ಬಹಳ ಸಣ್ಣ ವಯಸ್ಸಿನಲ್ಲೇ ಪ್ರಖರ ನಕ್ಷತ್ರದಂತೆ ಬರೆದು, ಬದುಕಿ ಅಷ್ಟೇ ಕ್ಷಿಪ್ರಗತಿಯಲ್ಲಿ ತೀರಿಹೋದ ಕನ್ನಡದ ಅನನ್ಯ ಬರಹಗಾರ್ತಿ ನಾಗಶ್ರೀ ಶ್ರೀರಕ್ಷ (19:12:1986 -15:07:2018) ಹುಟ್ಟಿದ ದಿನ ಇಂದು. “ಕೆಂಡಸಂಪಿಗೆಯಲ್ಲಿ ಈ ಕವಿತೆಗಳೆಲ್ಲಾ ಪ್ರಕಟವಾಗುತ್ತಿದ್ದ ಕಾಲ ತುಂಬ ಮಜವಾಗಿತ್ತು, ಅನಾಮಿಕವಾದ ತುಂಟ ತೊರೆಯೊಂದರಂತೆ ಇದ್ಯಾವುದೂ ನನದಲ್ಲವೇ ಅಲ್ಲ ಎಂಬಂತೆ ಬೆಚ್ಚಗೆ ಹೊದ್ದು, ಮಲಗಿ ನನಗೆ ನಾನೇ ಕಣ್ಣು ಮಿಟುಕಿಸುತ್ತಾ ನನ್ನನ್ನು ಬೈಯುತ್ತಿದ್ದವರಿಗೂ ಆನಂದಿಸುತ್ತಿದ್ದವರಿಗೂ ಅವರ ಕಮೆಂಟು ಕೀಟಲೆಗಳನ್ನು ಕಳ್ಳ ನಗೆ ನಕ್ಕು ಅನುಭವಿಸುತ್ತಿದ್ದೆ. ಎಂತಹ ಮಜದ ದಿನಗಳವು! ಈ ಲೋಕಕ್ಕಿರಲಿ, ಕೊನೆಗೆ ನನಗೆ ನಾನೇ ಯಾರೂ ಆಗಿರದ ದಿನಗಳವು! ಈ ಹಗುರ ಲೋಕದಲ್ಲಿ ನಾನು ಗಾಳಿಯ ಹಾಗಿದ್ದ ಕಾಲವದು. ನಕ್ಷತ್ರದ ದೆಸೆಯಿಂದ ಹುಟ್ಟಿದ್ದ ನಕ್ಷತ್ರದಾಸ, ನಕ್ಷತ್ರಿಕ, ಮತ್ತೊಂದು ನಕ್ಷತ್ರ, ಇನ್ನೊಂದು ನಕ್ಷತ್ರ, ಎಲ್ಲಾ ನಕ್ಷತ್ರಗಳಿಗೂ, ನಕ್ಷತ್ರವನ್ನು ಪ್ರೀತಿಸಿದ ಎಲ್ಲಾ ಕನ್ನಡ ಕುಮಾರರಿಗೂ, ಪ್ರೀತಿಯಿಂದ ಅಸೂಯೆಪಟ್ಟುಕೊಳ್ಳುತ್ತಿದ್ದ ಎಲ್ಲಾ ಲಜ್ಜಾ ಸ್ತ್ರೀಯರಿಗೂ, ಕೆಟ್ಟಕವಿತೆಯೆಂದೂ, ಇದು ಕವಿತೆಯೇ ಅಲ್ಲವೆಂದು ಕುಟುಕುತ್ತಿದ್ದ ಹಿರಿಯರಿಗೂ ಕಿರಿಯರಿಗೂ ನನ್ನಪ್ರೀತಿಯ ಅಪ್ಪುಗೆ. ನನ್ನೊಳದೆ ಯಾವುದೋ ವ್ಯಾದನಂತೆ ಅಡಗಿಕೊಂಡಿದ್ದ ಇವುಗಳೆಲ್ಲಾ ಕ್ಷೀಣಿಸುತ್ತಿರುವ ನನ್ನ ಬೆರಳ ಸಂಧಿಗಳಲ್ಲಿ ಜಾರಿ ಹೋಗುತ್ತಿರುವ ನನ್ನ ಬದುಕಂತೆ ಒಂದು ವ್ಯಾಧಿಯಂತೆ ನನ್ನ ಅಪ್ಪಣೆಗೂ ಕಾಯದೆಯೆ ಹೊರಗೆ ಹರಿಯುತಿದೆ” ಇವು ತೀರಿಹೋಗುವ ಮೊದಲು ಪ್ರಕಟವಾದ ತನ್ನ ನಕ್ಷತ್ರ ಕವಿತೆಗಳು ಸಂಕಲನಕ್ಕೆ ನಾಗಶ್ರೀ ಬರೆದ ಪ್ರಸ್ತಾವನೆಯ ಕೆಲವು ಸಾಲುಗಳು. ತನ್ನ ಕವಿತೆಗಳ ಮೂಲಕ ನಮ್ಮೊಳಗೆ ಬದುಕಿರುವ ನಾಗಶ್ರೀಗೆ ಹುಟ್ಟು ಹಬ್ಬದ ಶುಭಾಶಯಗಳು.

 

೧. ಗಿಣಿ ಕಚ್ಚಿದ ನಿನ್ನ ಕಾಯಿ ಪೇರಳೆ ತುಟಿಗಳು

ನನ್ನ ಎಲ್ಲಾ ವಸಂತಗಳು ಮರಳಿ ಧುಮುಕುತಿವೆ
ಹೂಂಕರಿಸುತಿದೆ ಎನ್ನ ಕರುಳಿಂದ ತುಂಬಾ ಹಳೆಯದೊಂದು
ಬರುವುದಿದೇ ಇನ್ನೂ ಸುರುಳಿ ಸುರುಳಿ ಸೆಳೆವಿನಂತೆ,

ಇರು
ಹೊರಡಬೇಡ, ಹೆದರಿದವನೇ, ಬಾ
ಈ ಚಡಾವಲ್ಲಿ ಕುಳಿತುಕೋ

ಇನ್ನು ನನ್ನದಿದು ಈ ಕಡು ಬಿಸಿಲು
ಮರಳಿಸಲಾರೆ ಈ ಲೋಕದ ತಿರುವಿಗೆ,
ತಿಳಿದಿದೆ ಇವಕ್ಕೂ ಎಲ್ಲಾ ಕಾಲದ ನನ್ನ
ಪೇಯಗಳು ಬರಿಯ ನನಗೆಂದು ಅರಿವಿದೆ ನಿನಗೂ…
ಕಂದಿಹೋಗದಿರು, ನನ್ನ ಕಣ್ಣುಗಳು ದೀವಟಿಗೆ
ಪ್ರಪಾತದಿಂದ ಉಕ್ಕಿ ಬಳುಕುವ ಹಾಲುನೊರೆಯ ಕನ್ನಿಕೆ
ಅಯ್ಯೋ ನಿನ್ನ ಗಿಣಿ ಕುಕ್ಕಿದ ಒಣ ತುಟಿಗಳು
ನಗುವು ಬರುತಿದೆ ನೋಡು ನನಗೆ ನಿನ್ನ ಹುಚ್ಚಿಗೆ

ಒಂದು ವಸಂತ
ಪೇರಳೆ ಮರ ನುಣುಪು ಕಾಂಡ, ಮೇಲೆ ನಾನು ಅಳಿಲಂತೆ
ಕಾಯಿ ಪೇರಳೆ ಚೊಗರು ಹಣ್ಣು ಬಾಯಲ್ಲಿ ಸುಮ್ಮನೆ ನೆವಕ್ಕೆ.. ದೀರ್ಘ ಕಾಲಕ್ಕೆ
ಎಂತಹದದು ಬಿರು ಬೇಸಗೆ ಸೆಖೆ ಬೆವರು, ನುಣುಪುಕಾಂಡ ದೀರ್ಘ ಬದುಕು!!
ಅಲ್ಲೇ ತಂಪು ಬಾವಿ ಕೇರೆ ಮರಿ
ಹೇ ಪುಟ್ಟಮ್ಮ
ಎಂದು ಬಿಸಿಲು ಕರೆದಂತೆ

ಈಗ ನನ್ನ ಭಾರದ ಭುಜಗಳು ನವಿರು ಮರದ ಕೊಂಬೆ
ಗಿಣಿ ಕಚ್ಚಿದ ನಿನ್ನ ಕಾಯಿ ಪೇರಳೆ ತುಟಿಗಳು
ಈ ದೀರ್ಘ ಬದುಕು!!
ನಗುತಿರುವೆ ತೀರ ಒಳಗಿಂದ
ನಿಜಕ್ಕೂ ಸಾಯುತ್ತಿರುವುದು ಯಾರೆಂದು
ಈ ಲೋಕ ಗಹಗಹಿಸುತಿದೆ

ಇರು
ಹೊರಡಬೇಡ, ಹೆದರಿದವನೇ, ಬಾ
ಈ ಚಡಾವಲ್ಲಿ ಕುಳಿತುಕೋ

೨.  ಕರುಣೆ ಇರದ ಕಾರಣ ಪ್ರಭುವು.

ನಿಲ್ಲದ ಈ ಲೋಕದ ಕಡೆಗೋಲ ಉನ್ಮತ್ತದಲ್ಲಿ
ಕಾಣಿಸುತ್ತಿಲ್ಲ ನಾನು
ಪ್ರಭುವು ನನ್ನ ಕಣ್ಣಾಲಿಗಳಲಿ
ಹರಿಸುತಿರುವನು ಝರಿಯಂತಹದನು
ರೌದ್ರಾಕ್ಷರಗಳನ್ನು ಬರೆಸುತಿರುವನು ಅಳಿಸಿ
ನನ್ನ ಮಗು ಹೆಜ್ಜೆಗಳನು ತನ್ನ ಅದೇ ತಲೆಯ ಮೇಲೆ ಮತ್ತೆ
ಇರಿಸುತಿರುವನು ಕರುಣೆ ಇರದ
ಕಾರಣ ಪ್ರಭುವು.

ನನ್ನ ದೊಡ್ಡದಾಗಬಹುದಿದ್ದ ತೋಳ ರೆಕ್ಕೆಗಳು ಬಿಚ್ಚಿಕೊಳ್ಳುತಿದೆ ಅತೀ ಮೆಲ್ಲನೆ
ಹಾ… ಹಡಗಿಲ್ಲದಂತೊಂದು ಮಹಾಕಡಲಿಂದ
ಮೌನವಾಗಿರುವಂತ ಲೋಕ ನಾದ
ಎಷ್ಟು ಸೈರಿಸುತಿದೆ ಸಹನೆ

ನಡೆವೆ ನಡುವೆ ನಡೆವೆ ಮುಂದೆ
ಕ್ಷೀಣದಿಂದ ಹತ್ತಿ ತಾರಕದ ಮೇಲೆ
ಹಾಡಿಗೆ ಉರುಳಿ
ಮೇಲೆ ಕವಿತೆಗಳಾಗುವುದ
ಕಾಣುವೆ

ಎಲ್ಲಿಯೋ ಈ ಪ್ರೇಮ ಉರುಳಿಸುವುದನೂ
ಎಲ್ಲಿನದೋ ಮಾಯದ ಭುಜಗಳು ತಾಕಿ
ಅರೆಸುಖದಲಿ ಹಿಂದಕ್ಕೆ ಕಳುಹಿಸುವುದನೂ

ನನಗೆ ಹುಚ್ಚು ಬರಿಯ ಈ ಲೋಕದ್ದು
ನನ್ನ ಕಣ್ಣುಗಳಷ್ಟೇ ಅರಳುವ
ಈ ನಿಜದ ಕಡು ಇರುಳಲ್ಲಿ
ಈ ನದಿಗಳ ಲಾಸ್ಯದ ಹರಟೆ ಕೇಳುವ ಹುಚ್ಚು
ಮಲೆ ಬೆಟ್ಟ ಕಾನನ ಮುಲುಕುವುದ ಆಲಿಸುವ ಹುಚ್ಚು
ನನ್ನ ಮೈಯ ಗಂಧಕ್ಕೆ ಆ ಗಂಧವತಿಯ ನೋಡುವ ಹುಚ್ಚು

ಸುಮ್ಮನೆ ಶಬ್ದಗಳಲ್ಲ ಇವು
ಒಳಗೆ ಗುಹೆಯಂತಹ ದೇಹದ
ನೋವುಗಳೂ ಅಲ್ಲವಿವು
ಕೇಳು ಕೇಳು ಅವು ಒಳಗೆ ಕವಿತೆಗಳಾಗುತಿವೆ
ಯಾಕೆಂದರೆ ಕೇಳುವ ಠಣಗಳು
ಹೊರಗಿನವದ್ದಲ್ಲ
ಅಸಲಿಗೆ ನಾನು ಇರಲೇ ಇಲ್ಲ ಹೊರಗೆ ನಿಮ್ಮ ಹಾಗೆ.

ಎಂತಹ ನಿಶಾಂತ ಹೊತ್ತು ಇದು
ನಿನ್ನ ಶುಭ್ರ ಕಣ್ಣುಗಳು ಕಂಡ ಆಕಾಶ
ಈಗ ನನ್ನ ಕಣ್ಣಲ್ಲಿ ಪವಡಿಸಿದೆ
ನೀರ ಕತ್ತಲೆಯ ಒಳಗೆ
ಆಡುತಿರುವ ಪುಟ್ಟ ಮೀನುಗಳಂತೆ
ಕವಿತೆಗಳು ಈಸಾಡುತಿವೆ
ಮೈಮುರಿಯುತಿವೆ
ನಿಲ್ಲದ ಈ ಲೋಕದ ಕಡೆಗೋಲ ಉನ್ಮತ್ತದಲ್ಲಿ
ಕಾಣಿಸುತ್ತಿಲ್ಲ ನಾನು.