“ಎಷ್ಟೋ ದಿನ, ತಿಂಗಳು, ವರ್ಷ ನನ್ನ ಟೇಬಲ್ಲಿನ ಮುಂದೆ ಕೂತು, ಖಾಲಿ ಹಾಳೆಯ ಮೇಲೆ ಒಂದೊಂದೇ ಹೊಸ ಪದ ಸೇರಿಸುತ್ತ, ನಾನು ಹೊಸ ಲೋಕ ಸೃಷ್ಟಿಸುತ್ತಿದ್ದೇನೆ ಅನ್ನುವ ಭಾವ, ನನ್ನೊಳಗಿರುವ ಇನ್ನೊಬ್ಬ ವ್ಯಕ್ತಿಗೆ ಜೀವ ಕೊಡುತ್ತಿದ್ದೇನೆ ಅನ್ನುವ ಭಾವ ಅನುಭವಿಸಿದ್ದೇನೆ. ಇದು ಸೇತುವೆಯನ್ನೋ ಗುಮ್ಮಟವನ್ನೋ ಒಂದೊಂದೇ ಕಲ್ಲು ಜೋಡಿಸಿ ಕಟ್ಟುವಾಗ ಮನಸ್ಸಿನಲ್ಲಿ ಮೂಡುವಂಥ ಭಾವ. ಲೇಖಕರು ಬಳಸುವ ಕಲ್ಲೆಂದರೆ ಪದ. ಪದವನ್ನು ನಮ್ಮ ಕೈಯಲ್ಲಿ ಹಿಡಿದು, ಒಂದೊಂದೂ ಪದ ಇನ್ನೊಂದು ಪದದ ಜೊತೆ ಹೇಗೆ ಹೊಂದೀತು ಎಂದು ಯೋಚಿಸುತ್ತ, ಆಗಾಗ ಪದವನ್ನು ದೂರದಿಂದ ನೋಡುತ್ತ, ಆಗಾಗ ಪದವನ್ನು ಬೆರಳಲ್ಲಿ ಪೆನ್ನಿನ ನಿಬ್ಬಿನ ತುದಿಯಲ್ಲಿ ನೇವರಿಸುತತ್ತ, ತೂಕ ಹಾಕುತ್ತ, ಪದವನ್ನು ಅತ್ತ ಇತ್ತ ಸರಿಸುತ್ತ, ವರ್ಷಾನು ವರ್ಷ ತಾಳ್ಮೆಯಿಂದ ಹೊಸ ಲೋಕವನ್ನು ಕಟ್ಟುತ್ತೇವೆ, ನಾವು ಲೇಖಕರು.”
ನೋಬಲ್ ಪುರಸ್ಕಾರ ವಿಜೇತ ಟರ್ಕಿಷ್ ಕಾದಂಬರಿಗಾರ ಒರ್ಹಾನ್ ಪಾಮುಕ್ ಭಾಷಣವನ್ನು ಓ.ಎಲ್.ನಾಗಭೂಷಣಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ .
ನಮ್ಮಪ್ಪ ಸಾಯುವುದಕ್ಕೆ ಎರಡು ವರ್ಷ ಮೊದಲು ನನಗೊಂದು ಪುಟ್ಟ ಸೂಟ್ ಕೇಸು ಕೊಟ್ಟರು. ಅದರಲ್ಲಿ ಅಪ್ಪನ ಬರವಣಿಗೆ, ಹಸ್ತಪ್ರತಿ, ನೋಟುಬುಕ್ಕುಗಳು ಇದ್ದವು. ತನ್ನ ಮಾಮೂಲಾದ ಲಘು, ಜೋಕಿನ ದನಿಯಲ್ಲಿ ಮಾತಾಡುತ್ತ ತಾವು ಹೋದಮೇಲೆ, ಅಂದರೆ ತೀರಿಕೊಂಡ ಮೇಲೆ, ಇವನ್ನೆಲ್ಲ ಓದಬೇಕು ಅಂದರು. ನಾನು ಹೋದಮೇಲೆ ಒಂದು ಸಾರಿ ಸುಮ್ಮನೆ ನೋಡು. ನೀನು ಬಳಸಲು ಆಗುವಂಥದ್ದು ಇದರಲ್ಲಿ ಏನಾದರೂ ಇದ್ದರೆ, ನಾನು ಹೋದನಂತರ ಅದನ್ನು ಆಯ್ದು ಪ್ರಕಟಮಾಡು, ಅಂದರು. ಮುಖದಲ್ಲಿ ಸ್ವಲ್ಪ ಕಸಿವಿಸಿ ಇದ್ದ ಹಾಗಿತ್ತು.
ನಮ್ಮ ಸ್ಟಡಿ ರೂಮಿನಲ್ಲಿದ್ದೆವು. ಸುತ್ತಲೂ ಪುಸ್ತಕ ಇದ್ದವು. ನೋವಿನ ಹೊರೆ ಇಳಿಸಲು ಹಾತೊರೆಯುವವರ ಹಾಗೆ ನಮ್ಮಪ್ಪ ಸೂಟ್ ಕೇಸು ಇಡಲು ಜಾಗ ಹುಡುಕುತ್ತಿದ್ದರು. ಕೊನೆಗೆ ಎದ್ದು ಕಾಣದಂಥ ಮೂಲೆಯಲ್ಲಿ ಅದನ್ನು ಇಟ್ಟರು. ಆ ಕ್ಷಣ ನಾವಿಬ್ಬರೂ ಮರೆಯಲಾಗಂಥ ಸಿಗ್ಗಿನ ಕ್ಷಣ. ಆ ಕ್ಷಣ ಕಳೆಯುತ್ತಿದ್ದ ಹಾಗೇ ನಾವು ಮತ್ತೆ ನಮ್ಮ ನಮ್ಮ ಮಾಮೂಲಿ ಪಾತ್ರಗಳಾದೆವು, ಲಘುವಾಗಿ ಮಾತಾಡುತ್ತ, ಜೋಕು ಹೇಳುತ್ತ, ಪರಸ್ಪರ ಅಣಕಿಸುತ್ತ ಆರಾಮವಾದೆವು. ಯಾವಾಗಲೂ ಮಾಡುವ ಹಾಗೆ ದಿನ ದಿನದ ಬದುಕಿನ ಕ್ಷುಲ್ಲಕ ಸಂಗತಿಗಳ ಬಗ್ಗೆ, ಟರ್ಕಿಯ ಎಂದೂ ಮುಗಿಯದ ರಾಜಕೀಯ ಸಮಸ್ಯೆಗಳ ಬಗ್ಗೆ, ಸಾಮಾನ್ಯವಾಗಿ ವಿಫಲವೇ ಆಗುತ್ತಿದ್ದ ನಮ್ಮಪ್ಪನ ಬ್ಯುಸಿನೆಸ್ ಸಾಹಸಗಳ ಬಗ್ಗೆ ಮಾತಾಡಿದೆವು. ಇಬ್ಬರೂ ಅಂಥ ದುಃಖ ಫೀಲು ಮಾಡಲಿಲ್ಲ. ನಮ್ಮಪ್ಪ ಹೋದಮೇಲೆ ಎಷ್ಟೋ ದಿನ ಆ ಸೂಟ್ ಕೇಸಿನ ಮುಂದೆ ಅದನ್ನು ದಾಟಿಕೊಂಡು ಓಡಾಡಿದ್ದೇನೆ. ಒಂದು ಸಾರಿಯೂ ಅದನ್ನು ಮುಟ್ಟಲಿಲ್ಲ. ಕಪ್ಪು ಚರ್ಮದ ಪುಟ್ಟ ಸೂಟ್ ಕೇಸು, ಅದರ ಬೀಗ, ದುಂಡು ಮೂಲೆ ಎಲ್ಲ ತೀರ ಚೆನ್ನಾಗಿ ಪರಿಚಯವಾಗಿದ್ದವು. ನಮ್ಮಪ್ಪ ಕೆಲವು ದಿನಗಳ ಮಟ್ಟಿಗೆ ಊರಿಗೆ ಹೋಗುವಾಗ, ಮತ್ತೆ ಆಗಾಗ ವ್ಯವಹಾರದ ಕಾಗದ ಪತ್ರ ಒಯ್ಯಲೂ ಅದನ್ನು ಬಳಸುತ್ತಿದ್ದರು. ನಾನು ಹುಡುಗನಾಗಿದ್ದಾಗ ನಮ್ಮಪ್ಪ ಪ್ರಯಾಣ ಮುಗಿಸಿಕೊಂಡು ಬಂದು, ಸೂಟ್ ಕೇಸು ತೆರೆದು, ಅದರೊಳಗಿನ ವಸ್ತುಗಳನ್ನು ತಡಕಾಡುತ್ತಿದ್ದದ್ದು, ಸೂಟ್ ಕೇಸಿನೊಳಗಿಂದ ಹೊಮ್ಮುತ್ತಿದ್ದ ವಿದೇಶಗಳ ಕೊಲೋನ್ ಪರಿಮಳವನ್ನು ನಾನು ಖುಷಿಯಾಗಿ ಉಸಿರೆಳೆದುಕೊಳ್ಳುತಿದ್ದದ್ದು ಜ್ಞಾಪಕ ಇದೆ. ಆ ಸೂಟ್ಕೇಸು ನಾನು ಬಲ್ಲ ಗೆಳೆಯ, ನನ್ನ ಬಾಲ್ಯದ ನೆನಪುಗಳನ್ನು, ಗತಕಾಲವನ್ನು ಪ್ರಬಲವಾಗಿ ಮನಸ್ಸಿಗೆ ತರುವ ವಸ್ತು, ಆದರೂ ಈಗ ಅದನ್ನು ಮುಟ್ಟಲೂ ಆರೆ, ಯಾಕೆ? ಅದರೊಳಗಿದ್ದ ನಿಗೂಢ ವಸ್ತುಗಳ ಭಾರವೇ ಕಾರಣ, ಅನುಮಾನವೇ ಇಲ್ಲ. ಈ ಭಾರದ ಅರ್ಥವನ್ನು ಕುರಿತು ಮಾತಾಡುತ್ತೇನೆ. ಕೋಣೆಯೊಂದರಲ್ಲಿ ತನ್ನನ್ನೇ ಕೂಡಿಹಾಕಿಕೊಂಡು, ಮೂಲೆಯಲ್ಲಿ ಟೇಬಲ್ಲಿನ ಮುಂದೆ ಕೂತು, ಮನಸ್ಸಿನಲ್ಲಿರುವ ಆಲೋಚನೆಗಳನ್ನು ವ್ಯಕ್ತಪಡಿಸುವಾಗ ಸೃಷ್ಟಿಯಾಗುವ ಭಾರದ ಬಗ್ಗೆ-ಸಾಹಿತ್ಯದ ಅರ್ಥದ ಬಗ್ಗೆ ಮಾತಾಡುತ್ತೇನೆ.
ಆ ಸೂಟ್ ಕೇಸನ್ನು ಮುಟ್ಟಿದರೂ ತೆರೆಯುವ ಧೈರ್ಯ ನನಗಾಗಲಿಲ್ಲ. ಆದರೂ ಅದರೊಳಗಿನ ಕೆಲವಾದರೂ ನೋಟ್ಬುಕ್ಕಿನಲ್ಲಿ ಏನಿದೆ ಅನ್ನುವುದು ಗೊತ್ತಿತ್ತು. ನಮ್ಮಪ್ಪ ಬರೆಯುವುದು ನೋಡಿದ್ದೆ. ಸೂಟ್ ಕೇಸಿನೊಳಗಿರುವುದರ ಭಾರದ ಕುರಿತು ಕೇಳಿದ್ದು ಇದೇ ಮೊದಲೂ ಅಲ್ಲ. ನಮ್ಮಪ್ಪ ದೊಡ್ಡ ಲೈಬ್ರರಿ ಮಾಡಿಕೊಂಡಿದ್ದರು. ಅವರ ಯೌವನದಲ್ಲಿ, ೧೯೪೦ರ ದಶಕದ ಕೊನೆಯಲ್ಲಿ, ಅವರು ಇಸ್ತಾಂಬುಲ್ ಕವಿಯಾಗಲು ಬಯಸಿದ್ದರು. ಪಾಲ್ ವ್ಯಾಲರಿಯ ಕವಿತೆ ಟರ್ಕಿಶ್ಗೆ ಅನುವಾದ ಮಾಡಿದ್ದರು. ಆದರೆ ಬಡದೇಶದಲ್ಲಿ, ಇಲ್ಲವೇ ಇಲ್ಲ ಅನ್ನಿಸುವಷ್ಟು ಕಡಿಮೆ ಓದುಗರ ಸಲುವಾಗಿ ಕಾವ್ಯ ಬರೆಯುತ್ತ ಬದುಕುವ ರೀತಿ ನಮ್ಮಪ್ಪನಿಗೆ ಇಷ್ಟವಾಗಿರಲಿಲ್ಲ. ನಮ್ಮ ತಾತ, ಅಪ್ಪನ ಅಪ್ಪ, ಶ್ರೀಮಂತ ವ್ಯಾಪಾರಿ. ನಮ್ಮಪ್ಪ ಹುಡುಗನಾಗಿ, ಯುವಕನಾಗಿ ಸುಖದ ಜೀವನ ಸಾಗಿಸಿದ್ದರು. ಸಾಹಿತ್ಯದ ಸಲುವಾಗಿ, ಬರಹದ ಸಲುವಾಗಿ, ಕಷ್ಟದ ಬದುಕು ಆಯ್ದುಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ. ನಮ್ಮಪ್ಪ ಬದುಕಿನ ಎಲ್ಲ ಚೆಲುವು ಇಷ್ಟಪಡುತ್ತಿದ್ದರು. ಇದು ನನಗೆ ಗೊತ್ತಾಗಿತ್ತು.
ಸೂಟ್ ಕೇಸನ್ನು ತೆರೆದರೆ, ಅದರೊಳಗೆ ಇರುವುದನ್ನು ಓದಿದರೆ, ಓದಿದ್ದು ನನಗೆ ಇಷ್ಟವಾಗದಿದ್ದರೆ ಅನ್ನುವ ಭಯ ನನ್ನನ್ನು ಅಪ್ಪನ ಸೂಟ್ ಕೇಸಿನಿಂದ ದೂರವೇ ಉಳಿಸಿತ್ತು. ನಮ್ಮಪ್ಪನಿಗೂ ಅದು ಗೊತ್ತಿದ್ದರಿಂದ ತನ್ನ ಎಲ್ಲಾ ಬರಹವನ್ನು ತಾನೇ ಗಂಭೀರವಾಗಿ ಪರಿಗಣಿಸಿಲ್ಲ ಅನ್ನುವ ಹಾಗೆ ನಟಿಸುವ ಎಚ್ಚರಿಕೆ ತೋರಿದ್ದರು. ಲೇಖಕನಾಗಿ ಇಪ್ಪತ್ತೈದು ವರ್ಷ ಕಳೆದ ಮೇಲೆ ನಮ್ಮಪ್ಪ ಅನುಭವಿಸಿದ್ದ ಸಂಕಟ ನೆನೆದು ನೋವಾಗುತ್ತದೆ. ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸದೆ ಹೋದದ್ದಕ್ಕೆ ನಮ್ಮಪ್ಪನ ಬಗ್ಗೆ ಕೋಪ ಮಾಡಿಕೊಳ್ಳುವ ಮನಸ್ಸೂ ಇಲ್ಲ. ನನ್ನ ನಿಜವಾದ ಭಯ, ನನ್ನೊಳಗೆ ನಾನೇ ತಿಳಿಯಲು ಕಂಡುಕೊಳ್ಳಲು ಬಯಸದೆ ಇದ್ದ ಸಂಗತಿ ಇದು-ಅಕಸ್ಮಾತ್ ನಮ್ಮಪ್ಪ ಒಳ್ಳೆಯ ಬರಹಗಾರ ಆಗಿದ್ದರೆ ಅನ್ನುವ ಭಾವ. ಈ ಭಯ ನನ್ನಲ್ಲಿ ಇತ್ತು ಅಂತಲೇ ಅಪ್ಪನ ಸೂಟ್ ಕೇಸು ತೆರೆಯಲು ಆಗಿರಲಿಲ್ಲ. ಇಂಥ ಭಯ ನನ್ನಲ್ಲಿದೆ ಎಂದು ನಾನೇ ಮುಕ್ತವಾಗಿ ಒಪ್ಪಿಕೊಳ್ಳಲೂ ಆಗಿರಲಿಲ್ಲ ಅನ್ನುವುದು ಇನ್ನೂ ಹಿಂಸೆಯ ಸಂಗತಿ. ನಮ್ಮಪ್ಪನ ಸೂಟ್ ಕೇಸಿನಿಂದ ಮಹಾನ್ ಸಾಹಿತ್ಯಕೃತಿ ಹೊರಬಿದ್ದರೆ ನಮ್ಮಪ್ಪನ ವ್ಯಕ್ತಿತ್ವದೊಳಗೆ ತೀರ ಭಿನ್ನವಾದ ಮನುಷ್ಯನೊಬ್ಬ ಇದ್ದ ಅನ್ನುವುದನ್ನು ಒಪ್ಪಬೇಕಾಗುತ್ತಿತ್ತು. ಇದು ಭಯಂಕರವಾದೊಂದು ಸಾಧ್ಯತೆ. ನನಗೆ ವಯಸ್ಸಾಗಿದ್ದರೂ ನಮ್ಮಪ್ಪ ಕೇವಲ ನಮ್ಮಪ್ಪನಾಗಿಯೇ ಇರಬೇಕು, ಲೇಖಕ ಆಗಬಾರದು ಅನ್ನುವುದು ನನ್ನ ಮನಸ್ಸಿನಲ್ಲಿತ್ತು.
ಲೇಖಕನೆಂಬ ವ್ಯಕ್ತಿ ತನ್ನೊಳಗೇ ಇರುವ ಇನ್ನೊಬ್ಬನನ್ನು ಕಂಡುಕೊಳ್ಳಲು, ತಾನು ಇರುವ ಹಾಗೆ ತನ್ನನ್ನು ರೂಪಿಸಿದ ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಾ ತೀರ ತಾಳ್ಮೆಯಿಂದ ವರ್ಷ ವರ್ಷಗಳನ್ನು ಕಳೆಯುತ್ತಾನೆ. ಬರವಣಿಗೆಯ ಬಗ್ಗೆ ಮಾತಾಡುವಾಗ ನನ್ನ ಮನಸ್ಸಿಗೆ ಬರುವುದು ಕಾದಂಬರಿ, ಕವಿತೆ, ಸಾಹಿತ್ಯಕ ಪರಂಪರೆ ಇವು ಯಾವುದೂ ಅಲ್ಲ. ಏಕಾಂಗಿಯಾಗಿ ಕೂತು, ತನ್ನೊಳಗನ್ನೇ ನೋಡಿಕೊಳ್ಳುತ್ತ, ಅಂತರಂಗದ ನೆರಳುಗಳ ನಡುವೆ ಬದುಕುತ್ತ, ಪದಗಳ ಮೂಲಕ ಹೊಸ ಜಗತ್ತನ್ನು ಕಟ್ಟಿಕೊಳ್ಳುವ ಮನುಷ್ಯನ ಚಿತ್ರ ಮೂಡುತ್ತದೆ. ಈ ಮನುಷ್ಯ, ಟೈಪ್ರೈಟರು ಬಳಸಬಹುದು, ಕಂಪ್ಯೂಟರ್ ಬಳಕೆಯ ಸೌಕರ್ಯವನ್ನೂ ಹೊಂದಿರಬಹುದು ಅಥವಾ ಮೂವತ್ತು ವರ್ಷ ನಾನು ಮಾಡಿದ ಹಾಗೆ ಹಾಳೆ, ಪೆನ್ನು ಬಳಸಿ ಬರೆಯಬಹುದು. ಬರೆಯುತ್ತಿರುವಾಗ ಆತ ಟೀ, ಕಾಫಿ ಕುಡಿಯಬಹುದು, ಸಿಗರೇಟು ಸೇದಬಹುದು. ಆಗಾಗ ಟೇಬಲ್ಲು ಬಿಟ್ಟು ಏಳಬಹುದು, ಕಿಟಿಕಿಯಿಂದಾಚೆ ನೋಡುತ್ತ ಬೀದಿಯಲ್ಲಿ ಮಕ್ಕಳು ಆಡುವುದು ಕಾಣಬಹುದು, ಅದೃಷ್ಟವಂತನಾಗಿದ್ದರೆ ಕಿಟಕಿಯಾಚೆ ಮರಗಿಡಗಳ ಹಸಿರೂ ಇದ್ದೀತು. ಇಲ್ಲವೇ ಬರಿಯ ಗೋಡೆಯನ್ನು ಖಾಲಿಯಾಗಿ ದಿಟ್ಟಿಸಬಹುದು. ಕವಿತೆ, ನಾಟಕ, ಕಾದಂಬರಿಗಳನ್ನು ಬರೆಯಬಹುದು-ನಾನು ಮಾಡಿದ ಹಾಗೆ. ಕೂತು, ತಾಳ್ಮೆಯಿಂದ ತನ್ನೊಳಗನ್ನೇ ನೋಡಿಕೊಳ್ಳುವುದಕ್ಕೆ ಶುರು ಮಾಡಿದಾಗ ಈ ಎಲ್ಲ ವ್ಯತ್ಯಾಸಗಳೂ ಬರುತ್ತವೆ. ಬರೆಯುವುದೆಂದರೆ ನೋಟವನ್ನು ಒಳಕ್ಕೆಳೆದುಕೊಂಡು ಪದಗಳನ್ನು ದಿಟ್ಟಿಸುವುದು, ತನ್ನೊಳಗೇ ಇಳಿದಾದಮೇಲೆ ಎದುರಾಗುವ ಲೋಕವನ್ನು ಗಮನವಿಟ್ಟು ನೋಡುವುದು, ಮತ್ತೆ ಇದನ್ನೆಲ್ಲ ಅಪಾರ ಸಹನೆ, ಛಲ, ಖುಷಿಯಲ್ಲಿ ಮಾಡುವುದು. ಎಷ್ಟೋ ದಿನ, ತಿಂಗಳು, ವರ್ಷ ನನ್ನ ಟೇಬಲ್ಲಿನ ಮುಂದೆ ಕೂತು, ಖಾಲಿ ಹಾಳೆಯ ಮೇಲೆ ಒಂದೊಂದೇ ಹೊಸ ಪದ ಸೇರಿಸುತ್ತ, ನಾನು ಹೊಸ ಲೋಕ ಸೃಷ್ಟಿಸುತ್ತಿದ್ದೇನೆ ಅನ್ನುವ ಭಾವ, ನನ್ನೊಳಗಿರುವ ಇನ್ನೊಬ್ಬ ವ್ಯಕ್ತಿಗೆ ಜೀವ ಕೊಡುತ್ತಿದ್ದೇನೆ ಅನ್ನುವ ಭಾವ ಅನುಭವಿಸಿದ್ದೇನೆ. ಇದು ಸೇತುವೆಯನ್ನೋ ಗುಮ್ಮಟವನ್ನೋ ಒಂದೊಂದೇ ಕಲ್ಲು ಜೋಡಿಸಿ ಕಟ್ಟುವಾಗ ಮನಸ್ಸಿನಲ್ಲಿ ಮೂಡುವಂಥ ಭಾವ. ಲೇಖಕರು ಬಳಸುವ ಕಲ್ಲೆಂದರೆ ಪದ. ಪದವನ್ನು ನಮ್ಮ ಕೈಯಲ್ಲಿ ಹಿಡಿದು, ಒಂದೊಂದೂ ಪದ ಇನ್ನೊಂದು ಪದದ ಜೊತೆ ಹೇಗೆ ಹೊಂದೀತು ಎಂದು ಯೋಚಿಸುತ್ತ, ಆಗಾಗ ಪದವನ್ನು ದೂರದಿಂದ ನೋಡುತ್ತ, ಆಗಾಗ ಪದವನ್ನು ಬೆರಳಲ್ಲಿ ಪೆನ್ನಿನ ನಿಬ್ಬಿನ ತುದಿಯಲ್ಲಿ ನೇವರಿಸುತತ್ತ, ತೂಕ ಹಾಕುತ್ತ, ಪದವನ್ನು ಅತ್ತ ಇತ್ತ ಸರಿಸುತ್ತ, ವರ್ಷಾನು ವರ್ಷ ತಾಳ್ಮೆಯಿಂದ ಹೊಸ ಲೋಕವನ್ನು ಕಟ್ಟುತ್ತೇವೆ, ನಾವು ಲೇಖಕರು.
ಸೂಟ್ ಕೇಸನ್ನು ತೆರೆದರೆ, ಅದರೊಳಗೆ ಇರುವುದನ್ನು ಓದಿದರೆ, ಓದಿದ್ದು ನನಗೆ ಇಷ್ಟವಾಗದಿದ್ದರೆ ಅನ್ನುವ ಭಯ ನನ್ನನ್ನು ಅಪ್ಪನ ಸೂಟ್ ಕೇಸಿನಿಂದ ದೂರವೇ ಉಳಿಸಿತ್ತು. ನಮ್ಮಪ್ಪನಿಗೂ ಅದು ಗೊತ್ತಿದ್ದರಿಂದ ತನ್ನ ಎಲ್ಲಾ ಬರಹವನ್ನು ತಾನೇ ಗಂಭೀರವಾಗಿ ಪರಿಗಣಿಸಿಲ್ಲ ಅನ್ನುವ ಹಾಗೆ ನಟಿಸುವ ಎಚ್ಚರಿಕೆ ತೋರಿದ್ದರು. ಲೇಖಕನಾಗಿ ಇಪ್ಪತ್ತೈದು ವರ್ಷ ಕಳೆದ ಮೇಲೆ ನಮ್ಮಪ್ಪ ಅನುಭವಿಸಿದ್ದ ಸಂಕಟ ನೆನೆದು ನೋವಾಗುತ್ತದೆ.
ಸ್ಪೂರ್ತಿಯಲ್ಲ, ಈ ಛಲ, ಈ ಸಹನೆಯೇ ಲೇಖಕನ ಗುಟ್ಟು. ಸ್ಫೂರ್ತಿ ಎಲ್ಲಿಂದ ಬರುತ್ತದೋ ಗೊತ್ತಿಲ್ಲ. ಸೂಜಿಯಲ್ಲಿ ನೆಲ ತೋಡಿ ಬಾವಿ ತೆಗೆದ ಹಾಗೆ ಅನ್ನುವ ಚೆಲುವಾದ ಟರ್ಕಿಶ್ ಗಾದೆ ಲೇಖಕನ ಕಸುಬನ್ನು ಮನಸ್ಸಿನಲ್ಲಿಟ್ಟುಕೊಂಡೇ ಹುಟ್ಟಿದ್ದು ಅನ್ನಿಸುತ್ತದೆ. ಹಳೆಯ ಕಥೆಗಳಲ್ಲಿ ಫೆರ್ಹಾತನ ತಾಳ್ಮೆಯನ್ನು ಕುರಿತ ಕಥೆ ನನಗೆ ಇಷ್ಟ. ಅವನು ತನ್ನ ಪ್ರೀತಿಯ ಸಲುವಾಗಿ ಬೆಟ್ಟವನ್ನೇ ಅಗೆಯುತ್ತಾನೆ. ಅದೂ ನನಗೆ ಅರ್ಥವಾಗುತ್ತದೆ. ಮೈ ನೇಮ್ ಈಸ್ ರೆಡ್ ಎಂಬ ನನ್ನ ಕಾದಂಬರಿಯಲ್ಲಿ ಹಳೆಯ ಪರ್ಶಿಯನ್ ಮಿನಿಯೇಚರ್ ಕಲಾವಿದರ ಬಗ್ಗೆ ಬರೆದಿದ್ದೆ, ಅವರು ಒಂದೇ ಕುದುರೆಯನ್ನು ಅಷ್ಟೇ ತೀವ್ರಭಾವದಲ್ಲಿ ಅಷ್ಟು ವರ್ಷಗಳ ಕಾಲ ಬರೆಯುತ್ತಾರೆ, ಒಂದೊಂದೂ ಗೆರೆ, ಒಂದೊಂದೂ ಸ್ಟ್ರೋಕ್ ಅವರ ನೆನಪಿನಲ್ಲಿ ಉಳಿದಿರುತ್ತದೆ. ತಮ್ಮ ಕಣ್ಣು ಮುಚ್ಚಿಕೊಂಡೂ ಸುಂದರ ಕುದುರೆಯ ಚಿತ್ರ ಬಿಡಿಸಬಲ್ಲರು. ಇದನ್ನು ಬರೆಯುವಾಗ ನಾನು ಲೇಖಕ ವೃತ್ತಿಯ ಬಗ್ಗೆ, ನನ್ನದೇ ಬದುಕಿನ ಬಗ್ಗೆ ಹೇಳುತ್ತಿದ್ದೆ. ಲೇಖಕ ತನ್ನದೇ ಕಥೆ ಹೇಳುವುದಿದ್ದರೆ, ಅದು ಬೇರೆಯವರ ಕಥೆ ಅನ್ನುವ ಹಾಗೆ ನಿಧಾನವಾಗಿ ಹೇಳುವುದಿದ್ದರೆ, ಕಥೆಯ ಶಕ್ತಿ ತನ್ನೊಳಗೇ ಮೈದುಂಬಿಕೊಳ್ಳುತ್ತಿರುವುದನ್ನು ಅನುಭವಿಸುವುದಿದ್ದರೆ, ಮೇಜಿನ ಮುಂದೆ ಕೂತು ತನ್ನ ಕಲೆಗೆ ಕೌಶಲ್ಯಕ್ಕೆ ತಾಳ್ಮೆಯಿಂದ ತೆತ್ತುಕೊಳ್ಳುವುದಿದ್ದರೆ, ಮೊದಲು ಅವನಲ್ಲಿ ಭರವಸೆ ಇರಬೇಕು. ಕೆಲವರನ್ನು ನಿಯಮಿತವಾಗಿ ಭೇಟಿಮಾಡುವ, ಕೆಲವರನ್ನು ಎಂದೂ ಭೇಟಿಮಾಡಲು ಹೋಗದ ಸ್ಫೂರ್ತಿ ದೇವತೆ ಇಂಥ ಭರವಸೆ ಇರುವವರನ್ನು, ವಿಶ್ವಾಸ ಇರುವವರನ್ನು ಇಷ್ಟಪಡುತ್ತಾಳೆ. ಲೇಖಕ ತಾನು ತೀರ ಒಬ್ಬಂಟಿ ಅಂದುಕೊಳ್ಳುತ್ತಿರುವಾಗ, ತನ್ನ ಪ್ರಯತ್ನ, ಕನಸು, ತನ್ನ ಬರವಣಿಗೆಯ ಮೌಲ್ಯಗಳ ಬಗ್ಗೆ ಶಂಕೆಪಡುತ್ತಿರುವಾಗ, ಇದು ತನ್ನ ಕಥೆ ಮಾತ್ರ ಅಂದುಕೊಳ್ಳುತ್ತಿರುವಾಗ, ಸ್ಫೂರ್ತಿ ದೇವತೆಯು ಅವನು ಕಟ್ಟಲು ಬಯಸುವಂಥ ಲೋಕಕ್ಕೆ ತಕ್ಕದಾದ ಕಥೆ, ಪ್ರತಿಮೆ, ಕನಸುಗಳು ಲೇಖಕನಿಗೆ ಕಾಣುವಂತೆ ಮಾಡುತ್ತಾಳೆ, ನನ್ನ ಇಡೀ ಬದುಕನ್ನು ತೆತ್ತು ಬರೆದಿರುವ ಪುಸ್ತಕಗಳನ್ನು ನೆನೆದುಕೊಂಡಾಗ ನನಗೆ ಉನ್ಮತ್ತ ಆನಂದವನ್ನು ನೀಡಿದ ವಾಕ್ಯ, ಕನಸು, ಪುಟಗಳು ನನ್ನ ಕಲ್ಪನೆಯಲ್ಲಿ ಮೂಡಿದ್ದಲ್ಲ, ಇನ್ಯಾವುದೋ ಶಕ್ತಿ ಉದಾರವಾಗಿ ನನಗೆ ಕೊಡುಗೆಯಾಗಿ ನೀಡಿದ್ದು ಅನ್ನಿಸುತ್ತದೆ.
ನಮ್ಮಪ್ಪನ ಸೂಟ್ ಕೇಸು ತೆರೆದು ನೋಟ್ ಬುಕ್ಕುಗಳನ್ನು ಓದಲು ಅಂಜುತ್ತಿದ್ದೆ. ಯಾಕೆಂದರೆ ನಾನು ಅನುಭವಿಸಿದ ಕಷ್ಟಗಳನ್ನು ನಮ್ಮಪ್ಪ ಒಪ್ಪುತ್ತಿರಲಿಲ್ಲ, ಸಹಿಸುತ್ತಿರಲಿಲ್ಲ ಅನ್ನುವುದು ಗೊತ್ತಿತ್ತು. ಏಕಾಂತವಲ್ಲ, ಗೆಳೆಯರ ಒಡನಾಟ, ಜನರ ಗುಂಪು, ಜೋಕು ನಮ್ಮಪ್ಪನಿಗೆ ಇಷ್ಟ ಅನ್ನುವುದು ಗೊತ್ತಿತ್ತು. ಆದರೆ ನನ್ನ ಯೋಚನೆ ಬೇರೆ ದಿಕ್ಕಿಗೆ ತಿರುಗಿತು. ನನ್ನಲ್ಲಿ ಮೂಡಿದ್ದ ಆಲೋಚನೆ, ವೈರಾಗ್ಯ, ಸಹನೆಯ ಕನಸು ಇವೆಲ್ಲವೂ ಲೇಖಕನಾಗಿ ನನ್ನ ಅನುಭವ ಮತ್ತೆ ನನ್ನದೇ ಬದುಕಿನ ಕ್ರಮಗಳಿಂದ ಮೂಡಿದ್ದ ಪೂರ್ವಾಗ್ರಹಗಳು ಅನ್ನಿಸಿತು. ಜನರ ಗುಂಪು, ಸಂಸಾರ ತಾಪತ್ರಯ, ಗೆಳೆಯರ ಕಂಪನಿ, ಖುಷಿ ಹರಟೆಗಳ ನಡುವೆ ಇದ್ದುಕೊಂಡೇ ಬರೆದ ಪ್ರಖರ ಲೇಖಕರು ಅನೇಕರಿದ್ದಾರೆ. ನಾವು ಹುಡುಗರಾಗಿದ್ದಾಗ ನಮ್ಮಪ್ಪ ಸಂಸಾರದ ಏಕತಾನತೆಗೆ ಬೇಸತ್ತು ನಮ್ಮನ್ನೆಲ್ಲ ಬಿಟ್ಟು ಪ್ಯಾರಿಸ್ ಗೆ ಹೋಗಿ, ಎಷ್ಟೋ ಲೇಖಕರು ಮಾಡುವ ಹಾಗೆ ಅಲ್ಲಿನ ಹೋಟೆಲ್ ರೂಮಿನಲ್ಲಿ ಕೂತು ನೋಟ್ ಬುಕ್ಕುಗಳನ್ನು ಬರೆದು ತುಂಬಿಸಿದ್ದರು. ಆ ನೋಟ್ ಬುಕ್ಕುಗಳೂ ಸೂಟ್ ಕೇಸಿನಲ್ಲಿ ಇವೆ ಅನ್ನುವುದು ಗೊತ್ತಿತ್ತು. ಯಾಕೆಂದರೆ ಆ ಸೂಟ್ ಕೇಸನ್ನು ನನ್ನ ಹತ್ತಿರ ತರುವುದಕ್ಕೆ ಕೆಲವು ವರ್ಷ ಮೊದಲೇ ನಮ್ಮಪ್ಪ ತಮ್ಮ ಬದುಕಿನ ಆ ದಿನಗಳ ಬಗ್ಗೆ ನನ್ನ ಹತ್ತಿರ ಮಾತಾಡುವುದಕ್ಕೆ ಶುರು ಮಾಡಿದ್ದರು. ನಾನಿನ್ನೂ ಚಿಕ್ಕಮಗುವಾಗಿದ್ದಾಗಲೇ ನಮ್ಮಪ್ಪ ಆ ದಿನಗಳ ಬಗ್ಗೆ ಮಾತಾಡಿದ್ದರೂ ತಮ್ಮ ದೌರ್ಬಲ್ಯ, ಲೇಖಕನಾಗಬೇಕೆಂಬ ಕನಸು, ಹೋಟೆಲ್ ರೂಮಿನಲ್ಲಿ ಕಾಡಿದ್ದ ತನ್ನತನದ ಪ್ರಶ್ನೆ ಇವನ್ನು ಪ್ರಸ್ತಾಪ ಮಾಡುತ್ತಿರಲಿಲ್ಲ. ಪ್ಯಾರಿಸ್ ರಸ್ತೆಯಲ್ಲಿ ಸಾರ್ತ್ರೆಯನ್ನು ಕಂಡದ್ದು, ತಾವು ಓದಿದ ಪುಸ್ತಕ, ನೋಡಿದ ಸಿನಿಮಾ ಇವನ್ನೆಲ್ಲ ಹೇಳಿದ್ದರು. ಬಹುಮುಖ್ಯವಾದ ಸುದ್ದಿ ಹೇಳುವವರಲ್ಲಿ ಇರುವಂಥ ಉನ್ಮತ್ತ ಪ್ರಾಮಾಣಿಕತೆ ಅವರ ದನಿಯಲ್ಲಿರುತ್ತಿತ್ತು. ಪಾಶಾಗಳ ಬಗ್ಗೆ, ಮಹಾನ್ ಧಾರ್ಮಿಕ ನಾಯಕರ ಬಗ್ಗೆ ಹೇಳುವುದಕ್ಕಿಂತ ಹೆಚ್ಚಾಗಿ ಜಗತ್ತಿನ ಲೇಖಕರ ಬಗ್ಗೆ ಮಾತಾಡುತ್ತಿದ್ದ ನಮ್ಮಪ್ಪನಿಗೆ ಕೃತಜ್ಞನಾಗಿರಬೇಕು ಅನ್ನುವುದನ್ನು ನಾನು ಲೇಖಕನಾದ ಮೇಲೆ ಎಂದೂ ಮರೆತಿಲ್ಲ. ಹಾಗಾದರೆ, ನಮ್ಮಪ್ಪನ ದೊಡ್ಡ ಲೈಬ್ರರಿಗೆ ನಾನೆಷ್ಟು ಋಣಿ ಅನ್ನುವುದನ್ನು ನೆನಪಿಟ್ಟುಕೊಂಡೇ ಅಪ್ಪನ ನೋಟ್ ಬುಕ್ಕುಗಳನ್ನು ಓದಬೇಕು. ನಮ್ಮಪ್ಪ ನಮ್ಮೊಟ್ಟಿಗೆ ಇದ್ದಾಗ ಅವರೂ ನನ್ನ ಹಾಗೇ ಒಂಟಿಯಾಗಿ ಪುಸ್ತಕ ಹಿಡಿದುಕೊಂಡೋ ಯೋಚನೆಮಾಡಿಕೊಂಡೋ ಇರಲು ಇಷ್ಟಪಡುತ್ತಿದ್ದರು, ತಮ್ಮ ಬರವಣಿಗೆಯ ಸಾಹಿತ್ಯಕ ಗುಣದ ಬಗ್ಗೆ ತೀರ ಗಮನ ಕೊಟ್ಟಿರಲಿಲ್ಲ ಅನ್ನುವುದೂ ನನ್ನ ಮನಸ್ಸಿನಲ್ಲಿರಬೇಕು.
ನಮ್ಮಪ್ಪ ನನಗಾಗಿ ಬಿಟ್ಟು ಹೋಗಿರುವ ಸೂಟ್ ಕೇಸನ್ನು ಕಾತರದಿಂದ ದಿಟ್ಟಿಸುತ್ತಿರುವಾಗ ನನ್ನ ಕೈಯಲ್ಲಿ ಆಗುವುದಿಲ್ಲ, ಅಂತಲೂ ಅನ್ನಿಸುತ್ತಿತ್ತು. ನಮ್ಮಪ್ಪ ಒಂದೊಂದು ಸಾರಿ ಪುಸ್ತಕಗಳ ಎದುರು ದಿವಾನ್ ಮೇಲೆ ಮೈ ಚಾಚಿಕೊಂಡು, ಕೈಯಲ್ಲಿದ್ದ ಪುಸ್ತಕವನ್ನೋ ನಿಯತಕಾಲಿಕವನ್ನೋ ತೊರೆದು, ಹಾಗೇ ಕನಸಿಗೆ ಸಾಗಿ ದೀರ್ಘಕಾಲ ತಮ್ಮದೇ ಯೋಚನೆಗಳಲ್ಲಿ ಮುಳುಗಿರುತ್ತಿದ್ದರು. ನಾನು ಹುಡುಗನಾಗಿದ್ದಾಗಲೂ, ಹದಿ ಹರೆಯದಲ್ಲೂ, ನಮ್ಮಪ್ಪ ಮಾಮೂಲಾಗಿ ಮಾತಾಡುವಾಗ, ಜೋಕು ಹೇಳುವಾಗ, ಮನೆಯ ಕಿರಿಕಿರಿಗೆ ಪ್ರತಿಕ್ರಿಯೆ ತೋರಿಸುವಾಗ ಇರುತಿದ್ದ ಭಾವಕ್ಕಿಂತ ತೀರ ಬೇರೆಯದೇ ಭಾವವನ್ನು -ಅವರ ನೋಟ ಒಳಮುಖಿಯಾಗುತ್ತಿರುವುದರ ಮೊದಲ ಲಕ್ಷಣಗಳನ್ನು ಕಂಡಾಗ- ನಮ್ಮಪ್ಪನಲ್ಲಿ ಏನೋ ಅತೃಪ್ತಿ ಇದೆ ಎಂದು ಅರ್ಥವಾಗಿ ಕಂಪಿಸುತ್ತಿದ್ದೆ, ಈಗ, ಎಷ್ಟೋ ವರ್ಷ ಕಳೆಮೇಲೆ ಗೊತ್ತಾಗಿದೆ-ಈ ಅತೃಪ್ತಿಯೇ ವ್ಯಕ್ತಿಯನ್ನು ಲೇಖಕನನ್ನಾಗಿಸುವ ಮೊದಲ ಲಕ್ಷಣ. ಬರಹಗಾರನಾಗುವುದಕ್ಕೆ ಕೇವಲ ಸಹನೆ ಮತ್ತು ಪರಿಶ್ರಮ ಮಾತ್ರ ಸಾಲದು. ಜನರ ಗುಂಪು, ಮಿತ್ರ ಸಮೂಹ, ಸಾಮಾನ್ಯವಾದ ದಿನನಿತ್ಯದ ಬದುಕು ಇವೆಲ್ಲದರಿಂದ ದೂರ ಸರಿದು ತಪ್ಪಿಸಿಕೊಂಡು ರೂಮಿನಲ್ಲಿ ಒಬ್ಬರೇ ಇರಬೇಕೆಂಬ ಒತ್ತಾಯ ಮೊದಲು ನಮ್ಮಲ್ಲಿ ತೀವ್ರವಾಗಿರಬೇಕು. ನಮ್ಮ ಬರಹದಲ್ಲಿ ಗಹನವಾದ ಲೋಕವನ್ನು ಸೃಷ್ಟಿ ಮಾಡಲು ಸಹನೆ ಬೇಕೆಂದು ಹಾರೈಸುತ್ತೇವೆ. ಆದರೆ ರೂಮಿನಲ್ಲಿ ಒಬ್ಬರೇ ಇರಬೇಕೆಂಬ ಆಸೆ ಹುಟ್ಟುತ್ತದಲ್ಲ ಅದು ನಮ್ಮನ್ನು ಸೃಷ್ಟಿ ಕ್ರಿಯೆಯಲ್ಲಿ ತೊಡಗಿಸುತ್ತದೆ. ತನ್ನ ಬಳಿ ಇರುವ ಪುಸ್ತಕಗಳನ್ನು ತೃಪ್ತಿಯಾಗುವವರೆಗೆ ಓದುವ, ತನ್ನ ಅಂತರಂಗದ ದನಿಯನ್ನಷ್ಟೇ ಆಲಿಸುವ, ಇತರರ ನುಡಿಗಳ ಬಗ್ಗೆ ತಗಾದೆ ತೆಗೆಯುವ, ಓದುತ್ತಿರುವ ಪುಸ್ತಕಗಳ ಜೊತೆ ಸಂಭಾಷಣೆಯಲ್ಲಿ ತೊಡಗುವ, ಸಂಭಾಷಿಸುತ್ತ ತನ್ನದೇ ಯೋಚನೆಗಳನ್ನು ಲೋಕವನ್ನು ಕಟ್ಟಿಕೊಳ್ಳುವ ಸ್ವತಂತ್ರ್ಯ ಲೇಖಕನೊಬ್ಬನ ಕುರುಹು ಮೊದಲು ಕಾಣುವುದು ಮಾಂಟೇನ್ನಲ್ಲಿ. ಅವನು ಆಧುನಿಕ ಸಾಹಿತ್ಯದ ಆರಂಭ ಕಾಲದಲ್ಲಿದ್ದ. ನಮ್ಮಪ್ಪ ಮಾಂಟೇನ್ನನ್ನು ಮತ್ತೆ ಮತ್ತೆ ಓದುತ್ತಿದ್ದರು, ಓದುವಂತೆ ನನಗೂ ಹೇಳುತ್ತಿದ್ದರು. ಪೂರ್ವದವರೇ ಆಗಿರಲಿ ಪಶ್ಚಿಮದವರೇ ಆಗಿರಲಿ ಸಮಾಜದಿಂತ ತಮ್ಮನ್ನು ಕತ್ತರಿಸಿಕೊಂಡು, ತಮ್ಮ ಪುಸ್ತಕಗಳ ಜೊತೆಯಲ್ಲಿ ತಮ್ಮ ರೂಮಿನಲ್ಲಿ ಇದ್ದುಬಿಡುವ ಲೇಖಕರ ಪರಂಪರೆಗೆ ಸೇರಿದವನಾಗಿ ನನ್ನನ್ನು ನಾನೇ ಕಾಣಲು ಬಯಸುತ್ತೇನೆ.
ಹೀಗೆ ರೂಮಿನಲ್ಲಿ ಕೂಡಿಹಾಕಿಕೊಂಡಾಗ ನಾವಂದುಕೊಂಡಷ್ಟು ಒಂಟಿಯಾಗಿಲ್ಲ ನಾವು ಅನ್ನುವುದು ಗೊತ್ತಾಗುತ್ತದೆ. ನಮಗಿಂತ ಮೊದಲೇ ಮಾತಾಡಿ ಹೋದವರ ನುಡಿ, ಬೇರೆಯವರ ಕಥೆ, ಬೇರೆಯವರ ಪುಸ್ತಕ, ಬೇರೆಯವರ ಮಾತುಗಳು-ನಾವು ಯಾವುದನ್ನು ಪರಂಪರೆ ಎನ್ನುತ್ತೇವೋ ಅದು ನಮ್ಮ ಜೊತೆಗೆ ಇರುತ್ತದೆ. ಮನುಷ್ಯ ಕುಲ ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಶೇಖರಿಸಿ ಕೂಡಿಟ್ಟುಕೊಂಡಿರುವ ಅತ್ಯಂತ ಬೆಲೆಬಾಳುವ ಸಂಗ್ರಹವೇ ಸಾಹಿತ್ಯ ಅನ್ನುವುದು ನನ್ನ ನಂಬಿಕೆ. ಮನಸ್ಸು ವಿಚಲಿತಗೊಳಿಸುವ ಲೇಖಕರ ಮಾತಿಗೆ ಗಮನ ನೀಡಿದ ಸಮಾಜ, ಕುಲ, ಜನತೆ, ದೇಶಗಳು ಹೆಚ್ಚು ವಿವೇಕಿಗಳಾಗಿ, ಶ್ರೀಮಂತವಾಗಿ ಮುಂದುವರೆದಿವೆ. ಪುಸ್ತಕಗಳನ್ನು ಸುಡುವುದು, ಲೇಖಕರನ್ನು ನಿಂದಿಸುವುದು ಇವು ಕರಾಳವಾದ ಕಾಲ ನಮ್ಮನ್ನು ಆವರಿಸುತ್ತಿದೆ ಅನ್ನುವುದರ ಸಂಕೇತ ಅನ್ನುವುದೂ ನಮಗೆಲ್ಲ ಗೊತ್ತು. ಆದರೆ, ಸಾಹಿತ್ಯ ಎಂದೂ ಕೇವಲ ರಾಷ್ಟ್ರೀಯ ಕಳಕಳಿಯ ವಿಚಾರ ಮಾತ್ರವೇ ಅಲ್ಲ. ಕೋಣೆಯಲ್ಲಿ ತನ್ನನ್ನು ಕೂಡಿಕೊಂಡು ತನ್ನೊಳಗಿನ ಯಾನಕ್ಕೆ ತೊಡಗುವ ಲೇಖಕ ವರ್ಷಗಳು ಕಳೆದ ಹಾಗೆ ಸಾಹಿತ್ಯದ ಮೊದಲನೆಯ ಶಾಶ್ವತ ನಿಯಮವನ್ನು ಕಂಡುಕೊಳ್ಳುತ್ತಾನೆ-ತನ್ನ ಕಥೆಗಳನ್ನು ಬೇರೆಯ ಜನರ ಕಥೆಗಳ ಹಾಗೆಯೂ ಬೇರೆಯ ಜನರ ಕಥೆಗಳನ್ನು ತನ್ನ ಸ್ವಂತದ ಕಥೆಯ ಹಾಗೆಯೂ ಹೇಳುವ ಕಲಾವಂತಿಕೆಯನ್ನು ಪಡೆಯಬೇಕು. ಸಾಹಿತ್ಯವೆಂದರೆ ಇದೇ. ಮೊದಲಿಗೆ ನಾವು ಬೇರೆಯ ಜನರ ಕಥೆ, ಪುಸ್ತಕಗಳ ಯಾನವನ್ನೂ ಮಾಡಬೇಕು.
ನಮ್ಮಪ್ಪನ ಲೈಬ್ರರಿ ಚೆನ್ನಾಗಿತ್ತು. ಸಾವಿರದ ಐನೂರು ಪುಸ್ತಕಗಳಿದ್ದವು. ಒಳ್ಳೆಯ ಲೇಖಕನಿಗೆ ಅಷ್ಟು ಪುಸ್ತಕ ಬೇಕಾದಷ್ಟಾಯಿತು. ನನ್ನ ಇಪ್ಪತ್ತೆರಡನೆಯ ವಯಸಿನ ಹೊತ್ತಿಗೆ ಅವೆಲ್ಲವನ್ನೂ ಓದಿರದಿದ್ದರೂ ಒಂದೊಂದೂ ಪುಸ್ತಕದ ಪರಿಚಯ ಚೆನ್ನಾಗಿತ್ತು. ಯಾವ ಪುಸ್ತಕ ಮುಖ್ಯ, ಯಾವುದು ಓದುವುದಕ್ಕೆ ಸುಲಭ, ಯಾವುದು ಕ್ಲಾಸಿಕ್, ಯಾವುದು ತೀರ ಅನಿವಾರ್ಯ, ಸ್ಥಳೀಯ ಚರಿತ್ರೆಯ ಮನರಂಜಕ ಕಥೆಗಳನ್ನು ಹೇಳುವ ಆದರೆ ಮರೆಯಬಹುದಾದ ಪುಸ್ತಕ ಯಾವುದು, ನಮ್ಮಪ್ಪ ತೀರ ಗೌರವಿಸುವ ಫ್ರೆಂಚ್ ಲೇಖಕರ ಪುಸ್ತಕ ಯಾವುದು ಎಲ್ಲಾ ಗೊತ್ತಾಗುತ್ತಿತ್ತು. ಒಂದೊಂದು ಸಾರಿ ಲೈಬ್ರರಿಯನ್ನು ದೂರದಿಂದ ನೋಡುತ್ತಾ ಬೇರೆ ಇನ್ನೊಂದು ಮನೆಯಲ್ಲಿ, ಇನ್ನೊಂದು ಲೈಬ್ರರಿ, ಇದಕ್ಕಿಂತ ಉತ್ತಮವೂ ಆದದ್ದನ್ನು ನನಗಾಗಿ ಮಾಡಿಕೊಳ್ಳುವ ಕನಸು ಕಾಣುತ್ತಿದ್ದೆ. ನಮ್ಮಪ್ಪನ ಲೈಬ್ರರಿಯನ್ನು ದೂರದಿಂದ ನೋಡಿದಾಗ ಅದು ನಿಜ ಜಗತ್ತಿನ ಪುಟ್ಟ ಚಿತ್ರದ ಹಾಗೆ ಕಾಣುತ್ತಿತ್ತು. ಆದರೆ ಇದು ನಮ್ಮದೇ ಮೂಲೆಯಿಂದ, ಇಸ್ತಾಂಬುಲ್ನಿಂದ ಕಂಡ ಜಗತ್ತು. ನಮ್ಮಪ್ಪ ವಿದೇಶಕ್ಕೆ ಹೋದಾಗ ಪ್ಯಾರಿಸ್ಸು ಅಮೆರಿಕದಿಂದ ತಂದ ಪುಸ್ತಕಗಳಿಂದ ಲೈಬ್ರರಿ ಮಾಡಿಕೊಂಡಿದ್ದರು. ಜೊತೆಗೇ ೪೦ ಮತ್ತು ೫೦ರ ದಶಕಗಳಲ್ಲಿ ವಿದೇಶದ ಹಳೆಯ, ಹೊಸ ಪುಸ್ತಕ ಮಾರುತ್ತಿದ್ದ ಇಸ್ತಾಂಬುಲ್ ಅಂಗಡಿಗಳಿಂದ ಖರೀದಿಸಿದವೂ ಇದ್ದವು. ಆ ಅಂಗಡಿಯವರು ನನಗೂ ಗೊತ್ತಿದ್ದರು. ನನ್ನ ಜಗತ್ತು ಅನ್ನುವುದು ಸ್ಥಳೀಯ-ರಾಷ್ಟ್ರೀಯ-ಮತ್ತು ಪಾಶ್ಚಾತ್ಯದ ಮಿಶ್ರಣವಾಗಿತ್ತು. ನಾನು ೭೦ರ ದಶಕದಲ್ಲಿ ಮಹತ್ವಾಕಾಂಕ್ಷೆಯಿಂದಲೇ ನನ್ನ ಲೈಬ್ರರಿ ಕಟ್ಟಿಕೊಳ್ಳುವುದಕ್ಕೆ ಶುರು ಮಾಡಿದೆ. ಇಸ್ತಾಂಬುಲ್ ನಲ್ಲಿದ್ದ ನಾನು ಲೇಖಕನಾಗಲು ಇನ್ನೂ ನಿರ್ಧಾರ ಮಾಡಿರಲಿಲ್ಲ. ಚಿತ್ರಕಾರನಾಗುವುದಕ್ಕೂ ಒಲ್ಲೆ ಅನ್ನಿಸಿತ್ತು. ನನ್ನ ಬದುಕಿನ ದಾರಿ ಯಾವುದು ಅನ್ನುವುದು ಖಚಿತವಾಗಿರಲಿಲ್ಲ. ಓದು ಬರಹಗಳ ಕಾರಣದಿಂದ ಹುಟ್ಟಿಕೊಂಡ ಆಸೆ ಇತ್ತು, ತಣಿಯದ ಕುತೂಹಲವಿತ್ತು. ಹಾಗೆಯೇ ನನ್ನ ಬದುಕಿನಲ್ಲಿ ಏನೋ ಕೊರತೆ ಇದೆ, ಮಿಕ್ಕವರ ಹಾಗೆ ನಾನು ಬದುಕಲಾರೆ ಅನ್ನಿಸುತಿತ್ತು. ನಮ್ಮಪ್ಪನ ಲೈಬ್ರರಿ ಕಂಡಾಗ ಮನಸ್ಸಿನಲ್ಲಿ ಹುಟ್ಟುತಿದ್ದ ಭಾವನೆಗೂ ಇದಕ್ಕೂ ಸಂಬಂಧವಿದೆ. ನಮ್ಮಪ್ಪನ ಲೈಬ್ರರಿಗೆ ಹೋದಾಗಲೆಲ್ಲ ನಾನು ಲೋಕದ ಸಂಗತಿಗಳ ಕೇಂದ್ರದಿಂದ ದೂರದಲ್ಲಿದ್ದೇನೆ ಅನ್ನಿಸುತ್ತಿತ್ತು. ಆ ದಿನಗಳಲ್ಲಿ ಇಸ್ತಾಂಬುಲ್ ನಲ್ಲಿದ್ದ ನಮಗೆಲ್ಲ ಅಂಥ ಭಾವನೆ ಹುಟ್ಟುತ್ತಿತ್ತು. ನಾವೆಲ್ಲ ಯಾವುದೋ ಹಳ್ಳಿಗಾಡಿನಲ್ಲಿದ್ದೇವೆ ಅನ್ನಿಸುತಿತ್ತು. ನಾನು ಇರುವ ದೇಶದಲ್ಲಿ ಕಲಾವಿದ, ಲೇಖಕ, ಚಿತ್ರಕಾರರ ಬಗ್ಗೆ ಕುತೂಹಲ ಕಿಂಚಿತ್ತೂ ಇಲ್ಲ, ಇಂಥವರಿಗೆ ಬದುಕಿನ ಭರವಸೆಯೂ ಇಲ್ಲ ಅನ್ನುವುದು ನನಗೆ ಚೆನ್ನಾಗಿಯೇ ಗೊತ್ತಿತ್ತು. ನನ್ನ ಕಳವಳಕ್ಕೆ, ನನ್ನ ಬದುಕಿನಲ್ಲಿ ಏನೋ ಕೊರತೆ ಅನ್ನಿಸುವುದಕ್ಕೆ ಇದೂ ಕಾರಣ. ಎಪ್ಪತ್ತರ ದಶಕದಲ್ಲಿ ನಮ್ಮಪ್ಪ ಕೊಟ್ಟ ಹಣವನ್ನು ಪಡೆದುಕೊಂಡು ಆಸೆಬುರುಕನ ಹಾಗೆ ಹೋಗಿ, ಮಾಸಿದ, ಧೂಳು ಹಿಡಿದ, ನಾಯಿಕಿವಿಯ ಹಾಗೆ ಜೋಲುತ್ತಿದ್ದ ಪುಟಗಳಿದ್ದ ಪುಸ್ತಕಗಳನ್ನು ಹಳೆಯ ಪುಸ್ತಕಗಳ ಅಂಗಡಿಯಲ್ಲಿ ಖರೀದಿ ಮಾಡುತ್ತಿದ್ದೆ. ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಗಳು ಅಯ್ಯೋ ಪಾಪ ಅನ್ನುವ ಮರುಕ ಹುಟ್ಟಿಸುವ ಹಾಗೆ ಇರುತ್ತಿದ್ದವು. ರಸ್ತೆಬದಿಯಲ್ಲಿ, ಮಸೀದಿಯ ಅಂಗಳದಲ್ಲಿ, ಬಿದ್ದ ಮನೆಗಳ ಮೋಟು ಗೋಡೆಗಳ ಮೇಲೆ ತಮ್ಮ ಪುಸ್ತಕ ಮಾರುವವರನ್ನು ಕಂಡಾಗ ಕೂಡ ಮರುಕ ಹುಟ್ಟುತಿತ್ತು.
ಸಾಹಿತ್ಯದಲ್ಲೂ ಬದುಕಿನಲ್ಲೂ ಈ ಜಗತ್ತಿನಲ್ಲೂ ನನ್ನ ಸ್ಥಾನ ಕೇಂದ್ರಸ್ಥವಾದುದಲ್ಲ. ಜಗತ್ತಿನ ಕೇಂದ್ರದಲ್ಲಿ ಶ್ರೀಮಂತವಾದ ಬದುಕಿದೆ, ನಮ್ಮ ಬದುಕಿಗಿಂತ ಹೆಚ್ಚು ಕುತೂಹಲ ಕೆರಳಿಸುವ ಹಾಗಿದೆ, ಇಸ್ತಾಂಬುಲ್ ನಲ್ಲಿರುತ್ತ, ಟರ್ಕಿಯಲ್ಲಿರುತ್ತ ಅಂಥ ಬದುಕಿಗೆ ಹೊರತಾದವನಾಗಿದ್ದೇನೆ ನಾನು ಅನ್ನಿಸುತಿತ್ತು. ಇವತ್ತು ಜಗತ್ತಿನ ಅನೇಕರ ಜೊತೆಗೆ ಈ ಭಾವನೆ ಹಂಚಿಕೊಳ್ಳುತ್ತಿದ್ದೇನೆ ಅನ್ನಿಸುತ್ತಿದೆ. ಇದೇ ರೀತಿಯಲ್ಲಿ ಸಾಹಿತ್ಯದ ಲೋಕಕ್ಕೂ ಒಂದು ಕೇಂದ್ರವಿದೆ, ಅದು ನನ್ನಿಂದ ಬಹಳ ದೂರದಲ್ಲಿದೆ ಅನ್ನಿಸುತಿತ್ತು. ನನ್ನ ಮನಸ್ಸಿನಲ್ಲಿ ಇದ್ದದ್ದು ಪಾಶ್ಚಾತ್ಯ ಜಗತ್ತಲ್ಲ, ಪಾಶ್ಚಾತ್ಯ ಸಾಹಿತ್ಯ. ನಾವು ಟರ್ಕರು ಅದರ ಹೊರಗೇ ಇದ್ದೆವು. ಈ ಮಾತಿಗೆ ನಮ್ಮಪ್ಪನ ಲೈಬ್ರರಿಯೇ ಸಾಕ್ಷಿ. ಒಂದು ತುದಿಯಲ್ಲಿ ಇಸ್ತಾಂಬುಲ್ ಪುಸ್ತಕಗಳು, ನಮ್ಮ ಸ್ಥಳೀಯ ಜಗತ್ತು, ನಮಗೆಲ್ಲ ಪ್ರಿಯವಾದ ಅದರ ವಿವರಗಳು ಇದ್ದವು. ಇನ್ನೊಂದು ತುದಿಯಲ್ಲಿ ಪಶ್ಚಿಮದ ಜಗತ್ತು ಇತ್ತು. ಆ ಜಗತ್ತಿಗೂ ನಮ್ಮ ಜಗತ್ತಿಗೂ ಹೋಲಿಕೆಯೇ ಇರಲಿಲ್ಲ. ಇದು ನಮಗೆ ನೋವು ತರುತ್ತಿತ್ತು, ಭರವಸೆಯನ್ನೂ ಹುಟ್ಟಿಸುತ್ತಿತ್ತು. ಬರೆಯುವುದೆಂದರೆ, ಓದುವುದೆಂದರೆ ಇನ್ನೊಂದು ಜಗತ್ತಿನ ಅನ್ಯತೆ, ಅಪರಿಚಿತತೆ, ಬೆರಗುಗಳಲ್ಲಿ ಸಮಾಧಾನವನ್ನು ಕಾಣುವುದಕ್ಕೆ ನಾವಿದ್ದ ಜಗತ್ತನ್ನು ಬಿಡುವ ಕೆಲಸವಾಗಿರುತಿತ್ತು. ನಮ್ಮಪ್ಪ ತಮ್ಮ ಬದುಕನ್ನು ಬಿಟ್ಟು ಪಶ್ಚಿಮಕ್ಕೆ ಪಲಾಯನ ಮಾಡಲು ಕಾದಂಬರಿ ಓದುತ್ತಿದ್ದರು ಅನ್ನಿಸುತ್ತದೆ. ಆನಂತರದಲ್ಲಿ ನಾನೂ ಅದೇ ಕೆಲಸ ಮಾಡುವವನಿದ್ದೆ. ನಮ್ಮ ಸಂಸ್ಕೃತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾವು ಆ ದಿನಗಳಲ್ಲಿ ಪುಸ್ತಕಗಳನ್ನು ಎತ್ತಿಕೊಳ್ಳುತ್ತಿದ್ದೆವು ಅನ್ನಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ ನಮಗೆ ಕೊರತೆಗಳೇ ಕಾಣುತಿದ್ದವು. ಕೇವಲ ಓದುವುದಷ್ಟರಿಂದಲೇ ನಾವು ಇಸ್ತಾಂಬುಲ್ ಬಿಟ್ಟು ಪಶ್ಚಿಮಕ್ಕೆ ಪ್ರವಾಸ ಹೋಗುತಿದ್ದೆವು ಎಂದಲ್ಲ, ಬರವಣಿಗೆಯೂ ಅದೇ ಕಾರಣಕ್ಕೆ ಒದಗುತಿತ್ತು. ಆ ನೋಟ್ ಬುಕ್ಕುಗಳನ್ನು ತುಂಬಿಸುವ ಸಲುವಾಗಿ ನಮ್ಮಪ್ಪ ಪ್ಯಾರಿಸ್ಗೆ ಹೋಗಿ, ರೂಮಿನಲ್ಲಿ ಒಂಟಿಯಾಗಿ ಕೂತು ಬರೆದಿದ್ದರು, ಆಮೇಲೆ ಅದನ್ನೆಲ್ಲ ಟರ್ಕಿಗೆ ವಾಪಸ್ಸು ತಂದಿದ್ದರು. ನಮ್ಮಪ್ಪನ ಸೂಟ್ ಕೇಸು ದಿಟ್ಟಿಸುತ್ತಿರುವಾಗ ಈ ಕಾರಣಕ್ಕೇ ನನ್ನ ಮನಸ್ಸು ಅಸ್ವಸ್ಥವಾಗಿದೆ ಅನ್ನಿಸುತಿತ್ತು. ಟರ್ಕಿಯಲ್ಲಿ ಲೇಖಕನಾಗಿ ಬದುಕಲು ಇಪ್ಪತ್ತೈದು ವರ್ಷಕಾಲ ಕೋಣೆಯಲ್ಲಿ ಕೂತು ಕೆಲಸ ಮಾಡಿ ಆದಮೇಲೆ ನಮ್ಮಪ್ಪ ತನ್ನ ಆಲೋಚನೆಗಳನ್ನೆಲ್ಲ ಸೂಟ್ಕೇಸಿನಲ್ಲಿ ಬಚ್ಚಿಟ್ಟಿದ್ದಕ್ಕಾಗಿ, ಬರವಣಿಗೆ ಅನ್ನುವುದು ಸಮಾಜ, ಪ್ರಭುತ್ವ ಮತ್ತು ಜನದ ಕಣ್ಣಿನಿಂದ ದೂರವಾಗಿ ಗುಟ್ಟಾಗಿ ಮಾಡುವ ಕೆಲಸ ಎಂದು ಭಾವಿಸಿದ್ದಕ್ಕಾಗಿ ನನ್ನ ಮನಸ್ಸು ಕಹಿಯಾಗುತ್ತದೆ. ಈ ಕಾರಣಕ್ಕಾಗೇ ಇರಬೇಕು ನಮ್ಮಪ್ಪ ಸಾಹಿತ್ಯವನ್ನು ನನ್ನ ಹಾಗೆ ಗಂಭೀರವಾಗಿ ಪರಿಗಣಿಸಲಿಲ್ಲವೆಂದು ಅವರ ಬಗ್ಗೆ ಕೋಪಗೊಂಡಿದ್ದೆ.
ನಮ್ಮಪ್ಪ ನನ್ನ ಥರ ಬದುಕಲಿಲ್ಲ, ಬದುಕಿನ ಜೊತೆ ನನ್ನ ಹಾಗೆ ಎಂದೂ ಜಗಳವಾಡಲಿಲ್ಲ, ಗೆಳೆಯರು ಮತ್ತೆ ಮನೆಯವರ ಜೊತೆ ನಗುನಗುತ್ತ ಸುಖವಾಗಿದ್ದುಬಿಟ್ಟರು ಅನ್ನುವ ಕಾರಣಕ್ಕೇ ನನಗೆ ಅವರ ಮೇಲೆ ಕೋಪವಿತ್ತು. ಆದರೆ ನನಗೆ ಅವರ ಮೇಲೆ ಇರುವುದು ಕೋಪಕ್ಕಿಂತ ಹೆಚ್ಚಾಗಿ ಅಸೂಯೆ ಎಂದು ನನ್ನೊಳಗೇ ಅನ್ನಿಸುತ್ತಲೂ ಇತ್ತು. ಅಸೂಯೆ ಅನ್ನುವುದೇ ಸರಿ ಅನ್ನಿಸಿ ಇನ್ನಷ್ಟು ಕಸಿವಿಸಿಯಾಗುತಿತ್ತು.
ಆಗ ತಿರಸ್ಕಾರದ, ಕೋಪದ ದನಿಯಲ್ಲಿ ಕೇಳಿಕೊಳ್ಳುತ್ತಿದ್ದೆ-ಸಂತೋಷವೆಂದರೇನು? ಒಂಟಿ ಕೋಣೆಯಲ್ಲಿ ಗಹನವಾಗಿ ಬದುಕಿದೆ ಅಂದುಕೊಳ್ಳುವುದು ಸಂತೋಷವೇನು? ಅಥವಾ ಸಂತೋಷವೆಂದರೆ ಸಮಾಜದಲ್ಲಿ ಸುಖವಾಗಿ ಬದುಕುತ್ತ, ಎಲ್ಲರೂ ಬದುಕುವ ಹಾಗೆ ಬದುಕುತ್ತ, ಸಂತೋಷವಾಗಿದ್ದೇನೆ ಎಂದು ನಂಬಿಕೊಳ್ಳುವುದೋ? ಸುತ್ತಲೂ ಇರುವವರ ಜೊತೆ ಸಾಮರಸ್ಯವಿದೆ ಎಂದು ತೋರಿಸಿಕೊಳ್ಳುತ್ತ ಗುಟ್ಟಾಗಿ ಬರವಣಿಗೆಯಲ್ಲಿ ತೊಡಗುವುದು ಸಂತೋಷವೋ ದುಃಖವೋ? ಇವೆಲ್ಲ ಮನಸ್ಸು ಕೆಟ್ಟಾಗ ಹುಟ್ಟುತಿದ್ದ ಪ್ರಶ್ನೆಗಳು. ಸಂತೋಷವೆನ್ನುವುದು ಒಳ್ಳೆಯ ಬದುಕಿನ ಅಳತೆಗೋಲು ಅನ್ನುವ ವಿಚಾರ ನನಗೆ ಬಂದದ್ದು ಎಲ್ಲಿಂದ? ಜನ, ಪೇಪರುಗಳು, ಎಲ್ಲರೂ ಕೂಡ ಸಂತೋಷವೇ ಬದುಕಿನ ಮಾಪಕ ಅನ್ನುವ ಹಾಗೆ ವರ್ತಿಸುತ್ತಾರೆ. ಇದೊಂದೇ ಕಾರಣ ಸಾಲದೇ-ಈ ನಂಬಿಕೆಗೆ ವಿರುದ್ಧವಾದದ್ದೇ ಸತ್ಯವೇ ಎಂದು ಅನ್ವೇಷಿಸುವುದಕ್ಕೆ? ನಮ್ಮಪ್ಪ ಎಷ್ಟೋ ಸಾರಿ ಮನೆ ಬಿಟ್ಟು ಓಡಿ ಹೋಗಿದ್ದರು. ನಮ್ಮಪ್ಪನನ್ನು ನಾನೆಷ್ಟು ಬಲ್ಲೆ? ನಮ್ಮಪ್ಪನ ಅತೃಪ್ತಿಯನ್ನು ಹೇಗೆ ಅರ್ಥಮಾಡಿಕೊಳ್ಳಲಿ?
ನಮ್ಮಪ್ಪನ ಸೂಟ್ ಕೇಸನ್ನು ಮೊದಲು ತೆರೆದಾಗ ಇವೆಲ್ಲ ಸಂಗತಿಗಳು ಮನಸ್ಸನ್ನು ಒತ್ತುತಿದ್ದವು. ನನಗೆ ಏನೇನೂ ತಿಳಿದಿರದ ಗುಟ್ಟಾದ ದುಃಖವೊಂದು ನಮ್ಮಪ್ಪನಲ್ಲಿ ಇತ್ತೋ, ಅದನ್ನು ಬರಹದ ಮೂಲಕ ಹೊರಚೆಲ್ಲಿ ಸಮಾಧಾನ ತಂದುಕೊಂಡರೋ? ಸೂಟ್ಕೇಸು ತೆಗೆಯುತಿದ್ದ ಹಾಗೇ ಪ್ರವಾಸದ ಪರಿಮಳ ನೆನೆದುಕೊಂಡೆ, ಹಲವು ನೋಟ್ಬುಕ್ಕುಗಳನ್ನು ಗುರುತಿಸಿದೆ. ವರ್ಷಗಳ ಮೊದಲು ಅಪ್ಪ ಅವನ್ನು ನನಗೆ ತೋರಿಸಿದಾಗ ಹೆಚ್ಚು ಏನೂ ಹೇಳಿರಲಿಲ್ಲ ಅನ್ನುವುದೂ ಮನಸ್ಸಿಗೆ ಬಂತು. ಈಗ ನನ್ನ ಕೈಯಲ್ಲಿದ್ದ ನೋಟ್ ಬುಕ್ಕುಗಳನ್ನು ಅಪ್ಪ ಯುವಕರಾಗಿದ್ದಾಗ, ನಮ್ಮನ್ನೆಲ್ಲ ಬಿಟ್ಟು ಪ್ಯಾರಿಸ್ಗೆ ಹೋಗಿದ್ದಾಗ ಬರೆದು ತುಂಬಿಸಿದ್ದರು. ನಾನು ಮೆಚ್ಚಿಕೊಂಡಿದ್ದ ಲೇಖಕರ ಹಾಗೆ ಯಾರ ಜೀವನ ಚರಿತ್ರೆಗಳನ್ನು ಓದಿದ್ದೆನೋ ಅವರ ಹಾಗೆ ನಾನೂ ಕೂಡ ನಮ್ಮಪ್ಪ ಏನು ಬರೆದಿದ್ದಾರೆ, ಈಗ ನನಗಾಗಿರುವಷ್ಟು ವಯಸ್ಸು ಅವರಿಗೆ ಆಗಿದ್ದಾಗ ಏನು ಯೋಚನೆ ಮಾಡುತಿದ್ದರು ಅನ್ನುವುದನ್ನು ತಿಳಿಯಲು ಬಯಸಿದ್ದೆ. ಅಂಥ ವಿಷಯವೇನೂ ನೋಟ್ ಬುಕ್ಕಿನಲ್ಲಿ ದೊರೆಯುವುದಿಲ್ಲ ಅನ್ನುವುದು ಬೇಗನೇ ತಿಳಿಯಿತು. ನಮ್ಮಪ್ಪನ ನೋಟ್ ಬುಕ್ಕುಗಳಲ್ಲಿ ಲೇಖಕನ ದನಿ ಕೇಳಿಸಿದಾಗ ಮನಸ್ಸು ತೀರ ಚಡಪಡಿಸಿತು. ಅದು ನಮ್ಮಪ್ಪನ ದನಿಯಲ್ಲ, ಅದು ನಮ್ಮಪ್ಪ ಎಂದು ಯಾರನ್ನು ನಾನು ತಿಳಿದಿದ್ದೆನೋ, ಯಾರ ಮಾತಿನ ರೀತಿ ನನಗೆ ಪರಿಚಯವಾಗಿತ್ತೋ ಆ ರೀತಿಯ ದನಿಯಲ್ಲ, ಮಾತಲ್ಲ. ಅದನ್ನು ಬರೆದಾಗ ನಮ್ಮಪ್ಪ ಇನ್ನೂ ನಮ್ಮಪ್ಪ ಆಗಿರಲಿಲ್ಲ ಅಂದುಕೊಳ್ಳುವ ಭಯದ ಅಡಿಯಲ್ಲಿ ಇನ್ನೊಂದು ಭಯ ಅಡಗಿತ್ತು. ನಾನು ಅಥೆಂಟಿಕ್ ಅಲ್ಲ, ನಮ್ಮಪ್ಪನ ಬರವಣಿಗೆಯಲ್ಲಿ ಒಳ್ಳೆಯದೇನೂ ಕಾಣಲಾರೆ ಅನ್ನುವ ಭಯ ಅದು. ನಮ್ಮಪ್ಪ ಇತರ ಲೇಖಕರ ಪ್ರಭಾವಕ್ಕೆ ಬಹಳ ಒಳಗಾಗಿರಬೇಕು, ಅದರಿಂದ ಹತಾಶರಾಗಿರಬಹುದು ಅನ್ನುವ ಭಯವೂ ಹೆಚ್ಚಿತು. ಇಂಥದೇ ಭಯ ನಾನು ಯುವಕನಾಗಿದ್ದಾಗ ನನ್ನನ್ನೂ ಕಾಡಿತ್ತು, ನನ್ನ ಜೀವ ಜೀವಾಳವನ್ನು, ಬರೆಯಬೇಕೆಂಬ ಆಸೆಯನ್ನು, ಬರೆದದ್ದನ್ನು ಎಲ್ಲವನ್ನೂ ಪ್ರಶ್ನಿಸಿ ನಿರಾಕರಿಸುವ ಹಾಗೆ ಮಾಡುತಿತ್ತು. ಲೇಖಕನಾಗಿ ಮೊದಲ ಹತ್ತು ವರ್ಷಗಳಲ್ಲಿ ಈ ಕಳವಳ ತೀರ ಆಳವಾಗಿತ್ತು, ಇದರ ವಿರುದ್ಧ ಹೋರಾಡುತ್ತ ನಾನೊಂದು ದಿನ ಸೋಲು ಒಪ್ಪಿಕೊಂಡೇನು ಅನ್ನಿಸುತಿತ್ತು, ಪೇಂಟಿಂಗ್ ಕೈಬಿಟ್ಟ ಹಾಗೆ ಬರವಣಿಗೆಯನ್ನೂ ಬಿಟ್ಟೇನು ಅಂದುಕೊಳ್ಳುತಿದ್ದೆ.
ನಮ್ಮಪ್ಪನ ಸೂಟ್ ಕೇಸು ಮುಚ್ಚುವಾಗ ನಾನು ದೂರ ಪ್ರಾಂತದ ಹಳ್ಳಿಗಾಡಿನಲ್ಲಿ ಸಿಕ್ಕುಬಿದ್ದವನು, ನನ್ನಲ್ಲಿ ಅಥೆಂಟಿಕ್ ಗುಣವಿಲ್ಲ ಎಂಬ ಎರಡು ಮುಖ್ಯ ಭಾವ ಇದ್ದವು ಎಂದು ಹೇಳಿದೆ. ಇಂಥ ಭಾವ ನನ್ನಲ್ಲಿ ಬಂದದ್ದು ಅದೇ ಮೊದಲೇನೂ ಅಲ್ಲ. ಎಷ್ಟೋ ವರ್ಷ ಕಾಲ, ಓದುವಾಗ, ಬರೆಯುವಾಗ, ಅಧ್ಯಯನ ಮಾಡುವಾಗ, ಕಂಡುಕೊಳ್ಳುವಾಗ ಈ ಭಾವಗಳು ಆಳ, ಮತ್ತೂ ಆಳವಾಗುತ್ತ, ಈ ಭಾವಗಳು ಥರಾವರಿಯಾಗಿ ಕಾಣಿಸಿಕೊಳ್ಳುತಿದ್ದವು. ಬಗೆಬಗೆಯ ಅನುದ್ದೇಶಿತ ಫಲಿತಾಂಶಗಳು, ಬಗೆಬಗೆಯಲ್ಲಿ ಈ ಭಾವಗಳು ಪ್ರಚೋದನೆ ಪಡೆದು ಬೇರೆ ಬೇರೆ ಬಣ್ಣ ಪಡೆದು, ಬಗೆ ಬಗೆಯ ರೀತಿಯಲ್ಲಿ ಕೊನೆಗೊಳ್ಳುವುದು ನನ್ನ ಅನುಭವಕ್ಕೆ ಬಂದಿತ್ತು. ಹೀಗಾದಾಗ ಪುಸ್ತಕಗಳೂ ಬದುಕೂ ಯುವಕನಾಗಿದ್ದ ನನ್ನಲ್ಲಿ ಗೊಂದಲ ಹುಟ್ಟಿಸಿ ನೋವು ತಂದು, ಚೈತನ್ಯ ದಿಕ್ಕುತಪ್ಪುತಿತ್ತು. ಆದರೆ ಬರೆಯುವ ಮೂಲಕವೇ ನಾನು ಅಥೆಂಟಿಕ್ ಆಗುವುದು ಅನ್ನುವ ಸಮಸ್ಯೆಯನ್ನು ಪೂರಾ ತಿಳಿದುಕೊಂಡೆ (ಮೈ ನೇಮ್ ಈಸ್ ರೆಡ್ ಮತ್ತು ದಿ ಬ್ಲಾಕ್ ಬುಕ್), ಅಂಚಿನಲ್ಲಿ ಬದುಕುವುದು ಅಂದರೇನು ಅನ್ನುವುದನ್ನೂ ತಿಳಿದುಕೊಂಡೆ (ಸ್ನೋ ಇನ್ ಇಸ್ತಾಂಬುಲ್). ನಮ್ಮೊಳಗಿರುವ, ಅವು ಇವೆ ಎಂದು ನಮಗೂ ಗೊತ್ತೇ ಇರದ ಸುಪ್ತವಾದ ಗಾಯಗಳನ್ನು ಕಂಡು ಒಪ್ಪಿಕೊಳ್ಳುವುದು, ತಾಳ್ಮೆಯಿಂದ ಪರಿಶೀಲಿಸಿಕೊಳ್ಳುವುದು, ಅರ್ಥಮಾಡಿಕೊಂಡು ಅವನ್ನು ಬೆಳಕಿಗೆ ತರುವುದು, ಈ ನೋವು ಈ ಗಾಯಗಳನ್ನು ಒಪ್ಪುವುದು, ಮತ್ತೆ ಅವನ್ನು ನಮ್ಮ ಪ್ರಜ್ಞೆಯ ಚೈತನ್ಯದ ಬರವಣಿಗೆಯ ಅರಿವಿನ ಭಾಗವಾಗಿ ಮಾಡಿಕೊಳ್ಳುವುದು-ಇದು ನನ್ನ ಮಟ್ಟಿಗೆ ಲೇಖಕನಾಗುವ ಪ್ರಕ್ರಿಯೆಯ ಮುಖ್ಯಾಂಶ.
ಎಲ್ಲರಿಗೂ ಗೊತ್ತಿರುವ, ಆದರೆ ಗೊತ್ತಿದೆ ಎಂದು ಯಾರಿಗೂ ತಿಳಿದಿರದ ಸಂಗತಿಗಳ ಬಗ್ಗೆ ಲೇಖಕ ಮಾತಾನಾಡುತ್ತಾನೆ. ಈ ತಿಳಿವಳಿಕೆಯನ್ನು ಅನ್ವೇಷಣೆ ಮಾಡುವುದು, ಅದು ಬೆಳೆಯುವುದನ್ನು ಗಮನಿಸುವುದು ಇದೇ ಒಂದು ಸಂತೋಷದ ಸಂಗತಿ. ಓದುಗರಾದವರು ತಮಗೆ ಪರಿಚಿತವಾದ ಮತ್ತು ಪವಾಡದಂಥ ಬೆರಗುಗೊಳಿಸುವ ಲೋಕಕ್ಕೆ ಭೇಟಿ ನೀಡುವವರಾಗಿರುತ್ತಾರೆ. ಲೇಖಕನಾದವನು ವರ್ಷಗಟ್ಟಲೆ ಕಾಲ ರೂಮಿನಲ್ಲಿ ಒಂಟಿಯಾಗಿ ಕೂತು ತನ್ನ ಕೌಶಲಕ್ಕೆ ಸಾಣೆ ಹಿಡಿಯುತ್ತಿರುವಾಗ, ತನ್ನದೇ ಜಗತ್ತು ಸೃಷ್ಟಿಸುತ್ತಿರುವಾಗ, ಈ ಗುಟ್ಟಾದ ಗಾಯಗಳನ್ನೇ ಆರಂಭ ಬಿಂದುವಾಗಿಸಿಕೊಂಡರೆ ಅವನಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮನುಷ್ಯತ್ವದಲ್ಲಿ ಅಪಾರ ವಿಶ್ವಾಸ ತೋರ್ಪಡಿಸುತ್ತಿರುತ್ತಾನೆ. ಎಲ್ಲ ಮನುಷ್ಯ ಜೀವಿಗಳೂ ಒಬ್ಬರಿಗೊಬ್ಬರು ಹೋಲುತ್ತಾರೆ, ನನಗಿರುವಂಥ ಗಾಯಗಳನ್ನೇ ಎಲ್ಲರೂ ಹೊತ್ತಿದ್ದಾರೆ, ಆದ್ದರಿಂದಲೇ ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಅನ್ನುವ ನಂಬಿಕೆಯೇ ನನಗೆ ವಿಶ್ವಾಸವನ್ನು ತಂದುಕೊಟ್ಟಿದೆ. ಒಬ್ಬರ ಹಾಗೇ ಇನ್ನೊಬ್ಬರೂ ಅನ್ನುವ ಭರವಸೆ ತುಂಬಿರುವ, ಬಾಲಿಶ ಅನ್ನಿಸುವಂಥ ನಿಶ್ಚಯವೇ ಎಲ್ಲ ನಿಜವಾದ ಸಾಹಿತ್ಯದ ಉಗಮ ಸ್ಥಾನ. ಲೇಖಕನು ಕೋಣೆಯೊಳಗೆ ವರ್ಷಗಟ್ಟಲೆ ಒಂಟಿಯಾಗಿರುವಾಗ ಅವನ ಆ ವರ್ತನೆಯೇ ಮಾನವತೆಯ ಅಖಂಡತೆಯನ್ನು, ಕೇಂದ್ರವಿರದ ವಿಶ್ವವನ್ನೂ ಸೂಚಿಸುತ್ತ ಇರುತ್ತದೆ.
ಆದರೆ ಜಗತ್ತಿಗೆ ಒಂದು ಕೇಂದ್ರವಿದೆ, ಅದು ನಮ್ಮಿಂದ ತೀರ ದೂರದಲ್ಲಿದೆ ಎಂಬ ಭಾವ ತೀವ್ರವಾಗಿತ್ತು ಅನ್ನುವುದು ನಮ್ಮಪ್ಪನ ನೋಟ್ ಬುಕ್ಕುಗಳಿಂದಲೂ ಇಸ್ತಾಂಬುಲ್ ನ ನಮ್ಮ ನಿರ್ವರ್ಣ ಬದುಕಿನಿಂದಲೂ ತಿಳಿಯುತ್ತದೆ. ಈ ಮೂಲಾಂಶವು ಚೆಕೋವ್ ನ ಅರ್ಥದ ಗಾವಂಡಿತನವನ್ನು ಹೇಗೆ ಹುಟ್ಟಿಸುತಿತ್ತು, ಇದು ನನ್ನ ಅಥೆಂಟಿಸಿಟಿಯನ್ನು ಪ್ರಶ್ನಿಸಿಕೊಳ್ಳುವ ಹಾಗೆ ಮಾಡಿತು ಅನ್ನುವುದನ್ನು ನನ್ನ ಪುಸ್ತಕಗಳಲ್ಲಿ ವಿವರಿಸಿದ್ದೇನೆ. ಈ ಭೂಮಿಯ ಮೇಲೆ ಇರುವ ಬಹುತೇಕ ಜನರಲ್ಲಿ ಇವೇ ಭಾವನೆಗಳು ಇವೆ, ನನಗಿಂತ ಹೆಚ್ಚಿನ ಮಟ್ಟದಲ್ಲಿ ಕೊರತೆಯ ಭಾವ, ಅಭದ್ರತೆಯ ಭಾವ, ದೀನ ಭಾವಗಳನ್ನು ಅನುಭವಿಸುತ್ತಾರೆ ಅನ್ನುವುದು ನನಗೆ ಅನುಭವದಿಂದ ಅರ್ಥವಾಗಿದೆ. ಹೌದು. ಭೂಮಿ ಇಲ್ಲದಿರುವುದು, ಮನೆ ಇಲ್ಲದಿರುವುದು, ಹಸಿವು ಇವು ಇಂದಿಗೂ ಮನುಷ್ಯ ಕುಲವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳು. ಆದರೆ ಇಂದು ಟಿವಿ ಮತ್ತು ದಿನಪತ್ರಿಕೆಗಳು ಈ ಮೂಲಭೂತ ಸಮಸ್ಯೆಗಳನ್ನು ಅತ್ಯಂತ ಶೀಘ್ರವಾಗಿ, ಸರಳವಾಗಿ ಹೇಳುತ್ತಿವೆ. ಇಂಥ ವೇಗ ಮತ್ತು ಸರಳತೆ ಸಾಹಿತ್ಯಕ್ಕೆ ಎಂದೂ ಸಾಧ್ಯವಿಲ್ಲ. ಮನುಷ್ಯರ ಮೂಲಭೂತ ಭಯಗಳ ಪರಿಶೀಲನೆ-ಇದು ಸಾಹಿತ್ಯವು ಮಾಡಬೇಕಾಗಿರುವ ಕೆಲಸ. ಹೊರಗಿನವರಾಗಿಯೇ ಉಳಿದೇವು ಎಂಬ ಭಯ, ನಾವು ಯಾತಕ್ಕೂ ಬಾರದವರು ಅನ್ನುವ ಭಯ, ಅವುಗಳ ಮೂಲಕ ಮೂಡುವ ನಾವು ಅಯೋಗ್ಯರು ಅನ್ನುವ ಭಾವ, ಸಾಮೂಹಿಕವಾದ ಅಪಮಾನ, ದಾಳಿ, ಬೈಗುಳ, ಗೊಣಗಾಟ, ನೋವು, ಕಲ್ಪಿತ ಅವಮಾನ, ರಾಷ್ಟ್ರೀಯ ಒಣ ಹೆಮ್ಮೆ, ಇವೆಲ್ಲ ಅವೇ ಭಯಗಳ ಮುಂದುವರೆದ ರೂಪಗಳು. ಇಂಥ ಭಾವಗಳು ನನಗೆದುರಾದಾಗ, ಅವನ್ನೆಲ್ಲ ವ್ಯಕ್ತಪಡಿಸುವ ಸಾಮಾನ್ಯವಾಗಿ ಉತ್ಪ್ರೇಕ್ಷೆಯದೇ ಆಗಿರುವ ಮಾತು ಕೇಳಿದಾಗ ಅವು ನನ್ನೊಳಗಿನ ಕತ್ತಲನ್ನು ಮುಟ್ಟಿಸಿ ತೋರುತ್ತವೆ. ಸಾಮಾನ್ಯವಾಗಿ ಪಾಶ್ಚಾತ್ಯ ಜಗತ್ತಿಗೆ ಸೇರಿರದ ಬಗೆಬಗೆಯ ಜನತೆ ಮತ್ತು ರಾಷ್ಟ್ರಗಳು ಇಂಥ ಭಯಕ್ಕೆ ಶರಣಾಗಿ ತಮಗೆ ಅಪಮಾನವಾಯಿತು ಎಂಬ ಸಂವೇದನೆಯ ಕಾರಣದಿಂದ ಮೂರ್ಖ ಕೆಲಸಗಳಲ್ಲಿ ತೊಡಗುವುದಕ್ಕೆ ಸಾಕ್ಷಿಯಾದಾಗ ಅವರೊಡನೆ ಗುರುತಿಸಿಕೊಳ್ಳುವುದು ನನಗೆ ತೀರ ಸುಲಭವಾಗುತ್ತದೆ. ಇದೇ ಬಗೆಯಲ್ಲಿ ಪಶ್ಚಿಮದ ಜಗತ್ತಿನೊಡನೆಯೂ ಸುಲಭವಾಗಿ ಗುರುತಿಸಿಕೊಳ್ಳುತ್ತೇನೆ. ವಿವಿಧ ರಾಷ್ಟ್ರಗಳು, ವಿವಿಧ ಜನತೆ ತಮ್ಮ ಸಂಪತ್ತಿನ ಅಹಂಕಾರದಲ್ಲಿ, ನಮಗೆಲ್ಲ ನವೋದಯವನ್ನು ತಂದುಕೊಟ್ಟವರೆಂಬ ಹೆಮ್ಮೆಯಲ್ಲಿ, ಜ್ಞಾನದ ಬೆಳಕು, ಆಧುನಿಕತೆಯ ಹರಿಕಾರರೆಂಬ ಹಮ್ಮಿನಲ್ಲಿ ಇಷ್ಟೇ ಮೂರ್ಖವಾದ ಸ್ವಸಂತೃಪ್ತಿಯಲ್ಲಿ ಮುಳುಗಿಬಿಡುತ್ತಾರೆ.
ಅಂದರೆ ನಮ್ಮಪ್ಪ ಒಬ್ಬರೇ ಅಲ್ಲ, ನಾವೆಲ್ಲರೂ ಒಂದು ಕೇಂದ್ರವಿರುವ ಜಗತ್ತು ಎಂಬ ವಿಚಾರಕ್ಕೆ ಬಹಳ ಪ್ರಾಮುಖ್ಯ ನೀಡುತ್ತೇವೆ. ಕೋಣೆಯಲ್ಲಿ ವರ್ಷಗಟ್ಟಲೆ ಒಬ್ಬರೇ ಕೂತು ಬರೆಯುವುದಕ್ಕೆ ಈ ನಂಬಿಕೆಗೆ ವಿರುದ್ಧವಾದ ನಂಬಿಕೆ ಇರಬೇಕು. ನಮ್ಮ ಬರವಣಿಗೆಯನ್ನು ಒಂದಲ್ಲ ಒಂದು ದಿನ ಓದುತ್ತಾರೆ, ಅರ್ಥಮಾಡಿಕೊಳ್ಳುತ್ತಾರೆ, ಪ್ರಪಂಚದ ಜನರೆಲ್ಲ ಒಬ್ಬರ ಹಾಗೇ ಇನ್ನೊಬ್ಬರೂ ಅನ್ನುವ ನಂಬಿಕೆ ಬೇಕು. ಆದರೆ ನನ್ನ ಬರವಣಿಗೆ, ನಮ್ಮಪ್ಪನ ಬರವಣಿಗೆಯ ಅನುಭವದ ಮೇಲೆ ಹೇಳುವುದಾದರೆ ಇದು ಪೀಡಿತ ಆಶಾವಾದ-ನಮ್ಮನ್ನು ಅಂಚಿಗೆ ಸರಿಸಲಾಗಿದೆ, ನಾವು ಎಲ್ಲ ಮುಖ್ಯ ಸಂಗತಿಗಳಿಂದ ಹೊರಗೇ ಉಳಿದುಬಿಟ್ಟಿದ್ದೇವೆ ಅನ್ನುವ ಸಂಶಯಗಳ ಪೀಡನೆಯಿಂದ ಘಾಸಿಗೊಂಡಿರುವ ಆಶಾಭಾವ. ದಾಸ್ತೆಯೇವ್ಸ್ಕಿ ಪಶ್ಚಿಮದ ಬಗ್ಗೆ ತನ್ನ ಬದುಕಿನುದ್ದಕ್ಕೂ ಅನುಭವಿಸಿದ ಪ್ರೀತಿ ಮತ್ತು ದ್ವೇಷವನ್ನು ನಾನೂ ಎಷ್ಟೋ ಸಾರಿ ಅನುಭವಿಸಿದ್ದೇನೆ. ಆದರೆ ನನಗೆ ಆಶಾವಾದ ಇರುವುದಕ್ಕೆ ಕಾರಣ ನಾನು ಆ ಮಹಾನ್ ಲೇಖಕನ ಪ್ರೀತಿ ದ್ವೇಷಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಪಶ್ಚಿಮ ಜಗತ್ತನ್ನು ಅಲೆದಿದ್ದೇನೆ, ಆ ಇನ್ನೊಂದು ಬದಿಯಲ್ಲಿ ಲೋಕವನ್ನು ಹೇಗೆ ಕಟ್ಟಿಕೊಂಡಿದ್ದಾರೆ ಅನ್ನುವುದನ್ನು ಕಂಡಿದ್ದೇನೆ-ಇದೇ ಕಾರಣ.
ಈ ಕೆಲಸಕ್ಕೆ ತಮ್ಮ ಇಡೀ ಬದುಕನ್ನು ಮೀಸಲಿಡುವ ಲೇಖಕರಿಗೆ ಈ ವಾಸ್ತವ ಗೊತ್ತಿರುತ್ತದೆ: ನಮ್ಮ ಮೂಲ ಉದ್ದೇಶ ಏನೇ ಇರಲಿ, ವರ್ಷಗಟ್ಟಲೆ ಆಶಾಭರಿತ ಬರವಣಿಗೆ ಮಾಡಿದ ನಂತರ ಕೊನೆಗೆ ಬೇರೆ ಬೇರೆ ಸ್ಥಳಗಳಿಗೆ ಹೋಗಿಬಿಡುತ್ತೇವೆ. ದುಃಖ, ಕೋಪ ಇಟ್ಟುಕೊಂಡು ನಾವು ಕೆಲಸ ಮಾಡಿದ ಮೇಜಿನಿಂದ ದೂರಕ್ಕೆ ಒಯ್ಯುತ್ತದೆ ನಮ್ಮ ಬರವಣಿಗೆ. ಅದೇ ದುಃಖ ಮತ್ತು ಕೋಪಗಳ ಇನ್ನೊಂದು ಬದಿಗೆ, ಇನ್ನೊಂದು ಲೋಕದೊಳಕ್ಕೆ ಹೊಗುತ್ತೇವೆ. ನಮ್ಮಪ್ಪ ಅಂಥ ಲೋಕಕ್ಕೆ ತಾನೇ ತಲುಪಲಿಲ್ಲವೇ? ನಿಧಾನವಾಗಿ ರೂಪುಗೊಳ್ಳುವ ನೆಲ, ಸುದೀರ್ಘವಾದ ಕಡಲ ಯಾನದ ನಂತರ ಬಗೆಬಗೆಯ ಬಣ್ಣದ ಮೋಡ, ಮಂಜಿನ ನಡುವಿನಿಂದೆದ್ದು ರೂಪತಳೆಯುವ ದ್ವೀಪದ ಹಾಗೆ ಈ ಇನ್ನೊಂದು ಲೋಕ ನಮ್ಮನ್ನು ಮರುಳು ಮಾಡುತ್ತದೆ. ಕವಿದ ಮಂಜಿನೊಳಗಿಂದ ಮೇಲೇಳುವ ಇಸ್ತಾಂಬುಲ್ ನಗರವನ್ನು ನೋಡಲೆಂದು ದಕ್ಷಿಣದಿಂದ ಪ್ರಯಾಣ ಮಾಡಿಬಂದ ಪಾಶ್ಚಾತ್ಯ ಪ್ರಯಾಣಿಕರ ಹಾಗೇ ನಾವೂ ಮರುಳಾಗುತ್ತೇವೆ. ಭರವಸೆ ಮತ್ತು ಕುತೂಹಲಗಳಿಂದ ತೊಡಗಿದ ಪಯಣದ ತುದಿಯಲ್ಲಿ ಮಸೀದಿ, ಮೀನಾರು, ಮನೆ, ಬೀದಿ, ಬೆಟ್ಟ, ಏರು, ಇಳಿಜಾರುಗಳಿರುವ ಇಡೀ ಲೋಕವೇ ಇರುತ್ತದೆ. ಅದನ್ನು ನೋಡುತ್ತ ನಾವೂ ಈ ಜಗತ್ತಿಗೆ ಅಡಿ ಇಡಲು, ಪುಸ್ತಕದ ಓದಿನಲ್ಲಿ ಕಳೆದು ಹೋದ ಹಾಗೇ ಅದರೊಳಗೇ ಕಳೆದು ಹೋಗಲು ಬಯಸುತ್ತೇವೆ. ನಾವು ಹಳ್ಳಿಗರು, ಬಹಿಷ್ಕೃತರು, ಅಂಚಿನಲ್ಲಿರುವವರು ಅಂದುಕೊಳ್ಳುತ್ತ ಕೋಪಗೊಂಡೋ ಆಳವಾದ ವಿಷಾದದಲ್ಲೋ ಮೇಜಿನ ಮುಂದೆ ಬರೆಯಲು ಕುಳಿತವರು ಈ ಭಾವಗಳನ್ನೆಲ್ಲ ಮೀರಿದ ಇಡೀ ಜಗತ್ತನ್ನೇ ಸೃಷ್ಟಿಸಿರುತ್ತೇವೆ.
ಸ್ಪೂರ್ತಿಯಲ್ಲ, ಈ ಛಲ, ಈ ಸಹನೆಯೇ ಲೇಖಕನ ಗುಟ್ಟು. ಸ್ಫೂರ್ತಿ ಎಲ್ಲಿಂದ ಬರುತ್ತದೋ ಗೊತ್ತಿಲ್ಲ. ಸೂಜಿಯಲ್ಲಿ ನೆಲ ತೋಡಿ ಬಾವಿ ತೆಗೆದ ಹಾಗೆ ಅನ್ನುವ ಚೆಲುವಾದ ಟರ್ಕಿಶ್ ಗಾದೆ ಲೇಖಕನ ಕಸುಬನ್ನು ಮನಸ್ಸಿನಲ್ಲಿಟ್ಟುಕೊಂಡೇ ಹುಟ್ಟಿದ್ದು ಅನ್ನಿಸುತ್ತದೆ. ಹಳೆಯ ಕಥೆಗಳಲ್ಲಿ ಫೆರ್ಹಾತನ ತಾಳ್ಮೆಯನ್ನು ಕುರಿತ ಕಥೆ ನನಗೆ ಇಷ್ಟ. ಅವನು ತನ್ನ ಪ್ರೀತಿಯ ಸಲುವಾಗಿ ಬೆಟ್ಟವನ್ನೇ ಅಗೆಯುತ್ತಾನೆ.
ನಾನು ಹುಡುಗನಾಗಿದ್ದಾಗ, ಯುವಕನಾಗಿದ್ದಾಗ ಅನ್ನಿಸುತಿದ್ದುದಕ್ಕೆ ವಿರುದ್ಧವಾದ ಭಾವ ಈಗ ನನ್ನಲಿದೆ: ಇಸ್ತಾಂಬುಲ್ ನನ್ನ ಮಟ್ಟಿಗೆ ಇಡೀ ಜಗತ್ತಿನ ಕೇಂದ್ರ. ನನ್ನ ಇಡೀ ಬದುಕನ್ನು ಅಲ್ಲಿ ಸಾಗಿಸಿದ್ದೇನೆ ಅನ್ನುವುದಷ್ಟೇ ಇದಕ್ಕೆ ಕಾರಣವಲ್ಲ. ಕಳೆದ ಮೂವತ್ತಮೂರು ವರ್ಷಗಳಲ್ಲಿ ನಾನು ಇಸ್ತಾಂಬುಲ್ ಬೀದಿ, ಸೇತುವೆ, ಜನ, ನಾಯಿ, ಮನೆ, ಮಸೀದಿ, ಫೌಂಟನ್ನು, ವಿಚಿತ್ರ ನಾಯಕರು, ಅಂಗಡಿ, ಪ್ರಸಿದ್ಧ ವ್ಯಕ್ತಿಗಳನ್ನೂ, ಅಲ್ಲಿನ ಹಗಲು, ರಾತ್ರಿಗಳನ್ನು ವರ್ಣಿಸುತ್ತ ಅವೆಲ್ಲವೂ ನನ್ನದೇ ಭಾಗವಾಗಿ, ನಾನು ಇಡೀ ಊರನ್ನು ಅಪ್ಪಿ ಆಲಂಗಿಸಿಕೊಂಡಿದ್ದೇನೆ. ನನ್ನ ಕೈಯಿಂದ ನಿರ್ಮಿಸಿದ ಈ ನಗರ, ಕೇವಲ ನನ್ನ ತಲೆಯೊಳಗಷ್ಟೇ ಇದ್ದ ಈ ನಗರ ನಾನು ವಾಸ್ತವವಾಗಿ ಬದುಕಿದ್ದ ನಗರಕ್ಕಿಂತ ಹೆಚ್ಚು ನಿಜ ಅನ್ನಿಸುವ ಗಳಿಗೆಯೂ ಇತ್ತು. ಈ ಎಲ್ಲ ಜನ, ಬೀದಿ, ವಸ್ತು, ಕಟ್ಟಡಗಳೆಲ್ಲ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುವುದಕ್ಕೆ ತೊಡಗುತ್ತಿದ್ದವು. ನಾನು ನಿರೀಕ್ಷಿಸಿರದ ರೀತಿಯಲ್ಲಿ ಸಂವಾದಿಸುತ್ತ, ಅವು ನನ್ನ ಕಲ್ಪನೆಯಲ್ಲೋ ಪುಸ್ತಕದಲ್ಲೋ ಇಲ್ಲ ನಿಜವಾಗಿ ತಮತಮಗಾಗಿಯೇ ಜೀವಂತವಾಗಿವೆ ಅನ್ನಿಸುತ್ತಿತ್ತು. ಸೂಜಿಯಲ್ಲಿ ನೆಲ ಅಗೆದು ಬಾವಿ ತೋಡಿದವನ ಹಾಗೆ ನಾನು ಸೃಷ್ಟಿಸಿದ ಈ ಲೋಕ ಮಿಕ್ಕ ಎಲ್ಲಕ್ಕಿಂತ ನಿಜವಾದುದಾಗಿ ಕಾಣುತಿತ್ತು.
ನಮ್ಮಪ್ಪನ ಸೂಟ್ ಕೇಸು ದಿಟ್ಟಿಸುತ್ತಾ ಬರವಣಿಗೆಯಲ್ಲಿ ತೊಡಗಿದ್ದಾಗ ನಮ್ಮಪ್ಪ ಕೂಡ ಇಂಥದೇ ಸಂತೋಷ ಕಂಡಿರಬಹುದು, ಅಪ್ಪನ ಬರವಣಿಗೆ ಓದುವ ಮೊದಲೇ ನಿರ್ಣಯ ಮಾಡಬಾರದು ಅಂದುಕೊಂಡೆ. ಎಷ್ಟಂದರೂ ನಾನು ನಮ್ಮಪ್ಪನಿಗೆ ಕೃತಜ್ಞ. ನಮ್ಮಪ್ಪ ಎಂದೂ ದಬ್ಬಾಳಿಕೆಯ, ಆರ್ಡರು ಮಾಡುವ ಶಿಕ್ಷೆ ಕೊಡುವ ಸಾಮಾನ್ಯ ಅಪ್ಪ ಆಗಿರಲೇ ಇಲ್ಲ. ನನ್ನನ್ನು ನನ್ನ ಪಾಡಿಗೆ ಸ್ವತಂತ್ರವಾಗಿ ಬಿಟ್ಟ, ನನಗೆ ತೀರ ಗೌರವ ಕೊಡುತ್ತಿದ್ದ ಅಪ್ಪ ನಮ್ಮಪ್ಪ. ನನ್ನ ಬಾಲ್ಯದ, ಹದಿ ಹರೆಯದ ಗೆಳೆಯರ ಹಾಗೆ ನನ್ನಲ್ಲಿ ಅಪ್ಪನ ಬಗ್ಗೆ ಭಯವಿರಲಿಲ್ಲ, ನಮ್ಮಪ್ಪ ತನ್ನ ಯೌವನದಲ್ಲಿ ಕನಸು ಕಂಡಿದ್ದ ಹಾಗೆ ನಾನು ಲೇಖಕನಾಗಬೇಕು ಎಂದು ಬಯಸಿದ್ದರು ಹಾಗಾಗಿ ನನ್ನ ಕಲ್ಪನೆಯನ್ನು ಮಗುವಿನ ಹಾಗೆ ಸ್ವತಂತ್ರವಾಗಿ ನನಗೆ ಬೇಕಾದ ಹಾಗೆ ಬಳಸಿಕೊಳ್ಳಲು ಸಾಧ್ಯವಾಯಿತು ಎಂದು ಎಷ್ಟೋ ಸಾರಿ ಅಂದುಕೊಂಡಿದ್ದೇನೆ. ನಮ್ಮಪ್ಪನನ್ನು ತಾಳ್ಮೆಯಿಂದ ಓದಬೇಕು, ಆ ಹೋಟೆಲ್ ರೂಮುಗಳಲ್ಲಿ ಏನು ಬರೆದರು ಅನ್ನುವುದನ್ನು ಅರಿಯಬೇಕು.
ಇಂಥ ಭರವಸೆಯ ಯೋಚನೆಗಳನ್ನಿಟ್ಟುಕೊಂಡು ಸೂಟ್ ಕೇಸಿನ ಹತ್ತಿರಕ್ಕೆ ಹೋದೆ. ಅದು ನಮ್ಮಪ್ಪ ಇಟ್ಟಿದ್ದಲ್ಲಿಯೇ ಇನ್ನೂ ಕಾಯುತ್ತ ಕುಳಿತಿತ್ತು. ನನ್ನೆಲ್ಲ ಇಚ್ಛಾಶಕ್ತಿಯನ್ನೂ ಬಳಸಿಕೊಂಡು ಕೆಲವು ಪುಟಗಳ ಹಸ್ತಪ್ರತಿ, ಕೆಲವು ನೋಟ್ಬುಕ್ಕುಗಳನ್ನು ಓದಿದೆ. ನಮ್ಮಪ್ಪ ಯಾವುದರ ಬಗ್ಗೆ ಬರೆದಿದ್ದರು? ಪ್ಯಾರಿಸ್ ಹೋಟೆಲಿನ ಕಿಟಕಿಯಿಂದ ಕಂಡ ದೃಶ್ಯ, ಒಂದೆರಡು ಕವಿತೆ, ವಿರೋಧಾಭಾಸದ ಉಕ್ತಿ, ವಿಶ್ಲೇಷಣೆ ಇವು ಜ್ಞಾಪಕಕ್ಕೆ ಬರುತ್ತಿವೆ… ಇದನ್ನು ಬರೆಯುತ್ತಿರುವಾಗ ಇದೇ ಈಗ ರಸ್ತೆ ಅಪಘಾತವನ್ನು ನೋಡಿ ಬಂದವರು ಎಲ್ಲ ಹೇಗಾಯಿತು ಅನ್ನುವುದನ್ನು ಜ್ಞಾಪಿಸಿಕೊಳ್ಳಲು ಹೆಣಗುತ್ತಾರಲ್ಲ, ತೀರ ಎಲ್ಲವನ್ನೂ ಜ್ಞಾಪಿಸಿಕೊಳ್ಳುವುದಕ್ಕೆ ಅಂಜುತ್ತಾರಲ್ಲ, ಹಾಗೆ ಅನ್ನಿಸುತ್ತಿದೆ. ನಾನು ಮಗುವಾಗಿದ್ದಾಗ ನಮ್ಮಪ್ಪ ಮತ್ತೆ ಅಮ್ಮ ಜಗಳದ ಅಂಚಿಗೆ ತಲುಪಿಬಿಡುತ್ತಿದ್ದರು, ಆಗ ತಟ್ಟನೆ ಸುಮ್ಮನಾಗಿ ಸಾವಿನಂಥ ಮೌನ ಕವಿಯುತಿತ್ತು, ನಮ್ಮಪ್ಪ ಹೋಗಿ ರೇಡಿಯೋ ಹಾಕುತಿದ್ದರು, ಮೂಡು ಬದಲಾಗಿ ನಾವು ಎಲ್ಲವನ್ನೂ ಬೇಗ ಮರೆಯಲು ಸಹಾಯವಾಗುತಿತ್ತು.
ಆ ಸಂಗೀತದ ಹಾಗೆಯೇ ಮೂಡು ಬದಲಾಯಿಸುವಂಥ ಸವಿಯಾದ ಎರಡು ಮಾತು ಹೇಳುತ್ತೇನೆ.ನಿ ಮಗೆಲ್ಲ ಗೊತ್ತಿದೆ-ಲೇಖಕರನ್ನೆಲ್ಲ ಎಲ್ಲರೂ ಆಗಾಗ ಕೇಳುವ ಪ್ರಿಯವಾದ ಪ್ರಶ್ನೆ ಒಂದಿದೆ. ನೀವು ಯಾಕೆ ಬರೆಯುತ್ತೀರಿ ಅನ್ನುವ ಪ್ರಶ್ನೆ ಅದು. ನಾನು ಯಾಕೆ ಬರೆಯುತ್ತೇನೆಂದರೆ ಬರೆಯುವುದು ನನ್ನೊಳಗಿನ ಅಗತ್ಯ! ಯಾಕೆ ಬರೆಯುತ್ತೇನೆಂದರೆ ಎಲ್ಲರ ಹಾಗೆ ನಾರ್ಮಲ್ ಆಗಿ ಕೆಲಸ ಮಾಡಲಾರೆ. ಯಾಕೆ ಬರೆಯುತ್ತೇನೆಂದರೆ ನಾನು ಬರೆಯುವಂಥ ಪುಸ್ತಕಗಳನ್ನು ಓದುವುದು ನನಗಿಷ್ಟ. ಯಾಕೆ ಬರೆಯುತ್ತೇನೆಂದರೆ ನನಗೆ ನಿಮ್ಮೆಲ್ಲರ ಬಗ್ಗೆ, ಪ್ರತಿಯೊಬ್ಬರ ಬಗ್ಗೆ ಕೋಪವಿದೆ. ಯಾಕೆ ಬರೆಯುತ್ತೇನೆಂದರೆ ರೂಮಿನಲ್ಲಿ ಇಡೀ ಕೂತು ಬರೆಯುವುದು ನನಗೆ ಇಷ್ಟ. ಯಾಕೆ ಬರೆಯುತ್ತೇನೆಂದರೆ ನಿಜವಾದ ಬದುಕನ್ನು ಬದಲಾಯಿಸುವ ಮೂಲಕವಷ್ಟೇ ನಾನು ಬದುಕಿನಲ್ಲಿ ಪಾಲ್ಗೊಳ್ಳಬಹುದು. ಯಾಕೆ ಬರೆಯುತ್ತೇನೆಂದರೆ ಇಸ್ತಾಂಬುಲ್ ನಲ್ಲಿ, ಟರ್ಕಿಯಲ್ಲಿ ನಾವು ಎಂಥ ಬಾಳು ಬಾಳಿದೆವು, ಹೇಗೆ ಬದುಕುತಿದ್ದೇವೆ ಅನ್ನುದನ್ನು ಮಿಕ್ಕವರು, ನಾವೆಲ್ಲರೂ, ಇಡೀ ಜಗತ್ತು ತಿಳಿಯಬೇಕೆಂದು ಬರೆಯುತ್ತೇನೆ. ಯಾಕೆ ಬರೆಯುತ್ತೇನೆಂದರೆ ಹಾಳೆ, ಪೆನ್ನು, ಇಂಕಿನ ವಾಸನೆ ನನಗೆ ಇಷ್ಟ. ಯಾಕೆ ಬರೆಯುತ್ತೇನೆಂದರೆ ಮಿಕ್ಕ ಯಾವುದೇ ಸಂಗತಿಗಿಂತ ಸಾಹಿತ್ಯದಲ್ಲಿ ನನಗೆ ನಂಬಿಕೆ ಇದೆ, ಕಾದಂಬರಿಯ ಕಲೆಯಲ್ಲಿ ನಂಬಿಕೆ ಇದೆ. ಯಾಕೆ ಬರೆಯುತ್ತೇನೆಂದರೆ ಬರೆಯುವುದು ನನ್ನ ಹವ್ಯಾಸ, ನನ್ನ ತೀವ್ರಭಾವ. ಯಾಕೆ ಬರೆಯುತ್ತೇನೆಂದರೆ ನನ್ನನ್ನು ಮರೆತುಬಿಡುತ್ತಾರೆ ಅನ್ನುವ ಭಯ ಇದೆ ಅದಕ್ಕೆ. ಯಾಕೆ ಬರೆಯುತ್ತೇನೆಂದರೆ ಬರವಣಿಗೆ ತರುವ ಕೀರ್ತಿ, ಕುತೂಹಲ ಇಷ್ಟವಿದೆ. ಒಂಟಿಯಾಗಿರಲು ಬರೆಯುತ್ತೇನೆ. ನಿಮ್ಮೆಲ್ಲರ ಬಗ್ಗೆ, ಪ್ರತಿಯೊಬ್ಬರ ಬಗ್ಗೆ ನನಗೆ ಯಾಕೆ ಯಾಕೆ ತುಂಬ ಕೋಪ ಅನ್ನುವುದನ್ನು ತಿಳಿಯಲೂ ಬರೆಯುತ್ತಿರಬಹುದು ನಾನು. ಯಾಕೆ ಬರೆಯುತ್ತೇನೆಂದರೆ ನಾನು ಬರೆದದ್ದನ್ನು ಬೇರೆಯವರು ಓದಬೇಕು. ಯಾಕೆ ಬರೆಯುತ್ತೇನೆಂದರೆ ಕಾದಂಬರಿ, ಪ್ರಬಂಧ, ಒಂದು ಪುಟ ಬರೆದಿದ್ದೇನೆ, ಬರೆದು ಮುಗಿಸಬೇಕು. ಯಾಕೆ ಬರೆಯುತ್ತೇನೆಂದರೆ ನಾನು ಬರೆಯಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಯಾಕೆ ಬರೆಯುತ್ತೇನೆಂದರೆ ಲೈಬ್ರರಿಗಳು ಶಾಶ್ವತವೆಂಬ ಬಾಲಿಶ ನಂಬಿಕೆ ಇದೆ, ನನ್ನ ಪುಸ್ತಕಗಳು ಲೈಬ್ರರಿಯ ಶೆಲ್ಫಿನಲ್ಲಿ ಇದ್ದೇ ಇರುತ್ತವೆ ಅನ್ನುವ ಕಲ್ಪನೆ ಇದೆ. ಯಾಕೆ ಬರೆಯುತ್ತೇನೆಂದರೆ ಬದುಕಿನ ಎಲ್ಲ ಚೆಲುವು, ಎಲ್ಲ ಶ್ರೀಮಂತಿಕೆಯನ್ನು ಪದಗಳಾಗಿ ಪರಿವರ್ತಿಸುವುದು ಹುಮ್ಮಸ್ಸು ತರುತ್ತದೆ. ಕಥೆ ಹೇಳುವುದಕ್ಕಿಂತ ಕಥೆ ಕಟ್ಟುವುದು ನನಗಿಷ್ಟವೆಂದು ಬರೆಯುತ್ತೇನೆ. ಯಾಕೆ ಬರೆಯುತ್ತೇನೆಂದರೆ ನಾನು ಹೋಗಲೇಬೇಕಾದ ಜಾಗವೊಂದಿದೆ, ಕನಸಿನಲ್ಲಿ ಆಗುವ ಹಾಗೇ ಅದು ಇದೆ ಅಂತ ಗೊತ್ತಿದ್ದರೂ ಅಲ್ಲಿಗೆ ಹೋಗಲಾಗದಂಥ ಜಾಗ ಅನ್ನುವ ಭಯದಿಂದ ತಪ್ಪಿಸಿಕೊಳ್ಳುವುದಕ್ಕೆ ಬರೆಯುತ್ತೇನೆ. ಸಂತೋಷವಾಗಿರುವುದಕ್ಕೆ ನನಗೆ ಬರಲಿಲ್ಲವೆಂದು ಬರೆಯುತ್ತೇನೆ. ಸಂತೋಷವಾಗಿರುವುದಕ್ಕೆ ಬರೆಯುತ್ತೇನೆ.
ನನ್ನ ಕಛೇರಿಯಲ್ಲಿ ಸೂಟ್ ಕೇಸು ಇಟ್ಟು ಹೋದ ಒಂದು ವಾರದ ನಂತರ ನಮ್ಮಪ್ಪ ಮತ್ತೆ ಬಂದಿದ್ದರು. ಯಾವಾಗಲೂ ತರುವ ಹಾಗೆ ನನಗೆ ಚಾಕಲೆಟ್ ತಂದಿದ್ದರು. ನಾನು ೪೮ ವರ್ಷ ವಯಸ್ಸಾದವನು ಅನ್ನುವುದನ್ನು ಮರೆತಿದ್ದರು. ಬದುಕು, ರಾಜಕೀಯ, ಮನೆಯ ವಿಚಾರಗಳ ಬಗ್ಗೆ ಎಂದಿನಂತೆ ನಾವು ಹರಟೆ ಹೊಡೆದು ನಕ್ಕೆವು, ಹೊರಡುವ ಹೊತ್ತು ಬಂತು. ನಮ್ಮಪ್ಪನ ಕಣ್ಣು ಸೂಟ್ ಕೇಸು ಇಟ್ಟಿದ್ದ ಜಾಗದತ್ತ ತಿರುಗಿದವು. ನಾನು ಸೂಟ್ ಕೇಸಿನ ಜಾಗ ಬದಲಾಯಿಸಿದ್ದನ್ನು ಗಮನಿಸಿದವು. ಅಪ್ಪನ ಕಣ್ಣು ನಾನು, ನನ್ನ ಕಣ್ಣು ಅಪ್ಪ ನೋಡಿಕೊಂಡೆವು. ಆಮೇಲೆ ಮೌನದ ಒತ್ತು ಹಿಂಬಾಲಿಸಿತು. ಸೂಟ್ ಕೇಸು ತೆರೆದು ಒಳಗಿದ್ದುದನ್ನು ಓದಿದೆ ಅನ್ನುವುದನ್ನು ಅಪ್ಪನಿಗೆ ಹೇಳಲಿಲ್ಲ. ನೋಟ ತಿರುಗಿಸಿದೆ. ಅಪ್ಪನಿಗೆ ಅರ್ಥವಾಯಿತು. ಅಪ್ಪನಿಗೆ ಅರ್ಥವಾಯಿತು ಅನ್ನುವುದು ನನಗೆ ಅರ್ಥವಾದ ಹಾಗೆಯೇ. ತನಗೆ ಅರ್ಥವಾಯಿತು ಅನ್ನುವುದು ನನಗೆ ಅರ್ಥವಾಯಿತು ಅನ್ನುವುದು ತನಗೆ ಅರ್ಥವಾಯಿತು ಅನ್ನುವುದು ನನಗೆ ಅರ್ಥವಾಯಿತು ಅನ್ನುವ ಹಾಗೆ… ಹೀಗೆ ಅರ್ಥವಾದದ್ದು ಅರ್ಥವಾಗುವ ಕೆಲಸ ಒಂದೆರಡೇ ಕ್ಷಣದಲ್ಲಿ ನಡೆದು ಹೋಯಿತು. ನಮ್ಮಪ್ಪ ಖುಷಿಯ, ತನ್ನಲ್ಲೇ ತನಗೆ ನಂಬಿಕೆ ಇರುವ ಮನುಷ್ಯ. ಯಾವಾಗಲೂ ನಗುವ ಹಾಗೆ ನನ್ನ ನೋಡಿ ನಕ್ಕರು. ಮನೆಯಿಂದ ಹೊರಡುವಾಗ ಅಪ್ಪಂದಿರು ಮಕ್ಕಳಿಗೆ ಹೇಳುವ ಹಾಗೆ ನನ್ನನ್ನು ಉತ್ಸಾಹಗೊಳಿಸುವ ಸುಂದರವಾದ ಮಾತು ಅಪ್ಪ ಹೇಳಿದರು.
ಎಂದಿನ ಹಾಗೆ ಅಪ್ಪನ ಖುಷಿ, ಸ್ವಚ್ಛಂದವಾದ ಜಗ್ಗದ ಕುಗ್ಗದ ಮನೋಧರ್ಮದ ಬಗ್ಗೆ ಅಸೂಯೆ ಪಡುತ್ತಾ ಅವರು ಹೋಗುವುದನ್ನು ನೋಡುತ್ತ ನಿಂತೆ. ಆದರೆ ಆ ದಿನ ನನ್ನ ಮನಸ್ಸಿನೊಳಗೆ ಸಂತೋಷದ ಮಿಂಚೂ ಇತ್ತು ಅನ್ನುವುದನ್ನು ನೆನೆದರೆ ನಾಚಿಕೆಯಾಗುತ್ತದೆ. ನಾನು ನಮ್ಮಪ್ಪನಷ್ಟು ಆರಾಮವಾಗಿ ಬದುಕಲಿಲ್ಲ, ನಮ್ಮಪ್ಪನ ಹಾಗೆ ಬೇಕಾಬಿಟ್ಟಿ ಅಲೆದುಕೊಂಡೋ ಖುಷಿಯಾಗೋ ಬದುಕು ಸಾಗಿಸಲಿಲ್ಲ ಆದರೆ ನನ್ನ ಬದುಕನ್ನು ಬರವಣಿಗೆಗಾಗಿ ಮೀಸಲಿಟ್ಟೆ. ಮಿಕ್ಕದ್ದೆಲ್ಲ ನಿಮಗೆ ಅರ್ಥವಾಗುತ್ತದೆ. ನಮ್ಮಪ್ಪನನ್ನು ಹೀಗೆ ಮನಸ್ಸಿನಲ್ಲೇ ಕೀಳ್ಗಳೆದು ಹಿಗ್ಗಿದ್ದಕ್ಕೆ ನಾಚಿಕೆಯಾಗುತ್ತಿದೆ. ಅದೂ ಎಲ್ಲ ಬಿಟ್ಟು ನನ್ನನ್ನು ನನ್ನ ಪಾಡಿಗೆ ಇರಲು ಅವಕಾಶಮಾಡಿಕೊಟ್ಟ, ನನಗೆಂದೂ ನೋವು ಕೊಡದ ಅಪ್ಪನ ಬಗ್ಗೆ ಹೀಗಂದುಕೊಂಡೆ. ಬರವಣಿಗೆ ಮತ್ತು ಸಾಹಿತ್ಯಗಳು ನಮ್ಮ ಬದುಕಿನಲ್ಲಿ ಕೇಂದ್ರವಲ್ಲ ಎಂಬ ಸಂಗತಿಗೆ, ನಮ್ಮ ಸಂತೋಷ ಮತ್ತು ತಪ್ಪಿತಸ್ಥ ಭಾವನೆಗಳಿಗೆ ನಿಕಟವಾಗಿ ಸಂಬಂಧಿಸಿದ್ದು ಅನ್ನುವುನ್ನು ಈ ಸಂಗತಿ ಮನಸ್ಸಿಗೆ ತರಬೇಕು.
ಆದರೆ ನನ್ನ ಕಥೆಗೊಂದು ವಿನ್ಯಾಸವಿದೆ. ಆ ಹೊತ್ತು ಇನ್ನೇನೋ ನನಗೆ ತಕ್ಷಣ ನೆನಪಿಗೆ ಬಂದು, ನನ್ನ ತಪ್ಪಿತಸ್ಥ ಭಾವನೆ ಇನ್ನೂ ದಟ್ಟವಾಯಿತು. ನಮ್ಮಪ್ಪ ಸೂಟ್ ಕೇಸನ್ನು ನನ್ನ ಹತ್ತಿರ ಬಿಟ್ಟು ಹೋಗುವುದಕ್ಕೆ ಇಪ್ಪತ್ತಮೂರು ವರ್ಷ ಮೊದಲು, ನಾನು ಕಾದಂಬರಿಕಾರನಾಗಬೇಕೆಂದು ನಿರ್ಣಯಿಸಿ ಮಿಕ್ಕೆಲ್ಲವನ್ನೂ ತೊರೆದು ರೂಮಿನಲ್ಲಿ ಒಬ್ಬನೇ ಸೇರಿಕೊಂಡು ನಾಲ್ಕು ವರ್ಷ ಕಳೆದಮೇಲೆ, ನನಗೆ ಇಪ್ಪತ್ತೆರಡು ವಯಸ್ಸು ಆಗಿದ್ದಾಗ ನನ್ನ ಮೊದಲನೆಯ ಕಾದಂಬರಿ ಸೆವ್ದೆತ್ ಬೈ ಅಂಡ್ ಸನ್ಸ್ ಬರೆದು ಮುಗಿಸಿದ್ದೆ. ಟೈಪು ಮಾಡಿದ್ದ, ನನ್ನ ಅಪ್ರಕಟಿತ ಕಾದಂಬರಿಯ ಹಸ್ತಪ್ರತಿಯನ್ನು ಅಪ್ಪನ ಕೈಗೆ ಇಡುವಾಗ ನನ್ನ ಕೈ ನಡುಗುತಿದ್ದವು. ಅಪ್ಪ ಅದನ್ನು ಓದಲಿ, ಏನನ್ನಿಸಿತು ಹೇಳಲಿ ಎಂದು ಬಯಸಿದ್ದೆ. ಅಪ್ಪನ ಅಭಿರುಚಿಯಲ್ಲಿ ವಿವೇಕದಲ್ಲಿ ನನಗೆ ವಿಶ್ವಾಸವಿತ್ತು ಅನ್ನುವುದಷ್ಟೇ ಕಾರಣವಲ್ಲ. ಅಪ್ಪನ ಅಭಿಪ್ರಾಯ ನನಗೆ ಮುಖ್ಯವಾಗಿತ್ತು. ಯಾಕೆಂದರೆ ನಮ್ಮ ಅಮ್ಮನಂತಲ್ಲದೆ ಅಪ್ಪ ಎಂದೂ ನಾನು ಬರಹಗಾರನಾಗುವುದನ್ನು ವಿರೋಧಿಸಲಿಲ್ಲ. ಆಗ ನಮ್ಮಪ್ಪ ನಮ್ಮ ಜೊತೆಯಲ್ಲಿರಲಿಲ್ಲ. ದೂರದಲ್ಲಿದ್ದರು. ಅಪ್ಪ ವಾಪಸ್ಸು ಬರಲಿ ಎಂದು ಚಡಪಡಿಸಿಕೊಂಡು ಕಾಯುತಿದ್ದೆ. ಹಲವು ವಾರಗಳ ನಂತರ ಅಪ್ಪ ಬಂದಾಗ ಬಾಗಿಲಿಗೆ ಓಡಿ ಹೋದೆ. ನಮ್ಮಪ್ಪ ಏನೂ ಹೇಳಲಿಲ್ಲ. ತಟ್ಟನೆ ನನ್ನನ್ನು ತೋಳಿನಲ್ಲಿ ಬಳಸಿದರು. ಆ ಅಪ್ಪುಗೆಯೇ ಅಪ್ಪನಿಗೆ ಕಾದಂಬರಿ ತುಂಬ ಇಷ್ಟವಾಗಿತ್ತು ಅನ್ನುವುದನ್ನು ಸೂಚಿಸಿತ್ತು. ಭಾವತುಂಬಿದ ಗಳಿಗೆಗಳ ನಂತರ ಯಾವಾಗಲೂ ಆವರಿಸುವ ತೀರ ವಿಚಿತ್ರವಾದ ಮೌನದಲ್ಲಿ ನಾವು ಅದ್ದಿಹೋದೆವು. ನಮಗೆ ಸ್ವಲ್ಪ ಸಮಾಧಾನವಾದ ಮೇಲೆ ಮಾತಾಡಿದೆವು. ನಮ್ಮಪ್ಪ ತೀರ ಉದ್ವೇಗದಲ್ಲಿ ಉತ್ಪ್ರೇಕ್ಷೆಯ ಭಾಷೆ ಬಳಸಿಕೊಂಡು ನನ್ನ ಕಾದಂಬರಿಯ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ಇವತ್ತು ನನಗೆ ದೊರೆತಿರುವಂಥ ಬಹುಮಾನ ಒಂದಲ್ಲ ಒಂದು ದಿನ ಖಂಡಿತ ಬರುತ್ತದೆ, ಆ ಸಂತೋಷ ಅನುಭವಿಸುವುದಕ್ಕೆ ನಾನೂ ಇರಬೇಕು ಎಂದು ಹೇಳಿದ್ದರು. ತಮ್ಮ ಒಳ್ಳೆಯ ಅಭಿಪ್ರಾಯವನ್ನು ಒಪ್ಪಿಸುವುದಕ್ಕೆ ಅಪ್ಪ ಪ್ರಯತ್ನಪಡುತ್ತಿದ್ದರು. ಅಥವಾ ಈ ಬಹುಮಾನವನ್ನು ನನ್ನ ಬದುಕಿನ ಗುರಿಯಾಗಿಸಲು ಯತ್ನಿಸುತಿದ್ದರು. ಅಥವಾ ಒಂದಲ್ಲ ಒಂದು ದಿನ ನೀನೊಬ್ಬ ಪಾಶಾ ಆಗುತ್ತೀಯ ಎಂದು ತಮ್ಮ ಗಂಡು ಮಗನಿಗೆ ಹುಮ್ಮಸ್ಸು ತುಂಬುವ ಟರ್ಕಿ ತಂದೆಯರ ಹಾಗೆ ನನ್ನ ಪ್ರೋತ್ಸಾಹಿಸುತಿದ್ದರು. ಮುಂದೆ ಎಷ್ಟೋ ವರ್ಷ ಅದೇ ಮಾತು ಹೇಳುತ್ತ ನನ್ನನ್ನು ಹುರಿದುಂಬಿಸುತಿದ್ದರು. ನಮ್ಮಪ್ಪ ಡಿಸೆಂಬರ್ ೨೦೦೨ರಲ್ಲಿ ತೀರಿ ಹೋದರು.
ಇವತ್ತು, ಸ್ವೀಡಿಶ್ ಅಕಾಡೆಮಿಯಲ್ಲಿ, ಗೌರವಾನ್ವಿತ ಸದಸ್ಯರು ನನಗೆ ಕೊಡಮಾಡಿರುವ ಮಹಾನ್ ಬಹುಮಾನವನ್ನು, ಮಹಾ ಗೌರವವನ್ನು ಸ್ವೀಕರಿಸುವಾಗ, ಗಣ್ಯ ಅತಿಥಿಗಳೆಲ್ಲ ಈ ಸಮಾರಂಭದಲ್ಲಿ ನೆರೆದಿರುವಾಗ, ನಮ್ಮಪ್ಪನೂ ಇಲ್ಲಿ ನಮ್ಮೊಡನೆ ಇದ್ದಿದ್ದರೆ ಎಂದು ತೀವ್ರವಾಗಿ ಅನ್ನಿಸುತ್ತಿದೆ.
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.