ಮಾನವ ಸಹಜವಾಗಿ ಸೆಕ್ಯೂಲರ್ ಆಗಿರುತ್ತಾನೆ. ಆದರೆ ಅವನನ್ನು ಪ್ರಜ್ಞಾಪೂರ್ವಕವಾಗಿ ಕಮ್ಯೂನಲ್ ಮಾಡಿದರೂ ಅದು ಬಹಳದಿನ ಬಾಳಿಕೆ ಬರುವುದಿಲ್ಲ. ಮತ್ತೆ ಮತ್ತೆ ಜನ ಸಹಜತೆಯನ್ನು ಬಯಸುತ್ತಲೇ ಇರುತ್ತಾರೆ. ಹೀಗಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಆಟ ನಿರಂತರವಾಗಿ ನಡೆಯುವುದಿಲ್ಲ. ಜನರು ವಿವಿಧ ಜಾತಿ ಮತ್ತು ಧರ್ಮಗಳ ಚೌಕಟ್ಟಿನಲ್ಲಿ ಸಿಲುಕಿದ್ದರೂ ದೈನಂದಿನ ಬದುಕಲ್ಲಿ ಇವೆಲ್ಲವುಗಳನ್ನು ಮೀರಿದವರೇ ಆಗಿರುತ್ತಾರೆ. ಸರ್ವಧರ್ಮ ಸಮಭಾವ ಅವರ ಸಹಜ ಗುಣ ಆಗಿರುತ್ತದೆ ಎಂದು ಅಭಿಪ್ರಾಯಪಡುವ ರಂಜಾನ್ ದರ್ಗಾ ‘ನೆನಪಾದಾಗಲೆಲ್ಲ ‘ ಸರಣಿಯ  20ನೇ ಕಂತಿನಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಅನಾವರಣಗೊಳಿಸಿದ್ದಾರೆ.

 

ನಾನು ಬಾಲಕನಾಗಿದ್ದಾಗ ವಿಜಾಪುರದ ನಾವಿಗಲ್ಲಿಯ ಕಾಕಾ ಕಾರಖಾನೀಸರ ಬೋರ್ಡಿಂಗಲ್ಲಿ ಒಮ್ಮೆ ನನ್ನ ಕಣ್ಣ ಮುಂದೆಯೆ ಹುಡುಗರ ಮಧ್ಯೆ ಜಗಳಾಟವಾಯಿತು. ಆಗ ಒಬ್ಬ ಹುಡುಗನ ತಲೆ ಒಡೆಯಿತು. ಆತ ಸೋರಿದ ರಕ್ತವನ್ನು ಒರಸಿಕೊಳ್ಳದೆ ಕಾಕಾರಿಗೆ ತೋರಿಸಲು ಗೋಡಬೋಲೆಮಳಾ ಕಡೆ ನಡೆದ. ಆತನಿಗೆ ಬೆಂಬಲ ವ್ಯಕ್ತಪಡಿಸಿದ ಬಹಳಷ್ಟು ಹುಡುಗರು ಕೂಡ ಜೊತೆಗೂಡಿ ನಡೆದರು. ನಾನೂ ಹಿಂಬಾಲಿಸಿದೆ. ಅವರ ಮನೆ ತಲುಪಿದೆವು. ಹಾಸ್ಟೇಲಿನ ಮೇಲ್ವಿಚಾರಕರಾಗಿದ್ದ ದೀಕ್ಷಿತ ಅಣ್ಣಾ ಅವರು ಕೂಡ ಹುಡುಗರ ಜೊತೆ ಬಂದಿದ್ದರು.

ಕಾಕಾ ಅವರು ತಮ್ಮ ಆಪ್ತ ಕೆ.ಆರ್. ಸಂಕದ ಅವರ ಜೊತೆ ಕೆಳಗೆ ಇಳಿದು ಬಂದರು. ಮೃದು ಸ್ವಭಾವದ ಕಾಕಾ ಇಂಥ ಪ್ರಸಂಗಗಳಲ್ಲಿ ಕೋಪ ತಾಪ ಮಾಡಿಕೊಳ್ಳುತ್ತಿದ್ದರು. ‘ಆ ಹುಡುಗನಿಗೆ ಎಚ್ಚರಿಕೆ ಕೊಡಬೇಕು ಮತ್ತು ಎರಡು ದಿನ ಊಟ ಕೊಡಬಾರದು’ ಎಂದು ಮುಂತಾಗಿ ಆದೇಶಿಸಿದರು. ಹೊಡೆಸಿಕೊಂಡ ಹುಡುಗನಿಗೆ ಸಮಾಧಾನ ಹೇಳಿ ವೈದ್ಯರ ವ್ಯವಸ್ಥೆ ಮಾಡಿದರು. ಆ ತಪ್ಪಿತಸ್ಥ ಹುಡುಗನಿಗೆ ಎರಡು ದಿನ ಬೋರ್ಡಿಂಗ್ ಊಟ ತಪ್ಪಿದ ವೇಳೆ ಅವರೂ ಉಪವಾಸವಿದ್ದರು ಎಂಬುದು ಸ್ವಲ್ಪ ದಿನಗಳ ನಂತರ ಹಾಸ್ಟೆಲ್ ಹುಡುಗರಿಗೆ ಗೊತ್ತಾಯಿತು.

ಈ ಘಟನೆ ಕುರಿತು ಒಂದಿಷ್ಟು ವಿಚಾರಿಸಲು ವಿಜಾಪುರದಲ್ಲಿರುವ ಎಂಬತ್ತು ದಾಟಿದ ವಯೋವೃದ್ಧರಾದ ಕೆ.ಆರ್. ಸಂಕದ ಸರ್ ಅವರಿಗೆ ಧಾರವಾಡದಿಂದ ಇತ್ತೀಚೆಗೆ ಫೋನ್ ಮಾಡಿದ್ದೆ. 1959 ರಿಂದ ಕಾಕಾ ನಿಧನರಾಗುವ ಕೊನೆಯ ಕ್ಷಣದ ವರೆಗೂ ಸಂಕದ ಆಪ್ತರಾಗಿದ್ದವರು. ವಿಜಾಪುರದ ಗೋಡಬೋಲೆಮಳಾದಲ್ಲಿರುವ ಅವರ ಮನೆತನಕ್ಕೆ ಸಂಬಂಧಿಸಿದ ಆಸ್ತಿಯನ್ನು ಸಂಕದ ಇಂದಿಗೂ ನಿಷ್ಠಾವಂತರಾಗಿ ನೋಡಿಕೊಳ್ಳುತ್ತಿದ್ದಾರೆ. ‘ಹುಡುಗರು ಬಹಳ ಸಲ ಜಗಳಾಡುತ್ತಿದ್ದರು. ಇಂಥ ಘಟನೆಗಳು ಕೂಡ ಅನೇಕ ಆಗಿವೆ. ಹೇಗೆ ನೆನಪಿಡಲು ಸಾಧ್ಯ’ ಎಂದು ಅವರು ನಕ್ಕರು.

ಕಾಕಾ ಕಾರಖಾನೀಸರು ತಮ್ಮ ಸಮಾಜೋದ್ಧಾರದ ಕಾರ್ಯಗಳಲ್ಲಿ ಅನೇಕ ಪ್ರಶ್ನೆಗಳನ್ನು ಎದುರಿಸಿದರು. ಒಂದು ಸಲ ಹದಿಹರೆಯದ ಇಬ್ಬರು ದೇವದಾಸಿಯರು ಬಂದರು. ಶಿಕ್ಷಣ ಕಲಿಯುವ ಆಸೆ ವ್ಯಕ್ತಪಡಿಸಿದರು. ಕನ್ಯಾಮಂದಿರದಲ್ಲಿ ಪ್ರವೇಶ ಬಯಸಿದರು. ‘ಪ್ರವೇಶ ಕೊಡುವುದು ಸಾಧ್ಯವಾಗದು’ ಎಂಬುದರ ಬಗ್ಗೆ ತಿಳಿಸಿ ಹೇಳಿದರು. “ನಮ್ಮಂಥವರಿಗೆ ಪಶ್ಚಾತ್ತಾಪ ಪಡಲಿಕ್ಕೂ ಆಸ್ಪದ ಇಲ್ಲವೇನ್ರೀ ಕಾಕಾ?” ಎಂದು ಒಬ್ಬ ಯುವತಿ ಕೇಳಿದಳು. ದೇಶದ ಚರಿತ್ರೆಯಲ್ಲೇ ಇಂಥ ಪ್ರಶ್ನೆಯನ್ನು ಯಾವುದೇ ವ್ಯಕ್ತಿ ಎದುರಿಸಿರಲಿಲ್ಲ. ಈ ನೇರ ಪ್ರಶ್ನೆ ಅವರ ಅಂತಃಕರಣವನ್ನು ಕಲಕಿತು. ಎರಡು ದಿನ ವಿಚಾರ ಮಾಡಿ ತಿಳಿಸುವುದಾಗಿ ಆ ಯುವತಿಯರನ್ನು ಕಳುಹಿಸಿಕೊಟ್ಟರು. ಸಮಾಜದ ಎಲ್ಲ ವಿರೋಧಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ ಅವರನ್ನು ಕನ್ಯಾಮಂದಿರಕ್ಕೆ ಸೇರಿಸಿಕೊಂಡರು. ಈ ವಿಚಾರವನ್ನು ಅಲ್ಲಪ್ಪ ಅವುಡಿಯವರು ವಿವರವಾಗಿ ದಾಖಲಿಸಿದ್ದಾರೆ.
ಮುಂದೆ ಅನೇಕ ದೇವದಾಸಿ ಯುವತಿಯರು ಕನ್ಯಾಮಂದಿರ ಸೇರತೊಡಗಿದರು. ಆಗ ಅವರ ಪಾಲಕರು ವಿರೋಧ ವ್ಯಕ್ತಪಡಿಸಿದ್ದೂ ಉಂಟು. ಏಕೆಂದರೆ ಅವರ ಹೆಣ್ಣುಮಕ್ಕಳು ದೇವದಾಸಿಯರಾಗುವುದರಿಂದ ಬರುವ ಹಣದಲ್ಲಿ ಬದುಕುವ ಬಯಕೆ ಅವರದಾಗಿತ್ತು. ಹೀಗೆ ಎಲ್ಲ ರೀತಿಯ ಅಡೆತಡೆಗಳನ್ನು ಎದುರಿಸುತ್ತ ಕಾಕಾ ಕಾರಖಾನೀಸರು ತಮ್ಮ ಗುರಿಯನ್ನು ತಲುಪಿದರು.

(ವಯೋವೃದ್ಧೆಯಾಗಿ ಅಸಹಾಯಕ ಪರಿಸ್ಥಿತಿಯಲ್ಲಿರುವ ದೇವದಾಸಿ ಮಹಿಳೆ)

ಹದಿಹರೆಯದ ಇಬ್ಬರು ದೇವದಾಸಿಯರು ಬಂದರು. ಶಿಕ್ಷಣ ಕಲಿಯುವ ಆಸೆ ವ್ಯಕ್ತಪಡಿಸಿದರು. ಕನ್ಯಾಮಂದಿರದಲ್ಲಿ ಪ್ರವೇಶ ಬಯಸಿದರು. ‘ಪ್ರವೇಶ ಕೊಡುವುದು ಸಾಧ್ಯವಾಗದು’ ಎಂಬುದರ ಬಗ್ಗೆ ತಿಳಿಸಿ ಹೇಳಿದರು. “ನಮ್ಮಂಥವರಿಗೆ ಪಶ್ಚಾತ್ತಾಪ ಪಡಲಿಕ್ಕೂ ಆಸ್ಪದ ಇಲ್ಲವೇನ್ರೀ ಕಾಕಾ?” ಎಂದು ಒಬ್ಬ ಯುವತಿ ಕೇಳಿದಳು. ದೇಶದ ಚರಿತ್ರೆಯಲ್ಲೇ ಇಂಥ ಪ್ರಶ್ನೆಯನ್ನು ಯಾವುದೇ ವ್ಯಕ್ತಿ ಎದುರಿಸಿರಲಿಲ್ಲ. ಈ ನೇರ ಪ್ರಶ್ನೆ ಅವರ ಅಂತಃಕರಣವನ್ನು ಕಲಕಿತು.

ದೇವದಾಸಿಯರಿಗೆ ಅವರ ಯೌವನ ಇರುವವರೆಗೆ ಬೆಲೆ ಇರುತ್ತದೆ. ನಂತರ ಅವರು ಹೊಟ್ಟೆಪಾಡಿಗಾಗಿ ಎಲ್ಲಮ್ಮ ದೇವಿಯ ಹಡಲಿಗೆ ಹೊತ್ತುಕೊಂಡು ತಿರುಗುತ್ತಾರೆ. ಮುಪ್ಪು ಆವರಿಸಿದ ಮೇಲೆ ಅವರನ್ನು ಕೇಳುವವರು ಯಾರೂ ಇರುವುದಿಲ್ಲ. ಆಗ ಅಸಹಾಯಕ ಬದುಕು ಅನಿವಾರ್ಯವಾಗುತ್ತದೆ. ಇಂಥ ದುರಂತ ಸ್ಥಿತಿಗೆ ಇಳಿಯದೇ ದೇವದಾಸಿ ಪದ್ಧತಿಯಿಂದ ವಿಮೋಚನೆಗೊಂಡು ಬದುಕುವ ಕಲೆಯನ್ನು ಅವರು ಕಲಿಯಬೇಕಾಗುತ್ತದೆ. ಅದಕ್ಕಾಗಿ ಶಿಕ್ಷಣ ಮತ್ತು ಕಾಯಕ ಅವಶ್ಯಕವಾಗಿರುತ್ತದೆ. ಇಂಥ ಮಹಿಳೆಯರಿಗಾಗಿ ಕಾಕಾ ಕಾರಖಾನೀಸರು ಕನ್ಯಾಮಂದಿರದ ಜೊತೆ ‘ಅಹಲ್ಯೋದ್ಧಾರ ಮಂದಿರ’ವನ್ನೂ ಸ್ಥಾಪನೆ ಮಾಡಿದರು. (ಇಂದು ಅನೇಕ ಸಂಘಟನೆಗಳು ದೇವದಾಸಿ ಪದ್ಧತಿ ವಿರುದ್ಧ ಜನಜಾಗೃತಿ ಮೂಡಿಸಿವೆ. ಸರ್ಕಾರಗಳು ಕೂಡ ಅವರಿಗೆ ಸಹಾಯಹಸ್ತ ಚಾಚಿ ಹೊಸ ಬದುಕಿಗೆ ಒಂದಿಷ್ಟು ದಾರಿಮಾಡಿಕೊಡುತ್ತಿವೆ. ಹೀಗಾಗಿ ಅನೇಕ ದೇವದಾಸಿಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಅವರ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕಾಕಾರ ನಂತರ, ಕಳೆದ ದಶಕಗಳಲ್ಲಿ ಬಿ.ಎಲ್. ಪಾಟೀಲರು ವಿಮೋಚನಾ ಸಂಸ್ಥೆ ಸ್ಥಾಪಿಸಿ ದೇವದಾಸಿಯರ ಮಕ್ಕಳಿಗೆ ದೇಶದಲ್ಲೇ ಪ್ರಥಮ ಬಾರಿಗೆ ಬೋರ್ಡಿಂಗ್ ಸ್ಕೂಲ್, ಕಾಲೇಜು ವ್ಯವಸ್ಥೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.)

ನಾವಿಗಲ್ಲಿಯಲ್ಲಿ ಹುಡುಗರಿಗಾಗಿ ಇದ್ದ ಕಾಕಾರ ಬೋರ್ಡಿಂಗ್‌ನಲ್ಲಿ ಅಡುಗೆ ಮಾಡುವ ದಲಿತ ಹೆಣ್ಣುಮಗಳೊಬ್ಬಳು ಬಹಳ ಶಾಂತ ಸ್ವಭಾವದವಳಾಗಿದ್ದಳು. ಕಟ್ಟಿಗೆ ಒಲೆಯಲ್ಲಿ ಅವಳು ರೊಟ್ಟಿ ಬಡಿಯುವುದನ್ನು ನೋಡಿ ನನಗಂತೂ ಬಹಳ ಕನಿಕರ ಎನಿಸುತ್ತಿತ್ತು. ಕನಿಷ್ಠ ಕೂಲಿಯ ಗರಿಷ್ಠ ದುಡಿಮೆ ಅದಾಗಿತ್ತು. ಒಂದು ದಿನವೂ ಬೇಸರವಿಲ್ಲದೆ ಕರ್ತವ್ಯ ಪಾಲನೆ ಮಾಡುತ್ತಿದ್ದಳು. ನಾನು ತಂಬಿಗೆ ಒಯ್ದು ಕೆಂಡ ಹಾಕಲು ಹೇಳುತ್ತಿದ್ದೆ. ಅವಳು ತಾಯಿಯಂತೆ ಪ್ರೀತಿಯಿಂದ ತಂಬಿಗೆಗೆ ಕೆಂಡ ತುಂಬಿ ಕೊಡುತ್ತಿದ್ದಳು. ಆ ತಂಬಿಗೆಯೆ ನನ್ನ ಇಸ್ತ್ರೀ ಪೆಟ್ಟಿಗೆ. ಅದರಿಂದ ನನ್ನ ಟೊಪ್ಪಿಗೆ, ಅಂಗಿ ಮತ್ತು ಚಡ್ಡಿಯನ್ನು ಇಸ್ತ್ರೀ ಮಾಡುತ್ತಿದ್ದೆ. ಇದಕ್ಕೂ ಮೊದಲು ನನ್ನ ತಲೆದಿಂಬೇ ಇಸ್ತ್ರೀಯ ಕೆಲಸ ಮಾಡುತ್ತಿತ್ತು. ಆಗಸ್ಟ್ ಪಂದ್ರಾ, ಗಣರಾಜ್ಯೋತ್ಸವ, ಗಾಂಧೀ ಜಯಂತಿ ಮತ್ತು ಮಕ್ಕಳ ದಿನಾಚರಣೆ ನಮಗೆಲ್ಲ ಬಹಳ ಮಹತ್ವದ ದಿನಗಳಾಗಿದ್ದವು. ಈ ಶುಭದಿನಗಳಲ್ಲಿ ಬೆಳಿಗ್ಗೆ ಬೇಗ ಶಿಸ್ತಿನಿಂದ ಹೋಗಿ ಈ ಉತ್ಸವಗಳಲ್ಲಿ ಪಾಲ್ಗೊಳ್ಳುವುದು ಬಹಳ ಖುಷಿ ಕೊಡುವಂಥದ್ದಾಗಿತ್ತು. ಹಿಂದಿನ ರಾತ್ರಿ ಚಡ್ಡಿ, ಅಂಗಿ ಮತ್ತು ಗಾಂಧಿ ಟೊಪ್ಪಿಗೆಯನ್ನು ನೀಟಾಗಿ ಮಡಚಿ ತಲೆದಿಂಬಿನ ಕೆಳಗೆ ಇಟ್ಟು ಮಲಗುವುದು. ರಾತ್ರಿ ಎಚ್ಚರಾದಾಗಲೆಲ್ಲ ತಲೆದಿಂಬು ಸರಿಸಿ, ಅದು ಇಸ್ತ್ರಿಯ ಕೆಲಸ ಮಾಡಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುವುದು. ಹೀಗೆ ನಮ್ಮ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ.

ಒಂದು ರಾತ್ರಿ ಎಚ್ಚರಾದಾಗ ಚಿಮಣಿ ಹಚ್ಚಿ ಟೊಪ್ಪಿಗೆ ಇಸ್ತ್ರೀ ಆಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿದೆ. ನಂತರ ನಿದ್ದೆಗಣ್ಣಲ್ಲಿ ಹಾಗೇ ಮಲಗಬೇಕೆನ್ನುವಾಗ ತಂದೆಗೆ ಎಚ್ಚರವಾಗಿ ‘ದೀಪ ಶಾಂತ ಮಾಡು’ ಎಂದರು. ನನಗೆ ಅರ್ಥವಾಗಲಿಲ್ಲ. ಮತ್ತೆ ಹೇಳಿದರು. ತಿಳಿಯಲಿಲ್ಲ. ಕೊನೆಗೆ ತಾವೇ ಬಂದು ಚಿಮಣಿ ಆರಿಸಿದರು. ಭಾಷೆ ಬರೀ ಸಂವಹನದ ಮಾಧ್ಯಮವಾಗಿರದೆ ಸಂಸ್ಕೃತಿಯ ವಾಹಕವೂ ಆಗಿರುತ್ತದೆ ಎಂಬ ಪ್ರಜ್ಞೆ ಬಂದಾಗ ಈ ಘಟನೆ ನೆನಪಾಯಿತು.

‘ನಾವು ಬೆಳಕಾಗಿರಬೇಕು ಇಲ್ಲವೆ ಶಾಂತವಾಗಿರಬೇಕು’ ಎಂಬುದು ನನ್ನ ಅನಿಸಿಕೆ. ನಮ್ಮ ಹಿರಿಯರು ‘ದೀಪ ಆರಿಸು’ ಅಥವಾ ‘ನಂದಿಸು’ ಎಂದು ಅನ್ನುತ್ತಿದ್ದಿಲ್ಲ. ಹಾಗೆ ಹೇಳುವುದು ಅವರ ದೃಷ್ಟಿಯಲ್ಲಿ ನೆಗೆಟಿವ್. ಆದರೆ ‘ಶಾಂತ ಮಾಡು’ ಎಂಬುದು ಪೊಸಿಟಿವ್.

ಕಾಕಾ ಕಾರಖಾನೀಸರ ಬೋರ್ಡಿಂಗ್‌ನಿಂದಾಗಿ ನನ್ನ ‘ಇಸ್ತ್ರೀ’ ತಲೆದಿಂಬಿನಿಂದ ಕೆಂಡತುಂಬಿದ ತಂಬಿಗೆಗೆ ಬಂದಿತು. ನಂತರ ಕೆಲದಿನಗಳಲ್ಲಿ ಸಣ್ಣ ಇಸ್ತ್ರೀ ಪೆಟ್ಟಿಗೆಯನ್ನು ಒಬ್ಬ ಬೋರ್ಡಿಂಗ್ ಹುಡುಗ ಬಳಸುತ್ತಿದ್ದುದು ಗೊತ್ತಾಯಿತು. ನನಗೆ ಬೇಕೆಂದಾಗ ಆತ ಕೊಡುತ್ತಿದ್ದ. ಮೊದಲ ಸಲ ಚೆನ್ನಾಗಿ ಕೆಂಡ ತುಂಬಿಸಿಕೊಂಡೆ. ಮೊದಲಿಗೆ ಸಿಂಥೆಟಿಕ್ ಕರವಸ್ತ್ರವನ್ನು ಇಸ್ತ್ರಿ  ಮಾಡುವ ಮನಸ್ಸಾಯಿತು. ಆ ಕಾಲದಲ್ಲಿ ಸಿಂಥೆಟಿಕ್ ಬಟ್ಟೆ ಶ್ರೀಮಂತರ ವಸ್ತುವಾಗಿತ್ತು. ನನಗೆ ಯಾರೋ ಅಂಥ ಕರವಸ್ತ್ರ ಕೊಟ್ಟಿದ್ದರಿಂದ ಅದನ್ನು ಜೋಪಾನವಾಗಿ ಕಾಯ್ದುಕೊಂಡಿದ್ದೆ. ಅದನ್ನೇ ಮೊದಲು ಇಟ್ಟು ಇಸ್ತ್ರಿ ತೀಡಲು ಹೋದೆ. ಇಸ್ತ್ರಿ ಬಹಳ ಕಾಯ್ದದ್ದರಿಂದ ಆ ಕರವಸ್ತ್ರ  ಪ್ಲಾಸ್ಟಿಕ್  ಹಾಗೆ ಇಸ್ತ್ರಿಯ ತಳಕ್ಕೆ ಅಂಟಿಕೊಂಡಿತು. ನನಗೆ ಸಖೇದಾಶ್ಚರ್ಯವಾಯಿತು. ಇಸ್ತ್ರಿ ಮಾಡುವುದು ಅಲ್ಲಿಗೇ ನಿಂತಿತು. ಕೆಂಡ ತೆಗೆದು ಇಸ್ತ್ರಿಯ ತಳವನ್ನು ಸ್ವಚ್ಛಗೊಳಿಸುವಲ್ಲಿ ಮಗ್ನನಾದೆ.

ಬೋರ್ಡಿಂಗ್ ಮೇಲ್ವಿಚಾರಕರಾಗಿದ್ದ ಅಣ್ಣಾ ದೀಕ್ಷಿತರ ಮನೆಯಲ್ಲಿ ಒಂದು ಬಿಳಿ ಬೆಕ್ಕಿನ ಮರಿ ಇತ್ತು. ಅದು ನಮ್ಮ ಮನೆಯಲ್ಲಿನ ಬೂದು ಬಣ್ಣದ ಬೆಕ್ಕಿನ ಮರಿಯಷ್ಟೇ ಇತ್ತು. ಅವರ ಮಕ್ಕಳು ಅದರ ಕೊರಳಿಗೆ ಕೃತ್ರಿಮ ಮುತ್ತುಗಳನ್ನು ಕೂಡಿಸಿದ್ದ ಬಳೆಯನ್ನು ಹಾಕಿದ್ದರು. ಅದು ಆ ಬೆಕ್ಕಿಗೆ ಬಹಳ ಸುಂದರವಾಗಿ ಕಾಣುತ್ತಿತ್ತು. ಬೋರ್ಡಿಂಗ್‌ನಲ್ಲಿ ಆರಾಮಾಗಿ ಓಡಾಡುತ್ತಿತ್ತು. ಒಂದು ದಿನ ನಾನು ಬೋರ್ಡಿಂಗ್ ಕೋಣೆಯೊಂದರಲ್ಲಿ ಓದುತ್ತ ಕುಳಿತಾಗ ಆ ಬೆಕ್ಕಿನ ಮರಿ ಬಂತು. ನನ್ನ ದೃಷ್ಟಿ ಅದರ ಕೊರಳಲ್ಲಿರುವ ಮುತ್ತಿನ ಬಳೆಯ ಕಡೆಗೆ ಹೋಯಿತು. ನಮ್ಮ ಮನೆಯ ಬೆಕ್ಕಿನ ಮರಿಯ ನೆನಪಾಯಿತು. ಈ ಮರಿಯ ಕೊರಳೊಳಗಿಂದ ತೆಗೆದುಕೊಂಡು ನಮ್ಮ ಬೆಕ್ಕಿನ ಮರಿಯ ಕೊರಳಲ್ಲಿ ಹಾಕಬೇಕೆಂಬ ಮನಸ್ಸಿನಿಂದಾಗಿ ತಳಮಳ, ಗಡಿಬಿಡಿ ಮತ್ತು ಭಯ ಶುರುವಾಯಿತು. ಸುಮ್ಮನೆ ಕುಳಿತ ಆ ಬೆಕ್ಕಿನ ಮರಿಯನ್ನು ಹಿಡಿಯಬೇಕೆಂದರೆ ಕೈಗಳು ನಡುಗಲು ಶುರುವಾದವು. ಎಲ್ಲ ರೀತಿಯ ಉದ್ವಿಗ್ನತೆಯಿಂದಾಗಿ ಮೈ ಬೆಚ್ಚಗಾಗತೊಡಗಿತು. ಮನೆಗೆ ಓಡಿಹೋದವನೇ ಚಾಪೆ ಹಾಸಿ, ಕೌದಿ ಹೊದ್ದುಕೊಂಡು ಮಲಗಿದೆ. ಜ್ವರ ಬಂದ ಕಾರಣ ಅವ್ವ ಹಣೆಯ ಮೇಲೆ ತಣ್ಣೀರಿನ ಪಟ್ಟಿ ಇಟ್ಟಳು. ಹುರುಳಿ ಅಂಬಲಿ ಮಾಡಿ ಕುಡಿಸಿದಳು.

ಒಂದು ಸಲ ನಮ್ಮ ಮನೆಯಲ್ಲಿ ಸಾಕಷ್ಟು ಕಟ್ಟಿಗೆ ಇರಲಿಲ್ಲ. ಅಡುಗೆ ಅರ್ಧಮರ್ಧ ಆಗಿತ್ತು. ಮನೆಕಡೆಗೆ ಬಂದ ಬೋರ್ಡಿಂಗ್ ಹುಡುಗನಿಗೆ ಇದು ಅರ್ಥವಾಯಿತು. ಆತ ಕೂಡಲೆ ಓಡುತ್ತ ಹೋಗಿ ಅಡುಗೆ ಕೋಣೆಯಲ್ಲಿದ್ದ ನಾಲ್ಕು ಉರುವಲು ಕಟ್ಟಿಗೆಯ ತುಂಡುಗಳನ್ನು ಹಿಡಿದುಕೊಂಡು ಬಂದ. ಅದೇ ವೇಳೆಗೆ ನಮ್ಮ ತಂದೆ ಬಂದರು. ಬಹಳ ಬೇಸರ ಮಾಡಿಕೊಂಡರು. ರೊಟ್ಟಿ ಬಡಿಯುತ್ತಿದ್ದ ನನ್ನ ತಾಯಿ ಏನನ್ನೂ ಹೇಳಲಿಲ್ಲ. ಏಕೆಂದರೆ ಇದೆಲ್ಲ ಅವಳಿಗೆ ಗೊತ್ತಿಲ್ಲದೆ ಆದದ್ದು. ಯಾರಿಗೂ ಏನೂ ಹೇಳುವ ಹಾಗಿರಲಿಲ್ಲ.

ಬೋರ್ಡಿಂಗ್‌ನಲ್ಲಿ ಸಿಂಗೆ ಎಂಬ ಹೆಸರಿನ ಅಂಗವಿಕಲ ವಿದ್ಯಾರ್ಥಿ ಇದ್ದರು. ಅವರ ಒಂದು ಕಾಲು ಬಡಕಲಾಗಿದ್ದು ಗಿಡ್ಡಗೆ ಇತ್ತು. ಅವರು ಮ್ಯಾಟ್ರಿಕ್ ಪರೀಕ್ಷೆಗೆ ಕುಳಿತವರಾಗಿದ್ದರು. ಅವರ ಆತ್ಮೀಯತೆ ಮತ್ತು ನೈತಿಕ ಬದುಕು ನನ್ನ ಮೇಲೆ ಆಳವಾದ ಪರಿಣಾಮ ಬೀರಿತ್ತು.

ಅದೇರೀತಿ ತುಕಾರಾಮ ಕೂಡ ನನ್ನ ಬಾಲ್ಯದಲ್ಲಿ ನೈತಿಕತೆಯ ಮೇಲೆ ಪ್ರಭಾವ ಬೀರಿದವ ರಾಗಿದ್ದಾರೆ. ಅವರು ಒಂದು ರಾತ್ರಿ ಮನೆಗೆ ಬಂದರು. ನಾಳೆ ತಮ್ಮೂರಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಅವರಿಗೆ ಎಫ್.ವೈ. ಕಾಲೇಜು ಫೀ ಕಟ್ಟಲು 21 ರೂಪಾಯಿ ಬೇಕಿತ್ತು. (ಆಗ ದಲಿತ ವಿದ್ಯಾರ್ಥಿಗಳಿಗೆ ಈಗಿನಷ್ಟು ಶೈಕ್ಷಣಿಕ ವ್ಯವಸ್ಥೆ ಇರಲಿಲ್ಲ.) ಅವರು ಬಂದ ವೇಳೆಗೆ ನನ್ನ ತಾಯಿ ಮತ್ತು ತಂದೆ ಚಿಮಣಿ ಬೆಳಕಲ್ಲಿ ಚಿಲ್ಲರೆ ಎಣಿಸುತ್ತಿದ್ದರು. ಅವು 21 ರೂಪಾಯಿ ಆಗಿದ್ದವು! ಅವು ಸೀರೆಗಾಗಿ ಕೂಡಿಸಿಟ್ಟ ಚಿಲ್ಲರೆ ನಾಣ್ಯಗಳಾಗಿದ್ದವು. ಆಗ ನನ್ನ ತಾಯಿಯ ಸೀರೆಗಳು ಬಹಳ ಹರಿದಿದ್ದವು. ದಿಂಡಿ ಹಾಕಲು ಕೂಡ ಬರಲಾರದಷ್ಟು ಪಿಸುಕುತ್ತಿದ್ದವು. ಹರಿದ ಕಡೆಗಳಲ್ಲೆಲ್ಲ ಗಂಟು ಹಾಕಿ ಉಟ್ಟುಕೊಳ್ಳುವಂಥ ಅವಸ್ಥೆ ಆಗಿತ್ತು. ಅಷ್ಟು ದುಡ್ಡಲ್ಲಿ ಸಾದಾ ಇಳಕಲ್ ಸೀರೆ ಸಿಗುವ ದಿನಗಳವು. ಅಂತೂ ಹಣ ಹೊಂದಿದ್ದಕ್ಕೆ ತಂದೆ ತಾಯಿ ಬಹಳ ಖುಷಿಯಾಗಿದ್ದರು. ಹೊಸ ಇಳಕಲ್ ಸೀರೆ ಕೊಳ್ಳುವ ಕನಸು ನನಸಾಗುವುದರಲ್ಲಿತ್ತು. ಆದರೆ ತುಕಾರಾಮ ಹೇಳಿದ್ದನ್ನು ಕೇಳಿದ ನನ್ನ ತಾಯಿ ಮರುಮಾತನಾಡದೆ ಆ ಹಣವನ್ನು ಅವರಿಗೆ ಕೊಟ್ಟಳು. (ತುಕಾರಾಮ ಮುಂದೆ ಸಹಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾದರೆಂದು ಕೇಳಿದ್ದೇನೆ.)

ತುಕಾರಾಮ ಎಫ್.ವೈ. ಓದಿ ಕಾಲೇಜು ಶಿಕ್ಷಣ ಮುಂದುವರಿಸಿದರು. ಅವರು ಎನ್.ಸಿ.ಸಿ. ಕೆಡೆಟ್ ಆಗಿದ್ದರು. ಯಾವುದೋ ಊರಲ್ಲಿ ಕ್ಯಾಂಪ್ ಇತ್ತು ಅಲ್ಲಿಂದ ಒಂದು ಪತ್ರ ಬರೆದಿದ್ದರು. ಆ ಕಾರ್ಡಲ್ಲಿ “ನಾವು ಒಂದೇ ಬಳ್ಳಿಯ ಹೂಗಳು” ಎಂದು ಬರೆದದ್ದು ನನ್ನ ಸೃಜನಶೀಲ ಸಾಹಿತ್ಯಕ್ಕೆ ಬೀಜವಾಯಿತು.

ನಾನು ಐದನೇ ಇಯತ್ತೆಯಲ್ಲಿದ್ದಾಗ ಅವರ ಎರಡನೇ ಅಣ್ಣ ಡೊಮನಾಳದಿಂದ ಎಂದಿನಂತೆ ನಮ್ಮ ನಾವಿಗಲ್ಲಿ ಮನೆಗೆ ಬಂದರು. ‘ತುಕಾರಾಮ ರಾತ್ರಿ ತನ್ನ ಹೆಂಡತಿಯನ್ನು ಕರೆದುಕೊಂಡು, ತಾಯಿಯ ಗೋರಿಗೆ ನಮಸ್ಕರಿಸಿ ಎಲ್ಲಿಗೋ ಹೋಗಿದ್ದಾನೆ. ನಿಮ್ಮಲ್ಲಿಗೆ ಬಂದಿರಬಹುದು ಎಂಬ ಸಂಶಯದೊಂದಿಗೆ ಬಂದೆ’ ಎಂದರು. ‘ಅವರಿಬ್ಬರು ತಾಯಿಯ ಗೋರಿಗೆ ಹೋಗಿ ನಮಸ್ಕರಿಸಿದ್ದು ಹೇಗೆ ಗೊತ್ತಾಯಿತು’ ಎಂದು ಕೇಳಿದೆ. ಹೆಜ್ಜೆ ಗುರುತುಗಳಿಂದ ಎಂದು ತಿಳಿಸಿದರು!
ನನಗೆ ಗಾಬರಿಯಾಯಿತು. ಅವರ ಬಾಲ್ಯವಿವಾಹವಾದದ್ದು ಗೊತ್ತಿತ್ತು. ಅವರ ಪತ್ನಿ ನಾಗಮ್ಮನನ್ನೂ ಡೊಮನಾಳಕ್ಕೆ ಹೋದಾಗ ನೋಡಿದ್ದೆ. ನಾಗಮ್ಮನ ಬಗ್ಗೆ ತುಕಾರಾಮಗೆ ದ್ವೇಷವೂ ಇದ್ದಿದ್ದಿಲ್ಲ ಪ್ರೀತಿಯೂ ಇದ್ದಿದ್ದಿಲ್ಲ. ಆ ಮುಗ್ಧ ಹೆಣ್ಣುಮಗಳು ಅವರ ಮನೆಯಲ್ಲೇ ಹೊಲಮನೆ ಕೆಲಸ ಮಾಡಿಕೊಂಡಿದ್ದಳು. ಈಗ ಹೀಗೇಕೆ ಆಯಿತು ಎಂಬುದು ತಿಳಿಯದಂತಾಯಿತು. ತುಕಾರಾಮ ಹಿಂದೊಮ್ಮೆ ನನ್ನನ್ನು ಕರೆದುಕೊಂಡು ಅಥರ್ಗಾ (ಹತ್ತರಕಿ) ಗ್ರಾಮದಲ್ಲಿರುವ ಅವರ ಅಕ್ಕನ ಮನೆಗೆ ಹೋಗಿದ್ದು ನೆನಪಾಯಿತು. ಆಗ ಗ್ರಾಮೀಣ ದಲಿತರ ಪರಿಸ್ಥಿತಿ ಇನ್ನೂ ಗಂಭೀರವಾಗಿತ್ತು. ಹಳ್ಳಿಯ ಗುಡಿಸಲಿನಂಥ ಹೊಟೇಲುಗಳಲ್ಲಿ ಕೂಡ ಅವರಿಗೆ ಪ್ರವೇಶವಿರಲಿಲ್ಲ. ಅವರಿಗೆ ಹೊರಗೆ ನಿಲ್ಲಿಸಿ ಪರಟೆ (ತೆಂಗಿನ ಚಿಪ್ಪು)ಯಲ್ಲಿ ಚಹಾ ಕೊಡುವ ಪದ್ಧತಿ ಇತ್ತು. ಅವರು ಹೊರಗೇ ಇಟ್ಟ ಪರಟೆ ತೆಗೆದುಕೊಂಡು ಚಹಾ ಕುಡಿದ ನಂತರ ತೊಳೆದು ಅಲ್ಲೇ ಇಟ್ಟು ಹೋಗಬೇಕಿತ್ತು. ಬೇರೆ ದಲಿತ ಗಿರಾಕಿಗಳು ಬಂದರೆ ಅಲ್ಲಿಂದಲೇ ಪರಟೆ ತೆಗೆದುಕೊಂಡು ಅದೇ ರೀತಿ ಸ್ವಚ್ಛ ಮಾಡಿ ಇಟ್ಟು ಹೋಗಬೇಕಿತ್ತು. ಕ್ಷೌರಿಕರು ದಲಿತ ಮಕ್ಕಳ ಕ್ಷೌರ ಮಾಡುವ ಸ್ಥಿತಿ ಇರಲಿಲ್ಲ.

(ಎಲ್ಲಮ್ಮ ದೇವಿ)

ನಾನು ಬಾಲ್ಯದಲ್ಲಿದ್ದ ಅಲ್ಲೀಬಾದಿಯಿಂದ ಮುಂದೆ ಇಂಡಿಗೆ ಹೋಗುವ ದಾರಿಯಲ್ಲಿ ಅಥರ್ಗಾ ಗ್ರಾಮವಿದೆ. ಆ ಗ್ರಾಮವನ್ನು ನಾನು ತುಕಾರಾಮ ಜೊತೆ ಮೊದಲೇ ನೋಡಿದ್ದರಿಂದ ಅಲ್ಲಿಗೆ ಹೋಗಲು ನಿರ್ಧರಿಸಿದೆ. ತುಕಾರಾಮ ತಮ್ಮ ಅಕ್ಕನ ಮನೆಗೆ ಹೋಗಿರಬಹುದು ಎಂಬ ತರ್ಕ ನನ್ನದಾಗಿತ್ತು. ರೆಡ್‌ಬಸ್ ಚಾರ್ಜಿನ ವ್ಯವಸ್ಥೆ ಮಾಡಿಕೊಂಡು ಅಥರ್ಗಾಗೆ ಹೋದೆ. ತುಕಾರಾಮ ಅಕ್ಕನ ಮನೆಗೆ ಹೋಗಿ ವಿಚಾರಿಸಿದೆ. ‘ಇಂಚಗೇರಿ ಗುರುಗಳನ್ನು ಕಾಣಲು ತುಕಾರಾಮ ಹೆಂಡತಿ ಜೊತೆ ಇಂಡಿಗೆ ಹೋಗಿದ್ದಾನೆ’ ಎಂದು ಅವರ ಅಕ್ಕ ತಿಳಿಸಿದರು.
ಇಂಚಗೇರಿ ಗುರುಗಳು ನಿವೃತ್ತ ಮಾಸ್ತರರು. ಅವರು ನಿತ್ಯ ದೇವೀ ಪೂಜಕರು. ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ನಡೆಯುವ ದೇವಿ ಪೂಜೆಗೆ ಬೇರೆ ಬೇರೆ ಕಡೆಗಳಿಂದ ಅವರ ಅನುಯಾಯಿಗಳು ಇಂಡಿಗೆ ಬರುತ್ತಿದ್ದರು.

ಅವರು ವರ್ಷದಲ್ಲಿ ಅನೇಕ ಬಾರಿ ಅಂಬಾಭವಾನಿ ದರ್ಶನಕ್ಕಾಗಿ ತುಳಜಾಪುರಕ್ಕೆ ಹೋಗುತ್ತಿದ್ದರು. ಹಾಗೆ ಹೋಗುವಾಗ ಕೆಲ ಶಿಷ್ಯಂದಿರನ್ನು ಕರೆದುಕೊಂಡು ಹೋಗುತ್ತಿದ್ದರು. ಒಂದು ಸಲ ನನಗೂ ಕರೆದುಕೊಂಡು ಹೋಗಿದ್ದರು. ನಾನು ಮೊದಲಬಾರಿಗೆ ಸೋಲಾಪುರ ಮತ್ತು ತುಳಜಾಪುರಗಳನ್ನು ನೋಡಿದ್ದು ಅವರ ಜೊತೆಗೇ. ಅವರಿಗೆ ನಾನು ಕೂಡ ಪ್ರೀತಿಯ ಶಿಷ್ಯನೇ ಆಗಿದ್ದೆ.

ಈ ರೀತಿ ತುಳಜಾಪುರಕ್ಕೆ ಬರುವ ಭಕ್ತರಿಗೆ ಆಶ್ರಯ ನೀಡಿ ಅವರ ಪೂಜೆಗೆ ವ್ಯವಸ್ಥೆ ಮಾಡುವ ಮನೆತನಗಳು ಅಲ್ಲಿವೆ. ಇದು ಕಡಿಮೆ ಖರ್ಚಿನಲ್ಲಿ ಆಗುವುದರಿಂದ ಬಡ ಮತ್ತು ಮಧ್ಯಮ ವರ್ಗದ ಭಕ್ತರು ಕೂಡ ಈ ವ್ಯವಸ್ಥೆಗೆ ಹೊಂದಿಕೊಂಡಿರುತ್ತಾರೆ. ನಸುಕಿನಲ್ಲಿ ರೆಡ್ ಬಸ್ ಇಳಿದ ಕೂಡಲೆ ಅವರಿಗೆ ಗೊತ್ತಿದ್ದ ಇಂಥ ವ್ಯವಸ್ಥೆ ಮಾಡುವ ವ್ಯವಸ್ಥಾಪಕ ಬಂದು ಸ್ವಾಗತಿಸಿ ಕರೆದುಕೊಂಡು ಹೋದ.

ಎಲ್ಲರೂ ಬೆಳಿಗ್ಗೆ ಬೇಗ ಸ್ನಾನಮಾಡಿ ಸ್ವಚ್ಛ ಬಟ್ಟೆ ಧರಿಸಿ ಅಂಬಾಭವಾನಿ ದೇವಸ್ಥಾನಕ್ಕೆ ಹೋದೆವು. ಆ ವಿಶಾಲವಾದ ಆವರಣದ ಭವ್ಯ ದೇವಸ್ಥಾನ ನೋಡಲು ಮನೋಹರವಾಗಿದೆ. ಪೌಳಿಯ ಕಲ್ಲುಗಳ ಮೇಲೆ ರೂಪಾಯಿ ಅಗಲದ ತೆಗ್ಗುಗಳಿವೆ. ಬಹಳ ಹಿಂದೆ ಅವುಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ಅಂಟಿಸಲಾಗಿತ್ತು ಎಂದು ಯಾರೋ ಭಕ್ತರು ಹೇಳಿದರು.

ದೇವಿಯ ಮಂದಿರದ ಹಿಂದಿನ ಗೋಡೆಯ ಬಾಗಿಲಿಂದ ನೋಡಿದಾಗ ಹಸಿರು ತುಂಬಿದ ವಿಶಾಲವಾದ ಪ್ರದೇಶ ಮನಸ್ಸಿಗೆ ಮುದ ನೀಡಿತು. ನಾವು ಮಂದಿರದ ಬಳಿ ಹೋದಾಗ ದೇವಿ ಸ್ನಾನ ಮಾಡಿಸಿ ಸಿಂಗರಿಸುವ ಸಮಯವಾಗಿತ್ತು. ಮಂದಿರ ಪೂಜಾರಿ ಇಂಚಗೇರಿ ಗುರುಗಳನ್ನು ಗರ್ಭಗುಡಿಗೆ ಕರೆದುಕೊಂಡು ಹೋದರು. ಅವರ ಜೊತೆ ಬಾಲಕನಾದ ನನಗೂ ಒಳಗೆ ಬಿಟ್ಟರು. ದಿಕ್ಕುಗಳನ್ನೇ ಅಂಬರ ಮಾಡಿಕೊಂಡು ನಿಂತ ಆ ಮೂರ್ತಿ ಅಷ್ಟೇನೂ ದೊಡ್ಡದಾಗಿಲ್ಲ. ಆದರೆ ಆಕರ್ಷಕವಾದ ಮೂರ್ತಿ ಅದು. ನನಗೋ ಭಕ್ತಿಯ ರೋಮಾಂಚನ. ಅಂಬಾಭವಾನಿಗೆ ಸ್ನಾನ ಮಾಡಿಸಿದ ನಂತರ ಸಿಂಗಾರ ಮಾಡುವವರೆಗೆ ಯಾರನ್ನೂ ಗುಡಿಯ ಒಳಗಡೆ ಬಿಡುವುದಿಲ್ಲ. ನಾನೋ ಗರ್ಭಗುಡಿಯ ಒಳಗೆ! ಅಂಬಾಭವಾನಿ ಸಿಂಗಾರಗೊಂಡ ನಂತರ ಅವಳು ಕುಳಿತ ಸ್ಥಿತಿಯಲ್ಲಿ ಕಾಣುವಳು. ಹಾಗೆ ಸಿಂಗರಿಸುವ ರೀತಿಯೆ ಅದಾಗಿದೆ.

ಮಂದಿರ ಒಳಗೆ ಹೋಗುವಾಗಲೋ ಇಲ್ಲವೆ ಹೊರಗೆ ಬರುವಾಗಲೋ ಅರಿಷಿನ ನೀರಿನ ಕೈಯಿಂದ ನಮ್ಮ ಎದೆಯ ಎರಡೂ ಕಡೆ ಛಾಪು ಮೂಡಿಸುವರು. ಅಲ್ಲಿಂದ ಯಾತ್ರಿಕರು ವಾಪಾಸಾಗುವಾಗ ಸಾರ್ವಜನಿಕರು, ‘ಇವರು ತುಳಜಾಪುರಕ್ಕೆ ಹೋಗಿ ಬಂದವರು’ ಎಂಬುದನ್ನು ಸಹಜವಾಗೇ ಗುರುತಿಸುತ್ತಿದ್ದರು.

ಆ ದಿನ ನಾನು ಬಿಳಿಯ ಷರ್ಟು ಹಾಕಿಕೊಂಡಿದ್ದೆ. ಎದೆಯ ಮೇಲಿನ ಎರಡು ಹಳದಿ ಹಸ್ತಮುದ್ರೆ ನನ್ನಲ್ಲಿ ತುಳಜಾಪುರಕ್ಕೆ ಹೋಗಿ ಬಂದ ಹೆಮ್ಮೆ ಮೂಡಿಸಿದವು. ಅ ಷರ್ಟನ್ನು ಬಹಳ ದಿನಗಳ ವರೆಗೆ ಹಾಗೇ ಜೋಪಾನವಾಗಿ ಇಟ್ಟಿದ್ದೆ. ಒಂದೊಂದು ಸಲ ಹೆಮ್ಮೆಯಿಂದ ಆ ಷರ್ಟನ್ನು ಹಾಕಿಕೊಂಡು ನಾವಿಗಲ್ಲಿ ಸುತ್ತುತ್ತಿದ್ದೆ.

‘ಇಂಚಗೇರಿ ಗುರುಗಳನ್ನು ಕಾಣಲು ತುಕಾರಾಮ ಹೆಂಡತಿ ಜೊತೆ ಇಂಡಿಗೆ ಹೋಗಿದ್ದಾನೆ’ ಎಂದು ಅಥರ್ಗಾದ ತುಕಾರಾಮರ ಅಕ್ಕ ಹೇಳಿದಾಗ ಇವೆಲ್ಲ ನೆನಪಾದವು. ‘ನಾನು ಅವರನ್ನೆಲ್ಲ ಕಾಣಲು ಇಂಡಿಗೆ ಹೋಗಲೇಬೇಕು’ ಎಂದು ಹಟ ಹಿಡಿದೆ. ಅವರು ತಮ್ಮ ಮಗಳ ಜೊತೆ ನನ್ನನ್ನು ಇಂಡಿಗೆ ಕಳುಹಿಸಿದರು. ಅಥರ್ಗಾದಿಂದ ಇಂಡಿಗೆ ನಡೆದುಕೊಂಡು ಹೋಗುವ ಕಾಲುದಾರಿ ಆ ಹುಡುಗಿಗೆ ಗೊತ್ತಿತ್ತು. ಅವಳು ನನ್ನನ್ನು ಕರೆದುಕೊಂಡು ಹೊರಟಳು. ಅರ್ಧದಾರಿ ಹೋಗುವುದರೊಳಗಾಗಿ ಬಿಸಿಲಿನಿಂದ ಗಂಟಲು ಒಣಗಿತು.

ನಮ್ಮ ಜೊತೆಗೆ ಒಬ್ಬ ಹೆಣ್ಣುಮಗಳು ತನ್ನ ಮಗನ ಜೊತೆ ನಡೆಯುತ್ತ ಹೊರಟಿದ್ದಳು. ‘ಎಲ್ಲಿ, ಯಾರ ಮನೆ’ ಎಂದು ಮುಂತಾಗಿ ವಿಚಾರಿಸಿದಳು. ನಾವು ಹೊಲಗೇರಿಯವರು ಎಂಬುದು ಅವಳ ಮನದಲ್ಲಿ ಸುಳಿಯಿತು. ನಾನು ಹೊಲಗೇರಿಯ ಹುಡುಗ ಎಂದು ಆ ಮಹಿಳೆ ನನ್ನ ಬಗ್ಗೆ ತಿಳಿದುಕೊಂಡಿದ್ದಕ್ಕೆ ಬೇಸರವಾಗಲಿಲ್ಲ. ‘ನಾವು ಮುಸ್ಲಿಮರು’ ಎಂದು ಆಕೆ ತಿಳಿಸಿದಳು. (ಧರ್ಮಗಳು ಮತ್ತು ಜಾತಿಗಳು ನಮ್ಮನ್ನು ಹೇಗೆ ಬೇರ್ಪಡಿಸುತ್ತವೆ ಎಂಬ ಅನುಭವ ನನಗೆ ಬಹಳ ಸಲ ಆಗಿದೆ. ಆದರೆ ಒಂದೇ ಸಮಾಧಾನವೇನೆಂದರೆ, ಮಾನವ ಸಹಜವಾಗಿ ಸೆಕ್ಯೂಲರ್ ಆಗಿರುತ್ತಾನೆ. ಆದರೆ ಅವನನ್ನು ಪ್ರಜ್ಞಾಪೂರ್ವಕವಾಗಿ ಕಮ್ಯೂನಲ್ ಮಾಡಿದರೂ ಅದು ಬಹಳದಿನ ಬಾಳಿಕೆ ಬರುವುದಿಲ್ಲ. ಮತ್ತೆ ಮತ್ತೆ ಜನ ಸಹಜತೆಯನ್ನು ಬಯಸುತ್ತಲೇ ಇರುತ್ತಾರೆ. ಹೀಗಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಆಟ ನಿರಂತರವಾಗಿ ನಡೆಯುವುದಿಲ್ಲ. ಜನರು ವಿವಿಧ ಜಾತಿ ಮತ್ತು ಧರ್ಮಗಳ ಚೌಕಟ್ಟಿನಲ್ಲಿ ಸಿಲುಕಿದ್ದರೂ ದೈನಂದಿನ ಬದುಕಲ್ಲಿ ಇವೆಲ್ಲವುಗಳನ್ನು ಮೀರಿದವರೇ ಆಗಿರುತ್ತಾರೆ. ಸರ್ವಧರ್ಮ ಸಮಭಾವ ಅವರ ಸಹಜ ಗುಣ ಆಗಿರುತ್ತದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರಜ್ಞಾಪೂರ್ವಕವಾಗಿ ಜಾತಿ ಮತ್ತು ಧರ್ಮಗಳ ಹೆಸರಲ್ಲಿ ಕರ್ಮಠರನ್ನಾಗಿಸುವ ಮೂಲಕ ದ್ವೇಷಸಂಸ್ಕೃತಿಯನ್ನು ಬೆಳೆಸುತ್ತವೆ. ಆಗ ಎಲ್ಲ ಕಡೆಯ ಹುಂಬರು, ಮೂರ್ಖರು ಮತ್ತು ಮುಗ್ಧರು ಅದಕ್ಕೆ ಬಲಿಯಾಗುತ್ತಾರೆ. ಇದು ಇಂದಿಗೂ ಮುಂದುವರಿದಿದೆ.

ನಾನು ಬಹಳ ಸುದೈವಿ. ನಾಲ್ಕು ಜನರು ‘ಹೀಗಿರಬೇಕು’ ಎಂದು ಅನ್ನುವಹಾಗೆ ಬದುಕಲು ನನ್ನ ತಾಯಿ ತಂದೆ ನನಗೆ ತಿಳಿಸಿದರು ಹೊರತಾಗಿ ಯಾವುದೇ ಸಂಪ್ರದಾಯಕ್ಕೆ ಜೋತು ಬೀಳುವುದನ್ನು ಕಲಿಸುವ ಗೋಜಿಗೆ ಹೋಗಲಿಲ್ಲ. ಸಾಂಪ್ರದಾಯಿಕವಾಗಿ ಬಂದ ಅವರ ಧಾರ್ಮಿಕ ಆಚರಣೆಗಳನ್ನು ಮಕ್ಕಳ ಮೇಲೆ ಹೇರಲಿಲ್ಲ. ಅವರ ಭಾವನೆಗಳಲ್ಲಿ ದೇವರು ಮತ್ತು ಧರ್ಮಗಳ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಕೂಡ ಇರಲಿಲ್ಲ. ಅಗಿನ ಕಾಲದಲ್ಲಿ ಬಡ ಮುಸ್ಲಿಮರ ಮತ್ತು ಇತರ ಜಾತಿಗಳ ಜನರ ಸಾಮಾಜಿಕ ಜೀವನದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.

ಒಕ್ಕಲಿಗರು ಎಂದರೆ ರೈತಾಪಿ ಲಿಂಗಾಯತರು ಮತ್ತು ಬಣಜಿಗರು ಎಂದರೆ ವ್ಯಾಪಾರಸ್ಥ ಲಿಂಗಾಯತರು ಎಂದು ಜನ ಸಹಜವಾಗಿ ಭಾವಿಸುತ್ತಿದ್ದರು. ಲಿಂಗಾಯತ ಪದ ‘ಅಶಿಕ್ಷಿತರದು ಮತ್ತು ಬಡವರದು’ ಹಾಗೂ ವೀರಶೈವ ಪದ ‘ಶಿಕ್ಷಿತರದು ಮತ್ತು ಶ್ರೀಮಂತರದು’ ಎಂಬ ರೀತಿಯಲ್ಲಿ ಕಲಿತು ಮುಂದೆ ಬಂದವರು ವರ್ತಿಸಲು ಪ್ರಾರಂಭಿಸಿದ್ದರು. ಉಳಿದ ಜಾತಿ ಧರ್ಮಗಳ ನಿರಕ್ಷರಿ ಬಡವರ ಸಾಮಾಜಿಕ ಜೀವನವಿಧಾನದಲ್ಲಿ ಮೂಲಭೂತ ವ್ಯತ್ಯಾಸವಿರಲಿಲ್ಲ. ಎಲ್ಲ ಕುಂದುಕೊರತೆಗಳ ಮಧ್ಯೆಯೂ ಅವರನ್ನೆಲ್ಲ ಮಾನವೀಯತೆ ಬಂಧಿಸಿತ್ತು.)

ಇಂಡಿಗೆ ಹೋಗುವಾಗ ಆ ಅಡ್ಡದಾರಿಯಲ್ಲಿ ಸಣ್ಣ ಹಳ್ಳವೊಂದು ಹರಿದಿತ್ತು. ಆ ನೀರು ಕುಡಿಯುವಂಥದ್ದಾಗಿರಲಿಲ್ಲ. ಆದರೆ ಪಕ್ಕದಲ್ಲೇ ತೆಗೆದ ಒರತೆಯಲ್ಲಿ ಸ್ವಲ್ಪ ಒಸರಿ (ಸೋಸಿ) ಬಂದ ನೀರಿತ್ತು. (ಹಳ್ಳಿಯ ಜನ ಹೀಗೆ ಹಳ್ಳದ ಪಕ್ಕದಲ್ಲಿ ಉಸುಕನ್ನು ತೆಗೆದು ತೆಗ್ಗು ಮಾಡಿ ಸೋಸಿದ ನೀರನ್ನು ಪಡೆಯಲು ಒರತೆಯನ್ನು ಸಿದ್ಧಪಡಿಸಿರುತ್ತಾರೆ.) ಆದರೆ ಆ ನೀರನ್ನು ತೆಗೆದುಕೊಳ್ಳಲು ತಂಬಿಗೆ ಇಲ್ಲವೆ ಗ್ಲಾಸು ಮುಂತಾದವು ಬೇಕಾಗುತ್ತವೆ. ಆ ಮುಸ್ಲಿಂ ಮಹಿಳೆ ಜೊತೆಯಲ್ಲಿ ತಂಬಿಗೆ ತಂದಿದ್ದರಿಂದ ಬಾಗಿ ನೀರು ತೆಗೆದು ಮಗನಿಗೆ ಕುಡಿಸಿ ತಾನೂ ಕುಡಿದಳು. ನನ್ನ ಜೊತೆಯಲ್ಲಿ ಬಂದ ಹುಡುಗಿ ಎರಡೂ ಹಸ್ತಗಳನ್ನು ಕೂಡಿಸಿ ನಿಂತಾಗ ಅವಳು ನೀರು ಹಾಕಿದಳು. ನನಗೂ ಕೈ ಮುಂದೆ ಮಾಡಲು ಹೇಳಿದಳು. ‘ನನಗೆ ನೀರಡಿಕೆ ಆಗಿಲ್ಲ’ ಎಂದೆ.
*

(ಚಿತ್ರಗಳು: ಸುನೀಲಕುಮಾರ ಸುಧಾಕರ)