ತಾವಿಜ್…
ಮೂರು ದೃಷ್ಟಿ ಬೊಟ್ಟಿಟ್ಟು
ತುಸು ವಿಳೆದೆಲೆ ಸುಟ್ಟು..
ಕಸಬರಿಗೆ ನಿವಾಳಿಸಿ…
ನಿವಾಳಿ ತೆಗೆಯುವ ಅವ್ವ…
ನಾನು
ತುಸು ಹಳದಿ
ತುಸು ಸಣ್ಣ
ಇಲ್ಲಾ
ತುಸುವೆ ತುಸು
ಬಿಳಿಚಿ ಕೊಂಡರೆ…
ಕೆಂಡ ತುಳಿದವಳಂತೆ…
ಚಡಪಡಿಸುತ್ತಾಳೆ…
ಇಡೀ ಈಶ್ವರನನ್ನೇ
ಒಂದು ಇಂಚಿನ ತಾವಿಜ್ ಅಲ್ಲಿ
ಹಿಡಿದಿಟ್ಟಿನೆಂದೆ ನಂಬುತ್ತಾಳೆ…
ಅವ್ವ…
ಗುಡಿ ಗುಂಡಾರ್ ಸುತ್ತಿ..
ಗೊರವಪ್ಪ ಭೂತಪ್ಪನ
ಕಟ್ಟೆ ಹತ್ತಿ ತರುತ್ತಾಳೆ ತಾವಿಜ್…
ಅವಳ ನಂಬುಗೆಯ
ಈ ಬುಗ್ಗೆ ಒಡೆದು ಆಳುವುದು..
ಸ್ವತಃ ಆ ಶಿವನಿಗೂ ಆಗಲ್ಲವೆನೋ…
ಎರಡು ಸಂಜೆ ಕಳೆದು
ಮಾರನೆಯ ದಿನಕ್ಕೆ
ಆ ಶಿವನು ವಿಲ ವಿಲನೇ ಒದ್ದಾಡಿ..
ಅವ್ವನ ನಂಬಿಕೆಯ ಜೊತೆಗೆ ಗುದ್ದಾಡಿ..
ಸೋತ ಶಿವ
ನಾನು ಚೇತರಿಸಿ ಕೊಂಡಂತೆಯೂ…
ಮಾಡಿಬಿಡುತ್ತಾನೆ…
ಎಂತದೋ ಗಾಳಿ ಶಕವಂತೆ..
ಬಾಲ ಗ್ರಹವಂತೆ…
ಇಂತಹ ಅಂತೆ ಕಂತೆಗಳ…
ಮೆದುಳ ಜೋಳಿಗೆ ತುಂಬಿ ಬಂದ…
ಸುರ್ ಸುರ್ ಬತ್ತಿಗಳಿಗೆಲ್ಲ ಮಂತ್ರದಂಡ ನನ್ನ ಅವ್ವನ ತಾವಿಜ್..
ಅದು ಏಕ ಅನೋಕಾ ಚೀಜ್….

ದೇವರಾಜ್ ಹುಣಸಿಕಟ್ಟಿ ರಾಣೇಬೆನ್ನೂರಿನವರು. ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು” ಇವರ ಪ್ರಕಟಿತ ಕೃತಿ ಕವಿತೆಯ ಓದು, ಬರೆಯುವುದು ಇವರ ಹವ್ಯಾಸ.
