ಮಹಾನಗರಗಳಲ್ಲಿ ಕಚೇರಿಗಳ ದುಡಿತ ಮುಗಿಸಿದ ಜನರು ಮೆಟ್ರೊ, ಬಸ್ಸುಗಳಲ್ಲಿ ತುಂಬಿಕೊಂಡು ನಿಂತಲ್ಲೇ ಕಿವಿಗಿರಿಸಿಕೊಂಡ ಸೆಲ್ ಫೋನುಗಳಲ್ಲಿ ತಲ್ಲೀನವಾಗಿರುತ್ತಾರೆ. ಮೈಗೆ ಮೈ ಹತ್ತುವಂತೆ ನಿಂತಿದ್ದರೂ ಪ್ರತಿಯೊಬ್ಬರೊಳಗೂ ಸುತ್ತಲಿನಿಂದ ತುಂಬ ದೂರವಾದ, ಪ್ರತ್ಯೇಕವಾದ ಮತ್ತು ಕೇವಲ ಅವರದ್ದಷ್ಟೇ ಆದ ಖಾಸಗಿ ಜಗತ್ತೊಂದು ಅರಳಿಕೊಂಡಿರುತ್ತದೆ. ಆದ್ದರಿಂದಲೇ ಅವರು ತಾವು ಇರುವ ಭೌತಿಕ ಸ್ಥಳದ ಸಂಗತಿಗಳು ತಮಗೆ ಇನಿತೂ ಸಂಬಂಧಿಸಿದ್ದಲ್ಲ ಎಂಬಂತೆ ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ದೂರ ತೀರದ ಅದೃಶ್ಯ ಕರೆಯೊಂದಿಗೆ ಲೀನವಾಗಿರುತ್ತಾರೆ. ಓಡುವ ವಾಹನಗಳ ಕಿಡಕಿಯಾಚೆಗೆ ಆಗಸ ಕೆಂಪಾಗಿದ್ದು, ಮೋಡಗಳೊಡಲು ಓಕುಳಿಯಾಡಿದ್ದು ಯಾರ ಕಣ್ಣಿಗೂ ಬೀಳುವುದೇ ಇಲ್ಲ.
ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ

 

ಹಗಲಿಡೀ ಉರಿದುರಿದು ದಣಿದ ಸೂರ್ಯನೂ ದುಡಿಮೆ ಮುಗಿಸಿದ ಜನರೂ ಕೂಡಿಯೇ ಮನೆಕಡೆ ಮುಖ ಮಾಡುವ ಸಮಯ. ಬಯಲಿನಾಚೆಯ ಸಣ್ಣ ದಿನಸಿ ಅಂಗಡಿಯಲ್ಲಿ ಮಾಸಿದ ಸೀರೆಯ ಹೆಂಗಸರು ಅಂದಂದಿನ ಅಕ್ಕಿ, ಬೇಳೆ, ಉಪ್ಪು-ಹುಣಿಸೆಗಳ ಪುಟ್ಟಪುಟ್ಟ ಪೊಟ್ಟಣಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ದುಡ್ಡು ತೆಗೆಯಲು ಕುಪ್ಪುಸದೊಳಗಿನ ಸಂಚಿಯನ್ನು ಹೊರತೆಗೆದಿದ್ದಾರೆ. ಅದರೊಳಗಿನ ಬಾಡಿದ ಎಲೆಗಳ ನಡುವೆ ಸಣ್ಣಗೆ ಮಡಚಿದ ಹತ್ತರ ನೋಟುಗಳ ಮತ್ತೆ ಮತ್ತೆ ಮನದಲ್ಲೇ ಎಣಿಸುತ್ತ ಜಮಾ-ಖರ್ಚುಗಳ ಖಾತ್ರಿ ಮಾಡಿಕೊಳ್ಳುತ್ತಿದ್ದಾರೆ.

ಅಲ್ಲೇ ಎರಡು ಬೀದಿಯಾಚೆಯ ವೈನು ಶಾಪಿನೆದುರು ಮುಕುರಿಕೊಂಡಿರುವ ಅವರ ಗಂಡಂದಿರು ತಮ್ಮ ಬದುಕಿನ ಪರಮೋಚ್ಛ ಸಂತೋಷವನ್ನು ದೊರಕಿಸಿಕೊಳ್ಳುತ್ತಿರುವವರಂತೆ ಸಂಬಳದ ನೋಟು ಹಿಡಿದು ನಿಂತಿದ್ದಾರೆ. ಈ ಎರಡೂ ಬೀದಿಗಳ ನಡುವೆ ಮೈಚಾಚಿಕೊಂಡಿರುವ ಬಯಲಿಗೆ ಜೀವ ಬಂದಂತೆ ಗಲಗಲ ಆಡುತ್ತಿದ್ದ ಮಕ್ಕಳು ಅಮ್ಮ ಕರೆಯುವ ವೇಳೆಯಾಯಿತೆಂದು ಆಟ ಮುಗಿಸುವ ಗಡಿಬಿಡಿಯಿಂದ ಕೂಗುವ, ಕೇಕೆ ಹಾಕುವ ಸಡಗರಕ್ಕೆ ಗೂಡಿಗೆ ಮರಳುವ ಹಕ್ಕಿಗಳು ಪಟಪಟ ರೆಕ್ಕೆ ಬಡಿಯುತ್ತವೆ. ವಾಯುವಿಹಾರಕ್ಕೆ ಬಂದ ಅಜ್ಜ-ಅಜ್ಜಿಯರು ಬೆಂಚುಗಳ ಮೇಲೆ ಇಳಿಬೆಳಕಿನ ರಂಗೋಲಿಯಂತೆ ಕುಳಿತಿದ್ದಾರೆ. ಏನೇನೂ ಅವಸರವಿಲ್ಲದ ಅವರ ಮುಖದ ಮೇಲೆ ಕೊನೆಯ ಕಿರಣದ ನಾಟ್ಯವಾಡಲಿಕ್ಕೆ ಸೂರ್ಯನಿಗೂ ಖುಷಿಯಾಗಿದೆ.

ಚೆಂಬೆಳಕಿನ ಕವಿಯ ಕವನವೊಂದು ನೆನಪಾಗುತ್ತಿದೆ
ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ
ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ
ಕೆಂಕಮಾಗಿದೆ ಬಾನು ಕಿತ್ತಿಳೆಯ ತೊಳೆಯಂತೆ
ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ

ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಸಂಜೆ ಎಂಬ ಸಮಯದ ಕುರಿತು ನನಗೆ ಬಾಲ್ಯದಿಂದಲೂ ಒಂದು ವಿಶಿಷ್ಟ ಸೆಳೆತ. ಇಳೆಗೆ ಸೂರ್ಯನನ್ನು ಕಳಿಸುವ ಸಂಕಟವಾದರೆ ನಿಶೆಗೆ ಆಕಾಶವನಪ್ಪುವ ಧಾವಂತ. ಸರಿಯುವ ಬೆಳಕು, ಆವರಿಸುವ ಕತ್ತಲು ಏಕಕಾಲಕ್ಕೆ ವಿಜೃಂಭಿಸುವ ಸಂಧಿಕಾಲ. ಮೋಡದ ತುಂಬ ಕ್ಷಣಕ್ಷಣಕ್ಕೂ ಬದಲಾಗುವ ಬಣ್ಣದ ಮೆರವಣಿಗೆ. ಹೊಳೆಕೆನ್ನೆಯ ಮೇಲೆ ತಂಗಾಳಿಯ ಬರವಣಿಗೆ. ಇದು ಚಿತ್ತ ಚಾಂಚಲ್ಯಗೊಳುವ ಸಮಯವಾಗಿದೆಯೆಂಬ ಕಾರಣದಿಂದಲೇ ಪೂರ್ವಿಕರು ಸಂಧ್ಯಾಕಾಲಗಳಲ್ಲಿ ಸೂರ್ಯನಿಗೆ ಅರ್ಘ್ಯಕೊಡುತ್ತಿದ್ದರು. ಮನಸ್ಸನ್ನು ಧ್ಯಾನಮಗ್ನವಾಗಿಸಿ ಸಂಧ್ಯಾವಂದನೆ ಮಾಡುತ್ತಿದ್ದರು. ಮನೆಗಳಲ್ಲಿ ಮಕ್ಕಳಿಗೆ ಭಜನೆ ಕಡ್ಡಾಯವಾಗಿತ್ತು.

ನಾವು ಚಿಕ್ಕವರಿದ್ದಾಗ ದೀಪ ಹಚ್ಚಿಟ್ಟ ದೇವರೆದುರು ಸಾಲಾಗಿ ಕೂತು ಮಂತ್ರ, ಸ್ತ್ರೋತ್ರಗಳನ್ನು ಕೋರಸ್ ನಲ್ಲಿ ಹಾಡುವಾಗ ಇಡೀ ಮನೆ ತನ್ನೆಲ್ಲ ಉದ್ವೇಗ, ಆತಂಕವನ್ನು ಕಳೆದುಕೊಂಡು ಒಂದು ಶರಣಾಗತ ಭಾವಕ್ಕೆ ಬಂದುಬಿಡುತ್ತಿತ್ತು. ಹೊರಜಗುಲಿಯ ಮೇಲೆ ದೇಶ ಆಳುವವರ ಧಿಮಾಕಿನಲ್ಲಿ ಕೂತ ಅಜ್ಜ-ಮಾವ-ದೊಡ್ಡಪ್ಪ ಮುಂತಾದ ಯಜಮಾನಿಕೆಯ ಗಂಡಸರೂ ಕೂಡ ಅವರಿಗರಿವಿಲ್ಲದೇ ಭಜನೆಯ ಲಯದೊಂದಿಗೆ ಮನಸ್ಸನ್ನು ತೇಲಿ ಬಿಟ್ಟು ಹಗುರಾಗುತ್ತ ಹಗಲು ಭೂತದಂತೆ ಕಂಡಿದ್ದ ತಾಪತ್ರಯವೀಗ ನಿಭಾಯಿಸಬಲ್ಲ ವಿಷಯವೆಂಬ ತೀರ್ಮಾನಕ್ಕೆ ಬಂದಿರುತ್ತಿದ್ದರು. ಅಡಿಗೆ ಮನೆಯಲ್ಲಿ ಅನ್ನ ಬಾಗಿಸುತ್ತ, ಅಕ್ಕಿ ರುಬ್ಬುತ್ತ, ರಾತ್ರಿ ಗೊಜ್ಜಿಗೆ ಮೆಣಸು ಹುರಿಯುತ್ತ ಓಡಾಡುವ ಅತ್ತೆ, ಚಿಕ್ಕಿಯರು ಬಾಯಲ್ಲಿ ಹಾಡಿನ ಸಾಲುಗಳನ್ನು ಹೇಳಿಕೊಳ್ಳುತ್ತಲೇ ಇರುವುದರಿಂದ ಅವರ ಕೆಲಸವೂ ಭಜನೆಯ ಲಯದಲ್ಲಿಯೇ ಸಾಗುತ್ತಿತ್ತು. ಪಟ್ಟಣಕ್ಕೆ ಹೋಗಿ ಸಂಜೆ ಬಸ್ಸಿಗೆ ಮರಳುತ್ತಿರುವವರನ್ನು ಪ್ರತಿ ಮನೆಯ ಭಜನೆಯೇ ಎದುರುಗೊಳ್ಳುವುದು. ಅಡವಿ ಮೇಯ್ದ ಜಾನುವಾರಗಳು ಹೊಳೆಯಂಚಲ್ಲಿ ನೀರು ಕುಡಿದು ಮನೆ ಸೇರಿದ ಮೇಲೆ ನಿರ್ಜನ ದಂಡೆಯ ಕಲ್ಲುಗಳೊಂದಿಗೆ ಲಲ್ಲೆಗರೆಯಲು ಬರುವ ಅಲೆಗಳು ದೇವಳದ ಭಜನೆಯಾರತಿಯ ಘಂಟಾನಾದಕ್ಕೆ ಮುದಗೊಂಡು ಹಿತವಾಗಿ ಕುಣಿಯುತ್ತಿದ್ದವು.

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೊ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿ ಹೂ
ಮೆಲ್ಲಗೆ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹೆರಳಿನಾ ಅರಳಮಲ್ಲಿಗಿ ಜಾಳಿಗಿ ಹಾಂಗಿತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ

ಅಂತ ಬೇಂದ್ರೆಯವರು ಪರವಶರಾಗಿ ಹಾಡಿದ್ದು ಇದೇ ಸಂಜೆಯ ಸೊಬಗಿಗೆ ಮನಸೋತೇ ಅಲ್ಲವೆ? ಸಂಜೆಯಾಗುತ್ತಿದ್ದಂತೆ ಒಂದು ಬಗೆಯ ರಾಗರತಿಯ ಭಾವ ಮೂಡಿ ಮನಸ್ಸು ಹದ ಮೀರಿ ವರ್ತಿಸುವ ಅನುಭವ ಬಹುತೇಕರಿಗೆ ಆಗಿರಲೇಬೇಕು. ಹಿಂದಿ ಚಲನಚಿತ್ರ ಗೀತೆಯೊಂದು ಇದಕ್ಕೆ ಪುರಾವೆ ನೀಡುತ್ತದೆ. ‘ಏ ಶಾಮ್ ಮಸತಾನಿ ಮದಹೋಶ್ ಕಿಯೆ ಜಾಯ್ ಮುಝೆ ದೂರ್ ಕೋಯಿ ಖೀಚೆ ತೆರೆ ಓರ್ ಲಿಯೆಜಾಯ್…’ ಎಂದು ಆರಂಭವಾಗುವ ಹಾಡು ಪ್ರೇಮಿಯೊಬ್ಬನ ಸಂಜೆಯ ತವಕಗಳನ್ನು ಬಿಡಿಸಿಡುತ್ತದೆ. ಇತ್ತೀಚಿನ ಇನ್ನೊಂದು ಗೀತೆ ‘ಸೂರಜ್ ಹುವಾ ಮದ್ದಂ ಚಾಂದ ಜಲನೆ ಲಗಾ ಆಸಮಾಯೆ ಹಾಯ್ ಕ್ಯೊಂ ಫಿಗಲನೆ ಲಗಾ ಮೈ ಟೆಹರಾ ರಹಾ ಜಮೀ ಚಲನೆ ಲಗೀ ಧಡಕಾಯೆ ದಿಲ್ ಸಾಂಸ್ ಧಮನೆ ಲಗೀ….’ ಎಂದು ಮೊದಲ ಪ್ರೀತಿಯ ಸಂಭ್ರಮಗಳನ್ನು ಸಂಜೆಯ ಸೊಬಗಿನೊಂದಿಗೆ ಸಮೀಕರಿಸುತ್ತದೆ.

ಕನ್ನಡದ ಜನಪ್ರಿಯ ಚಿತ್ರಗೀತೆಯೊಂದು ಎದೆ ಭೇದಿಸುವ ಆರ್ತಕಂಠದಲ್ಲಿ ಹಾಡುತ್ತದೆ “ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ… ಏಕಾಂತವೆ ಆಲಾಪವು ಏಕಾಂಗಿಯ ಸಲ್ಲಾಪವು… ಈ ಮೌನ ಬಿಸಿಯಾಗಿದೆ…’ ಎನ್ನುತ್ತ ವಿರಹಿಯೊಬ್ಬನ ಚೀತ್ಕಾರದೊಂದಿಗೆ ಪ್ರತಿಯೊಬ್ಬರ ಎದೆಯಾಳದಲ್ಲಿ ಮಾಯದ ಗಾಯದಂತೆ ಅವಿತಿರುವ ಹಳೆಯ ಪ್ರೀತಿಯ ನೆನಪನ್ನು ಭುಗಿಲೆಬ್ಬಿಸಿ ಸಣ್ಣ ಬಿಸಿಯುಸಿರೊಂದನ್ನು ಹೊರದಬ್ಬುತ್ತದೆ. ಪ್ರೇಮನಿರತ ಯುವ ಹೃದಯಗಳಿಗೆ ಸಂಜೆಯಾಗುತ್ತಿದ್ದಂತೆ ಪಾರ್ಕು, ಗುಡ್ಡ, ಕಡಲತೀರ ಮುಂತಾದ ಸ್ಥಳಗಳಲ್ಲಿ ತಮ್ಮ ಪ್ರಾಣಪದಕಗಳನ್ನು ಭೆಟ್ಟಿಯಾಗುವ ಸಡಗರವಾದರೆ ಭಗ್ನಪ್ರೇಮಿಗಳಿಗೆ ಎದೆ ಹೊತ್ತಿ ಧಗಧಗ ಉರಿಯುವ ಪ್ರಾಣಸಂಕಟ. ನಿತ್ಯೋತ್ಸವದ ಕವಿ ಇದೇ ಭಾವದಿಂದಲೇ ಬರೆದಿರುವ ಪ್ರಸಿದ್ಧ ಕವಿತೆ ಹೀಗಿದೆ:

ಕಣ್ಣನೆ ತಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ
ಚಿನ್ನ ನೀನಿಲ್ಲದೆ ಬಿಮ್ಮೆನುತಿದೆ ರಮ್ಯೋದ್ಯಾನ

ಹೊರಜಗುಲಿಯ ಮೇಲೆ ದೇಶ ಆಳುವವರ ಧಿಮಾಕಿನಲ್ಲಿ ಕೂತ ಅಜ್ಜ-ಮಾವ-ದೊಡ್ಡಪ್ಪ ಮುಂತಾದ ಯಜಮಾನಿಕೆಯ ಗಂಡಸರೂ ಕೂಡ ಅವರಿಗರಿವಿಲ್ಲದೇ ಭಜನೆಯ ಲಯದೊಂದಿಗೆ ಮನಸ್ಸನ್ನು ತೇಲಿ ಬಿಟ್ಟು ಹಗುರಾಗುತ್ತ ಹಗಲು ಭೂತದಂತೆ ಕಂಡಿದ್ದ ತಾಪತ್ರಯವೀಗ ನಿಭಾಯಿಸಬಲ್ಲ ವಿಷಯವೆಂಬ ತೀರ್ಮಾನಕ್ಕೆ ಬಂದಿರುತ್ತಿದ್ದರು.

ರಾಷ್ಟ್ರಕವಿ ಕುವೆಂಪು ಅವರು ಕೆಂಪೇರುವ ಆಗಸದ ಕುರಿತು ವರ್ಣಲೀಲೆಯಲ್ಲಿ ನೀಲಿ ಬಾನನ್ನು ಆವರಿಸುವ ಮೇಘ ಮಾಲೆಯ ಕಣ್ಣುಮುಚ್ಚಾಲೆಯಾಟದ ಕುರಿತು ಸೊಗಸಾದ ಶಬ್ದಗಳೊಂದಿಗೆ ಅನೇಕ ಕವಿತೆಗಳನ್ನು ಬರೆದಿದ್ದಾರೆ. ಆದರೆ ಜನಮನವನ್ನು ಗೆದ್ದಿರುವುದೆಂದರೆ ವಿರಹ ತೊಟ್ಟಿಕ್ಕುವ ಸಂಜೆಯ ಕವಿತೆಯೆನ್ನುವುದು ಸತ್ಯವಾಗಿರುವ ಸಂಗತಿ.

ಬೇಸರಿನ ಸಂಜೆಯಿದು ಬೇಕೆನಗೆ ನಿನ್ನ ಜೊತೆ
ಎಲ್ಲಿ ಹೋದೆಯೊ ಇನಿಯಾ ಬಾ ಬೇಗನೆ
ಮಬ್ಬು ಕವಿದಿದೆ ನಭಕೆ ಮಂಕು ಕವಿದಿದೆ ಮನಕೆ
ವಿರಹದೆದೆ ಕರೆಯುತಿದೆ ಬಾ ಬೇಗನೆ

ಅಮರತ್ವದ ದುರಾಸೆಯಿಂದ ತನಗೆ ಮರಣವು ಹಗಲೂ ಬರಬಾರದು, ಇರುಳೂ ಬರಬಾರದೆಂದು ಶಿವನಿಂದ ವರ ಪಡೆದುಕೊಂಡ ದುರುಳ ಹಿರಣ್ಯಕಶಪುವನ್ನು ವಧಿಸಲು ಜಾಣಮುರಾರಿ ಮುಸ್ಸಂಜೆಯೇ ಸೂಕ್ತ ಸಮಯವೆಂದು ಮುಗುಳ್ನಕ್ಕ. ದುರಾಸೆಯ ರಕ್ಕಸನನ್ನು ಮುಸ್ಸಂಜೆಯ ಸಮಯದಲ್ಲಿ ಕಂಬದಿಂದ ಹೊರಬಂದು ಮನೆಯೂ ಅಲ್ಲದ ಬಯಲೂ ಅಲ್ಲದ ಹೊಸ್ತಿಲ ಮೇಲೆ ಕುಳಿತು ತನ್ನ ಉಗುರುಗಳಿಂದಲೇ ಕರುಳು ಬಗೆದು ಸಂಹರಿಸಿ ಬಿಡುತ್ತಾನೆ. ಹಗಲಿನ ಬೆಳಕಲ್ಲಿ ಮಾಡಲಾರದ ಕೆಲಸಗಳಿಗಾಗಿ ಕತ್ತಲನ್ನೇ ಕಾಯುವ ಜನರು ತಯಾರಾಗುವುದೇ ಸಂಜೆಯ ವೇಳೆ. ಅನೇಕ ಪಾತಕಗಳಿಗೆ ವೇದಿಕೆಯಾಗುವುದು ನಡುರಾತ್ರಿ ಕಳೆದ ನಂತರದ ಭೀಕರ ಕಾವಳವಾದರೂ ಅದಕ್ಕೆ ಮುನ್ನುಡಿ ಬರೆಯುವುದು, ತಯಾರಿ ನಡೆಯುವುದು ಮುಸ್ಸಂಜೆಯಲ್ಲಿ. ದಿನವಿಡೀ ಹೆಬ್ಬಾವಿನಂತೆ ಬಿದ್ದುಕೊಂಡಿದ್ದವರು ಎದ್ದು ಅಂಗಿಯೇರಿಸಿಕೊಂಡು, ಹತ್ಯಾರಗಳನ್ನು ಮೈಯಲ್ಲಡಿಗಿಸಿ ಇಟ್ಟುಕೊಂಡು ವಾಹನವೇರಿ ಹೊರಟರೆ ಗಾಳಿಗೂ ಸಣ್ಣಗೆ ಭಯ ಹುಟ್ಟಿ ನಡುಗುತ್ತದೆ. ಸಮಾಧಿಗಳಲ್ಲಿ ಮಲಗಿದವರೊಮ್ಮೆ ಮಗ್ಗಲು ಬದಲಾಯಿಸುತ್ತಾರೆ.

ಪೇಟೆ ಬೀದಿಗಳಲ್ಲಿ ಮೈಮಾರಾಟದ ಮನೆಗಳಲ್ಲಿ ತಂದು ಸೇರಿಸಿದ ಪಂಜರದ ಹುಡುಗಿಯರಿಗೆ ಸಂಜೆಯೆಂದರೆ ಮುಗಿಯದ ಭಯ. ರಾತ್ರಿಯ ನೋವಿನ ನೂರುರಾಗಗಳ ಪಲ್ಲವಿಯ ಆರಂಭವಾಗುದೇ ಮುಸ್ಸಂಜೆಯಲ್ಲಿ. ಉಪ್ಪರಿಗೆಯ ಕಿಡಕಿಯೊಳಗಿಳಿವ ಮುದಿ ಸೂರ್ಯನ ಪೇಲವ ಕಿರಣಗಳು ಸಿಂಗಾರಗೊಳ್ಳುವ ಕನ್ನಡಿಯನ್ನು ದುರ್ಬಲವಾಗಿ ಸವರುತ್ತವೆ. ಒಡೆದ ತತ್ತಿಯ ದೋಸೆ, ಹುರಿದ ಮೀನುಗಳ ವಾಸನೆ ಹೊತ್ತು ಬರುವ ಗಾಳಿ ಆಸೆ ತುಂಬಿದ ದೇಹಗಳು ಬರುತ್ತಿರುವ ವರದಿ ನೀಡುತ್ತದೆ. ತಗ್ಗು ಮಾಡಿನ ಖೋಲಿಯಲ್ಲಿ ಮಲಗಿದ ಗೂರಲು ಮುದುಕ ಕೆಮ್ಮಿ, ಕೆಮ್ಮಿ ಸಾಕಾಗಿ ಬಾಗಿಲೆಡೆಗೆ ನೋಡುತ್ತಾನೆ. ಕೆಲಸ ಮುಗಿಸಿ ಬರುವ ಮಗಳು ಕಾಫ್ ಸಿರಪ್ ತರುತ್ತೇನೆಂದು ಹೇಳಿದ್ದ ನೆನಪಿಸಿಕೊಂಡು ಅವನ ಸೋತ ಕಣ್ಣುಗಳು ಒಂದು ಘಳಿಗೆ ಫಳಫಳ ಹೊಳೆಯುತ್ತವೆ. ಆದರೂ ಅವನಿಗೆ ಕತ್ತಲೆಯ ಭಯ. ಕೆಮ್ಮು-ದಮ್ಮಿನಂತಹ ಮಹಾಮಾರಿ ರೋಗಗಳು ರಾತ್ರಿಯಾದೊಡನೆ ಉಲ್ಬಣಗೊಂಡು ಪ್ರಾಣ ಹಿಂಡುತ್ತವೆ.

ಮಹಾನಗರಗಳಲ್ಲಿ ಕಚೇರಿಗಳ ದುಡಿತ ಮುಗಿಸಿದ ಜನರು ಮೆಟ್ರೊ, ಬಸ್ಸುಗಳಲ್ಲಿ ತುಂಬಿಕೊಂಡು ನಿಂತಲ್ಲೇ ಕಿವಿಗಿರಿಸಿಕೊಂಡ ಸೆಲ್ ಫೋನುಗಳಲ್ಲಿ ತಲ್ಲೀನವಾಗಿರುತ್ತಾರೆ. ಮೈಗೆ ಮೈ ಹತ್ತುವಂತೆ ನಿಂತಿದ್ದರೂ ಪ್ರತಿಯೊಬ್ಬರೊಳಗೂ ಸುತ್ತಲಿನಿಂದ ತುಂಬ ದೂರವಾದ, ಪ್ರತ್ಯೇಕವಾದ ಮತ್ತು ಕೇವಲ ಅವರದ್ದಷ್ಟೇ ಆದ ಖಾಸಗಿ ಜಗತ್ತೊಂದು ಅರಳಿಕೊಂಡಿರುತ್ತದೆ. ಆದ್ದರಿಂದಲೇ ಅವರು ತಾವು ಇರುವ ಭೌತಿಕ ಸ್ಥಳದ ಸಂಗತಿಗಳು ತಮಗೆ ಇನಿತೂ ಸಂಬಂಧಿಸಿದ್ದಲ್ಲ ಎಂಬಂತೆ ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ದೂರ ತೀರದ ಅದೃಶ್ಯ ಕರೆಯೊಂದಿಗೆ ಲೀನವಾಗಿರುತ್ತಾರೆ. ಓಡುವ ವಾಹನಗಳ ಕಿಡಕಿಯಾಚೆಗೆ ಆಗಸ ಕೆಂಪಾಗಿದ್ದು, ಮೋಡಗಳೊಡಲು ಓಕುಳಿಯಾಡಿದ್ದು ಯಾರ ಕಣ್ಣಿಗೂ ಬೀಳುವುದೇ ಇಲ್ಲ. ಬಹು ಮಹಡಿ ಅಪಾರ್ಟಮೆಂಟುಗಳ ಕೊನೆಯಂತಸ್ತಿನ ಮಹಿಳೆ ಒಣ ಹಾಕಿದ ಬಟ್ಟೆ ತೆಗೆಯಲು ಟೆರೇಸಿಗೆ ಬಂದರೂ ಕಿವಿಗಾನಿಸಿಕೊಂಡ ಮೊಬೈಲಿನಲ್ಲಿ ಅಕ್ಕನೊಂದಿಗೆ ಪಾಲಕ್ ಪನೀರ್ ರೆಸಿಪಿ ಹಂಚಿಕೊಳ್ಳುವುದರಲ್ಲಿ ಬ್ಯುಸಿಯಾಗಿರುವುದರಿಂದ ಅವಳ ಕಣ್ಣಿಗೂ ಮೇಲೆತ್ತಿ ಆಕಾಶ ನೋಡಲು ಪುರುಸೊತ್ತಿಲ್ಲ. ಆ ಘಳಿಗೆಯ ತನಕ ಗಾಳಿಯೊಂದಿಗೆ ಜೂಟಾಟವಾಡುತ್ತಿದ್ದ ನೈಟಿ, ಬನಿಯನ್ನುಗಳು ಪೆಚ್ಚಾಗಿ ಮುಖವೆತ್ತಿ ಸಣ್ಣಗೆ ಮೂಡುತ್ತಿರುವ ಚಂದಿರನಿಗೆ ಟಾಟಾ ಹೇಳುತ್ತವೆ.

ಕೈಯ ಕರಂಡಕದಲ್ಲಿ ತುಂಬಿದ ಕೆಂತಿಜ ಮೇಲೆ ಧೂಪದ ಪುಡಿ ಹಾಕಿದ್ದೇ ಭಗ್ಗನೆ ಮೇಲೆದ್ದ ಘಮದ ಹೊಗೆಯನ್ನು ಎಲ್ಲೆಡೆಯಲ್ಲಿಯೂ ತುಂಬಿಸುತ್ತ ಓಡಾಡುವ ಬಾರಿನ ಹುಡುಗ ಒಂದೊಂದೇ ಟೇಬಲ್ಲುಗಳು ಭರ್ತಿಯಾಗುತ್ತಿರುವುದನ್ನು ಓರೆಗಣ್ಣಿಂದ ಗಮನಿಸುತ್ತಾನೆ. ಇನ್ನೀಗ ಟೇಬಲ್ಲಿಗೂ, ಕಿಚನ್ನಿಗೂ ಓಡಾಡಲು ಒಂದು ಸಲ ಆರಂಭಿಸಿದರೆ ಮುಗಿಯಿತು, ನಡುರಾತ್ರಿಯ ತನಕವೂ ಕಾಲಿಗೆ ಚಕ್ರ ಕಟ್ಟಿಕೊಂಡಿರಬೇಕು. ಕೂಡಲು ಒತ್ತಟ್ಟಿಗಿರಲಿ, ಸುಮ್ಮನೆ ನಿಲ್ಲಲು ಕೂಡ ಸಮಯವಿರುವುದಿಲ್ಲ. ಗರಗರ ತಿರುಗಾಟಕ್ಕೆ ಕಾಲುಗಳು, ತುಂಬಿದ ಟ್ರೇ ಹೊತ್ತೊಯ್ಯಲು ಕೈಗಳು, ಪಟಪಟನೆ ಮೆನು ಒದರಲಿಕ್ಕೆ ನಾಲಿಗೆ ಸಜ್ಜಾಗುತ್ತವೆ.

ಆಗಷ್ಟೇ ಧರಿಸಿಕೊಂಡ ಸಮವಸ್ತ್ರದ ತಾಜಾ ವಾಸನೆಯ ಖಾಲಿ ಕಿಸೆಗೊಂದು ನಿಷ್ಪಾಪಿ ತಹತಹ ಹುಟ್ಟಿಕೊಳ್ಳುತ್ತದೆ. ಇಂದು ಎಷ್ಟು ಟಿಪ್ಸು ಸಿಕ್ಕಬಹುದು? ಜೇಬು ಎಷ್ಟರಮಟ್ಟಿಗೆ ತುಂಬಬಹುದು? ನಾಳೆಯಾದರೂ ಮುದಿತಾಯಿಗೆ ಮನಿಯಾರ್ಡರು ಮಾಡಲು ಸಾಧ್ಯವಾಗಬಹುದೆ? ಈ ಸಲವಾದರೂ ಆಕೆಗೆ ಡಾಕ್ಟರ ಹತ್ತಿರ ಹೋಗಿ ಔಷಧಿ ಬರೆಸಿಕೊ ಎಂದು ಹೇಳಬೇಕು. ಅದೇನೋ ಟಾನಿಕ್ ಕುಡಿದರೆ ಮೈಯಲ್ಲಿ ರಕ್ತವಾಗುತ್ತದೆಯಂತೆ. ಒಂದು ಬಾಟಲಿ ಕೊಂಡುಬಿಡು ಅಂತ ಒತ್ತಾಯ ಮಾಡಬೇಕು. ಮೂಲೆಯ ಟೇಬಲ್ಲಿಗೆ ಬಂದು ‘ಏಯ್ ವೇಟರ್…’ ಎಂದು ಅರಚಿದ ಗಿರಾಕಿಯ ಕರ್ಕಶ ಕೂಗಿನಿಂದ ಅವನ ವಿಚಾರಸರಣಿ ಕತ್ತರಿಸುತ್ತದೆ. ಈಗಲೇ ಅಲ್ಲಿಗೆ ಓಡಬೇಕು. ಇಲ್ಲಿಗೆ ಬರುವ ಯಾವ ಗಿರಾಕಿಗೂ ಸಹನೆ ಇರುವುದಿಲ್ಲ. ಅವರೆಲ್ಲ ಸಂಜೆಯಾಗುವುದನ್ನೇ ಕಾಯುತ್ತಿದ್ದು ಇಲ್ಲಿಗೆ ಓಡಿ ಬಂದಿರುತ್ತಾರೆ. ನಶೆಯ ಆಕಾಂಕ್ಷಿಗಳಿಗೆಲ್ಲ ನಿಶೆಯೆಂದರೆ ಪರಮ ಪ್ರೀತಿ. ಹಗಲ ನಿಚ್ಚಳ ಬೆಳಕಿನಲ್ಲಿ ಅವರು ನೀರಿನಿಂದ ತೆಗೆದ ಮೀನಿನಂತೆ ವಿಲಿವಿಲಿ ಒದ್ದಾಡುತ್ತಾರೆ. ಸಂಜೆಯಾಗುವುದನ್ನೇ ಕಾಯುತ್ತಿದ್ದು ಇಲ್ಲಿಗೆ ಧಾವಿಸುತ್ತಾರೆ. ಮೊದಲ ಸಿಪ್ ಕುಡಿದ ನಂತರವೇ ಅವರ ಧಾವಂತ ಕಡಿಮೆಯಾಗುವುದು. ಆಮೇಲೆ ಶಾಂತವಾಗುವ ಅವರ ಜೀವ ನಿಧಾನವಾಗಿ ಇಹದ ಜಂಜಾಟಗಳಿಂದ ಸಂಪರ್ಕ ಕಡಿದುಕೊಳ್ಳುತ್ತ ಹೋಗುತ್ತದೆ.

ಹೆಂಡತಿ-ಮಕ್ಕಳು, ಕಷ್ಟ-ಕಾರ್ಪಣ್ಯ, ಸಾಲ-ಸೋಲ, ಸೋಲು-ಅಪಮಾನ ಮುಂತಾದ ವರ್ತಮಾನದ ಸವಾಲುಗಳು ಸ್ಮರಣೆಯ ಪುಟಗಳಿಂದ ಎಗರುತ್ತ ಹೋದಂತೆಲ್ಲ ಅವರು ಹಗುರಾಗುತ್ತಾರೆ. ಆಮೇಲೆ ಅವರ ಸಿಟ್ಟು-ಅಸಹನೆಗಳೆಲ್ಲ ಇಳಿದು ಸಾವಿನಷ್ಟೇ ಶಾಂತಿ ಆವರಿಸುತ್ತದೆ.

ಭೋರ್ಗರೆವ ಸಾಗರದ ಅಪ್ಪಳಿಸುವ ಅಲೆಗಳ ತೆಕ್ಕೆಯಲ್ಲಿ ಒದ್ದೆಯಾಗುತ್ತಿರುವ ಕರಿಬಂಡೆಗಳ ಮೇಲೆ ತನ್ನ ಕೊನೆಯ ಕಿರಣಗಳನ್ನು ಚೆಲ್ಲಿ ಸುಸ್ತಾದ ದಿನಕರನಿಗೀಗ ನಿದ್ದೆ ಮಾಡುವ ಆತುರ. ನೀಲಿಯಾಕಾಶವೆಲ್ಲ ಕೆಂಪಾಗಿ, ಕಿತ್ತಳೆಯಾಗಿ ತುಸು ತುಸುವೇ ಕಪ್ಪಗಾಗುತ್ತಿರುವ ಕ್ಷಣದಲ್ಲಿ ಮೆಲ್ಲಗೆ ಕಣ್ಣು ಬಿಟ್ಟು ನೋಡುತ್ತಿದ್ದಾನೆ ಚಂದಿರ. ಮುರಿದ ಬೆಳ್ಳಿಯ ಕೋಡುಬಳೆಯಂತೆ ಹೊಳೆಯುತ್ತಿರುವ ಅವನಿಂದ ತುಸು ದೂರದಲ್ಲಿ ಮಿನುಗುತ್ತಿರುವ ನಕ್ಷತ್ರ. ದಂಡೆಯ ಮರಳಗುಪ್ಪೆಯಲ್ಲಿ ಮನೆ ಕಟ್ಟಿಕೊಂಡ ಹುಡುಗರ ಹೋ ಎಂಬ ಕೇಕೆ ಮುಗಿಲು ಮುಟ್ಟುತ್ತಿದೆ. ಉಕ್ಕುಕ್ಕಿ ಅಬ್ಬರಿಸುವ ಅಲೆಗಳಿಗೆ ಕತ್ತಲಾದಂತೆ ಅದೇನೋ ಆವೇಶ ತುಂಬಿಕೊಂಡು ರಭಸ ಹೆಚ್ಚುತ್ತಿದೆ. ಪುಟ್ಟ ಮಕ್ಕಳ ಗೂಡು ಕೊಚ್ಚಿಕೊಂಡು ಹೋಗಿದ್ದೇ ತಡ ಅವರು ಒಟ್ಟಾಗಿ ಕೂಗುತ್ತಿದ್ದಾರೆ. ತೂತು ಬಿದ್ದ ಹಳೆಯ ದೋಣಿಯೊಂದು ಒಂಟಿಯಾಗಿ ಮಗುಚಿ ಬಿದ್ದಲ್ಲಿಯೇ ಆಕಾಶ ನೋಡುತ್ತಿದೆ. ಯಾರಿಗೂ ಕಾಣದ ಮರೆಯೆಂದು ದೋಣಿಗೊರಗಿ ಕೂತ ಪ್ರೇಮಿಗಳು ಕತ್ತಲು ಕವಿದದ್ದೇ ತೆಕ್ಕೆ ಬಿದ್ದು ಆವೇಶಗೊಂಡಿದ್ದಾರೆ. ಉನ್ಮತ್ತ ಅಲೆಗೆ ಸವಾಲು ಹಾಕುವಂತೆ ಅವರ ಬೆರಳುಗಳು ಅನ್ವೇಷಣೆಗಿಳಿದಿವೆ. ಪಕ್ಕದಲ್ಲೇ ಬಿದ್ದ ಬ್ಯಾಗಿನೊಳಗೆ ಸೈಲೆಂಟ್ ಮೋಡಿನಲ್ಲಿರುವ ಹುಡುಗಿಯ ಮೊಬೈಲು ಬಾಯಿ ಸತ್ತ ಮೂಕ ಹಕ್ಕಿಯಂತೆ ಗಂಟಲೊಳಗೇ ಒರಲಿ ಒರಲಿ ನರಳುತ್ತಿದೆ.

ಮನೆಗೆ ಬಾರದ ಮಗಳಿಗಾಗಿ ಗಾಭರಿಯಾಗಿ ತಲ್ಲಣಿಸುವ ತಾಯಿ ಫೋನೆತ್ತದ ಮಗಳು ಬಸ್ಸಿನ ರಶ್ಶಿನಲ್ಲಿ ಒದ್ದಾಡುತ್ತಿದ್ದಾಳೇನೋ ಎಂದು ಮರುಕದಿಂದ ಕಣ್ಣೊರೆಸಿಕೊಂಡಿದ್ದಾಳೆ. ಬೋಳಾದ ಕತ್ತು, ಕಿವಿ, ಹಣೆಗಳ ಆಕೆಯ ದೈನ್ಯ ಬಿಂಬ ನೋಡಲಾರದೇ ಅವಳು ತೊಳೆಯುತ್ತಿದ್ದ ತಾಟು ಕೈ ಜಾರಿ ಢಣಢಣ ಉರುಳಿದೆ. ಆಕೆಯ ಅಜಾಗರೂಕತೆಗೆ ಬಾಯಿಗೆ ಬಂದಂತೆ ಬೈಯುತ್ತ, ಜೋರು ಮಾಡುತ್ತ ಹೊರಬಂದ ಯಜಮಾನಿ ಆಗಸದ ಹೊಳೆವ ಚಂದ್ರನನ್ನು ಕಂಡಿದ್ದೇ ಬೈಗುಳ ಮರೆತು ಹುಣ್ಣಿಮೆ ಯಾವಾಗ ಎಂದು ಲೆಕ್ಕ ಹಾಕಿದ್ದಾಳೆ, ಖುಷಿಯಿಂದ ಸಿಳ್ಳೆ ಹಾಕುತ್ತ ಸುಳಿಸುಳಿ ಬೀಸಿದ ತುಂಟಗಾಳಿಯೊಂದು ಯಜಮಾನಿಯ, ಕೆಲಸದಾಕೆಯ ಸೆರಗುಗಳನ್ನು ಏಕಕಾಲದಲ್ಲಿ ಕೆಳಗೆ ಬೀಳಿಸಿದೆ. ಅಯ್ಯೊ ಎನ್ನುತ್ತ ಇಬ್ಬರೂ ಸೆರಗು ಸಂಭಾಳಿಸಿಕೊಳ್ಳಲು ಪರದಾಡುವಾಗ ಸಮಾನತೆ ಸಾಧಿಸಿದ ನೆಮ್ಮದಿಯಿಂದ ಕಡಲಿನತ್ತ ಓಡಿದೆ. ಅಖಂಡ ಕತ್ತಲಿನ ಮಂಡಲವೊಂದು ಭೂಮಿಯನ್ನಾವರಿಸುವ ಧೃಡತೆಯಿಂದ ದಾಪುಗಾಲಿಕ್ಕುತ್ತ ಬರುತ್ತಿದೆ. ಇನ್ನು ನಾಳಿನ ತನಕ ತಿರೆಯ ಮೋರೆಯ ತುಂಬ ಕರಿಮಾಯಿಯ ಸೆರಗು ಸರಿಯುವುದಿಲ್ಲ.

ಕತ್ತಲು ಭೂಮಿಗಿಳಿದಂತೆಲ್ಲ ಸಂಜೆಯ ರಾಗ ಅಡಗುತ್ತ ಹೋಗುತ್ತದೆ. ಮತ್ತಿನ್ನು ಬೆಳಕಿನ ಮುಖ ನೋಡಬೇಕೆಂದರೆ ಇಡೀ ರಾತ್ರಿ ಮುಗಿಯಬೇಕು. ಕತ್ತಲೆಯ ಹೆಬ್ಬಂಡೆಯನ್ನು ಅವುಡುಗಚ್ಚಿ ಭಾರ ಸಹಿಸಿ ಉರುಳಿಸಿದ ಮೇಲೆ ನಸುಕಿನ ಬೆಳಕು ಭೆಟ್ಟಿಯಾಗುತ್ತದೆ. ಹಗಲಿನ ಬೆಳಕಿನ ನಿಚ್ಚಳವಿಲ್ಲದ ಹಾಗಂತ ಕಾಳ ಕತ್ತಲೆಯ ಕುರುಡುತನವೂ ಅಲ್ಲದ ಅರೆ ಮಬ್ಬಿನ ಮುಸ್ಸಂಜೆಗೆ ಅದರದ್ದೇ ವಿಶಿಷ್ಟ ಒನಪಿದೆ, ಹೊಳಪಿದೆ. ಆಸ್ವಾದಿಸುವ ಮನಸ್ಸಿದ್ದರೆ ಮುಗಿಯದ ಮಾಯಾ ಮೋಹದ ಸೊಬಗಿದೆ.