`ಕೆಂಡಸಂಪಿಗೆ’ಯಲ್ಲಿ ಪ್ರಕಟವಾದ `ಡಿ.ಎನ್. ಶಂಕರಭಟ್ಟರೊಂದಿಗೆ ಒಂದು ಉದ್ದದ ಮಾತುಕತೆ‘  ಓದಿದೆ. ಅದರಲ್ಲಿ ಮತ್ತು ಇತರ ಕೆಲವೆಡೆ ಕನ್ನಡದ ಮಹತ್ವದ ಭಾಷಾವಿಜ್ಞಾನಿ ಪ್ರೊಫೆಸರ್ ಭಟ್ ಅವರು ಪ್ರಕಟಿಸಿದ ಅಭಿಪ್ರಾಯಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ಈ ಕೆಲವು ಟಿಪ್ಪಣಿಗಳನ್ನು ಬರೆಯುತ್ತಿದ್ದೇನೆ. ಸಂಸ್ಕೃತದಿಂದ ಕನ್ನಡಕ್ಕೆ ಅನ್ಯಾಯವಾಗಿದೆ, ಅದನ್ನು ಸರಿಪಡಿಸಿ ಕನ್ನಡಕ್ಕೆ ನ್ಯಾಯ ದೊರಕಿಸಿಕೊಡಬೇಕು, ಆ ಮೂಲಕ ಬಹುಜನ ಕನ್ನಡದವರಿಗೆ, ಮುಖ್ಯವಾಗಿ ಇದುವರೆಗೆ ಶಿಕ್ಷಣವಂಚಿತರಾದ ದಲಿತ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಮುಂತಾದ ಅವರ ವಾದ ಈಗ ಸಾಕಷ್ಟು ಪ್ರಚಾರ ಪಡೆದಿದೆ. (ಇಂಥ ಅಭಿಪ್ರಾಯವುಳ್ಳ ಇತರ ಹಲವರಿದ್ದಾರೆ.) ಈ ಉದ್ದೇಶಕ್ಕೆ ಅವರು ಹಾಕಿಕೊಂಡ ಕಾರ್ಯಕ್ರಮಗಳೆಂದರೆ, ಕನ್ನಡದ ಲಿಪಿ ಪರಿಷ್ಕರಣ, ಸಂಸ್ಕೃತ ಪದಗಳನ್ನು ಕಡಿಮೆ ಮಾಡುವುದು, ಆದಷ್ಟೂ ಪಾರಿಭಾಷಿಕ ಪದಗಳನ್ನು ಅಚ್ಚಕನ್ನಡದೊಳಗಿಂದಲೇ ಹೊಸೆದುಕೊಳ್ಳುವುದು ಮುಂತಾದುವು. ಭಟ್ ಅವರ ಮೂಲ ಆಶಯ ಮತ್ತು ಕಳಕಳಿ ನನ್ನ ವಿಚಾರಗಳಿಗೆ ಹತ್ತಿರವಾದ ಕಾರಣ ಸಕಾರಾತ್ಮಕ ಧೋರಣೆಯಿಂದಲೇ ಸ್ಪಂದಿಸುತ್ತಿದ್ದೇನೆ. ಕನ್ನಡ ನುಡಿ ಮತ್ತು ಜನಪದವನ್ನು ನಾವೆಲ್ಲರೂ ಪ್ರೀತಿಸುತ್ತೇವೆ; ಹಾಗೂ ಭಟ್ ಅವರು ಉದ್ದೇಶಿಸುವ ಅವಕಾಶವಂಚಿತರ ಹಿತದೃಷ್ಟಿ ಎಲ್ಲರ ಮನಸ್ಸಿನಲ್ಲೂ ಇದೆ. ಆದರೂ ಭಟ್ ಅವರ ಕೆಲವು ಚಿಂತನೆಗಳು ಮತ್ತು ಕ್ರಮಗಳು ಆತುರ, ಅತಿಶಯೋಕ್ತಿ, ತಪ್ಪು ವಿಶ್ಲೇಷಣೆ, ಮತ್ತು ಅತಿರೇಕಗಳಿಂದ ಕೂಡಿವೆ ಎಂದು ನನಗನಿಸುತ್ತದೆ.

ಅಲ್ಪಪ್ರಾಣ, ಮಹಾಪ್ರಾಣ: ಏನು ಹಾಗಂದರೆ?

ಭಟ್ ಅವರು ತೆಗೆದುಹಾಕಬೇಕೆಂದಿರುವ ಮಹಾಪ್ರಾಣ ಅಕ್ಷರಗಳ ವಿಚಾರವನ್ನು ಇಲ್ಲಿ ಸ್ವಲ್ಪ ಬಿಡಿಸಿನೋಡುವುದು ಅಗತ್ಯ. ಯಾಕೆಂದರೆ ಈ ಅಕ್ಷರಗಳು ಅನಗತ್ಯ, ಸಾಮಾನ್ಯರಿಗೆ ಉಚ್ಚರಿಸಲು ಆಗುವುದಿಲ್ಲ ಎಂದು ಅವರು ಹೇಳುತ್ತಾರೆ. ನನಗೆ ಹಾಗನಿಸುವುದಿಲ್ಲ; ಕೆಲವರ ಮಾತಿನಲ್ಲಿ ಇವು ಇಲ್ಲದಿರಬಹುದು, ಇನ್ನು ಕೆಲವರ ಮಾತಿನಲ್ಲಿ ಇವೆ, ಹಾಗೂ ಇಲ್ಲದವರು ಕಲಿತುಕೊಳ್ಳಬಹುದಾದಂಥವು.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 25 ವರ್ಗೀಯ ವ್ಯಂಜನಾಕ್ಷರಗಳು (ಅಕ್ಷರ ಎಂದರೆ ಧ್ವನಿಸಂಕೇತ ಎಂದು ತಿಳಿದುಕೊಳ್ಳಬೇಕು): ಕ ಚ ಟ ತ ಪ ಎಂಬುದಾಗಿ ಬಾಯಿಯ ಹಿಂಭಾಗದಿಂದ ತುಟಿಗಳ ತನಕ ಜನನ ಸ್ಥಾನಕ್ಕೆ ಅನುಸಾರ ಇವನ್ನು ವರ್ಗೀಕರಿಸಲಾಗಿದೆ. ಒಂದೊಂದು ವರ್ಗದಲ್ಲೂ ಐದು ಅಕ್ಷರಗಳಿದ್ದು ಅದು ಅನುನಾಸಿಕದಲ್ಲಿ ಕೊನೆಗೊಳ್ಳುತ್ತದೆ. ಆದರೆ ಅನುನಾಸಿಕಗಳಿಗೆ ಅಲ್ಪಪ್ರಾಣ, ಮಹಾಪ್ರಾಣ ಎಂಬ ಭೇದ ಹತ್ತದ ಕಾರಣ ಅವುಗಳನ್ನು ಇಲ್ಲಿ ಪರಿಗಣಿಸುವ ಅಗತ್ಯವಿಲ್ಲ. ಇನ್ನುಳಿದ 20 ವ್ಯಂಜನಗಳು ಹೀಗಿವೆ:

ಕ ಖ ಗ ಘ
ಚ ಛ ಜ ಝ
ಟ ಠ ಡ ಢ
ತ ಥ ದ ಧ
ಪ ಫ ಬ ಭ

ಇವೆಲ್ಲವೂ ಸ್ಫೋಟಗಳು (plosives or stops), ಎಂದರೆ ಇವನ್ನು ಉಚ್ಚರಿಸುವಲ್ಲಿ ನಿಶ್ವಾಸವನ್ನು ಬಾಯಲ್ಲಿ ಆಯಾ ಧ್ವನಿಗೆ ತಕ್ಕ ಸ್ಥಾನಗಳಲ್ಲಿ ಪೂರ್ಣ ತಡೆದು ನಂತರ ಒಮ್ಮೆಲೇ ಹೊರ ಹಾಕಲಾಗುತ್ತದೆ. (ಈ ಕಾರಣಕ್ಕೆ ಅವನ್ನು ಸ್ಪರ್ಶಗಳೆಂದೂ ಕರೆಯುತ್ತಾರೆ. ಆದರೆ ಸ್ಪರ್ಶಗಳಲ್ಲಿ ಅನುನಾಸಿಕವೂ ಸೇರುವುದರಿಂದ ನಾನಿಲ್ಲಿ ಸ್ಫೋಟ ಎಂಬ ಪದ ಬಳಸಿದ್ದೇನೆ.) ಪ್ರತಿಯೊಂದು ವರ್ಗದಲ್ಲೂ ಎರಡೆರಡು ಜತೆಗಳನ್ನು ಕಾಣಬಹುದು, ಕ-ಖ, ಗ-ಘ ಎಂದು ಮುಂತಾಗಿ. ಇವುಗಳಿಗೆ ಸಂಬಂಧಿಸಿ ಎರಡು ವ್ಯತಾಸಗಳಿವೆ:

1. ಕ, ಖ ಮುಂತಾದವು ಅಕಂಪನಗಳು (unvoiced); ಎಂದರೆ ಇವನ್ನು ಉಚ್ಚರಿಸುವಾಗ ಕೊರಳ ಬುಡದಲ್ಲಿರುವ ಧ್ವನಿತಂತುಗಳು (vocal chords) ಕಂಪಿಸುವುದಿಲ್ಲ. ಗ, ಘ ಮುಂತಾದವು ಕಂಪನಗಳು ಅಥವಾ `ನಾದ’ಗಳು (voiced); ಇವನ್ನು ಉಚ್ಚರಿಸುವಾಗ ಧ್ವನಿತಂತುಗಳು ಕಂಪಿಸುತ್ತವೆ.

2. ಪ್ರತಿ ವರ್ಗದ ಮೊದಲನೇ ಮತ್ತು ಮೂರನೇ ಅಕ್ಷರಗಳು ಅಲ್ಪಪ್ರಾಣ; ಎರಡನೇ ಮತ್ತು ನಾಲ್ಕನೇ ಅಕ್ಷರಗಳು ಮಹಾಪ್ರಾಣ. ಇಲ್ಲಿ `ಪ್ರಾಣ’ ಎಂದರೆ ಉಸಿರು ಎಂದು ಅರ್ಥ. ಅಲ್ಪಪ್ರಾಣ ಮತ್ತು ಮಹಾಪ್ರಾಣ ಎನ್ನುವುದು ಸ್ಫೋಟಗಳಿಗೆ ಮಾತ್ರವೇ ಸಂಬಂಧಿಸಿ ಉಸಿರಿನ ತೌಲನಿಕ ಪ್ರಮಾಣವನ್ನು ಸೂಚಿಸುವ ಪದಗಳು. ಮಹಾಪ್ರಾಣ ಅಕ್ಷರಗಳನ್ನು ಉಚ್ಚರಿಸುವಾಗ ಅಲ್ಪಪ್ರಾಣ ಅಕ್ಷರಗಳನ್ನು ಉಚ್ಚರಿಸುವುದಕ್ಕಿಂತ ತುಸು ಜಾಸ್ತಿ ಉಸಿರು (ಎಂದರೆ ಒತ್ತಡ) ಬೇಕಾಗುತ್ತದೆ. ಪ್ರಕೃತ ಚರ್ಚೆಯಲ್ಲಿ ನಮಗೆ ಪ್ರಸ್ತುತವಾಗಿರುವುದು ಈ ಎರಡನೇ ವ್ಯತ್ಯಾಸ.

ಇದನ್ನಿಲ್ಲಿ ವಿಸ್ತರಿಸಿ ಯಾಕೆ ಹೇಳುತ್ತಿದ್ದೇನೆಂದರೆ ಮಹಾಪ್ರಾಣದ ಉಚ್ಚಾರ ಬಹಳ ಕಷ್ಟ ಎನ್ನುವ ಕಲ್ಪನೆಯನ್ನು ತೊಡೆದುಹಾಕುವುದಕ್ಕೆ. ಮಹಾಪ್ರಾಣಕ್ಕೆ ಉಸಿರಿನ ನಿರಪೇಕ್ಷ (absolute) ಒತ್ತಡ ಎಷ್ಟು ಬೇಕು ಎನ್ನುವುದು ಮುಖ್ಯವಲ್ಲ, ಅಲ್ಪಪ್ರಾಣಕ್ಕಿಂತ ಸ್ವಲ್ಪ ಹೆಚ್ಚಿದ್ದರೆ ಸಾಕು; ಎಂದರೆ ಮುಖ್ಯವಾಗುವುದು ಸಾಪೇಕ್ಷ (relative) ಒತ್ತಡ. ಉದಾಹರಣೆಗೆ, ದನ ಮತ್ತು ಧನ ಎಂಬ ಪದಗಳು. ಇವುಗಳಲ್ಲಿ ಕ್ರಮಪ್ರಕಾರವಾಗಿ ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳು ಬಂದಿವೆ: ದ ಮತ್ತು ಧ. ಮಹಾಪ್ರಾಣವನ್ನು ಭಾರೀ ಶಕ್ತಿಯೊಂದಿಗೆ ತಲೆ ಸಿಡಿಯುವಂತೆ ಉಚ್ಚರಿಸಬೇಕಾದ ಅಗತ್ಯವಿಲ್ಲ, ಯಾರೂ ಹಾಗೆ ಮಾಡುವುದು ಕೂಡ ಇಲ್ಲ; ದ ಮತ್ತು ಧ ನಡುವಿನ ವ್ಯತ್ಯಾಸವನ್ನು ಇರಿಸಿಕೊಳ್ಳುವುದಕ್ಕೆ ಎಷ್ಟು ಬೇಕೋ ಅಷ್ಟು ಉಚ್ಚರಿಸಿದರೆ ಸಾಕು. ಇದೇ ಮಾತು ಉಳಿದೆಲ್ಲಾ ಮಹಾಪ್ರಾಣಗಳಿಗೂ ಒಪ್ಪುತ್ತದೆ. ಹಲವು ಸಂದರ್ಭಗಳಲ್ಲಿ ಈ ವ್ಯತ್ಯಾಸ ಅರ್ಥವ್ಯತ್ಯಾಸಕ್ಕೆ ಕಾರಣವಾಗುತ್ತದೆ ಎನ್ನುವುದೂ ಮುಖ್ಯ: ದನ ಮತ್ತು ಧನ ಎಂಬಲ್ಲಿ ಹೀಗೆ ಆಗುತ್ತದೆ. ಯಾವುದೇ ಭಾಷೆಯೂ ಇಂಥ ಧ್ವನಿವ್ಯತ್ಯಾಸದಿಂದಲೇ ಅರ್ಥವನ್ನು ಸೂಚಿಸುವುದು. ಅರ್ಥವ್ಯತ್ಯಾಸ ಆಗದ ಕಡೆಯೂ ಮಹಾಪ್ರಾಣಗಳನ್ನು ಉಚ್ಚರಿಸುವುದು ವಿದ್ಯಾಕನ್ನಡದ ಲಕ್ಷಣ. ಮತ್ತು ಈ ಸೂಕ್ಷ್ಮವಾದ ಧ್ವನಿವ್ಯತ್ಯಾಸ ತರುವುದು ಯಾರಿಗೇ ಆದರೂ ಅಸಾಧ್ಯವೆಂದು ತಿಳಿದುಕೊಳ್ಳಬಾರದು. (ಕೆಲವೊಮ್ಮೆ ಶಾಲೆಯಲ್ಲಿ ಅಧ್ಯಾಪಕರು ಕಲಿಸುವಾಗ ಸ್ವಲ್ಪ ಅತಿಶಯವಾಗಿ ಮಹಾಪ್ರಾಣ ಅಕ್ಷರಗಳನ್ನು ಉಚ್ಚರಿಸಬಹುದು, ಹಾಗೂ ವಿದ್ಯಾರ್ಥಿಗಳನ್ನು ಒತ್ತಾಯಿಸಬಹುದು. ಕಲಿಕೆಯ ಸಂದರ್ಭದಲ್ಲಿ ಅತಿಶಯ ಇದ್ದೇ ಇರುತ್ತದೆ. ಆದರೆ ವಿವೇಚನೆ ಇರುವ ಅಧ್ಯಾಪಕರಿಗೆ ಇದನ್ನು ಸರಿಯಾಗಿ ಕಲಿಸುವುದಕ್ಕೆ ಗೊತ್ತಿರುತ್ತದೆ.)

ಇಂಗ್ಲಿಷ್ ನ ಉದಾಹರಣೆ ತೆಗೆದುಕೊಳ್ಳೋಣ. ನಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿಗಳೂ ಇಂಗ್ಲಿಷ್ ಕಡ್ಡಾಯವಾಗಿ ಕಲಿಯುತ್ತಾರೆ. ಇಂಗ್ಲಿಷ್ ನಲ್ಲಿ ಕೂಡಾ ಮಹಾಪ್ರಾಣಗಳಿವೆ. ಇವನ್ನು aspirated ಎಂದು ಕರೆಯಲಾಗುತ್ತದೆ. ಇಂಗ್ಲಿಷ್ ನಲ್ಲಿ ಆರು ಸ್ಫೋಟಗಳಿವೆ: ಠಿ-b, ಣ-d, ಞ-g. ಇವುಗಳಲ್ಲಿ ಠಿ, ಣ, ಞ ಗಳು ಅಕಂಪನಗಳು ಮತ್ತು b, d, g ಗಳು ಕಂಪನಗಳು. ಅಕಂಪನ ಸ್ಫೋಟಕಗಳು ಸ್ವರ್ಜದ (syllable) ಆದಿಯಲ್ಲಿದ್ದು ಅವುಗಳ ಮೇಲೆ ಒತ್ತು (stress) ಬಿದ್ದಾಗ ಅವನ್ನು ಫ, ಠ, ಖ ಎಂಬಂತೆ ಉಚ್ಚರಿಸಬೇಕು. ಉದಾಹರಣೆಗೆ kiss ಎನ್ನುವುದನ್ನು `ಖಿಸ್’ ಎಂದೂ, pen ಎನ್ನುವುದನ್ನು `ಫೆನ್’ ಎಂದೂ, tea ಎನ್ನುವುದನ್ನು `ಠೀ’ ಎಂದೂ ಉಚ್ಚರಿಸುವುದು ಕ್ರಮ. (ಕನ್ನಡದ ಠ ಮತ್ತು ಇಂಗ್ಲಿಷ್ ನ ಠದಲ್ಲಿ ಸ್ವಲ್ಪ ವ್ಯತ್ಯಾಸವಿದೆ.) ಹೀಗೆ ಉಚ್ಚರಿಸದೆ ಇದ್ದರೆ ಅರ್ಥವ್ಯತ್ಯಾಸವೇನೂ ಆಗುವುದಿಲ್ಲ, ಯಾಕೆಂದರೆ ಇಂಗ್ಲಿಷ್ ನ ಈ ಒತ್ತು ಅರ್ಥಾತೀತವಾದುದು. ಆದರೂ ಒತ್ತು ಇದ್ದಲ್ಲಿ ಈ ಸ್ಫೋಟಗಳನ್ನು ಮಹಾಪ್ರಾಣಗಳಾಗಿ ಉಚ್ಚರಿಸುವುದು ಇಂಗ್ಲಿಷ್ ನ ಪದ್ಧತಿ. ಇಂಗ್ಲಿಷ್ ಸರಿಯಾಗಿ ಉಚ್ಚರಿಸುವುದಕ್ಕೆ ಇವುಗಳನ್ನು ಕಲಿಯಲೇ ಬೇಕಾಗುತ್ತದೆ.

ಕೀಳರಿಮೆ?

ಕನ್ನಡದ ಜನಸಾಮಾನ್ಯ ಮಕ್ಕಳಿಗೆ ಮಹಾಪ್ರಾಣಗಳು, ಮತ್ತು ಋಕಾರ ಷಕಾರ ಮುಂತಾದುವು ಉಚ್ಚರಿಸಲಿಕ್ಕೆ ಬರುವುದಿಲ್ಲ, ಕಾರಣ ಅವು ಅವರ ನುಡಿಯಲ್ಲಿಲ್ಲ; ಅವನ್ನು ಕಲಿಯಲು ಒತ್ತಾಯಿಸಿದರೆ ಅವರು `ಕೀಳರಿಮೆ’ಯಿಂದ ನರಳುತ್ತಾರೆ, ಆದ್ದರಿಂದ ಅವನ್ನೆಲ್ಲ ಕಿತ್ತುಹಾಕಬೇಕು ಎನ್ನುವುದು ಭಟ್ ಅವರ ವಾದ. ಆದರೆ ನಮ್ಮ ಸಾಮಾಜಿಕ ಕಳಕಳಿ ಮಹಾಪ್ರಾಣಗಳಲ್ಲೇ ಯಾಕೆ ನಿಲ್ಲಬೇಕು? ಸ ಶ ಷ ಗಳಲ್ಲಿ ಷಕಾರ ಮಾತ್ರವೇ ಯಾಕೆ ತೆಗೆದುಹಾಕಬೇಕು? ಶಕಾರವನ್ನೂ ಆಡದ ಜನ ಎಷ್ಟಿಲ್ಲ! ಎಲ್ಲಕ್ಕೂ ಮಿಗಿಲಾಗಿ ಹಕಾರ ಅಕಾರಗಳ ಅದಲು ಬದಲು ಗಮನಾರ್ಹ. ಹಲವರ ಕನ್ನಡದಲ್ಲಿ ಹಾಲು ಆಲಾಗುತ್ತದೆ, ಆಳು ಹಾಳಾಗುತ್ತದೆ. ಅಂಥವರಿಗೆ ಹಕಾರವೂ ಕೀಳರಿಮೆಗೆ ಕಾರಣವಲ್ಲವೇ? ಆದ್ದರಿಂದ ಹಕಾರವನ್ನೂ ತೆಗೆದುಹಾಕಬೇಡವೇ? ಹಕಾರವಿರುವಲ್ಲಿ ಒಂದೋ ಪಕಾರವನ್ನು (ಹಳೆಗನ್ನಡದಲ್ಲಿ ಇದ್ದಂತೆ), ಇಲ್ಲವೇ ಅಕಾರವನ್ನು (ಕೆಲವರ ನುಡಿಯಲ್ಲಿರುವಂತೆ) ಇರಿಸಿಕೊಂಡರೆ ಸಾಕು. ಇನ್ನು ಹಲವರಿಗೆ ಪದಾರಂಭದಲ್ಲಿ ಸಂಯುಕ್ತ ವ್ಯಂಜನಗಳು ಬಂದರೆ ಉಚ್ಚರಿಸುವುದಕ್ಕೆ ತೊಡಕಾಗುತ್ತದೆ: ಆದ್ದರಿಂದ ಸ್ತ್ರೀ ಇಸ್ತ್ರಿಯಾಗುತ್ತದೆ, ಸ್ಕೂಲು ಇಸ್ಕೂಲಾಗುತ್ತದೆ, ಪ್ರಸಂಗ ಪರಸಂಗವಾಗುತ್ತದೆ. `ಸಾಮಾಜಿಕ ನ್ಯಾಯ’ ಪ್ರಾಮಾಣಿಕವಾಗಬೇಕಿದ್ದರೆ ಇಂಥ ಪದಗಳನ್ನೂ ಕಿತ್ತುಹಾಕಬೇಕಾಗುತ್ತದೆ. ಇದು ಭಟ್ಟರ ವಾದದ ತಾರ್ಕಿಕ ಅಂತ್ಯ ಎನ್ನುವುದನ್ನು ತೋರಿಸಿಕೊಡಲು ಮಾತ್ರವೇ ನಾನಿದನ್ನು ಇಲ್ಲಿ ಹೇಳ್ತ ಇದ್ದೇನೆ.

ಹೀಗೆ `ಅರಿಸಿದ’ ಕನ್ನಡದಲ್ಲಿ ಬೆಳೆದ ಮಕ್ಕಳು ಮುಂದೆ ಇಂಗ್ಲಿಷ್ ಭಾಷೆಯನ್ನು ಕಲಿಯಹೊರಟಾಗ ಏನಾಗುತ್ತದೆ? ಇಂಗ್ಲಿಷ್ ನ `ಸ್ಟ್ರೆಸ್’ ಪದ್ಧತಿ, ಮಹಾಪ್ರಾಣ ಅಕ್ಷರಗಳು, `ವಿಲಕ್ಷಣ’ವೆಂದು ಅನಿಸಬಹುದಾದ ಅವೆಷ್ಟೋ ಧ್ವನಿಗಳು, ಮಾತಿಗೂ ಬರಹಕ್ಕೂ ಸಂಬಂಧವೇ ಇಲ್ಲದಂತೆ ಕಾಣಿಸುವ ಲಿಪಿವ್ಯವಸ್ಥೆ ಮುಂತಾದವು ಅವರಿಗೆ ಕೀಳರಿಮೆ ಉಂಟುಮಾಡಬಹುದೇ? ಹೀಗೆ ಅಂದುಕೊಳ್ಳುವುದೇ ತಪ್ಪು. ಇದು ಮುಖ್ಯವಾಗಿ, ದಲಿತರು, ಕೆಳವರ್ಗದವರು, ಬಡವರು ತಮಗೆ ಗೊತ್ತಿರುವುದನ್ನಲ್ಲದೆ ಉಳಿದ ಏನನ್ನೂ ಕಲಿಯಲಾರರು ಎಂಬ ಪರಂಪರಾಗತ ತಪ್ಪು ಕಲ್ಪನೆಯೊಂದನ್ನು ತೋರಿಸುತ್ತದೆ. ಮಹಾಪ್ರಾಣ, ಷ, ಋ ಮುಂತಾದ ಅಕ್ಷರಗಳನ್ನು (ಎಂದರೆ ಅವು ಸೂಚಿಸುವ ಧ್ವನಿಗಳನ್ನು) ಕನ್ನಡದ ಈ ಬಹುಜನಸಮೂಹ ಕಲಿಯಲಾರದು ಎನ್ನುವುದು ಸರಿಯಲ್ಲ; ಕಲಿಯುವ ಅಗತ್ಯವಿಲ್ಲ ಎಂದರೆ ಆ ಮಾತು ಬೇರೆ. ಚೆನ್ನಾಗಿ ಕಲಿಸುವ, ಕಲಿಯುವ ವಾತಾವರಣವಿದ್ದರೆ ಯಾರು ಏನನ್ನು ಬೇಕಾದರೂ ಕಲಿಯಬಹುದು. ಅಂಥ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಬೇಕಲ್ಲದೆ ಇದ್ದಲ್ಲೇ ಕಾಲುಚಾಚಿ ಎನ್ನುವುದಲ್ಲ. ಮುಖ್ಯ ಸಂಗತಿಯೆಂದರೆ ಈಗಾಗಲೇ ಉನ್ನತ ಭಾಷೆಯಿಂದ ಅವಕಾಶವಂಚಿತರಾಗಿರುವ ಮಂದಿ ಇನ್ನೊಮ್ಮೆ ಹಾಗೆ ಆಗಬಾರದು.

ನನಗೆ (ಹಾಗೂ ಭಟ್ ಅವರಿಗೆ) ಪರಿಚಯವಿರುವ ದಕ್ಷಿಣ ಕನ್ನಡ ಪ್ರದೇಶದಲ್ಲಿ ತುಳು, ಹವ್ಯಕ, ಕೋಟೆ, ಕೊಂಕಣಿ, ಮರಾಠಿ, ಮಲೆಯಾಳ ಮುಂತಾದ ಭಾಷೆಗಳು ಮನೆಮಾತಾಗಿರುವ ಅದೆಷ್ಟೋ ಮಂದಿ ಇದ್ದಾರೆ. ಇವರು ಯಾರೂ ಶಾಲಾಕನ್ನಡವನ್ನು ಮನೆಯಲ್ಲಿ ಆಡುವವರಲ್ಲ. ಹಾಗೂ ಮರಾಠಿ, ಕೊಂಕಣಿ ಮತ್ತು ಮಲೆಯಾಳದ ಕೆಲವು ಪ್ರಭೇದಗಳನ್ನು ಹೊರತುಪಡಿಸಿದರೆ ಇತರರ ಮನೆಮಾತಿನಲ್ಲಿ ಮಹಾಪ್ರಾಣಗಳು ಇಲ್ಲ. ಭಟ್ ಅವರ ಥಿಯರಿಯ ಪ್ರಕಾರ ಮಹಾಪ್ರಾಣಗಳಿರುವ ಪ್ರಭೇದದ ಕೆಲವು ಮರಾಠಿ, ಕೊಂಕಣಿ, ಮಲೆಯಾಳ ಭಾಷಿಕರ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಕಲಿಯುವಾಗ ಹೆಚ್ಚಿನ ಲಾಭವಿದ್ದು ಉಳಿದವರು `ಕೀಳರಿಮೆ’ಯಿಂದಾಗಿ ಕನ್ನಡ ಕಲಿಯುವುದರಲ್ಲಿ ಹಿಂದಿರಬೇಕಿತ್ತು. ಈ ಕುರಿತಾಗಿ ನಾನು ಅಧ್ಯಯನ ನಡೆಸಿಲ್ಲವಾದರೂ ನನ್ನ ಮನಸ್ಸು ಮತ್ತು ಅನುಭವ ಹೇಳುವುದು ಹೀಗೇನೂ ಇರಲಾರದು ಎಂದು. ಯಾಕೆಂದರೆ ಮನೆಮಾತಿಗೂ ಕನ್ನಡ ಕಲಿಕೆಗೂ ಹೆಚ್ಚಿನ ಸಂಬಂಧವಿಲ್ಲ. ಸಂಬಂಧವಿರುವುದು ವರ್ಗ, ಆರ್ಥಿಕತೆ, ಪ್ರೋತ್ಸಾಹ, ಕಲಿಸುವ ಪದ್ಧತಿ, ಶಾಲೆಗೆ ಹೋಗುವ ವಯಸ್ಸು, ಮನೆ ಹಾಗೂ ಪರಿಸರ ಮತ್ತಿತರ ಅಂಶಗಳ ಜತೆ. ಕರ್ನಾಟಕದ ಉಳಿದೆಡೆಗಳಲ್ಲೂ ಇದು ಹೀಗೆಯೇ ಎಂದು ನನ್ನ ಊಹೆ.

ಸಂಸ್ಕೃತದ ಪ್ರಭಾವ

ಸಂಸ್ಕೃತ ಒಂದು ಇಂಡೋ-ಯುರೋಪಿಯನ್ ಮೂಲದ ಭಾಷೆ, ಇಂಡೋ-ಆರ್ಯನ್ ವರ್ಗಕ್ಕೆ ಸೇರಿದ್ದು; ಇದರ ದಾಯಾದಿ ಭಾಷೆಯಾದ ಲ್ಯಾಟಿನ್ ನಂತೆಯೇ ಸಂಸ್ಕೃತ ಕೂಡಾ ಇಂದು ಆಡುನುಡಿಯಾಗಿ ಉಳಿದಿಲ್ಲ. ಆದರೆ ಲ್ಯಾಟಿನ್ ಹೇಗೆ ಇಟಾಲಿಯನ್, ಫ್ರೆಂಚ್, ಸ್ಪ್ಯಾನಿಶ್, ಪೋರ್ಚುಗೀಸ್ ಮುಂತಾದ ರೊಮಾನ್ಸ್ ಭಾಷೆಗಳಿಗೆ ಕಾರಣವಾಯಿತೋ ಸಂಸ್ಕೃತ ಸಹಾ ಹಿಂದಿ, ಮರಾಠಿ, ಕೊಂಕಣಿ, ಪಂಜಾಬಿ, ಬೆಂಗಾಲಿ ಮುಂತಾದ ಇಂದಿನ ಜೀವಂತ ಭಾಷೆಗಳಿಗೆ ಕಾರಣವಾಯಿತು; ನಾನಿಲ್ಲಿ ಸಂಸ್ಕೃತವನ್ನು ಪ್ರಾಕೃತ, ಪಾಲಿ ಮುಂತಾದ ಪ್ರಭೇದಗಳನ್ನು ಒಳಗೊಂಡಂತೆ ತೋರವಾಗಿ ಹೇಳುತ್ತಿರುವುದು. ಪ್ರಾಕೃತ, ಪಾಲಿ ಮುಂತಾದ ಪ್ರಭೇದಗಳು ಆಡುಮಾತಾಗಿ ಇದ್ದಿರಬಹುದು; ಆದರೆ ಸಂಸ್ಕೃತ ಎಂದಾದರೂ ಆಡುಭಾಷೆಯಾಗಿ ಇತ್ತೇ ಇರಲಿಲ್ಲವೇ ಎನ್ನುವುದು ಚರ್ಚಾಸ್ಪದ ವಿಷಯ. ಅಂತೂ ಭಾಷೆಯಂತೂ ಇತ್ತು, ಅದರ ಅಪಾರ ಸಾಹಿತ್ಯದಲ್ಲಿ ಕೆಲವೊಂದು ಭಾಗ ಇಂದಿಗೂ ಲಭ್ಯ.

ಭಾರತದ ಉಪಖಂಡದ ದ್ರಾವಿಡಭಾಷೆಗಳು ಸಂಸ್ಕೃತದ ಜತೆ (ಎಂದರೆ ಪ್ರಾಕೃತ, ಪಾಲಿ ಸೇರಿದ ವಿಸ್ತೃತ ಅರ್ಥದಲ್ಲಿ) ಯಾವಾಗ ಸಂಪರ್ಕಕ್ಕೆ ಬಂದುವೋ ತಿಳಿಯದು; ಈ ಸಂಪರ್ಕ ಆದಿದ್ರಾವಿಡದಿಂದಲೇ ಮೊದಲಾಗಿ ಆದಿದ್ರಾವಿಡವು ತಮಿಳು, ತೆಲುಗು, ಕನ್ನಡ, ಮಲಯಾಳ ಮುಂತಾಗಿ ಬೇರ್ಪಟ್ಟ ನಂತರವೂ ಹಲವು ಕಾಲ ಒಂದಲ್ಲ ಒಂದು ರೀತಿಯಲ್ಲಿ ಮುಂದುವರಿದಿರಬೇಕು. ಕನ್ನಡದ ಮಟ್ಟಿಗಂತೂ ಇತಿಹಾಸದ ಆರಂಭಕ್ಕೇ ಸಂಸ್ಕೃತ ಸಂಪರ್ಕ ಇದ್ದುದು ಕಂಡುಬರುತ್ತದೆ: ಸಂಸ್ಕೃತದ ಪ್ರಭಾವವಿಲ್ಲದ ಕನ್ನಡವನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಸಂಸ್ಕೃತದಲ್ಲಿ ಆವಾಗಲೇ ಅಕ್ಷರಸಂಸ್ಕೃತಿ ಇದ್ದುದರಿಂದ ಅದು ಸಹಜವಾಗಿ ದೇಸಿಯ ಮೇಲೆ ಪ್ರಭಾವ ಬೀರಿತು. ಕನ್ನಡದ ಲಿಪಿ ಬ್ರಾಹ್ಮಿಯಾದರೂ ವರ್ಣಮಾಲೆ ಸಂಸ್ಕೃತವನ್ನು ಅನುಸರಿಸಿ ಅಕಾರದಿಂದ ಆರಂಭವಾಗಿ ಹಳಕ್ಷಜ್ಞದಲ್ಲಿ ಅಂತ್ಯಗೊಳ್ಳುತ್ತದೆ.
ಅಕ್ಷರಸಂಸ್ಕೃತಿಯೆಂದರೆ ಶಿಕ್ಷಣಸಂಸ್ಕೃತಿ. ಸಂಸ್ಕೃತದ ಶಿಕ್ಷಣಸಂಸ್ಕೃತಿ ಕನ್ನಡ ಶಿಕ್ಷಣಕ್ಕೂ ಮಾರ್ಗದರ್ಶನ ನೀಡಿದ್ದರಲ್ಲಿ ಆಶ್ಚರ್ಯವಿಲ್ಲ. ಸಂಸ್ಕೃತದ ಸಾಂಸ್ಕೃತಿಕ ಸಂಪತ್ತು (ಸಾಹಿತ್ಯ, ಕಲೆ, ಸಂಗೀತ) ದ್ರಾವಿಡಕ್ಕಿಂತ ಮುಂದಿದ್ದುದರಿಂದ ದ್ರಾವಿಡವರ್ಗ ಸಂಸ್ಕೃತವನ್ನೊಂದು ಆದರ್ಶವಾಗಿ ಕಂಡಿರಬೇಕು. ಹೀಗೆ ಸಂಸ್ಕೃತದ್ದು ಯಾಜಮಾನ್ಯ ಸಂಸ್ಕೃತಿ ಎನಿಸಿತು. ಹೊರಗಿನವರು ನಾಡಿಗೆ ಬಂದು ಯಜಮಾನರೂ ಆದಾಗ ಅವರ ಸಂಪರ್ಕಕ್ಕೆ ಬರುವ ದೇಸೀಯರಲ್ಲಿ ಮೇಲ್ವರ್ಗದವರೇ ಹೆಚ್ಚು. ಈ ವಿದ್ಯಮಾನವನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಇಲ್ಲಿಯೂ ಇದೇ ಆಯಿತು. ಕಾರಣ, ಶಿಕ್ಷಣ ಮೇಲ್ವರ್ಗದವರ ಕೈಗೆ ಸಿಕ್ಕಿ ಕೆಳವರ್ಗದವರು ವಂಚಿತರಾದರು. ಈ ಮಹಾ ವಿಭಜನೆ (Great Divide) ಇಂದಿನ ತನಕವೂ ಮುಂದುವರಿದುಕೊಂಡು ಬಂದಿರುವುದನ್ನು ಕಾಣುತ್ತೇವೆ; ಹಾಗೂ ಇದಕ್ಕೆ ಆರ್ಯನರು ಪ್ರಚಾರಕ್ಕೆ ತಂದ ಜಾತಿಪದ್ಧತಿ, ಮುಖ್ಯವಾಗಿ ಸವರ್ಣೀಯ-ಅವರ್ಣೀಯ ಭಿನ್ನತೆ, ಒಂದು ಮಾತಿನಲ್ಲಿ ಹೇಳುವುದಾದರೆ ಅಸ್ಪೃಶ್ಯತೆ, ಪ್ರಮುಖ ಕಾರಣವೆನ್ನುವುದರಲ್ಲಿ ಸಂದೇಹವಿಲ್ಲ. ವಿದ್ಯಾಭ್ಯಾಸಕ್ಕೆ ಮತ್ತು ಸಮೂಹಕಲ್ಪನೆಗೆ ಮಾರಕವಾದ ಅಸ್ಪೃಶ್ಯತೆ, ಜಾತಿಪದ್ಧತಿ ಮುಂತಾದ ಕಂದಕಗಳನ್ನು ಅಳಿಸಿಹಾಕುವುದು ನಮ್ಮ ಕಾರ್ಯಕ್ರಮವಾಗಿರಬೇಕು. ಭಾರತದ ಸಂವಿಧಾನ ಇದನ್ನು ಸ್ವೀಕರಿಸಿದೆಯಾದರೂ ಜನರ ಮನೋಧರ್ಮದಲ್ಲಿ ಮೂಲಭೂತ ಪರಿವರ್ತನೆ ಆಗಿಲ್ಲ ಎನ್ನುವುದು ಸತ್ಯ.

ಈ ಹಿನ್ನೆಲೆಯಲ್ಲಿ ಆರ್ಯನರ ಭಾಷೆಯಾದ ಸಂಸ್ಕೃತದ ವಿರುದ್ಧ ಬಹುಜನರಿಗೆ ದ್ವೇಷವಿದ್ದರೆ ಆಶ್ಚರ್ಯವಿಲ್ಲ. ಆದರೆ ಭಾಷೆಯನ್ನು ಅದರ ಬಳಕೆಯವರು ಮಾಡಿದ ತಪ್ಪಿನಿಂದ ಪ್ರತ್ಯೇಕಿಸುವುದು ಅಗತ್ಯ. ಇತಿಹಾಸವನ್ನು ನೋಡಿದರೆ ಗೊತ್ತಾಗುತ್ತದೆ, ತಮ್ಮ ಮೇಲೆ ಧಾಳಿ ಮಾಡಿದವರ ಭಾಷೆಗಳಿಂದಲೇ ಆಂಗ್ಲೋ-ಸ್ಯಾಕ್ಸನರು ತಮಗೆ ಬೇಕಾದ್ದನ್ನು ತೆಗೆದುಕೊಂಡರು. ನಾರ್ವೆ ನಾಲ್ಕು ಶತಮಾನಗಳ ಕಾಲ ಡೆನ್ಮಾರ್ಕಿನ ವಶ ಇದ್ದಿತು; ಅನೇಕ ಡೇನಿಶ್ ಪದಗಳು ನಾರ್ವೇಜಿಯನ್ ಭಾಷೆಯನ್ನು ಪ್ರವೇಶಿಸಿದವು. ನಾರ್ವೆ ಸ್ವತಂತ್ರವಾದ ಮೇಲೆ ಈ ಡೇನಿಶ್ ಪದಗಳನ್ನೆಲ್ಲ ಕಿತ್ತುಹಾಕಬೇಕೆಂಬ ಚಳುವಳಿಯೊಂದು ಸುರುವಾಯಿತು. ಈ ಚಳುವಳಿಗೆ ನಾರ್ವೇಜಿಯನ್ ರಾಷ್ಟ್ರೀಯತೆಯ ಉಪ್ಪುಖಾರ ಇದ್ದೂ ಜನ ಬೆಂಬಲ ಸಿಗಲಿಲ್ಲ. ಪ್ರಸಿದ್ಧ ನಾರ್ವೇಜಿಯನ್ ನಾಟಕಕಾರ ಹೆನ್ರಿಕ್ ಇಬ್ಸೆನ್ ಖುದ್ದಾಗಿ ಇದನ್ನು ವಿರೋಧಿಸಿದ. ಹಲವು ಶತಮಾನಗಳ ಕಾಲ ಜಪಾನ್ ಮತ್ತು ಚೀನಾ ದೇಶಗಳು ವೈರಿಗಳಾಗಿದ್ದುವು; ಜಪಾನ್ ದೇಶವನ್ನು ಚೀನೀ ಅರಸರು ಆಳಿದ ಪರಿಣಾಮವಾಗಿ ಅಲ್ಲಿ ಚೀನೀ ಭಾಷೆ ಒಂದು ಫ್ಯಾಶನ್ ಆಯಿತು. ಜಪಾನೀ ಬರಹದಲ್ಲಿ ನೂರಾರು ಚೀನೀ ಲಿಪಿಗಳು ಸೇರಿಕೊಂಡುವು; ಇವಕ್ಕೆ ಕಾಂಜಿ ಎಂದು ಕರೆಯುತ್ತಾರೆ. ಜಪಾನು ಚೀನೀ ಹಿಡಿತದಿಂದ ಮುಕ್ತವಾದ ಮೇಲೆ ಜಪಾನಿಯರೇನೂ ಈ ಚೀನೀ ಮೂಲದ ಲಿಪಿಗಳನ್ನು ತೆಗೆದುಹಾಕಲಿಲ್ಲ. ಆಡುವವರ ಪಾಪವನ್ನು ನುಡಿಯ ತಲೆಗೆ ಕಟ್ಟುವುದು ಸರಿಯಲ್ಲ. ರಾಜಕೀಯದಲ್ಲಿ, ಹಣಕಾಸಿನಲ್ಲಿ, ಅಂತಾರಾಷ್ಟ್ರೀಯ ಸಂಬಂಧದಲ್ಲಿ, ಸಾಹಿತ್ಯ ಕಲೆಗಳಲ್ಲಿ, ವೈಯಕ್ತಿಕ ಬದುಕಿನಲ್ಲಿ ಸಹಾ ನಮಗೆ ಯಾವುದು ಒಳ್ಳೆಯದೋ ಅದನ್ನು ಎಂಥವರಿಂದಲೂ ಸ್ವೀಕರಿಸುತ್ತೇವೆ. ಭಾಷೆಯಲ್ಲಿ ಯಾಕಿಲ್ಲ?

ಒಂದೊಂದು ಭಾಷೆಯೂ ಅನ್ಯಭಾಷೆಗಳಿಂದ ಪದಗಳನ್ನು ಎರವಲು ಪಡೆದುಕೊಂಡಾಗ ಕೆಲವೊಮ್ಮೆ ಇದ್ದಂತೆಯೇ ತೆಗೆದುಕೊಳ್ಳುತ್ತದೆ: ಇದು ತತ್ಸಮ. ಕೆಲವೊಮ್ಮೆ ಅಲ್ಪಸ್ವಲ್ಪದಿಂದ ಹಿಡಿದು ಪೂರ್ತಾ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಇಂಗ್ಲಿಷ್ ತನಗೆ ಬೇಕಾದ ಪದಗಳನ್ನು ಇತರ ಭಾಷೆಗಳಿಂದ ಪಡೆದಾಗಲೂ ಹೀಗೆ ಆಯಿತು. ಗ್ರೀಕ್ ಮೂಲದ psycho ಪದ `ಪ್ಸೈಕೋ’ ಆಗಿ ಉಳಿಯದೆ `ಸೈಕೋ’ ಆಗುತ್ತದೆ. ಆದರೆ ಸ್ಪೆಲ್ಲಿಂಗ್ ನಲ್ಲಿ ಅದು ಪಕಾರವನ್ನು ಇರಿಸಿಕೊಂಡಿತು ಎಂಬುದು ಕೂಡಾ ಒಂದು ಸತ್ಯ. ಇನ್ನು ಕೆಲವೆಡೆ ಸ್ಪೆಲ್ಲಿಂಗ್ ನಲ್ಲಿ ಸಹಾ ತನಗೆ ಬೇಕಾದ ಬದಲಾವಣೆಗಳನ್ನು ಇಂಗ್ಲಿಷ್ ಮಾಡಿಕೊಂಡಿದೆ. ಗುಲಾಬಿ ಹೂ rose ಲ್ಯಾಟಿನ್ನ rosa. ಇಂಗ್ಲಿಷ್ ನಲ್ಲಿ ನಾವು ನೋಡುವ Exit (ಹೊರಕ್ಕೆ) ಎನ್ನುವುದು ನಿಜಕ್ಕೂ ಲ್ಯಾಟಿನ್ ನಲ್ಲಿ ಒಂದು ಇಡೀ ವಾಕ್ಯ: `ಅವನು (ಅವಳು/ಅದು) ಹೊರಕ್ಕೆ ಹೋಗುತ್ತಾನೆ’ ಎಂದು ಅರ್ಥ.

ಇಂಗ್ಲಿಷ್ ಹೊರ ಪ್ರಭಾವಗಳಿಗೆ ಒಳಗಾಗುತ್ತಲೇ ಆ ಕಾರಣಗಳಿಂದಾಗಿ ತನ್ನ ಆಂತರಿಕ ರಚನೆಯಲ್ಲೂ ಬದಲಾಗುತ್ತ ಬಂದಿದೆ; ಎಂದರೆ ತಾನು ಪಳಗಿಸಿದ್ದಲ್ಲದೆ, ತಾನೂ ಪಳಗಿದೆ. ಅದರ ಕೆಲವು ಧ್ವನಿಗಳು, ಅಕ್ಷರಗಳು ಫ್ರೆಂಚ್ ನಿಂದ ಬಂದುವು. ವ್ಯಾಕರಣ ಸಂಬಂಧಿಯಾದ ಕೆಲವು ಪದಘಟಕಗಳು (prepositions, articles, pronouns) ಡೇನಿಶ್ ನಿಂದ ಬಂದುವು. ಗ್ರೀಕ್ ಮತ್ತು ಲ್ಯಾಟಿನ್ ನಿಂದ ಪದಗಳನ್ನು ಪಡೆದಾಗ ಅದು ಧ್ವನಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದು ನಿಜ; ಆದರೆ ಸ್ಟ್ರೆಸ್ ನಲ್ಲಿ ಹಾಗೆ ಮಾಡಲಿಲ್ಲ. ಇಂಗ್ಲಿಷ್ ನ ಮೂಲ ಜರ್ಮಾನಿಕ್ ಭಾಷಾಪರಿವಾರದಲ್ಲಿ ಸ್ಟ್ರೆಸ್ ಪದದ ಎರಡನೇ ಸ್ವರ್ಜ್ಯದ ಮೇಲೆ ಬರುವುದು; ಗ್ರೀಕ್ ಮತ್ತು ಲ್ಯಾಟಿನ್ ನಲ್ಲಿ ಅಂಥ ನಿಯತಿಯಿಲ್ಲ; ಆದ್ದರಿಂದ ಇಂದು ಇಂಗ್ಲಿಷ್ ನ ಸ್ಟ್ರೆಸ್ ಪದ್ಧತಿ ಕಲಿಯಲು ಸಾಕಷ್ಟು ಶ್ರಮಿಸಬೇಕು. ಇಂಗ್ಲಿಷ್ ನ ಸ್ಪೆಲ್ಲಿಂಗ್ ಹದಿನೇಳನೇ ಶತಮಾನಕ್ಕೆ ಸ್ಥಿರಗೊಳ್ಳತೊಡಗಿತು, ಆದರೆ ಧ್ವನಿಗಳು ವ್ಯತ್ಯಾಸವಾಗುತ್ತ ಬಂದುವು. ಆದ್ದರಿಂದಲೇ ಇಂದು ಇಂಗ್ಲಿಷ್ ನ ಧ್ವನಿ ಮತ್ತು ಅಕ್ಷರಗಳಿಗೆ ತಾಳಮೇಳ ಇಲ್ಲದಂತೆ ಅನಿಸುವುದು. ಇದನ್ನೆಲ್ಲ ಬದಲಿಸಿ ಇಂಗ್ಲಿಷ್ನ್ನ ಒಂದು ಫೊನೆಟಿಕ್ ಭಾಷೆಯಾಗಿ (ಬರೆದಂತೆ ಓದುವುದು, ಓದುವಂತೆ ಬರೆಯುವುದು) ಮಾಡಬೇಕೆಂಬ ಕೆಲವರ ಯತ್ನ ಸಫಲವಾಗಲಿಲ್ಲ. ಜರ್ಮಾನಿಕ್ ಮೂಲದಲ್ಲಿ ಅದು ಹಾಗಿತ್ತು! ವಾಸ್ತವದಲ್ಲಿ ಇಂಗ್ಲಿಷ್ ಅಕ್ಷರಪದ್ಧತಿಯ ಅಂತರ್ಯವನ್ನು ಕಲಿತುಕೊಂಡರೆ ಸ್ಪೆಲ್ಲಿಂಗ್ ಅಷ್ಟೇನೂ ಕಷ್ಟವಲ್ಲ. ಅದೇ ರೀತಿ ಸ್ಟ್ರೆಸ್ ಕೂಡಾ. ಆದರೆ ಕಲಿಯುವ ಮೊದಲೇ ಕಷ್ಟವೆಂದರೆ ನಿಜಕ್ಕೂ ಕಷ್ಟವಾಗುತ್ತದೆ!

ಇನ್ನು ಸಂಸ್ಕೃತದ ಪದಗಳನ್ನು ಕನ್ನಡ ಹಾಗೇ ಇಟ್ಟುಕೊಂಡಿದೆ ಎನ್ನುವಂತಿಲ್ಲ. ಸಂಸ್ಕೃತದ ಹಲವು ಪದಗಳು ಧ್ವನಿ (ಕೆಲವೊಮ್ಮೆ ಅರ್ಥ ಸಹಿತ) ವ್ಯತ್ಯಾಸಗೊಂಡು ಕನ್ನಡದಲ್ಲಿ ಸೇರಿವೆ; ಇವು ತದ್ಭವಗಳು. ಇವುಗಳಲ್ಲಿ ಕೆಲವೊಂದು ಕನ್ನಡದಲ್ಲಿ ಎಷ್ಟು ಬೆರೆತುಹೋಗಿವೆ ಎಂದರೆ ಮೂಲತಃ ಇವು ಕನ್ನಡದ್ದಲ್ಲ ಎನ್ನುವುದು ಕೂಡಾ ನಮಗೆ ಗೊತ್ತಿಲ್ಲ. ಉದಾಹರಣೆಗೆ ಅರಸ ಎನ್ನುವ ಪದ ರಾಜ ಎಂಬ ಸಂಸ್ಕೃತದಿಂದ ಆದಿದ್ರಾವಿಡ ಕಾಲದಲ್ಲೇ ರೂಪಾಂತರಕ್ಕೆ ಒಳಗಾಗಿ ಕನ್ನಡಕ್ಕೆ ಬಂದದ್ದು. ಸಕ್ಕರೆ (ಶರ್ಕರಾ), ಐಸಿರಿ (ಐಶ್ವರ್ಯ), ಸಂಜೆ (ಸಂಧ್ಯಾ) ಎಂದು ಮುಂತಾಗಿ ಅಚ್ಚಗನ್ನಡವೆನಿಸುವ ತದ್ಭವಗಳ ಸಂಖ್ಯೆ ಅಪಾರ. ಆದರೆ ಭಟ್ ಹೇಳುವಂತೆ ಕೆಲವೊಮ್ಮೆ ತದ್ಭವ ಮತ್ತು ತತ್ಸಮ ಎರಡೂ ಇದ್ದಾಗ ಅವುಗಳಲ್ಲಿ ಮೌಲ್ಯವ್ಯತ್ಯಾಸ ಬರಬಹುದು. ರಾಕ್ಷಸ (ಸಂಸ್ಕೃತ) ಶಬ್ದಕ್ಕೆ ರಕ್ಕಸ ಎಂಬ ತದ್ಭವ ಇದ್ದೂ ಉನ್ನತವರ್ಗದವರು ರಾಕ್ಷಸ ಎಂದೇ ಉಪಯೋಗಿಸುತ್ತಾರೆ, ಆದ್ದರಿಂದ ರಕ್ಕಸ ಎಂಬ ಪದವನ್ನು ಎರಡನೇ ದರ್ಜೆಯದಾಗಿ ಮಾಡಿಬಿಟ್ಟಿದ್ದಾರೆ ಎನ್ನುತ್ತಾರೆ ಅವರು. ಮೌಲ್ಯದಲ್ಲಿ ಇಂಥ ವ್ಯತ್ಯಾಸವಿದೆ ಎನ್ನುವುದಾದರೆ, ರಾಕ್ಷಸ ಎಂಬ ಪದವನ್ನೇ ಎಲ್ಲರೂ ಉಪಯೋಗಿಸಬಹುದು. ಆದರೆ ಅದರಲ್ಲಿ ಷಕಾರವಿರುವುದರಿಂದ ಅದನ್ನು ನುಡಿಯಲು ಬರದೆ `ಕೀಳರಿಮೆ’ಗೆ ಕಾರಣವಾಗುತ್ತದೆ ಎನ್ನುವುದು ಭಟ್ ಅವರ ವಾದ. ಇದಕ್ಕೆ ಅವರು ಸೂಚಿಸುವ ಪರಿಹಾರ ಕನ್ನಡದಿಂದ ರಾಕ್ಷಸ ಎಂಬ ಪದವನ್ನೇ ತೊಡೆದುಹಾಕುವುದು. ಒಂದು ಒತ್ತಾಯವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದನ್ನು ಇರಿಸುವುದೇ? ಎರಡೂ ಪದಗಳು ಇದ್ದರೆ ಬೇಕಾದವರು ಬೇಕಾದ್ದನ್ನು ಅಗತ್ಯಕ್ಕೆ ಅನುಸಾರ ಆಯ್ದುಕೊಳ್ಳುತ್ತಾರೆ ಎನ್ನುವುದು ನನ್ನ ಸಲಹೆ. ಮಾತ್ರವಲ್ಲ, ಪುಸ್ತಕ ಎಂಬ ಪದಕ್ಕೆ ಹೊತ್ತಗೆ ಎನ್ನುವ ತದ್ಭವ ಇರುವುದೇನೋ ನಿಜ; ಆದರೆ ಇಂದು ಹೊತ್ತಗೆ ಎಂಬ ಪದ ಬಳಸಿದರೆ ಅದು ಗ್ರಾಂಥಿಕವಾಗಿ ಅನಿಸುತ್ತದೆ. ಪುಸ್ತಕ ಎಂಬ ಪದವೇ ಬಳಕೆಯಲ್ಲಿದೆ; ಆದ್ದರಿಂದ ಅದರ ಮೂಲ ಏನೇ ಇರಲಿ, ಅದನ್ನು ಕನ್ನಡವೆಂದೇ ಕಾಣಬೇಕು. ಆದರೆ ಎಲ್ಲಾ ಕಡೆ ಹೀಗೆ ಆಗಿಲ್ಲ: ಹಕ್ಕಿ-ಪಕ್ಷಿ, ಚಿನ್ನ-ಸ್ವರ್ಣ, ಕಂಭ-ಸ್ತಂಭ ಎಂದು ಮುಂತಾದಲ್ಲಿ ಎರಡೂ ಪದಗಳು ಬಳಕೆಯಲ್ಲಿವೆ; ಅವುಗಳಲ್ಲಿ ಸಂದರ್ಭವ್ಯತ್ಯಾಸ ಇಲ್ಲವೆಂದಿಲ್ಲ.

ಇನ್ನು ತತ್ಸಮ ಪದಗಳಿಗೆ ಬಂದರೆ ಭಟ್ ಅವರು ಹೇಳುವಂತೆ ಮೌಲ್ಯದ ಕುರಿತಾದ ಕೆಲವು ಸಮಸ್ಯೆಗಳನ್ನು ಕಾಣಬಹುದು. `ಪ್ರಜಾವಾಣಿ’ ಪತ್ರಿಕೆ ನಾಯಿ ಎಂಬ ಸಾಮಾನ್ಯ ಪದವನ್ನು ಬಿಟ್ಟು ಶ್ವಾನ ಎಂಬ ಸಂಸ್ಕೃತ ಪದವನ್ನು ಬಳಸುತ್ತದೆ ಎಂದು ಭಟ್ ಹೇಳುತ್ತಾರೆ. ಸಂದರ್ಭ ಇದರ ಬಳಕೆಯನ್ನು ಬೆಂಬಲಿಸದೆ ಇದ್ದರೆ ಇದೊಂದು ಆಭಾಸ. ಆದರೆ ಕೆಲವು ಸಲ ಪತ್ರಿಕಾಕರ್ಕರು ಶೈಲಿಯ ಪರಿಣಾಮಕ್ಕಾಗಿ ಸಾಧಾರಣ ಸಂದರ್ಭದಲ್ಲಿ ಬಳಸದ ಪದವನ್ನು ಉಪಯೋಗಿಸುತ್ತಾರೆ: ಶ್ವಾನಕಡಿತ, ಶ್ವಾನಹತ್ಯೆ ಇತ್ಯಾದಿ. ಇದರ ಅರ್ಥ ಈ ಪತ್ರಿಕಾಕರ್ತರು ನಾಯಿ ಎಂಬ ಕನ್ನಡ ಪದವನ್ನು ತುಚ್ಛವಾಗಿ ಕಾಣುತ್ತಾರೆ ಎಂದಲ್ಲ. ಅದೇ ರೀತಿ, ದಂತಚಿಕಿತ್ಸೆ, ದಂತಕಳ್ಳ, ಕಳ್ಳದಂತ ಸಾಗಾಣಿಕೆ ಮುಂತಾದ ಪದಗಳೂ ಬಳಕೆಯಲ್ಲಿವೆ. ಇಂಗ್ಲಿಷ್ ನಲ್ಲಿ ಕೂಡಾ ಡಾಗ್ ಎಂಬ ದೇಸೀ ಪದದ ಜತೆ ಕ್ಯಾನೈನ್ ಎಂಬ ಲ್ಯಾಟಿನ್ ಮೂಲದ ಪದವೂ ಇದೆ. ಕೆಲವು ಸಂದರ್ಭಗಳಲ್ಲಿ ಅಲ್ಲೂ ಲ್ಯಾಟಿನ್ ಮೂಲದ ಪದ ಬಳಕೆಯಾಗಬಹುದು: `ಕ್ಯಾನೈನ್ ನ್ಯೂಸೆನ್ಸ್’, `ಕ್ಯಾನೈನ್ ಬೈಟ್’ ಎಂಬ ಪತ್ರಿಕಾ ಶೀರ್ಷಿಕೆಗಳನ್ನು ನಾನು ಊಹಿಸಿಕೊಳ್ಳಬಲ್ಲೆ. ಇವು ಓದುಗರನ್ನು ಆಕರ್ಷಿಸುತ್ತವೆ. ಕೆಲವೊಮ್ಮೆ ಉದ್ದೇಶ ತಿಳಿಹಾಸ್ಯವಾಗಿರುತ್ತದೆ; ಹಾಗಿದ್ದಾಗ ಗೇಲಿಗೊಳಗಾಗುವುದು ಸಂಸ್ಕೃತವೇ! ಇನ್ನು ಇಂಗ್ಲಿಷ್ ನಲ್ಲಿ ಸಹಾ ದಂತವೈದ್ಯರಿಗೆ ಟೂಥ್ ಡಾಕ್ಟರ್ ಅನ್ನುವುದಿಲ್ಲ: ಡೆಂಟಿಸ್ಟ್ ಅನ್ನುತ್ತಾರೆ. `ಪ್ರಜಾವಾಣಿ’ಯ ಪತ್ರಕರ್ತರು ಕೂಡಾ ಕನ್ನಡಿಗರೇ; ತಮಗೆ ಲಭ್ಯವಿರುವ ಪರ್ಯಾಯಪದಗಳನ್ನು ಸಂದರ್ಭವರಿತು ಹೇಗೆ ಬಳಸಬೇಕು ಎನ್ನುವುದು ಅವರಿಗೆ ಗೊತ್ತಿರುತ್ತದೆ ಎಂದುಕೊಳ್ಳುತ್ತೇನೆ. ನಾಯಿಗೊಂದು ಸಂದರ್ಭವಿರುವಂತೆ ಶ್ವಾನಕ್ಕೂ ಇರುತ್ತದೆ! ಅದೇ ರೀತಿ ಹಲ್ಲಿಗೂ, ದಂತಕ್ಕೂ. ಇದು ವಿವರಣೆ (description), ನಿದರ್ಶನವಲ್ಲ (prescription). ಯಾಕೆಂದರೆ ಸಮೂಹದ ಕುರಿತಾದ  ಕಲ್ಪನೆ ಎಲ್ಲರನ್ನೂ ಒಳಗೊಳ್ಳಬೇಕು, `ಪ್ರಜಾವಾಣಿ’ಯ ಪತ್ರಿಕಾಕರ್ತರೂ ಸೇರಿದಂತೆ.

ತತ್ಸಮ ಪದಗಳು ಕನ್ನಡಮೂಲದ ಪದಗಳನ್ನೆಲ್ಲ ಬಳಕೆಯಿಂದ ಹೊರಗೆಸೆದೂ ಇಲ್ಲ: `ಕನ್ನಡಿ’ಗೆ `ದರ್ಪಣ’ವೆಂದು ಸಾಮಾನ್ಯ ಬಳಕೆಯಲ್ಲಿ ಅನ್ನುವುದಿಲ್ಲ; ಅದೇ ರೀತಿ, ತಲೆ-ಶಿರ, ಕೈ-ಹಸ್ತ, ಹೊಟ್ಟೆ-ಉದರ (ಇಂಥ ದೇಹಾಂಗ ವಿಷಯದಲ್ಲಿ), ಹೆಸರು-ನಾಮ, ತಾಯಿ/ಅಮ್ಮ-ಮಾತೆ, ತಂದೆ/ಅಪ್ಪ-ಪಿತ, ಮಗ-ಪುತ್ರ, ಮಗಳು-ಪುತ್ರಿ, ಹೂವು-ಪುಷ್ಪ, ಹಣ್ಣು-ಫಲ, ಕಿಟಿಕಿ-ಗವಾಕ್ಷಿ, ಕೊಡೆ-ಛತ್ರಿ, ಹೊಗೆ-ಧೂಮ, ಮೋಡ-ಮೇಘ, ನೆರಳು-ಛಾಯೆ, ಕಲ್ಲು-ಶಿಲೆ, ಮೆಟ್ಟಲು-ಸೋಪಾನ, ಉಪ್ಪು-ಲವಣ, ಹಾಲು-ಕ್ಷೀರ, ಮೊಸರು-ದಧಿ ಮುಂತಾದ ಕಡೆ ಕನ್ನಡಮೂಲದ ಪದಗಳು ಕೆಳದರ್ಜೆಯನ್ನೇನೂ ಪಡೆದಿಲ್ಲ, ಬಳಕೆಯಿಂದಲೂ ಹೋಗಿಲ್ಲ.

ತತ್ಸಮಗಳನ್ನು ಕನ್ನಡ ಸ್ವೀಕರಿಸಿದ ಬಗೆ

ತತ್ಸಮ ಪದಗಳನ್ನೂ ಕನ್ನಡ ಇದ್ದಹಾಗೇ ಸ್ವೀಕರಿಸಿಕೊಳ್ಳಲಿಲ್ಲ. ಕನ್ನಡ ಇವುಗಳಲ್ಲಿ ಮಾಡಿಕೊಂಡ ಬದಲಾವಣೆ ಸೂಕ್ಷ್ಮವಾದುವು, ಕಣ್ಣಿಗೆ ಹೊಡೆದು ಕಾಣಿಸುವಂಥವಲ್ಲ. ಇವುಗಳಲ್ಲಿ ಕೆಲವು ಇಲ್ಲಿವೆ:

1. ಈ ಪದಗಳಿಗೆ ಕನ್ನಡ ತನ್ನದೇ ಆದ -ಇಸು ಪ್ರತ್ಯಯವನ್ನು ಹಚ್ಚಿ ತನ್ನದನ್ನಾಗಿ ಮಾಡಿಕೊಂಡಿತು. ಉದಾಹರಣೆಗೆ: ಪೂಜಿಸು, ನಮಿಸು, ವಂದಿಸು, ಆರಾಧಿಸು, ಪ್ರೀತಿಸು ಇತ್ಯಾದಿ. ಇದೇ ಕ್ರಿಯಾ ಪ್ರತ್ಯಯವನ್ನು ಅದು ಇಂಗ್ಲಿಷ್ ಹೊರತಾದ ಇತರ ಮೂಲದ ಪದಗಳಿಗೂ ಹಚ್ಚುತ್ತದೆ: ಖರೀದಿಸು, ದಾಖಲಿಸು (ಅರಬಿ). ಇತರ ಮೂಲದ ಪದಗಳನ್ನು ಬೇಕಾದಂತೆ ಬಗ್ಗಿಸಿಕೊಳ್ಳುವ ಕನ್ನಡ ಸಂಸ್ಕೃತದ ಪದಗಳ ಮಹಾಪ್ರಾಣಗಳನ್ನು ಯಾಕೆ ಕೈಬಿಡಬಾರದು ಎಂದು ಜೋರು ಮಾಡುವವರು ಇದನ್ನು ಗಮನಿಸಬೇಕು: -ಇಸು ಪ್ರತ್ಯಯವನ್ನು ಇಂಗ್ಲಿಷ್ ಪದಗಳಿಗೆ ಯಾಕೆ ಹಚ್ಚುವುದಿಲ್ಲ? ಯಾಕೆ `ಪಾಸ್ ಮಾಡು’, ಯಾಕೆ `ಪಾಸಿಸು’ ಇಲ್ಲ? ಪಾಸಿಸುವೇ ಹೆಚ್ಚು ಸರಳವಲ್ಲವೇ? ಯಾಕೆ ಪಾಸಿಸುವನ್ನು ಬಳಸಬಾರದು? `ವಾಸಿಸು’ ಇದೆಯಲ್ಲ. ಇಷ್ಟೆ: ಪಾಸಿಸು ತಮಾಷೆಯಾಗಿ ತೋರುತ್ತದೆ, ಜನರಿಗೆ ಅದು ಬೇಡ. ಅದೇನಿದ್ದರೂ -ಇಸು ಪ್ರತ್ಯಯ ಹಚ್ಚುವುದರ ಮೂಲಕ ಸಂಸ್ಕೃತಮೂಲದ ಪದಗಳನ್ನು ಕನ್ನಡ ತನ್ನವನ್ನಾಗಿ ಮಾಡಿಕೊಂಡಿದೆ. (-ಇಸು ಪ್ರತ್ಯಯವನ್ನು ಇಂಗ್ಲಿಷ್ ಪದಗಳಿಗೆ ಹಚ್ಚುವ ಹಾಗಿಲ್ಲ: `ಅರೆಸ್ಟಿಸು’ ಎಂದರೆ ಆಭಾಸ, `ಅರೆಸ್ಟ್ ಮಾಡು’ ಸ್ವೀಕೃತ’. ಅದೇ ರೀತಿ `ತನಿಖೆ’ ಇಂಗ್ಲಿಷ್ ಆಗಲಿ ಅಲ್ಲದಿದ್ದರೂ `ತನಿಖಿಸು’ ಸರಿಯಲ್ಲ; `ತನಿಖೆ ಮಾಡು’ ಸರಿ. ಎಂದರೆ -ಇಸು ಸೇರಿಸುವುದು ಸಿಂಥೆಟಿಕ್ ವಿಧಾನ; ಮಾಡು ಸೇರಿಸುವುದು ಅನಲಿಟಿಕ್. ಈ ವ್ಯತ್ಯಾಸ ಯಾಕೆ ಎಂದು ಇಲ್ಲಿ ವಿವರಿಸಲಾರೆ.)

2. ಹಲವು ತತ್ಸಮಪದಗಳ ಅಂತ್ಯಕ್ಕೆ ಎಕಾರವನ್ನು ಹಚ್ಚಿ ಕನ್ನಡ ಅವನ್ನು ತನ್ನದನ್ನಾಗಿ ಮಾಡಿಕೊಂಡಿದೆ. ಉದಾಹರಣೆಗೆ: ಆರಾಧನೆ, ವಂದನೆ, ಪ್ರಾರ್ಥನೆ, ಕವಿತೆ, ಪತ್ರಿಕೆ, ಸ್ವಂತಿಕೆ ಮುಂತಾಗಿ. ಕೆಲವೊಮ್ಮೆ ಇಂಗ್ಲಿಷ್ ಇದ್ದಹಾಗೇ ಸ್ವೀಕರಿಸಿದಲ್ಲಿ ಕನ್ನಡ ಈ ತರ ಎಕಾರ ಹಚ್ಚಿದ್ದು ಕಾಣಿಸುತ್ತದೆ: matrix ಇಂಗ್ಲಿಷ್ ಗೆ ಲ್ಯಾಟಿನ್ ನಿಂದ ಬಂತು; ಸಂಸ್ಕೃತದ ಮಾತೃಕಾ ಮತ್ತು ಈ ಲ್ಯಾಟಿನ್ ಪದ ಇಂಡೋ-ಯುರೋಪಿಯನ್ ಮೂಲದವು. ಸಂಸ್ಕೃತದ ಮಾತೃಕಾ ಕನ್ನಡದಲ್ಲಿ ಮಾತೃಕೆ ಆಯಿತು.

3. ಸಂಸ್ಕೃತ ಪದ -ವಾನ್ ಎಂದು ಅಂತ್ಯವಾದಲ್ಲಿ ಅದನ್ನು ಕನ್ನಡ -ವಂತ ಮಾಡಿಕೊಂಡಿತು: ಬುದ್ಧಿವಂತ, ಶ್ರೀಮಂತ, ಧನವಂತ, ಗುಣವಂತ, ಭಾಗ್ಯವಂತ ಇತ್ಯಾದಿ. ಈ ಮಾದರಿಯಲ್ಲಿ ಸಂಸ್ಕೃತವಲ್ಲದ ಮಡಿವಂತ, ಹಣವಂತ ಮುಂತಾದ ರಚನೆಗಳು ಹುಟ್ಟಿಕೊಂಡುವು. ಇವುಗಳಲ್ಲಿ ಕೆಲವಕ್ಕೆ ಈ ಮೇಲೆ ಹೇಳಿದ ಎಕಾರವನ್ನೂ ಹಚ್ಚಿಕೊಂಡಿತು: ಬುದ್ಧಿವಂತಿಕೆ, ಶ್ರೀಮಂತಿಕೆ ಇತ್ಯಾದಿ.

4. ತತ್ಸಮ ಪದಗಳಿಗೆ ತನ್ನದೇ ಆದ ಲಿಂಗವಾಚಕ, ಸಂಖ್ಯಾವಾಚಕ ಪ್ರತ್ಯಯಗಳನ್ನು ಹಚ್ಚಿಕೊಂಡಿತು: ಲೇಖಕ-ಲೇಖಕಿ, ಅಧ್ಯಾಪಕ-ಅಧ್ಯಾಪಕಿ, ಲೇಖಕರು, ಲೇಖಕಿಯರು ಇತ್ಯಾದಿ; ಯಜಮಾನ-ಯಜಮಾನ್ತಿ, ಗುಣವಂತ-ಗುಣವಂತೆ, ಯಜಮಾನರು, ಯಜಮಾನ್ತಿಯರು, ಗುಣವಂತರು, ಗುಣವಂತೆಯರು ಇತ್ಯಾದಿ; ನದಿ-ನದಿಗಳು, ನಕ್ಷತ್ರ-ನಕ್ಷತ್ರಗಳು ಇತ್ಯಾದಿ.

5. ಇವೆಲ್ಲಕ್ಕೂ ತನ್ನದೇ ವಿಭಕ್ತಿಪ್ರತ್ಯಯಗಳನ್ನು ಬಳಸಿತು: ನದಿ, ನದಿಯನ್ನು, ನದಿಯ, ನದಿಯಿಂದ, ನದಿಯಲ್ಲಿ ಇತ್ಯಾದಿ.

6. ಸಂಸ್ಕೃತ ಪದ ವಿಸರ್ಗದಲ್ಲಿ ಕೊನೆಯಾದಾಗ ಕನ್ನಡ ವಿಸರ್ಗವನ್ನು ಕೈಬಿಟ್ಟಿತು: ಶಾಂತಿಃ-ಶಾಂತಿ, ಭಕ್ತಿಃ-ಭಕ್ತಿ.

7. ಸಂಸ್ಕೃತ ಪದ `ಆ’ಕಾರದಲ್ಲಿ ಕೊನೆಯಾದಾಗ ಕನ್ನಡ ಅದನ್ನು ಎಕಾರ ಮಾಡಿತು: ಶ್ರದ್ಧಾ-ಶ್ರದ್ಧೆ, ಸುಧಾ-ಸುಧೆ, ಗಂಗಾ-ಗಂಗೆ.

8. ಹಲಂತದಲ್ಲಿ ಕೊನೆಯಾಗುವ ಬೃಹತ್, ಸಂಪತ್, ವಿದ್ವತ್, ಯಶಸ್, ಮನಸ್ ಮುಂತಾದ ಪದಗಳಿಗೆ ಉಕಾರ ಸೇರಿಸಿ ಬೃಹತ್ತು, ಸಂಪತ್ತು, ವಿದ್ವತ್ತು, ಯಶಸ್ಸು, ಮನಸ್ಸು ಮುಂತಾಗಿ ಮಾಡಿತು.

9. ನಶ್ವರ, ಆದ್ಯ, ಕಲಾತ್ಮಕ, ಭಿನ್ನ ಮುಂತಾದ ವಿಶೇಷಣ ಪದಗಳಿಗೆ -ತೆ ಹಚ್ಚಿ ನಶ್ವರತೆ, ಆದ್ಯತೆ, ಕಲಾತ್ಮಕತೆ, ಭಿನ್ನತೆ ಮುಂತಾದ ಪದೋತ್ಪತ್ತಿ ಮಾಡಿಕೊಂಡಿತು.

10. ಅಗತ್ಯವಾದಾಗ ಅರಿಸಮಾಸ ಮಾಡಿಕೊಂಡಿತು: ಮುನ್ಸೂಚನೆ, ಮುಂಭಾಗ, ಹಿಂಭಾಗ, ಹಿಂಬಾಲಕ, ಬೆಂಬಲ, ಹೊರಾಂಗಣ, ಒಳಾಂಗಣ, ಕೈಭಾಷೆ, ಕೈಂಕರ್ಯ, ಅಪನಂಬಿಕೆ, ಕೂಡಲಸಂಗಮ ಇತ್ಯಾದಿ; ಇದಲ್ಲದೆ ಮನೆಮಠ, ಧನದೌಲತ್ತು, ಕೆಲಸಕಾರ್ಯ ಮುಂತಾದ ಅರ್ಥವರ್ಧಕ ಸಮಾಸಪದಗಳು.

ಈ ಎಲ್ಲ ವಿಷಯಗಳನ್ನು ನೋಡಿದರೆ ಸಂಸ್ಕೃತದಿಂದ ತತ್ಸಮ ಪದಗಳನ್ನು ಕನ್ನಡ ಹಾಗೇ ತೆಗೆದುಕೊಂಡಿದೆ ಎಂದು ಖಡಾಖಂಡಿತವಾಗಿ ಹೇಳುವುದಕ್ಕೆ ಬರುವುದಿಲ್ಲ.

ಷ ಮತ್ತು ಋ

ಮಹಾಪ್ರಾಣಗಳು ಜನಸಾಮಾನ್ಯರಿಗೆ ಕಷ್ಟವಾದರೆ, ಷ ಮತ್ತು ಋ ಎಲ್ಲರಿಗೂ ಅಸಾಧ್ಯ ಎನ್ನುವುದು ಭಟ್ ಅವರ ಅಭಿಪ್ರಾಯ; ಈ ಧ್ವನಿಗಳೇ ಅಸಂಬದ್ಧ ಎನ್ನುತ್ತಾರೆ ಅವರು.

“ಶಕಾರವನ್ನು [ಷಕಾರವನ್ನು] ಯಾರಿಗೂ ಉಚ್ಚರಿಸಲು ಬರುವುದಿಲ್ಲ. ಕನ್ನಡದವರಿರಲಿ ಸಂಸ್ಕೃತವಿದ್ವಾಂಸರಿಗೂ ಸರಿಯಾಗಿ ಇದನ್ನು ಉಚ್ಚರಿಸಲು ಆಗುವುದಿಲ್ಲ. ಇದನ್ನು ನಾನು ಚಾಲೆಂಜ್ ಮಾಡಿ ನೋಡಿದ್ದೇನೆ. ಕೃಪೆ ಎನ್ನುವ ಶಬ್ದವನ್ನು ಉಚ್ಚಾರಣೆಯಲ್ಲಿ ಕ್ರುಪೆ ಎಂದು ಹೇಳುತ್ತೇವೆ. ಸಂಸ್ಕೃತ ಭಾಷೆಯ ರಚನೆಯ ಪ್ರಕಾರ `ಋ’ ಒಂದು ಸ್ವರ. ಹಾಗಾಗಿ ಕ್+ಅ+ಋ ಈ ಅನುಕ್ರಮದಲ್ಲಿ ಎರಡು ಸ್ವರಗಳು ಒಟ್ಟಿಗೆ ಬರಲು ಸಾಧ್ಯವಿಲ್ಲ. ಬಹುಶಃ ಋಗ್ವೇದದ ಕಾಲದಲ್ಲೂ ಹೀಗೆ ಉಚ್ಚರಿಸುತ್ತಿದ್ದರೋ ಏನೋ ಗೊತ್ತಿಲ್ಲ. ಹಾಗೇ ಮಹಾಪ್ರಾಣಗಳು ಉಚ್ಚಾರಣೆಯಲ್ಲಿ ಇಲ್ಲ. ಬರಹಕನ್ನಡದಲ್ಲಿ ಮಾತ್ರ ಇದೆ. ಸಂಸ್ಕೃತ ಪಂಡಿತರು ಮಾತ್ರ ಇವನ್ನು ಉಚ್ಚರಿಸಬೇಕು ಎನ್ನುತ್ತಾರೆ.”

ಭಟ್ ಅವರ ಮಾತುಕತೆಯ ಈ ಭಾಗವನ್ನು ಯಾಕೆ ಎತ್ತಿ ಕೊಡುತ್ತಿದ್ದೇನೆ ಎಂದರೆ ಅವರ ವಾದದ ದೌರ್ಬಲ್ಯ ಇದರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಭಟ್ ಅವರ ಅರಿವರ್ಗಗಳಲ್ಲಿ ಷ, ಋ, ಮತ್ತು ಒಟ್ಟು ಹತ್ತೂ ಮಹಾಪ್ರಾಣಗಳು ಮುಖ್ಯ ಪಾತ್ರ ವಹಿಸುತ್ತವೆ. ವಿಸರ್ಗ, ಅರ್ಕಾವೊತ್ತು, ಬಿಂದು ಮುಂತಾದವುಗಳ ಪಾತ್ರ ಕಿರಿದು. ಇವೆಲ್ಲವೂ ಕನ್ನಡ ಅಕ್ಷರಮಾಲೆಗೆ ಸಂಸ್ಕೃತದಿಂದ ಬಂದುವು ಎನ್ನುವುದನ್ನು ಗಮನಿಸಿದರೆ ಭಟ್ ಅವರು ಏನು ಮಾಡಲು ಹೊರಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ: ಸಂಸ್ಕೃತಜನ್ಯವಾದ ಎಲ್ಲವನ್ನೂ ಕಿತ್ತುಹಾಕುವುದು! “ಕನ್ನಡದ ಜಾಯಮಾನಕ್ಕೆ ಹೊಂದುವ ಹಾಗೆ ಬದಲಾವಣೆಗಳನ್ನು ಮಾಡಬೇಕೆಂದು ಸ್ವಲ್ಪ ಹಠದಿಂದಲೇ ಇದನ್ನೆಲ್ಲ ಮಾಡುತ್ತಿದ್ದೇನೆ” ಎಂದು ಅವರೇ ಹೇಳಿದ್ದಾರೆ. ಇಂಥ ಹಟದಿಂದ ಎಡವಟ್ಟಾಗುತ್ತದೆ. ಸಮಸ್ಯೆಯೆಂದರೆ ಅವರು ವಾದಿಯೂ ತೀರ್ಪುಗಾರನೂ ಒಬ್ಬನೇ ಆಗಲು ಬಯಸುವುದು.

ಷಕಾರವನ್ನು (`ಕೆಂಡಸಂಪಿಗೆ’ಯಲ್ಲಿ ಪ್ರಕಟವಾದಂತೆ ಶಕಾರವನ್ನಲ್ಲ; ಶಕಾರಕ್ಕೆ ಭಟ್ ಅವರು ಆಕ್ಷೇಪಿಸುವುದಿಲ್ಲ) ಯಾರಿಗೂ ಸರಿಯಾಗಿ ಉಚ್ಚರಿಸಲು ಬರುವುದಿಲ್ಲ, ಕನ್ನಡಿಗರನ್ನು ಬಿಡಿ, ಸಂಸ್ಕೃತಪಂಡಿತರಿಗೂ ಆಗುವುದಿಲ್ಲ ಎಂದು ಅವರು `ಚಾಲೆಂಜ್’ ಮಾಡುತ್ತಾರೆ.

ಎಂದರೆ ಅದನ್ನು `ಸರಿಯಾಗಿ’ ಹೇಗೆ ಉಚ್ಚರಿಸಬೇಕು ಎನ್ನುವುದು ಅವರೊಬ್ಬರಿಗೆ ಮಾತ್ರವೇ ಗೊತ್ತಿದೆ ಎಂದಾಗುತ್ತದೆ. ಹಾಗಿದ್ದರೆ ಅವರು ಹೇಳಿದ್ದೇ ಯಾವತ್ತೂ ಸರಿ. ಇನ್ನು ಚಾಲೆಂಜ್ನ ಪ್ರಶ್ನೆ ಎಲ್ಲಿ ಬಂತು? ಯಾರಿಗೂ ಬರುವುದಿಲ್ಲ ಎಂದು ಅವರು ತೀರ್ಮಾನಿಸಿ ಆಗಿದೆ! ಈ ಚಾಲೆಂಜ್ ಎನ್ನುವ ಮಾತೇ ಸಂವಾದಕ್ಕೆ ಸರಿಹೊಂದುವುದಿಲ್ಲ.

ಆದರೆ ನನಗೆ ನಿಜಕ್ಕೂ ಅಚ್ಚರಿ ಮೂಡಿಸಿದ್ದು `ಕೃ’ಪೆಯಲ್ಲಿನ `ಕೃ’ ಅಕ್ಷರವನ್ನು ಅವರು ಬಿಡಿಸುವ ರೀತಿ ನೋಡಿ. ಕೃ ಎಂದರೆ ಕ್+ಅ+ಋ ಎನ್ನುತ್ತಾರೆ ಅವರು! ಇದು ಆಶ್ಚರ್ಯ. ಯಾಕೆಂದರೆ ನಾನು ಇದುವರೆಗೆ ತಿಳಿದುಕೊಂಡ ಪ್ರಕಾರ ಕೃ ಎನ್ನುವುದು ಕ್+ಋ. ಹಲಂತಕ್ಕೆ (ಅರ್ಧಾಕ್ಷರಕ್ಕೆ) ಯಾವುದೇ ಸ್ವರ ಹಚ್ಚಿದಾಗ ಅದು ಹಲಂತವಾಗಿ ಉಳಿಯುವುದಿಲ್ಲ; ಋ ಹಚ್ಚಿದಾಗ `ಕ್’ ಎಂಬುದನ್ನು `ಕ’ದಂತೆ ಬರೆಯುವುದು ಪದ್ಧತಿ ಹೊರತು `ಕೃ’ನಲ್ಲಿ ಕಕಾರವಿದೆ ಎಂದಲ್ಲ. (ಇದು ಸಂಸ್ಕೃತ ಲಿಪಿಯಲ್ಲೂ ಹೀಗೇ. ಕನ್ನಡವು ಇಲ್ಲಿ ಸಂಸ್ಕೃತದ ಮಾದರಿಯನ್ನು ಅನುಸರಿಸಿದೆ ಅಷ್ಟೆ.) ಆದ್ದರಿಂದ ಇಲ್ಲಿ ಗೊಂದಲಕ್ಕೆ ಕಾರಣವೇ ಇಲ್ಲ. ಭಟ್ ಅವರು `ಕೃ’ಗೆ ನೀಡಿದ ವಿಶ್ಲೇಷಣೆಯನ್ನು ತೆಗೆದುಕೊಂಡರೆ, `ಕೂ’, `ಕೋ’ ಮುಂತಾದ ಅಕ್ಷರಗಳೂ ಅಸಂಬದ್ಧವೇ. ಯಾಕೆಂದರೆ ಅವರ ಪ್ರಕಾರ, `ಕೂ’ ಎಂದರೆ ಕ್+ಅ+ಊ, `ಕೋ’ ಎಂದರೆ ಕ್+ಎ+ಓ ಆಗಬೇಕು! ಅಷ್ಟು ಮಾತ್ರವೂ ಅಲ್ಲ, ಕನ್ನಡದ ಒತ್ತಕ್ಷರಗಳ ಒಟ್ಟಾರೆ ಪದ್ಧತಿಯೇ ಅತಾರ್ಕಿಕವಾಗಿದ್ದು ಅದನ್ನೂ ಸುಧಾರಿಸಬೇಕಾಗುತ್ತದೆ. ಉದಾಹರಣೆಗೆ, ತ್ಯಾಗ ಎಂಬ ಪದದ ಉಚ್ಚಾರಣೆಯಲ್ಲಿ `ಆ’ಕಾರ ಬರುವುದು `ಯ’ಕಾರಕ್ಕಲ್ಲದೆ `ತ’ಕಾರಕ್ಕೆ ಅಲ್ಲ; ತ್ಯಾ ಎನ್ನುವುದು ತ್+ಯಾ. (ದೇವನಾಗರಿಯಲ್ಲಿ ಇದು ಸರಿಯಾಗಿದೆ.) ಆದರೆ ಕನ್ನಡದಲ್ಲಿ `ಆ’ಕಾರ `ತ’ಕಾರಕ್ಕೆ ಬರುವಂತೆ ಕಾಣಿಸುತ್ತದೆ. ಬಿಂದುವನ್ನು ಉಳಿದಂತೆ ಎಲ್ಲಾ ವಿಜಾತೀಯ ಸಂಯುಕ್ತಾಕ್ಷರಗಳು ಬಂದಾಗಲೂ ಒತ್ತಕ್ಷರಗಳೂ ಹೀಗೆಯೇ. ಎಂದರೆ ಕನ್ನಡದ ಲಿಪಿಕಾರರು ಇಲ್ಲಿ ಎಡವಿದರೇ? ಇಲ್ಲ, ಅವರೇನೂ ಎಡವಲಿಲ್ಲ. ಬರಹವೆನ್ನುವುದು ಒಂದು ಸಂಜ್ಞಾಪದ್ಧತಿ, ಅದು ಅದರಷ್ಟಕ್ಕೇ ತರ್ಕಬದ್ಧವಾಗಿದ್ದರೆ ಸಾಕು, ಅದೊಂದು ರೀತಿಯ ಒಪ್ಪಂದ ಎನ್ನುವ ಅರಿವು ಅವರಿಗಿತ್ತು.

ಋ ಷ ನಿಗೂಢತೆಯ ಅನಾವರಣ

ನಾನು ಇಂಗ್ಲಿಷ್ ಕಲಿಯಲು ಆರಂಭಿಸಿದಾಗ ಎಲ್ಲವೂ ಒಂದು `ನಿಗೂಢತೆ’ಯಂತೆ ನನಗೆ ಅನಿಸಿತ್ತು: ಯಾಕೆ ಬರೆದಂತೆ ಓದುವುದಿಲ್ಲ, ಯಾಕೆ ಓದಿದಂತೆ ಬರೆಯುವುದಿಲ್ಲ? ಯಾಕೆ ಈ ದೊಡ್ಡಕ್ಷರಗಳು (capital letter)? ಈ ಮಿಸ್ಟರಿಯನ್ನು ಪರಿಹರಿಸುವುದಕ್ಕೆ ಅಧ್ಯಾಪಕರಾದರೂ ಪ್ರಯತ್ನಿಸಲಿಲ್ಲ. ಸ್ಟ್ರೆಸ್ನ ಮಿಸ್ಟರಿಯಂತೂ ಬಹುಕಾಲ ಮುಂದರಿಯಿತು. ನಾನೇ ಇಂಗ್ಲಿಷ್ ಭಾಷಾವಿಜ್ಞಾನ ಕಲಿಸಲು ತೊಡಗಿ ಸ್ವಂತ ಪರಿಶ್ರಮದಿಂದ ಇದನ್ನು ಕಲಿತುಕೊಳ್ಳಬೇಕಾಯಿತು. ನಿಗೂಢತೆಗಳನ್ನು ಬಿಡಿಸುವುದು ಅಧ್ಯಾಪಕರ ಕೆಲಸ, ಅದನ್ನು ಹೆಚ್ಚಿಸುವುದಲ್ಲ. ಒಬ್ಬ ಭಾಷಾವಿಜ್ಞಾನಿಯಾಗಿ ಭಟ್ ಅವರಿಂದ ಜನಕ್ಕೆ ಇದೇ ನಿರೀಕ್ಷೆ; ಆದರೆ ಅವರ ಮಾತುಗಳು ಸಂಸ್ಕೃತಮೂಲದ ಕೆಲವು ಧ್ವನಿಗಳ ಬಗ್ಗೆ ಗೊಂದಲ ಹುಟ್ಟಿಸುವಂತಿವೆ.

ಮಹಾಪ್ರಾಣಗಳನ್ನು ಉಚ್ಚರಿಸುವುದು ಹೇಗೆನ್ನುವ ಬಗ್ಗೆ ಈಗಾಗಲೇ ಹೇಳಿಯಾಯಿತು. ಈಗ ಋಕಾರ ಷಕಾರಗಳ ಬಗ್ಗೆ ನೋಡೋಣ. ಯಾರೂ ಉಚ್ಚರಿಸಲಿಕ್ಕೆ ಆಗುವುದಿಲ್ಲ ಎನ್ನುವುದಾದರೆ ಅಂಥ ಧ್ವನಿಗಳು ಭಾಷೆಯಲ್ಲಿ ಇರುತ್ತಲೇ ಇರಲಿಲ್ಲ ಎಂದು ಹೇಳಿ ಸುಮ್ಮನಿರಬಹುದು; ಆದರೆ ಅದು ನನ್ನ ಉದ್ದೇಶವಲ್ಲ. ಈ ಧ್ವನಿಗುಮ್ಮಗಳ ನಿಜವನ್ನು ನೋಡುವುದು ನನ್ನ ಉದ್ದೇಶ. ಭಟ್ ಅವರೇ ಹೇಳುವಂತೆ ಋಕಾರ ಸಂಸ್ಕೃತದಲ್ಲಿ ಸ್ವರವಾಗಿ ಬರುತ್ತದೆ: ಸ್ವತಂತ್ರವಾಗಿಯೂ ಇತರ ವ್ಯಂಜನಗಳಿಗೆ ಒತ್ತಕ್ಷರವಾಗಿಯೂ (ಎಂದರೆ ಸಂಯುಕ್ತಾಕ್ಷರವಾಗಿ). ಕನ್ನಡ ಇಂಥ ಪದಗಳಲ್ಲಿ ಹಲವನ್ನು ತತ್ಸಮವಾಗಿ ತೆಗೆದುಕೊಂಡಿದೆ: ಋಣ, ಕೃಪೆ, ತೃಪ್ತಿ ಮುಂತಾಗಿ.

ವ್ಯಂಜನವೊಂದು ಸ್ವರ್ಜವಾಗಿ ಬಳಕೆಯಾದಾಗ ಅದು ಸ್ವರದಂತೆ ಕೆಲಸಮಾಡುತ್ತದೆ; ಇಲ್ಲಿ ರಕಾರ ಹೀಗೆ ಆಗಿದೆ. ಋ ಎನ್ನುವುದು ಸ್ವರ್ಜ್ಯ ರಕಾರ (syllabic r). ಸ್ವರ್ಜ (syllable) ಎಂದರೆ ಒಂದು ನಿಸ್ವಾಸ ಘಟಕ. ಕನ್ನಡದಲ್ಲಿ ಇದನ್ನೇ ಅಕ್ಷರವೆಂದು ಹೇಳುವುದು ವಾಡಿಕೆ; ಆದರೆ ಅಕ್ಷರಕ್ಕೆ ಚಿಹ್ನೆ ಎಂಬ ಅರ್ಥವೂ ಇರುವುದರಿಂದ ಇದಕ್ಕೆ ಇಲ್ಲಿ ಸ್ವರ್ಜ ಎಂಬ ಪದವನ್ನು ಬಳಸಿದ್ದೇನೆ. (ಬಹುಶಃ ವ್ಯಂಜನಾಕ್ಷರಗಳನ್ನೂ ಸಹಾ ಸ್ವರ ಸೇರಿಸಿ ಕ, ಕಾ, ಕಿ, ಕೀ ಮುಂತಾಗಿ ನಮೂದಿಸುವುದು ವಾಡಿಕೆಯಾದ್ದರಿಂದ `ಅಕ್ಷರ’ಕ್ಕೆ ಸಿಲಬಲ್ `ಸ್ವರ್ಜ’ದ ಅರ್ಥ ಬಂದಿದೆ.)

ಪ್ರತಿಯೊಂದು ಸ್ವರ್ಜಕ್ಕೂ ಒಂದು ಸ್ವರದ ಅಗತ್ಯವಿರುತ್ತದೆ: ಕ, ಕಾ ಇತ್ಯಾದಿಗಳು ಸ್ವರ್ಜಗಳು, ಆದರೆ `ಕ್’ ಅಲ್ಲ. ಎಲ್ಲ ಸ್ವರಾಕ್ಷರಗಳೂ ಸಹಜವಾಗಿಯೂ ಸ್ವರ್ಜಗಳೇ: ಅ, ಇ, ಎ ಮುಂತಾಗಿ. ಇದು ಎಲ್ಲ ಭಾಷೆಗಳಿಗೂ ಅನ್ವಯಿಸುವ ಸಂಗತಿ. ಯಾಕೆಂದರೆ ಎಲ್ಲ ಭಾಷೆಗಳೂ ವ್ಯಂಜನ ಮತ್ತು ಸ್ವರಾಕ್ಷರಗಳನ್ನು ಬಳಸಿಯೇ ರಚನೆಗೆ ಬರುತ್ತವೆ ಹಾಗೂ ಸ್ವರ್ಜಗಳು ಎಲ್ಲಾ ಭಾಷೆಗಳಲ್ಲೂ ಇವೆ. ಅಪರೂಪಕ್ಕೆ ಕೆಲವು ವ್ಯಂಜನಗಳೂ ಸ್ವರದ ಕೆಲಸ ನಿರ್ವಹಿಸಬಹುದು. ಹೀಗೆ ಸ್ವರದ ಕೆಲಸವನ್ನು ವ್ಯಂಜನ ನಿರ್ವಹಿಸಿದಾಗ ಅದಕ್ಕೆ ಸ್ವರ್ಜ್ಯ (syllabic consonant) ಎನ್ನುತ್ತಾರೆ. ಇಂಗ್ಲಿಷ್ ನಲ್ಲಿ ಟ, ಟಿ, ಟ, ಡಿ ಕೆಲವೆಡೆ ಇಂಥ ಕೆಲಸ ನಿರ್ವಹಿಸುತ್ತವೆ. ಉದಾಹರಣೆಗೆ, ಬಾಟ್ಲ್, ಕೆಟ್ಲ್ ಮುಂತಾದ ಕಡೆ; ಇಲ್ಲಿ `ಲ್’ ಸ್ವರ್ಜ್ಯವಾಗಿ ಬರುವುದು ಕಡ್ಡಾಯ. ಆದರೆ `ನ್’ ಮೇಲೆ ಅಂಥ ಒತ್ತಾಯವಿಲ್ಲ: ಬಟನ್ ಎಂಬಲ್ಲಿ `ನ್’ ಸ್ವರ್ಜ್ಯವಲ್ಲ, ಆದರೆ ಬಟ್ನ್ ಎಂಬಲ್ಲಿ ಹೌದು, ಮತ್ತು ಇವೆರಡೂ ಉಚ್ಚಾರಣೆಗಳು ಚಾಲ್ತಿಯಲ್ಲಿವೆ. ಇಂಗ್ಲಿಷ್ `ಆರ್’ ಕೂಡಾ ಅಪರೂಪಕ್ಕೆ ಸ್ವರ್ಜ್ಯವಾಗಿ ಬರುವುದಿದೆ: ಕೆಲವು ಅಮೇರಿಕನ್ ಉಚ್ಚಾರಣೆಯ particular `ಪರ್ಟಿಕ್ಯುಲರ್’ prticular `ಪೃಟಿಕ್ಯುಲರ್’ ಎಂದು ಕೇಳಿಸುತ್ತದೆ, ಆದರೆ ಬಿಬಿಸಿ ಇಂಗ್ಲಿಷ್ ನಲ್ಲಿ ಇದಿಲ್ಲ; Hungary ಮತ್ತು  hungry ಪದಗಳಲ್ಲಿ ಹೆಚ್ಚಾಗಿ ಎಲ್ಲೆಡೆಯ ಇಂಗ್ಲಿಷ್ ನಲ್ಲಿ ಮೊದಲನೆಯ ಪದಾಂತ್ಯದ ಗಕಾರಕ್ಕೆ ಸ್ವರ್ಜ್ಯ ರಕಾರವನ್ನು (ಎಂದರೆ ಋ) ಹಚ್ಚಿ ಉಚ್ಚರಿಸಲಾಗುತ್ತದೆ. ಇದನ್ನು ಕನ್ನಡದಲ್ಲಿ `ಹಂಗೃಇ’ ಎಂದು ಬರೆಯಬೇಕಾಗುತ್ತದೆ. Hungryಯಲ್ಲಿ ಎರಡು ಸ್ವರ್ಜಗಳಿದ್ದರೆ Hungaryಲ್ಲಿ ಮೂರು; ಇವೇ ಈ ಎರಡು ಪದಗಳನ್ನು ಪ್ರತ್ಯೇಕಿಸುವುದು. (ಕೆಲವರು Hungaryಯನ್ನು ಹಂಗರಿ ಎಂದು ಉಚ್ಚರಿಸುವುದಿದೆ.) ಆದರೆ ಇಂಗ್ಲಿಷ್ ನ ಆರ್ ಎಂದೂ ಪದಾದಿಯಲ್ಲಿ ಸ್ವರ್ಜ್ಯವಾಗಿ ಬರುವುದಿಲ್ಲ. ಕೆಲವು ಆಫ್ರಿಕನ್ ಭಾಷೆಗಳಲ್ಲಿ ನ್ ಮತ್ತು ಮ್ಗಳು ಪದಾದಿಯಲ್ಲಿ ಸ್ವರ್ಜ್ಯವಾಗಿ ಬರುತ್ತವೆ: `ನ್ ಗೂಗಿ’ ಎಂಬ ನೈಜೀರಿಯನ್ ಲೇಖಕನ ಹೆಸರಿನ ಆದಿಯಲ್ಲಿ ನ್ ಸ್ವರ್ಜ್ಯವಾದ್ದು (syllabic); ಎಂದರೆ `ನ್ ಗೂಗಿ’ ಎಂಬ ಪದದಲ್ಲಿ ಮೂರು ಸ್ವರ್ಜಗಳಿವೆ (syllables). (ನೋಡಿ: Peter Roach, English Phonetics and Phonology, 3rd ed. Cambridge: Cambridge Univ. Press, 2000.)

ಸಂಸ್ಕೃತದ ಋ ಹೀಗೆ ಪದಾರಂಭದಲ್ಲೂ ಇತರ ಕಡೆಯೂ ಸ್ವರ್ಜ್ಯವಾಗಿ ಬರುವ ರಕಾರ. ಕನ್ನಡ ಇದನ್ನೇ ಸ್ವೀಕರಿಸಿಕೊಂಡುದು. ರಕಾರ ಹುಟ್ಟುವುದು ಟವರ್ಗದ ಜಾಗದಲ್ಲಿ, ಎಂದರೆ ಅದೊಂದು ಮೂರ್ಧನ್ಯಾಕ್ಷರ. ರಕಾರಕ್ಕೂ ಋಕಾರಕ್ಕೂ ಇರುವ ಭೇದವೆಂದರೆ ರಕಾರ ಅಕಾರವನ್ನು ಸೇರಿಸಿದ ರ್; ಋಕಾರ ತಾನೇ ಸ್ವರವಾಗಿ ಹೊರಹೊಮ್ಮುವ ರ್, ಆದ್ದರಿಂದ ಸ್ವರ್ಜ್ಯ. ರ್ ಬೇರೆ ಸ್ವರಗಳನ್ನು ಆಶ್ರಯಿಸಿದಾಗ ವ್ಯಂಜನವಾಗುತ್ತದೆ. ರ್ ಮತ್ತು ಋ ಎರಡೂ ಅವ್ಯಾಹತಗಳು `ತಡೆರಹಿತ’ (continuant), ಎಂದರೆ ಅವನ್ನು ಉಚ್ಚರಿಸುವಾಗ ನಿಶ್ವಾಸ ನಿರಾಳವಾಗಿರುತ್ತದೆ. ಭಟ್ ಅವರು ಹೇಳುವುದೆಂದರೆ ಕನ್ನಡದವರು ಋಕಾರವನ್ನು ಸ್ವರ್ಜ್ಯವಾಗಿ ಬಳಸುವುದಿಲ್ಲ, ಆದ್ದರಿಂದ ಕೃತಿ ಕ್ರುತಿಯಾಗುತ್ತದೆ ಎಂಬುದಾಗಿ. (ಈ ಮೊದಲು ಉಲ್ಲೇಖಿಸಿದಂತೆ, ಅವರ ಪ್ರಕಾರ ಋಕಾರ ಅಸಾಧ್ಯವಾದಂಥ ಒಂದು ಧ್ವನಿ ಕೂಡಾ.) ಹಲವಾರು ಕನ್ನಡಿಗರು ಯಾವುದೇ ಪ್ರಯಾಸವಿಲ್ಲದೆ `ಕೃಪೆ’ಯನ್ನು `ಕೃಪೆ’ ಎಂದೇ ಉಚ್ಚರಿಸಬಲ್ಲರು ಎಂದು ನನಗೆ ಅನಿಸುತ್ತದೆ. `ಕ್ರುಪೆ’ ಎನ್ನುವುದಕ್ಕಿಂತ `ಕೃಪೆ’ಯೇ ಸುಲಭ. ಆದರೆ ಭಟ್ ಅವರು-ಅಲ್ಲ, ಕೃಪೆ ಎನ್ನುವುದಕ್ಕೆ ಯಾರಿಗೂ ಬರುವುದಿಲ್ಲ, ಕೃಪೆಯನ್ನು ಕ್ರುಪೆಯೆಂದೇ ಎಲ್ಲರೂ ಎನ್ನುತ್ತಾರೆ, ಕೃಪೆ ಅಸಾಧ್ಯ ಎಂದು ಹಟ ಹಿಡಿದರೆ ಯಾರೇನು ಮಾಡುವುದಕ್ಕೂ ಆಗುವುದಿಲ್ಲ. ಹಲವರ ಮಟ್ಟಿಗೆ ಅವರನ್ನುವುದು ಸರಿಯಿರಬಹುದು; ಆದರೆ ಎಲ್ಲರ ಮಟ್ಟಿಗೆ ಅಲ್ಲ. ಮಾತೃಭೂಮಿಯನ್ನು `ಮಾತುರುಬೂಮಿ’ಯೆಂದೂ ಪಿತೃಭಕ್ತಿಯನ್ನು `ಪಿತುರುಬಕ್ತಿ’ಯೆಂದೂ ಹಲವರು ಹೇಳಲೂ ಬಹುದು, ಆದರೆ ಎಲ್ಲರೂ ಹಾಗನ್ನುತ್ತಾರೆ ಎನ್ನುವಂತಿಲ್ಲ.

ಇನ್ನು ಷಕಾರದ ವಿಷಯ. ಶ-ಷ-ಸ ಕಾರಗಳು ಕೂಡಾ ಅವ್ಯಾಹತಗಳು, ಆದರೆ ಅವು ತುಸು ಕರ್ಷಣೆಯನ್ನು ತೋರಿಸುವುದರಿಂದ ಕರ್ಷಕಗಳು (fricatives) ಹಾಗೂ ಅವುಗಳ ಜನನ ಸ್ಥಾನಗಳು ಬೇರೆ ಬೇರೆ: ಶಕಾರ ಚವರ್ಗಕ್ಕೆ ಸೇರಿದ ತಾಲವ್ಯ; ಷಕಾರ ಟವರ್ಗಕ್ಕೆ ಸೇರಿದ ಮೂರ್ಧನ್ಯ; ಮತ್ತು ಸಕಾರ ತವರ್ಗಕ್ಕೆ ಸೇರಿದ ದಂತ್ಯ. (ಈ ಪಾರಿಭಾಷಿಕ ಪದಗಳು ಒಂದು ವೇಳೆ ಓದುಗರಿಗೆ ಅರ್ಥವಾಗದಿದ್ದರೂ ಸಂದರ್ಭದಿಂದ ಅವನ್ನು ಊಹಿಸಿಕೊಳ್ಳಬಹುದು.) ಉಚ್ಚಾರಣೆಯ ವೇಳೆ ನಾಲಿಗೆ ಎಲ್ಲಿರುತ್ತದೆ, ಹೇಗಿರುತ್ತದೆ ಎಂಬುದನ್ನು ಹೊಂದಿಕೊಂಡು ಇವುಗಳ ನಡುವೆ ಇತರ ಭಿನ್ನತೆಗಳೂ ಇವೆ. ಮುಖ್ಯವಾಗಿ ಶಕಾರ ಮತ್ತು ಷಕಾರದ ನಡುವಣ ಭಿನ್ನತೆ ಇಲ್ಲಿ ಪ್ರಸ್ತುತ: ಶಕಾರ ನಾಲಿಗೆ ಮಧ್ಯದ್ದಾದರೆ ಷಕಾರ ಸಕಾರದಂತೆಯೇ ನಾಲಿಗೆ ತುದಿಯದ್ದು; ಆದರೆ ಷಕಾರವನ್ನು ಉಚ್ಚರಿಸುವಾಗ ನಾಲಿಗೆ ತುದಿ ಮೇಲೆದ್ದು ಸ್ವಲ್ಪ ಮಟ್ಟಿಗೆ ಹಿಂದಕ್ಕೆ ಮಡಚಿರುತ್ತದೆ (retroflex)-ಳಕಾರ, ಣಕಾರಗಳನ್ನು ಉಚ್ಚರಿಸುವ ರೀತಿಯಲ್ಲಿ; ಆದ್ದರಿಂದ ಷಕಾರದ ಉಚ್ಚಾರಣೆಯಲ್ಲಿ ಬಾಯಲ್ಲಿ ಹೆಚ್ಚು ಗಾಳಿ ತುಂಬಿದ ಅನುಭವವಾಗುತ್ತದೆ. ಸಕಾರದಲ್ಲಿ ಹೀಗಾಗುವುದಿಲ್ಲ.

ಶಕಾರ ಮತ್ತು ಷಕಾರದ ವ್ಯತ್ಯಾಸವೆಂದರೆ ನಾಲಿಗೆಯ ತುದಿ ಹೀಗೆ ಮಡಚಿದೆಯೋ ಇಲ್ಲವೋ ಎನ್ನುವುದು; ನಾಲಿಗೆ ಮಡಚಿಲ್ಲದೆ ಇದ್ದು ಅದರ ಮಧ್ಯದಲ್ಲಿ ಕರ್ಷಣೆಯುಂಟಾದರೆ ಶಕಾರ; ನಾಲಿಗೆ ಮಡಚಿದ್ದು ತುದಿಯಲ್ಲಿ ಕರ್ಷಣೆಯುಂಟಾದರೆ ಷಕಾರ; ಇನ್ನು ನಾಲಿಗೆ ಮಡಚದೆ ತುದಿಯಲ್ಲಿ ಕರ್ಷಣೆಯುಂಟಾದರೆ ಅದು ಸಕಾರ. ಈ ಜಾಗಗಳನ್ನು ನೀವು ಸ್ವತಃ ಪರೀಕ್ಷೆ ಮಾಡಿಕೊಳ್ಳಬಹುದು: ಆಯಾ ವ್ಯಂಜನಗಳನ್ನು ಉಚ್ಚರಿಸಲು ನಾಲಿಗೆಯನ್ನು ಸಿದ್ಧಪಡಿಸಿಕೊಳ್ಳಿ. ಆದರೆ ಗಾಳಿಯನ್ನು ಹೊರಹಾಕುವ ಬದಲು ಒಳಕ್ಕೆ ಎಳೆದುಕೊಳ್ಳಿ. ಆಗ ಕರ್ಷಣ ನಡೆಯುವ ಜಾಗ ತಂಪಾದ ಅನುಭವ ಬರುತ್ತದೆ. ಇಲ್ಲೂ ಈ ಅಕ್ಷರಗಳ ನಡುವಣ ವ್ಯತ್ಯಾಸ ಸಾಪೇಕ್ಷವಾದ್ದು (relative), ನಿರಪೇಕ್ಷವಾದ್ದಲ್ಲ(absolute). ಎಂದರೆ ಷಕಾರದ ಉಚ್ಚಾರಣೆಯನ್ನು ಅತಿಶಯಗೊಳಿಸುವ ಅಗತ್ಯವಿಲ್ಲ. ಒಂದು ವೇಳೆ ಷಕಾರವನ್ನು ಶಕಾರದಂತೆ ಉಚ್ಚರಿಸಿದರೆ ಆಕಾಶ ಹರಿದು ಬೀಳುವುದೇ? ಖಂಡಿತಾ ಇಲ್ಲ! ಇಲ್ಲಿಯೂ ಬೇಕಾದವರು ಬೇಕಾದಂತೆ ಉಚ್ಚರಿಸಿಕೊಳ್ಳಲಿ ಎನ್ನುವುದು ನನ್ನ ಸಲಹೆ. ಆದರೆ ಬರಹದಲ್ಲಿ ಷಕಾರ ಇರುವುದೇ ಸರಿ. ಇಲ್ಲದಿದ್ದರೆ ಷಕಾರವನ್ನು ಉಚ್ಚರಿಸಲೇ ಬೇಡಿ ಎಂದು ಒತ್ತಾಯಿಸಿದಂತೆ ಆಗುತ್ತದೆ. ಜನರ ಆಯ್ಕೆಯ ಸ್ವಾತಂತ್ರ್ಯವನ್ನು ಇಲ್ಲದೆ ಮಾಡುವುದು ಒಳ್ಳೆಯದಲ್ಲ.

ನಮಗೆಂಥಾ ಕನ್ನಡ ಬೇಕು?

ನಮಗೆಂಥಾ ಕನ್ನಡ ಬೇಕು ಎಂಬಲ್ಲಿ ಭಟ್ ಅವರ ಚಿಂತನೆಗಿಂತ ನನ್ನ ಚಿಂತನೆ ಭಿನ್ನವಾಗಿರುವಂತೆ ಅನಿಸುತ್ತದೆ-ನಮ್ಮಿಬ್ಬರ ಚಿಂತನೆಗಳೂ ಸಮಸ್ತ ಕನ್ನಡಿಗರ ಏಳಿಗೆಯನ್ನು ಬಯಸುತ್ತಿದ್ದರೂ ಸಹಾ. ಭಟ್ ಅವರು ಉದ್ದೇಶಿಸುತ್ತಿರುವುದು ಎಷ್ಟು ಅಗತ್ಯವೋ ಅಷ್ಟು ಮಾತ್ರ ಅಗತ್ಯದ `ಆಪತ್ಕಾಲೀನ’ ಕನ್ನಡ, Functional Kannada. ಅಂಥ ಕನ್ನಡ ಸ್ಕೂಲು ದಾಟುವಂಥದಲ್ಲ. ಇದು ಸರ್ವಶಿಕ್ಷಣದ ಮೂಲ ಉದ್ದೇಶವನ್ನೇ ಮೊಟಕುಗೊಳಿಸಿದಂತೆ. ನನ್ನ ಮನಸ್ಸಿನಲ್ಲಿರುವುದು ಸವ್ರಶಕ್ತ ಕನ್ನಡ. ಜ್ಞಾನಗ್ರಹಣ, ಜ್ಞಾನಸಂವಹನ ಮತ್ತು ಜ್ಞಾನೋತ್ಪತ್ತಿ ಎಲ್ಲವೂ ಸಾಧ್ಯವಾಗುವಂಥದು. ಕೆಲವು ವರ್ಷಗಳ ಹಿಂದೆ ಇಂಗ್ಲಿಷ್ ನಲ್ಲಿ Basic English ಎಂಬ ಚಳುವಳಿಯೊಂದು ಸುರುವಾದ್ದು ನೆನಪಿಗೆ ಬರುತ್ತದೆ. ಜನಬಳಕೆಯ ಎಂಟುನೂರೋ ಒಂಭೈನೂರೋ ಪದಗಳ ಇಂಗ್ಲಿಷ್ ಇದು. ಆದಷ್ಟೂ ಇಂಗ್ಲಿಷ್ ಮೂಲದ (Anglo-Saxon) ಪದಗಳನ್ನು ಬಳಸುವುದು, ಒಂದೇ ಪದವನ್ನು ಆದಷ್ಟೂ ಹೆಚ್ಚು ಹಲವು ಅರ್ಥಗಳಲ್ಲಿ ಉಪಯೋಗಿಸುವುದು, ದಿನಬಳಕೆಯ ಸರಳ ಪದಗಳನ್ನು ಮಾತ್ರ ಇಟ್ಟುಕೊಳ್ಳುವುದು ಮುಂತಾದುವು ಬೇಸಿಕ್ ಇಂಗ್ಲಿಷ್ ನ ತತ್ವಗಳಾಗಿದ್ದುವು. ಇಂಥ ಇಂಗ್ಲಿಷ್ ಒಬ್ಬ ವ್ಯಕ್ತಿಯನ್ನು ಎಷ್ಟು ದೂರಕ್ಕೆ ಒಯ್ಯಬಹುದು ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಬೇಸಿಕ್ ಇಂಗ್ಲಿಷ್ ಬಂದಂತೆಯೇ ಹೊರಟು ಹೋಯಿತು. ತೀರಾ ಈಚೆಗೆ ಭಾರತದಲ್ಲಿ ಯೋಜಿಸಿ `ಅತ್ಯಗತ್ಯದ ಇಂಗ್ಲಿಷ್’ Functional English  ಎಂಬ ಕೋರ್ಸನ್ನು ಡಿಗ್ರೀ ಮಟ್ಟದಲ್ಲಿ ಹುಟ್ಟುಹಾಕಿತು. ಹಲವೆಡೆ ಇದು ಪ್ರಯೋಗಕ್ಕೂ ಬಂತು. ಆದರೆ ಯಾರಿಗೂ ಹಿಡಿಸಿದಂತೆ ಕಾಣುವುದಿಲ್ಲ. ಭಟ್ ಅವರ ಕನ್ನಡವೂ ಹೀಗೇ ಆಗುವ ಸಾಧ್ಯತೆ ಜಾಸ್ತಿ. ನಮಗೆ ಬೇಕಾದ್ದು ಲೋಕ ತೆರೆದುಕೊಡುವ ಕನ್ನಡ, ಲೋಕ ಮುಚ್ಚುವ ಕನ್ನಡವಲ್ಲ.

ಋಕಾರವನ್ನು ವರ್ಣಮಾಲೆಯಿಂದ ತೆಗೆದುಹಾಕಬೇಕು ಎನ್ನುವ ಯತ್ನವನ್ನು ಹಲವರು ವಿರೋಧಿಸಿದರು. ಭಟ್ ಅವರೇ ಹೇಳುವಂತೆ ಅಂಥವರಲ್ಲಿ ಕೆ.ವಿ. ಸುಬ್ಬಣ್ಣ ಮತ್ತು ನಾನೂ ಇದ್ದೆವು. ನಾವಿಬ್ಬರೂ ನಮ್ಮ ನಮ್ಮ ಕಾರಣಗಳನ್ನು ವಸ್ತುನಿಷ್ಠವಾಗಿ ಪ್ರಕಟಿಸಿದ್ದೇವೆ. ಅವು ಯಾವುವನ್ನೂ ಎತ್ತಿಕೊಳ್ಳದೆ ಭಟ್ ಅವರು ನಮ್ಮನ್ನು ಸಂಸ್ಕೃತವೆಂದರೆ ದೇವಭಾಷೆ ಎನ್ನುವವರ ಪೈಕಿಯಲ್ಲಿ ಸೇರಿಸಿ ಆ ಕಾರಣಕ್ಕೆ ಋಕಾರಹರಣವನ್ನು ವಿರೋಧಿಸಿದೆವು ಎಂಬಂತೆ ತಳ್ಳಿಹಾಕುವುದು ಎಷ್ಟು ಸರಿ? ನನ್ನ ಮಾತು ಬದಿಗಿರಲಿ, ಸುಬ್ಬಣ್ಣ ಕನ್ನಡಕ್ಕಾಗಿ (ಕನ್ನಡಿಗರಿಗಾಗಿ) ಮಾಡಿದ ಕೆಲಸ ತೆರೆದ ಪುಸ್ತಕದಂತಿರುವುದು ಯಾವನೇ ಸಂವೇದನಾಶೀಲ ವ್ಯಕ್ತಿಗೂ ಗೊತ್ತಿರುವ ಸಂಗತಿ. ಯಾರೂ ಯಾರ ಮಾತನ್ನೂ ವಿಮರ್ಶಾರಹಿತವಾಗಿ ಸ್ವೀಕರಿಸಬಾರದು ನಿಜ; ಆದರೆ ತಮ್ಮ ಹಟದಲ್ಲಿ ಭಟ್ ಅವರಿಗೆ ಇತರ ದೃಷ್ಟಿಕೋನಗಳನ್ನು ಪರಾಮರ್ಶಿಸುವ ತಾಳ್ಮೆಯೇ ಇಲ್ಲ. ಇದೇ ಅಸಹನೆಯನ್ನು ಅವರು ನೃಪತುಂಗ (ಮಾರ್ಗಕಾರ), ಶೆಲ್ಡನ್ ಪೋಲಕ್, ಶೆಟ್ಟರ್ ಮುಂತಾದವರ ವಿಷಯದಲ್ಲೂ ತೋರುತ್ತಾರೆ. ಅವರನ್ನೆಲ್ಲ ಭಟ್ ಅವರು ಒಂದೊಂದು ವಾಕ್ಯದಲ್ಲಿ `ಡಿಸ್ ಮಿಸ್’ ಮಾಡುತ್ತ ಹೋಗುತ್ತಾರೆ. ಸಂಸ್ಕೃತ ಮತ್ತು ಮೂಲಕನ್ನಡವನ್ನು ಹಿತಮಿತವಾಗಿ ಬೆರೆಸಿ ಬಳಸಿದರೆ ಚೆನ್ನಾಗಿರುತ್ತದೆ ಎಂಬ ನೃಪತುಂಗನ ಮಾತು ಸಾಹಿತ್ಯಭಾಷೆಯ ಕುರಿತಾದ್ದು ಎಂದು ತಳ್ಳಿಹಾಕುತ್ತಾರೆ; ಶಿಕ್ಷಣಭಾಷೆ ಸಾಹಿತ್ಯಭಾಷೆಗೆ ಹತ್ತಿರ ಎಂಬ ಸತ್ಯ ಅವರಿಗೆ ಕಾಣಿಸುವುದಿಲ್ಲ. ಅಥವಾ ಶಿಕ್ಷಣಭಾಷೆ ಆಡುನುಡಿ ಆಗಿರಬೇಕು ಎನ್ನುವುದೇ ಅವರ ಆಶಯವಿದ್ದೀತು. ಆಡುನುಡಿಯಲ್ಲಿ ಮತ್ತು ಮೌಖಿಕ ಸಂಪ್ರದಾಯದಲ್ಲಿ ಶಿವಶರಣರು ರಚಿಸಿದ ಕನ್ನಡ ವಚನಗಳು ಹೇಗೆ ನೃಪತುಂಗನ ಸಲಹೆಗೆ ಹತ್ತಿರವಾಗಿವೆ ಎನ್ನುವುದನ್ನು ಭಟ್ ಅವರು ಪರಿಶೀಲಿಸಬೇಕು. ಈ ವಚನಗಳಿಂದ ಸಂಸ್ಕೃತ ಪದಗಳನ್ನು ಕಿತ್ತುಹಾಕಿ ಅವುಗಳ ಜಾಗದಲ್ಲಿ ಕನ್ನಡ ನುಡಿಗಳನ್ನು ಇರಿಸಿದರೆ ಅವು ಏನಾಗುತ್ತವೆ ಎನ್ನುವುದನ್ನು ಗಮನಿಸಬೇಕು. ನೃಪತುಂಗನ ನಂತರದ ಕವಿಗಳಲ್ಲಿ ಕೆಲವೇ ಮಂದಿಯನ್ನು ಬಿಟ್ಟರೆ ಉಳಿದವರೆಲ್ಲರೂ `ಮುತ್ತಂ ಮಣಿಯಂ’ ಕೋದಂತಿರುವ ಹದವಾದ ಶೈಲಿಯಲ್ಲಿ ಬರೆದವರು. ಇದೇ ಅಸಹನೆಯಲ್ಲಿ ಭಟ್ ಅವರು ಷ. ಶೆಟ್ಟರ “ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ” ಎಂಬ ವಿದ್ವತ್ಪೂರ್ಣ ಕೃತಿಯನ್ನೂ ತಳ್ಳಿಬಿಡುತ್ತಾರೆ-ಶೆಟ್ಟರ್ ಅದರಲ್ಲಿ ಪದಗಳ ಬಗ್ಗೆ ಮಾತಾಡುತ್ತಾರಲ್ಲದೆ ಭಾಷೆಯ ಬಗ್ಗೆ ಅಲ್ಲ ಎಂದು! ಇದು ನಿಜಕ್ಕೂ ಆಶ್ಚರ್ಯದ ಸಂಗತಿ; ಯಾಕೆಂದರೆ ಶೆಟ್ಟರ್ ಅವರ ಲಕ್ಷ್ಯವೇ ನಾಡು-ನುಡಿ; ಪದಗಳ ಪ್ರಸ್ತಾಪ ಬರುವುದು ಯಥಾವಕಾಶವಾಗಿ ಮಾತ್ರ. (ಶೆಟ್ಟರ್ ಅವರ ಪುಸ್ತಕದಲ್ಲಿ ಬ್ರಾಹ್ಮೀಲಿಪಿಯ ಪ್ರಸ್ತಾಪ ಬರುತ್ತದೆ, ಪ್ರಾಚೀಕಾಲದ ಅಕ್ಷರಸ್ಥ ಸಮಾಜ ನಿರ್ಮಾಣದ ಬಗ್ಗೆ ಅವರು ಚರ್ಚಿಸುತ್ತಾರೆ; ಮುಖ್ಯವಾಗಿ ಅವರ ಪುಸ್ತಕದ `ದಕ್ಷಿಣ ಭಾರತ ಬೆಸೆದ ಬ್ರಾಹ್ಮೀ ಲಿಪಿ’ ಎಂಬ ನಾಲ್ಕನೇ ಅಧ್ಯಾಯ ಸದ್ಯದ ವಿಷಯಕ್ಕೆ ಪ್ರಸ್ತುತವಾಗಿದೆ.) ಅತಿಸಂಸ್ಕೃತ ಮತ್ತು ಅತಿಕನ್ನಡ ಎರಡನ್ನೂ ನೃಪತುಂಗ ಉದಾಹರಣೆ ಸಮೇತ ವಿರೋಧಿಸಿದ. ಎಂದರೆ ಕನ್ನಡದಲ್ಲಿ ಇವೆರಡೂ ಮಿತಿಗಳಾಗಿದ್ದುವು. ಒಂದು ಮಿಲೆನಿಯಮ್ ನಂತರ ಮುದ್ದಣ ಕೂಡಾ ಇದನ್ನೇ ಪ್ರಸ್ತಾಪಿಸುತ್ತಾನೆ ಎಂದ ಮೇಲೆ ಈ ಎರಡೂ ಒಲವುಗಳು ಕನ್ನಡದಲ್ಲಿ ಯಾವತ್ತೂ ಹರಿದುಬಂದಿವೆ ಎಂದಾಯಿತು. ಹೆಚ್ಚಿನ ಜನರೂ ನೃಪತುಂಗನ ವಿವೇಕವನ್ನೇ ಮಾದರಿಯಾಗಿ ಸ್ವೀಕರಿಸಿದ್ದಾರೆ. ಕೆಲವರು ಮಾಡುತ್ತಿರಬಹುದಾದ ಅತಿಸಂಸ್ಕೃತದ ತಪ್ಪನ್ನು ಸರಿಪಡಿಸಲು ಇಂದು ಭಟ್ ಅವರು ಅತಿಕನ್ನಡದತ್ತ ಹೊರಳುತ್ತಿದ್ದಾರೆ ಅನಿಸುತ್ತದೆ. ಈ `ಸರಿಪಡಿಸುವಿಕೆ’ಯೇ ಇನ್ನೊಂದು ತಪ್ಪಾಗಬಾರದು.

ಸರ್ವಶಿಕ್ಷಣ ಕ್ರಾಂತಿಯ ಸಂದರ್ಭದಲ್ಲಿ ಬಹುಜನಸಮೂಹಕ್ಕೆ ವಿದ್ಯಾಭ್ಯಾಸ ದೊರಕಬೇಕಾದರೆ ಅವರು ಆಡುವ, ಅವರಿಗೆ ಅರ್ಥವಾಗುವ, ಅವರಿಗೆ ಗಾಬರಿಯನ್ನಾಗಲಿ, `ಕೀಳರಿಮೆ’ಯನ್ನಾಗಲಿ ಉಂಟುಮಾಡದ ದಿನಬಳಕೆಯ ಕನ್ನಡವನ್ನು ಮಾತ್ರವೇ ಬಳಸಬೇಕು ಎನ್ನುವುದು ಭಟ್ ಅವರ ಅಭಿಪ್ರಾಯ. ಆದರೆ ಅದನ್ನು ವಾದಿಸುವುದಕ್ಕಾಗಿ `ಸಂಸ್ಕೃತಪ್ರೀತಿ’ ಎಂಬ ಕಲ್ಪನೆಯೊಂದನ್ನು ನಿರ್ಮಿಸುವುದು ಬೇಡ. ಕನ್ನಡದ ಸಂಸ್ಕೃತೀಕರಣ ಯಾರಿಗೆ ಬೇಕು? ಯಾರಿಗೂ ಬೇಡ. ಪ್ರಕೃತ ಚರ್ಚೆಯಲ್ಲಿ ಭಾಗವಹಿಸುತ್ತಿರುವ ಎಲ್ಲರೂ ನಿಜವಾದ ಕನ್ನಡಿಗರೇ. ಕನ್ನಡದ ಹಿತವನ್ನೇ (ನಾಡು-ನುಡಿ-ಜನಪದ ಎಂದು ನೃಪತುಂಗ ಒಟ್ಟಾಗಿ ಅಂದಂತೆ) ಎಲ್ಲರೂ ಬಯಸುವುದು. ಅವರು ಬೇರೆ ಬೇರೆ ವರ್ಗಗಳಿಂದಲೂ ಜಾತಿಮತಗಳಿಂದಲೂ ಬಂದವರು ಇರಬಹುದು. ಆದರೆ ಅವರಿಗೆ ಒಟ್ಟಾರೆಯಾದ ಸಮೂಹದ ಕಲ್ಪನೆ ಇಲ್ಲ ಎಂದು ಭಟ್ ಅವರು ಅಂದುಕೊಳ್ಳಬಾರದು. ಕನ್ನಡದ ಅಸ್ತಿತ್ವ, ಬೆಳವಣಿಗೆ, ಘನತೆ ಗೌರವ, ಪ್ರೀತಿ ಎಲ್ಲರ ಮನಸ್ಸಿನಲ್ಲಿದೆ. ಈ ಸತ್ಯವನ್ನು ಮೊದಲು ಸ್ವೀಕರಿಸಿಕೊಳ್ಳಬೇಕು. ಸಂಸ್ಕೃತಪ್ರೀತಿ, ಇಂಗ್ಲಿಷ್ ಮೋಹ ಮುಂತಾದ ಮಾತುಗಳನ್ನಾಡಿದರೆ ಅಲ್ಲಿ ಸಂವಾದ ಇರುವುದಿಲ್ಲ, ಬರೇ ವಾದ ಮಾತ್ರ ಇರುತ್ತದೆ.

ನನ್ನ ಮಟ್ಟಿಗೆ ಹೇಳುವುದಾದರೆ, ನಾನೇನೂ ಸಂಸ್ಕೃತದ ಸನ್ನದು ಹಿಡಿದುಕೊಂಡು ಓಡಾಡುತ್ತಿಲ್ಲ. ಸಂಸ್ಕೃತಮಯವಾದ ಕನ್ನಡ ನನ್ನ ಒಲವಲ್ಲ. ಸಂಸ್ಕೃತ ನನಗೆ ಬರುವುದೂ ಇಲ್ಲ. ನಾನು ಕಲಿತುದು ಇಂಗ್ಲಿಷ್. ಆದರೆ ಒಬ್ಬ ಕನ್ನಡಿಗನಾಗಿ ಕನ್ನಡಿಗರೆಲ್ಲರ ಹಿತದೃಷ್ಟಿಯಿಂದ ನನಗೆ ಅನಿಸುವುದು ಕನ್ನಡಕ್ಕೆ ಏನೇನು ಬೇಕೋ ಅದನ್ನೆಲ್ಲಾ ಇರಿಸಿಕೊಳ್ಳಬೇಕು, ಎಲ್ಲಾ ಕಡೆಯಿಂದಲೂ ಪಡೆಯಬೇಕು, ಬೆಳೆಸಬೇಕು ಎಂದು. ಸದ್ಯ ಕನ್ನಡಕ್ಕೆ ಇಂಗ್ಲಿಷ್ ಪದಗಳು ನೀರಿನಂತೆ ಹರಿದುಬರುತ್ತಿವೆ. ಉನ್ನತ ಕ್ಷೇತ್ರಗಳಲ್ಲಿ ಕನ್ನಡ ಬಳಸುವವರು ಹೆಚ್ಚಾಗಿ ಇಂಗ್ಲಿಷ್ ಕಲಿತವರೂ ಆಗಿರುತ್ತಾರೆ, ಎಂದರೆ ದ್ವಿಭಾಷಿಗಳು. ಮುಂದಿನ ಕನ್ನಡದಲ್ಲಿ ಸಂಸ್ಕೃತದಂತೆಯೇ ಇಂಗ್ಲಿಷ್ ಪದಗಳು ತುಂಬಿದ್ದರೆ ಆಶ್ಚರ್ಯವಿಲ್ಲ. ಪದಗಳು ಮಾತ್ರವಲ್ಲದೆ ವಾಕ್ಯರಚನೆ ಕೂಡಾ ಇಂಗ್ಲಿಷ್ ಪ್ರಭಾವಕ್ಕೆ ಒಳಗಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ಯಾವುದನ್ನೂ ನಾವು ಯಾವ ವಿಧೇಯಕದಿಂದಲೂ ತಡೆದು ನಿಲ್ಲಿಸಲಾರೆವು. ಆದರೂ ಮುಂದೆ ಇಂಗ್ಲಿಷ್ ಮಿಶ್ರಿತ ಆಗುತ್ತದೆ ಎಂದುಕೊಂಡು ಇಂದು ನಾವು ಅಂಥ ಇಂಗ್ಲಿಷ್ ಮಿಶ್ರಿತ `ಕಂಗ್ಲಿಷ್’ ಕನ್ನಡವನ್ನು ಗಂಭೀರವಾಗಿ ಪ್ರಯೋಗಿಸುವಂತೆಯೂ ಇಲ್ಲ. ಕನ್ನಡದಲ್ಲಿ ಹಲವಾರು ಜ್ಞಾನಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೇಗೆ ಬರೆಯಬಹುದು ಎನ್ನುವ ಬಗ್ಗೆ ನನಗೆ ಕುತೂಹಲವಿದೆ. ಕನ್ನಡದ ದಿನಪತ್ರಿಕೆಯೊಂದರಲ್ಲಿ ನಾನು ಪ್ರತಿ ಶುಕ್ರವಾರವೂ ಬರೆಯುವ ಲೇಖನಗಳು ಇಂತಹದೊಂದು ಪ್ರಯೋಗ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಗಹನವಾಗಿ ಬರೆಯಲು ಶ್ರಮಿಸುತ್ತೇನೆ. ಇದು ಹಲವು ಓದುಗರಿಗೆ ಕ್ಲಿಷ್ಟವಾಗಿ ಕಂಡಿದೆ. ಆದರೆ ಇಂಥ ವಿಷಯಗಳ ಕುರಿತು `ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಹ ಕನ್ನಡದಲಿ’ ಹೇಗೆ ಬರೆಯಬೇಕೋ ನನಗೆ ತಿಳಿಯದು. ತಿಳಿದವರು ಬರೆಯಬೇಕೆಂದೇ ನನ್ನ ಆಸೆ. ನಾನಿಲ್ಲಿ ಹೇಳುತ್ತಿರುವುದು ಪ್ರಾಥಮಿಕ ಮಟ್ಟದ ಮಾಹಿತಿ ಬರಹಗಳಲ್ಲ, ಪ್ರಗಲ್ಭ ಮಟ್ಟದ ಬರಹಗಳನ್ನು. ನನ್ನ ಲೇಖನಗಳು ಪ್ರಾಥಮಿಕ ಮಟ್ಟದಲ್ಲಿ ಇರಬೇಕು ಎನ್ನುವವರು ನನ್ನ ಉದ್ದೇಶವನ್ನೇ ತಿಳಿದುಕೊಂಡಿಲ್ಲ. ಎಂದರೆ ಸಾರ್ವಜನಿಕ ಜಾಗಕ್ಕೆ ವೈಚಾರಿಕ ಮತ್ತು ವಿದ್ವತ್ಪೂರ್ಣ ಕನ್ನಡವನ್ನು ತರುವುದು ನನ್ನ ಉದ್ದೇಶ. ಅಂಥ ಕನ್ನಡವೇನೂ ಪದದಲ್ಲಾಗಲಿ ವಾಕ್ಯರಚನೆಯಲ್ಲಾಗಲಿ ತಯಾರಾಗಿ ಕೂತಿಲ್ಲ, ನಾವೇ ಅದನ್ನು ನಿರ್ಮಿಸಬೇಕಾಗಿದೆ. ಆಗ ಸಂಸ್ಕೃತದಿಂದ, ಇಲ್ಲವೇ ಇಂಗ್ಲಿಷ್ ನಿಂದ ಪಾರಿಭಾಷಿಕ ಪದಗಳನ್ನು ತರಬೇಕಾಗುತ್ತದೆ. ಕನ್ನಡದಲ್ಲಿ ಇಂಥ ಚರ್ಚೆಗಳು ಆಗದಿದ್ದರೆ ನಮ್ಮ ಕನ್ನಡ ಬೀದಿ ಮಟ್ಟದಲ್ಲೇ ಉಳಿಯುತ್ತದೆ, ಪ್ರಬುದ್ಧ ಮಟ್ಟಕ್ಕೆ ಎಂದೂ ಏರುವುದಿಲ್ಲ. ಆದ್ದರಿಂದ ಈ ಕೆಲಸವನ್ನು ಮುಂದೆಹಾಕುವಂತಿಲ್ಲ.

ಭಟ್ ಅವರು ಈ ಸಮಸ್ಯೆಯನ್ನು ಕಂಡಿದ್ದಾರೆ ಎಂದುಕೊಳ್ಳುತ್ತೇನೆ. ಯಾಕೆಂದರೆ ಭಾಷಾಂತರಕ್ಕೆ `ನುಡಿಮಾರು’, ಭಾಷೆಗೆ `ಸೊಲ್ಲು,’ ಉದಾಹರಣೆಗೆ `ಎತ್ತುಗೆ’ ಮೊದಲಾದ `ಅಚ್ಚಗನ್ನಡ’ ಪದಗಳನ್ನು ಅವರು ಸೂಚಿಸುತ್ತಿದ್ದಾರೆ. ಕೆ.ವಿ. ನಾರಾಯಣ ಅವರು ಪ್ರಶ್ನೆಗೆ `ಕೇಳ್ವಿ’, ಧಾತುವಿಗೆ `ತಿರುಳು’, ಕ್ರಿಯಾಪದಕ್ಕೆ `ಕೆಲಸದ ಪದ’, ನಾಮಪದಕ್ಕೆ `ಹೆಸರಿನ ಪದ’ ಮುಂತಾಗಿ ಬಳಸುವುದನ್ನು ನೀವು ಗಮನಿಸಿರಬಹುದು. ಆದರೆ ಇವೆಲ್ಲವೂ ಸಮುದ್ರಕ್ಕೆ ಕಲ್ಲೆಸೆದ ಹಾಗೆ. ಯಾವುದಾದರೂ ಗಂಭೀರವಾದ ಜ್ಞಾನಕ್ಷೇತ್ರದಲ್ಲಿ ಪುಸ್ತಕವೊಂದನ್ನು ಬರೆದು ನೋಡಿ: ಉದಾಹರಣೆಗೆ, ಮನೋವಿಜ್ಞಾನಕ್ಕೆ ಸಂಬಂಧಿಸಿ. ಆಗ ಈ ಸಮಸ್ಯೆಯ ನಿಜವಾದ ಸ್ವರೂಪ ಗೊತ್ತಾಗುತ್ತದೆ. ಆದರೆ ಭಟ್ ಮತ್ತು ನಾರಾಯಣ್ ಮಾಡುವ ಇಂಥ ಪ್ರಯತ್ನಗಳನ್ನು ನಾನು ಟೀಕಿಸುವುದಿಲ್ಲ. ನನಗೆ ಎಲ್ಲ ಪ್ರಯೋಗಗಳೂ ಸ್ವಾಗತಾರ್ಹ. ಯಾಕೆಂದರೆ ಎಲ್ಲಿಂದ ಏನು ಒಳ್ಳೆಯದು ಬರುತ್ತದೋ ಹೇಳುವಂತಿಲ್ಲ. ಜನ ಇವುಗಳನ್ನು ಸ್ವೀಕರಿಸಿದರೆ ಸರಿ; ಇಲ್ಲದಿದ್ದರೆ ಈಗ ಬಳಕೆಯಲ್ಲಿರುವ ಪದಗಳು ಮುಂದರಿಯುತ್ತವೆ. ಭಾಷಾಂತರ, ಅನುವಾದ, ತರ್ಜುಮೆ ಎಂಬ ಪದಗಳು ಈಗಾಗಲೇ ಇವೆ; `ನುಡಿಮಾರು’ ಕೂಡಾ ಸೇರಿಕೊಂಡರೆ ಅಭ್ಯಂತರವಿಲ್ಲ. ಹೆಚ್ಚು ಪರ್ಯಾಯ ಪದಗಳು ಇದ್ದಷ್ಟೂ ಆ ಭಾಷೆಯ ಶೈಲಿ ವೈವಿಧ್ಯ ಜಾಸ್ತಿಯಾಗುತ್ತದೆ. ಆದರೆ ಭಟ್ ಅವರ ಕಾರ್ಯಕ್ರಮ ಅದಲ್ಲ; ಭಾಷಾಂತರ ಮುಂತಾದ ಪದಗಳನ್ನು ತೆಗೆದುಹಾಕಿ ಅವುಗಳ ಜಾಗದಲ್ಲಿ `ನುಡಿಮಾರ’ನ್ನು ಕೂಡಿಸುವುದು. ಇದು reinventing the wheelಚಕ್ರವನ್ನು ಹೊಸದಾಗಿ ಕಂಡುಹುಡುಕಿದಂತೆ ಅಲ್ಲವೇ? ನಮ್ಮ ಶಕ್ತಿ ಹೀಗೆ ವ್ಯಯವಾಗಬೇಕೇ ಎನ್ನುವುದು ನನ್ನ ಪ್ರಶ್ನೆ. ಈಗ ಇರುವ ಪದಗಳನ್ನು ಪರಕೀಯವೆಂದು ನೋಡುವುದಕ್ಕಿಂತ ನಮ್ಮದೇ ಎಂದು ನೋಡಿದರೆ ಅದ್ಭುತವಾದ ಪರಿಣಾಮ ಮೂಡೀತು: ಯಾಕೆಂದರೆ ಪದಗಳು ಮತ್ತು ಭಾಷೆ ಯಾರು ಪ್ರೀತಿಸುತ್ತಾರೋ ಅವರದು; ಅವುಗಳ ಮೇಲೆ ಯಾರಿಗೂ ಏಕಸ್ವಾಮ್ಯವಿಲ್ಲ.

ಮನೋವಿಜ್ಞಾನಿ ಫ್ರಾಯ್ಡ್ ಆಗಲಿ, ತತ್ವಜ್ಞಾನಿಗಳಾದ ಇಮ್ಮಾನ್ಯುವೆಲ್ ಕಾಂಟ್ ಆಗಲಿ ಹುಸರ್ಲ್, ಹೈಡೆಗರ್ ಆಗಲಿ ತಮ್ಮ ಮಾತೃಭಾಷೆಯಾದ ಜರ್ಮನ್ ನಲ್ಲೆ ಬರೆದರು ಎನ್ನುವುದು ನಿಜ. ಅವರಿಗೂ ಈ ಕೆಲಸಕ್ಕೆ ಪೂರ್ವಸಿದ್ಧ ಜರ್ಮನ್ ಭಾಷೆಯೇನೂ ಇರಲಿಲ್ಲ; ತಾವು ಬರೆಯುತ್ತಲೇ ಅವರು ಭಾಷೆಯನ್ನೂ ಬೆಳೆಸಿದರು. ಇದು ಕನ್ನಡದಲ್ಲೂ ಆಗಬೇಕು ಎನ್ನುವುದೇ ನನ್ನ ಇರಾದೆ. ಎಂದರೆ ಮೂಲಚಿಂತನೆಗಳು ನಮ್ಮ ಜನರಿಂದ ನಮ್ಮ ಭಾಷೆಯಲ್ಲಿ ಹುಟ್ಟಿಬರಬೇಕು. ಈ ದಾರಿಯಲ್ಲಿ ನಾವು ಈಗಾಗಲೇ ಇರುವ ಸಂಪತ್ತನ್ನು ಬಳಸದೆ ಇರುವುದಕ್ಕೆ ಯಾವ ಕಾರಣವೂ ಇಲ್ಲ; ಈ ಸಂಪನ್ಮೂಲ ಅಚ್ಚಗನ್ನಡವಾದರೂ ಸರಿ, ಸಂಸ್ಕೃತ, ಅರೆಬಿಕ್, ಪರ್ಶಿಯನ್, ಮರಾಠಿ, ಇಂಗ್ಲಿಷ್ ಆದರೂ ಸರಿ. ಎಂದರೆ ನನ್ನ ಕಲ್ಪನೆಯ `ನಮ್ಮ ಕನ್ನಡ’ ಎಲ್ಲರನ್ನೂ ಒಳಗೊಳ್ಳುವಂಥದು; ಹೀಗೆ ಒಳಗೊಳ್ಳುವುದಕ್ಕೆ ಈಗಿರುವ ಕನ್ನಡದಿಂದ ಏನನ್ನೂ ಹೊರಹಾಕುವ ಅಗತ್ಯವಿಲ್ಲ, ಇನ್ನಷ್ಟನ್ನು ಒಳಗೊಂಡರೆ ಸರಿ.

ಸಂಸ್ಕೃತದಿಂದ ಆದ ಲಾಭನಷ್ಟ

ಸಂಸ್ಕೃತದ ಪ್ರಭಾವದಿಂದ ಕನ್ನಡಕ್ಕೆ ಆಗಿರುವ ಲಾಭನಷ್ಟಗಳೇನು? ಕನ್ನಡ ಎಂಬ ಭಾಷೆಯನ್ನು ನಾವಿಂದು ಅದರ ಒಟ್ಟಾರೆಯಾದ ಓಂಟಾಲಜಿಯಿಂದ (ಜೀವರೂಪದಿಂದ) ಪ್ರತ್ಯೇಕಿಸಿ ನೋಡುವುದೇ ಸಾಧ್ಯವಿಲ್ಲದಿರುತ್ತ ಇಂಥ ಪ್ರಶ್ನೆ ಬರೇ ಎಕಡಮಿಕ್ (ಅಧ್ಯಯನ) ಎಂದು ತಿಳಿಯಬೇಕಾಗುತ್ತದೆ. ಯಾಕೆಂದರೆ ಹಲವು ಕಾಲ ಒಂದೆಡೆ ನೆಲಸಿದ ಜನರಿಂದ ಕೆಲವರನ್ನು ಬೇರ್ಪಡಿಸಿ ನೀವು ಯಾವ ಮೂಲದವರು, ನಿಮ್ಮಿಂದ ನಮಗೆ ಆದ ಲಾಭ ಏನು, ಹೊರಟುಹೋಗಿ ಎಂದು ಹೇಳುವಂತೆ ಇದು. ಈ ಹಿಂದೆ ಹೇಳಿದಂತೆ ಇತಿಹಾಸಪೂರ್ವದಿಂದ ಕನ್ನಡವು ಸಂಸ್ಕೃತದ ಸಂಪರ್ಕ ಹೊಂದಿ ತನಗೆ ಬೇಕಾದ್ದನ್ನು ಪಡೆದಿದೆ. ಅಥವಾ ಒಂದೊಮ್ಮೆ ನಮಗದರ ಇತಿಹಾಸ ಗೊತ್ತಿದ್ದರೂ ಏನಾಯಿತು? ಉರ್ದು, ಪರ್ಶಿಯನ್, ಅರೆಬಿಕ್ ಮೂಲದ ಪದಗಳು ಕನ್ನಡಕ್ಕೆ ಹೇಗೆ ಯಾವಾಗ ಬಂದುವು ಎಂಬುದನ್ನು ನಾವು ಅಧ್ಯಯನದ ಮೂಲಕ ಕಂಡುಕೊಳ್ಳಬಹುದು. ಅಷ್ಟಕ್ಕೆ ಅವನ್ನು ಪ್ರತೇಕಿಸಿ ಉಚ್ಚಾಟಿಸುವಂತೆ ಇಲ್ಲ-ಅವು ಕನ್ನಡವನ್ನು ಪ್ರವೇಶಿಸಿದ ಸಂದರ್ಭಗಳು ಯಾವಾಗಲೂ ನಾವು ಹೆಮ್ಮೆಪಟ್ಟುಕೊಳ್ಳುವಂಥವು ಆಗಿರಲಿಲ್ಲ ಎನ್ನುವುದು ಗೊತ್ತಿದ್ದೂ. ಯಾಕೆಂದರೆ ಈಗ ಅವೆಲ್ಲವೂ ಕನ್ನಡದ್ದೇ ಆಗಿವೆ. ಹಿಂದೂಕುಶ್ ಎಂಬ ಪರ್ವತಾವಳಿಯೊಂದು ಮಧ್ಯ ಏಶಿಯಾದಲ್ಲಿ ಇದೆ: ಇದರ ಅರ್ಥ `ಹಿಂದುಗಳನ್ನು ಹತಗೈಯುವ ಸ್ಥಳ’ ಎಂಬುದಾಗಿ ನಾನೆಲ್ಲೋ ಓದಿದ ನೆನಪು. ಇದು ತಿಳಿದು ಈ ಹೆಸರನ್ನು ಬದಲಾಯಿಸಬೇಕು ಎನ್ನುವವ ನಾನಲ್ಲ. ಪದ ಇದ್ದಾಗಲೇ ನಮಗೆ ಇತಿಹಾಸ ದೊರಕುವುದು; ಬದಲಾಯಿಸಿದಾಗ ಇತಿಹಾಸದ ಸ್ಮೃತಿ ಮಾಯ್ದು ಹೋಗುತ್ತದೆ.

ಆದರೂ ಎಕಡೆಮಿಕ್ ದೃಷ್ಟಿಯಿಂದ ಈ ಪ್ರಶ್ನೆ ಕೇಳಿದರೆ, ನನಗನ್ನಿಸುವುದು ಲಾಭನಷ್ಟ ಎರಡೂ ಆಗಿವೆ. ಇದನ್ನು ತಿಳಿದುಕೊಳ್ಳಬೇಕಾದರೆ ಬೇರೆ ಭಾಷೆಗಳಲ್ಲಿ ಏನಾಗಿದೆ ಎಂದು ನೋಡುವುದು ಒಳ್ಳೆಯದು; ಅಲ್ಲದಿದ್ದರೆ ನಮಗೆ ನೋಟದ ಹರ (perspective) ಸಿಗುವುದಿಲ್ಲ. ಡೇನಿಷ್ ಭಾಷಾವಿಜ್ಞಾನಿ ಓಟ್ಟೋ ಯೆಸ್ಪರ್ಸನ್ (Otto Jesperson) ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಬಹಳ ಕೆಲಸ ಮಾಡಿದವ. ಅವನ Growth and Structure of English ಇಂದು ಒಂದು ಪ್ರಮಾಣಗ್ರಂಥವಾಗಿ ಸ್ವೀಕೃತವಾಗಿದೆ. ಭಾಷೆಯ ಕುರಿತಾಗಿ ಯಾವ ಆವೇಶವಿಲ್ಲದೆ ವಸ್ತುನಿಷ್ಠವಾಗಿ ಹೇಗೆ ಬರೆಯಬಹುದು ಎನ್ನುವುದಕ್ಕೆ ಈ ಕೃತಿಯೊಂದು ಮಾದರಿ. ಇದು ಇಪ್ಪತ್ತನೇ ಶತಮಾನದ ಆರಂಭಕಾಲದಲ್ಲಿ ಬಂದುದು ಎನ್ನುವುದನ್ನು ನೆನೆದರೆ ಆ ಕಾಲಕ್ಕೇ ಯೆಸ್ಪರ್ಸನ್ ಎಷ್ಟು ಮುಂದುವರಿದವನಿದ್ದ ಎನ್ನುವುದು ಗೊತ್ತಾಗುತ್ತದೆ. ಇಲ್ಲಿ ನಾನು ಪ್ರಕೃತ ವಿಷಯಕ್ಕೆ ಸಂಬಂಧಿಸಿದ ಒಂದೆರಡು ಸಂಗತಿಗಳನ್ನು ಮಾತ್ರ ನಮೂದಿಸಲು ಬಯಸುತ್ತೇನೆ.

ಇಂಗ್ಲಿಷ್ ನ ವೈಶಿಷ್ಟ್ಯಗಳಲ್ಲಿ ಯೆಸ್ಪರ್ಸನ್ ಪ್ರಕಾರ ಅದರಲ್ಲಿನ ಸಂಯುಕ್ತಾಕ್ಷರಗಳೂ ಒಂದು. ಇದು ಧ್ವನಿಮಟ್ಟದಲ್ಲಿ ಭಾಷೆಗೊಂದು ಶಕ್ತಿಯನ್ನು ತಂದುಕೊಡುತ್ತದೆ ಎನ್ನುತ್ತಾನೆ ಅವನು. ಪ್ರತಿಯೊಂದು ಸ್ವರ್ಜವೂ (syllable) ಸ್ವರದಲ್ಲಿ ಕೊನೆಗೊಂಡಾಗ ಆ ಭಾಷೆಗೆ ಲಾಲಿತ್ಯವೇನೋ ಬರಬಹುದು, ಆದರೆ ಗಟ್ಟಿತನ ಬರುವುದಿಲ್ಲ. ಮೂಲಕನ್ನಡದ ಬರಹ ಭಾಷೆಯಲ್ಲಿ ಸ್ವರ್ಜಗಳು ಹೆಚ್ಚಾಗಿ ಹೀಗೆ ಸ್ವರದಲ್ಲಿ ಕೊನೆಗೊಳ್ಳುತ್ತವೆ. ಅದರಲ್ಲಿ ಸಂಯುಕ್ತಾಕ್ಷರಗಳು ಬರುವುದು ಸ್ವಜಾತಿ ವ್ಯಂಜನಗಳು ಒತ್ತಾಗಿ ಬಂದಾಗ ಮಾತ್ರ: ಅಮ್ಮ, ಅಕ್ಕ, ಅಪ್ಪ; ಮತ್ತೆ ಅನುನಾಸಿಕಗಳ ಜತೆ: ತಂದೆ, ಇಂಪು, ಸಂತೆ; ಇಲ್ಲಿಗೆ ಮುಗಿಯಿತು. ಆದರೆ ಆಡುಮಾತಿನಲ್ಲಿ ಮಾತ್ರ ಸ್ವರಗಳು ಲೋಪವಾಗುವುದರಿಂದ ವಿಜಾತೀಯ ಸಂಯುಕ್ತಧ್ವನಿಗಳು ಕೂಡಾ ಬರುತ್ತವೆ: ಏನ್ ಮಾಡ್ತೀ? ಎಷ್ಟೊತ್ನಿಂದ ಅಳ್ತಾ ಇದ್ದಾನೆ, ಎಂದು ಮುಂತಾಗಿ. ಆದರೆ ಆಡುಮಾತಿನಲ್ಲೂ ಅಚ್ಚಗನ್ನಡದಲ್ಲಿ ಯಾವ ಪದವೂ ಸಂಯುಕ್ತಾಕ್ಷರದಲ್ಲಿ ಸುರುವಾಗುವುದಿಲ್ಲ. ಸಂಸ್ಕೃತದ ತತ್ಸಮ ಪದಗಳು ಕನ್ನಡಕ್ಕೆ ಬಂದಾಗ ಈ ಪರಿಸ್ಥಿತಿ ಬದಲಾಯಿತು: ಪ್ರತ್ಯೇಕ, ಸ್ವರ್ಗ, ಕ್ಷಿಪ್ರ ಮುಂತಾದ ಕಡೆ ವಿಜಾತೀಯ ಸಂಯುಕ್ತಾಕ್ಷರಗಳೂ ಇವೆ, ಅವು ಪದಾದಿಯಲ್ಲೂ ಬಂದಿವೆ. ಯೆಸ್ಪರ್ಸನ್ ವಿಜಾತೀ ಸಂಯುಕ್ತಾಕ್ಷರಗಳು ಹೇಗೆ ಭಾಷೆಗೆ (ಇಂಗ್ಲಿಷ್ ಗೆ) ಶಕ್ತಿ ಕೊಡುತ್ತವೆ ಎನ್ನುವುದರ ಬಗ್ಗೆ ಹೇಳುತ್ತಾನೆ. ಅವನ ಮಾತು ಸರಿಯಾದರೆ, ಇಂಥ ಸಂಯುಕ್ತ ಧ್ವನಿಗಳನ್ನು ಸಂಸ್ಕೃತ ಕನ್ನಡಕ್ಕೆ ನೀಡಿ ಕನ್ನಡದ ಶಕ್ತಿವರ್ಧನೆಗೆ ಕಾರಣವಾಗಿದೆ ಎನ್ನಬೇಕು. ಇನ್ನು ಪದಾಂತ್ಯದಲ್ಲಿ ಸ್ವರ ಬಳಸುವುದು ಕನ್ನಡದ ಜಾಯಮಾನ; ಇಂಥ ಸ್ವರಾಂತ್ಯ ಕೇಳಲು ಲಲಿತ ಅನಿಸಿದರೂ ಭಾಷೆಯ ಶಕ್ತಿಯನ್ನು ಕುಂದಿಸುತ್ತದೆ ಎಂದು ಯೆಸ್ಪರ್ಸನ್ ಹೇಳುತ್ತಾನೆ. ಅವನ ಮಾತು ನನಗೆ ನಿಜವೆನ್ನಿಸುತ್ತದೆ. ಇಂಥ ಕಡೆ ಸಾಧ್ಯವಿದ್ದಲ್ಲೆಲ್ಲ ಅರ್ಧಾಕ್ಷರಗಳನ್ನು (ಹಲಂತಗಳನ್ನು) ವೈವಿಧ್ಯಕ್ಕಾದರೂ ಬಳಸಬೇಕು ಎನ್ನುವುದು ನನ್ನ ಸಲಹೆ. ಉದಾಹರಣೆಗೆ,
`ಇಂಗ್ಲೆಂಡಿನಲ್ಲಿ’ ಎನ್ನುವುದನ್ನು `ಇಂಗ್ಲೆಂಡ್ ನಲ್ಲಿ’ ಎನ್ನಬಹುದು. ಇದರಲ್ಲೊಂದು ಆಧುನಿಕತೆ ಇದೆ ಕೂಡ ಹಲವು ಹೆಸರುಗಳಲ್ಲಿ ನಾವು ಈ ಪರಿಷ್ಕಾರವನ್ನು ಕಾಣುತ್ತೇವೆ: ರಮೇಶ್, ಗಣೇಶ್, ಕುಮಾರ್ ಮುಂತಾಗಿ.

ಇಂಗ್ಲಿಷ್ ನ ಸಮೃದ್ಧಿ ಇನ್ನೆಲ್ಲಕ್ಕಿಂತಲೂ ಹೆಚ್ಚು ಪರ್ಯಾಯ ಪದಗಳಲ್ಲಿ ಕಾಣಿಸುತ್ತವೆ ಎನ್ನುತ್ತಾನೆ ಯಸ್ಪರ್ಸನ್:

More than in anything else the richness of the English language manifests itself in its great number of synonyms, whether we take this word in its strict sense of words of exactly the same meaning or in the looser sense of words with nearly the same meaning. It is evident that the latter class must be the most valuable, as it alloow speakers to express subtle shades of thought. Juvenile does not signify the same thing as youthful, ponderous as weightyportion as sharemiserable as wretched. (Growth and Struture of the English Language, 9th edition. Bristol: Indian Branch of OUP, 1938, pp. 124-25.)

ಯೆಸ್ಪರ್ಸನ್ ಇನ್ನೂ ಬಹಳಷ್ಟು ಉದಾಹರಣೆಗಳನ್ನು ಕೊಡುತ್ತಾನೆ, ಹಾಗೂ ಇಂಥ ಪರ್ಯಾಯಪದ ದ್ವಯಗಳಲ್ಲಿನ ಲ್ಯಾಟಿನ್ ಮೂಲದ ಪದಗಳಿಗೂ ಜರ್ಮಾನಿಕ್ ಮೂಲದವಕ್ಕೂ ಇರುವ ಸೂಕ್ಷ್ಮ ಅರ್ಥವ್ಯತ್ಯಾಸಗಳನ್ನು ವಿಶ್ಲೇಷಿಸುತ್ತಾನೆ. ಸಂಸ್ಕೃತ ತತ್ಸಮಗಳ ಕಾರಣ ಕನ್ನಡದ ಶಬ್ದಭಂಡಾರವೂ ಬೆಳೆದಿದೆ; ಕನ್ನಡದಲ್ಲೂ ಪರ್ಯಾಯ ಪದಗಳು ನಿರ್ಮಾಣವಾಗಿವೆ. ಉದಾಹರಣೆಗೆ:

ದೇವಸ್ಥಾನ-ಗುಡಿ
ದೇಶ-ನಾಡು
ಭಾಷೆ-ನುಡಿ
ಅರಣ್ಯ-ಕಾಡು
ಪರ್ವತ-ಬೆಟ್ಟ
ಸ್ವಪ್ನ-ಕನಸು
ದೇಹ-ಒಡಲು
ಶ್ವಾಸ-ಉಸಿರು
ಮುಖ-ಮೋರೆ
ಕಡಲು-ಸಮುದ್ರ
ಹುಲಿ-ವ್ಯಾಘ್ರ

ಇಂಥ ಅನೇಕ ಉದಾಹರಣೆಗಳನ್ನು ಕೊಡುತ್ತ ಹೋಗಬಹುದು; ಈ ಯುಗಳಗಳಲ್ಲಿ ಕೆಲವನ್ನು ಎಲ್ಲಾ ಸಂದರ್ಭಗಳಲ್ಲೂ ಪರ್ಯಾಯವಾಗಿ ಬಳಸುವುದಕ್ಕೆ ಬರುತ್ತದೆ, ಕೆಲವರ ನಡುವೆ ಅರ್ಥವ್ಯತ್ಯಾಸಗಳು ಇರುವುದರಿಂದ ಅವುಗಳ ಬಳಕೆ ಸಂದರ್ಭಗಳನ್ನು ಹೊಂದಿಕೊಂಡಿರುತ್ತವೆ. ಪರ್ಯಾಯಪದಗಳ ಅರ್ಥಸಾಮ್ಯ ಹತ್ತಿರವಾದಲ್ಲಿ ಒಂದೇ ಪದವನ್ನು ಉಪಯೋಗಿಸಿ ಬೇಸರ ಬರುವಲ್ಲಿ ಅವು ಈ ಬೇಸರವನ್ನು ತೊಲಗಿಸುತ್ತವೆ. ಪರ್ಯಾಯಪದಗಳು ಕಡಿಮೆಯಿರುವ ಭಾಷೆಯಲ್ಲಿ ವೈವಿಧ್ಯವಿರದೆ ಏಕತಾನತೆ ಇರುತ್ತದೆ. ಭಟ್ ಅವರ ಪ್ರೋಗ್ರಾಮ್ ಪರ್ಯಾಯ ಪದಗಳನ್ನು ಹೆಚ್ಚಿಸುವುದಾದರೆ ಒಳ್ಳೆಯದು, ಕಡಿಮೆಗೊಳಿಸುವುದಾದರೆ ಅಲ್ಲ.

ಕೆಲವೊಂದು ಕಡೆ ಪರ್ಯಾಯಪದಗಳ ನಡುವೆ ಪ್ರಮಾಣ ಅಥವ ಇನ್ನಿತರ ವ್ಯತ್ಯಾಸ ಇರಬಹುದು: ಪರ್ವತ ಎನ್ನುವುದು ಬೆಟ್ಟಕ್ಕಿಂತ ದೊಡ್ಡದು ಎನಿಸುತ್ತದೆ. ಆದ್ದರಿಂದ ಹಿಮಾಲಯ ಪರ್ವತ ಎನ್ನುವುದು ಹಿಮಾಲಯ ಬೆಟ್ಟ ಎನ್ನುವುದಕ್ಕಿಂತ ಚೆನ್ನಾಗಿರುತ್ತದೆ. ಪರ್ವತ, ಬೆಟ್ಟ, ಘಟ್ಟ, ಗುಡ್ಡ ಮುಂತಾದುವು ಹೀಗೆ ಯಾವ ಯಾವುದೋ ನವಿರಾದ ವ್ಯತ್ಯಾಸಗಳನ್ನು ಸೂಚಿಸುತ್ತವೆ. ಇವುಗಳಲ್ಲಿ ಯಾವುದನ್ನು ಕಿತ್ತುಹಾಕಿದರೂ ಈ ನವಿರು ಹೊರಟುಹೋಗುತ್ತದೆ. ಇಂಥ ಅನೇಕ ಪರ್ಯಾಯ ಪದಗಳಿವೆ. ಇವುಗಳಲ್ಲಿ `ಹೆಚ್ಚಿನ ಮೌಲ್ಯ’ ಸಂಸ್ಕೃತ ಮೂಲದವಕ್ಕೆ ಇರಬಹುದು. ಇದಕ್ಕೆ ನಾವು ಕರುಬುವ ಅಗತ್ಯವಿಲ್ಲ, ಆ ಪದಗಳೂ ನಮ್ಮವೇ ಎಂದುಕೊಂಡರೆ. ಹಾಗೂ ಈ ಪದಗಳು ವಿದ್ಯಾಕ್ಷೇತ್ರದಲ್ಲೇ ಹೆಚ್ಚು ಕಾಣಿಸಬಹುದು. ಹೇಗಿದ್ದರೂ ಸರ್ವಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯೆ ಸರ್ವರಿಗೂ ದೊರಕುವ ಕಾರಣ ಎಲ್ಲರೂ ಇವನ್ನು ಕಲಿತುಕೊಳ್ಳುತ್ತಾರೆ. ಆದ್ದರಿಂದ ಮುಂದೆ ಈ ಪದಗಳು ಕೆಲವೇ ಕೆಲವರ ಸೊತ್ತು ಎನಿಸುವುದಿಲ್ಲ. ಆದರೆ ವರ್ಗ ಸಮಾಜ ಮುಂದೆಯೂ ಹೀಗೇ ಇರುತ್ತದೆ ಎಂದಾದರೆ ನಾವು ಚಿಂತಿಸುವ ಅಗತ್ಯವಿದೆ. ವರ್ಗ ಭೇದವನ್ನು ತೊಡೆದುಹಾಕುವಲ್ಲಿ ಅಥವಾ ಕಡಿಮೆಮಾಡುವಲ್ಲಿ ಈ ಹಿತಮಿತವಾದ ಕನ್ನಡ ಸಹಕಾರಿಯಾಗಬಹುದು.

ಗ್ರೀಕ್ ಮತ್ತು ಲ್ಯಾಟಿನ್ ಅಭಿಜಾತ ಭಾಷೆಗಳಿಂದ ಇಂಗ್ಲಿಷ್ ಪದಗಳನ್ನು ಸ್ವೀಕರಿಸಿದಾಗ ಉಂಟಾದ ಕೆಲವು ಸಮಸ್ಯೆಗಳನ್ನೂ ಯೆಸ್ಪರ್ಸನ್ ಚರ್ಚಿಸುತ್ತಾನೆ. ಇವುಗಳಲ್ಲಿ ಒಂದು ನಾವು ಈಗಾಗಲೇ ನೋಡಿದ ಸ್ಟ್ರೆಸ್ ಗೆ ಸಂಬಂಧಿಸಿದುದು: ಮೂಲ ಜರ್ಮಾನಿಕ್ ನಲ್ಲಿ ಸ್ಟ್ರೆಸ್ ದ್ವಿತೀಯ ಅಕ್ಷರದ ಮೇಲೆ ಬರುತ್ತಿತ್ತು; ಇದು ನೆನಪಿಟ್ಟುಕೊಳ್ಳುವುದಕ್ಕೆ ಸುಲಭ. ಆದರೆ ಗ್ರೀಕ್ ಮತ್ತು ಲ್ಯಾಟಿನ್ ನಲ್ಲಿ ಅದು ದ್ವಿತೀಯ ಅಕ್ಷರದ ಮೇಲೆಯೇ ಬರಬೇಕೆಂದೇನೂ ಇಲ್ಲ; ಕೆಲವು ಕಡೆ ಇನ್ನಿತರ ಅಕ್ಷರಗಳ ಮೇಲೂ ಬರುತ್ತದೆ. ಪದಗಳನ್ನು ಕೊಂಡಾಗ ಇಂಗ್ಲಿಷ್ ಇವುಗಳ ಸ್ಟ್ರೆಸ್ಸನ್ನು ಬದಲಾಯಿಸದೆ ಹಾಗೇ ಇಟ್ಟುಕೊಂಡಿತು. ಆದ್ದರಿಂದ ಇಂದು ಇಂಗ್ಲಿಷ್ ನಲ್ಲಿ ಸ್ಟ್ರೆಸ್ ವ್ಯವಸ್ಥೆ ಸುಲಭವಾಗಿಲ್ಲ; ಈ ವಿದೇಶೀಮೂಲದ ಪದಗಳು ಆಡುಗರಿಗೆ ಒಂದು ಸಮಸ್ಯೆಯೇ ಸರಿ. ಈ ಸಮಸ್ಯೆಯನ್ನು ನಾವು ಬೇಕಾದರೆ ಕನ್ನಡದಲ್ಲಿನ ಮಹಾಪ್ರಾಣಗಳ ಮತ್ತು ಋಕಾರ, ಷಕಾರದ ಸಮಸ್ಯೆಗಳಿಗೆ ಹೋಲಿಸಬಹುದು.

ಗ್ರೀಕ್ ಮತ್ತು ಲ್ಯಾಟಿನ್ ನಿಂದ ಪಡೆದ ಪದಗಳು ಇಂಗ್ಲಿಷ್ ನ ಪರ್ಯಾಯಪದಗಳನ್ನು ಹೆಚ್ಚಿಸಿವೆ ಎನ್ನುತ್ತಲೇ ಯೆಸ್ಪರ್ಸನ್ ಇವುಗಳು ಕೆಲವೊಮ್ಮೆ ಮೂಲ ಇಂಗ್ಲಿಷ್ ಪದಗಳ ಅಪಮೌಲ್ಯಕ್ಕೆ ಕಾರಣವಾಗಿರುವುದನ್ನೂ ಉಲ್ಲೇಖಿಸುತ್ತಾನೆ; ಇದು ಭಟ್ ಅವರು ಹೇಳುವ ಕನ್ನಡದಲ್ಲಿನ `ಅತಿಸಂಸ್ಕೃತ’ ಸಮಸ್ಯೆಗೆ ಸಮನಾದುದು. ಯೆಸ್ಪರ್ಸನ್ ನ ಮಾತುಗಳು ಇವು:

The worst thing, however, that can be said against the words that are occupying us here is their difficulty and the undemocratic character which is a natural outcome of their difficulty. A great many of them will never be used or understood by anybody that has not had a classical education. There are usually no association of ideas between them and the ordinary stock of words, and no likeness in root or in the formative elements to assist the memory. We have here none of those invisible threads to that knit words together in the human mind. Their great number in the language is therefore apt to form or rather to accentuate class divisions, so that a man’s culture is largely judged by the extent to which he is able correctly to handle these hard words in speech and in writing-certainly not the highest imaginable standard of a man’s worth. (p. 133)

ಇಂಥ ಕಠಿಣ ಶಬ್ದಗಳಲ್ಲಿ ಈಗ ಚಾಲ್ತಿಯಲ್ಲಿಲ್ಲದ ಕೆಲವು ವಿದ್ವಾಂಸರಿಗೆ ಕೂಡಾ ಸರಿಯಾಗಿ ಅರ್ಥವಾಗುವಂತಿಲ್ಲ ಎಂದು ಯೆಸ್ಪರ್ಸನ್ ಅಡಿಟಿಪ್ಪಣಿಯಲ್ಲಿ ಸೇರಿಸುತ್ತಾನೆ. ಆದರೆ ವಿದೇಶೀಮೂಲದ ಪದಗಳ ಲೆಕ್ಕದಲ್ಲಿ ಜನಸಾಮಾನ್ಯರ ಬಳಕೆಯ cry ಅಥವಾ  crown  ಎಂಬ ಪದಗಳಿಗೆ ಬೇರೇ ಸ್ಥಾನವಿದೆ ಎನ್ನುತ್ತಾನೆ ಯೆಸ್ಪರ್ಸನ್, ಯಾಕೆಂದರೆ ಇಂಥವು ಚಾರಿತ್ರಿಕವಾಗಿ ಆಂಗ್ಲೋ-ಸಾಕ್ಸನ್ ಅಲ್ಲವಾದರೂ ಜನಮನದಲ್ಲಿ ದೇಸಿಯೆಂದೇ ಗುರುತಿಸಲ್ಪಡುತ್ತವೆ.

ಹಳೆಯ ಸರಳ ಪತ್ರಿಕಾಶೈಲಿಗೂ ಆಧುನಿಕ ಪಂಡಿತ ಶೈಲಿಗೂ ಇರುವ ವ್ಯತ್ಯಾಸದತ್ತ ಅವನು ನಮ್ಮ ಗಮನ ಸೆಳೆಯುತ್ತಾನೆ. ಉದಾಹರಣೆಗೆ:

ಹಳತು: A great crowd came to see.
ಹೊಸತು: A vast concourse was assembled to witness.
ಹಳತು:   Great fire

ಹೊಸತು: Disastrous conflagration

ಇಂಥ ವಿದ್ವತ್ ಪ್ರದರ್ಶನ ತಮಾಷೆಗೂ ಕಾರಣವಾಗುತ್ತದೆ ಎನ್ನುವುದಕ್ಕೆ ಅನೇಕ ನಿಜ ಸನ್ನಿವೇಶಗಳ ಉದಾಹರಣೆಗಳನ್ನು ಯೆಸ್ಪರ್ಸನ್ ಕೊಡುತ್ತಾನೆ. ಇಂಗ್ಲಿಷ್ ಜನರಿಗೆ ಈ ಸಮಸ್ಯೆಯ ಅರಿವಿದ್ದು ಅವರೂ ಭಾಷೆಯನ್ನು ಸರಳಗೊಳಿಸಲು ಆಗಿಂದಾಗ್ಗೆ ಯತ್ನಿಸುತ್ತಲೇ ಇದ್ದಾರೆ ಎನ್ನುವುದನ್ನೂ ಯೆಸ್ಪರ್ಸನ್ ಹೇಳುತ್ತಾನೆ. ಆಂಗ್ಲೋ-ಸ್ಯಾಕ್ಸನ್ ಪದಗಳಲ್ಲಿ ಕೆಲವೊಂದನ್ನು ಪಾರಿಭಾಷಿಕ ಪದಗಳಾಗಿ ಬಳಸಿದರೆ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದೂ ಹೇಳುತ್ತಾನೆ. ಎಂದರೆ ಭಟ್ ಅವರ ಆಶಯಗಳು ಕೆಲವು ಯೆಸ್ಪರ್ಸನ್ ನ ವಿಚಾರಕ್ಕೆ ಹತ್ತಿರವಾಗಿವೆ. ಆದರೆ ವ್ಯತ್ಯಾಸವೆಂದರೆ, ಯೆಸ್ಪರ್ಸನ್ ಗ್ರೀಕ್ ಮತ್ತು ಲ್ಯಾಟಿನ್ ಮೂಲದ ಈ ಅಭಿಜಾತ ಪದಗಳನ್ನು ಕಿತ್ತುಹಾಕಬೇಕೆಂದು ಹೇಳುವುದಿಲ್ಲ; ಹಾಗೆ ಮಾಡುವುದೀಗ ಸಾಧ್ಯವಿಲ್ಲ ಎನ್ನುವುದು ಅವನಿಗೆ ಗೊತ್ತಿದೆ. ಅವುಗಳನ್ನು ಸಂದರ್ಭ ಅರಿತು ಬಳಸಬೇಕು ಎನ್ನುವುದು ಅವನ ಸೂಚನೆ. ಇದೇ ಮಾತು ಕನ್ನಡಕ್ಕೂ ಸರಿ ಎನಿಸುತ್ತದೆ.

ಈ ವಿಷಯದಲ್ಲಿ ಅವನ ಉಪಸಂಹಾರವನ್ನು ಇಲ್ಲಿ ಸ್ವಲ್ಪ ದೀರ್ಘವಾಗಿ ಎತ್ತಿಕೊಡುವುದು ಉಚಿತವಾದೀತು:

To sum up: the classical words adopted since the Renaissance have enriched the English language very greatly and have especially increased its number of synonyms. But it is not every ‘enrichment’ that is an advantage, and this one comprises much that is really superfluous, or worse than superfluous, and has, moreover, stunted the growth of native formations. The international currency of many words is not a full compensation for the undemocratic character they give to the vocabulary. While the composite character of the language gives variety and to some extent precision to the style of the greatest masters, on the other hand, it encourages an inflated turgidity of style. Without siding completely with Milton’s teacher Alexander Gill, who says that classical studies have done the English language more harm than ever the cruelties of the Danes or the devastations of the Normans, we shall probably be near the truth if we recognize in the latest influence from the classical languages ‘something between a hindrance and a help’. (p. 139)

ಯೆಸ್ಪರ್ಸನ್ ಒಬ್ಬ ಡೇನಿಷ್ ಆದ್ದರಿಂದಲೋ ಏನೋ ಅವನಿಗೆ ಇಂಗ್ಲಿಷ್ ಭಾಷೆಯನ್ನು ಸಮತೂಕದಲ್ಲಿ ನೋಡಲಿಕ್ಕೆ ಸಾಧ್ಯವಾಗಿದೆ. ಅವನ ಈ ಅಭಿಪ್ರಾಯಗಳು ಕನ್ನಡದ ಮಟ್ಟಿಗೂ ಸರಿಯೆನಿಸುತ್ತವೆ. ಈ ಸಮಚಿತ್ತ ಇಂದು ನಮಗೆ ಅಗತ್ಯವಾಗಿದೆ.

ಯೆಸ್ಪರ್ಸನ್ ಹೇಳುವ ಪಾಂಡಿತ್ಯ ಪ್ರದರ್ಶನದ ಸಮಸ್ಯೆ ಯಾವಾಗ ಬರುತ್ತದೆ ಎಂದರೆ ಬರೆಯುವವನ ಅಥವ ಮಾತಾಡುವವನ ಉದ್ದೇಶ ವಿಷಯವಾಗಿರದೆ, ಪಂಡಿತನಂತೆ ತೋರಿಸಿಕೊಳ್ಳಬೇಕು ಎನ್ನುವ ಇರಾದೆಯಾದಾಗ. ಮಾತು ಬರಹ ವಿಷಯಕೇಂದ್ರಿತ ಆಗಿರಬೇಕು, ಸ್ವಕೇಂದ್ರಿತವಲ್ಲ. ವಿಷಯವೇ ನಿಮ್ಮ ಆಸಕ್ತಿಯಾದಾಗ ನಿಮಗೆ ಸಹಜವೆನಿಸುವ ಪದಗಳನ್ನೂ ವಾಕ್ಯಬಂಧಗಳನ್ನೂ ನೀವು ಆರಿಸಿಕೊಳ್ಳುತ್ತೀರಿ; ಅದರಲ್ಲಿ ಒಂದು ತರದ ಅನಿವಾರ್ಯತೆ ಇರುತ್ತದೆ. ಈ ಅನಿವಾರ್ಯತೆ ಇಲ್ಲದಿದ್ದಾಗಲೇ ಆಭಾಸ ಎನಿಸುವುದು. ಈ ಅನಿವಾರ್ಯತೆ ನಾವು ಎಲ್ಲಿ ಯಾವ ಮಟ್ಟದಲ್ಲಿ ಮಾತಾಡುತ್ತೇವೆ, ಬರಯುತ್ತೇವೆ ಎನ್ನುವುದನ್ನು ಹೊಂದಿಕೊಂಡಿರುತ್ತದೆ.

ಒಳಭಾಷೆ ಹೊರಭಾಷೆ

ಯು.ಆರ್. ಅನಂತಮೂರ್ತಿಯವರು `ಹಿತ್ತಿಲ ಭಾಷೆ,’ `ಚಾವಡಿ ಭಾಷೆ’ ಎಂದು ಕನ್ನಡ ಮತ್ತು ಇಂಗ್ಲಿಷ್ ನಡುವೆ ವ್ಯತ್ಯಾಸವೊಂದನ್ನು ಮಾಡಿಕೊಂಡಾಗ ಅವರ ಮಾತು ಕೆಲವು ವಲಯಗಳಲ್ಲಿ ಸ್ವಲ್ಪ ಅಚ್ಚರಿ ಉಂಟುಮಾಡಿತು. ಆದರೂ ಈ ವ್ಯತ್ಯಾಸದಲ್ಲಿ ಒಂದು ವಾಸ್ತವತೆ ಇದೆ ಎಂದು ನನಗನಿಸುತ್ತದೆ, ಕನ್ನಡ-ಇಂಗ್ಲಿಷ್ ದ್ವಂದ್ವಕ್ಕೆ ಸಂಬಂಧಿಸಿ ಮಾತ್ರವಲ್ಲ, ಕನ್ನಡಕ್ಕೆ ಮಾತ್ರವೇ ಸಂಬಂಧಿಸಿ ಕೂಡಾ. ಈ ವ್ಯತ್ಯಾಸವನ್ನು ನಾನು ಒಳಭಾಷೆ, ಹೊರಭಾಷೆ ಎಂದು ಕರೆಯುತ್ತೇನೆ. ಯಾವುದೇ ಹೊರ ಪ್ರಭಾವಕ್ಕೆ ಒಳಗಾದ ಜೀವಂತ ಭಾಷೆಯಲ್ಲೂ ಇಂಥ ಪ್ರಭೇದ ಸೂಕ್ಷ್ಮವಾಗಿಯಾದರೂ ಇರುತ್ತದೆ. ಕನ್ನಡಕ್ಕೆ ಸಂಬಂಧಿಸಿ ಹೇಳುವುದಾದರೆ, ಭಟ್ ಅವರು ಸೂಚಿಸುವ `ಕನ್ನಡದ್ದೇ ಆದ’ ಪದಗಳು ಕನ್ನಡದ ಒಳಭಾಷೆಗೆ ಸೇರಿದುವು, ಸಂಸ್ಕೃತ ಮೂಲದ ಪದಗಳು ಹೊರಭಾಷೆಗೆ ಸೇರಿದುವು. (ನೃಪತುಂಗ ಇದನ್ನೇ ದೇಸಿ ಮತ್ತು ಮಾರ್ಗ ಎಂದು ಶೈಲಿಗೆ ಹೊಂದಿಸಿ ಹೇಳಿದ.) ಈ ವ್ಯತ್ಯಾಸವನ್ನು ನಾವು ಅಕ್ಷರಶಃ ತೆಗೆದುಕೊಳ್ಳದೆ ನಮ್ಮ ಭಾವಲೋಕದ ಹಿನ್ನೆಲೆಯಾಗಿ ತೆಗೆದುಕೊಳ್ಳಬೇಕು, ಹಾಗೂ ಈ ದ್ವಂದ್ವಗಳು ಕಪ್ಪು-ಬಿಳುಪಿನಂತೆ ಯಾವಾಗಲೂ ಪರಸ್ಪರ ನಿರಾಕರಿಸುವಂಥವೂ ಅಲ್ಲ, ಎಣ್ಣೆ-ಸೀಗೆಯಂತೆ ವಿರೋಧಿಗಳೂ ಅಲ್ಲ. ಅದೊಂದು ವರ್ಣಸಂಕಿರಣದಂತೆ, ಒಂದಾಗಿದ್ದೂ ಭಿನ್ನ, ಭಿನ್ನವಾಗಿದ್ದೂ ಒಂದು.

ಏನು ನಾನು ಹೇಳುತ್ತಿರುವುದು? ಇಷ್ಟೆ: ಅಚ್ಚಗನ್ನಡದ ಪದಗಳು, ಶೈಲಿ, ಗಾದೆಮಾತು, ನುಡಿಗಟ್ಟು ಮುಂತಾದುವು ನಮ್ಮ ಒಳಭಾಷೆಗೆ, ಎಂದರೆ ನಮ್ಮ ಜೀವಕ್ಕೆ ಅತ್ಯಂತ ಹತ್ತಿರವಾಗಿ ಇರುವಂಥವು, ಅವು ನಮ್ಮ ಕಿಬ್ಬೊಟ್ಟೆಗೆ, ಮರ್ಮಕ್ಕೆ, ರಹಸ್ಯಕ್ಕೆ ಸೇರಿದಂಥವು. ಸಂಸ್ಕೃತದಿಂದ ಪಡೆದ ಪದಗಳನ್ನು ನಾವಿನ್ನೂ ಆ ರೀತಿ ಸಂಪೂರ್ಣವಾಗಿ ಪರಿಗಣಿಸಿಲ್ಲ. ಭಟ್ ಅವರು ನೀಡುವ ದೃಷ್ಟಿಕೋನಕ್ಕಿಂತ ಬೇರೆಯಾದ ದೃಷ್ಟಿಕೋನ ಇದು. ಹೀಗೆ ನೋಡಿದಾಗ ನಮಗೆ ಯಾಕೆ ಪುಸ್ತಕ, ಶಾಲೆ, ಪರೀಕ್ಷೆ, ಅಧ್ಯಾಪಕ, ವಿದ್ಯಾರ್ಥಿ ಮುಂತಾದ ಪದಗಳು ಸಂಸ್ಕೃತಮೂಲದವು ಎನ್ನುವುದು ಗೊತ್ತಾಗುತ್ತದೆ. ಯಾಕೆಂದರೆ ಇವೆಲ್ಲ ನಮ್ಮದೇ ಮೂಲದಿಂದ ನೋಡಿದರೆ ಹೊರಭಾಷೆಗೆ ಸೇರಿದಂಥವು. ನಮ್ಮ `ಹೊರಗೆಲಸ’ಗಳಿಗೆಲ್ಲ ಹೊರಭಾಷೆಯ ಪದಗಳನ್ನು ಉಪಯೋಗಿಸುತ್ತೇವೆ: ಈ ಪದಗಳು ಇಂಥ ಹೊರಗೆಲಸಗಳ ಜತೆಗೇ ಬಂದವು ಕೂಡಾ. ಈಗಲೂ ಈ ಪದ್ಧತಿ ಮುಂದುವರಿಯುತ್ತಿದೆ. ನಮ್ಮ ವೈಚಾರಿಕ ಕೆಲಸಗಳಿಗೆ ಹೊರಭಾಷೆಯನ್ನೇ ಬಳಸುತ್ತೇವೆ; ಒಳಭಾಷೆಯನ್ನು ನಾವಿನ್ನೂ ನಮ್ಮ ಭಾವಲೊಕದ ಹಿತ್ತಿಲಾಗಿ, ಒಳಮನೆಯಾಗಿ, ಅಂತರಂಗವಾಗಿ ಇರಿಸಿಕೊಂಡಿದ್ದೇವೆ. ಹೊರಭಾಷೆಯೆಂದರೆ ಅದು ಪರಕೀಯವಾಗಿದೆ ಎಂದಲ್ಲ; ಹೊರಕಾರ್ಯಗಳಿಗೆ, ಸಾರ್ವಜನಿಕವಾಗಿ ಬಳಸುವ ಭಾಷೆ ಎಂದು ತಿಳಿಯಬೇಕು.

ದೀರ್ಘ ಇತಿಹಾಸವಿರುವ ಯಾವುದೇ ಭಾಷೆಯಲ್ಲೂ ಈ ಒಳ-ಹೊರ ಭೇದಗಳು ಇದ್ದೇ ಇರುತ್ತವೆ: ಇಂಗ್ಲಿಷ್ ನಲ್ಲಿ ಆಂಗ್ಲೋ-ಸಾಕ್ಸನ್ (ಜರ್ಮಾನಿಕ್) ಮೂಲದ ಪದಗಳು ಅದರ ಒಳಭಾಷೆಗೆ ಸೇರಿದವು; ಗ್ರೀಕ್, ಲ್ಯಾಟಿನ್, ಫ್ರೆಂಚ್ ಮುಂತಾದ ಭಾಷೆಗಳಿಂದ ಸ್ವೀಕರಿಸಿದ ಪದಗಳು ಹೊರಭಾಷೆಗೆ ಸೇರಿದವು. ಆದ್ದರಿಂದಲೇ ಶಿಕ್ಷಣಮಾಧ್ಯಮದಲ್ಲಿ ಹಾಗೂ ಉನ್ನತಮಟ್ಟದಲ್ಲಿ ಹೊರಭಾಷೆಯ ಇಂಗ್ಲಿಷ್ ಬಳಕೆಯಾಗುತ್ತಿರುವುದು.

ಒಳಭಾಷೆಯೊಂದು ಹೇಗೆ ಸಂಪೂರ್ಣವಾಗಿ ಒಳಸೇರಿರುವುದು ಸಾಧ್ಯ ಎನ್ನುವುದಕ್ಕೆ ಭಟ್ ಮತ್ತು ನನ್ನ ಮನೆಮಾತಾಗಿರುವ ದಕ್ಷಿಣ ಕನ್ನಡ ಕಡೆಯ ಹವ್ಯಕ ಒಂದು ದೊಡ್ಡ ಉದಾಹರಣೆ. ಇದು ಹವ್ಯಕರ ಅಂತರಂಗದ ಭಾಷೆ: ಎಷ್ಟರ ಮಟ್ಟಿಗೆ ಎಂದರೆ ಹವ್ಯಕರು ಇದನ್ನು ಹವ್ಯಕರಲ್ಲದವರ ಜತೆ ಮಾತಾಡುವುದಿಲ್ಲ. ಆದ್ದರಿಂದ ಹವ್ಯಕಸಮಾಜದ ಹೊರಗಿನ ಸ್ಥಳಗಳಲ್ಲಿ ಹವ್ಯಕರು ಇದನ್ನು ಬಳಸುವುದೂ ಇಲ್ಲ.

ಈ ಹಿಂದೆಯೇ ಹೇಳಿದಂತೆ ಇದರ ಅರ್ಥ ಸಂಸ್ಕೃತಪದಗಳು ಕನ್ನಡ ಒಳಭಾಷೆಯನ್ನು ಸೇರಿಯೇ ಇಲ್ಲ ಎಂದಲ್ಲ. ಮತ್ತು ಸಮಾಜ ಹೆಚ್ಚೆಚ್ಚು ಗಣತಂತ್ರೀಯವಾದಂತೆ ಈ ಒಳ-ಹೊರ ಭಿನ್ನತೆಗಳು ಕಡಿಮೆಯಾಗಬಹುದು; ಆದರೆ ಅವು ಸಂಪೂರ್ಣ ಅಳಿಸಿಹೋಗುತ್ತವೆ ಎನ್ನಲಾಗದು. ಮನುಷ್ಯರಿಗೆ `ಸಮೂಹ’ ಕಲ್ಪನೆ ಮತ್ತು ಹಿತ್ತಿಲ ಕಲ್ಪನೆಗಳು ಇರುವ ತನಕ ಅವರು ಅದರೊಳಗೆ ಸಲ್ಲುವಂಥ ನುಡಿಯನ್ನು ಬೇರೆಯೇ ಆಗಿ ಇಟ್ಟುಕೊಳ್ಳುತ್ತಾರೆ.

ಈ ನುಡಿಗಳು ಒಳಭಾಷೆಗೆ ಸೀಮಿತವಾಗಿರುವುದರಿಂದಲೇ ಅವನ್ನು ನಾವು ಸಾರ್ವಜನಿಕ ಕ್ಷೇತ್ರದಲ್ಲಿ ಬಳಸುವುದು ಕಡಿಮೆ; ಇದೇ ಕಾರಣ ಅವನ್ನು ಪಾರಿಭಾಷಿಕ ಪದಗಳಾಗಿ ಬಳಸಲೂ ಹಿಂಜರಿಯುತ್ತೇವೆ. ಆದ್ದರಿಂದಲೇ `ನುಡಿಮಾರು,’ `ಸೊಲ್ಲು,’ `ಕೇಳ್ವಿ’ ಮುಂತಾದ ಪದಗಳಿಗೆ ಅಲ್ಲಿ ಸದ್ಯ ಅವಕಾಶ ಕಡಿಮೆ. ಪಾರಿಭಾಷಿಕ ಪದಗಳಿಗೆ ಸಂಸ್ಕೃತಮೂಲದ ಯಾವುದೇ ಪದಗಳೂ ನಡೆಯುತ್ತವೆ ಎನ್ನುವವ ನಾನಲ್ಲ. ಎಂಜಿನಿಯರ್, ಡಾಕ್ಟರ್, ಪೊಲೀಸ್ ಮುಂತಾದ ಈಗಾಗಲೇ ಬಳಕೆಯಲ್ಲಿರುವ ಪದಗಳನ್ನು ತೆಗೆದುಹಾಕುವ ಅಗತ್ಯವಿಲ್ಲ; ಇದೇ ಮಾತು ಅನುವಾದ, ಭಾಷೆ, ಉದಾಹರಣೆ ಮುಂತಾದ ಪದಗಳಿಗೂ ಸರಿ. ಅವನ್ನು ಈಗಿರುವಂತೆಯೇ ಇಟ್ಟುಕೊಳ್ಳುವುದು ಒಳ್ಳೆಯದು. ಎಂದರೆ, ಹೊರಭಾಷೆ ಸ್ವಲ್ಪ `ವಿದೂರತೆ’ಯನ್ನು ಬಯಸುತ್ತದೆ. ನಮ್ಮ ಒಳನುಡಿಗಳನ್ನು ಒಮ್ಮೆಲೇ ಆ ಕಾರ್ಯಕ್ಕೆ ಬಳಸುವುದಕ್ಕೆ ಕಷ್ಟವಾಗುತ್ತದೆ, ಯಾಕೆಂದರೆ ಜನ ಅದನ್ನು ಸ್ವೀಕರಿಸುವುದಿಲ್ಲ.

ಇದೇ ಮಾತು ಶೈಕ್ಷಣಿಕ ಕನ್ನಡಕ್ಕೂ ಅನ್ವಯವಾಗುತ್ತದೆ: ಯಾಕೆಂದರೆ ನಾವು ಒಪ್ಪಲಿ ಬಿಡಲಿ, ಶಿಕ್ಷಣವೇ ಒಂದು ವಿದೂರತೆ ಅರ್ಥಾತ್ ಏಲಿಯನೇಶನ್ (alienation). ಇಂಗ್ಲಿಷ್ ನ ನೇಚರ್ (nature) ಮತ್ತು ನರ್ಚರ್ (nurture) ವಿಭಿನ್ನತೆ ಇದನ್ನು ಸೂಚಿಸುತ್ತದೆ. ಹಾಗಿದ್ದರೂ ಶೈಕ್ಷಣಿಕ ಭಾಷೆ ಜನಭಾಷೆಗೆ ಆದಷ್ಟೂ ಹತ್ತಿರ ಇರಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಅದು ಸಂಪೂರ್ಣವಾಗಿ ಒಳಭಾಷೆಯಾಗಿರಬೇಕು ಎನ್ನುವುದನ್ನು ಒಪ್ಪುವುದಿಲ್ಲ: ಒಳಭಾಷೆ, ಹೊರಭಾಷೆಗಳ ನಡುವೆ ಹೊಕ್ಕುಬಳಕೆ ಬೇಕು, ಆದರೆ ಒಂದು ಇನ್ನೊಂದರ ಅಗತ್ಯವನ್ನು ಪೂರೈಸಲಾರದು. ಈ ಹೊಕ್ಕುಬಳಕೆಗೆ ಎರಡೂ ಕಡೆಯಿಂದ ಪ್ರಯತ್ನ ಅಗತ್ಯ: `ಅತಿಸಂಸ್ಕೃತ’ವನ್ನು ತೊರೆದಂತೆಯೇ `ಅತಿಕನ್ನಡ’ವನ್ನೂ (ಎಂದರೆ ಹಳೆಕನ್ನಡವನ್ನು) ಕಮ್ಮಿಮಾಡುವುದು. ಎರಡನ್ನೂ ಹಿತಮಿತವಾಗಿ ಬಳಸುವುದು. ನನ್ನ ಮನಸ್ಸಿನಲ್ಲಿರುವುದು ಹೆಚ್ಚೊಂದು `ಪೊಲೀಸಿಂಗ್’ ಇರದ ಮಿಶ್ರಕನ್ನಡ. ಸಹಸ್ರ ವರ್ಷಗಳ ಹಿಂದೆ ನೃಪತುಂಗ ಹೇಳಿದ್ದೂ ಇದೇ ಎಂದು ನನ್ನ ಗ್ರಹಿಕೆ.

ನುಡಿ ಮತ್ತು ಬರಹ

ಒಂದೆಡೆ ಕನ್ನಡದ ಜನಸಮೂಹಕ್ಕೆಲ್ಲಾ ಅನ್ವಯವಾಗುವಂಥ `ಸಂಸ್ಕೃತರಹಿತ’ ಕನ್ನಡವನ್ನು ಶಿಕ್ಷಣಮಾಧ್ಯಮ ಮಾಡಬೇಕೆಂಬ ಭಟ್ ಅವರು ಅದೇ ಉಸಿರಲ್ಲಿ ಪ್ರಾದೇಶಿಕ ಭಿನ್ನತೆಗಳ ಬಗ್ಗೆಯೂ ಮಾತಾಡುತ್ತಾರೆ. ಕನ್ನಡ ಪತ್ರಿಕೆಗಳು ಆಯಾ ಪ್ರದೇಶಗಳ  ಉಪಭಾಷೆಗಳಲ್ಲಿ ಆವೃತ್ತಿಗಳನ್ನು ತರಬೇಕೆನ್ನುವುದು ಅವರ ಆಶಯವಿರುವಂತೆ ಅನಿಸುತ್ತದೆ. ಪ್ರಾದೇಶಿಕ ಭಿನ್ನತೆಗಳ ಜತೆಗೇ ವರ್ಗಭಿನ್ನತೆಗಳೂ ಸೇರಿದರೆ ಹಲವು ಕನ್ನಡಗಳಾಗುತ್ತವೆ. ಹಾಗಿದ್ದರೆ ಶಾಲೆ ಕಾಲೇಜುಗಳಲ್ಲಿ ಯಾವ ತರದ ಕನ್ನಡ ಇರಬೇಕು ಎನ್ನುವ ಪ್ರಶ್ನೆ ಏಳುತ್ತದೆ. ಸಂಸ್ಕೃತ ಪದಗಳನ್ನು ಕಿತ್ತುಹಾಕಿದ ಮಾತ್ರಕ್ಕೆ ಈ ಪ್ರಶ್ನೆ ಇಲ್ಲದಾಗುವುದಿಲ್ಲ.

ಪ್ರಾದೇಶಿಕ ಪ್ರಭೇದಗಳ ಬಗ್ಗೆ ಎಲ್ಲರಿಗೂ ಗೌರವಾದರ ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಭಿನ್ನತೆಗಳಿದ್ದಲ್ಲೆಲ್ಲಾ ವರ್ಗಭಿನ್ನತೆಗಳೂ ಇವೆ. ಈ ಕೆಲವೇ ದಶಕಗಳ ಹಿಂದೆ ಒಂದು ಪ್ರದೇಶದವರು ಇನ್ನೊಂದು ಪ್ರದೇಶದವರ ಮಾತನ್ನು, ಒಂದು ವರ್ಗದವರು ಇನ್ನೊಂದು ವರ್ಗದವರ ಮಾತನ್ನು ಗೇಲಿ ಮಾಡುವುದಿತ್ತು. ಇಂಥ ಮನೋಧರ್ಮ ಈಗಲೂ ಕೆಲವರಲ್ಲಿ ಇದ್ದೀತು. ಆದರೆ ಸಮಾಜ ಹೆಚ್ಚೆಚ್ಚು ಗಣತಂತ್ರೀಯವಾಗುತ್ತ ಹೋದಂತೆ, ಚಲನೆ, ಸಂಹವನ, ಬೆರಕೆ ಜಾಸ್ತಿಯಾದಂತೆ ಈ ಪ್ರಬೇಧಗಳೂ ಕಡಿಮೆಯಾಗುತ್ತವೆ, ಇವುಗಳ ಕುರಿತಾದ ಪೂರ್ವಗ್ರಹಗಳೂ ಇಲ್ಲದಾಗುತ್ತವೆ. ಸಂಪರ್ಕಹೀನತೆ ಮತ್ತು ಸಂಸರ್ಗಹೀನತೆಗಳೇ ಮುಖ್ಯವಾಗಿ ಪೂರ್ವಗ್ರಹಗಳಿಗೆ ಕಾರಣ.

ಪ್ರಾದೇಶಿಕ ಉಪಭಾಷೆಗಳನ್ನು ಇಷ್ಟಪಡುವವರಲ್ಲಿ ನಾನೂ ಒಬ್ಬ. ಕೆಳವರ್ಗಗಳ ಕನ್ನಡದ ಸೊಗಸನ್ನೂ ನಾನು ಮೆಚ್ಚುತ್ತೇನೆ. ಭಟ್ ಅವರು ಹೆಸರಿಸುವ ಕೆಲವು ಲೇಖಕರು ನನ್ನ ಮಿತ್ರರು, ಅವರ ಕೃತಿಗಳನ್ನು ನಾನು ಓದಿದ್ದೇನೆ, ಮೆಚ್ಚಿದ್ದೇನೆ ಮತ್ತು ಅವುಗಳ ಕುರಿತು ಬರೆದಿದ್ದೇನೆ ಸಹಾ. ಈ ನನ್ನ ಒಲವೇನೂ ಈಚಿನದಲ್ಲ. ಆಳುವ ಭಾಷೆ (=ವರ್ಗ) ಹೇಗೆ ಬುಡಕಟ್ಟಿನ ಜನರ ಮಾತನ್ನು ಸದ್ದಿಲ್ಲದೆ ಮಾಡಬಹುದು ಎನ್ನುವುದನ್ನು ಸಾಂಕೇತಿಕವಾಗಿ ಚಿತ್ರಿಸುವ ಬ್ರಿಟಿಷ್ ನಾಟಕಕಾರ ಹೆರಾಲ್ಡ್ ಪಿಂಟರ್ ನದೊಂದು ನಾಟಕವಿದೆ: The Mountain Languageಕೆಲವು ವರ್ಷಗಳ ಹಿಂದೆ ಈ ನಾಟಕವನ್ನೋದಿ ಪ್ರಭಾವಿತನಾಗಿ ನಾನಿದನ್ನು ನನ್ನ `ಸಾಮಾಜಿಕ ಭಾಷಾವಿಜ್ಞಾನ’ ಕೋರ್ಸಿನ ಉಪಪಠ್ಯವಾಗಿ ಉಪಯೋಗಿಸಿದ್ದಿದೆ. ಯಾವುದೇ ಭಾಷೆಯನ್ನೂ ಇಡಿಯಾಗಿ  ಅರಿಯಬೇಕೆನ್ನುವವರು ಅದನ್ನು ಬಿಡಿಬಿಡಿಯಾಗಿಯೊ ಅರಿಯಬೇಕು. ಭಾಷಾವಿಜ್ಞಾನದ ಮೊದಲ ಪಾಠವೇ ಭಾಷೆಯೆನ್ನುವುದು ಇಲ್ಲ, ಇರುವುದು ಉಪಭಾಷೆಗಳು ಎನ್ನುವುದು. ಯಾಕೆಂದರೆ ಭಾಷೆಯೆನ್ನುವುದೊಂದು ಅಮೂರ್ತ ಕಲ್ಪನೆ. ಇಂಗ್ಲಿಷ್ ಎಲ್ಲಿದೆ? ಹಿಂದಿ ಎಲ್ಲಿದೆ? ಕನ್ನಡ ಎಲ್ಲಿದೆ? ಹುಡುಕಿದರೆ ನಮಗೆ ಸಿಗುವುದು ಪ್ರಾದೇಶಿಕ ಮೂರ್ತರೂಪಗಳು ಮಾತ್ರ. ಇಲ್ಲೂ ಕೆಲವು ವಿಶೇಷಗಳಿವೆ: ಗಡಿಪ್ರಾಂತದ ಕನ್ನಡಗಳು ಒಳಪ್ರಾಂತದ ಕನ್ನಡಗಳಿಗಿಂತ ಭಿನ್ನವಾಗಿರುತ್ತವೆ. ಗಡಿಪ್ರಾಂತದ ಕನ್ನಡಗಳಲ್ಲಿ ತಮಿಳು, ಮಲೆಯಾಳ, ತೆಲುಗು, ಮರಾಠಿ ಪ್ರಭಾವಗಳಿರುತ್ತವೆ. ಇನ್ನು ಕರ್ನಾಟಕದ ಒಟ್ಟಾರೆ ಜನಸಂಖ್ಯೆಯನ್ನು ತೆಗೆದುಕೊಂಡರೆ `ಅಚ್ಚಕನ್ನಡಿಗರು’ ಬಹುಶಃ ಅಲ್ಪಸಂಖ್ಯಾತರಾಗುತ್ತಾರೆ; ಹಲವಾರು ಕನ್ನಡಿಗರ ಮನೆಮಾತು ಕನ್ನಡವೇ ಅಲ್ಲ! ಆದ್ದರಿಂದಲೇ `ಕನ್ನಡ’ ಕನ್ನಡವೇ ಆಗಿರದೆ `ಕನ್ನಡಂಗಳ್’ ಆಗಿರುವುದು. ಕನ್ನಡದ ಯಾವುದೇ ಪ್ರಾದೇಶಿಕ ಪ್ರಭೇದವನ್ನು ಶಿಕ್ಷಣ ಮಾಧ್ಯಮವಾಗಿ ಆರಿಸಿಕೊಂಡರೂ ಉಳಿದವನ್ನು ಬಿಟ್ಟುಬಿಡಬೇಕಾಗುತ್ತದೆ. ಬರೇ ಮಹಾಪ್ರಾಣಗಳನ್ನು ಮತ್ತು ಷಕಾರಾದಿಗಳನ್ನು ಕೈಬಿಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ಆದ್ದರಿಂದ ಬರಹದ ಭಾಷೆ (ಶಿಕ್ಷಣಮಾಧ್ಯಮದ ಹಾಗೂ ಉನ್ನತ ಮಟ್ಟದ ಭಾಷೆ) ನಿಜದಲ್ಲಿ ಯಾರೂ ಮನೆಯಲ್ಲೋ ಬೀದಿಯಲ್ಲೋ ಮಾತಾಡುವಂತೆ ಇರದಿದ್ದರೆ ಅದೊಂದು ದೊಡ್ಡ ವಿಷಯವಲ್ಲ. ಲೋಕದ ಎಲ್ಲಡೆಯೂ ಹೀಗೇ ಇರುತ್ತದೆ. ಯಾಕೆಂದರೆ ಅದೊಂದು `ಅಮೂರ್ತತೆ’, ಅಬ್ ಸ್ಟ್ರಾಕ್ಷನ್, ಆದರ್ಶ. ಯಾವುದೇ ಭಾಷೆಯನ್ನೂ ಶಿಕ್ಷಣಮಾಧ್ಯಮಕ್ಕೆ ಆರಿಸಿಕೊಂಡಾಗ ಅದು ಅಕ್ಷರಶಃ ಅರ್ಥದಲ್ಲಿ `ಸಂಸ್ಕೃತ’ ಆಗುತ್ತದೆ (ಸಂಸ್ಕೃತ ಎಂದರೆ ಭಟ್ಟಿಯಿಳಿಸಿಕೊಂಡದ್ದು, ಪರಿಷ್ಕರಿಸಿದ್ದು ಎಂಬ ಅರ್ಥ). ಹಾಗೆಂದು ಅದು ಯಾರಿಗೂ ಅರ್ಥವಾಗದ ವಿಚಿತ್ರ ಪ್ರಭೇದವೂ ಅಲ್ಲ, ಆಗಿರಬಾರದು. ಯಾವುದೇ ಉಪಭಾಷೆಯನ್ನು ನಾವು ಶಿಕ್ಷಣ ಮಾಧ್ಯಮವಾಗಿ ತೆಗೆದುಕೊಂಡಾಗಲೂ ಅದು ಆವಾಗಲೇ ತನ್ನ ಸಂದರ್ಭದಿಂದ ದೂರ ಬರುತ್ತದೆ: ಯಾಕೆಂದರೆ ಶಿಕ್ಷಣಭಾಷೆ ಅನೇಕ ಜ್ಞಾನಶಾಖೆಗಳನ್ನು ನಿಭಾಯಿಸಬೇಕಾಗುತ್ತದೆ.

ಶಾಸ್ತೀಯ ಭಾಷೆ, ಶಾಸ್ತ್ರಭಾಷೆ, ಸಾಹಿತ್ಯಭಾಷೆ

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆಯೇನೋ ಸಿಕ್ಕಿತು; ಇದೊಂದು ರೀತಿಯ `ಕನ್ನಡ ರಾಷ್ಟ್ರೀಯತೆ’ಯ ಫಲ. ಆದರೆ ಕನ್ನಡ ಶಾಸ್ತ್ರೀಯ ಭಾಷೆ ಎಂದು ಹಿಂದಕ್ಕೆ ಹೋಗುವುದಲ್ಲ, ಕನ್ನಡ `ಶಾಸ್ತ್ರಭಾಷೆ’ಯೂ ಆಗಬೇಕಾಗುತ್ತದೆ. ಶಾಸ್ತ್ರಭಾಷೆಯೆಂದರೆ ಅದು ಶಿಕ್ಷಣದ ಭಾಷೆ ಎಂದು ಅರ್ಥ. ಹಾಗೆಂದು ಪ್ರಾಥಮಿಕ ಹಂತದಲ್ಲೇ ಉನ್ನತಮಟ್ಟದ ಕನ್ನಡವನ್ನು ಬಳಸಬೇಕು ಎಂದು ಹೇಳುತ್ತಿಲ್ಲ. ಆದರೆ ಅಂತಿಮ ಗುರಿ ಅದಾಗಿರಬೇಕು. ಆರಂಭದಲ್ಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳದಿದ್ದರೆ ಇದು ಕೈಗೂಡದು.

ಸಾಹಿತ್ಯದಲ್ಲಿ ಉಪಭಾಷೆಗಳು ಸಾಧ್ಯವಿರುತ್ತ ಶಿಕ್ಷಣದಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಕೇಳುವವರಿದ್ದಾರೆ; ಭಟ್ ಅವರು ಆ ಪ್ರಶ್ನೆ ಕೇಳದಿದ್ದರೂ ಅವರ ವಾದದ ಹಿಂದೆ ಆ ನಿಲುವು ಇದೆ. ದೇವನೂರು ಮಹಾದೇವ, ಕುಂವಿ, ರಾಘವೇಂದ್ರ ಪಾಟೀಲ, ಕವಿ ಸಿದ್ಧಲಿಂಗಯ್ಯ ತಮ್ಮ ಕೃತಿಗಳಲ್ಲಿ ಬಳಸುವ ಕನ್ನಡವನ್ನು ಯಾಕೆ ಶಿಕ್ಷಣಮಾಧ್ಯಮವಾಗಿ ಮಾಡಬಾರದು ಎನ್ನುವುದು ಈ ಪ್ರಶ್ನೆ. ಈ ಭಾಷೆಗಳನ್ನು ಶಾಲೆಕಾಲೇಜುಗಳಲ್ಲಿ ಮಾತಿನಲ್ಲಿ ಬಳಸಬಾರದು ಎಂದೇನೂ ಇಲ್ಲ. ಆದರೆ ಪಠ್ಯಮಾಧ್ಯಮವಾಗಿ ಬಳಸುವುದು ಸಾಧ್ಯವೇ? ಅಮೇರಿಕನ್ ಕತೆಗಾರ ಮಾರ್ಕ್ ಟ್ವೇನ್ ನ ಬರಹಗಳು ಲೋಕಪ್ರಸಿದ್ಧ. ಅವನ Adventures of Hucklebury Finn ಎಂಬ ಕಾದಂಬರಿ ಒಂದು ಆಧುನಿಕ ಕ್ಲಾಸಿಕ್. ಈ ಇಡೀ ಕಾದಂಬರಿಯ ನಿರೂಪಣೆ ಒಂದು ಅಮೇರಿಕನ್ ಇಂಗ್ಲಿಷ್ ಉಪಭಾಷೆಯಲ್ಲಿದೆ. ಹಾಗೂ ಕೃತಿಯಲ್ಲಿ ಮಾರ್ಕ್ ಟ್ವೇನ್ ಮಿಸ್ಸಿಸ್ಸಿಪಿ ನದಿಯ ಉದ್ದಕ್ಕೂ ಕಾಣಿಸುವ ಇತರ ಐದಾರು ಉಪಭಾಷೆಗಳನ್ನು ತರುತ್ತಾನೆ; ಸೂಕ್ಷ್ಮವಾಗಿ ಓದಿದವರಿಗೆ ಇವುಗಳ ವ್ಯತ್ಯಾಸ ಗೊತ್ತಾಗುತ್ತದೆ. ಮಾರ್ಕ್ ಟ್ವೇನ್ ಸ್ಪೆಲ್ಲಿಂಗ್ ನಲ್ಲಿ ವ್ಯತ್ಯಾಸ ತಂದು ಆದಷ್ಟೂ ಮಟ್ಟಿಗೆ ಈ ಉಪಭಾಷೆಗಳನ್ನು ಧ್ವನಿಸಲು ಯತ್ನಿಸುತ್ತಾನೆ. `ಹಕ್ಲ್ ಬರಿ ಫಿನ್’ನ ಮೆಚ್ಚದ ಓದುಗರೇ ಇಲ್ಲ ಎನ್ನಬಹುದು. ನಾನಂತೂ ಅದಕ್ಕೆ ಮಾರುಹೋಗಿದ್ದೇನೆ. ಆದರೂ ಅದರಲ್ಲಿ ಬರುವ ಯಾವುದೇ ಉಪಭಾಷೆಯೂ ಅಮೇರಿಕದಲ್ಲಾಗಲಿ ಇನ್ನೆಲ್ಲಿಯೇ ಆಗಲಿ ಶಿಕ್ಷಣಮಾಧ್ಯಮವಾಗಿ ಬಂದಿಲ್ಲ.

ಕಾರಣ ಸ್ಪಷ್ಟ. ಕತೆ ಕಾದಂಬರಿಗಳು ಇದ್ದುದನ್ನು ಇದ್ದಹಾಗೆ `ಚಿತ್ರಿಸಲು’ ಪ್ರಯತ್ನಿಸುತ್ತವೆ. ಆದ್ದರಿಂದ ಅವುಗಳ ಭಾಷೆಗೆ ಸಂದರ್ಭ ಬದ್ಧತೆ, ಸ್ಥಳೀಯತೆ, ಸ್ವಕೀಯತೆ ಮುಂತಾದ ಗುಣಗಳು ಅಗತ್ಯವಾಗುತ್ತವೆ. ಆದರೆ ಶಿಕ್ಷಣಭಾಷೆ ಒಂದು ತರದ ಪ್ರಭಾಷೆ (metalanguage), ಅದು ಇತರೆಲ್ಲ ಸಂಗತಿಗಳ ಬಗ್ಗೆ ವೈಚಾರಿಕವಾಗಿ ಹೇಳುವಂಥದು; ಯಾವುದನ್ನೂ ಚಿತ್ರಿಸುವಷ್ಟಕ್ಕೆ ಸೀಮಿತವಾಗುವುದಿಲ್ಲ, ಎಲ್ಲವನ್ನೂ ವಿವರಿಸುತ್ತದೆ, ವಿಮಶರ್ಿಸುತ್ತದೆ, ಅನ್ವೇಷಿಸುತ್ತದೆ. ಭಟ್ ಅವರಾಗಲಿ ಇನ್ನು ಯಾರೇ ಆಗಲಿ, ಕನ್ನಡವನ್ನು ಶಿಕ್ಷಣಕ್ಕೆ ರೂಪಿಸುವಾಗ ಅವರು ಅದನ್ನು ಸಶಕ್ತಗೊಳಿಸಬೇಕಾಗುತ್ತದೆ; ಹೀಗೆ ಮಾಡುತ್ತಲೇ ಅದು ಸಾಮಾನ್ಯಜನಪದದಿಂದ ಸ್ವಲ್ಪಮಟ್ಟಿಗೆ ದೂರವಾಗಿಯೂ ಆಗುತ್ತದೆ. ಈ ತರ್ಕದಿಂದ ಯಾರೂ ತಪ್ಪಿಸಿಕೊಳ್ಳಲಾರರು.

ಓಟ್ಟೋ ಯೆಸ್ಪರ್ಸನ್ ಇಂಗ್ಲಿಷ್ ನಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಪದಗಳ ಅತಿ ಬಳಕೆಯ ಒಲವು ಮತ್ತು ಅದರೆ ದುಷ್ಪರಿಣಾಮಗಳ ಕಡೆ ನಮ್ಮ ಗಮನ ಸೆಳೆದಿರುವುದನ್ನು ಈಗಾಗಲೇ ನೋಡಿದ್ದೇವೆ. ಆದರೆ ಅವನು ಈ ಪದಗಳ ಹಿತಮಿತವಾದ ಮಿಶ್ರಣ ಇಂಗ್ಲಿಷ್ ಗೆ ಬೇಡ ಎಂದು ಹೇಳುವುದಿಲ್ಲ; ಬದಲು ಅವನು ಅಂಥದೇ ಇಂಗ್ಲಿಷ್ ಬೇಕೆನ್ನುವಂತೆ ಕಾಣಿಸುತ್ತದೆ. ಅವನದೇ ಇಂಗ್ಲಿಷ್ ಬರಹದಲ್ಲಿ ಇದನ್ನು ಕಾಣುತ್ತೇವೆ. ಉದಾಹರಣೆಗೆ, Growth and Structure of the English Language ಸುರುವಾಗುವುದು ಹೀಗೆ:

It will be my endeavour in this volume to characterize the chief peculiarities of the English language, and to explain the growth and significance of those features in its structure which have been of permanent importance”. (p.1)

ಈ ವಾಕ್ಯದಲ್ಲಿ ಬರುವ endeavour, volume, characterize, peculiarities, language, explain, significance, features, structure, permanent, importance ಎಲ್ಲವೂ ಲ್ಯಾಟಿನ್ ಮೂಲದವು. ಎಂದರೆ ಏನರ್ಥ? ಯೆಸ್ಪರ್ಸನ್ ಖುದ್ದಾಗಿ ಲ್ಯಾಟಿನ್ ಇಂಗ್ಲಿಷ್ ಮೋಹಿಯೇ? ಖಂಡಿತಾ ಅಲ್ಲ. ಈ ಸಂದರ್ಭದಲ್ಲಿ ಈ ಪದಗಳು ಅಗತ್ಯವಿವೆ, ಹಾಗೂ ಇವು ಶೈಕ್ಷಣಿಕ ಇಂಗ್ಲಿಷ್ನಲ್ಲಿ ಬಳಕೆಯಾಗಿಯೂ ಇವೆ. ಈ ಹಿಂದೆ ಹೇಳಿದಂತೆ, ವಿಷಯಕೇಂದ್ರಿತವಾಗಿ ಬರೆಯುವವ ಯಾವ `ಅತಿ’ಯನ್ನೂ ಮಾಡುವುದಿಲ್ಲ; ಸ್ವಕೇಂದ್ರಿತವಾದವ ಅತಿಯನ್ನು ಮಾಡುತ್ತಾನೆ. ಯೆಸ್ಪರ್ಸನ್ ಈ ಮೊದಲ ವರ್ಗಕ್ಕೆ ಸೇರಿದವ; ಆದ್ದರಿಂದ ಅವನ ಶೈಲಿ ಲ್ಯಾಟಿನ್ ಮಯವೆಂದು ನಮಗೆ ಅನಿಸುವುದಿಲ್ಲ. ಬದಲು ಈ ಲ್ಯಾಟಿನ್ ಪದಗಳನ್ನು ಬಳಸಬಾರದು ಎಂದು ಅವನಿಗೆ ನಿರ್ದೇಶಿಸಿದರೆ ಅವನು ಬರಯುವುದನ್ನೇ ನಿಲ್ಲಿಸುತ್ತಾನೆ.

ಈಗ ಷ. ಶೆಟ್ಟರ್ ಅವರ ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿಯಿಂದ ಒಂದು ಉದಾಹರಣೆಯನ್ನು ಎತ್ತಿಕೊಳ್ಳುತ್ತೇನೆ:

ಸ್ಥಳಮಾಹತ್ಮೆ, ಪುರಾಣ, ಐತಿಹ್ಯ, ದಂತಕತೆಗಳನ್ನು ಅಕ್ಷರಶಃ ನಂಬುವುದು ಎಷ್ಟು ಅಪಾಯಕಾರಿಯೋ ಅವನ್ನು ಸಂಪೂರ್ಣವಾಗಿ ಉಪೇಕ್ಷಿಸುವುದೂ ಅಷ್ಟೇ ದುರದೃಷ್ಟಕರ. ಇವುಗಳನ್ನು ಸರಿಯಾಗಿ ದುಡಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಇತಿಹಾಸಕಾರನ ನೈಪುಣ್ಯ ನಿರ್ಧಾರವಾಗುವುದರಿಂದ ಅವನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾಗುವುದು. ಇದು ಏನೇ ಇರಲಿ, ಐತಿಹ್ಯಗಳೂ ಇತಿಹಾಸ ರಚನೆಗೆ ಒಂದು ಬಗೆಯ ಅಮೂಲ್ಯ ಆಕರಗಳನ್ನು ಒದಗಿಸುವುವು ಎಂಬುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇದನ್ನು ವಿಜ್ಞಾನಿಗಳು ಒಪ್ಪಬಹುದು ಇಲ್ಲವೇ ಒಪ್ಪದಿರಬಹುದು” (ಷ. ಶೆಟ್ಟರ್, ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ. ಬೆಂಗಳೂರು: ಅಭಿನವ ಪ್ರಕಾಶನ, 2007, ಪು. 64).

ಇದರಲ್ಲಿ ಸಂಸ್ಕೃತ ಮೂಲದ ಪದಗಳೆಷ್ಟು, ಅಚ್ಚಗನ್ನಡದವೆಷ್ಟು ಎಂದು ಲೆಕ್ಕ ಹಾಕುವ ಕೆಲಸವನ್ನು ನಾನು ಓದುಗರಿಗೆ ಬಿಟ್ಟುಬಿಡುತ್ತೇನೆ. ಶೆಟ್ಟರ್ ಬರೆಯುವಾಗ ಬಹುಶಃ ಅವರು ಇದನ್ನೆಲ್ಲ ಎಣಿಸಿ ಬರೆದದ್ದಲ್ಲ; ಅವರ ಮುಂದೆ ಅವರನ್ನು ಆಕಷರ್ಿಸಿದ ವಿಷಯವೊಂದಿತ್ತು, ಅವರ ಕನ್ನಡದಲ್ಲಿ ಈ ಕುರಿತು ಬರೆಯಲು ಅವರಿಗೆ ಸವಲತ್ತೂ ಇತ್ತು. ಕನ್ನಡ ಕಲಿತ ಯಾವನಿಗೂ ಶೆಟ್ಟರ್ ಇಲ್ಲಿ ಹೇಳುತ್ತಿರುವುದೇನು ಎಂದು ಅರ್ಥವಾಗದೆ ಇರದು. ಆದರೆ ಭಟ್ ಅವರ `ಪೊಲೀಸಿಂಗ್’ ನಡೆದರೆ ಇಂಥ ಕನ್ನಡವನ್ನೇ ಎತ್ತಿ ಹೊರಗೆ ಹಾಕಬೇಕಾಗುತ್ತದೆ! ಈ ರೀತಿ ಬರೆಯುವುದು ಕನ್ನಡವಲ್ಲ ಎಂದಾದರೆ ಇನ್ನು ಯಾವುದು ಕನ್ನಡವೋ ನನಗೆ ತಿಳಿಯದು.

ನುಡಿದಂತೆ ಬರೆ, ಬರೆದಂತೆ ನುಡಿ?

ಓದುವ ಹಾಗೆ ಬರೆಯಬೇಕು, ಬರೆದ ಹಾಗೆ ಓದಬೇಕು ಎನ್ನುವ ಭಟ್ ಅವರ ಆಗ್ರಹದಲ್ಲಿ ನುಡಿ ಮತ್ತು ಬರಹದಲ್ಲಿ ಸಂಪೂರ್ಣ ಅಭೇದ ಕಲ್ಪಿಸುವ ಆಶಯವಿದೆ. ಬರಹವಿರುವ ಯಾವ ಭಾಷೆಯಲ್ಲೂ ಇದು ಸಾಧ್ಯವಾಗಿಲ್ಲ, ಆಗುವುದೂ ಇಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನುಡಿಯ ಭಾಷೆ ತುಟಿಯ ಭಾಷೆಯಾದರೆ, ಬರಹದ ಭಾಷೆ ಕಣ್ಣಿನದು ಎನ್ನುವುದು ಈ ಕಾರಣಗಳಲ್ಲಿ ಒಂದು. ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಓದುಗ ಪ್ರತಿಯೊಂದು ಅಕ್ಷರವನ್ನೂ ಸ್ಪಷ್ಟವಾಗಿ ಬಿಡಿಸಿ ಓದಬೇಕಾದ ಅಗತ್ಯವಿರುತ್ತದೆ: ಪರೀಕ್ಷೆಯಲ್ಲಿ, ಟೀವಿ ಸುದ್ದಿ ಓದುತ್ತಿರುವಾಗ, ಉಕ್ತಲೇಖನದ ವೇಳೆ ಇತ್ಯಾದಿ. ಉಳಿದ ಕಡೆ ನಾವು ನಮಗೆ ಸಹಜವೆನಿಸುವ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ. ಇದಕ್ಕೆ ಯಾರೇನೂ ಆಕ್ಷೇಪ ಹೇಳುವುದಿಲ್ಲ. ಹೆಚ್ಚಿನ ವೇಳೆಯೂ ನಮ್ಮ ಓದು ಮೌನವಾಗಿಯೇ ನಡೆಯುವಂಥದು.

ಅಕ್ಷರಮಾಧ್ಯಮ ಧ್ವನಿಮಾಧ್ಯಮಕ್ಕಿಂತ ಹೆಚ್ಚು ಸ್ಥಿತಿಸ್ಥಾಪಕವಾದುದು. ಧ್ವನಿ ಒಬ್ಬನಿಂದ ಒಬ್ಬನಿಗೆ ಭಿನ್ನವಿರುತ್ತದೆ, ಒಬ್ಬನೇ ವ್ಯಕ್ತಿ ಒಂದೇ ಪದವನ್ನು ಎರಡು ಬಾರಿ ಓದುವಾಗ ಅಥವಾ ಹೇಳುವಾಗ ಅವುಗಳಲ್ಲಿ ವ್ಯತ್ಯಾಸವಿರಬಹುದು. ಬೇರೆ ಬೇರೆ ಜನ ಒಂದೇ ಬರಹವನ್ನು ಬೇರೆ ಬೇರೆ ತರದಲ್ಲಿ ಓದಬಹುದು. ಆದರೆ ಇಂಥ ವ್ಯತ್ಯಾಸಗಳು ಅರ್ಥಕ್ಕೆ ತೊಂದರೆ ಕೊಡುವುದಿಲ್ಲ.

ಪ್ರಾದೇಶಿಕ, ವರ್ಗೀಯ ಭಿನ್ನತೆಗಳು ನೂರಾರು. ಅವನ್ನೆಲ್ಲ ಒಂದೇ ಬರಹದಲ್ಲಿ ನೂರಕ್ಕೆ ನೂರರಷ್ಟು ಸರಿಯಾಗಿ ಪ್ರತಿನಿಧೀಕರಿಸಲು ಆಗುವುದಿಲ್ಲ. ಅವುಗಳ ಸೂಚನೆ ಮಾತ್ರವೇ ಕೊಡುವುದು ಸಾಧ್ಯ. ಬರಹಕ್ಕೆ ಅಷ್ಟು ಸಾಕು. ಬರಹವೆಂದರೆ ಟೇಪ್ರೆಕಾರ್ಡರ್ ಅಲ್ಲ. ಉದಾಹರಣೆಗೆ:

ಹಾಗೇನು-ಹಂಗೇನು_ಅಂಗೇನು-ಹಂಗಾ-ಅಂಗಾ
ಬರಬಹುದು-ಬರ್ಬಹುದು-ಬರಬೋದು-ಬರ್ಬೋದು-ಬರ್ಬೌದು
ಇದೆ-ಅದೆ-ಐತೆ-ಐತಿ
ಯಾಕೆ ಸ್ವಾಮಿ-ಯಾಕ್ಸ್ವಾಮಿ-ಯಾಕ್ಸಾಮಿ-ಯಾಕ್ರೀ-ಯಂತಕೆ ಸಾಮಿ
ಏನು ಮಹಾರಾಯರೆ-ಎಂತ ಮಾರಾಯರೆ-ಎಂತ ಮಾರಾಯ್ರೆ-ಏನ್ ಮಾರಾಯ್ರೆ
ಕೂತುಕೋ-ಕೂತ್ಕೋ-ಕುಂತುಕೋ-ಕುಂತ್ಕೋ
ಹಾಳಾಗಿಹೋಗಲಿ-ಹಾಳಾಗಿಹೋಗ್ಲಿ-ಹಾಳಾಗೋಗ್ಲಿ-ಆಳಾಗೋಗ್ಲಿ
ಓದಲಿಕ್ಕೆ ಹೊರಟಿದ್ದಾನೆ-ಓದಾಕೆ ಹೊರಟಾನೆ-ಓದಾಕ ಹೊಂಟಾನ-ಓದಾಕ ಹತ್ಯಾನ- ಓದಾಕತ್ಯಾನ

ಹೀಗೆ ಮಾತಿನ ಶೈಲಿಯಲ್ಲಿನ ಭಿನ್ನತೆಗಳನ್ನು ಪಟ್ಟಿಮಾಡುತ್ತ ಹೋಗಬಹುದು. ಕೆಲವೊಂದು ಸ್ವರಗಳನ್ನು ಕನ್ನಡ ಬರಹದಲ್ಲಿ ಅಭಿವ್ಯಕ್ತಿಸುವಂತೆಯೂ ಇಲ್ಲ. ಧಾರವಾಡ ಕಡೆಯ ಕನ್ನಡದಲ್ಲಿ ಕೆಲವೆಡೆ ಅನುನಾಸಿಕ ಸ್ವರಗಳಿವೆ; ಅದೇ ರೀತಿ ದಕ್ಷಿಣ ಕನ್ನಡದ ಹವ್ಯಕದಲ್ಲಿ ಕೂಡಾ: ಅವ (`ಅವನು’ ಎಂಬ ಅರ್ಥದಲ್ಲಿ) ಎನ್ನುವಲ್ಲಿ `ವ’ದ ಅಕಾರ ಅನುನಾಸಿಕ. ಯಾವುದೇ ಭಾಷೆಯಲ್ಲೂ ಪ್ರತಿ ಕ್ಷಣದಲ್ಲೂ ಧ್ವನಿವ್ಯತ್ಯಾಸಗಳು ಆಗುತ್ತಲೇ ಇರುತ್ತವೆ. ಮಾತಿನ ವೈವಿಧ್ಯಕ್ಕೆ ಮಿತಿಯೇ ಇಲ್ಲ. ಶಿಕ್ಷಣಮಾಧ್ಯಮ ಮತ್ತು ಅದು ಬಳಸುವ ಬರಹ ಅವುಗಳೊಂದಿಗೆ ಪೈಪೋಟಿ ಹೂಡುವ ಅಗತ್ಯವಿಲ್ಲ. ಅವನ್ನು ಸಂಪೂರ್ಣವಾಗಿ ಪ್ರತಿನಿಧೀಕರಿಸಬೇಕೆಂದೂ ಇಲ್ಲ. ದೊಡ್ಡ ದೊಡ್ಡ ವ್ಯಾಪಕ ವ್ಯತ್ಯಾಸಗಳು ಬಂದು ಸ್ಥಿರಗೊಂಡಾಗ ಮಾತ್ರವೇ ಮಾಧ್ಯಮದಲ್ಲಿ ಮತ್ತು ಬರಹದಲ್ಲಿ ಬದಲಾವಣೆಯಾದರೆ ಸಾಕು.

ಸರಿಸುಮಾರು ಒಂದೇ ತರದ ಶಿಕ್ಷಣಭಾಷೆ ಮತ್ತು ಬರಹ ಇದ್ದರೆ ಎಲ್ಲ ಕನ್ನಡವೂ ಒಂದೇ ಎನ್ನುವ ಭಾವ ಬರುತ್ತದೆ. ಈ ಶಿಕ್ಷಣಭಾಷೆ ಸ್ವಲ್ಪ ಕೃತಕವೆಂದುಕೊಂಡರೂ ಅದರ ಅಗತ್ಯವಿದೆ. ಎಲ್ಲಾ ದೇಶಗಳಲ್ಲೂ ಶಿಕ್ಷಣಭಾಷೆ ತುಸು `ಕೃತಕ’ವಾಗಿಯೇ ಇರುತ್ತದೆ. ಯಾಕೆಂದರೆ ಈ ಹಿಂದೆ ಹೇಳಿದಂತೆ ಅದೊಂದು ಪ್ರಭಾಷೆ. ಆಡುಮಾತಿನಲ್ಲಿ ಹೆಚ್ಚೆಚ್ಚು ಪ್ರಭೇದಗಳಿರುವ ಅರೆಬಿಕ್, ಹಿಂದಿ, ಸ್ಪ್ಯಾನಿಷ್, ಫ್ರೆಂಚ್ ಮತ್ತು ಇಂಗ್ಲಿಷ್ನಲ್ಲಿ ಕೂಡಾ ಶಿಕ್ಷಣ ಮತ್ತು ಬರೆಯುವ ಭಾಷೆಯಲ್ಲಿ ಇಂಥ ಪ್ರಮಾಣಬದ್ಧತೆಯನ್ನು ಕಾಣುತ್ತೇವೆ.

ಬರಹದಲ್ಲಿ ಮಹಾಪ್ರಾಣಗಳಿದ್ದು ಒಂದು ವೇಳೆ ಅವುಗಳನ್ನು ಮಹಾಪ್ರಾಣಗಳಾಗಿ ನುಡಿಯಲು ಕೆಲವರಿಂದ ಆಗುವುದಿಲ್ಲ ಎಂದಿದ್ದರೆ ಅಂಥವರು ತಮಗೆ ಅನಿಸಿದಂತೆ ನುಡಿಯಲಿ. ಆದರೆ ಅದಕ್ಕಾಗಿ ಅವನ್ನು ಬರಹದಿಂದ/ಮುದ್ರಣದಿಂದ ಕಿತ್ತುಹಾಕುವ ಅಗತ್ಯವಿಲ್ಲ. ಯಾಕೆಂದರೆ ಅವು ಬೇಕೆನ್ನುವವರಿಗೆ ಇದರಿಂದ ತೊಂದರೆಯಾಗುತ್ತದೆ. ಅಕ್ಷರಗಳು ಮತ್ತು ಪದಗಳು ಸಾಕಷ್ಟಿದ್ದರೆ ಆಯ್ದುಕೊಳ್ಳುವುದಕ್ಕೆ ಆಗುತ್ತದೆ. ಕಡಿಮೆ ಮಾಡಿದರೆ ಜನರು ನಿರ್ಬಂಧಕ್ಕೆ ಒಳಗಾಗುತ್ತಾರೆ.

ಕೊನೆಯದಾಗಿ ನನ್ನ ಅಭಿಪ್ರಾಯ: ಸರ್ವಶಿಕ್ಷಣವೆನ್ನುವುದು ಒಂದು ಮಹಾಕ್ರಾಂತಿ. ಅದರ ನಿಜವಾದ ಅರ್ಥ ಮತ್ತು ಉದ್ದೇಶಕ್ಕೆ ತಕ್ಕ ಕಾರ್ಯಕ್ರಮಗಳು ನಮಗೆ ಬೇಕು. ನಮ್ಮ ಹಠ ಮತ್ತು ಶಕ್ತಿ ಈ ದಿಕ್ಕಿಗೆ ಹರಿಯಲ್ಲಿ. ಮುಖ್ಯವಾಗಿ ಕನ್ನಡ ಬೋಧನೆಯನ್ನು ಆಕರ್ಷಕವಾಗಿ ಮಾಡಬೇಕು. ನಾನೇನೂ ಯಥಾಸ್ಥಿತಿವಾದಿಯಲ್ಲ; ಕನ್ನಡವನ್ನು ಇನ್ನಷ್ಟು ಮುಂದಕ್ಕೆ ಒಯ್ಯಬೇಕು ಎನ್ನುವವನು, ಹಿಂದಕ್ಕೆ ಅಲ್ಲ. ಕನ್ನಡಿಗರು ಕನ್ನಡದಲ್ಲೇ ಕಲಿತು ಎಲ್ಲಾ ಕ್ಷೇತ್ರಗಳಲ್ಲೂ ಜಗತ್ತಿನ ಇತರ ಭಾಷಿಕರಿಗೆ ಸರಿಸಮನಾದರೆ ಎಷ್ಟು ಒಳ್ಳೆಯದು! ಇದು ಭಟ್ ಅವರ ಪ್ರೋಗ್ರಾಮಿನಿಂದ ಸಾಧ್ಯವಾಗುವುದಾದರೆ ನನಗೆ ಸಂತೋಷವೇ.