ಬೆಳಕಿನ ಹಾಡು

ಒಂದೇ ಒಂದು ಹಣತೆ
ನಾಲ್ಕು ಕೋಣೆಯ ಒಂದೇ ಒಂದು
ಪುಟ್ಟ ಗೂಡು
ಬೆಳಗಬೇಕಿದೆ ವಿಶ್ವದೆಲ್ಲ ಬೆಳಕ ಕುಡಿದು
ಕತ್ತಲೆಯ ಚಾದರದ ತುಂಬ
ಮಿಂಚು ಹುಳುಗಳ ಲಾಟೀನು ಹಿಡಿದು

ಒಂದೇ ಒಂದು ಹಣತೆ
ಬೊಗಸೆಯ ತುಂಬ
ಕತ್ತಲೆಯ ಬಿಂದುವಿನಲ್ಲಿ
ಸುತ್ತಲೂ ತುಳುಕುವ ಬೆಳಕಿನ ಬಿಂಬ
ಯಾರ ಎದೆಯ ಕತ್ತಲೆಯೂ
ಉಳಿಯದಿಲ್ಲಿ
ಹಳೆ ಬೆಳಕು ಬೆಳಗುತಿದೆ
ಹೊಸ ಹಣತೆಯ ಕರುಳಲ್ಲಿ

ಬೇಡುವ ಕೈಗಳ ನಂಬಿಕೆಯ
ಬಿತ್ತು ಬತ್ತದೆದೆಯಲಿಮುತ್ತಿರುವ ಕತ್ತಲೆಯ ತುಂಬ
ಹರಿದ ಖೋಲಿಯ ನೂರಾರು ಕತೆಗಳು
ಬರುವ ಬೆಳಕಿನ ಬಸಿರಲಿ
ಹಲವು ಆಶೋತ್ತರಗಳು
ನನಸಾಗಿಸಿ ಉಳಿಸು ಬೆಳಕೇ
ಬೆಳಕಿನ ಸಸಿಯೊಂದನು
ಮೊಳಕೆಯೊಡೆವ ಹಸಿ ಕಾಳ
ಹರಸು ಹೊಸ ತಾವೊಂದನು

ಕೊಚ್ಚಿ ಹೋಗಲಿ ಅಜ್ಞಾನದ ಕತ್ತಲು
ಕೊಚ್ಚಿ ಹೋಗಲಿ ತಮಂಧದ ಬಾಳು
ಕೊಚ್ಚಿ ಹೋಗಲಿ ಸ್ವಾರ್ಥದ ಮಹಲು
ಕೊಚ್ಚಿ ಹೋಗಲಿ ಷಟ್ ದುಷ್ಟರ ಸವಾಲು

ನಮ್ಮ ಜೋಳಿಗೆಯ ತುಂಬ
ಬೆಳಕು ಮಾತ್ರವೇ ತುಂಬಿಕೊಳ್ಳಲಿ
ಬಳಕಿನ ತೊಟ್ಟಿಲ ಕಟ್ಟಿ
ಬೆಳಕಿನ ಜೋಗುಳ ಹಾಡಿ
ಬೆಳಕನ್ನೇ ತೂಗುವಂತಾಗಲಿ