ಪ್ರಿಯ ಎಡಿಟರ್ ಸಾಹೇಬರಿಗೆ,

ನಾನು ಕಿ.ರಂ ಅವರನ್ನು ನೋಡಿದ್ದು ಲಂಕೇಶ್ ಪತ್ರಿಕೆಯ ೧೭ನೇ ಹುಟ್ಟು ಹಬ್ಬದಂದು. ಅವರನ್ನೇ ಏಕೆ? ಲಂಕೇಶ್, ಶರ್ಮ, ಕಿ.ರಂ ಅವರನ್ನೆಲ್ಲಾ ಮೊದಲ ಮತ್ತು ಕಡೆಯ ಬಾರಿ ಕಂಡದ್ದು ಅಂದೇ. ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದು ಹಾಗೂ ಲಂಕೇಶರಿಗೆ ಹತ್ತಿರದವರೊಲ್ಲೊಬ್ಬರ ಮತ್ತು ಅವರ ಹೆಂಡತಿಯ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದೆ. ನಿಜ ಹೇಳಬೇಕೆಂದರೆ ಅಷ್ಟೊಂದು ಜನ ಕವಿ/ಕವಯತ್ರಿ, ಲೇಖಕ/ಲೇಖಕಿಯರು, ಪತ್ರಕರ್ತ/ಕರ್ತೆಯರನ್ನು ಒಂದೇ ಸೂರಿನಡಿಯಲ್ಲಿ ಹತ್ತಿರದಿಂದ ನೋಡಿದ್ದೂ ಅದೇ ಮೊದಲು. ಅದಷ್ಟೇ ಮೊದಲಲ್ಲ, ಜೀವನದಲ್ಲಿ ಮೊದಲಬಾರಿಗೆ ಸೀರೆ, ಬಳೆ, ಚೂಡೀದಾರ್, ಜಡೆ ಹಾಕಿಕೊಂಡ ಹೆಂಗಸರು ಬಿಯರ್ ಕುಡಿಯುವುದನ್ನು ಕಂಡಿದ್ದೂ ಅದೇ ಮೊದಲು. ತುಂಬಾ ಹಿಂದೆ ನಮ್ಮ ರಸ್ತೆಗಳೆಲ್ಲಾ ದಾಟಿ ಓಣಿ ತುದಿಯಲ್ಲಿದ್ದ ಬೂಬಮ್ಮ ಕುಡಿದು ಬೀಡಿ ಸೇದುವುದನ್ನು ನೋಡಲು ಎಷ್ಟೋ ಸಂಜೆಗಳು ಸ್ನೇಹಿತರ ಗುಂಪಿನ ಜೊತೆ ಹೊಂಚುಹಾಕುತ್ತಿದ್ದ ದಿನಗಳಲ್ಲಿ ಅವಳು ಕುಡಿಯುವುದನ್ನು ನನಗೆ ನೋಡಲಾಗಿರಲಿಲ್ಲ. ಬೇರೆಲ್ಲಾ ಮಕ್ಕಳೂ ನಾವು ನೋಡಿದ್ದೇವೆ ಎಂದು ಹೇಳಿದ್ದ ಸಂಗತಿಯನ್ನು ನಂಬಿ ಅವಳು ಕುಡಿಯುತ್ತಾಳೆ ಎಂಬ ತೀರ್ಮಾನಕ್ಕೆ ಬಂದು, ದೊಗಲೇ ಶರ್ಟ್ ತೊಟ್ಟು ಸೀರೆಯ ಉಡುತ್ತಿದ್ದ ಬೂಬಮ್ಮನ ಬಾಯಲ್ಲಿ ಬೀಡಿ ಕೈಯಲ್ಲಿ ಬಾಟಲ್ ಕಲ್ಪಿಸಿಕೊಂಡು ಬಿಟ್ಟಿದ್ದೆ.

ಅಂತೂ ಬಿಯರ್ ಕುಡಿಯುತ್ತಿದ್ದ ಹೆಂಗಸರು ನನ್ನ ಬಾಯಿ ತೆರೆಸಿ ಕಣ್ಣುಗಳನ್ನು ಅಗಲಿಸಿದ್ದಂತೂ ಹೌದು. ಅದೇ ಗಲಿಬಿಲಿಯಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದ ನನ್ನನ್ನು ಒಳ ಬರಬೇಕಂತೆ ಎಂದು ಕರೆದ ಹುಡುಗನೊಬ್ಬನ ಹಿಂದೆ ಹೋದಾಗ, ಅಲ್ಲಿ ಲಂಕೇಶ್ ಮತ್ತೆ ಹತ್ತಾರು ಮಂದಿ ಕುಳಿತಿದ್ದರು. ಆ ಕ್ಷಣ ನನಗೆ ನೆನಪಾದ ಪದ `ಒಡ್ಡೋಲಗ’. ನಾನು ಒಳಗಡಿಯಿಡುತ್ತಿದ್ದ ಆ ಗಳಿಗೆಯಲ್ಲೇ, ನಿಲ್ಲಲಾರದೆ ತೊದಲು ಮಾತುಗಳನ್ನಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಹೊರಗೆ ಕಳುಹಿಸುವ ಪ್ರಯತ್ನ ನಡೆಯುತ್ತಿತ್ತು. ನನ್ನನ್ನು ಒಳಗೆ ಬರ ಹೇಳಿದ ಹುಡುಗನೇ ಅವರನ್ನು ಅಗತ್ಯಕ್ಕಿಂತ ಬಲವಂತವಾಗಿ ಹೊರಗೆ ಓಯ್ದಿದ್ದ. ಮಧ್ಯದಲ್ಲಿ ಕುಳಿತಿದ್ದ ಲಂಕೇಶ್ ಮತ್ತು ಸುತ್ತ ಕುಳಿತವರ ಬಾಯಿಂದ ಒಂದೇ ಸಮಯಕ್ಕೆ ಮಾತುಗಳು, ಉದ್ಗಾರಗಳು ಕೇಳಿಬಂತು. ಮೊದಲೇ ಅಲ್ಲಿನ ಪರಿಸಕ್ಕೆ ಪರದೇಶಿಯಾಗಿದ್ದ ನಾನು ತಬ್ಬಿಬ್ಬಾಗಿ ನಿಂತಿದ್ದೆ. ಅವರ ಮಾತುಗಳು ಉದ್ಗಾರಗಳು ಅಸ್ಪಷ್ಟವಾಗಿದ್ದವು. ಸ್ಪರ ಇಲ್ಲಿಂದ ಬಂತು ಎಂದು ಆ ಕಡೆ ನೋಡಿದರೆ, ಅಲ್ಲಿ ಕೂತಿದ್ದವರು ಬಾಯಿ ತೆರೆದಿರಲಿಲ್ಲ, ಮತ್ತೆ ಈ ಕಡೆ ನೋಡುವ ಹೊತ್ತಿಗೆ, ಮತ್ತೊಂದು ಕಡೆಯಿಂದ ಸ್ವರ ಬಂದಂತೆ, ಸರಿ ಸ್ವರ ಬಂದಕಡೆ ಕತ್ತು ಹೊರಳಿಸಿದರೆ ಅವರು ಮಾತು ಮುಗಿಸಿ ಬಾಯಿ ಮುಚ್ಚಿಕೊಳ್ಳುತ್ತಿದ್ದರು. ಒಟ್ಟಾರೆ ಯಾರು ಏನು ಹೇಳಿದರು ಎಂದು ಗೊತ್ತೇ ಆಗಲಿಲ್ಲ. ಆಗ ಅವೆಲ್ಲಾ ಮುಖ್ಯ ಅಂತ ಕೂಡ ಅನ್ನಿಸಲಿಲ್ಲ-ಹೊರಗೆ ಹೋದವರ ಬಗ್ಗೆ ತುಸು ಅನುಕಂಪ ಬಿಟ್ಟು.

ಖಾಲಿ ಇದ್ದ ಖುರ್ಚಿಯಲ್ಲಿ ಕುಳಿತೆ. ಪಕ್ಕಕ್ಕಿದ್ದ ಶರ್ಮ ಅವರು ನನ್ನ ಗಲಿಬಿಲಿ ಅರ್ಥವಾದವರಂತೆ `ಅವರು ಕಿ.ರಂ ನಾಗರಾಜ್’ ಎಂದರು. ನಾನು `ಓಹ್’ ಎಂದು ತಲೆ ಮುಂದೂಗಿದೆ ಕಾರಣ ನನಗೆ ಅವರ ಪರಿಯಚವಿರಲಿಲ್ಲ. ಈ ದೇಶದಲ್ಲಿದ್ದು ಆಗಲೇ ೧೫ ವರ್ಷಗಳಾಗಿ ಹೋಗಿತ್ತು. ಆಶ್ಚರ್ಯ ಅಂದರೆ, ಹೊರನಾಡಿನ ಮ್ಯಾನರಿಸಂಗಳು ಎಷ್ಟು ಸುಲಭದಲ್ಲಿ ನಮ್ಮ ಹೊಕ್ಕುಬಿಡುತ್ತವೆ. ನನಗೆ ಸಂಬಂಧಿಸಿದಲ್ಲದ್ದನ್ನು ಕೆಣಕದೆ ಕೊಡವಿಕೊಂಡು ಹೋಗುವ ಪರಿ `ಓಃ’ ಉದ್ಗಾರ! ನಾನೂ ಅದನ್ನೇ ಮಾಡಿದ್ದೆ. ಆದರೂ ಅಹಿತವಾದ ಆ ದೃಶ್ಯವೊಂದಕ್ಕೆ ನಾನು ಸಾಕ್ಷಿಯಾಗಿದ್ದೆ.

ಲಂಕೇಶ್ ಅವರು ಒಳಗೆ ಬರ ಹೇಳಿದ್ದು ನಿಜಕ್ಕೂ ನನ್ನನ್ನಲ್ಲ. ನನ್ನನ್ನು ಮತ್ತಾರೋ ಎಂದು ತಿಳಿದು. ನಾನು ಹಾಗು ಅಲ್ಲಿದ್ದ ಮತ್ತೊಬ್ಬ ಕವಿಯತ್ರಿ ಉಟ್ಟಿದ್ದ ಸೀರೆಯ ಬಣ್ಣ ಒಂದೇ ಆಗಿತ್ತು. ದೂರದಿಂದ ಅವರಷ್ಟೇ ಎತ್ತರ ಆಕಾರ ಇದ್ದ ನಾನೂ ಅವರಂತೆ ಲಂಕೇಶರ ಮಬ್ಬು ಕಣ್ಣಿಗೆ ಕಂಡಿದ್ದೆನೋ ಏನೋ. ಅವರಿಗೂ ನನ್ನಷ್ಟೇ ಪೆಚ್ಚಾಗಿರಬೇಕು. ಶರ್ಮ ಅವರು ಗೌರವದಿಂದ ಮಾತನಾಡಿದರು. ಎಲ್ಲಿದ್ದೀನಿ, ಏನು ಮಾಡ್ತೀನಿ, ಅಲ್ಲೂ ನನ್ನ ವೇಷಭೂಷಣ ಇದೇನಾ? ಎಂದೆಲ್ಲಾ ಮಾತಾಯಿತು. ನನ್ನ ಪೆಚ್ಚುತನಕ್ಕೆ ಲಂಕೇಶರ ಹತ್ತಿರ ಏನಾದರೂ ಮಾತನಾಡಬೇಕೆಂಬ ನನ್ನದೇ ಆದ ಒಳ ಒತ್ತಾಯಕ್ಕೆಂಬಂತೆ, ಅಮೆರಿಕಾಗೆ ಬಂದಿದ್ದ ಸೆಮಿ ಸೆಲಬ್ರೆಟಿಯೊಬ್ಬರ ಹೆಸರು ಹೇಳಿದೆ (ಲಂಕೇಶರಿಗೆ ನಾನು ಹೆಸರಿಸಿದ ವ್ಯಕ್ತಿಯ ಬಗ್ಗೆ ಅಹಿತವಾದ ನೆಂಟಿತ್ತು ಎಂದು ನನಗೆ ಗೊತ್ತಿರಲಿಲ್ಲ- ಸತ್ಯವಾಗಿಯೂ. ನನಗದು ತಿಳಿಯುವಷ್ಟರಲ್ಲಿ ಹಲವಾರು ವರ್ಷಗಳೇ ಕಳೆದಿತ್ತು.) ಅಷ್ಟೊಂದು ಜನ ಅಪರಿಚಿತರ ಮಧ್ಯ ಕುಳಿತ ನನಗೆ ಮುಜಗರ ಹೆಚ್ಚಾಯ್ತು. ಕೆಲವೇ ನಿಮಿಷಗಳಲ್ಲಿ ಬಾಗಿಲ ಬಳಿ ಕಾಣಿಸಿಕೊಂಡ ಗೆಳತಿ ನನ್ನನ್ನಲ್ಲಿಂದ ಪಾರು ಮಾಡಿದಳು. ಅವಳಿಗೂ ಆಶ್ಚರ್ಯ ಆ ಗುಂಪಿಗೆ ನಾನು ಹೇಗೆ ಸೇರಿದೆ ಎಂದು!Photo: Netraraju

ಕೀರಂ ಅವರನ್ನು ಆ ಸನ್ನಿವೇಶದಲ್ಲಿ ಕಂಡದ್ದು ನನ್ನ ಕೆಟ್ಟಗಳಿಗೆ. ನಿಮ್ಮೆಲ್ಲರಿಗೆ ಒದಗಿದ ಸುಂದರ ಅರ್ಥಪೂರ್ಣವಾದ ಅವರ ಒಡನಾಟದ ಗಳಿಗೆ ನನಗೆ ಒದಗಿ ಬರಲಿಲ್ಲ. ಈ ಮಾತು ಹೇಳಲು ಕಾರಣವಿದೆ. ಕೆಲ ತಿಂಗಳ ಕೆಳಗೆ ನಿಮ್ಮ ಜೊತೆಯಲ್ಲಿ ಮಾತನಾಡುವಾಗ- ಬೇಂದ್ರೆಯವರ, `ತುಂ ತುಂ ತುಂ’ ಹಾಡನ್ನು ನಾನು ಪ್ರದರ್ಶಿಸಲಿದ್ದ ರೂಪಕ ಒಂದರಲ್ಲಿ ಬಳಸಿಕೊಳ್ಳುತ್ತಿರುವೆ, ಬೇಂದ್ರೆಯವರು ಕಲ್ಯಾಣ ಕ್ರಾಂತಿಯ ನಂತರ ಜಂಗಮನೊಬ್ಬ ಹಾಡಿದ ಸನ್ನಿವೇಶಕ್ಕೆ ಬರೆದಿದ್ದರಂತೆ ಎಂದು ನಾನಿಲ್ಲೋ ಕೇಳಿದ್ದನ್ನು ನಿಮ್ಮ ಮುಂದೆ ಹೇಳಿದೆ. ತಕ್ಷಣವೇ ಇದರ ಬಗ್ಗೆ ಗೊತ್ತಿರುವವರನ್ನು ಈಗಲೇ ಕೇಳೋಣ ಎಂದು ಕಿರಂ ಅವರನ್ನು ಫೋನಲ್ಲಿ ಮಾತನಾಡಿಸಿದಿರಿ.. ಕೀರಂ, ಅದು ಬಸವನ ಜೀವನದ ಮೂರು ಹಂತವನ್ನು ತಿಳಿಸುವ ಕವನ; ಎಂದರು. ಅಂತಹ ಮಹತ್ವದ ಕವಿತೆಯನ್ನು ವಿಸ್ತರಿಸಿ ಹೇಳುವವರೊಬ್ಬರು ಸಿಕ್ಕರಲ್ಲಾ ಎಂಬ ನನ್ನ ಸಂತೋಷ ಹೇಳತೀರದಾಗಿತ್ತು (ಇಷ್ಟರಲ್ಲಿ ನನಗವರ ಬಗ್ಗೆ ಚನ್ನಾಗಿ ಗೊತ್ತಿತ್ತು). ಅವರು ಫೋನ್ ನಲ್ಲಿ ಅದೇ ವೇಳೆಗೆ ವಿವರಿಸಿ ತಿಳಿಸಲು ಸಿದ್ಧರಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ನೀವು ಬಸವರಾಜು ನಾಳೆ ನಿಮ್ಮ ಮನೆಗೆ ಬಂದು ಬರೆದುಕೊಳ್ಳುತ್ತಾರೆ, ಎಂದಿದ್ದಕ್ಕೆ ಅವರು ಒಪ್ಪಿದ್ದರು. ಅವರು ಅಷ್ಟು ಹೇಳಿದ್ದನ್ನೇ ನಾನು ನನ್ನವರೆಲ್ಲರಿಗೂ ಹೇಳಿಕೊಂಡು ಸಂಭ್ರಮಿಸಿದೆ. ಅದಾದ ನಂತರ ಬಹಳಷ್ಟು ವಾರ ಬಸವರಾಜು ಅದರ ಬಗ್ಗೆ ಬರೆದಾರು ಎಂದು ಕೆಂಡಸಂಪಿಗೆಯ ಪುಟ ಹುಡುಕಿದ್ದೆ. ಜೊತೆಗೆ ನನ್ನವರೆಲ್ಲರೂ! ಬಸವರಾಜು ಬರೆದದ್ದು ಬೇರೆಯೇ ಬರಹಗಳು.

ಕಳೆದ ಕೆಲವೊಂದು ವಾರಗಳಿಂದ ನಾನೇ ಕೀರಂ ಅವರ ಪೋನ್ ನಂಬರ್ ತೆಗೆದುಕೊಂಡು ಕರೆಯಬೇಕು ಎಂಬ ಆಸೆ ಬಲವಾಗಿ ಕಾಡಿತ್ತು. ತಪ್ಪು ನನ್ನದು, ನಾನು ಕರೆಯಲೇ ಇಲ್ಲಾ. ಕೀರಂ ಅವರು `ತುಂ ತುಂ’ ಕವಿತೆಯನ್ನು ವಿವರಿಸಿ ಹೇಳದೇ ಹೋದರಲ್ಲಾ, ಅವರಿಂದ ನಾನು ತಿಳಿಯದೇ ಹೋದೆನಲ್ಲಾ ಎಂಬ ಕೊರತೆ-ಕೊರಗು ಎರಡೂ ಜೊತೆ ಜೊತೆಯಲ್ಲಿ ಗಂಟಲು ಹಿಂಡುತ್ತಿವೆ.

ಗೆಳತಿಯೊಬ್ಬಳು ಹೇಳುತ್ತಿದ್ದಳು, ಅವರ ದೇಹವನ್ನು ತಂದಾಗ ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ಎಂತಹ ವ್ಯಕ್ತಿ. ಹತ್ತು ಗಂಟೆ ಸಂಶೋಧನೆ ಮಾಡುವುದೂ ಒಂದೇ, ಅವರ ಒಂದು ಗಂಟೆಯ ಮಾತು ಕೇಳುವುದು ಒಂದೇ… ಎಂದೆಲ್ಲಾ ಅವರ ಬಗ್ಗೆ ಹೇಳುತ್ತಿದ್ದಾಗ, ನಿಜಕ್ಕೂ ನಾಡು, ನುಡಿ, ನಾವು ಕಳೆದುಕೊಂಡಿದ್ದೇನು ಎಂದು ಮನವರಿಕೆಯಾಯ್ತು. ಅವರ ಮನೆಯಂಗಳದಲ್ಲಿ ನಾನಾಗಲಿ, ನಮ್ಮ ಮನೆಯಂಗಳದಲ್ಲಿ ಅವರೊಮ್ಮೆಯಾಗಲೀ ಬಂದು ಹೋಗಲಿಲ್ಲವಲ್ಲಾ ಅನ್ನಿಸುವಾಗ ಕಣ್ಣು ಒದ್ದೆಯಾಯ್ತು. ನೀವೂ ಅಂದಿದ್ದಿರಿ, ಕೀರಂ ಅವರನ್ನು ಏಕೆ ನೀವುಗಳು ಅಮೇರಿಕಾಕ್ಕೆ ಕರೆಸಿಕೊಳ್ಳಬಾರದು ಎಂದು. ನನ್ನಲ್ಲಿ ಉತ್ತರವಿರಲಿಲ್ಲ ಎಂದು ಒಪ್ಪಿಕೊಳ್ಳಲು ನಾಚಿಕೆ ಎನ್ನಿಸಿತ್ತು. ಆದರೆ ಜವರಾಯನಂದು ಅವರ ಬಳಿ ಬರಬಾರದಿತ್ತು. ಜಲ್ಲೆಂದು ಸುರಿದ ಬೆವರು, ಎದೆ ನೋವು-ಹೃದಯಾಘಾತದ ಲಕ್ಷಣ. ಜೊತೆಯಲ್ಲಿದ್ದವರು ಗಮನಿಸಬೇಕಿತ್ತು. ಈ ಸಾವು ನ್ಯಾಯವಲ್ಲ-ಅನ್ಯಾಯ.

ಸಾವಿನ ಸೂತಕದ ಮನದಲ್ಲಿ ನಿಮ್ಮಲ್ಲೊಂದು ಬೇಡಿಕೆ. ದಯವಿಟ್ಟು ಸ್ವಾರ್ಥಿ ಎನ್ನದಿರಿ. `ತುಂ ತುಂ’ ಕವಿತೆಯನ್ನು ಅರ್ಥೈಸುವ ಯಾರೊಬ್ಬರನ್ನಾದರೂ ಹುಡುಕಿ ಕೊಡುವಿರಾ? ಕೀರಂ ಅವರ ಸಹಚರರೋ, ಸಹ ಧರ್ಮಿಗಳೋ, ಶಿಷ್ಯರೋ, ಬಂಧುಗಳೋ, ಓರಿಗೆಯವರೋ, ಸಹಮನೋಧರ್ಮಿಗಳೋ ಯಾರಾದರೂ ಈ ಕವಿತೆಯ ಬಗ್ಗೆ ಅವರಿಂದ ಅರಿತಿರಲಾರರಾ? ದಯವಿಟ್ಟು ಪ್ರಯತ್ನಿಸಿ.

ಇತಿ,
ಶಶಿಕಲಾ ಚಂದ್ರಶೇಖರ್.