ಪ್ರೀತಿ ಹಣ್ಣಿನ ಹಾಡು

‘ಮಹಾ ಬಲಶಾಲಿ ಮನಸ್ಸೂ
ಎಷ್ಟು
ಸುಖವಾಗಿ ಸೋತು ಕೂರುತ್ತದೆ
ಈ ಪ್ರೇಮಕ್ಕೆ’
ಸಾಲು ಮುಂದುವರಿದಂತೆ ಗುಲಾಬಿ ಅರಳಿ
ಪರಿಮಳಿಸುತ್ತದೆ ಕವಿತೆಯಲ್ಲಿ.
ನಾನು ನನ್ನ ಬಗೆಯನ್ನು
ಬದಲಾಯಿಸಿಕೊಳ್ಳಬೇಕೆಂದು ತಿಳಿದವರಿಂದ
ಅಣತಿಯಾಗುತ್ತಿದೆ ಆಗಾಗ.

ಮೊಗದೊಳಗೆ ಮೋಡ ಗೂಡುಕಟ್ಟಿ
ಮಳೆಯ ಮೊಟ್ಟೆಗಳನ್ನು ಕಣ್ಣು
ಉದುರಿಸುವಾಗೆಲ್ಲಾ..
‘ಇರಲಿ ಬಿಡೆ ನನ್ನ ಹುಡುಗಿ,
ಒಲಿದಂತೆ ನೀ ಹಾಡು
ಹಕ್ಕಿ ಹಾಡಿಗೆ ಕಿವಿ…ಕಾಡು’
ಎದೆಗಪ್ಪಿಕೊಳ್ಳುತ್ತಾನೆ ಅವನು.

ತೆಕ್ಕೆ ಬಿಡಿಸಿಕೊಂಡವಳು
ಹೂವಿನೊಳಗಿದ್ದ ನೀಲಿ ಕೊಕ್ಕಿನ ಹಕ್ಕಿ ತೋರಿ ಅದ್ವೈತವೆನುವಾಗ
ಅವನೆದೆ ಹೂ ಮುಡಿದ ಮಳೆಬಿಲ್ಲು.
ಅವನ ಬಗ್ಗಿಸಿ
ಬೆನ್ನು ಅಡಿಪ್ಯಾಡಾಗಿಸಿ
‘ನನ್ನ ತುಟಿಯಂಚಿಲಿ ಹೊಳೆವ
ಬೆಳಕ ಕುಡಿ ಯಾಕಾದೆ ನೀನು ದೊರೆಯೆ’
ಮುಂದುವರೆಯುತ್ತಿದೆ ಕವಿತೆ

ವಿಧಿ ತಲೆಬಾಗಿ ಅವಳ ಪ್ರಭಾವಳಿಯ
ಜಗವಿರುವ ಎಡೆಯೆಲ್ಲ ಪ್ರೀತಿಯ
ಹಣ್ಣು ಹಂಚುತ್ತದೆ.
ಮತ್ತವಳು ಮಕ್ಕಳ ತಲೆನೇವರಿಸಿ
ಮುದ್ದಿನಲಿ ಹೇಳುವಳು.
‘ಮರೆಯದೆ ಈ ಹಣ್ಣಿನ ಬೀಜ ಬಿತ್ತಬೇಕು
ಮಕ್ಕಳೆ; ಹುಟ್ಟುತ್ತವೆ ಪ್ರೇಮದ ಮರಗಳು…’

ಒಬ್ಬ ರಾಮನೂ, ಒಬ್ಬ ಗಾಂಧಿಯೂ
ಒಂದು ಕುರಿಯೂ, ಒಂದು ತೋಳವೂ
ಒಂದಷ್ಟು ನೋಟುಗಳು
ಬಹಳಷ್ಟು ಬೇಟೆಗಳು
ಕದ ತಟ್ಟುತ್ತಿರುತ್ತಾವೆ ಒಂದಿಲ್ಲೊಂದು…
ಸರದಿಯಲಿ ಸರಹೊತ್ತಿನಲ್ಲೂ

ವಿಧಿ ನೀಡಿದ ಪ್ರೇಮದ ಹಣ್ಣಿನ ಒಂದಾದರೂ ಗುಕ್ಕಿಗಾಗಿ
ಕಳೆದುಕೊಂಡ ಒಂದೇ ಒಂದು ಹಕ್ಕಿಗಾಗಿ..

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.