ಒಂದು ಸ್ತನದ ಹುಡುಗಿ

ಬಸ್ ನಿಲ್ದಾಣದ ಮೂಲೆಗೆ ಕುಳಿತ
ಅವಳ ಕುಡಿನೋಟ
ಚಪ್ಪಟೆ ಮೂಗು, ಸಮಾಸಮ ಎತ್ತರ
ಕಣ್ಣ ತುಂಬ ಪ್ರಶ್ನೆ
ತುಟಿಯಲ್ಲಿ ಮಿಂಚು ನಗೆ

ಬಳ್ಳಿಯಂಥ ಈ ಚೀನಿ ಹುಡುಗಿ
ಒಮ್ಮೆಲೆ ಪರಿಚಯವಾಗಿ
ಕೈಕೈ ಹಿಡಿದು ಊರೆಲ್ಲ ಮರೆತಾಗ
ಬದುಕಿಗೊಂದು ಸ್ಪೂರ್ತಿ
ಒಬ್ಬರನ್ನೊಬ್ಬರು ಬಿಸಿಹಿಡಿದು, ಕಾಡು ಸುತ್ತಿ
ಕಣಿವೆಯೆಲ್ಲ ಅಲೆದಲೆದು
ಬಯಲ ಹುಲ್ಲುಗಾವಲಲ್ಲಿ
ಅಪ್ಪಿ ಕೂತಾಗ
ನನ್ನ ಅವಳ ಮಧ್ಯೆ
ಬಿಸಿ ಉಸಿರು
ಅವಳ ಎದೆಯಲ್ಲಿ ಒಂಟಿ ಸ್ತನ!

ಜೀವನವ, ಪ್ರೀತಿಯ
ಬಸಿ ಬಸಿದು ಕುಡಿಸಿದವಳೆ
ಪ್ರಶ್ನೆಗಳೇ ಏಳದಂಥ ಉತ್ತರಗಳ ಕೊಟ್ಟವಳೆ
ಈವತ್ತಿನ ಬೆಳಗು ನೀನಿಲ್ಲ!

ಗುಡ್ಡದ ಮೇಲಿನ ಭೌದ್ದ ರುದ್ರಭೂಮಿಯ ಥಂಡಿ
ನಿನ್ನ ಬಿಸಿ ತುಟಿಗಳಿಗೆ ತಾಗದಿರಲಿ.
ಕೆಳಗಿನ ಕಣಿವೆಯ ಸಮುದ್ರದ ಅಲೆಗಳ ಮೊರೆತ
ನಿನ್ನ ಕಿವಿಗಳಿಗೆ ಕವಿತೆಗಳಾಗಿ ಉಲಿಯಲಿ.