ಪ್ರೀತಿಯ ಹಾದಿಯಲಿ…

ಇನ್ನೊಮ್ಮೆ ಮಗದೊಮ್ಮೆ ಅಂತ
ಪ್ರೀತಿಯ ಹಾದಿಯ ನಕ್ಷೆಯ
ಬೆದಕಿ, ಕೆದಕಿದ್ದೇನೆ
ಚೆಂಡು ಹೂವಿನ ತೋಟ
ಮಗ್ಗಲಿಗೆ ನೀರಿಲ್ಲದ ಬಾವಿ
ಜಾರಿ ಬಿದ್ದವರು ಹಜಾರ ಮಂದಿ
ಅಂತ ಕೇಳಿದ್ದೇನೆ
ಆದರೂ ಸೋಪಾನ ಹತ್ತೋದನ್ನು
ಇಳಿಯೋದನ್ನು ಬಿಟ್ಟಿಲ್ಲ
ಬುದ್ದಿವಾದಕೆ ಕಿವಿ ಕೊಟ್ಟಿಲ್ಲ
ಪುರಾತನ ಬೇರುಗಳ ಹೊಸ
ಚಿಗುರಿನ ನವಿರಿಗೆ
ಬೆರಗಾಗುವುದನು ತೊರೆದಿಲ್ಲ
ಕೈಗೆಟುಕದ ಮಾಯೆ ಬಾನಿಗೆ
ಮುಖವ ಮಾಡಿ
ಗ್ರಹ ತಾರೆಗಳ ಎಣಿಸುವುದನು ನಿಲಿಸಿಲ್ಲ
ಬಯಲ ಆಲಯದ ತುಂಬ
ಎದ್ದ ಗೋರಿಗಳ
ಪ್ರೀತಿಯ ಗಾಳಕೆ ಬಿದ್ದ ಜೀವಗಳ
ಮರಳಿ ಎಣಿಸುತ್ತ
ಪ್ರೇಮ ಪಾಶಕೆ ಕೊರಳ ಚಾಚಿ
ಅಲೆಯೋದನು ಮರೆತಿಲ್ಲ
ಪ್ರೀತಿಯ ಚಂದ್ರನ ಮೇಲೇರಿ
ಕೆಳಜಾರಿದವರ ಒಂಟಿ ರಾಗದಲಿ
ಕಂದಕಗಳ ಹುಡುಕಿ
ಬೆಚ್ಚಗೆ ಮಲಗುವ ಕನಸು
ಹೊರಬರುವ ಮನಸಿಲ್ಲ
ನಿನ್ನ ಪ್ರೀತಿಯ ವರ್ತುಲದ ಸೆಳೆತವ
ಹೊಕ್ಕು ಹೊರಬರಲಾಗದೆ ಸೋತ
ಅಭಿಮನ್ಯುವಾಗಿ ಮಡಿಯಲು
ಹಾಜರಿ ಹಾಕುವುದ ಮರೆತಿಲ್ಲ

 

ಹಲವು ವರ್ಷಗಳಿಂದ ಇಂಗ್ಲೆಂಡ್ ವಾಸಿಯಾಗಿರುವ ಡಾ. ಪ್ರೇಮಲತಾ ಬಿ, ದಂತ ವೈದ್ಯೆ. ಸಾಹಿತ್ಯದಲ್ಲಿ ಆಸಕ್ತಿ. 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)