ಮೈಕೊರೆವ ಮಾಗಿಯಲಿ
ಖಾಲಿ ಎದೆಯ ಹುಡುಗಿಯ
ಕುರಿತು ಬರೆಯಲಾರೆ ನಾನು.

***
ಒಡೆದ ಹಿಮ್ಮಡಿಗೆ ಲೇಪ
ಬಳಿಯುವುದ ಮರೆತೆ.
ಮುಚ್ಚಿಡುವ ಕಷ್ಟ
ಈ ಚಳಿಗಾಲಕ್ಕಿಲ್ಲ ಗೆಳತಿ.
ಬಾಕಿ ಮೋಕ್ತಾ.

***
ಮುಂಜಾವಿನ ನನ್ನ
ಕನಸುಗಳಿಗೀಗ
ಅವನ ಪರಿಮಳವಿಲ್ಲ ಗೆಳತಿ.
ಅವಳ ಮನೆ ಅಂಗಳದಲಿ
ಮಾಗಿ ಚಳಿಗೆ ಅರೆಬರೆ ಅರಳಿ
ಕುಂಯುಗುಡುತ್ತಿರುವ
ಹೂವಿನೊಳಗೆ
ಅವನ ರುಚಿ ಇತ್ತೆಂದು
ಚಿಟ್ಟೆ ಮಾಹಿತಿ ಕೊಟ್ಟಿದೆ.

***
ಅವಳ ಕೆನ್ನೆ ಬೆಳಕಿಗೆ
ಇವನ ಕಣ್ಣಿನ ಬಲ್ಬು
ಮೀರಿ ಬೆಳಗುವುದ ಕಂಡಾಗಲೆಲ್ಲಾ
ಬೇರೇನೋ ನೆನಪು.
ಎದೆ ತುಂಬಾ ರೋಮ ಬಲಿಯದ
ಹುಡುಗನ ಬೆರಳಲ್ಲಿ
ಮಾಗಿ ಕಾರಣಕೆ ಮೋಹ ಬಿಡುವಿಲ್ಲದೆ
ಮಾತಾಡಿದೆ.

***
ಬೆಳಕು ಮುತ್ತಿಡುವ ಮುನ್ನವೇ
ಎತ್ತಿ ತಂದ
ಪಾರಿಜಾತ ಪ್ರತಿಭಟಿಸಿದ ಕುರುಹಿಗೆ
ದೇವಮೂಲೆಯಲಿಂದು ಯಾವ ಘಮಲಿಲ್ಲ.
ಮೊದಲೇ ಮಾಗಿ;
ಸೂರ್ಯನ್ನ ಮೋಹಿಸುವವರ
ಪಾಳಿಯಲಿ
ಹೂವಿನದ್ದೇ ಮೊದಲ ಹೆಸರು.
ಪೈಪೋಟಿಯಲ್ಲೀಗ
ಹೂವೆತ್ತಿದ ಹುಡುಗಿಯೂ..
ಚುಕ್ಕಿಗೊಂದು ರೇಖೆ ಎಳೆಯುತ್ತಾಳೆ
ಸೂರ್ಯ ಮುತ್ತಿಡುವ ಗುಂಗಿಗೆ
ನಖಶಿಖಾಂತ ನಡುಕ ಅವಳಿಗೆ.

***
ನನ್ನ ಕವಿತೆಗಳಿಗೆ
ಅವನ ಪರಿಮಳವಿಲ್ಲ.
ಮಾಗಿಗೂ ಮುನ್ನವೇ
ಯುದ್ಧ ಮುಗಿದು
ಗೆದ್ದ ಎದೆಯೊಳಗೆ
ಖಾಲಿ ಶೋಕ ಗೀತೆ.

***
ಕಳೆದ ಮಾಗಿಯಲಿ
ಬೋಳು ಮೈಯ
ನೀಲಿ ಹೂವಿನ ಮರದಡಿ
ನಿಂತವಳ
ಅವನ ಕನಸುಗಳು
ಬದುಕಿಸಿಕೊಂಡಿದ್ದವು.

***
ಅವನ ಎದೆಯೊಂದು ಪಾಯಸದ ಪಾತ್ರೆ.
ಮೊದಲೇ ಸಿಹಿಯ ವ್ಯಾಮೋಹಿ ಇವಳು.
ಒಬ್ಬಟ್ಟು, ಚಿರೋಟಿಗಳ ವ್ಯತ್ಯಾಸ ಮರೆತು
ಚಪ್ಪರಿಸಿ ಮೆಲ್ಲುವಾಗೆಲ್ಲಾ ನೆತ್ತಿ ನೇವರಿಸುತ್ತಾ
ಮಾಗಿ ಚಳಿಗೆ ನೆತ್ತಿಗೇರಿದರೆ ಕಷ್ಟವೆಂದು
‘ಮೆಲ್ಲಗೆ’ ಅನ್ನುವನು.
ಅಕ್ಕರೆ ಸಿಹಿ ಅತಿಯಾದಾಗಲೆಲ್ಲಾ
ತಟ್ಟೆಯೊಳಗೆರಡು ಹನಿ ಉಪ್ಪು ಬಿದ್ದು…

ಕೆನ್ನೆ ಒರೆಸುತ್ತಲೆ
ತಟ್ಟೆ ನೆಕ್ಕುವ
ಅವಳ ಕುರಿತು
ಅವನದ್ದು ಅಪರೂಪದ ಆಕ್ಷೇಪ…!

***
ಎಲ್ಲಾ ಮುಗಿದ ಮೇಲೆ
ಆರಂಭಿಸಿದ
ಮೊದಲ ಬೇಟಿಗೆ
ಮೌನದ್ದೆ ಔತಣ.
ಈ ಮಾಗಿಯಲಿ
ಅಂಗಳದ ಹೂಗಳಿಗೆ
ಅವನ ಸಂಭ್ರಮವಿರುವ
ಕುರುಹಿದೆ.

***
ಹೊಕ್ಕುಳಾಳದಲಿ ಉಕ್ಕುವ
ವಾಂಛೆಗೆ
ಆಳ ಗೆರೆಯಿರುವ ಅವನ ಅಂಗೈ
ಮದ್ದಂತೆ.
ಮಾಗಿ ಮುಗಿವ ಮೊದಲೇ
ಕಣಿವೆಯಲಿ ನೀಲಿ ಹಚ್ಚೆ ಮೂಡಿವೆ.
ನಡುಮನೆಯಲ್ಲಿ ಸಿಗರೇಟು
ಪರಿಮಳವಿದೆ.

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)