ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ ಇಂದಿನ ಅರಾಜಕತೆ?ಇದು ವ್ಯಾಧಿಯ ರೂಪ ತಳೆದಿದೆ. ಪ್ರಿಯಕರನ ದಮನಿಗಳಲ್ಲಿ ವಿಷದನೆತ್ತರು ಹರಿಯಲು ತೊಡಗಿದೆ. ನೇತಾರರು ಕಣ್ಣೆವೆ ತೆರೆಯುವುದಿಲ್ಲ. 
ಕಾಶ್ಮೀರದ ಕವಯತ್ರಿ ಸುನೀತಾ ರೈನಾ ಪಂಡಿತ್‌ ಅವರ ಕವಿತೆಗಳ ಕುರಿತು ಆರ್. ವಿಜಯರಾಘವನ್ ಬರಹ

 

ಶ್ರೀಮತಿ ಸುನೀತಾ ರೈನಾ ಪಂಡಿತ್‌, ಕಾಶ್ಮೀರಿ ಪಂಡಿತ್ ಜನಾಂಗದ ಹೆಣ್ಣು. ಜನಾಂಗ ದ್ವೇಷದ ದಿನಗಳಲ್ಲಿ ಸಾಮೂಹಿಕವಾಗಿ ವಲಸೆ ಬಂದವರಲ್ಲಿ ಈಕೆಯ ಕುಟುಂಬವೂ ಒಂದು. ಈಕೆಯ ಗಝಲ್‌ ಗಳು ಇಂಗ್ಲಿಶ್‌ ಭಾಷೆಗೆ ಅನುವಾದಗೊಂಡಿವೆ. ‘ಲೈಟ್‌ ಅಂಡ್‌ ಶೇಡ್‌’ ಮತ್ತು ‘ಎ ವಾಕ್‌ ಥ್ರೂ ದಿ ಮಿಸ್ಟ್‌’ ಆ ಎರಡು ಸಂಕಲನಗಳು. ಈಕೆ ಕಾಶ್ಮೀರಿ ಅಸ್ಮಿತೆಯನ್ನು ಹುಡುಕುತ್ತಲೇ ಕಳೆದುಕೊಂಡ ಕೊಂಡಿಗಳನ್ನು ಮತ್ತೆ ಬೆಸೆಯುವ ತೊಳಲಾಟದಲ್ಲಿ ಬರೆಯುತ್ತಾರೆ.

ಸುನೀತಾ ಅವರ ಒಂದು ಹಿಂದಿ ಮತ್ತೆ ಮೂರು ಕಾಶ್ಮೀರಿ ಕವನ ಸಂಕಲನಗಳು ಪ್ರಕಟವಾಗಿವೆ. ಸುನೀತಾ ಕಾಶ್ಮೀರದ ಹಳ್ಳಿಯ ಮಗಳು. ಬಾದಾಮಿಯ ತೋಟಗಳಿಂದ, ಹರಿಯುವ ತೊರೆಗಳಿಂದ ಸಮೃದ್ಧವಾಗಿದ್ದ ಕಣಿವೆಯ ಹಳ್ಳಿಯಿಂದ ದೂರದ ಬಿಸಿಧಗೆಯ ಮರಳುಗಾಡಿನ ವಾಸಕ್ಕೆ ಎತ್ತಿ ಎಸೆಯಲ್ಪಟ್ಟ ಕಾಶ್ಮೀರಿ ಪಂಡಿತರ ಕುಟುಂದವರು ಸುನೀತಾ. ಆಕೆಯ ರೂಪಕಗಳು ವಲಸೆಹೋದ ಕನಸೊಂದರ ಹಾಗೆ ಇವೆ. ಇದ್ದರೂ ಆಕೆಯ ಕವಿತೆ ಕನವರಿಕೆಗಳಿಂದ ದೂರವಿದೆ. ರೂಪಿಸುವ ಚಿತ್ರಗಳು ಪಾರಂಪರಿಕವಾಗಿದ್ದರು ಸಹ, ಸಮಕಾಲೀನ ಸಂವೇದನೆಗಳಿಗೆ ಮತ್ತು ಸೂಕ್ಷ್ಮಗಳಿಗೆ ಅವು ತೆರೆದುಕೊಳ್ಳುತ್ತವೆ. ಆಕೆಯ ಕಾವ್ಯ ತನ್ನ ಸಂಭಾಷಣೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತದೆ ಮತ್ತು ಅದರಲ್ಲಿ ವಿಸ್ಮಯಕಾರಿ ಐಕಮತ್ಯ ಇದೆ ಎಂದು ಫಾರೂಕ್ ನ ಝ್ಕಿಎ ವಾಕ್‌ ಥ್ರೂ ದಿ ಮಿಸ್ಟ್‌ ಕೃತಿಗೆ ಬರೆದ ಬೆನ್ನುಡಿಯಲ್ಲಿ ಅಭಿಪ್ರಾಯಪಡುತ್ತಾರೆ.

ಸುನೀತಾ ರೈನಾ ಏಪ್ರಿಲ್ 25, 1967 ರಂದು ಹುಟ್ಟಿದವರು. ದಕ್ಷಿಣ ಕಾಶ್ಮೀರದ ಹಯಾತ್ಬಗ್ ನಲ್ಲಿ ಹುಟ್ಟಿದ ಆಕೆ ಪದವೀಧರೆ. ವಿವಾಹದ ನಂತರ ಓದುವುದು ಮತ್ತು ಗೀತರಚನೆಗೆ ತನ್ನ ಬಿಡುವಿನ ಸಮಯವನ್ನು ಮೀಸಲಿಟ್ಟ ಆಕೆಯ ಮೊದಲ ಸಂಕಲನ ಹೊರಬಂದದ್ದು ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ. ‘ಚಿನ್ನಾರ್ ಕೆ ಆಸು’ ಅಂದರೆ ಬಯಲ ಕಣ್ಣೀರು ಎಂಬ ಸಂಕಲನ ಹಿಂದಿ ಭಾಷೆಯಲ್ಲಿದೆ. ಆದರೆ ಆಕೆ ತನ್ನ ಲಯವನ್ನು ಕಂಡುಕೊಂಡಿದ್ದು ಮಾತೃಭಾಷೆ ಕಾಶ್ಮೀರಿಯಲ್ಲಿ.

‘ಗಾಯಗಳನ್ನು ತೊಳೆದು ವಾಸಿ ಮಾಡಲಾಗುವುದಿಲ್ಲ. ಅದು ಹೊರಗೆ ಮೆತ್ತಿದ ನೆತ್ತರಲ್ಲ. ತೊಳೆಯಲಾಗದ, ಗುಣಪಡಿಸಲಾಗದ ಗಾಯಗಳವು. ಇಂದು ಯಾರಿಗಾದರೂ ಗಾಯಗಳನ್ನು ಮಾಯಿಸುವ ಸಣ್ಣ ಆಲೋಚನೆಯಾದರೂ ಬಂದಿದೆಯೇ’ ಎಂದು ಪ್ರಶ್ನಿಸುವ ಸುನೀತಾ ಅವರಿಗೆ ಇತ್ಯಾತ್ಮಕವಾದ ಪರಿಕಾರ ಕಣ್ಣೆದುರಿಗಿಲ್ಲದೆ ಇರುವಾಗ ಸೋಲುವುದೇ ಪರಿಹಾರವೇ ಎಂಬ ಭಾವನೆಯೂ ಬಂದುದುಂಟು. ಆತ್ಮಗಳು ಸುಟ್ಟ ನಂತರ ಉಳಿವ ಕಲೆಗಳ ಪ್ರಭಾವ ಅವರ ಅಸ್ತಿತ್ವ ಮತ್ತು ಕಾವ್ಯಭಿತ್ತಿಯ ಮೇಲೂ ಆಗಿದ್ದುಂಟು. ಯಾವುದೇ ಕಾಣ್ಕೆಯ ಕ್ಯಾನವಾಸಿನ ಮೇಲೆ ಕಪ್ಪು ಕಲೆಗಳು ಹರಡಿದ್ದರೆ ಯಾವ ಮನೋಹರತೆ ಉಳಿದೀತು? ಆದರೂ ಸುನೀತಾ ಮಡುಗಟ್ಟಿದ ನೋವನ್ನು ಉಳಿಸಿಕೊಂಡೇ ಮನೋಹರ ಕವಿತೆಗಳನ್ನು ಬರೆಯುತ್ತಾರೆ.

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ ಇಂದಿನ ಅರಾಜಕತೆ?ಇದು ವ್ಯಾಧಿಯ ರೂಪ ತಳೆದಿದೆ. ಪ್ರಿಯಕರನ ದಮನಿಗಳಲ್ಲಿ ವಿಷದನೆತ್ತರು ಹರಿಯಲು ತೊಡಗಿದೆ. ನೇತಾರರು ಕಣ್ಣೆವೆ ತೆರೆಯುವುದಿಲ್ಲ. ಗತಕ್ಕೆ ನ್ಯಾಯ ಒದಗಿಸುವುದು ಎಂದರೆ ಹುಡುಗಾಟಿಕೆಯಷ್ಟೆ. ಚಿನಾರ್‌ ವೃಕ್ಷದ ನೆರಳ ಕುರಿತು ಮೆಚ್ಚುಗೆ ಮಾಯವಾಗಿದೆ ಎಂದರೆ ಗಾಳಿಯೂ ನಂಬಲರ್ಹವಲ್ಲ. ಕಾಲ ಬೆಂಕಿಯನ್ನು ನುಂಗುತ್ತಿದೆ. ಹಾದಿ ದೂರವಿದೆ. ಗೊಂದಲದ ಸುಂಟರಗಾಳಿಗೆ ಆತ್ಮಗಳು ತರಗೆಲೆಗಳಂತೆ ತೂರಿಹೋಗುವಾಗ ಸೇರಲು ಸ್ಥಳವೇ ಇಲ್ಲದಾಗಿದೆ. ಈ ಸಂಕಟದ ಸಾಗರವನ್ನು ಸುನೀತ ಬಿಂದು ಬಿಂದು ಅಳೆಯುತ್ತಾರೆ. ಅಪನಂಬಿಕೆಯ ವ್ಯವಹಾರಗಳಲ್ಲಿ ಸಂತತನ ಮರೆಗೆ ಸರಿದಿದೆ. ನೆಲದಗಲ ಸಿಡಿಮದ್ದಿನ ಹುಡಿ ಹರಡಿದೆ.

ಸುನೀತಾ ಅವರ ಕಾವ್ಯ ಕಲ್ಪನೆಯ ಹರವು ದೊಡ್ಡದು. ಆದರೂ ಆಕೆಯ ಕಾವ್ಯ ಪ್ರೀತಿ, ಕಾಯುವಿಕೆ, ಭರವಸೆ, ಸ್ಮೃತಿ, ಭೂತ, ನಿಸರ್ಗ, ಆಧ್ಯಾತ್ಮ, ಏಕಾಕಿತನ, ಬೇಪ್ಪಡುವಿಕೆ, ಅಸಹಾಯಕತೆ, ಹತಾಶೆ, ವಲಸೆ, ಮನುಷ್ಯ, ಪ್ರಪಂಚ ಮತ್ತು ಆಧುನಿಕತೆಯನ್ನು ಕೇಂದ್ರದಲ್ಲಿ ಇರಿಸಿಕೊಂಡಿವೆ. ಬೇರೆ ಬಗೆಯಲ್ಲಿಯೂ ಆಕೆ ಬರೆಯುತ್ತಾರಾದರೂ ಅವರ ಶಕ್ತಿ ವ್ಯಕ್ತಗೊಳ್ಳುವುದು ಗಜಲ್ಗಳಲ್ಲಿಯ ಆಕೆಯ ಕಾವ್ಯಲಯಗಳು ಚಿತ್ರಿತವಾಗುವ ಅಭಿವ್ಯಕ್ತವಾಗುವ ಪರಿಯಲ್ಲಿ. ಎಲ್ಲವೂ ಬೆರೆತು ಸುನಿತಾ ಅವರಿಗೆ ವಿಶೇಷ ತಾಣವೊಂದನ್ನು ಕಾಶ್ಮೀರಿ ಕಾವ್ಯದಲ್ಲಿ ಕಲ್ಪಿಸಲಾಗಿದೆ.

ಗೌರಿಶಂಕರ್ ರೈನಾ ಎಂಬ ಕಾಶ್ಮೀರಿ ವಿಮರ್ಶಕ ʼಎವಾಕ್‌ ಥ್ರೂದ ಮಿಸ್ಟ್ʼ ಅನ್ನು ಕುರಿತು ಇಂಡಿಯನ್ ಲಿಟರೇಚರ್ ಮ್ಯಾಗಜೀನ್ ನಲ್ಲಿ ‘ದಿ ಸಾಂಗ್‌ ಆಫ್‌ ಹೋಪ್‌’ ಎಂಬ ಒಂದು ಲೇಖನ ಬರೆದಿದ್ದಾರೆ. ಸುನೀತಾ ಅವರ ಕಾವ್ಯದ ಪ್ರವೇಶಕ್ಕೆ ಈ ಮಾತುಗಳು ಸಹಕಾರಿ. ಅವರು ಬರೆಯುತ್ತಾರೆ: ಮಂಜಿನ ಹಾದಿಯನ್ನು ಕ್ರಮಿಸುತ್ತಾ ನಮಗೆ ಕೇಳಿ ಬರುವ ಮಾರ್ದನಿಗಳು ಸಾಯುವುದಿಲ್ಲ, ಬದಲಿಗೆ ಅವು ನಮ್ಮ ಕಾಲದ ಹಾದಿಯನ್ನು ನೆನಪು ಮಾಡಿಸುತ್ತವೆ. ಕಣಿವೆಯನ್ನು ಕವಿದಿರುವ ಮಂಜು ನಮ್ಮ ಕನವರಿಕೆಗಳನ್ನು, ನೆನಪುಗಳನ್ನು, ಚರಿತ್ರೆ ಮತ್ತು ಸಂಘರ್ಷವನ್ನು ಮಾರ್ದನಿಸುತ್ತವೆ. ಕವಿದ ಮಂಜು ಕರಗಲಾರಂಭಿಸಿದಂತೆ ಹೊಸ ಸತ್ಯಗಳು ಅನಾವರಣಗೊಳ್ಳುತ್ತವೆ.

ಎಷ್ಟೊಂದೆಲ್ಲ ಬದಲಾಗಿದೆ
ವಸಂತ ತಾನು ವಸಂತವೆಂಬುದನ್ನೇ ಮರೆತಿದೆ
ಮತ್ತೆ ನವಪಲ್ಲವವಿಲ್ಲ, ಅದರ ಹರುಷವೂ ಇಲ್ಲ
ಹಳ್ಳಿಗೂ ಪೇಟೆಗೂ ವ್ಯತ್ಯಾಸವುಳಿದಿಲ್ಲ
ಎಲ್ಲವೂ ಬರಡು, ಕವಿದ ಮಂಕು

ವಾಸ್ತವ ಮತ್ತು ಕಲ್ಪನೆ ಎರಡನ್ನೂ ಬೆಸೆಯುವ ಕಾವ್ಯ ಇವರದು. ನೈಜ ಮನುಷ್ಯರ ವೇದನೆಗಳನ್ನು, ದುರದೃಷ್ಟವನ್ನು ಚಾರಿತ್ರಿಕ ಕ್ಷಣಗಳ ಜೊತೆ ಜೊತೆ ನೆನಪಿಸಿಕೊಳ್ಳುತ್ತಲೇ ಇಂದಿನ ತವಕ ತಲ್ಲಣಗಳ ಕಡೆಗೆ ಬೆಳಕು ಚೆಲ್ಲುವ ಕವಿತೆ ಸುನೀತಾ ಅವರದು. ಅದರಲ್ಲೂ ಅವರನ್ನು ನೋಯಿಸುವುದು, ಹೇಗೆ ಕಾಲವೆನ್ನುವುದು ಪರಸ್ಪರರನ್ನು ಅಪರಿಚಿತರನ್ನಾಗಿಸಿದೆ ಎನ್ನುವ ವಿಚಾರ.

ನಾನು ನನ್ನ ಬದುಕ ನಾವೆಯನ್ನು ದೂಡುತ್ತಿದ್ದೇನೆ,
ನೂಲದ ದಾರದಿಂದಏನೂ ಪ್ರಯೋಜನವಿಲ್ಲ
ನಾನು ನನ್ನ ದಿಕ್ಕನ್ನು ಬದಲಿಸಿಕೊಳ್ಳಬೇಕು ಅಥವಾ
ಸಾಗರದ ಹೊರಮೈ ಚಹರೆಯನ್ನೇ

ಇಂದು ಯಾರಿಗಾದರೂ ಗಾಯಗಳನ್ನು ಮಾಯಿಸುವ ಸಣ್ಣ ಆಲೋಚನೆಯಾದರೂ ಬಂದಿದೆಯೇ’ ಎಂದು ಪ್ರಶ್ನಿಸುವ ಸುನೀತಾ ಅವರಿಗೆ ಇತ್ಯಾತ್ಮಕವಾದ ಪರಿಕಾರ ಕಣ್ಣೆದುರಿಗಿಲ್ಲದೆ ಇರುವಾಗ ಸೋಲುವುದೇ ಪರಿಹಾರವೇ ಎಂಬ ಭಾವನೆಯೂ ಬಂದುದುಂಟು.

ಸುನೀತಾ ಕಡುಕಷ್ಟವನ್ನು, ಯಾತನೆಯನ್ನು ಅನುಭವಿಸಿದವರು. ಆದರೆ ಆಕೆಯ ಬಯಕೆ ಸಂತೋಷವನ್ನು ಹಂಚುವುದು. ಜೀವನದಲ್ಲಿ ಇನ್ನೊಂದು ಜೀವವನ್ನು ಜಾತಿ, ಮತ, ಭಾಷೆ, ವಿಚಾರಗಳ ಹಂಗು ತೊರೆದು ಅಷ್ಟೊಂದು ಪ್ರೀತಿಸುವ ಈಕೆಯ ಗುಣ ನನಗೆ ಬಹಳ ಪ್ರಿಯವಾದುದು. ಮುಳ್ಳು ಗಿಡದಲ್ಲಿ ಪರಿಮಳದ ಹೂಗಳಿರುವಂತೆ ಬದುಕು. ಆದರೆ ಆ ನಂಬಿಕೆಯನ್ನು ರಕ್ತಪಿಪಾಸುಗಳು ಕಸಿದುಕೊಳ್ಳುತ್ತಿದ್ದಾರೆ ಎಂಬುದೇ ಲಕ್ಷಾಂತರ ಕಾಶ್ಮೀರಿಗಳ ಅಳಲು. ಇದು ಸುನೀತಾ ಅವರ ಕಾವ್ಯದ ಧಾತುವೂ ಹೌದು.

ಮನೆಗಳನ್ನು ಸುಡಲಾಗಿದೆ
ಒಳಗಿನ ಬೆಳಕು ನಂದಿಹೋಗಿದೆ
ಒಳಗೆ ಯಾವ ಚಲನೆಯೂ ಇಲ್ಲ
ಕೇವಲ ಹೊಯ್ದಾಡುವ ಪರದೆಗಳು
ಕಿಟಕಿಯ ಗಾಜುಗಳು ಛಿದ್ರ ಛಿದ್ರ
ಒಡೆದುಹೋಗಿವೆ

ಇನ್ನೂ ಏನೋ ಬದುಕಿದೆಯೆಂಬಂತೆ
ಕೆಳಗೆ ನಾಯಿಗಳ ಊಳು
ಕೆಟ್ಟ ಶಕುನ, ಇನ್ನೂ ಭೀಕರವಾದ್ದು
ಏನೋ ಸಂಭವಿಸಲಿದೆ

ಈ ನೆಲದ ಮೇಲಿಳಿದ ದುರದೃಷ್ಟವಾದರೂ ಏನು?
ಯಾರ ಶಾಪವಿದು? ದೇವರಷ್ಟೇ ಹೇಳಬಲ್ಲ

ಈ ಬದುಕು ಕವಿಸಿದ ವಿಷಣ್ಣತೆಯ ತೆರೆ ಕವಿಯನ್ನೇನು, ಜನಾಂಗಗಳನ್ನೇ ಶೋಕಕ್ಕೆ ದೂಡಿದೆ. ಹೊಸ ಬದುಕನ್ನು, ಹೊಸ ಜಗತ್ತನ್ನು ಈ ಸುಡುಗಾಡಿನ ಮೇಲೆ ಕಟ್ಟುವುದು ಹೇಗೆ ಎಂಬುದೇ ಕವಿಯ ಇರಾದೆ. ಹಗಲಿರುಳುಗಳು ತಮ್ಮ ಪಥವನ್ನೇ ಬದಲಿಸಿಕೊಂಡುಬಿಟ್ಟಿವೆ. ಹತ್ಯಾಕಾಂಡವು ಜನರ ಮನಸ್ಸಿನ ಮೇಲೆ ಬದಲಿಸಲಾಗದ ಗಾಯದ ಗುರುತುಗಳನ್ನು ಕೊರೆದಿದೆ. ಆದರೂ ಸುನೀತಾ ಅವರ ಕಾವ್ಯ ಭರವಸೆಯಿಂದಲೇ ಓದುಗರ ಹೃದಯವನ್ನು ಹೊಗುತ್ತವೆ. ಇದು ಒಳ್ಳೆಯ ಮನಸ್ಸಿನ ಕವಿ ಬದುಕು ಸಹ್ಯವೆಂಬ ಭಾವನೆ ಮೂಡಿಸುವ ಹಾಗೆ ಬರೆದ ಕಾವ್ಯ. ಆದರೆ ಸುನೀತಾ ಮನದಾಳವನ್ನು ಬಿಚ್ಚಿಡುವಾಗ ಆ ಹಾಲೋಕಾಸ್ಟ್‌ಗೆ ಹೆದರಿರುವ ಮನಸ್ಸಿನಲ್ಲಿನ ಗಾಯದ ಆಳ ನಮಗೆ ತಿಳಿದುಬರುತ್ತದೆ. ಆದರೂ ಆಕೆಯ ಹೃದಯ ಹೇಗೆ ಶಾಂತಿ, ಪ್ರೀತಿ, ಸೌಹಾರ್ದತೆಯ ವಿಶ್ವಕ್ಕಾಗಿ ಹಂಬಲಿಸುತ್ತದೆ ಎಂಬುದಕ್ಕೆ ಅವರ ಕವಿತೆಗಳನ್ನು ಓದಬೇಕು, ಆಕೆಯಿಂದಲೇ ಕೇಳಬೇಕು. ಆ ಕವಿತೆಗಳು ಮುಂದಿಡುವ ರೂಪಕಗಳು ಜ್ವಲಿಸುತ್ತವೆ, ಏಕೆಂದರೆ ಅವರ ಕಾವ್ಯದ ಆಳದ ತುಡಿತ ಭಯರಹಿತ, ತರತಮ ರಹಿತ, ಪೂರ್ವಗ್ರಹ ರಹಿತ ವಿಶ್ವದ ಪರಿಕಲ್ಪನೆ.

ನನ್ನ ಕವಿತೆಗಳಲ್ಲಿ ನಾನು ಜನರನ್ನು ಕೇಳುತ್ತೇನೆ
ಲೋಕಕ್ಕೆ ಶಾಂತಿಯನ್ನು ತರುವ ಕೆಲಸಗಳನ್ನು ಮಾಡಿ
ಚರಿತ್ರೆಯ ಹೊಸ ಪುಟಗಳನ್ನು ಬರೆಯಿರಿ
ಆಗಿಹೋದದ್ದಕ್ಕೆ ಆ ದುಷ್ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು
ರಾಜಿಯಾಗಿರಿ ಹೊಸ ಬದುಕಿಗೆ
ನಾನು ಹಂಬಲಿಸುವುದು ಯುವಜನತೆ ಶಾಂತಿಯ
ಗಾನಕ್ಕೆ ಕಿವಿಗೊಡಲಿ ಎಂದು
ವೃದ್ಧರು ಮರೆತುಬಿಡಲಿ ಕಹಿನೆನಪುಗಳನ್ನು, ಎಸಗಿದ್ದನ್ನು
ಸಂಘರ್ಷಕ್ಕೆ ವಿದಾಯ ಹೇಳಿಬಿಡಲಿ

ತೀರಾ ಮೊನ್ನೆ ಕಾಶ್ಮೀರಿ ಭಾಷೆಯ ಕವಿತೆಯನ್ನು ಆಕೆ ನನಗಾಗಿ ಓದಿ ಹೇಳಿದರು, ಫೋನಿನಲ್ಲೆ. ಒಟ್ಟಿಗೆ ನಾಲ್ಕು. ಒಂದೊಂದೂ ಚೈತನ್ಯದಿಂದ ಪುಟಿಯುವ ಕುಣಿಸುವ ಲಯದವು. ಆ ಲಯ ಕನ್ನಡಕ್ಕೆ ತರುವುದಾದರೆ ಎಷ್ಟು ಚೆನ್ನ ಎಂಬ ಭಾವನೆ ಮೂಡಿಬಿಟ್ಟಿತು ನನ್ನಲ್ಲಿ. ಅದರ ಜೊತೆಗೇ ತನ್ನ ಬಾಲ್ಯದ ಹಳ್ಳಿಯ ನೆನಪು ಮತ್ತು ಮೂವತ್ತಾರು ವರ್ಷಗಳ ಬಳಿಕವಾದರೂ ಅಲ್ಲಿ ಮರಳಿ ಸಿಹಿನೀರು ಸ್ರವಿಸುವ ಚಿನಾರ್ ಮರದ ಹಣ್ಣುಗಳ ರಸವ ಸವಿಯುವ ಆಸೆಯ ಬಗ್ಗೆ ಹೇಳಿದರು. ತನ್ನ ಹಳ್ಳಿ ತನ್ನ ತೆರೆದ ಕಣ್ಣುಗಳಲ್ಲಿ ಸಹ ಇದೆ ಎಂದರು. ಕುವೆಂಪು ಕವಿತೆ ಹೋಗುವೆನು ನೆನಪಾಯಿತು. ಕುವೆಂಪು ಅವರದು ಹೋಗಬಹುದಾದ ಜಾಗವಾಗಿತ್ತು. ಸುನೀತಾ ಹೋಗಬಯಸುವ ಜಾಗಫರ್ ಬಿಡನ್– ನಿಷೇಧಕ್ಕೆ ಒಳಪಟ್ಟಿದ್ದು. ಆಕೆಯ ಗೆಳೆಯನೊಬ್ಬ ಆಕೆಗೆ ಹೇಳಿದನಂತೆ, ನೀವು ಹೋದ ಮೇಲೆ ಸೂರ್ಯೋದಯ ಚಂದ್ರೋದಯದ ಪಥಗಳೇ ಬದಲಾದಂತೆ ಭಾಸವಾಗುತ್ತದೆ ಎಂದು.

ಆಕೆ ಈಗ ಉತ್ತರ ಪ್ರದೇಶದ ಶಾಲಿಮಾರ್‌ ನಲ್ಲಿ ವಾಸವಿದ್ದಾರೆ. ಅದು ಕಾಲನಿ ಇರಬೇಕು. ಹಳ್ಳಿಯ ಒಳಗೊಳ್ಳುವ ಬದುಕಿಗೂ ಇಲ್ಲಿನ ಹಾಯ್‌ ಬಾಯ್‌ ಬದುಕಿಗೂ ಇರುವ ಅಂತರದ ಬಗ್ಗೆ ಹೇಳಿದರು. ಹಾಗೆಯೇ ಎಲ್ಲೂ ಸಲ್ಲದಿರುವ ಕಾಶ್ಮೀರಿ ಪಂಡಿತರ ಸ್ಥಿತಿಯ ಕುರಿತೂ.

ಸುನೀತಾರ ಕಾವ್ಯ ಶಕ್ತಿ ಸುಂದರವಾಗಿ ಅಭಿವ್ಯಕ್ತವಾಗುವುದು ಗಝಲ್‌ ಗಳಲ್ಲಿ. ಆದರೆ ಅವರ ಕೃತಿಗಳ ಅನುವಾದಕರು ಆ ಬಗೆಯ ಅನುವಾದಕ್ಕೆ ನೆರವಾಗುವಂತೆ ಅನುವಾದ ಮಾಡಿಲ್ಲ. ಅದು ಫ್ರೀ ಅನುವಾದ. ಅವರ ಒಬ್ಬ ಅನುವಾದಕಾರಾದ ಆರ್‌. ಎನ್‌ ಕೌಲ್‌ ಅವರೇ ತನ್ನ ಅನುವಾದ ಪ್ರೊಸಾಯಿಕ್‌ ಮತ್ತು ಲಿಟರಲ್‌ ಎಂದು ಹೇಳಿಕೊಂಡಿದ್ದಾರೆ. ಆದರೂ ಈ ಅನುವಾದಗಳು ತಳಮಳದ ಮನದ ಕವಿಯಕಾವ್ಯ ಶಕ್ತಿಯ ಪರಿಚಯ ಮಾಡಿಕೊಡುವುದು ಸುಳ್ಳಲ್ಲ.

ಕಾಶ್ಮೀರಿ ಕವಿ ಸುನಿತಾ ರೈನಾ ಪಂಡಿತ್ ಅವರ ಕವಿತೆಗಳು


ನ್ಯಾಯವೆನ್ನುವುದು ಹೇಗೆ ನಿಷ್ಪ್ರಯೋಜಕವಾಯ್ತು ಈಗ
ತೊರೆಗಳೆಮ್ಮ ತೃಷೆ ತಣಿಸಲಾರವು, ಭರವಸೆಯಿಲ್ಲ ಈಗ

ಗಂಟು ಗಳಿಸುವುದರಲ್ಲುಂಟು ಅತ್ಯಾಸಕ್ತಿ ಉಳಿದವೆಲ್ಲಿ
ದುಡಿದುಂಬುವವರಿಲ್ಲ, ಆತ್ಮವನ್ನಾಸೆ ಕೊಂದಿತು ಗೆಳೆಯ

ಕಣ್ಣು ಕಣ್ಣು ಕಾಣಲಾರವು
ಕಾಲವೆಂಬುದರ ಸಂಚು, ನಾವು ನಮಗೇ ಅಪರಿಚಿತರು ಗೆಳೆಯ

ಎಂಥ ಕಾಲವು ಬಂತು, ನ್ಯಾಯವನು ಕೊಡುವವನು
ಚಿನ್ನದ ಮಾತುಗಳಲ್ಲಿ ಅವಿಸಿಡುವನು ತನ್ನದೇ ಪಾಪಗಳನು

ಎಷ್ಟೊಂದು ಸಂದಿಗ್ಧಗಳು ರಾಶಿ ಬಿದ್ದವು ನೋಡು
ಉತ್ತರಿಸುವುದೇ ಒಳದನಿಯು, ತೊದಲುತಿದೆ ಮಾತು

ಇಂಥ ಕಾಲಗಳು ಎದ್ದು ಬರುವವು ಬಲ್ಲವರೂ ಬೆರಗಾಗುವಂತೆ
ದೇಶಾಂತರ ಹೊರಡುವವು ಒಂದೊಂದು ಜೀವವೂ ಬರ್ಬರತೆಯ ಕಡೆಗೆ


ಬೇಕು ಹೃದಯ, ಕಣ್ಣು, ಕಾಲುಗಳಿಗೆ ಆಕಾಶದಷ್ಟು ಜಾಗ
ವರವ ಪಡೆಯಲು ಮಾನವಗೆ ಬೇಕು ಶಾಂತ ಸಾಗರದ ಆಳ

ನಿನ್ನ ಹೆಸರಲ್ಲಿ ಓ ಒಲವೇ ಜಗಕೊಂದು
ಸಂದೇಶವನು ನೀಡುವೆನು ನಾನು

ಹುಟ್ಟಬೇಕು ಬೀಸುಗಾಳಿಯು ನಮ್ಮಲ್ಲಿ
ಗುಡಿಸಿಬಿಡಲು ಆ ಕಾಲಾತೀತ ಕವಿದ ಮೋಡಗಳನ್ನು

ಹೆಜ್ಜೆ ಮುಂದಿಡಬೇಕಿದೆ ನಮಗೆ ಜಿಗಿತದ ಹೆಜ್ಜೆ
ಭೂತವನು ಮರೆತೊಂದು ಜಿಗಿತದ ಹೆಜ್ಜೆ

ಸೂರ್ಯನೆಂತೇ ಇರಲಿ, ಶಾಂತ, ಉಗ್ರ
ತಮ್ಮ ತುಟಿಯಿರಲಿ ಇಬ್ಬನಿಯಂತೆ

ಚಂದಿರನ ಕಿರಣಗಳ ವಸ್ತ್ರವನ್ನುಡುವುದು
ಯಾರಿಗೆ ಬೇಡ; ಎಲ್ಲ ನಿಲ್ಲುವುದು
ಮನಸಿನ ಮೇಲೆ

ಕಣ್ಣೀರ ಹಾಗೇ ಇಟ್ಟು ಕದಲದಂತೆ
ಅವನು ಎದೆಯ ತೋಟದ
ತುಂಬ ಹೂವರಳಿಸಿಹನು

ಶಾಂತ ಸಾಗರದಾಳದಂತಹ
ನೋಟ ಬೇಕಿದೆ ಮನಕೆ
ತೃಷೆಯ ತಣಿಸಲು ಒಂದು ಮಹಾನದಿ

ನೀನು ಕಾಯುವಿಯಾದರೆ ನಾನು
ನಿನ್ನ ಹೃದಯದಾಳದ ಗುಟ್ಟ ಹಿಡಿದಿಟ್ಟು
ಬದುಕಿರುವಂತೆ ನಟಿಸಿಯೇನು
ನಿನ್ನ ಆಲೋಚನೆಗಳಿಗೆ ಬೇಕಿರುವುದು
ಪ್ರಚಾರ; ನನ್ನದಕ್ಕೊಂದು ನೆರಳು ಮಾತ್ರ


ಯಾರೊಬ್ಬರೂ ನಗಬೇಕು ತೋರಿಕೆಗೆ ಆದರೂ
ಹೃದಯ ನಗದಿದ್ದರೂ, ಜಗವ ನಂಬಿಸುವಂತೆ ನಗಲೇಬೇಕು

ವಂಚನೆಯ ನಗು ನಗಬೇಕು ತೋರಿಕೆಗೆ ಆದರೂ
ಭರವಸೆಯು ಕಸಿದ ಹೇಡಿ ನಗು ಅಡಗಿಸಲು ಆದರೂ

ಯಾರೊಬ್ಬರ ಹೃದಯ ಸಂತಸದಲ್ಲಿ ಇರಬೇಕೇಂದೇನೂ ಇಲ್ಲ
ಉಲ್ಲಸಿತರಂತೆ ನಟಿಸಬೇಕು, ಮರೆಮಾಚಿ ತನ್ನ ದುಃಖವನ್ನು

ಯಾಂತ್ರಿಕ ಬದುಕು ನಲವ ನುಂಗಿದರೇನು
ಸಂತಸದ ಪ್ರಯೋಗಕ್ಕಾರ ನಗಬೇಕು ಅವರು

ಎಷ್ಟು ಜನ ಶ್ರೋತೃಗಳ ನಡುವೆ ಏಕಾಂಗಿ
ಇನ್ನೊಬ್ಬರಿಗೆ ದುಃಖ ಕೊಡಲಾದರೂ ನಗಲೇ ಬೇಕು

ಈಗ ಕೆಲವು ಸಲ ನಾವು ನಗುತ್ತೇವೆ ಮನಸಾರ
ಜನರ ಕುಹಕಗಳ ನುಂಗಲಿಕ್ಕೆ

ನಿಜಕ್ಕೂ ಸಂತಸಕೆ ಕಾರಣವಿಲ್ಲ
ಎಲ್ಲ ಸಂತೋಷಗಳೂ ಉದುರಿ ಹೋಗಿವೆ ಚರಟದಂತೆ


ಜಗದ ವ್ಯಾಪಾರಗಳು ಬದಲಾಗಬಹುದು
ವಿಸ್ಮಯಗಳು ಜರುಗಿದರೆ
ಒಂದು ಕ್ಷಣಕ್ಕಾದರೂ ಉರಿಬೇಸಗೆಯ
ಜುಲೈ ಮಳೆಗಾಲವಾಗಬಹುದೇ?
ಮನುಷ್ಯನಿಗೆ ಸಾಧ್ಯ ಸುರಿವ ಬೆವರಿನ ದುಡಿತದಿಂದ
ಬಿಡುಗಡೆಯ ಹೊಂದುವುದು;
ಕೆನ್ನೆಯ ಮೇಲೆ ಹೊಳಪೊಂದು ಮೂಡುವುದು
ಆದರಿದು ಎಂದು?

ಥಟ್ಟನೆ ಆಗಸದಿಂದ ಮಳೆಯ
ಹೊಳೆಯೊಂದು ಸುರಿದರೆ
ತಾಯಿ ನೆಲಕ್ಕೆ ಪುನಶ್ಚೇತನದ ಪುಳಕ

ಗಾಳಿಗೆ ಚಿಕಿತ್ಸೆಯ ಗುಣ ಬಂದೀತೆಂದು ಆಶಿಸುತ್ತೇನೆ
ಆಗ ಕತ್ತಿಯೇಟಿನ ಆಳ ಗಾಯಗಳೂ ಮಾಯಬಹುದು
ಜಗದ ವ್ಯಾಪಾರಗಳು ಇಷ್ಟು ಬೇಗನೆ
ಬದಲಾಗಬಹುದೆಂದು ಆಶಿಸಲು ಬಹುದೇ?

ತ್ಯಾಗ ತರುವುದು ಸಮಾಧಾನ
ನಮ್ಮ ಹಳೆಯ ಸಂಬಂಧಗಳ ಕಳಚಿಕೊಂಡರೆ
ಹೊಸ ಸಂಬಂಧಗಳ ಬೆಳೆಸಬಹುದು
ಬಹುಕಾಲ ಬಾಳುವಂತೆ

ನಾನು ಮೂಕಿಯಾಗಲೂ ಸರಿಯೆ
ಲೋಕವನ್ನೇ ಅಲುಗಿಸಬಲ್ಲೆ
ಕಣ್ಣನೋಟದ ಕಿಡಿಯ ಕಾರಿ

ನನ್ನ ಹೃದಯ ಮೇಣದಂತೆ
ಮೃದುವಾಗಿರಲಿ
ಎಂದು ಬಯಸುವೆನು ನಾನು
ಆಗಲಷ್ಟೇ ಅದರೊಳಗೆ ಸಂತಸದ
ಮಧುವ ತುಂಬಬಹುದು

ಎತ್ತಲೋ ಮಾಯವಾಗಿ ಹೋದನೆನ್ನ ಗೆಳೆಯ
ನನ್ನ ಹೃದಯವ ಡವಡವಿಸಿ ದಿಕ್ಕೆಡಿಸಿ ಹೋದ

ನಾನವಗೆ ಆಶಿಸಿದೆ ನೂರ್ಕಾಲ ಬಾಳುವ ಬದುಕ
ನನ್ನಾತ್ಮ ಉಳಿದಿಹುದು ಉಂಡು ನೋವಿನ ದುರಂತ

ಎಚ್ಚರವೂ ಅನಸ್ತಿತ್ವವೂ ಇಲ್ಲೇ ಎಲ್ಲೋ ಅಸ್ತಿತ್ವದಲ್ಲಿವೆ
ನನ್ನತನವೆಂಬುದೆಲ್ಲೋ ಸಿಗದಂತೆ ಕಳೆದು ಹೋಗಿದೆ

ಅವನು ಆದರಿಸುತ್ತಿದ್ದ ನಂಬಿಕೆಯೆಲ್ಲೋ ಆವಿಯಾಗಿದೆ
ಈ ಹಾಡ ದನಿಯು ನಿನ್ನಸ್ತಿತ್ವವನೆಲ್ಲೆಲ್ಲೋ ಬಡಿಯುತ್ತಿದೆ

ನಾನಲ್ಲ, ನನ್ನ ನಂಬಿಕೆ ನಿನ್ನ ಬರುವಿಕೆಗೆ ಪಿಸುಗುಟ್ಟಿದೆ
ಮರೆಯಾಗಿ ಹೋದ ಮೇಲೆ ಕಾಯುವಿಕೆ ಅತಿಯಾಗಿದೆ

ಈ ಮಣ್ಣಿನಿಂದ ನಾನು ಸ್ವರ್ಗಕ್ಕಾಗಿ ಹಂಬಲಿಸಿದೆ
ತಾರೆಗಳ ಕಾರವಾನು ನನ್ನೆಡೆಗೆ ನಡೆದು ಬಂದಿದೆ

ನನ್ನ ಸೌಂದರ್ಯದ ರಕ್ಷಣೆಗೆನಗೆ ರಕ್ಷಕನೊಬ್ಬ ಬೇಕಾಗಿದೆ
ನನ್ನ ಹೃದಯದ ಬಡಿತಕ್ಕೆ ಮತ್ತೊಮ್ಮೆ ತಾರುಣ್ಯದುಂಬಿದೆ

ಕುಡಿ ನನ್ನ ಮುಖಕೆ ಮುಖವೊಡ್ಡಿ ಮನದುಂಬಲಿ
ಮನಸು ನನ್ನದು, ತಡವರಿಸೆ ನಾನೆಂದಿಗೂ ಸ್ಪಷ್ಟವಾಗಿರುವೆ

ಅವನ ಕೈ ವಿದಾಯ ಹೇಳಿತು ನನಗೆ ನಿನ್ನೆಯ ದಿನ
ಇಂದು ಹುಡುಕುತ್ತಿರುವನು ಅವನು ನನ್ನನ್ನು ಕೂಡೆ

ಇಂದಿನ ಹುಟ್ಟು ನಾಳೆಯ ಸಾವು ತಿಳಿದುಕೋ
ಅವನಿಗೆಷ್ಟು ಅಪಮಾನಗೊಳಿಸಿದರವರು ನಿನ್ನೆವರೆಗೆ

ಇಂದವರು ಶೋಕಿಪರು, ವಿದಾಯ ಹೇಳುವರು
ಅವರವರ ಕಟ್ಟ ಕಡೆಯ ವಿದಾಯವನ್ನು

ಸುನೀತಾ ರೈನಾ ಪಂಡಿತ್‌ ವಾಚಿಸಿದ ಅವರ ಕೆಲ ಕಾಶ್ಮೀರಿ  ಕವಿತೆಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಒತ್ತಿ