ನೆರಳು- ಹೊರಳು

ಸುಳಿದಾಡುತ್ತದೆ ಹಾವು
ಹರಿದಂತೆ ಬೆಳಕಿನ ವಿರುದ್ಧವೇ
ಉದ್ದಕ್ಕೆ ಕತ್ತು ಚಾಚುತ್ತದೆ.

ಏರಿದಂತೆ ಹೊತ್ತು
ಬೆಳೆಯುವ ಕತ್ತು
ಕೊಂಚವೂ ವಿಶ್ರಮಿಸದೇ
ಕಾಡುತ್ತದೆ ಜೊತೆಗೆ
ಅಂಟಿಕೊಂಡೇ ಅಂಡಲೆಯುತ್ತದೆ

ಕೆಲವೊಮ್ಮೆ ಕಡುಕಪ್ಪು
ಕಗ್ಗತ್ತಲ ರಾತ್ರಿಗೆ
ಬೆಳಕ ಮೂತಿಗೆ
ಹೊತ್ತು ಹೊತ್ತಿಗೆ
ಇಷ್ಟೇ ಅಷ್ಟೇ ಬೆಳೆಯುತ್ತದೆ ಬುಡಕ್ಕೆ
ಕೂತರೂ ನಿಂತರೂ ಬೆನ್ನು
ಬಿಡದ ಬೇತಾಳದಂತೆ

ಕಾಲದ ಅಲೆಗಳು ಕೆಂಪೇರಿ
ಭ್ರಮೆಯ ಮೆಟ್ಟಿಲುಗಳಾಗಿ
ಮುಮ್ಮುಖ ಹಿಮ್ಮುಖ ಚಲನೆಗಳ
ಜೊತೆಗೆ ಅರೆ ಮಬ್ಬಿನಲ್ಲೂ
ಕಾಲಬುಡದಲ್ಲಿ ಟಿಕಾಣಿ ಹೂಡಿ
ಸ್ಥಿರವಾಗುತ್ತದೆ.

ನಮ್ಮೊಡನಿದ್ದು ನಮ್ಮಂತಾಗದೆ
ಹೊತ್ತಿನೊಂದಿಗೆ ಮಾತ್ರ
ಒಪ್ಪಂದ ಹೂಡಿ
ನಮಗೇ ಸಡ್ಡು ಹೊಡೆಯುತ್ತದೆ.
ಹೊರಳು ನೋಟಕ್ಕೆ
ಒತ್ತಾಯಿಸುತ್ತದೆ.

ಈ ಮುದುಕಿಯರೇ ಹೀಗೆ!!

ಈ ಮುದುಕಿಯರೇ ಹೀಗೆ
ರೆಕ್ಕೆಪುಕ್ಕವನ್ನೂ ಒತ್ತಿ ಒತ್ತಿ
ಒಳಗೆಳೆದುಕೊಳ್ಳುವ
ಗುಬ್ಬಚ್ಚಿಗಳಂತೆ

ಸುಮ್ಮನೇ ನೋಯುತ್ತಾರೆ
ಮನೆಯ ದೇಖರೇಖಿಯ
ಚಿಂತೆಯಲ್ಲೇ
ಇಟ್ಟ ಲೋಟ ಕಾಣದೇ
ಕಂಗಾಲಾಗಿ ಮತ್ತೆ
ಎತ್ತಿಕೊಂಡವರ ಶಪಿಸುತ್ತಾ
ಲಟಿಕೆ ಮುರಿಯುತ್ತಾರೆ

ಮಕ್ಕಳ ಮೊಮ್ಮೊಕ್ಕಳ
ಹಳೆಯ ಅಂಗಿ ಚಡ್ಡಿಗಳ
ತೆಗೆದು ಬಚ್ಚಿಡುತ್ತಾ, ನೆನೆಪುಗಳ
ಮಾಲೆ ಕಟ್ಟುತ್ತಾ,
ಎದೆಯುಬ್ಬಸ, ತತ್ತರಿಸುವ ಕೈಗಳು
ನಡುಗುವ ಕಾಲು
ತಡವರಿಸುವ ಪದಗಳಲ್ಲಿ
ಒಪ್ಪಿತವಾಗದ ಸಿದ್ಧಾಂತಗಳ ವಿರುದ್ಧ
ಮುಷ್ಕರಕ್ಕೆ ಸಿದ್ಧರಾಗುತ್ತಾರೆ..

ಜೀವಜೀವದೊಳಗಿನ
ಮಮತೆ ಮಕಾರಗಳಿಗೆ
ಚಿಗಿತುಕೊಳ್ಳುವ ಬಂಧನ
ಬೆಸುಗೆಗಳಿಗೆ ತೈಲ
ಎರೆಯುವ ಬುಡ್ಡಿಯಾಗುತ್ತಾರೆ

ಈ ಮುದುಕಿಯರೇ ಹೀಗೆ
ಮನೆಯ ಸಂದುಹೋದ ಬಣ್ಣಕ್ಕೆ
ಸಾಕ್ಷಿಯಾಗುತ್ತಾರೆ