರೆ ಬದುಕಿನ ಅತಂತ್ರತೆ ಅದಕ್ಕೆ ಅವಕಾಶ ಕಲ್ಪಿಸುವುದನ್ನು ಮುಂದೂಡುತ್ತಿತ್ತು. ನಾನು ಹೂ ಅಂದುಬಿಟ್ಟು ಮಾತುತಪ್ಪುವುದನ್ನು ರೂಢಿ ಮಾಡಿಕೊಂಡೆ.

ಮತ್ತೆ ಸಂಚಿಕೆ ಬಂದು ಅಂಚೆಪೆಟ್ಟಿಗೆಯ ಹೊಟ್ಟೆ ತುಂಬಿಕೊಳ್ಳುವವರೆಗೂ ನನಗೆ ರಂಗನೇಪಥ್ಯದ ನೆನಪೇ ಇರುತ್ತಿರಲಿಲ್ಲ. ಆದರೆ ಕಂಡಾಗ ಮಾತ್ರ ಒಂದು ಬಗೆಯ ಮುಜಗರ ಮತ್ತು ನಾಚಿಕೆ ಆಗುತ್ತಿತ್ತು. ಓದಲು ಕುತೂಹಲ. ಆದರೆ ಪುಟ ತಿರುವಲು ಪಾಪಪ್ರಜ್ಞೆ. ಗುಡಿಹಳ್ಳಿ ಸರ್ ತುಂಬ ಶ್ರದ್ಧೆವಹಿಸಿ ತರುತ್ತಿದ್ದ ಪತ್ರಿಕೆ ಅದು.

ಬೆಂಗಳೂರಿನ ರಂಗಭೂಮಿಯ ಚಿತ್ರಣಕ್ಕಷ್ಟೇ ಸೀಮಿತ ಮಾಡಿಕೊಂಡು ಕೂತಿದ್ದ ನನ್ನಂಥವನಿಗೆ ರಂಗ ನೇಪಥ್ಯದ ಸಂಚಿಕೆಗಳು ರಾಜ್ಯದ ಬೇರೆಬೇರೆ ಭಾಗಗಳಲ್ಲಿ ರಂಗಭೂಮಿ ಹೇಗೆ ಜೀವಂತವಾಗಿದೆ ಎಂದು ಅವುಗಳ ಸ್ವರೂಪದ ದರ್ಶನ ಮಾಡಿಸುತ್ತಿತ್ತು. ಹಾಗಾಗಿ ತುಂಬ ಕುತೂಹಲದಿಂದಲೇ ಓದುತ್ತಿದ್ದೆ. ಪುಟಗಳ ಸಂಖ್ಯೆ ಕಡಿಮೆ ಆಯಿತು ಅನಿಸುತ್ತಿದ್ದರೂ ತುಂಬ ಮೌಲಿಕ ಅನಿಸುವ ಲೇಖನಗಳಿರುತ್ತಿದ್ದವು. ಚಂದಾ ನೀಡಿ ಓದುವಾಗಿನ ಹಿತ ಮತ್ತು ನಿರಾಳದ ಸ್ಥಿತಿ ಬೇರೆ. ತುಂಬ ಶ್ರಮವಹಿಸಿ ಪತ್ರಿಕೆ ತರುತ್ತಿದ್ದಾಗ ಅದನ್ನು ಪುಕ್ಕಟೆಯಾಗಿ ಓದುವುದು ಹಿಂಸೆ ಹುಟ್ಟಿಸುವ ಕೆಲಸ.

ಅವತ್ತೂ ಹಾಗೇ ರಂಗ ನೇಪಥ್ಯದ ಸಂಚಿಕೆ ತಂದು ನನ್ನ ಟೇಬಲ್ ಮೇಲಿಟ್ಟು ಕೂತೆ. ಪಾಪಪ್ರಜ್ಞೆಯನ್ನ ಕುತೂಹಲ ಓವರ್‍ಟೇಕ್ ಮಾಡಿದ್ದರಿಂದ ಸಂಚಿಕೆ ತಿರುವಲು ಆರಂಭಿಸಿದೆ. ಸುಮ್ಮನೆ ಹೀಗೇ ಕಣ್ಣಾಡಿಸುತ್ತ ಈ ಬಾರಿ ಯಾರ್ಯಾರು ಬರೆದಿದ್ದಾರೆ ಎಂದಷ್ಟೇ ನೋಡಿ ಇಟ್ಟೆ. ಬಾಬು ಹಿರಣ್ಣಯ್ಯ ಸರ್ ಅವರಿಂದ ಫೋನ್ ಬಂತು. ರಿಸೀವ್ ಮಾಡಿ ಮಾತು ಸಾಗಿಸಿದ್ದಾಗ ‘ನೋಡಿ ಗುಡಿಹಳ್ಳಿ ಹೋಗ್ಬಿಟ್ರಂತೆ…’ ಅಂದರು. ಕ್ಷಣ ಪೆಚ್ಚಾದೆ.

ಇವರ ಬದುಕು ಮುಕ್ತಾಯದ ಹಂತಕ್ಕೆ ಬರುತ್ತಿರುವ ಹಾಗೆ ಅನಿಸ್ತಿದೆ… ಅಂತನ್ನುವ ಸೂಚನೆಗಳು ಮೊದಲೇ ಸಿಕ್ಕು ಸಾವಿನ ಸುದ್ದಿ ಬಂದರೆ ಅಷ್ಟು ಅಚ್ಚರಿ ಅನಿಸುವುದಿಲ್ಲ. ಏನೂ ಇಲ್ಲದೆ ಧುತ್ತನೆ ಮಾಯವಾಗುವುದು ಅಂದರೆ ಸಾವಿನ ಅತೀತತೆ, ಅದರ ವಿಲಾಸ ಮತ್ತು ಅದರ ಘನತೆಯ ಬಗೆಗೆ ಚಿತ್ತಭಿತ್ತಿಯಲ್ಲಿ ಏನೇನೋ ಸಿದ್ಧಾಂತಗಳು ಕದಲಲು ಆರಂಭಿಸುತ್ತವೆ. ಬಾಬು ಸರ್ ಹಾಗೆ ಹೇಳಿದಾಗ ನನ್ನ ಹುಬ್ಬುಗಳು ಮೇಲೆದ್ದವು.

ಹಿಂದೊಮ್ಮೆ ಗುಡಿಹಳ್ಳಿ ಸರ್ ಅವರ ಬಳಿ ಮಾತಾಡುವಾಗ ತಮಗೆ ಹುಷಾರಿಲ್ಲ ಅಂತ ಅವರು ಹೇಳಿದದ್ದು ನೆನಪಿಗೆ ಬಂತು. ಆದರೆ ಅದು ಸಾವಿನ ರೂಪದಲ್ಲಿ ಕೂತಿದೆ ಎನ್ನುವ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನೊಂದಿಗೆ ಮಾತಾಡುವಾಗಲೇ ಅವರ ಧ್ವನಿ ಕ್ಷೀಣಿಸಿದಂತೆ ಅನಿಸುತ್ತಿತ್ತು. ಹೀಗೇ ಏನೋ ವಯೋಮಾನ ಸಹಜವಾಗಿ ಖಾಯಿಲೆ ಅಡರಿಕೊಂಡಿರುತ್ತದೆ… ಕಾಲಕ್ರಮದಲ್ಲಿ ಸುಧಾರಿಸುತ್ತದೆ ಅಂದುಕೊಂಡಿದ್ದೆ. ಆದರೆ ಇದು ಅವರ ಚಿತ್ರವನ್ನು ಸಂಪೂರ್ಣ ಕಲಕಿಬಿಡಬಹುದು ಎಂಬ ಅಂದಾಜೂ ನನಗೆ ಇರಲಿಲ್ಲ.

ರಂಗ ನೇಪಥ್ಯ ಪತ್ರಿಕೆ ಹೊರತರುತ್ತಿದ್ದವರು ಇದೇನು ಹೀಗೆ ಧುತ್ತನೆ ಯಾರೂ ಕಾಣದ ನೇಪಥ್ಯಕ್ಕೆ ಸರಿದು ಹೋಗಿಬಿಟ್ಟರಲ್ಲ ಎಂದು ಕೆಲವರ ಬಳಿ ವಿಚಾರ ಹೆಕ್ಕಿದೆ. ನಂತರ ತಿಳಿದ ವಿಚಾರ ನಾನು ಅಂದುಕೊಂಡಿದ್ದಕ್ಕಿಂತ ಭಯಾನಕವಾಗಿತ್ತು. ಮತ್ತು ನಾನು ಇಷ್ಟು ಅಸೂಕ್ಷ್ಮವಾಗಿಬಿಟ್ಟೆನಾ ಎಂದು ನನ್ನನ್ನು ನಾನು ಕೇಳಿಕೊಳ್ಳುವಂತೆ ಮಾಡಿತು.

ಗುಡಿಹಳ್ಳಿ ಸರ್ ಅವರಿಗೆ ಯಕೃತ್ತಿನ ಕ್ಯಾನ್ಸರ್ ನಾಲ್ಕನೆಯ ಸ್ಟೇಜ್ ತಲುಪಿತ್ತು ಎಂಬ ವಿಚಾರ ನನ್ನ ಕಿವಿ ಮುಟ್ಟಿರಲೇ ಇಲ್ಲ. ನನಗಲ್ಲ, ಸ್ವತಃ ಗುಡಿಹಳ್ಳಿ ಸರ್ ಅವರಿಗೇ ಈ ವಿಚಾರ ಕಿವಿಮುಟ್ಟದಂತೆ ಎಚ್ಚರವಹಿಸಲಾಗಿತ್ತಂತೆ. ಇದು ಗುಡಿಹಳ್ಳಿ ಸರ್ ಅವರಿಗೆ ತಿಳಿಯದ ಕಾರಣ ‘ನಾನು ಗುಣಮುಖ ಆಗ್ತೀನಲ್ಲವಾ..?’ ಎಂದು ತಮ್ಮ ಸ್ನೇಹಿತರಾದ ಮಲ್ಲಿಕಾರ್ಜನ ಕಡಕೋಳ ಸರ್ ಅವರ ಬಳಿ ಕೇಳುತ್ತಿದ್ದರಂತೆ. ಈ ಬಗ್ಗೆ ಒಂದು ಚೆಂದದ ಲೇಖನವನ್ನ ಕಡಕೋಳ ಸರ್ ಬರೆದಾಗಲೇ ನನಗೆ ಗುಡಿಹಳ್ಳಿ ಸರ್ ಬಗ್ಗೆ ಒಂದು ಸ್ಪಷ್ಟತೆ ದಕ್ಕಿದ್ದು.

ಅದೇ ಹೊತ್ತು ನಾನು ಈ ಹಿಂದೆ ಗುಡಿಹಳ್ಳಿ ಸರ್ ಅವರ ಜೊತೆ ಮಾತಾಡಿದಾಗ ಅವರ ಧ್ವನಿಯಲ್ಲಿದ್ದ ನೋವು, ಅಸಹಾಯಕತೆಯ ಝಲಕುಗಳನ್ನು ನಿಲುಕಿಸಿಕೊಂಡೆ. ಈಗ ಏನು ಯೋಚಿಸಿ ಏನು? ಅವರು ನಿರ್ಗಮಿಸಿದ್ದು ಆಗಿದೆ ಅಂದುಕೊಳ್ಳುವ ಹೊತ್ತಲ್ಲಿ ನಾನು ಅವರ ಸಂಪರ್ಕಕ್ಕೆ ಬಂದದ್ದು ಹೇಗೆ ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ.

ಯಾವ ಸಂದರ್ಭ ಎಂದು ನನಗೆ ನೆನಪಾಗಲೇ ಇಲ್ಲ. ಆದರೆ ಅವರೇ ನನಗೆ ಕರೆಮಾಡಿ ಮಾತು ಆರಂಭವಾಗಿ ಬಾಂಧವ್ಯ ಬೆಳೆಯಿತು ಎಂದೇನೊ ಮನಸ್ಸಿಗೆ ಬಂತು. ಆದರೆ ಕರೆ ಮಾಡಿದ್ದು ಯಾವ ವಿಚಾರಕ್ಕೆ? ನೆನಪಾಗುತ್ತಿಲ್ಲ.

ನಾವು ನಮ್ಮದೇ ರಂಗತಂಡ ಕಟ್ಟಿಕೊಂಡು ಪ್ರಯೋಗಗಳ ಸರ್ಕಸ್ ಆರಂಭಿಸಿದ್ದ ಕಾಲ ಅದು ಅನಿಸುತ್ತೆ. ಏನೇನೋ ಲೆಕ್ಕಾಚಾರಗಳು, ಏನೇನೋ ಕಸರತ್ತುಗಳಲ್ಲಿ ನಾನು ಕಲಸಿ ಹೋಗುತ್ತಿದ್ದ ಸಮಯ. ಈ ಎಲ್ಲ ಗುಡಿಹಳ್ಳಿ ಸರ್ ಗಮನಿಸುತ್ತಿದ್ದಾರೆ ಎನ್ನುವ ಯಾವ ಅಂದಾಜೂ ನನ್ನಲ್ಲಿ ಇರಲಿಲ್ಲ. ಆದರೆ ಅವರ ಹೆಸರು ಕೇಳಿದ್ದೆ. ಮತ್ತು ಅವರ ಬರವಣಿಗೆಗಳನ್ನು ಓದಿದ್ದೆ ಮತ್ತು ಓದುತ್ತಿದ್ದೆ. ಅವರು ಉತ್ತರ ಕರ್ನಾಟಕ ಭಾಗದಿಂದ ಬಂದವರು, ಇಂಗ್ಲಿಷ್ ಎಂ.ಎ. ಮಾಡಿಕೊಂಡಿದ್ದರು, ಪ್ರಜಾವಾಣಿಯಲ್ಲಿ ಕಾಲು ಶತಮಾನದಷ್ಟು ಕಾಲ ಕಾರ್ಯನಿರ್ವಹಿಸಿದವರು. ಈ ಯಾವುವೂ ನನಗೆ ಆ ಹೊತ್ತು ತಿಳಿದಿರಲಿಲ್ಲ. ರಂಗವಿಮರ್ಶೆಗಳನ್ನು ಗುಡಿಹಳ್ಳಿ ಸರ್ ಬರೆಯುತ್ತಿದ್ದರು ಮತ್ತು ನಾನು ಅವುಗಳನ್ನು ತಪ್ಪದೆ ಓದುತ್ತಿದ್ದೆ ಅಷ್ಟೇ. ಯಾಕೆಂದರೆ ಅವುಗಳಲ್ಲಿ ಅಂಥದ್ದೊಂದು ಮೌಲಿಕತೆ ಇರುತ್ತಿತ್ತು. ನಾಟಕ ರಂಗದ ಆಗುಹೋಗುಗಳು ತಿಳಿದವರು ನಾಟಕ ವಿಮರ್ಶೆ ಬರೆಯುವುದಕ್ಕೂ ಅದರ ನಂಟು, ಅದರ ವಿಸ್ತರಣ, ಆಳ ತಿಳಿಯದವರು ವಿಮರ್ಶೆ ಬರೆಯುವುದಕ್ಕೂ ವ್ಯತ್ಯಾಸವಿರುತ್ತದೆ. ನಾಟಕ ವಿಮರ್ಶೆ ಬರೆಯವುದು ಅಂದರೆ ನಾಟಕದ ಕಥೆ ಹೇಳುತ್ತಾ ಹೋಗಿ ಕಡೆಗೆ ತಾಂತ್ರಿಕ ವಿಭಾಗದಲ್ಲಿನ ತೊಂದರೆಗಳ ಬಗ್ಗೆಯೋ ಅಥವಾ ಕಂಡುಬಂದ ಲೋಪಗಳ ಬಗ್ಗೆಯೋ ಬರೆಯುವುದಲ್ಲ. ವಿಮರ್ಶೆ ಒಂದು ಗ್ರಹಿಕೆಯ ಕ್ರಮ. ಮತ್ತು ಆ ಕ್ರಮ ಸುಮ್ಮನೆ ಧುತ್ತನೆ ಬರುವುದಿಲ್ಲ. ಅದೂ ಕೂಡ ರಂಗದ ಬಗೆಗೆ ಪರಿಶ್ರಮ ನಿರೀಕ್ಷಿಸುತ್ತದೆ. ಇಂಥ ಪರಿಶ್ರಮ ಇರುವವರು ವಿಮರ್ಶೆ ಬರೆದಾಗ ರಂಗ ಪ್ರಯೋಗವನ್ನು ಗ್ರಹಿಸಬೇಕಾದ ಹೊಳಹುಗಳು ಹೊಳೆಯುತ್ತವೆ. ಗುಡಿಹಳ್ಳಿ ಸರ್ ಅವರ ಬರಹಗಳಲ್ಲಿ ಇಂಥ ಅಂಶಗಳು ಪ್ರಧಾನವಾಗಿರುತ್ತಿದ್ದವಾದ್ದರಿಂದ ನಾನು ಅವರ ರಂಗವಿಮರ್ಶೆಗಳನ್ನ ತಪ್ಪದೆ ಓದುತ್ತಿದ್ದೆ. ಹೀಗೆ ಅವರ ಹೆಸರು ನನ್ನ ಚಿತ್ತಭಿತ್ತಿಯಲ್ಲಿ ದಾಖಲಾಗಿತ್ತು.

ಮುಂದೆ ಏನು ಹೇಗೆ ಎಂದು ತಲೆಯಲ್ಲಿ ಸುಳಿ ನಿರಂತರ ತಿರುಗುತ್ತಿದ್ದ ಸಂದರ್ಭದಲ್ಲೇ ರಂಗ ನೇಪಥ್ಯದ ಸಂಚಿಕೆ ಬರುತ್ತಿತ್ತು. ಮತ್ತು ಚಂದಾ ಮನವಿ ಪ್ರಕಟಣೆ ಕಾಣಿಸಿ ನನ್ನನ್ನು ಆರಂಭದಲ್ಲಿ ಎಚ್ಚರಿಸಿದಂತೆ ಮಾಡಿ ನಂತರದಲ್ಲಿ ಮೆದುವಾಗಿ ಚುಚ್ಚಲು ಶುರುಮಾಡಿತು.

ಬಹುಶಃ ಅದು ನಾನು ನಮ್ಮ ರಂಗತಂಡದಿಂದ ‘ನಟರತ್ನಾಕರ’ ನಾಟಕವನ್ನು ಪ್ರಯೋಗಕ್ಕೆ ಆರಿಸಿಕೊಂಡ ಸಂದರ್ಭ ಅನಿಸುತ್ತದೆ. ‘ನಟರತ್ನಾಕರ’ ಎನ್ನುವುದು ಅಜ್ಜ ಮಾಸ್ಟರ್ ಹಿರಣ್ಣಯ್ಯನವರಿಗೆ ಜನರು ನೀಡಿದ್ದ ಬಿರುದು. ದೇವದಾಸಿ ನಾಟಕದಲ್ಲಿನ ಅವರ ನಾಜೂಕಯ್ಯನ ಪಾತ್ರ ಮೆಚ್ಚಿ ಖುದ್ದು ಜನ ನೀಡಿದ್ದ ಬಿರುದು.

ಮೊದಲಿಂದಲೂ ನನಗೆ ಬಯೋಪಿಕ್‌ಗಳ ಬಗೆಗೆ ಹೆಚ್ಚು ಒಲವು. ಬದುಕಿನ ತಿರುವುಗಳು ಹೇಗೆ ಅತಂತ್ರಕ್ಕೆ ಒಳಗುಮಾಡುತ್ತವೆ, ಅವುಗಳಿಂದ ಅವರು ಪಾರಾಗುತ್ತ ಮೆಟ್ಟಿಲು ಹತ್ತುವ ಕೆಲಸ ಹೇಗೆ ಮಾಡುತ್ತಾರೆ ಎನ್ನುವ ಕುತೂಹಲ ನನ್ನಲ್ಲಿ ಇಂದಿಗೂ ಇದೆ.

ರಂಗಭೂಮಿಯಲ್ಲಿ ಈವರೆಗೆ ಸಾವಿರಾರು ನಟನಟಿಯರು ತೆರೆಮರೆಗೆ ಸರಿದು ಹೋಗಿದ್ದಾರೆ. ಆಯಾ ಘಟ್ಟಗಳಲ್ಲಿ ಪ್ರೌಢಿಮೆಗಳಿಸಿದವರ ಹೆಸರುಗಳು ಕೆಲವು ರಂಗಕರ್ಮಿಗಳ ನಾಲಗೆ ಮೇಲೆ ಸ್ಥಾನಪಡೆದುಕೊಂಡಿದೆ. ಅವರೆಲ್ಲ ಅಕಡೆಮಿಕ್ ಶಿಸ್ತಿನ ರೀತಿಯಲ್ಲಿ ದಾಖಲಾಗಿರುವ ಹೆಸರುಗಳು. ಸಾಧನೆ ಇದ್ದರೂ ಅವರ ಬದುಕನ್ನು ರಂಗಕೃತಿ ಮತ್ತು ಪ್ರಯೋಗಕ್ಕೆ ತರುವಷ್ಟು ಶಕ್ತವಾಗಿರುವುದಿಲ್ಲ. ಮಿಗಿಲಾಗಿ ಅವುಗಳಲ್ಲಿ ಬದುಕಿನ ಬೇರೆಬೇರೆ ಬಣ್ಣಗಳು ಕಾಣುವುದಿಲ್ಲ. ಹಾಗೆ ಬಣ್ಣ ಕಾಣದ ಹೊರತು ಅದನ್ನು ರಂಗದ ಮೇಲೆ ತಂದು ಪ್ರಯೋಜನವಿಲ್ಲ.

ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಬದುಕು ಮತ್ತು ಅದರೊಳಗೆ ಅಡಕಗೊಂಡಿರುವ ತಿರುವುಗಳು ಬಯೋಪಿಕ್‌ಗೆ ಹೊಂದುತ್ತದೆ ಎಂದು ನನಗೆ ಅನಿಸುತ್ತಲೇ ಇತ್ತು. ‘ನೋಡೋಣ…. ನಾಟಕ ಮಾಡಲು ಪರವಾನಗಿ ಸಿಕ್ಕರೂ ಸಿಗಬಹುದು’ ಅನಿಸಿ ಬಾಬು ಸರ್ ಬಳಿ ಮಾತಾಡಿದೆ. ಅವರು ಅವರದೇ ಸ್ಟೈಲಲ್ಲಿ ‘ಮಾಡೋಣ ಬನ್ನಿ ಅದಕ್ಕೇನಂತೆ ‘ ಅಂದರು.

ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಮನೆ ಒಳಹೊಗಲು ಅವಕಾಶಗಳು ನಿರ್ಮಾಣವಾದವು. ಮೊದಲ ದಿನ ಸ್ವತಃ ಅಜ್ಜ ಮಾಸ್ಟರ್ ಹಿರಣ್ಣಯ್ಯನವರೇ ಬಾಗಿಲು ತೆಗೆದು ‘ಬನ್ನಿ ಬನ್ನಿ’ ಅಂತಂದ ಚಿತ್ರ ಇಂದಿಗೂ ನನ್ನಲ್ಲಿ ಸ್ಥಿರವಾಗಿ ಉಳಿದುಬಿಟ್ಟಿದೆ. ಅವರ ಬಗ್ಗೆ ಬಾಬು ಸರ್ ಅವರಿಂದ ಮಾಹಿತಿ ಹೆಕ್ಕುತ್ತ, ರಂಗರೂಪ ಅಣಿಮಾಡಿದ್ದನ್ನು ಅವರಿಗೆ ತೋರಿಸುತ್ತ, ಅವರು ಅದಕ್ಕೆ ಬೇರೆಬೇರೆ ದೃಶ್ಯಗಳನ್ನು ಕಟ್ಟಿಕೊಟ್ಟು ಒಂದು ರೂಪ ದಕ್ಕಿಸಿಕೊಟ್ಟರು.

ಅಜ್ಜ ರಂಗಭೂಮಿಯಲ್ಲಿ ದಂತಕಥೆ. ಅವರ ಬಗ್ಗೆ ಒಂದು ಪ್ರಯೋಗ ಸಿದ್ಧ ಮಾಡಿ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದ ಸಮಯ ಅದು. ಪತ್ರಿಕೆಗಳಿಗೆ ಈ ಬಗ್ಗೆ ಸುದ್ದಿ ಕೊಟ್ಟದ್ದೂ ಆಯಿತು. ಮೊದಲ ಪ್ರದರ್ಶನ ಚೌಡಯ್ಯ ಸ್ಮಾರಕ ಭವನದಲ್ಲಿ. ಆ ಪ್ರದರ್ಶನಕ್ಕೆ ಖುದ್ದು ಅಜ್ಜ ಮಾಸ್ಟರ್ ಹಿರಣ್ಣಯ್ಯನವರೇ ಬಂದು ತಮ್ಮ ಜೀವಿತದ ಕಥೆಯನ್ನು ರಂಗದ ಮೇಲೆ ನೋಡಿ ಹರಿಸಿದರು.

ಹೀಗೊಂದು ಚೆಂದದ ಸ್ಟಾರ್ಟ್ ಪಡೆದುಕೊಂಡ ‘ನಟರತ್ನಾಕರ’ ನಾಟಕ ಪ್ರಯೋಗವನ್ನು ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ನಿಗದಿ ಮಾಡಿದೆವು. ಅದಕ್ಕೆ ಅಣಿಯಾಗುತ್ತಿದ್ದ ಸಂದರ್ಭದಲ್ಲಿ ಗುಡಿಹಳ್ಳಿ ನನಗೆ ಫೋನ್ ಮಾಡಿದ್ದರು ಎಂದು ನನಗೆ ನೆನಪು.

‘ಮೊದಲ ಪ್ರಯೋಗ ಚೆನ್ನಾಗಿ ಆಯ್ತಂತೆ. ನನ್ನ ಕರೀಲೇ ಇಲ್ಲ ನೀವು. ನಾನು ಕಲಾಕ್ಷೇತ್ರದ ಪ್ರಯೋಗಕ್ಕೆ ಬರ್ತೇನೆ’ ಅಂದರು. ನನಗೆ ಅಚ್ಚರಿ. ಅರೆ… ನಾವು ಖುದ್ದು ಪ್ರೀತಿಯಿಂದ ಕರೆದರೂ ಬರದ ರಂಗಕರ್ಮಿಗಳು ಇದ್ದಾರೆ. ಪ್ರಯೋಗ ನೋಡುವ ಮೊದಲೇ ತೀರ್ಮಾನಕ್ಕೆ ಬರುವ ಪ್ರಭುತ್ರಿಗಳು ಅವರು. ತಾವು ಸ್ಟಿಕ್ಕಾನ್ ಆದ ಸಿದ್ಧಾಂತಾನುಸಾರ ಮಿಕ್ಕವರ ನಾಟಕ ಇಲ್ಲ ಅಂತನ್ನುವುದನ್ನು ಟಾಪಿಕ್ ಮಾಡಿಕೊಂಡು ತಮ್ಮ ಬೆನ್ನು ತಾವು ತಟ್ಟಿಕೊಳ್ಳುತ್ತ ನಾಲಗೆಯನ್ನು ಮಾತ್ರ ಬೇರೆಯವರ ಪ್ರಯೋಗಗಳ ಬಗೆಗೆ ಬೀಡುಬೀಸು ಕಾಮೆಂಟ್ ಮಾಡುವವರನ್ನು ನಾನು ನೋಡಿ ದಣಿದಿದ್ದೆ.

ಗುಡಿಹಳ್ಳಿ ಸರ್ ಹಿರಿಯರು; ಅವರನ್ನು ಕರೆಯಬಾರದು ಅಲ್ಲ, ಕರೆಯಬಹುದು ಅನ್ನುವ ಯೋಚನೆಯೇ ನನಗೆ ಬಂದಿರಲಿಲ್ಲ. ಹಾಗಾಗಿ ನನ್ನಷ್ಟಕ್ಕೆ ನಾನು ಪ್ರಯೋಗದ ನಾನಾ ಕೆಲಸಗಳಲ್ಲಿ ನಿರತನಾಗಿದ್ದೆ. ಅಂಥ ಕ್ಷಣ ಗುಡಿಹಳ್ಳಿ ಸರ್ ಕರೆ ಮಾಡಿ ಮಾತಾಡಿ ತಾನು ಬರುತ್ತೇನೆ ಅಂದಾಗ ನನ್ನಲ್ಲಿ ಅವರ ಬಗ್ಗೆ ಗೌರವ ಹೆಚ್ಚಾಯಿತು. ಅವರು ಹೇಳಿದಂತೆ ನಾಟಕಕ್ಕೆ ಬಂದರು. ಕಡೆಗೆ ವಿಜಯ ಕರ್ನಾಟಕದಲ್ಲಿ ನಾಟಕ ವಿಮರ್ಶೆ ಕೂಡ ಬರೆದು ಹಾರೈಸಿದರು. ಅಲ್ಲಿಂದಾಚೆಗೆ ಅವರೊಂದಿಗೆ ನನ್ನ ನಂಟು ನಿಧಾನಕ್ಕೆ ಬೆಳೆಯಲು ಆರಂಭಿಸಿತು. ನಂತರ ನಾವೇನೂ ಹೆಚ್ಚಿಗೆ ಮಾತಾಡಿದ ಹಾಗೆ ನೆನಪಿಲ್ಲ. ಅವರ ಪುಸ್ತಕಗಳು ಹೊರಬಂದಾಗ ಆ ಬಗ್ಗೆ ತಿಳಿಸುತ್ತಿದ್ದರು. ಮಾತು ಚುಟುಕು ಅನಿಸುತ್ತಿತ್ತು. ಆದರೆ ಏನೇನೋ ಕೆಲಸ ಮಾಡುವ ತುಡಿತ ಹೆಚ್ಚು ಎಂದು ನನಗೆ ಅನಿಸುತ್ತಲೇ ಇತ್ತು.

ಆಮೇಲೆ ರಂಗನೇಪಥ್ಯ ಆರಂಭಿಸಿದರು ಎಂದು ನೆನಪು. ನಮ್ಮ ತಂಡದ ನಟರತ್ನಾಕರ ನಾಟಕ ಪ್ರದರ್ಶನಗಳಾಗಲು ಆರಂಭಿಸಿದವು. ನೋಡನೋಡುತ್ತಿದ್ದಂತೆ ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಆರೋಗ್ಯ ಹಂತಹಂತವಾಗಿ ಕುಸಿಯಲು ಆರಂಭಿಸಿತು. ನಾವು ಅವರ ಮನೆಯ ಮೇಲಿನ ಜಾಗದಲ್ಲಿ ತಾಲೀಮು ನಡೆಸುತ್ತ ಅವರ ಆರೋಗ್ಯ ಕುಸಿಯುತ್ತಿರುವ ವರ್ತಮಾನ ಕೇಳಿಕೊಳ್ಳುತ್ತಿದ್ದೆವು. ಕಡೆಗೊಂದು ದಿನ ಅಜ್ಜ ತೀರಿ ಹೋದರು.

ಗುಡಿಹಳ್ಳಿ ಸರ್ ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಬಗ್ಗೆಯೇ ಒಂದು ವಿಶೇಷ ಸಂಚಿಕೆ ರೂಪಿಸಿದರು. ಅದಕ್ಕೆ ಒಂದು ಲೇಖನ ಬರೆದುಕೊಡಿ ಎಂದು ನನಗೆ ಕೇಳಿದರು. ನಮ್ಮ ತಂಡ ಅಜ್ಜನ ಬಗ್ಗೆ ಪ್ರಯೋಗಕ್ಕೆ ಸಿದ್ಧವಾದ ಬಗೆಯನ್ನೇ ಕೇಂದ್ರವಾಗಿಟ್ಟುಕೊಂಡು ತರಾತುರಿಯಲ್ಲಿ ನಾನು ಒಂದು ಲೇಖನ ಬರೆದುಕೊಟ್ಟೆ. ಅದು ಕೊಂಚ ದೀರ್ಘವಾಗೇ ಇತ್ತು ಅನಿಸುತ್ತೆ. ಆದರೆ ವಿಶೇಷ ಸಂಚಿಕೆಗೆ ಇಂತಿಷ್ಟೇ ಪುಟಮಿತಿ ಎಂದು ನಿಗದಿ ಮಾಡಿದ್ದರಿಂದ ಮತ್ತು ಮಿಕ್ಕವರಿಗೂ ಆದ್ಯತೆ ಕೊಡಬೇಕಾದ್ದರಿಂದ ಆ ಸಂಚಿಕೆಯಲ್ಲಿ ನನ್ನ ಲೇಖನವನ್ನು ಪೂರಾ ಪ್ರಕಟಿಸಲಿಲ್ಲ. ಅರ್ಧಭಾಗ ಪ್ರಕಟಿಸಿ ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ ಎಂದು ತಿಳಿಸಿದ್ದರು. ಅದಕ್ಕೆ ಪೂರ್ವದಲ್ಲಿ ಗುಡಿಹಳ್ಳಿ ಸರ್ ಕರೆಮಾಡಿ ಪುಟಮಿತಿ ಇತ್ಯಾದಿಗಳ ಬಗ್ಗೆ ಹೇಳಿ ತಮ್ಮ ಅಸಹಾಯಕತೆಯನ್ನು ಅರ್ಥಮಾಡಿಸಿದ ರೀತಿಯಲ್ಲಿ ಅವರಲ್ಲಿದ್ದ ಸೌಜನ್ಯ ನನ್ನನ್ನು ಮತ್ತೆ ತಾಕಿತು. ‘ಅಯ್ಯೊ ಅದಕ್ಕೇನಂತೆ ಮುಂದಿನ ಸಂಚಿಕೆಯಲ್ಲೇ ಉಳಿದರ್ಧ ಪ್ರಕಟಿಸಿ ಸರ್ ಅದರಲ್ಲೇನು..’ ಅಂದಿದ್ದೆ. ಮುಂದಿನ ಸಂಚಿಕೆಯಲ್ಲಿ ಅದು ಪ್ರಕಟವಾಯಿತೂ ಕೂಡ.

ಮತ್ತು ಅಜ್ಜ ಮಾಸ್ಟರ್ ಹಿರಣ್ಣಯ್ಯನವರು ತೀರಿ ಹೋದ ಸಂದರ್ಭದಲ್ಲೇ ಹಲವು ಪತ್ರಿಕೆಗಳು ಅವರ ಬಗೆಗೆ ಲೇಖನಗಳನ್ನು ಆ ವಾರದ ಸಾಪ್ತಾಹಿಕಗಳಲ್ಲಿ ಪ್ರಕಟಿಸಿದವು. ಗುಡಿಹಳ್ಳಿ ಸರ್ ಅವರಿಗೆ ಏನನಿಸಿತೋ ಏನೋ. ನನಗೆ ಕರೆ ಮಾಡಿದರು. ‘ಹೇಗೂ ನೀವು ಮಾಸ್ಟರ್ ಬದುಕಿನ ಬಗ್ಗೆ ನಾಟಕ ಪ್ರಯೋಗಿಸಿದ್ದೀರಿ; ಅವರ ಬಗೆಗೆ ಲೇಖನಗಳು ಒಂದಷ್ಟು ಬಂದಿವೆ. ನೀವೂ ಗಮನಿಸಿರಬಹುದು. ಒಂದು ಕೆಲಸ ಮಾಡೋಣ. ಆ ಲೇಖನಗಳನ್ನು ನೀವು ಒಂದಷ್ಟು ಸಂಕಲಿಸಿ. ನಾನೂ ಒಂದಷ್ಟು ಸಂಕಲಿಸ್ತೇನೆ. ಇಬ್ಬರೂ ಸಂಪಾಕರಾಗಿ ಒಂದು ಪುಸ್ತಕ ತಂದುಬಿಡೋಣ’ ಅಂದರು.

ನನಗೆ ಈ ತರಹ ತರಾತುರಿಯ ಕೆಲಸಗಳಲ್ಲಿ ನಂಬಿಕೆ ಮೊದಲಿಂದಲೂ ಇಲ್ಲ. ಪುಸ್ತಕಕ್ಕೆ ಲೇಖನಗಳನ್ನು ಅಣಿಮಾಡುವುದು ದೊಡ್ಡ ಸಂಗತಿಯಲ್ಲ. ಒಂದು ಪುಸ್ತಕ ಹೊರತಂದುಬಿಡಬೇಕು ಅನ್ನುವ ತುಡಿತ ಪ್ರಧಾನವಾಗಿದೆಯೋ ಅಥವಾ ಲೇಖನಗಳ ಗುಣಮಟ್ಟ ನಿರ್ಧರಿಸಿ, ಅವುಗಳಲ್ಲಿ ಪುನರಾವರ್ತನೆ ಇದೆ, ತುಂಬ ತೇಲಿಸಿ ಬರೆದದ್ದನ್ನೇ ಬರೆದಿದ್ದಾರೆ ಮತ್ತು ಹೊಸತಾಗಿ ಗ್ರಹಿಸಿರುವ ಕ್ರಮಗಳೇನಾದರೂ ಇವೆಯೇ ಇಲ್ಲವೇ ಎಂದು ಸಂಪಾದಕನಾದವನು ನೋಡಬೇಕು. ಆ ಮಟ್ಟದ ಗ್ರಹಿಕೆ ಮತ್ತು ವಸ್ತುನಿಷ್ಠತೆ ಇರಿಸಿಕೊಂಡಿರಬೇಕು ಎಂದು ನಂಬಿರುವವನು ನಾನು. ಆದರೆ ಸಂಪಾದಕರಾಗೋಣ ಅನ್ನುತ್ತಿರುವುದು ಗುಡಿಹಳ್ಳಿ ಸರ್. ಒಮ್ಮೆಗೇ ಹೇಗೆ ನಿರಾಕರಿಸುವುದು? ಮಿಗಿಲಾಗಿ ಅಷ್ಟು ತರಾತುರಿಯಲ್ಲಿ ಪುಸ್ತಕ ತರುವ ಅಗತ್ಯ ಏನು? ಮಾಡಿದರೆ ಒಂದು ಸಾಲಿಡ್ ಕೆಲಸ ಮಾಡಬೇಕು ಎಂದು ಏನೇನೊ ಸಿದ್ಧಾಂತ ಇರಿಸಿಕೊಂಡಿರುವವನು ನಾನು.

ಆದರೆ ಗುಡಿಹಳ್ಳಿ ಸರ್ ಬಳಿ ಹೀಗೆಲ್ಲ ಹೇಳಿದರೆ ಉದ್ಧಟತನವಾದೀತು ಅನಿಸಿ ‘ಸರಿ ಸರ್..’ ಅಂದುಬಿಟ್ಟಿದ್ದೆ. ಗುಡಿಹಳ್ಳಿ ಸರ್ ಹತ್ತೇ ದಿನಕ್ಕೆ ಒಂದಷ್ಟು ಲೇಖನಗಳನ್ನ ಕಲೆ ಹಾಕಿ ನನಗೆ ಕರೆಮಾಡಿದರು. ಆ ಎಲ್ಲ ಲೇಖನಗಳ ಬಗೆಗೆ ವಿವರ ನೀಡಿದರು. ನಾನು ಆ ಎಲ್ಲ ಲೇಖನಗಳನ್ನು ಮೊದಲೇ ಓದಿದ್ದೆ. ಆಯಾ ಸಂದರ್ಭಕ್ಕೆ ಬರೆದಿದ್ದಾರೆ ಸರಿ, ಆದರೆ ಅವುಗಳನ್ನು ಪುಸ್ತಕದಲ್ಲಿ ಅಡಕಮಾಡುವ ಅಗತ್ಯತೆ ಇದೆಯೇ ಎಂದು ನನಗೆ ಸಂದೇಹ ಉಂಟಾಗಿ ನಾನು ಸುಮ್ಮನಾಗಿಬಿಟ್ಟೆ. ಗುಡಿಹಳ್ಳಿ ಸರ್ ಮೂರ್ನಾಲ್ಕು ಸಲ ಕರೆಮಾಡಿ ಉತ್ಸಾಹ ತೋರಿದರು. ನಾನು ಏನೇನೋ ಕಾರಣ ಕೊಟ್ಟು ತಪ್ಪಿಸಿಕೊಂಡೆ. ಕಡೆಗೆ ಆ ಪ್ರಯತ್ನ ನಿಂತು ಹೋಯಿತು. ಆಗ ಒಂಚೂರು ನಿರಾಳ ಅನಿಸಿತ್ತು. ಜೊತೆಗೆ ಗುಡಿಹಳ್ಳಿ ಸರ್ ಯಾಕೆ ಹೀಗೆ ಇಷ್ಟು ಆತುರ ತೋರಿದರು ಎಂದು ಆಗಾಗ ಕೇಳಿಕೊಳ್ಳುತ್ತಿದ್ದೆ. ನಂತರ ಅದೂ ಮರೆವಿಗೆ ಸಂದಿತು.

ಅದರ ನಂತರದಲ್ಲಿ ಅವರೊಂದಿಗಿನ ಒಂದು ಮಾತುಕಥೆಯಲ್ಲೇ ಅನಿಸುತ್ತೆ ಅವರ ಕ್ಷೀಣ ಧ್ವನಿಯ ಸ್ವರ ನನಗೆ ಕೇಳಿಸಿದ್ದು. ಅದು ಯಕೃತ್ತಿನ ಕ್ಯಾನ್ಸರ್ ಹೊರಡಿಸುತ್ತಿರುವ ನೋವಿನ ಧ್ವನಿ ಎಂದು ನನಗೆ ಹೇಗೆ ಗೊತ್ತಾಗಬೇಕು? ಆಮೇಲೆ ಕೋವಿಡ್ ಹೆಜ್ಜೆ ಇಡುತ್ತಾ ಸುತ್ತುತಿರುಗಲು ಆರಂಭಿಸಿತು. ಅತಂತ್ರತೆ ತಾಕಲಾಟಗಳ ನಡುವೆ ರಂಗ ನೇಪಥ್ಯದ ವಿಚಾರ ನೇಪಥ್ಯಕ್ಕೆ ಸರಿದು ಮುನ್ನಲೆಗೆ ಬೇರೆ ವಿಚಾರಗಳು ಬಂದವು.

ಒಂದು ಕಡೆ ಗುಡಿಹಳ್ಳಿ ಸರ್ ಅವರು ಹಣದ ಅಭಾವದ ಸಮಯದಲ್ಲೂ ಜತನದಿಂದ ಪತ್ರಿಕೆ ಹೊರತರುವ ಸಾಹಸ ಮಾಡುತ್ತಿದ್ದರು. ಚಂದಾ ವಿಚಾರ ನನಗೆ ನೆನಪಾದಾಗಲೆಲ್ಲ ಒಂದು ಬಗೆಯ ಮುಜುಗರ. ಪತ್ರಿಕೆ ಮುಟ್ಟಲೂ ಅಳಕು. ಎಲ್ಲ ಒಂದು ಸುಸ್ಥಿತಿಗೆ ಬಂದು ಬದುಕು ತನ್ನ ಎಂದಿನ ಹಳಿಗೆ ಮರಳಿದ ಕೂಡಲೇ ಮೊದಲು ರಂಗ ನೇಪಥ್ಯಕ್ಕೆ ಚಂದಾ ಹಣ ಕಳುಹಿಸಿ ಅದನ್ನು ಒಂದು ಬಗೆಯ ನಿರಾಳತೆಯಲ್ಲಿ ಓದಬೇಕು ಅಂದುಕೊಳ್ಳುತ್ತಲೇ ಇದ್ದೆ. ಆದರೆ ಕೋವಿಡ್ ತನ್ನ ಪಾತ್ರ ಇನ್ನೂ ಮುಗಿದಿಲ್ಲ ಅಂತ ತನ್ನ ವಿಸ್ತರಣೆ ಕಾಣಿಸುತ್ತ ಕಾಲವನ್ನ ಲಂಬಿಸಿತು. ಇದರ ಪರಿಣಾಮ ನಾನು ಚಂದಾ ಮುಂದೂಡುತ್ತಾ ಬಂದೆ.

ಗುಡಿಹಳ್ಳಿ ಸರ್ ಇಷ್ಟು ಬೇಗ ನಿರ್ಗಮಿಸುತ್ತಾರೆ ಎಂದು ಅವರ ಆಪ್ತರೊಬ್ಬರಿಗೆ ಬಿಟ್ಟು ಬೇರೆ ಯಾರಿಗೆ ಗೊತ್ತಿತ್ತು? ನಾನೀಗ ಯಾರನ್ನು ದೂಷಿಸಲಿ? ಕೋವಿಡ್ ಸೃಷ್ಟಿಸಿದ ಅಸಹಾಯಕತೆಯನ್ನೋ ಅಥವಾ ನಾನು ಚಂದಾ ಹಣ ಕಳುಹಿಸುವವರೆಗಾದರೂ ಸುಮ್ಮನಿರಲಾರದ ಸಾವಿನ ನಿರ್ದಯತೆಯನ್ನೋ? ಸಾವು ಒಂದು ರೀತಿ ತಟಸ್ಥ. ಅದಕ್ಕೆ ನಮ್ಮ ಪ್ರಶ್ನೆ ಕೇಳಿಸಿಕೊಳ್ಳುವ ಕಿವಿಗಳಿಲ್ಲ. ಅದರ ಕೆಲಸ ತೆಪ್ಪಗೆ ಮಾಡಿ ಮುಗಿಸಿ ನಿರ್ಗಮಿಸುವುದನ್ನೇ ಅದು ತನ್ನ ಜೀವನಕ್ರಮ ಮಾಡಿಕೊಂಡಂತಿದೆ. ಗುಡಿಹಳ್ಳಿ ಸರ್ ಅವರಿಗೆ ಜಡ್ಡು ಯಾಕೆ ಬಂತು? ಅದು ತಾರಕಕ್ಕೆ ಯಾಕೆ ಹೋಯಿತು? ಯಾರಿಗೆ ಪ್ರಶ್ನೆ ಕೇಳುವುದು? ಇಲ್ಲಿ ಪ್ರಶ್ನೆಗಳಿವೆ ಅಷ್ಟೇ; ಉತ್ತರಗಳೆಲ್ಲ ನಮ್ಮ ಸಮಾಧಾನದ ಪ್ರತಿರೂಪದವು.

ಈ ಹೊತ್ತು ಬದುಕು ನಿಧಾನಕ್ಕೆ ಚಿಗುರಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಕೈಯಲ್ಲೊಂದಿಷ್ಟು ಹಣ ತನ್ನ ಸಂಚಾರವನ್ನು ನಿಧಾನವಾಗಿ ಆರಂಭಿಸಿರುವ ಹಾಗೆ ಅನಿಸುತ್ತಿದೆ. ಅಂಚೆಪೆಟ್ಟಿಗೆ, ಅದರ ಹೊಟ್ಟೆ, ರಂಗನೇಪಥ್ಯ ಈ ಎಲ್ಲ ತರುವ ನೆನಪುಗಳು ವಿಚಿತ್ರ. ಈ ಹೊತ್ತು ಚಂದಾಹಣ ಕಳಿಸುವಷ್ಟು ಶಕ್ತ ಅಂತ ಕೊಂಚ ದೃಢವಾಗಿ ಅಂದುಕೊಳ್ಳುವ ಹೊತ್ತಲ್ಲೇ ಗುಡಿಹಳ್ಳಿ ಸರ್ ನಿರ್ಗಮಿಸಿದ್ದಾರೆ. ಬಿಟ್ಟಿಯಾಗಿ ಓದಿದ ಪಾಪಪ್ರಜ್ಞೆ ಕಳೆದುಕೊಳ್ಳಲು ಚಂದಾ ಹಣ ಕಳಿಸುವಷ್ಟು ಚೈತನ್ಯವೇನೋ ದಕ್ಕಿದೆ. ಆದರೆ ಗುಡಿಹಳ್ಳಿ ಸರ್ ಅವರಿಗೇ ಚಂದಾ ಹಣ ತಲುಪಿಸುವ ಸ್ಪಷ್ಟ ವಿಳಾಸ ನನ್ನಲ್ಲಿ ಇಲ್ಲ. ಆದರೆ ಪಾಪಪ್ರಜ್ಞೆಯಂತೂ ಇದೆ. ಏನು ಮಾಡುವುದೋ ತಿಳಿಯುತ್ತಿಲ್ಲ…