ತೊಂಬತ್ತು ವರುಷದ ಪ್ರೊ. ಕರಿಮುದ್ದೀನ್ ಅವರು ಅಪಾರ ಜ್ಞಾನ ಭಂಡಾರದ ಮೇರುವಿನಂತೆ ನೆಟ್ಟಗೆ‌ ಕುತೂಹಲದಿಂದ ಕುಳಿತಿದ್ದರು.ಅವರ ಕಣ್ಣುಗಳಲ್ಲಿ ಸಾತ್ವಿಕತೆಯ ಪ್ರಖರತೆಯಿದೆ. ಮಕ್ಕಳಿಗೆ ಮಾನವೀಯತೆಯ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸುತ್ತಾರೆ ಅವರು. ಮೂಲಭೂತವಾದವನ್ನು ಖಂಡತುಂಡವಾಗಿ ನಿರಾಕರಿಸುವವರು. ಶ್ರೀರಂಗಪಟ್ಟಣದ ಪ್ರಸಿದ್ಧ “ಗಂಜಾಂ”  ಬಡಾವಣೆಯಲ್ಲಿ ತಲೆತಲಾಂತರದ ಒಂದು ಹಳ್ಳಿ ಮನೆಯ ಪುಟ್ಟ ಕೋಣೆಯಲ್ಲಿ, ಅಣ್ಣನ ಮಕ್ಕಳ ನಿಗಾದಲ್ಲಿ ವಾಸ ಮಾಡುತ್ತಿರುವ ಅವರನ್ನು ಕಂಡುಬಂದ  ಬರೆದಿದ್ದಾರೆ ಗಿರಿಜಾ ಶಾಸ್ತ್ರಿ

“ಧರ್ಮ ಎಲ್ಲಿದೆ ಸ್ವಾಮೀ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡಿರೋರು ಯಾರಿದ್ದಾರೆ? ನಾವೆಲ್ಲಾ believers! dirty believers….” ನೆಲದ ನೇಲೆ ಒಂದು ಹಾಸಿಗೆ ಹಾಸಿಕೊಂಡು ಅದರ ಮೇಲೆ ಕುಳಿತ ತೊಂಬತ್ತು ವರುಷದ ಪ್ರೊ. ಕರಿಮುದ್ದೀನ್ ಅವರು ಗೆರೆ ಕೊರೆದಂತೆ ಷರಾ ಎಳೆದುಬಿಟ್ಟು ಜೋರಾಗಿ ನಕ್ಕುಬಿಟ್ಟರು. ಸುಮಾರು ಒಂದೂವರೆ ತಾಸು ಸ್ವಲ್ಪವೂ ಅಲುಗಾಡದೇ ಬೆನ್ನಿಗೆ ಯಾವುದೇ ಆಧಾರವಿಲ್ಲದೇ ಅಪಾರ ಜ್ಞಾನ ಭಂಡಾರದ ಮೇರುವಿನಂತೆ ನೆಟ್ಟಗೆ‌ ಕುತೂಹಲದಿಂದ ಕುಳಿತಿದ್ದರು. ಶ್ರೀರಂಗಪಟ್ಟಣದ ಪ್ರಸಿದ್ಧ “ಗಂಜಾಂ” (ಜೀ. ವೆಂಕಟಸುಬ್ಬಯ್ಯ ಇಲ್ಲಿಯವರೇ) ಬಡಾವಣೆಯಲ್ಲಿ ತಲೆತಲಾಂತರದ ಒಂದು ಹಳ್ಳಿ ಮನೆಯ ಪುಟ್ಟ ಕೋಣೆಯಲ್ಲಿ, ಅಣ್ಣನ ಮಕ್ಕಳ ನಿಗಾದಲ್ಲಿ ವಾಸ ಮಾಡುತ್ತಿರುವ ಅವರನ್ನು ಕಾಣಲು ಮೈಸೂರಿನಿಂದ ಹೋಗಿದ್ದೆವು.

“Dirty beilivers” ಎನ್ನುವಾಗ ಅವರ ಕಣ್ಣುಗಳು ಸಾತ್ವಿಕ ನಿಷ್ಠುರತೆಯಿಂದ ಬೆಳಗುತ್ತಿದ್ದವು.
“God is not a person but only an energy…..

ಯಾರೋ ಹೇಳಿದ್ರು ಅಂತ ಯಾರಿಂದಲೋ ಪ್ರಭಾವಿತರಾಗಿ ಅದೇ ಧರ್ಮ ಅಂತ ತಿಳಿದುಕೊಂಡಿದ್ದೀವಿ. ಮೆಜಾರಿಟಿ ಯಾವಾಗಲೂ ಸತ್ಯದ ಕಡೆಗೇ ಇರ್ತದಾ? ನಿಜವಾದ religious persons ಎಲ್ಲಿದ್ದಾರೆ ಈಗ? ಧರ್ಮದ ಅಭಿಮಾನದಿಂದ ಇಲ್ಲದ ಗದ್ದಲಗಳನ್ನ ಮಾಡತಾ ಇದ್ದೀವಿ.. ನಾವು ಹೊಟ್ಟೇ ಪಾಡಿನ ಶಿಕ್ಷಣ ಕೊಡುತ್ತಾ ಇದ್ದೀವಿ. ಮಾನವತೆಯ ಶಿಕ್ಷಣ ಎಲ್ಲಿ ಕಲಿಸ್ತಾ ಇದ್ದೀವಿ? ನನಗೆ ಗೊತ್ತಿರೋದು ಇಷ್ಟೇ. ನಾನು ಹೇಳುವುದನ್ನೆಲ್ಲಾ ಎಲ್ಲರೂ ಒಪ್ಪಬೇಕು ಎನ್ನುವ ಮೌಢ್ಯ ನನಗಿಲ್ಲ, ಸ್ವಾಮೀ”

ಹಿಂದೂ, ಕ್ರೈಸ್ತ, ಇಸ್ಲಾಂ ಎಲ್ಲವೂ ಒಂದು ಮತ! ಒಂದು ನಂಬಿಕೆ! ಮಾನವ ಜನಾಂಗದಲ್ಲಿನ ವೈವಿಧ್ಯ! ಅವುಗಳಲ್ಲಿ ಏಕತೆಯನ್ನು ಕಾಣದೇ ಅಂತಹ ನಂಬಿಕೆಗಳನ್ನು ನಾವು ಇಂದು ಹೊಲಸಾಗಿಸಿಬಿಟ್ಟಿರುವ ವಿಷಾದವಿತ್ತು ಅವರ ದನಿಯಲ್ಲಿ.

ಇವರನ್ನು ಸಂತ ಎಂದು ಕರೆದದ್ದಕ್ಕೆ ಕಾರಣವಿದೆ. ಇವರು ಪುಸ್ತಕದ ಓದಿನಿಂದ ಬರುವ ಜ್ಞಾನವನ್ನು ಒಪ್ಪುವುದಿಲ್ಲ. ಅದು ನಮ್ಮ ಪ್ರಜ್ಞೆಯ ಭಾಗವಾಗದಿದ್ದರೆ, ಅನುಭವದ ಮೂಸೆಯಿಂದ “practical wisdom” ಆಗಿ ಹೊರಬೀಳದಿದ್ದರೆ ಅಂತಹ ಜ್ಞಾನದಿಂದ ಯಾವ ಪ್ರಯೋಜನವೂ ಇಲ್ಲ ಎನ್ನುತ್ತಾರೆ.

ಡಿ.ಎಲ್. ನರಸಿಂಹಾಚಾರ್ಯರ ಮೆಚ್ಚಿನ ಶಿಷ್ಯ. ಇವರು ಕಾಲೇಜಿಗೆ ಚಕ್ಕರ್ ಹೊಡೆದ ದಿನ “ಓಡೋದ್ನೇನಯ್ಯಾ ಅವನು? ಬರ್ತಾನೋ ಇಲ್ವೋ” ಎಂದು ಇವರ ಸಹಪಾಠಿಗಳನ್ನು ಕೇಳುತ್ತಿದ್ದರಂತೆ. ಅಂತಹ ಸಲುಗೆ! ಅಂತಹ ಮೇಷ್ಟ್ರು! ಅಂತಹ ಶಿಷ್ಯ!

“ಏನಯ್ಯಾ ಹೇಗೆ ನಡೀತಿದೆ ಓದು?” ಎಂದು ಒಮ್ಮೆ ಕರಿಮುದ್ದೀನ್ ಅವರನ್ನು ಕೇಳಿದರು ಡಿಎಲ್.ಎನ್.
“ಗಂಜಾಂನಿಂದ ಬರಬೇಕು ಸಾರ್…. ಪ್ರಯಾಣದಲ್ಲೇ ಕಾಲ ಕಳೆದುಹೋಗ್ತದೆ” ಎಂದು ಇವರೆಂದಾಗ

“ಸುಮ್ನ, ನಮ್ಮನೇಲೆ ಒಂದು ರೂಮ್ ಕೊಡ್ತೀನಿ ಬಂದು ಇದ್ದುಬಿಡು” ಎಂದು ಡಿ.ಎಲ್.ಎನ್. ಅವರು ಹೇಳಿದ ಮಾತನ್ನು ಪೂರ್ತಿಗೊಳಿಸುವ ಮುನ್ನವೇ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು ಕರಿಮುದ್ದೀನ್ ಸಾಹೇಬರು. ಅಗಲ ಕಣ್ಣುಗಳು ಕೆಂಪಾದವು. ಕಾಲ ಬಳಿ ಬಿದ್ದಿದ್ದ ಚಾದರದಿಂದಲೇ ಮೂಗು ಒರೆಸಿಕೊಂಡು ಸ್ವಲ್ಪ ಹೊತ್ತು ಮೌನಕ್ಕೆ ಶರಣಾದರು. ಇದ್ದಾರೆ ಅಂತಹ ಮಹಾ ಪುರುಷರು. ಅಂತಹವರ ಪರಂಪರೆ ಇದ್ದೇ ಇರ್ತದೆ” ಎಂದು ಗುರುಗಳನ್ನು ನೆನೆಸಿಕೊಂಡರು.

“ನಮ್ಮ ಹಿರಿಯರು ತಾವು ಧರ್ಮಶ್ರದ್ಧೆಯುಳ್ಳವರು ಎಂದು ‘ತಿಳಿದು’ಕೊಂಡಿದ್ದರು. ನಾನೂ ಬಾಲ್ಯದಲ್ಲಿ ಅದೇ ವಾತಾವರಣದಲ್ಲಿ ಬೆಳೆದರೂ ಕೂಡ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೆ ಯಾಕೆಂದರೆ ನಾನು ಸ್ವಂತಯೋಚನೆ ಮಾಡುತ್ತಿದ್ದೆ. ಬಾಲ್ಯದಲ್ಲಿ ಅವರು ಹೇಳಿದ ಹಾಗೆ ಕೇಳುತ್ತಿದ್ದೆ. ಆದರೆ ಸ್ವಂತ ಬುದ್ಧಿಯಿಂದ ಯೋಚನೆ ಮಾಡಲು ಪ್ರಾರಂಭಿಸಿದಾಗ ಎಲ್ಲವನ್ನೂ ಬಿಟ್ಟುಬಿಟ್ಟೆ” ಎನ್ನುವ ಇವರು ಒಬ್ಬ ನಿಜವಾದ ಮುಸಲ್ಮಾನ್ ಪಾಲಿಸುವ ಯಾವ ಧಾರ್ಮಿಕ ಆಚರಣೆಗಳನ್ನೂ ಪಾಲಿಸುವುದಿಲ್ಲ. ಉಪವಾಸ ಹಿಡಿಯುವುದಿಲ್ಲ. ಯಾವ ಸಂಕಷ್ಟದಲ್ಲೂ ದೇವರನ್ನು ಕರೆಯುವುದಿಲ್ಲ. ನಾನು ದೇವರನ್ನು (ಮಾನವ ನಿರ್ಮಿತ) ನಂಬೋಲ್ಲ” ಎನ್ನುತ್ತಾರೆ. “ನನ್ನ ನಿಲುವನ್ನು ಮನೆಯವರೆಲ್ಲರೂ ವಿರೋಧಿಸಿದರು ಎಲ್ಲರೂ ಶತ್ರುಗಳಾದರು, ಇವನೊಬ್ಬ ಅಯೋಗ್ಯ ಎಂದರು…. ನಮ್ಮ ಜನ ಯಾವ ಮಟ್ಟಕ್ಕೆ ಹೋದರು ಎಂದರೆ “ನೀನು ಸತ್ರೆ ಹೊರೋವ್ರು ಯಾರು” ಎಂದು ಕೇಳಿದ್ರು. ಅದಕ್ಕೆ “ನೀ ಬಂದ್ರೆ ಸೇರಿಸೋರು ಯಾರು? ನೀನು ಬರದೇ ಇದ್ರೇನೇ ನನಗೆ ಮೋಕ್ಷ ಸಿಗೋದು ಎಂದು ನಾನು ಹೇಳಿದೆ” ಎಂದು‌ ನಗುತ್ತಾರೆ.

ಮೂಲಭೂತವಾದವನ್ನು ಒಪ್ಪದ ಕರಿಮುದ್ದೀನ್ ಸಾಹೇಬರು ತಮ್ಮನ್ನು ಹುಡುಕುತ್ತಾ ಹೋದರು, ಬದಲಾವಣೆ ಹೊರಗಿನಿಂದಲ್ಲ ಒಳಗಿನಿಂದ ಆಗಬೇಕು…. ಬಾಲ್ಯದಲ್ಲಿ ನಂಬಿಕೆಗಳನ್ನು ಕುಟ್ಟಿ ಕುಟ್ಟಿ ತುರುಕಿ ಬಿಡ್ತಾರೆ ಮನೆಯವರು- ಬೇರೆಯದು ಬೆಳೆಯೋದಕ್ಕೆ ಜಾಗಾನೇ ಇಲ್ಲದಿರೋ ಹಂಗೆ. ಹಾಗೆ ತುಂಬಿಕೊಂಡಿರೋದನ್ನು ಖಾಲಿ ಮಾಡದೇ ಇದ್ರೆ ಅನ್ಯ ಧರ್ಮ ಅರ್ಥಾ ಆಗೋಲ್ಲ” ಎನ್ನುವ ಇವರು ತಮ್ಮ ನಿಲುವನ್ನು ಹೆಚ್ಚು ಸ್ಪಷ್ಟಪಡಿಸಿಕೊಳ್ಳಲು ಪ್ರಪಂಚದ ಹಲವಾರು ಧರ್ಮಗ್ರಂಥಗಳನ್ನು ಅಭ್ಯಾಸ ಮಾಡಿದರು. ಅರೇಬಿಕ್, ಸಂಸ್ಕೃತ ಮುಂತಾದ ಭಾಷೆಗಳನ್ನು ಕಲಿತರು. “ಯಹೂದಿ ಧರ್ಮ ಮುಸ್ಲಿಂ ಧರ್ಮಕ್ಕೆ ಕಟ್ಟಾ ವಿರೋಧಿ, ಆದರೆ ಎಲ್ಲಾ ಧರ್ಮಗಳಲ್ಲಿಯೂ ಜೀವನಕ್ಕೆ ಬೇಕಾದ ಬಹಳಷ್ಟು ಒಳ್ಳೆಯ ಸಂಗತಿಗಳಿವೆ. ತೊಗೊಳ್ಳೋಕೆ ಯೋಗ್ಯತೆ ಇಲ್ಲದೇ ಧರ್ಮಾನ ಬೈದರೆ ಏನು ಬಂತು? ಕೆಲವು ಮಹಾಪುರುಷರು “ಸಾರಣೆಯಲ್ಲಿ (ಜರಡಿ)ಉಳಿಯುವ ಮೇಲಿನ ಕಸವನ್ನೇ ಹಿಡಿಯುವರು” ಎಂದು ವ್ಯಂಗ್ಯ ನುಡಿಯುತ್ತಾರೆ. ತಿಳವಳಿಕೆ ಇರೋರು ಇಲ್ಲಾಂತಿಲ್ಲ. ಆದ್ರೆ ಭಾಳ ಕಮ್ಮಿ. ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವುದಿಲ್ಲ. ಸಾರ್ವಜನಿಕರು ಅವರ ಮಾತುಗಳನ್ನು ನಂಬುವುದಿಲ್ಲ.”

ಹಾಗೆಂದು ಇವರು ಸಿನಿಕರಲ್ಲ. ರಂಜಾನ್ ಮತ್ತು ಬಕ್ರೀದ್ ಹಬ್ಬಗಳಲ್ಲಿ ಸೃಷ್ಟಿಕರ್ತನಿಗೆ ಕೃತಜ್ಞತೆಯನ್ನು ಅರ್ಪಿಸಲು ಹೋಗುತ್ತಾರೆ. (Thanks giving).

ಬೇಕಾದಷ್ಟು ಧರ್ಮಗ್ರಂಥಗಳಿವೆ ಆದರೆ ಸತ್ಯವನ್ನು ನಾವೇ ನಿಜ ಜೀವನದಿಂದ ಹುಡುಕಿ ಕಂಡುಕೊಳ್ಳಬೇಕು ಎನ್ನುವ ಇವರಿಗೆ ಸ್ವಜನರು “ಕುರಾನ್ ಓದು “ಎಂದು ಸವಾಲ್ ಹಾಕಿದರು. “ನಾನು ಹತ್ತು ಕುರಾನ್ ಓದಿದೀನಿ ನೀನು ಓದಿರೋದು ಒಂದೇ” ಎಂದೆ.

“ಕುರಾನ್ ಇರುವುದು ಒಂದೇ. ಹತ್ತು ಕುರಾನ್ ಇಲ್ಲ” ಎಂದ್ರು

“ಒಂದೇ ಇದ್ರೆ ಅದು ಕುರಾನ್ ಅಲ್ಲ” ನಾನೆಂದೆ.

ಕುರಾನ್ ಎಂದರೆ ಆಲಿಸಿ ಅನುಷ್ಠಾನಕ್ಕೆ ತರುವಂತಹದ್ದು ಎಂಬ ಅರ್ಥವಿದೆ. ಮಾನವ ಪ್ರೇಮವನ್ನು ಕಲಿಸುವ, ಆಲಿಸುವ, ಅನುಷ್ಠಾನಕ್ಕೆ ತರುವ ಎಲ್ಲಾ ಧರ್ಮಗಳೂ ಒಂದೊಂದು ಕುರಾನುಗಳೇ ಆಗಿವೆ.

ಮಹಾಭಾರತದ ಯುದ್ಧ ನಡೆಯಲಿದೆ. ಕೌರವರು ಪಾಂಡವರ ಮಧ್ಯೆ ಅಲ್ಲ ಹಿಂದೂ ಮುಸ್ಲಿಂರ ಮಧ್ಯೆ ಘೋರ ಯುದ್ಧ ನಡೆಯಲಿದೆ! ಆಗ ಸಬಲರೆಲ್ಲಾ ನಾಶವಾಗಿ ಹೋಗ್ತಾರೆ. ವಿದ್ಯಾವಂತರಾದವರು ಅದನ್ನು ತಡೆಯಬೇಕು

ಗಂಜಾಂ ನಲ್ಲಿ ದಾರ್ ಉಲ್ ಉಮೂರ್ (ಉಮೂರ್ ಅಂದರೆ ಬಲ್ಲವರು- ಬಲ್ಲವರ ಮನೆ) ಎಂಬ ಅರಾಬಿಕ್ ಶಾಲೆಯೊಂದನ್ನು Ziaulla Sheriff ಎಂಬ ಖ್ಯಾತ ಕೈಗಾರಿಕೋದ್ಯಮಿ ಮತ್ತು ದಾನಿ One-year postgraduate diploma in “Islamic Studies and Community Development” ಎಂಬ ಶಾಲೆಯನ್ನು ತೆರೆದರು. ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ‌ ಸೌಲಭ್ಯ ಮತ್ತು ಸಾವಿರ ರೂಗಳ ಮಾಸಿಕ ಶಿಷ್ಯವೇತನ ಕೊಡಲಾಗುತ್ತದೆ. (ಈಗ ಕೋವಿಡ್ ನ ಕಾರಣದಿಂದಾಗಿ‌ ಮುಚ್ಚಲಾಗಿದೆ) ಆ ಶಾಲೆಯ ಪ್ರಾಂಶುಪಾಲರಾಗಿ ಹಲವಾರು ವರುಷಗಳ ಕಾಲ ಕರೀಮುದ್ದೀನ್ ದುಡಿದರು. ಅಲ್ಲಿ ವಿವಿಧ ಧರ್ಮಗ್ರಂಥಗಳ ಅಧ್ಯಯನ ಪಠ್ಯವಾಗಿತ್ತು.

“ಧರ್ಮಗಳ ಬಗ್ಗೆ ಗೊಂದಲಗಳಿವೆ. ಅವುಗಳನ್ನು ತೌಲನಿಕವಾಗಿ ಪರಿಚಯ ಮಾಡಿಕೊಂಡರೆ ಅವುಗಳ ಉಗ್ರತೆ ಕಡಿಮೆಯಾಗುತ್ತದೆ” ಎನ್ನುವುದು ಈ ಶಾಲೆಯನ್ನು ಪ್ರಾರಂಭ ಮಾಡುವುದರ ಹಿಂದಿನ ಉದ್ದೇಶ. ಅಲ್ಲಿ ಬೇರೆ ಬೇರೆ ಧರ್ಮದವರನ್ನೂ ಕರೆಸಿ ವಿಶೇಷ ಉಪನ್ಯಾಸಗಳನ್ನು ಮಾಡಿಸಲಾಗುತ್ತಿತ್ತು. ನಾನು ರಾಮಕೃಷ್ಣಾಶ್ರಮದವರನ್ನೂ ಕರೆಸಿ ಭಾಷಣ ಮಾಡಿಸಿದ್ದೆ. ಎನ್ನುತ್ತಾರೆ.

ಬೌದ್ಧ ಧರ್ಮವನ್ನು ಬಹಳ ಮೆಚ್ಚಿಕೊಳ್ಳುವ ಕರೀಮುದ್ದೀನ್ ಸಾಹೇಬರು “ಹುಟ್ಟಿಗೆ ಮೊದಲು ಮತ್ತು ಸತ್ತಮೇಲೆ ಏನೂ ಇಲ್ಲ; ಮಧ್ಯೆ ಉಸಿರಾಡುವ ಕಾಲವಷ್ಟೇ ಜೀವನ ಎಂದ ಬುದ್ಧ, ಎಷ್ಟು ಮಹತ್ವದ ಮಾತು! ಅವನು ಎಂಬತ್ತು ವರ್ಷ ಬದುಕಿದ್ದ ನನಗೆ ತೊಂಬತ್ತು ವರುಷ… ಬದುಕಿದೀನಿ ಆದರೆ ಅವನ ಕಾಲಕಸಕ್ಕೂ ಸಮನಲ್ಲ”

ಬುದ್ಧ ತನ್ನ ಶಿಷ್ಯರಿಗೆ “ಬುದ್ಧ ಹೀಗೆ ಹೇಳಿದ ಎಂದು ಹೇಳಬೇಡ. ಬುದ್ಧ ಹೇಳಿದುದನ್ನು ನಾನು ಹೀಗೆ ಕೇಳಿಸಿಕೊಂಡೆ ಎಂದು ಹೇಳು” ಎಂಬ ಮಾತನ್ನು ಕರಿಮುದ್ದೀನ್ ಸಾಹೇಬರು ಒತ್ತುಕೊಟ್ಟು ಹೇಳಿದುದು, ನಮ್ಮ ಸ್ವಾರ್ಥಕ್ಕಾಗಿ ನಮಗೆ ಬೇಕಾದಂತೆ ತಿರುಚಿ ಓದಿಕೊಂಡ, ಬರೆದುಕೊಂಡ ನಮ್ಮ ಗ್ರಂಥಗಳ ಅಪವ್ಯಾಖ್ಯಾನಗಳ ಕಡೆಗೆ ಬೆಟ್ಟುಮಾಡಿ ತೋರಿಸುತ್ತದೆ.

“ವಿಶ್ವ ಸಂಸ್ಥೆ ಗುರುತಿಸಿರುವ ೬೭೬೮ ಭಾಷೆಗಳಲ್ಲಿ ಸಂಸ್ಕೃತವೂ ಒಂದು ಭಾಷೆ, ಆದರೆ “ದೇವಭಾಷೆ” ಎಂದು ಯಾವುದನ್ನೂ ನಾನು ಒಪ್ಪುವುದಿಲ್ಲ. ನಾವು ಒಲಿದರೆ ಭಾಷೆ ಒಲಿಯುತ್ತದೆ. ಕಲಿಯುವ ಆಸಕ್ತಿ ಇರಬೇಕು” ಎನ್ನುತ್ತಾರೆ.

ಇವರು ಅಬ್ದುಲ್ ಅಲಿ ಮತ್ತು ರಹೀಮುನಿಸಾ ದಂಪತಿಗೆ ಆರು‌ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದರು. ಇವರ ಪೂರ್ವಿಕರು ಟಿಪ್ಪೂವಿನ ಕಾಲದಲ್ಲಿ ಒಳ್ಳೆಯ ಅಧಿಕಾರದಲ್ಲಿದ್ದವರು. ತಂದೆ ಶ್ರೀರಂಗ ಪಟ್ಟಣದ ಗುಂಬಜ್ ನಲ್ಲಿ (ಹೈದರಾಲಿ ಟಿಪ್ಪು ಮತ್ತು ಅವರ ಕುಟುಂಬದವರ ಸಮಾಧಿ) ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.

ಪಾರಸಿ ಭಾಷೆಯನ್ನು ಕರೀಮುದ್ದೀನರ ಮನೆಯಲ್ಲಿ ಆಡುತ್ತಿದ್ದರಂತೆ. “ಸಂಸ್ಕೃತ ಮತ್ತು ಪಾರಸಿ ಭಾಷೆಗಳನ್ನು ಸೋದರೀ ಭಾಷೆಗಳೆಂದು ಕರೆಯಬಹುದು, ಅವುಗಳ ಶ್ರೀಮಂತಿಕೆ ಹಾಗಿದೆ” ಎಂದೆನ್ನುತ್ತಾರೆ ಕರೀಮುದ್ದೀನ್ ಸಾಹೇಬರು. ಬಹಳ ಪ್ರಾಚೀನವಾದ Sanaa Quran ಎಂಬ ಪ್ರಾಚೀನ ಗ್ರಂಥದ ಬಗ್ಗೆ ಉಲ್ಲೇಖ ಮಾಡುತ್ತಾರೆ. ಈ ಗ್ರಂಥದಲ್ಲಿ ಪ್ರಪಂಚದ ಎಲ್ಲಾ‌ ಗ್ರಂಥಗಳ ಮುಖ್ಯಾಂಶಗಳು (outlines) ಇವೆ ಎನ್ನುತ್ತಾರೆ.

ಹಿಂದೂ, ಕ್ರೈಸ್ತ, ಇಸ್ಲಾಂ ಎಲ್ಲವೂ ಒಂದು ಮತ! ಒಂದು ನಂಬಿಕೆ! ಮಾನವ ಜನಾಂಗದಲ್ಲಿನ ವೈವಿಧ್ಯ! ಅವುಗಳಲ್ಲಿ ಏಕತೆಯನ್ನು ಕಾಣದೇ ಅಂತಹ ನಂಬಿಕೆಗಳನ್ನು ನಾವು ಇಂದು ಹೊಲಸಾಗಿಸಿಬಿಟ್ಟಿರುವ ವಿಷಾದವಿತ್ತು ಅವರ ದನಿಯಲ್ಲಿ.

ಜಗತ್ತಿನಲ್ಲಿ ೩೫೦೦ ಧರ್ಮಗಳಿವೆ. ಅಂದರೆ ಅಷ್ಟೇ ಮುಖಂಡರೂ ಇರಬೇಕಲ್ಲವೇ? ಎಲ್ಲಿದ್ದಾರೆ? ಎನ್ನುತ್ತಾರೆ.

ಡಿ.ಎಲ್. ಎನ್., ತೀನಂಶ್ರೀ, ಕಾವೆಂ, ರಾಘವಾಚಾರ್ಯ, ಕುವೆಂಪು ಮೊದಲಾದ ಘನ ವಿದ್ವಾಂಸರ ನೆರಳಲ್ಲಿ ಬೆಳೆದವರು. ಕನ್ನಡ ದ್ರಾವಿಡ ಭಾಷೆ, ಭಾರತೀಯ ಮೀಮಾಂಸೆ ಆರ್ಯರ ಭಾಷೆಗೆ ಸಂಬಂಧಿಸಿದ್ದೇ ಹೊರತು ದ್ರಾವಿಡ ಭಾಷೆಗಲ್ಲ ಇದು ಸರಿಯೇ? ಎಂದು ತೀನಂಶ್ರೀ ಯವರನ್ನು ಇವರು ಕೇಳಿದಾಗ “ಭಾರೀ ಬೇಸರ ಮಾಡ್ಕೊಂಡುಬಿಟ್ಟರು” ಎನ್ನುವ ಕರೀಮುದ್ದೀನರ ಅಭಿಪ್ರಾಯ ಕನ್ನಡ ಭಾಷೆಗೊಂದು ಬೇರೆಯದೇ ಆದ ಮೀಮಾಂಸೆ ಬೇಕು ಎನ್ನುವ ಚರ್ಚೆ ಎದ್ದಿರುವ ಈ ಸಮಯದಲ್ಲಿ ಬಹಳ ಮಹತ್ವಪೂರ್ಣ ವಾಗುತ್ತದೆ.

ರಂಜಾನ್ ಸಮಯದ ಜಕಾತ್ (ದಾನ) ಪರಿಕಲ್ಪನೆಯನ್ನು ಇವರು ಒಪ್ಪವುದಿಲ್ಲ.”ಮುಲ್ಲಾಗಳು ಏನು ಮಾಡ್ತಿದ್ದಾರೆ ಎಂದರೆ ಮುಸ್ಲಿಮರಿಗೆ ಭಿಕ್ಷೆ ಬೇಡಿ ತಿನ್ನೋದನ್ನ ಕಲಿಸ್ತಾ ಇದ್ದಾರೆ. ದುಡಿದು ತಿನ್ನೋದನ್ನು ಕಲಿಸಬೇಕು” ಎನ್ನುತ್ತಾರೆ.

“ಹಿಜಾಬ್” ಎಂಬುದು ಹೋರಾಟದ ವಿಷಯವೇ ಅಲ್ಲ. ಅದು ಬಂದದ್ದೇ ಹಿಂದೂಗಳ “ಘೂಂಘಟ್”ನ ಅನುಕರಣೆಯಿಂದ. ಸುಮ್ಮನೇ ತೀಟೆಗೆ ಮಾಡ್ತಿದ್ದಾರೆ ಅಷ್ಟೇ ಎಂದು ತಮ್ಮ ಮೊಮ್ಮಕ್ಕಳಿಗೆ “ಅವೆಲ್ಲಾ ಏನ್ ಬೇಕಾಗಿಲ್ಲ ಹಂಗೇ ಹೋಗಿ” ಎಂದು ಹಿಜಾಬ್ ಧರಿಸದೇ ಕಾಲೇಜಿಗೆ ಹೋಗಲು ಪ್ರೇರೇಪಿಸಿದ್ದಾರೆ.

ಇಸ್ಲಾಂ ಎಂದರೆ ಶಾಂತಿ, ಇಸ್ಲಾಂ ಧರ್ಮವನ್ನು ಸರಿಯಾಗಿ‌ ಮುಸ್ಲಿಮರು ಅರ್ಥಮಾಡಿಸಲು ಹೋಗಿಲ್ಲ. ಅದರಲ್ಲಿ ಅವರದ್ದೂ ತಪ್ಪಿದೆ. ಹಾಗೆ ಹಿಂದೂಗಳೂ ಅದನ್ನು ಸರಿಯಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ.

ಎಲ್ಲಾ‌ ಮಹಾತ್ಮರೂ ಒಳ್ಳೆಯದನ್ನೇ ಹೇಳಿದ್ದಾರೆ. ಯಾರೂ ಕೂಡ ಕೊಲೆ ಸುಲಿಗೆ ಮಾಡಿ, ಕಳ್ಳತನ ಮಾಡಿ, ಅನ್ಯಧರ್ಮೀಯರನ್ನ ಮತಾಂತರ ಮಾಡಿ ಎಂದು ಹೇಳಿಲ್ಲ. ಸಾರ್ವಜನಿಕವಾಗಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ನಿಜವಾದ ಧರ್ಮ” ಎನ್ನುವುದು ಅವರ ಅಭಿಪ್ರಾಯ.

“ಸೌಹಾರ್ದ ಸಮನ್ವಯ ಸಾಧಿಸಲು ಎರಡು ಧರ್ಮಗಳ ಗಂಡು ಹೆಣ್ಣುಗಳ ನಡುವೆ ಮದುವೆ ಒಂದು ಪರಿಹಾರವಲ್ಲ ಈ ಕಾಲಕ್ಕೆ ಅದು ಹಣ್ಣಾಗುವುದಿಲ್ಲ. ಆದರೆ ಪ್ರಯತ್ನವನ್ನಂತೂ ಮೆಚ್ಚಬಹುದು” ಎನ್ನುತ್ತಾರೆ. ಎಲ್ಲರ ಹಬ್ಬಗಳನ್ನು ಎಲ್ಲರೂ ಬೆರೆತು ಆಚರಿಸಬೇಕು. ಆಗ ಸಾಂಸ್ಕೃತಿಕ ಸೌಹಾರ್ದದ ಬದುಕು ಸಾಧ್ಯವಾಗುತ್ತದೆ ಎಂದು ಅವರೆಂದಾಗ ನನಗೆ ಗೊರೂರರ ಶಾಲುಸಾಬಿಯೇ ಕಣ್ಣಮುಂದೆ ಬಂದ.

ಅವರಿಗೆ ಇದೆಲ್ಲಾ ಸಾಧ್ಯವಾದುದು ಹೇಗೆ ಎಂಬ ಪ್ರಶ್ನೆಗೆ ಅವರು ಕೊಡುವ ಉತ್ತರ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಓದು. “ನಮ್ಮ ಜನರ ನಡುವೆಯೇ ನಾನು ಇದ್ದುಬಿಟ್ಟಿದ್ದರೆ ನನಗೆ ಇಂತಹ ಆಲೋಚನೆಗಳು ಬರುತ್ತಿರಲಿಲ್ಲ ಎನ್ನುವ ತಮ್ಮ ಉದಾರವಾದೀ ನಿಲುವಿಗೆ ಹಿಂದೂ ಅಧ್ಯಾಪಕರ ಮತ್ತು ಇನ್ನಿತರ ಉದಾರ ಹಿಂದೂ ಜನರ ಸಂಪರ್ಕವೇ ಕಾರಣ” ಎನ್ನುತ್ತಾರೆ. ಇದಕ್ಕೆ ಉದಾಹರಣೆಯಾಗಿ ಅವರು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಕೆಲವು ಕಿಡಿಗೇಡಿಗಳು ಕೋಮು ಸೌಹಾರ್ದ ಕೆಡಿಸುತ್ತಿರುವರೆಂಬ ಆರೋಪವನ್ನು‌ ಇವರ ಮೇಲೆ ಹೊರೆಸಿದಾಗ ಇವರ ಬೆಂಬಲಕ್ಕೆ ನಿಂತ ಪ್ರೊ. ಜಿ.ಎಚ್. ನಾಯ್ಕರನ್ನು ಬಹಳ ಪ್ರೀತಿಯಿಂದ ನೆನೆಯುತ್ತಾರೆ. ಹಾಗೆಯೇ ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಹೊಂದಿರುವ ಇವರು ಅನೇಕರ ಆಪತ್ತಿಗೆ ಸಹಾಯವನ್ನು ಒದಗಿಸಿದ್ದಾರೆ.

ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸಬೇಕು ಎನ್ನುವ ಚರ್ಚೆ ಎದ್ದಿರುವ ಈ ಸಂದರ್ಭದಲ್ಲಿ “ಧರ್ಮಗ್ರಂಥವನ್ನು ಕಲಿಸುವುದಕ್ಕೆ ಯಾವ ತಕರಾರೂ ಇಲ್ಲ. ಆದರೆ ಮೂರುವರ್ಷಕ್ಕೊಮ್ಮೆ ಧರ್ಮಗ್ರಂಥಗಳ ಪಠ್ಯವನ್ನು ಬದಲಾಯಿಸಬೇಕು. ಬೇರೆ ಧರ್ಮಗ್ರಂಥಗಳ ಅಧ್ಯಯನವನ್ನೂ ಸೇರಿಸಬೇಕು. ಆಗ ಎಲ್ಲಾ ಧರ್ಮಗ್ರಂಥಗಳಿಗೂ ನ್ಯಾಯ ಒದಗಿಸಿದಂತಾಗುತ್ತದೆ.

ಗೀತೆ ಮಾನವನಿಗಾಗಿ ರಚಿತವಾದ ಒಂದು ಉತ್ಕೃಷ್ಟ ಗ್ರಂಥ. ಅದು “ಯುದ್ಧವನ್ನು ಎತ್ತಿಹಿಡಿಯುತ್ತದಲ್ಲವೇ?” ಎನ್ನುವ ಪ್ರಶ್ನೆಗೆ ಯುದ್ಧವನ್ನು ತಪ್ಪಿಸಲು ಪ್ರಯತ್ನಮಾಡಬೇಕು. ನಿಜ, ಆದರೆ ಆತ್ಮಸಂರಕ್ಷಣೆಗೆ ಯುದ್ಧ ಅನಿವಾರ್ಯ. ಅದು ನೈಸರ್ಗಿಕ. ಗೀತೆ‌ ಮತ್ತು ಕುರಾನ್ ಸಾರುವ ಸಂದೇಶ ಒಂದೇ! ಮೂಲಕ್ಕೆ ಹೋದರೆ ಅವೆರಡರಲ್ಲೂ ವಿಶ್ವ ಮಾನವ ದೃಷ್ಟಿಕೋನವೇ ಅಡಗಿದೆ ಎನ್ನುವುದು ಗೊತ್ತಾಗುತ್ತದೆ.. ಆದರೆ ಇಡೀ ವಿಶ್ವಕ್ಕೆ ಅವುಗಳನ್ನು ಅಳವಡಿಸಿಕೊಳ್ಳುವಾಗ ಕೆಲವು ಸ್ಥಳೀಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದು ಸಹಜ. ಸಾವಿರದೈನೂರು ವರುಷಗಳಷ್ಟು ಹಿಂದೆ ಹೇಳಿದ ಮಹಮದ್ ಅವರ ವಿಚಾರಗಳನ್ನು ತದ್ವತ್ತಾಗಿ ಅನುಕರಿಸಲು ಸಾಧ್ಯವಿಲ್ಲ.

ಇಬ್ಬರು ವ್ಯಕ್ತಿಗಳು ಒಂದೇ ಅಲ್ಲ ಬೇರೆಯಾಗಿ ಗ್ರಹಿಸುತ್ತಾರೆ. ಅನ್ಯ ಧರ್ಮವೂ ನನ್ನ ಧರ್ಮಕ್ಕೆ ಸಮಾನವಾದುದು ಎಂದು ಕಲಿಸಬೇಕೇ ಹೊರತು ಇದು ಬೇರೇ ಧರ್ಮ ಎನ್ನುವ ಅರ್ಥದಲ್ಲಿ ಅಲ್ಲ. ಈಗ ಆಗ್ತಿರೋದೆ ಅದು. ಅವು ನಮ್ಮ ಪ್ರಜ್ಞೆಯ ಭಾಗವಾಗುವ ಹಾಗೆ ಕಲಿಸಬೇಕೇ ಹೊರತು ಕೇವಲ‌ ಪರಿಚಯ ಮಾಡಿಕೊಡುವುದಲ್ಲ‌.

ಮೊದಲು ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕು. ಎಲ್ಲಾ ಧರ್ಮಗಳೂ ಮನುಷ್ಯರನ್ನು ವಿಶ್ವಮಾನವರನ್ನಾಗಿ ಕಾಣುತ್ತವೆ . ಮನುಷ್ಯರಲ್ಲಿ ಭೇದವಾದ ಇರಬಾರದು ಎನ್ನುವ ಆಶಯ ಚೆನ್ನಾಗಿದೆ ಆದರೆ ಅದು ಅದು ಶತ ಪ್ರತಿಶತ ಯಶಸ್ಸನ್ನು ಕಾಣುವುದರಲ್ಲಿ ನನಗೆ ನಂಬಿಕೆ ಇಲ್ಲ, ಎಂಬುದನ್ನೂ ಅವರೇ ಹೇಳುವಾಗ ಇದು ವೈರುಧ್ಯವಾಗಿ ಕಾಣಲಿಲ್ಲ ಬದಲಾಗಿ ಅದನ್ನು ಪ್ರಾಯೋಗಿಕವಾಗಿ ಅನ್ವಯಿಸುವುದರಲ್ಲಿನ ಕಷ್ಟವನ್ನು ಹೇಳುತ್ತಿದ್ದಾರೆ ಎಂದೇ ಎನಿಸಿತು. ವೈರುಧ್ಯ ಎನ್ನುವುದೂ ಒಂದು ಸಹಜ ಸ್ಥಿತಿಯೇ ಇಬ್ಬರು ವ್ಯಕ್ತಿಗಳು ಒಂದೇ ಆಗಿರುವುದಿಲ್ಲ ಎಂದು ಅವರೇ ಹೇಳುತ್ತಾರೆ.

ಹಿಂದೂ ಧರ್ಮ ಅಂದರೆ‌ ವ್ಯಕ್ತಿ ಪೂಜೆ ಮೂರ್ತಿ ಪೂಜೆ ಅಂತ ಕೆಲವರು ತಿಳ್ಕೊಂಡಿದ್ದಾರೆ. ಹಿಂದೂ ಧರ್ಮಾ ಅಂದ್ರೇ ಅಷ್ಟೇನಾ? ಅಷ್ಟೇ ಅಂತ ನೀವು ಹೇಳಿದ್ರೆ ಹಿಂದೂ ಧರ್ಮವನ್ನು ನೀವು ಸರಿಯಾಗಿ ಅರ್ಥಮಾಡ್ಕೊಂಡಿಲ್ಲ ಅಂತಾಗ್ತದೆ‌.

ಪರ್ಷಿಯನ್ ಕಾವ್ಯದ ಬಗ್ಗೆ ಮಾತನಾಡುತ್ತಾ ನಮ್ಮ ದೇಶದಲ್ಲಿ‌ ಸುಮಾರು‌ ಆರುನೂರು‌ವರ್ಷಗಳ ಕಾಲ ಅದು ರಾಜಭಾಷೆಯಾಗಿತ್ತು. ಉಮರ್ ಖಯಾಂನ ಮೂಲಕ್ಕೆ ಹೋಗದೇ ತಪ್ಪಾಗಿ ಅರ್ಥೈಸಿದವರೇ ಹೆಚ್ಚು. ಸೂಫಿ ಮತ್ತು ಹಿಂದೂ ಸಾರುವ ತತ್ವ ಒಂದೇ! “ಏಕಂ ಸತ್ ವಿಪ್ರಾ ಬಹುದಾ ವದಂತಿ” ಮತ್ತು ಸೂಫಿಗಳ “ಅನ್-ಅಲ್-ಹಕ್ಕ್” ಎರಡೂ ಒಂದೇ. ಅವುಗಳ ಸತ್ಯವೊಂದೇ ಬಲ್ಲವರು ಅದನ್ನು ನಾನಾ ರೀತಿಯಲ್ಲಿ ಗುರುತಿಸುತ್ತಾರೆ ಎಂಬುದನ್ನು ಒತ್ತಿ ಹೇಳುತ್ತಾರೆ. ಅದರ ಜೊತೆಗೇ ಈಶಾವಾಸ್ಯ ಉಪನಿಷತ್ತಿನ “ತೇನತ್ಯಕ್ತೇನಾ ಭುಂಜೀಥಾ” ಎಂಬ ಮಹತ್ವದ ಶ್ಲೋಕವನ್ನು ಉಚ್ಛರಿಸುತ್ತಾರೆ.

“ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ಎನ್ನುವ ಮಾತಿಲ್ವೇ? ಸೂಫಿ ಸಾಹಿತ್ಯದಲ್ಲಿ ‘ವಹದಾನಿಯತ್’ ಎಂಬ ಪದವಿದೆ ಎಂದರೆ ‘ಏಕ ಬ್ರಹ್ಮನನ್ನು ನಂಬು’ ಎಂದು. ಪರ್ಶಿಯನ್ ನಲ್ಲಿ ವಾಹೇದ್ ಎಂದರೆ ‘ಏಕತ್ವ‌’, ಶಕ್ತಿ ಇರುವುದು ಒಂದೇ ಅದನ್ನು ಯಾರು ಯಾವ ಭಾಷೆಯಲ್ಲಿ ಬೇಕಾದರೂ ಕರೆದುಕೊಳ್ಳಿ ಅದು ಭಾಷೆಯೇ ಹೊರತು ದೇವರ definition ಅಲ್ಲ ಎನ್ನುವ ಇವರು, “ಎಷ್ಟು ಜನ‌ ಒಪ್ತಾರೆ ಇದನ್ನಾ? ಹೇಳಿದ್ರೆ ಹೊಡಿಯೋಕೆ ಬರ್ತಾರೆ” ಎಂದು‌ ನಗುತ್ತಾರೆ.

ಕನ್ನಡ ಇಂಗ್ಲಿಷ್ ಉರ್ದು ಜೊತೆಗೆ, ಸಂಸ್ಕೃತ ಅರಾಬಿಕ್‌ ಪರ್ಶಿಯನ್ ಅನೇಕ ಭಾಷೆಗಳು ಇವರಿಗೆ ಬರುತ್ತವೆ. ಜಗತ್ತಿನ ಅನೇಕ ಗ್ರಂಥಗಳನ್ನು ಓದಿ ಕರಗತ ಮಾಡಿಕೊಂಡಿದ್ದಾರೆ ಆದರೂ “ನನಗ್ಯಾವ ಭಾಷೇನೂ ಬರೋದಿಲ್ಲ ಸ್ವಾಮಿ ಕನ್ನಡವೇ ನೆಟ್ಟಗೆ ಬರೋಲ್ಲ” ಎಂದು ವಿನಯವನ್ನು ತೋರುತ್ತಾರೆ. ಗಾಂಧಿಯವರು ಸಾರಿದ ಮೌಲ್ಯಗಳ ಬಗ್ಗೆ ಅಪಾರ ಗೌರವ ಇದೆ. ಅವರ ‘ನಯೀ ತಾಲೀಮ್ ‘ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ, ಸಾಹಿತ್ಯಕ್ಕೆ ಸಂಬಂಧಿಸಿದುದೇ ಅಲ್ಲದೇ ಕೋಮು ಸೌಹಾರ್ದದ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪುಸ್ತಕದ ಹೆಸರು ಕೇಳಿದರೆ “ಮರೆತುಹೋಗಿದೆ, ಒಂದು ಕಾಪೀನೂ ಇಲ್ಲ” ಎನ್ನುತ್ತಾರೆ. ಪ್ರಶಸ್ತಿಗಳ ಬಗ್ಗೆ ಕೇಳಿದರೆ ಎಲ್ಲೋ ಹಾಕಿದ್ದೀನಿ, ಎಲ್ಲೋ ಬಿದ್ದಿದೆ” ಎನ್ನುತ್ತಾರೆ. ದಿವ್ಯ ನಿರ್ಲ್ಯಕ್ಷದ ಸಂತನ ಹಾಗೆ.

“ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ/ ಜಗದ ಪೊಗಳಿಕೆಗೆ ಬಾಯ್ಬಿಡದೆ …” ವನಸುಮದೊಳಗೆ ವಿಕಸಿಸುವ ಜೀವದ ಹಾಗೆ ಅಜ್ಞಾತವಾಗಿ ತಮ್ಮ ಪಾಡಿಗೆ ತಾವಿದ್ದಾರೆ ಕರಿಮುದ್ದೀನ್ ಸಾಹೇಬರು.

‘ನಾನೊಬ್ಬ ಬರೀ zero, ನನ್ನನ್ನು hero ಮಾಡಬೇಡಿ’ ಎಂದು ಅವರು ನಮಗೆ ಸ್ಪಷ್ಟವಾಗಿ ಸೂಚಿಸುತ್ತಿದ್ದಂತೆಯೇ, ಅವರ ಪ್ರಬುದ್ಧ ಪ್ರಜ್ಞೆಗೆ, “ಸಾಧು” ಗುಣಕ್ಕೆ ಬೆರಗಾಗಿ, ಕೈಮುಗಿದು ನಾವು ಹೊರಬಂದೆವು.