ಪೇರಳೆಯ ಹುಚ್ಚಿಗೆ ನಾವು ಅನೇಕ ಬಾರಿ ಚಿಗಳಿ ಇರುವೆಗಳಿಂದ ಕಚ್ಚಿಸಿಕೊಂಡದ್ದಿದೆ. ಅದರ ಕಡಿತದ ವಿಪರೀತ ಉರಿಯನ್ನು ಸಹಿಸಿಕೊಳ್ಳುವುದೇ ಅಧ್ವಾನ. ಒಮ್ಮೆ ಮನೆಯ ಹಿತ್ತಲಲ್ಲಿದ್ದ ಪೇರಳೆ ಮರಕ್ಕೆ ಹತ್ತಿದವನು ಹಣ್ಣಾದ ಪೇರಳೆ ಕಂಡು ಬಾಗಿದ್ದ ರೆಂಬೆಯೊಂದರ ಮೇಲೆ ಹೋಗಿದ್ದೆ. ಇನ್ನೇನು ಹಣ್ಣೆಟಕುತ್ತದೆ ಎನ್ನುವಷ್ಟರಲ್ಲಿ ತಲೆಯ ಸ್ವಲ್ಪವೇ ಮೇಲಿದ್ದ ಚಿಗುಳಿ ಇರುವೆಗಳ ಗೂಡಿಗೆ ಕೈ ತಾಗಿತು. ಒಂದು ರಾಶಿ ಇರುವೆಗಳು ನನ್ನ ಬನಿಯನ್ನಿನೊಳಗೆ ಹೊಕ್ಕಿ ಬಿಟ್ಟವು. ಅವುಗಳ ಕಡಿತದ ಉರಿ, ನೋವು ಸಹಿಸಿಕೊಳ್ಳಲಾಗದೆ ಮರದಿಂದ ಜಿಗಿಯಲೇಬೇಕಾಯಿತು. ತೊಟ್ಟ ಒಂದೊಂದೆ ವಸ್ತ್ರಗಳನ್ನು ಬಿಚ್ಚಿ ನೆಲಕ್ಕೊಗೆಯತೊಡಗಿದೆ. ಅರ್ಧಗಂಟೆಗೂ ಮೀರಿ ಅವುಗಳ ನನ್ನನ್ನು ಬೆತ್ತಲೆ ಮಾಡಿ ಶಿಕ್ಷಿಸಿದ ಬಳಿಕ ಸಮಾಧಾನವಾಯಿತು.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ
ನಮ್ಮ ಮನೆಯಿಂದ ಕೆಳಗಿರುವ ಕಾಲುದಾರಿಯಲ್ಲಿ ನಡೆಯುತ್ತ ಹೋದರೆ ಆ ಕಾಡುದಾರಿ ಒಂದು ಹಳೆಯ ಕಾಲದ ಕೆರೆಯ ಬಳಿಗೆ ತಲುಪುತ್ತದೆ. ಮೊಸಳೆಯೋ, ಹೆಬ್ಬಾವೋ ಮರಿ ಮಾಡಲು ಪ್ರಶಸ್ತ ಸ್ಥಳವನ್ನೆವಷ್ಟು ಕಾಡು ತುಂಬಿ ಹೋಗಿರುವ ಆ ಕೆರೆಯ ಬದಿ ಕೆಲವು ಕಾಡುಹಂದಿ ಕೆದರಿಹೋದ ಕೆಸರಿನಲ್ಲಿ ಭಯ ಭೀತಗೊಳಿಸುತ್ತದೆ. ಬೇಸಿಗೆಯಲ್ಲಿ ಮೊಣಕಾಲಿನಷ್ಟು ನೀರು ನಿಲ್ಲುವ ಆ ಕಾಡಿನ ಕೆರೆಯಲ್ಲಿ ಅದೆಷ್ಟು ಮೀನುಗಳು ಇರಬಹುದೋ; ಆಗೊಮ್ಮೆ ಈಗೊಮ್ಮೆ ಒಂಟಿ ಕಾಲಿನ ಮೇಲೆ ತಪಸ್ಸು ಮಾಡುತ್ತ ಕೊಕ್ಕರೆಗಳು ದಿನವೂ ಮೀನು ಹಿಡಿಯುತ್ತಿರುತ್ತದೆ. ಹತ್ತಿರದಲ್ಲೇ ಒಂದಷ್ಟು ಗೆದ್ದಲು ಗೂಡು. ನಾವು ಗೆದ್ದಲು ಗೂಡೆಂದರೆ ಹಾವಿನ ಆವಾಸ ಸ್ಥಾನಗಳೆಂದು ಅವುಗಳನ್ನು ಒಡೆದು ಹಾಕಿ ಬರುವುದುಂಟು. ಹಾಗೆ ಮಾಡಿದ ಮರುದಿನಕ್ಕೇ ಹಸಿ ಜೇಡುಮಣ್ಣು ಲೇಪಿತ ಗೋಡೆಗಳು ತಯ್ಯಾರಾಗಿ ಬಿಡುತ್ತಿದ್ದವು. ಆಗಲೂ ನಮ್ಮ ಊಹೆ ಇದು ಹಾವುಗಳದ್ದೇ ಕೆಲಸ ಎಂದು.
ಒಂದು ದಿನ ನಾನು ಗೆಳೆಯರ ಜೊತೆಗೂಡಿ ಅದೇ ಕೆರೆಯ ಬಳಿ ರಬ್ಬರು ಬಿಲ್ಲು (ಕವಣೆ) ಹಿಡಿದು ಹಕ್ಕಿಗೆ ಗುರಿ ಇಡುತ್ತಿದ್ದೆವು. ಅಲ್ಲೇ ಹತ್ತಿರದಲ್ಲಿ ತರಗೆಲೆಯ ಮೇಲೆ ಏನೋ ಹರಿಯುವ ಸದ್ದಾಗಿ ನಮ್ಮ ಏಕಾಗ್ರತೆ ತಿರುಗಿತು. ಕೇರೆ ಹಾವೊಂದು ಕೆರೆಯ ಬಳಿಯ ಕಪ್ಪೆಗಳ ಜಾಡು ಹಿಡಿದು ಹುಡುಕುತ್ತ ಮತ್ತೆ ಪೊದೆಗಳ ಮಧ್ಯೆ ಮರೆಯಾಯ್ತು. ಪಟ್ಟು ಬಿಡದ ನಾವು ರಬ್ಬರು ಬಿಲ್ಲಿನಲ್ಲಿ ಗುರಿ ಇರಿಸದೆ ಪೊದೆಗಳ ಮಧ್ಯೆ ಅಂದಾಜು ಮಾಡಿ ಕಲ್ಲು ಹೊಡೆದಿದ್ದೆವು. ಸರಿಯಾಗಿ ನಾಟಿರಬೇಕು, ಪೊದೆಯ ಮರೆಯಲ್ಲಿದ್ದ ಕೇರೆ ಹಾವು ನೋವಿನಿಂದ ಕೊಸರಾಡುತ್ತ ಹರಿದುಕೊಂಡು ಹೋಗಿ ನಾವೇ ಒಡೆದು ಹಾಕಿದ್ದ ಗೆದ್ದಲು ಗೂಡಿನೊಳಕ್ಕೆ ನುಗ್ಗಿತು. ಮೈ ಪೂರ್ತಿ ಒಳಗೆ ಹೋಗಿರಲಿಲ್ಲ. ಅಷ್ಟರಲ್ಲಿ ಹಾವಿನ ಮೈತುಂಬಾ ಬಿಳಿಯ ಗೆದ್ದಲುಗಳು ಏಕಾಏಕಿ ದಾಳಿ ಮಾಡಿದ ಪರಿಣಾಮವೋ ಏನೋ, ಮರುಕ್ಷಣದಲ್ಲೇ ನೋವಿನಿಂದ ಕೊಡವಿಕೊಳ್ಳುತ್ತಾ ಕೇರೆ ಮತ್ತೆ ಪೊದೆಗಳ ಮಧ್ಯೆ ಮರೆಯಾಯಿತು. ಎಲ್ಲವನ್ನೂ ಕುತೂಹಲದಿಂದ ನಾವು ನೋಡುತ್ತ ನಿಂತಿದ್ದೆವು. ಹಾವು ಮರೆಯಾದ ಮೇಲೆ ಒಡೆದ ಗೂಡಿನ ಇಕ್ಕೆಲಗಳಲ್ಲಿ ಬ್ರಿಟಿಷ್ ಕಾಲಾಳುಗಳಂತಹ ಬಿಳಿಯ ಗೆದ್ದಲುಗಳು ಜಮಾಯಿಸಿದ್ದವು. ಇನ್ನಷ್ಟು ಗೂಡುಗಳಿಗೆ ಹಾನಿ ಮಾಡಿ ಹಕ್ಕಿಯೂ ಸಿಗದ ಬೇಸರದಿಂದ ನಾವು ಜಾಗ ಖಾಲಿ ಮಾಡಿದೆವು.
“ಹೇ, ಅವರಿಬ್ಬರು ತಬ್ಳುಕು ಮರದಿಂದ ಬಿದ್ದಿದ್ದಾರೆ. ಆಸ್ಪತ್ರೆಗೆ ಕೊಂಡು ಹೋಗಿದ್ದಾರಂತೆ” ಶಾಲೆಯಲ್ಲಿ ಯಾರೋ ಹುಡುಗನ ಬಾಯಿಯಿಂದ ಬಿ.ಬಿ.ಸಿ ನ್ಯೂಸ್ ಬಂತು. “ಯಾರಂತೆ, ಎಲ್ಲಿಯಂತೆ” ಥರಾವರಿ ಪ್ರಶ್ನೆಗಳು. ಕೆಲವರು “ಮಟಮಟ ಮಧ್ಯಾಹ್ನ ಅಲ್ವಾ, ದೆವ್ವಗಳು ಕೆಳಗೆ ದೂಡಿರಬಹುದು” ಎಂದರು. ಯಾವುದಕ್ಕೂ ನನ್ನೊಳಗೊಂದು ಹೆದರಿಕೆ ಬೆಳೆದಾಗಿತ್ತು. ಆ ಇಬ್ಬರ ಹುಡುಗರ ಜೊತೆ ಸೇರಿಕೊಂಡು ನಾವು ಅಲ್ಲೇ ಪಕ್ಕದಲ್ಲಿ ಹಿಂದಿನ ದಿನ ಗೆದ್ದಲು ಗೂಡು ಒಡೆದು ಹಾಕಿದ್ದೆವು. ಅದು ಹಾವಿನ ಹುತ್ತಗಳೆಂದೂ, ನಾಗಿಣಿ ಮನುಷ್ಯ ರೂಪದಲ್ಲಿ ಬಂದು ಉಪಟಳ ಕೊಡಬಹುದಾಗಿಯೂ ವಿಪರೀತ ನಂಬಿ ಬಿಟ್ಟಿದ್ದೆ. ಬಹುಶಃ ಈ ಹುಡುಗರು ಹೀಗೆ ಬೀಳಲು ಅದೇ ಕಾರಣವಿರಬಹುದೆಂದು ಭಾವಿಸಿದ್ದೆ.
ಆ ಸಂಜೆ ಶಾಲೆ ಬಿಟ್ಟೊಡನೆ ಆ ತಬ್ಳುಕು ಮರದ ಕಡೆ ದೌಡಾಯಿಸಿದೆ. ಮುರಿದು ಬಿದ್ದ ನಾಲ್ಕು ಕೊಂಬೆಗಳು. ಒಂದು ರಾಶಿ ಚಿಗುಳಿ ಇರುವೆಗಳು ಮತ್ತು ಗೂಡು. ಕೂಲಂಕುಶವಾಗಿ ಆ ಸ್ಥಳವನ್ನೊಮ್ಮೆ ಅವಲೋಕಿಸಿದೆ. ತುದಿಯ ಗೆಲ್ಲು ಮುರಿದು ಬಿದ್ದಿತ್ತು. ಬಹುಶಃ ಇಬ್ಬರು ಹುಡುಗರು ತಬ್ಳುಕು ಕೊಯ್ಯುವುದಕ್ಕೆ ಮೇಲೆ ಏರಿದ್ದಾರೆ. ಒಬ್ಬನಿಗೆ ಈ ಚಿಗುಳಿ ಇರುವೆ ಕಚ್ಚಿದೆ. ಆ ಆಘಾತದಲ್ಲಿ ಚಡಪಡಿಸುವವನ ಆಯತಪ್ಪಿದೆ. ಅವನು ಬೀಳುವ ರಭಸಕ್ಕೆ ಕೆಳಗಿನವನ್ನು ನಿಂತ ಕೊಂಬೆ ಹಿಡಿಯಲು ನೋಡಿದ್ದಾನೆ. ಅಷ್ಟರಲ್ಲೇ ಆ ಕೊಂಬೆಯೂ ಮುರಿದು ಇಬ್ಬರೂ ಧರಾಶಾಯಿಯಾಗಿದ್ದಾರೆ. ಬಿದ್ದಿದ್ದ ನಾಲ್ಕು ಗೆಲ್ಲುಗಳಲ್ಲಿನ ಹಣ್ಣುಗಳನ್ನು ಹೆಕ್ಕಿಕೊಂಡು ಕಿಸೆಗೆ ತುಂಬಿ ಗೆದ್ದಲು ಗೂಡಿದ್ದಲ್ಲಿಗೆ ಬಂದೆ. ಗೆದ್ದಲು ಯಥಾಪ್ರಕಾರ ಗೂಡು ಕಟ್ಟಿದ್ದು ನೋಡಿ ಆಶ್ಚರ್ಯದಿಂದಲೇ ಮನೆಯ ದಾರಿ ಹಿಡಿದೆ.
ಗೆದ್ದಲುಗಳು ಇರುವೆ ಜಾತಿಗೆ ಸೇರಿದಂತವುಗಳೇ. ಅವುಗಳಲ್ಲಿ ಗಂಡು, ಹೆಣ್ಣು ಮತ್ತು ಸೈನಿಕ ಇರುವೆಗಳೆಂಬ ಒಕ್ಕೂಟವಿದೆ. ನಿಶಾಚರಿಗಳಾದ ಗೆದ್ದಲುಗಳು ಬಿಸಿಲಿನ ತೀಕ್ಷ್ಣತೆಯನ್ನು ಸಹಿಸವು. ಅದೇ ಕಾರಣಕ್ಕಾಗಿ ಮಣ್ಣಿನ ಗೂಡುಗಳನ್ನು ನಿರ್ಮಿಸಿ ತಂಪಾಗಿರಲು ಶ್ರಮಿಸುತ್ತವೆ.
ಮಳೆಗಾಲದ ಪ್ರಾರಂಭದ ದಿನದಲ್ಲಿ ಮುಂಗಾರಿನ ಅಬ್ಬರ ಜೋರಿತ್ತು. ಮೊದಲ ಮಳೆಗಳ ಕಪ್ಪೆಗಳ ವರಾತ ಕಿವಿಗಡಚಿಕ್ಕುತ್ತಿದ್ದವು. ನಾನು ನೋಡುತ್ತಿದ್ದಂತೆ ನಮ್ಮ ಮನೆಯ ಎಡಕ್ಕಿದ್ದ ಸಣ್ಣ ಕೈ ತೋಟದ ಬಳಿಯ ಗೆದ್ದಲು ಗೂಡಿನ ಬಳಿ ಸಣ್ಣ ರಂಧ್ರವೊಂದರಿಂದ ಅಸಂಖ್ಯಾತ ಹುಳಗಳು ಹೊರಬರುತ್ತಿದ್ದವು. ಮಳೆ ಜೊತೆ ಸಿಡಿಲು ಇದ್ದುದರಿಂದ ಹೊರಗೆ ಹೋಗಿ ನೋಡುವಷ್ಟು ಧೈರ್ಯ ಸಾಕಾಗಲಿಲ್ಲ. ರಾಶಿಹುಳಗಳು ಶಾಲೆ ಬಿಟ್ಟಾಗ ಒಂದೇ ಸಮನೆ ಸಮವಸ್ತ್ರ ಹಾಕಿ ಗೇಟಿನ ಹೊರಗೋಡಿ ಬರುವ ಇಂಗ್ಲೀಷು ಮೀಡಿಯಂ ಮಕ್ಕಳಂತೆ ಕಾಣುತ್ತಿದ್ದವು. ಸುಮಾರು ಹೊತ್ತು ನೋಡಿ ಕಣ್ತುಂಬಿಕೊಂಡೆ.
ಆ ರಾತ್ರಿ ಕಪ್ಪೆಗಳ ಕೂಗು ಜೋರಿತ್ತು. ಇನ್ನೇನು ನಿದ್ದೆ ಮಾಡಲು ತಯ್ಯಾರಾಗಬೇಕೆನ್ನುವಷ್ಟರಲ್ಲಿ ಹೋದ ಕರೆಂಟು ಬಂತು. ಲೈಟ್ ಉರಿಯತೊಡಗಿದಂತೆ ಅಸಂಖ್ಯಾತ ಮಳೆಹಾತೆಗಳು ಉರಿಯುತ್ತಿರುವ ಬಲ್ಬು ದೀಪಕ್ಕೆ ಮುತ್ತಿಗೆ ಹಾಕಿದವು. ಬೆಳಕಿನ ಪ್ರಖರತೆಗೆ ತಲೆ ತಿರುಗಿ ಬೆಡ್ ಮೇಲೆ ಬಿದ್ದ ಹಾತೆಗಳನ್ನು ನೆಲಕ್ಕೆ ಹಾಕಿ ನಾನು ಮಲಗಿಕೊಂಡೆ. ಮಳೆ ಹಾತೆಗಳಿಂದ ರಕ್ಷಣೆ ಹೊಂದಲು ಬಲ್ಪ್ ಆರಿಸಿ ಮಲಗಿಕೊಂಡೆ. ಅಷ್ಟರಲ್ಲೇ ತಲೆ ದಿಂಬಿನಡಿಯಲ್ಲಿಟ್ಟಿದ್ದ ಮೊಬೈಲ್ ರಿಂಗಣಿಸಬೇಕೇ; ಯಾರೋ ಕರೆ ಮಾಡಿದ್ದರಿಂದ ಹೊದಿಕೆಯ ಒಳಗಡೆಯಿಂದಲೇ ಮಾತನಾಡಿದೆ. ಮಾತನಾಡಿ ವಾಟ್ಸಾಪ್ ಮೆಸೇಜೇನೋ ಓದಲು ಬಾಕಿಯಿದ್ದುದರಿಂದ ಅದನ್ನು ತಿಣುಕಿಕೊಂಡು ಮೊಬೈಲ್ ಸ್ಕ್ರೀನ್ ನೋಡಿದೆ. ಬೆಳಕು ಹೊದಿಕೆಯೊಳಗೆ ಬಿದ್ದಿದ್ದಷ್ಟೇ. ಮೊಬೈಲ್ ಸುತ್ತಲೂ ಮತ್ತೆ ಮಳೆಹಾತೆಯ ರಂಪ. ‘ಥತ್, ಹಾಳಾಗಲಿ’ ಎಂದು ಮೊಬೈಲ್ ಎಸೆದು ಮತ್ತೆ ಕಣ್ಣು ಮುಚ್ಚಿಕೊಂಡೆ. ಅಷ್ಟರಲ್ಲೆ ಆ ಸೂಜಿಯ ಮೊನೆ ಚುಚ್ಚಿದಂತಹ ನೋವು ಉರಿ ಒಮ್ಮೆಲೆ ಮೈಯೆಲ್ಲಾ ಪ್ರವಹಿಸಿದಂತಾಯಿತು. ನೋವೆದ್ದ ಕಡೆ ಕೈಗಳು ತಡಕಾಡಿದವು. ಅಷ್ಟರೊಳಗೆ ಬೆರಳೊಳಗೆ ಬಂಧಿಯಾದ ಸೂಜಿ ಡಾಕ್ಟರನ್ನು ತಪ್ಪಿಸಿಕೊಳ್ಳದಂತೆ ಹಿಡಿದು ಬಲ್ಪ್ ಉರಿಸಿದೆ. ನೋಡಿದರೆ ಅದೇ ಮಳೆಹಾತೆ. ಬೆರಳ ಮಧ್ಯೆ ವಿಲವಿಲನೆ ಒದ್ದಾಡುತ್ತಿದೆ. ‘ಅಯ್ಯೋ ನಿನ್ನ ಅಹಂಕಾರವೇ’ ಎಂದು ರೆಕ್ಕೆ ಮುರಿದು ಹಾಕಿದೆ. ಆ ರೂಪ ಕಂಡು ನಾನು ಅವಕ್ಕಾದೆ. ಥೇಟ್ ಇರುವೆ. ಬಣ್ಣವೊಂದು ಬಿಳಿ ಎಂಬುವುದು ಬಿಟ್ಟರೆ ಇರುವೆಗೆ ಒಡಹುಟ್ಟಿದ ಯುರೋಪಿಯನ್ ಸಹೋದರನಂತೆ ಕಂಡಿತು. ಅಲ್ಲೇ ಬಿದ್ದಿದ್ದ ರಾಶಿ ಮಳೆಹಾತೆಗಳನ್ನೆಲ್ಲಾ ಕೊಡವಿ ಹಾಕಿ ಚಾಪೆಯ ಹೊದಿಕೆ ಸರಿಪಡಿಸಿ ಮತ್ತೆ ಮಲಗಿದೆ.
ನಾನು ನೋಡುತ್ತಿದ್ದಂತೆ ನಮ್ಮ ಮನೆಯ ಎಡಕ್ಕಿದ್ದ ಸಣ್ಣ ಕೈ ತೋಟದ ಬಳಿಯ ಗೆದ್ದಲು ಗೂಡಿನ ಬಳಿ ಸಣ್ಣ ರಂಧ್ರವೊಂದರಿಂದ ಅಸಂಖ್ಯಾತ ಹುಳಗಳು ಹೊರಬರುತ್ತಿದ್ದವು. ಮಳೆ ಜೊತೆ ಸಿಡಿಲು ಇದ್ದುದರಿಂದ ಹೊರಗೆ ಹೋಗಿ ನೋಡುವಷ್ಟು ಧೈರ್ಯ ಸಾಕಾಗಲಿಲ್ಲ. ರಾಶಿಹುಳಗಳು ಶಾಲೆ ಬಿಟ್ಟಾಗ ಒಂದೇ ಸಮನೆ ಸಮವಸ್ತ್ರ ಹಾಕಿ ಗೇಟಿನ ಹೊರಗೋಡಿ ಬರುವ ಇಂಗ್ಲೀಷು ಮೀಡಿಯಂ ಮಕ್ಕಳಂತೆ ಕಾಣುತ್ತಿದ್ದವು.
ಪೇರಳೆ ಹಣ್ಣೆಂದರೆ ಬಾಲ್ಯ ಕಾಲದ ಕ್ರಶ್ಶು. ಅದು ಹುಡುಕಿಕೊಂಡು ಹೋಗಿ ಕದ್ದು ಇತರರ ಮನೆಯ ಬೇಲಿ ಹಾರಿ ಅಬ್ಬನ ಕೈಯಿಂದ ತಿಂದ ಪೆಟ್ಟಿಗೆ ಲೆಕ್ಕವಿರಲಿಕ್ಕಿಲ್ಲ. ಒಮ್ಮೆ ಪೇರಳೆ ಮರದಿಂದ ಬಿದ್ದು ತೊಡೆಯ ಭಾಗ ಹರಿದು ಆರು ಹೊಲಿಗೆಯೂ ಬಿದ್ದಿತ್ತು. ಈ ಪೇರಳೆಯ ಹುಚ್ಚಿಗೆ ನಾವು ಅನೇಕ ಬಾರಿ ಚಿಗಳಿ ಇರುವೆಗಳಿಂದ ಕಚ್ಚಿಸಿಕೊಂಡದ್ದಿದೆ. ಅದರ ಕಡಿತದ ವಿಪರೀತ ಉರಿಯನ್ನು ಸಹಿಸಿಕೊಳ್ಳುವುದೇ ಅಧ್ವಾನ. ಒಮ್ಮೆ ಮನೆಯ ಹಿತ್ತಲಲ್ಲಿದ್ದ ಪೇರಳೆ ಮರಕ್ಕೆ ಹತ್ತಿದವನು ಹಣ್ಣಾದ ಪೇರಳೆ ಕಂಡು ಬಾಗಿದ್ದ ರೆಂಬೆಯೊಂದರ ಮೇಲೆ ಹೋಗಿದ್ದೆ. ಇನ್ನೇನು ಹಣ್ಣೆಟಕುತ್ತದೆ ಎನ್ನುವಷ್ಟರಲ್ಲಿ ತಲೆಯ ಸ್ವಲ್ಪವೇ ಮೇಲಿದ್ದ ಚಿಗುಳಿ ಇರುವೆಗಳ ಗೂಡಿಗೆ ಕೈ ತಾಗಿತು. ಒಂದು ರಾಶಿ ಇರುವೆಗಳು ನನ್ನ ಬನಿಯನ್ನಿನೊಳಗೆ ಹೊಕ್ಕಿ ಬಿಟ್ಟವು. ಅವುಗಳ ಕಡಿತದ ಉರಿ, ನೋವು ಸಹಿಸಿಕೊಳ್ಳಲಾಗದೆ ಮರದಿಂದ ಜಿಗಿಯಲೇಬೇಕಾಯಿತು. ತೊಟ್ಟ ಒಂದೊಂದೆ ವಸ್ತ್ರಗಳನ್ನು ಬಿಚ್ಚಿ ನೆಲಕ್ಕೊಗೆಯತೊಡಗಿದೆ. ಅರ್ಧಗಂಟೆಗೂ ಮೀರಿ ಅವುಗಳ ನನ್ನನ್ನು ಬೆತ್ತಲೆ ಮಾಡಿ ಶಿಕ್ಷಿಸಿದ ಬಳಿಕ ಸಮಾಧಾನವಾಯಿತು. ಅಷ್ಟರಲ್ಲಿ ನನ್ನ ಬಿಳಿ ಮುಖ ರಕ್ತ ವರ್ಣಕ್ಕೆ ತಿರುಗಿತ್ತು. ಆ ಬಳಿಕ ಎಷ್ಟೋ ಸಲ ಇದಕ್ಕೊಂದು ಗತಿ ಕಾಣಿಸಬೇಕೆಂದು ತೆಂಗಿನ ಗರಿಗಳ ಸೂಟೆ ತಂದು ಅವುಗಳ ಗೂಡನ್ನೇ ಬೆಂಕಿ ಇಟ್ಟು ಸರ್ವನಾಶ ಮಾಡಿದ್ದೇನೆ.
ಒಮ್ಮೆ ವಿಚಿತ್ರವೊಂದು ನಡೆಯಿತು. ಮನೆಗೆ ಕೆಲಸಕ್ಕೆ ಬಂದಿದ್ದ ಐನಾತಿಯೊಬ್ಬ ಗೇರು ಮರದ ಎಲೆಗಳನ್ನು ಹೊಲಿದು ಗೂಡು ಕಟ್ಟಿದ್ದ ಚಿಗಳಿ ಇರುವೆಗಳನ್ನು ನೋಡಿದ್ದ. ಸಂಜೆ ಕೆಲಸ ಬಿಟ್ಟು ಹೊರಡುವಾಗ ಆ ಗೆಲ್ಲನ್ನೇ ಕತ್ತರಿಸಿ ಪ್ಲಾಸ್ಟಿಕ್ ಲಕೋಟೆಗೆ ಹಾಕಿಕೊಂಡು ಹೊರಡಲಿದ್ದ. “ಅದೇನು” ಎಂದು ಅವನಲ್ಲಿ ಕೇಳಿದರೆ ನಾಚಿಕೊಂಡವನಂತೆ ಬೀಡ ತಿಂದು ಕುಳಿಬಿದ್ದ ಕೆಂಪು ಹಲ್ಲುಗಳನ್ನೆಲ್ಲಾ ತೋರಿಸಿ ನಗುತ್ತಾ “ಚಟ್ನಿಗೆ” ಎಂದು ಹೇಳಿ ರೇಜಿಗೆ ಹುಟ್ಟಿಸಿದ. ಉಮ್ಮನಲ್ಲಿ ಕೇಳಿದರೆ “ಅದರಲ್ಲಿ ಅವರು ಚಟ್ನಿ ಮಾಡುತ್ತಾರಂತೆ” ಅಂತ ಹೇಳಿದರು. “ವ್ಯಾಕ್” ಎಂದು ಗಂಟಲವರೆಗೆ ಬಂದ ವಾಂತಿಯನ್ನು ತಡೆದು ವಿಷಯಾಂತರಿಸಿದೆ.
ಇರುವೆಗಳು ಸಂಘಜೀವಿಗಳು. ಈ ಜಗತ್ತಿನಲ್ಲಿ ಸುಮಾರು ೧೨೦೦ ಸಾವಿರ ಕ್ಕೂ ಅಧಿಕ ಪ್ರಭೇದಗಳಿವೆಯೆಂಬುವುದು ವಿಜ್ಞಾನಿಗಳ ಅಂಬೋಣ. ಜೀವ ಜಗತ್ತಿನಲ್ಲಿ ಇಂದಿಗೂ ನಿಗೂಢವಾಗುಳಿದ ಇರುವೆಗಳ ಅದೆಷ್ಟೋ ವೈಶಿಷ್ಟತೆಗಳಿದೆಯಂತೆ. ಸಾಮಾನ್ಯವಾಗಿ ಇರುವೆಗಳಲ್ಲಿ ಒಂದೊಂದು ಇರುವೆಗಳಿಗೆ ಒಂದೊಂದು ಕೆಲಸಗಳನ್ನು ಹೊರಿಸಲಾಗುತ್ತದೆ. ರಾಣಿ ಇರುವೆ ಸದಾ ಗೂಡಿನೊಳಗೆ ಧ್ಯಾನಸ್ಥೆಯಂತಿರುತ್ತದೆ. ಅವುಗಳನ್ನು ಕೂಡಲು ಗಂಡಿರುವೆಗಳಿರುತ್ತವೆ. ಕೆಲಸಗಾರ ಇರುವೆಗಳಿಗೆ ಇದ್ಯಾವುದರ ಜವಾಬ್ದಾರಿಯಿಲ್ಲ. ಗೂಡನ್ನು ವಿಸ್ತರಿಸುವುದು ಮತ್ತು ಆಹಾರವನ್ನು ದಾಸ್ತಾನು ಮಾಡುವುದೇ ಕೆಲಸ. ಎಲ್ಲಿ ಸಣ್ಣ ತುಂಡು ಆಹಾರ ತುಣುಕು ಬಿದ್ದರೂ ಅದರ ಕೈ ಕಾಲುಗಳು ಆಂಟೇನಾದಂತೆ ಗ್ರಹಿಸುತ್ತದೆ. ಕ್ಷಣದಲ್ಲೇ ಅವುಗಳ ಇರುವಿಕೆಯನ್ನು ಇತರ ಇರುವೆಗಳಿಗೆ ತಿಳಿಸುತ್ತವೆ. ಸ್ವಾರಸ್ಯವೆಂದರೆ ಇರುವೆಗಳ ದೃಷ್ಟಿ ಮಂದವಂತೆ. ‘ಆದರೆ ಅದು ಹೇಗೆ ಸರತಿ ಸಾಲು ತಪ್ಪಿಸದೆ ಚಲಿಸುತ್ತದೆ?’. ಈ ಪ್ರಶ್ನೆ ನನ್ನನ್ನು ಬಿಟ್ಟೂ ಬಿಡದೆ ಕಾಡಿತ್ತು.
ಒಮ್ಮೆ ಮಸೀದಿಯಲ್ಲಿ ಕುಳಿತಿರಬೇಕಾದರೆ ಇರುವೆಗಳ ಉದ್ದದ ಸಾಲು ಎಲ್ಲಿಗೋ ಹೊರಟಂತಿತ್ತು. ನಾನು ಅವುಗಳ ಪರೇಡ್ ನೋಡುತ್ತಾ, ಶಿಸ್ತಿನ ಬಗ್ಗೆ ಅಚ್ಚರಿಗೊಳ್ಳುತ್ತಿದ್ದೆ. ತಕ್ಷಣವೇ ತಥಾಕಥಿತ ಪ್ರಶ್ನೆ ಉದಿಸಿ, ಇವುಗಳ ಜಾಡಿನ ರಹಸ್ಯ ಕಂಡು ಹಿಡಿಯಬೇಕೆಂದು ತೀರ್ಮಾನಿಸಿದೆ. ಅವುಗಳು ಸಾಗುತ್ತಿರುವ ದಾರಿಮಧ್ಯೆ ನನ್ನ ಬೆರಳುಗಳನ್ನು ತೀಡಿದೆ. ಆಶ್ಚರ್ಯವೆಂಬಂತೆ ಇರುವೆಗಳು ದಿಕ್ಕಾಪಾಲಾಗಿ ಓಡತೊಡಗಿದವು. ಅನೇಕ ಬಾರಿ ಸಾಲಿನ ನಡುವೆ ಈ ರೀತಿ ಮಾಡುತ್ತಾ ಬಂದೆ. ಇರುವೆಗಳ ಸಾಲು ಕುರಿಮಂದೆಯಂತೆ ಅಶಿಸ್ತಿನಿಂದ ವರ್ತಿಸತೊಡಗಿತು. ಕೊನೆಗೂ ಅವುಗಳ ಮಧ್ಯೆ ಏನೋ ಸಂವಹನವಿದೆಯೆಂದು ಅರಿವಾಯಿತು. ನಡೆಯುವ ದಾರಿಯುದ್ದಕ್ಕೂ ಅವುಗಳ ವಾಸನೆ ಗ್ರಹಿಸುವ ಯಾವುದೋ ರಾಸಾಯನಿಕ ಸಿಂಪಡನೆಯಾಗಿರಬಹುದು. ಬೆರಳಿನಿಂದ ಉಜ್ಜುವುದರಿಂದ ಅದರ ವಾಸನೆ ಹೊರಟು ಹೋಗಿ ಇರುವೆಗಳು ದಿಕ್ಕುತಪ್ಪಿ ಹೋದುದಕ್ಕೆ ಕಾರಣವಾಗಿರಲೂ ಸಾಕು. ಅಂತೂ ನಾನು ಈ ರೀತಿ ಮಾಡಿ ಸುಮಾರು ಹೊತ್ತು ಕಳೆದುದರೊಳಗೆ ಮತ್ತೆ ಶಿಸ್ತಿನ ಸಿಪಾಯಿಗಳ ಪರೇಡ್ ಯಥಾಸ್ಥಿತಿಗೆ ಮರಳಿತು.
ಒಮ್ಮೆ ಕೆಂಪಿರುವೆಗಳ ದಂಡೊಂದು ನಮ್ಮ ಹಿತ್ತಲಲ್ಲಿ ಜಮಾಯಿಸಿತ್ತು. ಸ್ವಲ್ಪ ದೂರದಲ್ಲಿ ಸಣ್ಣ ಇರುವೆಗಳು ಬೇರೆ ಯಾವುದೋ ದಾರಿ ಹಿಡಿದಿದ್ದವು. ಅವುಗಳ ದಾರಿ ಇವುಗಳ ದಾರಿ ಯಾಕೆ ಬೇರೆ ಇದೆಯೆಂದು ಜಿಜ್ಞಾಸೆಯಾಗತೊಡಗಿತು. ಆದದ್ದಾಗಲೆಂದು ಸಣ್ಣಿರುವೆಗಳ ಸಾಲಿನ ಮಧ್ಯೆ ಒಂದು ಕಡ್ಡಿಯನ್ನು ಇರಿಸಿ ಕೆಂಪಿರುವೆಗಳಿಗೆ ಸಂಧಿಸುವಂತೆ ಮಾಡಿದೆ. ಕಡ್ಡಿಗಳಿಗೆ ಹತ್ತಿದ ಸಣ್ಣಿರುವೆಗಳು, ಕೆಂಪಿರುವೆಗಳ ಸಾಲಿನೊಂದಿಗೆ ಬೆರೆಯತೊಡಗಿತು. ಬೇರೆನೋ ನೋಡಲು ಹೋದ ನನಗೆ ಆ ವಿಚಾರವೇ ಮರೆತು ಹೋಗಿತ್ತು.
ಸುಮಾರು ಹೊತ್ತಿನ ಬಳಿಕ ತಿರುಗಿ ಬಂದು ನೋಡುವಾಗ ಅಲ್ಲೆಲ್ಲಾ ಸಣ್ಣಿರುವೆಗಳು ಸತ್ತು ಹೋಗಿದ್ದವು. ಕೆಲವು ಇರುವೆಗಳು ಕೈಕಾಲು ಕಳೆದುಕೊಂಡು ಚಡಪಡಿಸುತ್ತಿದ್ದವು. ನನ್ನ ಊಹೆ ನಿಜವಾಗಿತ್ತು. ವಿರೋಧಿ ಗುಂಪುಗಳ ಮಧ್ಯೆ ಅಲ್ಲೊಂದು ಮಹಾ ಯುದ್ಧವೇರ್ಪಟ್ಟಿತ್ತು. ಕಳಿಂಗ ಯುದ್ಧದಲ್ಲಿ ಅಶೋಕನಂತೆ ಮನಸ್ಸು ಮರುಗಿತು. ಆ ಬಳಿಕ ಇರುವೆಗಳ ಗುಂಪು ಕಂಡರೆ ಈಗಲೂ ಚಾಕಲೇಟು ತುಂಡಾಗಲಿ, ಆಹಾರವಾಗಲಿ ತಿನ್ನಲು ಹಾಕುವುದುಂಟು.
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..