ಹೀಗೊಂದಿಷ್ಟು

ದಾರಿಯಲಿ ದಿಕ್ಕೆಟ್ಟು
ಖಾಲಿ ಅಲೆವಾಗ
ಗೊತ್ತು ಗುರಿಯಿಲ್ಲದೆ
ಯಾರೋ ಅನಾಮಿಕರು
ಅನಾಮತ್ತಾಗಿ
ಎದುರಾಗಿ ಅಪ್ಪಿಕೊಂಡುಬಿಟ್ಟಾಗ
ಕವಿತೆ
ಆಗುವುದು
ಪುಳಕ

ಇನ್ನೇನು ಇದೆ ಕೊನೆಯೆಂದು
ಕಣ್ಣಂಚಲ್ಲಿ ನೀರು ತುಂಬಿಕೊಂಡಾಗಲೇ
ಕಾಣಿಸಿಕೊಳ್ಳುತ್ತದೆ
ಕನಸು
ಮಿಂಚು ಸುಳಿವುದು ಆವಾಗ!

ಬಸ್ಸು ಥೀಯೇಟರ್ ಬಸ್ಟ್ಯಾಂಡಿನಲ್ಲಿ
ಪಕ್ಕ ಕುಳಿತವರು
ವಿನಾಕಾರಣ
ಮೌನ ಮುರಿದಾಗ
ಮಾತಿಗಿಳಿದಾಗ
ಆಗುತ್ತದೆ
ಎಂಥದೋ ಸಮಾಧಾನ

ಮೊನ್ನೆ ತಾನೆಂಬಂತೆ
ಮಾತನಾಡಿದ್ದ
ಪರಿಚಯ ಕಡಿದು ಹೋಗಿದ್ದ
ಶಾಲೆಯ ಸಹಪಾಠಿ
ಆಸ್ಪತ್ರೆಯಲ್ಲಿ ಟೋಕನ್ ಕೊಡುವ
ನರ್ಸ್ ಅನಿತಾ ಆಂಟಿ
ರಸ್ತೆಯ ತಿರುವಿನ
ಮೂಲೆಯಂಗಡಿಯಲ್ಲಿ
ಚಪ್ಪಲಿ ಹೊಲಿಯುತ್ತಿದ್ದ
ಹರಿದ ಬ್ಯಾಗಿಗೆ ಝಿಪ್ಪು
ಕೂಡಿಸುತ್ತಿದ್ದ
ಮುದುಕ
ತೀರಿಹೋದರಂತೆ
ಹಾಗೆ ಸದ್ದಿಲ್ಲದೆ ಎದ್ದು ಹೋಗುವ ಮುಂಚೆ
ಹೇಗೋ ಏನೋ
ನಮ್ಮ ಸಂಪರ್ಕಕ್ಕೂ ಬಂದುಹೋದರಲ್ಲ
ಏನದು?
ಯಾಕದು?
ಅನ್ನದ ಋಣ ಎಂದು ಅಮ್ಮ
ಆಕಾಶ ನೋಡಿ ಕೈಮುಗಿಯುತ್ತಾಳೆ
ನನಗೆ ವಿಶಾಲ ವಿಶ್ವದ ಪುಟ್ಟ ಕೋಣೆಯ
ಸೂಜಿಮೊನೆಯ ಜಾಗೆಯೊಂದು
ಖಾಲಿಯಾಯಿತಲ್ಲ
ಎಂದು ದಿಗಿಲಾಗುತ್ತದೆ
ಅದೇ ಹೊತ್ತಿಗೆ
ಅಕ್ಕನ ಮಗುವಿನ ಅಳು
ಜಗತ್ತಿಗೆ ಎತ್ತಿಕೊಳ್ಳುವಂತೆ
ರಚ್ಚೆ ಹಿಡಿಯುತ್ತದೆ

ದಾದಾಪೀರ್ ಜೈಮನ್ ಯುವ ಲೇಖಕ
ವೃತ್ತಿಯಿಂದ ಅಧ್ಯಾಪಕ
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು
ಇವರ ಹಲವಾರು ಕತೆ ಮತ್ತು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ