ಚಿಕ್ಕಂದಿನಲ್ಲಿ ನಮ್ಮ ಅಮ್ಮ ಹೆಚ್ಚು ತಮಿಳು ಮಾತನಾಡುತ್ತಿದ್ದಿರಬಹುದು. ಅದರೆ ಹಾಸನದಲ್ಲಿ ಹುಟ್ಟಿ ಬೆಳೆದಿದ್ದರಿಂದ ಕನ್ನಡವೂ ಚೆನ್ನಾಗಿ ಬರುತ್ತಿತ್ತು. ಅವರ ಅಣ್ಣ ರಾಮಕೃಷ್ಣರ ಜೊತೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅವರ ತಂದೆಯ ಕಡೆ ಸಂಬಂಧಿಗಳು ದೊಡ್ಡ ಕೆಲಸಗಳಲ್ಲಿದ್ದರೆಂದು ಕೇಳಿದ್ದೆ. ಆಗಾಗ್ಗೆ ಅವರಿವರು ಮನೆಗೆ ಬರುತ್ತಿದ್ದರು; ಅವರು ಯಾರೂ ಕನ್ನಡ ಮಾತಾಡುತ್ತಿರಲಿಲ್ಲ; ಅಥವಾ ಮಾತಾಡಲು ಕಷ್ಟ ಪಡುತ್ತಿದ್ದರು. ನಾವುಗಳು ಬೆಳೆಯುತ್ತ ತಮಿಳು ನಿಧಾನವಾಗಿ ನಮ್ಮ ಮನೆಯಿಂದ ಹೊರಟುಹೋಯಿತು.
ಪಾಲಹಳ್ಳಿ ವಿಶ್ವನಾಥ್ ಬರೆದ ಹೀಗೊಂದು ಕುಟುಂಬದ ಕಥೆ ಪುಸ್ತಕದ ಅಧ್ಯಾಯ ನಿಮ್ಮ ಓದಿಗೆ
ಸಾಮಾನ್ಯವಾಗಿ ಸಿಗುವ ವಂಶವೃಕ್ಷಗಳಲ್ಲಿ ಹಿ೦ದಿನವರ ಬಗ್ಗೆ ಹಲವಾರು ಕೊರತೆಗಳಿರುತ್ತವೆ. ೨-೩ ಪೀಳಿಗೆಗಳ ಹಿಂದೆ ಹೋಗಲು ಆಗುವುದಿಲ್ಲ. ಅವರ ಹೆಸರುಗಳನ್ನು ಬಿಟ್ಟು ಬೇರೆ ಯಾವ ಸ೦ಗತಿಯೂ ತಿಳಿಯುವುದಿಲ್ಲ. ಈ ಪುರುಷಪ್ರಧಾನ ಸಮಾಜದ ಮನೆತನಗಳಲ್ಲಿ ಸ್ತ್ರೀಯರ ಬಗ್ಗೆ ಹೆಚ್ಚು ಮಾಹಿತಿಯೇ ಸಿಗುವುದಿಲ್ಲ; ಎಷ್ಟೋ ಬಾರಿ ಅವರುಗಳ ಹೆಸರುಗಳ ಬಗ್ಗೆಯೂ ಒಮ್ಮತವಿಲ್ಲ. ಇವೆಲ್ಲ ಅಲ್ಲದೆ ಅವೇ ಹೆಸರುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ರಾಮಯ್ಯನವರ ವಂಶವೃಕ್ಷದಲ್ಲೂ ಇವೇ ಕೊರತೆಗಳಿರುವುದು ಆಶ್ಚರ್ಯವೇನಲ್ಲ.
ರಾಮಯ್ಯನವರ ಈ ವಂಶ ವೃಕ್ಷವನ್ನು ಸ್ಥೂಲವಾಗಿ ಬರೆದಿಟ್ಟಿದ್ದು ನಮ್ಮ ಚಿಕ್ಕಪ್ಪ, ಅಂದರೆ ಅವರ ತಮ್ಮ ನಾರಾಯಣ, ಇನ್ನೂ ಹೆಚ್ಚು ವಿವರ ಕೊಟ್ಟಿದ್ದಾರೆ. ಅವರಿಗೆ ಎಲ್ಲಿಂದ ಮಾಹಿತಿ ಸಿಕ್ಕಿತೋ ಗೊತ್ತಿಲ್ಲ. ರಾಮಯ್ಯನವರ ಪೂರ್ವಿಕರು ಏಳು ತಲೆಮಾರುಗಳ ಹಿ೦ದೆ – ಅಂದರೆ ಇನ್ನೂರು ವರ್ಷಗಳ ಹಿಂದೆ (೧೭೮೦?), ಹೈದರ್ ಟಿಪ್ಪೂ ಕಾಲದಲ್ಲಿ – ಮದರಾಸಿನ ಹತ್ತಿರದ ಕಾ೦ಚೀಪುರದಿ೦ದ ಈ ಕಡೆಗೆ ವಲಸೆ ಬ೦ದ್ದಿದ್ದರ೦ತೆ. ಏಕೆ ಬಂದರೋ ತಿಳಿಯದು. ಅಂತೂ ೧೯ನೆಯ ಶತಮಾನದ ಮಧ್ಯದಲ್ಲಿ ವೆ೦ಕಟೇಶ್ವರ ಮತ್ತು ರ೦ಗಮ್ಮ ಎ೦ಬ ದಂಪತಿ ಇ೦ದಿನ ಮೈಸೂರಿನ ಬಳಿ ಎಲ್ಲೋ ವಾಸಿಸುತ್ತಿದ್ದಿರಬೇಕು. ಅವರು ಶ್ರೀವತ್ಸ ಗೋತ್ರದವರಾಗಿದ್ದು, ಅವರಿಗೆ ಇಬ್ಬರು (ನಮಗೆ ತಿಳಿದಿರುವ೦ತೆ) ಗಂಡು ಮಕ್ಕಳು. ಹೆಣ್ಣು ಮಕ್ಕಳು ಇದ್ದರೋ ಇಲ್ಲವೋ ತಿಳಿಯದು. ಆ ಗಂಡು ಮಕ್ಕಳಲ್ಲಿ ಎರಡನೆಯ ಮಗನ ಹೆಸರು ರಾಮಯ್ಯ. ಹೆಸರಿಗೆ ಅನುಗುಣವಾಗಿ ಅವರು ಸೀತಮ್ಮ ಎನ್ನುವ ಮಹಿಳೆಯನ್ನು ವಿವಾಹವಾಗುತ್ತಾರೆ (ಅವರ ಹೆಸರು ಬೇರೆಯೇ ಇದ್ದು, ಸೀತೆ ಎಂದು ಹೆಸರು ಬದಲಾಯಿಸಿಕೊಂಡಿರಲೂ ಸಾಧ್ಯ ). ಆಗ ಅವರ ಜೀವನ ಹೇಗಿತ್ತೊ ಏನೋ! ಪ್ರಾಯಶಃ ಕೆಳ ಮಧ್ಯಮ ದರ್ಜೆಯ ಕುಟುಂಬ. ಬ್ರಾಹ್ಮಣರಾಗಿದ್ದರಿ೦ದ ಪುರೋಹಿತರೋ ಪೂಜಾರಿಗಳೋ ಆಗಿರುವ ಸಾಧ್ಯತೆ ಇದೆ. ಶಾಲಾ ಅಧ್ಯಾಪಕರೂ ಆಗಿದ್ದಿರಬಹುದು. ಅವರಿಗೆ ರಾಮಸ್ವಾಮಯ್ಯ ಎನ್ನುವ ಮಗ ಹುಟ್ಟುತ್ತಾನೆ.
ವಲಸಿಗರು ಎಲ್ಲಿ ಹೋದರೂ ವಲಸೆ ಹೋದ ಜಾಗಗಳನ್ನು ಒಪ್ಪಿಕೊಳುವುದು ಅನಿವಾರ್ಯ. ಆದರೆ ಎಷ್ಟು ಒಪ್ಪಿಕೊಳ್ಳಬೇಕು ಎನ್ನುವುದು ಪ್ರಶ್ನೆ. ತಮಿಳು ಮಾತೃಭಾಷೆ ಇದ್ದವರು ನಿಧಾನವಾಗಿ ಕನ್ನಡವನ್ನು ಹೇಗೆ ಸ್ವೀಕರಿಸಿದರು ಎನ್ನುವುದಕ್ಕೆ ನಮ್ಮ ಕುಟುಂಬಗಳು ಒಳ್ಳೆಯ ಉದಾಹರಣೆ. ಈ ಮನೆಯವರು ಹಿಂದೆ ಅಯ್ಯರ್ ಎನ್ನುವ ಪದವನ್ನು ಬಳಸುತ್ತಿದ್ದರೋ ಏನೋ! ಆದರೆ ಕಾಲಕ್ರಮೇಣ ಮೈಸೂರಿನ ‘ಅಯ್ಯ’ ಇವರುಗಳ ಹೆಸರುಗಳಿಗೆ ಅಂಟಿಕೊಡಿತು. ಅಯ್ಯ ಪದಕ್ಕೆ ಹಲವಾರು ಅರ್ಥಗಳು ದೊರಕುತ್ತವೆ. ಆದರೆ ಅವುಗಳಲ್ಲಿ ಹಿರಿಯ (ಆರ್ಯ ದ ತದ್ಭವ) ಎನ್ನುವುದು ಪ್ರಾಯಶಃ ಸೂಕ್ತವೇನೋ! ಅಯ್ಯ ಪದ ಬೇರೆ ಕಡೆಗಳಿಂದಲೂ ಬಂದಿರಬಹುದು. ಮೈಸೂರು ರಾಜ್ಯದ ಆಡಳಿತ ವರ್ಗದಲ್ಲಿದ್ದ ಎಂ. ವಿಶ್ವೇಶ್ವರಯ್ಯ, ಹೆಚ್. ವಿ. ನಂಜುಂಡಯ್ಯ ಇತ್ಯಾದಿ ವ್ಯಕ್ತಿಗಳ ಮೂಲಭಾಷೆ ತೆಲುಗು. ನಮ್ಮಲ್ಲಿ ಕೆಲವು ಕುಟುಂಬಗಳಲ್ಲಿ ಮದುವೆ ಇತ್ಯಾದಿ ಸಮಯದಲ್ಲಿ ಮಾತ್ರ ತಮಿಳು ಸಂಪ್ರದಾಯಗಳು ಉಳಿದುಕೊಂಡಿವೆ. ಮತ್ತು ಎರಡು ಕಡೆಯ ಹಬ್ಬಗಳನ್ನೂ ಆಚರಿಸುತ್ತಾರೆ; ಕೆಲವರಲ್ಲಿ ಇನ್ನೂ ತಮಿಳು (ಮೈಸೂರು ತಮಿಳು) ಮಾತನಾಡುವವರು ಇದ್ದಾರೆ. ಬೆಂಗಳೂರಿನಲ್ಲಿ ಇಂದೂ ಇರುವ ಅಯ್ಯರ್ ಕುಟುಂಬಗಳಿಗೂ ನಮ್ಮ ಕುಟುಂಬಕ್ಕೂ ಮುಖ್ಯ ವ್ಯತ್ಯಾಸ. ಬಹಳ ಹಿಂದೆ ಬಂದ ನಮ್ಮ ತಂದೆಯವರ ಕುಟುಂಬ ಮೈಸೂರು ಜೀವನಕ್ಕೆ ಹೆಚ್ಚು ಒಗ್ಗಿ ಹೋಗಿ ಕನ್ನಡ ಭಾಷೆಯನ್ನು ಸ್ವೀಕರಿಸಿತ್ತು.
ನಮ್ಮ ತಂದೆ ಒಂದು ಪತ್ರದಲ್ಲಿ (ಗಂಗಾಧರ ರಾವ್ ದೇಶಪಾಂಡೆಯವರಿಗೆ) ನನ್ನ ಮಾತೃಭಾಷೆ ಕ್ಯಾನರೀಸ್ (ಕನ್ನಡ) ಎಂದು ಬರೆಯುತ್ತಾರೆ. ಆದರೆ ಶೇಷಾದ್ರಿ ಅಯ್ಯರ್‌ರ ಕಾಲದಲ್ಲಿ ಬಂದ ತಮಿಳು ಬ್ರಾಹ್ಮಣ ಕುಟುಂಬಗಳು ಇನ್ನೂ ಆ ಭಾಷೆಯನ್ನು ಉಳಿಸಿಕೊಂಡಿರುವ ಹಾಗೆ ಕಾಣುತ್ತದೆ. ಇಲ್ಲೇ ಬಹಳ ವರ್ಷಗಳಿದ್ದರೂ ಅವರು ಕನ್ನಡ ಮಾತನಾಡಲು ಹಿಂಜರಿಯುತ್ತಾರೆ; ಅ೦ಥವರಲ್ಲಿ ಕೆಲವರು ಕನ್ನಡ ಕೆಳಭಾಷೆ ಕೀಳು ಎನ್ನುವ ತರಹವೂ ವರ್ತಿಸುತ್ತಾರೆ. ಅದಲ್ಲದೆ ಕನ್ನಡದವರು ಸೋಮಾರಿಗಳು ಎನ್ನುವ ಭಾವನೆಯೂ ಇದೆ. (ಈ) ನಮ್ಮ ತಾಯಿಯ ತಂದೆ ಮತ್ತು ತಾಯಿ ಇಬ್ಬರೂ 19ನೆಯ ಶತಮಾನದ ಕಡೆಯಲ್ಲಿ ಬಂದಿರಬೇಕು (ಅವರ ಬಗ್ಗೆ ಮುಂದೆ ಹೆಚ್ಚು ವಿವರಗಳಿವೆ). ತಂದೆ ತಮಿಳುನಾಡಿನ ಈರೋಡಿನ ಹತ್ತಿರದ ಭವಾನೀ ಕಡೆಯವರು (ಬೆಳಗಾವಿಯಲ್ಲಿ ಕೆಲವು ವರ್ಷಗಳು ಪ್ರಾಧ್ಯಾಪಕರಾಗಿದ್ದ ನಮ್ಮ ಸೋದರಮಾವ ರಾಮಕೃಷ್ಣನ್ ಭವಾನೀಕರ್ ಎಂಬ ಸರ್ ನೇಮ್ ಇಟ್ಟುಕೊಂಡಿದ್ದರು), ತಾಯಿ ಅಲ್ಲಿಯ ಕನ್ಯಾಪಟ್ಟಿಯವರು. ನಮ್ಮ ತಾಯಿಯ ಅಣ್ಣಂದಿರಿಬ್ಬರಿಗೂ ಹೆಚ್ಚು ತಮಿಳು ಮೂಲದ ಮದರಾಸಿನ ಕಡೆಯ ಹೆಂಡತಿಯರು; ಆದರೆ ಮನೆಯ ಹೆಣ್ಣುಮಕ್ಕಳಿಗೆ (ನಮ್ಮ ತಾಯಿ ಮತ್ತು ಅವರ ಅಕ್ಕ ಸುಬ್ಬಲಕ್ಷ್ಮಿ) ಮೈಸೂರಿನ ಕಡೆಯ ಅಳಿಯಂದಿರು.
ರಾಮಯ್ಯನವರ ಪೂರ್ವಿಕರು ಏಳು ತಲೆಮಾರುಗಳ ಹಿ೦ದೆ – ಅಂದರೆ ಇನ್ನೂರು ವರ್ಷಗಳ ಹಿಂದೆ, ಹೈದರ್ ಟಿಪ್ಪೂ ಕಾಲದಲ್ಲಿ – ಮದರಾಸಿನ ಹತ್ತಿರದ ಕಾ೦ಚೀಪುರದಿ೦ದ ಈ ಕಡೆಗೆ ವಲಸೆ ಬ೦ದ್ದಿದ್ದರ೦ತೆ. ಏಕೆ ಬಂದರೋ ತಿಳಿಯದು. ಅಂತೂ ೧೯ನೆಯ ಶತಮಾನದ ಮಧ್ಯದಲ್ಲಿ ವೆ೦ಕಟೇಶ್ವರ ಮತ್ತು ರ೦ಗಮ್ಮ ಎ೦ಬ ದಂಪತಿ ಇ೦ದಿನ ಮೈಸೂರಿನ ಬಳಿ ಎಲ್ಲೋ ವಾಸಿಸುತ್ತಿದ್ದಿರಬೇಕು.
ಚಿಕ್ಕಂದಿನಲ್ಲಿ ನಮ್ಮ ಅಮ್ಮ ಹೆಚ್ಚು ತಮಿಳು ಮಾತನಾಡುತ್ತಿದ್ದಿರಬಹುದು. ಅದರೆ ಹಾಸನದಲ್ಲಿ ಹುಟ್ಟಿ ಬೆಳೆದಿದ್ದರಿಂದ ಕನ್ನಡವೂ ಚೆನ್ನಾಗಿ ಬರುತ್ತಿತ್ತು. ಅವರ ಅಣ್ಣ ರಾಮಕೃಷ್ಣರ ಜೊತೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅವರ ತಂದೆಯ ಕಡೆ ಸಂಬಂಧಿಗಳು ದೊಡ್ಡ ಕೆಲಸಗಳಲ್ಲಿದ್ದರೆಂದು ಕೇಳಿದ್ದೆ. ಆಗಾಗ್ಗೆ ಅವರಿವರು ಮನೆಗೆ ಬರುತ್ತಿದ್ದರು; ಅವರು ಯಾರೂ ಕನ್ನಡ ಮಾತಾಡುತ್ತಿರಲಿಲ್ಲ; ಅಥವಾ ಮಾತಾಡಲು ಕಷ್ಟ ಪಡುತ್ತಿದ್ದರು. ನಾವುಗಳು ಬೆಳೆಯುತ್ತ ತಮಿಳು ನಿಧಾನವಾಗಿ ನಮ್ಮ ಮನೆಯಿಂದ ಹೊರಟುಹೋಯಿತು. ನಮ್ಮ ತಂದೆ ಎಂದೂ ನನ್ನ ಜೊತೆ ತಮಿಳಿನಲ್ಲಿ ಮಾತಾಡಿಲ್ಲ; ನಮ್ಮ ತಾಯಿ ಬಹಳ ಹಿಂದೆ ಮಾತಾಡಿದ್ದಿರಬಹುದು ಮಾತ್ರ. ಅಮ್ಮ ನನಗೆ ಪತ್ರಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದರು ಮತ್ತು ನಾನು ಅಮ್ಮನಿಗೆ ಕನ್ನಡದಲ್ಲಿ ಉತ್ತರಿಸುತ್ತಿದ್ದೆ. ನಮ್ಮ ಹಿರಿಯಣ್ಣ ಬ್ರಹ್ಮಾನಂದ ಬಹಳ ಕಷ್ಟಪಟ್ಟು ತಮಿಳಿನಲ್ಲಿ ಮಾತಾಡುತ್ತಿದ್ದ, ಕಿರಿಯಣ್ಣ ಗುಂಡಣ್ಣ ಸುಮಾರಾಗಿ ಮತ್ತು ಅಕ್ಕ ರಾಮೇಶ್ವರಿ ಚೆನ್ನಾಗಿ ಮಾತಾಡುತ್ತಿದ್ದರು. ನನಗೆ ತಮಿಳು ಚಿಕ್ಕಂದಿನಲ್ಲಿ ಬರುತ್ತಿತ್ತಂತೆ, ಆದರೆ ಮುಂದೆ ನಿಂತು ಹೋಯಿತು, ಈಗ ಮಾತನಾಡಲೂ ಆಗುವುದಿಲ್ಲ. ನಮ್ಮ ಚಿಕ್ಕಪ್ಪಂದಿರಲ್ಲಿ ನಾರಾಯಣ ಮತ್ತು ಶ್ರೀನಿವಾಸ ಅವರ ಮನೆಗಳಲ್ಲಿ ತಮಿಳು ಹೆಚ್ಚು ದಿನ ಉಳಿದವು.
ಭಾರತೀಯರ ಮತ್ತೊಂದು ಗೀಳು ಬಿಳಿಯ ಬಣ್ಣ. ಇದು ಹಿಂದಿನಿಂದ ಬಂದ ಸೌಂದರ್ಯ ಪರಿಕಲ್ಪನೆಯ ಒಂದು ಅಂಶ. ಅದಲ್ಲದೆ ಮನುಷ್ಯನಿಗೆ ಕತ್ತಲಿನ ಭಯವಿದ್ದಿತಲ್ಲವೇ! ಆದ್ದರಿಂದಲೆ ಕಪ್ಪು ಇಷ್ಟಬರದ ಬಣ್ಣವಾಗಿದ್ದಿರಬಹುದು. ಅಂತೂ ನಮ್ಮ ಮನಸ್ಸಿನಲ್ಲಿ ಬಿಳಿ ಯಾವುದೋ ರೀತಿಯಲ್ಲಿ ಎಲ್ಲೋ ಶ್ರೇಷ್ಟ ಎನ್ನುವ ಭಾವನೆ ಹೋಗಿಲ್ಲ (ಅಮೆರಿಕದಲ್ಲಿದ್ದಾಗ ನನಗೆ ಕೆಲವರು ಇತಿಯೋಪಿಯಾದಿಂದ ಬಂದ ಗೆಳೆಯರಿದ್ದರು. ಅವರಲ್ಲೂ ಈ ಬಿಳಿಯ ಮೋಹ ಇದೆಯಂತೆ) ಇದನ್ನು ಇಂದೂ ಪತ್ರಿಕೆಗಳ ಮದುವೆಯ ಪ್ರಸ್ತಾಪದ ಪುಟಗಳಲ್ಲಿ ಕಾಣಬಹುದು..
ಇದಲ್ಲದೆ ಕಪ್ಪು ಮತ್ತು ಬಿಳಿಯ ಮಧ್ಯದ ಬಣ್ಣಗಳನ್ನು ನಾವು ಪರಿಗಣಿಸುವುದೇ ಇಲ್ಲ. ಜಾಸ್ತಿ/ಕಡಿಮೆ ಕಪ್ಪು ಎನ್ನುತ್ತೇವೇ ಹೊರತು ಕಂದು ಬಣ್ಣ (ಬ್ರೌನ್) ಪದದ ಬಳಕೆಯೇ ಕಡಿಮೆ. ಒಟ್ಟಿನಲ್ಲಿ ನಮ್ಮಲ್ಲಿ ಯಾರನ್ನು, ಅದೂ ಮಹಿಳೆಯರನ್ನು, ವರ್ಣಿಸುವಾಗ ವರ್ಣ (!) ಮುಖ್ಯವಾಗುತ್ತದೆ. ನಮ್ಮ ಮನೆತನಗಳಲ್ಲೂ, ನಮ್ಮ ತಾಯಿತಂದೆ ಇಬ್ಬರ ಕಡೆಯೂ, ಎಲ್ಲ ತರಹದ ಬಣ್ಣಗಳೂ ಕಾಣ ಸಿಗುತ್ತವೆ. ಆದರೆ ನಮ್ಮ ಮನೆಯ ಕೆಲವು ಹಿರಿಯರು ಕಪ್ಪು ಮಗು ಹುಟ್ಟಿದಾಗ, ಕೆಲವು ಬಾರಿ ತಮ್ಮದೇ ಆದರೂ, ಅದನ್ನು ನೋಡಲು ಇಷ್ಟಪಡದಿರುವಷ್ಟು ಬೇಸರ ಮಾಡಿಕೊಂಡ ಉದಾಹರಣೆಗಳಿವೆ! ಮತ್ತೊಂದು ವಿಷಯ ನೆನಪಿಗೆ ಬರುತ್ತದೆ. ನಾನು ನನ್ನ ತಾರುಣ್ಯದಲ್ಲಿ ಮೀಸೆ ಬೆಳೆಸಲು ಶುರುಮಾಡಿದಾಗ ನಮ್ಮ ತಾಯಿ “ಏನೋ ಇದು ದ್ರಾವಿಡರ ತರಹ ಮೀಸೆಬಿಡ್ತಾ ಇದ್ದೀಯ” ಎಂದಿದ್ದರು. ಎಲ್ಲಿಂದ ಬಂದಿತು ಇವರಿಗೆ ಈ ಪರಿಕಲ್ಪನೆ? ಏಕೆಂದರೆ ದೇಶದ ಇತಿಹಾಸ ಅವರಿಗೆ ಅಷ್ಟು ಗೊತ್ತಿರಲಿಲ್ಲ.
ಹೆಸರುಗಳಲ್ಲಿ ಹೆಚ್ಚು ಯೋಚನೆಯ ಅಥವಾ ಕಲ್ಪನೆಯ ಬರ ಕಾಣಿಸುತ್ತದೆ. ಅವೇ ಹೆಸರುಗಳು ಮತ್ತೆ ಮತ್ತೆ ಬರುತ್ತಿದ್ದು ಯಾವ ವೈವಿಧ್ಯವೂ ಕಾಣುವುದಿಲ್ಲ. ಸ್ಮಾರ್ತ ಬ್ರಾಹ್ಮಣರಲ್ಲಿ ಶಿವ ಮತ್ತು ವಿಷ್ಣು ಇಬ್ಬರ ಹೆಸರುಗಳೂ ಬಂದು ಹೋಗುತ್ತವೆ. ಆದರೂ ರಾಮನ ಹೆಸರನ್ನು ಈ ಮನೆತನದಲ್ಲಿ ಹೆಚ್ಚು ಕಾಣಬಹುದು. ಭಾರತದಲ್ಲಿ ಸುಮಧುರ ಹೆಸರುಗಳು ಕೇಳಿಬರುವುದು ಬಂಗಾಲದಲ್ಲಿ; ಬಂಗಾಲಿ ಕಾದಂಬರಿಗಳು ದಕ್ಷಿಣದಲ್ಲಿ ಜನಪ್ರಿಯವಾಗುತ್ತ ನಿಧಾನವಾಗಿ ಆ ಹೆಸರುಗಳು ಬೇರೆ ಭಾಷೆಗಳಿಗೂ ಹರಡಿದವು. ಆದರೆ ನಮ್ಮ ಮನೆಯಲ್ಲೇ ಎರಡು ಅಪೂರ್ವ ಹೆಸರುಗಳು ಕಾಣಿಸಿಕೊಳ್ಳುತ್ತವೆ: ಬ್ರಹ್ಮಾನಂದ ಮತ್ತು ರಾಮೇಶ್ವರಿ! ನಮ್ಮ ತಂದೆತಾಯಿಯರಿಗೆ ಈ ಹೆಸರುಗಳು ಹೇಗೆ ಹೊಳೆದವೋ ತಿಳಿಯದು..
ಬೆಂಗಳೂರಿನವರಾದ ಪಾಲಹಳ್ಳಿ ವಿಶ್ವನಾಥ್ ಭೌತಶಾಸ್ತ್ರ ಪ್ರಾಧ್ಯಾಪಕರು. ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಫರ್ಮಿಲ್ಯಾಬ್, ಲಾಸ್ ಅಲಮೋಸ್ ಲ್ಯಾಬ್ , ಗೊಡಾರ್ಡ್ ಸ್ಪೇಸ್ ಸೆಂಟರ್ ಗಳಲ್ಲಿ ಅವರು ಸಂಶೋಧನೆಗಳನ್ನು ಮಾಡಿದ್ದಾರೆ. ವಿಜ್ಞಾನ ಬರಹಗಾರರಾದ ಅವರ ಕೃತಿಗಳು, ಆಕಾಶದಲ್ಲೊಂದು ಮನೆ, ಕಣಕಣ ದೇವಕಣ, ಭೂಮಿಯಿಂದ ಬಾನಿನತ್ತ, ಪಾಪ ಪ್ಲೂಟೊ.
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆ ಇಲ್ಲದಿರುವುದು ,ಈ ತಾರತಮ್ಯಕ್ಕೆ ಕಾರಣ. ಮಾತೃಭಾಷೆಗೆ ಅನ್ನ ಕೊಡುವ ಸಾಮರ್ಥ್ಯ ಇಲ್ಲದಿದ್ದರೆ ಬಾಗಿಲು ಕಾಯುವ ಜವಾನನಿಗೂ ಸೂಟು ಬೂಟು ಹಾಕಿ ಹರಕು ಮುರುಕು ಕಂಗ್ಲಿಷ್ ಕಲಿಸಿಯಾದರೂ ಕೆಲಸ ಮಾಡಿಸಿಕೊಳ್ಳುತ್ತಾರೆ. ಇನ್ನು, ಬಿಳಿಯ ಬಣ್ಣದ ದಾಸರಿಗೆ ಹಚ್ಚಿಕೊಂಡು ಬೆಳ್ಳಗಾಗುವಂತೆ ಮಾಡಿಸಿಕೊಳ್ಳುವ ತಂತ್ರ ಚೆನ್ನಾಗಿ ಅಭ್ಯಾಸವಾಗಿದೆ. ಈ ಸಂದರ್ಭದಲ್ಲಿ ತೆನಾಲಿ ರಾಮಕೃಷ್ಣನ ಕಥೆ ನೆನಪಾಗುವುದು. ಕಪ್ಪುನಾಯಿಯನ್ನು ಬಿಳಿಯಾಗಿಸಲು ಹೋಗಿ ಅದರ ಚರ್ಮ ಸುಲಿಯುವುದು. ಬ್ರಿಟಿಷರು ದೇಶ ಬಿಟ್ಟು ತೊಲಗಿದರೂ, ಅವರ ಸಂಸ್ಕೃತಿ ನಮ್ಮನ್ನು ಬಿಟ್ಟು ಹೋಗಿಲ್ಲವೆಂಬುದು ವಿಪರ್ಯಾಸ.