ನಾಕಾಬುಧಾರಿಗಳು

ಹುಸಿನಗೆಯ ಮುಸುಕನ್ನು ಮೇಲೆಳೆಯುತ್ತ
ಕಣ್ಣು, ಮುಖ ಭಾವಗಳನು ಅದುಮಿಡುವ
ಸುಳ್ಳುಗಳ ಸರಮಾಲೆಯಲಿ ನಿಜವ ಮುಚ್ಚಿಡುತ್ತ
ಜೀವನದ ಬೆಲೆ ತೆತ್ತು ಕೊಂಡು ಧರಿಸಿ ನಟಿಸುವ
ನಕಾಬುಧಾರಿಗಳು!

ನಿಜದ ಮರೆ ಮಾಡಿ ನಗಲು ಯತ್ನಿಸುತ್ತೇವೆ
ಛಿದ್ರ ಹೃದಯವನೂ ಚಿತ್ರಿಸುತ್ತ ನಡೆಯುತ್ತೇವೆ
ಪಟಪಟ ಮಾತನಾಡಿ ದುಗುಡವನ್ನು ಮುಚ್ಚುತ್ತೇವೆ
ಮನದ, ಜೀವನದ ನೋವಿಗೆ ಮುಸುಕುಹಾಕುತ್ತೇವೆ

ನಡೆವ ದಾರಿಯುದ್ದಕ್ಕೂ ಕೆಸರು ತುಂಬಿದ್ದರೂ
ಲೋಕ ಕಾಣಲು, ಬಾಯಿ ರಾಗವನು ಹಾಡುತ್ತದೆ
ದುರದೃಷ್ಟದ, ನಿರಾಸೆಯ ಕೈಹಿಡಿದು ನಡೆದಿದ್ದರೂ
ಕಂಡವರಿಗೆ ಅದರರಿವು ಬರದಂತೆ ನಡೆಯುತ್ತದೆ.

ಇತರರಿಗೆ ಯಾರು ಕೊಟ್ಟರು ಈ ಅಧಿಕಾರ?
ನಮ್ಮ ಕಣ್ಣೀರ ಹನಿಗಳ ಒಳಹೊಕ್ಕು ನೋಡಲು,
ನಮ್ಮ ಮುಖವಾಡವಷ್ಟೆ ಅವರಿಗೆ ನಿಜದ ಸಾಕಾರ
ಅಂತರಾತ್ಮದ ಕೂಗು! ನಮಗೆ ಮಾತ್ರ ಮೀಸಲು

ಪ್ರಪಂಚವೆಣಿಸಿರಲಿ ನಾವು ಅತ್ಯಂತ ಸುಖಿಗಳೆಂದು!
ನಡೆಯೋಣ ನಾವು ನಕಾಬು ಧರಿಸುತ್ತಲೇ!
ನಿಜ ಮುಖವ ಕಾಣಿಸದೆಲೆ ಜೀವನದಲೆಂದು!
ಓ ಭಗವಂತ! ನಿನಗೆ ಮಾತ್ರ ಕೇಳಲಿ ನಮ್ಮಾತ್ಮದ ಕೂಗು

ನಿನ್ನಿಂದ ನಾವೇನೂ ಮುಚ್ಚಿಡಲಾರೆವು
ತೆರೆದಿಟ್ಟ ಪುಸ್ತವು ನಮ್ಮ ಜೀವನವು ನಿನಗೆ
ಹರಸು ನಮ್ಮನು ಜೀವನವ ಎದುರಿಸಲು
ನಿನ್ನ ರಕ್ಷಣೆಯಲಿ ಶಾಂತಿಯನ್ನರಸಲು!

ಡಾ. ಸತ್ಯವತಿ ಮೂರ್ತಿ ಬರಹಗಾರ್ತಿ. ಬೆಂಗಳೂರು ದೂರದರ್ಶನ ಮತ್ತು ಆಕಾಶವಾಣಿ ಕಲಾವಿದೆ. ಅವರ ಪಿಎಚ್.ಡಿ. ಪ್ರಬಂಧ ಸೇರಿದಂತೆ ನಾಲ್ಕು ಕೃತಿಗಳು ಪ್ರಕಟವಾಗಿವೆ. ಕಳೆದ 25 ವರ್ಷ ದಿಂದ ಮ್ಯಾಂಚೆಸ್ಟರ್ ನಲ್ಲಿ ನೆಲೆಸಿದ್ದಾರೆ. ರೆಫರೆನ್ಸ್ ಏಷ್ಯಾ ಮೆನ್ ವುಮನ್ ಅಚೀವ್ ಮೆಂಟ್ಸ್ ನಲ್ಲಿ ಇವರ ಹೆಸರು ಉಲ್ಲೇಖವಾಗಿದೆ. ಇಂಗ್ಲೆಂಡ್ ಸರ್ಕಾರದಿಂದ ಹಿಂದೂ ಪ್ರಿಸನ್ ಮಿನಿಸ್ಟರ್ ಆಗಿ ನೇಮಕಗೊಂಡಿದ್ದರು.  ಪ್ರಸ್ತುತ ಮಕ್ಕಳಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.