ತೀರಿಹೋದವರನ್ನು ಎಷ್ಟು ನೆನಸಿಕೊಳ್ಳಬೇಕು, ಹೇಗೆ, ಯಾವಾಗ ನೆನಸಿಕೊಳ್ಳಬೇಕು ಎಂಬುದು ಒಂದು ಕಲೆ, ವಿಜ್ಞಾನ ಮತ್ತು ಕೈಗಾರಿಕೆ. ಸದ್ಯವನ್ನೇ ತೆಗೆದುಕೊಳ್ಳಿ. ಗಾಂಧಿ, ನೆಹರು, ಸಾವರ್ಕರ್‌, ಟಿಪ್ಪು, ಇವರನ್ನೆಲ್ಲ ಹೇಗೆ, ಎಷ್ಟು ನೆನಸಿಕೊಳ್ಳಬೇಕು, ಎಷ್ಟು ಮರೆಯಬೇಕು, ಇವರ ಬಗ್ಗೆ ಎಷ್ಟು, ಯಾವ ಮಾತನಾಡಬೇಕು ಎಂದು ನಮಗೆಲ್ಲ ಪಾಠ ಹೇಳಿ ಕೊಡಲು ಜ್ಞಾನವಂತರ ಎಷ್ಟು ದೊಡ್ಡ ಪಡೆಯೇ ಇದೆ. ಶ್ರಾದ್ಧ ಕರ್ಮಗಳನ್ನು ಮಾಡಿಸುವ ಪುರೋಹಿತರ ಸಂಖ್ಯೆಗಿಂತ ಈ ಪಡೆಯಲ್ಲೇ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಮೂರನೆಯ ಪ್ರಬಂಧ ನಿಮ್ಮ ಓದಿಗೆ

ಗೆಳೆಯರೊಬ್ಬರು ಹೋದ ವರ್ಷವಷ್ಟೇ ತೀರಿಹೋದ ಸಹೋದ್ಯೋಗಿ ಮತ್ತು ಮಿತ್ರರ ಬಗ್ಗೆ ಒಂದಿಷ್ಟು ಪ್ರೀತಿಯ ಮಾತುಗಳನ್ನು ಫೇಸ್‌ ಬುಕ್‌ ಪುಟದಲ್ಲಿ ಬರೆದರು. ಬರವಣಿಗೆ ಪ್ರೀತಿಯ, ಬೆಚ್ಚನೆಯ ಮಾತುಗಳಿಂದ ಕೂಡಿತ್ತು. ಬರಹ ಪ್ರಕಟವಾದ ಅರ್ಧ ಘಂಟೆಯಲ್ಲೇ ಒಂದು ಪ್ರತಿಕ್ರಿಯೆ! ಬರಹದಲ್ಲಿರುವ ಮಾಹಿತಿಗಳು ತಪ್ಪೆಂದು! ಬರೆದವರು ಹಾಗೂ ಪ್ರತಿಕ್ರಿಯಿಸಿದವರು ಇಬ್ಬರನ್ನೂ ನಾನು ಬಲ್ಲೆ. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರವೃತ್ತಿಯವರಲ್ಲ. ಜವಾಬ್ದಾರಿಯುತ ಮನುಷ್ಯರು. ಉದ್ದೇಶಪೂರ್ವಕವಾಗಿ ತಪ್ಪು ಬರೆದಿರಲಾರರು. ಪ್ರತಿಕ್ರಿಯೆಗೋಸ್ಕರ ಪ್ರತಿಕ್ರಿಯಿಸಲಾರರು. ಹೀಗೇಕಾಯಿತು? ಹೀಗೇಕೆ ಆಗುತ್ತದೆ? ನೆನಪಿನ ಸ್ವಭಾವದಿಂದಾಗಿಯೇ? ಇಲ್ಲ ಸತ್ತವರ ಬಗ್ಗೆ ಉದಾಸೀನವೇ?

ತೀರಿಹೋದವರನ್ನು ನಾವು ಮರೆತು ಬಿಟ್ಟಿರುತ್ತೇವೆಯೇ? ಮರೆತು ನಮ್ಮ ನಮ್ಮ ವ್ಯಾಪಾರ ವ್ಯವಸಾಯಗಳಲ್ಲಿ ಮುಳುಗಿಹೋಗಿರುತ್ತೇವೆಯೇ? ಹೀಗೇ ಮರೆತು ಹೋಗಿರುತ್ತದೆ ಮತ್ತು ಹಾಗೆ ಮರೆತು ಹೋಗಿರುವುದು ಮನುಷ್ಯ ಸಹಜವೆಂಬ ಕಾರಣಕ್ಕಾಗಿಯೇ ಪುಣ್ಯತಿಥಿ, ಶಿವಗಣಾರಾಧನೆ, ವರ್ಷಾಂತಿಕ, ಶ್ರಾದ್ಧ, ಸ್ಮರಣಾಂಜಲಿ, ಪಕ್ಷಮಾಸ, ಹೀಗೆ ಹತ್ತು ಹಲವು ಕಾರ್ಯಕ್ರಮಗಳು, ಆಚರಣೆಗಳು. ಇದರಲ್ಲಿ ನಾವೆಲ್ಲ ಮನಃಪೂರ್ವಕವಾಗಿ ತೊಡಗುತ್ತೇವೆ ಮತ್ತು ಆ ರೀತಿಯ ಕೆಲಸಗಳಿಗೆ ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡುತ್ತೇವೆ.

ಈವತ್ತು ಸತ್ತರೆ ನಾಳಿದ್ದಿಗೆ ಮೂರು ದಿನ ಎಂಬ ಮಾತು ಕೂಡ ಇದೆ. ಅಂದರೆ ಸತ್ತವರನ್ನು ಬಹಳ ಬೇಗ ಮರೆಯುತ್ತೇವೆ ಮತ್ತು ಮರೆತುಬಿಡಬೇಕು ಎಂಬುದನ್ನು ಕೂಡ ಎಲ್ಲರೂ ಒಪ್ಪುತ್ತೇವೆ. ಇದು ಗೊತ್ತಿದ್ದರೂ ನಾವು ದುಃಖದ ಪ್ರದರ್ಶನವನ್ನು ಇನ್ನೊಬ್ಬರಿಂದ ಬಯಸುತ್ತೇವೆ ಎಂದು ಕಾಣುತ್ತದೆ. ಹ್ಯಾಮ್ಲೆಟ್‌ನ ತಾಯಿ ಗಂಡ ಸತ್ತ ಕೆಲವೇ ದಿನಗಳಲ್ಲಿ ಗಂಡನ ತಮ್ಮನನ್ನು ಮದುವೆಯಾಗುತ್ತಾಳೆ. ಸತ್ತ ರಾಜನನ್ನು ಹೂಳಿದ್ದ ಗೋರಿಯ ಮೇಲೆ ಹುಲ್ಲಿನ ಗರಿಕೆ ಮೂಡುವ ಮುನ್ನವೇ ತಾಯಿ ಮರುಮದುವೆ ಆಗಿಬಿಟ್ಟಳಲ್ಲ ಎಂದು ಹ್ಯಾಮ್ಲೆಟ್‌ ಪ್ರಲಾಪಿಸುತ್ತಾನೆ. ಪ್ರಲಾಪ ಚೆನ್ನಾಗಿದೆ. ಆದರೆ, ತಾಯಿಯ ಮರವು ಮತ್ತು ಮದುವೆ ಎರಡೂ ಸಹಜ ಎಂಬುದನ್ನು ಕೂಡ ಶೇಕ್ಸ್‌ಪಿಯರ್‌ಗೆ ನಾವೆಲ್ಲ ಹೇಳಿಕಳಿಸಬೇಕು.

ಮನೆಯಲ್ಲಿ ಹಿರಿಯರು ಸತ್ತಾಗ ಎಲ್ಲರಿಗೂ ಅಗಲಿಕೆಯ ಭಾವ, ದುಃಖದ ಪ್ರಮಾಣ ಒಂದೇ ರೀತಿಯಲ್ಲಿ, ಒಂದೇ ತೀವ್ರತೆಯಲ್ಲಿರುವುದಿಲ್ಲ. ಆವಾಗ ತುಂಬಾ ಎಚ್ಚರಿಕೆಯಿಂದರಬೇಕಾಗುತ್ತದೆ. ದುಃಖವನ್ನು ಸರಿಯಾದ ರೀತಿಯಲ್ಲಿ ಪ್ರದರ್ಶಿಸಬೇಕಾಗುತ್ತದೆ. ಇಲ್ಲದಿದ್ದರೆ, ದುಃಖವನ್ನು ಸರಿಯಾಗಿ ಪ್ರದರ್ಶಿಸಬಲ್ಲವರು, ದುಃಖವನ್ನು ಪ್ರದರ್ಶಿಸಲಾಗದವರ ಮೇಲೆ “ಕೃತಘ್ನ” ಎಂಬ ಆಪಾದನೆಯನ್ನು ಮಾಡಿ, ಎಲರನ್ನೂ ನಂಬಿಸಿಬಿಡಬಹುದು. ಸತ್ತವರ ಬಗ್ಗೆ ನಿಜಕ್ಕೂ ದುಃಖವಾಗುತಿಲ್ಲ, ಇಲ್ಲ ದುಃಖವನ್ನು ಪ್ರದರ್ಶಿಸಲಾಗುತ್ತಿಲ್ಲ, ನನ್ನ ಭಾವನೆಗಳು ದುಃಖದ ಕೇವಲ ಪ್ರದರ್ಶನಕ್ಕಿಂತ ಇನ್ನೂ ಸಂಕೀರ್ಣವಾಗಿವೆ, ನನ್ನ ಭಾವನೆಗಳನ್ನು ಒಪ್ಪಿಕೊಳ್ಳಿ, ಗೌರವಿಸಿ ಎಂದು ಪ್ರಾರ್ಥಿಸುತ್ತಾ ತಾನೇ ಆಲ್ಬರ್ಟ್‌ ಕಮೂ “Outsider” ಕಾದಂಬರಿ ಬರೆದದ್ದು? ನಾವೆಲ್ಲರೂ ಆ ಕಾದಂಬರಿಯನ್ನು ಮತ್ತೆ ಮತ್ತೆ ಓದುವುದು ಕೂಡ ಆ ಪ್ರಾರ್ಥನೆಗೆ ಸ್ಪಂದಿಸಿದ ಹಾಗೆ ತಾನೇ?

ವಾದಕ್ಕಾಗಿ, ತೀರಿಹೋದವರ ಬಗ್ಗೆ ನಮಗೆ ನೆನಪು ತುಂಬಾ ಕಾಲ ಇರುತ್ತದೆ ಎಂದೇ ಇಟ್ಟುಕೊಳ್ಳೋಣ. ಎಲ್ಲ ನೆನಪುಗಳು ತೀರಿಹೋದವರ ಪರವಾಗಿಯೇ ಇರುವುದಿಲ್ಲ. ದಿವಂಗತರು ನಮಗೆ ತೊಂದರೆ ಕೊಟ್ಟದ್ದು, ಮಾನ್ಯರ ಸಣ್ಣತನ, ಕಿಡಿಗೇಡಿ ಬುದ್ಧಿ, ಎಲ್ಲವೂ ನಮ್ಮ ನೆನಪಿನಲ್ಲಿರುತ್ತದೆ. ಸರಿಯಾಗಿ ಹೇಳಬೇಕೆಂದರೆ, ಅವರಿಂದ ನಮಗಾದ ನೋವು, ನಮಗೆ ಅವರನ್ನು ಕುರಿತು ಇರುವ ನಕಾರಾತ್ಮಕ ಸಂಗತಿಗಳ ನೆನಪೇ ನಮ್ಮ ಆಳದಲ್ಲಿ ಉಳಿದಿರುತ್ತದೆ, ನಮ್ಮನ್ನು ಬಾಧಿಸುತ್ತಿರುತ್ತದೆ. ಆದರೂ ಅದನ್ನೆಲ್ಲ ಈಗ ಪ್ರಸ್ತಾಪಿಸಬಾರದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಒಬ್ಬ ಮನುಷ್ಯ ಸತ್ತ ಮೇಲೆ ಅವನ ಬಗ್ಗೆ ಕೆಟ್ಟ ಮಾತನಾಡಬಾರದು, ದ್ವೇಷ ಸಾಧಿಸಬಾರದು ಎಂದು ಎಲ್ಲರಿಂದಲೂ ಬುದ್ಧಿ ಹೇಳಿಸಿಕೊಂಡು ಹೇಳಿಸಿಕೊಂಡು ನನಗಂತೂ ಸಾಕಾಗಿ ಹೋಗಿದೆ. ಏಕೆಂದರೆ, ಸಾಮಾನ್ಯವಾಗಿ ನನಗೆ ಯಾರ ಬಗ್ಗೆಯೂ ಇಡಿಯಾಗಿ ಒಳ್ಳೆಯ ಅಭಿಪ್ರಾಯವಿರುವುದಿಲ್ಲ, ಅವರುಗಳು ಬದುಕಿದ್ದಾಗ. ಸತ್ತ ತಕ್ಷಣ ಅಭಿಪ್ರಾಯ ಬದಲಾಯಿಸಲು ಸಾಧ್ಯವೇ? ಖಂಡಿತ ಇಲ್ಲ. ಆದರೂ ನಿಮ್ಮ ಬುದ್ಧಿವಾದಕ್ಕೆ ವಿಧೇಯನಾಗಿ ಸುಮ್ಮನಿರಲು ಪ್ರಯತ್ನಿಸುತ್ತೇನೆ. ಸತ್ತವರ ಬಗ್ಗೆ ಕೆಟ್ಟ ಭಾವನೆಗಳು ಮನಸ್ಸಿನ ಒಳಗಡೆ ದೊಡ್ಡ ಹುತ್ತವಾಗಿ ಬೆಳೆಯುತ್ತಲೇ ಹೋಗುತ್ತದೆ. ಒಂದು ದಿನ ಭೂಕಂಪವಾಗುತ್ತದೆ. ನೀವೇ ಜವಾಬ್ದಾರಿ. ಅಲ್ಲದೆ ನನ್ನ ಮನಸ್ಸಿನ ಸ್ವಭಾವದಲ್ಲಿ ಏಕಾಗ್ರತೆ ತುಂಬಾ ಕಡಿಮೆ. ಹಾಗಾಗಿ ಮನಸ್ಸು ಎಲ್ಲ ರೀತಿಯ ಅಭಿಪ್ರಾಯಗಳ ನಡುವೆ ತೇಲಾಡುತ್ತಿರುತ್ತದೆ. ಸತ್ತವರಾದರೇನು? ಬದುಕಿರುವವರಾದರೇನು? ನನಗೆ ಇಷ್ಟೆಲ್ಲ ಬುದ್ಧಿವಾದ ಹೇಳುವವರ ಮನೆಗಳಿಗೆ ಹೋಗಿ ನೋಡಿದ್ದೇನೆ. ಮನೆಯ ಮಧ್ಯ ಭಾಗದಲ್ಲಿ ಸತ್ತವರ ಬಗ್ಗೆ ಧಾರ್ಮಿಕ ಕ್ರಿಯೆಗಳು ನಡೆಯುತ್ತಿದ್ದರೆ, ವೆರಾಂಡಾದಲ್ಲಿ ಕುಳಿತುಕೊಂಡು ನೆಂಟರಿಷ್ಟರು ಸತ್ತವರನ್ನು ಸಮಾ ತೆಗಳುತ್ತಾರೆ. ಇಬ್ಬರು ಮಿತ್ರರಿದ್ದರು. ಒಬ್ಬರಿಗೆ ಯಾರ ಬಗ್ಗೆಯೂ ಯಾವುದಕ್ಕೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಬದುಕಿರುವವರ ಬಗ್ಗೆ ವ್ಯಂಗ್ಯ, ಅಸಹನೆ. ಸತ್ತವರ ಬಗ್ಗೆಯೂ ತಿರಸ್ಕಾರ. ಮನುಷ್ಯನಿಗೆ ಶೋಕ ಪ್ರದರ್ಶನ ಕೂಡ ಗೊತ್ತಿರಲಿಲ್ಲ. ಶ್ರದ್ಧಾಂಜಲಿ ಸಭೆಗಳಲ್ಲಿ ಮಾತೇ ಹೊರಡುತ್ತಿರಲಿಲ್ಲ. ಇನ್ನೊಬ್ಬರು ಅಂದರಿಕಿ ಮಂಚಿವಾಡು ಸ್ವಭಾವದವರು. ಯಾವಾಗಲೂ ಎಲ್ಲರನ್ನೂ ಸುಂದರವಾದ ಪದಗಳಲ್ಲಿ ಹೊಗಳುವರು. ಶೋಕ ಪ್ರದರ್ಶನದಲ್ಲಿ ವಿದೇಶದಿಂದ ತರಬೇತಿ ಪಡೆದಿದ್ದರು. ಅವರ ಮುಖಭಾವ, ಕೇಶಾಲಂಕಾರ, ತಪ್ತಭಂಗಿ ಎಲ್ಲವೂ ಇದಕ್ಕನುಗುಣವಾಗಿತ್ತು. ನನಗೆ ಇಬ್ಬರಲ್ಲಿ ಯಾರನ್ನು ಆರಿಸಿಕೊಳ್ಳಬೇಕು ಎಂಬುದೇ ತಿಳಿಯುತ್ತಿರಲಿಲ್ಲ. ಇವರಿಬ್ಬರಿಗೂ ಆಪ್ತನಾದ ಇನ್ನೊಬ್ಬನಿದ್ದ. ಯಾರಾದರೂ ತೀರಿಹೋದರೆ ಸಾಕು, ಕಣ್ಮರೆಯಾಗಿಬಿಡುತ್ತಿದ್ದ. ಯಾರೇ ಸತ್ತಾಗಲೂ ನನಗೆ ವಿಶೇಷವಾಗಿ ದುಃಖವಾಗುವುದಿಲ್ಲ. ಯಾವ ಭಾವನೆಗಳೂ ಮಾತುಗಳೂ ಇಲ್ಲ. ಆದ್ದರಿಂದ, ನಾನು ಏನನ್ನೂ ಮಾತನಾಡಲಾರೆ. ಎಂಟು ಹತ್ತು ತಿಂಗಳ ಕಾಲಾವಧಿಯಲ್ಲಿ ಈ ಮೂವರೂ ಒಬ್ಬೊಬ್ಬರಾಗಿ ತೀರಿಕೊಂಡರು. ನಾನು ಕಂಗಾಲಾಗಿ ಹೋದೆ. ಕೆಲವು ದಿವಸ ನನಗೆ ಮಾತನಾಡುವುದೇ ನಿಂತು ಹೋಯಿತು. ನನ್ನ ಗ್ರಹಚಾರಕ್ಕೆ ಹೀಗೆ ಮಾತು ನಿಂತು ಹೋದಾಗಾಲೇ ತುಂಬಾ ಜನ ಆಪ್ತರು ತೀರಿಕೊಂಡರು. ನನಗೆ ಮಾತ್ರವಲ್ಲ, ನಮ್ಮಲ್ಲಿ ಯಾರಿಗೂ ಮಾತೇ ಹೊರಡಲಿಲ್ಲ. ಚಿತ್ರಗುಪ್ತರು ಸಂವತ್ಸರದ ಅಂತ್ಯದಲ್ಲಿ ಪ್ರಕಟಿಸಿದ ವರದಿಗಳ ಪ್ರಕಾರ ಹೀಗೆ ನಮ್ಮೆಲ್ಲರಿಗೂ ಮಾತು ನಿಂತು ಹೋದ ಸಂದರ್ಭದಲ್ಲಿ ಸತ್ತವರೆಲ್ಲರೂ ಸಲೀಸಾಗಿ ವೈತರಣಿ ನದಿ ದಾಟಿ ಸ್ವರ್ಗವನ್ನು ಬೇಗ ಬೇಗ ತಲುಪಿದರಂತೆ.

ಒಂದು ಗಣ್ಯ ಕುಟುಂಬ. ಆಸ್ತಿ ಪಾಸ್ತಿ, ಜಮೀನು, ಜಾನುವಾರು ತುಂಬಾ ಇತ್ತು. ಸಹಜವಾಗಿಯೇ ಕೌಟುಂಬಿಕ ವಿವಾದಗಳು, ಕೋರ್ಟ್‌ ಕಛೇರಿ, ತಗಾದೆ, ಯಾವ ಮಕ್ಕಳೂ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಸದಾ ಜಗಳ ಕಾಯುವರು, ನಿಂದಿಸುವರು. ಮಾತಾಪಿತರು ತೀರಿಹೋದರು ನೋಡಿ, ಇದೇ ಮಕ್ಕಳು ಮುಂದೆ ನಿಂತು ಹಾಲುತುಪ್ಪ ಉತ್ತರ ಕ್ರಿಯಾದಿಗಳನ್ನು ಚೆನ್ನಾಗಿ ಮಾಡಿದರು. ಸಾರ್ವಜನಿಕರು ಇದನ್ನೇ ಮೆಚ್ಚಿದರು. ಬದುಕಿರುವಾಗ ಏನೇ ಮಾತನಾಡಲಿ, ತೀರಿಹೋದ ಮೇಲೆ ಏನೊಂದೂ ಮಾತನಾಡದೆ ಇಷ್ಟು ಚೆನ್ನಾಗಿ ಧಾರ್ಮಿಕ ಕ್ರಿಯೆಗಳನ್ನು ಮಾಡಿದರಲ್ಲ! ಇದನ್ನು ಎಲ್ಲರೂ ಮೆಚ್ಚಲೇಬೇಕು.

ತೀರಿಹೋದವರ ಬಗ್ಗೆ ಬರೆಯುವುದು ಮಾತನಾಡುವುದಕ್ಕಿಂತ ಸುಲಭವೇ? ಇರಬೇಕು, ಸತ್ತವರ ಬಗ್ಗೆ ಅದೆಷ್ಟು ಬೇಗ, ಅದೆಷ್ಟು ಉದ್ದನೆಯ ನುಡಿನಮನಗಳು ಪ್ರಕಟವಾಗಿಬಿಡುತ್ತವೆ. ವಯಸ್ಸಾದ ಗಣ್ಯರ ಬಗ್ಗೆ, ಅನಾರೋಗ್ಯದಿಂದ ನರಳುತ್ತಿರುವ ಗಣ್ಯರ ಬಗ್ಗೆ ನುಡಿನಮನ ತಯಾರಾಗಿ ಪ್ರತಿ ವಾರ ಕೂಡ ನವೀಕರಣಗೊಳ್ಳುತ್ತಿರುತ್ತದೆ. ಇದು ವೃತ್ತಿಯ ಅವಶ್ಯಕತೆ ಎಂದು ಒಪ್ಪಿದರೂ, ದಿಢೀರನೆ ಸತ್ತವರ ಬಗ್ಗೆಯೂ ವಿವರವಾದ ನುಡಿನಮನಗಳು ಪ್ರಕಟವಾಗಿಬಿಡುತ್ತವೆ. ಪತ್ರಕರ್ತರೊಬ್ಬರು ಇಂತಹ ನುಡಿನಮನಗಳ ಸಂಗ್ರಹವನ್ನೇ ಪ್ರಕಟಿಸಿದರು. ಮಾನ್ಯರನ್ನು ಭೇಟಿ ಮಾಡಿ ಅಭಿನಂದಿಸಲು ಹೋದರೆ, ಸಪ್ಪೆ ಮುಖ ಮಾಡಿಕೊಂಡು ಕುಳಿತಿದ್ದರು. ನನ್ನ ಅಭಿನಂದನೆಯ ಮಾತುಗಳನ್ನು ಕೇಳಿಸಿಕೊಂಡು ನನ್ನೆಡೆಗೆ ತಿರಸ್ಕಾರದಿಂದ ನೋಡಿದರು. ನೋಡಿ, ನಿಜ ಹೇಳಬೇಕೆಂದರೆ, ನನಗೆ ದುಃಖಪಡುವ ಶಕ್ತಿಯೇ ಹೊರಟು ಹೋಗಿದೆ. ಯಾರಾದರೂ ಸತ್ತರೆ, ಸುಮ್ಮನೆ ಬರೆಯೋಣವೆನಿಸುತ್ತದೆ. ಮೊನ್ನೆ ನಮ್ಮ ಮನೆಯಲ್ಲಿ ನಮ್ಮಜ್ಜಿ ತೀರಿಹೋದರು. ನನಗೆ ದುಃಖವೇ ಆಗಲಿಲ್ಲ. ಆದರೂ ಮನಸ್ಸಿನೊಳಗೆ ನುಡಿನಮನ ಸಿದ್ಧವಾಗಿಯೇ ಹೋಯಿತು. ಮನೆಯವರೆಲ್ಲ ತುಂಬಾ ಬೇಜಾರು ಮಾಡಿಕೊಂಡರು. ನಾನು ಕೆಲಸ ಮಾಡುವ ಪತ್ರಿಕೆಯವರು ಕೂಡ ನಮ್ಮಜ್ಜಿಯ ಬಗ್ಗೆ ಬರೆದ ನುಡಿನಮನವನ್ನು ಪ್ರಕಟಿಸಲು ಮುಂದೆ ಬರಲಿಲ್ಲ. ನುಡಿನಮನ ಬರೆದು ಪ್ರಾವೀಣ್ಯ ಸಂಪಾದಿಸಿದ್ದ ಈ ಪತ್ರಕರ್ತರಿಗೆ ಹೋಲಿಸಿದರೆ ನನ್ನ ಇನ್ನೊಬ್ಬ ಮಿತ್ರ ಈ ಪ್ರಾವೀಣ್ಯತೆ ಇಲ್ಲದವನು. Economist ಪತ್ರಿಕೆಯ ಒಂದು ಪ್ರಸಿದ್ಧ ಪ್ರಮುಖ ಅಂಕಣ. ಶ್ರದ್ಧಾಂಜಲಿಗೆ ಸಂಬಂಧಿಸಿದ್ದು. ವಿಶ್ವವಿಖ್ಯಾತರಾದ ಚಿಂತಕರು, ವಿಜ್ಞಾನಿಗಳು, ರಾಜಕಾರಣಿಗಳು, ಅಡಳಿತಗಾರರು ಇವರೆಲ್ಲ ತೀರಿಹೋದಾಗ ಪ್ರತಿ ವಾರವೂ ಒಂದು ಅಂಕಣ ಬರಹವಿರುತ್ತದೆ. ಪ್ರಬುದ್ಧ ಬರಹವಿದು. ಪರೀಕ್ಷೆಯಲ್ಲಿ ಈ ಸ್ವರೂಪದ ಬರಹ ಕುರಿತು ಕೂಡ ಪ್ರಶ್ನೆಗಳಿದ್ದವು. ನನ್ನ ಮಿತ್ರ ಉತ್ತರಿಸಲಾರದೆ ಪರೀಕ್ಷೆಯಲ್ಲಿ ಅನುತ್ತೀರ್ಣನಾದ.

ತೀರಿಹೋದವರ ಬಗ್ಗೆ ಮಾತನಾಡುವ ಕೆಲಸ, ಅದರ ಬಗ್ಗೆ ನನಗೆ ಆಸಕ್ತಿ ಬಾಲ್ಯದಿಂದಲೂ ಅಂಟಿಕೊಂಡಿದೆ. ಮೇ ೧೯೬೨ ರಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ತೀರಿಹೋದರು. ಹಳ್ಳಿಯ ಶಾಲೆಯಲ್ಲೂ ಕೂಡ ಸಂತಾಪ ಸೂಚಕ ಸಭೆ ನಡೆಯಬೇಕೆಂದು, ಸಭೆಯಲ್ಲಿ ಒಬ್ಬ ಬಾಲಕ ಕೂಡ ಪ್ರಾತಿನಿಧಿಕವಾಗಿ ಮಾತನಾಡಬೇಕೆಂದು ಹುಕುಂ ಬಂತು. ರಾಜೇಂದ್ರ ಪ್ರಸಾದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಊರಿಗೆ ಬರುವ ಪೇಪರ್‌ನಿಂದ ವಿಷಯ ಸಂಗ್ರಹಿಸಿ ಮೇಷ್ಟ್ರು ನನಗೆ ಭಾಷಣ ಬರೆದುಕೊಡಬೇಕು. ಬಸ್ಸು ಬರುವುದು ಹನ್ನೊಂದು ಘಂಟೆಗೆ. ಆಮೇಲೆ ಭಾಷಣ ಬರೆದು, ಬಾಲಕ ಉರು ಹಚ್ಚಿ ಮಾತನಾಡುವುದು ಕಷ್ಟವೇ ಸರಿ. ಮೇಷ್ಟ್ರು ಒಂದು ಉಪಾಯ ಮಾಡಿದರು. ಮಾನ್ಯರು ರಾಷ್ಟ್ರಪತಿಗಳಾಗಿದ್ದರು. ಗಾಂಧಿಯ ಶಿಷ್ಯರು, ನೆಹರೂಗೆ ಆಪ್ತರು. ಸ್ವಾತಂತ್ರ್ಯ ಚಳುವಳಿಯಲ್ಲಿ ಜೈಲಿಗೆ ಹೋಗಿದ್ದರು, ದೇಶಪ್ರೇಮಿಗಳು. ಅವರ ಸಾವಿನಿಂದ ದೇಶ ಅನಾಥವಾಗಿದೆ. ಅಂಥವರು ಮತ್ತೆ ಹುಟ್ಟುವುದಿಲ್ಲ. ಇದನ್ನೇ ಉರು ಹಚ್ಚುತ್ತಾ ನಾನು ರೆಡಿಯಾದೆ. ಇದೆಲ್ಲ ಇಲ್ಲಿಗೇ ಮುಗಿಯಲಿಲ್ಲ. ನಮ್ಮ ಕೇಂದ್ರ ಕಂದಾಯ ಸೇವೆಯ ಅಧಿಕಾರಿಗಳ ಸಂಘದ ಕಾರ್ಯದರ್ಶಿಯಾಗಿದ್ದಾಗ, ನಂತರ ಇಲಾಖಾ ಮುಖ್ಯಸ್ಥನಾದಾಗಲೂ ಹಿರಿಕಿರಿಯ ಸಹೋದ್ಯೋಗಿಗಳು ತೀರಿಹೋದಾಗಲೆಲ್ಲ, ಇದೇ ರೀತಿಯ ಶೋಕ ಸಂದೇಶವನ್ನು ಬರೆದು ಸಹಿ ಮಾಡಿ ಕುಟುಂಬದ ಸದಸ್ಯರಿಗೆ ಕಳಿಸುತ್ತಿದ್ದೆ. ಹಿರಿಯ ಶ್ರೇಣಿಯ ಅಧಿಕಾರಿಯಾದ ಮೇಲೆ ಸಹಾಯಕ ಅಧಿಕಾರಿಗಳು, ತೀರಿಹೋದವರ ಬಗ್ಗೆ ಒಳ್ಳೆಯ ಮಾತುಗಳನ್ನು, ಸುಂದರ ಸಂದೇಶವನ್ನು ಟೈಪ್‌ ಮಾಡಿಸಿ ನನ್ನ ಸಹಿಗೆ ತಂದುಕೊಡುತ್ತಿದ್ದರು.

ಈವತ್ತು ಸತ್ತರೆ ನಾಳಿದ್ದಿಗೆ ಮೂರು ದಿನ ಎಂಬ ಮಾತು ಕೂಡ ಇದೆ. ಅಂದರೆ ಸತ್ತವರನ್ನು ಬಹಳ ಬೇಗ ಮರೆಯುತ್ತೇವೆ ಮತ್ತು ಮರೆತುಬಿಡಬೇಕು ಎಂಬುದನ್ನು ಕೂಡ ಎಲ್ಲರೂ ಒಪ್ಪುತ್ತೇವೆ. ಇದು ಗೊತ್ತಿದ್ದರೂ ನಾವು ದುಃಖದ ಪ್ರದರ್ಶನವನ್ನು ಇನ್ನೊಬ್ಬರಿಂದ ಬಯಸುತ್ತೇವೆ ಎಂದು ಕಾಣುತ್ತದೆ.

ಯುಗೋಸ್ಲಾವಿಯಾದ ನಾಯಕರಾಗಿದ್ದ ಟಿಟೋ ತೀರಿಹೋದಾಗ ಮಧ್ಯರಾತ್ರಿ ಪ್ರಧಾನಿ ಇಂದಿರಾಗಾಂಧಿಯವರನ್ನು ಎಬ್ಬಿಸಿ ಸುದ್ದಿ ತಿಳಿಸುವ ಕೇಬಲ್‌ ನೀಡಿದಾಗ ಜೊತೆ ಜೊತೆಯಲ್ಲೇ ಶೋಕ ಸಂದೇಶದ ಟಿಪ್ಪಣಿಯನ್ನು ಕೂಡ ಸಹಾಯಕರು ಸಹಿಗೆ ನೀಡಿದಾಗ ಆಕೆ ಅಧಿಕಾರಿಗಳ ದಕ್ಷತೆ, ಸಮಯ ಪ್ರಜ್ಞೆ ಕಂಡು ಒಂದು ಕ್ಷಣ ಬೆರಗಾದರಂತೆ. ಹೀಗೆಂದು ಶೋಕ ಸಂದೇಶವನ್ನು ಬರೆದವರ ಮಗನೇ ನನ್ನೊಡನೆ ಹೆಮ್ಮೆಯಿಂದ ಹೇಳಿಕೊಂಡರು.

ಶ್ರದ್ಧಾಂಜಲಿ ಸಭೆಗಳಿಗೂ, ಅಭಿನಂದನಾ ಸಭೆಗಳಿಗೂ, ಪ್ರಶಸ್ತಿ ವಿತರಣಾ ಸಮಾರಂಭಗಳಿಗೂ ನನಗೆ ಅಂತಹ ವ್ಯತ್ಯಾಸವೇನೂ ಕಂಡು ಬಂದಿಲ್ಲ. ಎಲ್ಲ ಸಭೆಗಳಲ್ಲೂ ಭಾಷಣ ಮಾಡುವವರು ಬಳಸುವ ಭಾಷೆ ಒಂದೇ ಆಗಿರುತ್ತದೆ. ಭಾಷಣಕಾರರು ಕೂಡ ಅವರವರೇ ಇರುತ್ತಾರೆ. ಒಂದು ಸಂತಾಪ ಸೂಚಕ ಸಭೆಯಲ್ಲಂತೂ ಅಧ್ಯಕ್ಷರು ಸತ್ತವರಿಗೆ ಅರ್ಪಿಸಿದ್ದ ಭಿನ್ನವತ್ತಳೆಯಿಂದಲೇ ಆಯ್ದ ಭಾಗಗಳನ್ನು ಸುಲಲಿತವಾಗಿ ಓದಿದರು. ಎಲ್ಲ ರೀತಿಯ ಸಭೆಗಳಿಗೂ ಜನ ಒಂದೇ ರೀತಿ ಡ್ರೆಸ್‌ ಮಾಡಿಕೊಂಡು ಬಂದಿರುತ್ತಾರೆ. ಆರತಕ್ಷತೆಗೆ ಹೋದಾಗ ಮೂಗಿಗೆ ಅಮರಿಕೊಳ್ಳುವ ಸುಗಂಧ ದ್ರವ್ಯದ ವಾಸನೆ. ಅದು ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಕದಲ್ಲಿ ಕುಳಿತವರಿಂದಲೂ ಬಂದಿರುತ್ತದೆ. ಈಚಿನ ಕೇಶ ವಿನ್ಯಾಸ, ರವಿಕೆ ವಿನ್ಯಾಸಗಳನ್ನು ನಾನು ನೋಡಿದ್ದು ಶ್ರದ್ಧಾಂಜಲಿ ಸಭೆಗಳಲ್ಲೇ!

ತೀರಿಹೋದವರ ಬಗ್ಗೆ ಮಾತುಗಳಿಗೆ ಮಾತ್ರ ಕಷ್ಟವಲ್ಲ, ಹೆಸರಿನಂತ ಪ್ರಾಥಮಿಕ ವಿವರಗಳಿಗೂ ಕಷ್ಟ. ಸತ್ತವರ ಹೆಸರುಗಳು ಕೂಡ ಎಷ್ಟು ಬೇಗ ಮರೆತುಹೋಗುತ್ತದೆ, ಸಾರ್ವಜನಿಕರದ್ದಲ್ಲ, ತೀರಾ ಮನೆಯ ಹಿರಿಯರದ್ದು ಕೂಡ. ತಾತ, ಮುತ್ತಾತಂದಿರುಗಳದ್ದು ಕೂಡ. ನಮ್ಮ ಮನೆಯ ಉದಾಹರಣೆಯಿಂದಲೇ ಹೇಳುವುದಾದರೆ, ತಾಯಿ ತಂದೆ ಇಬ್ಬರಿಗೂ ಎರಡೂ ಕಡೆಯಿಂದಲೂ ಅವರವರ ತಂದೆ ಅವರುಗಳ ಬಾಲ್ಯದಲ್ಲೇ ತೀರಿಹೋದರು. ನನ್ನ ತಲೆಮಾರಿನವರು ತಾತಂದಿರ ಮುಖ ನೋಡುವುದಿರಲಿ, ನಮ್ಮ ತಂದೆ ತಾಯಿಗಳಿಗೇ ಅವರವರ ತಂದೆಯ ಮುಖ ಪರಿಚಯ ಕೂಡ ಇರಲಿಲ್ಲ. ಆವಾಗ ಫೋಟೋ ತೆಗೆಸಿಡುವುದು ಕೂಡ ಚಾಲ್ತಿಗೆ ಬಂದಿರಲಿಲ್ಲ. ವಾರ್ಷಿಕ ಶ್ರಾದ್ಧ ಮಾಡುವಾಗ ತಂದೆ, ತಾತ, ಮುತ್ತಾತಂದಿರ ಹೆಸರು ಹೇಳಬೇಕು. ತಾತನ ಹೆಸರೇ ಗೊತ್ತಿಲ್ಲ, ಇನ್ನು ಮುತ್ತಾತನ ಹೆಸರು ಹೇಗೆ ಹುಡುಕಬೇಕು. ಸಂಬಂಧದವರನ್ನೆಲ್ಲ ಹುಡುಕಿ ಹೇಗೋ ಹೆಸರು ಪತ್ತೆಮಾಡಿದ್ದಾಯಿತು. ಆದರೆ ಮರೆತು ಹೋಗುತ್ತಿತ್ತು, ಮುಜುಗರವಾಗುತ್ತಿತ್ತು. ಕೊನೆಗೆ ದಿನಚರಿಯಲ್ಲಿ ಬರೆದಿಟ್ಟುಕೊಂಡು ನಂತರ ಶ್ರಾದ್ಧದ ದಿವಸ ಒಂದು ಚೀಟಿಯಲ್ಲಿ ಗುರುತುಮಾಡಿಕೊಂಡು ಪುರೋಹಿತರಿಗೆ ಕೊಡುತ್ತಿದ್ದೆವು. ಅವರು ಕೂಡ ನಮ್ಮ ರೀತಿಯಲ್ಲೇ ತಡವರಿಸಿಕೊಂಡು ಹೆಸರುಗಳನ್ನು ಅಸಡ್ಡೆಯಿಂದ ಹೇಳುತ್ತಿದ್ದರು.

ಇದಕ್ಕೆಲ್ಲ ಹೋಲಿಸಿದರೆ, ಪಕ್ಷ ಮಾಸದಲ್ಲಿ ಎಡೆ ಕೊಡುವುದು Generic ಆಗಿಯೂ, ಗೌರವಯುತವಾಗಿಯೂ ಕಾಣುತ್ತದೆ. ಹಿರಿಯರ ಹೆಸರು, ಜೀವನಗಳ ವಿವರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ. ಒಂದು ರೀತಿಯ ಗುಂಪು ಶೋಕ ಸಭೆ ಅದು. ಗುಂತೂರಿನಲ್ಲಿದ್ದಾಗ ಕೃಷ್ಣಾ ನದಿ ತೀರದಲ್ಲಿ ಪಕ್ಷ ಮಾಸವನ್ನು ಆಚರಿಸುವ ಜಾತ್ರೆಯ ಸಂಭ್ರಮದ ಸ್ವರೂಪವನ್ನು ಕಂಡೆ. ಸತ್ತವರ ಹೆಸರೂ ಇಲ್ಲ, ವಿವರವೂ ಇಲ್ಲ. ಪುರೋಹಿತ ಕೂಡ ಗುಂಪು ಗುಂಪಿಗೇ ಮಂತ್ರ ಹೇಳುತ್ತಿರುತ್ತಾನೆ. ಇದನ್ನೆಲ್ಲ ಅಧ್ಯಯನ ಮಾಡಿ ಚಿತ್ರೀಕರಿಸಿಕೊಳ್ಳಲು ಬಂದಿದ್ದ ವಿದೇಶಿ ಪತ್ರಕರ್ತರೊಬ್ಬರು Where is death here. Where is death here ಎಂದು ತೀರಿಹೋದವರ ಬಗ್ಗೆ ಮಾತಿಗೆ ತಡಕಾಡುತ್ತಿದ್ದರು.

ಇನ್ನೊಬ್ಬರ ಸಾವನ್ನು ಕುರಿತು ಅಳುವವರು, ಕತೆ ಹೇಳುವವರು ಇವರದೇ ಒಂದು ಹುದ್ದೆಯಿದೆ. ಆ ಹುದ್ದೆಯಲ್ಲೂ ಗೆಜೆಟೆಡ್‌ ಮತ್ತು ನಾನ್‌-ಗೆಜೆಟೆಡ್‌ ಅನ್ನುವ ವರ್ಗೀಕರಣವಿದೆ ಎಂದು ತಿಳಿದಾಗ ನಾನು ಹೌಹಾರಿದೆ. ಕಮೂವಿನಂತಹ ಗಣ್ಯ ಲೇಖಕರನ್ನು ಗೇಲಿ ಮಾಡಲು ಸಾಂಸ್ಕೃತಿಕ ತಿಳಿಗೇಡಿಗಳು ಮಾಡುತ್ತಿರುವ ಹುನ್ನಾರವಿದೆಂದು ಭಾವಿಸಿದೆ. ಬಂಗಾಳ, ಬಿಹಾರ, ಉತ್ತರಕಾಂಡಗಳ ಕಡೆ ಪ್ರವಾಸ ಮಾಡಿದಾಗ, ಗೆಳೆಯರ ಮೂಲಕ Mournersಗಳ ಪ್ರದರ್ಶನವನ್ನು ನೋಡಿದೆ. ತುಂಬಾ ಸ್ಫೂರ್ತಿದಾಯಕವಾಗಿತ್ತು. ತೀವ್ರವಾಗಿ ವೃತ್ತಿಪರವಾಗಿತ್ತು. ಸಭಿಕರು ಕೂಡ ಸಂಭ್ರಮದಿಂದ ಭಾಗವಹಿಸಿದರು. ನಿಜವಾಗಿಯೂ ಕತೆ ಹೇಳುತ್ತಿದ್ದರು. ಹೃದಯದ ಆಳದಿಂದ ಅಳುತ್ತಿದ್ದರು. ಭಾವಾಭಿನಯ ಕೂಡ ಸೂಕ್ತವಾಗಿತ್ತು. ಎಂತಹ ಆಲಾಪನೆ, ಎಷ್ಟು ತೀವ್ರತೆ. ಮನಮುಟ್ಟುವಂತಹ ಕಥಾ ವ್ಯಾಖ್ಯಾನ. ಕಮೂ ಇದನ್ನೆಲ್ಲ ನೋಡಿದ್ದರೆ, Outsider ರೀತಿಯ ಕಾದಂಬರಿಯನ್ನು ಖಂಡಿತ ಬರೆಯುತ್ತಿರಲಿಲ್ಲ.

ನಾನಂತು ಇವರ ಕಲೆಗಾರಿಕೆಯಿಂದ ಎಷ್ಟು ಪ್ರಭಾವಿತನಾದೆನೆಂದರೆ, ತೀರಾ ನಮ್ಮ ಜುಜುಬಿ ಮಧ್ಯಮವರ್ಗದ ಕುಟುಂಬಕ್ಕೆ ಅಲ್ಲದೇ ಹೋದರೂ, ನಮ್ಮ ಫಿರ್ಕಾ, ಗೋತ್ರದವರನ್ನೆಲ್ಲ ಸೇರಿಸಿಕೊಂಡು ನಮ್ಮ ವಂಶಾವಳಿಗೂ ಈ ರೀತಿಯ Mourners ನೇಮಿಸಿಕೊಳ್ಳಲು ಪ್ರಯತ್ನಪಟ್ಟೆ. ಇಲ್ಲ ಇಲ್ಲ Mourners ಕೂಡ ವರ್ಣಾಶ್ರಮದ ನೀತಿಗನುಗುಣವಾಗಿ, ಸಂಪ್ರದಾಯಬದ್ಧವಾಗಿ ಆಗಬೇಕೆಂದು ನಮ್ಮ ತಾಯಿಯ ಸ್ವಗ್ರಾಮದ ಪಕ್ಕದಲ್ಲಿದ್ದ ಚನ್ನಪ್ಪನ ದೊಡ್ಡಿಯ ಹೆಳವರ ಕೇರಿಗೆ ಹೋದೆ. ಬಾಯಿಗೆ ಬಂದ ಹಾಗೆ ಬೈದರು. ನಾವು ಚರಿತ್ರಕಾರರು. ಚರಿತ್ರೆಯ ಮಾತುಗಳನ್ನು ಬರೆಯುವವರು. ಸತ್ತವರ ಬಗ್ಗೆ ಮಾತು, ಕತೆ, ಹಾಡು ಬರೆಯುವ ಅಬ್ಬೇಪಾರಿ ಕಲಾವಿದರಲ್ಲ ಎಂದು ಛೀಮಾರಿ ಹಾಕಿದರು.

ಈ ಬೇಸರದಲ್ಲಿದ್ದಾಗಲೇ ನನಗೆ ಪಶ್ಚಿಮವಾಹಿನಿಯ ವೇದಾಂತ ಪ್ರಸಾದ್‌ ಪರಿಚಯವಾದರು. ಜಗತ್ತಿನಲ್ಲಿರುವವರ ಎಲ್ಲ ಸಮಸ್ಯೆಗಳಿಗೂ ಅವರಲ್ಲಿ ವಿಧವಿಧವಾದ ಶಾಸ್ತ್ರಗಳ, ಆಚರಣೆಗಳ ಮೂಲಕ ಉತ್ತರವಿತ್ತು. ತೀರಿಹೋದವರ ಬಗ್ಗೆ ಮಾತನಾಡುವುದು, ಪೂಜೆ ಮಾಡುವುದು ಅಂದರೆ ಅದೆಲ್ಲ ಕೇವಲ ನಮ್ಮ ಹಿಂದಿನ ತಲೆಮಾರಿನವರಿಗೆ ಸಂಬಂಧಿಸಿದ್ದಲ್ಲ. ಹಿಂದಿನ ಏಳು ಜನ್ಮಕ್ಕೆ ಸೇರಿದ ಬಂಧು-ಮಿತ್ರರ ಪರಲೋಕದ ಯೋಗಕ್ಷೇಮವನ್ನೆಲ್ಲ ನೋಡಿಕೊಳ್ಳಬೇಕಾಗುತ್ತದೆ. ಎಲ್ಲರಿಗೂ ನಾವು ಒಂದಲ್ಲ ಒಂದು ರೀತಿ ತೊಂದರೆ ಕೊಟ್ಟಿರುತ್ತೇವೆ. ಅವಮಾನ ಮಾಡಿರುತ್ತೇವೆ. ಅವರೆಲ್ಲರ ಶಾಪ ನಮ್ಮ ಮೇಲಿರುತ್ತದೆ. ಅದಕ್ಕಾಗಿ ನಾವು ನಾರಾಯಣ ಬಲಿಯ ಮೂಲಕ ಕ್ಷಮೆ ಕೇಳಬೇಕು. ಹಾಗೆ ಅವರು ಕ್ಷಮಿಸಿದಾಗಲೇ ನಾವು ಸಂಸಾರ, ವೃತ್ತಿ, ವ್ಯಾಪಾರಗಳಲ್ಲಿ ಮುಂದೆ ಬರುವುದು. ನಾರಾಯಣ ಬಲಿಯ ಮೂಲಕ ಪ್ರಾರ್ಥಿಸಿ ಸುಮಾರು ೨೫೦ ವರ್ಷಗಳ ಕಾಲದ ಇತಿಹಾಸದ ಜೊತೆ ಸಂಪರ್ಕ ಮಾಡಿಕೊಳ್ಳಿ. ಅವರೆಲ್ಲರ ಪ್ರೀತಿ, ಕ್ಷಮೆಯಿಂದ ಪುನೀತರಾಗಿರಿ. ತೀರಿಹೋದವರ ಬಗ್ಗೆ ಇಷ್ಟೊಂದು ಆಳವಾಗಿ ಯೋಚಿಸಬೇಕೆಂದು ನನಗೆ ಗೊತ್ತೇ ಇರಲಿಲ್ಲ. ಎಲ್ಲ ಸರಿ, ನಾರಾಯಣ ಬಲಿ ತುಂಬಾ ಖರ್ಚಿನ ವಿಚಾರ ಎಂಬುದನ್ನು ಕೂಡ ಹೇಳಬೇಕು.

ತೀರಿಹೋದವರನ್ನು ಎಷ್ಟು ನೆನಸಿಕೊಳ್ಳಬೇಕು, ಹೇಗೆ, ಯಾವಾಗ ನೆನಸಿಕೊಳ್ಳಬೇಕು ಎಂಬುದು ಒಂದು ಕಲೆ, ವಿಜ್ಞಾನ ಮತ್ತು ಕೈಗಾರಿಕೆ. ಸದ್ಯವನ್ನೇ ತೆಗೆದುಕೊಳ್ಳಿ. ಗಾಂಧಿ, ನೆಹರು, ಸಾವರ್ಕರ್‌, ಟಿಪ್ಪು, ಇವರನ್ನೆಲ್ಲ ಹೇಗೆ, ಎಷ್ಟು ನೆನಸಿಕೊಳ್ಳಬೇಕು, ಎಷ್ಟು ಮರೆಯಬೇಕು, ಇವರ ಬಗ್ಗೆ ಎಷ್ಟು, ಯಾವ ಮಾತನಾಡಬೇಕು ಎಂದು ನಮಗೆಲ್ಲ ಪಾಠ ಹೇಳಿ ಕೊಡಲು ಜ್ಞಾನವಂತರ ಎಷ್ಟು ದೊಡ್ಡ ಪಡೆಯೇ ಇದೆ. ಶ್ರಾದ್ಧ ಕರ್ಮಗಳನ್ನು ಮಾಡಿಸುವ ಪುರೋಹಿತರ ಸಂಖ್ಯೆಗಿಂತ ಈ ಪಡೆಯಲ್ಲೇ ಹೆಚ್ಚು ಜನ ಉದ್ಯೋಗ ಪಡೆದಿದ್ದಾರೆ. ಇಂಥವರ ವಕ್ತಾರತನ ಕಂಡು ಸ್ವರ್ಗದಲ್ಲಿರುವ ಗಾಂಧಿ, ನೆಹರು, ಸಾವರ್ಕರ್‌ ತರದ ಜನರೆಲ್ಲ ನಗುತ್ತಿದ್ದಾರಂತೆ. ಏನೋ, ಯಾವುದೋ ಸಂದರ್ಭದಲ್ಲಿ ಆಡಿರುವ, ಆಡದೆ ಹೋಗಿರುವ ನಾಲ್ಕಾರು ಮಾತುಗಳಿಗೆ ಏಕೆ ಮುಂದಿನ ತಲೆಮಾರಿನವರು ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿದ್ದಾರೆ? ನಮ್ಮ ಪಾಡಿಗೆ ನಮ್ಮನ್ನು ಸುಮ್ಮನಿರಲು ಬಿಟ್ಟು, ನಮ್ಮನ್ನು ಮರೆತು, ಪ್ರತಿ ತಲೆಮಾರೂ ಕೂಡ ಹೊಸ ಉತ್ತರಗಳನ್ನು ಕಂಡುಕೊಳ್ಳಬಾರದೆ?

“ಅಳಿದ ಮೇಲೆ” ಕಾದಂಬರಿ ಬರೆದ ಕಾರಂತರಿಗೆ ತೀರಿಹೋದವರ ಬಗ್ಗೆ ನಿಜವಾಗಿಯೂ ಯಾರಿಗೂ ಮಾತನಾಡಬೇಕೆನಿಸುವುದಿಲ್ಲ! ಸಮಾಜಕ್ಕೆ, ಸಂಪ್ರದಾಯಕ್ಕೆ ಹೆದರಿ ಮಾತನಾಡುವ ಚಪಲವನ್ನು ಮಾತ್ರ ಜನರು ತೋರುತ್ತಾರೆ ಎಂಬುದು ಖಚಿತವಾಗಿ ಗೊತ್ತಿತ್ತು ಎಂದು ಕಾಣುತ್ತದೆ. ಕರಾವಳಿ ಸೀಮೆಯ ನನ್ನ ಸಹೋದ್ಯೋಗಿಯೊಬ್ಬರು ಕಾರಂತರ ಭಕ್ತರು. ಕಾರಂತರ ಹೆಸರಿನಲ್ಲಿ ಒಂದು ಮಂಡಳಿ ರಚಿಸಿ, ಬೆಂಗಳೂರಿನ ಮನೆಯಲ್ಲಿ ಒಂದು ಗ್ರಂಥಾಲಯ, ಕಾರಂತರ ಊರಿನಲ್ಲಿ ಒಂದು ರಂಗಮಂದಿರವನ್ನು ಕಟ್ಟಿಸಬೇಕು ಎಂಬ ಆಸೆಯಿತ್ತು. ಕಾರಂತರನ್ನು ಭೇಟಿ ಮಾಡಿ ಅನುಮತಿ ಕೇಳಿದರು. ಕಾರಂತರು ರೇಗಿದರು ಮತ್ತು ಪ್ರಶ್ನಿಸಿದರು – ಹೀಗೆಲ್ಲ ತೊಂದರೆ ಕೊಡಲು ಕಾರಣವೇನು ಎಂದು ಕೇಳಿದರು. ನಿಮ್ಮ ಕೃತಿ ವಿಚಾರಗಳೆಲ್ಲ ಮುಂದಿನ ತಲೆಮಾರಿನವರಿಗೆ ತಲುಪಬೇಕು ಎಂದು ಉತ್ತರಿಸಿದಾಗ, ಆಯ್ತು ನನ್ನ ಕೃತಿಗಳನ್ನು ಮುಂದಿನ ತಲೆಮಾರಿನವರು ಏಕೆ ಓದಬೇಕೆನ್ನುವುದಕ್ಕೆ ನಿನಗನಿಸುವ ಮೂರ ಕಾರಣಗಳನ್ನು ಕೊಡು ಎಂದು ಕೇಳಿದಾಗ, ನನ್ನ ಮಿತ್ರರಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ನಿನಗೇ ಕಾರಣಗಳು ಹೊಳೆಯುತ್ತಿಲ್ಲ, ನಾನು ಬದುಕಿ ನಿನ್ನೆದುರಿಗೆ ಇರುವಾಗಲೇ ಹೊಳೆಯುತ್ತಿಲ್ಲ, ಮುಂದಿನ ತಲೆಮಾರಿನವರಿಗೆ ಏಕೆ ತೊಂದರೆ ಕೊಡುತ್ತಿ ಎಂದು ತಿಳಿ ಹೇಳಿದರಂತೆ. ರಂಗಮಂದಿರವೂ ಅಷ್ಟೇ, ಸುಮ್ಮನೆ ವೇಸ್ಟು. ಆದರ ಬದಲು ಒಂದು ಕಲ್ಯಾಣ ಮಂಟಪವನ್ನೋ, ಗೋಡೌನನ್ನೋ ಕಟ್ಟಿ, ಬಾಡಿಗೆಗೆ ಕೊಡು ಎಂದು ಬುದ್ಧಿಮಾತು ಹೇಳಿದರೂ, ನನ್ನ ಮಿತ್ರರು ರಂಗಮಂದಿರವನ್ನು ಕಟ್ಟೇಬಿಟ್ಟರು. ಈಗ ಆ ರಂಗಮಂದಿರ, ಕಾರಂತರು ಕನಸು ಕಂಡ ಹಾಗೆ ಕಲ್ಯಾಣ ಮಂದಿರವಾಗಿ ಬಳಕೆಯಾಗುತ್ತಿದೆ. ಕಾರಂತರ ಕಾಲಜ್ಞಾನದಂತೆ ಯಾರೂ ಅವರ ಬಗ್ಗೆ ಅಷ್ಟೊಂದು ಮಾತನಾಡಲು ಹೋಗುವುದಿಲ್ಲ. ಮಾತನಾಡುತ್ತಿರುವವರ ಸಂಖ್ಯೆ, ಮಾತನಾಡುತ್ತಿರುವವರ ಪ್ರಮಾಣ ಎರಡೂ ಕಡಿಮೆಯಾಗುತ್ತಿದೆ.

ಕಾರಂತರಿಗಿರುವಷ್ಟು ತಿಳುವಳಿಕೆಯಲ್ಲಿ ಸ್ವಲ್ಪ ಭಾಗವಾದರೂ ಜನಕ್ಕಿದ್ದಲ್ಲಿ, ತೀರಿಹೋದ ಮೇಲೆ ನಮ್ಮ ಬಗ್ಗೆ ಜನ ಹೇಗೆ ಮಾತನಾಡಬೇಕು, ಎಷ್ಟು ಮಾತನಾಡಬೇಕು ಎಂದೆಲ್ಲ ತಲೆ ಕೆಡಿಸಿಕೊಂಡು ಅಕ್ಬರ್‌ನಾಮಾ, ಶಾಸನಗಳು, ಜೀವನಚರಿತ್ರೆ, ಅಭಿನಂದನಾ ಗ್ರಂಥಗಳನ್ನು, ಸಂಶೋಧನಾ ಪ್ರಬಂಧಗಳನ್ನು ದುಡ್ಡುಕೊಟ್ಟು ಬರೆಸಲು ಹೋಗುತ್ತಿರಲಿಲ್ಲ. ನಮ್ಮ ಬಗ್ಗೆ ಮಕ್ಕಳು, ಮೊಮ್ಮಕ್ಕಳು ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಲಿ ಎಂದು ಮನೆ, ಮಠ, ಆಸ್ತಿ ಮಾಡಲು ಕೂಡ ಹೋಗುತ್ತಿರಲಿಲ್ಲ.

ಉದುರಿಹೋಗುತ್ತಿರುವ ಎಲೆ, ಹರಿದು ಹೋಗುವ ನದಿಯ ನೀರು, ಸರಿದು ಹೋಗುವ ಕಾಲದ ಕ್ಷಣ, ಗಾಢವಿಪಿನದ ಆಳದಲ್ಲಿ ಬದುಕಿ ಬಾಳಿ ಸುಮ್ಮನೆ ಮರೆಯಾಗುವ ಪ್ರಾಣಿ, ಕ್ರಿಮಿ ಕೀಟಗಳು, ಯಾವುದೂ ತಾವು ತೀರಿಹೋದ ಮೇಲೆ ಯಾರಾದರೂ ಏನಾದರೂ ಮಾತನಾಡಲಿ ಎಂದು ಅಪೇಕ್ಷಿಸುವುದಿಲ್ಲ.