ಬಾವಿಕಟ್ಟೆಯ ಪಶ್ಚಿಮಕ್ಕೆ ಬಚ್ಚಲು ಮನೆ. ಸ್ನಾನ ಮಾಡಲು ಬಚ್ಚಲು ಹೊಂಡವಿದ್ದಿತು, ಸ್ನಾನಕ್ಕೆ ಬಿಸಿನೀರು ಕಾಯಿಸಲೊಂದು ಬಹಳಷ್ಟು ದೊಡ್ಡ ಗಾತ್ರದ ಹಂಡೆ, ಬಟ್ಟೆ ಬದಲಾಯಿಸಲು ಸಾಕಷ್ಟು ವಿಸ್ತಾರವಾದ ಸ್ಥಳ. ಚಿಕ್ಕಂದಿನಲ್ಲಿ ನಾನು ನನ್ನ ತಮ್ಮಂದಿರನ್ನು ಕೂಡಿಕೊಂಡು ಬಚ್ಚಲು ಒಲೆಯ ಮುಂದೆ ಚಳಿಗಾಲದಲ್ಲಿ ಮೈ ಕಾಯಿಸುತ್ತ, ಹುಲ್ಲು ಕಡ್ಡಿಗಳಿಗೆ ಬೆಂಕಿ ತಗುಲಿಸಿ, ಸಿಗರೇಟು ಸೇದುತ್ತಿದ್ದೇವೆಂಬ; ಆಟವಾಡಿದ ದಿನಗಳ ನೆನಪಾಗುತ್ತಿದೆ.
ಹಿರಿಯ ಸಾಹಿತಿಗಳಾದ ನಾಗ ಐತಾಳರು (ಆಹಿತಾನಲ) ನೆನ್ನೆ ತೀರಿಕೊಂಡರು. ಅವರ ನೆನಪಿನಲ್ಲಿ ಅವರ “ಕಾಲ ಉರುಳಿ ಉಳಿದುದಷ್ಟೇ ನೆನಪು” ಆತ್ಮಕತೆಯ ಭಾಗವೊಂದನ್ನು ನಿಮ್ಮ ಓದಿಗೆ ಇಲ್ಲಿ ಹಂಚಿಕೊಳ್ಳಲಾಗಿದೆ

ನಮ್ಮ ಮನೆ

ನಾನು ಹುಟ್ಟಿ, ಬೆಳೆದ ಮನೆ-ನಮ್ಮ ಗಿಳಿಯಾರು ಗ್ರಾಮದಲ್ಲಿ ಅತಿ ದೊಡ್ಡ ಮನೆ ಎಂದು ಹೆಸರುವಾಸಿಯಾಗಿತ್ತು. ನಮ್ಮ ಅಜ್ಜ, ನಾಗಪ್ಪ ಐತಾಳರು ನಮ್ಮ ಮನೆಯ ಈಗಿರುವ `ಒರಳು ಕೊಟ್ಟಿಗೆ’ ಇರುವ ಸ್ಥಳದಲ್ಲಿ ಮನೆ ಮಾಡಿದ್ದರಂತೆ. ಅವರು ತೀರಿಕೊಂಡ ಮೇಲೆ, ನಮ್ಮ ತಂದೆಯವರು ದೊಡ್ಡ, ವಿಶಾಲವಾದ ಮನೆಯನ್ನು ನೂರು ವರ್ಷಗಳಿಗೂ ಮುಂಚೆ ಕಟ್ಟಿಸಿದರಂತೆ. ಅದನ್ನು ಕಟ್ಟಿಸಿದ ವರ್ಷ ನನಗೆ ತಿಳಿದಿಲ್ಲ.

ಉತ್ತರ ದಿಕ್ಕಿನಲ್ಲಿ ಒಂದು ಹೆಬ್ಬಾಗಿಲಿನ ಮೂಲಕ ಮನೆಯ ಪ್ರವೇಶ. ಎತ್ತರದ ಜಗುಲಿ ಆಚೀಚೆ. ಮುಂದೆ ಬಂದರೆ, `ಪಾತಾಳಂಕಣ’ ಅಲ್ಲಿ ಪಡು ದಿಕ್ಕಿನಲ್ಲಿ ನನ್ನ ತಂದೆಯವರ ಮೇಜು, ಕುರ್ಚಿಗಳು ಒಂದು ಕಾಲದಲ್ಲಿದ್ದುವು. ಅಲ್ಲಿ ನಮ್ಮ ತಂದೆ ಕುಳಿತು `ಹಿಂದೂ’ ದಿನಪತ್ರಿಕೆಯನ್ನು ಓದುತ್ತಿದ್ದ ದೃಶ್ಯವಿನ್ನೂ ಕಂಡೆ-ಕಂಡೆನೆಂಬಂತಿದೆ! ಅಲ್ಲಿಂದ ಮೆಟ್ಟಲು ಹತ್ತಿ ಬಂದರೆ, ದಕ್ಷಿಣ-ಉತ್ತರ ದಿಕ್ಕಿನ ಉದ್ದಕ್ಕೂ ಹರಡಿದ ಜಗುಲಿ. ಅದು, ಮೇಲಿದ್ದ ಚಾವಡಿಗೆ `ಪಾತಾಳಾಂಕಣ.’ ಆ ಜಗುಲಿಯ ಉತ್ತರ ತುದಿಯಲ್ಲೊಂದು ಕೋಣೆ. ಅದು ಒಂದು ಕಾಲದಲ್ಲಿ ನಮ್ಮ ಚಿಕ್ಕಪ್ಪನ ಮಲಗುವ ಕೋಣೆಯಾಗಿತ್ತು. ಜಗುಲಿಗೆ ತಗುಲಿದಂತೆ ಸಾಧಾರಣ ಒಂದೂವರೆ ಅಡಿ ಎತ್ತರಕ್ಕೆ ಚಾವಡಿ. ಅದನ್ನು ನಾವೆಲ್ಲ `ಪಡುಚಾವಡಿ’ ಎಂದು ಕರೆಯುತ್ತಿದ್ದೆವು. ನಮ್ಮ ಮನೆಯಲ್ಲಿ ಮೂರು ಚಾವಡಿಗಳಿದ್ದುವು. ಪಶ್ಚಿಮದಲ್ಲಿ ಪಡುಚಾವಡಿ. ದಕ್ಷಿಣದಲ್ಲಿ ಪ್ರಮುಖ ಚಾವಡಿ. ಅದನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಮತ್ತೆ, ಮನೆಯ ಮೂಡುದಿಕ್ಕಿನಲ್ಲೊಂದು ಮೂಡು ಚಾವಡಿ. ಅದನ್ನು ಹೆಚ್ಚಾಗಿ ಕೂಲಿವರ್ಗದವರ ಭೋಜನ ಗೃಹವೆನ್ನಬಹುದೇನೋ! (ಆ ಬಗ್ಗೆ ಮುಂದೆ ಸ್ವಲ್ಪ ವಿವರ ಕೊಡುವವನಿದ್ದೇನೆ.) ಪಡುಚಾವಡಿಯ ಒಂದು ವಿಶೇಷವೆಂದರೆ, ಒಂದನ್ನೊಂದು ತಗಲಿಕೊಂಡಂತೆ ಅನುಸರಿಸಿದ ಮೂರು ಕಮಾನುಗಳಾಕೃತಿಯ, ಕಲ್ಲಿನಿಂದಲೇ ನಿರ್ಮಿಸಿದ ದೊಡ್ಡ ಗಾತ್ರದ ಕಂಭಗಳು. ಅವು ಪಡುಚಾವಡಿಗೊಂದು ವಿಶೇಷ ಕಳೆ ಕೊಡುತ್ತದೆ. ಪಡುಚಾವಡಿಯ ಉತ್ತರದಲ್ಲೊಂದು ಕೋಣೆ. ಅಲ್ಲಿ ಮನೆಯ ಮುಖ್ಯ ಆದಾಯವಾದ ಅಕ್ಕಿಮುಡಿಗಳನ್ನು ಶೇಖರಿಸುತ್ತಿದ್ದರು. ಅಕ್ಕಿಗೆ ಒಳ್ಳೆಯ ಬೆಲೆ ಬಂದಾಗ, ಅವುಗಳ ಮಾರಾಟದಿಂದ ನಮ್ಮ ಮನೆಯ ಖರ್ಚು-ವೆಚ್ಚಗಳು ಸಾಗುತ್ತಿದ್ದುವು. ಆಗೊಂದು ಕಾಲದಲ್ಲಿ ನಮ್ಮ ಮನೆಯವರು `ಸಾವಿರ ಮುಡಿ ಹುಟ್ಟುವಳಿದಾರರು’ ಎಂಬ ಹೆಸರು ಪಡೆದಿದ್ದರು. ಅದೀಗ ಗತಕಾಲದ ವೈಭವವೆನ್ನಿ! ಒಕ್ಕಲುತನ ಮಸೂದೆ ಬಂದು, ಗೇಣಿದಾರರೇ ಈಗ ಮಾಲೀಕರಾಗಿದ್ದಾರೆ. ಇದು ಸಾಮಾಜಿಕ ನ್ಯಾಯ, ನಿಜ! ಈ ಅಕ್ಕಿ ಮುಡಿ ಶೇಖರಿಸುವ ಕೋಣೆಯನ್ನು ಅಕ್ಕಿಮುಡಿ ಉಗ್ರಾಣವೆಂದು ಕರೆಯಬಹುದೇನೋ! ಪಡುಚಾವಡಿಯ ದಕ್ಷಿಣ ಭಾಗದಲ್ಲಿ ಇನ್ನೊಂದು ಕೋಣೆ. ಅದರಲ್ಲಿ, ಪದೆ-ಪದೇ ಉಪಯೋಗಿಸದೆ ಇರುವ, ಮನೆಗೆ ಮತ್ತು ಬೇಸಾಯಕ್ಕೆ ಬೇಕಾಗುವ ಸಾಮಾನುಗಳನ್ನು ಶೇಖರಿಸುತ್ತಿದ್ದರೆಂದು ನನ್ನ ನೆನಪು. ಸಾಮಾನ್ಯವಾಗಿ ಈ ಎರಡು ಕೋಣೆಗಳಿಗೆ ಕಿಟಿಕಿ ಇಲ್ಲದೆ, ಬೆಳಕು ಕಡಿಮೆ. ಅದಕ್ಕೆ ಪ್ರವೇಶ ಹೆಚ್ಚಾಗಿ ಮನೆಯ ಹಿರಿಯರು ಮತ್ತು ಕೆಲಸದಾಳುಗಳಿಗೆ ಮಾತ್ರ. ನನಗಂತೂ ಪಡುಚಾವಡಿಯ ಈ ಎರಡು ಕೋಣೆಗಳನ್ನು ಪ್ರವೇಶಿಸಲು ಭಯವಾಗುತ್ತಿತ್ತು.

ಪಡುಚಾವಡಿಯ ಉತ್ತರ ಭಾಗದಲ್ಲೊಂದು ಬಾಗಿಲಿದ್ದು, ಅದರ ಹೊರಗೆ ನಮ್ಮ ಚಿಕ್ಕಪ್ಪನ ಬೈಠಕ್ ಸ್ಥಳವಿದ್ದಿತ್ತು. ಇದನ್ನು ನಾವೆಲ್ಲ `ಮುಖಾರಿ’ ಎಂದು ಕರೆಯುತ್ತಿದ್ದೆವು. ಅದಕ್ಕೆ ತಗಲಿಕೊಂಡು, ಉತ್ತರದಲ್ಲೊಂದು ಕೋಣೆ, ದಕ್ಷಿಣದಲ್ಲೊಂದು ಕೋಣೆ. ಕೋಣೆಯನ್ನು ಚಿಕ್ಕಪ್ಪ ಮಲಗುವ ಕೋಣೆಯನ್ನಾಗಿ ಉಪಯೋಗಿಸುತ್ತಿದ್ದರು. ಮುಖಾರಿಯ ಮುಂದೆ ಒಂದು ಸಣ್ಣ ಅಂಗಳ. ಅಲ್ಲಿನ ಪಾಗಾರದಾಚೆಗೆ ಕೆಲವು ಬಳೆಗಾರರ ಮನೆಗಳಿದ್ದುದು ನೆನಪಾಗುತ್ತಿದೆ. ಆದರೆ, ಈ ಮನೆಗಳನ್ನು ಮುಂದೆ ಅಮೃತೇಶ್ವರಿ ದೇವಸ್ಥಾನದ ಬಳಿಗೆ ವರ್ಗಾಯಿಸಿ, ಅಂಗಳವನ್ನು ವಿಸ್ತರಿದ್ದರು. ಬಳೆಗಾರರ ಮನೆಗಳನ್ನು ಬೇರ್ಪಡಿಸಿದ್ದ ಪಾಗಾರಕ್ಕೆ ತಗುಲಿ, ಸ್ವಲ್ಪ ದಕ್ಷಿಣದಲ್ಲೊಂದು ಹಲಸಿನ ಮರವಿದ್ದ ಜ್ಞಾಪಕವಾಗುತ್ತಿದೆ. ಮುಖಾರಿಯ ತೀರ ದಕ್ಷಿಣದಲ್ಲಿ ಮಾವಿನ ಮರಗಳ ಸಾಲಿದ್ದುದು ನೆನಪಾಗುತ್ತಿದೆ. ಅಲ್ಲಿನ ಮಾವಿನಹಣ್ಣುಗಳು ರುಚಿಕರವಾಗಿದ್ದುವು. ಈಗ, ಮುಖಾರಿ ಮಾಯವಾಗಿದೆ. ಅಲ್ಲದೆ, ವಿಸ್ತರಿಸಿದ ಆ ಅಂಗಳದಲ್ಲಿ ನಮ್ಮ ಕಸಿನ್ ಕುಪ್ಪಣ್ಣಯ್ಯನ ಮನೆಯಿದೆ. ಅವನ ಮನೆಯ ಮುಂದೆ, ಉತ್ತರದಲ್ಲಿ ಒಂದು ಹೆಬ್ಬಾಗಿಲಿತ್ತು. ಈಗ ಆ ಹೆಬ್ಬಾಗಿಲನ್ನು ಅಳಿದು, ಅಲ್ಲೊಂದು ಕುಪ್ಪಣ್ಣಯ್ಯನ ಹಿರಿಯ ಮಗ, ರಾಮದೇವ ತನ್ನ ಮನೆ ಕಟ್ಟಿಸಿಕೊಂಡಿದ್ದಾನೆ.

ಪಡುಚಾವಡಿಯಿಂದ ಮುಖ್ಯ ಚಾವಡಿಗೆ ಬಂದಲ್ಲಿ ಅದರಿಂದ ಒಳಗೆ, ಪಡಸಾಲೆಗೆ ಪ್ರವೇಶದ ಕೆತ್ತನೆಯ ದಾರಂದ ಆಕರ್ಷಣೀಯವಾದುದು. ಆ ಚಾವಡಿಯ ಎರಡು ದೊಡ್ಡ ಮರದ ಕಂಭಗಳು ಚಾವಡಿಗಲ್ಲದೆ ಇಡೀ ಮನೆಗೇ ಅಲಂಕಾರ. ಈ ಚಾವಡಿಯ ಮೂಡು ದಿಕ್ಕಿನಲ್ಲೊಂದು ಪತ್ತಾಸು. ಅದರಲ್ಲಿ ನಮ್ಮ ತಂದೆಯವರು ರೆಕಾರ್ಡ್‍ಗಳನ್ನಿಡುತ್ತಿದ್ದರು. ಅಲ್ಲದೆ, ಆಗಂತುಕರು ಬಂದಲ್ಲಿ, ಅದರ ಮೇಲೆ ಹಾಸಿಗೆ ಹರಡಿ ಮಲಗುವ ಮಂಚವಾಗಿಯೂ ಉಪಯೋಗಕ್ಕೆ ಬರುತ್ತಿತ್ತು. ಆದರೆ, ಆ ಪತ್ತಾಸು ಮಾಯವಾಗಿದೆ. ಈ ಚಾವಡಿಯ ಮೂಡುಬದಿಯ ಗೋಡೆಯ ಮೇಲೊಂದು ಹಳೆಯ ಗಡಿಯಾರ, ಗಂಟೆಗಂಟೆಗೂ `ಡಿಂಗ್-ಡಾಂಗ್’ ಸದ್ದು ಮಾಡಿ ಗಂಟೆ ಎಷ್ಟಾಯಿತೆಂದು ಸಾರುತ್ತಿತ್ತು. ಉದಾ., ಸಮಯ 9 ಗಂಟೆಯಾದಲ್ಲಿ, 9 ಬಾರಿ ಡಿಂಗ್-ಡಾಂಗ್ ಮಾಡುತ್ತಿತ್ತು. ಅರ್ಧ ಗಂಟೆಗೆ ಒಂದೇ ಬಾರಿ ಡಿಂಗ್-ಡಾಂಗ್. ಈ ಗಡಿಯಾರದ ಬಗ್ಗೆ ನಮ್ಮ ತಂದೆಯವರು ಹೇಳುತ್ತಿದ್ದ ಒಂದು ಸಂಗತಿ ನೆನಪಾಗುತ್ತಿದೆ. ಇಂಥದೇ ಗಡಿಯಾರ, ಹಿಂದೆ ಪೋಸ್ಟ್ ಆಫೀನಲ್ಲೂ ಇದ್ದಿತಂತೆ. ಒಮ್ಮೆ, ಆಗುಂತಕನೊಬ್ಬ ಈ ಪೋಸ್ಟ್ ಆಫೀಸ್ ಹೊರಗಿನ ಜಗುಲಿಯಲ್ಲಿ ರಾತ್ರಿ ವಿಶ್ರಮಿಸಿದ್ದ. ಅವನು ತನ್ನ ಪ್ರಯಾಣವನ್ನು ಬೆಳಗಿನ ಜಾವ 5 ಗಂಟೆಗೆ ಮುಂದುವರಿಸುವವನಿದ್ದ. ರಾತ್ರಿ 12-30ಕ್ಕೆ ಒಮ್ಮೆ ಡಿಂಗ್-ಡಾಂಗ್ ಆದುದನ್ನು ಕೇಳಿ, ಗಂಟೆ ರಾತ್ರಿ 1 ಆಯ್ತೆಂದು ತಿಳಿದ. ಮುಂದೆ ಗಂಟೆ 1 ಹಾಗೂ 1-30ಕ್ಕೂ, ಒಂದೊಂದೇ ಡಿಂಗ್-ಡಾಂಗ್ ಆದುದನ್ನು ಕೇಳಿ, ಆ ಆಗಂತುಕ, ಅಲ್ಲಿನ ಗಡಿಯಾರವೇ ಸರಿ ಇಲ್ಲದ್ದು ಎಂದು ತೀರ್ಮಾನಿಸಿದ. ಅದನ್ನು ನಂಬಿಕೊಂಡಲ್ಲಿ ತನ್ನ ಪ್ರಯಾಣ ಅಸ್ತ-ವ್ಯಸ್ತವಾಗುವುದೆಂದು ತಿಳಿದು, ರಾತ್ರಿ 1-30ಕ್ಕೇ ಅಲ್ಲಿಂದೆದ್ದು ಪ್ರಯಾಣ ಮುಂದುವರಿಸಿದನಂತೆ. ಚಿಕ್ಕಂದಿನಲ್ಲಿ ಕೇಳಿದ ಈ ಕತೆ, ನನಗಂತೂ ತುಂಬಾ ಸ್ವಾರಸ್ಯಕರವಾಗಿತ್ತು. ಚಾವಡಿಯ ಗೋಡೆಯಲ್ಲೆರಡು ಕಪಾಟುಗಳು. ಪಡುಬದಿಯ ಕಪಾಟಿನಲ್ಲಿ ನಮ್ಮ ತಂದೆಯವರು ಕೆಲವು ಪುಸ್ತಕಗಳನ್ನಿಡುತ್ತಿದ್ದರು.

ಅವುಗಳಲ್ಲೊಂದು, ನಮ್ಮ ತಂದೆಯವರು ಆಗಾಗ ಉಪಯೋಗಿಸುತ್ತಿದ್ದ ಹಳೆಯ ಇಂಗಿಷ್-ಕನ್ನಡ ನಿಘಂಟು ಎಂದು ನನ್ನ ನೆನಪು. ತಮ್ಮ ತಂದೆಯವರಿಗೆ ನಶೆಯ ಅಭ್ಯಾಸವಿದ್ದಿತ್ತು. ಅವರ ನಶ್ಯದ ಡಬ್ಬವನ್ನು ಈ ಕಪಾಟಿನ ಮೇಲಿನ ಶೆಲ್ಫಿನಲ್ಲಿಡುತ್ತಿದ್ದುದು ನನ್ನ ಸ್ಮರಣೆಯಲ್ಲಿಂದೂ ಉಳಿದಿದೆ. ಕೆಳಗಿನ ಎರಡು ಶೆಲ್ಫ್ ನಮಗೆ-ಶಾಲಾ ಪುಸ್ತಕಗಳನ್ನಿಡುವ ಜಾಗ. ಚಾವಡಿಯ ಎಡಭಾಗದಲ್ಲೊಂದು ಕೋಣೆ. ಆ ಕೋಣೆಗೆ ಕಿಟಿಕಿಗಳಿಲ್ಲ. ಅದರಲ್ಲಿ ಬೆಲ್ಲ, ಮೆಣಸು ಮುಂತಾದ ಮನೆಗೆ ಉಪಯೋಗವಾಗುವ ಸಾಮಗ್ರಿಗಳನ್ನು ಶೇಖರಿಸುತ್ತಿದ್ದರು. ಅಲ್ಲೊಂದು ಅಗಾಧ ಗಾತ್ರದ ಪತ್ತಾಸು. ಅದರಲ್ಲಿ ಏನಿರುತ್ತಿತ್ತೋ ನನಗೆ ತಿಳಿದಿಲ್ಲ. ಆ ಪತ್ತಾಸು ಎಷ್ಟು ದೊಡ್ಡ ಗಾತ್ರವಾಗಿತ್ತು ಎಂದರೆ, ಅದನ್ನು ಆ ಕೋಣೆ ಕಟ್ಟುವ ಮೊದಲು ಕೆಳಗಿಳಿಸಿ ಇಟ್ಟ ಮೇಲೆಯೇ ಕೋಣೆಯ ಬಾಗಿಲುಗಳನ್ನು ನಿರ್ಮಿಸಿದ್ದುದು ಎಂದು ಹಿರಿಯರು ಹೇಳಿದುದನ್ನು ಕೇಳಿದ್ದೇನೆ. ಚಾವಡಿಯ ಕೆಳಗೆ ಜಗುಲಿ, `ಪಾತಾಳಂಕಣ’ ಉದ್ದಕ್ಕೂ ಹರಡಿದೆ. ಅಲ್ಲಿಂದ ಕೆಳಕ್ಕೆ ವಿಶಾಲ ಅಂಗಳ. ಅಲ್ಲಿಂದ ಚಾವಡಿಗೆ ಬರಲು ನಾಲ್ಕು ಮೆಟ್ಟಲುಗಳು. ಆ ಮೆಟ್ಟಲುಗಳನ್ನು ಆವರಿಸಿ, ಆಚೀಚೆ ಬದಿಗಳಲ್ಲೆರಡು ಅಲಂಕೃತ ದಂಡೆಗಳು. ಆ ದಂಡೆಗಳ ತುದಿಯಲ್ಲಿ ಕುಂಬಳಕಾಯಿಯನ್ನು ಕೆತ್ತಿದ್ದರು. ಚಿಕ್ಕಂದಿನಲ್ಲಿ ಆ ದಂಡೆಯ ಮೇಲೆ ಕುಳಿತು, ತಮ್ಮಂದಿರೊಡನೆ ಕುದುರೆ ಓಡಿಸುವ ಪಂದ್ಯವಾಡಿದ್ದುದರ ಜ್ಞಾಪಕ ಮರುಕಳಿಸುತ್ತಿದೆ.

ಚಾವಡಿಯಿಂದ ಪಡಸಾಲೆಗೆ ಬಂದರೆ, ಪೂರ್ವದಲ್ಲಿ ದೇವರ ಮಂಟಪವಿಟ್ಟ ಸಾಕಷ್ಟು ದೊಡ್ಡ ಗಾತ್ರದ ದೇವರಗೂಡು. ಅಲ್ಲಿ ನಮ್ಮ ಮನೆ ದೇವರು, ಅಮೃತೇಶ್ವರಿ ಅಮ್ಮನವರ ಬೆಳ್ಳಿಯ ಮುಖವಾಡ ಎದ್ದು ಕಾಣುತ್ತಿತ್ತು. ಈ ಮಂಟಪವನ್ನು ಸ್ನಾನ ಮಾಡಿ, `ಮಡಿ’ ಮಾಡಿಕೊಂಡೇ ಮುಟ್ಟಬೇಕು, ವಿನಹ ಎಲ್ಲ ಸಮಯದಲ್ಲೂ ಮುಟ್ಟುವಂತಿಲ್ಲ. ಅಲ್ಲಿರುವ ದೇವರ ವಿಗ್ರಹಗಳಲ್ಲಿ, ಈಶ್ವರ ಲಿಂಗ, ಸಾಲಿಗ್ರಾಮ, ಮುಖ್ಯವಾದವು. ಈ ಈಶ್ವರ ಲಿಂಗ, ಮಲೆಯಾಳದಿಂದ ಬಂದ ಒಬ್ಬ ಯಾತ್ರಿಕ ಕೊಟ್ಟುದು. ಇದರ ಬಗ್ಗೆ ಹಿರಿಯರು ಹೇಳುತ್ತಿದ್ದ ಒಂದು ಸಂಗತಿ ಸ್ವಾರಸ್ಯಕರವಾಗಿದೆ. ಮೊದಲನೆಯ ವಿಶ್ವ ಯುದ್ಧದ ಸಮಯದಲ್ಲಿ, ಅಕ್ಕಿಯ ಬೆಲೆ ಕುಸಿದುಹೋಗಿ, ನಮ್ಮ ಹಿರಿಯರು ತುಂಬಾ ಸಾಲಕ್ಕೊಳಗಾಗಿದ್ದರಂತೆ. ಆ ಸಂದರ್ಭದಲ್ಲಿ ಈ ಮಲೆಯಾಳಿ ಯಾತ್ರಿಕ, ನಮಗೆ ಈ ಶಿವಲಿಂಗವನ್ನು ಕೊಟ್ಟಿದ್ದಂತೆ. ಹೆಚ್ಚುಕಡಿಮೆ ಅದೇ ಸಮಯದಲ್ಲಿರಬೇಕು, ಬೇರೊಬ್ಬ(?) ಒಂದು ಬಲಮೂತಿಯ ಅಪರೂಪದ ಶಂಖವನ್ನೂ ಕೊಟ್ಟಿದ್ದ. ಇವೆರಡೂ ನಮ್ಮ ಮನೆಗೆ ಬಂದ ಮೇಲೆ, ಅಕ್ಕಿಯ ಬೆಲೆ ಏರಿ, ನಾವು ಸಾಲದಿಂದ ಮುಕ್ತರಾಗಿ, ಪುನಃ ತಲೆ ಎತ್ತುವಂತಾಗಿತ್ತಂತೆ. ಈ ನಂಬಿಕೆಯ ಕಾರಣದಿಂದ ಇವೆರಡೂ ನಮಗೆ ತುಂಬಾ ಅಮೂಲ್ಯವಾದ ನಿಧಿಗಳಾಗಿವೆ. ದೇವರ ಮಂಟಪದ ಗೂಡಿನ ಹೊರಗೆ ಸದಾ ಬೆಳಗುತ್ತಿರುವ ದೊಡ್ಡದೊಂದು ಕಾಲು ದೀಪ ಇದೆ. ಆದರೆ, ಅದು ಈಗ ಕೆಲವೇ ಕಾಲ ಬೆಳಗುವ ಚಿಕ್ಕ ಕಾಲುದೀಪವಾಗಿದೆ.

ಪಡಸಾಲೆಯ ಉತ್ತರ ದಿಕ್ಕಿನ ಗೋಡೆಯುದ್ದಕ್ಕೂ ನಾಗಂದಿಗೆ ಇದೆ. ಅಲ್ಲಿ, ಎರಡು ಜಾಗಂಟೆ, ಒಂದು ಜೊತೆ ತಾಳ, ಎರಡು ಶಂಖಗಳನ್ನು ಶೇಖರಿಸುತ್ತಿದ್ದರು. ದೇವರ ಮಂಟಪದ ಮುಂದೆ ಎರಡು ದೊಡ್ಡ ಗಂಟೆಗಳನ್ನು ತೂಗಿಸಿದ್ದರು. ದೇವರಪೂಜೆಯಾದ ಮೇಲೆ ಮಂಗಳಾರತಿಯ ಸಮಯದಲ್ಲೂ, ವಿಶೇಷ ದಿನಗಳ – ನವರಾತ್ರಿ, ಕಾರ್ತೀಕ ಸೋಮವಾರ ಇತ್ಯಾದಿ – ಪೂಜೆಯ ಮಹಾಮಂಗಳಾರತಿಯ ಸಮಯದಲ್ಲೂ, ಗಂಟೆ, ಜಾಗಂಟೆ, ಶಂಖನಾದಗಳು ಮೊಳಗುತ್ತಿರುವಾಗ ಆ ಶಬ್ದ ಊರಿಗೆಲ್ಲಾ ಕೇಳುತ್ತಿದ್ದಿತ್ತು. ಇವೆಲ್ಲ ಈಗ ಮರೆಯಾಗಿವೆ. ಕಾಲ ಬದಲಾಗಿದೆ. ದೇವರ ಮೇಲಿನ ಭಕ್ತಿ ‘ಮಾಸಿ’ದೆಯೇ ಎಂಬ ಅನುಮಾನ ಕಾಡುತ್ತಿದೆ. ಈಗ ನಮ್ಮಲ್ಲಿ, ಒಬ್ಬರು ಪೂಜಾರಿ ಬಂದು ಸದ್ದು-ಗದ್ದಲಗಳಿಲ್ಲದೆ ಪೂಜೆ ಮುಗಿಸಿ ಹೋಗುತ್ತಾರೆ. ಮೊದಲಿನ ಶಂಖ-ಜಾಗಂಟೆಗಳ ಮೊಳಗು ಈಗಿಲ್ಲ. ನವರಾತ್ರಿ, ಕಾರ್ತೀಕ ಸೋಮವಾರಗಳ ಪೂಜೆಯೂ ಮಾಯವಾಗಿಯೋ ಅಥವಾ ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ. ಬಾಲ್ಯದಲ್ಲಿ ನಾ ಕಂಡ ಆ ಸಂಭ್ರಮವನ್ನು ಎಣಿಸಿಕೊಂಡಾಗ ಮನಸ್ಸು ಅರಳಿದರೂ, ಈಗವೆಲ್ಲಾ ಮಾಯವಾದುದು ಮನಸ್ಸನ್ನು ಕುಗ್ಗಿಸುತ್ತದೆ. ಹಳೆಯ ಸಂಪ್ರದಾಯಗಳು ಮಾಯವಾಗುತ್ತಿರುವುದು ನಾಗರಿಕತೆ ತಂದ ಬದಲಾವಣೆಯ ಲಕ್ಷಣವೇ ? ಎಂದು ಯೋಚಿಸುತ್ತಿದ್ದೇನೆ.

ಚಾವಡಿಯಿಂದ ಪಡಸಾಲೆಗೆ ಬರುವ ಕೆತ್ತನೆ ತುಂಬಿದ ದಾರಂದದ ಹೊಸ್ತಿಲು ಸಾಮಾನ್ಯ ಹೊಸ್ತಿಲುಗಳಿಗಿಂತಲೂ ಎತ್ತರವಾಗಿದೆ. ಅದು ಮನೆಯ ಮುಖ್ಯ ಹೊಸ್ತಿಲಾಗಿದ್ದು, ಬೆಳಿಗ್ಗೆ ನನ್ನ ತಾಯಿ ಅದನ್ನು ಶುದ್ಧ ಮಾಡಿ, ರಂಗೋಲೆ ಹಚ್ಚಿ, ಹೊಸ್ತಿಲು ನಮಸ್ಕಾರ ಮಾಡುತ್ತಿದ್ದ ದೃಶ್ಯ ನನ್ನ ಕಣ್ಮುಂದೆ ಕಟ್ಟುತ್ತಿದೆ. ಅವಳು ಹೇಳುತ್ತಿದ್ದಳು: `ಬೆಳಿಗ್ಗೆ ಭಾಗ್ಯಲಕ್ಷ್ಮಿಯನ್ನು ಮನೆಗೆ ಸ್ವಾಗತಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ನಾವು ಈ ಹೊಸ್ತಿಲು ನಮಸ್ಕಾರ ಕೈಗೊಳ್ಳಬೇಕಾದುದು…’ ಎಂದು. `ನಂಬಿಕೆ’ ಎನ್ನುವುದು ತುಂಬಾ ವಿಶಿಷ್ಟವಲ್ಲವೇ? ನನ್ನ ತಾಯಿಯಂತೆ ಎಲ್ಲ ತಾಯಂದಿರ ಈ ನಂಬಿಕೆ ನಿಜಕ್ಕೂ ವಿಶೇಷವಾದುದು!

ಪಡಸಾಲೆಯ ಪಡುಭಾಗದಲ್ಲೊಂದು ಕೋಣೆ. ಅಲ್ಲಿ ನಮ್ಮ ತಾಯಿ ಬಟ್ಟೆ ಬರೆಗಳನ್ನು ಶೇಖರಿಸುತ್ತಿದ್ದಳು. ಅಲ್ಲೊಂದು ಕನ್ನಡಿ ಕಪಾಟ. ಪಡಸಾಲೆಯ ಪೂರ್ವಕ್ಕೆ ಒಂದು ಕೋಣೆ. ಅದರ ಪ್ರವೇಶದ ಬಾಗಿಲಿನ ದಾರಂದ ಬಹಳ ತಗ್ಗು. ಆ ಕಾರಣದಿಂದಾಗಿ, ಅದನ್ನು ಪ್ರವೇಶಿಸಬೇಕಾದರೆ, ನಾವೆಲ್ಲರೂ ತಲೆ ತಗ್ಗಿಸಿಯೇ ಹೋಗಬೇಕಾಗಿತ್ತು. ಎಷ್ಟೋ ಬಾರಿ, ಬಾಗಿಲಿನ ದಾರಂದಕ್ಕೆ ತಲೆ ತಾಗಿ, ಗಾಯ ಮಾಡಿಕೊಂಡ ಅನುಭವಗಳ ನೆನಪಾಗುತ್ತಿದೆ. ಈ ಕೋಣೆಯನ್ನು ಎಲ್ಲರೂ `ಪುಟ್ಟಮ್ಮನ ಕೋಣೆ’ (ಅಥವಾ `ಪುಟ್ಟಮ್ಮನ ಒಳಗೆ’) ಎಂದು ಕರೆಯುತ್ತಿದ್ದೆವು. ನಮ್ಮಲ್ಲಿ ಅಡುಗೆಗೆ ಸಹಾಯ ಮಾಡಲೆಂದು ಗುಜ್ಜಾಡಿಯಿಂದ ಒಬ್ಬ ಪುಟ್ಟಮ್ಮ ಎಂಬ ಹೆಸರಿನ ಹೆಂಗಸು ಅಲ್ಲಿ ರಾತ್ರಿ ಮಲಗಿಕೊಳ್ಳುತ್ತಿದ್ದುದರ ಕಾರಣ, ಆ ಕೋಣೆಗೆ `ಪುಟ್ಟಮ್ಮನ ಒಳಗೆ’ ಎಂಬ ಹೆಸರು ಬಂದಿತ್ತು. ಈ ಪುಟ್ಟಮ್ಮ ನಮ್ಮ ಮನೆಯಲ್ಲಿ ಕೆಲಸಕ್ಕೆ ಸೇರುವ ಮೊದಲು ಆ ಕೋಣೆಯನ್ನು ಏನೆಂತ ಕರೆಯುತ್ತಿದ್ದರೋ ತಿಳಿಯೆ. ಅಲ್ಲಿನ ಗೋಡೆಯಲ್ಲಿ ನಾಲ್ಕಾರು ಪುಟ್ಟ ಗೂಡುಗಳಿದ್ದುದು ನೆನಪಾಗುತ್ತದೆ. ಆ ಗೂಡೊಂದರಲ್ಲಿ ನಮ್ಮ ತಾಯಿ, ಸ್ನಾನಕ್ಕೆ ತೈಲ ತುಂಬಿದ ಸೀಸೆಯನ್ನೋ, ಕೌಳಿಗೆಯನ್ನೋ ಇಡುತ್ತಿದ್ದುದು ನೆನಪಾಗುತ್ತಿದೆ. ಇಂಥ ಕೌಳಿಗೆಯನ್ನು `ಎಣ್ಣೆ ಕೌಳಿಗೆ’ ಎಂದೇ ಕರೆಯುತ್ತಿದ್ದೆವು. ಕೋಣೆಯ ದಕ್ಷಿಣ ಭಾಗದಲ್ಲೊಂದು ಕಪಾಟು. ಅದು ನಮ್ಮ ತಾಯಿಯ ಕಪಾಟಾಗಿದ್ದು, ಅದನ್ನು ನಾವೆಲ್ಲರೂ `ಚಿಕ್ಕಿ ಕಪಾಟು’ ಎಂದು ಕರೆಯುತ್ತಿದ್ದೆವು. (ನಮ್ಮ ತಾಯಿಯನ್ನು ನಾವೆಲ್ಲ `ಚಿಕ್ಕಿ’ ಎಂದು ಕರೆಯುತ್ತಿದ್ದುದರಿಂದ, ಹೆಚ್ಚಿನವರೆಲ್ಲರೂ ಅವಳನ್ನು ಹಾಗೆ ಕರೆಯುತ್ತಿದ್ದರು.) ಆ ಕಪಾಟಿನಲ್ಲಿ ಚಿಕ್ಕಿ ತನಗೆ ಬೇಕಾದ ಸಾಮಾನುಗಳನ್ನು ಜೋಡಿಸಿಟ್ಟುಕೊಂಡಿರುತ್ತಿದ್ದಳು. ಅದಕ್ಕೆ ಬೀಗವೂ ಇದ್ದಿತ್ತು. ಕಾರಣ, ಅದು ಅವಳು ಚಿಲ್ಲರೆ ಹಣವಿಡುತ್ತಿದ್ದ `ತಿಜೋರಿ’ಯೂ ಆಗಿತ್ತೆಂದು ಹೇಳಬಹುದು. ಈಗ ಆ ಕಪಾಟಿನಲ್ಲಿ ಏನಿದೆಯೆಂಬುದನ್ನು ನಾನರಿಯೆ. ಈ ಕೋಣೆಯನ್ನು, ನನ್ನ ತಮ್ಮ ವಾಸುದೇವ ಮಲಗುವ ಕೋಣೆಯನ್ನಾಗಿ ಉಪಯೋಗಿಸುತ್ತಿದ್ದ. ಅವನು ತೀರಿಕೊಂಡ ಮೇಲೆ ಅವನ ಹೆಂಡತಿ, ನಳಿನಿ ಮಲಗುತ್ತಿದ್ದಳು. ಅವಳ ಕಾಲದ ಮೇಲೆ ನನ್ನ ಇನ್ನೊಬ್ಬ ತಮ್ಮನ ಮಲಗುವ ಕೋಣೆಯಾಗಿದ್ದಿತ್ತು.

ಈ ಪುಟ್ಟಮ್ಮನ ಕೋಣೆಯನ್ನು ಎಣಿಸಿಕೊಂಡಾಗಲೆಲ್ಲ ಒಂದು ತಮಾಷೆಯ ಸಂಗತಿ ನೆನಪಿಗೆ ಬರುತ್ತದೆ. ಪುಟ್ಟಮ್ಮ ಒಬ್ಬ `ಅರೆ ಸೋಂಕಿನ’ ಹೆಂಗಸು. ಅಂದರೆ, ಸ್ವಲ್ಪ ಬುದ್ಧಿ ಮಂದ. ನಮ್ಮ ಚಿಕ್ಕಪ್ಪನವರಿಗೆ ಇಂಥ ಅರೆಸೋಂಕಿನವರನ್ನು ಕೆದಕಿ, ಒಂದು ರೀತಿಯ ಮನೋರಂಜನೆ ಪಡೆಯುವುದೆಂದರೆ ಬಲು ಇಷ್ಟ. ಆ ಕಾಲದಲ್ಲಿ ನಮ್ಮ ಚಿಕ್ಕಪ್ಪ ಅಮೃತೇಶ್ವರಿ ದೇವಸ್ಥಾನದ ಮೊಕ್ತೇಸರರಾಗಿದ್ದರು. ಅಮೃತೇಶ್ವರಿ ಯಕ್ಷಗಾನ ಮೇಳದ ವೇಷ-ಭೂಷಣಗಳ (ಭುಜಕಟ್ಟು, ಎದೆಕಟ್ಟು, ಕ್ಯಾದಕಿ ಮುಂದಲೆ, ಮುಂತಾದುವುಗಳು) ರಿಪೇರಿ ಕೆಲಸ ನಮ್ಮ ಮನೆಯಲ್ಲೇ ನಡೆಯುತ್ತಿದ್ದುವು. ನಮ್ಮ ಚಿಕ್ಕಪ್ಪ ಪುಟ್ಟಮ್ಮನಿಗೆ ಯಕ್ಷಗಾನದ ಉಡುಗೆಗಳನ್ನು ತೊಡಿಸಿ, ಕುಣಿಯಲು ಹೇಳುತ್ತಿದ್ದರು. ಈ ಪುಟ್ಟಮ್ಮ, ನಮ್ಮ ಚಿಕ್ಕಪ್ಪನ ತಮಾಷೆಯನ್ನು ಅರ್ಥ ಮಾಡಿಕೊಳ್ಳಲಾರದೆ, ಅವರು ಹೇಳಿದಂತೆ ಕುಣಿಯುತ್ತಿದ್ದಾಗ, ಅದು ನಮ್ಮ ಚಿಕ್ಕಪ್ಪನಿಗೆ ತುಂಬಾ ಮನೋರಂಜಕ ವಾಗುತ್ತಿತ್ತು. ಅದನ್ನು ನೋಡಿ ನಾನೂ ಬಹಳ ಖುಷಿಪಡುತ್ತಿದ್ದೆ. ಕೆಲವೊಮ್ಮೆ, ನಾನೂ ಹಿರಿಯರು ಎದುರಿಗಿಲ್ಲದಿರುವಾಗ ಪುಟ್ಟಮ್ಮನನ್ನು ಕುರಿತು, `ಪುಟ್ಟಮ್ಮಾ…, ಒಂದು ಶೂರ್ಪನಖಿಯ ಕುಣಿತ ಹಾಕಿ…’ ಎಂದು ತಮಾಷೆ ಮಾಡುತ್ತಿದ್ದೆ. ಕೆಲವು ಬಾರಿ ಅವರು ಕುಣಿಯುತ್ತಲೂ ಇದ್ದರು. ಈಗ ಅದನ್ನೆಲ್ಲಾ ಎಣಿಸಿಕೊಂಡರೆ ಪುಟ್ಟಮ್ಮನ ಮೇಲೆ ಕನಿಕರ ಹುಟ್ಟುತ್ತಿದೆ. ಪಾಪ! ಈಗ ಪುಟ್ಟಮ್ಮ ಕಣ್ಮರೆಯಾಗಿದ್ದರೂ, ನಮ್ಮ ಸ್ಮರಣೆಯಲ್ಲಿ ಇಂದಿಗೂ ಉಳಿದಿದ್ದಾರೆ. `ಪುಟ್ಟಮ್ಮನ ಕೋಣೆ’ ಇದಕ್ಕೆ ಸಾಕ್ಷಿ.

ಪುಟ್ಟಮ್ಮನ ಕೋಣೆಯಿಂದ ಪೂರ್ವಕ್ಕೆ ಮೆಟ್ಟಲಿಳಿದು ಬಂದರೆ ಸಿಗುವುದು ಅಡುಗೆ ಮನೆ. ಅದನ್ನು ಈ ಮೊದಲು ಒಂದು ಬದಲಿ (spare) ಅಡುಗೆ ಮನೆಯಾಗಿ ಉಪಯೋಗಿಸುತ್ತಿದ್ದರು. ಮುಖ್ಯ ಅಡುಗೆಮನೆ ಅಲ್ಲಿಂದ ಇನ್ನಷ್ಟು ಮೂಡು ದಿಕ್ಕಿನಲ್ಲಿರುತ್ತಿತ್ತು. ಆದರೆ, ಈಗ ಆ ಮುಖ್ಯ ಅಡುಗೆ ಮನೆಯನ್ನು ಅಳಿದು, ಈ ಬದಲಿ ಅಡುಗೆಮನೆಯನ್ನೇ ಇನ್ನಷ್ಟು ವಿಸ್ತರಿಸಿ, ಅದನ್ನೇ ಮುಖ್ಯ ಅಡುಗೆ ಮನೆಯನ್ನಾಗಿ ಉಪಯೋಗಿಸುತ್ತಿದ್ದಾರೆ. ನನ್ನ ಬಾಲ್ಯದಲ್ಲಿ ಈ ಬದಲಿ ಅಡುಗೆ ಮನೆಯಲ್ಲಿ ಕೆಲವು ತಿಂಡಿ-ಪದಾರ್ಥಗಳನ್ನು ತಯಾರಿಸಲು ಮಾತ್ರ ಉಪಯೋಗಿಸುತ್ತಿದ್ದುದರ ನೆನಪಾಗುತ್ತಿದೆ. ಈ ಬದಲಿ ಅಡುಗೆ ಮನೆಯನ್ನು ನೆನೆದಾಗಲೆಲ್ಲ ನನಗೆ ನನ್ನ ಸೋದರತ್ತೆ, ನಮ್ಮ ತಂದೆಯವರ ಅಕ್ಕ, ಸಿಂಗಾರಮ್ಮನವರ ಜ್ಞಾಪಕವಾಗುತ್ತಿದೆ. ಅವರು ಸೇರಿದ ಅವರ ಗಂಡನ ಮನೆಯ ಊರು, ನಮ್ಮೂರಿಗೆ ಮೂರ್ನಾಲ್ಕು ಮೈಲಿ ದೂರದ, ಬಾರಕೂರು. ಹಾಗಾಗಿ, ನಾವೆಲ್ಲ ಅವರನ್ನು `ಬಾರಕೂರತ್ತೆ’ ಎಂತಲೇ ಕರೆಯುತ್ತಿದ್ದೆವು. ಅವರು ನಮ್ಮ ತಂದೆಯವರಿಗಿಂತ 8-10 ವರ್ಷ ದೊಡ್ಡವರು.

ತಂದೆಯವರು ಅವರನ್ನು `ಅಕ್ಕಯ್ಯ’ ಎಂದು ಕರೆಯುತ್ತಿದ್ದರು. ಈ ಬಾರಕೂರತ್ತೆ ತವರಿಗೆ ಆಗಾಗ ಬರುತ್ತಿದ್ದು, ಅವರು ಬಂದಾಗಲೆಲ್ಲ ನಾನಂತೂ ತುಂಬಾ ಭಯಪಡುತ್ತಿದ್ದೆ. ಕಾರಣ, ಅವರು ತುಂಬಾ ಶಿಸ್ತಿನವರು. ಅವರ ಮಾತೂ ಏರಿದ ಸ್ವರದಲ್ಲಿದ್ದು, ಅವರು ಏನು ಮಾತಾಡಿದರೂ, ಗದರಿಸುಸುತ್ತಿರುವರೇ ಎಂಬ ಅನುಮಾನ ಬರುತ್ತಿತ್ತು. ಅವರು ಒಮ್ಮೆ ಬಂದಾಗ ನಡೆದ ಒಂದು ಸನ್ನಿವೇಶ ಮಾತ್ರ ನನ್ನ ಸ್ಮರಣೆಯಲ್ಲಿ ಅಚ್ಚೊತ್ತಿ ಉಳಿದಿದೆ. ನಮ್ಮೂರ ಮಹಾಲಿಂಗೇಶ್ವರ ದೇವಸ್ಥಾನದ್ದಲ್ಲಿದ್ದ ದೇವರಿಗೆ ನಾವು ಕಾರ್ತೀಕ ಸೋಮವಾರ ಪೂಜೆ ಸಲ್ಲಿಸುತ್ತಿದ್ದೆವು. ದೇವರಿಗೆ ನೈವೇದ್ಯಕ್ಕೆಂದು ಕೊಟ್ಟ ಕಡಲೆಯಲ್ಲಿ ಒಂದಂಶವನ್ನು ಪೂಜಾರಿಗಳು ನಮ್ಮ ಮನೆಗೆ ತಂದುಕೊಡುತ್ತಿದ್ದರು. ಅಂತಹ ಒಂದು ಸೋಮವಾರ ಬಾರಕೂರತ್ತೆ ಮನೆಗೆ ಬಂದಿದ್ದರು. ಬಂದ ಪ್ರಸಾದದ ಕಡಲೆಯನ್ನು ಬೇಯಿಸಿ, ಉಸ್ಲಿ ಮಾಡಿ, ಒಲೆ ಮುಂದೆ ಕುಳಿತ ಬಾರಕೂರತ್ತೆ ನನ್ನನ್ನು ಕರೆದು, `ನಾಗಪ್ಪಯ್ಯಾ…, ಬಾ ಮಾಣಿ… ಇಲ್ಲಿ…’, ಎಂದು ನನಗೆ ಕೊಟ್ಟಿದ್ದುದರ ದೃಶ್ಯ ನನ್ನ ಕಣ್ಮುಂದೆ ಆಗಾಗ ಕಟ್ಟುತ್ತಿದೆ. ಹಾಗೆಂದು ಅವರ ಇತರ ಭೇಟಿ, ಹಾಗೂ ಅವರ ವಿಷಯದ ಬಗ್ಗೆ ಇತರ ವಿವರಗಳು ನನ್ನ ಸ್ಮರಣೆಯಲ್ಲಿ ಉಳಿದಿಲ್ಲ. ಅವರು ತೀರಿಕೊಂಡಾಗ, ನಮ್ಮ ತಂದೆಯವರು ಹೆಬ್ಬಾಗಿಲನ್ನು ದಾಟಿ, ಬಾರಕೂರಿಗೆ ಹೋಗಲು ಬಸ್ಸಿಗಾಗಿ ಪೇಟೆಗೆ ಹೋದ ದೃಶ್ಯವೂ ಕಣ್ಮುಂದೆ ಕಟ್ಟುತ್ತಿದೆ.

ಈ ಅಡುಗೆ ಮನೆಯ ಉತ್ತರ ಭಾಗದ ಮೂಲೆಯಲ್ಲಿ ನಮ್ಮ ಊಟದ ತಟ್ಟೆಗಳನ್ನಿಡುತ್ತಿದ್ದ ಗೂಡೊಂದು ಇದ್ದಿತು. ಊಟಕ್ಕೆ ನಮ್ಮ ಮನೆಯಲ್ಲಿ ಮನೆಯ ಮಕ್ಕಳೂ ಮತ್ತು ನಮ್ಮಲ್ಲಿ ಊಟಮಾಡಿಕೊಂಡು ಶಾಲೆಗೆ ಹೋಗುತ್ತಿದ್ದ ಹುಡುಗರನ್ನೂ ಸೇರಿಸಿ, ಸುಮಾರು ಡಜ಼ನ್ನಿಗೂ ಮಿಕ್ಕಿ ಮಕ್ಕಳಿರುತ್ತಿದ್ದರು. ದಿನಕ್ಕೊಬ್ಬರು ಊಟಕ್ಕೆ ತಟ್ಟೆ ಇಡಬೇಕೆಂಬ ಸಂಪ್ರದಾಯವೊಂದಿತ್ತು. ಒಮ್ಮೆ, ಬೆಳಗಿನ ಗಂಜಿ ಊಟಕ್ಕೆ ತಟ್ಟೆ ಇಡುವ ಸರದಿ ನನ್ನದಾಗಿತ್ತು. ತಟ್ಟೆ ಇಡುವ ಮೊದಲು, `ಊಟಕ್ಕಾಯ್ತು…’ ಎಂದು ಕೂಗಿ ಹೇಳಿ, ತಟ್ಟೆಯನ್ನಿಟ್ಟೆ. ನಮ್ಮ ತಾಯಿ, ಹುಡುಗರೆಲ್ಲ ತಟ್ಟೆ ಮುಂದೆ ಕುಳಿತುಕೊಳ್ಳಲು ಸ್ವಲ್ಪ ಸಮಯ ನೀಡಿದ್ದಳು. ಆದರೆ, ಕೆಲವರು ಶಾಲಾ ಹೋಮ್ವರ್ಕ್ ಮಾಡುವ ತರಾತುರಿಯಲ್ಲೋ, ಅಥವಾ ಆಟದಲ್ಲಿ ನಿರತರಾಗಿರುತ್ತಲೋ, ಬಾರದೇ ಹೋಗಿದ್ದರು. ಹಾಗೆ ಸ್ವಲ್ಪ ಹೊತ್ತು ಕಾದು, ಅವರು ಬಾರದಿದ್ದುದನ್ನು ನಮ್ಮ ತಾಯಿ ಗಮನಿಸಿ-ಇದ್ದ ತಟ್ಟೆಗೆಲ್ಲ, ಗಂಜಿ, ಉಪ್ಪಿನಕಾಯಿ, ಮೊಸರನ್ನು ಬಡಿಸಿ, ತನ್ನ ಮುಂದಿನ ಕೆಲಸಕ್ಕೆ ತೊಡಗಿಸಿಕೊಂಡಳು. ನಾನು ಮತ್ತು ಊಟಕ್ಕೆ ಬಂದ ಕೆಲವರು ನಮ್ಮ ಊಟ ಮುಗಿಸಿ, ತಟ್ಟೆ ತೊಳೆದು ಅದನ್ನು ಗೂಡಿನಲ್ಲಿಡುತ್ತಾ, `ಉಂಡಾಯ್ತು…’ ಎಂದು ಅನೌನ್ಸ್ ಮಾಡಿದಾಗ, ಸಮಯಕ್ಕೆ ಸರಿಯಾಗಿ ಊಟಕ್ಕೆ ಬಾರದ ಹುಡುಗರು ಓಡೋಡಿ ಬಂದಿದ್ದರು. ನನ್ನ ತಾಯಿ ಆಗ ಆ ಹುಡುಗರನ್ನು ಕುರಿತು, ಸಮಯಕ್ಕೆ ಸರಿಯಾಗಿ ಊಟಕ್ಕೆ ಬರಬೇಕೆಂದು ಬುದ್ಧಿ ಹೇಳಿದ್ದಳು. ಈ ಘಟನೆ ಅದ್ಯಾಕೋ ನನಗೆ ಆ ಊಟದ ತಟ್ಟೆಯ ಗೂಡಿನೊಂದಿಗೆ, ಆಗಾಗ್ಗೆ ನೆನಪಿಗೆ ಬರುತ್ತಲೇ ಇದೆ.

ಈ ಊಟದ ತಟ್ಟೆಯ ಗೂಡಿನ ಪಕ್ಕದಲ್ಲಿ ಪೂರ್ವಕ್ಕೆ ಬಂದಲ್ಲಿ, `ಗಂಜಿ ಕೋಣೆ’ ಸಿಗುತ್ತದೆ. ನಮ್ಮಲ್ಲಿ ಶಾಲಾ ಮಕ್ಕಳಿಗೆಲ್ಲ ಬೆಳಗಿನ ಉಪಹಾರ, ಕುಸುಬಲಕ್ಕಿ ಗಂಜಿ. ಗಂಜಿ ತಯಾರಿಸಲೆಂದೇ ಈ ಕಿರು ಕೋಣೆಯ ನಿರ್ಮಾಣ. ಅಲ್ಲದೆ ಈ ಕೋಣೆಯಲ್ಲೆ ಅಕ್ಕಿ ಹಪ್ಪಳ, ದೊಡ್ಡಣ ಇತ್ಯಾದಿಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು. ಅಲ್ಲದೆ, ನಮಲ್ಲಿನ ಕೆಲವು ವಿಶೇಷ ಸಂರ್ಭಗಳಲ್ಲಿ- ಉದಾಹರಣೆಗೆ: ಶ್ರಾದ್ಧ, ಮಹಾಲಯ ಇತ್ಯಾದಿ – ಅಡುಗೆ ಭಟ್ಟರ ಸಹಾಯಕರು ಸಣ್ಣ-ಪುಟ್ಟ ಕೆಲಸಗಳಿಗಾಗಿ (ತರಕಾರಿ ಹೆಚ್ಚುವುದು) ಈ ಕೋಣೆಯನ್ನು ಉಪಯೋಗಿಸುತ್ತಿದ್ದರು. ಆ ಕೋಣೆಗೆ ತಗುಲಿ ತೆಂಕು ದಿಕ್ಕಿನಲ್ಲಿ ಬಾವಿಕಟ್ಟೆ. ಅದಕ್ಕೆ ತಗುಲಿ ಪಶ್ಚಿಮಕ್ಕೆ ಬಚ್ಚಲು ಮನೆ. ಬಾವಿಕಟ್ಟೆ, ಬಚ್ಚಲು ಮನೆಗೆ, ಗಂಜಿ ಮನೆಯಿಂದ ಮೆಟ್ಟಿಲಿಳಿದು ದಕ್ಷಿಣಕ್ಕೆ ತಿರುಗಬೇಕು. ಬಾವಿಗೆ ನೀರು ಸೇದಲು ರಾಟೆ. ಅದರ ಮುಂದೆ ಒಂದು ವಿಸ್ತಾರವಾದ (ಸುಮಾರು 6.5’x10.5’) ಹಾಸುಗಲ್ಲು. ಅಷ್ಟು ದೊಡ್ಡ ಹಾಸುಗಲ್ಲನ್ನು ಪ್ರಾಯಶಃ ನಮ್ಮ ಮನೆಯ ಪೂರ್ವಕ್ಕಿರುವ `ಕಲ್ಲಟು ಗುಡ್ಡೆ’ಯಿಂದ ಕಲ್ಲೊಡೆಯುವ ನಿಪುಣರನ್ನುಪಯೋಗಿಸಿ ಪಡೆದು, ಮನೆಗೆ ಸಾಗಿಸಿರಬಹುದು. ಬಾವಿಕಟ್ಟೆಯ ಪಶ್ಚಿಮಕ್ಕೆ ಬಚ್ಚಲು ಮನೆ. ಸ್ನಾನ ಮಾಡಲು ಬಚ್ಚಲು ಹೊಂಡವಿದ್ದಿತು, ಸ್ನಾನಕ್ಕೆ ಬಿಸಿನೀರು ಕಾಯಿಸಲೊಂದು ಬಹಳಷ್ಟು ದೊಡ್ಡ ಗಾತ್ರದ ಹಂಡೆ, ಬಟ್ಟೆ ಬದಲಾಯಿಸಲು ಸಾಕಷ್ಟು ವಿಸ್ತಾರವಾದ ಸ್ಥಳ. ಚಿಕ್ಕಂದಿನಲ್ಲಿ ನಾನು ನನ್ನ ತಮ್ಮಂದಿರನ್ನು ಕೂಡಿಕೊಂಡು ಬಚ್ಚಲು ಒಲೆಯ ಮುಂದೆ ಚಳಿಗಾಲದಲ್ಲಿ ಮೈ ಕಾಯಿಸುತ್ತ, ಹುಲ್ಲು ಕಡ್ಡಿಗಳಿಗೆ ಬೆಂಕಿ ತಗುಲಿಸಿ, ಸಿಗರೇಟು ಸೇದುತ್ತಿದ್ದೇವೆಂಬ; ಆಟವಾಡಿದ ದಿನಗಳ ನೆನಪಾಗುತ್ತಿದೆ. ಹಾಗೆ ಹೊಗೆ ಸೇದಿ ಕೆಮ್ಮುತ್ತಿದ್ದುದೇ ನಮಗೊಂದು ಮಜಾವಾಗಿತ್ತು. ಈ ಆಟದ ಖುಷಿಯಲ್ಲಿ ಹಲ್ಲುಜ್ಜುವುದನ್ನೇ ಮರೆಯುತ್ತಿದ್ದೆವಲ್ಲದೆ ತಾಯಿಯಿಂದ `ಶಾಲೆಗೆ ತಡಮಾಡಿಕೊಳ್ಳಬೇಡಿ… ಬೇಗ ಹಲ್ಲುಜ್ಜಿ, ಕಾಫಿ ಕುಡಿಯಲು ಬನ್ನಿ.. ಇಲ್ದಿದ್ರೆ ನಿಮಗೆ ಕಾಫಿ ವಜಾ….’ ಎಂದು ಬೆದರಿಕೆ ಹಾಕಿಕೊಂಡದ್ದೂ ಜ್ಞಾಪಕವಾಗುತ್ತಿದೆ. ಕಾಫಿ ತಯಾರಿಸುತ್ತಿದ್ದುದು ಹೆಚ್ಚಾಗಿ ಕುಪ್ಪಣ್ಣಯ್ಯ ಅಥವಾ ನಮ್ಮ ಕಸಿನ್ ಸಾಂಬ. ಆಗೆಲ್ಲ ಸಕ್ಕರೆ ಉಪಯೋಗಿಸುತ್ತಿರಲಿಲ್ಲ. (ಸಕ್ಕರೆಗೆ ದುಬಾರಿ ಬೆಲೆ ಇದ್ದುದು ಕಾರಣವಿರಬೇಕು.) ಬೆಲ್ಲದ ನೀರಿಗೆ ಕಾಫಿ ಪುಡಿ ಹಾಕಿ, ಸ್ವಲ್ಪ ಹೊತ್ತು ಬಿಟ್ಟು, ಅದನ್ನು ಬಟ್ಟೆಯಲ್ಲಿ ಸೋಸಿ, ಹಾಲು ಬೆರೆಸುತ್ತಿದ್ದರು. ಇದು ದೊಡ್ಡವರ ಕಾಫಿಯಾದಲ್ಲಿ, ನಮ್ಮಂಥವರಿಗೆ, ಸೋಸಿದ ಬಟ್ಟೆಗೆ ಮತ್ತಷ್ಟು ಬೆಲ್ಲದ ನೀರನ್ನು ಹಾಕಿ, ಕೂಡಲೇ ಅದನ್ನು ಹಿಂಡಿ, ಹಾಲು ಬೆರೆಸಿ ನಮಗೆಲ್ಲ ವಿತರಣೆ. ಆ ಕಾಲದಲ್ಲಿ ಅದೇ ನಮಗೆ ರುಚಿ-ರುಚಿ ಕಾಫಿ!! ಆ ಕಾಫಿಯ ಸವಿ ಇಂದಿಗೂ ಬಾಯಲ್ಲಿ ಉಳಿದಿದೆ.

ಬಾವಿ ಕಟ್ಟೆಗೆ ಪೂರ್ವದಲ್ಲಿ ಅಂದಿನ ಮುಖ್ಯ ಅಡುಗೆ ಮನೆ. ಇದನ್ನು ಆಮೇಲೆ ಕಟ್ಟಿಸಿರಬೇಕು. ಅದಕ್ಕೂ ಮೊದಲು ನಾನು ಸ್ಪೇರ್ ಅಡುಗೆ ಮನೆಯೆಂದು ಕರೆಯುತ್ತಿದ್ದ ಅಡುಗೆ ಮನೆಯೇ ಮುಖ್ಯ ಅಡುಗೆ ಮನೆಯಾಗಿದ್ದಿರಬೇಕು. ಆಮೇಲೆ ಕಟ್ಟಿಸಿದ ಈ ಅಡುಗೆ ಮನೆ, ಮನೆಗೆ ತಗುಲಿಕೊಂಡಿರದೆ, ಮನೆಯ ಮುಖ್ಯ ಕಟ್ಟಡದಿಂದ ಬೇರೆಯಾಗಿದ್ದಿತ್ತು. ಮನೆಯ ಮುಖ್ಯಭಾಗ ಮತ್ತು ಅಡುಗೆ ಮನೆಗಳ ಮಧ್ಯೆ ಒಂದು ತಗಡು ಚಪ್ಪರವಿದ್ದಿತ್ತು. ಈ ಅಡುಗೆ ಮನೆ ಸ್ವಲ್ಪ ಎತ್ತರದಲ್ಲಿದ್ದು, ಅದರ ಪ್ರವೇಶಕ್ಕಾಗಿ ಮೂರ್ನಾಲ್ಕು ಮೆಟ್ಟಿಲುಗಳನ್ನು ಹತ್ತಬೇಕಾಗಿತ್ತು. ಜೋಡಿ ಬಾಗಿಲ ಮೂಲಕ ಪ್ರವೇಶ ಮಾಡಿದರೆ, ದಕ್ಷಿಣದಿಂದ ಉತ್ತರಕ್ಕೆ ಹರಡಿದ ಅಡುಗೆ ಮನೆಯಲ್ಲಿ ಊಟಕ್ಕೆ ಸುಮಾರು 25-30 ಮಂದಿ ಕೂರುವ ವ್ಯವಸ್ಥೆ ಇದ್ದಿತ್ತು. ದಕ್ಷಿಣ ಭಾಗದಲ್ಲಿ ಅಡುಗೆ ಮಾಡುವ ವ್ಯವಸ್ಥೆ. ಇದಿರು ಬದಿರುಗಳಲ್ಲಿ ಎರಡೆರಡು ಒಲೆಗಳ ಸಾಲುಗಳು. ಪೂರ್ವದ ಒಲೆಯ ಸಾಲಿನ ಪಕ್ಕ, ಸೌದೆಗಳನ್ನು ಶೇಖರಿಸುವ ಒಂದು ದೊಡ್ಡ ಸೌದೆಗೂಡು. ಪೂರ್ವದ ಒಲೆಗಳ ಸಾಲಿನ ಉತ್ತರ ಮೂಲೆಯೊಂದರಲ್ಲಿ ಸಾಕಷ್ಟು ದೊಡ್ಡ ಗಾತ್ರದ ರುಬ್ಬುಕಲ್ಲು. ಈ ರುಬ್ಬುಕಲ್ಲಿನ ಸುತ್ತ ನಾವು, ಹುಡುಗರೆಲ್ಲ ಸೇರಿ, ರುಬ್ಬುತ್ತಿರುವ ನಮ್ಮ ಅತ್ತಿಗೆ (ನಮ್ಮ ಚಿಕ್ಕಪ್ಪನ ಮಗ, ಕುಪ್ಪಣ್ಣಯ್ಯನ ಹೆಂಡತಿ) ಹೇಳುತ್ತಿದ್ದ ರೋಮಾಂಚಿತ ದಂತ ಕತೆಗಳನ್ನು ಕೇಳುತ್ತಿದ್ದುದರ ನೆನಪಾಗುತ್ತಿದೆ. ನಮ್ಮ ಅತ್ತಿಗೆ ಅಂಥ ಕತೆ ಹೇಳಿ ನಮ್ಮಂಥ ಹುಡುಗರ ಕುತೂಹಲವನ್ನು ಕೆರಳಿಸುವುದರಲ್ಲಿ ನಿಪುಣೆ. ಅಂಥ ಕತೆಗಳು ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತಿದ್ದುವೆಂದು ಬೇರೆ ಹೇಳಬೇಕೇ?
ಈ ಅಡುಗೆ ಮನೆಯಲ್ಲಿ ಹಲವಾರು ಸ್ಮರಣೀಯ ಸಂಗತಿಗಳು ಮನಸ್ಸಿನಲ್ಲಿನ್ನೂ ಕಂತಿವೆ. ನಮ್ಮ ಮನೆಯಲ್ಲಿ ಆಗಿನ ಕಾಲದಲ್ಲಿ 20-30ಕ್ಕೂ ಹೆಚ್ಚಿನ ಜನರಿರುತ್ತಿದ್ದರು. ಅಲ್ಲದೆ ಹೊರಗೆ ಕೆಲಸದವರು 8-10 ಜನ, ಅಲ್ಲದೆ ಅತಿಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಹಾಗಾಗಿ ಆಹಾರವನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ತಯಾರಿಸಬೇಕಾಗಿತ್ತು. ಕೆಲವೊಮ್ಮೆ ಮೊದಲನೆಯ ಪಂಗ್ತಿಯಾದ ಮೇಲೆ, ಒಂದೆರಡು ಬೇರೆ ಪಂಕ್ತಿಗಳನ್ನೂ ಮಾಡಬೇಕಾಗಿತ್ತು. ಅಡುಗೆ, ತಿಂಡಿಗಳ ತಯಾರಿಗೆ ಸಹಾಯ ಮಾಡಲು ನನ್ನ ತಾಯಿಗೆ ಹೊರಗಿನಿಂದಲೂ ನೆರವೂ ಸಿಗುತ್ತಿತ್ತೆನ್ನಿ. ಒಮ್ಮೆ ಕೆಸುವಿನೆಲೆಯ ಒಗ್ಗರಿಸಿದ ಪತ್ರೊಡೆ ತಯಾರಿಸಲು ಲಚ್ಚಕ್ಕ ಎನ್ನುವ ಮಡಿವಂತ ಹೆಂಗಸರೊಬ್ಬರು ಬಂದಿದ್ದರು. ಕೆಸುವಿನೆಲೆಗೆ ಮಸಾಲೆ ಹಚ್ಚಿ, ಸುತ್ತಿ, ಅಟ್ಟದಲ್ಲಿ ಬೇಯಿಸಿ, ಅವನ್ನು ಚಿಕ್ಕ-ಚಿಕ್ಕ ತುಂಡು ಮಾಡಿ, ಸಾಸುವೆ, ತೆಂಗಿನಕಾಯಿ ಹಾಕಿ, ಒಗ್ಗರಿಸಿದ ಈ ಖಾದ್ಯ ತಿನ್ನಲು ಬಲು ರುಚಿ. ಮಸಾಲೆ ಹಚ್ಚಿದ ಕೆಸುವಿನ ಎಲೆಯನ್ನು ವಡೆಯಾಕೃತಿಯಲ್ಲಿ ಕತ್ತರಿಸಿ, ಅದನ್ನು ದೋಸೆ ಕಾವಲಿಯ ಮೇಲೆ ಎಣ್ಣೆ ಸುರಿದು, ತಯಾರಿಸಿದ `ದೋಸೆಕಲ್ಲು ಪತ್ರೊಡೆ’ಯನ್ನು ಎಣಿಸಿದಾಗಲೆಲ್ಲ ಬಾಯಲ್ಲಿ ನೀರೂರುವುದು ಹೆಚ್ಚೇನಲ್ಲ! ಆದರೆ, ದೋಸೆಕಲ್ಲು ಪತ್ರೊಡೆಯನ್ನು ಅಷ್ಟೊಂದು ಜನರಿಗೆ ತಯಾರಿಸುವುದಕ್ಕೆ ಬಹಳ ಸಮಯ ತಗಲುವುದರಿಂದ, ಹೆಚ್ಚಾಗಿ ಮೇಲೆ ತಿಳಿಸಿದ `ಒಗ್ಗರಿಸಿದ ಪತ್ರೊಡೆ’ಯನ್ನೇ ತಯಾರಿಸುತ್ತಿದ್ದರು. ಒಮ್ಮೆ, ಮನೆ ಮಂದಿಗೂ, ಬಂದ ಅತಿಥಿಗಳಿಗೂ, ಹೊರಗಿನ ಕೆಲಸಾಳುಗಳಿಗೂ ಬೇಕಾಗುವಷ್ಟು ಈ ಒಗ್ಗರಿಸಿದ ಪತ್ರೊಡೆಯನ್ನು ಈ ಲಚ್ಚಕ್ಕ ತಯಾರಿಸಿ, ಅದನ್ನು, ಒಲೆಯ ಪಕ್ಕ, ಸಾಕಷ್ಟು ದೂರವಿರುವ ಮೂಲೆಯೊಂದರಲ್ಲಿ ಬಟ್ಟೆಯ ಮೇಲೆ ರಾಶಿ ಮಾಡಿದ್ದರು. ಚಿಕ್ಕವರಾಗಿದ್ದ ನಮ್ಮಂಥ ಹುಡುಗರಿಗೆ ಅದನ್ನು ಹಂಚಲು ಆ ರಾಶಿಯ ಸಮೀಪದಲ್ಲೆ ವ್ಯವಸ್ಥೆ ನಡೆದಿತ್ತು. ಆ ಮಡಿವಂತ ಲಚ್ಚಕ್ಕ, ಶಾಲೆಯ ಮೈಲಿಗೆಯಲ್ಲಿದ್ದ ನಮ್ಮನ್ನು ಕುರಿತು, `….ಇಗೋ ನೋಡಿ… ನಿಮ್ಮ ಶಾಲಾ ಮೈಲಿಗೆಯಲ್ಲಿ ಈ ರಾಶಿಯನ್ನು ನಿಮ್ಮ ಎಂಜಲು ಕೈಯಲ್ಲಿ ಮುಟ್ಟಿ ನಾವೆಲ್ಲ ತಿನ್ನದಂತೆ ಮಾಡ ಬೇಡಿ….’ ಎಂದು ಕೋರಿಕೊಂಡಿದ್ದರು. ಅವರ ಮಾತನ್ನು ಮೀರಬೇಕೆಂಬ ಹಂಬಲವುಳ್ಳ ನಾನು, ಅವರ ಮಡಿವಂತಿಕೆಯನ್ನು ‘ಹಾಳು’ಮಾಡಬೇಕೆಂಬ ಉದ್ದೇಶದಿಂದ, ಲಚ್ಚಕ್ಕ ಅಲ್ಲಿಲ್ಲದಾಗ, ನನ್ನ `ಎಂಜಲು’ ಕೈಯಲ್ಲಿ ಆ ರಾಶಿಯ ಮೇಲೆಲ್ಲಾ ಕೈಯಾಡಿಸಿದ ನೆನಪಾಗುತ್ತಿದೆ. ನನ್ನ ಮನಸ್ಸಿಗೆ ಲಚ್ಚಕ್ಕನ ಮಡಿವಂತಿಕೆಯನ್ನೆಲ್ಲಾ ಹಾಳು ಮಾಡಿದೆ – ಎಂಬ ವಿಶೇಷ ತೃಪ್ತಿ ಸಿಕ್ಕಿತ್ತು. ಲಚ್ಚಕ್ಕ ಪತ್ರೊಡೆಯನ್ನು ತಿನ್ನುವಾಗ ನಾನು ಒಳಗೊಳಗೇ ನಗುತ್ತಿದ್ದೆ!

ಈ ಚಾವಡಿಯ ಮೂಡುಬದಿಯ ಗೋಡೆಯ ಮೇಲೊಂದು ಹಳೆಯ ಗಡಿಯಾರ, ಗಂಟೆಗಂಟೆಗೂ `ಡಿಂಗ್-ಡಾಂಗ್’ ಸದ್ದು ಮಾಡಿ ಗಂಟೆ ಎಷ್ಟಾಯಿತೆಂದು ಸಾರುತ್ತಿತ್ತು. ಉದಾ., ಸಮಯ 9 ಗಂಟೆಯಾದಲ್ಲಿ, 9 ಬಾರಿ ಡಿಂಗ್-ಡಾಂಗ್ ಮಾಡುತ್ತಿತ್ತು. ಅರ್ಧ ಗಂಟೆಗೆ ಒಂದೇ ಬಾರಿ ಡಿಂಗ್-ಡಾಂಗ್.

ಇನ್ನೊಂದು ನೆನಪು: ಒಮ್ಮೆ ತಯಾರಾದ ಹಾಲುಬಾಯಿ ರಾಶಿಯ ಸುತ್ತ ನಾನೂ, ನನ್ನ ಹಿರಿಯಕ್ಕ, ವಿಶಾಲಕ್ಕನ ಮಗಳು, ಲಲಿತಳ ಜೊತೆಗೆ ಕುಳಿತು, ಹಾಲುಬಾಯಿ ತಿಂದ ನೆನಪೂ ಆಗುತ್ತಿದೆ. ಅಂದು ನಾವಿಬ್ಬರೂ ಆ ರಾಶಿಯಲ್ಲಿದ್ದ ಹಾಲುಬಾಯಿಯನ್ನು ಖಾಲಿ ಮಾಡುತ್ತೇವೆಂದು ಕೊಚ್ಚಿಕೊಳ್ಳುತ್ತಿದ್ದೆವು. ನಮ್ಮ ತಾಯಿ, ವಿಶಾಲಕ್ಕ, ಅದನ್ನು ಕೇಳಿ ನಗುತ್ತಿದ್ದರು. ಅದನ್ನು ನೋಡಿ ನಾವಿಬ್ಬರೂ, `ನೋಡ್ತಿರಿ… ಅದನ್ನೆಲ್ಲಾ ಖಾಲಿ ಮಾಡಿ ನಿಮಗ್ಯಾರಿಗೂ ತಿನ್ನಲು ಹಾಲುಬಾಯಿಯೇ ಇಲ್ಲದಂತೆ ಮಾಡ್ತೇವೆ’ ಎಂದು `ಪಂಥ’ ಕಟ್ಟಿದ್ದೆವು. ಆದರೆ 3-4 ಹಾಲುಬಾಯಿ ತುಂಡು ತಿಂದ ನಮಗೆ, ಮುಂದೆ ತಿನ್ನಲಾಗದೆಹೋಯ್ತು. ನಮ್ಮ ತಾಯಿ, ಹಾಗೂ ವಿಶಾಲಕ್ಕ, `ಎಲ್ಹೋಯ್ತು ನಿಮ್ಮ ಪಂಥ….?’ ಎಂದು ತಮಾಷೆ ಮಾಡಿದಾಗ, ನಾವಿಬ್ಬರೂ ಏನೊಂದೂ ಹೇಳಲಾರದೆ ಅಲ್ಲಿಂದ ಜಾಣತನದಿಂದ ಜಾರಿಕೊಂಡಿದ್ದೆವು.

ಅಡುಗೆ ಮನೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಮಂದಿ ಊಟಕ್ಕೆ ಕೂರುವ ವ್ಯವಸ್ಥೆ ಇದೆ ಎಂದಿದ್ದೆನಲ್ಲ. ಊಟಕ್ಕೆ ಕೂರುವ ವ್ಯವಸ್ಥೆಯಲ್ಲೂ ಒಂದು ರೀತಿಯ ಸಂಪ್ರದಾಯ ಬೆಳೆದು ಬಂದಿತ್ತು. ನಮ್ಮ ಚಿಕ್ಕಪ್ಪನಿಗೆ ಅಗ್ರಸ್ಥಾನ. ಅವರಿಗೆ ಡಯಾಬಿಟಿಸ್, ವಾತಗಳಿಂದಾಗಿ ಅನಾರೋಗ್ಯಸ್ಥರಾಗಿದ್ದರು. ಹಾಗಾಗಿ ಮನೆಯಲ್ಲಿ ಹಾಲು-ಮೊಸರುಗಳಲ್ಲಿ ಹೆಚ್ಚಿನ ಪಾಲು ಅವರಿಗೆ ಸಲ್ಲುತ್ತಿತ್ತು. ಅವರಾದ ಮೇಲೆ ನಮ್ಮ ತಂದೆ, ಆಮೇಲೆ ನಮ್ಮ ಚಿಕ್ಕಪ್ಪನ ಹಿರಿಯ ಮಗ-ಕುಪ್ಪಣ್ಣಯ್ಯ (ಅವನ ಹೆಸರು ನರಸಿಂಹ ಎಂದಿದ್ದರೂ, ಅವನನ್ನು `ಕುಪ್ಪ’ ಎಂದು ಕರೆಯುತ್ತಿದ್ದುದರ ಪರಿಣಾಮವಾಗಿ, ಅವನು ನಮಗೆಲ್ಲ ಕುಪ್ಪಣ್ಣಯ್ಯನಾಗಿದ್ದ) ಆಮೇಲೆ ವಯಸ್ಸಿಗೆ ತಕ್ಕಂತೆ ಬೇರೆಯವರಿಗೆ ಸ್ಥಾನ. ಅತಿಥಿಗಳ್ಯಾರಾದರೂ ಬಂದಲ್ಲಿ, ನಮ್ಮ ಚಿಕ್ಕಪ್ಪನಾದ ಮೇಲೆ ಅತಿಥಿಗಳು, ಆಮೇಲೆ ನಮ್ಮ ತಂದೆ ಕೂರುತ್ತಿದ್ದರು. ಎದುರುಗಡೆ ಸಾಲಿನಲ್ಲಿ ಅಗ್ರಸ್ಥಾನ-ನಮ್ಮಲ್ಲಿನ ದೇವರ ಪೂಜೆಗೆ ಬರುತ್ತಿದ್ದ-ನಾವೆಲ್ಲರೂ ಕರೆಯುತ್ತಿದ್ದ `ಅಜ್ಜಯ್ಯ’ನಿಗೆ. ಮಕ್ಕಳು ಈ ಎರಡು ಸಾಲಿನಲ್ಲಿ ಹಂಚಿ ಕುಳಿತಿರುತ್ತಿದ್ದರು.

ಈ ಅಜ್ಜಯ್ಯನ ನೆನಪು ಬಂದಾಗಲೆಲ್ಲ ಒಂದು ಸಂಗತಿ ಜ್ಞಾಪಕವಾಗುತ್ತದೆ. ನಮ್ಮ ಚಿಕ್ಕಪ್ಪನಿಗೆ ಇನ್ನೊಬ್ಬರನ್ನು ಕುಚೋದ್ಯ ಮಾಡಿ ಖುಷಿಪಡುವುದೊಂದು ಅಭ್ಯಾಸವಾಗಿತ್ತೆಂದು ಹೇಳಿದ್ದೆನಲ್ಲ-ಅಜ್ಜಯ್ಯನನ್ನು ಈ ರೀತಿ ಕುಚೋದ್ಯ ಮಾಡಿದ ಒಂದು ಸಂಗತಿ ಹೀಗಿದೆ: ಅಜ್ಜಯ್ಯನಿಗೆ ತುಂಬಾ ವಯಸ್ಸಾದುದರಿಂದ, ಕೋಪ ಸ್ವಲ್ಪ ಜಾಸ್ತಿ. ಕೆಲ ಸಮಯ ತಮಾಷೆಯನ್ನೂ ಅವರು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದರು. ನನ್ನ ಅಕ್ಕ-ನಾಗಕ್ಕನ ಮಗಳು-ಶ್ರೀಮತಿ, ನಮ್ಮಲ್ಲಿಗೆ ಆಗಾಗ ಅಜ್ಜನ ಮನೆಯ `ಬಿದ್ದ’ಗೆ ಬರುತ್ತಿದ್ದಳು. ನಾನೀಗ ಹೇಳುತ್ತಿರುವ ಸಂಗತಿ ನಡೆದ ಕಾಲದಲ್ಲಿ ಅವಳ ವಯಸ್ಸು ಸುಮಾರು 3-4 ವರ್ಷಗಳಾಗಿದ್ದಿರಬಹುದು. ನಮ್ಮ ಚಿಕ್ಕಪ್ಪ ಅವಳಿಗೆ ಒಂದು ಕಿರಿ ಸೀರೆಯನ್ನುಡಿಸಿ (ನಮ್ಮಲ್ಲಿ ಅದನ್ನು `ಕಿರಿಗೆ’ ಎಂದು ಹೇಳುತ್ತಾರೆ) ಊಟಕ್ಕೆ ಕೂತ ಅಜ್ಜಯ್ಯನ ಮುಂದೆ ನಿಲ್ಲಿಸಿ, ಅವಳಿಂದ, `ಅಜ್ಜಯ್ಯಾ…, ನನ್ನನ್ನು ಮದುವೆ ಮಾಡಿಕೊಳ್ಳಿ….’ – ಎಂದು ಹೇಳಿಸಿ, ಅವರಿಗೆ ನಮಸ್ಕಾರ ಮಾಡಿಸುತ್ತಿದ್ದರು. ಇದರಿಂದ ಅಜ್ಜಯ್ಯ ಕೋಪಗೊಳ್ಳುತ್ತಿದ್ದರೆ-ನಮ್ಮ ಚಿಕ್ಕಪ್ಪನಿಗದು ತುಂಬಾ ತಮಾಷೆಯಾಗಿ ಕಾಣುತ್ತಿತ್ತು. ಆ ಸಂಗತಿ, ಆ ಕಾಲದಲ್ಲಿ ನನಗೂ ತುಂಬಾ ತಮಾಷೆಯಾಗಿಯೇ ಕಂಡಿತ್ತು. ಈ ಸಂಗತಿಯಲ್ಲದೆ, ಇನ್ನೊಂದು ಸಂಗತಿಯೂ ಅಜ್ಜಯ್ಯನನ್ನು ಕೋಪಕ್ಕೆ ಗುರಿಮಾಡಿಸುತ್ತಿತ್ತು. ನಮ್ಮ ಚಿಕ್ಕಪ್ಪ ಅದು-ಇದು ಎಂದು ಮಾತಾಡುತ್ತ, `ಯುದ್ಧ ನಡೆಯುತ್ತಿದೆ… ಅಲ್ಲಿ ಹೋರಾಡಲು ಸರಕಾರ ಯೋಧರನ್ನು ಹುಡುಕುತ್ತಿದ್ದಾರೆ… ಅದರಲ್ಲೂ ಮುದುಕರಿಗೆ ಮೊದಲ ಚಾನ್ಸ್….! ಅಜ್ಜಯ್ಯಾ…, ನಿಮ್ಮ ಚಾನ್ಸ್ ಸದ್ಯದಲ್ಲೇ ಬರ್ತಿದೆ…. ಯುದ್ಧಕ್ಕೆ ಹೊರಡಲು ಸಜ್ಜಾಗಿರಿ… ನೀವು ಹೋದಲ್ಲಿ ನಾವು ಪೂಜೆಗೆ ಬೇರೆ ಜನ ಹುಡುಕಬೇಕು… ನಿಮ್ಮಂಥವರನ್ನು ಸರಕಾರ ಆರಿಸುತ್ತಿರುವ ಕಾರಣ, ಹ್ಯಾಗಿದ್ದರೂ ನಿಮ್ಮ ಆಯುಷ್ಯ ಇನ್ನು ಹೆಚ್ಚಿಗೇನಿಲ್ಲ ಎಂಬುದು’ ಎಂದು ಹೇಳುತ್ತಿದ್ದರು. ಮುಂದುವರಿಯುತ್ತ, ಅವರ ಪಕ್ಕದಲ್ಲೆ ಊಟಕ್ಕೆ ಕುಳಿತಿರುತ್ತಿದ್ದ ಮಾಬ್ಲ ಮಾಸ್ಟ್ರನ್ನುದ್ದೇಶಿಸಿ (ಮಾಬ್ಲ ಮಾಸ್ಟ್ರು ನಮ್ಮಲ್ಲಿ ಊಟಮಾಡಿಕೊಂಡಿರುತ್ತಿದ್ದ ಗಿಳಿಯಾರು ಶಾಲೆಯ ಒಬ್ಬ ಮಾಸ್ತರು), `ಅಲ್ವಾ ಮಾಸ್ಟ್ರೇ, ಪೇಪರಿನಲ್ಲಿ ಈ ಸುದ್ದಿ ಬಂದಿದೆಯಲ್ಲವೇ….?’ ಎಂದು ಕೇಳುತ್ತಿದ್ದರು. ಅದಕ್ಕವರು, `ಹೌದು ಅಜ್ಜಯ್ಯಾ…, ಸದ್ಯದಲ್ಲೆ ನಿಮ್ಮನ್ನು ಯುದ್ಧಕ್ಕಾಗಿ ಕರೆದುಕೊಂಡು ಹೋಗಲಿದ್ದಾರೆ…’ ಎಂದು ಸ್ವರಗೂಡಿಸುತ್ತಿದ್ದರು. ಅಜ್ಜಯ್ಯ ಅದರಿಂದ ಕೋಪಗೊಂಡು, ಕೆಲವುಮ್ಮೆ `ಏ ಮಾಸ್ಟಾ…, ನನ್ನ ಹೊಟ್ಟೆಯುರಿಸಿದ್ದಕ್ಕೆ ನಿನ್ನ ಹೊಟ್ಟೆ ಉರಿದುಹೋಗಲಿ…. ನೀನಾದ್ರೂ ಈಗ ಸರಿಯಾಗಿ ಊಟ ಮಾಡು…’ ಎನ್ನುತ್ತ, ಅರ್ಧ ಊಟದಿಂದ ಏಳುತ್ತಿದ್ದರು. ಹಲವು ಬಾರಿ ಇಂಥ ಸಂದರ್ಭಗಳಲ್ಲಿ, ನಮ್ಮ ತಂದೆಯವರು ತಮ್ಮನನ್ನು ಸ್ವಲ್ಪ ತರಾಟೆಗೆ ತೆಗೆದುಕೊಂಡರೂ, ನಮ್ಮ ಚಿಕ್ಕಪ್ಪ, ಅಜ್ಜಯ್ಯನ ಕುಚೋದ್ಯ ಮಾಡುವುದನ್ನು ನಿಲ್ಲಿಸಲಿಲ್ಲ. ಚಿಕ್ಕಂದಿನಲ್ಲಿ ನನಗೂ ಇವೆಲ್ಲ ತಮಾಷೆಯಾಗಿರುತ್ತಿತ್ತು. ಈಗ ತೀರಿಕೊಂಡ ಆ ಅಜ್ಜಯ್ಯನ ಪಾಡನ್ನು ಎಣಿಸಿದಾಗ, ಅವರ ಬಗ್ಗೆ ವ್ಯಥೆಯಾಗುತ್ತಿದೆ. ಈ ಅಜ್ಜಯ್ಯನ ಬಗ್ಗೆ ಕೆಲವು ಸಂಕ್ಷಿಪ್ತ ವಿವರಗಳನ್ನು ಮುಂದೆ (`ನಮ್ಮವರು’ ಎಂಬ ಭಾಗದಲ್ಲಿ) ಕೊಟ್ಟಿದ್ದೇನೆ.

ಇನ್ನೊಂದು ಘಟನೆಯೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ನಮ್ಮ ತಂದೆಯವರ ಸೋದರಳಿಯ, ಕೃಷ್ಣ ಉಪಾಧ್ಯಾಯನಿಗೆ (ನಾವೆಲ್ಲ ಅವನನ್ನು ಕಿಟ್ಟ ಭಾವ ಎಂದು ಕರೆಯುತ್ತಿದ್ದೆವು) ಸಂಬಂಧಪಟ್ಟ ವಿಚಾರವದು. ನಮ್ಮ ಚಿಕ್ಕಮ್ಮ, ಕಿಟ್ಟಕ್ಕನಿಗೆ ಖಿಃ ಬಂದಾಗ, ಗುಣಪಡಿಸಲೆಂದು ನಮ್ಮ ತಂದೆಯವರು ಮದ್ರಾಸಿನ (ಈಗಿನ ಚೆನೈ) ತಾಂಬರಂ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರು. ಅಲ್ಲಿ ಶುಶ್ರೂಷೆ ಪಡೆಯುತ್ತಿದ್ದಾಗ, ಕಿಟ್ಟ ಭಾವ ಅವಳನ್ನು ನೋಡಲು ಹೋಗಿದ್ದು, `ಅತ್ತೆ…, ನೀನು ಸಧ್ಯದಲ್ಲೇ ಸಾವನ್ನಪ್ಪುತ್ತೀಯ…. ನಿನ್ನ ಮಕ್ಕಳೆಲ್ಲ ಅನಾಥರಾಗುತ್ತಾರೆ…’ ಎಂದು ಅವಳಿಗೆ ಸಾಂತ್ವನ ಹೇಳುವ ಬದಲು, ಅಪಶಕುನದ ಮಾತನ್ನೇ ಹೇಳಿ, ಅವಳ ಆತ್ಮವಿಶ್ವಾಸವನ್ನೆ ಕೆಡಿಸಿದ್ದ. ಇದು ನಮ್ಮ ತಂದೆಯವರಿಗೆ ಆಮೇಲೆ ತಿಳಿದುಬಂತು. ಕಿಟ್ಟಕ್ಕನ ಕಾಯಿಲೆಯನ್ನು ಗುಣಪಡಿಸಲಾರದೆ, ಅವಳನ್ನು ಹಿಂದಕ್ಕೆ ಮನೆಗೆ ಆಮೇಲೆ ಕರೆತರಲಾಯ್ತು. ಒಮ್ಮೆ ನಾವೆಲ್ಲ ಊಟಕ್ಕೆ ಕುಳಿತಾಗ, ನಮ್ಮ ಕಿಟ್ಟ ಭಾವ ನಮ್ಮಲ್ಲಿಗೆ ಹರಿ-ಹರಿ ಎಂದು ಬಂದಿದ್ದ. ಯಥಾಪ್ರಕಾರ ಅವನಿಗೊಂದು ಬಾಳೆ ಎಲೆ ಇಡುವ ಸನ್ನಾಹ ಮಾಡುತ್ತಿದ್ದಾಗ, ತಮ್ಮ ತಂದೆ, `ನನ್ನ ಮಾತನ್ನು ಮೀರಿ, ಯಾರೂ ಅವನಿಗೆ ಊಟ ಹಾಕುವಂತಿಲ್ಲ… ಅವನು ಮದ್ರಾಸಿನಲ್ಲಿ ಕೃಷ್ಣವೇಣಿಗೆ (ಅಂದರೆ ಕಿಟ್ಟಕ್ಕ) ಎಲ್ಲಿಲ್ಲದ ಅಪಶಕುನದ ಮಾತನಾಡಿದ್ದ… ಅವನು ನಮ್ಮ ಮೇಲೆ ಅಪಪ್ರಚಾರ ಮಾಡಿದ್ದ… ಅದಕ್ಕಾಗಿ ಅವನಿಗೆ ಈ ಮನೆಯಲ್ಲಿ ಊಟವಿಲ್ಲ…’ ಎಂದು ಘರ್ಜಿಸಿದ್ದರು. ತಂದೆಯವರ ಆ ರೀತಿಯ ಗರ್ಜನೆಯನ್ನು ನಾನೆಂದೂ ಅಲ್ಲಿವರೆಗೆ ನೋಡಿರಲಿಲ್ಲ. ಅವರ ಮಾತನ್ನು ಮೀರಲಾರದೆ, ಮನೆಯ ಹೆಂಗಸರು ಅವನಿಗಾಗಿ ಹಾಕಿದ್ದ ಊಟದ ಎಲೆಯನ್ನು ತೆಗೆಯಬೇಕಾಯ್ತು! ಆದರೆ, ಕಿಟ್ಟ ಬಾವ, `…ಶ್ರೀರಾಮ ಜೈ ರಾಮ್, ಸೀತಾರಾಮ ಜೈ ರಾಮ್….’ ಎನ್ನುತ್ತಾ, ತಾನು ಊಟಮಾಡದೆ, ಅಲ್ಲಿಂದ ಏಳುವುದಿಲ್ಲವೆಂದು ಅಡುಗೆಮನೆ ಬಾಗಿಲಲ್ಲೇ ಕುಳಿತು `ಸತ್ಯಾಗ್ರಹ’ ಮಾಡಿದ್ದ. ಏನೆಂದರೂ ಅವನಿಗೆ ಊಟ ಸಿಗದೆ, ಅವನನ್ನು ಕೂಲಿಯಾಳುಗಳಿಂದ ಎತ್ತಿಸಿ, ರಸ್ತೆಯಲ್ಲಿ ಬಿಟ್ಟಿದ್ದರು. ಅಲ್ಲಿಂದ ಕಿಟ್ಟಬಾವ ನಮ್ಮ ತಂದೆಯನ್ನು ಬಯ್ಯುತ್ತ ಹೋದನಂತೆ. ಈ ಘಟನೆ ಅದ್ಯಾಕೋ ನಮ್ಮ ಅಡುಗೆ ಮನೆಯನ್ನು ನೆನೆದಾಗ, ಜ್ಞಾಪಕವಾಗುತ್ತಿದೆ. ಹೀಗೆ, ಇನ್ನೆಷ್ಟೋ ಘಟನೆಗಳು ಈ ಅಡುಗೆ ಮನೆಯ ಸ್ಮರಣೆಯ ಜೊತೆಗೆ ಬೆರೆತುಕೊಂಡಿವೆ. ಈಗ ಆ ಅಡುಗೆಮನೆ ಅಳಿದು, ಹಿಂದಿನ ಸ್ಪೇರ್ ಅಡುಗೆ ಮನೆಯನ್ನೇ ವಿಸ್ತರಿಸಿ, ಅದನ್ನೇ ಮುಖ್ಯ ಅಡುಗೆ ಮನೆಯನ್ನಾಗಿ ಉಪಯೋಗಿಸುತ್ತಿದ್ದಾರೆ.

ಈ ಅಡುಗೆ ಮನೆಯ ಉತ್ತರಕ್ಕೆ, ನಾವೆಲ್ಲ ಕರೆಯುತ್ತಿದ್ದ `ಮೂಡುಚಾವಡಿ.’ ಅದನ್ನು ಹೆಚ್ಚಾಗಿ ಹೊರಗಿನವರ, ಕೂಲಿಯಾಳುಗಳ ಹಾಗೂ ಮುಟ್ಟಾದ ಹೆಂಗಸರ ಊಟಕ್ಕೆ ಉಪಯೋಗಿಸುತ್ತಿದ್ದರು. ಅಲ್ಲದೆ, ಅದನ್ನು ಹೆರಿಗೆಯ ಮನೆಯನ್ನಾಗಿಯೂ ಉಪಯೋಗಿಸುತ್ತಿದ್ದರು. ಅಡುಗೆ ಮನೆಯಿಂದ ಅಲ್ಲಿಗೆ ಹೋಗಲು ಬಾಗಿಲಿದ್ದಿತ್ತು. ಇದನ್ನು ಚಾವಡಿಯೆಂದು ಯಾಕೆ ಕರೆಯುತ್ತಿದ್ದರೆಂಬುದು ತಿಳಿದಿಲ್ಲ. ಯಾಕೆಂದರೆ, ಸಂಪ್ರದಾಯದ ಚಾವಡಿಗೂ, ಈ ಚಾವಡಿಗೂ ವ್ಯತ್ಯಾಸವಿದೆ. ಎಲ್ಲ ಚಾವಡಿಗಳಿಗಿರುತ್ತಿದ್ದ ಅದರ ಕೆಳಗಿನ ಜಗುಲಿ (ಪಾತಾಳಂಕಣ) ಈ ಮೂಡುಚಾವಡಿಗಿಲ್ಲ. ಬದಲು, ಒಂದು ಕಟಕಟೆಯ ಆವರಣ (enclosure), ಕೆಳಗಿನ ಅಂಗಳದಿಂದ ಇದನ್ನು ಬೇರ್ಪಡಿಸಿತ್ತು. ಅಂಗಳದಿಂದ ಇದರೊಳಗೆ ಪ್ರವೇಶಿಸಲು ಸ್ವಲ್ಪ ಅಂತರದಲ್ಲಿ ಎರಡು ಮೆಟ್ಟಿಲುಗಳ ಸಾಲು ಮತ್ತು ಎರಡು ಬಾಗಿಲುಗಳಿದ್ದುವು. ಮೂಡುಚಾವಡಿಯನ್ನು ನಾವೆಲ್ಲ ಮಳೆ ಬರುತ್ತಿದ್ದಾಗ ಆಟದ ಸ್ಥಳವಾಗಿ ಉಪಯೋಗಿಸುತ್ತಿದ್ದೆವು. ನನಗಿನ್ನೂ ಜ್ಞಾಪಕವಿದೆ ಒಂದು ಚಿಂದಿ ಸೀರೆಯ ತುಂಡೊಂದರ ಮುಸುಕು ಹಾಕಿಕೊಂಡು, ಸ್ವಲ್ಪ ಅಪಸ್ವರ ಮಾಡುತ್ತ, ನನ್ನ ತಮ್ಮ ವಾಸುದೇವನನ್ನು ಬೆದರಿಸುತ್ತಿದ್ದದು. ಅವನು ಹೆದರಿ ಕೂಗಿದಾಗ, ಮುಸುಕು ತೆಗೆದು ನನ್ನ ನಿಜ ಗುರುತನ್ನು ಹೇಳಿ, ಅವನ ಭಯವನ್ನು ಶಮನ ಮಾಡುವ ಪ್ರಯತ್ನ ಮಾಡುತ್ತಿದ್ದೆ. ನನಗೆ ಅದು ಯಾಕೆ ಆಟವಾಗಿ ಕಾಣಿಸುತ್ತಿತ್ತೋ ನಾನರಿಯೆ. ಅದು ಒಂದು ಕ್ರೂರ ವರ್ತನೆ ಮತ್ತು ಈ `ಆಟ’ ಅವನ ಆತ್ಮವಿಶ್ವಾಸವನ್ನು ಕೆಡಿಸಿತ್ತು ಎಂಬುದು ನನಗೀಗ ಅರಿವಾಗುತ್ತಿದೆ. ನನ್ನ ತಮ್ಮ, ಆ ಹೆದರುವ ಹಂತವನ್ನು ದಾಟಿ, ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು, ಮುಂದೆ ನಮ್ಮ ಮನೆಯ ವ್ಯವಹಾರವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ್ದನೆನ್ನಿ!

ಮೂಡುಚಾವಡಿಯ ಉತ್ತರದಲ್ಲೊಂದು ಕೋಣೆ. ಈ ಕೋಣೆಯಲ್ಲಿ ಕೆಲವು ಬೇಸಾಯಕ್ಕೆ ಅನುಕೂಲವಾಗುವ ಕೆಲವು ವಸ್ತುಗಳನ್ನೂ, ಜಾನುವಾರುಗಳಿಗೆ ಬೇಕಾಗುವ ಆಹಾರಗಳನ್ನೂ ಶೇಖರಿಸುತ್ತಿದ್ದರೆಂದು ಕಾಣುತ್ತದೆ. ಅದರೊಳಗೆ ನಾನಂತೂ ಹೆಚ್ಚಿಗೆ ಪ್ರವೇಶ ಮಾಡಿರಲಿಲ್ಲ, ಕಾರಣ, ಅಲ್ಲಿ ಹಾವುಗಳ ಸಂಚಾರ ಜಾಸ್ತಿ ಎಂಬ ಭಯದಿಂದ. ಮೂಡು ದಿಕ್ಕಿನಲ್ಲಿದ್ದ ಬಾಗಿಲಿಂದಿಳಿದು, ಕೆಳಗೆ ಬಯಲಿಗೆ ಹೋಗಬಹುದು. ಮಳೆಗಾಲದಲ್ಲಿ, ಗದ್ದೆಗಳನ್ನು ಉತ್ತು, ಬತ್ತದ ಸಸಿಗಳನ್ನು ನೆಡುವುದನ್ನು (ನೆಟ್ಟಿ) ನಾವು ಈ ಬಾಗಿಲ ಬಳಿ ನಿಂತು ನೋಡುತ್ತಿದ್ದೆವು. ಉಳುತ್ತಿರುವ ಕೋಣಗಳ ಸಾಲು, ಸುರಿಯುತ್ತಿರುವ ಮಳೆಯಿಂದ ತಪ್ಪಿಸಿಕೊಳ್ಳಲು `ಗೊರಬು’ ಧರಿಸಿದ ಹೆಣ್ಣಾಳುಗಳು ನೇಜಿ ನೆಡುವುತ್ತಿರುವ ಆ ದೃಶ್ಯ ಈಗಲೂ ಕಣ್ಣಿಗೆ ಕಟ್ಟುತ್ತಿದೆ. ಆಗ `ನೇಜಿ ನೆಡುವ ಹೆಂಗಸರು, ಹಳ್ಳಿಯಲ್ಲಿ ಬಡವರು; ಹರಕು ಹರಕು ಸೀರೆಯುಟ್ಟು, ಮಲಿನ ಮಲಿನ ರವಿಕೆ ತೊಟ್ಟು, ಎಳೆದ ರಾಗ `ಓ ಬೆಲೇ….’ ಎಂಬ, ಶಾಲಾ ಪಠ್ಯದಲ್ಲಿ ಓದುತ್ತಿದ್ದ ಹಾಡನ್ನು ಹಾಡುತ್ತಿದ್ದ ದಿನಗಳನ್ನು ಮರೆಯಲು ಸಾಧ್ಯವಿಲ್ಲ.
ಅಡುಗೆ ಮನೆಯ ಹಿಂದೆ ಎರಡು ಮರಗಳು – ಒಂದು ಅಮಟೆಕಾಯಿ, ಇನ್ನೊಂದು ನುಗ್ಗೆಕಾಯಿ – ಇದ್ದಿದ್ದುದು ಜ್ಞಾಪಕವಾಗುತ್ತಿದೆ. ನಮ್ಮ ತಾಯಿ ತಯಾರಿಸಿದ, ಅಮಟೆಕಾಯಿ ಗೊಜ್ಜಿನ ರುಚಿ ಇನ್ನೂ ನಾಲಿಗೆಯಲ್ಲೇ ಉಳಿದಿದೆ. ಅಂತೆಯೇ, ನುಗ್ಗೆ ಕೋಡಿನ ಹುಳಿ ಬಲು ರುಚಿಕರವಾಗಿರುತ್ತಿತ್ತು. ಅಮಟೆಕಾಯಿ ಮತ್ತು ನುಗ್ಗೆ ಕೋಡನ್ನು ಪಡೆಯಲು, ಬಾವಿಕಟ್ಟೆ ಅಡುಗೆ ಮನೆಯ ಮಧ್ಯದ ತಗಡು ಚಪ್ಪರದ ಬಾಗಿಲು ಮೂಲಕ ಹೋಗಿ, ಅಲ್ಲಿಂದ ಎತ್ತರದ ಬಾಗಿಲೊಂದನ್ನು ದಾಟಿ, ಎಡಕ್ಕೆ ತಿರುಗಬೇಕಾಗಿತ್ತು. ಈ ಎತ್ತರದ ಬಾಗಿಲ ಕಡೆ ಹೋಗುವ ದಾರಿ, ಅಡುಗೆ ಮನೆಯನ್ನು ಅದರ ದಕ್ಷಿಣಕ್ಕಿದ್ದ ಹಟ್ಟಿಯಿಂದ (ಜಾನುವಾರುಗಳನ್ನು ಕಟ್ಟುವ ಕೊಟ್ಟಿಗೆ) ಬೇರ್ಪಡಿಸಿತ್ತು. ಈ ಎತ್ತರದ ಬಾಗಿಲು ಹೊರಗಿನಿಂದ ಸಾಗಿಸಬೇಕಾಗಿದ್ದ ಪೈರಿನ ಹೊರೆ ತರಲು ಅನುಕೂಲವಾಗಿತ್ತು. ನಮ್ಮ ಮನೆಯ ಹಟ್ಟಿಯಲ್ಲಿ, 5-6 ಹಸುಗಳು, ಎರಡು ಎಮ್ಮೆ, ಒಂದು ಜೊತೆ ಎತ್ತುಗಳಿದ್ದುವು. ಹಸು-ಎಮ್ಮೆಗಳು ಕೊಡುತ್ತಿದ್ದ ಹಾಲಿಗಿಂತ, ಪಡೆಯುವ ಗೊಬ್ಬರವೇ ಹೆಚ್ಚು ಉಪಯೋಗಕರವಾಗಿತ್ತೆಂದು ಹೇಳಬಹುದು. ಎತ್ತುಗಳನ್ನು ನಮ್ಮ ಮನೆಯಲ್ಲಿದ್ದ ಗಾಡಿ ಓಡಿಸಲು ಉಪಯೋಗಿಸುತ್ತಿದ್ದರು. ಹಟ್ಟಿಯ ದಕ್ಷಿಣ ತುದಿಯಲ್ಲಿ ಒಂದು ಜೊತೆ ಕೋಣ, ಪ್ರತ್ಯೇಕ ಕೋಣೆಯಲ್ಲಿರುತ್ತಿದ್ದುವು. ಈ ಕೋಣಗಳ ಕೋಣೆಗೆ ಎದುರಾಗಿ, ಜಾನುವಾರುಗಳಿಗೆ ಬೇಕಾಗುವ ಅಕ್ಕಚ್ಚು, ಬಾಯರು! ಹುರುಳಿ, ಗಂಜಿ, ಇತ್ಯಾದಿಗಳನ್ನು ತಯಾರಿಸುವ ವ್ಯವಸ್ಥೆ. ಆ ಕೋಣೆಯನ್ನು, ನಾವೆಲ್ಲ ಕೊಟ್ಟಿಗೆ ಎಂದೇ ಕರೆಯುತ್ತಿದ್ದೆವು. ಕೋಣಗಳಿಗೆ ಕಂಬಳದ ಸಮಯ ವಿಶೇಷ ಆಹಾರ, ಉಪಚಾರ ಸಲ್ಲುತ್ತಿತ್ತು. ನಮ್ಮ ಮನೆಯ ಕೋಣಗಳನ್ನು ವಿವಿಧ ಕಂಬಳಗಳಲ್ಲಿ ಪಾಲ್ಗೊಳ್ಳಲು ಮೆರವಣಿಗೆಯ ಮೂಲಕ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಣ್ಣಿಗೆ ಇಂದಿಗೂ ಕಟ್ಟುತ್ತಿದೆ. ಕಂಬಳದ ಸಮಯ ನಾವೆಲ್ಲ ಉತ್ಸಾಹಭರಿತರಾಗುತ್ತಿದ್ದೆವು! ಹತ್ತಿರದ ಕಂಬಳಗಳಿಗೆ, ಹಿರಿಯರು ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ಕೊಟ್ಟಿಗೆಯ ಯಜಮಾನಿತಿ-ಚಂದುವೆಂಬ ಸ್ಪೆಷಲ್ ಆಗಿ ಉಲ್ಲೇಖಿಸಲರ್ಹಳಾದ, ಹಾಗೂ ನನ್ನ ಮನಸ್ಸಿನಲ್ಲಿ ಉಳಿಸಿಕೊಳ್ಳಲು ಚೂರೂ ಇಷ್ಟವಿಲ್ಲದಿದ್ದರೂ, ಹೇಗೋ ಉಳಿದ ಒಬ್ಬ ಗಯ್ಯಾಳಿ ಹೆಂಗಸು. ಅವಳು ಮನೆಯ ಕೆಲಸದಾಳಾಗಿದ್ದರೂ, ನಮ್ಮ ಮನೆಯಲ್ಲಿ ಅವಳಿಗೊಂದು ಸ್ಪೆಷಲ್ ಸ್ಥಾನವಿದ್ದಿತ್ತು. ಅದಕ್ಕಾಗಿಯೇ ಅವಳನ್ನು ಇಲ್ಲಿ `ಯಜಮಾನಿತಿ’ ಎಂದು ಸಂಬೋಧಿಸಿದ್ದು. ಅವಳ ಬಗ್ಗೆ ಕೆಲವು ವಿವರ ಮತ್ತು ಅವಳ ಗಯ್ಯಾಳಿತನಗಳ ಬಗ್ಗೆ ಮುಂದಿನ ಭಾಗದಲ್ಲಿ ಕೊಡುವವನಿದ್ದೇನೆ. ಈ ಕೊಟ್ಟಿಗೆಯ ಹೊರಗೆ, ಅಂಗಳದಲ್ಲೊಂದು ಕಸಿ ಮಾವಿನ ಮರ. ಅದರ ಹಣ್ಣು ಬಲು ರುಚಿ. ಅಲ್ಲಿಂದ ಪಶ್ಚಿಮಕ್ಕೆ ನಮ್ಮ ಮನೆಯ ಹೊರ ಅಂಗಳ. ದಕ್ಷಿಣದ ಪಾಗಾರಕ್ಕೆ ತಗುಲಿಕೊಂಡಂತೆ ಒಂದು (ಎರಡೂ ಇದ್ದಿರಬಹುದು) ಹುಣಿಸೆ ಮರ. ಹೊರ ಅಂಗಳದಲ್ಲಿ, ಮನೆಯ ಹಿಂದುಗಡೆಯಲ್ಲೊಂದು ಕರಿಬೇವಿನ ಮರವಿದ್ದ ನೆನಪು. ಹಾಗಾಗಿ ನಮಗೆ ಕರಿಬೇವಿನ ಸೊಪ್ಪಿಗೆ ಬರಗಾಲವಿದ್ದಿರಲಿಲ್ಲ.

ಈ ಹೊರ ಅಂಗಳದ ಮೂಲೆಯಲ್ಲಿ ನಮ್ಮ `ಹುಲ್ಲುಕುತ್ರಿ’ ಇರುತ್ತಿತ್ತು. ಈ ಹುಲ್ಲುಕುತ್ರಿಯನ್ನ ಎಣಿಸಿದಾಗಲೆಲ್ಲ ಬೆನ್ನಲ್ಲೇ ಒಂದು ಪ್ರಕರಣವೂ ನೆನಪಾಗುತ್ತಿದೆ: ನಾವು ಸಾವಿರ ಮುಡಿಯಷ್ಟು ಭತ್ತ ಬೆಳೆಯುತ್ತಿದ್ದುದರಿಂದ, ಈ ಹುಲ್ಲುಕುತ್ರಿಯ ಗಾತ್ರವೂ ಸುಮಾರು 20-30 ಅಡಿಯಷ್ಟು ಎತ್ತರವಾಗಿರುತ್ತಿತ್ತು. ನಮ್ಮ ಮನೆಯವರನ್ನು ಕಂಡಲ್ಲಿ, ಒಬ್ಬ ಕೋಟದ ಮಹನೀಯರಿಗೆ ಆಗುತ್ತಿರಲಿಲ್ಲ. ಸಂದರ್ಭ ಸಿಕ್ಕಿದಾಗಲೆಲ್ಲ ನಮ್ಮ ಮೇಲೆ ಅಪಪ್ರಚಾರ ಮಾಡಿ, ವಿಶೇಷ ತೃಪ್ತಿ ಪಡೆಯುತ್ತಿದ್ದರು. ಒಮ್ಮೆ, ನಮ್ಮ ಮನೆಯಲ್ಲೇ ಊಟ ಮಾಡಿಕೊಂಡಿರುತ್ತಿದ್ದ ಮಾಬ್ಲ ಮಾಸ್ಟ್ರು, ಈ ಮಹನೀಯರಿಗೆ ಒಂದು ಸುಳ್ಳು ಮಾಹಿತಿಯನ್ನು ನೀಡಿದ್ದರು. (ಅನ್ನದ ಋಣ ತೀರಿಸುವ ದಾರಿಯಲ್ಲಿ ಇದೂ ಒಂದಿರಬಹುದೇ?) ಆಗ ಭಾರತಕ್ಕೆ ಸ್ವಾತಂತ್ರ ್ಯವಿನ್ನೂ ಬಂದಿರಲಿಲ್ಲ. ರೇಷನ್ ಕಾಲ ಬೇರೆ! ಒತ್ತಾಯಪೂರ್ವಕವಾಗಿ, ಸರಕಾರ, ಬೆಳೆದ ಅಕ್ಕಿಯನ್ನು ವಶಪಡಿಸಿಕೊಳ್ಳು-ತ್ತಿದ್ದರು. ಮೇಲೆ ಹೇಳಿದ ಮಹನೀಯರಿಗೆ ಮಾಬ್ಲ ಮಾಸ್ಟ್ರು, ನಮ್ಮ ಮನೆಯವರು ಈ ಹುಲ್ಲು ಕುತ್ರಿಯಲ್ಲಿ ಅಕ್ಕಿ ಮುಡಿಗಳನ್ನು ಅಡಗಿಸಿಟ್ಟಿದ್ದಾರೆ?; ಹಾಗಾಗಿ ಹೊರಗಿನಿಂದ ಬರಿಯ ಹುಲ್ಲುಕುತ್ರಿಯಾಗಿ ಕಂಡರೂ ಒಳಗೆ ಅಕ್ಕಿ ಶೇಖರಿಸಲು ಸಾಧ್ಯ – ಎಂಬ ಸುಳ್ಳು ಮಾಹಿತಿ ಕೊಟ್ಟಿದ್ದರು. ನಮ್ಮ ಜಿಲ್ಲಾ ಅಧಿಕಾರಿಗಳ ಹತ್ತಿರದ ಸಂಬಂಧಿಗಳಾಗಿದ್ದ ಮೇಲಿನ ಮಹನೀಯರು ಜಿಲ್ಲಾ ಅಧಿಕಾರಿಗಳಿಗೆ ಈ ಸುಳ್ಳು ಮಾಹಿತಿಯನ್ನು ರವಾನಿಸಿದ್ದರು. ಸರಿ, ಒಮ್ಮೆ ಇದ್ದಕ್ಕಿದ್ದಂತೆ ಹೆಚ್ಚುವರಿ ದಾಸ್ತಾನು ಮಾಡಿದ ಅಕ್ಕಿಗಾಗಿ, ಸರಕಾರದವರು ನಮ್ಮ ಮನೆ ಜಪ್ತಿಗೆ ಬಂದರು. ಬಂದು, ಎತ್ತರದ ಹುಲ್ಲುಕುತ್ರಿಯನ್ನು ಉರುಳಿಸಿ ನೆಲಸಮ ಮಾಡಿದರು. ಆದರೆ, ಅಕ್ಕಿ ಅಡಗಿಸಿಟ್ಟ ಕುರುಹು ಏನೊಂದೂ ಸಿಗದೆ ಹೋಯ್ತು! ಕೆಲಸದಾಳುಗಳು, ಉರುಳಿಸಿದ ಹುಲ್ಲುಕುತ್ರಿಯನ್ನು ಬಯ್ದುಕೊಂಡೇ ಪುನಃ ನಿರ್ಮಿಸಿದರೆನ್ನಿ! ಮಾಬ್ಲ ಮಾಸ್ಟ್ರು ಇಷ್ಟೆಲ್ಲ ಅನಾಹುತಕ್ಕೆ ಕಾರಣರು ಎಂದು ನಮ್ಮ ಮನೆಯವರಿಗೆ ಎಷ್ಟೋ ದಿನಗಳ ಮೇಲೆ ತಿಳಿಯಿತು. ಆದರೆ, ಮಾಬ್ಲ ಮಾಸ್ಟ್ರು, `ನಾನು ನಿಮ್ಮನ್ನು ಸಿಕ್ಕಿಹಾಕುವ ಉದ್ದೇಶದಿಂದ ಮಾಹಿತಿ ಕೊಟ್ಟುದಲ್ಲ, ಮಾತಿಗೆ ಮಾತು ಬಂದು ಆ ಬಗ್ಗೆ ಹೀಗೂ ಇರಬಹುದೆಂದು ಸುಮ್ಮನೆ ಪ್ರಸ್ತಾಪ ಮಾಡಿದ್ದು. ಅವರು ಇಷ್ಟೆಲ್ಲ ಮಾಡಿಸುತ್ತಾರೆಂಬ ಸುಳಿವು ನನಗೆ ತಿಳಿದಿದ್ದರೆ, ಖಂಡಿತ ಅವರೊಡನೆ ಈ ಪ್ರಸ್ತಾಪ ಮಾಡುತ್ತಲೇ ಇರಲಿಲ್ಲ…’ ಎಂದೆಲ್ಲ ಹೇಳಿ, ಹೇಗೋ ನುಣುಚಿಕೊಂಡರು. ಚಿಕ್ಕಂದಿನಲ್ಲಿ ನಡೆದ ಈ ಪ್ರಕರಣ, ಪೊಲೀಸರು ಬಂದು ನಡೆಸಿದ ಈ ಜಪ್ತಿ ನನಗೆ, ಭಯಕೂಡಿದ ರೋಮಾಂಚನಕಾರಿ ಘಟನೆಯಾಗಿದ್ದುದರಿಂದ, ನನ್ನ ಮನಸ್ಸಿನಲ್ಲಿನ್ನೂ ಉಳಿದಿದೆ.

ಮೂಡುಚಾವಡಿಗೆ ತಾಗಿ ಪಶ್ಚಿಮದಲ್ಲಿ `ಒರಳು ಕೊಟ್ಟಿಗೆ.’ ಬೆಳೆದ ಭತ್ತವನ್ನು ಬೇಯಿಸಿ ಕುಸುಬಲಕ್ಕಿ (ನಮ್ಮೂರಲ್ಲಿ ಹೇಳುವಂತೆ, ಕೊಚ್ಚಕ್ಕಿ) ತಯಾರಿಸಲು, ಅದನ್ನು ಕುಟ್ಟಲೆಂದು, ಈ `ಕೊಟ್ಟಿಗೆ’ಯಲ್ಲಿ ಹತ್ತಿಪ್ಪತ್ತು ಒರಳುಗಳಿವೆ. ಸುಮಾರಾಗಿ ದಶಂಬರ ಸಮಯದಲ್ಲಿ ಶೇಖರಿಸಿಟ್ಟ ಭತ್ತವನ್ನು ಕುಟ್ಟುವ ಕಾಲವಾಗಿತ್ತು. ಭತ್ತ ಬೇಯಿಸಲು ಒರಳು ಕೊಟ್ಟಿಗೆಯ ಕೆಳಗಿನ ಅಂಗಳದಲ್ಲಿ ಒಂದು ದೊಡ್ಡ ಗಾತ್ರದ ಕೊಪ್ಪರಿಗೆ ಇದ್ದಿತ್ತು. ದೊಡ್ಡ ಒಲೆಯ ಮೇಲೆ ಭತ್ತ ಬೇಯಿಸಿ, ಅದನ್ನು ಸಾಕಷ್ಟು ಒಣಗಿಸಿದ ಮೇಲೆ, ಒರಳು ಕೊಟ್ಟಿಗೆಯಲ್ಲಿ ಹೆಣ್ಣಾಳುಗಳು ಅದನ್ನು ಕುಟ್ಟಿ, ಅಕ್ಕಿ ಮಾಡುತ್ತಾರೆ. ಬೇಯಿಸಿದ ಭತ್ತವನ್ನು ಅಂಗಳದಲ್ಲಿ ಹರಡಿ, ಬಿಸಿಲಲ್ಲಿ ಒಣಗಿಸುತ್ತಾರೆ. ಒಂದೆರಡು ದಿನಗಳ ಮೇಲೆ ಕುಟ್ಟುತ್ತಾರೆ. ಬೇಯಿಸಿದ ಈ ಭತ್ತ ಒಣಗಿಸುವ ಕಾರ್ಯ ಹಲವು ದಿನಗಳವರೆಗೂ ನಡೆಯುತ್ತಿರುತ್ತದೆ. ಒಣಗಿಸಲಿಟ್ಟ ಭತ್ತವನ್ನು ಕಾಗೆ ಮತ್ತಿತರ ಪಕ್ಷಿಗಳಿಂದ ಉಳಿಸಿಕೊಳ್ಳಲು ಒಬ್ಬ ಹುಡುಗಿ ಇರುತ್ತಿದ್ದಳು. ಅವಳನ್ನು ನಾವೆಲ್ಲ `ಕಾಕಿ ಹೆಣ್ಣು’ ಎಂದು ಕರೆಯುತ್ತಿದ್ದೆವು. ಉದ್ದದ ಕೋಲಿನ ತುದಿಗೊಂದು ಸತ್ತ ಕಾಗೆಯನ್ನು ಕಟ್ಟಿ, ಸುತ್ತಲೂ `ಕಾ…, ಕಾ….’ ಎಂದು ಈ ಕಾಕಿಹೆಣ್ಣು ತಿರುಗುತ್ತಿದ್ದಳು. ಈಗ ಆ ಕಾಕಿಹೆಣ್ಣು ದಾವಣಗೆರೆಯಲ್ಲೆಲ್ಲೋ ಒಬ್ಬ ಹೊಟೇಲ್ ಮಾಲಿಕನನ್ನು ಮದುವೆಯಾಗಿ, ಸಾಹುಕಾರರ ಹೆಂಡತಿಯೆಂದೆಸಿನಿಸಿಕೊಂಡು ಸುಖವಾಗಿದ್ದಾಳೆಂದು ಕೇಳಿದ್ದೇನೆ. ಈ ಕಾಕಿಹೆಣ್ಣು, ಗದ್ದೆಯಲ್ಲಿ ಭತ್ತದ ಸಸಿಗಳನ್ನು ನೆಟ್ಟು, ಆಮೇಲೆ ಭತ್ತ ಕುಟ್ಟಿ, ಅಕ್ಕಿ ತಯಾರಿಸಿದ್ದ ಹೆಣ್ಣಾಳುಗಳ ಜೊತೆಗೆ ಪರೋಕ್ಷವಾಗಿ, ನಮಗೆ ಅನ್ನ ನೀಡಲು ಕಾರಣರಾಗಿದ್ದಾಳೆ – ಎಂಬುದನ್ನು ಧನ್ಯತಾಭಾವನೆಯಿಂದ ನೆನೆಯುತ್ತಿದ್ದೇನೆ.

ಈ ಒರಳು ಕೊಟ್ಟಿಗೆ, ಹಲವಾರು ಸ್ಮರಣೆಗಳನ್ನು ಮರುಕಳಿಸುತ್ತಿವೆ. ಬೆಳಗಿನ ಜಾವದಲ್ಲಿ ಹೆಣ್ಣಾಳುಗಳು ಬಂದು ಭತ್ತ ಕುಟ್ಟುತ್ತಿದ್ದರು. ಅವರು ಕೆಲಸ ಮಾಡುತ್ತ, ಬೇಸರ ಕಳೆಯಲು ಹಲವಾರು ಜಾನಪದ ತ್ರಿಪದಿ-ಹಾಡುಗಳನ್ನು ಹಾಡುತ್ತಿರುತ್ತಿದ್ದರು. ಚಿಕ್ಕಂದಿನಲ್ಲಿ ನನಗೆ ಈ ಹಾಡುಗಳ ಮಹತ್ವ ತಿಳಿಯದೆ, ಅವರು ಹಾಡುತ್ತಿದ್ದ ಹಾಡುಗಳು ನನ್ನ ಬೆಳಗಿನ ಜಾವದ ಸುಖ ನಿದ್ರೆಯನ್ನು ಹಾಳು ಮಾಡುತ್ತಿದ್ದಿತ್ತೆಂದು, ಹಾಡುತ್ತಿದ್ದ ಹೆಣ್ಣಾಳುಗಳನ್ನು ಹಳಿಯುತ್ತಿದ್ದೆ. ಹಾಡಿನ ಮಧ್ಯೆ, ಅವರವರೊಳಗೆ ಜಗಳ, ಬೈಗುಳಗಳು, ನನ್ನ ನಿದ್ರಾಭಂಗಕ್ಕೆ, ನನ್ನ ಕೋಪಕ್ಕೆ, ಇನ್ನಷ್ಟು ಕಾರಣವಾಗಿರುತ್ತಿತ್ತು. ಒಮ್ಮೆ ಭತ್ತ ಕುಟ್ಟುತ್ತಿದ್ದ ಚಂದು ಎಂಬವಳನ್ನು ಕರೆದು, `ನಿಮಗೆ ಆ ಅರ್ಥವಿಲ್ಲದ ಹಾಡು ಹೇಳದೆ ಸುಮ್ಮನೆ ಭತ್ತ ಕುಟ್ಟುವುದಕ್ಕಾಗುವುದಿಲ್ಲವೇ..? ಮಧ್ಯೆ ನಿಮ್ಮ ಜಗಳ ಬೇರೆ…! ನನ್ನ ನಿದ್ರೆ ಕೆಡಿಸುವುದೇ ನಿಮ್ಮ ಉದ್ದೇಶವೇ…?’ ಎಂದು ಕಂಪ್ಲೈಂಟ್ ಮಾಡಿದ್ದೆ. ಹಿಂದಿನ ದಿನ ಅವಳು-
ಸುಮ್ಮನೆ ತೊಳಿದರೆ ಗುಮ್ಹಕ್ಕಿ ಹಾಡ್ದ್ಹಾಂಗೆ
ಹಾಡ್ಹೇಳಿ ಬತ್ತು ತೊಳಿದರೆ ಎಲೆ ನಾರಿ
ಬ್ಯಾಸರೊ ಬೆನ್ಹಾಕಿ ಹೋಪುದು
ಎಂದು ಹಾಡಿದ್ದಳು. (ನಮ್ಮಲ್ಲಿ ಭತ್ತ ಕುಟ್ಟುವುದನ್ನು ಭತ್ತ ತುಳಿಯುವುದೆಂದೂ ಹೇಳುತ್ತಾರೆ.) ಮರುದಿನ ನನ್ನ ಕಂಪ್ಲೈಂಟಿಗೆ ಉತ್ತರವಾಗಿ ಮುತ್ತಕ್ಕನೆಂಬ ಇನ್ನೊಬ್ಬ ಹೆಂಗಸಿನ ಜೊತೆಗೆ ಈ ಕೆಳಗಿನ ಹಾಡನ್ನು ಹೆಣೆದು ಹಾಡಿದ್ದಳು:
ಬತ್ತ ಕುಟ್ವಂಗೆ ಹೊತ್ತು ಕಳಿಕೆಂದು
ಮುತ್ತು ಮತ್ ನಾನು ಹಾಡ್ತಿಪ್ಪಂಗೆ ಚಣ್ ಒಡಿಯರ್
ನಿದ್ರಿ ಹೊತ್ತೆಲ್ಲಾ ಹಾಳಯ್ತು
ಇದು ನನ್ನ ಕೋಪವನ್ನು ಇನ್ನಷ್ಟು ಹೆಚ್ಚಿಸಿತ್ತು. ಆದರೆ, ಈಗ ಎಣಿಸುತ್ತಿದ್ದರೆ, ಇಂಥ ಭತ್ತ ಕುಟ್ಟುವಾಗ ಹಾಡು ಹೇಳುತ್ತಿದ್ದ ಚಂದುವಂಥ ಕಲಾವಿದೆಯರೇ ಜನಪದ ಸಾಹಿತ್ಯವನ್ನು ಉಳಿಸಿದ್ದಾರೆಂಬ ಅರಿವಾಗುತ್ತಿದೆ. ಕೆಲವು ವರ್ಷಗಳ ಹಿಂದೆ, ರಜೆಗೆಂದು ಊರಿಗೆ ಹೋದಾಗ, ಈ ಕಲಾವಿದೆ-ಚಂದುವನ್ನು ಭೇಟಿಯಾಗಿದ್ದೆ. ಈಗವಳು ಮುದುಕಿಯಾಗಿದ್ದಾಳೆ. ಮೊದಲಿನ ಲವಲವಿಕೆ ಇರಲಿಲ್ಲ. ಹಳೆಯ ನೆನಪಾಗಿ, `ಚಂದೂ…, ಒಂದ್ ಬತ್ತ ಕುಟ್ಟು ಹಾಡ್ಹೇಳ್ ಕಾಂಬೊ (ನೋಡೋಣ), ಕೇಣ್ದೆ ತುಂಬ ದಿವ್ಸ ಆಯ್ತ್.’ ಎಂದು ಕೇಳಿದೆ. ಅವಳು ಕೊಟ್ಟ ಉತ್ತರ ಸಮಾಜದಲ್ಲಾದ ಬದಲಾವಣೆಯ ಸಂಕೇತವೆಂಬಂತಿತ್ತು: `ನಂಗೀಗ ಆ ಹಾಡೆಲ್ಲ ಮತ್ರ್ಹೋಯ್ತ್ ಒಡೀನೆ. ಈಗಳ್ (ಈಗಿನ ಕಾಲದಲ್ಲಿ) ಹಾಂಗಿದ್ ಹಾಡ್ಹೇಳ್ವರು ಯಾರೂ ಇಲ್ಲೆ, ಅಯ್ಯಾ…. ಎಲ್ಲಾರ್ ಬಾಯಲ್ಲೂ ಸಿನಿಮಾ ಹಾಡು… ಈ ಸಿನಿಮಾ ಬಂದು, ಎಲ್ಲಾ ಹಾಳ್ಮಾಡ್ತು… ಚಲ್-ಚಲ್ (ಹೊಲಸು) ಸಿನಿಮಾ ಕಂಡ್ಕಂಡ್ ಅದ್ರಲ್ಲ ಬಪ್ಪ ಚಲ್ ಹಾಡ್ಗಳೇ ಈಗಿನ್ ಮಕ್ಳಿಗೆ ಖುಷಿ… ಅಲ್ದೆ.., ಈಗಳ್ ಬತ್ತ ಕುಟ್ಟು ಅಬ್ಯಾಸ್ವೇ ಇಲ್ಯಲೆ… ಎಲ್ಲಾರೂ ಮೆಶಿನ್ಗೆ ಅಕ್ಕಿ ಮಾಡೂಕೆ ಕಳ್ಸ್ತ್ರ್… ಪರಪಂಚ ಬದ್ಲಾಯಿತ್ ನಾಗಪ್ಪೈನರೇ…..!’ ಎಂದು ಹೇಳಿದ್ದಳು. ಚಂದುವಂಥ ಅನೇಕರ ಬಾಯಿಂದ ಅದೆಷ್ಟೋ ಜನಪದ ಹಾಡುಗಳನ್ನು ಹಿಂದೆ ಕೇಳಿದ್ದ ನೆನಪಾಗುತ್ತಿದೆ:

ಮುದ್ದು ಹುಡ್ಗೀರ್ ಕಂಡ್ ಕದ್ದು ಗಾಡಿಯ ಬಿಟ್ಟ
ಬಿದ್ದು ಮುಂಗಾಲನ್ನ ಮುರ್ಕಂಡ ತಿಮ್ಮಣ್ಣ
ಇದ್ದ ಮರ್ವಾದೀ ಕಳ್ಕಂಡ
ಗುಡ್ಡಿ ಗುಡ್ಡಿಯ ನುಂಗಿ ಗುಡ್ಡಿ ಹೆಗ್ಗುಳ ನುಂಗಿ
ಗುಡ್ಡಿಗೆ ಹೋದವ್ಳ ಮೊಲ ನುಂಗಿ ಈ ಮನಿ
ದೊಡ್ಡ ತುತ್ತನ್ನೇ ನೆಳ ನುಂಗಿ
ಬತ್ತ ಕುಟ್ಟಿದವ್ಳ್ ಕೈಗೆ ಬಯ್ನಿ ಮುಳ್ಳ್ ಹೆಟ್ಟಿತು
ಮದ್ದಿಗ್ಹೋದ್ ಅಣ್ಣಯ್ಯ ಬರ್ಲಿಲ್ಲೆ ಬಸ್ರೂರ
ಸೂಳಿ ಕಂಡಲ್ಲೇ ಒರ್ಗೀದ

ಗಂಡನ ಬಿಟ್ಟಿಕಿ ಮಿಂಡನ ಮಾಡ್ಕಂಡ್ಳ್
ಆ ರಂಡಿ ಹೆಣ್ ಚಂದು, ಸತ್ತಿಕೂ ಆ ಬಿಂಗ್ರಿಗೆ
ಮಂಡಿ ಸರಿಯಾಪ್ದು ಏಗಳಿಕೆ?

ಕೂಕಣ್ಣಿ ನಂಟರೆ ಕೂಳಿಗೆ ಅಕ್ಕಿಲ್ಲ
ನಾ ಕುಟ್ಟೂ ಅಕ್ಕಿ ನಂದಲ್ಲ ನಂಟರೆ
ಹೊತ್ಕಂತೂ ಒಳ್ಗೇ ಹೊಳೆ ದಾಟಿ

ಬಡವರು ಸತ್ತರೆ ಸುಡುಕೂ ಸೌದಿಲ್ಲೆ
ಒಡ್ಲ ಕಿಚ್ಚೀಲಿ ಹೆಣಬೆಂದೊ ಬಗವಂತಾ
ಬಡವಗೆ ಸಾವು ಇನ್ಯಾಕೆ ?

ಈ ಹಾಡುಗಳನ್ನು ನೆನೆದಾಗ ಮನಸ್ಸು ಅರಳುತ್ತದೆ. ನಮ್ಮ ಮನೆಯ ಒರಳು ಕೊಟ್ಟಿಗೆಯಿಂದ ಇಂಥ ಅದೆಷ್ಟೋ ಹಾಡುಗಳು ಹರಿದು ಬರುತ್ತಿದ್ದುವು. ಆದರೆ, ಈಗ ಅವೆಲ್ಲ ಸ್ಮರಣೆಯಲ್ಲಿ ಮಾತ್ರ! ಚಂದು ಹೇಳಿದಂತೆ-ಪ್ರಪಂಚ ಬದಲಾಗಿದೆ. ಹೌದು, ಸಮಾಜದಲ್ಲಿ ಕಾಲ ಬದಲಾದಂತೆ, ಅದರ ಜೊತೆಗೆ ಅನೇಕ ಬದಲಾವಣೆಗಳಾಗುತ್ತವೆ! ಆದರೆ, ಜನಪದ ಹಾಡುಗಾರ್ತಿಯರ ಕುಶಲ ಕಲೆಯ ಮಹತ್ವ ಮಾಸುತ್ತಿರುವುದು ಒಂದು ವಿಷಾದದ ಸಂಗತಿಯೇ!

ಈ ಒರಳು ಕೊಟ್ಟಿಗೆ ಚಾಚಿ, ಹೊರಗೆ ತೋಟಕ್ಕೆ ಹೋಗಲೊಂದು ಸಣ್ಣ ಬಾಗಿಲು. ಹೊರಗಿನ ತೋಟದಲ್ಲಿ ಐದಾರು ತೆಂಗಿನ ಮರಗಳು, ಚಿಕ್ಕ ಬಾಳೆಯ ತೋಟವಿತ್ತು. ತೋಟದ ಮೂಡು ದಿಕ್ಕಿನಲ್ಲೊಂದು ಹಲಸಿನ ಮರವಿದ್ದುದೂ ಜ್ಞಾಪಕವಾಗುತ್ತಿದೆ. ನಮ್ಮ ತಂದೆ ಅಲ್ಲಿ ನಾಲ್ಕಾರು ಕಸಿ ಮಾವಿನ ಗಿಡಗಳನ್ನು ನಡಿಸಿದ್ದರು. ಅವುಗಳ ಫಲ ಉಂಡ ಸವಿ ನನಗಿನ್ನೂ ನೆನಪಾಗುತ್ತಿದೆ. ಆದರೆ, ಆ ಮಾವಿನ ಮರಗಳು ಈಗ ಮಾಯವಾಗಿವೆ. ಅವು ಎಲ್ಲಿದ್ದುವೆಂಬ ಸುಳಿವೂ ಸಿಗದಷ್ಟು ಜಾಗ ಬದಲಾಗಿದೆ. ಬಾಳೆಯ ತೋಟದ ಹಿಂದೆ ಗದ್ದೆ ಇತ್ತು. ಅದಕ್ಕೂ ಮುಂದೆ ನಾವೆಲ್ಲ ಕರೆಯುತ್ತಿದ್ದ `ಸಣ್ಣ ಹಾಡಿ.’ ಆ ಹಾಡಿ ಯಾರಿಗೆ ಸೇರಿದ್ದು ಎಂಬುದು ನನಗೆ ತಿಳಿದಿಲ್ಲ. ಈಗ ಅಲ್ಲಿದ್ದ ಬಯಲು ಮಾಯವಾಗಿ, ನನ್ನ ತಮ್ಮ ಮಧುಸೂದನನ ತೋಟವಿದೆ. ಸಣ್ಣ ಹಾಡಿಯಲ್ಲಿ ನಾಗಪ್ಪಜ್ಜಯ್ಯ ಎಂಬವರ ಮನೆಯಿತ್ತು ಎಂದು ನೆನಪಾಗುತ್ತಿದೆ. ಈ ನಾಗಪ್ಪಜ್ಜಯ್ಯ, ನಮ್ಮ ದಾಯವಾದಿಗಳಿರಬೇಕು. ಅನಂತ ಐತಾಳರ (ನಮ್ಮ ದಾಯವಾದಿಗಳು) ಸಂಬಂಧಿಕರೆಂದು ಕಾಣಿಸುತ್ತದೆ.

ಈ ನಾಗಪ್ಪಜ್ಜಯ್ಯನನ್ನು ನೆನಪಿಸಿಕೊಂಡಾಗಲೆಲ್ಲ ಚಿಕ್ಕಂದಿನಲ್ಲಿ ನಡೆದ ಒಂದು ಸಂಗತಿ ನೆನಪಾಗುತ್ತಿದೆ. ನಮ್ಮ ಅಕ್ಕ-ನಾಗಕ್ಕ, ಬೇರೆಯವರನ್ನು ತಮಾಷೆ ಮಾಡುವುದರಲ್ಲಿ ಖುಷಿಪಡುತ್ತಿದ್ದಳು. ಒಮ್ಮೆ ಈ ನಾಗಪ್ಪಜ್ಜಯ್ಯ ಅವರ ಮನೆಗೆ ಹೋಗುತ್ತಿದ್ದರು. ನಮ್ಮ ಹೆಬ್ಬಾಗಿಲಿನ ಹೊರಜಗುಲಿಯಲ್ಲಿ ನಾನಿದ್ದೆ. ನಮ್ಮಕ್ಕ ಅಲ್ಲಿಗೆ ಬಂದು, ದೂರದಲ್ಲಿ ನಾಗಪ್ಪಜ್ಜಯ್ಯ ಹೋಗುತ್ತಿರುವುದನ್ನು ನೋಡಿ, ನನ್ನ ಹತ್ತಿರ, `ಮಣೀ…, ಆ ನಾಗಪ್ಪಜ್ಜಯ್ಯನನ್ನು ಕರೆದು – ನಾಗಪ್ಪಜ್ಜಾ… ನೀವು ಜಾಪಾನಿಗೆ ಯಾವಾಗ ಹೋಗ್ತೀರಾ? – ಎಂತ ಗಟ್ಟಿಯಾಗಿ ಮುದುಕರಾದ ಅವರಿಗೆ ಕೇಳುವಂತೆ ಹೇಳು’ ಎಂದು, ಹೇಳಿದಳು. ಜಾಪಾನಿಗೆ ಹೋಗುವುದೆಂದರೆ, ಆಗಿನ ಕಾಲದಲ್ಲಿ ಯುದ್ಧ ನಡೆಯುತ್ತಿದ್ದು, ಜಾಪಾನಿಗೆ ಯುದ್ಧಕ್ಕೆ ಹೋದವರು ವಾಪಾಸು ಬರುವುದಿಲ್ಲವೆಂಬ ಅರ್ಥ; ಅಂದರೆ, ತೀರಿಕೊಳ್ಳುವುದು ಎಂಬರ್ಥ. (ನಮ್ಮ ಚಿಕ್ಕಪ್ಪ ದೇವರ ಪೂಜೆ ಅಜ್ಜಯ್ಯನಿಗೆ ತಮಾಷೆ ಮಾಡಿದ್ದುದು ಈ ಸಂದರ್ಭದಲ್ಲಿ ಜ್ಞಾಪಕವಾಗುತ್ತಿದೆ.) ನಾನು ಹಿಂದು-ಮುಂದು ಯೋಚನೆ ಮಾಡದೆ, ಅಕ್ಕ ಹೇಳಿದ್ದನ್ನು ಕೂಗಿ ಹೇಳಿದೆ. ಪಾಪ! ನನ್ನ ಕೂಗು ಅವರಿಗೆ ಕೇಳಿಸದೆ ಹೋಯ್ತು. ಆದರೆ, ಇದನ್ನು ಕೇಳಿದ ನಮ್ಮ ಮನೆಯ ಹಿರಿಯರೊಬ್ಬರು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲಿ ಸಿಕ್ಕಿಹಾಕೊಂಡವನು ನಾನು; ನಾಗಕ್ಕ ನುಣುಚಿಕೊಂಡಿದ್ದಳು. ನಮ್ಮ ಮನೆಯ ಹೆಬ್ಬಾಗಿಲಿನಿಂದ ನಾಗಪ್ಪಜ್ಜಯ್ಯನ ಮನೆಗೆ ಹೋಗುವ ಓಣಿಯನ್ನು ಕಂಡಾಗಲೆಲ್ಲ, ನಾಗಪ್ಪಜ್ಜಯ್ಯನ ನೆನಪಾಗಿ, ಈ ಪ್ರಕರಣವೂ ಕಾಡುತ್ತದೆ.

ನಮ್ಮ ಹೆಬ್ಬಾಗಿಲಿನ ಹೊರಗೊಂದು ತಗಡು ಚಪ್ಪರವಿತ್ತು. ಮೂಡು ದಿಕ್ಕಿನಲ್ಲಿ, ನಮ್ಮೂರಿಗೆ ಹೊಸದಾಗಿ ಬಂದ ನೀರು ಪಂಪೊಂದು ಇದ್ದುದು ಜ್ಞಾಪಕ. ಅದನ್ನು ಬೇಸಾಯದ ಸಮಯ ನೀರಿನಾಸರೆಯುಳ್ಳ ಗದ್ದೆಗೆ ಸಾಗಿಸುತ್ತಿದ್ದರು. ನಮ್ಮೂರಿಗೆ ಆಗಿನ್ನೂ ಎಲೆಕ್ಟ್ರಿಸಿಟಿ ಬಾರದ ಸಮಯವಾದ್ದರಿಂದ ಅದನ್ನು ತೈಲದ ಮೂಲಕ ಚಲಾಯಿಸುತ್ತಿದ್ದರು.

ಒಳಗೆ ಬಂದಲ್ಲಿ, ನಮ್ಮ ಹೆಬ್ಬಾಗಿಲ ಮುಂದೆ ವಿಶಾಲವಾದ ಅಂಗಳ. ಅಂಗಳದ ಮೂಡು ದಿಕ್ಕಿನಲ್ಲಿ ತುಳಸಿ ಕಟ್ಟೆ. ತುಳಸಿ ಪೂಜೆಯ ಸಮಯ, ನಮ್ಮ ಕಸಿನ್, ಸಾಂಬ ಮತ್ತು ಕುಪ್ಪಣ್ಣಯ್ಯ ಸೇರಿ, ಗೂಡುದೀಪ ತಯಾರಿಸಿ, ಅದರಲ್ಲಿ ದೀಪವಿಟ್ಟು ನಾವೆಲ್ಲ ಸಂತೋಷಪಟ್ಟ ಆ ಚಿಕ್ಕಂದಿನ ದಿನಗಳ ನೆನಪು. ಇಂದಿಗೂ ಆ ಸಮಯ ಭಜನೆ ಮಾಡುತ್ತಿದ್ದುದೂ ನೆನಪಾಗುತ್ತಿದೆ. ಅಂಗಳದ ನೈರುತ್ಯದಲ್ಲಿ ನಮ್ಮ ಮನೆಯ `ಸಂಕೇತ’ವಾಗಿದ್ದ `ಕುತ್ತಟ್ಟ’ವನ್ನು ಒಮ್ಮೆ ನೋಡಿದ ಜ್ಞಾಪಕ. ಅದನ್ನು ನೋಡಿದ್ದುದು ಒಂದೇ ಒಂದು ಬಾರಿ. ಆಮೇಲೆ ಈ ಕುತ್ತಟ್ಟವನ್ನು ರಚಿಸುವ ರೂಢಿಯೇ ನಿಂತುಹೋಯ್ತು. ಅಕ್ಕಿಮುಡಿಗಳನ್ನು ಒಂದು ಪಿರಮಿಡ್ ಆಕಾರದಲ್ಲಿ ಜೋಡಿಸಿ, ಅದರ ಮೇಲೆ ರಕ್ಷಣೆಗೆಂದು ದಪ್ಪವಾಗಿ ಹುಲ್ಲನ್ನು ಹೊದೆಯಿಸುತ್ತಾರೆ. ಈ ಕುತ್ತಟ್ಟದಿಂದಾಗಿ ನಮ್ಮ ಮನೆಯವರ ಹೆಸರಿಗೆ `ಕುತ್ತಾಟದ ಐತಾಳರು’ – ಎಂಬ ಬಿರುದೊಂದು ತಗಲಿಕೊಂಡಿದೆ. ಅಂಗಳದಲ್ಲಿ, ತುಳಸಿಕಟ್ಟೆಯ ಸಮೀಪದಲ್ಲಿ ಎರಡೆರಡು ದೊಡ್ಡ `ತಿರಿ’ಗಳಿರುತ್ತಿದ್ದುವು. ನಮ್ಮ ಮನೆಯವರು ಸಾವಿರ ಮುಡಿ ಹುಟ್ಟುವಳಿದಾರರಾಗಿದ್ದ ಸಮಯ, ಎರಡೆರಡು ತಿರಿಗಳ ಅವಶ್ಯವಿದ್ದಿತ್ತು. ತಿರಿ, ಭತ್ತವನ್ನು ಶೇಖರಿಸುವ ಒಂದು ತಾತ್ಕಾಲಿಕ ಕಣಜ. ಪೈರನ್ನು ಮನೆಗೆ ತಂದು ಹುಲ್ಲಿನಿಂದ ತಿರಿ ನಿರ್ಮಾಣ, ಒಂದು ಜಾನಪದ ಕಲೆಯ ಅಮೋಘ ಕುಶಲತೆಯೆಂದೇ ಹೇಳಬಹುದು. ಸುಮಾರಾಗಿ ವರ್ಷದ ದಶಂಬರ ಸಮಯ, ಈ ಕಣಜದಿಂದ ಅಷ್ಟಷ್ಟೇ ಭತ್ತ ತೆಗೆದು, ಬೇಯಿಸಿ, ಒಣಗಿಸಿ, ಒರಳಿನಲ್ಲಿ ಕುಟ್ಟಿ, ಅಕ್ಕಿ ಮಾಡುತ್ತಾರೆ. ಆ ಅಕ್ಕಿಯನ್ನು `ಮುಡಿ’ಗಳಲ್ಲಿ ಶೇಖರಿಸಿಡುತ್ತಾರೆ. ಈ ಮುಡಿಗಳನ್ನು ತಯಾರಿಸುವ ಕಲೆಯೂ ಒಂದು ಜಾನಪದ ವೈಶಿಷ್ಟ್ಯ. ಹುಲ್ಲಿನ ಒಂದು ಬುಟ್ಟಿಯಾಕಾರದೊಳಗೆ ಅಕ್ಕಿ ತುಂಬಿಸಿ, ಅದನ್ನು ಹುಲ್ಲಿಂದಲೇ ಮಾಡಿದ ಹಗ್ಗಗಳಿಂದ ಸುತ್ತಿ ಭದ್ರತೆ ಕೊಡುತ್ತಾರೆ.

ನಮ್ಮ ಹೆಬ್ಬಾಗಿಲನ್ನು ದಾಟಿ ಒಳಕ್ಕೆ ಬಂದಾಗ ಎರಡು ಎತ್ತರದ ಜಗುಲಿ – ಒಂದು ಪಶ್ಚಿಮದಲ್ಲಿ, ಇನ್ನೊಂದು ಪೂರ್ವದಲ್ಲಿ – ನಮ್ಮ ಹೆಬ್ಬಾಗಿಲಿನ ವೈಶಿಷ್ಟ್ಯ. ಅವುಗಳಲ್ಲಿ ಪಶ್ಚಿಮದಲ್ಲಿದ್ದುದನ್ನು ಅತಿಥಿಗಳು ಬಂದಾಗ ಉಪಯೋಗಿಸುತ್ತಾರೆ. ಆದರೆ, ಅಲ್ಲಿ ಯಾವ ಪೀಠೋಪಕರಣಗಳು ಇದ್ದಿರಲಿಲ್ಲ. ಪ್ರಾಯಶಃ ಚಾಪೆ, ಜಮಖಾನಗಳನ್ನು ಹಾಸಿಡುತ್ತಿದ್ದರೆಂದು ಎಣಿಸುತ್ತೇನೆ. ಕುರ್ಚಿ ಮೇಜು ಈ ಜಗುಲಿಯ ಕೆಳಗೆ ಪಶ್ಚಿಮದಲ್ಲಿಟ್ಟಿದ್ದನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅಲ್ಲಿ ನಮ್ಮ ತಂದೆಯವರು ಹಿಂದೂ ಪೇಪರನ್ನು ಓದುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟುತ್ತಿದೆ. ಇನ್ನು ಹೆಬ್ಬಾಗಿಲ ಪೂರ್ವ ಜಗುಲಿಯಲ್ಲಿ ಒಮ್ಮೆ ನಮ್ಮ ಮನೆಯ, ಎತ್ತುಗಳನ್ನುಪಯೋಗಿಸಿ ಓಡಿಸುತ್ತಿರುವ ಸಾರೋಟನ್ನು ಇಟ್ಟಿದ್ದ ನೆನಪು. ಈ ಸಾರೋಟು, ಹೆಬ್ಬಾಗಿಲಿನ ಪಾಲು. ನನ್ನ ತಮ್ಮ, ಮಧುಸೂದನನ ಪಾಲಿಗೆ ಹೋದಾಗ, ಅವನು ಆ ಜಾಗದಲ್ಲಿ ಒಂದು ನಾಜೂಕಿನ ಮನೆ ಕಟ್ಟಿಸುವಾಗ ಅಳಿದು ಕಡೆವರೆಗೂ ಇತ್ತು. ಆದರೆ, ಸಾರೋಟಿನ ಅವಸ್ಥೆ ಮುಂದೇನಾಯ್ತು ಎಂಬುದು ನನಗೆ ತಿಳಿಯದು. ಹಿಂದೆ, ಆ ಜಗುಲಿ, ನಮ್ಮಲ್ಲಿ ದೂರದಿಂದ ಶಾಲೆಗೆ ಬರುತ್ತಿದ್ದ ಕೆಲವು ವಿದ್ಯಾರ್ಥಿಗಳಿಗೆ ಆಶ್ರಯ ಕೊಡುತ್ತಿತ್ತು. ಅಂಥ ವಿದ್ಯಾರ್ಥಿಗಳಲ್ಲಿ, ಹಂಡಿಕೆರೆಯಿಂದ ಬರುತ್ತಿದ್ದ ಮಾಬ್ಲ, ಒಳಗಿಳಿಯಾರಿನಿಂದ ಬರುತ್ತಿದ್ದ, ರಾಜು ಎಂಬವ – ಜ್ಞಾಪಕವಾಗುತ್ತಿದೆ. ಈ ಮಾಬ್ಲ ನನ್ನ ಸಹಪಾಠಿಯೂ ಆಗಿದ್ದ. ಮೂಡು ಬದಿಯ ಜಗುಲಿಯ ಕೆಳಗೆ ಅಕ್ಕಿ ಮುಡಿ ಕಟ್ಟುತ್ತಿದ್ದ ನೆನಪು ಸದಾ ಬರುತ್ತಿರುತ್ತದೆ.

ಮುಡಿ ಕಟ್ಟಲು ಬರುತ್ತಿದ್ದ ಸೂರ, ಅವನ ಮಗ ಕಾಳ – ಇವರ ನೆನಪು ನನಗೆ ಆಗಾಗ. ಈ ಕಾಳ, ಶಾಲೆಯಲ್ಲಿ 2-3ನೇ ತರಗತಿಯಲ್ಲಿ ಓದಿದ್ದ. ಆದರೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಆರ್ಥಿಕ ಪರಿಸ್ಥಿತಿ ಚೆನ್ನಾಗಿರದಿದ್ದು ತಂದೆಯ ಜೊತೆಗೆ ಮುಡಿ ಕಟ್ಟಲು ಹೊರಟಿದ್ದ. ಕಾಳ ಸ್ವಲ್ಪ ಓದಿದ್ದ. ಹಾಗಾಗಿ ಸಾಕಷ್ಟು ಬರೆಯಲು, ಓದಲೂ ಬರುತ್ತಿತ್ತು. ಅವನು ಬಂದಾಗಲೆಲ್ಲ ನಾನು ಮುಡಿ ಕಟ್ಟುವಲ್ಲಿ ಹೋಗಿ ಕುಳಿತು, ಅವನೊಡನೆ ಚಕ್ಕಂದವಾಡುತ್ತಿದ್ದೆ. ಅವನು ಹೇಳುವ ಹಲವಾರು ಕುತೂಹಲ ಕತೆಗಳು ನನ್ನನ್ನು ಆಕರ್ಷಿಸುತ್ತಿತ್ತು. ಇದರಿಂದಾಗಿ, ಹಲವು ಬಾರಿ ಹಿರಿಯವರಿಂದ ಬೈಸಿಕೊಳ್ಳುತ್ತಲೂ ಇದ್ದೆ. `ನೀನು ಸುಮ್ನೆ ಅವನ್ಹತ್ರ ಚಕ್ಕಂದ ಆಡ್ತಾ ಅವ್ನ ಕೆಲ್ಸಕ್ಕೆ ತೊಂದ್ರೆ ಕೊಡ್ತಿದ್ದೀಯಾ… ಓದ್ಕೋ ಹೋಗು, ಒಳ್ಗೆ….’ ಎಂದು ನನ್ನನ್ನು ಅಲ್ಲಿಂದ ಅಟ್ಟಿಸುತ್ತಿದ್ದರು. ಒಮ್ಮೆ ಅಂವ ಹೇಳಿದ್ದ, `ಮಾಣೀ… ನೀ ಶಾಲಿಗ್ಹೋಯಿ ಕಿಸ್ತದ್ ಎಷ್ಟ್ ಕಾಂಬೊ… ಒಂದ್ ಸಿಲೇಟ್ (ಸ್ಲೇಟ್) ತೆಕಬಾ (ತೆಗೆದುಕೊಂಡು ಬಾ). ನಾ ಹೇಳಿದ್ದನ್ ಬರಿ….’ ಎಂದು ಹೇಳಿ. ನನ್ನಿಂದ ಈ ರೀತಿ ಬರೆಯಿಸಿದ್ದ:

`ದಡಿಕುವದರೆಬಚ್ಚೆಉನವದಳಿಹೇಯರೆಬ’
ನಾನು ಸ್ಲೇಟಲ್ಲಿ ಹಾಗಿ ಬರೆದ ಮೇಲೆ `ಈಗಳ್ ಅದನ್ನ ತಿರ್ಗಾ-ಮುರ್ಗಾ ಬರಿ ಕಾಂಬೋ’ ಎಂದ. ನಾನು ಬರೆಯಲು ಹೊರಟಿದ್ದೆ. ಅಷ್ಟರಲ್ಲಿ ಮನೆಯವರು ನನ್ನನ್ನು ಬಯ್ದು ಅಲ್ಲಿಂದ ಅಟ್ಟಿಸಿದ್ದರು. ನಾನು ಒಳಗೆ ಬಂದು ಅವನು ಹೇಳಿದ್ದನ್ನು ಉಲ್ಟಾ ಬರೆದಾಗ ನನಗೆ ಆಶ್ಚರ್ಯವಾಗಿತ್ತು ಹಾಗೂ ಅವಮಾನವೂ ಆಗಿತ್ತು. ಅವನ ಹಾಸ್ಯಪ್ರಜ್ಞೆಯನ್ನು ಈಗಲೂ ನಾನು ಮನಸಾರೆ ಮೆಚ್ಚುತ್ತಿದ್ದೇನೆ. ಶಾಲೆಯಲ್ಲಿ ನಾನು `ಕಿಸ್ತಿದ್ದನ್ನು’ ಅವನು ನನಗೆ ಅವನದೇ ಹಾಸ್ಯಪ್ರಜ್ಞೆಯಿಂದ ತೋರಿಸಿಕೊಟ್ಟಿದ್ದ. ಈಗ ಈ ಕಾಳ ಎಲ್ಲಿದ್ದಾನೆಂಬುದೇ ನನಗೆ ತಿಳಿದಿಲ್ಲ. ಅವನನ್ನು ಪುನಃ ಭೇಟಿ ಮಾಡಿದಲ್ಲಿ, ನಾನು ಅಮೆರಿಕಕ್ಕೆ ಬಂದು `ಕಿಸ್ತಿದ್ದುದನ್ನು’ ಅವನಿಗೆ ತೋರಿಸಬಹುದಾಗಿತ್ತೇನೋ!

ಹೆಬ್ಬಾಗಿಲ ಜಗುಲಿಯ ಕೆಳಗಿನ ಸ್ಥಳದಲ್ಲಿ, ಆಗಾಗ ಹೋಮ ಕಾರ್ಯಗಳು ನಡೆಯುತ್ತಿದ್ದದರ ನೆನಪಾಗುತ್ತಿದೆ. ಮೊದಲು ಅಲ್ಲಿ ತಗಡು ಚಪ್ಪರವಿರುತ್ತಿತ್ತು. ಆದರೆ ಕ್ರಮೇಣ, ಹೆಂಚಿನ ಮಾಡು, ತಗಡು ಚಪ್ಪರವನ್ನು ಬದಲಿಸಿದೆ.

ನಮ್ಮ ಮನೆಗೆ ಎರಡೆರಡು ಉಪ್ಪರಿಗೆಗಳಿದ್ದುವು. ಈಗಲೂ ಇವೆ. ಒಂದು, `ದೊಡ್ಡ ಉಪ್ಪರಿಗೆ,’ ಮುಖ್ಯ ಚಾವಡಿಯ ಮೇಲೆ. ಇನ್ನೊಂದು, `ಸಣ್ಣ ಉಪ್ಪರಿಗೆ’ ಪಡುಚಾವಡಿಯ ಮೇಲೆ. ಸಣ್ಣ ಉಪ್ಪರಿಗೆಯನ್ನು ನಾವೆಲ್ಲ ಒಟ್ಟಿಗಿದ್ದಾಗ, ಕುಪ್ಪಣ್ಣಯ್ಯ (ನಮ್ಮ ಚಿಕ್ಕಪ್ಪನ ಮಗ) ಮತ್ತು ಅವನ ಹೆಂಡತಿ, ಮಲಗುವ ಕೋಣೆಯನ್ನಾಗಿ ಉಪಯೋಗಿಸುತ್ತಿದ್ದರು. ದೊಡ್ಡ ಉಪ್ಪರಿಗೆಯಲ್ಲಿ ನಮ್ಮ ಕಸಿನ್ ಸಾಂಬ ದಂಪತಿ ತಮ್ಮ ಶಯನಗೃಹವಾಗಿ ಒಂದಷ್ಟು ಕಾಲ ಉಪಯೋಗಿಸುತ್ತಿದ್ದರು. ದೊಡ್ಡ ಉಪ್ಪರಿಗೆ ವಿಶಾಲವಾಗಿದ್ದು, ಭೋಜನಕ್ಕೆ ಸುಮಾರು 50 ಮಂದಿ ಕೂರಬಹುದಾಗಿತ್ತು. ವಿಶೇಷ ದಿನಗಳಲ್ಲಿ ಅಲ್ಲಿ ಊಟದ ವ್ಯವಸ್ಥೆ ನಡೆಯುತ್ತಿತ್ತು. ಅದಕ್ಕೆ ತಗುಲಿಕೊಂಡು ಪೂರ್ವದಲ್ಲಿ ಒಂದು ಕೋಣೆಯೂ ಇದ್ದಿತ್ತು. ನಮ್ಮ ತಂದೆ-ಚಿಕ್ಕಪ್ಪರಲ್ಲಿ ಪಾಲಾದ ಮೇಲೆ ಈ ಕೋಣೆಯನ್ನು ನಮ್ಮಣ್ಣ ದಂಪತಿ ಬೆಡ್‍ರೂಮಾಗಿ ಉಪಯೋಗಿಸುತ್ತಿದ್ದರು. ಈ ಬೆಡ್‍ರೂಮಿನ ಕೆಳಗಿರುವುದೇ `ಪುಟ್ಟಮ್ಮನ ಕೋಣೆ.’

ಬಾಲ್ಯದಲ್ಲಿ ಕಂಡ, ಅನುಭವಿಸಿದ ನಮ್ಮ ಮನೆಯ ಹಿಂದಿನ ವಿನ್ಯಾಸವನ್ನು ಎಣಿಸಿದಾಗಲೆಲ್ಲ ಬಾಲ್ಯದ ಕಡೆಗೆ ನನ್ನನ್ನು ಕೊಂಡೊಯ್ಯುತ್ತದೆ. ಆ ಸ್ಮರಣೆಗಳು ನನ್ನ ಹೃದಯವನ್ನು ಹಿಗ್ಗಿಸುತ್ತದೆ. ಅಹಾ! ಎಂಥ ದಿನಗಳವು! ಅವು ಮತ್ತೆ ಬರಲಾರದೆಂಬ ಅರಿವಾದಾಗಲೆಲ್ಲ, ನನ್ನ ಹೃದಯ ಕುಗ್ಗುತ್ತದೆ. ಈ ಸಂದರ್ಭದಲ್ಲಿ ಪುತಿನ ಅವರ ಮಾತೊಂದು ಜ್ಞಾಪಕವಾಗುತ್ತದೆ:

`ಹಳೆಯ ಕನಸುಗಳೆಷ್ಟು ಸವಿಯು!
ಕಳೆದ ಸುಖವು `ಕನಸು’ ಎನುತ
ತಿಳಿಯಲೆಷ್ಟು ನೋವು!’
ಆ ಸುಖದ `ನೋವಿನೊಡಲ ಬೇಗೆ’ಯೂ ಒಂದು ರೀತಿಯ ಸುಖಾನುಭವವನ್ನೇ ನನಗೀಗ ನೀಡುತ್ತಿದೆ.