ಉದ್ಘಾಟನಾ ಸಮಾರಂಭದಲ್ಲಿ ಭವ್ಯ ಸಭಾಂಗಣದ ಹೊರಗಡೆ ನೂರಾರು ಹಣತೆಗಳ ಗೋಪುರವನ್ನು ಕಲಾತ್ಮಕವಾಗಿ ನಿರ್ಮಿಸಿದ್ದರು. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಬಾಂಬುದಾಳಿಗೆ ಈಡಾದ ಲಕ್ಷಾಂತರ ನತದೃಷ್ಟರ ಸ್ಮರಣಾರ್ಥ ಆ ಹಣತೆಗಳನ್ನು ಬೆಳಗುವ ಅವಕಾಶವನ್ನು ಪ್ರತಿನಿಧಿಗಳಿಗೆ ಕಲ್ಪಿಸಲಾಗಿತ್ತು. ಅಮೆರಿಕದ ಹದಿಹರೆಯದ ಹುಡುಗಿಯೊಬ್ಬಳು ಬಹಳ ತಲ್ಲೀನತೆಯಿಂದ ದೀಪ ಬೆಳಗಿಸಲು ಪ್ರಯತ್ನಿಸುತ್ತಿದ್ದಳು. ಬಾಂಬು ದುರಂತಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳ ಪೋಸ್ಟರ್ಗಳನ್ನು ಅಲ್ಲಿಯೆ ಪ್ರದರ್ಶನಕ್ಕೆ ಇಡಲಾಗಿತ್ತು. ಆ ಭಯಂಕರ ಚಿತ್ರಗಳು ಅವಳನ್ನು ಘಾಸಿಗೊಳಿಸಿದ್ದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 60ನೇ ಕಂತು ನಿಮ್ಮ ಓದಿಗೆ.
1999ನೇ ಮೇ ತಿಂಗಳಲ್ಲಿ 15 ದಿನಗಳವರೆಗೆ ನೆದರ್ಲ್ಯಾಂಡ್ಸ್ನಲ್ಲಿರಬೇಕಾಯಿತು. ಅದು 15 ದಿನಗಳ ಕಾಲದ ಅಂತರ್ರಾಷ್ಟ್ರೀಯ ದುಂಡು ಮೇಜಿನ ಪರಿಷತ್ ಆಗಿತ್ತು. ಸುಮಾರು 20 ಜನ ಈ ಚಕ್ರಗೋಷ್ಠಿಯಲ್ಲಿ ಭಾಗವಹಿಸಿದ್ದೆವು. ಭಾರತದಿಂದ ಇಬ್ಬರು ಇದ್ದೆವು. ಆ ಇನ್ನೊಬ್ಬರು ಮಹಾರಾಷ್ಟ್ರದವರಾಗಿದ್ದರು.
ನಮ್ಮೆಲ್ಲರನ್ನು ಎರಡು ಡಜನ್ ಕೋಣೆಗಳಿರುವ ಪೇಯಿಂಗ್ ಗೆಸ್ಟ್ ಸಂಸ್ಥೆಯ ಕಟ್ಟಡವೊಂದರಲ್ಲಿ ಇರಿಸಲಾಗಿತ್ತು. ಅದೊಂದು ವಿಶಿಷ್ಟವಾದ ಪಿ.ಜಿ. ಸಂಸ್ಥೆಯಾಗಿತ್ತು. ಒಂದೇ ಸಂಘಟನೆಯವರು ಎಲ್ಲ ರೂಮುಗಳನ್ನು ಹಿಡಿಯಬೇಕಿತ್ತು. ಪ್ರತಿ ರೂಮಿನಲ್ಲಿ ಎರಡು ಕಾಟ್ಗಳು. ಹೆಣ್ಣು ಗಂಡು ಕೂಡಿ ಇರಬಹುದು, ಇಲ್ಲವೆಂದರೆ ಒಬ್ಬರೇ ಇರಬಹುದು. ಅಲ್ಲಿ ಯಾವುದೇ ಅಡೆತಡೆಗಳು ಇರಲಿಲ್ಲ. ಈ ಹಿಂದೆ ಬೇರೆ ಸೆಮಿನಾರ್ಗಳಲ್ಲಿ ಪರಿಚಯವಾದ ಯುವಕ ಯುವತಿಯರು ಕೂಡ ನಮ್ಮ ಗುಂಪಿನಲ್ಲಿದ್ದರು. ಅವರೆಲ್ಲ ಕೂಡಿ ಉಳಿದರು. ನಾನು ಮತ್ತು ಇತರ ಕೆಲ ಯುವಕ ಯುವತಿಯರು ಸಿಂಗಲ್ ರೂಂ ಪಡೆದುಕೊಂಡೆವು.
ಆಮ್ಸ್ಟರ್ಡ್ಯಾಮ್ನಲ್ಲಿ ಭಾರತವೂ ಸೇರಿದಂತೆ ವಿವಿಧ ದೇಶಗಳ ಹೋಟೆಲ್ಗಳಿವೆ. ನಮಗೆ ಪ್ರತಿ ದಿನ ಒಂದೊಂದು ದೇಶದ ಹೋಟೆಲ್ಗಳ ಊಟದ ರುಚಿ ತೋರಿಸಲಾಗುತ್ತಿತ್ತು. ಆ ಹೋಟೆಲ್ಗಳು ತಮ್ಮ ದೇಶಗಳ ಸ್ಟೈಲ್ನಲ್ಲಿ ಇರುತ್ತಿದ್ದವು. ಒಳ ಅಲಂಕಾರ ಕೂಡ ಆಯಾ ದೇಶಗಳ ಸಾಂಸ್ಕೃತಿಕ ಹಿನ್ನೆಲೆಯಿಂದಲೇ ಕೂಡಿರುತ್ತಿತ್ತು. ಎಲ್ಲವೂ ಒಂದಕ್ಕಿಂತ ಒಂದು ಮಿಗಿಲಾಗಿರುತ್ತಿದ್ದವು. ಪ್ರಸಿದ್ಧ ಕಂಪನಿಗಳ ಮದ್ಯದ ಜೊತೆ ತಮ್ಮ ದೇಶಗಳಲ್ಲಿನ ಜನಪ್ರಿಯ ಮದ್ಯ ಕೂಡ ಅವರೆಲ್ಲ ಇಟ್ಟಿರುತ್ತಿದ್ದರು.
ಪಿ.ಜಿ. ಸಂಸ್ಥೆಯಲ್ಲಿ ಯಾರೂ ಇರುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ರೂಮುಗಳನ್ನು ನೀಟಾಗಿ ಇಟ್ಟುಕೊಳ್ಳುತ್ತಿದ್ದರು. ಆಗ ಇನ್ನೂ ಮೊಬೈಲ್ ಅವತಾರವಾಗಿರಲಿಲ್ಲ. ಅಲ್ಲಿನ ಫೋನ್ ಬಳಿ ಕೂಡ ಯಾರೂ ಇರುತ್ತಿರಲಿಲ್ಲ. ಅಲ್ಲಿಂದ ಯಾವುದೇ ದೇಶಕ್ಕೆ ಫೋನ್ ಮಾಡಬಹುದಾಗಿತ್ತು. ಮಾತಾಡುವುದು ಮುಗಿದ ನಂತರ ಬಿಲ್ ಕೂಡ ಗೊತ್ತಾಗುತ್ತಿತ್ತು. ಫೋನ್ ಮಾಡಿದವರು ಅಷ್ಟು ಹಣವನ್ನು ಪಕ್ಕದ ಆಳವಾದ ತಟ್ಟೆಯೊಂದರಲ್ಲಿ ಇಡುತ್ತಿದ್ದರು. ಅಲ್ಲಿ ಹಣ ಹಾಗೇ ಬಿದ್ದಿರುತ್ತಿತ್ತು. ಸಾಮಾಜಿಕವಾಗಿ ಹೀಗೆ ನಾವು ಪ್ರಾಮಾಣಿಕತೆಯನ್ನು ಹೊಂದಿರುವೆವೆ? ಎಂಬ ಪ್ರಶ್ನೆ ಇಂದಿಗೂ ಕಾಡುತ್ತಲೇ ಇದೆ. (ಮರಾಠಿಯಲ್ಲಿ ಪ್ರಸಿದ್ಧವಾದ ‘ಶ್ಯಾಮ್ಚಿ ಆಯಿ’ ಕಾದಂಬರಿ ಬರೆದ ಸಾನೇ ಗುರೂಜಿ ಅವರು ಒಮ್ಮೆ ರಸ್ತೆ ಬದಿಗೆ ವಿವಿಧ ಪತ್ರಿಕೆಗಳನ್ನು ತೂಗುಹಾಕಿ, ಕೆಳಗಡೆ ಹಣದ ಡಬ್ಬಿಯೊಂದನ್ನು ಇಟ್ಟಿದ್ದರಂತೆ. ಪತ್ರಿಕೆ ತೆಗೆದುಕೊಂಡವರು, ಅದರ ಬೆಲೆಯನ್ನು ಡಬ್ಬಿಗೆ ಹಾಕಿ ಹೋಗಿ ಎಂದು ದೊಡ್ಡದಾಗಿ ಬರೆದು ಇಟ್ಟಿದ್ದರಂತೆ. ಕೊನೆಗೆ ಬಂದು ನೋಡಿದಾಗ ಪತ್ರಿಕೆಗಳೂ ಇರಲಿಲ್ಲ, ಹಣದ ಡಬ್ಬಿಯೂ ಇರಲಿಲ್ಲ. ಸಾನೇ ಗುರೂಜಿಯವರು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ನಾನು ವಿದ್ಯಾರ್ಥಿಯಾಗಿದ್ದಾಗ ಯಾರೋ ಹೇಳಿದ್ದ ನೆನಪು.)
ಆ ಪಿ.ಜಿ. ಸೆಂಟರ್ನಲ್ಲಿ ಅಡುಗೆ ಮನೆ ಕೂಡ ಇತ್ತು. ಅಲ್ಲಿ ತಮಗೆ ಬೇಕಾದುದನ್ನು ಮಾಡಿಕೊಂಡು ತಿನ್ನಬಹುದಿತ್ತು. ಫಿಡ್ಜ್ನಲ್ಲಿ ಬಿಯರ್ ಮುಂತಾದ ಮದ್ಯದ ಬಾಟಲಿಗಳಿದ್ದವು. ಪಿ.ಜಿ. ಸಂಸ್ಥೆಯ ಒಬ್ಬ ವ್ಯಕ್ತಿ ಪ್ರತಿದಿನ 15 ನಿಮಿಷ ವ್ಯಾನಲ್ಲಿ ಬಂದು. ಅಡುಗೆ ಮನೆಯಲ್ಲಿ ಇಡಬೇಕಾದ ಮದ್ಯದ ಬಾಟಲಿ ಮುಂತಾದ ವಸ್ತುಗಳನ್ನು ಇಟ್ಟು ಹೋಗುತ್ತಿದ್ದ. ರುಮೆನಿಯಾದ ಒಬ್ಬ ಯುವಕ ಮತ್ತು ಬೇರೊಂದು ದೇಶದ ಒಬ್ಬ ಯುವತಿ ಸಮಯ ಸಿಕ್ಕಾಗಲೆಲ್ಲ ಅಲ್ಲಿಗೆ ಹೋಗಿ ಕುಡಿಯುವುದೇ ಅಭ್ಯಾಸ ಮಾಡಿಕೊಂಡಿದ್ದರು.
ನಾವು ವಾಪಸಾಗುವ ಹಿಂದಿನ ದಿನ ಆಮ್ಸ್ಟರ್ಡ್ಯಾಮ್ ನಗರ ಪ್ರವಾಸವನ್ನು ಆಯೋಜಿಸಲಾಗಿತ್ತು. ಸ್ಪೇನ್ನ ಬಾರ್ಸಿಲೋನಾದಿಂದ ಬಂದ ನಾದಿಯಾ ನೀವು ಹೋಗಿ ಬನ್ನಿ ಎಂದಳು. ಅವಳು ಅಡುಗೆಮನೆಯಲ್ಲಿ ಬಳಸಿದ ಎಲ್ಲ ವಸ್ತುಗಳನ್ನು ತೊಳೆದು, ಅಡುಗೆ ಮನೆ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಳು. ನಾವು ಆ ಪಿ.ಜಿ. ಸೆಂಟರ್ಗೆ ಬಂದಾಗ ಎಷ್ಟು ಸ್ವಚ್ಛವಾಗಿತ್ತೋ ಹಾಗೆ ಅದೇ ಸ್ವಚ್ಛತೆ ವಾಪಸ್ ಹೋಗುವಾಗ ಕೂಡ ಇರಬೇಕು. ಇದೆಲ್ಲ ನೋಟಿಸ್ ಮೂಲಕ ತಿಳಿಸುವುದಿಲ್ಲ. ಇದು ಆ ಜನರ ಸಂಸ್ಕಾರ. ಅಷ್ಟು ದೊಡ್ಡ ಪಿ.ಜಿ. ಸೆಂಟರ್ ಯಾವೊಬ್ಬ ವ್ಯಕ್ತಿಯೂ ಇಲ್ಲದೆ. ಅಷ್ಟೇ ವ್ಯವಸ್ಥಿತವಾಗಿ ಇರುವ ಅನುಭವ ನನಗೆ ಹೊಸದು. ನಾನು ಎಲ್ಲ ಕ್ಲೀನ್ ಮಾಡುವೆ ನೀವು ಹೋಗಬಹುದು ಎಂದೆ. ಅದಕ್ಕೆ ಅವಳು, ‘ನಾನು ಹೀಗೆಲ್ಲ ಬರುತ್ತಲೇ ಇರುತ್ತೇನೆ. ಇಲ್ಲಿಗೆ ಇನ್ನೊಮ್ಮೆ ಬರಲೂಬಹುದು. ನೀವು ಹೋಗಿ ನೋಡಿಕೊಂಡು ಬನ್ನಿರಿ ಎಂದು ಆಕೆ ಹೇಳಿದಳು. ಅವಳ ಜವಾಬ್ದಾರಿಯ ಪ್ರಜ್ಞೆ ನನ್ನನ್ನು ಮಂತ್ರಮುಗ್ಧವಾಗಿಸಿತು. ನಾನು ಬೆಂಗಳೂರಿನಿಂದ ಬಂದದ್ದು ಅವಳಿಗೆ ಖುಷಿ ಕೊಟ್ಟಿತ್ತು. ‘ನಾನು ಬೆಂಗಳೂರು ನೋಡಿದ್ದೇನೆ. ನನಗದು ಇಷ್ಟದ ನಗರ. ಮತ್ತೆ ಬೆಂಗಳೂರು ನೋಡಬೇಕೆನಿಸುತ್ತಿದೆ’ ಎಂದಳು. ‘ಈಗಿನ ಬೆಂಗಳೂರು ನಿನಗೆ ಇಷ್ಟವಾಗಲಿಕ್ಕಿಲ್ಲ’ ಎಂದು ಹೇಳಬೇಕೆನಿಸಿತು. ನಕ್ಕು ಸುಮ್ಮನಾದೆ.
ಅಲ್ಜೀರಿಯಾ, ಫ್ರಾನ್ಸ್, ರುಮೆನಿಯಾ, ಅಮೆರಿಕಾ, ಅಫಘಾನಿಸ್ತಾನ್, ಸ್ಪೇನ್ ಮುಂತಾದ ಕಡೆಗಳಿಂದ ಮಹಿಳೆಯರು ಈ ಚಕ್ರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಸಿದ್ಧಾರ್ಥ ಅವರ ಬೆಂಗಳೂರಿನ ಫೈರ್ ಫ್ಲೈಸ್ ಸಂಘಟನೆಯ ಮೂಲಕ ಫ್ರಾನ್ಸಿನ ಸಂಘಟನೆಯೊಂದು ಈ ಚಕ್ರಗೋಷ್ಠಿಯ ವ್ಯವಸ್ಥೆ ಮಾಡಿತ್ತು. ಇದರ ಜೊತೆಗೆ ಕೊನೆಯ ವಾರದಲ್ಲಿ ಹೇಗ್ನಲ್ಲಿ ನಡೆಯುವ ‘ಹೇಗ್ ಪೀಸ್ ಅಪೀಲ್’ ಅಂತರ್ರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ಕೂಡ ಭಾಗವಹಿಸಬೇಕಿತ್ತು. ಅಫಘಾನಿಸ್ತಾನದ ಯುವತಿಗೆ ಇಂಗ್ಲಿಷ್ ಬರದಿದ್ದರೂ ಬಹಳ ಪ್ರಯತ್ನ ಪಟ್ಟು ಅಲ್ಲಿನ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ನಮಗೆಲ್ಲ ಅರಿವಾಗುವಂತೆ ಚಕ್ರಗೋಷ್ಠಿಯಲ್ಲಿ ತಿಳಿಸುವಲ್ಲಿ ಸಫಲಳಾದಳು.
ಮಹಿಳಾ ವಿಚಾರಕ್ಕೆ ಸಂಬಂಧಿಸಿದ ಗೋಷ್ಠಿಯ ಅಧ್ಯಕ್ಷತೆಯನ್ನು ಅಲ್ಜೀರಿಯಾ ಮೂಲದ ಫ್ರಾನ್ಸ್ ನಿವಾಸಿ ಸಾಮಾಜಿಕ ಕಾರ್ಯಕರ್ತೆ (ಅವರ ಹೆಸರು ಮರೆತಿರುವೆ) ಅಧ್ಯಕ್ಷತೆ ವಹಿಸಿದ್ದರು. ಫ್ರಾನ್ಸ್ನಲ್ಲಿ ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ದೊಡ್ಡ ಪ್ರಮಾಣದ ಎನ್.ಜಿ.ಒ. ನಡೆಸುತ್ತಿದ್ದರು. ಅಂದು ನಾನು ಭಾರತೀಯ ಮುಸ್ಲಿಂ ಮಹಿಳೆಯರ ಕುರಿತು ಮಾತನಾಡಿದೆ. ಬಹುಪಾಲು ಮಹಿಳೆಯರು ನಿರಕ್ಷರತೆ, ಅಜ್ಞಾನ, ಮೂಢನಂಬಿಕೆ, ಪುರುಷ ಪ್ರಧಾನಮಯವಾಗಿ ಪರಿವರ್ತನೆಗೊಂಡ ಧಾರ್ಮಿಕ ಕಟ್ಟಳೆಗಳು ಮುಂತಾದ ಅನಿಷ್ಟಗಳಿಂದ ನೋವು ಅನುಭವಿಸುತ್ತಿದ್ದಾರೆ ಎಂಬ ವಿಚಾರ ವಿವರಿಸುವ ಸಂದರ್ಭದಲ್ಲಿ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಕೊನೆಗೆ ಅಧ್ಯಕ್ಷೀಯ ನುಡಿಗಳನ್ನು ಆಡುವ ಸಂದರ್ಭದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಇದು ಜಗತ್ತಿನ ಮಹಿಳೆಯರ ನೋವೇ ಆಗಿದೆ ಎಂದು ತಿಳಿಸಿದರು. ಪುರುಷರು ಹೀಗೆ ಮಾತನಾಡುತ್ತ ಕ್ರಿಯಾಶೀಲವಾದಾಗಲೇ ಲಿಂಗತಾರತಮ್ಯದ ಬಗ್ಗೆ ಸಾಮಾಜಿಕ ಅರಿವು ಮೂಡಲು ಸಾಧ್ಯ ಎಂದರು. ಆ ಮುಸ್ಲಿಂ ಮಹಿಳೆಯ ಕರ್ತೃತ್ವಶಕ್ತಿ ಮತ್ತು ಮಹಿಳೆಯರ ಸಮಸ್ಯೆಗಳ ಕುರಿತ ವಿಶ್ಲೇಷಣಾ ವಿಧಾನ ನನಗೆ ಬಹಳ ಹಿಡಿಸಿದವು.
ಬಾರ್ಸಿಲೋನಾದಿಂದ ಬಂದ ನಾದಿಯಾ ಬಹಳ ಚುರುಕಾಗಿದ್ದಳು. ಆಕೆಯ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಖುಷಿ ಕೊಟ್ಟಿತು. ಅಮೆರಿಕಾದಿಂದ ಬಂದ ಎಂಜಿಲಾ ಕೂಡ ಸ್ಫುರದ್ರೂಪಿಯಾಗಿದ್ದಳು. ಆದರೆ ಅವಳು ಮದುವೆಯಾಗಬಾರದೆಂದು ನಿರ್ಧರಿಸಿದ್ದಳು. ಅತ್ಯಾಚಾರಕ್ಕೊಳಗಾದ ಮಹಿಳೆಯರ ಹಿತರಕ್ಷಣಾ ಸಂಘಟನೆಯ ಮೂಲಕ ಕ್ರಿಯಾಶೀಲಳಾಗಿದ್ದಳು. ಆಕೆಯ ತಂದೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ. ಇವಳು 13 ವರ್ಷದ ಬಾಲಕಿಯಾಗಿದ್ದಾಗಲೇ ಆತ ಅವಳನ್ನು ಕಾಲ್ಗರ್ಲ್ ಅವಸ್ಥೆಗೆ ತಂದಿಟ್ಟ. ಹಣದಾಸೆಗಾಗಿ ಸ್ವತ ತಾನೇ ತಲೆಹಿಡುಕನಾಗಿ ಅವಳನ್ನು ವಿಟಪುರುಷರ ಬಳಿ ಕರೆದುಕೊಂಡು ಹೋಗುತ್ತಿದ್ದ. ‘ನಾನು ಅನುಭವಿಸಿದ ಸ್ಥಿತಿ ಯಾವ ಹೆಣ್ಣಿಗೂ ಬರಬಾರದೆಂಬ ಕಾರಣಕ್ಕೆ, ಅವರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಈಗಾಗಲೇ ಲೈಂಗಿಕ ಕ್ರೌರ್ಯಕ್ಕೆ ಬಲಿಯಾಗಿ ಖಿನ್ನತೆಗೆ ಒಳಗಾದ ಯುವತಿಯರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ನನ್ನ ಬದುಕನ್ನು ಮುಡಿಪಾಗಿಟ್ಟಿದ್ದೇನೆ’ ಎಂದು ಅವಳು ನನ್ನ ಜೊತೆ ಮಾತನಾಡುತ್ತ ತಿಳಿಸಿದಳು.
ಆಮ್ಸ್ಟರ್ಡ್ಯಾಮ್ ಕೆಂಪುದೀಪದ ಪ್ರದೇಶ ಬೃಹತ್ತಾಗಿದ್ದು ಇಡೀ ಐರೋಪ್ಯ ರಾಷ್ಟ್ರಗಳಲ್ಲಿ ಪ್ರಸಿದ್ಧವಾಗಿದೆ. ಯುದ್ಧದಿಂದಾಗುವ ಅಸಹಾಯಕತೆ, ನಿರುದ್ಯೋಗ, ಸಾಮಾಜಿಕ, ಆರ್ಥಿಕ ಮುಂತಾದ ಕಾರಣಗಳಿಂದಾಗಿ ವಿವಿಧ ದೇಶಗಳ ಯುವತಿಯರು ಇಲ್ಲಿನ ಸುವ್ಯವಸ್ಥಿತ ವೇಶ್ಯಾವಾಟಿಕೆ ಕೇಂದ್ರ ಸೇರುತ್ತಾರೆ. ಬಹುಶಃ ಜಗತ್ತಿನ ಎಲ್ಲ ದೇಶಗಳ ಯುವತಿಯರು ಈ ವೇಶ್ಯಾಕೇಂದ್ರದಲ್ಲಿ ಕಾಣಸಿಗುತ್ತಾರೆ.
ನೆದರ್ಲ್ಯಾಂಡ್ಸ್ನಲ್ಲಿ ವೇಶ್ಯಾವಾಟಿಕೆ ಶಾಸನಬದ್ಧವಾಗಿದೆ. (ನಾವು ಅಲ್ಲಿರುವಾಗಲೇ ಅಲ್ಲಿನ ಸರ್ಕಾರ ಸಲಿಂಗ ವಿವಾಹವನ್ನು ಕೂಡ ಶಾಸನಬದ್ಧಗೊಳಿಸಿದ್ದನ್ನು ಪತ್ರಿಕೆಯಲ್ಲಿ ಓದಿದ ನೆನಪು.) ಪ್ರತಿ ವೇಶ್ಯೆಗೆ ಸರ್ಕಾರ ಲೈಸನ್ಸ್ ಕೊಟ್ಟಿರುತ್ತದೆ. ಪ್ರತಿಯೊಬ್ಬ ಯುವತಿಗೆ ಎಲ್ಲರೀತಿಯ ಸೌಕರ್ಯಗಳಿರುತ್ತವೆ. ಆ ವಿಶಾಲ ಪ್ರದೇಶದ ಮುಖ್ಯ ಕಟ್ಟಡದ ಹೊರಗಿನ ಶೋ ಕೇಸ್ಗಳಲ್ಲಿ ಹುಡುಗಿಯರು ಗೊಂಬೆಗಳ ಹಾಗೆ ನಿಂತಿರುತ್ತಾರೆ. ಐರೋಪ್ಯ ಖಂಡದ ವಿವಿಧ ದೇಶಗಳ ಜನರು ಈ ವೇಶ್ಯಾವಾಟಿಕೆಗೆ ಬರುತ್ತಾರೆ. ಅವರು ಬಂದು ಅಲ್ಲಿನ ಕಚೇರಿಯಲ್ಲಿ ಅನುಮತಿ ಪಡೆಯ ಬೇಕಾಗುತ್ತದೆ. ಅನುಮತಿ ನೀಡುವ ಮೊದಲು ಹಾಗೆ ಬಂದವರ ಆರೋಗ್ಯ ತಪಾಸಣೆಯಾಗುತ್ತದೆ. ಏಡ್ಸ್ ಮುಂತಾದ ಲೈಂಗಿಕ ರೋಗಗಳು ಇಲ್ಲವೆಂದು ತಪಾಸಣೆಯ ನಂತರ ಗೊತ್ತಾದ ಬಳಿಕವೇ ಅವರು ತಾವಿಷ್ಟಪಟ್ಟ ಯುವತಿಯ ಬಳಿ ಹೋಗಬಹುದು. ಹೀಗೆ ಇಲ್ಲಿ ಸೆಕ್ಸ್ ಕೂಡ ಒಂದು ದೊಡ್ಡ ವ್ಯವಹಾರವಾದರೂ ಅಲ್ಲಿನ ವೇಶ್ಯೆಯರ ಹಿತರಕ್ಷಣೆ ಮುಖ್ಯವಾಗಿದೆ. ಅವರ ಆರೋಗ್ಯ ತಪಾಸಣೆ ಕೂಡ ನಿಯಮಿತವಾಗಿ ನಡೆಯುತ್ತದೆ. ಇದೆಲ್ಲ ನನಗೆ ಎಂಜಿಲಾ ಹೇಳಿದ್ದು. ಆಕೆ ಸಂದರ್ಶನಕ್ಕಾಗಿ ಆ ಕೇಂದ್ರಕ್ಕೆ ಹೋಗಿದ್ದಳು. ನನಗೆ ಕರೆದುಕೊಂಡು ಹೋಗುವ ಇಚ್ಛೆ ಅವಳಿಗಿತ್ತು. ಆದರೆ ಅದೆಲ್ಲ ನನಗೆ ನೋಡಲಿಕ್ಕಾಗದು ಎಂದ ಬಳಿಕ ಒಬ್ಬಳೇ ಹೋದಳು.
ಜಗತ್ತಿನ ಅತಿದೊಡ್ಡ ಸೆಕ್ಸ್ ಮ್ಯೂಜಿಯಂ ಕೂಡ ಆಮ್ಸ್ಟರ್ಡ್ಯಾಮ್ನಲ್ಲೇ ಇದೆ. ನಾಲ್ಕು ಅಂತಸ್ತಿನ ಆ ವಿಶಾಲವಾದ ಮ್ಯೂಜಿಯಂ ನೋಡಲು ಕನಿಷ್ಠ ಅರ್ಧ ದಿನವಾದರೂ ಬೇಕು. ಜಗತ್ತಿನ ನೂರಾರು ದೇಶಗಳ ಲೈಂಗಿಕ ಸಂಪ್ರದಾಯಗಳ ಚಿತ್ರಗಳು, ವಿಡಿಯೊಗಳು, ಮೂರ್ತಿಗಳು ಅಲ್ಲಿ ತುಂಬಿ ತುಳುಕುತ್ತಿವೆ. ಅನೇಕ ಶತಮಾನಗಳ ಹಿಂದಿನ ಲೈಂಗಿಕ ಉಬ್ಬುಚಿತ್ರಗಳಿಂದ ಕೂಡಿದ ಕಲಾತ್ಮಕ ವಸ್ತುಗಳನ್ನು ಕೂಡ ಸಂಗ್ರಹಿಸಿಟ್ಟಿದ್ದಾರೆ. ಅಲ್ಲಿಯ ವಿವಿಧ ನೀಲಿಚಿತ್ರಗಳ ಸ್ಕ್ರೀನ್ಗೆ ಬಟನ್ ಇಟ್ಟಿರುತ್ತಾರೆ, ಆ ಬಟನ್ ಟಚ್ ಮಾಡಿ ಯಾರಾದರೂ ನೋಡಬಹುದು. ಇಂಥ ಅನೇಕ ಸ್ಕ್ರೀನ್ಗಳು ಅಲ್ಲಿವೆ. ಸೆಕ್ಸ್ಅನ್ನು ಬಿಂಬಿಸುವ ನೂರಾರು ಚಿತ್ರ ವಿಚಿತ್ರ ಪ್ರಕಾರಗಳು ಅಲ್ಲಿವೆ. ಅಂಜಿ ಗುದ್ದ ಸೇರುವ ವಿಷರಹಿತ ಅಂಜುಬುರುಕ ಹಾವುಗಳನ್ನು ಕೂಡ ಕೆಲ ಜನಾಂಗಗಳ ಹೆಣ್ಣುಗಳು ಸೆಕ್ಸ್ಗಾಗಿ ಬಳಸುವ ಚಿತ್ರಗಳು ಗಾಬರಿ ಹುಟ್ಟಿಸುತ್ತವೆ. ಒಟ್ಟಾರೆ ಮನುಷ್ಯ ಶತಮಾನಗಳಿಂದ ರೂಢಿಸಿಕೊಂಡು ಬಂದಿರುವ ಎಲ್ಲ ಆಕರ್ಷಕ ಮತ್ತು ವಿಕೃತ ಸೆಕ್ಸ್ ರೂಪಗಳ ದರ್ಶನ ಅಲ್ಲಿ ಆಗುತ್ತದೆ. ಆ ಮ್ಯೂಜಿಯಂ ಟಿಕೆಟ್ ಬೆಲೆ 60 ಗಿಲ್ಡರ್ (ಅಲ್ಲಿನ ಕರೆನ್ಸಿ) ಇತ್ತು. ಆದು ಆ ಕಾಲದಲ್ಲಿ ಬಹಳ ದುಬಾರಿ ಟಿಕೆಟ್. ಆದರೆ ಆ ಮ್ಯೂಜಿಯಂನಲ್ಲಿ ಸಂಗ್ರಹಿಸಿಡಲಾದ ಪುರಾತನ ಕಾಮಸೂತ್ರದ ಶಿಲ್ಪಗಳು, ಮಾನವ ಲೈಂಗಿಕವಾಗಿ ಬೆಳೆದುಬಂದ ಬಗೆಯನ್ನು ತಿಳಿಸುತ್ತವೆ. ಅಲ್ಲಿನ ಟ್ಯಾಂಗೋ ಡಾನ್ಸ್ ಮೂರ್ತಿಗಳ ನೃತ್ಯ ವಿಚಿತ್ರವಾದುದು. ಅವು ಎಲ್ಲ ರೀತಿಯಿಂದಲೂ ಹೆಣ್ಣು ಗಂಡುಗಳ ಹಾಗೆಯೆ ಕಾಣುತ್ತವೆ. ಅವು ನೃತ್ಯ ಮಾಡುತ್ತ, ಮಾಡುತ್ತ ರತಿಕ್ರೀಡೆಯಲ್ಲಿ ತೊಡಗುತ್ತವೆ. ದಕ್ಷಿಣ ಅಮೆರಿಕದಲ್ಲಿ ಈ ನೃತ್ಯ ಇತ್ತು ಎಂದು ಅಲ್ಲಿದ್ದ ಯಾರೋ ಹೇಳಿದರು.
ಅಮೆರಿಕದ ಪ್ರಸಿದ್ಧ ಸುರಸುಂದರಿ ನಟಿ ಮರ್ಲೀನ್ ಮೊನ್ರೊಳ ಲಂಗ ಹಾರುವ ಮೇಣದ ಚಿತ್ರ ಅತ್ಯಾಕರ್ಷಕವಾಗಿದೆ. ಕೆಳಗಿನಿಂದ ಫ್ಯಾನ್ ಮೂಲಕ ಗಾಳಿಯನ್ನು ನೂಕುವುದರಿಂದ ಲಂಗ ಮೇಲಕ್ಕೆ ಏರುತ್ತಲೇ ಇರುತ್ತದೆ. 36ನೇ ವಯಸ್ಸಿನಲ್ಲಿ ಸತ್ತ ಆಕೆಯ ರೂಪ, ಗಾನಮಾಧುರ್ಯ ಹಾಗೂ ನಟನೆ ಜಗತ್ಪ್ರಸಿದ್ಧವಾಗಿದ್ದವು. ಮೊದಲನೇ ಮಹಾಯುದ್ಧದಲ್ಲಿ ಮೋಹಕ ನೃತ್ಯಗಾರ್ತಿಯೂ ಆಗಿದ್ದ ಡಚ್ ಮೂಲದ ಜರ್ಮನ್ ಗೂಢಚಾರಿಣಿ ಮಾತಾ ಹರಿ(ಮಾರ್ಗರೆಟಾ)ಯನ್ನು ಫ್ರಾನ್ಸ್ನಲ್ಲಿ ಗುಂಡಿಕ್ಕಿ ಕೊಲ್ಲುವ ಆಳೆತ್ತರದ ಚಿತ್ರ ಮನದಲ್ಲಿ ವಿಷಾದ ಮೂಡಿಸುತ್ತದೆ.
ನಾವು ಆ ಪಿ.ಜಿ. ಸೆಂಟರ್ಗೆ ಬಂದಾಗ ಎಷ್ಟು ಸ್ವಚ್ಛವಾಗಿತ್ತೋ ಹಾಗೆ ಅದೇ ಸ್ವಚ್ಛತೆ ವಾಪಸ್ ಹೋಗುವಾಗ ಕೂಡ ಇರಬೇಕು. ಇದೆಲ್ಲ ನೋಟಿಸ್ ಮೂಲಕ ತಿಳಿಸುವುದಿಲ್ಲ. ಇದು ಆ ಜನರ ಸಂಸ್ಕಾರ. ಅಷ್ಟು ದೊಡ್ಡ ಪಿ.ಜಿ. ಸೆಂಟರ್ ಯಾವೊಬ್ಬ ವ್ಯಕ್ತಿಯೂ ಇಲ್ಲದೆ. ಅಷ್ಟೇ ವ್ಯವಸ್ಥಿತವಾಗಿ ಇರುವ ಅನುಭವ ನನಗೆ ಹೊಸದು.
ವ್ಯಾನ್ ಗೋ ಆರ್ಟ್ ಗ್ಯಾಲರಿ ನೋಡುವ ಬಯಕೆ ತೀವ್ರವಾಗಿತ್ತು. ನೆದರ್ಲ್ಯಾಂಡ್ಸ್ನ ಬಣ್ಣಬಣ್ಣದ ಟುಲಿಪ್ ಹೂಗಳಿಂದ ತುಂಬಿದ ನೂರಾರು ಎಕರೆ ಉದ್ದದ ಮನಮೋಹಕ ತೋಟಗಳು, ಆಕರ್ಷಕ ಗಾಳಿಯಂತ್ರಗಳು, ಹಚ್ಚಹಸಿರಿನ ನಿಸರ್ಗ ಮುಂತಾದವು ಆತನ ಪೇಂಟಿಗ್ಸ್ನಲ್ಲಿ ಜೀವ ತಾಳಿವೆ. ಅವುಗಳನ್ನು ಓರಿಜಿನಲ್ ಆಗಿ ನೋಡುವ ಬಯಕೆ ಈಡೇರಲಿಲ್ಲ. ಏಕೆಂದರೆ ನಾವು ಹೋದ ಸಂದರ್ಭದಲ್ಲಿ ನವೀಕರಣಕ್ಕಾಗಿ ಗ್ಯಾಲರಿಯನ್ನು ಬಂದ್ ಮಾಡಲಾಗಿತ್ತು. ಜಗತ್ಪ್ರಸಿದ್ಧ ಕಲಾವಿದ ವ್ಯಾನ್ ಗೋ ಬಡತನದಲ್ಲೇ ಅಸುನೀಗಿದ. ನಂತರ ಆತನ ಕಲಾಕೃತಿಗಳನ್ನು ಮಾರಿದವರು ಕೋಟ್ಯಧೀಶರಾದರು!
ಆಮ್ಸ್ಟರ್ಡ್ಯಾಮ್ ಸಮುದ್ರ ಮಟ್ಟಕ್ಕಿಂತ ಕೆಳಗೆ ಇರುವ ಕರಾವಳಿ ನಗರ. ನಗರದ ಮಧ್ಯೆಯೆ ಸಮುದ್ರ ನುಸುಳಿ ನಗರವನ್ನು ಇಬ್ಭಾಗ ಮಾಡಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನಾಗರಿಕರನ್ನು ಆಕಡೆ ಈಕಡೆ ಕರೆದುಕೊಂಡು ಹೋಗುವ ಉಚಿತ ಹಡಗು ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ನಗರದ ಒಳಗೆಲ್ಲ ಕಾಲುವೆಗಳಿದ್ದು ಅಲ್ಲಿಯೂ ಬೋಟಿಂಗ್ ವ್ಯವಸ್ಥೆ ಇದೆ. ಜನರು ಹೆಚ್ಚಾಗಿ ಸೈಕಲ್ ಮತ್ತು ಸ್ಕೇಟಿಂಗ್ ಮೂಲಕ ಪ್ರಯಾಣಿಸುವುದನ್ನು ಇಷ್ಟಪಡುತ್ತಾರೆ. ಟ್ರೇನ್ಗಳಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುವಾಗ ಮಡಚುವ ಸೈಕಲ್ಗಳನ್ನು ಟ್ರೇನ್ ಒಳಗೆ ತರುತ್ತಾರೆ. ತಮ್ಮ ನಿಲ್ದಾಣ ತಲುಪಿದ ಮೇಲೆ ಸೈಕಲ್ ಹತ್ತಿ ಹೋಗುತ್ತಾರೆ.
ಒಂದು ಸಲ ಆಮ್ಸ್ಟರ್ಡ್ಯಾಮ್ನಿಂದ ಹೇಗ್ಗೆ ಹೋಗುವಾಗ ಟ್ರೇನ್ನಲ್ಲಿ ಸುರೇನಾಂ ದೇಶದ ಯುವತಿಯರು ಸಿಕ್ಕರು. ಅವರ ಹೆಸರುಗಳೆಲ್ಲ ಸಂಸ್ಕೃತ ಹೆಸರುಗಳಾಗಿದ್ದವು. ನಾನು ಭಾರತದಿಂದ ಬಂದದ್ದು ಅವರಿಗೆ ಬಹಳ ಖುಷಿ ಕೊಟ್ಟಿತು. ತಮ್ಮ ಪೂರ್ವಜರು ಒಂದೆರಡು ಶತಮಾನಗಳ ಹಿಂದೆ ಭಾರತ ಬಿಟ್ಟು ಹೊಟ್ಟೆಪಾಡಿಗಾಗಿ ಸುರೇನಾಂ ದೇಶಕ್ಕೆ ಬಂದರು. ಆದರೆ ನಮ್ಮೆಲ್ಲರ ಮನೆಗಳಲ್ಲಿ ಇಂದಿಗೂ ಭಾರತೀಯ ಸಂಸ್ಕೃತಿ ಇದೆ. ನಾವು ಭಾರತವನ್ನು ನೋಡಿಲ್ಲ. ಭಾಷೆಯೂ ಗೊತ್ತಿಲ್ಲ. ಆದರೆ ನಮ್ಮ ಮನೆಯಲ್ಲಿ ಇಂದಿಗೂ ದೀವಾಲಿ ಆಚರಿಸುತ್ತೇವೆ. ಭಾರತೀಯ ದೇವ ದೇವತೆಗಳ ಚಿತ್ರಗಳು ನಮ್ಮ ಮನೆಯಲ್ಲಿವೆ ಎಂಬಂಥ ಮುಂತಾದ ವಿಚಾರಗಳನ್ನು ಅವರು ಹೇಳಿದರು. ಮನುಷ್ಯನ ಸಾಂಸ್ಕೃತಿಕ ಬೇರುಗಳು ಎಷ್ಟೊಂದು ಆಳವಾಗಿರುತ್ತವೆ. ಅವು ಹೇಗೆ ಭಾವನೆಗಳೊಂದಿಗೆ ಮಿಳಿತವಾಗಿರುತ್ತವೆ ಎಂದೆಲ್ಲ ಯೋಚನೆ ಮಾಡಿದೆ.
ಕೊನೆಯ ವಾರದಲ್ಲಿ ರಾಜಧಾನಿ ಹೇಗ್ನಲ್ಲಿ ನಡೆದ ‘ಹೇಗ್ ಪೀಸ್ ಅಪೀಲ್ʼ ವಿಶ್ವ ಶಾಂತಿ ಸಮ್ಮೇಳನಕ್ಕೆ ಪ್ರತಿದಿನ ಆಮ್ಸ್ಟರ್ಡ್ಯಾಮ್ನಿಂದ ಹೇಗ್ಗೆ ಪ್ರಯಾಣ ಬೆಳೆಸುತ್ತಿದ್ದೆವು. ಆ ಸಮ್ಮೇಳನ ನನ್ನಲ್ಲಿ ಹೊಸ ಭರವಸೆಯನ್ನು ಮೂಡಿಸಿತು. 100 ದೇಶಗಳಿಂದ ವಿಶ್ವಶಾಂತಿಯ ಕನಸುಗಳೊಂದಿಗೆ ಬಂದ 8000 ಪ್ರಜ್ಞಾವಂತ ಪ್ರತಿನಿಧಿಗಳನ್ನು ನೋಡುವುದೇ ಸೌಭಾಗ್ಯ. ವಿಶ್ವಸಂಸ್ಥೆಯ ಅಂದಿನ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್, ನಮ್ಮ ದೇಶದ ಕೃಷಿ ಮತ್ತು ಪರಿಸರ ತಜ್ಞೆ ವಂದನಾ ಶಿವಾ, ವಿವಿಧ ದೇಶಗಳ ಪ್ರಧಾನಿಗಳು, ಅಧ್ಯಕ್ಷರು, ರಾಜನೀತಿಜ್ಞರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಕಲಾವಿದರು, ಸಾಹಿತಿಗಳು, ಅಸಂಖ್ಯಾತ ಯುವಕರು ಆ ವಿಶ್ವಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಭವ್ಯ ಸಭಾಂಗಣದ ಹೊರಗಡೆ ನೂರಾರು ಹಣತೆಗಳ ಗೋಪುರವನ್ನು ಕಲಾತ್ಮಕವಾಗಿ ನಿರ್ಮಿಸಿದ್ದರು. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಬಾಂಬುದಾಳಿಗೆ ಈಡಾದ ಲಕ್ಷಾಂತರ ನತದೃಷ್ಟರ ಸ್ಮರಣಾರ್ಥ ಆ ಹಣತೆಗಳನ್ನು ಬೆಳಗುವ ಅವಕಾಶವನ್ನು ಪ್ರತಿನಿಧಿಗಳಿಗೆ ಕಲ್ಪಿಸಲಾಗಿತ್ತು. ಅಮೆರಿಕದ ಹದಿಹರೆಯದ ಹುಡುಗಿಯೊಬ್ಬಳು ಬಹಳ ತಲ್ಲೀನತೆಯಿಂದ ದೀಪ ಬೆಳಗಿಸಲು ಪ್ರಯತ್ನಿಸುತ್ತಿದ್ದಳು. ಬಾಂಬು ದುರಂತಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳ ಪೋಸ್ಟರ್ಗಳನ್ನು ಅಲ್ಲಿಯೆ ಪ್ರದರ್ಶನಕ್ಕೆ ಇಡಲಾಗಿತ್ತು. ಆ ಭಯಂಕರ ಚಿತ್ರಗಳು ಅವಳನ್ನು ಘಾಸಿಗೊಳಿಸಿದ್ದವು. ಅವಳ ಕಣ್ಣಂಚಿನಿಂದ ನೀರು ಹನಿಯಾಗಿ ಹೊರಬರುತ್ತಿತ್ತು. ಗಾಳಿ ಬೀಸುತ್ತಿದ್ದುದರಿಂದ ದೀಪ ಬೆಳಗಿಸುವುದು ಸಾಧ್ಯವಾಗುತ್ತಿರಲಿಲ್ಲ. ನಾನು ಹೋಗಿ ಹಣತೆಗೆ ಗಾಳಿ ತಾಗದಂತೆ ಕೈ ಮುಂದೆ ಮಾಡಿದೆ. ದೀಪ ಹತ್ತಿತ್ತು. ಅವಳು ಕೃತಜ್ಞತಾ ಭಾವ ವ್ಯಕ್ತಪಡಿಸಿದಳು.
ಬಾಂಗ್ಲಾ ದೇಶದ ಶೇಖ್ ಹಸೀನಾ ಕೂಡ ಉದ್ಘಾಟನಾ ಸಭೆಯಲ್ಲಿ ಚೆನ್ನಾಗಿ ಮಾತನಾಡಿದರು. ಶಾಂತಿಯ ಮಹತ್ವದ ಹಿನ್ನೆಲೆಯಲ್ಲಿ ತಮ್ಮ ತಂದೆ ಮುಜಿಬುರ್ ರಹಮಾನ್ ಹುತಾತ್ಮರಾದ ಸಂದರ್ಭವನ್ನು ಕುರಿತು ಹೇಳಿದರು. ವಂದನಾ ಶಿವಾ ಅವರು ಜಾಗತಿಕ ಹಸಿವು ಮತ್ತು ಯುದ್ಧಗಳಿಂದಾಗಿ ಕೃಷಿಯ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಬಹಳ ಮಾರ್ಮಿಕವಾಗಿ ಮಾತನಾಡಿದರು. ಅವರ ಮಾತಿಗೆ ಮನಸೋತ ಸಭಿಕರು ಎದ್ದು ನಿಂತು ಕರತಾಡನದೊಂದಿಗೆ ಗೌರವ ಸೂಚಿಸಿದರು.
ಅಲ್ಲಿನ ರಾಜಕೀಯ ನಾಯಕರ ಜೊತೆ ಒಬ್ಬ ಅಂಗರಕ್ಷಕನೂ ಕಾಣಲಿಲ್ಲ. ಅವರೆಲ್ಲ ಮಧ್ಯಾಹ್ನದ ಊಟದ ನಂತರ ತಮ್ಮ ಪ್ಲೇಟುಗಳನ್ನು ನೀಟಾಗಿ ತೊಳೆದು ಇಡುವ ದೃಶ್ಯ ಮರೆಯಲಾರೆ. ಆಗ, ನಮ್ಮ ರಾಜಕೀಯ ನಾಯಕರ ಮತ್ತು ಅಧಿಕಾರಿಗಳ ಧಿಮಾಕು ಪದೆ ಪದೆ ಕಣ್ಮುಂದೆ ಬರುತ್ತಿತ್ತು. ಅಲ್ಲಿನ ಪ್ರಧಾನಿ ಸೈಕಲ್ ಮೇಲೆ ಪಾರ್ಲಿಮೆಂಟ್ಗೆ ಹೋಗುತ್ತಾರೆ. ಅಲ್ಲಿನ ರಾಣಿ ಸೈಕಲ್ ಮೇಲೆ ತರಕಾರಿ ಕೊಳ್ಳಲು ಬಜಾರ್ಗೆ ಬರುತ್ತಾರೆ ಎಂದು ನಮ್ಮೊಳಗಿನ ಒಬ್ಬರು ಹೇಳಿದ್ದು ಖುಷಿ ಕೊಟ್ಟಿತು.
ಆಮ್ಸ್ಟರ್ಡ್ಯಾಮ್ ನಗರದಲ್ಲಿನ ಅನ್ನೆ ಫ್ರ್ಯಾಂಕ್ ಹೈಡ್ ಹೌಸ್ ನನ್ನ ಮೇಲೆ ಆಳವಾದ ಪರಿಣಾಮ ಬೀರಿತು. ಯಹೂದಿ ಜನಾಂಗಕ್ಕೆ ಸೇರಿದ ಆಕೆ ಫ್ರ್ಯಾಂಕ್ಫರ್ಟ್ನಲ್ಲಿ ಜನಿಸಿದಳು. ತಂದೆ ಎಡಿಥ್ ಫ್ರ್ಯಾಂಕ್, ತಾಯಿ ಒಟ್ಟೊ ಫ್ರ್ಯಾಂಕ್. ಹಿಟ್ಲರ್ನ ನಾಜಿ ಸೈನಿಕರ ಹಿಂಸೆ ತಾಳದೆ ಆಮ್ಸ್ಟರ್ಡ್ಯಾಮ್ನ ಮನೆಯೊಳಗೆ ಜೀವ ಕೈಯಲ್ಲಿ ಹಿಡಿದು ಮಕ್ಕಳ ಜೊತೆ ಅಡಗಿಕೊಂಡು ಕುಳಿತರು. ಆಕೆ ತನ್ನ 13ನೇ ವಯಸ್ಸಿನಲ್ಲಿ ಆ ಅಡಗುಮನೆಯಲ್ಲಿ ಕುಳಿತು ಡೈರಿ ಬರೆಯಲು ಪ್ರಾರಂಭಿಸಿದಳು. ತಂದೆಯ ಪ್ರೋತ್ಸಾಹವೂ ಸಿಕ್ಕಿತು. ಅವಳು ಆ ಡೈರಿಯಲ್ಲಿ ಅನೇಕ ಕಾಲ್ಪನಿಕ ಗೆಳೆಯರನ್ನು ಸೃಷ್ಟಿಸಿ, ಅವರಿಗೆ ಪತ್ರ ಬರೆದಳು. ಹಿಟ್ಲರ್ನ ಕ್ರೌರ್ಯ ಅಳಿದ ಮೇಲೆ ಆ ಡೈರಿಯನ್ನು ಪ್ರಕಟಿಸುವ ಬಯಕೆಯನ್ನು ಆಕೆ ಹೊಂದಿದ್ದಳು. ಆದರೆ ಹಿಟ್ಲರ್ನ ಫ್ಯಾಸಿಸ್ಟ್ ಸೈನಿಕರು ಕೊನೆಗೂ ಅವಳ ಪರಿವಾರವನ್ನು ಪತ್ತೆ ಮಾಡಿದರು. ಅವರನ್ನು ಜರ್ಮನಿಯ ಬೆರ್ಗೆಮ್ನ ಬೆಲ್ಸೆನ್ ಯಾತನಾ ಶಿಬಿರಕ್ಕೆ ಕಳಿಸಿದರು. 1945ರಲ್ಲಿ ಆಕೆ ಅಲ್ಲೇ ಮರಣ ಹೊಂದಿದಳು. ಅವಳನ್ನು ಅಲ್ಲೇ ಮಣ್ಣು ಮಾಡಲಾಯಿತು! ಅವಳ ಡೈರಿ ಪ್ರಕಟವಾದ ಮೇಲೆ ಓದಿ ತಲ್ಲಣಗೊಳ್ಳದವರೇ ಇಲ್ಲ ಎಂಬುದು ಅದು ಜಗತ್ಪ್ರಸಿದ್ಧವಾದುದೇ ಸಾಕ್ಷಿ. ಮಧುರ ಕನಸುಗಳ ಹೂವಿನಂಥ ಮೃದು ಬಾಲೆಯೊಂದು ಹೀಗೆ ಮಣ್ಣಾಗಿ ಹೋಗಿದ್ದನ್ನು ಓದುವಾಗ ಎಂಥ ಕಲ್ಲುಹೃದಯವೂ ಕರಗುತ್ತದೆ. ಇಂದು ಕನ್ನಡವೂ ಸೇರಿದಂತೆ ಜಗತ್ತಿನ ನೂರಾರು ಭಾಷೆಗಳಲ್ಲಿ ಆ ಅವಳ ದಿನಚರಿ ಪ್ರಕಟವಾಗಿದೆ. ಪ್ರಕಟವಾಗುತ್ತಲೇ ಇದೆ.
“ಅನ್ನೆ ಫ್ರ್ಯಾಂಕ್ ಹೈಡ್ ಹೌಸ್”ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಮ್ಯೂಜಿಯಂ ರೀತಿ ಅಭಿವೃದ್ಧಿಪಡಿಸಲಾಗಿದೆ. ಒಂದೊಂದು ಮಹಡಿಯನ್ನು ಪ್ರವೇಶಿಸಿದಂತೆಲ್ಲ ಅಲ್ಲಿ ರೆಕಾರ್ಡ್ ಮಾಡಿದ ಧ್ವನಿಗಳನ್ನು ಕೇಳುವಾಗ, ಅನೇಕ ವಿಧದ ವಿಡಿಯೊ ಕ್ಲಿಪ್ಗಳನ್ನು ನೋಡುವಾಗ ಎರಡನೇ ಮಹಾಯುದ್ಧದ ರಣರಂಗದಲ್ಲೇ ಇದ್ದೇವೆ ಎಂಬ ವಾತಾವರಣ ಮನದಲ್ಲಿ ಸೃಷ್ಟಿಯಾಗುವುದು.
ಅನ್ನೆ ಫ್ರ್ಯಾಂಕ್ ತಂದೆ ಮತ್ತು ಗೆಳತಿ ಮುಂತಾದವರು ಆಕೆಯ ಘನತೆಯ ಬಗ್ಗೆ ಹೇಳಿದ್ದನ್ನು ಓದುವಾಗ, ಕೇಳುವಾಗ ಕರಗಿಹೋಗುತ್ತೇವೆ. ‘ಜಗತ್ತಿನ ಯಾರಿಗೂ ಇಂಥ ನೋವು ಮತ್ತು ವಿಷಾದದ ಗಳಿಗೆಗಳು ಬಾರದಿರಲಿ’ ಎಂದು ಮುಂತಾಗಿ ಆಕೆಯ ತಂದೆ ಹೇಳುವಾಗ ‘ಎಂಥ ಉದಾತ್ತ ವ್ಯಕ್ತಿತ್ವ’ ಎಂದು ಉದ್ಗಾರ ತೆಗೆಯದೆ ಇರಲಾರೆವು. ಹೈಡ್ ಹೌಸ್ನಿಂದ ಕೆಳಗೆ ಇಳಿದು ರಸ್ತೆಗೆ ಬರುವುದರೊಳಗೆ ನಮಗರಿಯದಂತೆಯೆ ಫ್ಯಾಸಿಸ್ಟ್ ವಿರೋಧಿ ನಿಲವು ತಾಳುತ್ತೇವೆ.
ನಮ್ಮ ಚಕ್ರಗೋಷ್ಠಿಯಲ್ಲಿ ಫ್ರಾನ್ಸ್ನ ಕೆಲವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಇಂಗ್ಲಿಷ್ ಮತ್ತು ಫ್ರೆಂಚ್ ಬರುವವರು ಅವರ ಬಳಿ ಕುಳಿತು, ಫ್ರೆಂಚ್ ಭಾಷೆಯಲ್ಲಿ ಮಾತನಾಡುವವರ ವಿಚಾರಗಳನ್ನು ಇಂಗ್ಲಿಷ್ಗೆ ತರ್ಜುಮೆ ಮಾಡುತ್ತಿದ್ದರು. ನನಗಾಗಿ ಇಂಗ್ಲಿಷ್ಗೆ ಅನುವಾದಿಸಲು ಒಬ್ಬ ದ್ವಿಭಾಷಾ ಯುವತಿ ಇದ್ದಳು.
ಫ್ರಾನ್ಸ್ನವರು ಮಾತನಾಡುವಾಗಲೆಲ್ಲ ಆಕೆ ನನ್ನ ಕಿವಿಯಲ್ಲಿ ಇಂಗ್ಲಿಷ್ ಅನುವಾದವನ್ನು ಉಸುರುತ್ತಿದ್ದಳು. ಅವಳ ಜೊತೆ ಮಾತನಾಡುವಾಗ, ಅವಳು ಶಾಖಾಹಾರಿ ಎಂಬುದು ಗೊತ್ತಾಯಿತು. ನನಗೆ ಆಶ್ಚರ್ಯವಾಯಿತು. ಆಗ ಆಕೆ ‘ಹಾಗೇನಿಲ್ಲʼ ಎಂದು ಹೇಳಿದಳು. ತಮ್ಮ ಒಂದು ಸಂಘಟನೆಯ ಬಗ್ಗೆ ತಿಳಿಸಿದಳು. ಅವರೆಲ್ಲ ಪ್ರತಿಭಟನಾ ರೂಪದಲ್ಲಿ ಶಾಖಾಹಾರಿಗಳಾದವರು. ಅಲ್ಲಿ ಹಸುಗಳನ್ನು ಮಾಂಸಕ್ಕಾಗಿ ಬೇಗ ಬೇಗ ಬೆಳೆಸುವ ಉದ್ದೇಶದಿಂದ, ಅವುಗಳಿಗೆ ಹಾರ್ಮೋನ್ ಇಂಜೆಕ್ಷನ್ ಕೊಡುವುದಕ್ಕೆ ಆ ಶಾಖಾಹಾರಿ ಸಂಘಟನೆಯವರ ವಿರೋಧವಿತ್ತು. ನೈಸರ್ಗಿಕವಾಗಿ ಹಸುಗಳನ್ನು ಬೆಳೆಸದೆ ಮತ್ತು ಜನರ ಆರೋಗ್ಯದ ಕಡೆಗೆ ಗಮನ ಹರಿಸದೆ ಹೀಗೆ ವ್ಯಾವಹಾರಿಕ ಕ್ರೌರ್ಯವನ್ನು ವಿರೋಧಿಸುವುದೇ ನಮ್ಮ ಸಂಘಟನೆಯ ಗುರಿಯಾಗಿದೆ ಎಂದು ಆಕೆ ತಿಳಿಸಿದರು. ಆಕೆಗೊಂದು ಸೆಲ್ಯೂಟ್ ಹೊಡೆದೆ. ಮಾನವೀಯತೆ ಸತ್ತಿಲ್ಲ, ಸಾಯುವುದಿಲ್ಲ. ಆದರೆ ಅದು ಅನೇಕ ಬಾರಿ ಗಾಯಗೊಳ್ಳುವುದು ಮತ್ತು ಚೇತರಿಸಿಕೊಳ್ಳುವುದು.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.