ಕೊಡಗಿನ ಮಡಿಕೇರಿಯ ಬಳಿಯ ಬಿಳಿಗೇರಿಯ ಕೃಷಿಕ ನೀರ್ಕಜೆ ಮಹಾಬಲೇಶ್ವರ ಭಟ್ಟರು ನಿನ್ನೆಯ ಇರುಳು ತಮ್ಮ ತೊಂಬತ್ತೊಂದನೆಯ ಪ್ರಾಯದಲ್ಲಿ ತೀರಿಹೋದರು. ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಇವರು ದೈತ್ಯ ದರ್ಶನ ಎಂಬ ಚೀನಾ ಪ್ರವಾಸ ಕಥನ, ಬೈರವ ನಡಿಗೆ ಎಂಬ ಅಮೆರಿಕಾ ಪ್ರವಾಸ ಕಥನ, `ಹಿಮಾಲಯ ಪರ್ವತ ಪರ್ಯಟನ’ ಹಾಗೂ `ವಿಜ್ಞಾನ ಬೈರವ’ ಎಂಬ ತಂತ್ರಶಾಸ್ತ್ರ ಕುರಿತ ಪುಸ್ತಕಗಳನ್ನು ಪ್ರಕಟಿಸಿದ್ದರು. ಇಳಿವಯಸಿನಲ್ಲೂ ಓಶೋ, ಹಿಮಾಲಯ, ಕಾಂಗ್ರೆಸ್, ಕನ್ನಡ ಸಾಹಿತ್ಯ ಎಂದೆಲ್ಲ ಚುರುಕಾಗಿ ಓಡಾಡಿಕೊಂಡಿದ್ದ ಅವರ ಆತ್ಮಕಥೆ ‘ಅವತಾರ’ದ ಕೆಲವು ಪುಟಗಳು ಇಲ್ಲಿವೆ.

 

ಒಂದಾನೊಂದು ಊರಲ್ಲಿ ಒಬ್ಬ ಬ್ರಾಹ್ಮಣನಿದ್ದ…..  ಹೀಗೆ ಹಳೆಯ ಕತೆಗಳು ಪ್ರಾರಂಭವಾಗುತ್ತವೆ. ಅಂದರೆ, ಅವನು ಅಲ್ಲಿರಬೇಕು. ವಾಸವಾಗಿರಬೇಕು. ಅದು ಅವನ ಊರು. ಆ ಊರು ಅವನ ವಾಸಕ್ಕೆ ಆಧಾರ; ಆಶ್ರಯ ಹೀಗೆ. ನಾವಿರುವುದು ಕೊಡಗಿನ ಒಂದು ಹಳ್ಳಿ; ಬಿಳಿಗೇರಿ. ನೀರ್ಕಜೆ ದೂರ. ಹೆಚ್ಚು ಕಡಿಮೆ ನೂರು ಕಿಲೋಮೀಟರುಗಳ ಅಂತರ, ಇಲ್ಲಿಂದ, ಬಿಳಿಗೇರಿಯಿಂದ ಪಶ್ಚಿಮಕ್ಕೆ. ಅದು ನನ್ನ ಹುಟ್ಟೂರು. ಮೊದಲಿದ್ದ ಊರು. ಈ ‘ಊರು’ ಎನ್ನುವ ಪದ ಬೇರೆ ಬೇರೆ ಅರ್ಥಗಳಲ್ಲಿ ಬಳಕೆಯಾಗುತ್ತದೆ. ಮೈಸೂರಿಗೋ ಬೆಂಗಳೂರಿಗೋ ಹೋಗಿ `ಮನೆಯ ಯಜಮಾನರು ಇಲ್ಲವೇ?’ ಎಂದು ಕೇಳಿ. ಅವರಿಲ್ಲವಾದರೆ ನಿಮಗೆ ಸಿಗುವ ಉತ್ತರ ‘ಅವರು ಊರಿಗೆ ಹೋಗಿದ್ದಾರೆ’ ಎಂದು. ಅಂದರೆ, ಅವರು ಪ್ರಕೃತ ವಾಸವಿರುವ ಊರಿಂದ ಬೇರೊಂದು ಸ್ಥಳಕ್ಕೆ ಹೋಗಿದ್ದಾರೆ ಎಂದು ಇದರ ಅರ್ಥ. ಇನ್ನು ಕೆಲವು ಸಂದರ್ಭಗಳಲ್ಲಿ- ಉದ್ಯೋಗ ನಿಮಿತ್ತವಾಗಿ ವಾಸವಿರುವ ಊರು, ಯಾವುದಾದರೂ ನಗರವಿರಬಹುದು. ಅಂಥವರ ಹಿರಿಯರು, ಇನ್ನೊಂದು ಊರಲ್ಲಿ ವಾಸವಾಗಿರುತ್ತಾರೆ. ಇವರಿಗೂ ಅಲ್ಲಿ ಜಾಗದ ಹಕ್ಕಿರುತ್ತದೆ, ಅಂತಹ ಸಂದರ್ಭಗಳಲ್ಲೂ ‘ಊರಿಗೆ ಹೋಗಿದ್ದಾರೆ’ ಎನ್ನುವ ಮಾತು ಬರುತ್ತದೆ.

ನನ್ನ ವಿಚಾರದಲ್ಲಿ, ನೀರ್ಕಜೆ, ನಾನು ಹುಟ್ಟಿದ ಊರು, ಕೆಲಕಾಲ ಇದ್ದ ಊರು. ಅದರ, ಆ ಊರಿನ ಕುರಿತು ಈ ಮಾತು. ಯಾವುದೇ ಊರು ಇದ್ದಂತೆ ಇರುವುದಿಲ್ಲ. ಬದಲಾಗುತ್ತದೆ. ಅಂತೆಯೇ ನೀರ್ಕಜೆ ಕೂಡಾ ಅಂದು ಇದ್ದಂತೆ ಈಗಿಲ್ಲ. ನಾನೀಗ ಹೇಳುವುದು ಅಂದಿನ ನೀರ್ಕಜೆ. ಅಂದಿನ ಅಂದರೆ, ಆರೇಳು ದಶಕಗಳ ಹಿಂದಿನ ಊರು, ಹಳ್ಳಿ, ನಾನು ಹುಟ್ಟಿದ ಹಳ್ಳಿ. ನನಗೀಗ ಎಪ್ಪತ್ತು ತುಂಬಿ ನಾಲ್ಕು ತಿಂಗಳು. ನನಗೆ ನಾಲ್ಕೋ ಐದೋ ಇರಬಹುದು. ಆಗಿನ ನೆನಪು. ನೆನಪು ಬಂದಷ್ಟೆ, ನೆನಪು ಇದ್ದಂತೆ ಬರೆಯುವ ಸಂಕಲ್ಪವಿದು.

ನೀರ್ಕಜೆ, ನೀರಕಜೆ. ಕಜೆ ಎಂದರೆ ಜೌಗು. ತುಂಬ ನೀರು ನಿತ್ತು ಮೆದುವಾದ ಮಣ್ಣಿನ ಜಾಗ. ಇದು ಕಜೆ. ಇಲ್ಲಿಯೂ ನೀರಿಗೆ ಕೊರತೆಯಿಲ್ಲ. ಆಗ ಕಜೆ ಇತ್ತೋ ಇಲ್ಲವೋ ಹೇಳಲಾರೆ. ಅಂತೂ ಸ್ಥಳಕ್ಕೆ ಈ ಹೆಸರು, ಮುಖ್ಯವಾಗಿ ಐದು ಮನೆಗಳು. ಬಯಲು ಸೀಮೆಯಂತೆ ಗುಂಪು ಮನೆಗಳಲ್ಲ. ಒಂದು ಮನೆ, ಅವರ ಆಸ್ತಿ ಸುತ್ತ. ಮತ್ತೆ ಇನ್ನೊಂದು ಮನೆ. ಅದರ ಸುತ್ತ ಅವರ ಆಸ್ತಿ, ಹೀಗೆ. ನೀರ್ಕಜೆ ಬೈಲು, ಬಯಲಲ್ಲಿ, ಬೈಲು. ಬೈಲು ಎಂದರೆ ಇಳಿಜಾರಾಗಿ ಹರಹಿದ ಭಾಗ, ಆ ಕಡೆ ಈ ಕಡೆ ಗುಡ್ದಗಳು. ಉತ್ತರದಿಂದ ದಕ್ಷಿಣಕ್ಕೆ ಗುಡ್ಡದ ಬದಿ ಹರಿಯುವ ತೋಡು. ತೋಡಿನ ಪೂರ್ವಕ್ಕೆ ತಟ್ಟೂ ಮಾಡೀ ಬತ್ತ ಬೆಳೆಸುವ ಗದ್ದೆಗಳು. ಅಲ್ಲಲ್ಲಿ ತೋಟ, ಅಡಿಕೆ ತೋಟ, ಬದಿಯಲ್ಲಿ ತೆಂಗು, ಇದು ಬೈಲು. ನೀರ್ಕಜೆ ಬೈಲು.

ನೀರ್ಕಜೆ ಬೈಲಿನ ಉತ್ತರ ತುದಿಯಲ್ಲಿ ಶರಳಾಯರ ಮನೆ. ಅವರ ಮನೆಯ ಪೂರ್ವಕ್ಕೆ, ದಕ್ಷಿಣಕ್ಕೆ ಒತ್ತಿಕೊಡಂತೆ ನಮ್ಮ ಮನೆ.

ಮನೆ: ಮನೆ ಜಗಲಿ ಹೊರ ಜಗಲಿ, ಒಳಜಗಲಿ, ಹೊರಜಗಲಿ ಅಂದಾಜು ಎರಡೂವರೆ ಮೂರಡಿ ಅಗಲಕ್ಕೆ, ಉದ್ದ ಮನೆಯಷ್ಟೆ. ನೆಲಮಟ್ಟದಿಂದ ಎತ್ತರಕ್ಕೆ ಮನೆಕಟ್ಟಲು ಹಾಕಿದ ಮಣ್ಣು ತಟ್ಟಿನ ಮುಂಭಾಗ. ಈ ಮೂರಡಿ ಬಿಟ್ಟೇ ಗೋಡೆ. ನೆಲದಿಂದ ಒಂದೋ, ಎರಡೋ, ಮೆಟ್ಟಿಲು, ಮೆಟ್ಟ್ಲೇರಿ ಹೋದರೆ, ಇದೇ ಹೊರ ಜಗಲಿ, ಮನೆಯ ನಾಲ್ಕೂ ಸುತ್ತ. ಮೆಟ್ಟಿಲಿಗೆ ಸರಿಯಾಗಿ ಮುಂಬಾಗಿಲು. ಬಾಗಿಲು ದಾಟಿ ಒಳ ಹೋದರೆ ಒಳ ಜಗಲಿ. ಇದು ಮನೆಯಷ್ಟೇ ಉದ್ದ. ಅಗಲ ಏಳೆಂಟು ಅಡಿಗಳಿರಬಹುದು. ಎಡತುದಿಯಲ್ಲಿ ಜಗಲಿಗೆ ಅಡ್ಡಲಾಗಿ ಮಂಚ. ಅದು ನನ್ನ ತಂದೆಯವರು ಮಲಗುತ್ತಿದ್ದ ಮಂಚ. ಪೂರ್ವಕ್ಕೂ ದಕ್ಷಿಣಕ್ಕೂ ಕಿಟಕಿಗಳು. ಹಗಲು ಹೊತ್ತು ಕೂರುತ್ತಿದ್ದುದು ಅದರಲ್ಲೇ. ಮುಂಬಾಗಿಲಿನ ಬಲಕ್ಕೆ ಒಳ ಹೋಗಲು ಬಾಗಿಲು. ಸ್ವಲ್ಪ ಬಾಗಿಯೇ ಒಳ ಹೋಗಬೇಕು. ಅಷ್ಟೇ ಎತ್ತರವದು. ಹೊಸ್ತಿಲು, ಕಾಲು ಎತ್ತಿ ಇಡಬೇಕು. ಚೌಕಟ್ಟಿನ ಮೇಲ್ಭಾಗದಲ್ಲಿ ದಾರಂದ ಏನಾದರೂ ಇಡಲು. ಎರಡು ಬಾಗಿಲ ಪಡಿ, ಸಂಕೋಲೆಪಡಿ ಒಂದು, ತೆಗೆದು ಹಾಕುವಾಗ ಶಬ್ದ. ಇದು ಮುಖ್ಯ ಬಾಗಿಲು. ಒಳಗೆ ಕೈಸಾಲೆ, ಕತ್ತಲೆ, ದೇವರ ಕೋಣೆ, ಪ್ರತ್ಯೇಕ ಕೋಣೆಯಲ್ಲ- ಕೈಸಾಲೆಯ ಒಂದು ಮೂಲೆ. ದೇವರ ಗುಂಡ. ಎಡಕ್ಕೆ ಉಪ್ಪರಿಗೆಗೆ ಹತ್ತಲು ಏಣಿ. ಅಗಲವಾದ ಮೆಟ್ಟಿಲುಗಳು. ಕೈಸಾಲೆ ದಾಟಿ ಪಶ್ಚಿಮಕ್ಕೆ ಉಂಬ ಜಗಲಿ. ಅಂದರೆ ಊಟಕ್ಕೆ ಕೂರುವ ಜಾಗ. ಎರಡು ಪಂಕ್ತಿ ಹಾಕುವಷ್ಟು ಅಗಲ. ಈ ಜಗಲಿಯ ಎಡಕ್ಕೆ ಅಂದರೆ ಮನೆಯ ದಕ್ಷಿಣ ಭಾಗದಲ್ಲಿ ಅಡಿಗೆ ಕೋಣೆ. ಮಣ್ಣ ಒಲೆಗಳೂ, ಹಿತ್ತೋಲೆ ತಾಗಿಕೊಂಡು ಒಲೆಕಟ್ಟೆ. ಪದಾರ್ಥಗಳಾದ ಮೇಲೆ ಒಲೆಯ ಮೇಲಿಂದ ತೆಗೆದಿಡುವ ಜಾಗ. ಇದು ಸದಾ, ಅಂತೂ ಹೆಚ್ಚು ಹೊತ್ತು ಬಿಸಿಯಾಗಿರುವ ಜಾಗ. ಮೇಲಕ್ಕೆ ಮಸಿ ಜೆಂಗ. ಒಲೆಯ ಬೆಂಕಿಯ ಶಾಖಕ್ಕೆ ಏನನ್ನಾದರೂ ಒಣ ಹಾಕಲು, ಬಿಸಿಯಾಗಿಡಲು ಉಪಯೋಗ. ಇದರ ಮೇಲಕ್ಕೆ ಹೊಗೆಅಟ್ಟ. ಹೊಗೆ ಮೇಲೆ ಹೋಗಲು -ಈ ಅಟ್ಟವೂ ಸಲಿಕೆಯದ್ದೇ, ಅಡಿಕೆ ಮರದ ಸಲಿಕೆ. ಮಳೆಗಾಲದಲ್ಲಿ ಅಡಿಕೆ ಒಣಗಿಸಲು ಈ ಜಾಗ. ಅಡಿಕೆ ಹಾಕಿದರೆ ಹೊಗೆ ಹೋಗುವುದು ಅಷ್ಟರಲ್ಲೇ ಇದೆ ಅಡಿಗೆ ಮನೆ ತುಂಬಿ, ಕಿಟಕಿ ಬಾಗಿಲುಗಳ ಮೂಲಕ ಹೇಗೋ ಹೊರಗೆ ಹೋಗುತ್ತದೆ. ಅಡಿಗೆ ಮಾಡುವವರ ಕಣ್ಣು ಮೂಗುಗಳಲ್ಲಿ ನೀರು. ಮನೆಯಂತೂ ಬೆಚ್ಚಗೆ. ಅಟ್ಟದ ಉಪ್ಪಿನಕಾಯಿ, ಬೆಲ್ಲದ ಮಂದಗೆ, ಉಪ್ಪಿನ ಗೋಣಿ ಎಲ್ಲ ಬಿಸಿಯಾಗಿಲ್ಲವಾದರೆ ಹೇಗೆ? ಅಷ್ಟು ಮಾತ್ರವಲ್ಲ. ಅಡಿಗೆ ಮಾಡುವವರು ಹೆಣ್ಮಕ್ಕಳು. ನಾವು ಗಂಡುಮಕ್ಕಳು.

ಉಣ್ಣುವುದು ನಮ್ಮ ಕೆಲಸ. ಈ ಉಂಬ ಜಗಲಿಯಿಂದ ಉತ್ತರ ಕೊನೆಯಲ್ಲಿ ಬಾಗಿಲು. ಪಶ್ಚಿಮಕ್ಕೆ ಕಿಟಕಿ. ಕಿಟಕಿಯ ದಳಿಯನ್ನೇ ಒತ್ತಿ ಸರಿಸಿದರೆ ಅದೇ ಬಾಗಿಲು ಆಗುತ್ತದೆ. ಬೆಳಕು ಬಿಡಿ, ಗಾಳಿಯೂ ಓಡಾಡದು. ಬಡಗ ಬಾಗಿಲಿಂದ ಹೊರ ಜಗಲಿ ಹೋಗಿ, ಕೈ ತೊಳೆಯಬೇಕು. ಕೈಸಾಲೆಯಿಂದ ಉಪ್ಪರಿಗೆಗೆ ಏಣಿ ಎಂದೆನಷ್ಟೆ. ಉಪ್ಪರಿಗೆ ಮಣ್ಣು ಹಾಕಿದ್ದು. ಅಟ್ಟದ ಜಾಗ ಮಾತ್ರ ಹೊಗೆ ಏರಲು ಬಿಟ್ಟಿರುವುದು. ಪೋಕು ಮುಟ್ಟಿದರೆ ಈ ಉಪ್ಪರಿಗೆಯಲ್ಲಿ ಮಲಗಲೂಬಹುದು.

ಮಾಡು, ಮೋಂದಾತಕ್ಕೆ ಇಳಿಬಿಟ್ಟ ಬಿದಿರಿನ ಗಳಗಳು. ಅಡ್ಡಲಾಗಿ ಸಲಿಕೆ. ಇಂದಿನ ಬಳ್ಳಿಯ ಕಟ್ಟ. ಮೇಲಕ್ಕೆ ಸೋಗೆ-ಅಡಿಕೆ ಮರದ ಎಲೆ. ಮೂರು ನಾಲ್ಕನ್ನು ಒಂದರ ಮೇಲೊಂದರಂತೆ ಪೇರಿಸಿ ನೀರು ಒಳಬಾರದೆ ಹರಿದು ಹೋಗುವಂತೆ ಹಾಕಿದ ಮಾಡು, ಈ ಸೋಗೆ ಹಾಕುವ ಕೆಲಸ- ಅತ್ಯಂತ ಕುಶಲ ಕರ್ಮ, ಅಭ್ಯಾಸಿಗಳೇ ಆಗಬೇಕು. ಮನೆಯಿಡೀ ಮಳೆಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪು.

ಮನೆಯ ಮೂಡಕ್ಕೆ ಅಂಗಳ. ಮತ್ತೆ ಅಡಿಕೆ ತೋಟ. ಮಧ್ಯೆ ಎರಡಡಿಯ ಚಿಟ್ಟೆ-ಅದರ ಮೇಲೆ ಕೂರಬಹುದು. ಈ ಅಂಗಳದಲ್ಲೇ ಅಡಿಕೆ ಒಣಗಿಸುವುದು. ತೆಂಕಕ್ಕೆ ಅಷ್ಟೇ ಅಗಲದ ಚಿಕ್ಕ ಅಂಗಳ. ಆ ಅಂಗಳದ ಪಶ್ಚಿಮಕ್ಕೆ ಬಾವಿ. ಸದಾ ಬತ್ತದ ಶುಭ್ರ ಸ್ವಚ್ಚ ನೀರು. ಮನೆಯ ಪಶ್ಚಿಮ ದಿಕ್ಕಿಗೆ ತೆಂಕು ಬಡಗಲಾಗಿ ಕೊಟ್ಟಿಗೆ -ಬನಗಳ  ಹಟ್ಟಿ, ತೆಂಕ  ಮೂಲೆಗೆ ಬಿಸಿ ನೀರಿನ ಕೊಟ್ಟಿಗೆ, ಬಚ್ಚಲು ಮನೆ. ಹೂತಿಟ್ಟ ಹಂಡೆಗೆ ಬಾವಿಯಿಂದ ನೀರು ಸೇದಿ ತುಂಬಬೇಕು. ಸದಾ ಬಿಸಿನೀರು ಸಿದ್ಧ. ಒಲೆಗೆ ಹಾಳೆ, ತೆಂಗಿನ ಕೊತ್ತಳಿಗೆ ಇಂಧನ. ಕಲ್ಲು ಹಾಸಿದ ಗುಳಿ, ಚಿಟ್ಟೆಯಲ್ಲಿ ಚೆಂಬಿನ ತಪ್ಪಲೆ ಸ್ನಾನ ಮಾಡಲು. ಕೋಣೆಗೆ ಅಗಳಿ ಇಲ್ಲದ ಬಾಗಿಲು, ಪಡಿ. ಪಡಿಸರಿದಿತ್ತೆಂದರೆ ಯಾರೋ ಸ್ನಾನ ಮೂಡುತ್ತಾರೆಂದೇ ಅರ್ಥ. ಯಾರೂ ತೆಗೆಯರು. ಹಟ್ಟಿ ಮತ್ತು ಬಚ್ಚಲು ಮನೆ ಮಧ್ಯದ ಜಾಗವೇ ಕೊಟ್ಟಿಗೆ. ದೊಡ್ಡ ದೊಡ್ಡ ಒಲೆಗಳು. ವಿಶೇಷ ಕಟ್ಟಲೆ ಅಡಿಗೆಗೆ. ಹಟ್ಟಿಯಲ್ಲಿ ಎರಡೋ ಮೂರೋ ಎಮ್ಮೆಗಳು. ಒಂದೆರೆಡು ಕರು ಬಿಟ್ಟು ಕರೆಯುವೆವು, ಉಳಿದದ್ದು ಬಚ್ಚೆಮ್ಮೆ. ಒಂದೋ ಎರಡೋ ದನಗಳು. ಕೊಟ್ಟಿಗೆಗೆ ತಾಗಿದಂತೆ ಕರುಗಳ ಹಟ್ಟಿ. ಗುಡ್ಡದಿಂದ ತಂದ ಸೊಪ್ಪಿನ ಗೂಟ. ಮುಷ್ಟಿ ಮುಷ್ಟಿ ಹಿಡಿದು ಗೂಟದ ಮೇಲಿಟ್ಟು ಕೊಚ್ಚುವುದು, ಹೀಗೆ ಕೊಚ್ಚಿದ ಸೊಪ್ಪನ್ನಷ್ಟೇ ಹಟ್ಟಿಗೆ ಬಿಕ್ಕುವುದು. ಅದರ ಮೇಲೆ ಜಾನುವಾರು ಸೆಗಣಿ ಮೂತ್ರ ಮಾಡಿ ಮೆಟ್ಟಿ ಹದವಾದ ಮೇಲೆ ಮತ್ತೊಂದಷ್ಟು ಅಟ್ಟಿ ಸೊಪ್ಪು. ಒಂದೆರೆಡು ತಿಂಗಳಿಗೊಂಮ್ಮೆ ಗೊಬ್ಬರ ತೆಗೆದು ತೋಟಕ್ಕೆ. ಬೇಸಿಗೆಯಲ್ಲಾದರೆ ತೋಟದ ಒಂದು ಭಾಗದಲ್ಲಿ ರಾಶಿ ಹಾಕುವುದು, ಗೋಣಿಯಿಂದ ಮುಚ್ಚಿಡುವುದು ಬಿಸಿಲಿನಿಂದ ಒಣಗದ ಹಾಗೆ. ಮಳೆಗಾಲ ಆರಂಭವಾಯಿತೆಂದರೆ ಅಡಿಕೆ ಮರದ ಬುಡಕ್ಕೆ ಇದರ ರವಾನೆ. ಜಾನುವಾರು ಕಟ್ಟಲು ಬೈಪೆಣೆಗೆ ಹೂತ ಕೊಳಂದಿ, ಹುರಿ ಹಗ್ಗ ಕಟ್ಟಲು. ಗೋಡೆಯಲ್ಲೂ ಒಂದೆರೆಡು ಕೊಳಂದಿ, ಕರುಗಳನ್ನು ಎಳೆದು ಕಟ್ಟಲು. ಎರಡು ಗೋಡೆಗಳ ಮೂಲೆಯಲ್ಲಿ ಗೋಡೆಗೆ ಹೂತಿಟ್ಟ ಹಲಗೆ-ಹಾಲಿನ ಚೊಂಬು ಇಡಲು. ಬೈಪೆಣೆ ಹುಲ್ಲು ಹಾಕಲು. ಮೇಲೆ, ಅಟ್ಟ ಹುಲ್ಲು ತುಂಬಿಡಲು. ಗುಡ್ಡಕ್ಕೆ ಬಿಟ್ಟ ಜಾನುವಾರು ಸಂಜೆ ಹಟ್ಟಿಗೆ ಬಂದ ಮೇಲೆ ಹುಲ್ಲು ಹಾಕಬೇಕಲ್ಲ, ಅದಕ್ಕೆ ಬೈಪಣೆಯ ಪೂರ್ವಕ್ಕೆ ಗೇನೆತರದ ಚಿಟ್ಟೆ, ಹುಲ್ಲು ಚೆಲ್ಲಿ ಹಾಳಾಗದ ಹಾಗೆ.

ಈ ಕೊಟ್ಟಿಗೆಯ ಪಡುವಕ್ಕೆ ಬಾಗಿಲು, ಬೆಳಿಗ್ಗೆ ಕರೆದಾದ ಮೇಲೆ ಗುಡ್ಡಕ್ಕೆ ಜಾನುವಾರು ಬಿಡಲು. ಬಡಗು ದಿಕ್ಕಿನಲ್ಲಿ ಮಜಲು ಗದ್ದೆ. ಗದ್ದೆಗೆ ತಾಗಿ ಒರುಂಕು. ಎರಡೂ ಬದಿಯಲ್ಲಿ ಕಾಡು ಗುಲಾಬಿ ಬೇಲಿ. ಮುಂದೆ ಹೋದರೆ ಗುಡ್ಡ. ಬೋಳಲ್ಲ ಮರಗಳು, ಗೇರು ಮಾವು, ಕಾಸರಕ, ಕುಂಟಾಲ, ದಡ್ಡಾಲ ಹೀಗೆ ಹಲವು ಹತ್ತು. ಸೊಪ್ಪು ಮಧ್ಯೆ ಪುದೆಲು, ಕುಂಟಾಲ ಕೇಪಳ. ನಡುವಲ್ಲಿ ಹುಲ್ಲು, ಮುಳಿಹುಲ್ಲು, ಅಗಲ ಎದೆಯ ಚಿಗುರು ಹುಲ್ಲು ಹೀಗೆ ಇವಕ್ಕೆ ಮೇವು. ಸಂಜೆ ಮಾಮೂಲಿ ಹೊತ್ತಿಗೆ ಹಟ್ಟಿಗೆ ಬಾರದಿದ್ದಾಗ ಹುಡುಕಲು ಹೋಗುವುದು. ಹಗಲು ಹಗಲೇ ಹುಲಿ ಹಿಡಿದು ತಿನ್ನುವುದೂ ಇದೆ.

ಕೊಟ್ಟಿಗೆಯ ಪಡುವಕ್ಕೆ ಚಿಕ್ಕ ತೋಟ. ಆಮೇಲೆ ತೋಡು. ಆ ತೋಡು ಮನೆಯ ದಕ್ಷಿಣಕ್ಕೆ ಚಾಚಿರುವ ದೊಡ್ಡ ತೋಟಕ್ಕೆ ಸುತ್ತು ಹಾಕಿ ಕೆಳಗೆ ಅಂದರೆ ಪೂರ್ವಕ್ಕೆ ಹರಿಯುತ್ತದೆ. ಈ ತೋಟ ಬದಿಗೆ ಆಳೆತ್ತರಕ್ಕೆ ಕಲ್ಲು -ಕಟ್ಟಿದೆ-ಮಳೆಗಾಲದಲ್ಲಿ ಹರಿದು ಬರುವ ನೀರ ರಭಸಕ್ಕೆ ದಡ ಕೊರೆದು ಹೋಗದಂತೆ ಕಾಪಾಡಲು. ಇದರ ಒಳ ಬದಿಗೆ ಉದ್ದಕ್ಕೂ ತೆಂಗಿನ ಕಟ್ಟಾಪುಣಿ. ಸದಾ ನೀರ ಪಸೆ ಇರುವುದರಿಂದ ತುಂಬ ಫಸಲು ಕೊಡುವ ತೆಂಗಿನ ಮರಗಳು. ದೊಡ್ಡ ತೋಟ ಎಂದೆನಷ್ಟೇ. ಈ ದೊಡ್ದ ತೋಟದ ವಿಸ್ತೀರ್ಣವೇ ಒಂದೂ ಒಂದೂವರೆ ಎಕ್ರೆ. ಕೊಳಕೆ ತೋಟವದು. ನೀರ ಚೇಪುವುದು ಬೇಡ. ಮನೆ ಬಾಗಿಲಿನ ಮತ್ತು ಕೊಟ್ಟಿಗೆಯ ಹಿಂದಿನ ತೋಟಕ್ಕೆ-ಮರಗಳಿಗೆ ನೀರು ಚೇಪಬೇಕು.

ಮನೆಯ ಪಡುಭಾಗದಲ್ಲಿ ಬಡಗಿನಿಂದ ಹರಿದು ಬರುವ ತೋಡಿಗೆ ಸುಗ್ಗಿ ಬೆಳಗಾಗುವಾಗ ಕಟ್ಟೆ ಕಟ್ಟಬೇಕು. ನಿಶ್ಚಿತ ಜಾಗದಲ್ಲಿ ಎರಡು ಕಡೆ ತೂಣ ಊರಿ, ಮಾದೇರಿಬಳ್ಳಿಯ ಪಡೀಮೊಡೆದು ಮಧ್ಯೆ ಕಲ್ಲು ತುಂಬಿ ಕಟ್ಟಕ್ಕೆ ಆಧಾರವಾಗಿ ಕಂಬದಂತೆ ಮೇಲಕ್ಕೆ ತರುವುದು. ಬರೆಯಿಂದ ಮಣ್ಣು ಅಗೆದು ತೋಡಿಗೆ ಸೇತುಬಂಧನ. ಕೊಚ್ಚಿ ಹೋಗದಂತೆ ಹುಲ್ಲು ಕಚ್ಚಿಸುವುದು. ತೊಟ್ಟು ನೀರು ಸೋರಿ ಹೋಗದು. ಪರ್ಲಾಂಗ್ ಕಟ್ಟಲೆ ಉದ್ದಕ್ಕೆ ನೀರು ಶೇಕರಣೆ. ಅಕಸ್ಮಾತ್ ಮಳೆ  ಬಂದು ಮೇಲಿಂದ ಹೆಚ್ಚು ನೀರು ಬಂದರೆ ಹಾದು ಹೋಗಲು ‘ಮಾದು’ ಕೊಡುವುದು. ಎರ್ಕಿನಿತ್ತ ನೀರು ಕಣಿಯ ಮೂಲಕ ಗದ್ದೆಗೆ.ಸುಗ್ಗಿ ಬೆಳೆ ಸಮೃದ್ಧ. ಈ ಕಣಿ ಮನೆಯ ತೆಂಕಿನಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ನೀರು ಹರಿಯಲು. ನಾಲ್ಕು ಸಾಲಿನ ಅಡಿಕೆ ಮರಗಳಾಚೆ ಬೈಲು-ಗದ್ದೆ ಬೈಲು. ಎರಡು ಬೆಳೆ ಗದ್ದೆ. ಅಪರೂಪಕ್ಕೆ ಕೆಲವು ಗದ್ದೆಗಳಲ್ಲಿ ಜೊಟ್ಟೆ ಹಾಕಿ ಕೊಳಾಕೆ ಬೆಳೆ. ಎರಡೆರಡೂ ಸಾಲಿಗೊಂದರಂತೆ ತೋಟದ ಮಧ್ಯೆ ಕಣಿ. ಮುಖ್ಯ ಕಣಿಯಿಂದ ಇದಕ್ಕೆ ನೀರು ಬಿಡುವುದು. ಬಾಳೆ ಚರಂಬಾರು(ಎಲೆ)ಸುತ್ತಿ ಕಟ್ಟಿದ ಕಟ್ಟು ಕಣಿಗೆ ಅಡ್ಡಲಾಗಿಟ್ಟೂ ನೀರು ಎತ್ತರಕ್ಕೆ ಏರುವಂತೆ ಮಾಡಿ ಹಾಳೆ ಚಿಳ್ಳೀಯಲ್ಲಿ ನೀರು ಹಾಯಿಸುವುದು ಅಡಿಕೆ ಮರದ ಬುಡಕ್ಕೆ. ಸುಗ್ಗಿ ಕಟಾವಾದ ಮೇಲೆ ಕಟ್ಟದ ನೀರು ಜೊಟ್ಟೆ ಅಥವಾ ಕೈಮರಿಗೆಯ ಮೂಲಕ.

ಕಣಿಯ ಮಟ್ಟಕ್ಕಿಂತ ತಗ್ಗಿರುತ್ತದೆ ಕಟ್ಟದ ನೀರು. ಕಣಿಯ ಬಾಯಲ್ಲಿ ಮೂರು ಕಾಲಿನ ಗೂಟಕೆ ಮರಿಗೆಯನ್ನು ಇಳಿಬಿಟ್ಟು ಪಾಲವಾಗಿ ಹಾಕಿದ ಅಡಿಕೆ ಅಥವಾ ಇನ್ನಿತರ ಮರದ ತೊಲೆಗಳ ಮೇಲೆ ನಿಂತು ಮರಿಗೆಯ ಮೂಲಕ ನೀರು ಹಾಯಿಸುವುದು. ಮರಿಗೆ ಹೆಚ್ಚಾಗಿ ಮರದ್ದೇ. ಕೆಲವೊಮ್ಮೆ ಬೈನೆ ಮರದ ಹಾಳೆಗಳಿಂದ ಮಾಡುವುದೂ ಇದೆ. ಹೀಗೆ ನೀರು ಹಾಯಿಸಲು ಒಬ್ಬನೇ ಸಾಕು. ಜೊಟ್ಟೆಗೆ ಆದರೆ, ಮರಿಗೆ ಗಾತ್ರವನ್ನು ಅನುಸರಿಸಿ ಎರಡರಿಂದ ನಾಲ್ಕು ಐದು ಜನ ಬೇಕಾಗುತ್ತದೆ. ಒಬ್ಬ ಮೊಗೆಯಲು, ಉಳಿದವರು ನೇಲಲು.

ನಮ್ಮ ಈ ಮನೆಯಿಂದ ಪಶ್ಚಿಮಕ್ಕೆ ತೋಡು ದಾಟಿದರೆ ಶರಳಾಯರ ಮನೆ, ಅವರ ತೋಟ, ಕೆಳಗೆ, ಬೈಲು ಹರಿದಂತೆ, ಕೆಳಗಿನ ಮನೆ ದೊಡ್ಡಣ್ಣನದು–ಈ ಮಧ್ಯೆ, ತೋಡಿಗೆ ತಾಗಿದಂತೆ ದಕ್ಷಿಣಕ್ಕೆ ಅಣ್ಣನ ಮನೆ. ಅಣ್ಣನ ಮನೆ ದೊಡ್ಡದು. ದಳಿ, ಕೆಳಗಿನ ಜಗಲಿ, ಚಾವಡಿ, ಬಾಜಿರ ಕಂಬ, ಹಲಗೆ ಉಪ್ಪರಿಗೆಗೆ ಹತ್ತಲು, ಮಣ್ಣ ಮೆಟ್ಟಿಲು, ಕೈಸಾಲೆ ಪ್ರತ್ಯೇಕ ದೇವರ ಕೋಣೆ, ಉದ್ದವಾದ ಉಂಬ ಜಗಲಿ, ಸಿಮೆಂಟು ಸಾರಣೆ ಮಾಡಿದ ಕೆಂಪು ಕಪ್ಪು ನೆಲ, ಹಂಚಿನ ಮಾಡು, ದೊಡ್ಡಮನೆ, ದೊಡ್ಡವರ ಮನೆ. ಅವರು ದೊಡ್ಡವರು-ಎಷ್ಟೋ ಮುಡಿ ಗೇಣಿ ಬರುವ ಗದ್ದೆ, ನಾಲ್ಕೈದು ಒಕ್ಕಲುಗಳು, ವಿಸ್ತಾರವಾದ ಗುಡ್ದೆ, ಗೇರುಬೀಜ, ಸಾವಿರ ಗಟ್ಟಲೆ ತೆಂಗಿನಕಾಯಿ,-ಶ್ರೀಮಂತ ಮನೆ. ಕೆಳಗಿನ ಮನೆಯೂ ಸಣ್ಣದಲ್ಲ. ಬಡಗು ಚಾವಡಿ ಬಾಜಿರ ಹಲಗೆ, ದೊಡ್ಡ ಅಂಗಳ ಮನೆಗೆ ತಾಗಿಕೊಂಡಂತೆ ಮಾಳಿಗೆಯಿರುವ ಉದ್ದವಾದ ಕೊಟ್ಟಿಗೆ. ಆಚೆಈಚೆ ಕಡೆಯಲ್ಲಿ ಕೋಣೆಗಳು, ನೂರೈವತ್ತಕ್ಕೂ ಮಿಕ್ಕಿ ಜನಕ್ಕೆ ಒಳಗೇ ಹಂತಿ ಹಾಕಿ ಇಕ್ಕಬಹುದಾದ ವಿಶಾಲ ಜಗಲಿಗಳು.

ಕೊಟ್ಟಿಗೆಯ ಪಡುವಕ್ಕೆ ಚಿಕ್ಕ ತೋಟ. ಆಮೇಲೆ ತೋಡು. ಆ ತೋಡು ಮನೆಯ ದಕ್ಷಿಣಕ್ಕೆ ಚಾಚಿರುವ ದೊಡ್ಡ ತೋಟಕ್ಕೆ ಸುತ್ತು ಹಾಕಿ ಕೆಳಗೆ ಅಂದರೆ ಪೂರ್ವಕ್ಕೆ ಹರಿಯುತ್ತದೆ. ಈ ತೋಟ ಬದಿಗೆ ಆಳೆತ್ತರಕ್ಕೆ ಕಲ್ಲು -ಕಟ್ಟಿದೆ-ಮಳೆಗಾಲದಲ್ಲಿ ಹರಿದು ಬರುವ ನೀರ ರಭಸಕ್ಕೆ ದಡ ಕೊರೆದು ಹೋಗದಂತೆ ಕಾಪಾಡಲು. ಇದರ ಒಳ ಬದಿಗೆ ಉದ್ದಕ್ಕೂ ತೆಂಗಿನ ಕಟ್ಟಾಪುಣಿ. ಸದಾ ನೀರ ಪಸೆ ಇರುವುದರಿಂದ ತುಂಬ ಫಸಲು ಕೊಡುವ ತೆಂಗಿನ ಮರಗಳು.

ಕೆಳಗಿನ ಮನೆ. ಇದು ದೊಡ್ಡಣ್ಣನ ಮನೆ, ಕೆಳಗಿನ ಮನೆಗೂ ಅಣ್ಣನ ಮನೆಗೂ ಮಧ್ಯೆ ಮಾಲಿಂಗಣ್ಣನ ಮನೆ, ಇವರ ತಮ್ಮ ವೆಂಕಟ್ರಮಣ ಭಟ್ಟರು, ಜೊತೆಯಲ್ಲೇ ವಾಸ. ಮನೆ ಎದುರಿಗೇ ತೋಟ-ಅಡಿಕೆ ತೆಂಗು. ಎಡಕ್ಕೆ ಎರಡೂ ಮುಡಿಬೀ ಜಾವರಿ ಕೊಳಕೆ ತೋಟ. ಸೊಪ್ಪೂ ಸೌದೆಗೆ ಬೇಕಾದಷ್ಟು  ಹಿಂಬದಿ ಗುಡ್ಡ. ಅಲ್ಲಲ್ಲಿ ತನ್ನಿಂದ ತಾನೇ ಹುಟ್ಟಿ ಬೆಳೆದ ಗೇರು ಮರಗಳು. ಈ ಮಾಲಿಂಗಣ್ಣ ಸೋದರರು, ನೀರ್ಕಜೆ ಕುಟುಂಬದವರಲ್ಲ. ಶಿರಂಕಲ್ಲು ಇವರ ಮೂಲ, ಚಕ್ರಕೋಡಿ ಕುಟುಂಬದವರು. ನಮ್ಮದು ನೀರ್ಕಜೆ ಕುಟುಂಬ. ಮೂರು ಮನೆ. ಮತ್ತೊಂದು ಶರಳಾಯರ ಮನೆ. ಅವರು ಶಿವಳ್ಳಿಯವರು-ನಾವು ಹವೀಕರು, ವಿಶ್ವಾಮಿತ್ರ ಗೋತ್ರ. ಗೃಹಸ್ಥರು, ಲೌಕಿಕರು, ವೈದಿಕರಲ್ಲ.

ನನ್ನಪ್ಪ ಸುಭ್ರಾಯಭಟ್ಟಯಾನೆ ಅಪ್ಪಯ್ಯ ಭಟ್ಟ. ಇವರು ಸಣ್ಣಪ್ಪಯ್ಯ.ದೊಡ್ಡಪ್ಪಯ್ಯನವರ ಮಗ. ದೊಡ್ಡಣ್ಣ ಗಣಪತಿ ಭಟ್ಟರು. ಅಣ್ಣ ಕೃಷ್ಣ ಭಟ್ಟರು. ಈ ಗಣಪತಿ ಭಟ್ಟ ಮತ್ತು ಕೃಷ್ಣ ಭಟ್ಟರ ತಂದೆಯವರಿಗೂ, ನನ್ನ ತಂದೆಯೂ ಅಣ್ಣ ತಮ್ಮಂದಿರ ಮಕ್ಕಳು. ನಮ್ಮ ಈ ಪೂರ್ವಜರು ಎಲ್ಲಿಂದ ಬಂದರು, ಆಗ ಹೇಗಿದ್ದರು ಇತ್ಯಾದಿ ವಿವರಗಳನ್ನು ಸಂಗ್ರಹಿಸಲು ನಾನು ಉದ್ದೇಶಿಸಿಯೂ ಇರಲಿಲ್ಲ. ಸಂಗ್ರಹಿಸಿಯೂ ಇಲ್ಲ. ನೀರ್ಕಜೆಯ ಪಶ್ಚಿಮಕ್ಕೆ ಕಾನ, ವದ್ವಗಳಲ್ಲಿ, ಪಂಜಸೀಮೆಯಲ್ಲಿ ನಮ್ಮ ಕುಟುಂಬಸ್ತರು ಈಗಲೂ ಇದ್ದಾರೆ.

 ಮದುವೆ ಆಯಿತು ನಾನು ಹುಟ್ಟಿದೆ

ನನ್ನ ಅಜ್ಜ,ತಂದೆಯ ತಂದೆ ಭೀಮಭಟ್ಟರು; ನಾನವರನ್ನು ನೋಡಿಲ್ಲ. ಅವರಿಗೆ ಇಬ್ಬರು ಮಕ್ಕಳು; ಒಂದು ಗಂಡು-ನನ್ನ ತಂದೆ, ಇನ್ನೊಬ್ಬ ಮಗಳು ಗಂಗಮ್ಮ,ನನ್ನ ಅತ್ತೆ. ಇವರನ್ನು ಸರಡ್ಕದಲ್ಲಿ ಶಂಭಟ್ಟ ಎಂಬುವರಿಗೆ ಕೊಟ್ಟಿದ್ದು, ನನ್ನ ಚಿಕ್ಕಂದಿನಲ್ಲಿಯೇ ಇವರು ಸಾರಡ್ಕ ಬಿಟ್ಟು ಪೆರುವಾಯಿಗೆ ಹೋಗುವ ದಾರಿಯಲ್ಲಿ ನೀರ್ಕಜೆಯಿಂದ ಪಶ್ಚಿಮಕ್ಕಿರುವ ತಾಳಿಪಡ್ಪಿನಲ್ಲಿದ್ದರು. ಅದೂ ಅವರ ಸ್ವಂತ ಆಸ್ತಿಯಲ್ಲಿ. ಗೇಣಿ ಆಸ್ತಿ. ಚಾಲಗೇಣಿಯೋ ಮೂಲಗೇಣಿಯೋ, ವಾಯಿದೆ ಗೇಣಿಯೋ ಅರಿಯೆ. ಈ ಅತ್ತೆಯ ಇಬ್ಬರು ಗಂಡು, ಒಂದು ಹೆಣ್ಣು. ಗಂಡು ಮಕ್ಕಳಲ್ಲಿ ಹಿರಿಯವರು ಪರಮೇಶ್ವರ, ಕಿರಿಯವರು ಭೀಮ. ಮಗಳ ಹೆಸರು ನೆನಪಿಲ್ಲ. ತಾಳಿಪಡ್ವಿನಲ್ಲಿ ಈಗ ಇವರ ಪೈಕಿ ಯಾರು ಇಲ್ಲ. ಭೀಮ ಭಟ್ಟರಿಗೆ ಸಂತಾನವಿಲ್ಲ. ಪರಮೇಶ್ವರ ಭಟ್ಟರ ಮಕ್ಕಳು ಪುತ್ತೂರು, ಸುತ್ತ ಮುತ್ತ ನೌಕರಿಯನ್ನಾಧರಿಸಿ ಇದ್ದಾರೆಂದು ಕೇಳಿದ್ದೇನೆ.

ಈ ಅತ್ತೆ ತಾಳಿಪಡ್ವಿನಲ್ಲಿದ್ದಾಗ ನಾನು ಅನೇಕ ಸಲ ಒಬ್ಬನೇ, ಕೆಲವೊಮ್ಮೆ ತಂಗಿ, ಲಕ್ಷ್ಮಿ-ನನಗೆ ತಂಗಮ್ಮ. ಇವಳನ್ನು ಜೊತೆಗೂಡಿ ನೀರ್ಕಜೆಯಿಂದ ಹೋದ್ದು ನೆನಪಿದೆ. ನೀರ್ಕಜೆ ಕೇಪುಗ್ರಾಮ, ಪುತ್ತೂರ ತಾಲ್ಲೂಕು. ಈಗ ಬಂಟ್ವಾಳ. ತಾಳಿಪಡ್ವು ಅಳಿಕೆ ಗ್ರಾಮ, ಕೇಪಿನ ನೆರೆಗ್ರಾಮ. ನೀರ್ಕಜೆಯಿಂದ ಕೇಪು, ಕೇಪಿನಿಂದ ಕುದ್ದು ಪದವು. ಕಾಸರಗೋಡು ರಸ್ತೆ ಸಿಗುತ್ತದೆ ಅಲ್ಲಿ. ಅಲ್ಲಿಂದ ಮುಂಜೇಶ್ವರ ರಸ್ತೆಗೆ ಸೇರುವ ಮಣ್ಣಿನ ಮಾರ್ಗ, ಪೆರುವಾಯಿ ಮಾರ್ಗ. ಈ ಮಾರ್ಗದ ಬದಿಯಲ್ಲೇ ತಾಳಿಪಡ್ವು. ಅದು ತಾಲಿ ಮರಗಳ ಪಡ್ಪೂ ಹೌದು. ಪಡ್ವು ಅಂದರೆ ಸಮತಟ್ಟಾದ ಗುಡ್ಡ. ಮುಳಿಹುಲ್ಲು ಮಾತ್ರ ಬೆಳೆದೀತು. ತಾಳಿ ಮರ ದೀವರಿಗೆ ಕಳ್ಳು ತೆಗೆಯಲು. ಗಟ್ಟಿಮುಟ್ಟಾದ ದೇಹ. ಹೊಳೆಯುವ ಕಪ್ಪು ಬಣ್ಣ ಸೊಂಟಕ್ಕೆ ಕಚ್ಚೆ ಕಟ್ಟಿ ಸುತ್ತಿದ ಚಿಕ್ಕ ಪಂಚೆ. ದಟ್ಟಾಳೆ ನಾರಿನಿಂದ ನೈದ ಹಗ್ಗ ಸೊಂಟಕ್ಕೆ. ಈ ಹಗ್ಗಕ್ಕೆ ನೇತುಬಿಟ್ಟ ಕಬ್ಬಿಣದ ಕೊಂಡಿಗಳು ಸೊಂಟದ ಎರಡೂ ಬದಿಗಳಲ್ಲಿ. ಒಂದರಲ್ಲಿ ಮೂರ್ತೆ ಕತ್ತಿ, ಇನ್ನೊಂದರಲ್ಲಿ ಕಳ್ಳಿಗೆ ಮಡಕೆ. ತಲೆಗೊಂದು ಮುಂಡಾಸು. ಕೈಯಲ್ಲಿ ಮರಹತ್ತಲು ಎರಡೂ ತುದಿಗಳಲ್ಲಿ ಗಂಟಿರುವ ತುಂಡು ಹಗ್ಗ. ದೂರದಿಂದ ಬರುವಾಗಲೇ, ನೇತಿರುವ ಕತ್ತಿಗಳು ಉಂಟು ಮಾಡುವ ತಾಳ ಬದ್ಧ ಶಬ್ದ-ಪೂಜಾರಿಯ ಬರುವಿಕೆಯನ್ನು ಸುತ್ತ ಮುತ್ತ ಸಾರುತ್ತದೆ. ಹೊಚ್ಚ ಹೊಸ ಕಳ್ಳು, ನೊರೆಕಳ್ಳು, ಸಿಹಿಕಳ್ಳು ಕುಡಿಯಲು, ಕುಡಿದು ತೇಗಲು ಮರದ ಬುಡಕ್ಕೆ ಬರುವ ಶೆಟ್ಟರು, ಆಳ್ವರು, ನಾಯ್ಕರು, ಕೈಯಲ್ಲಿ ರೂವಿ, ಮುಕ್ಕಾಲು, ತಾರ, ಆಣೆಗಳು, ಬತ್ತಕ್ಕೂ ಕಳ್ಳು ಕೊಡುವ ರೂಢಿ ಇತ್ತೆಂದು ತೋರುತ್ತದೆ. ಮತ್ತೆ ಈ ಕಳ್ಳು ಗಡಂಗಿಗೆ, ಸಂಜೆಗೆ ಹುಳಿ ಕಳ್ಳು, ಇದು ಕೊಡುವ ಕಿಕ್ ಸಿಹಿಕಳ್ಳಿಗಿಂತ ಹೆಚ್ಚಂತೆ, ಸಂಜೆ ಕತ್ತಲು ತನಕ ಗಡಂಗಿನ ಸುತ್ತ ಜನವೇ ಜನ, ಕಳ್ಳಿನ ಸಮಾರಾಧನೆ. ದುಡಿದ ಕೂಲಿಯ ಬಹುಭಾಗ ಗಡಂಗಿಗೆ ಸಮರ್ಪಣೆ. ದಣಿದ ದೇಹ, ಆಹಾರದ ಗೊಡವೆಯೂ ಇಲ್ಲದೆ, ಎಲ್ಲೆಂದೆರಲ್ಲಿ ನಿದ್ದೆಗೆ ಬಲಿ.

ತಾಳಿಪಡ್ವಿನ ತಾಳಿಮರ ನಮ್ಮ ಆಕರ್ಷಣೆ. ಇದರ ಬೊಂಡ, ಹದವಾದ ಕಾಯಿಗಳನ್ನು ಕೀಳಬೇಕು, ಕತ್ತಿಯಿಂದ ಮೂತಿ ಕೆತ್ತಬೇಕು ಎರಡು ತಪ್ಪಿದರೆ ಮೂರು ಕಣ್ಣು. ಬೆರಳಲ್ಲಿ ಒತ್ತಿದರೆ ತೂತ, ನೀರು. ಸಿಹಿ ನೀರು. ಇದನ್ನು ಚೀಪಿ ಹೀರಬೇಕು. ಮತ್ತೆ ಬೊಂಡದ ತಿರುಳು. ಹೆಬ್ಬೆರಳಲ್ಲಿ ಅದನ್ನು ಇಡಿಯಾಗಿ ಕೀಳಬೇಕು. ಇದೊಂದು ಅಭ್ಯಾಸಸಾಧ್ಯ ಕಲೆ. ಆಯತಪ್ಪಿ ಅವಸರ ಮಾಡಿದರೆ ಬೆರಳು ಉಳುಕಿ ಮುರಿದೂ ಹೋದೀತು. ನಾನು ಈ ಕೆಲಸದಲ್ಲಿ ನಿಷ್ಣಾತ. ಲಂಗ ಸರಿಮಾಡಿಕೊಂಡು ಕುಕ್ಕರು ಕಾಲಿನಲ್ಲಿ, ನಾಲಿಗೆ ಚಪ್ಪರಿಸುತ್ತಾ ಎದುರು ಕುಳಿತ ತಂಗಿಗೂ ಕೊಟ್ಟು ನಾನೂ ತಿಂದು ತೇಗಿ ತಾಳಿಪಡ್ವಿನಲ್ಲಿ ಕಳೆಯುತ್ತಿದ್ದ ದಿನಗಳವು. ದಾರಿಯಲ್ಲಿ ಒಂದು ಕೊಂಕಣಿ ಮನೆ. ಅವಲಕ್ಕಿ ಕೊಂಕಣಿ. ಅಂದರೆ, ಅವರು ಅವಲಕ್ಕಿ ಮೆರಿದು ಸುತ್ತ ಮುತ್ತ ಮನೆಗಳವರಿಗೆ ಮಾರಿ ಜೀವಿಸುತ್ತಿದ್ದ ಜನ. ಅವರ ಹೆಸರನ್ನೆಲ್ಲ ಕೇಳಿಲ್ಲ. ವಿಶೇಷವೆಂದರೆ ಅವರಲ್ಲಿ ಹುರಿದ ಅವಲಕ್ಕಿ. ಅದಕ್ಕೆ ಉಪ್ಪು ಹಾಕುತ್ತಿದ್ದರು. ಆ ಕ್ರಮ ಹೇಗೆಂದು ಗೊತ್ತಿಲ್ಲ, ಸಿಗುತ್ತಿತ್ತು. ಅದನ್ನು ಕೊಳ್ಳಲು ನಮಗೆ ದುಡ್ಡೆಲ್ಲಿಂದ? ಪುಕ್ಕಟೇ ಕೊಟ್ಟಾರೇ? ನೆನಪಿಲ್ಲ. ಅಂತೂ ಉಪ್ಪು ಹಾಕಿದ ಹುರಿದ ಅವಲಕ್ಕಿ ಅಣ್ಣ ತಂಗಿ ಸೇರಿ ಮೆಲ್ಲುತ್ತಾ ಅತ್ತೆ ಮನೆಗೆ ಪ್ರಯಾಣ. ಆ ಅತ್ತೆಗೋ ಅಣ್ಣನ ಮಕ್ಕಳೆಂದರೆ ಪಂಚಪ್ರಾಣ. ಪ್ರೀತಿಯೋ ಪ್ರೀತಿ! ಈ ಅತ್ತೆಯ ಗಂಡ ನನ್ನಪ್ಪನ ಭಾವ, ಶಂಭಟ್ಟರ ಕುರಿತು ಅಪ್ಪನಿಗೆ ಅಷ್ಟೊಂದು ಗೌರವಾದರಗಳಿದ್ದಂತೆ ನನಗೆ ನೆನಪಿಲ್ಲ. ಅವರು ಇಸ್ಪೀಟು ಆಡುತ್ತಿದ್ದರೆಂದೂ, ಅಲ್ಲಿಇಲ್ಲಿ ತಿರುಗುತ್ತಿದ್ದರೆಂದೂ ಅವರ ಕುರಿತಾಗಿ ದೊಡ್ಡವರು ಹೇಳುತ್ತಿದ್ದುದು ನನ್ನ ಮನಸ್ಸಿನಲ್ಲಿ ಕೂತಿತ್ತು. ದೊಡ್ಡ ಭಾವ ಪರಮೇಶ್ವರ ಭಟ್ಟರು. ಮಾತು ಕಮ್ಮಿ. ಮನೆಗೆ ಬಂದರೆ ದೂರ ಕೂರುತ್ತಿದ್ದರು. ತಂದೆಯವರ ಎದುರು ಕುಳಿತಿಕೊಳ್ಳುತ್ತಿರಲಿಲ್ಲ. ಹೋಗುವಾಗ ಹೋಗುತ್ತೇನೆಂದು ಹೇಳಿ ಹೋಗುತ್ತಿರಲಿಲ್ಲ. ಅವರಿಲ್ಲವಾದರೆ ಹೋಗಿದ್ದಾರೆಂದೇ ತಿಳಿಯಬೇಕಾಗಿತ್ತು. ಒಮ್ಮೆ ಯಾರೊಡನೆಯೋ ಅಪ್ಪ ಹೇಳಿದ್ದು ನೆನಪಿದೆ “ಅಮಾವಾಸ್ಯೆಗೆ ದಾನ ಕೊಟ್ಟರೆ, ರೂಪೈ ಮಾತ್ರ ತೆಗೆದುಕೊಂಡು ಇವನನ್ನು ಅಲ್ಲೇ ಬಿಟ್ಟು ಹೋದಾರು” -ಎಂದು. ಇದು ನನ್ನತ್ತೆಯ ದೊಡ್ಡ ಮಗ. ಎರಡನೆಯವನು ಭೀಮ. ಮಾಸ್ಟ್ರು. ಸದಾ ಬಿಳಿ ಖಾದಿ ವಸ್ತ್ರ, ಶರ್ಟು. ಕೈಯಲ್ಲೊಂದು ಪೇಪರು. ಇಂಗ್ಲೀಷು ಪೇಪರು, ಹಿಂದೂ ಪೇಪರೇ ಇರಬೇಕು. ತೂಕದ ಮಾತು. ಅದೂ ಕಮ್ಮಿಯೇ.

ಅಂದು, ಆ ಕಾಲದಲ್ಲಿ ಅಂದರೆ ನನಗೆ ನೆನಪಿರುವ ಪ್ರಾಯ. ನಾಲ್ಕೋ ಐದೋ ಇರಬಹುದು. ನಾನು ಹುಟ್ಟಿದ್ದು ಜೂನು ಸಾವಿರದ ಒಂಬೈನೂರ ಇಪ್ಪತ್ತೊಂಬತ್ತರಂದು. ಆ ಕಾಲದಲ್ಲಿ ಸೂಜಿ ಕೂಡಾ ಹೊರದೇಶದಿಂದ ಬರಬೇಕಾಗಿತ್ತು ಏನೋ, ಚೂರಿಗಳಲ್ಲಿ ಮೇಡ್ ಇನ್ ಜರ್ಮನಿ ಎಂದು ಇದ್ದದ್ದು ಗೊತ್ತು. ಸಾಮಾನ್ಯವಾಗಿ ಸೂಜಿಯೆಲ್ಲ ಎಣ್ಣೆ ಉರುಳಿಯಲ್ಲಿ ಹಾಕಿಡುತ್ತಿದ್ದರು. ನನ್ನ ತಾಯಿ ಕೂಡಾ. ಉರುಳಿ ಎಂದರೆ ಕಂಚಿನ ಪಾತ್ರೆ. ಎಣ್ಣೆ ತೆಂಗಿನ ಎಣ್ಣೆ. ಊಟಕ್ಕೆ ಬೇಕೇ ಬೇಕು. ಕುಚ್ಚಲಕ್ಕಿ ಅನ್ನಕ್ಕೆ ಎರಡು ಸಕ್ಕಣ ಎಣ್ಣೆ ಹಾಕಿ ಉಪ್ಪಿನಕಾಯಿ ರಸಕ್ಕೆ ಅನ್ನದುಂಡೆ ಅದ್ದಿ ತಿನ್ನುವುದೆಂದರೆ ಮಾಮೂಲು. ಈ ಅತ್ತೆಯೂ ಎಣ್ಣೆ ಉರುಳಿಯಲ್ಲೇ ಸೂಜಿ ಹಾಕಿಟ್ಟಿದ್ದರು. ಸಕ್ಕಣದಲ್ಲಿ ಎಣ್ಣೆ ಹಾಕಿಕೊಳ್ಳುವಾಗ ಸೂಜಿಯೂ ಅನ್ನಕ್ಕೆ ಬಿದ್ದಿರಬೇಕು. ತುತ್ತನ್ನದ ಜೊತೆ ಸೂಜಿಯೂ ಬಾಯಿಗೆ ರವಾನೆ. ಗಂಟಲಲ್ಲಿ ಅಡ್ಡಲಾಗಿ ಸಿಕ್ಕಿಕೊಂಡಿತು. ಕೆಳಗೂ ಹೋಗಲೊಲ್ಲದು, ಮೇಲೂ ಬಾರದು, ಗಾಬರಿ ಗಡಿಬಿಡಿ. ನೇರ ಪುತ್ತೂರಿಗೆ ಆಸ್ಪತ್ರೆಗೆ. ಹೇಗೆ ಹೋದರು? ಯಾರು ಕರೆದುಕೊಂಡು ಹೋದರು? ಎಷ್ಟೂ ಹೊತ್ತಿಗೆ- ಒಂದೂ ಗೊತ್ತಿಲ್ಲ- ನೆನಪಿಲ್ಲ.

ಯಾರು ನೋಡಿದರೋ, ಏನು ಮಾಡಿದರೋ ಗೊತ್ತಿಲ್ಲ. ಅಂತೂ ಇಲ್ಲಿ ಆಗುವ ಕೇಸು ಇದಲ್ಲ. ಮಂಗಳೂರಿಗೇ ಹೋಗಬೇಕು ಎಂದು ಇವರನ್ನು ಇಲ್ಲಿಂದ ಸಾಗಹಾಕಿದರು. ಆಸ್ಪತ್ರೆಯಿಂದ ಹೊರ ಹೋಗುತ್ತಿದ್ದಂತೆಯೇ ಇವರಿಗೊಂದು ಕೆಮ್ಮು. ಬಲವಾದ ಕೆಮ್ಮು ಬಂತು. ಸೂಜಿಯೂ ಹಾರಿ ಹೋಯಿತು. ಬಗ್ಗಿ ಅಳುತ್ತಿದ್ದ ಅತ್ತೆ ನೆಟ್ಟಗೆ, ತಲೆ ಎತ್ತಿ ನಡೆಯತೊಡಗಿದರು. ದೂರದಿಂದ ಇವರನ್ನು ನೋಡುತ್ತಿದ್ದ ಆಸ್ಪತ್ರೆ ಸಿಬ್ಬಂದಿ ಓಡಿಬಂದು “ಸೂಜಿ ಬಂತೇ?” -ಪ್ರಶ್ನೆಗಳ ಸುರಿಮಳೆ. ಆಗ, ಅತ್ತೆ ಉವಾಚ “ಸೂಜಿ ಬಂದರೆ ನಿಮಗೆ ಏನು? ಬಾರದಿದ್ದರೆ ನಿಮಗೆ ಏನು?” -ಎಂದು.

ನನ್ನ ತಾಯಿ ಸರಸ್ವತಿ. ಈಗ ಕೆಲವು ವರ್ಷಗಳ ಹಿಂದೆಯಷ್ಟೇ ತೀರಿಕೊಂಡರು. ಅವರ ತವರು ಮನೆ ಕಡೆಯವರಿಗೆ ಆಕೆ ತಚ್ಚು. ಸರಸ್ವತಿಯ ತದ್ಭವ ರೂಪವೋ ಏನೋ ಈ ಹೆಸರು ತಚ್ಚು,ತಚ್ಚಕ್ಕ ಹೀಗೆ.

ನನ್ನಬ್ಬೆ ತಂದೆಯವರಿಗೆ ಮೂರನೆಯ ಹೆಂಡತಿ. ಮೊದಲನೆಯ ಹೆಂಡತಿ ಕೈಲಾರಿನಿಂದ ಬಂದವರು. ನನಗೆ ಅವರು ಆಚಬ್ಬೆ. ಅವರಿಗೆ ಮಕ್ಕಳಾಗಲಿಲ್ಲ- ಏಕೆ ಗೊತ್ತಿಲ್ಲ. ಆಗಲಿಲ್ಲ. ಅಷ್ಟು ಮಾತ್ರ ಗೊತ್ತು.ಮಕ್ಕಳಿಲ್ಲವಾದರೆ ಸಂಸಾರಸ್ಥ ಎನ್ನಲಾದಿತೇ? ಇಲ್ಲ. ಹಾಗಾಗಿ, ಮಕ್ಕಳಾಗಲು ಮತ್ತೊಂದು ಮದುವೆಯಾದರು ನಮ್ಮಪ್ಪ. ಈ ತಾಯಿಯನ್ನು ನಾನು ಕಂಡಿಲ್ಲ. ಅವರ ಅಕ್ಕನ ಕಡೆಯವರು, ಗೆಣಸುಕುಮೇರಿ ಅಣ್ಣ, ಪಿಲಿಗುಂಡದ ಕಮಲಕ್ಕ ಇತ್ಯಾದಿ ಬಂಧುಗಳು, ಆಗೊಮ್ಮೆ ಈಗೊಮ್ಮೆ ಬರುವುದಿತ್ತು; ನಾನೂ ತಾಯಿಯ ಜೊತೆ  ಕೆಲವು ಸಲ ಹೋದ ನೆನಪು. ಆಕೆ, ಮದುವೆಯಾದ ಹೊಸತರಲ್ಲಿ ತೀರಿಕೊಂಡರಂತೆ. ಹೇಗೆ? ಅದು ಗೊತ್ತಿಲ್ಲ. ಒಟ್ಟಿನಲ್ಲಿ ಸತ್ತರು. ಬ್ರಹ್ಮನಲ್ಲವೇ ಆಯಸ್ಸು ಬರೆಯುವುದು!

ಲಂಗ ಸರಿಮಾಡಿಕೊಂಡು ಕುಕ್ಕರು ಕಾಲಿನಲ್ಲಿ, ನಾಲಿಗೆ ಚಪ್ಪರಿಸುತ್ತಾ ಎದುರು ಕುಳಿತ ತಂಗಿಗೂ ಕೊಟ್ಟು ನಾನೂ ತಿಂದು ತೇಗಿ ತಾಳಿಪಡ್ವಿನಲ್ಲಿ ಕಳೆಯುತ್ತಿದ್ದ ದಿನಗಳವು. ದಾರಿಯಲ್ಲಿ ಒಂದು ಕೊಂಕಣಿ ಮನೆ. ಅವಲಕ್ಕಿ ಕೊಂಕಣಿ. ಅಂದರೆ, ಅವರು ಅವಲಕ್ಕಿ ಮೆರಿದು ಸುತ್ತ ಮುತ್ತ ಮನೆಗಳವರಿಗೆ ಮಾರಿ ಜೀವಿಸುತ್ತಿದ್ದ ಜನ.

ಅಪ್ಪ, ಎರಡೆರಡೂ ಮದುವೆಯಾಗಿ ಮಕ್ಕಳಿಲ್ಲ. ಈ ಹೆರದ ಹೆಂಡತಿಯನ್ನು ತವರಲ್ಲಿ ಬಿಟ್ಟು ದೇಶಾಂತರ ಹೋಗುವೆನೆಂದು ತನ್ನ ಪಾಲಿನ ಆಸ್ತಿಯನ್ನು ಮಾರಿದರಂತೆ. ಹೋಗಲು ಸಿದ್ಧ. ಅಷ್ಟರಲ್ಲಿ ಅವರ ಅಣ್ಣಂದಿರು -ಗಣಪತಿಭಟ್ಟ ಮತ್ತು ಕೃಷ್ಣಭಟ್ಟರ ತಂದೆಯಂದಿರು ಇವರನ್ನು ತಡೆದು ‘ನಿಲ್ಲು, ಹೋಗಬೇಡ. ನಿನಗೊಂದಿನ್ನು ಮದುವೆ ಮಾಡಿಸುತ್ತೇವೆ. ಆಸ್ತಿ ಶಿರಂಕಲ್ಲಿನವರಿಗೆ ಮಾರಿದರೇನಂತೆ, ನಮ್ಮದೇ ಒಂದು ತುಂಡು ಕೊಟ್ಟರಾಯಿತು’ ಎಂದು ಹೇಳಿ ದೇಶಾಂತರ ಹೋಗುವ ಈ ಸಣ್ಣಪ್ಪಯ್ಯನನ್ನು ನಿಲ್ಲಿಸಿದರು. ಕೃಷ್ಣಭಟ್ಟರು ಈ ತಮ್ಮನಿಗೆ ತನ್ನ ಆಸ್ತಿಯ ಮೂಲೆಯಲ್ಲಿ ಒಂದು ತುಂಡು ಕೊಟ್ಟರು. ನನಗೆ ತಿಳುವಳಿಕೆ ಬರುವಾಗ ಅವರಿಲ್ಲ. ಈ ಅಣ್ಣ ಕೃಷ್ಣಭಟ್ಟರು ತಿಮ್ಮಣ್ಣಭಟ್ಟರ ಏಕಮಾತ್ರ ಪುತ್ರ, ಇಬ್ಬರು ಹೆಣ್ಣುಮಕ್ಕಳು -ಅವರನ್ನು ಕೊಟ್ಟಾಗಿತ್ತು, ಇವರು ಮಾತ್ರ ಇದ್ದವರು.

ತಂದೆಯವರಲ್ಲಿ ಪಾಲಿನ ಆಸ್ತಿ ಮಾರಿದ ಹಣವಿದ್ದಿರಬೇಕು. ಎಷ್ಟು ಎಂದೇನೂ ನನಗೆ ತಿಳಿಯದು. ಚಕ್ರಕೋಡಿ ಮನೆತನದ ಶಂಭುಶಾಸ್ತ್ರಿಗಳ ಪುತ್ರಿ ಸರಸ್ವತಿಯನ್ನು ಮದುವೆ ಮಾಡಿಕೊಂಡದ್ದೂ ಆಯಿತು. ತಾಯಿಗೂ ಪ್ರಾಯವಾಗಿತ್ತಂತೆ. ಅಂದರೆ, ಪ್ರಾಯವಾಗುವುದು ಎಂದರೆ, ಮೈನೆರೆಯುವುದು ಎಂದೇ ಅರ್ಥವಿರಬೇಕು. ನೆರೆಯುವುದಕ್ಕೆ ಮೊದಲೇ ಮದುವೆಯಾಗಬೇಕು. ಆಗದಿದ್ದರೆ ಕಣ್ಣಿಗೆ ಬಟ್ಟೆಕಟ್ಟಿ ಕಾಡಿಗೆ ಬಿಡುವ ರೂಢಿಯಂತೆ- ಹಾಗೆ ತಾಯಿಯೇ ನನಗೆ ಹೇಳಿದ್ದು. ಯಾರನ್ನು ಬಿಟ್ಟಿದ್ದರೋ ನಾನು ಕಾಣೇ. ಅಂತೂ ಪ್ರಾಯಕ್ಕೆ ಬಂದ ನನ್ನ ತಾಯಿಯನ್ನು ಅಪ್ಪನಿಗೆ ಮೂರನೆಯ ಹೆಂಡತಿಯಾಗಿ ಮದುವೆಯಾಯಿತು. ಅಪ್ಪನಿಗಾಗ ಎಷ್ಟು ವಯಸ್ಸು? ಖಚಿತವಾಗಿ ಗೊತ್ತಿಲ್ಲ. ನಾರ್ಮೂಲೆ ಗೋಪಾಲಶಾಸ್ತ್ರಿಗಳು, ಅಜ್ಜನ ಕುಟುಂಬಸ್ತರು, ಜ್ಯೋತಿಷ್ಯದಲ್ಲಿ ಹೆಸರುವಾಸಿ. ಅಗ್ರಗಣ್ಯ, ಅವರು ಹೇಳಿದ್ದರಂತೆ ಈ “ಶಾಮನಿಗೆ ಹುಡುಗಿಯನ್ನು ಆ ಸಣ್ಣಪ್ಪಯ್ಯನಿಗೆ ಮೂರನೆಗೆ ಕೊಡುವುದಕ್ಕಿಂತ ಕೈಕಾಲು ಕಟ್ಟಿ ಕಟ್ಟದ ನೀರಿಗೆ ಹಾಕಬಾರದಿತ್ತೇ?” ಎಂದು. ಹೀಗೆ ಅವರು ಹೇಳಿದ್ದರಂತೆ ಎಂದು ನನಗೆ ಹೇಳಿದವರು ಅಬ್ಬೆಯೇ ಸಣ್ಣಪ್ಪಯ್ಯನಿಗೆ ನೀರ್ಕಜೆಯಲ್ಲೇ ಒಂದು ಮೂಲೆಯನ್ನು ಕೊಟ್ಟು ಆಯಿತು. ಕೂರಿಸಿ ಆಯಿತು. ಅವರ ಜೀವನಾವಧಿವರೆಗೆ ಎಂದು ಬರವಣಿಗೆಯಂತೆ. ಅಲ್ಲವೆ, ಮತ್ತಾರಿಗೆ ಆಸ್ತಿ? ಹೆಂಡತಿ ಮಕ್ಕಳಿಲ್ಲದವನಿಗೆ ಅವನ ಜೀವನಾವಧಿ ತನಕವೆಂದಿದ್ದರೆ ದೋಷವೇನು? ಹಾಗಾಗಿ ಆ ಒಕ್ಕಣೆ.

ಮದುವೆಯಾಯಿತು. ನಾನು ಹುಟ್ಟಿದೆ. ಗೋಕರ್ಣಕ್ಕೆ ಹೋಗಿ ಹರಕೆ ಹೊತ್ತಿದ್ದರಂತೆ ನಮ್ಮಪ್ಪ, ಗಂಡು ಸಂತಾನವಾದರೆ, ಗೋಕರ್ಣೇಶ್ವರನ ಹೆಸರಿಡುವುದೆಂದು. ಹಾಗಾಗಿ ನಾನು ಮಹಾಬಲೇಶ್ವರ. ಗೋಕರ್ಣದೇವರ ಹೆಸರಿನವ.

ತಾಯಿಗೆ ಮಾಬಲ ತಂದೆಗೆ ಈಶ್ವರ

ನಾನು ಅಪರೂಪದ ಹುಡುಗ ಈ ಮನೆಗೆ. ತಂದೆ ಕೊಂಡಾಟ ಮಾಡಿದ್ದು ನೆನಪಿಲ್ಲ ನನಗೆ. ತಾಯಿಗಂತೂ ಪ್ರೀತಿಯೋ ಪ್ರೀತಿ. ತಾಯಿ ಕಡೆಯವರಿಗೆ ನಾನು ಮಾಬಲ. ತಂದೆ ಕಡೆಯವರಿಗೆ, ತಂದೆಗೆ ಈಶ್ವರ. ಆಟಕ್ಕೆ ಜೊತೆಗೆ ಯಾರೂ ಇಲ್ಲ. ತಾಯಿಯೇ ಜೊತೆ. ತೋಟದ ಸೋಗೆ. ಹಾಳೆಯ ಮೇಲೆ ನಾನು ಕೂರುವುದು. ತಾಯಿ ಎಳೆಯಬೇಕು. ಇದೊಂದು ಬಂಡಿಯಾಟ. ತಾಳೆ ಮರದ ಓಲಿ, ಎಲೆ, ಅದನ್ನು ಪಟ್ಟಿಯಾಗಿ ಸಿಗಿಯುವುದು, ಇದರಿಂದ ಚೆಂಡು, ಕೈಗೆ ವಾಚು. ಮತ್ತೆ ಶಾಲೆಗೆ ಹೋಗಲು ಸುರು ಮಾಡಿದ ಮೇಲೆ ಇದೇ ಓಲಿಯನ್ನು ಯಾವುದೋ ಎಲೆಯೊಂದಿಗೆ ಬೇಯಿಸಿದಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸೇರಿಸಿ, ಬೀಸಣಿಗೆ, ಚಾಪೆ ಚೀಲ ಮಾಡಿದ್ದೂ ಇದೆ. ಇದು ಕ್ರಾಫ್ಟ್-ಕೈಗಾರಿಕೆ. ಗುಡ್ಡಕ್ಕೆ ಹೋದರೆ ಕುಂಟಾಲ ಎಲೆ ಕಿತ್ತು ಓಟೆಯಾಕಾರದಲ್ಲಿ ಸುತ್ತಿ ತುದಿಯನ್ನು ಚಪ್ಪಟೆಮಾಡಿ ಊದಿದರೆ ಸ್ವರ; ಅದೊಂದು ವಾದ್ಯ. ಇದೊಂದೇ ವಾದ್ಯವಲ್ಲ. ಸಂಬಂಧಿಕರ ಮನೆಗೆ ಹೋದಾಗ ಅವರ ತೋಟದಲ್ಲಿ ವಾಟೆ ಇದ್ದರೆ ಅದನ್ನು ತಾಯಿಯವರಲ್ಲಿ ಹೇಳಿ ಕೊಯ್ಯಿಸಿಕೊಳ್ಳುವುದು. ನಾಲ್ಕಂಗುಲ ಉದ್ದದ ತುಂಡು, ಒಂದು ತುದಿಯನ್ನು ಓರೆಯಾಗಿ ಕೆತ್ತುವುದು, ಮೇಲ್ಭಾಗ ಸಿಗಿದು ಅದಕ್ಕೊಂದು ಚೂರು ಕಾಗದ ಸಿಕ್ಕಿಸುವುದು, ಊದುವುದು- ಇದೊಂದು ವಾದ್ಯ. ಈ ವಾದ್ಯಗಳ ಕರ್ಕಶಕ್ಕೆ ತಂದೆಯವರಿಂದ ಬೈಗಳು ತಿಂದದ್ದೂ ಇದೆ. ಈ ವಾಟೆ ಜಾತಿಯಲ್ಲೇ ಸ್ವಲ್ಪ ಗಟ್ಟಿಯಾದ್ದು, ಸ್ವಲ್ಪ ತೋರ ಬಿದಿರಲ್ಲ, ಒಂದಡಿ ಉದ್ದದ ತುಂಡು. ಅಡಿಕೆ ಸಲಿಕೆಯ ಅಚ್ಚು. ಇದರಲ್ಲಿ ಕೋವಿ. ಗುಂಡು ಗುಡ್ಡದಲ್ಲಿ ಸಿಗುವ ಒಂದು ಜಾತಿಯ ಕಾಯಿ. ಬೆಡಿಕಾಯಿ.ಬೆಡಿ ಎಂದರೆ ಈ ಸಾಧನವೇ, ಕೋವಿಯ ಇನ್ನೊಂದು ಹೆಸರು. ಇದರೆದ್ದೇ ಇನ್ನೊಂದು ರೂಪಾಂತರ ನೀರಬೆಡಿ. ನೀರಬೆಡಿ ವಪಿಚಕ್ಕಾರಿಗೆ, ಗಂಟಿರುವ ತುಂಡಾಗಲೇಬೇಕು. ಗಂಟಿನ ಮೇಲೆ ಚಿಕ್ಕ ತೂತ, ಕಬ್ಬಿಣ ಕಾಯಿಸಿ ತೆಗೆದದ್ದು. ಅಚ್ಚಿನ ತುದಿಗೆ ಬಟ್ಟೆ ಸುತ್ತಿರಬೇಕು. ನೀರಪಾತ್ರಕ್ಕೆ ಗಂಟನ್ನದ್ದಿ, ಅಚ್ಚನ್ನು ಮೇಲೆಳೆದರೆ ನೀರು ಹೀರುತ್ತದೆ. ಅದನ್ನೆತ್ತಿ ಅಚ್ಚನ್ನೊತ್ತಿದರೆ ಪಿಚಕಾರಿ. ನೀರಬೆಡಿ ಇದು. ಚೇಷ್ಟೆಗಾಗಿ ತಂಗಿಯ ಮೈಮೇಲೆ ಬಿಟ್ಟು ಆಕೆಯ ಲಂಗ ಒದ್ದೆ ಮಾಡಿ ಅವಳು ಅಳುವಂತೆ ಮಾಡಿದ್ದು ಎಷ್ಟೋ ಸಾರಿ.

ಮನೆ ಮುಂದೆ ಅಂಗಳ. ಅಂಗಳಕ್ಕೆ ಚಿಟ್ಟೆಯ ಆವರಣ. ಈ ಚಿಟ್ಟೆಯಾಚೆ ನಾಲ್ಕಾರು ಸಾಲು ಅಡಿಕೆ ಮರ. ಈ ಸಾಲುಗಳ ಮಧ್ಯೆ  ನೀರು ಚೇಪುವ ಕಣಿ. ಈ ಕಣಿಯಲ್ಲಿ ನಿಂತಿರುವ ನೀರಿನಲ್ಲಿ ಆಟ. ಕಂಬಳದಾಟ. ಕಂಬಳ ಎರಡು ತರದ್ದು. ಒಂದು ಕೋಣಗಳನ್ನು ಓಡಿಸಿ ವೇಗವನ್ನು ಮಾನದಂಡವಾಗಿ ಬಳಸುವುದು. ಇನ್ನೊಂದು ಕಣಪ್ಪಲಾಯಿ ಕಂಬಳ. ನನಗೆ ಈ ಎರಡನೇ ಪಂಧ್ಯ ಖುಶಿ. ಗೆರಟೆ ಚೂರಿಗೆ ತೂತ ಕೊರೆದು ಉದ್ದ ಕೋಲು ಸಿಕ್ಕಿಸಿ ಈ ನೀರ ಕಣಿಯಲ್ಲಿ ಜೋರಾಗಿ ಎಳೆದುಕೊಂದು ಓಡುವುದು. ಓಡುವ ರಭಸಕ್ಕೆ ನೀರು ಗೆರೆಟೆ ಚೂರಿಗೆ ಅಡ್ಡಲಾಗಿ ಬಂದು ಮೇಲಕ್ಕೆ ಸಿಡಿಯುತ್ತದೆ. ಇದುವೇ ಕಣಪ್ಪಲಾಯಿ. ಇನ್ನು ಜೊಟ್ತೆ ಆಟ. ಚಕ್ರದಾಟ ಹೀಗೆ ಹತ್ತು ಹಲವು ಆಟಗಳು, ಜೊತೆಗೆ ತಾಯಿ.

ಮಳೆಗಾಲ, ಅಂಗಳದಲ್ಲಿ ಹುಲ್ಲು ಹುಟ್ಟದಿರಲೆಂದು ಮಡಲು ಮುಚ್ಚುತ್ತಾರೆ. ಮುಖ್ಯ ದಾರಿಯಲ್ಲಿ ಸಿಗಿದ ಅಡಿಕೆ ಮರದ ಮೂರು ನಾಲ್ಕು ಸೀಳುಗಳನ್ನು ಜೋಡಿಸಿ ಹಾಕಿದ ಸಂಕ. ಈ ಸೀಳುಗಳ ಮಧ್ಯೆ ಮರಳು ಹಾಕುವುದೂ ಇತ್ತು. ಇಂತಹ ಅಂಗಳದಲ್ಲೇ ಆಟಿಕಳೆಂಜನ ಕುಣಿತ. ಹೆನೆಕೊಡೆಯನ್ನೂ ತಿರುಗಿಸುತ್ತ ದಿಡಿಹಟ್ಟಿ ಪಾಡ್ದನ ಹೇಳುವ ರಾಗತಾಳಕೆ ಸರಿಯಾಗಿ ಕುಣಿಯುವ ಕಲೇಂಜ. ಕೊಡೆ ತುಂಬ ಕಿಸ್ಕಾರ ಹೂವಿನ ಇಳಿಬಿಟ್ಟ ಮಾಲೆ. ಗೆಜ್ಜೆ ಕಟ್ಟಿದ ಕಾಲು. ಮೈ ತುಂಬ ಬಣ್ಣ. ಸಾಮಾನ್ಯವಾಗಿ ಈ ಕಳೆಂಜ ಹತ್ತು ಹನ್ನೆರೆಡು ಹರೆಯದ ಹುಡುಗ, ಅದು ಬೇರೆ ಆಕರ್ಷಣೆ. ಇನ್ನೊಂದು ಪಂಗಡದವರು ಬರುತ್ತಿದ್ದರು. ಯಾವ ತಿಂಗಳು ನೆನಪಿಲ್ಲ. ನಲಿಕೆಯವರು, ಹೆಂಗಸರು. ವೃತ್ತಾಕಾರದಲ್ಲಿ ನಿತ್ತು, ಬಾಗಿ, ಬಳುಕಿ ನೃತ್ಯ ಮಾಡುತ್ತಿದ್ದರು. ಹಾಡಿನ, ದುಡಿ ಪೆಟ್ಟಿನ ಹಿಮ್ಮೇಳ ಇವರಿಗೆ. ತೊಟ್ಟಬಟ್ಟೆಯಲ್ಲದೆ ಬೇರೆ ಬಣ್ಣ ಬಳಿಯುತ್ತಿರಲಿಲ್ಲ.

ಇನ್ನೊಬ್ಬ ದಾಸಯ್ಯ. ಆತ ಮೊಳೆದಾಸ. ಅಂದರೆ ಆತನ ಮುಖದಲ್ಲೊಂದು ಮೊಳೆ. ಉಬ್ಬಿದ ಭಾಗ. ಆತನ ಹೆಗಲಲ್ಲಿ ಒಂದು ಭಾಗಕ್ಕೆ ಶಂಖ. ಇನ್ನೊಂದು ಭಾಗಕ್ಕೆ ಜಾಗಟೆ. ಬಂದವನೇ, ಬೆವರುಜ್ಜುತ್ತಾ ಜಗಲಿಯಲ್ಲಿ ಕೂತಾನು. ಮತ್ತೆ ಶಂಖ ವಾದ್ಯ, ಆ ಶಂಖವೋ, ಕಂಚಿನ ಮೊಗದ-ದೊಡ್ಡ ಶಂಖ. ಎಡಕೈಯಲ್ಲಿ ಶಂಖ, ಬಲಗೈಯಲ್ಲಿ ನೇತಾಡುವ ಜಾಗಟೆ. ಎರಡು ಬೆರಳಲ್ಲಿ ಹಿಡಿದ ಕೋಲು. ಇದು ಆಟದ ಭಾಗವತರ ಜಾಗಟೆ ಕೋಲಿನಂತೆ ಜಿಂಕೆಯ ಕೊಂಬೆಂದೇ ತೋರುತ್ತದೆ. ಶಂಖ ಊದಲು ತೊಡಗಿದರೆ ದಾಸಯ್ಯನ ಎರಡೂ ದವಡೆಯ ಚರ್ಮ ಉಬ್ಬಿನಿಂತು ತೆಂಗಿನ ಕಾಯಿ ಗಾತ್ರವಾದೀತು! ಭೂಂಭೂಂ ಭೂಂನಾದ. ಊದಿಯಾದ ಮೇಲೂ ಅವಸರವೇನಿಲ್ಲ. ಆ ಮನೆ ಈ ಮನೆ ಸುದ್ದಿಯನ್ನೆಲ್ಲಾ ಹೇಳುತ್ತಾ ಬಾಯಾರಿಕೆಗಿಷ್ಟು ಮಜ್ಜಿಗೆ ನೀರು ಕುಡಿದು ಬಗಲಲ್ಲಿ  ನೇತಾಡುವ ಜೋಳಿಗೆಗೆ ಮನೆಯಾಕೆ ಕೊಟ್ಟ ಅಕ್ಕಿಯನ್ನು ಹಾಳೆಯಿಂದ ಸುರಿದುಕೊಂಡು ಹೊರಟಾನು.

ಭೂತದ ಕೋಲಕ್ಕೆ ಮದುವೆ ಮುಂಜಿಗಳಿಗೆ ವಾಲಗ ಊದುವವರೂ ಕೂಡಾ ಬರುತ್ತಿದ್ದರು. ಇನ್ನೊಂದು ಪಂಗಡ ಚೀನೀ ವಾದ್ಯದವರದು. ಇವರು ಮುಸಲ್ಮಾನರು, ಬ್ಯಾರಿಗಳು ಇರಬೇಕು. ದೊಡ್ಡ ಡೋಲು, ಕರ್ಕಶ ವಾದ್ಯ. ಬಸವನ ಕುಣಿತ ಕೆಲವೊಮ್ಮೆ. ಬೆನ್ನಿಗೆ ಬಟ್ಟೆಯ ರಾಶಿ ಕುತ್ತಿಗೆಗೆ ಗೆಜ್ಜೆಯ ಮಾಲೆ. ಕೊಂಬಿಗೆ ರಂಗು ರಂಗಿನ ಬಣ್ಣ. ದೊಡ್ಡ ಭುಜ. ವಾಲಗ. ಆಗಾಗ ಬಸವನೊಡನೆ ಸಂಭಾಷಣೆ. ಬಸವ ತಲೆಯಲ್ಲಾಡಿಸುವುದು, ಒಟ್ಟಿಗೆ ಹಸು ಕೂಡಾ ಇರುವುದಿದೆ. ಒಂದು ರಾಮ. ಇನ್ನೊಂದು ಸೀತೆ. ಇವರ ಮದುವೆ. ಹೋಗುವಾಗ ಸೀರೆಯನ್ನೇ ಕೊಡಬೇಕಿವರಿಗೆ. ಕೆಲವು ತಿಂಗಳಲ್ಲಿ ರಾತ್ರಿ-ಮದ್ಯರಾತ್ರಿ ಆದರೂ ಆಯಿತು. ಬಾಲೆಸಾಂತು. ಎಂಟು ಹತ್ತು ಜನ. ಕೈಯಲ್ಲಿ ಸೂಟೆ. ಒಡೆದ ಬಿದಿರಿನ ಕೋಲು. ನೆಲಕ್ಕೆ ಹೆಟ್ಟುವುದು. ಶಬ್ದ-ತಾಳಬದ್ದ ಶಬ್ದ. ಯಾವುದೋ ಹಾಡು ಇರುತ್ತದೆಂದು ನೆನಪು. ಬಾಳೆ ಎಲೆ ಒಣಗಿದ್ದು-ಸರಂಬಾರು ಮೈ ತುಂಬ ಕಟ್ಟಿರುತ್ತಾರೆ. ನೆಲಕ್ಕೆ ಬಾಗಿ ಕೈಯಲ್ಲಿರುವ ಬಿದಿರನ್ನು ಕುಟ್ಟತ್ತಾರೆ. ಬಾಲೆ, ಬಾಲ್ಯ ಬಾಲ್ಸಾಂತು ಎಂದು ರಾಗವಾಗಿ ಪಲ್ಲ ಅನುಪಲ್ಲವಿಗಳನ್ನು ಹೇಳುತ್ತಾರೆ. ಕುಣಿದು ಕುಪ್ಪಳಿಸಿ, ಅಕ್ಕಿ ಬೆಲ್ಲದ ಧರ್ಮ ಸಿಕ್ಕಿದೊಡನೆ ಹೋಗುತ್ತಾರೆ. ದೇಶಾವರದ ಬ್ರಾಹ್ಮಣರೂ ಬರುತ್ತಿದ್ದರು. ಒಮ್ಮೊಮ್ಮೆ ಊಟಕ್ಕೆ ಕೂಡಾ ಇರುತ್ತಿದ್ದುದುಂಟು.

ನೀರ್ಕಜೆ ಕೇಪು ಗ್ರಾಮ ಎಂದೆನಷ್ಟೆ. ಗ್ರಾಮ ದೈವ ಉಳ್ಳಾಳ್ತಿ. ಉಳ್ಳಾಳ್ತಿಗೆ ನೇಮ. ಕಜಂಬು. ಚಳಿಗಾಲದಲ್ಲಿ. ಇದು ಕೇಪಿನ ಬೈಲಲ್ಲಿ. ತುಂಬ ಕಾರ್ಣಿಕದ ದೇವಸ್ಥಾನ-ಉಳ್ಳಾಳ್ತಿ ದೇವಸ್ಥಾನ. ಚಿಕ್ಕ ಮಕ್ಕಳ ಹಣೆಯನ್ನು ದೇವಸ್ಥಾನದ ಗರ್ಭಗುಡಿಯ ಹೊಸ್ತಿಲಿಗೆ ತಗಲಿಸುವುದು-ನಮಸ್ಕರಿಸುವುದು ಎಂದರ್ಥವಿರಬೇಕು, ಇದು ಕಜಂಬು. ಬಲು ಗೌಜಿಯ ಜಾತ್ರೆ. ಬಂಡಾರ ಕೊಟ್ಟಿಗೆಯಿಂದ ಬಂಡಾರ ಬರುವುದು. ವಿಟ್ಲದ ಅರಮನೆಯಿಂದ ಅರಸರನ್ನು ದೋಲಿಯಲ್ಲಿ ಬೋಯಿಗಳು ಹೊತ್ತು ತರುವುದು. ಅವರು ದೇವಸ್ಥಾನದ ಎದುರಿನ ಮೋತಪದಲ್ಲಿ ರಾಜ ಗಾಂಭೀರ್ಯದಿಂದ ಮಂಡಿಸಿರುವುದು. ಊರ ಗೃಹಸ್ಥರೆಲ್ಲ ಮುಖ್ಯವಾಗಿ ಬ್ರಾಹ್ಮಣರು, ಬಂಟರು ಕ್ರಮವಾಗಿ ಆಸೀನರಾಗುವುದು. ಮತ್ತೆ ರಾತ್ರಿ ಕಜಂಬು.

ಹತ್ತಿರದಲ್ಲೇ ಹರಿಯುವ ಹಳ್ಳದ ನೀರಿನಲ್ಲಿ ಮಕ್ಕಳಿಗೆ ಸ್ನಾನ. ಮೈ ಕೊರೆಯುವ ಚಳಿ ಬೇರೆ. ಮಕ್ಕಳ ಆಕ್ರಂದನ, ಚೀರಾಟ; ಕಜಂಬು. ಇದಾದ ಮೇಲೆ ಉಳ್ಳಾಳ್ತಿ, ಭೂತದ ತೆರೆ ಇಳಿಯುವುದು. ಇದನ್ನು ಹೆಂಗಸರು ನೋಡಬಾರದು. ‘ಹೆಣ್ಣಾದ ಹೆಣ್ಣು ಜಾತಿ ತೊಲಗಲಿ! ಎಂದು ದಶದಿಕ್ಕುಗಳಿಗೂ ಕೇಳುವಂತೆ ಘೋಷಣೆ. ಮತ್ತೆ ಗಗ್ಗರ ಕುಣಿತದ ಭೂತ ಉಳ್ಳಾಳ್ತಿ, ಅಂಗಣಕ್ಕೆ ಆಗಮನ. ಕುಣಿತ. ದೇವಸ್ಥಾನಕ್ಕೆ ಸುತ್ತು ಬರುವುದು. ಆಣಿಯನ್ನು ಅತ್ತಿತ್ತ ಮೇಲೆ ಕೆಳಗೆ ತೊನೆದಾಡಿಸುತ್ತ ನರ್ತನ, ರೌದ್ರರಮಣೀಯ, ಕರ್ಕಶವಾದ್ಯದ ಹಿಮ್ಮೇಳ, ದಿಡಿ, ಪಾಡ್ದನ.

ದೇವಸ್ಥಾನದ ಹೊರಾಂಗಣದ ಅನತಿ ದೂರದಲ್ಲೊಂದು ಚಪ್ಪಟೆ ಕಲ್ಲು. ಹಿಂದಿನ ಕಾಲದಲ್ಲಿ ಯಾವಳೋ ಒಬ್ಬ ಹೆಂಗಸು ಕೂತೂಹಲ ತಡೆಯಲಾರದೆ ಭೂತವನ್ನು ನೋಡಲು ಬಂದಳಂತೆ, ನೋಡಿದ್ದೇ ನೋಡಿದ್ದು-ಕಲ್ಲಾಗಿ ಬಿದ್ದಳೇ ಬಿದ್ದಳು. ಆ ಕಲ್ಲೇ ಇದು. ಇದು ಪಳಮ್ಮೆ,ಐತಿಹ್ಯ. ಕಜಂಬುಗೆಂದು ಹರಕೆ ಹೊತ್ತವರು ಯಾವ ಊರಿಂದ ಎಷ್ಟು ಜನ ಬಂದರೂ ಬೈಲವರು ಊಟವಿಲ್ಲವೆಂದು ಹೇಳಬಾರದು. ಅಂಗಡಿ ಹೋಟೆಲುಗಳಲ್ಲಿ. ಎಲ್ಲ ಮನೆಯವರೂ ಆತಿಥ್ಯ ನೀಡುವವರೇ. ಉಳ್ಳಾಳ್ತಿಯ ದಯೆ ಬೇಕು. ಅದಕ್ಕಾಗಿ ಈ ನಿಯಮ ಪಾಲನೆ, ಈ ಕಜಂಬಲ್ಲದೆ ತಂಬಿಲಗಳೂ ಆಗುತ್ತಿದ್ದವು. ತಂಬಿಲಕ್ಕೆ ಒಂದು ಜೊತೆ ಬೊಂಡ ಕೊಡಬೇಕು. ಇದರಲ್ಲಿ ಒಂದು ಪುನಃ ಸಿಗುತ್ತದೆ. ಅದುವೇ ದೈವದ ಪ್ರಸಾದ. ವಿಶೇಷ ಹರಕೆಗಳಿದ್ದರೆ ಅದು ಬೇರೆ. ಅದೇ ಬೈಲಿನ ಉತ್ತರಕ್ಕೆ ಸುಬ್ರಾಯ ದೇವಸ್ಥಾನ. ಷಷ್ಟಿಗೆ ಜಾತ್ರೆ. ಜಾತ್ರೆಯ ದಿನ ಮಧ್ಯಾಹ್ನಕ್ಕೆ ಊಟ. ಹಸರಪಾಯಸ ಮಾಲಿಂಗಣ್ಣನವರ ಹರಕೆ. ಮಾಲಿಂಗಣ್ಣ ನಮ್ಮಪ್ಪನ ಆಸ್ತಿಕೊಂಡವರು. ಪಾಮಜ್ಜಿ, ಅವರ, ಮಾಲಿಂಗಣ್ಣನವರ ತಾಯಿ. ಈಗ ಅವರಾರೂ ಇಲ್ಲ. ಆ ಮನೆಯೂ ಇಲ್ಲ. ಈ ಮಾಲಿಂಗಣ್ಣನ ಮೊಮ್ಮಗ ಮಹಾದೇವನಿಗೆ ನನ್ನ ಮಗಳ ಮಗಳು ಡಾಕ್ಟರ್ ಕವಿತಾಳನ್ನು ಕೊಟ್ಟದ್ದು. ಅವರಿರುವುದು ಉಡುಪಿಯಲ್ಲಿ. ಈ ಹರಿಕೆ ಏತಕ್ಕೋ ಗೊತ್ತಿಲ್ಲ.

ಶಿವಳ್ಳಿ ಬ್ರಾಹ್ಮಣರ ಪೂಜೆ. ಸ್ಥಾನಿಕರು ಪೂಜಾ ಕೈಕರ್ಯಕ್ಕೆ. ಬಂಟರ ಉಸ್ತುವಾರಿ. ಮಾರಾಟ ಗೌಡ ಜನರ ಸೇವೆ. ಹಲವು ಹತ್ತು ಜಾತಿಯವರಿಗೆ ನಿಗದಿತ ಪಾತ್ರ. ಅಂದಿನ ಸಾಮಾಜಿಕ ಬದುಕಿನ ಸೂತ್ರ ಹಾಗಿತ್ತು.

ಕೇಪು ಗ್ರಾಮದಲ್ಲಿ ಆಟ ಆಗಬಾರದು; ಗೆಜ್ಜೆ ಕಟ್ಟಿ ಕುಣಿಯುವುದು ನಿಷಿದ್ಧ. ಏಕೋ ಗೊತಿಲ್ಲ. ನೆರೆಗ್ರಾಮ ಪುಣಚ, ಅಳಿಕೆ, ಕಂಬಳ ಬೆಟ್ಟುಗಳಲ್ಲಿ ಆಟ, ಬಯಲಾಟ, ಧರ್ಮಸ್ಥಳ, ಕಟೀಲು ಮೇಳಗಳು, ಬಣ್ಣದ ಮಾಲಿಂಗ, ವಿಠಲಶಾಸ್ತ್ರಿ ವೇಷದ ರಾಮಚಂದ್ರ, ಹಾಸ್ಯದ ಜೋಯಿಸರು, ಬಲೀಪ ಭಾಗವತರು, ಚೆಂಡೆಗೆ ನರಸಿಂಹಭಟ್ಟರು ಮದ್ದಳೆಗೆ ದಿವಾಣದ ಭೀಮಣ್ಣ.

ಆಟ, ಧರ್ಮದ ಆಟ. ಕೆಲವೊಮ್ಮೆ ಹರಿಕೆಯ ಆಟವೂ ಆಗುತ್ತದೆ. ಕ್ಷೌರಕ್ಕೆ ಬರುವ ಸೋಮಯ್ಯ ಭಂಡಾರಿ, ಎಲ್ಲಿ ಯಾವಾಗ ಆಟ ಪ್ರಸಂಗವೇನು? ಇತ್ಯಾದಿ ವಿವರ ತರುತ್ತಾನೆ. ಇದು ನನ್ನ ಕಿವಿಗೆ ಬೀಳುತ್ತದೆ. ಆಟಕ್ಕೆ ಹೋಗಬೆಕು. ಹೇಗೆ ಹೋಗುವುದು? ಯಾರು ಕರೆದುಕೊಂಡು ಹೋಗುತ್ತಾರೆ? ಇವೆಲ್ಲ ಎದುರಾಗುವ ಸವಾಲುಗಳು. ತಾಯಿಯೊಡನೆ ಕೇಳಿದರೆ “ಅಪ್ಪ ಬೈದಾರು. ನಿದ್ದೆ ಕೆಟ್ಟು  ಜ್ವರ, ಗಿರ ಹಿಡಿಸಿಕೊಳ್ಳುವಿ ಎಂದು. ನನ್ನಿಂದಾಗದು ಕೇಳಲು” ತಾಯಿಯ ಉತ್ತರ. ಸರಿ. ಅನ್ನ ಸತ್ಯಾಗ್ರಹ! ನನಗೆ ಊಟ ಬೇಡ. ಹಂತಿಯಲ್ಲಿ ನಾನಿಲ್ಲ. ಏನಂತೆ? ಅಪ್ಪನ ಪ್ರಶ್ನೆ. ಸ್ವಲ್ಪ ಹೊತ್ತು ಗಂಭೀರಮೌನ ಮನೆ ತುಂಬ. ಈಶ್ವರ ಎಲ್ಲಿ? ಏನಂತೆ? ಮತ್ತೆ ಅದೇ ಪ್ರಶ್ನೆ. ತಾಯಿಯ ವಿವರಣೆ ವಕಾಲತ್ತು. ಕೇಸು ಗುಣ. ಕುಟ್ಟಿಯನ್ನೂ ಕರೆದಾಯಿತು. ಕುಟ್ಟಿ ಮನೆಯಾಳು. ಹತ್ತಿರವೇ ಅವನ ಬಿಡಾರ. ಊಟ. ಮತ್ತೆ ಆಟಕ್ಕೆ ದೌಡು. ಅದು ದೇವಿ ಮಹಾತ್ಮೆ ಆತ. ಮಹಿಷಾಸುರನ ಆಗಮನದ ಆರ್ಭಟ. ಗೌಜಿಯೋ ಗೌಜಿ. ದೂರದಲ್ಲಿ ಚೌಕಿ. ವೇಷಧಾರಿಗಳು ಬಣ್ಣ ಬಳಿಯುವ ಜಾಗ. ಅದನ್ನು ನೋಡಬೇಕು. ಇನ್ನೊಂದು ಮರದಡಿಯಲ್ಲಿ ಹತ್ತಾರು ಜನರ ಗುಂಪು. ಗುಂಡುತಟ್ತೆ ಕಾಲಡಿಯಲ್ಲಿ ಹಾಸಿದ ಬಟ್ಟೆ ತುಂಬಾ ನಾಣ್ಯ. ಜುಗಾರಿ ಆಟ. ಪೋಲಿಸರ ಕಣ್ಣು ತಪ್ಪಿಸಿ ಆಡುವುದು. ತಪ್ಪು ಕೆಲಸ. ನೋಡಲಿಕ್ಕೇನು? ನೋಡಿಬರುತ್ತೇನೆ.

ಚಿನ್ನದ ಕೆಲಸಕ್ಕೆ ರಾಮಪ್ಪಚಾರಿ. ನಮ್ಮಲ್ಲಿ ಆತನಿಗೆ ಕೆಲಸವಿಲ್ಲ. ಅಣ್ಣನ ಮನೆಯಲ್ಲಿ ಅವನು ಕೆಲಸ ಮಾಡುತ್ತಾನೆ. ಕಂಚುಗಾರರು, ಕಂಚಿನಪಾತ್ರೆ  ಎರಕ ಹೊಯ್ದು ಕೆಲಸ ಮಾಡುತ್ತಾರೆ. ಉರುಳಿ, ಗ್ಲಾಸು ಇತ್ಯಾದಿ. ಇವರಿಗೂ ನಮ್ಮಲ್ಲಿ ಕೆಲಸವಿಲ್ಲ. ಕೆಳಗೆ ದೊಡ್ಡಣ್ಣನಲ್ಲಿ ಕೆಲಸ. ನಮ್ಮಲ್ಲಿ? ಶಂಕರಾಚಾರಿ. ಮರದ ಕೆಲಸದವ, ಕೆಲಸ ಮಾಡುತ್ತಾನೆ. ಮರಿಗೆ, ಕವುಳಿಗೆ ಇತ್ಯಾದಿ. ನನಗೆ, ನೂಲು ತೆಗೆಯಲು ಚರಕ ಬೇಕು. ಓಡಾಡಲು ಬಂಡಿ ಬೇಕು. ಸಿದ್ಧ. ನೂಲಲು ಚರಕವಲ್ಲದೆ, ತಕಲಿ ಇತ್ತು. ಕಂಚಿನ ತಕಲಿ. ಅದನ್ನು ಪೇಟೆಯಿಂದ ತಂದದ್ದಿರಬೇಕು. ಸ್ಲೇಟಿನ ತುಂಡನ್ನು ಉರುಟಾಗಿ ತಿಕ್ಕಿ ಸವೆದು, ನಡುವೆ ತೂತ ಮಾಡಿ ಕೊಡೆ ಕಡ್ಡಿ ಸುರಿದು ನಾನೇ ತಕಲಿ ಮಾಡುತ್ತೇನೆ. ಹತ್ತಿ ಜಡೆ ಹತ್ತಿ, ತೋಟದ ಬದಿಯ ಗಿಡದಲ್ಲಿದೆ. ನೂಲು ಮಾಡುತ್ತೇನೆ. ಜನಿವಾರ ಮಾಡುತ್ತೇನೆ. ತುಂಬ ಖುಷಿ ಕೆಲಸ. ಬಂಡಿಸಿದ್ಧವಾಗಿದೆ. ನಾಲ್ಕು ಚಕ್ರದ ಬಂಡಿಮೇಲೆ ಹಲಿಗೆ ಕೂರಲು. ಹೋಗುವುದೆಲ್ಲಿಗೆ? ಹೋಗಲು ರಸ್ತೆ ಬೇಕಲ್ಲ. ಹ್ಹಾಂ, ಕನ್ಯಾನ ಹತ್ತಿರ ದೇಲಂತ ಬೆಟ್ಟು. ಅಲ್ಲಿ ನನ್ನ ಕಿರಿಯಬ್ಬೆ ಇದ್ದಾರೆ. ನಿಜವಾಗಿ ನನಗೆ ಅಜ್ಜಿ, ಅಜ್ಜನ ಎರಡನೆ ಹೆಂಡತಿ. ನನ್ನ ತಾಯಿಯ ಕಿರಿಯಬ್ಬೆ, ಅವರ ತವರು ಮನೆ ದೇಲಂತ ಬೆಟ್ಟು, ಉಕ್ಕುಡ ಮತ್ತೆ ಮಂಜೇಶ್ವರದ ಮಾರ್ಗದಲ್ಲಿ ಹೋಗಬೇಕು. ಈ ಬಂಡಿಯಲ್ಲಿ ನಾನು ಕೂರುತ್ತೇನೆ. ಕುಟ್ಟಿ ಹಗ್ಗ ಕಟ್ಟಿ, ಅದರ ತುದಿಗೆ ಮೂರಡಿ ಉದ್ದದ ಕೋಲು ಸಿಕ್ಕಿಸಿ ಅದನ್ನು ಎರಡೂ ಕೈಗಳಲ್ಲಿ ಹಿಡಿದು ಎಳೆಯುತ್ತಾನೆ. ಬಂಡಿ ಹೋಗುತ್ತದೆ. ನಾನು ಕೂತಿರುತ್ತೇನೆ. ಹೀಗೆ ಬಂಡಿಸವಾರಿ. ದೇಲಂತ ಬೆಟ್ಟುಗೆ.

ಮನೆಯ ಹಿಂಬದಿ ತೋಡಿಗೆ ಕಟ್ಟ. ಸುಗ್ಗಿ ಬೆಳೆಗೆ ಹರಿಯುವ ನೀರು. ಕೊಳಕೆಗೆ ಏತ, ಜೊಟ್ಟೆ. ಎಮ್ಮೆಗಳಿಗೆ ನೀರು  ತುಂಬ ಇಷ್ಟ. ಮೀಯಿಸಬೇಕು. ಅಪ್ಪನೋ, ಅಬ್ಬೆಯೋ, ಕಟ್ಟಕ್ಕೆ ಹಗ್ಗ ಹಿಡಿದು ಕೊಂಡುಹೋಗುತ್ತಾರೆ. ನಾನು ಹಿಂದಿನಿಂದ ಎಬ್ಬುತ್ತೇನೆ. ಕೈಯಲ್ಲಿ ಕೋಲು. ಗುಡ್ಡಕ್ಕೆ ಹೋದಾಗ ಅಪ್ಪನೊಡನೆ ಹೇಳಿ ಕಡಿಸಿಕೊಂಡ ಕಾಸರಕನ ಕೋಳು. ನೇರ, ಬೆತ್ತದ ಹಾಗೆ, ಬುಡದಲ್ಲಿ ಸಣ್ಣ ಗಡ್ಡೆ. ಚಂದದ ಕೋಲು. ಎಮ್ಮೆಯ ಬಾಲ ಹಿಡಿಯುತ್ತೇನೆ. ಕಂಬಳದಲ್ಲಿ ಕೋಣಗಲನ್ನೋಡಿಸುವವನ ಗತ್ತು. ಮೇಲೆಗೆ ಕೋಲಿನಿಂದ ಎಮ್ಮೆಯ ಬೆನ್ನಿಗೆ ಬಾರಿಸುತ್ತೇನೆ. ಒಂದೇ ಸಮನೆ ಎಮ್ಮೆ ಮುಂದಕ್ಕೆ ಓಡಿ ತಂದೆಯವರ ಬೆನ್ನಿಗೆ ಎಮ್ಮೆಯ ಮೂತಿ. ತಿರುಗಿ ನೋಡುತ್ತಾರೆ. ನನ್ನದೇ ಚೇಷ್ಟೆ, ಎಲ್ಲ ಕಣ್ಣು ಭಾಷೆ. ಮೌನ ಸಂವಾದ. ಮತ್ತೆಂದೂ ಎಮ್ಮೆಗೆ ಹೊಡೆಯುವುದಿಲ್ಲ. ಕಟ್ಟ ಬರುತ್ತದೆ. ಕಾಲಡಿಗೆ ಹಗ್ಗ ಸುತ್ತಿ ಎಮ್ಮೆಯ ಸ್ನಾನ. ತೆಂಗಿನ ಜುಂಗು ಮೈ ತಿಕ್ಕಲು. ಎಮ್ಮೆಗೆ ಆನಂದವೋ ಆನಂದ. ಅದರ ಮೈ ವಾಸನೆ ನನ್ನ ಮೂಗಿಗೆ. ಅದೊಂದು ಸುಖ. ಮೈ ತಿಕ್ಕಿ ಸ್ವಚ್ಚವಾದ ಮೇಲೆ ಈಜಾಡಲು ಬಿಡುತ್ತಾರೆ. ಅದರ ಜೊತೆಯಲ್ಲೇ ನಾನು ಈಜುತ್ತೇನೆ. ಕಲಿಸಿದವರು ನನ್ನಪ್ಪನೇ. ಗೋಟು ತೆಂಗಿನ ಕಾಯಿಗಳೆರಡನ್ನೂ ಹಗ್ಗ ಸುರಿದು, ಕಂಕುಳಡಿಗೆ ಹಾಕಿ, ಕಲಿತದ್ದು, ಮುಳುಗುವ ಹೆದರಿಕೆಯಿಲ್ಲ. ಸಮತೋಲನ ತಪ್ಪಿ ಸುರುಸುರುವಿಗೆ ತೋಡನೀರಷ್ಟು ಹೊಟ್ಟೆಯೊಳಗೆ ಹೋದ್ದೂ ಇದೆ. ಮತ್ತೆ ಭಡ್ತಿ. ತೆಂಗಿನಕಾಯಿ ಮಾಲೆ ಇಲ್ಲದೆ ಈಜು. ಬಾಳೆ ದಿಂಡಿನ ತೆಪ್ಪ.

ಈಶ್ವರ ದೇವರ ತೆಪ್ಪೋತ್ಸವ. ನಾನೇ ದೇವರು. ನಾನೇ ಅಂಬಿಗ. ನನ್ನದೇ ದೋಣಿ. ಪಯಣ ಎಲ್ಲಿಗೆ? ಇಷ್ಟ ಬಂದಲ್ಲಿಗೆ!ಕಟ್ಟದ ಆಚೆ ಶರಳಾಯರ ತೋಟ. ಮುಂಡೋವು ಮೂಳ್ಳು ಬದಿಯಲ್ಲಿ. ಜೊತೆಯಲ್ಲಿ ಈಜುತ್ತ ಸಾಗುವ ನೀರೊಳ್ಳೆಗಳು. ಮೇಲಕ್ಕೆ ಹೋದರೆ ನೀರೂ ಕಮ್ಮಿ. ಬದಿಯಲ್ಲಿ ಮರಳು. ಈ ಮರಳಲ್ಲಿ ಮೊಸಳೆಗಳಿರುತ್ತಾವೆಂದು ಆಳುಗಳು ಹೇಳಿದ ಮಾತು ನೆನಪಾಗಿ ಭಯವಾಗುತ್ತದೆ. ಕ್ಷಣಿಕ ಭಯ. ಯೋಚನೆ ಬಿಡುತ್ತೇನೆ. ತೆಪ್ಪ ಒಚ್ಚುತ್ತೇನೆ. ‘ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’ ಈ ಸಾಲು ಈಗ ಮಾತ್ರ ನೆನಪ್ಪಾದ್ದು. ಆಗಿನದಲ್ಲ. ತೀರ ದೂರವೋ ಸಮೀಪವೋ ಯಾರಿಗೆ ಗೊತ್ತು. ದೋಣಿಯಂತೂ ಸಾಗಬೇಕು.

ಬೊಂಡ ಕುಡಿಯಬೇಕು. ಬೊಂಡ ತೆಂಗಿನ ಮರದಲ್ಲಿ ತಾನೇ? ಮರಹತ್ತಬೇಕು. ಅಡಿಕೆ ಮರದ ಹಾಳೆಯೂ ಇಲ್ಲವಾದರೆ ಒಣಗಿದ ಬಾಳೆ ಪಂಬೆಯ ತಳೆ. ಕೈಯಿಂದ ಮರತಬ್ಬಿ ಹಿಡಿಯುವುದು, ಏರುವುದು. ತುತ್ತ ತುದಿಗೆ ಹೋಗಿ ಕೊಬೆ ಮಗಿಚುವುದು ಇನ್ನಷ್ಟು ಕಷ್ಟದ ಕೆಲಸ. ಮಡಲು ಹಿಡಿದು ಮೇಲಕ್ಕೇರಬೇಕು. ಪಜಿದು ಹೋಗುವ ಭಯವೂ ಇದೆ. ಮತ್ತೆ ಬೇಕಾದ ಬೊಂಡ ಕೀಳಬೇಕು. ಅದು ಬನ್ನಂಗಾಯಿ ಆಗಬಾರದು. ಬಾವೆಕಟ್ಟಿದ ಬೊಂಡವಾಗಿರಬೇಕು, ಅದುವೇ ರುಚಿ. ಈ ಸಾಹಸ ಇನ್ನಷ್ಟು ರುಚಿ. ಮರಹತ್ತುವಾಗ ಜಾರಿದಾಗ ಎದೆಯ ಚರ್ಮ ಜರ್ಪಿ ಉರಿಯಾದ್ದೂ ಇದೆ. ಎಣ್ಣೆ ಇದೆಯಲ್ಲಾ ಸವರಿದರಾಯಿತು. ಅದಕ್ಕೇನಂತೆ.

ಹಿಂದೆ ಹೇಳಿದಂತೆ ನೀರ್ಕಜೆ ಬೈಲಿನಲ್ಲಿ ನಮ್ಮ ಕುಟುಂಬದ ಮನೆ ಮೂರು. ಶಿರಂಕಲ್ಲಿನವರದೊಂದು. ಮೇಲೆ ಶರಳಾಯರ ಮನೆ. ಮೊದಲ ನಾಲ್ಕು ಹವೀಕರದಾದರೆ ಶರಳಾಯರು ಶಿವಳ್ಳಿ ಬ್ರಾಹ್ಮಣರು. ಇವರದಲ್ಲದೆ ಇನ್ನೂ ಒಕ್ಕಲುಗಳ ಮನೆಗಳು. ಅಮ್ಮುಣ್ಣಿ ಮೂಲ್ಯ.ಮೂಲ್ಯ.ಓಡಾರಿ ಎಂದರೆ ಕುಂಬಾರರು, ಮಡಿಕೆ ಮಾಡುವವರು. ಆದರೆ ಈ ಅಮ್ಮುಣ್ಣಿ ಮೂಲ್ಯ.ಮೂಲ್ಯ ಓಡರಿ ಎಂದರೆ ಕುಂಬಾರರು, ಮಡಿಕೆ ಮಾಡುವರು. ಆದರೆ ಈ ಅಮ್ಮುಣ್ಣಿ ಮೂಲ್ಯನಲ್ಲದೆ ಕೆಳಗೆ ರಾಮಮೂಲ್ಯನ ಮನೆಯಿದೆ. ಇವರಾರೂ ಮಡಿಕೆ ಮಾಡುವುದಿಲ್ಲ. ಎಲ್ಲ ಅಣ್ಣನ,ಕೃಷ್ಣಭಟ್ಟರ ಒಕ್ಕಲುಗಳು. ಮಣ್ಣಗುಳಿ ಇನ್ನೊಂದು ಮೂಲೆ. ಅಲ್ಲಿಗೆ ತಾಗಿ ಕರಿಯನ ಮನೆ.ಗೌಡರಿವರು. ತುಂಬಿದ ಸಂಸಾರ.ಏನೆಂದರೂ ಮಕ್ಕಳಲ್ಲದೆ ಹತ್ತು ಹನ್ನೆರೆಡು ಜನಕ್ಕೆ ಕಮ್ಮಿಯಿಲ್ಲ. ಎಲ್ಲ ಕಟ್ಟು ಮಸ್ತಾದ ಶರೀರದವರು. ಒಕ್ಕಲುಗಳು. ಗದ್ದೆಗಳೆಲ್ಲ ಗೇಣಿಗೆ. ಒಂದು ಎರಡು ಮೂರು ಬೆಳೆ ತೆಗೆಯುವುದು. ಮುಡಿಮುಡಿ ಅಕ್ಕಿ ಧನಿಗಳ ಮನೆಗೆ ಸಾಗಿಸುವುದು. ನಲವತ್ತೆರೆಡು ಸೇರಿನ ಮಾನ ಮುಡಿ. ಸೇರಿಗೆ ನಾಲ್ಕು ಪಾವು. ಅಥವಾ ಆರು ಕುಡ್ತೆ. ಹದಿನಾಲ್ಕು ಸೇರಿಗೆ ಒಂದು ಕಳಸೆ. ಮೂರು ಕಳಸೆಗೆ ಒಂದು ಮುಡಿ. ಬೈಹುಲ್ಲನ್ನು ಸೂಡಿಯಾಗಿ ಕಟ್ಟುವುದು. ಆ ಸೂಡಿಯನ್ನು ಜುಟ್ಟು ಮಾಡಿ ಹರಡಿ, ಸ್ವಲ್ಪ ಸ್ವಲ್ಪವೇ ಅಕ್ಕಿ ಸುರಿಯುವುದು. ಹುಲ್ಲಿನದೇ ಹಗ್ಗವನ್ನು ಹೊರಬದಿಯಿಂದ ಸುತ್ತಿ ಸುತ್ತಿ ಮೇಲಕ್ಕೆ ತರುವುದು, ಮತ್ತೊಂದು ಸಾರಿ ಉದ್ದಕ್ಕೆ. ಕೊನೆಗೆ ಕೂಡಿಸುವುದು. ಮುಡಿಸಿದ್ಧ. ಭೂಗೋಳದ ಹಾಗೆ. ಈ ಹಗ್ಗ ಅಡ್ಡಕ್ಕೆ ಉದ್ದಕ್ಕೆ ಥೇಟು ಅಕ್ಷಾಂಶ ರೇಖಾಂಶ. ದಕ್ಷಿಣಧ್ರುವ ಪೀಠ, ಉತ್ತರ ಧ್ರುವ ಮೇಲೆ. ಮುಡಿ ಅಕ್ಕಿಯನ್ನು ಪರೀಕ್ಷೆ ಮಾಡಲು ಕಬ್ಬಿಣದ ಒಂದು ಸಾಧನ ನಾಳಿ. ಕುಚ್ಚಲಕ್ಕಿಯದ್ದೇ ಹೆಚ್ಚಾಗಿ ಮುಡಿಗಳು. ಮುಡಿಅಕ್ಕಿ ಉಪಯೋಗಿಸಿ ಮುಗಿದ ಮೇಲೆ ಉಳಿಯುವುದೇ ತೊಳು. ತೊಳು ಕುಡುಕಿದರೆ ಅಲ್ಪ ಸ್ವಲ್ಪ ಅಕ್ಕಿ. ಅವನ ತೊಳು ಕುಡ್-ಗಾದೆ. ದ್ವನಿ ಪೂರ್ಣ ಕಾವ್ಯಮಯ ಭಾಷೆ. ಎಲ್ಲ ಖಾಲಿ ಎಂದರ್ಥ. ಮೂಲ ಇಲ್ಲಿ.ಮುಡಿ ಅಕ್ಕಿ ಮುಗಿದು ಹುಲ್ಲ ಜೊತೆಗಿದ್ದ ಶಿಲ್ಕು ಅಕ್ಕಿ ಕಜೆಯಾಗಕೂಡದು. ಮೆರಿದು ಮೆರಿದು ಶುಭ್ರವಾಗಿರಬೇಕು. ಬೇಯಿಸಿ ಒಣಗಿಸಿದ ಬತ್ತವನ್ನು ನಾಲ್ಕಾರು ಹೆಂಗಸರು ಉರುಟಾಗಿ ಅಂಗಳದಲ್ಲಿ ಹೂಟಿಟ್ಟು ನೆಲಕುಳಿಯಲ್ಲಿ ಹಾಕಿ ಕಾಲಿನಲ್ಲಿ ಕೂಡುತ್ತಾ ಉಸ್ ಉಸ್ ಎಂದು ಕುಟ್ಟುವುದೆ ಒಂದು ಚೆಂದ. ಸ್ವಲ್ಪ ಆಯ ತಪ್ಪಿದರೂ ಒನಕೆ ಕಾಲ ಮೇಲೆ ಬಿದ್ದು ಏಟಾದೀತು. ದೂರದಲ್ಲಿ ಬತ್ತ ಬೇಯಿಸುವಾಗ ಹೊರ ಹೊಮ್ಮುವ ಪರಿಮಳ .ಗೆರಸೆಯಲ್ಲಿ ಮೆರಿದ ಅಕ್ಕಿಯನ್ನು ಅಲ್ಲಲ್ಲಿ ಅಕ್ಕಿ ಚೂರನ್ನು ತಿನ್ನಲು ಬರುವ ಕೋಳಿಗಳ ಹಿಂಡು. ಆ ಹಿಂಡನ್ನು ಓಡೀಸಲೆಂದೇ ಪ್ರಾಯದ ಮುದುಕಿಯೊಬ್ಬಳು ಕೋಲು ಹಿಡಿದು ಅತ್ತಿತ್ತ ಓಡಾಟ ಮಾಡುತ್ತಿರುವುದು. ನಾಲಿಗೆ ಚಾಚಿ,ತಾನೂ ನೆಕ್ಕಿದರೇನಂತೆ ಎಂದು ಎಂಜಲು ಸುರಿಸಿ ದೂರದಲ್ಲೇ ನಿಂತಿರುವ ನಾಯಿ. ಬಾಜರದಲ್ಲಿ ಕೂತು ಎಲೆಯಡಿಕೆ ಮೆಲ್ಲುತ್ತ ಒಟ್ಟು ಉಸ್ತುವಾರಿ ನೋಡುತ್ತಿರುವ ಕರಿಯ. ಕರಿಯಗೌಡ. ಮನೆಯಜಮಾನ. ಆತನ ಹೆಸರು ಮಾತ್ರ ಕರಿಯ. ಬಣ್ಣ ಬೆಳ್ಳಗೆಯೇ. ಸ್ಪುರದ್ರೂಪ. ಬಲವಾದ ಆಳು.

ಹತ್ತಿರದ ರಾಮಮೂಲ್ಯನ ಮನೆಯವರೂ ಅಕ್ಕಿ ಮಾಡಲು ಬಂದು ಸೇರುತ್ತಾರೆ.ಇನ್ನೊಂದು ಮನೆ ಲಿಂಗನ ಮನೆ. ಲಿಂಗನಾಯ್ಕ ಮಾರಾಟೀ. ಅವರ ಬಾಷೆಯೇ ಬೇರೆ. ಗೌಡ,ಮೂಲ್ಯ,ಬಿಲ್ಲವರದು ತುಳುವಾದರೆ ಇವರು ಮರಾಠಿ ಮಾತಾಡುವವರು. ಈ ಲಿಂಗನ ಮನೆಯಲ್ಲಿ ಗೋಂದೋಳು ಪೂಜೆ. ಅದೊಂದು ಧಾರ್ಮಿಕ ಆಚರಣೆ.ವೃತ್ತಾಕಾರವಾಗಿ ಕುಣಿಯುವ ಕಾರ್ಯಕ್ರಮವಷ್ಟೆ ನನಗೆ ನೆನಪು.ಗೋಂದೋಳು ಪೂಜೆಯ ಹಚ್ಚ ಹಸಿರಿನ ನೆನಪು ಹಂದಿಯನ್ನು ಮಾಂಸ ಮಾಡುವುದು.ಕುತ್ತಿಗೆಗೆ ಒನಕೆ ಇಟ್ಟು ಆಕಡೆ ಈಕಡೆಯಿಂದಒತ್ತಿ ಅದನ್ನು ಸಾಯಿಸಿ ಆಗಿರುತ್ತದೆ.ಅದರ ಕೊನೆಗಾಲದ ಆಕ್ರಂದನ ಬಲು ದೂರಕ್ಕೆ ಕೇಳುತ್ತದೆ.ಈ ಪೂಜೆ ನೋಡಲು ನಾನು ಹೇಗೆ ಹೋದೆನೋ ಗೊತ್ತಿಲ್ಲ.ಮನೆಯಲ್ಲಿ ಅಪ್ಪ ಇರಲಿಲ್ಲವೇ?ಅಲ್ಲ ಒಪ್ಪಿಗೆ ಕೊಟ್ಟರೋ ಗೊತ್ತಿಲ್ಲ.ಮನೆಯಲ್ಲಿ ಅಪ್ಪ ಇರಲಿಲ್ಲವೇ?ಅಲ್ಲ ಒಪ್ಪಿಗೆ ಕೊಟ್ಟರೋ ಗೊತ್ತಿಲ್ಲ.ಅಂತೂ ಹೋದೆ.ನಾನಿದ್ದದ್ದು ಹಂದಿ ಮಾಂಸ ಮಾಡುವಲ್ಲಿ.ಬೈಹುಲ್ಲು ಮಡಲು ಹಾಕಿ ಬೆಂಕಿ ಉರಿಸುತ್ತಾರೆ.ಈ ಹಂದಿಯನ್ನು ಆ ಬೆಂಕಿಯಲ್ಲಿ ಅತ್ತಿತ್ತ ಉರುಳಿಸಿ ಬೇಯಿಸುತ್ತಾರೆ.ಅಮ್ಮ ದೊಡ್ಡ ಗೆಣಸಿನ ಗಡ್ಡೆಯನ್ನು ಕೆಂಡದಲ್ಲಿ ಹಾಕಿ ಸುಟ್ಟು ಬೆಂದ ಆ ಪರಿಮಳ ಮೂಗಿಗೆ ಬಡಿಯುವಾಗ ತೆಗೆದು ತಿನ್ನಲು ಕೊಟ್ಟದ್ದು,ಅದರ ಸಿಪ್ಪೆ ಸುಲಿದು ತುಂಡು ಮಾಡಿ ಬಾಯಿಂದ ಊಪಿ ಊಪಿ ತಣಸಿ ,ಕಚ್ಚಿ ಸುಟ್ಟ ಕೈಯಿಂದ ತುಂಡು ಮಾಡಿ ಮಾಡಿ ತಿಂದದ್ದು ನೆನಪಾಗುತ್ತದೆ.ಹಂದಿಯ ಚರ್ಮ ಸುಲಿಯುತ್ತಾರೆ.ಕೆಂಪಗೆ ಬಣ್ಣ.ಮಾಂಸದ ಹೋಳು ಮಾಡುವ ಕೆಲಸ ಹೆಣ್ಣುಗಳದ್ದು,ಮನೆಯೊಳಗೆ.ನಾನೇನು ಅವರ ಮನೆ ಒಳಗೆ ಹೋಗುತ್ತೇನೆಯೇ?ಹೋಗಬಾರದು ನಾವು ಬ್ರಾಹ್ಮಣರು!

ಈ ಮೂಲ್ಯ, ಮಾರಾಠಿ,ಗೌಡರ ಮನೆಗೇ ಇರಬೇಕು.ಮೀನು ಮೀನು ಎಂದು ದೊಡ್ಡ ಸ್ವರದಲ್ಲಿ ಕೂಗುತ್ತಾ ಮೀನು ಮಾರುವವರು ಬರುತ್ತಾರೆ.ಇವರು ಹೆಂಗಸರು.ತಲೆಯಲ್ಲಿ ಮೀನಿನ ಬುಟ್ಟಿ ,ಬಂಗುಡೆ,ಇಟ್ಟಿ ಇತ್ಯಾದಿ.ಕಾಗೆಗಳು ಕಾಕಾ ಎನ್ನುತ್ತ ಈ ಬುಟ್ಟಿ ತಲೆಯ ಮೇಲಿದ್ದಾಗ ಒಂದಾದರೂ ಮೀನನ್ನು ಹಾರಿಸೋಣವೆಂದು ಹಾರಿ ಬರುತ್ತವೆ.ಈ ಕಾಗೆಗಳನ್ನೋಡಿಸಲಿಕ್ಕಿರಬೇಕು ಕೈಯಲ್ಲೊಂದು ಉದ್ದನೆಯ ಕೋಲು.ತಲೆ ಮೇಲಿನ ಬುಟ್ಟಿಯ ಮಟ್ಟಕ್ಕಿಂತಲೂ ಮೇಲಕ್ಕೆ ಈ ಕೋಲಿನ ತುದಿ.ಇದು ಸಪೂರದ ಕೊಕ್ಕೆ ಬಿದಿರೇ ಇರಬೇಕು.ಇದನ್ನು ಅತ್ತಿತ್ತ ಅಲುಗಾಡ್ಸುವಾಗ ಬುಟ್ಟಿ ಮೇಲೆ ಕೂತ ಕಾಗೆಗಳು ದೌಡು.ಹಾರಿ ಹೋಗುತ್ತವೆ.ಈ ಹೆಂಗಸರೋ !ಸೊಂಟದಿಂದ ಮೊಣಕಾಲವರೆಗೆ ಬರುವ ತುಂಡುಬಟ್ಟೆ-ಮೇಲೊಂದು ರವಿಕೆ,ಆಯಿತು ಇವರ ವಸ್ತ್ರಾಲಂಕಾರ.ನಮ್ಮ ಮನೆಯ ಕಟ್ಟಪುಣಿಯಲ್ಲಿ ಮುಂದೆ ಹೋಗುತ್ತಾರೆಯೇ ಹೊರತು,ಮನೆ ಅಂಗಳಕ್ಕೆ ಬಾರರು.ಅವರಿಗೆ ಗೊತ್ತಲ್ಲವೇ, ನಾವು ಮೀನು ತಿನ್ನುವವರಲ್ಲ,ಬ್ರಾಹ್ಮಣರು ಎಂದು!

ತೆಂಕಲಾಗಿ ನಿಂದಭಿಕ್ಷೆ ಬೇಡಿಕೊಂಡು ಹೆಂಗಸರು ಬರುವುದೂ ಇದೆ.ಇವರು ಮಹಾ ಜೋರು.ಮಲೆಯಾಳ ಭಾಷೆ.ಜೋರು ಮಾಡಿದರೆ ಬೈಯುತ್ತಾರೆ ಮಲೆಯಾಳದಲ್ಲಿ.ನಮಗರ್ಥವಾದರೆ ತಾನೆ!ಅಕ್ಕಿ ಕೊಟ್ಟರೆ ಸಾಲದು ಇವರಿಗೆ.ಎಲೆ ಅಡಿಕೆ ಕೂಡ ಕೊಡಬೇಕು.ಒಂದು ಎಲೆಯಲ್ಲಿ,ವೀಳ್ಯದೆಲೆಯಲ್ಲಿ ಸುಣ್ಣದ ಕರಡಿಗೆಯಿಂದ ಬೆರಳಲ್ಲಿ ಒಕ್ಕಿಸುಣ್ಣ ತೆಗೆದು ಸವರಬೇಕು.ಬೆಣ್ಣೆಯಂತಹ ಸುಣ್ಣ;ಚಿಪ್ಪಿ ಸುಣ್ಣ.ಬೇಯಿಸಿ,ಆರಿಸಿ ನೀರು ಹಾಕಿ ಮಡಿಕೆಯಲ್ಲಿದ್ದ ಸುಣ್ಣ.ಮತ್ತೆ ತತ್ಕಾಲದ ಉಪಯೋಗಕ್ಕೆ ಕರಡಿಗೆಗೆ ರವಾನೆ.ಕರಡಿಗೆಯ ಒಂದು ತುದಿಯಲ್ಲಿ ಸುಣ್ಣ,ಇನ್ನೊಂದು ಭಾಗ ಹೊಗೆಸೊಪ್ಪು.ತಿರುಪಿದ ಕುಣಿಯ ಒಂದು ತುಂಡು.ಇದು ನಡುಭಾಗ.ಕಡೆಕೊಡಿ ಕೊಚ್ಚಿ ಹಾಕಿದ ಚೂರುಗಳು.ತಿರುಪಿದ್ದು ತಂದೆಗೆ-ಯಜಮಾನರಿಗೆ.ಚೂರು ಆಳುಗಳಿಗೆ.ಹೀಗೆ ಬಂದವರಿಗೆ,ಅವರ ಮಟ್ಟನೋಡಿ ಕಡೆಕೊಡಿ,ಚೂರು ಕೊಡುವುದು.ಸುಣ್ಣದೆಲೆಯನ್ನು ಮಡಚಿ,ಅದರ ಅಡಿಗೆ ಎರಡೆಲೆ,ಮೇಲೆ ಎರಡು ಹೋಳು.ಹೋಳು ಎಂದರೆ ಅಡಿಕೆ ಹೋಳು.ಹಣ್ಣಡಿಕೆ.ಮೇಲೆ ಕೆಂಪಗೆ ಸಿಪ್ಪೆ.ಅಡಿಕೆ ಬುಡಭಾಗ,ಅಂದರೆ,ಗೊನೆಗೆ ತಾಗಿರುವ ಭಾಗ-ಮೊಗಡ.ಈ ಮೊಗಡ ಹಣ್ಣಡಿಕೆಯ ಅಂದಾಜು ಮೂರನೆ ಒಂದು ಭಾಗ.ಹಣ್ಣಡಿಕೆಯನ್ನು ಕೆಳ ಭಾಗದಲ್ಲಿ ಹೆಬ್ಬೆರಳಿನಿಂದ ಒತ್ತಿ ಹರಿದು ಹರಿತವಾದ ಚೂರಿಯಿಂದ ಉರುಟಾಗಿ ತುಂಡು ಮಾಡಿ ತೆಗೆಯುವುದು.ಆಮೇಲೆ ತುದಿಭಾಗದಿಂದ ನಾಲ್ಕೈದು ಭಾಗವಾಗಿ ಈ ಸಿಪ್ಪೆಯನ್ನೂ ತೆಗೆಯುವುದು.ಉಳಿದ ಬಿಳಿ ಸಿಪ್ಪೆಯನ್ನು ಕೆರಸಿ ತೆಗೆಯುವುದು.ಅಡಿಕೆ ಹಾಳಾಗಬಾರದು.ನಾಜೂಕಿನ ಕೆಲಸವಿದು.ಕೆರಸಿದ ಅಡಿಕೆಯ ಮೇಲೆ ದಾರ ನೋಡಿ ಚೂರಿ ಹಾಕಿ ಒತ್ತಿದರೆ ಎರಡು ಭಾಗ,ಮತ್ತೆ ನಾಲ್ಕು,ಎಂಟು ತುಂಡು.ಇದು ಉದ್ದ ತುಂಡು.ದೇವಕಾರ್ಯಗಳಿಗೆಲ್ಲ ಈ ಉದ್ದತುಂಡುಗಳೇ ಬೇಕು.ತಿನ್ನಲು,ಅತ್ತೆ ಅಡ್ಡಕ್ಕೆ ಒಂದು ಅಥವಾ ಎರಡು ತುಂಡು ಅಡಿಕೆಯ ಗಾತ್ರವನ್ನನುಸರಿಸಿ ಈ ಹೋಳು ಎರಡು.ಸ್ವಲ್ಪ ಹೊಗೆಸೊಪ್ಪು.ಒಂದು ಈಡಿಕೆ ಇಷ್ಟು ಕೊಡಬೇಕು.ಬಂದವರು ಯಾರೇ ಇರಲಿ,ಈ ಎಲೆ ಅಡಿಕೆ ಕೊಡಬೇಕು.ಅವರು ತೆಗೆದುಕೊಳ್ಳಬೇಕು.ಮತ್ತೆ ನಿರ್ಗಮನ.

ನನ್ನ ತಂದೆಯವರ ಎಲೆ ಹರಿವಾಣ ಪ್ರಸಿದ್ಧ.ಚೆಂಬಿನ ಅಂದರೆ ತಾಮ್ರದ ತಟ್ಟೆ.ಒಂದು ಕವುಳಿಗೆ ಎಲೆ.ನಾಲ್ಕು ಕವುಳಿಗೆ ಒಂದು ಸೂಡಿ.ಹರಿವಾಣದಲ್ಲಿಡುವಾಗ ಮಗುಚಿಯೇ ಇಡಬೇಕು.ಕವುಚಿಡುವುದು ಅವಲಕ್ಷಣ.ಸುಣ್ಣದುಂಡೆ ಇದರಲ್ಲೇ ಹೊಗೆಸೊಪ್ಪು ಕೂಡಾ.ಎರಡೋ ಮೂರೋ ಇಡಿ ಅಡಿಕೆಗಳ ಹೋಳು.ಒಪ್ಪಓರಣ.ಬಂದವರಿಗೆ ಮನೆ ಹತ್ತುವ ಮೊದಲೇ ಚಂಬು ನೀರು ಕಾಲು ತೊಳೆಯಲು.ಚಂಬು ನೀರನ್ನು ಕಾಲ ಹಿಮ್ಮಡಿಗೆ ಮೊದಲು ಹಾಕುವುದು.ಕಾಲನ್ನು ಕಾಲಿನಿಂದ ತಿಕ್ಕಕೂಡದು-ಕಾಲು,ಮುಖ ತೊಳೆದು ಅಂಗವಸ್ತ್ರದಲ್ಲಿ ಮುಖ ಕೈ ಒರೆಸಿ ಒಳ ಬಂದರೆ,ಚಾಪೆ.ಬಂದವರು ಅತಿ ವಿಶೇಷದವರಾದರೆ ಜಂಬುಖಾನ ಲೋಡಿನ ಮರ್ಯಾದೆ.ಕುಳಿತಾದ ಮೇಲೆ ಬಾಯಾರಿಕೆಗೆ ಬೆಲ್ಲ ನೀರು,ನಾಲ್ಕು ತುಂಡು ಬೆಲ್ಲ,ಚಿಕ್ಕ ತಟ್ಟೆಯಲ್ಲಿ,ಒಂದು ಚೆಂಬು ನೀರು,ಒಂದು ಗ್ಲಾಸು.ಹೀಗೆ ಬಾಯಾರಿಕೆ ಕುಡಿದಾದ ಮೇಲೆ.ಉಭಯ ಕುಶಲೋಪರಿ.ಯೋಗಕ್ಷೇಮ.ವ್ಯವಹಾರ ಇದ್ದರೆ ಮಾತು.ಜೊತೆಗೆ ವೀಳ್ಯದೆಲೆ ಕೊಡಬೇಕು.ತಿನ್ನದವರಾದರೂ,ನನ್ನಪ್ಪನ ಒತ್ತಾಯಕ್ಕೆ ತಿನ್ನುತ್ತಲೇ ಇದ್ದರು.

ಬಂದವರು ಬ್ರಾಹ್ಮಣರು ನೆಂಟರಾದರೆ ಮಾತ್ರ ಈ ಕ್ರಮದ ಉಪಚಾರ. ಬ್ರಾಹ್ಮಣೇತರರು ಬಂದರೆ ಕುಳಿತುಕೊಳ್ಳಲು ಮಣೆ. ದೀವರೂ, ಹೊಲೆಯರಾದರೆ ಅಂಗಳದಲ್ಲೇ. ಒಳಬರುವಂತಿಲ್ಲ. ಪ್ರಾಥಮಿಕ ಶಾಲೆಯಲ್ಲಿ ನಾನು ಓದುತ್ತಿದ್ದಾಗ ಒಬ್ಬ ಹೊಲೆಯರ ಹುಡುಗ, ಆತ ನಲಿಕೆಯವನಿರಬೇಕು. ಕಿಟಕಿಯಾಚೆ ಮಾಡಡೀಯಲ್ಲಿ ಕುಳಿತು ಪುಸ್ತಕ ತೆರೆದು, ಮಾಸ್ಟ್ರು ಉದ್ದನೆಯ ಕೋಲಿಂದ ಪುಸ್ತಕದ ಪುಟದಲ್ಲಿದ್ದ ಆರ, ದನ, ಅಕ್ಷರ, ಶಬ್ದಗಳನ್ನು ಮುಟ್ಟಿ ಪಾಠ ಹೇಳಿಕೊಡುತ್ತಿದ್ದುದು ನೆನಪಿದೆ. ಅವನು ಒಬ್ಬನೇ ಹುಡುಗನಾಗ. ನನಗೆ ಆತನಲ್ಲಿ ತುಂಬ ಪ್ರೀತಿ. ಶಾಲೆ ಬಿಟ್ಟ ಮೇಲೆ ಅದೂ ಇದೂ ಮಾತಾಡುತ್ತಿದ್ದುದು ನೆನಪಿದೆ.

 

(ಫೋಟೋಗಳು: ಅಬ್ದುಲ್ ರಶೀದ್)