ಸಂಕಟವನ್ನೇ ಬಸಿಯುವುದಿದೆ ಬದುಕಿನ ತುಂಬಾ…
ಸಂತಸವನ್ನೇ ಹೊಸೆಯುವುದಿದೆ ಬದುಕಿನ ತುಂಬಾ..

ಎಷ್ಟು ಕಳೆದು ಕೂಡಿದರೂ ಮುಗಿಯದು ಈ ಲೆಕ್ಕ
ಆದಷ್ಟು ಇಷ್ಟವನ್ನೇ ಹತ್ತಿಕ್ಕುವುದಿದೆ ಬದುಕಿನ ತುಂಬಾ

ಲೋಕದ ಅಳಲಿನ ಮುಂದೆ ನಮ್ಮದೆಂಥ ದುಃಖ..
ಇಷ್ಟಿಷ್ಟೇ ತಾಳ್ಮೆಯನ್ನೆ ಗುಣಿಸುವುದಿದೆ ಬದುಕಿನ ತುಂಬಾ

ಅಂಬೆಗಾಲಿಡುತ್ತಲೇ ಬರುತ್ತದೆ ಅಷ್ಟಷ್ಟೇ ನೋವು
ತುಸು ನಷ್ಟವನ್ನೇ ಹೊರುವುದಿದೆ ಬದುಕಿನ ತುಂಬಾ…

“ದೇವ “ನಿಚ್ಛೆ ಮೀರಿ ಏನಾದರೂ ನಡೆಯುವುದುಂಟೆ ಗೆಳೆಯಾ
ಹುಸಿ ನಗೆಯನ್ನೇ ಚಿಮ್ಮಿಸುವುದಿದೆ ಬದುಕಿನ ತುಂಬಾ

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ