ಚಿತೆಯೇರಿದ ಚೇತನ

ಅದೊಂದು ಹೆಮ್ಮರ
ಆಲವೋ ಹಸಿರುಸಿರ ಆಲಯವೋ
ಆಂತರ್ಯದ ಸೂಕ್ಷ್ಮ ತಂತುಗಳ
ಕಸಿದು ಕಸಿ ಮಾಡುವ ಭುವಿಯ
ಚಪ್ಪರ ;
ಅದೊಂದು ಹೆಬ್ಬಯಲು
ಮೇಧಿನಿಯ ಸಿರಿಯೊಡಲೋ
ಬಾನಂಗಳದ ತಾಯ್ಮಡಿಲೋ
ಭಗ್ನ ಹೃದಯವನಪ್ಪಿ ಸ್ನಿಗ್ಧ
ಮಮತೆಯ ಪೊರೆವ ವಿಶಾಲ
ಚಾದರ!

ಅದೊಂದು ಕಾನನ
ಹಸಿರೊಡಲಿನ ವನಕುಸುಮಗಳ
ಘಮಲು ಗಂಧದ ನಡುವೆ
ಜೀವಾಜೀವಗಳ ಬೆಸೆದು
ತುದಿಯೆಲೆಗೆ ಬೇರುಗಳ ಹೊಸೆವ
ಹೂಮರ ;
ಅದೊಂದು ಶಿಖರ
ಶಿಲೆಗಳೊಡನೆ ಹರಟುತಲಿ
ಕಾರ್ಮೋಡದಲು ಹಣತೆಯನಿರಿಸಿ
ಭುವಿಯನಪ್ಪುವ ಮಳೆಹನಿಗೆ
ಸಿಹಿಯುಣಿಸಿ ಧರೆಗೆರೆಯುವ
ಹಂದರ!

ಅದೊಂದು ಕಡಲು
ಪ್ರೀತಿಯಲೆಗಳ ಏರಿಳಿತದಲಿ
ಜೀವಚರಗಳನಪ್ಪಿ ಭಾವಸ್ವರಗಳ
ಸವಿದು ತೇಲಿ ಮುಳುಗುವ
ಜೀವಿಗಳೆದೆಬಡಿತ ಆಲಿಸುವ
ಮಡಿಲು ;
ಅದೊಂದು ತೊಟ್ಟಿಲು
ತಾಯ್ತನದ ಹಿರಿಮೆಯಲಿ
ಭ್ರಾತೃತ್ವದೊಲುಮೆಯಲಿ ಹೃದಯ
ವೇದನೆಯನಳಿಸಿ ಎದೆಯಾಳದ
ಕಹಿಯಳಿಸಿ ಸಿಹಿಹೂರಣ ಉಣಿಸುವ
ಒಡಲು!

ಅದೊಂದು ಜೀವ
ತನುವಿನೊಳಗಿನ ಕುಲುಮೆ
ತಾಪದಿಂದುರಿದುರಿದು ಒಡಲಾಗ್ನಿಯ
ಬೇಗೆಯಲಿ ಮನವ ಬೇಯಿಸುತಿರೆ
ನೊಂದವರೆದೆಯೊಳು ದೀಪ ಬೆಳಗುವ
ಕೋಶ;
ಅದೊಂದು ಭಾವ
ಮನ ಹೃದಯಗಳ ಹೊಸೆದು
ವಾತ್ಸಲ್ಯದ ಚಿಲುಮೆಯಲಿ ತಾಯ
ಮಮತೆಯ ಪೊರೆದು ಮೇಧಿನಿಯ
ಸೆರಗಿನಲಿ ಜೋಗುಳ ಗುನುಗುನಿಸುವ
ಪಾಶ!

ಅದೊಂದು ಮನಸು
ಕರಿಯ ಬಾನಲಿ ಮಿನುಮಿನುಗಿ
ಸವಿ ನೆನಪುಗಳಲಿ ಮಿರುಮಿರುಗಿ
ಗತ ಬದುಕಿನಲಿ ವಿಹರಿಸುತ
ಕನಸುಗಳ ಕೋಟೆ ಕಟ್ಟಿದ ನಲ್ಮೆಯ
ಮಿಲನ ;
ಈಗ…
ಅದೊಂದು ಕನಸು
ಮರೆಯಾದುದೆಂತೋ ತೆರೆ
ಸರಿದುದೆಂತೋ ಕ್ಷಣ ಮಾತ್ರದಲಿ
ಮಿನುಗಿ ಬದುಕಿನಂಚಿಗೆ ಹೊರಳಿ
ಚಿರನಿದ್ರೆಯಲಿ ವಿರಮಿಸಿದ ದಿವ್ಯ
ಚೇತನ !

ನಾ ದಿವಾಕರ, ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು.
ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ 2019ರ ಜನವರಿಯಲ್ಲಿ ಸ್ವಯಂ ನಿವೃತ್ತಿ.
ಲೇಖನ ಬರಹ, ಅನುವಾದ ಮತ್ತು ಕವಿತೆ ರಚನೆ ಹವ್ಯಾಸ.  
ಇವರು ಬರೆದ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ.