ಏನೇ ಆದರೂ ಒಂದು ವಿಚಾರವಂತೂ ಸ್ಪಷ್ಟ ಮತ್ತು ವ್ಯಕ್ತ. ವಿಜಯ್ ಅವರ ಗೆಳೆಯರೊಬ್ಬರು ವಿಜಯ್ ಅವರನ್ನು ‘ಮಗು’ ಅಂತ ಕರೆದಾಗ ಅದು ನನಗೆ ಉತ್ಪ್ರೇಕ್ಷೆ ಅನಿಸಿತ್ತು. ಆದರೆ ವಿಜಯ್ ಫೋನಲ್ಲಿ ನನ್ನ ದೀರ್ಘ ಪ್ರಶ್ನೆಗಳಿಗೆ ನಗುತ್ತಿದ್ದ ಬಗೆ ನೆನೆಸಿಕೊಂಡರೆ ಮಗುವಿನ ನಗೆಯ ಶಬ್ದವೇ ತಾಳೆಯಾಗುತ್ತಿದೆ. ನಾನು ಬಿಲ್ಲು ಬಾಣ ಕೆಳಗಿರಿಸಿ ನಮ್ರತೆಯಿಂದ ಕೈ ಮುಗಿಯುತ್ತಿದ್ದೇನೆ.
ಅಗಲಿದ ಮೇರು ನಟ ಸಂಚಾರಿ ವಿಜಯ್ ಕುರಿತು ರಂಗಕರ್ಮಿ ಎನ್. ಸಿ. ಮಹೇಶ್ ಬರೆದಿದ್ದಾರೆ.

 

ಹಲವರಿಗೆ ತಿಳಿದಿರುವಂತೆ ವಿಜಯ್ ಭಾವಾವೇಶದ ನಟ ಅಲ್ಲ. ‘ನೀವು ಸ್ವಿಚ್ ಆನ್ ಸ್ವಿಚ್ ಆಫ್ ನಟ..’ ಎಂದು ಕನ್ನಡದ ಸ್ಟಾರ್ ನಟ ಯಶ್ ಒಮ್ಮೆ ವಿಜಯ್ ಅವರಿಗೆ ಹೇಳಿದ್ದರಂತೆ. ಇದರ ಅರ್ಥ ಕೆಮರಾ ಆನ್ ಆದಾಗ ವಿಜಯ್ ರಲ್ಲಿರುವ ನಟ ಮತ್ತು ಪಾತ್ರದ ಭಾವ ಪ್ರಕಟವಾಗಲಾರಂಭಿಸುತ್ತದೆ. ಕೆಮರಾ ಆಫ್ ಆದಾಗ ವಿಜಯ್ ಮತ್ತೆ ಪಾತ್ರದಿಂದ ಹೊರಕ್ಕೆ. ನಟನೆಯಲ್ಲಿ ವಾಸ್ತವ ಅರ್ಥೈಸಿಕೊಂಡು ಸಂಯಮ ಕಾಪಾಡಿಕೊಳ್ಳುವುದು ಕಷ್ಟದ ಕೆಲಸ. ವಿಜಯ್ ಅವರಿಗೆ ಇದು ಸಿದ್ಧಿಸಿತ್ತು. ಮತ್ತು ಈ ಸಿದ್ಧಿಯ ಹಿಂದೆ ಅವರೇ ಅನೇಕ ಸಲ ಹೇಳಿಕೊಂಡಿರುವಂತೆ, ಹಿನ್ನೆಲೆಗೆ ರಂಗಭೂಮಿ ಕಲಿಸಿದ ಪಾಠ ಗಳಿದ್ದವು ಎನ್ನುವುದು ಮುಖ್ಯವಾದ ಸಂಗತಿ.

‘ಪುಕ್ಸಟ್ಟೆ ಲೈಫು’, ‘ಮೇಲೊಬ್ಬ ಮಾಯಾವಿ’, ‘ತಲೆದಂಡ’ ಚಿತ್ರಗಳು ಬಿಡುಗಡೆಗೆ ಸಿದ್ಧ ಇವೆ. ಈ ಚಿತ್ರಗಳಲ್ಲಿ ವಿಜಯ್ ನಟಿಸಿದ್ದಾರೆ. ಲಾಕ್ ಡೌನ್ ಕಳೆದು ಇನ್ನೇನು ಚಿತ್ರಗಳು ಬಿಡುಗಡೆಗೊಳ್ಳುತ್ತವೆ ಎಂಬ ನಿರೀಕ್ಷೆಯಲ್ಲಿದ್ದರು ವಿಜಯ್. ಅವರ ನಿರ್ಗಮನದ ಈ ಹೊತ್ತು ಸಾವಿನ ಕುರಿತು ಫಿಲಾಸಾಫಿಕಲ್ ಮಾತುಗಳನ್ನು ಆಡಬಾರದಾದರೂ ಬಿಡುಗಡೆಗೆ ಸಿದ್ಧವಿರುವ ಅವರ ಚಿತ್ರಗಳ ಶೀರ್ಷಿಕೆಗಳು ವಿಜಯ್ ರ ಬದುಕು ಮತ್ತು ಅಪಘಾತದ ದುರಂತದ ಬಗ್ಗೆ ಹೇಳಲು ಒತ್ತಾಯಿಸುತ್ತಿರುವಂತಿವೆ.

ವಿಜಯ್ ಅವರಿಗೆ ಅವರ ಲೈಫು ಪುಕ್ಸಟ್ಟೆ ಆಗಿರಲಿಲ್ಲ. ತಾವು ಆರಿಸಿಕೊಂಡ ರಂಗದಲ್ಲಿ – ಅದು ರಂಗಭೂಮಿ ಇರಲಿ, ಚಿತ್ರರಂಗ ಇರಲಿ ತುಂಬ ಶ್ರದ್ಧೆವಹಿಸಿ ಪೂರ್ಣ ಶ್ರಮ ವಿನಿಯೋಗಿಸುತ್ತಿದ್ದ ನಟ ಅವರು -ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಮತ್ತು ಇದಕ್ಕೆ ಅವರಿಗೆ ಸಂದ ಮನ್ನಣೆಯೇ ಸಾಕ್ಷಿ. ಆದರೆ ‘ಮೇಲೊಬ್ಬ ಮಾಯಾವಿ’ ಇದ್ದಾನೆ. ಅವನಿಗೆ ವಿಜಯ್ ಮೇಲೆ ದೃಷ್ಟಿ ಯಾಕೆ ನೆಟ್ಟಿತೊ. ಕಡೆಗೂ ‘ತಲೆದಂಡ’ ಪಡೆದೇಬಿಟ್ಟ. ಯಾಕೆ ಹೀಗಾಯಿತು?

ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಕಲಾವಿದರು- ರಂಗಭೂಮಿ ಹಾಗೂ ಚಿತ್ರರಂಗದವರು- ಕೆಲಸ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಸಂದರ್ಶನವೊಂದರಲ್ಲಿ ವಿಜಯ್ ರಿಗೆ ಪ್ರಶ್ನೆ ಕೇಳಲಾಯಿತು. ಆಗ ಅವರು ‘ಬದುಕನ್ನ ಎದುರುಗೊಳ್ಳಲಿಕ್ಕೆ ಧೈರ್ಯ ಇಲ್ಲದವರಿಗೆ ಸಾಯಲಿಕ್ಕೆ ಹೇಗೆ ಧೈರ್ಯ ಬರುತ್ತೋ ಗೊತ್ತಿಲ್ಲ. ಕಷ್ಟಗಳು ಬರ್ತಾವೆ. ಈಸಬೇಕು ಇದ್ದು ಜೈಸಬೇಕು ಅಂತ ಹಿರಿಯರು ಹೇಳಿದ್ದಾರೆ..’ ಎಂದು ಉತ್ತರಿಸಿದ್ದರು.

ಹಾಗೆ ನೋಡಿದರೆ ವಿಜಯ್ ಅವರಿಗೆ ಈಜಿನ ಬಗ್ಗೆ ಚಿಕ್ಕಂದಿನಿಂದ ತುಂಬ ದೊಡ್ಡ ಕ್ರೇಜ್ ಇತ್ತಂತೆ. ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಅವರು ಹಳ್ಳಿಯಲ್ಲಿ. ಆ ಹಳ್ಳಿಯಲ್ಲಿದ್ದ ಕೆರೆಯಲ್ಲಿ ಈಸು ಬೀಳುವುದು ಅಂದರೆ ಅವರಿಗೆ ತುಂಬ ಇಷ್ಟದ ಕೆಲಸವಾಗಿತ್ತಂತೆ. ಎರಡ್ಮೂರು ಕಿಲೋಮೀಟರ್ ಉದ್ದದ ಕೆರೆಗೆ ಧುಮುಕಿ ಗೆಳೆಯರೊಂದಿಗೆ ಈಜುತ್ತ ಮತ್ತೊಂದು ದಡ ಸೇರಿ ಅಲ್ಲಿ ಹಣ್ಣು ಹಂಪಲು ತಿಂದು ಮತ್ತೆ ಈಜಿಕೊಂಡು ಬಂದು ತಮ್ಮ ಊರಿನ ದಡ ಸೇರುತ್ತಿದ್ದರಂತೆ. ಬೆಳಗ್ಗೆ ಹತ್ತಕ್ಕೆ ನೀರಿಗೆ ಧುಮುಕಿದರೆ ವಾಪಸ್ ಮರಳುವುದು ಸಂಜೆಯಾಗುತ್ತಿತ್ತಂತೆ. ಈ ಪರಿ ಈಜುವುದರಲ್ಲಿ ನಿಷ್ಣಾತರಾಗಿದ್ದ ವಿಜಯ್ ತಾವು ಬದುಕಿನಲ್ಲಿ ಈಜುತ್ತಿದ್ದ ವೇಳೆಯೇ ಏಕಾಏಕಿ ಮುಳುಗಿದ್ದು ನೋಡಿದರೆ ‘ಮೇಲೊಬ್ಬ ಮಾಯಾವಿ’ಯ ಬಗ್ಗೆ ಸಂದೇಹ ಮೂಡುತ್ತದೆ.

ಪ್ರಸ್ತುತ ನಾನೂ ರಂಗ ತಂಡವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಾಟಕ ಕಟ್ಟಿ ನಿಲ್ಲಿಸುವುದು ಸುಲಭದ ಮಾತಲ್ಲ. ಅದರಲ್ಲೂ ತಂಡ ಕಟ್ಟಿದ ಆರಂಭದ ಕೆಲ ವರ್ಷಗಳು ತುಂಬ ಕ್ಲಾಸಿಕ್ ಹಾಗೂ ದೊಡ್ಡ ಪ್ರಯೋಗಗಳಿಗೆ ಅಣಿಯಾಗಲು ಸಾಧ್ಯವಿಲ್ಲ. ಕಾರಣ ಹಲವು ಇರುತ್ತವೆ. ದುಡ್ಡು ಹೊಂದಿಸಿ ನಾಟಕ ಮಾಡುವ ಕಷ್ಟ; ಅನುಭವೀ ನಟರ ಕೊರತೆ, ಪ್ರಸಿದ್ಧ ರಂಗ ಶಾಲೆಗಳಲ್ಲಿ ಕಲಿತವರು ಪುಟ್ಟ ತಂಡದ ಕಡೆಗೆ ತಿರಗಿಯೂ ನೋಡದಷ್ಟು ಅಸಡ್ಡೆ – ಈ ಎಲ್ಲವುಗಳ ನಡುವೆಯೇ ನಾಟಕ ಕಟ್ಟುತ್ತ ಜನರ ಮನಸ್ಸಿನಲ್ಲಿ ನೆಲೆ ನಿಲ್ಲುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಅದೇ ವೇಳೆ ಕೆಲ ತಪ್ಪುಗಳೂ ನಮ್ಮಿಂದ ಆಗಬಹುದು.

ಸರ್ಕಾರದ ಮೂಲಗಳಿಂದ ಹಣ ಪಡೆಯುವ ಮಾರ್ಗ ಕಂಡುಕೊಂಡು ದೊಡ್ಡ ಪ್ರಯೋಗಗಳಿಗೆ ಅಣಿಯಾಗುವ ಕೆಲವು ತಂಡಗಳಿಗೆ ಮಿಕ್ಕ ತಂಡಗಳ ಕೆಲ ಕಾಮಿಡಿ ನಾಟಕಗಳು ತುಂಬ ಚೀಪ್ ಆಗಿ ಕಾಣಲು ಆರಂಭಿಸುತ್ತವೆ. ಅವರು ಬಂದು ನಾಟಕ ನೋಡಿ ಮಾತಾಡುವುದಿಲ್ಲ. ಬದಲಿಗೆ ಅವರಿಗೆ ನಾಟಕ ಹೇಗಿದೆ ಎಂದು ತಿಳಿಸುವ ಕೆಲವು ಮಧ್ಯವರ್ತಿಗಳು ಇರುತ್ತಾರೆ. ಅವರ ಕಣ್ಣುಗಳಿಂದ ಕೆಲವರು ನೋಡಿ, ಬೀಡುಬೀಸು ಮಾತು ಆರಂಭಿಸುತ್ತಾರೆ. ನಟನೆಯಲ್ಲಿ ‘ಕ್ಲಾಸಿಸಿಸಂ’ ಅಂದರೆ ಏನು, ಅದು ಕಾಣೆಯಾಗಿದೆ ಎಂದು ಪರೋಕ್ಷ ದಾಳಿ ಶುರುಮಾಡುತ್ತಾರೆ. ರಂಗಭೂಮಿಯಲ್ಲಿ ಉಳಿಯಬೇಕಾದರೆ ಸಾತ್ವಿಕರಾಗಿರುವಷ್ಟೇ ಮುಖ್ಯವಾಗಿ ಕೆಲವೊಮ್ಮೆ ಕ್ಷಾತ್ರತ್ವವನ್ನೂ ಪ್ರದರ್ಶಿಸಬೇಕಾಗುತ್ತದೆ ಎಂದು ನನಗೆ ಅನೇಕ ಸಲ ಅನಿಸಿದೆ ಮತ್ತು ಹೀಗೆ ಮಾಡುತ್ತ ನಾನು ಅನೇಕರ ವಿರೋಧಕ್ಕೂ ಈವರೆಗೆ ಗುರಿಯಾಗಿದ್ದೇನೆ.

ವಿಜಯ್ ರಂಗನಟ ಸರಿ; ಅವರ ಅಭಿನಯವನ್ನ ನಾನು ರಂಗದ ಮೇಲೆ ಕಂಡಿಲ್ಲ. ಆದರೆ ಸಿನಿಮಾಗಳಲ್ಲಿ ಕಂಡಿದ್ದೆ. ರಾಷ್ಟ್ರಪ್ರಶಸ್ತಿ ಬಂದ ಮೇಲಂತೂ ಅವರನ್ನ ಮಾತಾಡಿಸುವ ಇಚ್ಛೆಯೂ ಹೊರಟುಹೋಯಿತು. ರಂಗದ ಬೇಸ್ ನಿಂದ ಹೊರಹೊಮ್ಮಿ ಈಗ ರಾಷ್ಟ್ರಪ್ರಶಸ್ತಿ ಗಳಿಸಿರುವವರು ನಮ್ಮ ಅಂಬೆಗಾಲಿನ ತಂಡದ ಜೊತೆ ಮಾತಾಡುತ್ತಾರೆಯೇ ಎಂದು ನಾನೇ ಅಂದುಕೊಂಡು ಸುಮ್ಮನಾಗಿದ್ದೆ. ನಾನು ರಂಗದ ಮೇಲಿನ ಪ್ರೀತಿಯಿಂದ ಅವರನ್ನು ಮಾತಾಡಿಸಲು ಮುಂದಾಗುವುದು, ಅವರು ಕ್ಲಾಸಿಸಿಸಂ ಬಗ್ಗೆ ಮಾತಾಡಿ ಪರೋಕ್ಷ ದಾಳಿ ಆರಂಭಿಸುವುದು, ನಾನು ಅನಿವಾರ್ಯವಾಗಿ ಕ್ಷಾತ್ರತ್ವವನ್ನು ಮಾತಲ್ಲಿ ಕಾಣಿಸುವುದು ಈ ಎಲ್ಲ ರಗಳೆಯೇ ಬೇಡ ಅಂದುಕೊಂಡು ಸುಮ್ಮನಿದ್ದೆ.

ಆದರೆ ಇದೂ ‘ಮೇಲೊಬ್ಬ ಮಾಯಾವಿ’ಯ ಕೆಲಸವೇ ಇರಬೇಕು ಅನಿಸುತ್ತಿದೆ ಈ ಹೊತ್ತು. ಯೂಟೂಬ್ ನಲ್ಲಿ ವಿಜಯ್ ಅವರ ಸಂದರ್ಶನಕ್ಕೆ ಕಣ್ಣು ಕಿವಿಯಾಗುವ ಸಂದರ್ಭವನ್ನು ಆ ಮಾಯಾವಿ ಸೃಷ್ಟಿಸಿದ. ನಾನೂ ಆ ಕ್ಷಣ ಪೂರ್ವಗ್ರಹ ಬಿಟ್ಟು ನೋಡಲು ಅಣಿಯಾದೆ. ವಿಜಯ್ ಅವರ ಮಾತಿನ ಧಾಟಿ ಕೇಳುತ್ತ ಕೇಳುತ್ತ ‘ಅರೆರೆ ಹಮ್ಮುಬಿಮ್ಮು ಚೂರೂ ಕಾಣಿಸ್ತಿಲ್ಲವಲ್ಲ…’ ಎಂದು ಅಚ್ಚರಿಪಟ್ಟೆ. ಅಷ್ಟು ಸಹಜ ಮತ್ತು ವಸ್ತುನಿಷ್ಠ ಮಾತುಗಳು. ನಾಟಕದವರನ್ನ ಯಾಕೆ ಅಸಡ್ಡೆಯಿಂದ ಕಾಣ್ತಾರೆ ಅನ್ನುವ ಪ್ರಶ್ನೆಗೆ ವಿಜಯ್ ನಗುತ್ತ ‘ಯಾರು ನಾಟಕ ಮಾಡಲ್ಲ ಹೇಳಿ? ಮಗು ತನ್ನ ಅಪ್ಪ ಅಮ್ಮನ ಹತ್ರ ನಾಟಕ ಮಾಡುತ್ತೆ. ಗಂಡ, ಹೆಂಡತಿ ಬಳಿ ಜಗಳ ಮಾಡ್ತಾನೆ. ಹೆಂಡತಿ ಗಂಡನ ಜೊತೆ ನಾಟಕ ಮಾಡ್ತಾಳೆ. ಇಡೀ ಜಗತ್ತು ನಾಟಕ ಮಾಡ್ತಿದೆ. ಅವರೆಲ್ಲ ತುಂಬ ತುಂಬ ಸಹಜವಾಗಿ ನಾಟಕ ಮಾಡ್ತಾರೆ. ನಾವು ಅವರು ಮಾಡಿದ್ದನ್ನ ರಂಗದ ಮೇಲೆ ಅಭಿನಯಿಸ್ತೀವಿ ಅಷ್ಟೇ…’ ಎಂದಿದ್ದರು. ಇದನ್ನು ಕೇಳಿಸಿಕೊಂಡ ಕೂಡಲೆ ‘ಅರೆರೆ ಇಷ್ಟು ಸಿಂಪಲ್ಲಾಗಿ ಡಿಫೈನ್ ಮಾಡಿದ್ರಲ್ಲ..’ ಎಂದು ನನಗೆ ಆಶ್ಚರ್ಯವಾಗಿತ್ತು.

ಅದೇ ಸಂದರ್ಶನದಲ್ಲಿ ‘ಅಷ್ಟೊಂದು ಹಿಡಿಸದ ಪಾತ್ರ ಸಿಕ್ಕಾಗ ಏನು ಮಾಡ್ತೀರಿ?’ ಎಂಬ ಪ್ರಶ್ನೆಗೆ ವಿಜಯ್ ಅವರ ಉತ್ತರ ವಾಸ್ತವದಿಂದ ಕೂಡಿತ್ತು. ‘ಈವರೆಗೆ ಬೇರೆಬೇರೆ ಶೇಡ್ಸ್ ಇರೊ, ಒಂದಕ್ಕಿಂತ ಭಿನ್ನವಾಗಿರೊ ಪಾತ್ರಗಳೇ ಸಿಕ್ಕಿವೆ. ಸಣ್ಣ ಪಾತ್ರ ದೊಡ್ಡ ಪಾತ್ರ ಅವೆಲ್ಲ ನನಗೆ ಮುಖ್ಯ ಅನಿಸಲ್ಲ. ಸಿಕ್ಕಿದ ಪಾತ್ರವನ್ನ ಅರ್ಥೈಸಿಕೊಂಡು ಚೆನ್ನಾಗಿ ನಟಿಸಬೇಕು ಅಷ್ಟೇ. ಈಗ ಬದುಕು ಫುಲ್ ಸಿನಿಮಾ ಬಗ್ಗೆ ಯೋಚಿಸೋದೇ ಆಗೋಗಿದೆ. ಕೂತರೂ ನಿಂತರೂ ಮಾತಾಡಿದರೂ ಕನಸು ಕಂಡರೂ ಅದು ಸಿನಿಮಾದ ಬಗ್ಗೆನೇ ಇರುತ್ತೆ. ಎಲ್ಲಕ್ಕಿಂತ ಬದುಕು ನಡೆಸೋದು ಮುಖ್ಯ. ಅದಕ್ಕೆ ದುಡ್ಡೂ ಬೇಕಲ್ಲ. ದುಡ್ಡೇ ಎಲ್ಲ ಅಂತಲ್ಲ. ಆದರೆ ದುಡ್ಡು ಇಲ್ಲದಿದ್ದರೂ ಏನೂ ನಡೆಯೋದಿಲ್ಲವಲ್ಲ…’ ಅಂದ ಮಾತು ನನಗೆ ಹಿಡಿಸಿತ್ತು. ಹ್ಯುಮಿಲಿಟಿ ಇದೆ ಮಾತಲ್ಲಿ ಅನಿಸಿತ್ತು.

ಈ ಬಗೆಯ ಹ್ಯುಮಿಲಿಟಿಯನ್ನ ಬಹಳ ಮಂದಿಯಲ್ಲಿ ಕಾಣುವುದು ಕಷ್ಟವಾದ್ದರಿಂದಲೇ ನನ್ನಲ್ಲಿ ಆಗಾಗ ಕ್ಷಾತ್ರತ್ವ ಜಿಗಿಯುವುದೂ ಅಭ್ಯಾಸ ಮಾಡಿಕೊಂಡಿತ್ತು. ಯಾಕೆಂದರೆ ರಂಗ ಇರುವುದು ಹಾಗೆಯೇ.

ಹೇಗೆ ಎಂದು ವಿವರಿಸಲು ನಾನು ಅಜ್ಜ ಮಾಸ್ಟರ್ ಹಿರಣ್ಣಯ್ಯನವರು ಹಿಂದೊಮ್ಮೆ ಹೇಳಿದ್ದ ತಮ್ಮ ದರ್ಶನವನ್ನ ಬಳಸಿಕೊಳ್ಳುತ್ತೇನೆ. ಏನೆಂದರೆ ‘ಕನ್ನಡ ರಂಗಭೂಮಿ ಅನ್ನುವುದು ಒಂದು ದೊಡ್ಡ ಹರಿವಾಣವಿದ್ದಂತೆ. ಅದರಲ್ಲಿ ತಿನ್ನಲು ಎಲ್ಲರಿಗೂ ಅನ್ನವಿದೆ. ಅವರವರು ತಮಗೆ ಬೇಕೆನಿಸಿದಷ್ಟು ತಿನ್ನುತ್ತಾರೆ. ಯಾರು ಎಷ್ಟು ತಿಂದರೂ ಅದರಲ್ಲಿ ಅನ್ನ ಮತ್ತೂ ಇದೆ. ನಾವು ನಮಗೆ ಎಷ್ಟು ಬೇಕೊ ಅಷ್ಟು ತಿನ್ನಬೇಕೇ ಹೊರತು ಮಿಕ್ಕವರ ಕಡೆ ಕಣ್ಣು ಹಾಯಿಸಿ ಅವರ ಅನ್ನದ ಕಡೆ ಕೈ ಚಾಚಿ ದೋಚಿಕೊಳ್ಳಲು ಹೋಗಬಾರದು..’

ಇದು ಮಾಸ್ಟರ್ ಹಿರಣ್ಣಯ್ಯನವರ ದರ್ಶನ. ಹರಿವಾಣ ಒಂದೇ; ಅವರವರ ಊಟದ ಕಡೆ ಅವರು ಗಮನ ಹರಿಸಿಕೊಂಡಿದ್ದರೆ ಸಾಕು. ಆದರೆ ಆಗುತ್ತಿರುವುದೇ ಬೇರೆ. ನನ್ನ ಅನ್ನ ನಾನು ಹುಟ್ಟಿಸಿಕೊಳ್ಳುವ ಬಗೆ ನನಗೆ ಚೆಂದ ಮತ್ತು ಹಿತ. ಅದರ ಬಗ್ಗೆ ಬೇರೆಯವರ ತಕರಾರು ಯಾಕೆ..? ಸಿದ್ಧಾಂತ ಮತ್ತು ಥಿಯರಿಗಳಿಂದ ಪರೋಕ್ಷ ದಾಳಿಗಳು ಯಾಕೆ?

ವಿಜಯ್ ಈ ಗುಂಪಿಗೆ ಸೇರಿರಲಿಲ್ಲ ಅನ್ನವುದು ಅವರ ಮಾತಲ್ಲಿ ನನಗೆ ಸ್ಪಷ್ಟವಾಗುತ್ತಿತ್ತು. ಇದೇ ಕಾರಣಕ್ಕೆ ಅವರು ನನಗೆ ಇಷ್ಟವಾಗಲು ಅರಂಭವಾದರು. ವಸ್ತುನಿಷ್ಠತೆ ಮತ್ತು ನಿಸ್ಪೃಹತೆ ಇರುವರರನ್ನು ಮಾತಾಡಿಸದೆ ಇರಬಾರದು, ಅದು ತಪ್ಪಾಗಿ ನನ್ನದೇ ಅಹಂಕಾರ ಅನಿಸಿಕೊಳ್ಳುತ್ತದೆ ಅಂದುಕೊಂಡು ವಿಜಯ್ ಅವರ ನಂಬರ್ ಪಡೆದು ಕರೆ ಮಾಡಿದೆ. ರಿಸೀವ್ ಮಾಡಲಿಲ್ಲ. ಒಂದು ಸಂದೇಶ ಕಳುಹಿಸಿದೆ. ‘ಸರ್ ನಾನೂ ರಂಗಭೂಮೀಲಿ ತೊಡಗಿಸಿಕೊಂಡಿದ್ದೀನಿ. ನಿಮ್ಮ ಸಂದರ್ಶನಗಳನ್ನ ನೋಡಿದೆ. ಅದರಾಚೆಗೆ ನಿಮ್ಮಲ್ಲಿ ಕೇಳಲಿಕ್ಕೆ ಕೆಲವು ಪ್ರಶ್ನೆಗಳಿವೆ. ಬೇಕಾದರೆ ಆಫ್ ದಿ ರೆಕಾರ್ಡ್ ರೀತಿ ಮಾತಾಡಿದರೂ ಓಕೆ. ನಿಮ್ಮ ಸಮಯ ತಿಳಿಸಿದರೆ ಕರೆ ಮಾಡುತ್ತೇನೆ..’ ಎನ್ನುವುದು ನನ್ನ ಸಂದೇಶವಾಗಿತ್ತು.

ಎರಡು ದಿನ ನೋ ರೆಸ್ಪಾನ್ಸ್. ನಾನೂ ಸುಮ್ಮನಾಗಿದ್ದೆ. ಮೂರನೆಯ ದಿನ ವಿಜಯ್ ರಿಂದ ಕರೆ ಬಂತು. ಅಚ್ಚರಿ. ‘ಸಾರಿ… ನಾನು ಬ್ಯುಸಿಯಾಗಿದ್ದೆ. ಆಮೇಲೆ ಮರೆತುಹೋಯ್ತು. ಹೇಳಿ ಮಹೇಶ್…’ ಎನ್ನುತ್ತ ‘ಆಫ್ ದಿ ರೆಕಾರ್ಡ್ ಅಂತ ಯಾಕೆ ಮೆನ್ಷನ್ ಮಾಡಿದ್ದೀರಿ..? ಆಫ್ ದಿ ರೆಕಾರ್ಡ್ ನಲ್ಲಿ ಹೇಳಿದ್ದನ್ನೇ ನಾನು ರೆಕಾರ್ಡ್ ಆನ್ ಆದಾಗಲೂ ಹೇಳ್ತೀನಿ..’ ಎಂದು ನಕ್ಕಿದ್ದರು. ಅದು ಪ್ರಾಮಾಣಿಕ ನಗು. ಕುಹಕ, ವ್ಯಂಗ್ಯ ಯಾವುದರ ಸೋಂಕೂ ಇರದ ನಗು.

ನನ್ನ ಮನಸ್ಸೂ ಕೊಂಚ ಸಾಪ್ಟ್ ಆಯಿತು. ಆದರೆ ಕೆಲವರ ಮೇಲಿನ ಸಿಟ್ಟು ಆರಿರಲಿಲ್ಲ. ಯಾಕೆಂದರೆ ನನ್ನ ಸಿಟ್ಟು ಆಗಾಗ ಪ್ರಕಟಗೊಳ್ಳುವ ಕ್ಷಾತ್ರ ಪರಂಪರೆಯದು. ಇರಲಿ ನೋಡೇಬಿಡೋಣ ಅಂದುಕೊಂಡು ‘ಸರ್ ನೀವು ಮೂಲತಃ ರಂಗನಟ. ಅಲ್ಲಿ ನೀವು ನಿರ್ವಹಿಸಿದ ಪಾತ್ರಗಳು, ನಾಟಕಗಳ ಬಗ್ಗೆ ಸಾಕಷ್ಟು ಮಾತಾಡಿದ್ದೀರಿ. ನಾಟಕ ಕಟ್ಟಿಕೊಡುವ ಶಿಸ್ತು, ಕಲಿಸುವ ಬದ್ಧತೆ ದೊಡ್ಡದು. ಹಾಗೇ ಪ್ರದರ್ಶನಕ್ಕೆ ಆರಿಸಿಕೊಳ್ಳುವ ನಾಟಕಗಳೂ ಹಾಗೇ ಇರುತ್ತವೆ. ಉದಾತ್ತ ಚಿಂತನೆಯ ನಾಟಕಗಳು. ಆ ನಾಟಕಗಳಲ್ಲಿ ನಟಿಸುವಾಗಿನ ಗಮ್ಮತ್ತೇನು… ಕಲಿಸುವಾಗಿನ ಪರಿಯೇನು..! ಅದ್ಭುತ.

ರಂಗಭೂಮಿಯಲ್ಲಿ ಉಳಿಯಬೇಕಾದರೆ ಸಾತ್ವಿಕರಾಗಿರುವಷ್ಟೇ ಮುಖ್ಯವಾಗಿ ಕೆಲವೊಮ್ಮೆ ಕ್ಷಾತ್ರತ್ವವನ್ನೂ ಪ್ರದರ್ಶಿಸಬೇಕಾಗುತ್ತದೆ ಎಂದು ನನಗೆ ಅನೇಕ ಸಲ ಅನಿಸಿದೆ ಮತ್ತು ಹೀಗೆ ಮಾಡುತ್ತ ನಾನು ಅನೇಕರ ವಿರೋಧಕ್ಕೂ ಈವರೆಗೆ ಗುರಿಯಾಗಿದ್ದೇನೆ.

ನಿಮಗೇ ಗೊತ್ತಿರುವಂತೆ ಹವ್ಯಾಸಿ ರಂಗಭೂಮಿಯಲ್ಲಿ ನಟ ನಟಿಯರಿಗೆ ಸಂಭಾವನೆ ಇಲ್ಲ. ಸರ್ಕಾರಿ ಅನುದಾನಿತ ನಾಟಕ ಸಂಸ್ಥೆಗಳು ನಟರಿಗೆ ಸಂಭಾವನೆ ನೀಡುತ್ತಿವೆ ಅಷ್ಟೇ. ಹೀಗಿರುವಾಗ ಹವ್ಯಾಸಿಗಳು ಕೆಲವರು ನಟನೆಯನ್ನ ವೃತ್ತಿಯಾಗಿ ತೆಗೆದುಕೊಂಡವರು ಕಿರುತೆರೆ ಅಥವಾ ಸಿನಿಮಾಗೆ ಬರುತ್ತಾರೆ. ಅಲ್ಲಿ ಅವರ ಸಂಪಾದನಾ ಮಾರ್ಗ ತೆರೆದುಕೊಳ್ಳುತ್ತದೆ. ಆದರೆ ಅಲ್ಲಿ ಗಂಭೀರ ನಾಟಕಗಳು ಕಟ್ಟಿಕೊಡುವ ಬದುಕಿನ ಚಿತ್ರಣ, ಬದುಕಿನ ವಿನ್ಯಾಸ, ನಟನಾ ಗಾಂಭೀರ್ಯ ಮತ್ತು ಸಿದ್ಧಾಂತಗಳು ಯಾವುದೂ ಇರುವುದಿಲ್ಲ. ಇದ್ದರೂ ಅವೆಲ್ಲ ಅಪರೂಪದ ಪ್ರಯೋಗಗಳು ಅಷ್ಟೇ. ಆದರೆ ಮೆಜಾರಿಟಿಯಲ್ಲಿ ಮಾಸ್ ನ ಸೆಳೆಯುವ ತಂತ್ರಗಾರಿಕೆಯ ಚಿತ್ರಣಗಳು. ದುಡ್ಡಿನ ಸಲುವಾಗಿ ಬಹುತೇಕರು ರಂಗಭೂಮಿಯಲ್ಲಿನ ಸಿದ್ಧಾಂತ ಬಿಟ್ಟು ಬೇರೆ ಬಗೆಗೂ ಹೊಂದಿಕೊಳ್ತಾರೆ. ತಪ್ಪೇನಿಲ್ಲ.

ರಂಗಭೂಮಿಯವರು ಸಿನಿಮಾಗೆ ಬಂದು ಅಸಡಾಬಸಡಾ ನಟಿಸಿ ದುಡ್ಡು ಮಾಡಿಕೊಂಡರೆ ಅದು ತಪ್ಪಲ್ಲ. ಸಿನಿಮಾದವರನ್ನ ರಂಗಭೂಮಿಯವರು ಬೈಯುವುದಿಲ್ಲ. ಆದರೆ ರಂಗಭೂಮಿಯವರೇ ತಮ್ಮ ತಂಡದಲ್ಲಿ ಕಲೆಕ್ಷನ್ ನಾಟಕ ಆಡಲು ಮುಂದಾಗಿ ಕೊಂಚ ರಂಜಿಸಿದರೆ ಅದು ಚೀಪ್ ಆಗುತ್ತದೆಯಲ್ಲ ಇದು ಹೇಗೆ? ಈ ಧೋರಣೆ ಯಾಕೆ..? ಇದು ಹಿಪಾಕ್ರಸಿ ಅಲ್ಲವಾ ಸರ್..?’ ಎಂದು ದೀರ್ಘವಾದ ಪ್ರಶ್ನೆ ಕೇಳಿದ್ದೆ.

‘ಯಪ್ಪಾ…’ ಎಂದು ನಕ್ಕಿದ್ದರು ವಿಜಯ್. ‘ಇದಕ್ಕೆ ಆಫ್ ದಿ ರೆಕಾರ್ಡ್ ಆಗೇ ಮಾತಾಡಬೇಕು ಅನಿಸುತ್ತೆ’ ಅನ್ನುತ್ತ ‘ನೀವು ನನಗೆ ಪ್ರಶ್ನೆ ಕೇಳ್ತಿದ್ದೀರೋ.. ಅಥವಾ ನನ್ನ ಮೂಲಕ ಬೇರೆಯವರಿಗೆ ಕೇಳ್ತಿದ್ದೀರೋ..?’ ಎಂದು ನನ್ನ ಪಾಯಿಂಟ್ ಸರಿಯಾಗಿ ಗ್ರಹಿಸಿದ್ದರು ವಿಜಯ್. ತುಂಬ ಸೂಕ್ಷ್ಮಗ್ರಾಹಿ ಅನಿಸಿತು.

ನಾನೂ ನಕ್ಕು ‘ಸರ್ ನನ್ನದು ಧನಸ್ಸು ರಾಶಿ ಅಂತೆ. ಬಿಲ್ಲಿನ ಹುರಿಗೆ ಬಾಣ ಹೂಡದಿದ್ದರೆ ನನಗ್ಯಾಕೊ ನೆಮ್ಮದಿನೇ ಇರಲ್ಲ. ಸರ್ ನನಗೆ ನೀವು ಬಿಂಬ ಕಾಣಿಸುವ ನೀರು ಅಷ್ಟೇ. ಮತ್ಸ್ಯ ಮೇಲಿದೆ. ಚಕ್ರ ತಿರುಗ್ತಿದೆ. ನಿಮ್ಮನ್ನ ದೃಷ್ಟಿಸ್ತಲೇ ಮೀನಿನ ಕಣ್ಣಿಗೆ ಬಾಣ ಹೊಡೀಬೇಕು…’ ಅಂದಿದ್ದೆ.

ನನ್ನ ಮಾತು ಅವರಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಮತ್ತೆ ಜೋರಾಗಿ ನಗಲು ಆರಂಭಿಸಿದರು. ನಗುನಗುತ್ತಲೇ ‘ಏ ಸುಮ್ನಿರಿ ಮಹೇಶ್… ಬಿಡಿ ಅವೆಲ್ಲ. ಇದೊಂಥರಾ ಮಜವಾಗಿದೆ ನಿಮ್ಮ ಜೊತೆ ಮಾತು..’ ಎಂದು ಮಾತು ಮರೆಸಲು ಆರಂಭಿಸಿದ್ದರು.

ವಾಸ್ತವ ನನಗೆ ಮತ್ತು ವಿಜಯ್ ಇಬ್ಬರಿಗೂ ತುಂಬ ಚೆನ್ನಾಗಿ ಅರ್ಥವಾಗಿದ್ದರಿಂದ ಆ ಪ್ರಶ್ನೆಯನ್ನ ನಾನೂ ಹೆಚ್ಚು ಕೆದಕಲು ಹೋಗಲಿಲ್ಲ. ಯಾಕೆಂದರೆ ವಿಜಯ್ ರಲ್ಲಿ ರಾಷ್ಟ್ರಪತಿ ಮನ್ನಣೆಯ ಭಾರ ಮತ್ತು ತೋರುಗಾಣಿಕೆ ಕಿಂಚಿತ್ತೂ ಇರಲಿಲ್ಲ. ನಗು ಸ್ವಚ್ಛಂದ. ಆ ನಗುವಿನಲ್ಲಿದ್ದ ಹ್ಯುಮಿಲಿಟಿಯೇ ಎಲ್ಲ ಸಿಟ್ಟನ್ನೂ ಕರಗಿಸಿಬಿಡುತ್ತಿತ್ತು.

ಮತ್ತೆ ಬೇರೆ ಸಮಾಚಾರ…. ಎಂದು ಆರಾಮಾಗಿ ಮಾತಾಡಲು ಆರಂಭಿಸಿದರು. ‘ಬೇರೇನು ಸರ್… ‘ನಾನು ಅವನಲ್ಲ ಅವಳು..’ ಸಿನಿಮಾದಲ್ಲಿ ನಿಮ್ಮ ಆ್ಯಕ್ಟಿಂಗ್ ಎಕ್ಸ್ಟ್ರಾಡಿನರಿ ಆಗಿದೆ ಅಂತೆಲ್ಲ ನಾನು ಹೇಳೋದಿಲ್ಲ. ಅದು ಫೈನ್ ಟ್ಯೂನಿಂಗ್ ನಟನೆ, ನೋ ಡೌಟ್. ಆದರೆ ತುಂಬ ಸೆನ್ಸಿಬಲ್ ನಟರಾದ ನೀವು ‘ನಾತಿಚರಾಮಿ’ ಸಿನಿಮಾದ ಬಗ್ಗೆ ಮಾತಾಡ್ತಾ ‘ ಕಾಮ ಅದು ಎಸೆನ್ಶಿಯಲ್ಲು.. ಇತ್ಯಾದಿ ಮಾತಾಡಿದ್ದೀರಿ…ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ ನಿಜ. ಆದರೆ ಅದರ ಬಗ್ಗೆ ನನ್ನಲ್ಲಿ ಕೆಲವು ತಕರಾರುಗಳಿವೆ..’ ಅಂದೆ.

‘ಏನು ಕಾಮ ಎಸೆನ್ಶಿಯಲ್ಲೇ ತಾನೇ.. ನಾನು ಅದನ್ನೇ ತಾನೇ ಹೇಳಿರೋದು…’ ಅಂದರು ವಿಜಯ್.

‘ಸರ್ ಬೇರೆಯವರು ಈ ಮಾತನ್ನ ಹೇಳಿದ್ರೆ ನಾನು ವಾದ ಮಾಡಲಿಕ್ಕೆ ಹೊಗ್ತಾನೇ ಇರಲಿಲ್ಲ. ಆದರೆ ನೀವು ಥಿಯೇಟರ್ ನಿಂದ ಬಂದವರು. ನಾಟಕಗಳನ್ನ ನಿರ್ದೇಶನ ಮಾಡಿದವರು. ನಿಮಗೆ ಕಾಮ ಮಾತ್ರ ಎಸೆನ್ಶಿಯಲ್ ಆಗಿ ಕಂಡಿರೋದು ನನಗೆ ಆಶ್ಚರ್ಯ ಸರ್…’ ಅಂದೆ.

‘ಈಗಲೂ ನಾನು ನೀರೇನಾ..? ಬಿಂಬ ಯಾರದ್ದು..?’ ಅಂತ ಮತ್ತೆ ನಗುತ್ತ ಕೇಳಿದರು. ‘ಬಿಂಬ ಯಾರೇ ಇರಲಿ ಸರ್…ಈಗ ನೀವು ಮತ್ತು ನಾನು ಅನಲೈಸ್ ಮಾಡೋಣ. ಸರ್ ನಾಯಕಿಯ ಗಂಡ ತೀರಿ ಹೋಗಿದ್ದಾನೆ. ನಾಯಕಿಯ ಭಾವನಾವಲಯ ತನ್ನ ಗಂಡನಲ್ಲೇ ಸ್ಥಾಯಿಯಾಗಿದೆ. ಆದರೂ ತನ್ನ ದೇಹದ ಕಾಮನೆ ಅವಳನ್ನ ವಿಚಲಿತ ಮಾಡ್ತಿದೆ. ಮಿಥುನ ಕ್ರಿಯೆಗೆ ತುಡೀತಿದೆ.

ಭಾವನಾವಲಯಕ್ಕೆ ದೇಹದ ಕಾಮನೆ ಮೀರುವ ಶಕ್ತಿ ಇಲ್ಲವಾಗಿದೆ. ಆ ನಾಯಕಿ ಆಧುನಿಕ ತಂತ್ರಜ್ಞಾನದ ಆ್ಯಪ್ ಗಳ ಮೂಲಕ ತನ್ನ ದೇಹ ತೃಷೆ ಮಾತ್ರ ತೀರಿಸುವ ಗಂಡಿಗೆ ಹುಡುಕಾಟ ಆರಂಭಿಸುತ್ತಾಳೆ. ಒಬ್ಬ ಸಿಗುತ್ತಾನೆ. ಆದರೆ ಅವನಿಗೆ ಗಜಲುಗಳು ಹಾಗು ಶಾಯರಿಗಳ ಹುಚ್ಚು. ಭಾವುಕ ಜೀವಿ. ನಾಯಕಿ ಜೊತೆ ಸಮಾಗಮಕ್ಕೆ ಒಪ್ಪಿ ಬರುತ್ತಾನೆ. ಆದರೆ ನಾಯಕಿ ದೇಹ ಮತ್ತು ಮನಸ್ಸನ್ನ ಎರಡು ಪ್ರತ್ಯೇಕ ಘಟಕ ಮಾಡಿಕೊಂಡಿದ್ದಾಳೆ. ತನ್ನ ಗಂಡನೊಂದಿಗೆ ಮಲಗಿದ ಹಾಸಿಗೆ ಮೇಲೆ ಉರುಳುವುದು ಬೇಡ ಎಂದು ನೆಲದ ಮೇಲೆ ಚಾಪೆ ಹಾಸುತ್ತಾಳೆ. ಆಲಂಗಿಸಬಾರದು, ಚುಂಬಿಸಬಾರದು ಎಂದು ನಿಯಮ ಹೇರುತ್ತಾಳೆ. ಭಾವುಕ ಶಾಯರಿಗಳ ಪ್ರೇಮಿ ನಕ್ಕು ಸಮಾಗಮ ಹೀಗೆಲ್ಲ ಸಾಧ್ಯವಿಲ್ಲ ಎಂದು ಹೊರಡುತ್ತಾನೆ. ಆನಂತರ ನಾಯಕಿಗೆ ಸಿಗುವ ವ್ಯಕ್ತಿಯ ಪಾತ್ರದಲ್ಲಿ ನೀವು ನಟಿಸಿದ್ದೀರಿ. ನಾಯಕಿ ತನ್ನ ಕಾಮದ ಇಂಗಿತ ಪ್ರಸ್ತಾಪಿಸುತ್ತಾಳೆ. ನೀವು ಸಿಟ್ಟು ಮಾಡಿಕೊಳ್ತೀರಿ, ನಂತರ ಸಮಾಗಮಕ್ಕೆ ತುಡಿದು ಬರುತ್ತೀರಿ. ಎಲ್ಲವೂ ಇಲ್ಲೀವರೆಗೆ ಫೈನ್. ಆದರೆ ವಿಜಯ್ ಸರ್.. ನಾಯಕಿ ತನ್ನ ಗಂಡನ ಭಾವನಾವಲಕ್ಕೆ ಭಂಗ ತಂದುಕೊಳ್ಳಲು ಇಷ್ಟಪಡುವುದಿಲ್ಲ.

ನಿಮಗೆ ಚಿತ್ರದಲ್ಲಿ ಮದುವೆ ಆಗಿದೆ ಅಂತ ಆಕೆಗೆ ಗೊತ್ತಿದೆಯಲ್ಲವೇ? ನಿಮ್ಮ ಭಾವನಾವಲಯದ ಬಗ್ಗೆ ಆಕೆ ಯಾಕೆ ಯೋಚಿಸಿ ಪ್ರಶ್ನಿಸಿ ನಿಮ್ಮಿಂದ ಸ್ಪಷ್ಟ ಕನ್ಫರ್ಮೇಷನ್ ಪಡೆದು ಸಮಾಗಮಕ್ಕೆ ಮುಂದಾಗೋದಿಲ್ಲ? ಗಂಡಿನ ಭಾವನಾ ವಲಯದ ಬಗ್ಗೆ ಯಾಕೆ ಆಕೆ ಯೋಚಿಸೋದಿಲ್ಲ? ಚಿತ್ರದಲ್ಲಿ ಪಶ್ಚಾತ್ತಾಪ ಕಾಡುವುದು ಮತ್ತು ಬದಲಾಗುವುದು ನೀವು. ಇದು ಬೇರೆ ಸಂಗತಿ. ಹೆಣ್ಣಿನ ಸೂಕ್ಷ್ಮಜ್ಞತೆ ಮತ್ತು ಭಾವನಾ ವಲಯ ಚಿತ್ರದಲ್ಲಿ ಒನ್ ಸೈಡೆಡ್ ಅನಿಸಲಿಲ್ಲವೆ ನಿಮಗೆ..? ಸರ್ ನಾನು ಸಿನಿಮಾ ನೋಡಿರುವ ಬಗೆಯೇ ತಪ್ಪಿರಬಹುದು… ತಿಳಿದವರು ನೀವು ನನಗೆ ತಿಳಿಸಿಹೇಳಿ…’ ಅಂದಿದ್ದೆ.

ವಿಜಯ್ ಸ್ತಬ್ಧರಾಗಿಬಿಟ್ಟರು. ಮಾತು ಹೊರಡಲೇ ಇಲ್ಲ. ಆಮೇಲೆ ಕೆಲ ಕ್ಷಣ ಬಿಟ್ಟು ‘ಬಾಣ ಯಾರ ಕಡೆಗಾದ್ರೂ ಇರಲಿ. ಈ ಆ್ಯಂಗಲ್ ನಲ್ಲಿ ಯೋಚಿಸಿರಲಿಲ್ಲ. ರೀ ಇವೆಲ್ಲ ಕಳೀಲಿ. ನಿಮ್ಮನ್ನ ಮೀಟ್ ಮಾಡ್ತೀನಿ. ಸೀರಿಯಸ್ಲಿ ಮೀಟ್ ಮಾಡ್ತೀನಿ..’ ಅಂದರು. ‘ಅಯ್ಯೋ ಬನ್ನಿ ಸರ್ ನಾನೂ ಕಾಯ್ತಿದ್ದೀನಿ…’ ಅಂದಿದ್ದೆ.

ಅದೇ ಕಡೆಯ ಮಾತಾಗಿ ಹೋಯಿತು. ನನ್ನನ್ನ ಸೀರಿಯಸ್ಸಾಗಿ ಮೀಟ್ ಮಾಡ್ತೀನಿ ಅಂದಿದ್ದವರು ತಾವು ಸೀರಿಯಸ್ಸಾಗಿ ಆಸ್ಪತ್ರೆ ಸೇರಿ ಯಾವ ಪ್ರಶ್ನೆಗೂ ಉತ್ತರಿಸದೆ ಹೀಗೆ ಧುತ್ತನೆ ಮರೆಯಾಗುತ್ತಾರೆ ಅಂದುಕೊಂಡಿರಲಿಲ್ಲ. ಕೋವಿಡ್ ಮೊದಲನೆ ಅಲೆ ಸಮಯದಲ್ಲಿಯೂ ನಮ್ಮ ಕೆಲ ರಂಗತಂಡಗಳು ಕ್ರಿಕೆಟ್ ಮ್ಯಾಚ್ ಆಯೋಜಿಸಿ ಆಟಕ್ಕೆ ನಿಂತಿದ್ದವು. ನನಗೆ ಪರಿಚಿತರಿದ್ದ ತಂಡದ ಆಟ ನೋಡಲು ನಾನೂ ಬಾಬು ಹಿರಣ್ಣಯ್ಯ ಸರ್ ಜೊತೆಗೂಡಿ ಹೋಗಿದ್ದೆ. ಎಲ್ಲ ಪಂದ್ಯಗಳು ಮುಗಿದು ಕಡೆಗೆ ಫೈನಲ್ ನಲ್ಲಿ ಚಿತ್ತಾರ ತಂಡ ಜಯ ಗಳಿಸಿದಾಗ ಆ ದಿನ ಸಾಂಕೇತಿಕವಾಗಿ ಟ್ರೋಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಇದೇ ವಿಜಯ್ ಗೆದ್ದ ಚಿತ್ತಾರ ತಂಡದ ಜೊತೆ ಫೋಟೊಗೆ ನಿಂತಿರುವ ಚಿತ್ರ ಕಂಡೆ. ಅಂದು ನಾನಾದರೂ ಹೋಗಿದ್ದರೆ ಕೈಕುಲುಕಿ ಒಂದಿಷ್ಟು ಆಫ್ ದಿ ರೆಕಾರ್ಡ್ ಮಾತಾಡಬಹುದಿತ್ತು ಅನಿಸಿತು.

ನೇರ ಭೇಟಿ ಕಲ್ಪಿಸದೆ ಬರೀ ಮಾತಲ್ಲಿ ಒಂದು ಬಾಂಧವ್ಯ ಏರ್ಪಡಿಸಿ ಅದರಲ್ಲೇ ಅವರ ಹ್ಯುಮಿಲಿಟಿ ಕಾಣಿಸಿ ಈ ಹೊತ್ತು ಚಡಪಡಿಕೆ ಮತ್ತು ಸಂಕಟ ಹುಟ್ಟು ಹಾಕಿದ ಕಾಲವನ್ನು ದೂಷಿಸಬೇಕು ಅನಿಸುತ್ತಿದೆ.

ಏನೇ ಆದರೂ ಒಂದು ವಿಚಾರವಂತೂ ಸ್ಪಷ್ಟ ಮತ್ತು ವ್ಯಕ್ತ. ವಿಜಯ್ ಅವರ ಗೆಳೆಯ ಹಾಗೂ ರಂಗ ಒಡನಾಡಿ ಶಿವರಾಜ್ ಕೆ.ಆರ್ ಪೇಟೆ ಒಮ್ಮೆ ವಿಜಯ್ ರನ್ನ ‘ಮಗು’ ಅಂತ ಕರೆದಾಗ ಅದು ನನಗೆ ಉತ್ಪ್ರೇಕ್ಷೆ ಅನಿಸಿತ್ತು. ಆದರೆ ವಿಜಯ್ ಫೋನಲ್ಲಿ ನನ್ನ ದೀರ್ಘ ಪ್ರಶ್ನೆಗಳಿಗೆ ನಗುತ್ತಿದ್ದ ಬಗೆ ನೆನೆಸಿಕೊಂಡರೆ ಮಗುವಿನ ನಗೆಯ ಶಬ್ದವೇ ತಾಳೆಯಾಗುತ್ತಿದೆ. ನಾನು ಬಿಲ್ಲು ಬಾಣ ಕೆಳಗಿರಿಸಿ ನಮ್ರತೆಯಿಂದ ಕೈ ಮುಗಿಯುತ್ತಿದ್ದೇನೆ…