ಅಂತೂ ನಮ್ಮೂರಿಗೆ ನಂಜುಂಡಿ ಕಲ್ಯಾಣದ ಭಾಗ್ಯ. ಬರೋಬ್ಬರಿ ಒಂದು ವರ್ಷದ ನಂತರ. ಆದರೂ ನಮ್ಮ ಜನಕ್ಕೆ ಅದು ರಿಲೀಜ್ ಪಿಕ್ಚರ್. ಜಟಕಾ ಲೌಡ್ ಸ್ಪೀಕರ್ ಕಟ್ಟಿಕೊಂಡು ಸುತ್ತ ಹತ್ತೂರುಗಳಿಗೆ ಹೋಗಿ… “ಪ್ರೀಯ ಕಲಾಭಿಮಾನಿಗಳೆ.. ಕಲಾ ರಸಿಕರೆ.. ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ.. ಮತ್ತೆ ಮತ್ತೆ ನೋಡಲೇಬೇಕಾದ ಸಿನೇಮಾ..” ಎನ್ನುತ್ತ.. “ಮರೆಯದಿರಿ.. ಮರೆತು ನಿರಾಶರಾಗದಿರಿ..…” ಎನ್ನುವ ನೊಟೀಸ್ ನೀಡಿ ಮರಳಿತು. ಸೈಕಲ್ ರಂಗ ಬಸ್ ಸ್ಟಾಪು ಸಲೂನು ಕೂಟು ಸರ್ಕಲ್‌ಗಳಲ್ಲಿ ಪೋಸ್ಟರ್ ಅಂಟಿಸಿದ. ಪೋಸ್ಟರ್ ನೋಡಿದ ಚಿಕ್ಕ ಹುಡುಗನೊಬ್ಬ.. “ಯಣ್ಣಾ.. ಮುಂದಿನ ಪಿಚ್ಚರ್ ಯಾವ್ದಾ..” ಅಂತಾ ಕೇಳಿ ಬೈಗುಳ ತಿಂದ.
ಲಿಂಗರಾಜ ಸೊಟ್ಟಪ್ಪನವರ ಬರೆದ ಪ್ರಬಂಧ ನಿಮ್ಮ ಓದಿಗೆ

ಸುಮಾರು ಒಂದು ವರ್ಷದ ತಪಸ್ಸು ನಮ್ಮದು. ಆ ಸಿನೇಮಾ ಬಗ್ಗೆ ಶುಕ್ರವಾರದ ಪುರವಣಿಯಲ್ಲಿ ನೋಡಿ ಓದಿ.. ಆ ಪೋಸ್ಟರ್‌ಗಳನ್ನು ಪುಸ್ತಕಕ್ಕೆ ಕವರ್ ಹಾಕಿ, ಇಲ್ಲವೆ ಟ್ರಂಕಿನ ಒಳಗಡೆ ಅಂಟಿಸಿಕೊಂಡು.. ದೊಡ್ಡ ಕುತೂಹಲವಿಟ್ಟುಕೊಂಡು ಈ ಸಿನೇಮಾ ನಮ್ಮೂರಿಗೆ ಯಾವಾಗ ಬರುತ್ತೋ…. ಅಂತ ದಿನ ಎಣಿಸುತ್ತಿದ್ದೆವು. ಟ್ರಂಕು ತೆರೆದಾಗಲೆಲ್ಲ ಸಾಕ್ಷಾತ್ ದೈವ ದರ್ಶನದಂತಹ ಭಾವ. ಈಜುಡುಗೆಯಲ್ಲಿನ ಸುಂದರಿಯೆ ನಮ್ಮ ಪಾಲಿನ ದೇವತೆ.

ಆಗ ಮಾಲಾಶ್ರೀ ಎಂಬ ಹೆಸರೆ ನಮಗೆ ಒಂದು ರೀತಿಯ ಮಾದಕತೆಯನ್ನು ತುಂಬಿಕೊಂಡಂತಿತ್ತು. ಸ್ನೇಹಿತರ ವಲಯದಲ್ಲಿ ನಿತ್ಯವೂ.. ನೀರಲ್ಲಿ ಮಿಂದೇಳುತ್ತಿದ್ದ ಆಕೆಯ ಎದೆಗಾರಿಕೆಯ ಪ್ರಶಂಸೆ. ಪೋಸ್ಟರ್‌ನಲ್ಲಿ ನೋಡಿದ್ದನ್ನು ಕಲ್ಪನೆ ಮೂಲಕ ಸಾಕಾರಗೊಳಿಸುವ ಪ್ರಯತ್ನ ನಮ್ಮದು. ಈ ಕುರಿತ ಜಿಜ್ಞಾಸೆಗಾಗಿ ಸಮಾನ ಮನಸ್ಕ ಗೆಳೆಯರ ಬಳಗ ಸೃಷ್ಠಿಯಾಗಿತ್ತು.

ನಮ್ಮೂರಿಗೆ (ಅಂದರೆ, ನಾವಿದ್ದ ವಸತಿ ಶಾಲೆಯಿದ್ದ ಊರು ) ನಂಜುಂಡಿ ಕಲ್ಯಾಣ ಯಾವಾಗ ಬರುತ್ತೋ.. ಎಂಬ ಚರ್ಚೆ ಬಹುಶಃ ಆ ಸಿನೇಮಾ ಬಿಡುಗಡೆಯಾಗಿ ಒಂದು ವರ್ಷದವರೆಗೆ ತನ್ನ ಕಾವನ್ನು ಉಳಿಸಿಕೊಂಡಿತ್ತು. ಸಮಯ ಸಿಕ್ಕಾಗಲೆಲ್ಲ ಥೇಟರ್‌ನ ಗೋಡೆಯಲ್ಲಿನ.. “ಬರುತ್ತದೆ” “ಕಮಿಂಗ್ ಸೂನ್..” ಎಂಬ ಬರಹದಡಿಯ ಪೋಸ್ಟರ್‌ಗಳನ್ನು ಕಣ್ಣು ತುಂಬಿಕೊಂಡು ಬರುತ್ತಿದ್ದೆವು.

ಆ ನಿಂಬೆ ಹಣ್ಣಿನಂತಹ ಹುಡುಗಿಯ ಮುಂದೆ ಆಗ ಪ್ರಚಲಿತದಲ್ಲಿದ್ದ ಹಿರೋಯಿನ್‌ಗಳು ನಮ್ಮದೆ ಕಾರಣಗಳಿಗಾಗಿ ಯಾತಕ್ಕೂ ಬಾರದವರು ಎನಿಸಿದ್ದರು. ನಮ್ಮ ಹಿರೋಯಿನ್ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸುವಂತೆ ಮಾಲಾಶ್ರೀ ಮೂರ್ತಿವೆತ್ತು ನಿಂತಿದ್ದಳು…  ರಾಣೆಬೆನ್ನೂರು ಹುಬ್ಬಳ್ಳಿ ದಾವಣಗೆರೆಗೆ ಹೋಗಿ ಸಿನೇಮಾ ನೋಡಿ ನಮಗಿಂತ ಮೊದಲೆ ಧನ್ಯವಾದವರು.. ತಮ್ಮ ಮಕ್ಕಳಿಗೆ ಮಾಲಾಶ್ರೀ ಅಂತಲೆ ಹೆಸರಿಡುವದೆಂದು ಹರಕೆ ಹೊತ್ತುಕೊಂಡಿದ್ದರು. ತುಸು ಕೆಂಪು ಕೆಂಪು.. ದಪ್ಪ ದಪ್ಪ ಇದ್ದ ಹುಡುಗಿಯರಿಗೆಲ್ಲ ಮಾಲಾಶ್ರೀಯನ್ನು ಆಧ್ಯಾರೋಪಿಸಿದರು. ಅಂತಹ ಕನ್ಯೆ ಹುಡುಕಿ ಹುಡುಕಿ ಮದುವೆ ಮುಂದೂಡಿದ್ದು ಇದೆ.

ನಮ್ಮಲ್ಲೆ ಒಬ್ಬ ಹುಬ್ಬಳ್ಳಿಯಾಂವ ಇದ್ದ. ಅವನು ಊರಿಗೆ ಹೋದಾಗ… ಕಲ್ಯಾಣವನ್ನು ನೋಡಿ ಬಂದಿದ್ದ. ಆ ಭಾಗ್ಯವಂತ ರಾತ್ರಿಯಾಗುತ್ತಲೆ ಡಾರಮೆಂಟ್ರಿಯಲ್ಲಿ…. ಕಲ್ಯಾಣದ ಕತೆಯನ್ನು ಶುರು ಹಚ್ಚಿಕೊಳ್ಳುತ್ತಿದ್ದ. ಸುತ್ತಲೂ ಕೂತ ನಮ್ಮಯ ಮಧ್ಯೆ ಅವನು ತನ್ನ ಆಕ್ಶನ್.. ರಸಭರಿತ ವಿವರಣೆ.. ಸಿನೇಮಾ ಕಣ್ಣಿಗೆ ಕಟ್ಟಿತ್ತಿತ್ತು. ಆತನೆ ನಮಗೆ ಹಿರೋ. ಈ ತರಹದವರಿಗೆ ನಮ್ಮಲ್ಲಿ ತುಂಬಾ ಡಿಮ್ಯಾಂಡು. ನಮ್ಮದು ರೆಸಿಡೆನ್ಶಿಯಲ್ ಸ್ಕೂಲು, ಊರಿನಿಂದ ಮೂರು ಕಿಲೋಮೀಟರ್ ದೂರ. ದೊಡ್ಡ ದೊಡ್ಡ ಡಾರ್‍ಮೆಂಟ್ರಿಗಳು.. ಎರಡು ನೂರಕ್ಕೂ ಹೆಚ್ಚು ಹುಡುಗರು. ಶುದ್ಧ ಗಂಡು ಮಕ್ಕಳ ಶಾಲೆ ನಮ್ಮದು! ಹಾಗಾಗಿಯೆ ಏನೊ ನಮ್ಮ ಕುತೂಹಲದ ಉದ್ದಗಲಗಳು ತುಂಬಾ ಭಿನ್ನವಾದವು.

ನಮ್ಮ ಶಾಲೆಯ ಹೆಸರು “ಗಾಂಧೀ ಗುರುಕುಲ” ಡ್ರೆಸ್ಸು ಹಾಸು ಹೊದಿಕೆ ಒಳ ಉಡುಪು ಎಲ್ಲ ಖಾದಿಮಯ. ಮನಸ್ಸು ಖಾದಿ! ಯೋಗ ಧ್ಯಾನ ಪ್ರಾರ್ಥನೆ ನೂಲು ನೆಯ್ಯು.. ಕೃಷಿ.. ರೇಷ್ಮೆ, ಶಿಸ್ತು ಶಿಷ್ಠಾಚಾರಗಳಿಂದ ಹೆಣೆಯಲ್ಪಟ್ಟ ನಿರ್ಜೀವ ಜಮಖಾನೆಯಂತಹ ಹುಡುಗರು. ವರ್ಷಕ್ಕೆ ಎರಡು ಬಾರಿ ಮಾತ್ರ ನಮ್ಮ ಊರುಗಳ ದರ್ಶನ. ಪಾಲಕರ ಭೇಟಿಗೂ ನಿರ್ಬಂಧ. ಇದಕ್ಕೆ ಮೆರಗು ಕೊಟ್ಟಂತೆ ತೀರಾ ಕಟ್ಟು ನಿಟ್ಟಿನ ದೂರ್ವಾಸರಂತ ಮೇಷ್ಟ್ರುಗಳು. ಹಂಡ್ರೆಡ್ ಪರ್ಸೆಂಟ್ ಬ್ರಹ್ಮಚಾರಿಯಾದ ಹೆಡ್ ಬಾಸು..! ಐದನೆ ಇಯತ್ತೆಗೆ ಇಂತಹ ವನವಾಸ. ಪಾಂಡವರಿಗೆ ಕೃಷ್ಣನಾದರೂ ಇದ್ದ. ನಮ್ಮ ಪಾಲಿಗೆ ಕುಚೇಲನೂ ಇಲ್ಲ. ಇಂತಹ ಜೈಲಿನಲ್ಲಿ ನಂಜುಂಡಿ ಕಲ್ಯಾಣದ ಕಲರ್ ಕಲರ್ ಕನಸುಗಳು.

ಅಂತೂ ನಮ್ಮೂರಿಗೆ ನಂಜುಂಡಿ ಕಲ್ಯಾಣದ ಭಾಗ್ಯ. ಬರೋಬ್ಬರಿ ಒಂದು ವರ್ಷದ ನಂತರ. ಆದರೂ ನಮ್ಮ ಜನಕ್ಕೆ ಅದು ರಿಲೀಜ್ ಪಿಕ್ಚರ್. ಜಟಕಾ ಲೌಡ್ ಸ್ಪೀಕರ್ ಕಟ್ಟಿಕೊಂಡು ಸುತ್ತ ಹತ್ತೂರುಗಳಿಗೆ ಹೋಗಿ… “ಪ್ರೀಯ ಕಲಾಭಿಮಾನಿಗಳೆ.. ಕಲಾ ರಸಿಕರೆ.. ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ.. ಮತ್ತೆ ಮತ್ತೆ ನೋಡಲೇಬೇಕಾದ ಸಿನೇಮಾ..” ಎನ್ನುತ್ತ.. “ಮರೆಯದಿರಿ.. ಮರೆತು ನಿರಾಶರಾಗದಿರಿ..…” ಎನ್ನುವ ನೊಟೀಸ್ ನೀಡಿ ಮರಳಿತು. ಸೈಕಲ್ ರಂಗ ಬಸ್ ಸ್ಟಾಪು ಸಲೂನು ಕೂಟು ಸರ್ಕಲ್‌ಗಳಲ್ಲಿ ಪೋಸ್ಟರ್ ಅಂಟಿಸಿದ. ಪೋಸ್ಟರ್ ನೋಡಿದ ಚಿಕ್ಕ ಹುಡುಗನೊಬ್ಬ.. “ಯಣ್ಣಾ.. ಮುಂದಿನ ಪಿಚ್ಚರ್ ಯಾವ್ದಾ..” ಅಂತಾ ಕೇಳಿ ಬೈಗುಳ ತಿಂದ. ಆ ಹುಡುಗನಿಗೆ ಬೇಕಿದ್ದ ರೋಷ ಆವೇಶಭರಿತ ಭಂಗಿಯ ಪೈಟಿಂಗ್ ಹಿರೋಗಳು ಪೋಸ್ಟರ್‌ನಲ್ಲಿರಲಿಲ್ಲ.

ನಮ್ಮ ಡಾರಮೆಟ್ರೀಯಲ್ಲಿ ಕೂತುಹಲ ಮರಿಹಾಕತೊಡಗಿತ್ತು. ಈ ಸರ್ತಿ ಗಣಪತಿ ಹಬ್ಬಕ್ಕೆ ಊರಿಗೆ ಹೋದಾಗ ನೋಡಿಯೆತೀರುವದೆಂದು ಯೋಚಿಸಿದೆವು. ಆದರೆ ಅದಕ್ಕಿನ್ನೂ ಇಪ್ಪತ್ತು ದಿನಗಳು ಕಾಯಬೇಕಿತ್ತು. ನಮಗದು ಆಗಲಾರದ್ದು. ಈ ನಡುವೆ ಕುಂದಗೋಳ ಸರ್ ಅದನ್ನ ನೋಡಿದ್ದಾರಂತೆ… ಅನ್ನುವ ಸುದ್ದಿಯನ್ನು ಸ್ನೇಹಿತನೊಬ್ಬ ಹೊತ್ತು ತಂದ. ಅವರೊಡನೆ ಸದರ ಇತ್ತಾದರೂ ನಮಗೂ ಸಿನೇಮಾಕ್ಕೆ ಅವಕಾಶ ಕೊಡಿಸಿ ಅಂತಾ ಕೇಳುವ ಧೈರ್ಯವಾಗಲಿಲ್ಲ. ಆದರೆ ಆ ವಿಷಯ ನಮಗೆ ನೈತಿಕ ಸ್ಥೈರ್ಯ ತಂದು ಕೊಟ್ಟಿತ್ತು.

ಈ ಸಿನೇಮಾ ಹುಡುಗರು ನೋಡಬಾರದ್ದು.. ಗುಂಡು.. ಮತ್ತು ತುಂಡುಡುಗೆಯ ಹುಡುಗಿಯನ್ನು ನೋಡಿ ನಮ್ಮ ಹೈಕಳು ಹಾಳಾಗಿ ಹತ್ತಿಬಿತ್ತಿ ಹೋಗ್ತವೆ ಅಂತಾ ಈ ಮೊದಲೆ ಸಿನೇಮಾ ಸವಿದ ದೊಡ್ಡ ಮನುಷ್ಯರು ಬ್ಯಾನು ಮಾಡುವ ಹವಣಿಕೆಯಲ್ಲಿದ್ದರು. ಇದರಿಂದ ನಮ್ಮ ಕೂತುಹಲ ಇನ್ನೂ ಹೆಚ್ಚಿತು. ತುಂಬಾ ಸ್ಟ್ರಿಕ್ಟು ಎಂದು ಹೆಸರಾದ ನಮ್ಮ ಶಾಲೆಯಲ್ಲಿ ಈ ಕುರಿತು ಉಸಿರೆತ್ತುವದೂ ಅಪರಾಧವಾಗಿತ್ತು.

ಅದೊಂದು ದಿನ ಹೊಸ ಸುದ್ಧಿ ಸ್ಪೋಟವಾಗಿತ್ತು. ಮಿಲ್ಟ್ರೀ ತನಗೆ ಬೇಕಾದ ಹುಡುಗರನ್ನು ಸಿನೇಮಾಕ್ಕೆ ಕರ್ಕೊಂಡು ಹೋಗಿದ್ದನಂತೆ…! ನಮ್ಮ ಭಾಗ್ಯದ ಬಾಗಿಲು ಕಣ್ಣ ಮುಂದೆಯೆ ಇದೆ. ಅದುವೆ ಕುಕ್ಕರ್ ಗುಡ್ಡಪ್ಪ. ನಂಜುಂಡಿ ಕಲ್ಯಾಣಕ್ಕೆ ಅವನೆ ಗೇಟ್ ಪಾಸ್. ನಾನು ಹಿಂದೆ ಆರ್ಮಿಗೆ ಸೆಲೆಕ್ಟ್ ಆಗಿದ್ದೆ. ಮೊಳಕಾಲು ಐಬು ಇದ್ದ ಕಾರಣ ರಿಜೆಕ್ಟ್ ಆದೆ.. ಅಂತಾ ಬೂಸಿ ಬಿಡುತ್ತಿದ್ದ ಗುಡ್ಡಪ್ಪನಿಗೆ ಕುಕ್ಕರ್ ಬದಲಿಗೆ ಮಿಲ್ಟ್ರೀ ಅನ್ನುವ ಅಡ್ಜೇಕ್ಟಿವ್ ಅಂಟಿಕೊಂಡಿತ್ತು. ಮಿಲ್ಟ್ರೀಯನ್ನು ಓಲೈಸುವದು ಸುಲಭದ ಸಂಗತಿಯಾಗಿರಲಿಲ್ಲ. ಅವನು ಏನಾದರೂ ಕೆಲಸ ತೆಗೆದುಕೊಂಡೆ ಮೂಸಿ ನೋಡುವಂತವ. ನಾವಾದರೂ ಅಷ್ಟೇ ಇದಕ್ಕಾಗಿ ಏನಾದರೂ ಮಾಡಲು ಸಿದ್ಧವಿದ್ದೆವು. ಅವನು ತೊಳೆಯಬೇಕಿದ್ದ ಪಾತ್ರೆ ಪಗಡೆಗಳನ್ನು ತೊಳೆಯಿಸಿಕೊಂಡು. ಅಂತಹ ಹುಡುಗರಿಗೆ ಅಷ್ಟಿಷ್ಟು ಉಪಕಾರವೆನ್ನುವಂತದ್ದನ್ನು ಮಾಡುತ್ತಿದ್ದ. ಹಿಂದೊಮ್ಮೆ ನಾವು ಈ ಕಾರಣಕ್ಕಾಗಿ ಮಿಲ್ಟ್ರೀ ವಿರುದ್ಧ ತಿರುಗಿ ಬಿದ್ದಿದ್ದೆವು… ನಿನ್ನ ಕೆಲಸ ನೀ ಮಾಡು.. ಎಂದಿದ್ದೆವು.

ವರ್ಷಕ್ಕೆ ಎರಡು ಬಾರಿ ಮಾತ್ರ ನಮ್ಮ ಊರುಗಳ ದರ್ಶನ. ಪಾಲಕರ ಭೇಟಿಗೂ ನಿರ್ಬಂಧ. ಇದಕ್ಕೆ ಮೆರಗು ಕೊಟ್ಟಂತೆ ತೀರಾ ಕಟ್ಟು ನಿಟ್ಟಿನ ದೂರ್ವಾಸರಂತ ಮೇಷ್ಟ್ರುಗಳು. ಹಂಡ್ರೆಡ್ ಪರ್ಸೆಂಟ್ ಬ್ರಹ್ಮಚಾರಿಯಾದ ಹೆಡ್ ಬಾಸು..! ಐದನೆ ಇಯತ್ತೆಗೆ ಇಂತಹ ವನವಾಸ. ಪಾಂಡವರಿಗೆ ಕೃಷ್ಣನಾದರೂ ಇದ್ದ. ನಮ್ಮ ಪಾಲಿಗೆ ಕುಚೇಲನೂ ಇಲ್ಲ. ಇಂತಹ ಜೈಲಿನಲ್ಲಿ ನಂಜುಂಡಿ ಕಲ್ಯಾಣದ ಕಲರ್ ಕಲರ್ ಕನಸುಗಳು.

ಗುಡ್ಡಪ್ಪಣ್ಣಾರ.. ಏನಾದ್ರೂ ಕೆಲಸಾ ಇದ್ರೆ ಹೇಳ್ರೀ.. ಎಂದು ಮೆತ್ತಗೆ ಪ್ರಸ್ತಾವನೆ ಮುಂದಿಟ್ಟೆವು. ಮಿಲ್ಟ್ರೀ ನಮ್ಮನ್ನು ಮೇಲಿಂದ ಕೆಳಗೆ ನೋಡಿ -ಬೇಡ್ರಪ್ಪಾ ದೀಡ ಪಂಡಿತರಾ. ಅವ್ರವರ ಕೆಲ್ಸಾ ಅವ್ರ ಮಾಡಬೇಕು. ನಮ್ಮ ಮಾತನ್ನೆ ತಿರುಗಿಸಿ ಹೊಡೆದ. ಬೆರಕಿ ಮನುಷ್ಯ ಇನ್ನೂ ಮರೆತಿರಲಿಲ್ಲ. ಕೆಲಸ ಗಿಟ್ಟುವದಿಲ್ಲ ಎಂಬುದು ಖಾತ್ರಿಯಾಯಿತಾದರೂ ನಮಗೆ ಬರಿಗೈಲಿ ವಾಪಸು ಬರುವ ಮನಸ್ಸಾಗಲಿಲ್ಲ.

ಅಲ್ರೀ ಗುಡ್ಡಪ್ಪಣ್ಣಾ. ಮೊನ್ನೇ ಯರ್ಯಾರ್ನೋ ಸಿನಿಮಾಕ್ಕ ಕರ್ಕೊಂಡ ಹೋಗಿದ್ರಂತ. ನಮ್ಮನ್ನೂ ಕರ್ಕೊಂಡ ಹೋಗ್ರೀ.. ನಾವೇನ್ ಮಾಡೇವಿ.. ಬೇಕಾದ್ರ ಅವ್ರು ಮಾಡಾ ಕೆಲ್ಸಾ ನಾವೂ ಮಾಡ್ತೇವಿ-ಬೇಡಿಕೆ ಇಟ್ಟು ಮುಖ ನೋಡಿದೆವು. ಅವನ ಸಿಟ್ಟು ನೆತ್ತಿಗೇರಿತ್ತು. ಅದನ್ನು ತೋರ್ಪಡಿಸಲಿಲ್ಲ. ಹ್ಯೇ.. ಇಲ್ಲಪಾ.. ನಾ ಸಿನಿಮಾ ನೋಡದ ಬಿಟ್ಟ ಬಾಳಾ ವರ್ಷ ಆತು.. ಅಂತಾದ್ರಾಗ ನಿವೇನ್ ಹ್ಯೇಳಾಕ್ಕತ್ತೀರಿ.. ಅಂದ. ನಮ್ಮದೆ ತಪ್ಪು ಅನ್ನುವ ರೀತಿಯಲ್ಲಿ ಅವನ ಮಾತಿದ್ದವು. ಇದ್ದೊಂದು ಬಾಗಿಲು ಮುಚ್ಚಿಕೊಂಡಿತು.

ಇಷ್ಟಕ್ಕೆ ನಿರಾಸೆಯಾಗುವ ಆಸಾಮಿಗಳಲ್ಲ ನಾವು. ಈ ಬಾರಿ ನಾವೆ ಬಾಗಿಲು ಸೃಷ್ಠಿ ಮಾಡಿಕೊಂಡೆವು. ಆದರದು ತುಂಬಾ ಅಪಾಯಕಾರಿ. ಗೊತ್ತಾದರೆ ಶಾಲೆಯಿಂದ ಔಟ್. ಇಲ್ಲವೆ ಬೆತ್ತಲು ಮಾಡಿ ಇಡಿ ಶಾಲೆ ತುಂಬಾ ಓಡಾಡಿಸುವದು..! ಇದನ್ನು ನೆನೆಸಿಕೊಂಡೆ ನಡುಗಿದೆವು. ಆದರೆ ನಂಜುಂಡಿ ಕಲ್ಯಾಣ ನಮ್ಮನ್ನು ಮಲಗಲು ಬಿಡಲಿಲ್ಲ. ಎಂಥದೋ ಭಂಡ ಧೈರ್ಯ ಬಂತು. ಜೊತೆಗೆ ಐಡಿಯಾವೂ ಬಂತು. ನಮ್ಮ ಶಾಲೆ ಹೊಂದಿಕೊಂಡಂತೆ ಹಳ್ಳವೊಂದು ಹರಿಯುತ್ತಿತ್ತು. ನಾವು ವಿಹಾರಕ್ಕೆ ಶೌಚಕ್ಕೆ ಅತ್ತ ಹೋಗಲು ಸ್ವಾತಂತ್ರ್ಯ ಹೊಂದಿದ್ದೆವು. ಅದೆ ನೆಪ ಮಾಡಿಕೊಂಡು ಒಂದು ಸಂಡೇ ಮಧ್ಯಾಹ್ನ ನಮ್ಮ ಗ್ಯಾಂಗು ಲಪಾಟಿ (ಲುಂಗಿ) ಮೇಲೊಂದು ಶರ್ಟ್ ತೊಟ್ಟು ಹೊರಟೆವು. ಅನತಿ ದೂರ ಹೋದ ಮೇಲೆ ಹಳ್ಳ ದಾಟಿದೆವು. ನಂತರ ಶರ್ಟ್ ಬಿಚ್ಚಿ ಸೊಂಟಕ್ಕೆ ಕಟ್ಟಿ ಲಪಾಟಿ ಮೇಲೆತ್ತಿ ಕಟ್ಟಿದೆವು, ಬನೀನು ಮೇಲೆ ನಮ್ಮನ್ನು ಸ್ಟೂಡೆಂಟು ಅಂತಾ ಯಾರೂ ಗುರುತಿಸಲಾರರು.. ಹೊಲದಲ್ಲಿ ಕೆಲಸ ಮಾಡುವವರು ಅಂತ ತಿಳಿಯುತ್ತಾರೆ. ಹಾಗೆ ಹೋಗಿ ಸಿನೇಮಾ ನೋಡಿ.. ಹಾಗೆ ಸಂಜೆಯ ಪ್ರೇಯರ್ ಟೈಮಿಗೆ ವಾಪಸ್ ಬರುವದು… ಪ್ರೇಯರ್ ಮುಗಿದ ನಂತರ ಯಾರು ಇದ್ದಾರೆ ಇಲ್ಲ ಅಂತಾ ಅಟೆಂಡೆನ್ಸ್ ತೆಗೆದುಕೊಳ್ಳುವದು ಪರಿಪಾಠ. ಹೀಗೆ ಮಾಡುವದರಿಂದ ಯಾರಿಗೂ ಗೊತ್ತಾಗುವದಿಲ್ಲ. ಇದು ನಮ್ಮ ಪ್ಲ್ಯಾನು. ಹಾಗೆ ಮಾಡಿ ಬಂದು ಸಂಜೆ ಪ್ರೇಯರ್‌ಗೆ ಕೂತೆವು.

ಅವತ್ತಿನ ಪ್ರೆಯರ್‌ಗೆ ಪ್ರಿನ್ಸಿಪಾಲ್ ವಾರ್ಡನ್ ಮತ್ತಿಬ್ಬರು ಸರ್ ಬಂದಿದ್ದರು. ನಮಗೊಂದು ಆಘಾತ ಕಾದಿರುವದು ನಮಗೆ ಗೊತ್ತೆ ಇರಲಿಲ್ಲ. ಅಟೆಂಡೆನ್ಸ್‌ ತೆಗೆದುಕೊಳ್ಳಲಾಯಿತು. ನಂತರ ಪ್ರಿನ್ಸಿಪಾಲರು ಒಂದು ಹೆಜ್ಜೆ ಮುಂದೆ ಬಂದು.. “ನಿಜ ಹೇಳಿ, ಇವತ್ತು ಸಿನೇಮಾಕ್ಕೆ ಯಾರ್ಯಾರು ಹೋಗಿದ್ರೀ..?!” ನಮಗೆ ಶಾಕ್ ಹೊಡೆದ ಅನುಭವ. ಒಳಗೊಳಗೆ ಬೆವೆತು ಹೋದೆವು. ನೋಡಿದವರು ಯಾರು.. ಯಾರು ಚಾಡಿ ಚುಚ್ಚಿದವರು..? ಪ್ರಶ್ನೆ ಮತ್ತು ಆತಂಕ. ಮತ್ತೊಮ್ಮೆ ಪ್ರಿನ್ಸೀಪಾಲರು ಗುಡುಗಿದರು. ಏನು ಮಾಡುವದೆಂದು ತೋಚದಾಯಿತು. ಅಷ್ಟರಲ್ಲಿ ನಮ್ಮಲ್ಲೊಬ್ಬ ಪುಕ್ಕಲ ಎದ್ದು ನಿಂತ. ಹಿಂದೆಯೆ ನಾವು. ಅಕ್ಷರಶಃ ಕಟಕಟೆಯಲ್ಲಿ ನಿಂತ ಅನುಭವ. ಶಿಕ್ಷೆ ಜಾರಿಯಾಯಿತು… ಅದೂ ಎರಡನೆ ತರದ ಶಿಕ್ಷೆ! ಪ್ರಿನ್ಸಿಪಾಲರ ಕಾಲಿಗೆ ಬಿದ್ದು ಬೇಡಿದೆವು. ಅವರು ಕರಗಲಿಲ್ಲ. ನಾಳೆ ಎಲ್ಲರಿಗೂ ದಿವ್ಯ ದರ್ಶನ!


ಯಾರು ಆ ಪಾಪಿ? ರಾತ್ರಿಯಿಡಿ ಹೊರಳಾಡಿದೆವು. ಮರುದಿನ ಕ್ಲಾಸು ಆರಂಭವಾಗುತ್ತಿದ್ದಂತೆ ನಮಗೆ ಕರೆ ಬಂತು. ಪ್ಯೂನ್ ಬಸವ ಕರೆದೊಯ್ದ. ಯಮ ಕಿಂಕರನಿಗೆ ಎಲ್ಲಿಯ ದಯೆ. ಎಲ್ಲ ಸ್ಟಾಫೂ ಸಾಧ್ಯವಾದಷ್ಟು ಉಗುಳಿದರು. ಕುಂದಗೋಳ ಸರ್ ಬೈದಂತೆ ಮಾಡಿ ಹೊರಹೋದರು. ಬಸವನಿಗೆ ಆದೇಶವಾಯಿತು.. ಅವನು ಚೆಡ್ಡಿಗೆ ಕೈ ಹಾಕಿದ.. ನಾವು ಒದ್ದಾಡಿದೆವು.. ಗೋಳಾಡಿದೆವು.. ಸಾಮೂಹಿಕ ಅತ್ಯಾಚಾರ. ಬರೋಬ್ಬರಿ ಹನ್ನೊಂದು ಪುಂಡ ಹೋರಿಗಳು! ಒಬ್ಬ ಬಸವ ಏನು ಮಾಡಿಯಾನು? ಐದ್ಹತ್ತು ನಿಮಿಷ ಗುದ್ದಾಡಿದ.. ಗುದ್ದಾಡುತ್ತಲೆ.. ಕಿಸಕ್.. ಎಂದು ನಕ್ಕ. ಹಿಂದೆಯೆ ಪ್ರಿನ್ಸಿಪಾಲರೂ ನಕ್ಕರು.. ನಾವು ನೋಡಿದ ಅದ್ಭುತವದು. ಪ್ರಿನ್ಸಿಪಾಲರು ಕರಗಿದ್ದರು. ನಾವು ಪಾರಾದೆವು. ತಾಕೀತು ಮಾಡಿ ಕಳುಹಿಸಿದರು. ತುಬಾಕಿ ಅಂಚಿನಿಂದ ಪಾರಾದ ಪಾರಿವಾಳಗಳಂತೆ ಪುರ್ರನೆ ಹಾರಿಹೋದೆವು. ಬಸವ ಏನು ಕಂಡು.. ಹಿಡಿದು ನಕ್ಕನೋ..? ಅಂತೂ ಒಳ್ಳೆಯದಾಯಿತು.

ನಮ್ಮ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಮಿಲ್ಟ್ರೀಯದೆ ಕೈವಾಡ ಅಂತಾ ಮರುದಿನವೆ ಪತ್ತೆಯಾಯಿತು. ಸಿನೇಮಾದಲ್ಲಿ ರಾಘವೇಂದ್ರ ರಾಜ್‌ಕುಮಾರನ.. ಹಗ್ಗ.. ಹಳ್ಳ.. ಪೆಟಾರಿ.. ಅಂತಾ ಧಿರೇಂದ್ರ ಗೋಪಾಲನನ್ನು ಬ್ಲಾಕ್ ಮೇಲ್ ಮಾಡುವ ಡೈಲಾಗ್ ನೆನಪಿಗೆ ಬಂತು. ಟಿಟ್ ಫಾರ್ ಟ್ಯಾಟ್, ಮಿಲ್ಟ್ರೀಗೆ ಅವನದೆ ಸ್ಟೈಲ್‌ನಲ್ಲಿ ಹಳ್ಳ ತೋಡುವ ಐಡಿಯಾ ಮೂಡಿತು.

ಮಿಲ್ಟ್ರೀಯ ಸಿನೇಮಾ ಖಯಾಲಿ ಗೊತ್ತೆ ಇತ್ತು. ಒಂದಿನ ಅವನ ಪಟಾಲಂ ಸಿನೇಮಾಕ್ಕೆ ಹೋಗುವ ಸುದ್ದಿ ಪಕ್ಕಾ ಆಯಿತು. ಕಾದು ಕುಳಿತೆವು. ಥೇಟರ್‌ನಿಂದ ಕೃಷ್ಣಾ ಅಂತಾ ಹಾಡು ಕೇಳಿ ಬರತೊಡಗಿತು. ಸಿನೇಮಾ ಆರಂಭಕ್ಕೆ ಹದಿನೈದು ನಿಮಿಷ ಇದೆ ಅನ್ನುವ ಸಿಗ್ನಲ್ ಕೊಡುವ ಹಾಡದು. ಇಲ್ಲಿ ಅಡುಗೆ ಮನೆಯಲ್ಲಿ ದಡಬಡ ದಬರಿ ಸಪ್ಪಳ.. ಬೇಗನೆ ತೊಳೆಯುವ ಅವಸರ. ಇನ್ನೇನು ಮಿಲ್ಟ್ರೀ ಮತ್ತವನ ಗ್ಯಾಂಗ್ ಹೊರಟು ನಿಂತಿತು. ನಾವು ಅಲರ್ಟ್ ಆದೆವು. ನಾವು ಅವರನ್ನು ಗಮನಿಸುತ್ತಿರುವದು ಅವರಿಗೂ ಇನ್ನುಳಿದವರಿಗೂ ಗೊತ್ತಾಗಬಾರದು. ಡಾರ್ಮೆಂಟ್ರಿಯಲ್ಲಿ ಎಲ್ಲ ಹುಡುಗರು ಮಲಗಿದ್ದಾರೆ, ನಾವು ಚಾದರದ ಮುಸುಗು ಹಾಕಿಕೊಂಡು ಹೊರಬಿದ್ದೆವು. ಮಿಲ್ಟ್ರೀ ಗ್ಯಾಂಗ್ ಗೇಟು ದಾಟಿ ಹೊರಟಿತು. ನಾವು ಬಡಬಡನೆ ಪ್ರಿನ್ಸಿಪಾಲರ ಕೊಠಡಿಯತ್ತ ಹೊರಟೆವು. ಲೈಟು ಉರಿಯುತ್ತಿತ್ತು. ಅವರು ಮಲಗಿದಂತೆ ಕಾಣಲಿಲ್ಲ. ಕಿಟಕಿಯತ್ತ ಹೋಗಿ ಅವರನ್ನು ಕೂಗಿದೆವು. ಅರವತ್ತರ ಅಂಚಿನ ಆ ಮನುಷ್ಯ ನಮ್ಮನ್ನು ಗುರುತಿಸಲಾರ. ಯಾರದು. ಅನ್ನುತ್ತ ಬಂದು ಕಿಟಕಿ ತೆರೆದ ಅವರಿಗೆ ಒಂದೆ ಗುಕ್ಕಿಗೆ ಮಿಲ್ಟ್ರೀ ಗ್ಯಾಂಗ್‌ನ ಗುಪ್ತ ಕಾರ್ಯಾಚರಣೆಯನ್ನು ವಿವರಿಸಿ ಓಡಿ ಬಂದೆವು.

ಮರುದಿನ ಮಿಲ್ಟ್ರೀ ಗ್ಯಾಂಗ್ ಕಟಕಟೆಯಲ್ಲಿ ನಿಂತಿತ್ತು. ಪ್ಯೂನ್ ಬಸವನಿಗೆ ಕರೆ ಹೋಯಿತು! ಮಿಲ್ಟ್ರಿಗೆ ಅದೇನೊ ಹೊಸ ತರ ಶಿಕ್ಷೆ ಕೊಟ್ಟರಂತೆ. ಅದೇನೆಂಬುದು ಗೊತ್ತಾಗಲಿಲ್ಲ. ಕನಿಷ್ಠ ಹತ್ತತ್ತು ಮಾಲಾಶ್ರೀಗಳು ಇರುವ ಊರುಗಳು ನಮ್ಮವು. ಎಷ್ಟೋ ಮಾಲಾಶ್ರೀಗಳು ಮದುವೆಯಾಗಿ ಪರವೂರು ಸೇರಿದ್ದಾರೆ. ಆ ಹೆಸರು ಕೇಳಿದ ಕೂಡಲೆ ಇದೆಲ್ಲವೂ ಸರಣಿಯಾಗಿ ಬಿಚ್ಚಿಕೊಳ್ಳುತ್ತದೆ. ಪಾಪ! ಮಿಲ್ಟ್ರೀ ಈಗೆಲ್ಲಿದ್ದಾನೋ.