ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು. ಲೇಖಕ ಅಂಥ ಊಹೆ ಮಾಡಿಕೊಂಡೇ ಬರೆದಿದ್ದಾನೆ ಅನ್ನುವುದನ್ನು ಅರಿತೇ ಓದುಗನೂ ಕಾದಂಬರಿ ಓದು ತನ್ನ ಊಹೆಗಳನ್ನು ಮಾಡಿಕೊಳ್ಳುತ್ತಾನೆ. ಓದುಗರು ತಾವೇ ಲೇಖಕರೆಂದುಕೊಂಡು ಓದುತ್ತಾರೆ ಅಥವ ಲೇಖಕನು ಅತೃಪ್ತ, ನಿರ್ಲಕ್ಷಿತ ವ್ಯಕ್ತಿ ಎಂದು ಭಾವಿಸಿ ಓದುತ್ತಾರೆ ಅನ್ನುವುದು ಕೂಡ ಲೇಖಕರಿಗೆ ಗೊತ್ತು. ಅದಕ್ಕೆ ಅನುಗುಣವಾಗಿಯೇ ಅವರೂ ಬರೆಯುತ್ತಾರೆ.ಲೇಖಕನ ಕಸುಬಿನ ಗುಟ್ಟುಗಳನ್ನು ಹೀಗೆ ಹೇಳಿದರೆ ನನ್ನನ್ನು ಲೇಖಕರ ಸಂಘದಿಂದ ಉಚ್ಛಾಟಿಸಿಯಾರು!
ಓ.ಎಲ್.ನಾಗಭೂಷಣಸ್ವಾಮಿ ಕನ್ನಡಕ್ಕೆ ಅನುವಾದಿಸಿರುವ ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಭಾಷಣ ಮಾಲಿಕೆಯ ಆರನೆಯ ಕಂತಿನ ಎರಡನೆಯ ಭಾಗ.

 ವೈಶಿಷ್ಟ್ಯದ ಭಾವ ಸಂಕಲನ

ಸಾಮಾಜಿಕ ಸಂದರ್ಭದಲ್ಲಿ ವೈಶಿಷ್ಟ್ಯತೆಯ ಭಾವ ಕುರಿತು ಫ್ರೆಂಚ್ ಸಮಾಜಶಾಸ್ತ್ರಜ್ಞ ಪಿಯರೆ ಬೋರ್ಡಿಯೋ ವ್ಯಾಪಕವಾಗಿ ಬರೆದಿದ್ದಾನೆ. ಕಲಾಕೃತಿಯ ಆನಂದವನ್ನು ಅನುಭವಿಸುವಾಗ ಕಲಾಪ್ರೇಮಿಗಳು ಮನಸ್ಸಿನಲ್ಲಿ ಮೂಡುವ ವಿಶಿಷ್ಟತೆಯ ಭಾವ ಕುರಿತು ಹೇಳಿದ್ದಾನೆ. ಅವನ ವಿಚಾರಗಳನ್ನು ಕಾದಂಬರಿಕಾರ ಮತ್ತು ಓದುಗರಿಗೆ ಅನ್ವಯಿಸಬಹುದು.

ಇಸ್ತಾಂಬುಲ್ ಬುದ್ಧಿಜೀವಿಗಳ ನಡುವೆ ಒಂದು ದಶಕದ ಹಿಂದೆ ಪ್ರಚಲಿತವಾಗಿದ್ದ ಕಥೆಯೊಂದಿದೆ. ರೋಝಾ ಹಕ್ಮೆನ್ ಎಂಬ ಅನುವಾದಕಿ 1940-60ರ ನಡುವೆ ಪ್ರೌಸ್ಟ್ ನ ಕೃತಿಗಳನ್ನು ಟರ್ಕಿಶ್ ಭಾಷೆಗೆ ಭಾಗಶಃ ಅನುವಾದ ಮಾಡಿದ್ದಳು; 1997-2002ರ ಅವಧಿಯಲ್ಲಿ ಅದೇ ಲೇಖಕನ ಸಮಗ್ರ ಕೃತಿಗಳನ್ನು ಏಳು ಸಂಪುಟಗಳಲ್ಲಿ ಅನುವಾದ ಮಾಡಿದಳು. ಸುದೀರ್ಘ ವಾಕ್ಯಗಳನ್ನು ಸೃಷ್ಟಿಸಬಲ್ಲ ಟರ್ಕಿಶ್ ಭಾಷೆಯ ಸಾಮರ್ಥ್ಯವನ್ನು ಆಕೆ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಳು. ಇಸ್ತಾಂಬುಲ್ ನ ಪತ್ರಿಕೆಗಳು, ಟಿವಿ, ರೇಡಿಯೋಗಳು ಆಕೆಯ ಅನುವಾದವನ್ನು ಮುಕ್ತ ಕಂಠದಿಂದ ಹೊಗಳಿದವು. ಕೆಲವು ಅನುವಾದ ಸಂಪುಟ ಅತಿ ಜನಪ್ರಿಯ ಪುಸ್ತಕಗಳ ಪಟ್ಟಿಯಲ್ಲೂ ಕಾಣಿಸಿಕೊಂಡವು. ಆ ಹೊತ್ತಿನಲ್ಲಿ ಇಸ್ತಾಂಬುಲ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರವೇಶ ಆರಂಭವಾಗಿತ್ತು. ಹೊಸದಾಗಿ ವಿವಿಗೆ ಸೇರಲು ಬಂದ ವಿದ್ಯಾರ್ಥಿಯೊಬ್ಬಳು ಕಾಲೇಜಿನ ಕಛೇರಿಯ ಮುಂದೆ ಕ್ಯೂ ನಿಂತಿದ್ದಳಂತೆ. ಆಕೆ ಪ್ರೌಸ್ಟ್ ಅನುವಾದದ ‘ಇನ್ ಸರ್ಚ್ ಆಫ್ ಲಾಸ್ಟ್ ಟೈಮ್’ ಪುಸ್ತಕವನ್ನು ಹೆಮ್ಮೆಪಡುತ್ತಾ ತನ್ನ ವ್ಯಾನಿಟಿ ಬ್ಯಾಗಿನಿಂದ ತೆಗೆದು ಓದಲು ಶುರು ಮಾಡಿದಳು. ನಡುವೆ ಒಮ್ಮೆ ತಲೆ ಎತ್ತಿ ತನ್ನ ಹಾಗೇ ತರಗತಿಗೆ ಸೇರಲು ಬಂದ ಹುಡುಗಿಯರನ್ನ ನೋಡಿದಳು. ಅವಳಿಗಿಂತ ಸಾಕಷ್ಟು ಮುಂದೆ ಹೈಹೀಲ್ಡ್ ತೊಟ್ಟು, ಅತಿ ಮೇಕಪ್ ಮಾಡಿಕೊಂಡು, ಅಭಿರುಚಿ ಹೀನವಾದ ಹೆಚ್ಚಿನ ಬೆಲೆಯ ಉಡುಗೆ ತೊಟ್ಟ ಹುಡುಗಿಯೊಬ್ಬಳು ಕಂಡಳು. ಅವಳ ಬಗ್ಗೆ ತಿರಸ್ಕಾರವನ್ನು ಕಣ್ಣಲ್ಲೇ ತೋರುತ್ತ, ನಾನು ಓದುತ್ತಿರುವ ಪುಸ್ತಕ ಅವಳಿಗೇನು ಅರ್ಥವಾದೀತು ಅಂದುಕೊಂಡು ಈಕೆ ಪುಸ್ತಕ ಓದುವುದು ಮುಂದುವರೆಸಿದಳು. ಸ್ವಲ್ಪ ಹೊತ್ತಾದಮೇಲೆ ಮತ್ತೆ ತಲೆ ಎತ್ತಿ ನೋಡಿದಾಗ ಆ ಫ್ಯಾಶನ್ ಹುಡುಗಿಯೂ ತಾನು ಓದುತ್ತಿರುವ ಪುಸ್ತಕವನ್ನೇ ಓದುತ್ತಿರುವುದು ಕಂಡಳು. ಆ ಕ್ಷಣದಿಂದ ಈಕೆಗೆ ಪ್ರೌಸ್ಟ್ನಲ್ಲಿದ್ದ ಕುತೂಹಲ ಹೊರಟೇ ಹೋಯಿತಂತೆ.

ಮ್ಯೂಸಿಯಮ್ ಗೆ ಭೇಟಿ ನೀಡುವ ಕೆಲವು ವೀಕ್ಷಕರು ಈ ಹುಡುಗಿಯಂಥವರು, ಫ್ಯಾಶನ್ ನಲ್ಲಿ ಕಳೆದುಹೋಗಿರುವಂಥ ಆ ಇನ್ನೊಬ್ಬ ಹುಡುಗಿಯಂಥವರಲ್ಲ ತಾವು ಅನ್ನುವ ಭಾವವನ್ನೇ ತೋರುತ್ತಾರೆ ಎನ್ನುತ್ತಾನೆ ಬೋರ್ಡಿಯೋ. ಮ್ಯೂಸಿಯಮ್ ಭೇಟಿಯ ನಿರ್ಧಾರದಂಥ ಆಯ್ಕೆಗಳನ್ನು ಸಾಮಾಜಿಕ ವರ್ಗ ಮತ್ತು ಸಮದಾಯ ಪ್ರಜ್ಞೆಗಳ ಭಾವ ಪ್ರಭಾವಿಸುತ್ತವೆ ಎನ್ನುತ್ತಾನೆ. ಕಾದಂಬರಿಯ ಓದಿಗೂ ಇಂಥವೇ ಸಂಗತಿಗಳು ಅನ್ವಯವಾಗುತ್ತವೆ. ಓದಿನ ಅನುಭವ ಇನ್ನೂ ಹೆಚ್ಚಿನ ವೈಯಕ್ತಿಕತೆ ಮತ್ತು ಖಾಸಗಿತನಗಳನ್ನು ಒಳಗೊಂಡಿರುತ್ತದೆ, ಕಾದಂಬರಿ ಓದುವಾಗ ಲೇಖಕ ನಮಗಾಗಿಯೇ ಈ ಕಾದಂಬರಿ ಬರೆದಿದ್ದಾನೆ ಅನ್ನಿಸುತ್ತದೆ ಎಂದು ಆಗಲೇ ಹೇಳಿದೆ. ಲೇಖಕ ಬಳಸಿರುವ ಪದಗಳನ್ನು ಕಣ್ಣೆದುರಿಗೆ ತಂದುಕೊಳ್ಳುವುದಕ್ಕೆ ನಾವು ಅಷ್ಟು ಪ್ರಯತ್ನಪಟ್ಟಿದ್ದೇವೆ, ನಮ್ಮ ಕಲ್ಪನೆಯನ್ನು ಅಷ್ಟೊಂದು ದುಡಿಸಿಕೊಂಡಿದ್ದೇವೆ ಎನ್ನುವ ಕಾರಣಕ್ಕೇ ಕೆಲವು ಕಾದಂಬರಿಗಳನ್ನು ಅಷ್ಟೊಂದು ಇಷ್ಟಪಡುತ್ತಿರುತ್ತೇವೆ. ಆ ಕಾದಂಬರಿಯ ಪುಟಗಳು ನಾಯಿಕಿವಿಯ ಹಾಗೆ ಮುದುರಿ, ಹಳೆಯ ಕಾಗದದ ಹಾಗೆ ಪುಡಿಯಾಗುವ ಹಂತ ತಲುಪಿದ್ದರೂ ಅದು ನಮಗೆ ಇಷ್ಟವಾಗುತ್ತದೆ.

ಇಸ್ತಾಂಬುಲ್ ನಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ 1980ರ ದಶಕದಲ್ಲಿ ಆರಂಭವಾಯಿತು. ಪ್ರವಾಸಿಗರು ತಮ್ಮ ಹೋಟೆಲ್ ಕೋಣೆಗಳಲ್ಲಿ ಬಿಟ್ಟು ಹೋದ ಪುಸ್ತಕಗಳಲ್ಲಿ ನನಗೆ ಇಷ್ಟವಾಗುವಂಥ ಕಾದಂಬರಿಗಳು ಇರುತ್ತವೇನೋ ಎಂದು ಸೆಕೆಂಡ್ ಹ್ಯಾಂಡ್ ಅಂಗಡಿಗಳಿಗೆ ಹುಡುಕಿಕೊಂಡು ಹೋಗುತ್ತಿದ್ದೆ. ನಾನು ಓದಲು ಬಯಸುವಂಥ ಪುಸ್ತಕ ಸಾಮಾನ್ಯವಾಗಿ ಸಿಗುತ್ತಲೇ ಇರಲಿಲ್ಲ. ಪ್ರವಾಸಿಗರು ಶ್ರಮವಿಲ್ಲದೆ ಓದಿ ಮುಗಿಸಿದ ಪುಸ್ತಕಗಳಷ್ಟೇ ಮತ್ತೆ ಮಾರಾಟಕ್ಕೆ ಬಂದಿರುತ್ತಿದ್ದವು. ಕಾದಂಬರಿಯನ್ನು ಓದುವ, ಓದಿದ್ದನ್ನು ದೃಶ್ಯವಾಗಿಸಿಕೊಳ್ಳುವ ನಮ್ಮ ಶ್ರಮವೇ ನಾವು ಮಿಕ್ಕವರಿಗಿಂತ ವಿಶಿಷ್ಟರು ಅನ್ನುವ ಭಾವನೆ ಮೂಡಿಸಿರುತ್ತದೆ. ನಮ್ಮ ಬದುಕಿಗಿಂತ ಭಿನ್ನವಾದ ಬದುಕನ್ನು ಸಾಗಿಸುವ ಪಾತ್ರಗಳ ಜೊತೆಗೆ ನಮ್ಮನ್ನು ಗುರುತಿಸಿಕೊಂಡಿರುತ್ತೇವೆ. ‘ಯೂಲಿಸಿಸ್’ ಓದುವಾಗ, ನಾವು ನಮ್ಮ ಪರಂಪರೆ, ನಮ್ಮ ಬದುಕಿನ ಪ್ಲಾನು, ನಮ್ಮ ಭಯ, ನಮ್ಮ ಆಸೆ, ನಮ್ಮ ಪರಿಸರ, ನಮ್ಮ ಕನಸುಗಳಿಗಿಂತ ಭಿನ್ನವಾದ ಸಂಗತಿಗಳಿಂದ ರೂಪುಗೊಂಡ ಪಾತ್ರಗಳೊಂದಿಗೆ ಗುರುತಿಸಿಕೊಳ್ಳುತ್ತೇವಲ್ಲ ಅದೇ ಕಾರಣಕ್ಕೆ ಮನಸ್ಸಿಗೆ ತೃಪ್ತಿಯ ಭಾವ ಹುಟ್ಟಿರುತ್ತದೆ. ನಾವು ‘ಕಷ್ಟ’ದ ಕಾದಂಬರಿ ಓದುತ್ತಿದ್ದೇವೆ ಅನ್ನುವ ಎಚ್ಚರ ನಮ್ಮ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಇದ್ದುಕೊಂಡು ನಾವು ಮಾಡುತ್ತಿರುವುದು ವಿಶಿಷ್ಟವಾದ ಕೆಲಸ ಅನ್ನುವ ಭಾವವನ್ನೂ ಮೂಡಿಸುತ್ತದೆ. ಸವಾಲೆಸೆಯುವ ಜಾಯ್ಸ್ ನಂಥ ಲೇಖಕನನ್ನು ಓದುವಾಗ ಇವನನ್ನು ಓದುತ್ತಿದ್ದೇವಲ್ಲ ಎಂದು ನಮ್ಮನ್ನೇ ನಾವು ಅಭಿನಂದಿಸಿಕೊಳ್ಳುತ್ತಲೂ ಇರುತ್ತೇವೆ.

ಕಾದಂಬರಿ ಓದುವಾಗ ಲೇಖಕ ನಮಗಾಗಿಯೇ ಈ ಕಾದಂಬರಿ ಬರೆದಿದ್ದಾನೆ ಅನ್ನಿಸುತ್ತದೆ ಎಂದು ಆಗಲೇ ಹೇಳಿದೆ. ಲೇಖಕ ಬಳಸಿರುವ ಪದಗಳನ್ನು ಕಣ್ಣೆದುರಿಗೆ ತಂದುಕೊಳ್ಳುವುದಕ್ಕೆ ನಾವು ಅಷ್ಟು ಪ್ರಯತ್ನಪಟ್ಟಿದ್ದೇವೆ, ನಮ್ಮ ಕಲ್ಪನೆಯನ್ನು ಅಷ್ಟೊಂದು ದುಡಿಸಿಕೊಂಡಿದ್ದೇವೆ ಎನ್ನುವ ಕಾರಣಕ್ಕೇ ಕೆಲವು ಕಾದಂಬರಿಗಳನ್ನು ಅಷ್ಟೊಂದು ಇಷ್ಟಪಡುತ್ತಿರುತ್ತೇವೆ.

ಸರದಿ ಸಾಲಿನಲ್ಲಿ ನಿಂತ ಹುಡುಗಿ ಪ್ರೌಸ್ಟ್ ಸಂಪುಟ ಹೊರತೆಗೆದಾಗ ಅದನ್ನು ಓದುವುದಕ್ಕಿಂತ ಅದು ತನ್ನಲ್ಲಿದೆ, ತಾನು ಬೇರೆಯಥರದವಳು ಅನ್ನುವುದನ್ನು ತೋರುವ ಅಪೇಕ್ಷೆಯೇ ಪ್ರಧಾನವಾಗಿ ಇದ್ದಿರಬಹುದು. ತನ್ನಂಥ ವಿದ್ಯಾರ್ಥಿಗಳು ಇನ್ಯಾರು ಇದ್ದಾರೆ ಅನ್ನುವುದನ್ನು ತಿಳಿಯುವ ಕುತೂಹಲವೂ ಇದ್ದಿರಬಹುದು. ಆಕೆಯಂಥ ಓದುಗರನ್ನು ತಮ್ಮ ಓದಿನ ಕ್ರಿಯೆಯ ಅರ್ಥವನ್ನು ಬಲ್ಲ ಪ್ರಬುದ್ಧ ಓದುಗರು ಎಂದು ವಿವರಿಸಬಹುದು. ಇನ್ನೊಬ್ಬ ಓದುಗಿ ಹುಡುಗಿಯಂಥ ಓದುಗರನ್ನು ಕಾದಂಬರಿಗಳು ತಮಗೆ ಪ್ರದಾನ ಮಾಡುವ ವೈಶಿಷ್ಟ್ಯದ ಬಗ್ಗೆ ಅರಿವು ಇಲ್ಲದ ಮುಗ್ಧ ಓದುಗರು ಎಂದು ಹೇಳಬಹುದು. ಓದುಗರ ಮುಗ್ಧತೆ ಮತ್ತು ಪ್ರಬುದ್ಧತೆಗಳು ಕಾದಂಬರಿಯ ಕಲಾತ್ಮಕ ಗುಣದ ಹಾಗೆಯೇ ಕಾದಂಬರಿ ಓದುವ ಪರಿಸರ ಮತ್ತು ವಿಧಾನದ ಬಗ್ಗೆ, ಲೇಖಕನಿಗೆ ಇರುವ ಮಹತ್ವದ ಬಗ್ಗೆ ಅರಿವು ಕುತೂಹಲಕ್ಕೂ ಸಂಬಂಧಪಟ್ಟಿರುತ್ತದೆ.

ದಾಸ್ತೆಯೇವ್ಸ್ಕಿ ಎಲ್ಲ ಕಾಲದ ಮಹಾನ್ ರಾಜಕೀಯ ಕಾದಂಬರಿ ದಿ ಡೆವಿಲ್ಸ್ ಬರೆದಾಗ ಅದು ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿರಿಸಿಕೊಂಡ ಪ್ರಚಾರ ಸಾಮಗ್ರಿಯಂಥ ಬರವಣಿಗೆಯಾಗಿತ್ತು; ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ರಶಿಯನ್ನರು ಮತ್ತು ಉದಾರವಾದಿಗಳ ಟೀಕೆಯಾಗಿತ್ತು. ಆದರೂ ಅದರಲ್ಲಿರುವ ಮನುಷ್ಯ ಸ್ವಭಾವದ ಚಿತ್ರಣ ಇಂದಿಗೂ ಬಲು ದೊಡ್ಡ ಸಂತೋಷವನ್ನೇ ನೀಡುತ್ತದೆ. ಪಠ್ಯ ಏನು ಹೇಳುತ್ತದೆ ಅನ್ನುವುದಷ್ಟೇ ನಮಗೆ ಮುಖ್ಯ. ಮ್ಯೂಸಿಯಮ್ ಗೆ ಹೋಗಿ ಕಾಲಾತೀತವಾದ ವರ್ಣಚಿತ್ರದ ಚೆಲುವನ್ನು ತನ್ನ ಪಾಡಿಗೆ ತಾನು ಆಸ್ವಾದಿಸಲು ಬಯಸುವ ವೀಕ್ಷಕನ ಮನಸ್ಥಿತಿಯಂತೆಯೇ ಪಠ್ಯದಲ್ಲಿ ಮುಳುಗುವ ಸಂತೋಷವೂ ಓದುಗರಿಗೆ ಇರುತ್ತದೆ. ಅಂಥ ವೀಕ್ಷಕನಿಗೆ ಮ್ಯೂಸಿಯಮ್ಮನ್ನು ಯಾವ ಸರ್ಕಾರ, ಯಾವ ಕಾರ್ಪೊರೇಶನ್ನು ಯಾವ ಬಗೆಯ ಪ್ರಚಾರಕ್ಕೆ ಬಳಸುತ್ತಿದೆ ಅನ್ನುವುದು ಮುಖ್ಯವಾಗುವುದಿಲ್ಲ. ಆದರೆ ಕಾದಂಬರಿಯ ಕಾಲಾತೀತ ಚೆಲುವು ಕುರಿತು ಮಾತಾಡುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅದು ಪೂರ್ಣಗೊಂಡು ನಿಜವಾಗುವುದು ಓದುಗನ ಕಲ್ಪನೆಯಲ್ಲಿ, ಓದುಗನೋ ಅರಿಸ್ಟಾಟಲ್ ವಿವರಿಸಿದಂಥ ಕಾಲದಲ್ಲಿ (ಕಾಲ-ಬದಲಾವಣೆ ಮತ್ತು ಚಲನೆ ಅನ್ನುವುದು ಅರಿಸ್ಟಾಟಲ್ ವ್ಯಾಖ್ಯಾನ) ಬದುಕುವವನು. ನಾವು ವರ್ಣಚಿತ್ರ ನೋಡುವಾಗ ಅದರ ಸಾಮಾನ್ಯ ಕಾಂಪೊಸಿಶನ್ನನ್ನು ತಕ್ಷಣವೇ ಗ್ರಹಿಸುತ್ತೇವೆ. ಆದರೆ ಕಾದಂಬರಿ ಎಂಬ ಮಹಾರಣ್ಯದಲ್ಲಿ ನಾವು ಸಾವಕಾಶವಾಗಿ ಸಾಗುತ್ತ, ಆ ಕಾಡಿನ ಪ್ರತಿಯೊಂದೂ ಮರವನ್ನು ಕಲ್ಪನೆಯಲ್ಲಿ ಕಾಣುತ್ತ ಸಾಗುತ್ತೇವೆ. ಆ ಮೂಲಕವಷ್ಟೇ ನಾವು ಅದರ ಒಟ್ಟಾರೆ ಸಂಯೋಜನೆಯನ್ನೂ ‘ಕಾಲಾತೀತ’ ಸೌಂದರ್ಯವನ್ನೂ ಗ್ರಹಿಸಲು ಸಾಧ್ಯ. ಕಾದಂಬರಿಕಾರನ ಉದ್ದೇಶ, ಅವನ ಸಂಸ್ಕೃತಿಯ ಸಮಸ್ಯೆಗಳು, ಕಾದಂಬರಿಯ ವಿವರ ಮತ್ತು ಚಿತ್ರಗಳು, ಯಾವ ಓದುಗರನ್ನು ಕುರಿತು ಈ ಕಾದಂಬರಿ ರಚಿತವಾಗಿದೆ ಅನ್ನುವ ಯಾವ ಸಂಗತಿಯನ್ನೂ ತಿಳಿಯದೆ ಕಾದಂಬರಿಯ ಪದಗಳನ್ನು ದೃಶ್ಯವಾಗಿಸಿಕೊಳ್ಳುವ ಚಟುವಟಿಕೆಯಲ್ಲಿ ತೊಡಗಲಾರೆವು. ನಮಗೆ ಇಂದು ಪರಿಚಿತವಾಗಿರುವ ಕಾದಂಬರಿಯ ಕಲೆ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಬಾಲ್ಜಾಕ್, ಸ್ಟೆಂಡಾಲ್, ಡಿಕಿನ್ಸ್ ರಿಂದ ಬೆಳವಣಿಗೆಯಾದದ್ದು. ಅದಕ್ಕೆ ಸಲ್ಲಬೇಕಾದ ಮನ್ನಣೆ ನೀಡಿ ‘ಹತ್ತೊಂಬತ್ತನೆಯ ಶತಮಾನದ ಮಹಾನ್ ಕಾದಂಬರಿ’ಗಳು ಎಂದು ಗೌರವಿಸೋಣ. ಅವನಿನ್ನೂ ಕೇವಲ ನೂರೈವತ್ತು ವರ್ಷಗಳಷ್ಟು ಹಳೆಯವು. ಆ ಲೇಖಕರು ಫ್ರೆಂಚ್ ಮತ್ತು ಇಂಗ್ಲಿಶ್ ನುಡಿಗಳನ್ನು ಬಳಸುವ ಓದುಗರ ವಲಯದಲ್ಲಿ ಭಾಷೆಯ ಅಮರತ್ವದ ಸಂಕೇತಗಳಾಗಿದ್ದಾರೆ ಅನ್ನುವುದರಲ್ಲೂ ಅನುಮಾನವಿಲ್ಲ. ಆದರೆ ಮುಂದಿನ ನೂರೈವತ್ತು ವರ್ಷಗಳ ನಂತರ ಈ ಲೇಖಕರನ್ನು ಆಗಿನ ಓದುಗರು ಹೀಗೇ ಗೌರವಿಸುತ್ತಾರೇನು ಎಂಬ ಬಗ್ಗೆ ನನಗೆ ಸಂದೇಹವಿದೆ.

ಕಾದಂಬರಿಯನ್ನು ಪೂರ್ಣಗೊಳಿಸಿ ನಿಜಗೊಳಿಸುವ ಕೆಲಸದಲ್ಲಿ ಓದುಗರ ಉದ್ದೇಶವೂ ಲೇಖಕನ ಉದ್ದೇಶದಷ್ಟೇ ಮುಖ್ಯವಾಗುತ್ತವೆ. ನಾನು ಓದುಗನೂ ಹೌದು, ಲೇಖಕನೂ ಹೌದು. ಕ್ಯೂನಲ್ಲಿ ನಿಂತಿದ್ದ ಈಕೆಯ ಹಾಗೆ ನಾನು ಕೂಡಾ ಯಾರಲ್ಲೂ ಕುತೂಹಲ ಕೆರಳಿಸದ ಕಾದಂಬರಿಯನ್ನು ಓದುವುದರಲ್ಲಿ ಸುಖಪಡುತ್ತೇನೆ. ಆ ಕಾದಂಬರಿಯನ್ನು ನಾನೇ ಅನ್ವೇಷಿಸಿದೆ ಎಂಬ ಭಾವವನ್ನು ಸುಖಿಸುತ್ತೇನೆ. ಅನೇಕ ಓದುಗರ ಹಾಗೆ ನಾನೂ ಕಾದಂಬರಿಯ ಲೇಖಕನನ್ನು ‘ಯಾರೂ ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ,’ ಎಂದು ಕೊರಗುವ ಜೀವಿಯಾಗಿ ಕಲ್ಪಿಸಿಕೊಂಡು ಸಂತೋಷಪಡುತ್ತೇನೆ. ಲೋಕದ ಮರವೆಗೆ ಸಂದಿರುವ ಅಜ್ಞಾತ ಮೂಲೆಯಲ್ಲಿರುವ ಅಜ್ಞಾತ ಲೇಖಕನ ಅಜ್ಞಾತ ಕೃತಿಯನ್ನು ನಾನು ಮಾತ್ರ ಅರ್ಥಮಾಡಿಕೊಂಡಿದ್ದೇನೆ ಅನ್ನುವ ಭಾವವೂ ಹುಟ್ಟುತ್ತದೆ. ಕಾದಂಬರಿಯ ಪಾತ್ರಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂಬ ಹೆಮ್ಮೆ, ಜೊತೆಗೆ ಲೇಖಕ ಖುದ್ದಾಗಿ ನನ್ನ ಕಿವಿಯಲ್ಲೇ ಕಥೆ ಹೇಳುತ್ತಿದ್ದಾನೆ ಎಂಬ ಭಾವ ಹೆಮ್ಮೆ ತರುತ್ತದೆ. ಇದು ನಾನೇ ಬರೆದ ಕೃತಿ ಎನ್ನಿಸುತ್ತದಲ್ಲ ಅದು ಈ ಹೆಮ್ಮೆಯ ಉತ್ತುಂಗ… ಹಾಗೆಯೇ ಯಾರೂ ಹೋಗದ ಮ್ಯೂಸಿಯಮ್ ಗಳಿಗೆ ಹೋಗುವುದು ನನಗೆ ಇಷ್ಟ. ‘ಮ್ಯೂಸಿಯಮ್ ಆಫ್ ಇನ್ನೊಸೆನ್ಸ್’ನ ನಾಯಕ ಕೆಮಾಲ್ ನ ಹಾಗೆ ನಾನೂ ಕೂಡ ಕಾವಲುಗಾರರು ತೂಕಡಿಸುತ್ತಿರುವ, ನೆಲಹಾಸುಗಳು ಕಿರುಗುಟ್ಟುವ ಖಾಲಿ ಮ್ಯೂಸಿಯಮ್ಮುಗಳಲ್ಲಿ ಕಾಲ ಮತ್ತು ದೇಶಗಳ ಕಾವ್ಯವನ್ನು ಆಲಿಸುತ್ತೇನೆ. ಯಾರೂ ಓದದಿರುವ ಕಾದಂಬರಿಯನ್ನು ಓದುವುದೆಂದರೆ ನಾವು ಆ ಲೇಖಕನಿಗೆ ಏನೋ ಉಪಕಾರ ಮಾಡುತ್ತಿದ್ದೇವೆ ಅನ್ನುವ ಭಾವ ಅನುಭವಿಸುವುದೇ ಆಗಿದೆ. ಹಾಗಾಗಿ ಅಂಥ ಕಾದಂಬರಿ ಓದುವಲ್ಲಿ ಇನ್ನೂ ಹೆಚ್ಚಿನ ಶ್ರಮ, ಕಲ್ಪನೆಗಳನ್ನು ತೊಡಗಿಸುತ್ತೇವೆ.

ಲೇಖಕನ ಉದ್ದೇಶವನ್ನು ಅರಿಯುವುದು ಓದುಗರ ಸ್ಪಂದನ ಅರಿಯವುದು ಇವೆಲ್ಲ ಕಾದಂಬರಿಯನ್ನು ಓದುವಲ್ಲಿ ತೀರ ಕಷ್ಟಕೊಡುವ ಸಂಗತಿಗಳಲ್ಲ. ಈ ಮಾಹಿತಿಗೂ ನಾವು ಓದುತ್ತಿರುವ ಪಠ್ಯಕ್ಕೂ ಸಂಬಂಧ ಕಲ್ಪಿಸುವುದು ತೀರ ಕಷ್ಟದ ಕೆಲಸ. ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು. ಲೇಖಕ ಅಂಥ ಊಹೆ ಮಾಡಿಕೊಂಡೇ ಬರೆದಿದ್ದಾನೆ ಅನ್ನುವುದನ್ನು ಅರಿತೇ ಓದುಗನೂ ಕಾದಂಬರಿ ಓದು ತನ್ನ ಊಹೆಗಳನ್ನು ಮಾಡಿಕೊಳ್ಳುತ್ತಾನೆ. ಓದುಗರು ತಾವೇ ಲೇಖಕರೆಂದುಕೊಂಡು ಓದುತ್ತಾರೆ ಅಥವ ಲೇಖಕನು ಅತೃಪ್ತ, ನಿರ್ಲಕ್ಷಿತ ವ್ಯಕ್ತಿ ಎಂದು ಭಾವಿಸಿ ಓದುತ್ತಾರೆ ಅನ್ನುವುದು ಕೂಡ ಲೇಖಕರಿಗೆ ಗೊತ್ತು. ಅದಕ್ಕೆ ಅನುಗುಣವಾಗಿಯೇ ಅವರೂ ಬರೆಯುತ್ತಾರೆ. (ಲೇಖಕನ ಕಸುಬಿನ ಗುಟ್ಟುಗಳನ್ನು ಹೀಗೆ ಹೇಳಿದರೆ ನನ್ನನ್ನು ಲೇಖಕರ ಸಂಘದಿಂದ ಉಚ್ಛಾಟಿಸಿಯಾರು!)

ಓದುಗರೊಡನೆ ನಡೆಯುವ ಈ ಕಲ್ಪಿತ ಅಥವಾ ವಾಸ್ತವಿಕ ಚೆಸ್ ಆಟವನ್ನು ಕೆಲವರು ಕೃತಿಯ ಕೊನೆಯವರೆಗೂ ಆಟ ಆಡುತ್ತಾರೆ. ಕೆಲವು ಕಾದಂಬರಿಕಾರರು ಓದುಗರ ಕಣ್ಣಲ್ಲಿ ಮಹಾನ್ ಸ್ಮಾರಕವನ್ನು ಕಟ್ಟಿ ನಿಲ್ಲಿಸಲು ಬಯಸುತ್ತಾರೆ. ಕೆಲವು ಕಾದಂಬರಿಕಾರರು ಇತರರನ್ನು ಅರಿಯುವಲ್ಲಿ ಹೆಮ್ಮೆ ಪಡುತ್ತಾರೆ, ಕೆಲವರು ಇತರರು ತಮ್ಮನ್ನು ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ಲೇಖಕರು ಇತರರನ್ನು ಅರ್ಥಮಾಡಿಕೊಳ್ಳಲು ಯತ್ನಿಸುವಂತೆಯೇ, ಇತರರ ಬಗ್ಗೆ ಮರುಕ, ಕರುಣೆ ತೋರುವಂತೆಯೇ ತೀರ ಕುಶಲತೆಯಿಂದ, ತೀರ ಸೂಕ್ಷ್ಮವಾಗಿ ಕಾದಂಬರಿಯ ಕೇಂದ್ರವನ್ನು ಸೂಚಿಸುವುದಕ್ಕೂ ಅಡಗಿಸಿಡುವುದಕ್ಕೂ ಪ್ರಯತ್ನಿಸುತ್ತ ಇರುತ್ತಾರೆ. ಕಾದಂಬರಿಯ ಕೇಂದ್ರವೆಂದರೆ ಆಳವಾದ ಅರ್ಥ, ಇಡಿಯ ಕಾಡಿನ ದೂರದ ನೋಟ, ಸಮಗ್ರ ನೋಟ. ಕಾದಂಬರಿಕಾರನು ಇತರರ ಕಣ್ಣಿನ ಮೂಲಕ ಲೋಕವನ್ನು ನೋಡುತ್ತಿರುವ ಹಾಗೇ ತನ್ನ ಖಾಸಗೀ ಲೋಕದೃಷ್ಟಿಯನ್ನು ವ್ಯಕ್ತಪಡಿಸಲು ಯತ್ನಿಸುವುದಿದೆಯಲ್ಲ ಅದೇ ಕಾದಂಬರಿ ಕಲೆಯ ಕೇಂದ್ರದಲ್ಲಿರುವ ವಿರೋಧಾಭಾಸ.

ರಾಜಕೀಯ

ಮ್ಯೂಸಿಯಮ್ ಗಳ ಬಗ್ಗೆ ಮಾತಾಡುವಾಗ ರಾಜಕೀಯದ ಬಗ್ಗೆಯೂ ಮಾತಾಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಆದರೆ ಕಾದಂಬರಿಯೊಳಗಿನ ರಾಜಕೀಯವನ್ನಾಗಲೀ ಕಾದಂಬರಿಯ ಬಗ್ಗೆ ಮಾತಾಡುವಾಗ ರಾಜಕೀಯವನ್ನು ಕುರಿತು ಹೇಳುವುದಾಗಲೀ ಅಷ್ಟು ಪ್ರಚಲಿತವಾಗಿಲ್ಲ. ರಾಜಕೀಯ ಕಾದಂಬರಿ ಎಂಬುದು ಪರಿಮಿತವಾದ ಪ್ರಕಾರ. ಯಾಕೆಂದರೆ ರಾಜಕೀಯವೆನ್ನುವುದು ಇತರರನ್ನು ಅರಿಯಲು ಬಯಸದೆ ಇರುವ ನಿರ್ಧಾರ ಮಾಡಿರುವ ವಲಯ; ಕಾದಂಬರಿಯು ತೀರ ಭಿನ್ನವಾಗಿರುವವರನ್ನು ಅರ್ಥಮಾಡಿಕೊಳ್ಳಲು ನಿರ್ಧರಿಸಿರುವ ಕಲೆ. ಆದರೆ ಕಾದಂಬರಿಯಲ್ಲಿ ರಾಜಕೀಯವನ್ನು ಒಳಗೊಳ್ಳಬಹುದಾದ ಅವಕಾಶ ಅಪರಿಮಿತವಾದದ್ದು. ಯಾಕೆಂದರೆ ತನಗಿಂತ ತನ್ನ ಸಮುದಾಯಕ್ಕಿಂತ, ಕುಲಕ್ಕಿಂತ, ಸಂಸ್ಕೃತಿಗಿಂತ, ವರ್ಗಕ್ಕಿಂತ, ದೇಶಕ್ಕಿಂತ ಭಿನ್ನವಾಗಿರುವವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಕಾದಂಬರಿಕಾರನು ಪೊಲಿಟಿಕಲ್ ಆಗುತ್ತಾನೆ. ರಾಜಕೀಯ ಥೀಮ್ ಗಳು ಅಥವ ಉದ್ದೇಶಗಳು ಇರುವುದು ರಾಜಕೀಯ ಕಾದಂಬರಿಯಲ್ಲ; ಎಲ್ಲವನ್ನೂ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಯತ್ನಿಸುವ, ಇಡಿಯಾದ ಪೂರ್ಣತೆಯನ್ನು ನಿರ್ಮಿಸಲು ಬಯಸುವ ಕಾದಂಬರಿಯೇ ರಾಜಕೀಯ ಕಾದಂಬರಿ. ಹೀಗಾಗಿ ಈ ಅಸಾಧ್ಯವನ್ನು ಸಾಧ್ಯವಾಗಿಸಲು ಬಯಸುವ ಕಾದಂಬರಿಯ ಕೇಂದ್ರ ಗಹನವಾಗಿ, ಆಳದಲ್ಲಿ ಇರುತ್ತದೆ. ಮ್ಯೂಸಿಯಮ್ ಹೋಗುತ್ತೇವೆ, ನೋಡುತ್ತೇವೆ, ವಾರಾಂತ್ಯದಲ್ಲಿ ಪತ್ರಿಕಾ ವಿಮರ್ಶೆ ಓದುತ್ತೇವೆ. ಅದರಲ್ಲಿ ಕ್ಯುರೇಟರ್ ಕಲಾಕೃತಿಗಳ ಆಯ್ಕೆ ಮಾಡಿದ್ದರಲ್ಲಿ ಇರುವ ರಾಜಕೀಯ ಕುರಿತ ಚರ್ಚೆ ಇರುತ್ತದೆ. ಈ ಪೇಂಟಿಂಗ್ ಆಯ್ಕೆಯಾದದ್ದು ಯಾಕೆ, ಇನ್ನೊಂದನ್ನು ಬಿಟ್ಟದ್ದು ಯಾಕೆ ಹೀಗೆ. ಅಂದರೆ ಕಾದಂಬರಿಯನ್ನೂ ಮ್ಯೂಸಿಯಮ್ಮನ್ನು ಸಮಾನವಾಗಿ ಬಂಧಿಸುವ ಸಂಗತಿ ಎಂದರೆ ಪ್ರತಿನಿಧೀಕರಣದ್ದು. ಪ್ರತೀನಿಧೀಕರಣದ ರಾಜಕೀಯ ಪರಿಣಾಮಗಳದ್ದು. ಓದುಗರು ಕಡಮೆ ಸಂಖ್ಯೆಯಲ್ಲಿರುವ ಪಶ್ಚಿಮೇತರ ದೇಶಗಳಲ್ಲಿ ಈ ಸಮಸ್ಯೆ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.

ಇದಕ್ಕೆ ವಿರುದ್ಧವಾದ ನಿದರ್ಶನ ಅಮೆರಿಕ ಸಂಯುಕ್ತ ಸಂಸ್ಥಾನದ ಲೇಖಕರದ್ದು. ಸಾಮಾಜಿಕ ಮತ್ತು ರಾಜಕೀಯ ನಿರ್ಬಂಧಗಳಿಲ್ಲದೆ ನಿರಾಯಾಸವಾಗಿ ಬರೆಯುತ್ತಾರೆ. ಸ್ಥಾಪಿತವಾದ ಸಾಹಿತ್ಯಕ ಓದುಗವರ್ಗದ ಸಂಪತ್ತು ಮತ್ತು ಶಿಕ್ಷಣ ಮಟ್ಟ ಗೃಹೀತವಾಗಿಯೇ ಇದೆ. ಯಾರನ್ನು ಏನನ್ನು ಕಾದಂಬರಿಯಲ್ಲಿ ಪ್ರತಿನಿಧಿಸಬೇಕು ಅನ್ನುವುದು ಅವರಿಗೆ ಸಮಸ್ಯೆಯಲ್ಲ. ಯಾರಿಗಾಗಿ, ಏಕಾಂಗಿ ಬರೆಯಬೇಕು ಅನ್ನುವ ತಳಮಳ, ಕಳವಳ ಅವರಿಗಿಲ್ಲವೇ ಇಲ್ಲ. ಅಮೆರಿಕನ್ ಕಾದಂಬರಿಕಾರರು ಸಲೀಸಾಗಿ, ನಿರ್ಬಂಧವಿಲ್ಲದೆ, ತೀರ ಆತ್ಮವಿಶ್ವಾಸದಿಂದ ಮುಗ್ಧವಾಗಿ ಬರೆಯುವುದು ನೋಡಿದರೆ ನನಗೆ ಹೊಟ್ಟೆಯ ಕಿಚ್ಚು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಾವು ಒಂದೇ ವರ್ಗ, ಒಂದೇ ಸಮುದಾಯಕ್ಕೆ ಸೇರಿದವರು ಎಂಬ ಸಾಮಾನ್ಯ ಗೃಹೀತ ಲೇಖಕರಿಗೂ ಓದುಗರಿಗೂ ಇದೆಯಾದ್ದರಿಂದಲೇ ಲೇಖಕರು ತಮ್ಮ ತೃಪ್ತಿಗಾಗಿ ಬರೆಯುತ್ತಾರೆಯೇ ಹೊರತು ಯಾರನ್ನೋ ಪ್ರತಿನಿಧಿಸುವುದಕ್ಕಾಗಿ ಅಲ್ಲ.

ಲೇಖಕನ ಉದ್ದೇಶವನ್ನು ಅರಿಯುವುದು ಓದುಗರ ಸ್ಪಂದನ ಅರಿಯವುದು ಇವೆಲ್ಲ ಕಾದಂಬರಿಯನ್ನು ಓದುವಲ್ಲಿ ತೀರ ಕಷ್ಟಕೊಡುವ ಸಂಗತಿಗಳಲ್ಲ. ಈ ಮಾಹಿತಿಗೂ ನಾವು ಓದುತ್ತಿರುವ ಪಠ್ಯಕ್ಕೂ ಸಂಬಂಧ ಕಲ್ಪಿಸುವುದು ತೀರ ಕಷ್ಟದ ಕೆಲಸ. ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು.

ನನ್ನ ದೇಶ ಟರ್ಕಿಯೂ ಸೇರಿದ ಹಾಗೆ ಪಶ್ಚಿಮೇತರ ಬಡ ದೇಶಗಳಲ್ಲಿ ಯಾರನ್ನು, ಏನನ್ನು ಪ್ರತಿನಿಧಿಸಬೇಕು ಅನ್ನುವ ಸಂಗತಿ ಸಾಹಿತ್ಯಕ್ಕೂ ಕಾದಂಬರಿಕಾರರಿಗೂ ದುಃಸ್ವಪ್ನದಂತೆ ಕಾಡುತ್ತದೆ. ಕಾರಣವೇನೆಂದರೆ ಪಶ್ಚಿಮೇತರ ದೇಶಗಳ ಲೇಖಕರು ಮೇಲ್ವರ್ಗದವರಾಗಿರುತ್ತಾರೆ. ಅವರು ಕಾದಂಬರಿ ಎಂಬ ಪಶ್ಚಿಮದ ಸಾಹಿತ್ಯ ಪ್ರಕಾರ ಬಳಸುವುದು, ತಮಗಿಂತ ಭಿನ್ನ ವರ್ಗಕ್ಕೆ, ಆದ್ದರಿಂದಲೇ ಭಿನ್ನ ಸಂಸ್ಕೃತಿಗೆ ಸೇರಿದ ಜನರನ್ನು ಪ್ರತಿನಿಧಿಸಲು ಬಯಸುವುದು, ಪರಿಮಿತ ಓದುಗರವರ್ಗ ಇವೆಲ್ಲ ಸಮಸ್ಯೆಯನ್ನು ಜಟಿಲಗೊಳಿಸಿವೆ. ಹಾಗಾಗಿ ತಮ್ಮ ಕೃತಿಗಳ ವ್ಯಾಖ್ಯಾನ ಕುರಿತ ಹಾಗೆ ಕಾದಂಬರಿ ಲೇಖಕರು ತೀರ ಸೆನ್ಸಿಟಿವ್ ಆಗಿರುತ್ತಾರೆ. ಹೆಮ್ಮೆಯಿಂದ ಹಿಡಿದು ತೀರ ಸ್ವ ವಿರಕ್ತಿಯವರೆಗೆ ಅನೇಕ ಇಂಥ ಪ್ರತಿಕ್ರಿಯೆಗಳನ್ನು ಕಂಡಿದ್ದೇನೆ. ಈ ಪ್ರತಿಕ್ರಿಯೆಗಳು ಟರ್ಕಿಗೆ ಮಿತವಾದವಲ್ಲ. ಓದುಗ ವರ್ಗ ಪರಿಮಿತವಾಗಿರುವ ಪಶ್ಚಿಮೇತರ ದೇಶಗಳ ಲೇಖಕರು ಅನುಭವಿಸಿರುವ ಆಧ್ಯಾತ್ಮಿಕ ಗಾಯಗಳ ಪರಿಣಾಮ ಇದು.

ಓದುಗರ ಬಗ್ಗೆ ‘ಅಯ್ಯೋ ಪಾಪ’ಅನ್ನುವ ಧೋರಣೆ ಒಂದು ಬಗೆಯ ಲೇಖಕರಲ್ಲಿ ಕಂಡೀತು. ಓದುಗರು ಕಾಣುವುದಿಲ್ಲ, ಲೆಕ್ಕಕ್ಕೂ ಇಲ್ಲ. ತನ್ನ ಕಾದಂಬರಿಯನ್ನು ಜನ ಓದುವುದಿಲ್ಲ ಎಂಬುದೇ ಅವರ ಹೆಮ್ಮೆಯ ಕಾರಣವಾಗುತ್ತದೆ. ಇಂಥ ಕಾದಂಬರಿಕಾರರು ನವ್ಯ ಸಾಹಿತ್ಯ ನಿಲುವುಗಳಲ್ಲಿ ಆಶ್ರಯಪಡೆಯುತ್ತಾರೆ ತಮ್ಮನ್ನು ಇತರರೊಡನೆ ಗುರುತಿಸಿಕೊಳ್ಳದೆ ತಮ್ಮದೇ ಜಗತ್ತನ್ನು ಚಿತ್ರಿಸುತ್ತ ಯಶಸ್ಸು ಕಾಣುತ್ತಾರೆ. ರಾಷ್ಟ್ರೀಯವಾದಿಗಳು, ಕಮ್ಯುನಿಸ್ಟರು ಮತ್ತು ನೈತಿಕವಾದಿಗಳು ಇಂಥ ಕಾದಂಬರಿಕಾರರು ಸದ್ಯದ ಸಂಸ್ಕೃತಿಗೆ ಭಿನ್ನವಾದವರು ಎನ್ನುತ್ತ ಅವರಿಗೆ ತಕ್ಕ ಮರ್ಯಾದೆ ಮಾಡುತ್ತಾರೆ.

ಇನ್ನೊಂದು ಬಗೆಯ ಕಾದಂಬರಿಕಾರರು ಸಮುದಾಯದ, ರಾಷ್ಟ್ರದ ಭಾಗವಾಗಲು ಬಯಸುತ್ತಾರೆ. ತಮ್ಮನ್ನು ಇಷ್ಟಪಡಬೇಕೆಂಬ ಆಸೆ, ಸಾಮಾಜಿಕ ಟೀಕೆ ಟಿಪ್ಪಣಿಗಳನ್ನು ಮಾಡುವ ಉತ್ಸಾಹದ ಥ್ರಿಲ್, ಮತ್ತು ನೈತಿಕಗೊಳಿಸುವ ತೃಪ್ತಿ ಇವು ಇಂಥ ಕಾದಂಬರಿಕಾರರಿಗೆ ಚೈತನ್ಯ ತುಂಬುತ್ತವೆ. ಬರೆಯುವ ಶಕ್ತಿನೀಡುತ್ತವೆ. ಎಲ್ಲವನ್ನೂ ಗಮನಿಸುವ ನಿರ್ಧಾರಕ್ಕೆ ಬಲ ತುಂಬುತ್ತವೆ. ಇಂಥ ಲೇಖಕರು ಪ್ರತಿನಿಧೀಕರಣದಲ್ಲಿ, ಸಮುದಾಯಕ್ಕೆ ಸೇರಿದವರಾಗಿರುವುದರಲ್ಲಿ ಹೆಮ್ಮೆ ಪಡುತ್ತಾರೆ. ವಾಸ್ತವ ಇನ್ನೂ ವಿವರವಾಗಿ ಸಂಕೀರ್ಣವಾಗಿ ಇದೆ. ಈ ಸಮಸ್ಯೆಯ ಜಟಿಲತೆ ಮನಗಾಣಿಸಲು ನನ್ನದೇ ಕಥೆ ಹೇಳುವೆ.

ಮೇಲುನೋಟಕ್ಕೆ ತೀರ ರಾಜಕೀಯ ಕಾದಂಬರಿ ಅನ್ನಿಸುವಂಥ ಸ್ನೋ ಬರೆಯುವಾಗ ಸಿದ್ಧತೆಗೆಂದು ನಾನು ಈಶಾನ್ಯ ಟರ್ಕಿಯ ಕಾರ್ಸ್ ಪ್ರಾಂತಕ್ಕೆ ಅನೇಕಬಾರಿ ಭೇಟಿ ನೀಡಿದ್ದೆ. ಅವರ ಪ್ರಾಂತದ ಕಥೆ ಬರೆಯುತ್ತಿದ್ದೇನೆಂದು ಅಲ್ಲಿನ ಜನ ನಾನು ಕೇಳಿದ ಪ್ರಶ್ನೆಗಳಿಗೆಲ್ಲ ಸ್ವಂತ ಇಚ್ಛೆಯಿಂದ ಮುಕ್ತವಾಗಿ ಉತ್ತರಿಸಿದರು. ಬಡತನ, ಲಂಚ, ಮೋಸದ ವ್ಯವಹಾರ, ಅವ್ಯವಸ್ಥೆ ಎಲ್ಲ ಹೇಳಿದರು. ಊರಲ್ಲಿ ಅನೇಕ ಸಾಮಾಜಿಕ ರಾಜಕೀಯ ಸಮಸ್ಯೆಗಳಿದ್ದವು. ಅಸೂಯೆ, ಪ್ರತಿಭಟನೆಗಳು ಹಿಂಸೆಗೆ ಎಡೆಮಾಡಿಕೊಡುತ್ತಿದ್ದವು. ಕೆಟ್ಟವರು ಯಾರು ಎಂದು ಪ್ರತಿಯೊಬ್ಬರೂ ಹೇಳಿ ಅವರ ಬಗ್ಗೆ ಬರೆಯಬೇಕು ಅನ್ನುತಿದ್ದರು. ಊರಿನ ಕಷ್ಟಗಳ ಬಗ್ಗೆ ಜನ ಹೇಳುವ ಅಸಂಖ್ಯ ಕಥೆಗಳನ್ನು ರೆಕಾರ್ಡು ಮಾಡಿಕೊಳ್ಳುತ್ತ ಎಷ್ಟೋದಿನ ಕಳೆದೆ. ಹೊರಡುವ ದಿನ ಬಂತು. ಬಸ್ ಸ್ಟಾಂಡಿಗೆ ಬಂದ ಗೆಳೆಯರು, ‘ಪಾಮುಕ್, ನಮ್ಮ ಊರ ಬಗ್ಗೆ ಕೆಟ್ಟದ್ದೇನೂ ಬರೆಯಬೇಡ’ ಎಂದು ಕೇಳಿಕೊಂಡರು. ನಿಜವನ್ನು ಬರೆಯಬೇಕೋ ಪ್ರಿಯವಾಗಿ ಬರೆಯಬೇಕೋ ಎಂಬ ತೊಳಲಾಟದಲ್ಲಿರುವ ಕಾದಂಬರಿಕಾರನಂತೆ ನಾನು ಅಲ್ಲಿಂದ ಹೊರಟೆ.


ಗಯಟೆಯಲ್ಲಿದೆ ಎಂದು ಶಿಲರ್ ಹೇಳಿದ ಮುಗ್ಧತೆಯನ್ನು ಬೆಳೆಸಿಕೊಳ್ಳುವುದೊಂದೇ ಈ ಇಕ್ಕಟ್ಟಿನಿಂದ ಪಾರಾಗುವ ದಾರಿ ಅನ್ನಿಸಿತು. ಆದರೆ ಕಷ್ಟಗಳ ಸಮುದ್ರದಲ್ಲಿ ಮುಳುಗಿರುವ, ಆ ದುರ್ಭರ ಅನುಭವಗಳನ್ನೇ ತಮ್ಮ ಐಡೆಂಟಿಟಿ ಮಾಡಿ ಅಪ್ಪಿಕೊಂಡಿರುವ ಜನರ ನಡುವೆ ಮುಗ್ಧತೆಯನ್ನು ಉಳಿಸಿಕೊಳ್ಳುವುದು ಎಷ್ಟು ಕಷ್ಟವೆನ್ನುವುದೂ ಗೊತ್ತಾಯಿತು. ಯಾವುದೋ ಒಂದು ಗಳಿಗೆಯಲ್ಲಿ ತಿಳಿಯಿತು—ಕಾರ್ಸ್ ಜನರ ಬಗ್ಗೆ ನನ್ನ ಸ್ವಂತದ ತೃಪ್ತಿಗೆಂದು ಬರೆಯಲು ಸಾಧ್ಯವಿಲ್ಲ. ಈಗ, ಇಷ್ಟು ವರ್ಷಗಳ ನಂತರ ತಿಳಿಯುತ್ತಿದೆ-ಕೇವಲ ಸಂತೋಷಕ್ಕಾಗಿ ಮಾತ್ರ ಬರೆಯಲಾರೆ; ನಾನು ನನ್ನ ಸಂತೋಷಕ್ಕಾಗಿ ಮ್ಯೂಸಿಯಮ್ ನಿರ್ಮಿಸುತ್ತಿದ್ದೇನೆ.