Advertisement
ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್: ಹೇಮಾ ಬರಹ

ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್: ಹೇಮಾ ಬರಹ

ತನ್ನ ಸಖ ವೆಂಕಟ್ ಮೋಂಟಡ್ಕ ಕುರಿತು ಕವಯಿತ್ರಿ,ಪತ್ರಕರ್ತೆ ಹೇಮಾ ಇಲ್ಲಿ ಬರೆದಿದ್ದಾರೆ.

ವೆಂಕಟ್ ನನಗೆ ಪರಿಚಯವಾಗುವಾಗ ಅವರೊಬ್ಬ ಸಾಹಿತ್ಯ, ಸಂಘಟನೆ ಅಂತ ಓಡಾಡುವ ಉತ್ಸಾಹಿ ಯುವಕ. ಚಿತ್ರಕಲಾವಿದ, ರಂಗ ಸಂಗೀತಗಾರ, ನಟ. ಸುಳ್ಯದ ಹಿರಿಯ ಮತ್ತು ಕಿರಿಯ ಎಲ್ಲ ಸಾಹಿತಿ, ಕಲಾವಿದರನ್ನು ಒಟ್ಟುಗೂಡಿಸುತ್ತಾ ಸುಳ್ಯವನ್ನು ಜೀವಂತವಾಗಿಟ್ಟವರು. ತಮ್ಮದೇ ಆದ ‘ಪರಸ್ಪರ ಚಿಂತನ ವೇದಿಕೆ’ ಮೂಲಕ ಕಥಾ ಸಂವೇದನಾ ಶಿಬಿರ, ಕಾವ್ಯ ಕಮ್ಮಟ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಹೀಗೆ ಹತ್ತಾರು ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಕೀಬೋರ್ಡ್ ನುಡಿಸುತ್ತಿದ್ದರು. ಅಭಿನಯ ಸುಳ್ಯ ನಾಟಕ ತಂಡದ ನಾಟಕಗಳಿಗೆ ಸಂಗೀತ ನೀಡುತ್ತಿದ್ದರು. ಖ್ಯಾತ ರಂಗ ನಿರ್ದೇಶಕ ದ್ರುವರಾಜ ದೇಶಪಾಂಡೆ ನಿರ್ದೇಶಿಸಿದ ಜೂಲಿಯಸ್ ಸೀಸರ್ ನಾಟಕಕ್ಕೆ ಸಂಗೀತ ನೀಡಿದ್ದರು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನ ಕಂಡ ನಾಗಮಂಡಲ ನಾಟಕಕ್ಕೆ ವೆಂಕಟ್ ನೀಡಿದ ಸಂಗೀತವನ್ನು ಈಗಲೂ ನೆನಪು ಮಾಡಿಕೊಳ್ಳುವವರಿದ್ದಾರೆ.

ಸುಳ್ಯದಲ್ಲಿ ವಾಣಿಜ್ಯ ಪದವಿ ವಿದ್ಯಾರ್ಥಿಯಾಗಿದ್ದಾಗ ಮಿಮಿಕ್ರಿ ಕಲಾವಿದನಾಗಿ ಕೂಡಾ ಗಮನ ಸೆಳೆದಿದ್ದರಂತೆ. ನಂತರ ಮಂಗಳೂರಿನ ಜಾಹೀರಾತು ಕಂಪನಿಯಲ್ಲಿ ವಿನ್ಯಾಸಕನಾಗಿಯೂ ದುಡಿದು ಮತ್ತೆ ಊರಿಗೆ ಮರಳಿ ಸುಳ್ಯದಿಂದ ಪ್ರಕಟಗೊಳ್ಳುತ್ತಿದ್ದ ‘ಚೇತನ’ ವಾರಪತ್ರಿಕೆಯನ್ನು ಕಲಾತ್ಮಕವಾಗಿ ಹೊರತಂದಿದ್ದರು. ಹೀಗೆ ನಮ್ಮ ಮದುವೆಯಾಗುವ ತನಕ ಹತ್ತಾರು ಸಾಹಸ ಮಾಡಿ ಮುಗಿಸಿದ್ದರು. ಸುಳ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಕಾರ್ಯದರ್ಶಿಯಾಗಿ ಪರಿಷತ್ತನ್ನು ಸಮ್ಮೇಳನಕ್ಕಷ್ಟೇ ಸೀಮಿತಗೊಳಿಸದೆ ಅದೊಂದು ಸಾಹಿತ್ಯದ ಪರಿಚಾರಕ ಸಂಸ್ಥೆಯಾಗಿ ರೂಪಿಸಿದ್ದರು.

ನಮ್ಮ ಮದುವೆಯ ನಂತರವೂ ಇದು ಹೀಗೆ ಮುಂದುವರಿಯಿತು. ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ತಾತ್ವಿಕ ಹೋರಾಟ, ಪ್ರತಿಭಟನೆಗೆ ವೆಂಕಟ್ ಮುಂದಾಳತ್ವ ಎಲ್ಲರಿಗೂ ಬೇಕಾಗಿತ್ತು. ವೆಂಕಟ್ ಮೀಟಿಂಗ್ ಕರೆದರೆಂದರೆ ಅಲ್ಲಿ ಏನೋ ನ್ಯಾಯ ಇದೆ ಎಂಬ ನಂಬಿಕೆ ಎಲ್ಲರಿಗೂ. ಇಂತಹ ಅನೇಕ ಸಂದರ್ಭಗಳಲ್ಲಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಸೇರುತ್ತಿದ್ದರು. ಒಂದು ಅಭಿಪ್ರಾಯಕ್ಕೆ ಎಲ್ಲರನ್ನೂ ಒಪ್ಪಿಸುವ ಜಾಣ್ಮೆ ವೆಂಕಟ್ ಗಿತ್ತು.

ಇಷ್ಟಾಗಿಯೂ ವೆಂಕಟ್ ಬದುಕಿಗೊಂದು ದಾರಿ ಮಾಡಿಕೊಂಡಿರಲಿಲ್ಲ. ಪಿತ್ರಾರ್ಜಿತವಾಗಿ ಬಂದ ತುಂಡು ಆಸ್ತಿಯನ್ನು ಮಾರಿ ಹಣಕಾಸಿನ ಸಂಸ್ಥೆ ನಡೆಸಿದ್ದು ಬದುಕಿನಲ್ಲಿ ಮಾಡಿದ ಒಂದೇ ತಪ್ಪು ನಿರ್ಧಾರ. ಒಂದಿಷ್ಟು ದಿನ ನೆಮ್ಮದಿ ಖುಷಿಯ ಬದುಕು ನಮ್ಮದಾಗಿತ್ತು. ಸಂಬಂಧಿಗಳು, ಗೆಳೆಯರು ಸುತ್ತಮುತ್ತಲು ತುಂಬಿದ್ದರು. ನಂತರದ್ದು ದುರಂತ. ಆಗ ಎಲ್ಲರೂ ದೂರಾದರು. ಬದುಕು ಮೂರಾಬಟ್ಟೆಯಾಗಿದ್ದರೂ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಎಲ್ಲರೊಂದಿಗೂ ನಗುನಗುತ್ತಾ ಇರುತ್ತಿದ್ದರು. ಆಗಲೂ ಸಾಹಿತ್ಯದ ಗೆಳೆಯರು ಭಿನ್ನಾಭಿಪ್ರಾಯ ಹಿಡಿದುಕೊಂಡು ವೆಂಕಟ್ ಮುಂದೆ ಬರುತ್ತಿದ್ದರು. ಮತ್ತೆ ನಮ್ಮನೆಯೇ ಮೀಟಿಂಗ್ ಪ್ಲೇಸ್.

ಈ ಮಧ್ಯೆ ಮತ್ತೆ ಸುದ್ದಿ ಬಿಡುಗಡೆ ಪತ್ರಿಕೆಯ ಸಾಹಿತ್ಯ ಪುಟದ ಜವಾಬ್ದಾರಿ ವಹಿಸಿಕೊಂಡು ಅದನ್ನೊಂದು ಸುಳ್ಯದ ಸಾಹಿತ್ಯ ಚರಿತ್ರೆಯ ಮಹತ್ವದ ದಾಖಲೆಯಂತೆ ಮಾಡಿದರು. ಪ್ರತಿ ವಾರವೂ ಹಿರಿಯ ಕಥೆಗಾರರೊಬ್ಬರ ಕಥೆಯೊಂದನ್ನು ಧಾರಾವಾಹಿಯಾಗಿ ಪ್ರಕಟಿಸುವುದಲ್ಲದೆ ಕಥೆಗಾರರ ಬಗ್ಗೆ ಪುಟ್ಟದೊಂದು ಟಿಪ್ಪಣಿ ಇರುತ್ತಿತ್ತು. ಕಥೆಗಳಿಗೆ ಪೂರಕ ಚಿತ್ರವೂ ಇವರದೇ. ಹಾಗೆಯೇ ಹೊಸ ಬರಹಗಾರರ ಕಥೆ, ಕವನ ಕೂಡಾ ಇರುತ್ತಿತ್ತು. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತೆಂದರೆ ಹಿರಿಯ ಕಥೆಗಾರರೂ ತಮ್ಮದೊಂದು ಕಥೆ ಪ್ರಕಟವಾಗುವುದನ್ನು ಕಾಯುವಂತೆ ಮಾಡಿತ್ತು.

ಅಚಾನಕ್ಕಾಗಿ ಇಬ್ಬರೂ ದುಡಿಯುವ ನಿರ್ಧಾರ ಮಾಡಿ ಬರಿಕೈಯಲ್ಲಿ ಬೆಂಗಳೂರಿಗೆ ಬಂದೆವು. ಜೊತೆಗೆ ಎಲ್ಲವನ್ನೂ ಗಮನಿಸುತ್ತ ಏನೂ ಆಗದವನಂತೆ ಇರುವ ಮಗ ನೇಸರ. ಮತ್ತೆ ವೆಂಕಟ್ ಜರ್ಜರಿತರಾದರು. ಕಾಲಿಗೆ ಎಡವುವಷ್ಟು ಕಲಾವಿದರಿರುವ ಬೆಂಗಳೂರಿನಲ್ಲಿ ಅಂದುಕೊಂಡಷ್ಟು ಕೆಲಸ ಸಿಗಲಿಲ್ಲ. ನನಗೂ ಕೆಲಸ ಸಿಗಬೇಕಾದರೆ ಆರು ತಿಂಗಳು ಹಿಡಿಯಿತು. ನಮ್ಮವರು, ಸಂಬಂಧಿಗಳು ಯಾರೂ ಇಲ್ಲದ ಇಲ್ಲಿ ಅನಾಮಿಕರಾಗಿ ಬದುಕಿದೆವು. ಆದರೆ ಗೊತ್ತೇ ಇಲ್ಲದ ಅನೇಕರು ಸಹಾಯ ಮಾಡಿದರು.

***

ವೆಂಕಟ್ ತಡವಾಗಿ ಕಥೆ ಬರೆಯತೊಡಗಿದವರು. ಅವರು ಬರೆದ ಮೊದಲ ಕಥೆ ‘ಸೈರನ್’ ವಿಜಯ ಕರ್ನಾಟಕ ಪತ್ರಿಕೆ ನಡೆಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಮೂರು ಬಹುಮಾನಿತ ಕಥೆಗಳ ನಂತರ ಆಯ್ದ ಹತ್ತು ಕಥೆಗಳಲ್ಲಿ ಮೊದಲನೆಯದಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಅದು ಸುಧಾದಲ್ಲಿ ಪ್ರಕಟಗೊಂಡಿತ್ತು. ಎರಡನೇ ಕಥೆ ‘ವೇಸ’ ಕೂಡಾ ಸುಧಾದಲ್ಲಿ ಪ್ರಕಟಗೊಂಡಿತು. ಮೂರನೇ ಕಥೆ ‘ಪಾಲು’ ಎರಡು ವರ್ಷದ ಹಿಂದೆ ವಿಕ್ರಾಂತ ಕರ್ನಾಟಕ ನಡೆಸಿದ ಗಾಂಧೀ ಕಥಾ ಸ್ಫರ್ಧೆಯಲ್ಲಿ ತೃತಿಯ ಬಹುಮಾನ ಪಡೆಯಿತು. ನಂತರ ಬರೆದ ಎರಡು ಕಥೆಗಳು ಅಪ್ರಕಟಿತ.

ವೆಂಕಟ್ ಬರೆದ ಐದೂ ಕಥೆಗಳಲ್ಲಿ ತಾವು ಕಂಡ ಸುತ್ತಲಿನ ಘಟನೆಯ ಒಂದೆಳೆ ಇದ್ದೇ ಇದೆ. ಮತ್ತು ಪ್ರತಿ ಕಥೆಯನ್ನೂ ಮತ್ತೆ ಮತ್ತೆ ತೃಪ್ತಿಯಾಗುವವರೆಗೂ ತಿದ್ದುತ್ತಿದ್ದರು. ಪ್ರತಿ ಬಾರಿ ತಿದ್ದಿ ಬರೆದಾಗಲೂ ನನಗೆ, ಓದಿ ಅಭಿಪ್ರಾಯ ಹೇಳು ಎನ್ನುತ್ತಿದ್ದರು. ಒಂದೋ ಎರಡೋ ವರ್ಷಕ್ಕೆ ಒಂದು ಕಥೆ ಬರೆಯುತ್ತಿದ್ದರು. ಕಡೇಪಕ್ಷ ಒಂದು ಕಥೆಯನ್ನು ತಿದ್ದಿ ತೀಡಿ ಮುಗಿಸಲು ಆರು ತಿಂಗಳು ಬೇಕಾಗುತ್ತಿತ್ತು. ಹೀಗೆ ಹತ್ತು ವರ್ಷದಲ್ಲಿ ಐದು ಕಥೆ ಬರೆದದ್ದು. ಆದರೆ ಅವರೆಂದೂ ತನ್ನ ನೋವುಗಳನ್ನು ಕಥೆಯಲ್ಲಿ ತುರುಕಲಿಲ್ಲ. ಇದಕ್ಕೆ ಅವರ ‘ಸಂಬಂಧ’ ಕಥೆಯೇ ಸಾಕ್ಷಿ. ಈ ಕಥೆ ಅವರು ತೀರಿಹೋಗುವ (ಸೆಪ್ಟೆಂಬರ್ 23, 2009) ಸ್ವಲ್ಪ ಹಿಂದೆಯಷ್ಟೆ ಬರೆದಿದ್ದರು. ಅವರಿದ್ದಿದ್ದರೆ ಇನ್ನೂ ಕತೆಯನ್ನು ಬೆಳೆಸುತ್ತಿದ್ದರೋ ಏನೋ.

About The Author

ಹೇಮಾ ವೆಂಕಟ್

ಲೇಖಕಿ, ಬೆಂಗಳೂರಿನಲ್ಲಿ ಪತ್ರಕರ್ತೆ. ಸುಳ್ಯದ ಬಳಿಯ ಗುತ್ತಿಗಾರಿನವರು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ