ಯುದ್ಧದ ಹಿಂಸೆ ಮತ್ತು ಅಸಹಾಯಕತೆಯನ್ನು ಸಹಿಸುತ್ತ, ಸಾವು ನೋವು ಅನುಭವಿಸುತ್ತ ಮುನ್ನಡೆಯುವ ಛಲ ಲೋಕದ ಜನಸಮುದಾಯಗಳಿಗೆ ಅದು ಹೇಗೆ ಬರುವುದೊ! ಬಹುಶಃ ಅನುಭವಿಸಿದಾಗಲೇ ಗೊತ್ತಾಗುವುದು. ಇದೇ ಉಜ್ಬೆಕಿಸ್ತಾನ ಮೂಲದ ಮೊಘಲ ಸಂತತಿಯ ಔರಂಗಜೇಬ್, ನನ್ನ ಜನ್ಮಸ್ಥಳ ವಿಜಯಪುರದ ಮೇಲೆ ದಂಡೆತ್ತಿ ಬಂದು ಆದಿಲಶಾಹಿ ಸಾಮ್ರಾಜ್ಯವನ್ನು ಹಾಳುಗೆಡವಿದ. ಅನೇಕ ಸೂಫಿಸಂತರ ಕೊಲೆ ಮಾಡಿದ. ಯುದ್ಧದಲ್ಲಿ ಯಾರು ಮುಸ್ಲಿಮರು? ಯಾರು ಹಿಂದುಗಳು? ಯಾರು ಕ್ರೈಸ್ತರು? ಯುದ್ಧದಲ್ಲಿ ಧರ್ಮವಿಲ್ಲ, ನೀತಿಯಿಲ್ಲ, ನ್ಯಾಯವಿಲ್ಲ. ಅದು ಕೇವಲ ಯುದ್ಧ. ಗೆದ್ದವರನ್ನೂ ಆರ್ಥಿಕವಾಗಿ ಮತ್ತು ನೈತಿಕವಾಗಿ ಸೋಲಿಸುವ ಯುದ್ಧ.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ 47ನೇ ಕಂತು ಇಲ್ಲಿದೆ.

1983ನೇ ಆಗಸ್ಟ್ 14ರಂದು ಸಮರಕಂದ್ ಪ್ರವಾಸ ಮುಗಿಸಿ ಉಜ್ಬೆಕಿಸ್ತಾನ್ ರಾಜಧಾನಿ ತಾಷ್ಕೆಂಟ್‌ಗೆ ವಾಪಸ್ ಆದೆವು. ಮರುದಿನ ಸಾಯಂಕಾಲ ತಾಷ್ಕೆಂಟಲ್ಲಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲು ನಿಯೋಗದ ಪ್ರತಿನಿಧಿಗಳೆಲ್ಲ ಸೇರಿ ನನಗೆ ತಿಳಿಸಿದರು. ನಾನು ಒಪ್ಪಿದೆ. ಆದರೆ ನನ್ನ ತಲೆ ತುಂಬ ಸಮರಕಂದದ ಸೌಂದರ್ಯ ಮತ್ತು ಯುದ್ಧಗಳ ಕ್ರೌರ್ಯ ತುಂಬಿಕೊಂಡಿತ್ತು. ಖಗೋಳ ವಿಜ್ಞಾನಿ ಗಣಿತಜ್ಞ ಸುಲ್ತಾನ್ ಉಲಗ್ ಬೇಗರ ದುರಂತ ಅಂತ್ಯ ನನ್ನನ್ನು ಗಾಢವಾಗಿ ಕಾಡತೊಡಗಿತ್ತು.

ಜ್ಞಾನ, ವಿಜ್ಞಾನ, ಧರ್ಮ, ಸೌಂದರ್ಯ ಮತ್ತು ಕ್ರೌರ್ಯ ಹೀಗೆ ಎಲ್ಲದರಲ್ಲೂ ವಿಶ್ವದ ಎಲ್ಲ ಸಮಾಜಗಳು ಏಕ ಕಾಲಕ್ಕೆ ತೊಡಗಿರುವುದು ಸಖೇದಾಶ್ವರ್ಯವನ್ನುಂಟು ಮಾಡುತ್ತದೆ. ಯುದ್ಧಗಳಲ್ಲಿ ಎಲ್ಲ ಧರ್ಮದವರು ಒಂದೇ ತೆರನಾಗಿ ವರ್ತಿಸುತ್ತಾರೆ. ಅಮಾಯಕರನ್ನು ಕೊಲ್ಲುತ್ತ ಭಯೋತ್ಪಾದನೆಯನ್ನುಂಟು ಮಾಡುತ್ತಾರೆ. ಆಯಾ ದೇಶದವರು, ಜಾತಿ ಧರ್ಮಗಳವರು ತಮ್ಮವರ ಕ್ರೌರ್ಯವನ್ನು ಶೌರ್ಯವೆಂದು ವರ್ಣಿಸುತ್ತಾರೆ. ಬೇರೆಯವರ ಶೌರ್ಯವನ್ನು ಕ್ರೌರ್ಯವೆಂದು ಪರಿಗಣಿಸುತ್ತಾರೆ. ಯಾವುದು ಶೌರ್ಯವೋ ಯಾವುದು ಕ್ರೌರ್ಯವೋ ಅಮಾಯಕರಿಗೆ ಒಂದೂ ಗೊತ್ತಾಗುವುದಿಲ್ಲ. ಅವರಿಗೆ ಗೊತ್ತಾಗುವುದು ತಮ್ಮ ಮೇಲೆ ಆದ ಅತ್ಯಾಚಾರ, ದಬ್ಬಾಳಿಕೆ, ದುರಂತ ಮತ್ತು ಸಾವು ನೋವು ಮಾತ್ರ.

1969ರಿಂದ ಕಮ್ಯುನಿಸ್ಟ್ ಪಕ್ಷದ ಸಂಪರ್ಕ ಬಂದಾಗಿನಿಂದಲೂ ನಾನು ಯುದ್ಧಗಳ ಕ್ರೌರ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ನನ್ನ ಲೇಖನಿಯನ್ನು ಶಾಂತಿ, ಸೌಹಾರ್ದ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಬಳಸುತ್ತಿದ್ದೇನೆ. ಆದರೆ ಸುಲ್ತಾನ್ ಉಲುಗ್ ಬೇಗ್ ತನ್ನ ಮಗನ ಕುತಂತ್ರದಿಂದಲೇ ಕೊಲೆಗೀಡಾಗಿದ್ದು ಮಾತ್ರ ಅನೇಕ ರೀತಿಯ ಯೋಚನೆಗಳಿಗೆ ದಾರಿಮಾಡತೊಡಗಿತು.

ಉಜ್ಬೆಕಿಸ್ತಾನದ ಸುಂದರ ಜನರು ಕಷ್ಟದಲ್ಲಿದ್ದವರಿಗೆ ನೆರವಾಗಲು ಮುಂದೆ ಬರುವ ಗುಣವುಳ್ಳವರು. ನೂರಾರು ಜನರಿಗೆ ಏಕಕಾಲಕ್ಕೆ ಅಡುಗೆ ಮಾಡಿ, ಜೊತೆಗೂಡಿ ಉಣ್ಣುವಂಥ ಭಾವನಾತ್ಮಕ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಭಾವನಾತ್ಮಕ ಜೀವನವಿಧಾನ, ಸುಂದರ ಪ್ರದೇಶ, ಕಲೆ, ವಿಜ್ಞಾನದಲ್ಲೂ ಶತಮಾನಗಳಿಂದ ಮುಂದುವರಿದ ಇತಿಹಾಸವುಳ್ಳ ಅವರು ಯುದ್ಧ ಮತ್ತು ಅಂತರ್ಯುದ್ಧಗಳ ಅಮಾನುಷತೆಯನ್ನೂ ಅನುಭವಿಸುತ್ತ ಬಂದಿದ್ದಾರೆ.

ಯುದ್ಧದ ಹಿಂಸೆ ಮತ್ತು ಅಸಹಾಯಕತೆಯನ್ನು ಸಹಿಸುತ್ತ, ಸಾವು ನೋವು ಅನುಭವಿಸುತ್ತ ಮುನ್ನಡೆಯುವ ಛಲ ಲೋಕದ ಜನಸಮುದಾಯಗಳಿಗೆ ಅದು ಹೇಗೆ ಬರುವುದೊ! ಬಹುಶಃ ಅನುಭವಿಸಿದಾಗಲೇ ಗೊತ್ತಾಗುವುದು. ಇದೇ ಉಜ್ಬೆಕಿಸ್ತಾನ ಮೂಲದ ಮೊಘಲ ಸಂತತಿಯ ಔರಂಗಜೇಬ್, ನನ್ನ ಜನ್ಮಸ್ಥಳ ವಿಜಯಪುರದ ಮೇಲೆ ದಂಡೆತ್ತಿ ಬಂದು ಆದಿಲಶಾಹಿ ಸಾಮ್ರಾಜ್ಯವನ್ನು ಹಾಳುಗೆಡವಿದ. ಅನೇಕ ಸೂಫಿಸಂತರ ಕೊಲೆ ಮಾಡಿದ. ಯುದ್ಧದಲ್ಲಿ ಯಾರು ಮುಸ್ಲಿಮರು? ಯಾರು ಹಿಂದುಗಳು? ಯಾರು ಕ್ರೈಸ್ತರು? ಯುದ್ಧದಲ್ಲಿ ಧರ್ಮವಿಲ್ಲ, ನೀತಿಯಿಲ್ಲ, ನ್ಯಾಯವಿಲ್ಲ. ಅದು ಕೇವಲ ಯುದ್ಧ. ಗೆದ್ದವರನ್ನೂ ಆರ್ಥಿಕವಾಗಿ ಮತ್ತು ನೈತಿಕವಾಗಿ ಸೋಲಿಸುವ ಯುದ್ಧ. ಯುದ್ಧದಲ್ಲಿ ಗೆದ್ದವರೂ ತಮ್ಮವರನ್ನು ಕಳೆದುಕೊಳ್ಳುತ್ತಾರೆ. ಬದುಕುಳಿದವರು ವಿಜಯೋತ್ಸವ ಆಚರಿಸುತ್ತಾರೆ.

ತೈಮೂರಲಂಗ ದೆಹಲಿ ಲೂಟಿ ಮಾಡಿ ವಾಪಸ್ ಸಮರಕಂದ್‌ಗೆ ಬಂದು ಬದುಕುಳಿದದ್ದು ಕೇವಲ ಎರಡು ವರ್ಷ ಮಾತ್ರ! ಮಧ್ಯ ಏಷ್ಯಾದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ರಷ್ಯಾದಿಂದ ದೆಹಲಿವರೆಗೆ ಭಯಭೀತಿ ಮೂಡಿಸಿದ ಆತನೂ ಹೆಣವಾದ. ತೈಮೂರನ ಮಗ ಶಾರುಖ್ ಖಾನ್ ಸುಲ್ತಾನನಾಗಿ ತನ್ನ ದೇಶವನ್ನು ಸಮೃದ್ಧಗೊಳಿಸಿ ಎಲ್ಲೋ ಇರಾನ್‌ನಲ್ಲಿ ಸತ್ತ. ಆತನ ಮಗ ಜಗತ್ಪ್ರಸಿದ್ಧ ಖಗೋಳವಿಜ್ಞಾನಿ ಸುಲ್ತಾನ್ ಉಲುಗ್ ಬೇಗ್ ಸಮರಕಂದ್ ಕಡೆಗೆ ಇಡೀ ಜಗತ್ತೇ ಆಶ್ಚರ್ಯದಿಂದ ನೋಡುವಂತೆ ಮಾಡಿ ಇನ್ನೆಲ್ಲೋ ಮಗನಿಂದಲೇ ಬೀದಿ ಹೆಣವಾದ. ಅವನ ಸೋದರ ಸಂಬಂಧಿಯೊಬ್ಬ ವರ್ಷದ ನಂತರ ಆತನ ಅಸ್ಥಿಪಂಜರವನ್ನು ಹುಡುಕಿ ತಂದು ಅಜ್ಜ ತೈಮೂರಲಂಗನ ಮತ್ತು ತಂದೆ ಶಾರುಖ್ ಖಾನನ ಗೋರಿಗಳಿರುವ ಗುಮ್ಮಟದ ಕೆಳಗೆ ದಫನ್ ಮಾಡಿದ. ಇವರ ಗೋರಿಗಳುಳ್ಳ ಇಮಾರತು ಸುಂದರವಾಗಿದ್ದು ಸಮರಕಂದದ ರೇಗಿಸ್ಥಾನ ಚೌಕಿನ ಸೌಂದರ್ಯವನ್ನು ಹೆಚ್ಚಿಸಿದೆ. ಇವೆಲ್ಲ ಸರದಿಯಂತೆ ನೆನಪಾಗುತ್ತ ಬದುಕು ಒಂದು ಕ್ಷಣ ವಿಕ್ಷಿಪ್ತ ಎನಿಸತೊಡಗಿತು. ನಮ್ಮ ನಿಯೋಗದ ಸದಸ್ಯರ ಹಾಗೆ ನಾನೇಕೆ ಹಾಯಾಗಿ ಸಕಲ ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುತ್ತ ಆರಾಮಾಗಿ ಇರಬಾರದು ಎಂದು ಅನಿಸತೊಡಗಿತು. ‘ಇಲ್ಲ ಬೇಡ ಇಂಥ ತುಡಿತಗಳಿಲ್ಲದೆ ನನಗೆ ಬದುಕಲಿಕ್ಕಾಗದು’ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ.

ತಾಷ್ಕೆಂಟ್ ಮುಂತಾದ ಕಡೆಗಳಲ್ಲಿ ಸಾಯಂಕಾಲ ಮನೆಯಂಗಳದಲ್ಲಿ ಚೌಕಾಕಾರದ ಕಲಾತ್ಮಕ ಕಟಾಂಜನವುಳ್ಳ ಕಟ್ಟಿಗೆಯ 10 ಅಡಿ ಜಗಲಿಯ ಒಳಗೆ ಮೂರ್ನಾಲ್ಕು ಜನ ಹಿರಿಯರು ಕುಳಿತು ಮಾತನಾಡುತ್ತಿದ್ದ ದೃಶ್ಯ ಇಂದಿಗೂ ನೆನಪಿನಲ್ಲಿದೆ. ಅಲ್ಲಿ ಸಾಮಾನ್ಯವಾಗಿ ಎಲ್ಲರೂ ಒಂದೇ ತೆರನಾದ ಕರಿ ಟೊಪ್ಪಿಗೆ ಹಾಕಿಕೊಳ್ಳುವುದು ಮಜಾ ಎನಿಸುತ್ತಿತ್ತು. ಅದು ಅಷ್ಟೇನೂ ಎತ್ತರವಲ್ಲದ ಮತ್ತು ಸಾಮಾನ್ಯವಾಗಿ ಸಾಂಪ್ರದಾಯಿಕ ಮುಸ್ಲಿಮರು ಹಾಕಿಕೊಳ್ಳುವ ಟೊಪ್ಪಿಗಳ ಹಾಗೆ ಇರಲಿಲ್ಲ. ಆ ಟೊಪ್ಪಿಗೆ ಸುತ್ತೆಲ್ಲ ಸ್ವಲ್ಪ ಡಿಸೈ಼ನ್ ಕಾಣಿಸುತ್ತಿತ್ತು.

ಮಸೀದಿಗಳಲ್ಲಿ ಕೆಲ ಮುಸ್ಲಿಂ ಹಿರಿಯರು ಒಂದಿಷ್ಟು ಜನರ ಮಧ್ಯೆ ಕುಳಿತು ಧಾರ್ಮಿಕ ಮೌಲ್ಯಗಳನ್ನು ಮೆಲುಧ್ವನಿಯಲ್ಲಿ ಹೇಳುತ್ತಿರುವಂತೆ ಅನಿಸಿತು. ಆ ಪ್ರದೇಶದಲ್ಲಿ ಶೇಕಡಾ 80 ರಷ್ಟು ಜನ ಮುಸ್ಲಿಮರಿದ್ದರೂ ಮೈಕಲ್ಲಿ ಐದು ಹೊತ್ತಿನ ನಮಾಜದ ಪ್ರಾರ್ಥನೆಯ ಕರೆ ಕೇಳಿಬರಲಿಲ್ಲ. ಆಗ ಅದು ಸೋವಿಯತ್ ಯೂನಿಯನ್ನಿನ ಗಣರಾಜ್ಯಗಳಲ್ಲಿ ಒಂದಾಗಿದ್ದರಿಂದ ಹೀಗಾಗಿರಬಹುದು ಎಂದು ಅನಿಸಿತು. (ಆದರೆ ಮುಂದೆ ಬೇರೆ ಮುಸ್ಲಿಂ ದೇಶಗಳಲ್ಲಿ ಸುತ್ತಾಡುವಾಗ ಕೂಡ ದೂರದವರೆಗೆ ಕೇಳಿಸುವ ಹಾಗೆ ಮೈಕಲ್ಲಿ ಪ್ರಾರ್ಥನೆಯ ಕರೆ ಕೊಡುವುದು ಗಮನಕ್ಕೆ ಬರಲಿಲ್ಲ.) ಆಧುನಿಕತೆ ಧಾರ್ಮಿಕ ಜೀವನದಲ್ಲಿ ಕೂಡ ಅನೇಕ ಮಾರ್ಪಾಡುಗಳನ್ನು ಮಾಡುತ್ತ ಹೋಗುತ್ತದೆ.

ಮರುದಿನ ಆಗಸ್ಟ್ 15. ಅಂದು ಸಾಯಂಕಾಲ ಅಲ್ಲಿನ ಅಧಿಕಾರಿಗಳು ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಸಮಾರಂಭವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ್ದರು. ನನ್ನ ದೇಶದ ಬಗ್ಗೆ ವಿದೇಶದಲ್ಲಿ ಮಾತನಾಡುವ ಮೊದಲ ಅವಕಾಶ ಅದಾಗಿತ್ತು. ನಮ್ಮ ಸ್ವಾತಂತ್ರ್ಯೋತ್ಸವದ ಕುರಿತು ಅಲ್ಲಿ ಮಾತನಾಡುವ ಖುಷಿಯೇ ಬೇರೆ. ನಿಯೋಗದ ಸದಸ್ಯರಲ್ಲಿ ನಾನೇ ಕಿರಿಯವನಾಗಿದ್ದರಿಂದ ಉಳಿದವರೆಲ್ಲ ನನಗೆ ಬಹಳ ಹುರಿದುಂಬಿಸುತ್ತಿದ್ದರು. ಖುಷಿ ಪಡುತ್ತಿದ್ದರು.

ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸೋವಿಯತ್ ಧ್ವಜದ ಜೊತೆ ಭಾರತದ ಧ್ವಜ ಟೇಬಲ್ ಮೇಲೆ ಕಂಗೊಳಿಸುತ್ತಿತ್ತು. ಅದನ್ನು ನೋಡುವ ಆನಂದ ನಮ್ಮದಾಗಿತ್ತು. ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರ್ಕಾರ ಬಾಲಗಂಗಾಧರ ಟಿಳಕರನ್ನು ಬಂಧಿಸಿದ ಸಂದರ್ಭದಲ್ಲಿ ರಷ್ಯಾದ ಝಾರ್ ದೊರೆಯ ವಿರುದ್ಧದ ಹೋರಾಟದಲ್ಲಿ ತೊಡಗಿದ್ದ ಲೆನಿನ್ ಭೂಗತರಾಗಿದ್ದರು. ಅಂಥ ಸಂದರ್ಭದಲ್ಲೂ ‘ಬ್ರಿಟಿಷ್ ನರಿಗಳು ಟಿಳಕರನ್ನು ಬಂಧಿಸಿವೆ’ ಎಂದು ಕೇಬಲ್ ಕಳಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲಿಸಿದ್ದು, 1917ರಲ್ಲಿ ರಷ್ಯಾದೊಳಗೆ ಅಕ್ಟೋಬರ್ ಮಹಾಕ್ರಾಂತಿ ಸಂಭವಿಸಿದ ನಂತರ ಭಾರತವೂ ಸೇರಿದಂತೆ 60ರಷ್ಟು ಬ್ರಿಟಿಷ್ ವಸಾಹತುಶಾಹಿ ದೇಶಗಳು ಸ್ಫೂರ್ತಿ ಪಡೆದು ಹೋರಾಟ ಮಾಡಿ ಗೆಲವು ಸಾಧಿಸಿ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಿಸಿದ್ದು, ಸ್ವಾತಂತ್ರ್ಯಪೂರ್ವದಲ್ಲೇ ಬಿಹಾರದ ರಾಜಾ ಪ್ರತಾಪಸಿಂಗ್ ರಷ್ಯಾಗೆ ರೈತರನ್ನು ಕರೆದುಕೊಂಡು ಹೋಗಿ ಲೆನಿನ್ ಅವರನ್ನು ಭೇಟಿ ಮಾಡಿದ್ದು, ಲೆನಿನ್ ಅವರು ಬಿಹಾರದ ರೈತರ ಜೊತೆ ಭಾರತದ ರೈತರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ್ದು, ಗಾಂಧೀಜಿಯವರು ಭಜನೆಯನ್ನು ಕೂಡ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟದಲ್ಲಿ ಬಳಸಿಕೊಂಡಿದ್ದನ್ನು ಲೆನಿನ್ ಅವರು ಗಮನಿಸಿದ್ದು, ಭಾರತವೂ ಸೇರಿದಂತೆ ಜಗತ್ತಿನ ವಸಹಾತುಶಾಹಿ ಹೋರಾಟಗಳಲ್ಲಿ ತೊಡಗಿದ್ದ ಹೋರಾಟಗಾರರಿಗೆ ಸೋವಿಯತ್ ದೇಶ ಸಹಾಯ ಮಾಡಿದ್ದು, ಸ್ವತಂತ್ರಗೊಂಡ ದೇಶಗಳ ಆರ್ಥಿಕ ಸುಧಾರಣೆಯನ್ನು ಬೆಂಬಲಿಸಿದ್ದು, ಲೆನಿನ್ನರ ಪಂಚವಾರ್ಷಿಕ ಯೋಜನೆ ಭಾರತಕ್ಕೆ ಮಾದರಿಯಾಗಿದ್ದು, ಇಸ್ಕಸ್ (ಭಾರತ ಸೋವಿಯತ್ ಸಾಂಸ್ಕೃತಿಕ ಸಂಘ) ಎರಡೂ ದೇಶಗಳ ಮಧ್ಯೆ ಸೇತುವೆಯಾಗಿ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿರುವುದು ಮುಂತಾದವುಗಳ ಕುರಿತು ಅಂದಿನ ಭಾಷಣದಲ್ಲಿ ವಿವರಿಸಿದೆ. ಉಜ್ಬೆಕಿಸ್ತಾನದಲ್ಲಿ ಜನಿಸಿ ಭಾರತಕ್ಕೆ ಬಂದು ಭಾರತ ಕುರಿತು ಬೃಹತ್ ಗ್ರಂಥವನ್ನು ಬರೆದ ಮಹಾವಿದ್ವಾಂಸ ಅಲ್ ಬೆರೂನಿ (973-1048) ‘ಇಂಡೊಲಾಜಿಯ ಜನಕ’ ಎಂದು ವಿಶ್ವಪ್ರಸಿದ್ಧವಾಗಿದ್ದರ ಕುರಿತು ಹೇಳಿದೆ. ಉಜ್ಬೆಕ್ ಅಧಿಕಾರಿಗಳು ಖುಷಿಪಟ್ಟರು. ನಮ್ಮ ಗುಡ್‌ವಿಲ್ ಡೆಲಿಗೇಷನ್ ಸದಸ್ಯರು ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಜ್ಬೆಕಿಸ್ತಾನದ ಸುಂದರ ಜನರು ನೂರಾರು ಜನರಿಗೆ ಏಕಕಾಲಕ್ಕೆ ಅಡುಗೆ ಮಾಡಿ, ಜೊತೆಗೂಡಿ ಉಣ್ಣುವಂಥ ಭಾವನಾತ್ಮಕ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಭಾವನಾತ್ಮಕ ಜೀವನವಿಧಾನ, ಸುಂದರ ಪ್ರದೇಶ, ಕಲೆ, ವಿಜ್ಞಾನದಲ್ಲೂ ಶತಮಾನಗಳಿಂದ ಮುಂದುವರಿದ ಇತಿಹಾಸವುಳ್ಳ ಅವರು ಯುದ್ಧ ಮತ್ತು ಅಂತರ್ಯುದ್ಧಗಳ ಅಮಾನುಷತೆಯನ್ನೂ ಅನುಭವಿಸುತ್ತ ಬಂದಿದ್ದಾರೆ.

ಮರುದಿನ ಮಾಸ್ಕೋಗೆ ಪ್ರಯಾಣ ಮಾಡಬೇಕಿತ್ತು. ಬಹುಶಃ ತಾಷ್ಕೆಂಟ್ ಮತ್ತು ಮಾಸ್ಕೋ ಮಧ್ಯೆ ವಿಮಾನಯಾನದ ಅವಧಿ ಐದು ಗಂಟೆ ಇತ್ತು ಎಂಬ ನೆನಪು. ತಾಷ್ಕೆಂಟ್ ಅಧಿಕಾರಿಗಳಿಂದ ಬೀಳ್ಕೊಂಡು ವಿಮಾನ ಏರಿದೆವು. ವಿಮಾನ ಹಾರಿ ಒಂದು ಗಂಟೆ ಆಗಿರಬಹುದು. ಪೈಲಟ್‌ಗೆ ವಿಮಾನದಲ್ಲಿ ಯಾವುದೋ ದೋಷ ಕಂಡಿರಬಹುದು. ಅದಾವುದೋ ವಿಮಾನ ನಿಲ್ದಾಣದಲ್ಲಿ ಇಳಿಸಿದ. ಎಲ್ಲ ಪ್ರಯಾಣಿಕರಿಗೆ ಪಕ್ಕದಲ್ಲೇ ಇರುವ ಇನ್ನೊಂದು ವಿಮಾನದಲ್ಲಿ ಹೋಗಲು ಗಗನಸಖಿ ಧ್ವನಿವರ್ಧಕದ ಮೂಲಕ ತಿಳಿಸಿದಳು. ಆ ಕುರಿತು ವ್ಯವಸ್ಥೆ ಮಾಡಿದ್ದಾಗಿ ಹೇಳಿದಳು. ಖಾಲಿ ಇದ್ದಲ್ಲಿ ಕೂಡಬೇಕು. ನಿಮ್ಮ ಇಲ್ಲಿಯ ಸೀಟ್ ನಂಬರ್ ಅಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದಳು. ಕ್ಯಾಬಿನ್ ಬ್ಯಾಗ ಮಾತ್ರ ಒಯ್ಯಿರಿ. ಚೆಕಿನ್ ಬ್ಯಾಗ್ ವ್ಯವಸ್ಥೆಯಾಗುವುದು ಎಂದು ವಿವರಿಸಿದಳು.

ಜನ ಗಡಿಬಿಡಿಯಿಂದ ಎದ್ದರು. ವಿಮಾನದ ಬಾಗಿಲು ತೆಗೆದ ಕೂಡಲೆ ಇನ್ನೊಂದು ವಿಮಾನದ ಕಡೆಗೆ ಓಡ ತೊಡಗಿದರು. ನಾವೂ ಹೋದೆವು. ಹಳೆಯ ದಿನಗಳು ನೆನಪಾಗಿ ನಗು ಬಂದಿತು. ಬಹಳ ವರ್ಷಗಳ ಹಿಂದೆ ರೆಡ್ ಬೋರ್ಡ್ ಬಸ್ಸಲ್ಲಿ ಪ್ರಯಾಣಿಸುವಾಗ ನಮ್ಮಲ್ಲಿಯೂ ಒಂದು ರೂಪಾಯಿಗೆ ಸೀಟು ಕಾಯ್ದಿಡುವ ವ್ಯವಸ್ಥೆ ಇತ್ತು. ಹೀಗೆ ಬಸ್ ಕೆಟ್ಟು ನಿಂತಾಗ ಕಂಡಕ್ಟರ್ ಇಳಿದು ಹಿಂದಿನಿಂದ ಒಂದೊಂದಾಗಿ ಬರುವ ಬಸ್‌ಗಳನ್ನು ತಡೆಯುತ್ತಿದ್ದ. ಅವುಗಳಲ್ಲಿ ಖಾಲಿ ಸೀಟುಗಳು ಇದ್ದ ಕಡೆ ಕೂಡಬೇಕಿತ್ತು. ಉಳಿದವರು ನಂತರ ಬರುವ ಬಸ್‌ಗಾಗಿ ಕಾಯುತ್ತಿದ್ದರು. ಆಗ ಸಿಕ್ಕ ಮೊದಲ ಬಸ್‌ಗಳಲ್ಲೇ ಕೂಡಲು ನೂಕು ನುಗ್ಗಲಾಗುತ್ತಿತ್ತು. ಇಂಥ ಪ್ರಸಂಗಗಳಲ್ಲಿ ರೆಡ್ ಬಸ್ ಆದರೇನು, ವಿಮಾನ ಆದರೇನು, ಯಾವ ದೇಶದವರಾದರೇನು ಮನುಷ್ಯರು ಮನುಷ್ಯರೇ ಎಂಬುದರ ಜ್ಞಾನೋದಯವಾಯಿತು. ಎಲ್ಲವೂ ಸರಿಯಾಗಿದ್ದು ಸಹಜವಾಗಿ ಸಿಗುವಂಥ ವಾತಾವರಣದಲ್ಲಿ ಮಾತ್ರ ಮಾನವರ ಗಾಂಭೀರ್ಯ ಕಾಣಬಹುದು. ಕೊರತೆಯಿದ್ದಲ್ಲಿ ಎಲ್ಲರದೂ ಏಕೋಭಾವ.

ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದಾಗ ಕತ್ತಲಾಗಿತ್ತು. ಅಲ್ಲಿ ಗೈಡ್‌ ನಮಗಾಗಿ ಕಾರೊಂದಿಗೆ ಕಾಯುತ್ತಿದ್ದರು. ಆ ಕಾರಿನ ಹೆಸರು ಚೈಕಾ (ಕಡಲಹಕ್ಕಿ). ಅದಕ್ಕೆ ಒಟ್ಟು ಆರು ಬಾಗಿಲಗಳು. ನಾವು ಏಳೂ ಜನ ಒಂದೇ ಕಾರಲ್ಲಿ ಹಿಡಿಸಿದೆವು.

ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಹೋಗುವವರೆಗೆ ‘ಮೀರ್’ ಎಂದು ದೊಡ್ಡದಾಗಿ ರಷ್ಯನ್ ಭಾಷೆಯಲ್ಲಿ ಬರೆದ ಹೋರ್ಡರ್‌ಗಳು ಅಲ್ಲಲ್ಲಿ ಎದ್ದು ಕಾಣುತ್ತಿದ್ದವು. (ರಷ್ಯನ್ ಭಾಷೆಯಲ್ಲಿ ಮೀರ್ ಎಂದರೆ ಶಾಂತಿ). ಸೋವಿಯತ್ ದೇಶದ ಜನ ಶಾಂತಿಗೆ ಮಹತ್ವ ಕೊಟ್ಟಷ್ಟು ಇನ್ನಾವುದಕ್ಕೂ ಕೊಟ್ಟಿಲ್ಲ. ‘ನಾವು ಶಾಂತಿಯನ್ನು ಬಯಸುತ್ತೇವೆ. ಏಕೆಂದರೆ ಯುದ್ಧ ಏನೆಂಬುದು ನಮಗೆ ಗೊತ್ತು’ ಎಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ 1975ರಲ್ಲಿ ಮಾಸ್ಕೋ ರೇಡಿಯೋ ಕಚೇರಿಯಿಂದ ಕನ್ನಡ ಕಲಿಯಲು ಬಂದ ಎಲ್ಲಾನೋರಾ ಹೇಳಿದ್ದು ಆ ಶಾಂತಿಯ ಹೋರ್ಡರ್‌ಗಳನ್ನು ನೋಡಿದಾಗ ನೆನಪಾಯಿತು.

1917ರ ಅಕ್ಟೋಬರ್ ಮಹಾಕ್ರಾಂತಿಯ ನಂತರ ನಡೆದ ಮೊದಲ ಸಭೆಯಲ್ಲೇ ಸೋವಿಯತ್ ದೇಶದ ನೇತಾರ ಲೆನಿನ್ ಅವರು ಘೋಷಣೆ ಮಾಡಿದ ಮೊದಲ ನಿರ್ಣಯವೇ ‘ಶಾಂತಿ’ ಆಗಿತ್ತು. ಎಂಥ ಚಿಕ್ಕ ಬುಡಕಟ್ಟಿನ ಸಂಸ್ಕೃತಿಗೂ ಸಮಸ್ಯೆ ತಂದೊಡ್ಡಬಾರದೆಂದು ಲೆನಿನ್ ಆದೇಶಿಸಿದ್ದರು. ‘ನೋ ರಷ್ಷಿಫಿಕೇಶನ್’ ಎಂದು ತಿಳಿಸಿದ್ದರು. ರಷ್ಯನ್ ಭಾಷೆಯನ್ನು ಯಾವುದೇ ಗಣರಾಜ್ಯದ ಮೇಲೆ ಹೇರಬಾರದು ಎಂಬುದು ಅವರ ಆಜ್ಞೆಯಾಗಿತ್ತು. ಈ ಮುಂದಾಲೋಚನೆಯ ಕಾರಣದಿಂದಲೇ ಎಲ್ಲ 15 ಗಣರಾಜ್ಯಗಳ ಭಾಷೆ, ಸಂಸ್ಕೃತಿ, ಉಡುಗೆ ತೊಡಿಗೆ, ಪರಂಪರೆ ಮತ್ತು ಜೀವನವಿಧಾನಕ್ಕೆ ಯಾವುದೇ ರೀತಿಯ ಚ್ಯುತಿ ಬರಲಿಲ್ಲ.

ಶಿಕ್ಷಣ ಮಾಧ್ಯಮದ ವಿಚಾರವನ್ನು ಅವರು ಸರಳವಾಗಿ ಬಗೆಹರಿಸಿದ್ದರು. ಯಾವುದೇ ಗಣರಾಜ್ಯದ ವಿದ್ಯಾರ್ಥಿ ಇನ್ನಾವುದೇ ಗಣರಾಜ್ಯಕ್ಕೆ ಹೋಗಿ ಅಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಆತ ತನ್ನ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಹಕ್ಕನ್ನು ಹೊಂದಿದ್ದ! ಅಂಥ ವಿದ್ಯಾರ್ಥಿಗೆ ಅವನ ಮೂಲ ಗಣರಾಜ್ಯದ ಕಡೆಯಿಂದ ಅವನಿರುವ ಗಣರಾಜ್ಯದ ಆಡಳಿತದ ಮೂಲಕ ಪ್ರಶ್ನೆ ಪತ್ರಿಕೆ ಪೂರೈಸಲಾಗುತ್ತಿತ್ತು. ಆತ ಪರೀಕ್ಷೆ ಬರೆದ ನಂತರ ಉತ್ತರ ಪತ್ರಿಕೆಗಳನ್ನು ತರಿಸಿಕೊಂಡು ಅವುಗಳನ್ನು ಸಂಬಂಧಪಟ್ಟ ಶಿಕ್ಷಕರಿಂದ ಚೆಕ್ ಮಾಡಿಸಿದ ನಂತರ ಅಂಕಗಳನ್ನು ಕಳುಹಿಸಿಕೊಡಲಾಗುತ್ತಿತ್ತು. ಇಂಥ ಶೈಕ್ಷಣಿಕ ಸೌಲಭ್ಯಗಳೂ ಇದ್ದವು. ಆದರೆ ಪರೀಕ್ಷೆ ಮಾತ್ರ ಬಹಳ ಕಟ್ಟುನಿಟ್ಟಾಗಿರುತ್ತಿತ್ತು. (ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಭಾಷಾವಿಜ್ಞಾನ ಓದುವಾಗ ರಷ್ಯನ್ ಡಿಪ್ಲೋಮಾ ತೆಗೆದುಕೊಂಡಿದ್ದೆ. ಆಗ ನತಾಲಿಯಾ ಬಾಸಿಸ್, ಗಲಿನಾ ಶಿರ್ಗೇವ್ನಾ ಮುಂತಾದವರು ನಮ್ಮ ಶಿಕ್ಷಕಿಯರಾಗಿದ್ದರು. ಅವರಲ್ಲಿ ನತಾಲಿಯಾ ಬಾಸಿಸ್ ಹಿರಿಯರು. ಅವರ ಜೊತೆ ನನ್ನ ಒಡನಾಟ ಬಹಳವಿತ್ತು. ನಾವು ಕೇವಲ ಆರೇಳು ಜನ ವಿದ್ಯಾರ್ಥಿಗಳಿದ್ದ ಕಾರಣ, ವಿಶ್ವವಿದ್ಯಾಲಯದವರು ಆ ರಷ್ಯನ್ ಶಿಕ್ಷಕಿಯರಿಗೆ ಕ್ಯಾಂಪಸ್ಸೊಳಗೆ ವ್ಯವಸ್ಥೆ ಮಾಡಿದ್ದ ಮನೆಯಲ್ಲೇ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದರು.

ಧಾರವಾಡದ ನಿರಕ್ಷರಿ ಮಹಿಳೆಯೊಬ್ಬಳು ಅವರಲ್ಲಿ ಮನೆಗೆಲಸಕ್ಕಿದ್ದಳು. ಅವಳು ಇಡೀ ದಿನ ಅವರ ಜೊತೆಗೆ ಇರುತ್ತಿದ್ದಳು. ಅಡುಗೆ ಮಾಡಿಕೊಡುವುದು ಅವಳ ಮುಖ್ಯ ಕೆಲಸವಾಗಿತ್ತು. ಅವಳು ನಾನ್ ವೆಜ್ ಕೂಡ ಚೆನ್ನಾಗಿ ಮಾಡುತ್ತಿದ್ದಳೆಂದು ಕಾಣುತ್ತದೆ. ನಮ್ಮಲ್ಲಿ ಕುದುರೆ ಮಾಂಸ ಸಿಗದ ಕಾರಣ, ಆ ರಷ್ಯನ್ ಶಿಕ್ಷಕಿಯರು ಸೋವಿಯತ್ ದೇಶದಿಂದ ಕುದುರೆ ಮಾಂಸದ ಡಬ್ಬಿಯನ್ನು ತರಿಸುತ್ತಿದ್ದರು. ಆ ಡಬ್ಬಿ ಬಹಳವೆಂದರೆ ಒಂದು ಕಿಲೊ ತೂಕದ್ದಿರಬಹುದು. ಮಾಂಸ ಕೆಡದ ಹಾಗೆ ವ್ಯವಸ್ಥಿತವಾಗಿ ಅದನ್ನು ಸೀಲ್ ಮಾಡಿರುತ್ತಿದ್ದರು. ಒಂದು ದಿನ ಕ್ಲಾಸ್ ನಡೆದಾಗ ಆ ಅಡುಗೆ ಮಾಡುವ ಮಹಿಳೆ ಆ ಡಬ್ಬಿಯನ್ನು ತೋರಿಸಿ ರಷ್ಯನ್ ಭಾಷೆಯಲ್ಲಿ ಸರಾಗವಾಗಿ ಏನೋ ಕೇಳಿದಳು. ನತಾಲಿಯಾ ಅದೇನೋ ವಿವರಿಸಿದಳು. ಆ ನಿರಕ್ಷರಿ ಮಹಿಳೆ ರಷ್ಯನ್ ಭಾಷೆಯ ಮೇಲೆ ಸಾಧಿಸಿದ ಪ್ರಭುತ್ವ ನನಗೆ ಆಶ್ಚರ್ಯವನ್ನುಂಟು ಮಾಡಿತು. ನಾನು ಬಹಳ ಸಲ ರಷ್ಯನ್ ಕ್ಲಾಸ್ ತಪ್ಪಿಸುತ್ತಿದ್ದೆ. ಎ.ಐ.ಎಸ್.ಎಫ್ ವಿದ್ಯಾರ್ಥಿ ಸಂಘಟನೆ ಕಟ್ಟುವುದರಲ್ಲಿ ಬಹಳಷ್ಟು ಸಮಯ ಬೇಕಾಗಿದ್ದರಿಂದ ಈ ಕ್ಲಾಸ್ ತಪ್ಪಿಸುವುದು ಅನಿವಾರ್ಯವಾಗಿತ್ತು. ಆದರೆ ಸಮಯ ಸಿಕ್ಕಾಗಲೆಲ್ಲ ನತಾಲಿಯಾ ಬಳಿ ಹೋಗುತ್ತಿದ್ದೆ. ಹೋದಾಗಲೆಲ್ಲ ‘ಕಂ ಮಾಯ್ ಸನ್’ ಎಂದು ಆಕೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಳು.

ರಷ್ಯನ್ ಡಿಪ್ಲೊಮಾ ಪರೀಕ್ಷೆ ಸಮಯ ಬಂತು. ಪರೀಕ್ಷಾರ್ಥಿಗಳ ಲಿಸ್ಟಲ್ಲಿ ನನ್ನ ಹೆಸರು ಇದ್ದಿದ್ದಿಲ್ಲ. ನನಗೆ ಆಶ್ಚರ್ಯವೆನಿಸಿತು ನತಾಲಿಯಾಗೆ ಕಾರಣ ಕೇಳಿದೆ. ‘ನೋ ಮಾಯ್ ಸನ್, ಯು ಆರ್ ನಾಟ್ ಎಲಿಜಿಬಲ್ ಬಿಕಾಸ್‌ ಯು ಹ್ಯಾವ್ ಮಿಸ್ಡ್ ಮೇನಿ ಕ್ಲಾಸಿಸ್’ ಎಂದು ಹೇಳಿದಳು. ನನ್ನ ಹಾಜರಾತಿ ಕನಿಷ್ಠ ಹಾಜರಾತಿಗಿಂತ ಕಡಿಮೆ ಇತ್ತು. ಆದರೆ ಬೇರೆಯವರಿಗಿಂತ ನನ್ನ ರಷ್ಯನ್ ಜ್ಞಾನ ಸ್ವಲ್ಪ ಹೆಚ್ಚಿಗೇ ಇತ್ತು. ಅಲ್ಲದೆ ನನ್ನನ್ನು ‘ಮಗ’ ಎಂದು ಭಾವಿಸಿ ಅಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ನಾತಾಲಿಯಾ ಬಾಸಿಸ್‌ಗೆ ಇದ್ದ ಕರ್ತವ್ಯ ಪ್ರಜ್ಞೆಯಿಂದಾಗಿ ಅವಳ ಮೇಲೆ ಇನ್ನೂ ಹೆಚ್ಚಿನ ಗೌರವ ಮೂಡಿತು. ಆಕೆ ಎರಡನೇ ಮಹಾಯುದ್ಧದಲ್ಲಿ ಬಾಂಬರ್ ವಿಮಾನದಿಂದ ಬಾಂಬ್ ಹಾಕುವ ಕೆಲಸವನ್ನು ಜೀವದ ಹಂಗುದೊರೆದು ಮಾಡಿದವಳಾಗಿದ್ದಳು. ಸೋವಿಯತ್ ಶಿಕ್ಷಣ ಕ್ಷೇತ್ರ ಕೂಡ ಇಂಥದೆ ಶಿಸ್ತನ್ನು ಒಳಗೊಂಡಿದ್ದರಿಂದ ಅಲ್ಲಿನ ಜನ ಶಾಂತಿ, ನ್ಯಾಯಯುತ ಯುದ್ಧ ಮತ್ತು ಜ್ಞಾನದ ಮಹತ್ವಾಕಾಂಕ್ಷೆಯೊಂದಿಗೆ ಬಹಳ ಬೇಗ ಬಂಡವಾಳಶಾಹಿ ಅಮೆರಿಕಕ್ಕೆ ಸರಿಸಾಟಿಯಾಗಿ ನಿಲ್ಲಲು ಸಾಧ್ಯವಾಯಿತು.)

ಮಾಸ್ಕೋ ವಿಮಾನ ನಿಲ್ದಾಣದಿಂದ ಬಂದ ನಮಗೆ ಹೋಟೆಲ್ ಯುಕ್ರೇನಿಯಾದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಓಲ್ಗಾ ನದಿ ದಂಡೆಯ ಮೇಲಿರುವ ಆ ಪಂಚತಾರಾ ಹೋಟೆಲ್ ಪಾರಂಪರಿಕ ಕಟ್ಟಡದ ಹಾಗೆ ಆಕರ್ಷಕವಾಗಿತ್ತು. ಅಲ್ಲಿ ಓಲ್ಗಾ ನದಿ ದೊಡ್ಡ ಕಾಲುವೆಯ ಹಾಗೆ ಕಾಣುತ್ತಿತ್ತು. ಫುಲ್ ಸೂಟ್‌ನಲ್ಲಿದ್ದ ಹಿರಿಯ ವ್ಯಕ್ತಿಗಳು ಬಂದು ನಮ್ಮ ಲಗೇಜನ್ನು ನಮ್ಮ ನಮ್ಮ ಕೋಣೆಗಳಿಗೆ ತಂದು ಇಟ್ಟರು. ಗಾಢ ಹಸಿರುಬಣ್ಣದ ಅರ್ಧ ಲೀಟರ್ ಮಿನರಲ್ ವಾಟರ್ ಬಾಟಲಿಗಳನ್ನು ತಂದರು. ನಾವು ಸೋವಿಯತ್ ದೇಶದ ಅತಿಥಿಗಳಾಗಿದ್ದರಿಂದ ಎಲ್ಲವನ್ನೂ ಸೋವಿಯತ್ ಸರ್ಕಾರ ವ್ಯವಸ್ಥೆ ಮಾಡಿತ್ತು. ಒಂದು ಬಾಟಲ್ ಮಿನರಲ್ ವಾಟರ್ ಬೆಲೆ 5 ಕೊಪೆಕ್ ಎಂದು ಮುದ್ರಿಸಲಾಗಿತ್ತು.. (100 ಕೊಪೆಕ್ ಸೇರಿದರೆ 1 ರೂಬಲ್). ನನಗೆ ಇದು ಹೊಸದೆನಿಸಿತು. ಏಕೆಂದರೆ ಆಗ ಇನ್ನೂ ಬಿಸಲೇರಿಯಂಥ ಬಾಟಲಿ ನೀರು ನಮ್ಮ ದೇಶದಲ್ಲಿ ಪ್ರವೇಶ ಮಾಡಿರಲಿಲ್ಲ.

ಭಾರತಕ್ಕಿಂತಲೂ ತಾಷ್ಕೆಂಟ್ 2 ಗಂಟೆ ಹಿಂದೆ. ತಾಷ್ಕೆಂಟ್‌ಗಿಂತಲೂ ಮಾಸ್ಕೊ 2 ಗಂಟೆ ಹಿಂದೆ. ಹೀಗೆ ಆಗಿನ ಸೋವಿಯತ್ ದೇಶದ ವಿವಿಧ ಕಡೆಗಳಲ್ಲಿ ಸಮಯ ಹಿಂದೆ ಮುಂದೆ ಆಗುತ್ತವೆ. ಹೀಗಾಗಿ ಒಂದೇ ದೇಶದ ವಿವಿಧ ಕಡೆಗಳಲ್ಲಿ ಸಮಯ ವಿವಿಧ ಅಂತರಗಳಲ್ಲಿದ್ದುದು ಭಾರತೀಯರಿಗೆ ಹೊಸದು. ನಮ್ಮ ಇಡೀ ದೇಶಕ್ಕೆ ಒಂದೇ ಸಮಯವಿರುವುದು ಖುಷಿ ಕೊಡುತ್ತದೆ.


ಸೋವಿಯತ್ ದೇಶದ ವಿವಿಧ ಕಡೆಗಳಲ್ಲಿ ರಾತ್ರಿಗಳು ಹಗಲಿಗಿಂತ ಚಿಕ್ಕದಾಗಿರುತ್ತವೆ. ಆಗ ಕತ್ತಲೆಯ ಮಹತ್ವ ಗೊತ್ತಾಗುವುದು. ಕೆಲವೊಂದು ಸಲ ರಾತ್ರಿ 11 ಗಂಟೆ ನಮ್ಮ ದೇಶದ ಸಾಯಂಕಾಲ 5 ಗಂಟೆಯ ಹಾಗೆ ಇರುವುದು. ಅಂಥ ಸಂದರ್ಭದಲ್ಲಿ ಮಲಗುವ ಕೋಣೆಯ ತೆಳ್ಳನೆಯ ಮತ್ತು ದಪ್ಪನೆಯ ಎರಡೂ ಕರ್ಟನ್‌ಗಳನ್ನು ಎಳೆದು ಕತ್ತಲನ್ನು ಆಹ್ವಾನಿಸಿ ಮಲಗಬೇಕಾಗುತ್ತದೆ. ಕೆಲವೊಂದು ಸಲ ರಾತ್ರಿ ಕೇವಲ ಒಂದೆರಡು ಗಂಟೆಯೊಳಗೆ ಮುಗಿದು ಮತ್ತೆ ಹಗಲಾಗುವುದು. ಈ ಹಗಲು, ರಾತ್ರಿ ಮತ್ತು ಸಮಯದ ವ್ಯತ್ಯಾಸಗಳು ನನಗಂತೂ ಬಹಳ ಹೊಸದೆನಿಸಿದವು.