ಮಿಕ್ಸಿ ಇಲ್ಲದ ಕಾಲವಾದರೂ ವಾರದಲ್ಲಿ ನಾಲಕ್ಕೋ ಐದೋ ದಿನ ದೋಸೆಯೇ ಬೆಳಗಿನ ತಿಂಡಿಗೆ. ಅವಲಕ್ಕಿ, ಉಪ್ಪಿಟ್ಟು ಅಂದರೆ ಅದು ಸೋಮಾರಿಗಳ ತಿಂಡಿ ಎನ್ನುವ ಅಭಿಪ್ರಾಯವಿತ್ತು. ಒಮ್ಮೆ ಮನೆಯಲ್ಲಿ ಹೆಂಗಸರಿಲ್ಲದೆ, ಗಂಡಸು ತಿಂಡಿಮಾಡಿಕೊಳ್ಳುವ ಪ್ರಮೇಯ ಬಂದರೆ ಅಕ್ಕಪಕ್ಕದ ಮನೆಯ ಹೆಂಗಸರು `ಮನೇಲ್ಲಿ ಯಾರೂ ಹೆಂಗಸ್ರಿಲ್ಲೆ. ನಮ್ಮನೆಗೆ ತಿಂಡಿಗೆ ಬಾ, ದೋಸೆ ತಿನ್ನಲಕ್ಕು’ ಎಂದು ಕರೆಯುವುದಿತ್ತು. ಈಗ ಎಲ್ಲರ ಮನೆಗೂ ಮಿಕ್ಸಿ, ಫ್ರಿಜ್ಜು ಬಂದಿರೋದ್ರಿಂದ ದೋಸೆಹಿಟ್ಟು ಸದಾ ಸಿದ್ಧ.
ಚಂದ್ರಮತಿ ಸೋಂದಾ ಬರೆದ ದೋಸೆ ಕುರಿತ ಪ್ರಬಂಧ ನಿಮ್ಮ ಓದಿಗೆ

`ಅಮ್ಮ ಇಲ್ಲೆ ಸ್ವಲ್ಪ ದೂರದಲ್ಲಿ ಬೆಂಗಳೂರು ದೋಸೆಗಳ ಮೇಳವಿದೆಯಂತೆ, ನಾವೆಲ್ಲ ಹೋಗೋಣ್ವಾ?’ ಅಂತ ದಿನತುಂಬಿದ ಬಸುರಿ ಮಗಳು ಕೇಳಿದಾಗ ಇಲ್ಲವೆನ್ನುವುದಾದರೂ ಹೇಗೆ? ಅದೂ ದೂರದ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ. ನಾವೆಲ್ಲ ವಾರಕ್ಕೆ ಮೂರು ಅಥವಾ ನಾಲ್ಕು ದಿನ ದೋಸೆ ತಿಂದು ದೊಡ್ಡವರಾದವರು.

ದಕ್ಷಿಣ ಭಾರತೀಯರಿಗೆ ದೋಸೆ ಎಂದರೆ ಅಷ್ಟೊಂದು ಪ್ರಿಯವಾದದ್ದು. ಅದಕ್ಕಾಗಿಯೇ ಅಲ್ವಾ? ಏನಕ್ಕಾದರೂ ಬೆಟ್ ಕಟ್ಟಿದರೆ `ಮಸಾಲೆದೋಸೆ ಸ್ವೀಟು ಕಾಫಿ ಕೊಡುಸ್ಬೇಕು’ ಅಂತ ನಮ್ಮ ಕಾಲೇಜುದಿನಗಳಲ್ಲಿ ಹೇಳುತ್ತಿದ್ದೆವು. ದೋಸೆಗಳ ಗುಂಪಿನಲ್ಲಿ ಮಸಾಲೆದೋಸೆಗೆ ಮಹಾರಾಣಿಯ ಸ್ಥಾನ. ದಿನನಿತ್ಯ ಮನೆಗಳಲ್ಲಿ ಮಾಡುವ ಸಾಧಾರಣ ದೋಸೆಯಿಂದ ಹಿಡಿದು ವಿಶೇಷ ದಿನಗಳಲ್ಲಿ ಮಾಡುವ ವಿವಿಧ ಬಗೆಯ ದೋಸೆಯವರೆಗೆ ದೋಸೆಗೆ ರಾಜಮನ್ನಣೆ. ಬಯಲು ಸೀಮೆಯವರಿಗಿಂತ ಮಲೆನಾಡಿನವರಿಗೆ ದೋಸೆಯ ಖಯಾಲಿ ಬಹಳ. ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ದೆಹಲಿಗೆ ಹೋಗಿದ್ದ ನನ್ನ ತಮ್ಮನಿಗೆ ಐದಾರು ದಿನಗಳ ಕಾಲ ದೋಸೆ ತಿನ್ನದೆ ಬಹಳ ಬೇಸರವಾಯಿತಂತೆ. ಗೊತ್ತಿಲ್ಲದ ಊರು. ದೋಸೆ ಎಲ್ಲಿ ಸಿಗುತ್ತದೆ ಎಂದು ಸಾಕಷ್ಟು ಹುಡುಕಿದರೂ ಎಲ್ಲೂ ಸಿಗಲಿಲ್ಲವಂತೆ. ಇವನ ಒದ್ದಾಟ ಕಂಡು ಪಂಜಾಬಿನವರೊಬ್ಬರು ದಕ್ಷಿಣ ಭಾರತದ ರೆಸ್ಟೋರೆಂಟ್ ಒಂದನ್ನು ತೋರಿಸಿದರಂತೆ. ಅವರೀಗ ಅವನ ಸ್ನೇಹಿತರು.

ನಮ್ಮೂರ ಕಡೆ ಮದುವೆ, ಮುಂಜಿ ಅಂತ ವಿಶೇಷ ದಿನಗಳಲ್ಲಿ ಬೆಳಗಿನ ತಿಂಡಿಗೆ ಉಪ್ಪಿಟ್ಟು, ಇಡ್ಲಿ, ಅವಲಕ್ಕಿ ಅಂತ ಮೂರು ದಿನಕ್ಕಿಂತ ಹೆಚ್ಚು ದಿನ ಮಾಡುವ ರೂಢಿ ಕಡಿಮೆ. ಮೊದಲೆಲ್ಲ ಹೇಳುವುದಿತ್ತು. `ಮೂರು ದಿವ್ಸದಿಂದ ದೋಸೆ ತಿನ್ನದೆ ಬೇಜಾರು. ಇವತ್ತು ದೋಸೆಗೆ ನೆನಸು. ಎರಡ್ಮೂರು ಜನ ಸೇರಿ ಒರಳಲ್ಲಿ ಬೀಸಿದರಾತು’ ಅಂತ. ಆಚೀಚೆ ಮನೆಯ ಒರಳುಗಳಿಗೂ ಕೆಲಸ. ಮಿಕ್ಸಿ ಇಲ್ಲದ ಕಾಲವಾದರೂ ವಾರದಲ್ಲಿ ನಾಲಕ್ಕೋ ಐದೋ ದಿನ ದೋಸೆಯೇ ಬೆಳಗಿನ ತಿಂಡಿಗೆ. ಅವಲಕ್ಕಿ, ಉಪ್ಪಿಟ್ಟು ಅಂದರೆ ಅದು ಸೋಮಾರಿಗಳ ತಿಂಡಿ ಎನ್ನುವ ಅಭಿಪ್ರಾಯವಿತ್ತು. ಒಮ್ಮೆ ಮನೆಯಲ್ಲಿ ಹೆಂಗಸರಿಲ್ಲದೆ, ಗಂಡಸು ತಿಂಡಿಮಾಡಿಕೊಳ್ಳುವ ಪ್ರಮೇಯ ಬಂದರೆ ಅಕ್ಕಪಕ್ಕದ ಮನೆಯ ಹೆಂಗಸರು `ಮನೇಲ್ಲಿ ಯಾರೂ ಹೆಂಗಸ್ರಿಲ್ಲೆ. ನಮ್ಮನೆಗೆ ತಿಂಡಿಗೆ ಬಾ, ದೋಸೆ ತಿನ್ನಲಕ್ಕು’ ಎಂದು ಕರೆಯುವುದಿತ್ತು. ಈಗ ಎಲ್ಲರ ಮನೆಗೂ ಮಿಕ್ಸಿ, ಫ್ರಿಜ್ಜು ಬಂದಿರೋದ್ರಿಂದ ದೋಸೆಹಿಟ್ಟು ಸದಾ ಸಿದ್ಧ.

ಮೊದಲಿಗಿಂತ ಈಗ ದೋಸೆಯ ವ್ಯಾಪಕತೆ ಹೆಚ್ಚಿದೆ. ಥರಾವರಿ ದೋಸೆಗಳು ಸವಿಯಲು ಸಿಗುತ್ತವೆ. ಹೋಟೆಲ್ ಉದ್ಯಮಕ್ಕೆ ಮೊದಲೂ ಹಲವು ಬಗೆಯ ದೋಸೆಗಳನ್ನು ಮಾಡುತ್ತಿದ್ದರು. ಬಯಲು ಸೀಮೆಯ ದೋಸೆಗಳೇ ಬೇರೆ ಬಗೆಯವು, ಮಲೆನಾಡಿನವು ವಿಭಿನ್ನವಾದುವು. ಸುಮಾರು ಏಳೆಂಟು ವರ್ಷಗಳ ಹಿಂದೆ ನಮ್ಮ ಬಡಾವಣೆಯಲ್ಲಿ ಒಂದು `ದೋಸೆ ಪಾಯಿಂಟ್’ ಶುರುವಾಗಿತ್ತು. ಐವತ್ತಕ್ಕೂ ಹೆಚ್ಚು ಬಗೆಯ ದೋಸೆಗಳನ್ನು ಮಾಡುವುದಾಗಿ ಅವರ ಜಾಹಿರಾತು. ನಿಜವೋ ಸುಳ್ಳೋ ಗೊತ್ತಿಲ್ಲ. ಅದೇಕೋ ಆರು ತಿಂಗಳಲ್ಲಿ ಅದು ಮುಚ್ಚಿಹೋಯಿತು. ಸಾದಾದೋಸೆ, ಮಸಾಲೆದೋಸೆ, ರವೆದೋಸೆ, ಸೆಟ್‌ದೋಸೆ, ಈರುಳ್ಳಿದೋಸೆ, ತುಪ್ಪದದೋಸೆ, ಪೇಪರ್‌ದೋಸೆ ಮುಂತಾಗಿ ಕೆಲವೇ ಬಗೆಯ ದೋಸೆಗಳು ಹೋಟೆಲ್ಲುಗಳಲ್ಲಿ ಬೇಡಿಕೆಯವು. ಎಷ್ಟೊಂದು ಬಗೆಯಲ್ಲಿ ಹಿಟ್ಟನ್ನು ತಯಾರಿಸಬೇಕು ಅಂತ ಮೊದಲು ಅಂದುಕೊಳ್ಳುತ್ತಿದ್ದೆವು. ಈಗ ಗೊತ್ತಾಗಿದೆ. ಸೆಟ್‌ದೋಸೆ, ಮಸಾಲೆದೋಸೆಗೆ ಒಂದೇ ಹಿಟ್ಟು ಅಂತ. ಆದಾಗ್ಯೂ. ಕೆಲವು ಹೋಟೆಲ್ಲಿನ ಮಸಾಲೆದೋಸೆಗೆ ವಿಶೇಷ ಬೇಡಿಕೆ. ಮೈಸೂರಲ್ಲಿ ಜಿಟಿಆರ್ ಮಸಾಲೆದೋಸೆ ಅಂದರೆ ಒಂದುಕಾಲಕ್ಕೆ ಎಲ್ಲರ ಬಾಯಲ್ಲೂ ನೀರು. ಪ್ಲೇಟಿನ ಮೇಲೆ ಬಾಳೆಯ ಚೂರನ್ನು ಹಾಕಿ ಅದರ ಮೇಲೆ ಆಲೂಗಡ್ಡೆ ಪಲ್ಯದೊಂದಿಗೆ ಸುತ್ತಿದದೋಸೆ, ಅದಕ್ಕೊಂದಿಷ್ಟು ಬೆಣ್ಣೆ ಇರುತ್ತಿತ್ತು. ಅವರ ಚಟ್ನಿಯ ಸವಿಯೂ ಇತರರಿಗಿಂತ ಭಿನ್ನ. ಈ ಸಾಲಿಗೆ ಮೈಲಾರಿ ಹೋಟೆಲ್ಲಿನ ದೋಸೆಯೂ ಸೇರುತ್ತದೆ. ಈ ದೋಸೆಯ ಬೇಡಿಕೆಯಿಂದಾಗಿ ಬೇರೆಯವರೂ ಈ ಹೆಸರನ್ನು ಬಳಸಿಕೊಳ್ಳಲು ಪ್ರಾರಂಭಿಸಿ `ಒರಿಜಿನಲ್ ಮೈಲಾರಿ ಹೋಟೆಲ್’ ಎನ್ನುವ ಬೋರ್ಡ್ ತಗುಲಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ದಾವಣಗೆರೆ ಬೆಣ್ಣೆದೋಸೆ ಅಂದ್ರೆ ಯಾರ ಬಾಯಲ್ಲಿ ನೀರೂರದೆ ಇರೋಕೆ ಸಾಧ್ಯ ಹೇಳಿ. ಈಗ ದೊಡ್ಡ ನಗರಗಳಲ್ಲಿ ದಾವಣಗೆರೆ ಬೆಣ್ಣೆದೋಸೆ ಸಿಗುತ್ತದೆ ಎನ್ನುವ ಬೋರ್ಡ್ ಕಾಣಿಸುತ್ತದೆ. ಇನ್ನು ಆಹಾರ ಮೇಳಗಳಲ್ಲಿ ದಾವಣೆಗೆರೆ ಬೆಣ್ಣೆದೋಸೆ ಸ್ಟಾಲಿನ ಮುಂದೆ ಉದ್ದದ ಕ್ಯೂ ಇರೋದನ್ನು ನೋಡಬಹುದು. ಇದನ್ನು ಶುರುಮಾಡಿದ ಪುಣ್ಯಾತ್ಮರಂತೆ ಮನೆಯಲ್ಲಿಯೇ ತೆಗೆದ ಬೆಣ್ಣೆಯ ಪರಿಮಳದ ಸ್ವಾದಿಷ್ಟ ರುಚಿ ನೀಡಲಾಗದಿದ್ದರೂ ಈ ದೋಸೆ ತಿನ್ನುವ ಗಮ್ಮತ್ತೇ ಬೇರೆ. ಅನೇಕರು ಅಲ್ಲಿ ದೋಸೆಯನ್ನು ಸವಿಯುವುದಲ್ಲದೆ, ಮನೆಯಲ್ಲಿರುವವರಿಗೆ ಕಟ್ಟಿಸಿಕೊಂಡು ಹೋಗುವುದೂ ಇದೆ. ನಮ್ಮೆದುರೇ ದೋಸೆ ತಯಾರಾಗುವುದರಿಂದ ನಮಗೊಂದಿಷ್ಟು ನೋಡುವ ಭಾಗ್ಯವೂ ದೊರೆಯುತ್ತದೆ.

ಮನೆಗಳಲ್ಲಿ ಮಾಡುವ ದೋಸೆಗಳು ತೀರ ಭಿನ್ನವಾದುವು. ಮೊದಲೆಲ್ಲ ದೋಸೆ ಎಂದರೆ ಸಾಮಾನ್ಯವಾಗಿ ಅಕ್ಕಿಯ ಜೊತೆಯಲ್ಲಿ ಉದ್ದಿನಬೇಳೆ ಮೆಂತ್ಯ ಸೇರಿಸಿ ಮಾಡುವುದು ಎನ್ನುವ ಭಾವನೆಯಿತ್ತು. ಆಯಾ ಪ್ರದೇಶದಲ್ಲಿ ಬೆಳೆಯುವ ಆಹಾರ ಬೆಳೆಗಳನ್ನು ಆಧರಿಸಿ ದೋಸೆ ಮಾಡುವ ವಿಧಾನದಲ್ಲಿ ಬದಲಾವಣೆಗಳಿದ್ದವು. ಈಗಂತು ಸಿರಿಧಾನ್ಯದ ಬಗೆಗೆ ಹೆಚ್ಚಿನ ಆಸಕ್ತಿ ಮತ್ತು ಪ್ರಚಾರದ ಕಾರಣದಿಂದ ಅಕ್ಕಿಯ ಜಾಗದಲ್ಲಿ ಸಿರಿಧಾನ್ಯ ಸ್ಥಾನಪಡೆಯುತ್ತಿದೆ. ದೋಸೆ, ನೀರ್‌ದೋಸೆ ಯಾವುದೇ ಇರಲಿ, ಸ್ವಲ್ಪ ಸಿರಿಧಾನ್ಯವನ್ನು ಸೇರಿಸಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಸ್ವಾದವೂ ಅಧಿಕ ಎನ್ನುವ ಮಾತು ಕೇಳಿಬರುತ್ತಿದೆ. ಅಕ್ಕಿಯ ಜೊತೆಗೆ ತುಸು ತೆಂಗಿನತುರಿ ಸೇರಿಸಿ ನೀರ್‌ದೋಸೆ ಮಾಡುವುದಿದೆ. ಈ ನೀರ್‌ದೋಸೆ ಈಗ ಚಲನಚಿತ್ರವಾಗಿಯೂ ಹೆಸರು ಮಾಡಿದೆ. ಅಕ್ಕಿಯೊಂದಿಗೆ ವಿವಿಧ ಬೇಳೆಗಳನ್ನು ಹಾಕಿ ಅಡೆದೋಸೆ ಮಾಡಿ ತಿನ್ನುವ ಪರಿಯೇ ಬೇರೆ. ಕೆಲವರು ಈ ಅಡೆದೋಸೆಗೆ ಹಿಟ್ಟು ತಯಾರಿಸುವಾಗ ಅದಕ್ಕೆ ವಿಶೇಷ ಪರಿಮಳ ಸೂಸುವ ಮಸಾಲೆ ಸೇರಿಸಿ ರುಚಿ ಹೆಚ್ಚಿಸುತ್ತಾರೆ. ಒಂದರ್ಥದಲ್ಲಿ ಇದು ನಿಜವಾದ ಮಸಾಲೆದೋಸೆ. ರೂಢಿಯಲ್ಲಿರುವ ಮಸಾಲೆದೋಸೆಗೆ ಯಾವುದೇ ಮಸಾಲೆ ಪದಾರ್ಥ ಹಾಕದಿದ್ದರೂ ಅದಕ್ಕೆ ಆ ಹೆಸರು ಹ್ಯಾಗೆ ಬಂತೋ?

ಮಲೆನಾಡಿಗರು ಮಾಡುವ ದೋಸೆಯ ವೈವಿಧ್ಯವೇ ಬೇರೆ ಬಗೆಯದು. ಕೆಲವಕ್ಕೆ ದೋಸೆಯ ಬದಲಿಗೆ ತೆಳ್ಳೇವು ಎಂದು ಕರೆಯುತ್ತಾರೆ. ಇದನ್ನು ದೋಸೆಯಂತೆ ಸೌಟಿನಿಂದ ಕಾವಲಿಯ ಮೇಲೆ ಹುಯ್ಯುವುದಿಲ್ಲ. ಬಾಳೆಲೆಯಲ್ಲಿ ತೆಳುವಾಗಿ ಹಿಟ್ಟನ್ನು ಕಾವಲಿಗೆ ಸವರುತ್ತಾರೆ. ಇದು ಕಾಗದದಂತೆ ಗರಿಗರಿಯಾಗಿರುತ್ತದೆ. ಇದನ್ನು ಮಾಡಲು ಸ್ವಲ್ಪ ಕೌಶಲ್ಯ ಬೇಕು. ಸೌತೆಕಾಯಿ, ಬಣ್ಣದಸೌತೆಯನ್ನು ಅಕ್ಕಿಯ ಜೊತೆಗೆ ಸೇರಿಸಿ ಮಾಡುವುದು ಸಾಂಪ್ರದಾಯಿಕವಾಗಿ ಮಾಡುವ ತೆಳ್ಳೇವು. ಈಗೀಗ ಸೋರೆಕಾಯಿ, ಹೀರೇಕಾಯಿ ಮುಂತಾದ ತರಕಾರಿಗಳನ್ನು ಬಳಸಿಯೂ ಮಾಡಲಾಗುತ್ತಿದೆ. ದೀಪಾವಳಿ ಸಮಯದಲ್ಲಿ ಮಾಡುವ ಗೋಪೂಜೆ ತೆಳ್ಳೇವಿನ ಸ್ವಾದ ವಿಶಿಷ್ಟವಾದುದು. ಸೌತೆಕಾಯಿ, ಕೆಸುವಿನಗೆಡ್ಡೆ, ಬಾಳೆಕಾಯಿ, ಹಸಿ ಅರಿಶಿಣ ಎಲ್ಲವನ್ನು ಅಕ್ಕಿಯ ಜೊತೆಯಲ್ಲಿ ರುಬ್ಬಿ ಮಾಡುವ ಆ ತೆಳ್ಳೇವಿನ ಸ್ವಾದ ಉಳಿದ ತೆಳ್ಳೇವುಗಳಿಗೆ ಬಾರದು. ಈ ತೆಳ್ಳೇವಿಗೆ ಶುಂಟಿ ಒಣಮೆಣಸಿನಕಾಯಿಯ ಕೆಂಪುಚಟ್ನಿ ಮತ್ತು ಕಾಯಿತುರಿ ಬೆಲ್ಲ ಸಂಗಾತಿಗಳು. ಗೋಪೂಜೆ ದನಗಳಿಗೆ ನೈವೇದ್ಯಕ್ಕೆಂದು ಮಾಡುವ ಇದನ್ನು ಬಯಸಿ ತಿನ್ನುವವರು ಬಹಳ ಜನ. ಹಾಗಾಗಿ ಉಳಿದ ದಿನಗಳಲ್ಲಿ ಇದನ್ನು ಮಾಡೆಂದು ಬೇಡಿಕೆ ಇಡುವವರೂ ಇದ್ದಾರೆ.

ಹಲಸಿನಹಣ್ಣು, ಬಾಳೆಹಣ್ಣುಗಳನ್ನು ಅಕ್ಕಿಯೊಂದಿಗೆ ರುಬ್ಬಿ ಮಾಡುವ ಸಿಹಿದೋಸೆ ಮಲೆನಾಡಿನ ವಿಶೇಷ. ಹಲಸಿನಹಣ್ಣಿನದು ದೋಸೆಯಾದರೆ (ಹಲಸಿನಹಣ್ಣಿನಲ್ಲಿಯೂ ತೆಳ್ಳೇವು ಮಾಡುತ್ತಾರೆ) ಬಾಳೆಹಣ್ಣಿನದಕ್ಕೆ ಧಡಕ್ನ ಎಂದೂ ಕರೆಯುವುದಿದೆ. ಅದನ್ನು ಸೆಟ್‌ದೋಸೆಯಂತೆ ದಪ್ಪವಾಗಿ ಮಾಡುತ್ತಾರೆ. ಹಲಸಿನಹಣ್ಣು ಬೇಸಿಗೆ ಕಾಲಕ್ಕೆ ಸೀಮಿತ. ಆದರೆ ಬಾಳೆಹಣ್ಣು ಸರ್ವಋತು ಬೆಳೆ. ಈ ಸಿಹಿದೋಸೆಗಳಿಗೆ ಚಟ್ನಿ ಮಾಡುವ ಗೋಜಿಲ್ಲ. ಮನೆಯಲ್ಲಿ ಬೆಣ್ಣೆ ಕಾಯಿಸಿ ಮಾಡಿದ ಘಮ್ಮೆನ್ನುವ ತುಪ್ಪದ ಜೊತೆ ಸವಿಯುವುದನ್ನು ನೆನೆಪಿಸಿದರೆ ಬಾಯಲ್ಲಿ ನೀರು. ಬೇಕಿದ್ದರೆ ಕಾಯಿಚಟ್ನಿ ಜೊತೆಗೂ ತಿನ್ನಬಹುದು. ಮನೆಗೆ ಬಂದ ಅತಿಥಿಗಳಿಗೂ ಇದನ್ನು ಮಾಡಿ ಬಡಿಸಬಹುದು.

ಯಾವುದೇ ಧಾನ್ಯವನ್ನು ಹಾಕದೆ ತೆಳ್ಳೇವು ಮಾಡಬಹುದು ಎಂದರೆ ನಂಬುತ್ತೀರಾ? ಅದೇ ಹಲಸಿನಕಾಯಿಯ ತೆಳ್ಳೇವು. ಹಲಸಿನಕಾಯಿಯ ತೊಳೆಗಳನ್ನು ಸಣ್ಣಗೆ ಹೆಚ್ಚಿಕೊಂಡು ಒರಳು ಅಥವಾ ಮಿಕ್ಸಿಯಲ್ಲಿ ನುಣ್ಣಗಾಗುವಂತೆ ರುಬ್ಬಿ ಅದನ್ನು ಬಾಳೆಲೆಯ ಚೂರಿನಿಂದ ಕಾವಲಿಯ ಮೇಲೆ ಹರಡಿದರೆ ರುಚಿಯಾದ ತೆಳ್ಳೇವು ಸವಿಯಲು ಸಿದ್ಧ. ಅದಕ್ಕೆ ಜೇನುತುಪ್ಪ ಒಳ್ಳೆಯ ಸಂಗಾತಿ. ಸಾಯಂಕಾಲದ ತಿಂಡಿಗೆ ಇದು ಬಹಳ ಸೂಕ್ತ.

ಇದು ನಮ್ಮ ದೋಸೆಯ ಕತೆ. ದೋಸೆ ತಿನ್ನದ ಅಥವಾ ಇಷ್ಟಪಡ ದಕ್ಷಿಣ ಭಾರತದವರು ಯಾರಾದರೂ ಇದ್ದಾರಾ!