ಒಂದು ಕಾಲದಲ್ಲಿ ಮಠಾಧೀಶ ಸನ್ಯಾಸಿ, ಈಗ ದಾಸರ ಪದಗಳ ಹರಿಕಾರ. ಒಳಗೆ ಭಾವುಕ ಕವಿ,ಹೊರಗೆ ಸ್ಥಿತಪ್ರಜ್ಞ ಸಂಗೀತೋಪಾಸಕ. ನಮ್ಮೆಲ್ಲರ ಪ್ರೀತಿಯ ಹಾಡುಗಾರ ವಿದ್ಯಾಭೂಷಣ ತಮ್ಮ ನೆನಪಿನ ಸುರುಳಿಯನ್ನು ಕೆಂಡಸಂಪಿಗೆಯಲ್ಲಿ ಬಿಚ್ಚಿಡುವ ಮನಸ್ಸು ಮಾಡಿದ್ದಾರೆ.
(ಫೋಟೋ:ಅಬ್ದುಲ್ ರಶೀದ್)

(ಫೋಟೋ:ಅಬ್ದುಲ್ ರಶೀದ್)

ಶಿವ ಮುಕ್ಕಣ್ಣ! ದುರ್ಗಾದೇವಿಗೂ ಮೂರು ಕಣ್ಣು! ಆಕೆ ನಮ್ಮ ಮನೆದೈವ. ದೇವ ನರಸಿಂಹ ನನ್ನ ಮನದೈವ. ಆತನಿಗೂ ಮೂರು ಕಣ್ಣುಗಳು! ಮೂರನೇ ಕಣ್ಣು ಉರಿಗಣ್ಣು. ಸೂಕ್ಷ್ಮವೂ, ತೀಕ್ಷ್ಣವೂ, ಸತ್ಯನಿಷ್ಠುರವೂ ಆದ ಕಣ್ಣದು.  ಮತ್ತದು ಅಧ್ಯಾತ್ಮದ ಒಳಗಣ್ಣು. ಉಳಿದೆರಡು ಕಣ್ಣುಗಳನ್ನು ಮುಚ್ಚಿಕೊಂಡು, ತಿದ್ದಿತೀಡಿದರೆ ಸ್ಫುರಿಸುವ ಒಳನೋಟದ ದಿವ್ಯಕಣ್ಣು!

ಕೆಂಡಗಣ್ಣಿನ ಮುಕ್ಕಣ್ಣ ನರಸಿಂಹನಿಗೆ ಪ್ರಿಯವಾದ ಪುಷ್ಪ – ಚಂಪಕ ಪುಷ್ಪ – ಸಂಪಿಗೆ ಹೂ. ಅದೂ ಕೆಂಡ ಸಂಪಿಗೆ ಹೂ ಆತನಿಗೆ ಅತಿ ಪ್ರಿಯವಾದುದ್ದು.  ನನ್ನ ಹೆಂಡತಿಗೂ ಆ ಹೂವು ಪ್ರಿಯ.  ಅದು ಸೂಸುವ ತೀಕ್ಷ್ಣ ವಾಸನೆಗೆ ‘ತಲೆಸೂಲಿ’ ಬರುವುದು ನಿಶ್ಚಿತವೇ ಆದರೂ ಅದು ಆಕೆಗೆ ಬೇಕೇಬೇಕು!

ಕೆಂಡ ಸಂಪಿಗೆಯನ್ನು ವಿಷ್ಣು ಪ್ರತೀಕವಾದ ಶಾಲಿಗ್ರಾಮದ ಮೇಲಿರಿಸಬಾರದಂತೆ.  ಶಾಲಿಗ್ರಾಮ ಶಿಲೆ ವಜ್ರಕಠಿಣವಾದರು ಕೆಂಡಸಂಪಿಗೆಯ ಪರಿಮಳದ ಪ್ರಖರತೆಗೆ ಒಡೆದೇ ಹೋಗಬಹುದಂತೆ! ವಜ್ರನಖನಾದ ನರಸಿಂಹನ ವಜ್ರಕಠಿಣ ಪ್ರತೀಕ ಶಾಲಗ್ರಾಮವನ್ನೇ ಬೆದರಿಸಿಹ ಈ ಕೆಂಡಸಂಪಿಗೆಯನ್ನು ಏನನ್ನೋಣ!?

ಇದೀಗ ಕೆಂಡಸಂಪಿಗೆಯನ್ನು ಮೂಸುವ – ಮುಡಿಗೇರಿಸುವ ಸರದಿ ನನಗೆ.

ಪಂಪನಿಂದ ತೊಡಗಿ ಇಂದಿನ ತನಕದ ಎಲ್ಲ ಘಟಾನುಘಟಿ ಲೇಖಕರ ಕೃತಿಗಳಲ್ಲು ಬಾಲ್ಯದ ದಿನಗಳ, ಸುತ್ತಲ ಪರಿಸರದ ದಟ್ಟ ನೆನವರಿಕೆಗಳಿವೆ.  ಯಾರಿಗಾದರೂ ಎಂದೆಂದಿಗು ಕಾಡುವ, ಬೇಡುವ ಮಲೆನಾಡಿನ ಹಳ್ಳಿಗಳ, ಬಾಲ್ಯದ ನೆನಪುಗಳನ್ನು, ಪ್ರಭಾವವನ್ನು ತಳ್ಳಿಹಾಕಲಾದೀತೆ?

“ನೆನವುದೆನ್ನ ಮನಂ ಮಲೆನಾಡ – ಮಳೆನಾಡ ವೈಭವಂ”
[ಅಳುವುದೆನ್ನ ಮನಂ ನೆನೆದು ಗತ ವೈಭವಂ]

ಆಚಾರ್ಯಮಧ್ವರು ಅವತರಿಸಿದ ಪಾಜಕ ಕ್ಷೇತ್ರ ಉಡುಪಿಯ ಸಮೀಪವಿದೆ. ಅಲ್ಲೇ ಪಕ್ಕದ ಕುಂಜಾರು ಗಿರಿಯ ದುರ್ಗಾದೇವಿಯನ್ನು ಪರಂಪರೆಯಿಂದ ಪೂಜಿಸುತ್ತಾ ಬಂದವರು ನಮ್ಮ ಹಿರಿಯರು.  ಈಗಲೂ ನಮ್ಮ ಕುಲ ಬಾಂಧವರೇ ಅಲ್ಲಿನ ಪೂಜಾ ಕೈಂಕರ್ಯ ಮಾಡುತ್ತಿರುವರು.  ಹಾಗೆಂದೇ ಈಗಲೂ ಊರಿನ ಬಗ್ಗೆ ನನಗೆ ಏನೋ ಆಭಿಮಾನ, ಪ್ರೀತಿಯಿದೆ.ಗೋಮುಖ ವ್ಯಾಘ್ರ ನಾಟಕದ ಕರಪತ್ರ

ಸುಮಾರು ನೂರು-ನೂರಿಪ್ಪತ್ತೈದು ವರ್ಷಗಳ ಹಿಂದೆ ನನ್ನ ಅಜ್ಜ ಕುಕ್ಕೆಯ ಸುಬ್ರಮಣ್ಯದಲ್ಲಿ ನೆಲೆಸಿದರು.  ನನ್ನ ಅಜ್ಜನ ಇಬ್ಬರು ಸಹೋದರರು ಬಾಲ ಸನ್ಯಾಸಿಗಳಾಗಿ ಸುಬ್ರಹ್ಮಣ್ಯದ ಮಠದ ಸ್ವಾಮಿಗಳಾದವರು.  ಆಗ ಆ ಮಠದ ಸ್ವಾಮಿಗಳ ಸೇವೆಗಾಗಿ, ಸಂಸ್ಥೆಯನ್ನು ನಡೆಸುವ ಸಹಾಯಕ್ಕಾಗಿ, ನನ್ನ ಅಜ್ಜ ಅವರ ಮತ್ತೊಬ್ಬ ಹಿರಿಯ ಅಣ್ಣ ಅಲ್ಲಿಗೆ ಬಂದು ನೆಲೆಸಿದರು.  ದಟ್ಟ ಅರಣ್ಯದ ಪಶ್ಚಿಮ ಘಟ್ಟದ ಕೆಳಗಿನ ಭಾಗದಲ್ಲಿ ಕುಕ್ಕೆಯ ಸುಬ್ರಹ್ಮಣ್ಯವಿದೆ.  ಅಲ್ಲಿ ಸಹ್ಯಾದ್ರಿಯ ಮಕುಟಮಣಿಯಂತೆ “ಪುಷ್ಪಗಿರಿ” ಕುಮಾರ ಶಿಖರವಿದೆ.  ನಿತ್ಯ ಹರಿದ್ವರ್ಣದ ಸಹಜಾರಣ್ಯವಿದೆ.  ವರ್ಷವಿಡಿ ಸಮೃದ್ಧವಾಗಿ ಹರಿಯುವ ‘ಗಿರಿಹೊಳೆ’ ಕುಮಾರಧಾರೆ ನದಿಯಿದೆ. ಒಟ್ಟಿನಲ್ಲಿ ಸೌಂದರ್ಯ ಮಡುಗಟ್ಟಿದ ನೆಲೆಯದು. ಜೊತೆಗೆ ನಾನಿದ್ದಾಗ ಹೆಚ್ಚಿನ ನಾಗರಿಕತೆಯ ಸೋಂಕಿರದ, ವಿರಳ ಜನಪದವದು. ವರುಷದ ಆರು ತಿಂಗಳು ಷಷ್ಠಿಯ ದೊಡ್ಡ ಜಾತ್ರೆ ಆರಂಭವಾಗುವ ತನಕವೂ ಪರವೂರಿನಿಂದ ಜನಸಂಚಾರ ಅತಿ ವಿರಳವಾಗಿದ್ದಂತಹ ಊರದು.  ನಾನು ಜನಿಸಿದ್ದು ನನ್ನ ತಾಯಿಯ ತವರು ಚಿಕ್ಕಮಗಳೂರು ಜಿಲ್ಲೆಯ ಸೀತೂರಿನಲ್ಲಿ.  ಅದಂತು ದಕ್ಷಿಣದ ಚಿರಾಪುಂಜಿಯೆನಿಸಿದ್ದ ಆಗುಂಬೆ ಸಮೀಪದ, ಘಟ್ಟದ ಮೇಲಿನ ಒಂದು ಸಣ್ಣ ಹಳ್ಳಿ.  ಜುಲೈ ತಿಂಗಳ ಮೊದಲವಾರ ನಾನು ಹುಟ್ಟಿದಾಗ, ಆ ಕಾಲದಲ್ಲಿ, ಆ ನಾಡಲ್ಲಿ ಎಷ್ಟು ಮಳೆಯಿರಬೇಡ? ನಮ್ಮ ಕುಕ್ಕೆಗಂತು, ಆದಿನಗಳಲ್ಲಿ ಮಳೆಗಾಲ ಕಳೆದು ಕುಲ್ಕುಂದದ ಜಾನುವಾರು ಜಾತ್ರೆ ಸೇರುವ ದಿವಸಗಳ ತನಕವು ಉಪ್ಪಿನಂಗಡಿ, ಪುತ್ತೂರುಗಳಿಂದ ನಡದೇ ಬರಬೇಕು.  ರಸ್ತೆ ಸರಿಯಾಗಿರಲಿಲ್ಲ – ಸೇತುವೆಗಳು ಮೊದಲೇ ಇರಲಿಲ್ಲ.  ನದಿಗಳ ಸಮೃದ್ಧ ಹರಿವಿನಿಂದಾಗಿ ನಿಧನಿಧಾನವಾಗಿ ವಾರಗಳು – ದಿನಗಳು ಕಳೆದಂತೆ ಒಂದೊಂದೇ ವಾಹನಗಳು ಬಂದಾವು! ನನ್ನ ಅದೃಷ್ಟ! ಬಾಲ್ಯದ ಬಹುತೇಕ ಮಳೆಗಾಲಗಳನ್ನು, ಹಾಗೆಯೇ ಇನ್ನಿತರ ಋತುಗಳಿಗೊಪ್ಪುವ ಹಬ್ಬದ ಸಂಭ್ರಮಗಳನ್ನು ಈ ಎರಡು ಊರುಗಳಲ್ಲಿ ಕಳೆದಿರುವೆ.  ಆ ಸೋನೆ – ಆ ಹಸಿರು, ಆ ಮುಗ್ಧಭಾವ! ನಡೆ-ನುಡಿ! ಆಹಾ! ಎಲ್ಲಿ ಹೋದವೋ ಆ ನಮ್ಮ ಅಂಥ ದಿನಗಳು?!

ಕೆಟ್ಟು ಪಟ್ಟಣ ಸೇರಿದ – ಅಲ್ಲಲ್ಲ ಪಟ್ಟಣ ಸೇರಿ ಕೆಟ್ಟ ನಮ್ಮಂಥವರಿಗೆ, ಮಳೆ ನೀರಿನಿಂದ ತೊಯ್ದು ಕಳೆಕಳೆಯಾದ ಪರಿಶುಭ್ರ ಪ್ರಕೃತಿ, ಅಂತೆಯೇ ಕಪಟವರಿಯದ ಶುದ್ಧ ಬದುಕೂ, ಇದೀಗ ಎಲ್ಲೂ ಇಲ್ಲವೇ ಇಲ್ಲವೇನೋ ಅನ್ನಿಸಿ ಬಿಡುತ್ತದೆ. ನನ್ನ ಸಂಗೀತ ಕಾರ್ಯಕ್ರಮಗಳ ನೆಪದಿಂದ ನಾಡಿನ ಬೇರೆ ಬೇರೆ ಹಳ್ಳಿಮನೆಗಳಲ್ಲಿ ಒಂದೋ – ಎರಡೋ ದಿವಸಗಳನ್ನು ಕಳೆಯುವ ಸಂದರ್ಭ, ಹಿಂದಿನದೆಲ್ಲವು ನೆನಪಾಗತೊಡಗುತ್ತವೆ.  ಕಳೆದ ಬದುಕಿನ ಬಹುಭಾಗವನ್ನು, ಅದರಲ್ಲು ಬಾಲ್ಯವನ್ನು ಇಂತಹ ಪ್ರಕೃತಿಯ ಮಡಿಲಲ್ಲಿ ಕಳೆಯುವಂತಾದ – ನೆನಪೇ ಪರಮಸುಖ!

ಗೋವಿಂದಾಚಾರ್ಯರುಮಂದಾಕಿನಿಯಮ್ಮ – ಗೋವಿಂದಾಚಾರ್ಯರು ನನ್ನ ಮಾತಾ ಪಿತರು. ನಾನೇ ಹಿರಿಯ ಮಗ. ನನಗೆ ಇಬ್ಬರು ತಮ್ಮಂದಿರು. ನಾಲ್ಕು ಜನ ತಂಗಿಯರು. ಅದು ಆಕಾಲದ ಕುಟುಂಬ ಯೋಜನೆ! ಅಪ್ಪ-ಅಮ್ಮ ತುಳಿದ ಶಾಲೆಯ ಮೆಟ್ಟಿಲುಗಳು ಎರಡೋ – ಮೂರೋ ಅಷ್ಟೇ. ನಮ್ಮ ಅಪ್ಪಯ್ಯ ಉಡುಪಿ – ಮೈಸೂರುಗಳಲ್ಲಿ ಚರಿಸಿ, ಬಂಧುಗಳ ಮನೆಯಲ್ಲಿದ್ದುಕೊಂಡು. ಗುರುಕುಲದಲ್ಲಿ ಶಿಷ್ಯವೃತ್ತಿಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು.  ನಾಟಕಗಳ ಗೀಳು ಹತ್ತಿಸಿಕೊಂಡವರು.  ಹಾರ್ಮೋನಿಯಂ ಪೇಟಿ ಚೆನ್ನಾಗಿ ನುಡಿಸಬಲ್ಲರು.  ಸಿನಿಮಾ ಸೇರಿ ಅಭಿನಯಿಸಬೇಕೆಂದು ಆಸೆ ಹೊತ್ತಿದ್ದರು.  ಸಿನೇಮಾ ಸೇರಿ ಕೆಟ್ಟು ಹೋದಾನು ಎಂಬ ಭಯಕ್ಕೆ ಹೆತ್ತವರು, ಹಿರಿಯರು ಒಪ್ಪದ್ದಕ್ಕೆ, ಮತ್ತೆ ಊರಿಗೆ, ಕುಕ್ಕೆಗೇ ಹಿಂತಿರುಗಿ ಅಲ್ಲಿನ ಶ್ರೀಮಠದಲ್ಲಿ, ಹಿರಿಯರು ನಡೆಸಿಕೊಂಡು ಬಂದಿದ್ದ ವೃತ್ತಿಯಲ್ಲಿ ತಾವೂ ನಿರತರಾದರು.  ಈ ಮಧ್ಯೆ ಕೆಲವು ವರ್ಷಗಳನ್ನು, ಮಲೆನಾಡಿನ ತೀರ್ಥಹಳ್ಳಿಯ ಸಮೀಪದ ಬಾಳಗಾರು ಮಠದ ಸ್ವಾಮಿಗಳವರ ಜೊತೆ ಕಳೆದಿದ್ದರು.  ಪೂಜಾ ಕಾಲದಲ್ಲಿ ಹರಿಭಜನೆಯ ಭಾಗವತಿಕೆಯ ವೃತ್ತಿ ಮಾಡುತ್ತಾ ಸ್ವಾಮಿಗಳಿಗೆ ಪ್ರಿಯ ವ್ಯಕ್ತಿಯಾಗಿ ಅವರಿದ್ದರು.  ಆ ಕಾಲದಲ್ಲೇ ಅವರಿಗೆ ಸೀತೂರಿನ ಸಂಬಂಧವಾಗಿತ್ತು.

ನಮ್ಮ ತಂದೆಯವರ ಸೋದರ ಮಾವ ಉಡುಪಿಯ ಬೆಳ್ಳೆ ಅನಂತರಾಮ ಭಾಗವತರು ಬಹು ದೊಡ್ಡ ಸಂಗೀತ ವಿದ್ವಾಂಸರಾಗಿದ್ದರು.  ನಮ್ಮಪ್ಪ ಅವರಲ್ಲು ಸ್ವಲ್ಪ ಕಾಲ ಸಂಗೀತಾಭ್ಯಾಸ ನಡೆಸಿದ್ದರಂತೆ.  ಬೆಳ್ಳೆಯವರು ಆಗಿನ ಖ್ಯಾತ ಚೆಂಬೈ ವೈದ್ಯನಾಥ ಭಾಗವತರ ಸಮಕಾಲೀನರೂ, ಗೆಳೆಯರೂ ಆಗಿದ್ದವರು.

“ಅನ್ನದೊಳಗೆ ವಾಸುದೇವನು, ನಾನು ಸುಭಕ್ಷ್ಯದಿ ಸಂಕರುಷಣ, ಕೃತೀಶ ಪರಮಾನ್ನದೊಳು” – ಕಾಂಬೋಧಿಯಲ್ಲಿ ಗಮಕಯುಕ್ತ ಸುಂದರ ಶಾರೀರದೊಂದಿಗೆ, ನಮ್ಮ ತಂದೆಯವರು ಸ್ವಾಮಿಗಳ ಪಕ್ಕದಲ್ಲಿ ನಿಂತು ಚೂರ್ಣಿಕೆ ಹಾಡುತ್ತಿದ್ದರೆ. ಮಠದ ಚೌಕಿಯಲ್ಲಿ ಶ್ರೀ ಶ್ರೀ ಗಳವರೊಂದಿಗೆ ಸಹ ಭೋಜನ ಪ್ರಸಾದ ಸ್ವೀಕರಿಸುತ್ತಿರುವ ಭಕ್ತ ಜನರೆಲ್ಲ ಮಂತ್ರಮುಗ್ಧರು! ಅದು ಇನ್ನೊಮ್ಮೆ ಹಿಂದೋಳರಾಗದಲ್ಲಿ “ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ” ಅಥವಾ ಕಲ್ಯಾಣಿಯಲ್ಲಿ “ಜಾರತ್ವವನ್ನು ಮಾಡಿದ ಪಾಪಗಳಿಗೆಲ್ಲ” ಎಂಬ ಉಗಾಭೋಗಗಳಾಗಬಹುದು.  ಹಾಡು ಮುಗಿದಾಗ ‘ಪೂರ್ಣಾನಂದ ವಾಸುದೇವ ಗೋವಿಂದ – ಗೋವಿಂದ – ಗೋವಿಂದ’ ಎಂಬ ಹರ್ಷ ಚಿತ್ತದ ಧನ್ಯತೆಯ ಉದ್ಗಾರದೊಂದಿಗೆ ಭೋಜನ ಸಂಪನ್ನವಾಗುತ್ತಿತ್ತು.  ಶ್ರೀಮಠದಲ್ಲಿನ ಎಲ್ಲ ವಿಶೇಷ ಸಂದರ್ಭದಲ್ಲು, ವಿಶೇಷವಾಗಿ ಉಡುಪಿಯ ಪೀಠಾಧೀಶರು ಕುಕ್ಕೆಗೆ ಬಂದು ವಿಶೇಷ ಸಮಾರಾಧನೆ, ಪೂಜೆ ನಡೆದಾಗಲು ಈ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು! ಪ್ರತಿ ಸಂಜೆ ದೇವರ ಸನ್ನಿಧಿಯಲ್ಲಿ ಹರಿದಾಸರ ಹಾಡುಗಳನ್ನು ತಾರತಮ್ಯೋಕ್ತಕ್ರಮದಿಂದ, ಹಾರ್ಮೋನಿಯಂ ನುಡಿಸುತ್ತಾ ಮಕ್ಕಳೊಂದಿಗೆ, ಶಿಷ್ಯರೊಂದಿಗೆ ಭಜನೆ ಮಾಡುತ್ತಾ ಸೇವೆ ಸಲ್ಲಿಸುತ್ತಿದ್ದರು.  ನರಸಿಂಹ ಜಯಂತಿಯ ಉತ್ಸವ ಸಂದರ್ಭ ಭಾರದ ಹಾರ್ಮೋನಿಯಂನ್ನು ಕುತ್ತಿಗೆಗೆ ಕಟ್ಟಿಕೊಂಡು, ವಿಶಾಲವಾದ ಅಂಗಣದ ಸುತ್ತ ಶಿಷ್ಯರೊಂದಿಗೆ ಹಾಡುತ್ತಾ, ಭಗವಂತನನ್ನು ಕೊಂಡಾಡುತ್ತಾ ಸೇವೆ ಸಲ್ಲಿಸುತ್ತಿದ್ದುದು, ಕಣ್ಣಿಗೆ ಕಟ್ಟಿದಂತೆ ಇದೆ.  ಅದು ಅವರ ಬಾಳಿನ ಧನ್ಯತೆಯಾಗಿತ್ತು! ನಮ್ಮಪ್ಪ ಉಳಿದ ಶಿಷ್ಯರಿಗೆ ಹೇಗೋ ಹಾಗೆ ಎದುರು ಕುಳ್ಳಿರಿಸಿ ನನಗೆ ಪಾಠ ಹೇಳಿದ್ದು ಬಹಳ ಬಹಳ ಕಡಿಮೆ.  ಆದರೆ ಅವರ ಅ ದಿನಗಳ ಸಂಗೀತ ಚಟುವಟಿಕೆಗೆ ಸಾಕ್ಷಿಯಾಗಿದ್ದವನು ನಾನು.  ಹರಿದಾಸರ ಹಾಡುಗಳ ಹಾಡಿಕೆ, ಉಗಾಭೋಗಗಳ ವಿನಿಕೆ, ಆ ನಾದದ ಗುಂಗು ನನಗರಿವಿಲ್ಲದೆಯೆ ನನ್ನೊಳಗೆ ಸಂಸ್ಕಾರವಾಗಿ ಮಡುಗಟ್ಟುತ್ತಿತ್ತು. ನನ್ನ ಮೊದಲ ಸಂಗೀತ ಗುರು ನಮ್ಮ ತಂದೆಯೇ! ‘ಗುರು’ ಎಂಬ ಪದಕ್ಕೆ ತಂದೆಯೆಂದೂ ಅರ್ಥವಿದೆ.  ಮತ್ತೆ “ಮಕ್ಕಳ ಸ್ಕೂಲ್ ಮನೇಲಲ್ವೇ”?

ತಂದೆಯವರು ಅತಿ ವಿರಳ ಜನಸಂಖ್ಯೆಯ ಆ ಊರಲ್ಲೆ, ಊರವರ ಸಹಕಾರದಿಂದ, ಉತ್ಸಾಹದಿಂದ, ಮಠದ ಸ್ವಾಮಿಗಳ ಆಶೀರ್ವಾದದಿಂದ “ಶ್ರೀವಾಗೀಶ್ವರೀ ಸಂಗೀತ ನಾಟಕ ಸಭಾ” ಎಂಬ ಹವ್ಯಾಸಿ ನಾಟಕ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು.  ಬಿಡುವಿನ ವೇಳೆಯಲ್ಲಿ ತರಬೇತಿ ಪಡೆದು ವರ್ಷಕ್ಕೆ ನಾಲ್ಕೋ – ಐದೋ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳನ್ನು ಆಡುತ್ತಿದ್ದರು.  ತಂದೆಯವರು ಸ್ವತ: ಹಾರ್ಮೋನಿಯಂ ನುಡಿಸುತ್ತಾ, ಪಾತ್ರಗಳಿಂದ ಹಾಡುಗಳನ್ನು ಹಾಡಿಸುತ್ತಾ, ನಾಟಕ ನಿರ್ದೇಶಿಸುತ್ತಾ ಹಗಲು-ರಾತ್ರಿ ನಾಟಕಗಳ ಅಭ್ಯಾಸ ನಡೆಸುತ್ತಾ ಊರಲ್ಲಿ ವಿಶಿಷ್ಟ ಸಾಂಸ್ಕೃತಿಕ ವಾತಾವರಣವೊಂದನ್ನು ಸೃಷ್ಟಿಸಿದರು.  ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದವರು, ಅಲ್ಲಿನ ದೇವಾಲಯದ, ಮಠದ, ಪ್ರಾಥಮಿಕ ಶಾಲೆಯ, ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತೆ ಅಲ್ಲಿದ್ದ ಮೂರೋ ನಾಲ್ಕು ಅಂಗಡಿಗಳ ನಿರ್ವಾಹಕರು.

ಸದಾ ನಾಟಕದ ಸಂಗೀತದ ಗುಂಗಿನಲ್ಲಿರುತ್ತಿದ್ದ ನಮ್ಮ ತಂದೆಯವರಿಗೆ ನೀಳವಾದ ಕೇಶರಾಶಿಯಿತ್ತು.  ಅದನ್ನವರು ಭಾಗವತರಂತೆ, ಶಿಖೆಯಾಗಿ ಜೋಡಿಸಿ ಬಿಗಿದು ಕಟ್ಟಿಕೊಳ್ಳುತ್ತಿದ್ದರು.  ನಾಟಕದ ಅವರ ಗೆಳೆಯರೂ ಕೆಲವರು ಅವರನ್ನನುಸರಿಸಿದ್ದರು!

ಊರಿಗಿದ್ದ ಒಂದೇ ಒಂದು ಮುಖ್ಯರಸ್ತೆ ಒಂದು ಮೈಲು ಉದ್ದದ, ದೇವಾಲಯದಿಂದ – ಕುಮಾರಧಾರೆ ನದಿವರೆಗಿನದು.  ಅದರ ಉದ್ದಗಲ, ನಾಟಕ ಪ್ರದರ್ಶನದ ಸಂಜೆ, ಮಠದ ಗಾಡಿ ಸುಬ್ಬನ ಎತ್ತಿನ ಗಾಡಿಯಲ್ಲಿ, ತುತ್ತೂರಿಯಂತಹ ತಗಡಿನ ಧ್ವನಿವರ್ಧಕದಲ್ಲಿ “ಬನ್ನಿರಿ – ಬನ್ನಿರಿ – ನೋಡಿ – ಆನಂದ ಪಡೆಯಿರಿ – ಒಂದೇ ಒಂದು ಆಟ” ಎಂಬ ಘೋಷಣೆ ಕೂಗಿ ಪ್ರಚಾರ, ಸಣ್ಣ ಸಣ್ಣ ಬಣ್ಣ ಬಣ್ಣದ ಕರಪತ್ರ ಹಂಚಿಕೆ, ನಾವು ಹುಡುಗರು ಗಾಡಿಯನ್ನು ಹಿಂಬಾಲಿಸುತ್ತಿದ್ದುದು, ಮತ್ತೆ ಪೆಟ್ರೋಮ್ಯಾಕ್ಸ್ ಗ್ಯಾಸ್ ಲೈಟಿನ ಬೆಳಕಲ್ಲಿ ನಾಟಕ ಪ್ರದರ್ಶನ, ಊರ ಜನರ ಸಂಭ್ರಮ ಇವೆಲ್ಲ ಆಗಿನ ನನ್ನ ಪುಟ್ಟ ಮನಸ್ಸಿನ ಮೇಲೆ ಬೀರಿದ ಪರಿಣಾಮ ಇನ್ನೂ ಹಸಿರು.  ನೆಲ್ಯಾಡಿ ರಾಮಚಂದ್ರಣ್ಣನ ಖಳನಾಯಕ ಕಂಸಪಾತ್ರ, ಶೀನಣ್ಣನ ನಾಜೂಕಯ್ಯ, ಚಿನ್ನಪ್ಪ ಮಾಸ್ತರ ಸಖರಾಮ, ನನ್ನ ಚಿಕ್ಕಪ್ಪ ಪರಶುರಾಮಚಾರ್ಯರ ಅಕ್ರೂರನ ಪಾತ್ರಗಳು ನನಗೆ ಚಿರಸ್ಮರಣೀಯವಾಗಿವೆ.  ಬರಿಯ ಕೇಳ್ಮೆಯಿಂದ ಸಂಗೀತ ಕಲಿತ್ತಿದ್ದ ನಮ್ಮ ಚಿಕ್ಕಪ್ಪ ತುಂಬ ಚೆನ್ನಾಗಿ ದೇವರ ನಾಮಗಳನ್ನು ಹಾಡುತ್ತಿದ್ದರು.  ಗುಹನಾಗಿ ಅಭಿನಯಿಸಿದ್ದ ನೆಲ್ಯಾಡಿ ರಾಮಚಂದ್ರಣ್ಣನ ಹಾಡುಗಳು ಬಹಳ ಸುಂದರವಾಗಿರುತ್ತಿದ್ದವು.

ನಾಟಕ ಸಭೆಯ ಚಟುವಟಿಕೆಗೆ ಪೂರಕವಾಗಿ ಆಸಕ್ತರಿಗೆ – ಹೆಚ್ಚು ಮಂದಿ ಹೆಣ್ಣುಮಕ್ಕಳೆ – ಕರೆದು ಸಂಗೀತ ಶಿಕ್ಷಣವನ್ನು, ಶುಲ್ಕರಹಿತವಾಗಿ ತಂದೆಯವರು ನೀಡುತ್ತಿದ್ದರು.  ಸಂಗೀತ ತರಗತಿಗಳು ಕೆಲವೊಮ್ಮೆ ನಮ್ಮ ಮನೆಯಲ್ಲಿ, ಕೆಲವೊಮ್ಮೆ ಮಠದ ಛತ್ರದಲ್ಲಿ ಅನುಕೂಲಕ್ಕನುಗುಣವಾಗಿ ನಡೆಯುತ್ತಿತ್ತು.  ವಾರ್ಷಿಕವಾಗಿ ತ್ಯಾಗರಾಜರ, ಪುರಂದರದಾಸರ ಆರಾಧನೋತ್ಸವವನ್ನು, ಶಾರದೋತ್ಸವವನ್ನು ಸಂಭ್ರಮದಿಂದ ನಡೆಸಲಾಗುತ್ತಿತ್ತು.  ತಂದೆಯವರ ಶಿಷ್ಯರ, ವಿಶೇಷ ಅತಿಥಿ ಕಲಾವಿದರ ಸಂಗೀತ ಕಾರ್ಯಕ್ರಮಗಳಿರುತ್ತಿದ್ದವು.  ಪರವೂರಿನಿಂದ ಗಣ್ಯ ಅತಿಥಿಗಳನ್ನು, ಉಪನ್ಯಾಸಕ್ಕೆಂದು ಆಹ್ವಾನಿಸಲಾಗುತ್ತಿತ್ತ್ತು.  ಡಾ. ಶಿವರಾಮ ಕಾರಂತರಂಥ ಹಿರಿಯರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಂಥ ನೆನಪು ನನಗೆ.

ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೋಷಕವಾಗಿ ಸುಮಾರು ನೂರೈವತ್ತು – ಇನ್ನೂರು ಜನರು ಕುಳಿತುಕೊಳ್ಳಬಹುದಾದ ಎತ್ತರವಾದ ವೇದಿಕೆ – ಬಣ್ಣ ಹಚ್ಚುವ ಕೊಠಡಿಯೂ ಸೇರಿದಂತೆ ಪುಟ್ಟ ಸಭಾಭವನವನ್ನು ಮಠದ ಸ್ವಾಮಿಗಳವರು ಮಠಕ್ಕೆ ಅನತಿ ದೂರದಲ್ಲೆ ಕಟ್ಟಿಸಿಕೊಟ್ಟರು, ಅದಕ್ಕು ಮೊದಲು ನಾಟಕಗಳನ್ನು ದೇವಸ್ಥಾನದ ಉತ್ತರಾದಿಮಠದ ಛತ್ರದಲ್ಲಿ ನಡೆಸುತ್ತಿದ್ದರಂತೆ.  ಕಾರ್ಯಕ್ರಮಗಳಿಗೆ ಸ್ವಾಮಿಗಳೂ ಬಂದು ಪ್ರೋತ್ಸಾಹಿಸುತ್ತಿದ್ದರು! ಕೆಂಪುಕಲ್ಲಿನಿಂದ, ಮಂಗಳೂರು ಹೆಂಚಿನಿಂದ ನಿರ್ಮಿಸಿದ ಹಳ್ಳಿಗಾಡಿನ ಮಿತಿಯಲ್ಲಿ ಕಟ್ಟಿದ ಸರಳ ಸ್ವರೂಪದ ಕಟ್ಟಡವದು. ಧರ್ಮಸ್ಥಳದ ಮಂಜಯ್ಯ ಹೆಗ್ಡೆಯವರು, ಕ್ಷೇತ್ರದಲ್ಲಿದ್ದ ಹಳೆಯ ಪರದೆಗಳನ್ನು, ಇನ್ನಿತರ ನಾಟಕೋಪಯೋಗಿ ಪರಿಕರಗಳನ್ನು ನೀಡಿ ಪ್ರೋತ್ಸಾಹಿಸಿದ್ದರು.  ಎಷ್ಟು ವರ್ಷ ಹೀಗೇ ನಡೆಯಿತೋ ನೆನಪಿಲ್ಲ.  ಎಲ್ಲ ಕಡೆಯಂತೆ ಇಲ್ಲೂ ಮತ್ಸರ, ಕಾಲೆಳೆದಾಟ, ಆರ್ಥಿಕ ಅನಾನುಕೂಲತೆ ಮತ್ತೇನೋ ನಡೆದು, ನೊಂದುಕೊಂಡ ನಮ್ಮ ತಂದೆಯವರು ಈ ಎಲ್ಲಾ ಚಟುವಟಿಕೆಗಳಿಂದ ಹಿಂದೆ ಸರಿದರು.  ನಾಟಕ ಪ್ರದರ್ಶನ, ಸಂಗೀತ ಶಿಕ್ಷಣ ವಿರಳವಾಗುತ್ತಾ ಹೋಯಿತು. ಕೊನೆಗೊಮ್ಮೆ ಸಭಾಭವನವನ್ನೂ ಕಳಚಿ ಕಟ್ಟಡದ ವಸ್ತುಗಳನ್ನು – ಕಲ್ಲು, ಹೆಂಚು, ಮರಗಳನ್ನು – ಮಠಕ್ಕೆ ಹಿಂದಕ್ಕೆ ಸಾಗಿಸಲಾಯಿತು. ನಾಟಕದ ನಾರದನ ತಂಬೂರಿ, ರಾಜನ ಸಿಂಹಾಸನ, ಬೀಸಣಿಕೆಗಳು ಮಠದ ಆಟ್ಟ ಸೇರಿದವು, – ನಮ್ಮ ತಂದೆಯವರಿಗೆ ಸ್ವಂತ ಮನೆಯಲ್ಲಿರಲಿಲ್ಲ – ಹಾಗಾಗಿ! ಜೊತೆಗೆ ತಂದೆಯವರು ಅಷ್ಟರತನಕ ಜೋಪಾನವಾಗಿ, ಸಂಭ್ರಮದಿಂದ ಬಾಚಿ ಕಟ್ಟಿಕೊಳ್ಳುತ್ತಿದ್ದ ನೀಳಕೇಶರಾಶಿಯನ್ನು ಕತ್ತರಿಸಿ, ವೈದಿಕರ ಶಿಖೆಯನ್ನು ಬಿಟ್ಟು, ಮಠದ ಸ್ವಾಮಿಗಳವರ, ದೇವರ, ಸೇವೆಯಲ್ಲಿ ಸಂಪೂರ್ಣ ಮುಡುಪಾದರು.

ನೆನಪೇ ಸಂಗೀತ೨:ಬಾಲ್ಯಕಾಲದ ಕಿಂದರಿಜೋಗಿಗಳು

ತ್ಯಾಗರಾಜರು ಮಗುವಾಗಿದ್ದಾಗ, ಅವರ ತಾಯಿ ಮಗುವನ್ನು ತೊಡೆಯಲ್ಲಿಟ್ಟು ಪುರಂದರದಾಸರ, ಶಂಕರಾಭರಣರಾಗದ ‘ಪೋಗದಿರೆಲೋ ರಂಗ- ಬಾಗಿಲಿಂದಾಚೆಗೆ’ ಹಾಡನ್ನು ಹಾಡುತ್ತಾ, ಆಡಿಸುತ್ತಿದ್ದರಂತೆ, ತಟ್ಟಿ ಮಲಗಿಸುತ್ತಿದ್ದರಂತೆ! “ಪಾಲ ಸಾಗರದಲ್ಲಿ ಪವಡಿಸಿದವನೇ- ಒಂದಾಲದೆಲೆ ಮ್ಯಾಲೆ ಮಲಗಿದ ಮಗುವೇ” ಎಂದು ಮಧುರವಾಗಿ ಜೋಗುಳ ಹಾಡುತ್ತಾ, ತೂಗುತ್ತಾ, ಕನವರಿಕೆಗೆ ನಗುಸೂಸುವ ಮುಖನೋಡಿ ಆನಂದಿಸುತ್ತಾ, ಮಗುವನ್ನು ಮಲಗಿಸಿದ ತಂದೆ ತಾಯಿಯರೇ ಧನ್ಯರು!

ಹುಟ್ಟಿದ ಮಗುವಿಗೆ ಆರುವರ್ಷ ತುಂಬುತ್ತಲೇ ಮಗುವಿನ ಮುಂದಿನ ಭವಿತವ್ಯವೆಲ್ಲ ನಿಶ್ಚಿತವಾಗಿ ಬಿಡುತ್ತದಂತೆ! ಆ ಹೊತ್ತಿಗೆ ಪರಿಶುದ್ಧ ಮನದ ಮಗುವಿಗೆ ಪರಿಸರದಿಂದ ಏನು ದೊರಕಿತೋ, ಕಡೆತನಕ ಅದೇ ಒದಗಿ ಬರುವಂತಹದು! ಹೆಮ್ಮರವಾಗಲು ಬೀಜಕ್ಕೆ ಯೋಗ್ಯ ಭೂಮಿ, ಗಾಳಿ, ನೀರು, ಬೆಳಕು, ಗೊಬ್ಬರ ತಾನೇ ಬೇಕಾದುದು. ಸೂಕ್ತ ಮಾರ್ಗದರ್ಶನ, ಶಿಕ್ಷಣ, ಸಾಧನೆಗಳಿಂದ ಭವ್ಯವಾದೊಂದು ನಿರ್ಮಿತಿ!

“ನಾದತನುಮನಿಶಂ ಶಂಕರಂ” -ಹಿಂದೆ ಚೆಂಡೆ-ಮದ್ದಳೆ, ಮೃದಂಗ ವಾದ್ಯಗಳನ್ನು ತಯಾರಿಸಲು ಊರದೇವಾಲಯದ ಸಮೀಪ ಬೆಳೆದ ಹಲಸಿನಮರದ ದಿಮ್ಮಿಯನ್ನೇ ಬಳಸುತ್ತಿದ್ದರಂತೆ! ಅಂತಹ ಮಂದಿರ ಸಮೀಪದ ಮರದಿಂದ ತಯಾರಿಸಿದ ವಾದ್ಯದಿಂದ ಶುದ್ಧವೂ ಮಧುರವೂ ಆದ ನಾದ ಹೊರಹೊಮ್ಮುತ್ತಿತ್ತಂತೆ! ಪ್ರತಿದಿನ ರಾತ್ರಿ-ಹಗಲು ಮೂರು ಹೊತ್ತು ಮಂದಿರದಲ್ಲಿ ಮೊಳಗುತ್ತಿದ್ದ ಘಂಟೆ-ಜಾಗಟೆ-ಶಂಖ-ವಾದ್ಯ-ಕಹಳೆಗಳ, ಪವಿತ್ರ ವೇದ ಮಂತ್ರಗಳ, ಮಂಗಳ ಧ್ವನಿ, ಓಂಕಾರ ಪ್ರಣವನಾದ ಪರಿಸರದಲ್ಲಿ ವಿಶೇಷ ಸ್ಪಂದನ ಉಂಟು ಮಾಡುತ್ತದೆಂಬ ಅನುಭವಸಿದ್ಧವಾದ ನಂಬಿಕೆ ಹಿಂದಿನವರದು! ಶೃತಿಶುದ್ಧವೂ ಲಯಬದ್ಧವೂ ಆದ ನಾದಕ್ಕೆ ಹಸುಗಳು, ಗಿಡಮರಗಳು ಸಮೃದ್ಧವಾಗಿ ಪ್ರತಿಕ್ರಿಯಿಸುವುದನ್ನು ಬಲ್ಲವರೆ ಎಲ್ಲರೂ!

ನಾನು ತೀರ ಸಣ್ಣವನಿದ್ದಾಗ ನಮ್ಮೂರಿನ ದೇವಸ್ಥಾನದಲ್ಲಿ ಪರಂಪರೆಯ ಕಟ್ಟುವಾದ್ಯದ ಬಳಕೆ. ಅದೊಂದು ಕೈಯ್ಯಳತೆಯ ಪುಟ್ಟನಾಗಸ್ವರವನ್ನು ಹೋಲುವ ಸುಷಿರವಾದ್ಯ. ಅದಕ್ಕೆ ಸಮ್ಮೇಳ, ತಾಸಿನ, ಲಯ ವಾದ್ಯಗಳ ಪೋಷಣೆ. ಶೃತಿಗಾಗಿ ಸತತವಾಗಿ ಊದುತ್ತಿರಬೇಕಾದ ಏಕನಾದವಾದ್ಯ. ಏಕನಾದ ವಾದಕನ ಬಾಯಿ ಬುಗ್ಗೆಯಂತೆ ಸತತವಾಗಿ ಊದಿಕೊಂಡಿರುವುದನ್ನು ನೋಡುವುದೇ ಒಂದು ಚೋದ್ಯ! ಕೆಲವೊಮ್ಮೆ ಅಯ್ಯೋ ಪಾಪವೇ ಅನಿಸುತ್ತಿತ್ತು! ಆಶ್ಚರ್ಯವೂ ಆಗುತ್ತಿತ್ತು! ಸೀಮಿತ ಹಾಡುಗಳ, ರಾಗಮಟ್ಟುಗಳ ಪರಿಚಯ, ಪ್ರಯೋಗವಿದ್ದ ವಾದ್ಯಗಾರರವರು. ನಮ್ಮ ಕಡೆಯಲ್ಲಿ ಈಗಲೂ ದೈವ ಭೂತಗಳನ್ನು ಕುಣಿಸುವುದಕ್ಕೆ ಇದೇ ವಾದ್ಯ ಹೆಚ್ಚು ಒಪ್ಪುತ್ತದೆ. ವಾದ್ಯದ ನಾದತೀಕ್ಷತೆ ಆ ಜಾನಪದ ದೈವಾರಾಧನೆಗೆ ಅನುಗುಣವಾಗಿದೆ. ಕ್ರಮೇಣ ಈ ವಾದ್ಯಗಾರರ ಸ್ಥಾನಕ್ಕೆ ನಾದಸ್ವರವಾದಕರ, ಡೋಲಿನವರ ನೇಮಕವಾಯಿತು. ಈ ವಾದ್ಯಗಾರರು ಕ್ರಮದಿಂದ ಶಾಸ್ತ್ರೀಯ ಸಂಗೀತವನ್ನು, ಕೀರ್ತನೆಗಳನ್ನು ಕಲಿತವರು. ಸ್ವಲ್ಪ ಮಟ್ಟಿಗೆ ಆಲಾಪನೆ- ಸ್ವರಪ್ರಸ್ತಾರಗಳನ್ನೂ ಮಾಡಬಲ್ಲವರು. ತಿಳಿದುದನ್ನು ಶುದ್ಧವಾಗಿ ನುಡಿಸಬಲ್ಲವರು. ಸಮಯೋಚಿತರಾಗಗಳನ್ನು ಆಯ್ಕೆ ಮಾಡಿಕೊಂಡು ನುಡಿಸುವವರು. ಪ್ರತಿದಿನ ಬೆಳಗಿನ ಬ್ರಾಹ್ಮೀ ಮುಹೂರ್ತಕ್ಕೆ ಪೂಜಾರಂಭದ ‘ನಗಾರಿ’ ಆದ ಮೇಲೆ ವಾದ್ಯಗಾರರು ಉದಯರಾಗ ನುಡಿಸುತ್ತಿದ್ದರು. ಆ ಹೊತ್ತಿಗೆ ಸರಿಯಾಗಿ ನನಗೆ ಎಚ್ಚರವಾಗುತ್ತಿತ್ತು. ಪಲ್ಲವಿ ಮುಗಿದು ಚರಣಕ್ಕೆ ಬರುತ್ತಿದ್ದಂತೆ ಮತ್ತೆ ಗಾಢವಾದ ನಿದ್ರೆಗೆ ಜಾರಿ ಬಿಡುತ್ತಿದ್ದೆ. ಅರ್ಧರ್ಧ ಹಾಡುಗಳೊಂದಿಗೆ ಇಂದಿಗೂ ಆ ಮಧುರ ಸಂದರ್ಭಗಳು ನನಗೆ ನೆನಪಿವೆ. ವಾದ್ಯಗಾರರು ವಿವಿಧ ಪೂಜೆಗಳ ಸಂದರ್ಭ ಆರಿಸಿ ರಾಗ-ಕೀರ್ತನೆಗಳನ್ನು ನುಡಿಸುತ್ತಿದ್ದುದನ್ನು ಗಮನಿಸಿ, ಜನರ ಮೇಲೆ ಅವುಗಳಿಂದಾಗುವ ಪರಿಣಾಮವನ್ನು ವಿಶ್ಲೇಷಿಸಿ ನಮ್ಮ ತಂದೆಯವರು ಆ ಬಗೆಗೆ ನನ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ವಿಶೇಷ ಉತ್ಸವ ಸಂದರ್ಭ ಪುತ್ತೂರು, ಕಾರ್ಕಳಗಳಿಂದ ಒಳ್ಳೆಯ ನಾದಸ್ವರ, ಸ್ಯಾಕ್ಸಾಫೋನ್ ವಾದಕರನ್ನು ಕರೆಸುತ್ತಿದ್ದರು. ಷಷ್ಠಿ ಜಾತ್ರೆಯ ಸಂದರ್ಭವಂತೂ, ಧರ್ಮಸ್ಥಳ ಲಕ್ಷದೀಪಕ್ಕೆಂದು ತಮಿಳುನಾಡು, ಮೈಸೂರು ಸೀಮೆಯಿಂದ ವಾದ್ಯಗಾರರು, ಸಂಗೀತಗಾರರು ಬಂದರೆ ಕುಕ್ಕೆಗೂ ಬರುತ್ತಿದ್ದರು. ಮತ್ತೆ ಆಧುನಿಕವಾದ ಬ್ಯಾಂಡು ವಾದ್ಯಗಾರರೂ ಬರುತ್ತಿದ್ದರು. ಆ ದಿನಗಳಲ್ಲಿ ನಾವು ಹುಡುಗರೆಲ್ಲ ಈ ಕಿಂದರಿಜೋಗಿಗಳ ಹಿಂದೆಯೇ!

ಪುತ್ತೂರಿನ ವೆಂಕಟಪ್ಪ ಡೋಗ್ರ, ಕಾರ್ಕಳದ ನಾರಾಯಣ ಎಂಬುವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಆ ಕಾಲದ ಜನಪ್ರಿಯ ವಾದ್ಯಗಾರರಲ್ಲಿ ಪ್ರಮುಖರು. ಈ ಕಲಾವಿದರು ಬಂದರೆಂದರೆ ನಮಗೆಲ್ಲ ಹಿಡಿಸಲಾರದ ಹಿಗ್ಗು! ಏನೋ ಸಂಭ್ರಮ! ಅವರಿದ್ದರೆ ಉತ್ಸವಕ್ಕೊಂದು ವಿಶೇಷ ಕಳೆ! ಇಬ್ಬರೂ ತಮಿಳುನಾಡಿನಲ್ಲಿ ಬಹುಕಾಲ ನಾದಸ್ವರ ಸಂಗೀತಾಭ್ಯಾಸ ಮಾಡಿ ಬಂದವರು. ಕಾರ್ಕಳನಾರಾಯಣರ ನಾಗಸ್ವರದ ನಾದಶುದ್ಧಿ ಅಪೂರ್ವವಾದದ್ದು. ಕಚ್ಚೆ ಉಟ್ಟು ಜುಬ್ಬ ಧರಿಸುತ್ತಿದ್ದ, ಸರಳವಾಗಿ ಆಭರಣವನ್ನೂ ಧರಿಸುತ್ತಿದ್ದ, ನೋಡಲು ಚೆನ್ನಾಗಿದ್ದ ಅವರು ಮೇಲೊಂದು ರೇಷ್ಮೆ ಶಾಲು ಧರಿಸಿ, ವಾದ್ಯ ಕೈಹಿಡಿದರೆಂದರೆ ಏನೋ ಒಂದು ಶೋಭೆ! ಮಧುರವೂ ಶಾಸ್ತ್ರ ಶುದ್ಧವೂ ಆದ ನುಡಿಸಾಣಿಕೆ ಅವರದು. ಅವರ ತೋಡಿ-ಶಂಕರಾಭರಣಗಳು ತುಂಬ ಆಪ್ಯಾಯಮಾನವಾಗಿರುತ್ತಿದ್ದವು. ವಿದ್ವತ್ ಪೂರ್ಣವಾದ ಅವರ ವಾದನದಿಂದ ತುಂಬ ಪ್ರಭಾವಿತನಾಗಿದ್ದೆ. ಅನೇಕ ಶಿಷ್ಯರನ್ನೂ ಅವರು ಸಿದ್ಧಪಡಿಸಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ವಾದನಸೌಲಭ್ಯಕ್ಕೋಸ್ಕರ ನಾದಸ್ವರದ ಬದಲಿಗೆ ಯಾವುದೋ ಸರಳ ಇಂಗ್ಲೀಷ್ ವಾದ್ಯವನ್ನು ಬಳಸಲು ತೊಡಗಿದ್ದರು. ಯಾಕೋ ಆ ಹೊಸವಾದ್ಯ ನನಗೆ ಹಿಡಿಸಿರಲಿಲ್ಲ.

ಜಿಲ್ಲೆಯ ದೇವಾಲಯಗಳಲ್ಲಿ ಉತ್ಸವ ಸಂದರ್ಭ ಅನೇಕ ಸುತ್ತುಗಳಲ್ಲಿ (ಪ್ರದಕ್ಷಿಣೆ) ದೇವರನ್ನು ಪಲ್ಲಕ್ಕಿಯಲ್ಲಿ ಬಿಜಯ ಮಾಡಿಸುವುದಿದ್ದು, ಇಂತಹ ಉತ್ತಮವಾದ್ಯಗಾರರಿಗೆ ವಿಶೇಷವಾಗಿ ಈ ಸಂದರ್ಭ ಅವಕಾಶ ನೀಡಲಾಗುತ್ತದೆ. ವಿಶೇಷ ಉತ್ಸಾಹದಿಂದ ವಾದನವನ್ನು ಈ ಸಂದರ್ಭ ಪ್ರಸ್ತುತ ಪಡಿಸುವವರರಾದುದರಿಂದ ರಸಿಕರಾರು ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ.

ವೆಂಕಟಪ್ಪ ಡೋಗ್ರರು ಬಹುಕಾಲ ನಾದಸ್ವರವನ್ನು ನುಡಿಸಿದವರಾದರೂ, ಆಮೇಲೆ ಆ ಸ್ಥಾನದಲ್ಲಿ ಸ್ಯಾಕ್ಸೋಫೋನ್ ನ್ನು ನುಡಿಸತೊಡಗಿದ್ದರು. ಪಂಚರತ್ನ ಕೀರ್ತನೆಗಳನ್ನು, ವಾಗ್ಗೇಯಕಾರರ ಹಲವಾರು ಮಹತ್ತ್ವದ ಕೃತಿಗಳನ್ನು ಮನೋಧರ್ಮ, ಸ್ವರಪ್ರಸ್ತಾರ, ರಾಗವಿಸ್ತಾರದೊಂದಿಗೆ ಸ್ಯಾಕ್ಸೋಫೋನ್ ನಲ್ಲಿ ತುಂಬ ಆಕರ್ಷಕವಾಗಿ ನುಡಿಸುತ್ತಿದ್ದ ಅವರು ಕಛೇರಿಯ ಕೊನೆಯಲ್ಲಿ ದೇವರನಾಮಗಳನ್ನು ಅಲ್ಲದೇ ಆ ಕಾಲದ ಜನಪ್ರಿಯ ಫಿಲ್ಮ್ ಹಿಟ್ಸ್ ಗಳನ್ನೂ ನುಡಿಸುತ್ತಿದ್ದರು. ಇಂತಹ ಸಂದರ್ಭಗಳನ್ನು ನಾವೆಲ್ಲ ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ.

ಫಿಲ್ಮ್ ಹಿಟ್ಸ್ ಗಳನ್ನು ನುಡಿಸುವುದು ಡೋಗ್ರರಿಗೆ ಅಷ್ಟೊಂದು ಇಷ್ಟವಾದುದೇನೂ ಆಗಿರಲಿಲ್ಲ. ಹಾಗಿದ್ದರೂ ಪಟ್ಟಣವಾಸಿಗಳ, ಶ್ರೀಮಂತರ ಸಮಾರಂಭಗಳಲ್ಲಿ ಅವರಿಗಾಗಿ ನುಡಿಸಬೇಕಾಗುತ್ತಿತ್ತು. ಈ ನೋವನ್ನು ಸಹೃದಯರಲ್ಲಿ, ಸ್ನೇಹಿತರಲ್ಲಿ ಅವರು ಹೇಳಿಕೊಳ್ಳುವುದಿತ್ತು.

ಮೈಸೂರಿನ ಅರಮನೆಯಲ್ಲಿ ವಿದೇಶಿ ಸ್ಯಾಕ್ಸೋಫೋನ್ ನ್ನು ಅಲ್ಲಿನ ಸಮೂಹ ಸಂಗೀತಕ್ಕೆ ಮಹಾರಾಜರ ಕಾಲದಲ್ಲಿ ಅಳವಡಿಸಿಕೊಂಡುದು ನಿಜವಾದರೂ, ಈ ವಿದೇಶಿ ವಾದ್ಯವನ್ನು ಶಾಸ್ತ್ರೀಯ ಸಂಗೀತಕ್ಕೆ ಮೊತ್ತ ಮೊದಲು ಅಳವಡಿಸಿಕೊಂಡು ಯಶಸ್ವಿಯಾದವರು “ವೆಂಕಟಪ್ಪ ಡೋಗ್ರ” ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಅನೇಕ ಶಿಷ್ಯರನ್ನೂ ಸಿದ್ಧಪಡಿಸಿದ್ದರು. ಪರಮಸಾತ್ವಿಕರೂ ಕಲಾಸಾಧಕರೂ ಆಗಿದ್ದ ಅವರ ಸಂಗೀತ ಸೇವೆಯನ್ನು ನಾನು ಸದಾ ನೆನಪಿಸಿಕೊಳ್ಳುವೆ.

ಇವರ ನಂತರದಲ್ಲಿ ಕದ್ರಿ ಗೋಪಾಲನಾಥರು ಈ ವಾದ್ಯವನ್ನು ಶಾಸ್ತ್ರೀಯ ಸಂಗೀತಕ್ಕೆ ಚೆನ್ನಾಗಿ ಒಗ್ಗಿಸಿಕೊಂಡು, ದುಡಿಸಿಕೊಂಡು ದೇಶ ವಿದೇಶಗಳಲ್ಲಿ ಪ್ರಖ್ಯಾತರಾದವರು! ಈಗಂತೂ ಇವರನ್ನು ಅನುಸರಿಸಿ, ನಮ್ಮೂರ ಕಡೆಯಲ್ಲೆಲ್ಲಾ ನಾದಸ್ವರಗಳ ಬದಲಿಗೆ ಬರಿಯ ಸ್ಯಾಕ್ಸೋಫೋನ್ ಗಳೇ ತುಂಬಿವೆ. ಏನಿದ್ದರೂ ನಾಗಸ್ವರ-ನಾದಸ್ವರ ಎಂಬ ವಾದ್ಯದ ಹೆಸರು ಅನ್ವರ್ಥವಾದುದು!

ಆ ಕಾಲದಲ್ಲಿ ತಂಜಾವೂರಿನಿಂದ ಬರುತ್ತಿದ್ದ ಸಹೋದರರಿಬ್ಬರ ನಾದಸ್ವರವಾದನ ಗಮಕ ಶುದ್ಧವೂ, ಮಧುರವೂ, ವಿದ್ವತ್ ಪೂರ್ವವೂ ಆದ ಕರ್ಣರಸಾಯನವಾಗಿತ್ತು!

ಪ್ರತಿವರ್ಷ ಷಷ್ಠಿ ಜಾತ್ರೆಗೆ ನಮ್ಮೂರಿಗೆ ಬರುತ್ತಿದ್ದ ಮೈಸೂರಿನ ಶ್ರೀರಂಗಪಟ್ಟಣದ ‘ಪುಟ್ಟಸ್ವಾಮಿ’ ಎಂಬುವರ ನಾದಸ್ವರ ವಾದನ ಹೃದಯಂಗಮವಾದುದಾಗಿತ್ತು. ಅವರ ನಾದಶುದ್ಧಿ ಅನುಪಮವಾದುದು! ಕಲೋಪಾಸನೆ ದೈವೋಪಾಸನೆ ಎಂಬ ನಂಬಿಕೆ ಅವರದು! ತುಂಬಾ ದೈವಭಕ್ತರು. ಅವರು ಕುಕ್ಕೆಯಲ್ಲಿ ಇದ್ದಷ್ಟು ದಿನವೂ ಪ್ರತಿದಿನ ಎಲ್ಲೆಲ್ಲಿ ಎಷ್ಟೆಷ್ಟು ದೇವರಗುಡಿಗಳಿವೆಯೋ ಅಲ್ಲೆಲ್ಲಾ ಕನಿಷ್ಟ ಐದೈದು ನಿಮಿಷಗಳಾದರೂ ವಾದ್ಯ ನುಡಿಸುತ್ತಿದ್ದರು. ಕೊನೆಗೆ ಊರಲ್ಲಿ ಹರಿಯುವ ನದಿಗಳ ಮುಂದೆ, ದೇವರ ಸೇವೆಗೆಂದು ಇರುವ ಆನೆಯ ಮುಂದೆ ವಾದನ ಸೇವೆ ಮಾಡುತ್ತಿದ್ದರು! ಅವರ ಮುಗ್ಧತೆ, ಸರಳತನ ವಿಸ್ಮಯ ಹುಟ್ಟಿಸುವಂತಹುದು! ಅವರು ನುಡಿಸುತ್ತಿದ್ದ ಬೆಳಗಿನ ಉದಯರಾಗಗಳು, ಸಂಜೆಯ ಪೂರ್ವಿ ಕಲ್ಯಾಣಿ ಕಣ್ಣು ಮುಚ್ಚಿಕೊಂಡರೂ ಆಯಾಯಾ ಕಾಲಗಳನ್ನು, ಕಾಲ ಪ್ರಭಾವವನ್ನು ನಿಖರವಾಗಿ ಮನದಲ್ಲಿ ಮೂಡಿಸುತ್ತಿದ್ದವು! ಪಲ್ಲಕ್ಕಿ ಉತ್ಸವದ ಸಂದರ್ಭ ಅವರು ನುಡಿಸುತ್ತಿದ್ದ ‘ಪುನ್ನಾಗವರಾಳಿ’ ನೆರೆದ ಜನರೊಂದಿಗೆ ದೇವರನ್ನೂ ಕುಣಿಸಬಲ್ಲಷ್ಟು ಸತ್ವಯುತವಾಗಿರುತ್ತಿತ್ತು! ಜಾತ್ರೆ ಮುಗಿದು ಊರಿಗೆ ಹಿಂತಿರುಗುವ ಮೊದಲು ನನ್ನಲ್ಲಿ ಪ್ರತ್ಯೇಕವಾಗಿ ಬಂದು, (ಆಗ ನಾನು ಮಠದ ಸ್ವಾಮಿಯಾಗಿದ್ದೆ) ನನ್ನ ಆಯ್ಕೆಯ ರಾಗಗಳನ್ನು ನುಡಿಸಿ ಸಂಭ್ರಮಿಸುತ್ತಿದ್ದರು. ನನ್ನ ಎದುರು ಮೃದುವಾಗಿ ನುಡಿಸಬೇಕೆಂದೂ ಮತ್ತು ಆ ವಾದ್ಯದ ಮುಖದಿಂದ ಎಂಜಲು ನೀರು ಕೆಳಕ್ಕೆ ಸುರಿಯಬಾರದೆಂದೂ ವಾದ್ಯದ ಬಾಯಿಗೆ ವಸ್ತ್ರ ತುರುಕಿಸಿ ಜಾಗ್ರತೆ ವಹಿಸಿ ಊದುತ್ತಿದ್ದರು! ಅವರ ಆ ಸೌಜನ್ಯ, ಸಹೃದಯತೆಯನ್ನು ಮನತುಂಬಿ ಇಂದೂ ನೆನೆಯುವೆ.

ಉತ್ಸವ ಮುಗಿಯುತ್ತಿದ್ದಂತೆ ಒಬ್ಬೊಬ್ಬರೇ ವಾದ್ಯಗಾರರು, ಕಲಾವಿದರು ಊರಿಗೆ ಹಿಂತಿರುಗುತ್ತಿದ್ದರು. ಕೊನೆಗೆ ನಮ್ಮ ಪುಟ್ಟಸ್ವಾಮಿಯವರು ಹೊರಡುವ ಮುಂಚೆ ಎಂದಿನಂತೆ ಎಲ್ಲ ದೇವರ ಮುಂದೂ ಒಂದಿಷ್ಟು ಹೊತ್ತು ವಾದನ ಮಾಡಿ, ದೇವರಿಗೆ ನಮಸ್ಕರಿಸಿ, ಸಮರ್ಪಿಸಿ ಊರು ಬಿಡುತ್ತಿದ್ದರು. ಉತ್ಸವ ಮುಗಿದರೂ, ಜಾತ್ರೆಗೆ ಬಂದ ಸರಕಿನ ಅಂಗಡಿಗಳು ಮತ್ತಷ್ಟು ದಿವಸವಿರುತ್ತಿದ್ದವು. ಆದರೆ ವಾದ್ಯಗಾರರು, ಕಲಾವಿದರು ಅವರವರ ಊರಿಗೆ ಹಿಂತಿರುಗಿದರೆಂದರೆ ನನ್ನ ಪಾಲಿಗೆ ಆ ವರ್ಷದ ಉತ್ಸವ, ಸಂಭ್ರಮ ಮುಗಿದಂತೆಯೇ! ಮತ್ತೆ ಏನೋ ಕಳೆದುಕೊಂಡಂತೆ! ಎದೆ ತುಂಬ ಭಾರ-ಭಾರವೆನಿಸುತ್ತಿತ್ತು!

ಇದೇ ಕಾಲದಲ್ಲಿ ಸಮೀಪದ (ಸುಮಾರು ಐವತ್ತು ಕಿ.ಮೀ) ಕಾಂಚನದಲ್ಲಿ ವೆಂಕಟಸುಬ್ರಹ್ಮಣ್ಯಮ್ ಅಯ್ಯರ್ ಅವರ ಗುರುಕುಲ ಮಾದರಿಯ ಸಂಗೀತ ಕಲಾಶಾಲೆ ರೂಪುಗೊಂಡಿತ್ತು. ಆಸುಪಾಸಿನ ಬಹುಮಂದಿ ಆಸಕ್ತರು ಅಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುವಂತಾಯ್ತು. ಅಲ್ಲಿ ನಿಯಮಿತವಾಗಿ ತ್ಯಾಗರಾಜ-ಪುರಂದರರ ಆರಾಧನೆ ಹತ್ತು ದಿನಗಳ ತನಕ ಸಂಗೀತ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿತ್ತು. ಚೆಂಬೈ ಭಾಗವತರಂತಹ ಹಿರಿಯ ವಿದ್ವಾಂಸರೂ ಅಲ್ಲಿಗೆ ಬರುತ್ತಿದ್ದರು. ಅಲ್ಲಿಗಾಗಲಿ, ಉಡುಪಿ, ಧರ್ಮಸ್ಥಳ, ಮಂಗಳೂರಿನಂತಹ ಮುಖ್ಯ ಸ್ಥಳಗಳಿಗಾಗಲೀ ಬಂದ ಕಲಾವಿದರು. ದರ್ಶನಕ್ಕೆಂದು ಕುಕ್ಕೆಗೆ ಬರುವವರೇ. ಹಾಗೆ ಬಂದವರು ಸಂಗೀತ ಕಾರ್ಯಕ್ರಮವನ್ನೂ ನೀಡುತ್ತಿದ್ದುದುಂಟು. ಸಂಗೀತವನ್ನು ಕಲಿಯಲು, ಚೆನ್ನಾಗಿ ರೂಢಿಸಿಕೊಳ್ಳಲು, ಹೊಸ ಹೊಸ ಆವಿಷ್ಕಾರವನ್ನು ಕಂಡುಕೊಳ್ಳಲು, ಸತತ ಪರಿಶ್ರಮದ ಜೊತೆಗೆ, ಮೊದಲಿಂದಲೂ ಒಳ್ಳೆಯ ಕೇಳ್ಮೆಯ ಸಂಸ್ಕಾರ ಅತ್ಯಂತ ಅವಶ್ಯ!

ನಮಗೊಬ್ಬ ಚಿಕ್ಕಪ್ಪ, ಹೆಚ್ಚು ಕಮ್ಮಿ ನನ್ನ ಓರಗೆಯ ಹಿರಿಯ ಮಗನನ್ನು ಮಗುವಾಗಿದ್ದಾಗಲೇ ಕಳೆದುಕೊಂಡಿದ್ದವರು. ಹಾಗೆಂದೇ ಏನೋ ನನ್ನಲ್ಲಿ ಅವರಿಗೆ ವಿಶೇಷ ಮಮತೆ. ಅದು ಈಗಲೂ ಹಾಗೆಯೇ! ಚಿಕ್ಕಂದಿನಲ್ಲಿ ‘ದೇವರಪೂಜೆಯ ಆಟವಾಡುವ’ ಹುಚ್ಚು ನನಗೆ! ಅದಕ್ಕೆಲ್ಲ ತಯಾರಿ ಮಾಡಿಕೊಡುತ್ತಿದ್ದವರು ನನ್ನ ಚಿಕ್ಕಪ್ಪನೇ. ಅವರಿಗೂ ಒಳ್ಳೆಯ ಕಂಠ! ದೇವರನಾಮಗಳನ್ನು ಕೇಳ್ಮೆಯಿಂದ ಕಲಿತು ಚೆನ್ನಾಗಿಯೇ ಹಾಡುತ್ತಿದ್ದರು. ನಾಟಕದಲ್ಲೂ ಅಭಿನಯಿಸುತ್ತಿದ್ದರು. ಕಾರ್ತಿಕ ಮಾಸದಲ್ಲಿ ಬೆಳಗಿನ ಬ್ರಾಹ್ಮೀಮುಹೂರ್ತದಲ್ಲಿ ‘ಪಶ್ಚಿಮಜಾಗರ ಪೂಜೆ’ ನಡೆಯುತ್ತಿತ್ತು. ವಿದ್ಯುತ್ ಸೌಲಭ್ಯ ಇನ್ನೂ ಇರದ ಆ ದಿನಗಳಲ್ಲಿ ಎಣ್ಣೆ ಬತ್ತಿಗಳ ದೀಪದ ಮಂದ ಬೆಳಕಲ್ಲಿ ಉದಯರಾಗದ ಸಂಕೀರ್ತನೆಗಳನ್ನು ಚಿಕ್ಕಪ್ಪನಾಗಲಿ, ನಮ್ಮ ತಂದೆಯವರಾಗಲೀ ಸುಶ್ರಾವ್ಯವಾಗಿ ತಾಳ ಹಾಕುತ್ತಾ ಹಾಡುತ್ತಿದ್ದರೆ, ಅದೊಂದು ದಿವ್ಯಾನುಭವವೆ! ಸ್ಮರಣೀಯ!

ಗರ್ಭಾಷ್ಟಮದಲ್ಲೇ ನನಗೆ ಉಪನಯನ ಸಂಸ್ಕಾರವಾಗಿತ್ತು. ನನ್ನ ದೊಡ್ಡಪ್ಪನ ಮಗ, ಅಣ್ಣನಾಗಬೇಕಾದವನು, ನಾನೂ ಜೊತೆಜೊತೆಯಾಗಿ ಬೆಳೆದವರು. ನಮಗೆ, ಹಾಗೆಯೇ ಮಠದ ಇತರ ವಟುಗಳಿಗೆ ಸ್ವಾಮಿಗಳು ಅನೇಕ ಸಂಸ್ಕೃತ ಸ್ತೋತ್ರಗಳನ್ನು ಪಾಠ ಮಾಡಿದ್ದರು. ವಾದಿರಾಜರ ದಶಾವತಾರ ಸ್ತುತಿಯನ್ನು ರಾಗದಿಂದ ಹಾಡಲು ನಮ್ಮ ತಂದೆಯವರು ಕಲಿಸಿದ್ದರು. ಪೂಜಾಕಾಲದಲ್ಲಿ ಅವುಗಳನ್ನು ನಾವು ಪಠಿಸುತ್ತಿದ್ದೆವು. ಅಂತೆಯೇ ಉಡುಪಿ ಮಠಗಳಲ್ಲಿ ಪ್ರಚಲಿತವಿರುವ ‘ಸಂಕೀರ್ತನೆ’ ಎಂಬ ಅತಿ ಸರಳ ಸಂಗೀತ ಸಂಯೋಜನೆಯ ಕೀರ್ತನೆಗಳನ್ನೂ ನಾವು ಹಾಡುತ್ತಿದ್ದೆವು. ಹೆಚ್ಚಿನ ಸಂಗೀತ ಶಿಕ್ಷಣ ನನಗಾಗಿರಲಿಲ್ಲ. ಕ್ರಮಬದ್ಧವಾದ ಸಂಗೀತ ಶಿಕ್ಷಣವನ್ನು ಯಾಕೋ, ಏನೋ ನಮ್ಮ ತಂದೆಯವರೂ ನೀಡಿರಲಿಲ್ಲ!

ನೆನಪೇ ಸಂಗೀತ-೩:ಸನ್ಯಾಸಕ್ಕೂ ಮೊದಲಿನ ದಿನಗಳು

ಚಿಕ್ಕಂದಿನಲ್ಲಿ ಹಳ್ಳಿಯ ತಿನಿಸಾದ ಹಲಸಿನ-ಮಾವಿನ ಹಣ್ಣಿನ ಮಾಂಬಳವನ್ನು ಸಣ್ಣ ಸಣ್ಣ ತುಂಡುಮಾಡಿ, ಸುರುಳಿಸುತ್ತಿ ಸಾವಧಾನದಿಂದ ತಿನ್ನುವ ತಾಳ್ಮೆ ನನಗಿರಲಿಲ್ಲ! ಪೆಪ್ಪರಮೆಂಟನ್ನು, ಚಾಕಲೇಟನ್ನು ಕಟಕಟನೆ ಕಡಿದು ಮುಗಿಸುತ್ತಿದ್ದೆ! ಯಾಕೋ ಸಣ್ಣವನಿದ್ದಾಗ ರಸಾಲವಾದ ರಾಗಾಲಾಪನೆ ಇಷ್ಟವೆನಿಸುತ್ತಿರಲಿಲ್ಲ. ಐದು ಹತ್ತು ನಿಮಿಷಗಳಲ್ಲಿ ಮುಗಿಯುವ ಹಾಡುಗಳನ್ನು ಕೇಳಲು ರುಚಿಸುತ್ತಿತ್ತು. ದೊಡ್ದವನಾದಂತೆ ಬದುಕಿನ ಎಷ್ಟೋ ವಿಷಯಗಳನ್ನು ಅವಸರವಿಲ್ಲದೆ, ನಿಧಾನವಾಗಿ ಅನುಭವಿಸುವುದರಲ್ಲೇ ಸುಖವಿದೆ ಎಂಬುದರ ಅರಿವಾಗಿತ್ತು.

ನನ್ನ ಪ್ರೌಢಶಾಲಾ ವ್ಯಾಸಂಗಕ್ಕೆಂದು ಕುಕ್ಕೆಯನ್ನು ಬಿಟ್ಟು ದೂರದ ಅಜ್ಜಿ ಮನೆಗೆ ಸೀತೂರಿಗೆ ಬಂದೆ. ಆಗಿನ್ನೂ ಕುಕ್ಕೆಯಲ್ಲಿ ಹೈಸ್ಕೂಲು ಆರಂಭವಾಗಿರಲಿಲ್ಲ. ಸೀತೂರಿನಿಂದ ಐದು ಮೈಲು ದೂರದಲ್ಲಿ, ಕಾಫಿ ತೋಟವನ್ನು ನಡೆದು ದಾಟಿ, ಕೊಪ್ಪದಲ್ಲಿ ನನ್ನ ಹೈಸ್ಕೂಲು.  ನಮ್ಮೂರಿನ ಇನ್ನೂ ನಾಲ್ಕೈದು ಮಂದಿ ವಿದ್ಯಾರ್ಥಿ ಗೆಳೆಯರು, ಗಟ್ಟಿಯಾಗಿ, ವಿನೋದದಿಂದ ಮಾತನಾಡುತ್ತಾ, ಭರಭರ ನಡೆದು ಕೊಪ್ಪ ಸೇರುತ್ತಿದ್ದೆವು. ಹಾಗೆಯೇ ಸಂಜೆ ಹಿಂತಿರುಗುತ್ತಿದ್ದೆವು.

ನಮ್ಮಜ್ಜ ಜಮೀನುದಾರರು. ಮನೆಯಲ್ಲಿ ಅಜ್ಜ-ಅಜ್ಜಿ ಸೋದರ ಮಾವಂದಿರು, ನನ್ನ ಸಮ ವಯಸ್ಸಿನ ಚಿಕ್ಕಮ್ಮ, ಸೋದರತ್ತೆ, ಮಕ್ಕಳು ತುಂಬಿದ ಸಂಸಾರ. ಮೊದಲಿಂದಲು ಅನೇಕ ಬಡವಿದ್ಯಾರ್ಥಿಗಳಿಗೆ, ಪರವೂರಿನಿಂದ ಬಂದಿರುತ್ತಿದ್ದ ಊರಶಾಲಾ ಮೇಸ್ಟರಿಗೆ, ಊಟ ವಸತಿ ಕೊಟ್ಟು ಸಲಹುತ್ತಿದ್ದ, ನಾಲ್ಕಂಕಣದ ದೊಡ್ಡ ತೊಟ್ಟಿಮನೆಯದು. ಮನೆಯವರೆಲ್ಲರು ಮೃದುಸ್ವಭಾವದ, ಪ್ರೀತಿ ತೋರುವ ಮಂದಿ. ನನಗೂ ದೊಡ್ಡಮಾವನಿಗು ಹೆಚ್ಚಿನ ಸಲುಗೆ, ಆತ್ಮೀಯತೆ. ಪ್ರತಿದಿನ ಮನೆಯಲ್ಲಿ ಭಜನೆ, ಶನಿವಾರದಂದು ವಿಶೇಷ ಭಜನೆ, ರಾಮೋತ್ಸವ ಮಾವನ ನೇತೃತ್ವದಲ್ಲಿ ಶ್ರದ್ಢೆ ಯಿಂದ ನಡೆಯುತ್ತಿತ್ತು. ಊರಲ್ಲಿ ಶೃಂಗೇರಿ ಕಡೆಯ ನಾಗರಾಜ ಮೇಷ್ಟರು ಸಂಗೀತವನ್ನು ಕಲಿಸಿಕೊಡುತ್ತಿದ್ದರು. ನನ್ನ ತಂಗಿ ಅವರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದಳು. ಉಳಿದಂತೆ ಸೀತೂರಿನಲ್ಲಿದ್ದ ಮೂರು ವರ್ಷವೂ ಶಾಸ್ತ್ರೀಯ ಸಂಗೀತ, ವಾದ್ಯವಾದನ ಯಾವುದನ್ನೂ ಕೇಳುವ ಅವಕಾಶವಾಗಲಿಲ್ಲ. ರಜೆಯಲ್ಲಿ ಕುಕ್ಕೆಗೆ ಬಂದಾಗ ಮಾತ್ರ ಅಂತಹ ಅವಕಾಶವಿರುತ್ತಿತ್ತು.ತೀರ್ಥಹಳ್ಳಿ- ಒಂದು ನೋಟ

ಸೀತೂರು, ಕೂಗಳತೆಯ ದೂರದಲ್ಲಿ ಅವರವರ ಜಮೀನು ಅಡಿಕೆ ತೋಟಗಳ ಮಧ್ಯೆ ಹತ್ತಾರು ಮನೆಗೆಳಿರುವ ಪುಟ್ಟ ಸುಂದರ ಹಳ್ಳಿ. ಒಂದು ಪ್ರೈಮರಿ ಶಾಲೆ, ಸಹಕಾರಿ ಸಂಘ, ಯುವಕ ಸಂಘ, ಸಂಜೆ ಆಡಲು ಬ್ಯಾಡ್ಮಿಂಟನ್ ಕೋರ್ಟ್, ಓಡಾಡಲು ಪ್ರತಿಮನೆಗು ಬೈಸಿಕಲ್ ಗಳು, ಸರಕು ಸಾಗಿಸಲು ಮನೆಗೊಂದು ಎತ್ತಿನ ಗಾಡಿ, ಮಣ್ಣಿನ ರಸ್ತೆಯ ಊರದು. ಬಸ್ ಹಿಡಿಯಲು ಮೈಲು ದೂರದ ಕುದುರೆಗುಂಡಿಗೆ ಹೋಗಬೇಕು. ಊರ ಮಧ್ಯೆ, ಸುತ್ತಲು ಕುರುಚಲು ಕಾಡಿನ, ಏಕಾಂತ ತಾಣದಲ್ಲಿ ಹಳೆಯ ದೇವಸ್ಥಾನ ಗೋಪಾಲಕೃಷ್ಣನದು. ಎಳವೆಯಲ್ಲಿ ಆ ಕಡೆ ಒಬ್ಬನೇ ಹೋಗಲೂ ನನಗೆ ಭಯವಾಗುತ್ತಿತ್ತು. ಸಂಜೆಯಾಯಿತೆಂದರೆ ‘ಠಣ ಠಣ’ – ‘ದೊಳಂಕ್ ದೊಳಂಕ್’ ಎಂದು ದನಿಗೈಯ್ಯುತ್ತಾ ಹಸುಕರುಗಳು ಬಂದು ಬಂದು ಹಟ್ಟಿ ಸೇರುತ್ತಿದ್ದರೆ ಪೂರ್ತಿ ಕತ್ತಲು ಆವರಿಸುತ್ತಿದ್ದಂತೆ (ಕಬಡ್ದಿಯೋ ಬ್ಯಾಡ್ಮಿಂಟನ್ನೋ ಆಡಿ) ನಾವೂ ಮನೆ ಸೇರುತ್ತಿದ್ದೆವು. ವರ್ಷ ಪೂರ್ತಿ ತಂಪಾದ ಹವೆ. ಸಸ್ಯ ಶಾಮಲೆ! ಮತ್ತೆ ವರ್ಷವಿಡಿ ಏನಾದರೂ ಹಬ್ಬ ಹರಿದಿನ ವಿಶೇಷಗಳು. ನಮ್ಮಮ್ಮನ ಎಲ್ಲ ಹೆರಿಗೆಗಳೂ ತವರಿನಲ್ಲೇ ಆಗಿತ್ತಾಗಿ ನಾನು ಪ್ರೈಮರಿ ಶಾಲೆಗೆ ಹೋಗಲು ಆರಂಭಿಸುವ ತನಕವೂ ಅಮ್ಮನ ಜೊತೆಗೇ ಬರುತ್ತಿದ್ದೆನಾಗಿ, ಮೊದಲಿಂದಲೂ, ಕುಕ್ಕೆಗೂ, ಸೀತೂರಿಗೂ ತುಂಬ ವ್ಯತ್ಯಾಸವೇನೂ ನನಗಿರಲಿಲ್ಲ.

ಹಳ್ಳಿಯ ಸೀತೂರಿಗೆ ಆಗ ತಾನೇ ವಿದ್ಯುತ್ ಬಂದಿತ್ತು. ಮನೆಯಲ್ಲಿ ರೇಡಿಯೋ ಇತ್ತು. ಆಗಿನ್ನು ಸುಬ್ರಹ್ಮಣ್ಯದಲ್ಲಿ ಕರೆಂಟ್ ಇರಲಿಲ್ಲ.  ರೇಡಿಯೋ ಇರಲಿಲ್ಲ. ಟ್ರಾನ್ಸಿಸ್ಟರ್ಗಳು ಇನ್ನೂ ಬಳಕೆಗೆ ಬಂದಿರಲಿಲ್ಲ. ಮತ್ತೆ ಪಂಚಾಯ್ತಿಯವರು ಸಂಜೆಯ ಹೊತ್ತು ಮೊಳಗಿಸುತ್ತಿದ್ದ ರೇಡಿಯೋ ಬಂದಿತ್ತು. ಅದೇನು ಒದಗಿ ಬಂದಿರಲಿಲ್ಲ. ಆದರೆ ಸೀತೂರಿಗೆ ಬಂದ ಮೇಲೆ ಪ್ರತಿ ರಾತ್ರಿ ನಾನು ರೇಡಿಯೋ ಆಲಿಸುತ್ತಿದ್ದೆ.  ಹಾಡಿಗಾಗಿ! ವಿಶೇಷವಾಗಿ ಸಿನೇಮ ಹಾಡುಗಳಿಗಾಗಿ. ಮಧುರ ಭಾವನೆಗಳು ನಿಧ- ನಿಧಾನವಾಗಿ ಮೊಳೆಯುತ್ತಿದ್ದ ದಿನಗಳವು. ಸಹಜವಾಗೇ ಚಿತ್ರಗೀತೆಗಳು, ಪ್ರೇಮಗೇತೆಗಳು ಇಷ್ಟವಾದವು. ‘ಮೆಚ್ಚಿನ ಚಿತ್ರಗೀತೆಗಳು’, ‘ತಿಂಗಳ ಹೊಸ ಹಾಡು‘ ಕಾರ್ಯಕ್ರಮಗಳನ್ನು ತಪ್ಪದೆ ಆಲಿಸುತ್ತಿದ್ದೆ. ಹೆಚ್ಚಿನ ಅಭ್ಯಾಸಕ್ಕಾಗಿ ಓದಿಗಾಗಿ ಕೊಪ್ಪದಲ್ಲೇ ವಾಸವಿರಬೇಕಾದ ದಿನಗಳಲ್ಲಿ ಸಂಜೆಯ ಹೊತ್ತು ಗೆಳೆಯರೊಂದಿಗೆ ‘ವಾಕ್’ ಹೋಗುತ್ತಿದ್ದೆ. ಅದು ಬೇರೆಲ್ಲಿಗು ಅಲ್ಲ. ಊರ ಕೊನೆಯಲ್ಲಿದ್ದ ಟೆಂಟ್ ಸಿನೇಮಾದ ಟಾಕೀಸ್ ಬಳಿಗೆ! ಸಿನೇಮಾ ನೋಡಲು ಅಲ್ಲ.  ಪ್ರದರ್ಶನದ ಮೊದಲು ಹೊರಗಿರುವ ಧ್ವನಿವರ್ಧಕದಲ್ಲಿ ಪ್ರಸಾರ ಮಾಡುತ್ತಿದ್ದ ಚಿತ್ರಗೀತೆಗಳನ್ನು ಆಲಿಸಲು. ಒಳಗೆ ಚಿತ್ರಪ್ರದರ್ಶನ ಆರಂಭವಾಗುತ್ತಿದ್ದಂತೆ ಹೊರಗಿನ ಹಾಡು ನಿಲ್ಲುತ್ತಿತ್ತು. ನಮ್ಮ ಸವಾರಿ ಹಿಂದೆ ಬರುತ್ತಿತ್ತು. ಸಿನೇಮಾವನ್ನೂ ನೋಡುತ್ತಿದ್ದೆವು. ತೀರ್ಥಹಳ್ಳಿಯ ಎಳ್ಳಮವಾಸ್ಯೆಯ ಜಾತ್ರೆ ಆ ಕಡೆ ಪ್ರಸಿದ್ಧವಾಗಿತ್ತು. ಅಲ್ಲಿಗೆ ಗುಬ್ಬಿ ಕಂಪನಿಯಂಥ ಒಳ್ಳೊಳ್ಳೆಯ ನಾಟಕ ಕಂಪೆನಿಗಳು ಬರುತ್ತಿದ್ದವು. ಚಲಿಸುವ ರಂಗ ಮಂಟಪದ ಆಕರ್ಷಣೆ ಬೇರೆ. ನಾಟಕ ನೋಡಲು ಹೋಗುತ್ತಿದ್ದೆವು. ಆ ಸಮಯಕ್ಕೆ ಹೊಚ್ಚ ಹೊಸ ಸಿನೇಮಾಗಳು ಅಲ್ಲಿಗೆ ಬಂದಲ್ಲಿ ಗೆಳೆಯರು ಕಲೆತು ಹೋಗುತ್ತಿದ್ದೆವು. ಅವೆಲ್ಲ ತುಂಬ ಖುಷಿ ಕೊಟ್ಟ ದಿನಗಳು.

ಆ ಕಾಲದ ಹೆಚ್ಚಿನ ಚಿತ್ರಗೀತೆಗಳ ರಾಗ ಸಂಯೋಜನೆ ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿರುತ್ತಿದ್ದವು. ಸಾಹಿತ್ಯದ ಗುಣಮಟ್ಟವೂ ಉತ್ತಮ ಮಟ್ಟದ್ದಾಗಿರುತ್ತಿದ್ದವು.

ತೀರ್ಥಹಳ್ಳಿ ಹತ್ತಿರಸಿನೇಮಾ ಹಾಡುಗಳನ್ನು ಕೇಳುವುದು, ಆ ಹಾಡುಗಳ ಮುದ್ರಿತ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ನನಗೆ ಇಷ್ಟವಾಗಿತ್ತು.  “ಚೆಲುವಾಂತ ಚೆನ್ನಿಗನೇ ನಲಿದಾಡುಬಾ”, “ಮೆಲ್ಲುಸಿರೆಸವಿಗಾನ”, “ಸ್ವಾಭಿಮಾನದ ನಲ್ಲೆ”, “ತುಟಿಯ ಮೇಲೆ ತುಂಟ ಕಿರುನಗೆ-ಕೆನ್ನೆ ತುಂಬಾ ಕೆಂಡ ಸಂಪಿಗೆ”, “ನಟವರ ಗಂಗಾಧರ” ಹೀಗೆ ಒಂದೇ ಎರಡೇ? ಆಗಿನ ಜನಪ್ರಿಯ ಚಿತ್ರಗೀತೆಗಳು ಬಹುತೇಕ ನನಗೆ ಕಂಠಪಾಠವೇ ಆಗಿತ್ತೇನೋ! ಹೆಚ್ಚು ಇಷ್ಟವಾಗಿರುತ್ತಿದ್ದ ಹಾಡುಗಳನ್ನು ನನ್ನಷ್ಟಕ್ಕೆ ಹಾಡಿಕೊಳ್ಳುವುದು, ಗುನುಗಿಕೊಳ್ಳುವುದು ಅಪ್ಯಾಯಮಾನವಾದ ಸಂಗತಿಯಾಗಿತ್ತು. ಮಧ್ಯೆ ದಶಕಗಳ ಕಾಲ ಅವೆಲ್ಲವನ್ನು ಬಿಟ್ಟು ನಾನಿದ್ದೆನಾದರೂ, ಈಗಲೂ ಕೆಲವೊಮ್ಮೆ ಯಾಕಾದರೂ ನೆನಪಾದರೆ ಏನೋ ಅನಿರ್ವಚನೀಯ ಅನುಭವ!

ಗುಡ್ಡುಶೆಟ್ಟಿ ನಮ್ಮ ಅಜ್ಜನ ಎತ್ತಿನ ಗಾಡಿಯ ಡ್ರೈವರ್. ಘಟ್ಟದ ಕೆಳಗಿನ ಕಾರ್ಕಳ ಉಡುಪಿ ಕಡೆಯವನು. ಸೀತೂರಿನಲ್ಲೇ ಇದ್ದು ಹೆಚ್ಚು ಕೆಲಸದ ಒತ್ತಡ ಇಲ್ಲದಿದ್ದಾಗ ವರ್ಷದ ಕೊನೆಯಲ್ಲಿ ಊರಿಗೆ ಹೋಗಿ ಬರುತ್ತಿದ್ದ. ಹಾಗೆ ನೋಡಿದರೆ ಕನ್ನಡಾ ಜಿಲ್ಲೆಯ (ಅಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೆ ಕರೆಯುತ್ತಾರೆ) ಬಹುಮಂದಿ ಮಲೆನಾಡಿಗೆ ತೋಟದ ಕೆಲಸಕ್ಕೆ ಬರುತ್ತಾರೆ. ಎಷ್ಟೋ ಜನ ಅಲ್ಲೇ ಸ್ಥಿರವಾಗಿ ಬಿಡುತ್ತಾರೆ. ಗುಡ್ದುಶೆಟ್ಟಿ ತನ್ನ ಗಾಡಿ ಎತ್ತುಗಳನ್ನು ಚೆನ್ನಾಗಿ ಇಟ್ಟುಕೊಂಡಿರುತ್ತಿದ್ದ. (ಸ್ವಲ್ಪ ಸೋಮಾರಿಯಾದರೂ) ಸಂಜೆ ಹೊತ್ತು ಚೆನ್ನಾಗಿ ಬಿಸಿ ನೀರು ಸ್ನಾನ ಮಾಡಿ ಒಗೆದ ವಸ್ತ್ರ ತೊಟ್ಟು ಗೋಡೆಗೆ ಒರಗಿ ಮಬ್ಬು ಕತ್ತಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಆಗವನು ಮೆಲ್ಲನೆ ಪಾಡ್ದನಗಳನ್ನು ಹಾಡಿಕೊಳ್ಳುತ್ತಿದ್ದ. ಅದು ಕೋಟಿಚೆನ್ನಯರದಿರಬಹುದು ಅಥವಾ ಮತ್ತಾವುದೋ. ಆದರೆ ಆ ಹಾಡು ಮುಖದಿಂದಲ್ಲ, ಎಲ್ಲೋ ಒಳಗಿಂದ ಬಂದತಿರುತ್ತಿತ್ತು. ದೂರದ ಅವನ ಮನೆ ಊರು ಅಲ್ಲಿನ ಏನೋ ಅವನಿಗೆ ನೆನಪಾಗುತ್ತಿತ್ತೇನೋ? ದುಗುಡ ಕಳೆಯಲು ಹಾಡಿಗಿಂತ ಮತ್ಯಾವುದಿದೆ? ಆಗೆಲ್ಲ ನನಗೆ ನಮ್ಮೂರಿನ ಕುಡಿಯರ ಸಿದ್ಧವೇಷವೋ, ಲೇಲೇ ಹಾಡುಗಳೋ ನೆನಪಾಗುತ್ತಿದ್ದವು. ಹಾಗೆಯೇ ನಮ್ಮೂರೂ!

ನನ್ನ ಚಿಕ್ಕಮಾವ ಹತ್ತನ್ನೆರಡು ಹುಡುಗರ ಜೊತೆಗೂಡಿ ವಿದ್ಯಾರ್ಥಿ ಗೆಳೆಯರ ಸಂಘ ಎಂಬ ಹೆಸರಿನಲ್ಲಿ ಸಂಘ ಮಾಡಿದ್ದ. ಮನೆಯಲ್ಲೇ ಅದರ ಕಛೇರಿ. ಅವನು ಖಾಯಂ ಅಧ್ಯಕ್ಷ. ನಾನೂ ಒಮ್ಮೆ ಕಾರ್ಯದರ್ಶಿಯಾಗಿದ್ದೆ. ಅದರ ಮುಖ್ಯ ಕಾರ್ಯಕ್ರಮಗಳು ಸ್ವಾತಂತ್ರ್ಯೋತ್ಸವದಂದು ಬಾವುಟ ಹಾರಿಸುವುದು, ನವರಾತ್ರಿಯಲ್ಲಿ ಶಾರದಾ ಪೂಜೆ, ರಜಾದಿನಗಳಲ್ಲಿ ಸಂಜೆ ಊರಗೋಮಾಳದಲ್ಲಿ ಗೆರೆ ಎಳೆದು ಕಬಡ್ಡಿ ಆಡುವುದು. ಒಂದು ಸಣ್ಣ ಕಟ್ಲೇರಿ ಅಂಗಡಿ ಸ್ಥಾಪನೆ ಮೊದಲು ಮೂರು ಕಾರ್ಯಕ್ರಮಗಳು ಕೆಲವು ವರ್ಷ ಚೆನ್ನಾಗಿಯೇ ನಡೆದವು. ನಾಲ್ಕನೆಯ ಕಟ್ಲೇರಿ ಅಂಗಡಿಯೆಂದರೆ ಒಂದಡಿ x ಒಂದೂವರೆ ಅಡಿ ವಿಸ್ತೀರ್ಣದ ಸಣ್ಣ ಕಬ್ಬಿಣದ ಪೆಟ್ಟಿಗೆ! ಸ್ವಲ್ಪವೇ ಬಂಡವಾಳ ಹೂಡಿ ಕೆಲವು ಬೀಡಿ ಕಟ್ಟುಗಳನ್ನು, ಬೆಂಕಿ ಪೊಟ್ಟಣಗಳನ್ನು, ಸಣ್ಣ ಸಣ್ಣ ಪೆಪ್ಪರಮೆಂಟಿನ ಕಟ್ಟುಗಳನ್ನು, ಬಿಸ್ಕತ್ ಪ್ಯಾಕುಗಳನ್ನು ಕೊಪ್ಪದಿಂದ ಖರೀದಿಸಿ ಪೆಟ್ಟಿಗೆಯಲ್ಲಿಡಲಾಯಿತು. ನಮ್ಮ ಮನೆಗೆ ಬರುತ್ತಿದ್ದ, ಸಾಮಾನ್ಯ ಯಾವಾಗಲೂ ಜೇಬು ಖಾಲಿಯಿರುತ್ತಿದ್ದ, ಊರವರೇ ಆದ ಇಬ್ಬರು, ಮೂವರು ಅಂಗಡಿಯ ಖಾಯಂ ಗಿರಾಕಿಗಳು! ನಗದು, ಕೈಕಡ ಎಂದು ವ್ಯಾಪಾರ ಪ್ರಾರಂಭವಾಗಿ ಕೊನೆಗೆ ಕೈಕಡದ ಕೈಯೇ ಮೇಲಾಗಿ, ಸಣ್ಣಯ್ಯ! ನಾಳೆ ಕೊಡ್ತೇನೆ, ಮುಂದಿನ ವಾರ ಕೊಡ್ತೇನೆ ಎಂದು ಮುಂದುವರಿದು, ಕಟ್ಟಕಡೆಗೆ ವಿದ್ಯುಕ್ತವಾಗಿ ಅಂಗಡಿಯನ್ನು ಮುಚ್ಚಲಾಯಿತು!

ಆಗಸ್ಟ್ ಹದಿನೈದರಂದು ಮಲೆನಾಡಿನ ಆ ಜಡಿ ಮಳೆಯಲ್ಲಿ ಬಾವುಟ ಹಾರಿಸುವ ಕಾರ್ಯಕ್ರಮವನ್ನು ಎಷ್ಟು ಚೆನ್ನಾಗಿ ಮಾಡಬಹುದು? ಒಂದು ಸಲವಂತೂ ಮಳೆಯ ಗಡಿಬಿಡಿಗೆ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿತ್ತು! ಯಾರೋ ಅಂದಿದ್ದರು- ಪೊಲೀಸರಿಗೆ ಗೊತ್ತಾದರೆ ಜೈಲಿಗೇ ಹಾಕ್ತಾರೆ ಅಂತ! ಸಂಜೆ ಧ್ವಜ ಇಳಿಸುವ ತನಕ ಏನೋ ಭಯ- ಪುಕ್ಕು! ಕೊನೆಗೆ, ಅಂತೂ ನಿಟ್ಟುಸಿರು ಬಿಟ್ಟೆವು! ಆ ಮಳೆಯಲ್ಲಿ ಯಾರು ದೂರು ಕೊಡುವವರು? ಆ ಹಳ್ಳಿಗೆ ಬರುವ ಪೊಲೀಸರಾದರೂ ಯಾರು?

“ಆಶ್ವಯುಜ ಶುದ್ಧ ಮಾರ್ನವಮಿ ಬರಲೆಂದು |
ಶಾಶ್ವತದಿ ಹರಸುವೆವು ಬಾಲಕರು ಬಂದು ||
ಈಶ ನಿಮಗತ್ಯಧಿಕ ಸುಖವ ಕೊಡಲೆಂದು |
ಲೇಸಾಗಿ ಹರಸುವೆವು ಬಾಲಕರು ಬಂದು” ||

ಶಾರದೋತ್ಸವಕ್ಕೆ ಮೊದಲು ಸಂಘದ ಸದಸ್ಯರಲ್ಲಿ ಆಯ್ದ ಎಂಟು ಜನರು ಸುತ್ತಮುತ್ತಲ ಹಳ್ಳಿಗಳಲ್ಲಿ, ಪ್ರತಿ ಮನೆಗೆ ತೆರಳಿ ‘ಹೂವಿನ ಕೋಲು’ ಹಿಡಿದು ಹಾಡು ಹೇಳುತ್ತಿದ್ದೆವು, ಕೋಲಾಟವಾಡುತ್ತಿದ್ದೆವು. ಹೂವಿನ ಕೋಲನ್ನು ಅವರದನ್ನು ಅವರೇ ತಯಾರಿಸಬೇಕಿತ್ತು. ಅಲಂಕರಿಸಬೇಕಿತ್ತು. ಅದನ್ನು ನಾವು ಸ್ಪರ್ಧೆಯಿಂದ ಮಾಡುತ್ತಿದ್ದೆವು. ಕೊನೆಯಲ್ಲಿ ಮನೆಯವರು ಪ್ರೀತಿಯಿಂದ ಉಪಚರಿಸುತ್ತಿದ್ದರು.  ಹಾಡಿನಲ್ಲೇ ಹೇಳುವ ಬೆಲ್ಲ- ಕೊಬರಿಯನ್ನು ನೀಡುತ್ತಿದ್ದರು. ಹಾಗೆಯೇ ಸಂಘಕ್ಕೆ ಒಂದಷ್ಟು ಸಂಭಾವನೆ- ಅಕ್ಕಿ ತೆಂಗಿನ ಕಾಯಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ನಾವು ಅಲ್ಲಿಂದ ಇನ್ನೊಂದು ಮನೆ- ಹಳ್ಳಿಗೆ ತೆರಳುತ್ತಿದ್ದೆವು. ಮರುದಿನ ಮತ್ತೆ ಹೂವಿನ ಕೋಲಿನ ಸಂಚಾರ! ಆಹಾ- ಅದೇನು ಖುಷಿ- ಸಂಭ್ರಮ!

“ಮಧುಕರ ವೃತ್ತಿ ಎನ್ನದು ಬಲು ಚೆನ್ನದು” ಅಂದೂ – ಇಂದೂ !!

ಸಂಗ್ರಹವಾದ ಹಣ, ಅಕ್ಕಿ, ತೆಂಗಿನ ಕಾಯಿಗಳಿಂದ ಕೊನೆಯ ದಿನ ಶಾರದಾ ಪೂಜೆ. ಶಾರದೆಯ ಮೃಣ್ಮಯ ವಿಗ್ರಹವನ್ನು ನಾನೇ ರಚಿಸುತ್ತಿದ್ದೆ!  ನನ್ನ ಚಿಕ್ಕಪ್ಪ ಅದನ್ನು ನನಗೆ ಕಲಿಸಿದ್ದರು! ಈ ಎಂಭತ್ತರ ಹರಯದಲ್ಲು ನಮ್ಮ ಚಿಕ್ಕಪ್ಪನಿಗೆ ಇಂಥದ್ದರೆಲ್ಲೆಲ್ಲಾ ಹೆಚ್ಚಿನ ಆಸಕ್ತಿ! ಊರವರನ್ನೆಲ್ಲ ಪೂಜೆಗೆ ಆಹ್ವಾನಿಸಿ- ಪೂಜೆ- ಪನಿವಾರ ವಿತರಣೆ. ಉಳಿದ ಹಣದಲ್ಲಿ ನಮ್ಮ ಅಧ್ಯಕ್ಷಮಾವ ನಮಗೆಲ್ಲ ಹೊಸ ಅಂಗಿಗಳನ್ನು ಹೊಲಿಸುತ್ತಿದ್ದ! ಎಲ್ಲರಿಗು ಒಂದೇ ಬಣ್ಣ, ಒಂದೇ ಥರ.

ಸೀತೂರಿನ ಯುವಕ ಸಂಘದವರದು ಪ್ರತಿ ವರ್ಷ ಗಣೇಶನ ಹಬ್ಬ. ಅವರದು “ವಿನಾಯಕ ಯುವಕ ರೈತ ಸಂಘ”. ಪೂಜೆ ಮಾತ್ರವಲ್ಲದೆ, ಒಮ್ಮೆ ಹರಿಕಥೆಯಂಥ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಿದ್ದರು. ಒಮ್ಮೆ ಆಕಡೆ ಪ್ರಸಿದ್ಧರಾಗಿದ್ದ ಸೂರ್ಳಿ ಸುಬ್ರಾಯರು, ಹರಿದಾಸರು ಬಂದಿದ್ದರು. ಹಾಸ್ಯ ಚಟಾಕಿಗಳನ್ನು ಹಾರಿಸಿ ಚೆನ್ನಾಗಿ ಹರಿಕಥೆಯನ್ನು ಹೇಳಬಲ್ಲವರು. ಅವರಿಗೆ ಸಾಥಿಯಾಗಿ (ಹಾರ್ಮೋನಿಯಂ), ಮತ್ತು ಹಾಡು ಹಾಡಲು ನಮ್ಮ ಗರ್ತಿಕೆರೆ ರಾಘಣ್ಣ ಬಂದಿದ್ದರು (ಗರ್ತಿಕೆರೆ ರಾಘವೇಂದ್ರ). ಈಗವರು ಸುಪ್ರಸಿದ್ಧ ಸುಗಮ ಸಂಗೀತ ಗಾಯಕರು.  ಅವರ ಹಾಡಿಕೆ ನನಗೆ ತುಂಬ ಇಷ್ಟ. ಐದಾರು ವರುಷದ ನಂತರ ಕುಂದಾಪುರದ ‘ರೂಪರಂಗ’ ನಾಟಕ ಸಂಸ್ಥೆಯ ನಾಟಕದಲ್ಲಿ ನಾರದನಾಗಿ ಅಭಿನಯಿಸಿ, ವಾಗ್ಗೇಯಕಾರರ ಕೃತಿಗಳ ಮಟ್ಟುಗಳನ್ನು ಕನ್ನಡದ ಹಾಡುಗಳಿಗೆ ಅನ್ವಯಿಸಿ ಅವರು ಹಾಡಿದುದನ್ನು ಕೇಳಿ ತುಂಬ ಪ್ರಭಾವಿತನಾಗಿದ್ದೆ.

ಅಂತೂ ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಯಿತು! ನಿಜ ಹೇಳಬೇಕೆಂದರೆ ನನ್ನದು ಉತ್ತಮ ಮಟ್ಟದ ಪ್ರೌಢ ಶಿಕ್ಷಣವೇನಲ್ಲ.

ಪಿ.ಯು.ಸಿ. ಕಲಿಯಲೆಂದು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಸೇರಿದೆ. ಕಲಿತು, ಏನಾದರೂ ಕೆಲಸ ಹಿಡಿಯಬೇಕೆಂಬ ಆಸೆಯಿತ್ತು.  ಪುತ್ತೂರಿನಲ್ಲಿದ್ದಾಗ, ಕನ್ನಡದೊಂದಿಗೆ ಹಿಂದಿ ಚಿತ್ರ ಗೀತೆಗಳನ್ನೂ ಕೇಳತೊಡಗಿದೆ. ಆಗಾಗ್ಗೆ ನಾನೂ ನನ್ನ ಗೆಳೆಯನೂ ಬಸ್ ಸ್ಟ್ಯಾಂಡ್ ತನಕ ವಾಕ್ ಹೋಗುತ್ತಿದ್ದೆವು. ಬಸ್ ಸ್ಟ್ಯಾಂಡ್ ಸಮೀಪದ ಜ್ಯೂಸ್ ಸೆಂಟರ್ ಒಂದರಲ್ಲಿ ಉತ್ತಮವಾದ ‘ಫ಼್ರೂಟ್ ಸಲಾಡ್’ ಮೆಲ್ಲಲೆಂದೇ ನಮ್ಮ ವಾಕ್. ಹಾದಿ ಮಧ್ಯೆ ಕೋಟ ಶಿವರಾಮ ಕಾರಂತರು ಸಂಜೆ ಹೊತ್ತು ಕುಳಿತು ಹೋಗುತ್ತಿದ್ದ ತಾಣವಿತ್ತು. ಕುಕ್ಕೆಯಲ್ಲಿ ಕಾರಂತರನ್ನು ಎಂದೋ ನೋಡಿದ್ದ ಅಸ್ಪಷ್ಟ ನೆನಪಿತ್ತಾದರೂ, ಪುತ್ತೂರಿನಲ್ಲಿ ಅವರನ್ನು ನೋಡಿದಾಗ “ಆಶ್ಚರ್ಯವದ್ ಪಶ್ಯತಿ ಕಶ್ಚಿದ್ ಏನಂ” ಎಂದು ಅನಿಸಿದ್ದರೆ ಏನೂ ಅಚ್ಚರಿ ಪಡಬೇಕಿಲ್ಲ. ಅವರ ತಲೆ ಕೂದಲು, ಮೂಗು, ಮುಖ ನೋಡಿ ಪುಸ್ತಕದಲ್ಲಿ ನೋಡಿದ ಖ್ಯಾತ ವಿಜ್ಞಾನಿ ಐನ್ಸ್ಟೈನನ ಚಿತ್ರ ನೆನಪಾಗಿತ್ತು!
ಕಾಲೇಜಿಗೆ ಹೋಗುತ್ತಿದ್ದರೂ, ನಾನು ಧರಿಸುತ್ತಿದ್ದುದು ಚಡ್ಡಿ ಅಂಗಿಯೇ. ಎನ್.ಸಿ.ಸಿಗೆ ಸೇರಿದ್ದೆ. ಆಗ ಮಾತ್ರ ಪ್ಯಾಂಟೂ ಧರಿಸುತ್ತಿದ್ದೆ. ನನ್ನಲ್ಲಿ ಪ್ಯಾಂಟುಗಳಿರಲಿಲ್ಲ. ವರ್ಷದ ಕೊನೆಗೆ ಎರಡು ಪ್ಯಾಂಟುಗಳನ್ನು ಆಸೆಪಟ್ಟು ಹೊಲಿಸ ಹಾಕಿದೆ.

ಸರಸ್ವತಿಯಮ್ಮ, ನಮ್ಮ ತಂದೆಯವರ ಹಿರಿಯಕ್ಕ. ನಮ್ಮ ದೊಡ್ಡತ್ತೆ ಚಿಕ್ಕಂದಿನಲ್ಲೇ ವಿವಾಹವಾಗಿ ಗಂಡನೊಂದಿಗೆ ಕೇರಳದ ಯಾವುದೋ ಊರಲ್ಲಿದ್ದ ಅವರು ಬಹು ಬೇಗನೆ ವಿಧವೆಯಾಗಿ ಮಕ್ಕಳಿಲ್ಲದೇ, ತಂದೆಯ ಮನೆ ಸೇರಿದರು. ತಾಯಿ ಇಲ್ಲದ ತವರು ಮನೆಯಲ್ಲಿ ಅಕ್ಷರಶಃ ಎಲ್ಲರ ತಾಯಿಯಾಗಿ ಸಲಹಿದರು. ಗಂಡನ ಕಡೆಯಿಂದ ಅವರಿಗೆ ಇದ್ದ ಆಸ್ತಿಯಿಂದ ಬರುತ್ತಿದ್ದ ಗೇಣಿ ಹಣದಿಂದಾಗಿ ಅವರದು “ವಿನಾ ದೈನ್ಯೇನ ಜೀವನಂ” ಅಗಿತ್ತು. ನಮ್ಮ ತಂದೆಯವರ ಇಡಿಯ ಸಂಸಾರಕ್ಕೆ ಮಠದ ವೃತ್ತಿಯಿಂದಾಗಿ ಊಟವೊಂದು ಹೊತ್ತು ಹೊತ್ತಿಗೆ ನಡೆಯುತ್ತಿತ್ತಾದರೂ, ಉಳಿದಂತೆ ಮಕ್ಕಳೆಲ್ಲರ ವಿದ್ಯಾಭ್ಯಾಸ, ಉಡುಗೆ ತೊಡುಗೆ, ವಿಶೇಷಕ್ಕೆಂದು ಖರ್ಚು ನಮ್ಮ ಅತ್ತೆಯ ಕೈಯಿಂದಲೇ ಆಗುತ್ತಿತ್ತು. ಹೆಚ್ಚೇನು? ನಮ್ಮ ತಂದೆಯವರ ನಾಟಕ ಕಂಪನಿಗೂ ಅತ್ತೆಯವರ ಕೊಡುಗೆಯಿತ್ತು! ಅಲ್ಲದೇ ನಮ್ಮ ದೊಡ್ಡಪ್ಪನ ತಾಯಿಯಿಲ್ಲದ ಮಗಳನ್ನು ಮಗುತನದಿಂದಲೇ ಸಾಕಿ ಒಳ್ಳೆಯ ಕಡೆಗೆ ಮದುವೆ ಮಾಡಿಕೊಟ್ಟಿದ್ದರು! ಅವರ ಕೊನೆಯ ದಿನಗಳು ಸುಖದಾಯಕವಾಗಿರಲಿಲ್ಲ “ಉಳುವವನೇ ಹೊಲದೊಡೆಯನಾಗಿ” ಅವರು ನಿಷ್ಕಂಚನರಾಗಬೇಕಾಯಿತು. ಅವರ ಔದಾರ್ಯಕ್ಕೆ ಬೆಂಬಲವಾಗಿ ಅವರ ಕೈ ಒದಗಿ ಬರಲಿಲ್ಲ. ಕೊನೆಗೊಮ್ಮೆ ಅವರು ನಮ್ಮನ್ನಗಲಿದಾಗ ಇಡಿಯ ಕುಟುಂಬ ಸ್ವಂತ ಅಮ್ಮನನ್ನೇ ಕಳೆದುಕೊಂಡ ಕಣ್ಣೀರ್ಗರೆಯಿತು. ವರ್ಷದ ಕೊನೆಗೆ ನಾನು ಹೊಲಿಯಲು ಹಾಕಿದ ಎರಡು ಪ್ಯಾಂಟುಗಳು ಅವರ ಕೊಡುಗೆಯೇ. ನಾನು ಅವುಗಳನ್ನು ತೊಡಲಾಗಲೇ ಇಲ್ಲ. ಆಗಲೇ ನನ್ನ ಪಿ.ಯು.ಸಿ. ಪರೀಕ್ಷೆಗಳು ಮುಗಿದಿದ್ದವು. ನನಗೆ ಹದಿನೈದು ವರುಷ ಪ್ರಾಯ ತುಂಬುತ್ತಿತ್ತಷ್ಟೆ. 1967ರ ಜೂನ್ ತಿಂಗಳಲ್ಲಿ ನಾನು ಸುಬ್ರಹ್ಮಣ್ಯ ಮಠಕ್ಕಾಗಿ ಸನ್ಯಾಸ ಆಶ್ರಮವನ್ನು ಸ್ವೀಕರಿಸಿದೆ.

ನೆನಪೇ ಸಂಗೀತ-೪: ಒಲ್ಲದ ಸಂನ್ಯಾಸ

ಚಿಕ್ಕಮ್ಮ-ಚಿಕ್ಕಪ್ಪನ ಜೊತೆ ಬಾಲಕ ವಿದ್ಯಾಭೂಷಣ

ಉಡುಪಿಯ ಸಮೀಪದ ಕುಂಜಾರಿನ ಯೋಗೀಂದ್ರಭಟ್ಟರಿಗೆ ತಮ್ಮ ಮಕ್ಕಳನ್ನು ಕುಕ್ಕೆಯ ಸುಬ್ರಹ್ಮಣ್ಯ ಮಠಕ್ಕೆ ಪೀಠಾಧಿಪತಿಗಳನ್ನಾಗಿ ನಿಯುಕ್ತಿಗೊಳಿಸುವುದು ಸುತಾರಾಂ ಇಷ್ಟವಿರಲಿಲ್ಲ. ಅವರೇನೂ ಸಿರಿವಂತರಲ್ಲದಿದ್ದರೂ, ಮಕ್ಕಳನ್ನು ಸಂನ್ಯಾಸಿಗಳನ್ನಾಗಿಸುವುದು ಅವರಿಗೆ ಬೇಕಿರಲಿಲ್ಲ. ಆದರೆ ಸುಬ್ರಹ್ಮಣ್ಯ ಮಠದ ಆಗಿನ ಯತಿಗಳ ಬೇಡಿಕೆಯನ್ನನುಸರಿಸಿ ಉಡುಪಿಯ ತಮ್ಮ ಗುರುಮಠದ ಯತಿಗಳ ಆದೇಶವನ್ನು ಮೀರಲೂ ಆಗದ ಸಂಕಟದ ಸ್ಥಿತಿ ಅವರಿಗೆ. ಕೊನೆಗೆ ತಮ್ಮ ಆರಾಧ್ಯ ಕುಲದೈವ ಕುಂಜಾರಿನ ದುರ್ಗಾದೇವಿಯಲ್ಲಿ ಮೊರೆಯಿಟ್ಟರಂತೆ. ಆಕೆ ಒಪ್ಪಿಗೆಯ ‘ಪುಷ್ಪಪ್ರಸಾದ’ ನೀಡಿದಳಂತೆ. ಹೀಗೆ ಸುಮಾರು ನೂರಕ್ಕೂ ಮೀರಿ ವರ್ಷಗಳ (೧೮೯೫ ನೇ ಇಸವಿ) ಹಿಂದೆ ನಮ್ಮ ಹಿರಿಯರು ಕುಕ್ಕೆಗೆ ಬಂದವರು. ಉಡುಪಿಯ ಅದಮಾರು ಮಠದಲ್ಲಿ ವೇದಾಧ್ಯಯನ ಮಾಡುತಿದ್ದ ರಾಮಚಂದ್ರನಿಗೆ (ಯೋಗೀಂದ್ರಭಟ್ಟರ ಮಗ) ಸುಬ್ರಹ್ಮಣ್ಯ ಮಠಕ್ಕೆ ಸಂನ್ಯಾಸಾಶ್ರಮವಾಯಿತು. ಆಗವರ ವಯಸ್ಸು ಹತ್ತೋ ಹದಿನೈದೋ ಇದ್ದಿರಬಹುದು. ವಿಶ್ವಜ್ಞತೀರ್ಥರೆಂದು ಅವರ ಆಶ್ರಮ ನಾಮ. ಪ್ರಾಯಕಾಲದಲ್ಲಿ ಸ್ಫುರದ್ರೂಪಿಯಾದ, ತೇಜಸ್ವೀ ತರುಣರಾಗಿದ್ದ ಅವರು, ತಮ್ಮ ಕೊನೆಗಾಲದ ತನಕವೂ ಆರೋಗ್ಯವಂತರಾಗಿದ್ದವರು. ಅವರ ಗುರುಗಳು ನಿರ್ಯಾಣಹೊಂದಲು (೧೯೦೬ ನೇ ಇಸವಿ) ವಿಶ್ವಜ್ಞತೀರ್ಥರು ಪೂರ‍್ವಾಶ್ರಮದ ತನ್ನ ಸ್ವಂತ ತಮ್ಮ ರಾಜಗೋಪಾಲನಿಗೆ ಸಂನ್ಯಾಸಾಶ್ರಮವಿತ್ತು, ವಿದ್ಯಾಸಿಂಧುತೀರ್ಥರೆಂದು ಹೆಸರಿಸಿ ಶಿಷ್ಯ ಸ್ವೀಕಾರ ಮಾಡಿದರು. ಹೀಗೆ ಸಹೋದರರಿಬ್ಬರು ಒಂದೇ ಮಠದ ಹಿರಿಯ-ಕಿರಿಯ ಸ್ವಾಮಿಗಳಾಗಿ ನಿಯುಕ್ತರಾದವರು. ಈರ್ವರೂ ವೇದಾಧ್ಯಯನ ಸಂಪನ್ನರಾಗಿ, ಪರಂಪರೆಯ ಶಾಸ್ತ್ರವಿದ್ಯಾಪಾರಂಗತರಾಗಿ, ಆಶ್ರಮೋಚಿತ ಧರ‍್ಮವನ್ನು ಚೆನ್ನಾಗಿ ಪರಿಪಾಲಿಸಿದವರಾಗಿ ಆದರ್ಶವಾಗಿ ಬಾಳಿದರು. ಕೊನೆತನಕವೂ ನಿತ್ಯ ಅಧ್ಯಯನ ಸಂಪನ್ನರಾಗಿದ್ದವರವರು. ವಿಶ್ವಜ್ಞತೀರ್ಥರು ಈ ಮಠದ ಆಧಿಪತ್ಯ ವಹಿಸಿದಾಗ ಮಠದ ಆರ್ಥಿಕ ಸ್ಥಿತಿ ತುಂಬ ಶೋಚನೀಯವಾಗಿತ್ತು. ಪ್ರತಿದಿನವೆಂಬಂತೆ ಹಳ್ಳಿಗಳಿಂದ ಭತ್ತ, ಧಾನ್ಯ ಸಂಗ್ರಹಿಸಿ, ಅನ್ನ ಬೇಯಿಸಿ, ನೈವೇದ್ಯ ಮಾಡಿ ದೇವರ ಪೂಜೆ, ಯತಿಗಳ ಭಿಕ್ಷೆ, ಪರಿವಾರದವರ, ಭಕ್ತಾದಿಗಳ ಊಟೋಪಚಾರ ನಡೆಯಬೇಕಿತ್ತು. ವಸತಿಮಠ ಈಗಲೋ, ಇನ್ನಾವಾಗಲೋ ಎನ್ನುವ ದುಸ್ಥಿತಿಯಲ್ಲಿತ್ತು. ಆಗಿನ ಕುಂಪಣಿ ಸರಕಾರದ ಜಿಲ್ಲಾ ಕಲೆಕ್ಟರನು, ಈ ಕಟ್ಟಡವನ್ನು ನೋಡಿ ಹದಿನೈದು ದಿನಗಳಲ್ಲಿ ಖಾಲಿ ಮಾಡಲು ಆದೇಶಿಸಿದ್ದನಂತೆ. ಪರಂಪರೆಯಿಂದ ಬಂದಿದ್ದ ಕುಕ್ಕೆಯ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತೆಯ ಹಕ್ಕೂ ಬ್ರಿಟಿಷ್ ಸರಕಾರದ ಮಧ್ಯಪ್ರವೇಶದಿಂದ ಮಠದ ಸ್ವಾಮಿಗಳ ಕೈತಪ್ಪಿ ಹೋಗಿತ್ತು. ಅಂಥ ವಿಷಮ ಘಳಿಗೆಯಲ್ಲಿ ಈ ಯತಿ ಸಹೋದರರ ಪ್ರವೇಶವಾಗಿತ್ತು. ಹನ್ನೆರಡು-ಹನ್ನೆರಡು ವರುಷಗಳ ಕಾಲ ಒಬ್ಬರಲ್ಲ ಒಬ್ಬರು ಎಡೆಬಿಡದೆ ದೇಶದ ಉದ್ದಗಲ ಸಂಚರಿಸಿದರಂತೆ. ಧರ‍್ಮ ಪ್ರಚಾರದೊಂದಿಗೆ ಭಕ್ತಜನರ, ಶಿಷ್ಯವರ್ಗದವರ ಹೃತ್ಪೂರ್ವಕ ಸಹಕಾರದೊಂದಿಗೆ ಮಠವನ್ನು ಎಲ್ಲ ರೀತಿಯಿಂದಲೂ ಪುನರುದ್ಧಾರಗೊಳಿಸಿದರಂತೆ! ಈ ಮಠ ಸಂಸ್ಥಾನವನ್ನು ಮತ್ತೊಮ್ಮೆ ಪ್ರಕಾಶಮಾನವಾಗಿ ಬೆಳಗುವಂತೆ ಮಾಡಿದವರಿವರು. ಅವರ ಕಾಲದಲ್ಲಿ ಈಗಿನಂತೆ ವಾಹನ ಸೌಕರ‍್ಯಗಳಿರಲಿಲ್ಲ. ಎತ್ತಿನ ಗಾಡಿಗಳಲ್ಲಿ ಅಥವಾ ನಡೆದುಕೊಂಡೇ ಸಂಚರಿಸಬೇಕಿತ್ತು. ಸಂಚರಿಸಿದರು. ಧಾರ್ಮಿಕ ಸಂಚಾರ, ಪ್ರಚಾರ, ಮಠದ ಪುನರುದ್ಧಾರದ ಕುರಿತಾದ ಅವರ ದುಡಿಮೆ ಅದು ತಪಸ್ಸೇ ಆಗಿತ್ತು! ವಿದ್ಯಾಸಿಂಧುತೀರ್ಥರಿಗೆ ತಮ್ಮ ಮಧ್ಯವಯಸ್ಸು ಮೀರಿದ ನಂತರ ಆರೋಗ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ತುಂಬ ಕಷ್ಟಪಟ್ಟುಕೊಂಡು ನಿತ್ಯಾನುಷ್ಠಾನ, ಅಧ್ಯಯನ, ಸಂಚಾರ ನಡೆಸುತ್ತಿದ್ದರು. ಈ ಉದ್ಧಾರ ಕಾರ್ಯದಲ್ಲಿ ಶ್ರೀ ಶ್ರೀಗಳವರಿಗೆ ಹೆಗೆಲೆಣೆಯಾಗಿ ನಿಂತು ಸಹಕರಿಸಿದವರು ಅವರ ಪೂರ‍್ವಾಶ್ರಮದ ಸಹೋದರರಾದ ಲಕ್ಷ್ಮೀನಾರಾಯಣ ಆಚಾರ‍್ಯರು ಮತ್ತು ಪದ್ಮನಾಭಾಚಾರ‍್ಯರು. ಇವರಿಬ್ಬರೂ ಮಠಕ್ಕಾಗಿ ತುಂಬ ಶ್ರಮಪೂರ್ಣ ಸೇವೆ ಸಲ್ಲಿಸಿದರು ಮತ್ತು ಊರಲ್ಲಿ ಒಳ್ಳೆಯ ಹೆಸರನ್ನೂ ಗಳಿಸಿದರು. ಲಕ್ಷ್ಮೀನಾರಾಯಣಾಚಾರ‍್ಯರು ಕೆಲವು ವರ್ಷಗಳ ತರುವಾಯ ತಮ್ಮ ಹುಟ್ಟೂರು ಕುಂಜಾರಿಗೇ ಹಿಂತೆರಳಿದರು.  ಪದ್ಮನಾಭಾಚಾರ‍್ಯರೇ ನಮ್ಮಪ್ಪನ ಅಪ್ಪ- ನನ್ನಜ್ಜ. ಇದಿಷ್ಟು ನಮ್ಮ ಕುಲದ ಹಿರಿಯರ ಹಿನ್ನೆಲೆ.

‘ತ್ಯಾಗ’ವೆಂಬುದು ಅತಿಶ್ರೇಷ್ಠ ಜೀವನಮೌಲ್ಯ! ಅಂತೆಯೇ ಅದು ವಿಶ್ವಮಾನ್ಯವಾದ ಜೀವನ ಮೌಲ್ಯ! ಇದನ್ನಾಧರಿಸಿ ರೂಪು ತಳೆದ ಯಾವ ಸಂಸ್ಥೆಯಾದರೂ ಜಗನ್ಮಾನ್ಯವೇ! ಯಾವ ವ್ಯಕ್ತಿಯಾದರೂ ಜಗನ್ಮಾನ್ಯನೇ! ಜಗದ್ಧಿತಕ್ಕಾಗಿ ಗಂಧದ ಕೊರಡಾಗಿ ಸವೆಯುವ ಜೀವ, ದೇವತುಲ್ಯನಲ್ಲದೆ ಮತ್ತೇನು? ಸುತ್ತಲ ಜನತೆ ಈ ಮೌಲ್ಯದ ಆದರ್ಶದಲ್ಲೇ ತಮ್ಮತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತದಷ್ಟೇ! ಅದಕ್ಕೆಂದೇ ತ್ಯಾಗದ ಸಂಕೇತವಾದ ಕಾವಿ ಕಂಡರೆ ಸಾಕು ಜನ ಮುಗಿಬೀಳುವುದು! ನೂರಾರು, ಸಾವಿರಾರು ವರುಷಗಳಿಂದ ಜಗದ ಹಿತಕ್ಕೆಂದೇ ಮೀಸಲಾದವರ ಪರಂಪರೆಯನ್ನು, ಒಂದೊಮ್ಮೆ ನಡುನಡುವೆ ಮನುಷ್ಯ ಸಹಜವಾಗಿಯೇ ಗ್ಲಾನಿಯುಂಟಾಗಿದ್ದರೂ ಜನಸಹಿಸುವುದು, ಕ್ಷಮಿಸುವುದು, ಮತ್ತೆ ಶ್ರದ್ಧಾನ್ವಿತರಾಗಿ ಸಾರಿ ಭಜಿಸಿ ಬದುಕುವುದು ವಿಸ್ಮಯಕಾರಿಯಾದರೂ, ಸತ್ಯವಾಗಿದೆ ಮತ್ತು ಸಹಜವಾದುದೇ ಆಗಿದೆ. ಏಕೆಂದರೆ ಆ ದೀರ್ಘ ಪರಂಪರೆಯ ಉದ್ದಕ್ಕೂ, ಪರಮೋದ್ದೇಶರೂಪವಾಗಿ ಹರಿದು ಬಂದಿರುವ ಶ್ರೇಷ್ಠ ಜೀವನಮೌಲ್ಯ ‘ತ್ಯಾಗವೇ’ ಅಲ್ಲವೇ? ಅದು ಎಂತಿದ್ದರೂ, ಏನಿದ್ದರೂ ‘ಅಮೃತ ಸ್ವರೂಪ’ವೆನಿಸಿದ ತ್ಯಾಗವೆಂಬ ಪರಮ ಧರ‍್ಮವೇ ಆಗಿದೆ. “ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇನ ಅಮೃತತ್ವಂ!’

ವಿಶ್ವಜ್ಞತೀರ್ಥ ಸ್ವಾಮಿಗಳು

ಕುಕ್ಕೆಯ ಸುಬ್ರಹ್ಮಣ್ಯಮಠದ ಧಾರ‍್ಮಿಕ ಪರಂಪರೆಯು ವಿಶಿಷ್ಟವಾದುದೇ. ಈ ಕ್ಷೇತ್ರದ ಅಧಿದೈವ ಸುಬ್ರಹ್ಮಣ್ಯ. ಈ ದೇವತೆಗೆ ಪ್ರಾಚೀನ ಕಾಲದಿಂದಲು ಯತಿಪೂಜೆಯ ಪರಂಪರೆ. ಹಾಗೆಂದೇ ಅಚಾರ‍್ಯ ಮಧ್ವರ ಮೊದಲು, ಇಲ್ಲಿ ಭಾಗವತ ಸಂಪ್ರದಾಯದ, ವಿಷ್ಣು ಪಂಚಾಯತನ ಪೂಜಾ ಪದ್ಧತಿಯ ಮಠವಿತ್ತು. ಇಲ್ಲಿನ ಯತಿಗಳಿಂದ ಲಕ್ಷ್ಮೀನರಸಿಂಹನ ಆರಾಧನೆ ನಡೆಯುತ್ತಿದ್ದಂತೆಯೇ, ಕ್ಷೇತ್ರಾಧಿಪನಾದ ಸುಬ್ರಹ್ಮಣ್ಯನ ಪೂಜೆಯೂ ನಡೆಯುತ್ತಿತ್ತು. ಕಾಲಾಂತರದಲ್ಲಿ ಪರಿವ್ರಾಜಕರಾದ ಯತಿಗಳಿಂದ ಮಾತ್ರವೇ ಸುಬ್ರಹ್ಮಣ್ಯನ ಪೂಜೆಯ ನಿರ್ವಹಣೆ ಅಸಾಧ್ಯವೆನಿಸಿದಾಗ, ಬ್ರಹ್ಮಚಾರಿಗಳಿಂದ ಅಥವಾ ತಾತ್ಕಾಲಿಕವಾಗಿ ಬ್ರಹ್ಮಚರ‍್ಯ ಪಾಲಿಸುವ ಸದ್‌ಗೃಹಸ್ಥರಿಂದ ಸುಬ್ರಹ್ಮಣ್ಯನ ಆರಾಧನೆ, ಇಲ್ಲಿನ ಮಠದ ಯತಿಗಳ ಮಾರ್ಗದರ್ಶನದಲ್ಲಿ ನಡೆದಿದೆ. ಇಂದಿನ ತನಕವೂ ನಡೆದುಕೊಂಡು ಬಂದಿದೆ. ಆಚಾರ‍್ಯ ಮಧ್ವರು ಈ ಕ್ಷೇತ್ರಕ್ಕೆ ಬಂದ ಮೇಲೆ ಈ ಮಠವು ಮಾಧ್ವ ಸಂಪ್ರದಾಯದ ಮಠವಾಗಿ ಪರಿವರ್ತಿತವಾಯಿತು. ಆಚಾರ‍್ಯ ಮಧ್ವರು, ಮಧ್ವಾನುಜರಾದ ವಿಷ್ಣುತೀರ್ಥರು ಹಾಗೂ ಅವರ ಶಿಷ್ಯರಾದ ಅನಿರುದ್ಧತೀರ್ಥರಂತಹ ತಪಸ್ವಿಗಳಿಂದ ಬೆಳಗಿದ ಪೀಠವಿದು! ಅನಿರುದ್ಧತೀರ್ಥರ ಕಾಲದಲ್ಲಿ ಆಗಿನ ಇಲ್ಲಿನ ಬಲ್ಲಾಳ ರಾಜನು ಈ ಕ್ಷೇತ್ರದ ದೇವಾಲಯದ ಸಮಸ್ತ ಆಡಳಿತವನ್ನು ಸ್ವಾಮಿಗಳಿಗೇ ಒಪ್ಪಿಸಿದನೆಂಬುದು ಇತಿಹಾಸ!

ಒಂದು ದಿನ ಇದ್ದಕ್ಕಿದ್ದಂತೆ ಹಿರಿಯ ಯತಿಗಳಾದ ವಿಶ್ವಜ್ಞತೀರ್ಥರಿಂದ ನನಗೆ ಕರೆ ಬಂತು! ದೊಡ್ಡ ರಜೆಯ ದಿನಗಳವು. ಎಲ್ಲೋ ಆಟವಾಡುತ್ತಿದ್ದವನು ಓಡೋಡಿ ಬಂದೆ. ವೃದ್ಧರಾದ, ಆರೋಗ್ಯ ಕ್ಷೀಣಿಸುತ್ತಿದ್ದ ಹಿರಿಯರವರು. ಸ್ವಾಮಿಗಳಂದರು- ಅಪ್ಪು! ನನ್ನದಾಯಿತು, ಇನ್ನು ಕೆಲದಿನಗಳಲ್ಲೇ ನನ್ನ ಪ್ರಾಣ ಪ್ರಯಾಣವಾಗಲಿದೆ! ನೀನು ಸ್ವಾಮಿಗಳಾಗಬೇಕು, ಸಿದ್ಧನಾಗಿರು! ನನಗೆ ಗಾಬರಿ-ದಿಗ್‌ಭ್ರಮೆ! ನಾನಲ್ಲಿಂದ ಓಡಿಹೋದೆ! ಮುಂದಿನ ಕೆಲದಿನಗಳನು ಕಳವಳದಿಂದಲೇ ಕಳೆದೆನಾದರೂ, ಮತ್ತೆ ಮರೆತವನಂತೆ ಮತ್ತೇನೋ ಆಶೆ ತುಂಬಿಕೊಂಡವನಂತೆ, ಮುಂದೆ ಕಲಿಯಬೇಕು- ಏನಾದರೂ ಉದ್ಯೋಗ ಪಡೆದು ದೂರ ಹೋಗಬೇಕು ಎಂಬಂತೆ, ಹಂಬಲದಿಂದ, ಕಾಲೇಜು ಸೇರಲೆಂದು ಸಿದ್ಧತೆ ನಡೆಸತೊಡಗಿದೆ!

ಆದರೆ ಆದಿನ ಬಂತೇ ಬಂತು! ಆ ವರ್ಷದ ನರಸಿಂಹ ಜಯಂತಿಯ ಉತ್ಸವ ಕಳೆದಂತೆ, ಪರಮಗುರುಗಳ ಆರೋಗ್ಯ ತುಂಬ ತುಂಬ ಕ್ಷೀಣಿಸಿತು! ಒಂದು ದಿನ ಮಧ್ಯಾಹ್ನ ಕಳೆಯುತ್ತಿದ್ದಂತೆ, ಜನರೆಲ್ಲರ ಹರಿಸಂಕೀರ್ತನೆಯ ಧ್ವನಿ ಮುಗಿಲು ಮುಟ್ಟುತ್ತಿದ್ದಂತೆ ಅವರು ಪರಂಧಾಮವನ್ನೈದಿದರು!

ಆದಿನ ಬೆಳಗಿನಿಂದಲೇ ಸ್ವಾಮಿಯಾಗಲು ನನ್ನ ಮನವೊಲಿಕೆಯ ಪ್ರಯತ್ನ ನಡೆದಿತ್ತು! ಕುಟುಂಬದ ಹಿರಿಯರು ಒಬ್ಬೊಬ್ಬರೇ ನನ್ನಲ್ಲಿ ಆಪ್ತತೆಯಿಂದ, ನಾನು ಬೇಸರಪಟ್ಟುಕೊಳ್ಳಬಾರದೆಂಬಂತೆ, ನಿರಾಕರಿಸಲೂಬಾರದೆಂಬಂತೆ ಸ್ವಾಮಿಯಾಗಬೇಕೆಂಬುದನ್ನು ತಿಳಿಹೇಳುತ್ತಿದ್ದರು! ಒಪ್ಪಿಸುವ ಪ್ರಯತ್ನ ನಡೆಸುತ್ತಿದ್ದರು! ಅವರಿಗೆಲ್ಲ ನನ್ನ ವೈಯಕ್ತಿಕ ಇಷ್ಟಾನಿಷ್ಟಗಳ ಕುರಿತು ಕಳಕಳಿ- ದುಗುಡ ಇದ್ದಿತ್ತೇ ಆದರೂ, ಅಷ್ಟೊಂದು ವರ್ಷಗಳಿಂದ ಮಠದ ಸಂಪರ್ಕವಿದ್ದ, ಆಶ್ರಯ ಪಡೆದಿದ್ದ, ಆ ಸಂಸ್ಥೆಯನ್ನು ಮತ್ತೊಮ್ಮೆ ಕಟ್ಟಿ ಬೆಳೆಸಲು ಹೆಗಲು ಕೊಟ್ಟಿದ್ದ ಅವರಿಗೆ ನಾನು ಸ್ವಾಮಿಗಳಾಗುವುದು ಇಷ್ಟವೇ ಆಗಿದ್ದಿತು! ಹಾಗಾದರೇನೆ ಅವರಿಗೊಂದು ‘ನೆಲೆ-ಬೆಲೆ’ ಉಳಿಯುತ್ತಿತ್ತು! ಎಲ್ಲಕ್ಕಿಂತಲು ಮಿಗಿಲಾಗಿ ನಮ್ಮಪ್ಪಯ್ಯನಿಗೆ ಯೋಗ್ಯ ‘ನೆಲೆ-ಬೆಲೆ’ಯ ವ್ಯವಸ್ಥೆ ಇದರಿಂದಾಗುತ್ತಿತ್ತು!  ವಿದ್ಯಾಸಿಂಧುತೀರ್ಥರು ನಮ್ಮ ತಂದೆಯವರನ್ನು, ಅವರ ಬೇರೆಲ್ಲ ಜೀವನಮಾರ್ಗಗಳನ್ನು ಬದಿಗೊತ್ತಿಸಿ, ಮಠದ ಸಂಪೂರ್ಣ ವ್ಯವಸ್ಥಾಪನೆಯ ಜವಾಬ್ದಾರಿಯನ್ನು ಹೊರಿಸುವ ಮುನ್ನ ಈ ಭರವಸೆಯನ್ನೇ ನೀಡಿದ್ದರು! ಅದಕ್ಕೆಂದೇ ನಮ್ಮ ತಂದೆಯವರಿಗು ನಾನು ಸ್ವಾಮಿಗಳಾಗುವುದು ಇಷ್ಟವೇ ಆಗಿತ್ತು! ಜೊತೆಗೆ ಅದೇ ಕಾಲಕ್ಕೆ ವಿದ್ಯಾಸಿಂಧುತೀರ್ಥರ ಆರೋಗ್ಯವೂ ವಿಪರೀತವಾಗಿ ಹದಗೆಟ್ಟು ಆದಷ್ಟು ಶೀಘ್ರ ಉತ್ತರಾಧಿಕಾರಿಯ ವ್ಯವಸ್ಥೆಯಾಗುವುದು ಅವರ ಅನಿವಾರ‍್ಯವಾಗಿತ್ತು! ನಾನು ನಿಜವಾಗು ತತ್ತರಿಸಿ ಹೋದೆ- ನಿರಾಕರಿಸಲೂ ಆಗದ ಒಪ್ಪಲೂ ಆಗದ ಉಭಯಸಂಕಟದಿಂದ ನಾನು ಮೌನವಾಗಿ ರೋದಿಸಿದೆ!  ಇದು ಬೇಡ- ಬೇಡ, ನಿನ್ನಿಂದಾಗದು ಎಂದು ಎಚ್ಚರಿಸಿದವರೂ ಇದ್ದರು! ಹೌದು ಅದು ನನ್ನಿಂದಾಗದು- ಅದು ನಿಜಕ್ಕು ನನ್ನ ಜೀವಕ್ಕೆ ಬೇಡದ್ದು ಎಂಬುದು ನನಗೂ ನಿಚ್ಚಳವಾಗಿ ತಿಳಿದಿತ್ತು!ವಿಶ್ವಸಿಂಧುತೀರ್ಥ ಸ್ವಾಮಿಗಳು

ಪೂರ‍್ವಾಶ್ರಮವೆಂಬುದು (ಸ್ವಾಮಿಗಳಾದವರ, ಹಿಂದಿನ ಕುಟುಂಬ ಸಂಬಂಧಿಕರನ್ನು ಪೂರ‍್ವಾಶ್ರಮದವರೆಂದು ಹೆಸರಿಸುತ್ತಾರೆ) ಮಠಗಳಿಗಂಟಿದ ಶಾಪ! ನಮ್ಮ ನಾಡಿನ ಬಹುತೇಕ ಮಠಗಳ ಪರಿಸ್ಥಿತಿಯೂ ಇದೇ ಆಗಿದೆ! ಮಠಗಳ ಅಪಾರ ಸಂಪತ್ತು, ಅಧಿಕಾರ, ಮನ್ನಣೆ, ಸೌಲಭ್ಯಗಳು ಇಂಥಹ ಸಾರ್ವಜನಿಕ ಸ್ವತ್ತುಗಳು ತಮ್ಮತಮ್ಮಲ್ಲೇ ತಮ್ಮ ಕುಟುಂಬ ವರ್ಗದಲ್ಲೇ ಮುಂದುವರಿಯಲೆಂಬ ಕೆಟ್ಟ ಆಶಯವಿಲ್ಲಿದೆ! ಜೊತೆಗೆ ಹಿರಿಯ ಸ್ವಾಮಿಗಳ ತೀರ ಕೊನೆಗಾಲದಲ್ಲಿ, ಯಾವ ಪೂರ‍್ವ ಶಿಕ್ಷಣವೂ ಇಲ್ಲದ, ಯಾವ ಮಾನಸಿಕ ಸಿದ್ಧತೆಯೂ ಇರದ ಅಬೋಧ ಬಾಲನಿಗೆ ಸಂನ್ಯಾಸ ನೀಡಲಾಗುತ್ತದೆ! ಇದರಿಂದ ಯಾವ ಅಧ್ಯಾತ್ಮ ಸಾಧನೆಯಾಗುವುದೋ, ಯಾವ ದೇವರಿಗೆ ಪ್ರೀತಿಯೋ ನಾ ಕಾಣೆ!
ಪರಂಧಾಮವನ್ನೈದಿದ ಪರಮಗುರುಗಳ ವೃಂದಾವನ ಪ್ರವೇಶ, ಆರಾಧನೆ, ಮುಂತಾದ ಕಾರ‍್ಯಗಳು ಮುಂದಿನ ದಿನಗಳಲ್ಲಿ ಸಾಂಗವಾಗಿ ನಡೆದವು.  ಜೊತೆಗೆ ಉತ್ತರಾಧಿಕಾರಿಯ ನೇಮಕದ ಪೂರ್ವಭಾವಿ ಸಿದ್ಧತೆಯೂ ನಡೆಯುತ್ತಿತ್ತು! ಸೀತೂರಿನಿಂದ ನಮ್ಮಜ್ಜ ಆರಾಧನೆಯ ಕಾರ‍್ಯಕ್ಕೆಂದು ಬಂದಿದ್ದರು. ಮೃದು ಸ್ವಭಾವದ ಪರಮ ಸಾತ್ವಿಕರವರು. ಆ ರಾತ್ರಿ ನನ್ನ ಸಮೀಪ ಬಂದರು.  ತಲೆ ನೇವರಿಸಿದರು! ಅಪ್ಪಾ! ನೀನು ಸ್ವಾಮಿಗಳಾಗಬೇಕಂತೆ!  ದೊಡ್ಡಸ್ವಾಮಿಗಳು ಹೇಳಿದರು! ದೇವರಲ್ಲಿ ಹೂ ತೆಗೆದು ನೋಡಿದರಂತೆ! ನೀನೇ ಆಗಬೇಕಂತೆ!  ನಾನು, ಅಸಮ್ಮತಿಯ ತಲೆಯಾಡಿಸಿದೆ- ಬೇಡಾ- ಬೇಡಾ ಎಂದೆ! ದುಃಖದ ಕಟ್ಟೆ ಕೋಡಿ ಹರಿಯಿತು. ಬಿಕ್ಕಿ ಬಿಕ್ಕಿ ಅತ್ತೆ! ಅವರು ಮೌನವಾಗಿ ನಿಂತಿದ್ದರು! ಆ ದಿನಗಳ ಆ ಸ್ಥಿತಿಯನ್ನು ನೆನಸಿಕೊಂಡರೆ ಇಂದಿಗೂ ನನ್ನಲ್ಲಿ ದುಗುಡ ತುಂಬಿ ಬಿಡುತ್ತದೆ! ಕಣ್ಣು ಹನಿಗೂಡುತ್ತದೆ! ನನ್ನಮ್ಮನಿಗೆ ಈ ವಿಷಯ ತಿಳಿದಿತ್ತೇ? ಅವಳು ಒಪ್ಪಿದ್ದಳೇ? ನನಗೊಂದೂ ತಿಳಿಯದು! ಅವಳು ಅಳುತ್ತಿದ್ದಳು! ಆ ಹೆಣ್ಣುಹೆಂಗಸನ್ನು ಯಾರು ಕೇಳಬೇಕು? ಅವಳ ಹೊಟ್ಟೆಯ ಸಂಕಟವನ್ನು ಯಾರು ಗಮನಿಸಬೇಕು?  ಅಪ್ಪಯ್ಯನಿಗಂತು ಮಠದ- ಗುರುಸ್ವಾಮಿಗಳ ಇಷ್ಟಾನಿಷ್ಟಗಳೇ ಹಿರಿದಾಗಿದ್ದವು. ಅವರೆಂದೂ ನನ್ನ ಅಳಲಿಗೆ ಮುಖಾಮುಖಿಯಾಗಿ ಪ್ರತಿಕ್ರಿಯಿಸಲೇ ಇಲ್ಲ! ಅವನೊಮ್ಮೆ ಸ್ವಾಮಿಯಾದರೆ ಮುಂದೆ ಸರಿಹೋಗುತ್ತಾನೆ- ಎಲ್ಲವೂ ಸರಿಹೋಗುತ್ತದೆ ಎಂಬ ಭಾವ ಅವರದು! ಆದರೆ ಯಾರಿಗು ಯಾರ ಜೀವನದೊಂದಿಗು ಚೆಲ್ಲಾಟವಾಡುವ ಹಕ್ಕಿಲ್ಲ- ಜನ್ಮ ಕೊಟ್ಟ ತಂದೆ ತಾಯಿಗು!
ಹಿರಿಯ ಸ್ವಾಮಿಗಳ ಸಿಂಹಾಸನಕ್ಕೆ ನನ್ನನ್ನು ಕರೆಸಿಕೊಂಡರು.  ಮಠದ ಮುಖಂಡರೆಲ್ಲ ಅವರೆದುರು, ಸುತ್ತ ವಿನೀತರಾಗಿ ನಿಂತಿದ್ದರು.  ನಾನು ಸಂನ್ಯಾಸಾಶ್ರಮವನ್ನು ಸ್ವೀಕರಿಸಬೇಕೆಂದು ಅಲ್ಲಿ ತಿಳಿಸಲಾಯಿತು. ಆಗದು ಅದು ನನಗೆ ಇಷ್ಟವಿಲ್ಲದ್ದು, ನನಗೆ ಭಯವಾಗುತ್ತಿದೆ- ಬೇಡವೆಂದೆ!  ಇಲ್ಲ- ಭಯ ಯಾಕೆ?  ನಾವೆಲ್ಲ ಇದ್ದೇವಲ್ಲಾ?  ಎಲ್ಲ ಸರಿಯಾಗುವುದು, ಒಪ್ಪಿಕೋ ಎಂದು ಎಲ್ಲರು ಮತ್ತೆ ಮತ್ತೆ ಸಮಾಧಾನ ಪಡಿಸಿದರು! ಮೌನವಾಗಿದ್ದೆ. ಭೂಮಿ ಅಲ್ಲೇ ಬಾಯಿ ಬಿರಿದುಕೊಳ್ಳಬಾರದೇ? ಎಂದು ನನಗಾಗ ಅನ್ನಿಸಿರಬಹುದೇನೋ? ಮತ್ತಷ್ಟು ಮೌನದ ನಂತರ, ನಾನು ಗುರುಗಳಿಗೆ ನಮಸ್ಕರಿಸಿದೆ! ಪದ್ಧತಿಯಂತೆ ಅವರು ಸಂನ್ಯಾಸಾಶ್ರಮಕ್ಕೆ ಒಪ್ಪಿಗೆಯ, ಆಶೀರ್ವಾದದ ಫಲ ಮಂತ್ರಾಕ್ಷತೆ ನೀಡಿದರು!

ಸುಬ್ರಹ್ಮಣ್ಯದ ಒಂದು ನೋಟಮತ್ತೆಲ್ಲ ಕನಸಿನಲ್ಲಿ ನಡೆದಂತೆ ನಡೆಯಿತು. ಎಲ್ಲಾ ಅಸ್ಪಷ್ಟ. ಎರಡು ದಿನಗಳ ಕಾರ‍್ಯಕ್ರಮವದು. ನನಗೆ ನಾನೇ ಶ್ರಾದ್ಧ ಮಾಡಿಕೊಂಡೆ- ‘ಆತ್ಮಶ್ರಾದ್ಧ’! ವೈರಾಗ್ಯದ ಸಂಕೇತವಾಗಿ ಮುಂಡನ ಮಾಡಿಸಿದರು. ವಿರಜಾ ಹೋಮವಾಯಿತು. ವಿಧಿಪೂರ‍್ವಕ, ಮೈಮೇಲಿನ ಸಮಸ್ತ ಒಡವೆ- ವಸ್ತ್ರ ವಿಸರ್ಜನೆಯಾಯಿತು! ಮುಂಡನ ಮಾಡಿದಾಗ ಉಳಿಸಿದ್ದ ಕೆಲವು ಕೂದಲುಗಳನ್ನು ಕಿತ್ತು ತೆಗೆಯಲಾಯಿತು. ಮಂತ್ರಪೂರ‍್ವಕ ಅಭಿಷೇಚನ ಮಾಡಿದರು.  ದಂಡ- ಕಮಂಡಲು- ಕಾವಿಶಾಟಿಯ ಧಾರಣೆ- ಗುರುಗಳಿಂದ ಪ್ರಣವಮಂತ್ರದ ಉಪದೇಶ, ನೂತನ ನಾಮಕರಣ, ಆನೆಯ ಮೇಲೆ ಮೆರವಣಿಗೆ, ಪಟ್ಟದ ದೇವರ ಮತ್ತು ಕ್ಷೇತ್ರದ ಸ್ವಾಮಿಯ ದರುಶನ; ಪೂಜೆ, ಯಾರೋ ಹೇಳಿಕೊಟ್ಟ ಮಾತುಗಳ ಉಪನ್ಯಾಸ ಮತ್ತೆ ಶಿಷ್ಯವರ್ಗದಿಂದ ಗುರುಕಾಣಿಕೆ, ಭೂರಿಭೋಜನ ಎಲ್ಲ, ಎಲ್ಲ ನಡೆಯಿತು! ಎಲ್ಲರಿಗು ಸಂಭ್ರಮ! ಯಾರೋ ಅಂದರು- ಏನು ತೇಜಸ್ಸು! ಕಳೆ! ಆಹಾ; ಮಧ್ವಾಚಾರ‍್ಯರನ್ನು ನೋಡಿದಂತನಿಸುತ್ತದೆ! ಕೇಳಿ ನಮ್ಮಪ್ಪಯ್ಯ ಹಿರಿ ಹಿರಿ ಹಿಗ್ಗಿದರು! ಗುರುಗಳಿಗಂತು ಗುರುತರ ಹೊಣೆಗಾರಿಕೆಯಿಂದ ಬಿಡುಗಡೆಗೊಂಡ ನೆಮ್ಮದಿ! ಊರಿನ ಮಹನೀಯರೊಬ್ಬರು ಚಾಕಲೇಟಿನ ಪೊಟ್ಟಣವೊಂದನ್ನು ಉಡುಗೊರೆಯಾಗಿ ಕಳಿಸಿಕೊಟ್ಟರು!  ಅದು ಕುಹಕವೇ ಆಗಿದ್ದರು, ಸರಿಯಾದ ವಿಮರ್ಶೆಯೇ ಆಗಿತ್ತು!

ಎರಡು ದಿನಗಳಿಂದ ಊಟ, ತಿಂಡಿ, ನಿದ್ರೆ, ವಿಶ್ರ್ರಾಂತಿ ಸರಿಯಾಗಿರದೇ ಬಳಲಿದ್ದೆ! ದೇಹ- ಮನಸ್ಸು ಎರಡೂ ತುಂಬ ಆಯಾಸಗೊಂಡಿದ್ದವು. ರಾತ್ರಿ ಚಾಪೆಯಲ್ಲಿ ಮುದುಡಿ ಮಲಗಿದವನಿಗೆ ಚೆನ್ನಾದ ನಿದ್ರೆ!

ವಿದ್ಯಾಭೂಷಣ ನೆನಪಸಂಗೀತ:ಕನಸಿನ ತುಂಬ ಮೋಹನ ರಾಗ

ನಮ್ಮಜ್ಜ (ವಿಶ್ವಜ್ಞ ತೀರ್ಥರು) ಸ್ವಾಮಿಗಳಾಗುವ  ಮೊದಲು, ಆಗಿನ ಗುರುಗಳು, ಅವರ ಪೂರ್ವಾಶ್ರಮದ ಬಂಧುವೊಬ್ಬರನ್ನು (ಇನ್ನೂ ಬಾಲಕ) ಸಂನ್ಯಾಸಕ್ಕೆಂದು ಆರಿಸಿದ್ದರಂತೆ.  ವಿಷಯ ತಿಳಿದ ಆ ಹುಡುಗ ರಾತೋರಾತ್ರಿ ಬಿಸಿಲೆಯ ಮೂಲಕ ಘಟ್ಟ ಹತ್ತಿ ಪರಾರಿ! ಆಗೆಲ್ಲ ಮೈಸೂರರಸರ ಕಡೆಯಿಂದ ಉತ್ಸವ ಸಂದರ್ಭ ‘ಬಾರಾಹಜಾರ್’ ಸಂತರ್ಪಣೆಗೆಂದು ಬರುತ್ತಿದ್ದ ದಿನಸಿ ಸಾಮಾನಿನ ಗಾಡಿಗಳು ಬಿಸಿಲೆಯ ಮೂಲಕ ಹಿಂತಿರುಗುತ್ತಿದ್ದಾಗ, ಎತ್ತಿನ ಗಾಡಿಯ ಅಡಿಭಾಗದಲ್ಲೇ- ಘಟ್ಟದ ನಿರ್ಜನದಲ್ಲಿ ರಕ್ಷಣೆಯೂ, ಮರೆಯೂ ಏಕಕಾಲದಲ್ಲಿ ಘಟಿಸಲೆಂದು ನಡೆದು ದೂರ ಪಯಣಿಸಿ, ಮುಂದಿನ ಆಶ್ರಮ ವ್ಯವಸ್ಥೆ ಬೇರೆಯವರಿಗೆ ಆದಾಗಲೇ ಹಿಂತಿರುಗಿದನಂತೆ! ಸರಿ ಹೊತ್ತಿಗೆ ಸರಿಯಾದ ನಿರ್ಣಯ ಕೈಗೊಂಡು ಪಾರಾದ! ಆದರೆ ನಮ್ಮ ಮುತ್ತಜ್ಜ ಯೋಗೇಂದ್ರಭಟ್ಟರದು ಅತಿ ದಾಕ್ಷಿಣ್ಯದ ಸ್ವಭಾವ- ಅಂತೆಯೇ ಮಕ್ಕಳಿಬ್ಬರು ಸಂನ್ಯಾಸಿಗಳಾದರು! ಈ ಯೋಗೀಂದ್ರಭಟ್ಟನದೂ (ನನ್ನ ಪೂರ್ವಾಶ್ರಮದ ಹೆಸರು ‘ಯೋಗೀಂದ್ರ’ನೆಂದಿತ್ತು) ಅದೇ ಕತೆಯಾಗಿ ವಿದ್ಯಾಭೂಷಣತೀರ್ಥರಾಗ ಬೇಕಾಯಿತು!

ಮರುದಿನ ಬೆಳಗಿನಿಂದಲೇ ಪೂರ್ತಿ ಬೇರೆಯೇ ಆದ ಜೀವನ ಪ್ರಪಂಚ! ಯತ್ಯಾಶ್ರಮಕ್ಕುಚಿತವಾದ ಎಲ್ಲ ದಿನ ಚರ್ಯೆಗಳನ್ನು ಹೊಸದಾಗಿ ರೂಢಿಸಿಕೊಳ್ಳಬೇಕು. ಆಗ ನನಗಿನ್ನು ಹದಿನೈದು ತುಂಬಿದೆ. ನಸುಕಿನಲ್ಲಿ ಬೇಗನೇ ಏಳಬೇಕು. ಸಂಪ್ರದಾಯದಂತೆ ದೇವರ ಪ್ರಾರ್ಥನೆ. ಪ್ರಾತರ್ವಿಧಿ.  ಸ್ನಾನ ಸಂಧ್ಯಾವಂದನೆ- ಜಪತರ್ಪಣ. ಪೂಜೆ ಆರಾಧನೆ. ಬೆಳಗಿನ ಉಪಹಾರವಿಲ್ಲ. ಮಧ್ಯಾಹ್ನ ಗುರುಗಳೊಂದಿಗೇ ಕುಳಿತು ಭಿಕ್ಷಾ ಸ್ವೀಕಾರ. ಮತ್ತೆ ಆಶ್ರಮೋಚಿತವಾದ ಗ್ರಂಥಗಳನ್ನು ಅಧ್ಯಯನ ಮಾಡುವ, ಓದುವ, ಮಠದ ಆರಾಧ್ಯ ದೇವರ ಪೂಜಾವಿಧಾನಗಳನ್ನು ಅಭ್ಯಸಿಸುವ, ಮತ್ತೆ ಆಸಕ್ತಿಯಿಂದ ಮಾಡುವ ಚಟುವಟಿಕೆಗಳಲ್ಲಿ ತೊಡಗಬೇಕು.  ಆಶ್ಚರ್ಯವೆಂದರೆ ಸಂನ್ಯಾಸ ಸ್ವೀಕಾರದ ಮರುದಿನದಿಂದಲೇ ನಾನು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳತೊಡಗಿದೆ! ಈ ಮಧ್ಯೆ ಮಠಕ್ಕೆ ಬರುವ ಭಕ್ತವರ್ಗವನ್ನು, ಹಿತೈಷಿಗಳನ್ನು ಪರಿಚಯಿಸಿಕೊಳ್ಳಬೇಕು. ಅವರ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಬೇಕು. ಆಶೀರ್ವದಿಸಬೇಕು.  ಎಷ್ಟೋ ಸಲ ಇವೆಲ್ಲ ತುಂಬ ಕೃತಕವೆನಿಸುತ್ತಿತ್ತು. ಹಾಗಿದ್ದರು ಇಂತೆಲ್ಲ ಚಟುವಟಿಕೆಗಳಲ್ಲಿ ನಿಧನಿಧಾನವಾಗಿ ನನ್ನನ್ನು ನಾನು ಒಂದಾಗಿಸಿಕೊಂಡೆ!

ಎರಡು ಮೂರು ದಿವಸಗಳಾಗಿತ್ತೇನೋ! ಪುತ್ತೂರಿನ ಸಮೀಪ ಶಾಂತಿಗೋಡಿನಿಂದ ಆರೇಳು ಯುವಕರು ನನ್ನನ್ನು ನೋಡಲೆಂದು ಬಂದರು.  ಅವರು ನಮ್ಮ ಮಠದ ಶಿಷ್ಯವರ್ಗದವರೇ. ಅವರಲ್ಲೊಬ್ಬ ಅನಂತಕೃಷ್ಣ ಹೆಬ್ಬಾರರು. ನಾನು ಪುತ್ತೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ವಸತಿಗಾಗಿ ಒಂದೇ ಕೊಠಡಿಯಲ್ಲಿದ್ದವರು. ಮತ್ತೊಬ್ಬ ಅವರ ತಮ್ಮ ಸುಬ್ರಹ್ಮಣ್ಯ. ಜೊತೆಗೆ ಲಕ್ಷ್ಮೀಶ ತೋಲ್ಪಾಡಿ, ಮತ್ತೆ ಕೆಲವರು. ಎಲ್ಲರು ಚಿನ್ಮಯ, ಶಿವಾನಂದ, ರಾಮಕೃಷ ಪರಮಹಂಸರನ್ನು ಓದಿಕೊಂಡವರು. ಆಧ್ಯಾತ್ಮದ ಒಲವುಳ್ಳವರಾಗಿದ್ದರು. ನನಗೆ ನಮಸ್ಕರಿಸಿ ಮುಂದೆ ಕುಳಿತುಕೊಂಡರು. ನಾನೋ  ಸಂಕೋಚದ ಮುದ್ದೆಯಾಗಿದ್ದೆ! ಆ ದಿನಗಳಲ್ಲಿ ನನ್ನಲ್ಲಿಗೆ ಯಾರು ಬಂದರೂ ನನ್ನ ಪರಿಸ್ಥಿತಿ ಹೀಗೆಯೇ ಆಗಿರುತ್ತಿತ್ತು! ಮಾತೇ ಹೊರಡುತ್ತಿರಲಿಲ್ಲ. ಸುಮ್ಮನೆ ನಗುವಿನ ವಿನಿಮಯ! ಎಷ್ಟೋ ಹೊತ್ತು ಹೀಗೇ ನಡೆಯಿತು! ಕಡೆಗೊಮ್ಮೆ ಒಮ್ಮೆಲೇ ನಾವೆಲ್ಲರೂ ದೊಡ್ಡದಾಗಿ ನಕ್ಕು ಬಿಟ್ಟೆವು! ಅಂತೂ ನಾನು ಅವರೊಂದಿಗೆ ಮಾತನಾಡಿದೆ! ಅವರು ನನ್ನನ್ನು ಮಾತನಾಡುವಂತೆ ಮಾಡಿದ್ದರು! ಯಾಕೋ ಮನಸ್ಸು ಹಗುರಗೊಂಡಿತು. ಅವರನ್ನು ಆಶೀರ್ವದಿಸಿ ಬೀಳ್ಕೊಂಡೆ!

ಆ ವರ್ಷದ ಚಾತುರ್ಮಾಸ್ಯ ವೃತ ಆರಂಭವಾಗಿತ್ತು. ಯತಿಯಾದವನು ಒಂದು ಅವಧಿಯ ಚಾತುರ್ಮಾಸ್ಯ ವೃತ ಕಳೆಯದೆ ಆಚಾರ‍್ಯಕರಾರ್ಚಿತ ವಿಗ್ರಹಗಳನ್ನು ಮುಟ್ಟಿ ಪೂಜಿಸುವಂತಿಲ್ಲ. ಈ ಅವಧಿಯಲ್ಲಿ ಪೂಜಾವಿಧಿಗಳನ್ನು, ಸಂಸ್ಕೃತ  ಭಾಷೆಯ ಮೊದಲ ಪಾಠಗಳನ್ನು ಕಲಿಸಲೆಂದು ಉಡುಪಿಯಿಂದ ಕಡಿಯಾಳಿಯ ಲಕ್ಷೀನಾರಾಯಣ ಉಪಾಧ್ಯಾಯರನ್ನು ಕರೆಸಿಕೊಳ್ಳಲಾಗಿತ್ತು. ಗಡ್ಡ ಜಟೆಗಳನ್ನು ಬಿಟ್ಟಿದ್ದ, ಗಿಡ್ದಗಿದ್ದ, ಬಲು ಆಚಾರವಂತರಾದ ಅವರು ಅಗಸ್ತ್ಯ ಮುನಿಗಳಂತಿದ್ದರು! ಚೆನ್ನಾಗಿ ತಿಳಿದುಕೊಂಡಿದ್ದರು. ಪಾಠ ಪ್ರಾರಂಭವಾಯಿತು. ಶಾಂತಿಗೋಡಿನ ಯುವ ಮಿತ್ರರಾದ ಲಕ್ಷೀಶ ತೋಲ್ಪಾಡಿ, ಸುಬ್ರಹ್ಮಣ್ಯ ಇಬ್ಬರೂ ಸತೀರ್ಥರಾಗಿ ನನ್ನ ಜೊತೆಗೂಡಿದರು! ಹೊಸ ಹುಮ್ಮಸ್ಸಿನಿಂದ ಕಲಿಯತೊಡಗಿದೆವು! ಒಂದು ತಿಂಗಳಷ್ಟೇ ನಮ್ಮೊಡನಿದ್ದ ಉಪಾಧ್ಯಾಯರು ಉಡುಪಿಗೆ ಹಿಂತಿರುಗಿದರು. ಪಾಠದೊಂದಿಗೆ ಅಗತ್ಯ ಶಿಷ್ಟಾಚಾರಗಳನ್ನು ತಿಳಿಹೇಳಿದ್ದ ಉಪಾಧ್ಯಾಯರು ಕೊನೆಯಲ್ಲಿ, ನನಗೆ ಮರೆಯದೆ ಕಿವಿಮಾತನ್ನು ಹೇಳಿದ್ದರು! ‘ಯತಿಗಳಿಗೆ ಕಚ್ಚೆ ಗಟ್ಟಿಯಿರಬೇಕು’! ಎಂಬುದದು. ಮೌನವಾಗಿ ನಕ್ಕು ತಲೆಯಾಡಿಸಿದ್ದೆ! ಅವರು ಹೊರಟರೆ ನನ್ನ ಕಣ್ಣುಗಳು ಹನಿಗೂಡಿದ್ದವು. ಯಾಕೋ ಅವರು ತುಂಬ ಆತ್ಮೀಯರಾಗಿಬಿಟ್ಟಿದ್ದರು!

ಮತ್ತೆರಡೇ ದಿನಗಳಲ್ಲಿ ಉಡುಪಿಯಿಂದ ವಿದ್ವಾಂಸರಾದ ಲಕ್ಷ್ಮೀನಾರಾಯಣ ಕೊಡಂಚರು ನಮಗೆ ಸಂಸ್ಕೃತಪಾಠ ಹೇಳಲೆಂದೇ ಆಗಮಿಸಿದರು. ಸುಮಧ್ವವಿಜಯ, ಮಹಾಭಾರತತಾತ್ಪರ‍್ಯನಿರ್ಣಯಗಳಂತಹ ಅಗತ್ಯ ಗ್ರಂಥಗಳ ಪಾಠವನ್ನು ಅವರು ಮಾಡಿದರು. ಸುಮಾರು ಎರಡು ವರ್ಷಗಳಿಗೂ ಮಿಕ್ಕಿ ಅವರು ನಮ್ಮಲ್ಲಿದ್ದವರು. ಸಾತ್ವಿಕ, ಸಜ್ಜನ, ಶ್ರದ್ಧಾವಂತರಾದ ಅವರ ಜೊತೆ ಕಳೆದ ದಿನಗಳು ಅವಿಸ್ಮರಣೀಯವೇ! ನಾವು ಕಲೆತು ಅಧ್ಯಯನ ಮಾಡುತ್ತಿದ್ದೆವು. ಜಿಜ್ಞಾಸೆಯಿಂದ ಪ್ರಶ್ನಿಸುತ್ತಿದ್ದೆವು. ಕೆಲವೊಮ್ಮೆ ತುಂಟತನದಿಂದ ಕುತರ್ಕಗಳನ್ನೂ ಮಾಡುತ್ತಿದ್ದೆವು! ಒಪ್ಪಿಗೆಯಾಗದ ವಿಷಯಗಳ ಕುರಿತು ಚರ್ಚಿಸುತ್ತಲೂ ಇದ್ದೆವು. ಗುರುಗಳು ತಿಳಿದಂತೆ ಪ್ರಾಮಾಣಿಕವಾಗಿ ಉತ್ತರಿಸುತ್ತಿದ್ದರು. ಅಂತೂ ಯಾವುದೇ ವಿಷಯವನ್ನು ಪ್ರಶ್ನಿಸುವ ಪ್ರವೃತ್ತಿಯನ್ನು ತಡವಾಗಿಯಾದರೂ ರೂಢಿಸಿಕೊಂಡೆ!

ಸಂಜೆಯ ಹೊತ್ತು ತೋಲ್ಪಾಡಿ-ಹೆಬ್ಬಾರ ಗೆಳೆಯರಿಬ್ಬರೂ ಊರಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗಿ ಬರುತ್ತಿದ್ದರು. ಆಗಲೂ ಧರಿಸುತ್ತಿದ್ದುದು ಶುಭ್ರವಾದ ಎರಡು ಉಡುಪಿ ಬೈರಾಸುಗಳನ್ನು! ಊರಲ್ಲಿ ಮೊದಲೇ ನಡೆಯುತ್ತಿದ್ದ ಸಂಘದ ಚಟುವಟಿಕೆಗಳನ್ನು ಮತ್ತೊಮ್ಮೆ ಸುದೃಢವಾಗಿ ರೂಪಿಸುವಲ್ಲಿ ಊರವರ ಜೊತೆ ಈ ಗೆಳೆಯರಿಬ್ಬರೂ ಸೇರಿಕೊಂಡರು! ಇವರ ಪ್ರಭಾವದಿಂದ ನಾನೂ ಬೆಳಗಿನ ಸ್ನಾನಕ್ಕೆ ಮೊದಲು ಸೂರ‍್ಯನಮಸ್ಕಾರ, ಯೋಗ, ಪ್ರಾಣಾಯಾಮಗಳನ್ನು ಲಘು ವ್ಯಾಯಾಮಗಳನ್ನು ಮಾಡುವುದನ್ನು ರೂಢಿಸಿಕೊಂಡೆ! ಮಠಕ್ಕೆ ತರಿಸುತ್ತಿದ್ದ ಪ್ರಜಾವಾಣಿ, ಮಂಗಳೂರಿನ ನವಭಾರತ ವೃತ್ತಪತ್ರಿಕೆಗಳ ಜೊತೆಗೆ ವಿಕ್ರಮ, ಉತ್ಥಾನದಂತಹ ಪತ್ರಿಕೆಗಳನ್ನೂ ತರಿಸಿ ಓದಲಾರಂಭಿಸಿದೆ. ರಾಷ್ಟ್ರ-ಸಮಾಜದ ಕುರಿತಾದ ಹಲವು ಬಗೆಯ ದೃಷ್ಟಿಕೋನಗಳ ಪರಿಚಯವಾಗತೊಡಗಿತು. ಕೆಲವೊಮ್ಮೆ ಅಲ್ಲಿರುತ್ತಿದ್ದ ರಾಷ್ಟ್ರದ ಕುರಿತಾದ ಉದ್ವೇಗಕಾರಿ ವಿಚಾರಗಳನ್ನು ಓದಿ ಪರವಶನಾಗಿ ಬಿಡುತ್ತಿದ್ದೆ! ಸಂಘದ ವಿವಿಧ ರೀತಿಯ ಪ್ರಚಾರಕರು ಶಾಖೆಗೆಂದು ಬರುತ್ತಿದ್ದವರು, ನನ್ನಲ್ಲಿಗು ಬರುತ್ತಿದ್ದರು. ವಿಚಾರವಿನಿಮಯದಲ್ಲಿ, ನನ್ನೆಲ್ಲ ಮಿತಿಯೊಂದಿಗೆ ನನ್ನ ಭಾಗವಹಿಸುವಿಕೆಯೂ ಇತ್ತು. ಒಳ್ಳೆಯ ಪುಸ್ತಕಗಳನ್ನು ತರಿಸಿ ಓದುವುದನ್ನು ಅಭ್ಯಾಸ ಮಾಡಿಕೊಂಡೆ.

ಲಕ್ಷ್ಮೀಶ ತೋಲ್ಪಾಡಿ ಮತ್ತು ನಾನು ತುಂಬ ಆಪ್ತರಾದೆವು. ನಮ್ಮ ಗೆಳೆತನವೆಂದರೆ ‘ಗಳಸ್ಯಕಂಠಸ್ಯ’ ಎಂಬಂತೆ! ನಾವು ಆಡದ ವಿಷಯವಿಲ್ಲ. ಮಾಡದ ವಿಚಾರಗಳಿಲ್ಲ. ಎಷ್ಟೋ ವಿಚಾರಗಳು ನನಗೆ ಒಪ್ಪಿತವಾಗುತ್ತಿರಲಿಲ್ಲವಾದರೂ, ಅವನ ಅಧ್ಯಯನಶೀಲತೆ, ಪ್ರಖರ ವೈಚಾರಿಕತೆಗಳಿಂದ ನಾನು ಪ್ರಭಾವಿತನಾಗಿದ್ದೆ. ಮುಕ್ತವಾಗಿ ಚರ್ಚಿಸುತ್ತಿದ್ದೆವು.  ಈಗಲೂ ನಾವು ಒಳ್ಳೆಯ ಗೆಳೆಯರು!

ನಮ್ಮ ತಂದೆ ಗೋವಿಂದಾಚಾರ‍್ಯರು ಮಠದ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರಾದುದರಿಂದ, ಮಠಕ್ಕೆ ಹೊಂದಿಕೊಂಡಂತಿರುತ್ತಿದ್ದ, ಸಣ್ಣ ಮನೆಯೊಂದರಲ್ಲಿ ಅವರ ವಾಸವಿತ್ತು. ಅಲ್ಲಿ ನನ್ನ ಪೂರ್ವಾಶ್ರಮದ ಬಂಧುಗಳೆಲ್ಲ ಇರುತ್ತಿದ್ದರು, ಬಂದು ಹೋಗಿ ಮಾಡುತ್ತಿದ್ದರು. ಅಂತೆಯೇ ಪೂರ್ವಾಶ್ರಮದ ಬಂಧುಗಳ ಸಂಪರ್ಕ ಮತ್ತು ಅವರ ಸಹಕಾರವೂ ನನಗೆ ಇದ್ದೇ ಇತ್ತು!

ಹೀಗೆ ಆಶ್ರಮೋಚಿತ ಸತ್ಕರ್ಮಗಳಲ್ಲಿ ನಾನು ತೊಡಗಿಕೊಂಡಿದ್ದರು, ಎಲ್ಲ ಇದ್ದರೂ ಏನೂ ಇಲ್ಲವೆಂಬ ಭಾವ ಮನದ ಮೂಲೆಯಲ್ಲಿ ಕಾಡುತ್ತಲೇ  ಇರುತ್ತಿತ್ತು. ಯಾಕೋ ಏನೋ ಇದು ನನ್ನದಲ್ಲ, ನಾನು ಹೀಗಿರಬೇಕಾದವನಲ್ಲ ಎಂದೇ ಕೆಲವೊಮ್ಮೆ ಅನ್ನಿಸಿಬಿಡುತ್ತಿತ್ತು. ರಾತ್ರಿಯ ಪೂಜಾರಾಧನೆ, ಫಲಹಾರ ಮುಗಿಯುತ್ತಿದ್ದಂತೆ, ಮಠದ, ದೇವಸ್ಥಾನದ ವಿದ್ಯುತ್ ಸಂಪರ್ಕ ನಿಲ್ಲಿಸಲಾಗುತ್ತಿತ್ತು. ಗವ್ವನೆ ಕತ್ತಲೆ ಊರಿಡೀ ಆವರಿಸಿ ಬಿಡುತ್ತಿತ್ತು. ಜನರೆಲ್ಲ  ಬಹು ಬೇಗನೆ ಮಲಗಿ ನಿದ್ರಿಸಿಬಿಡುತ್ತಿದ್ದರು! ನಾನು ಕೂಡ! ಕೆಲವೊಮ್ಮೆ ಆ ನೀರವರಾತ್ರಿಯಲ್ಲಿ, ಮಲಗುವಲ್ಲಿ ಸಿಂಹಾಸನದ ಬಳಿ ಪ್ರತಿ ಸಂಜೆ ಹಚ್ಚಿಟ್ಟಿರುತ್ತಿದ್ದ ನಂದಾದೀಪದ ಮಂದ ಬೆಳಕಲ್ಲಿ, ಮನದ ತುಂಬ ಭಾವ ಒತ್ತರಿಸಿ ಬಂದಾಗ, ನಮ್ಮಪ್ಪ ಚಿಕ್ಕಂದಿನಲ್ಲಿ ಹೇಳಿಕೊಟ್ಟಿದ್ದ, ದೇವರ ಮುಂದೆ ಹಾಡಿಸುತ್ತಿದ್ದ ದಾಸರಪದಗಳನ್ನು, ಅವುಗಳ ತುಣುಕುಗಳನ್ನು ಮೆಲ್ಲನೆ ಹಾಡಿಕೊಳ್ಳುತ್ತಿದ್ದೆ!

ಕಂಡು ಕಂಡು ನೀಯೆನ್ನ ಕೈ ಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ- ಹರೇ-

ಶ್ರುತಿತಾಳಗಳ ಹಂಗಿಲ್ಲ! ಎದೆಯ ಬಡಿತ ಕೇಳಿಸುತ್ತಿತ್ತು! ರಾತ್ರಿಯ ಮೌನ ಶ್ರುತಿಯೇ ಕರುಣರಸ ಸುರಿಸುವ ಆ ಶಹನಾ ರಾಗದ ಹಾಡಿಗೆ ಸಾಕ್ಷಿಯಾಗಿರುತ್ತಿತ್ತು!

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ
ಎಂದೆಂದಿಗು ನಿನ್ನ ನಂಬಿದೆನೋ ಕೃಷ್ಣ ||

ಭಾವಗಂಗೆ ಕಣ್ಣಲ್ಲಿ ಹನಿಗೂಡಿದರೆ, ಹರಿದರೆ ಮತ್ತೈದು ನಿಮಿಷಗಳಲ್ಲಿ ನನಗೆ ಗಾಢನಿದ್ರೆ! ಕನಸಿನ ತುಂಬ ಮೋಹನ ರಾಗದ ಕೆಂಪುಕೆಂಪು! ಬದುಕಿನುದ್ದಕ್ಕು   ಮತ್ತೆಮತ್ತೆ ತಂಪೆರದದ್ದು ಅದೇ ಸಂಗೀತ- ಮತ್ತದೇ ನಿದ್ರೆ! ‘ಸ್ವಾಪಂ ಪ್ರಾಪಯತಿ ಶ್ರಮಾಪಹೃತಯೇ’.

ನಮ್ಮಜ್ಜ ಪದ್ಮನಾಭಾಚಾರ‍್ಯರು ಶ್ರಮಜೀವಿ. ಸ್ವಲ್ಪ ಕಪ್ಪಗಿದ್ದ, ತೆಳ್ಳಗಿನ ದೇಹದ ಅವರು ಆರೋಗ್ಯವಂತರು. ಮೊದಲ ಪತ್ನಿ- ನಮ್ಮ ದೊಡ್ಡಮ್ಮ ಬೇಗನೇ ತೀರಿಕೊಂಡಾಗ ಎರಡನೇ ವಿವಾಹವಾಗಿದ್ದರು. ಮಾತು ಕಡಿಮೆ. ಅವರಿರುವಷ್ಟು ದಿನವೂ ಅವರ ಹೆಸರಲ್ಲೆ ಮಠದ ವ್ಯವಹಾರ ನಡೆಯುತ್ತಿತ್ತು. ಇಂಥಲ್ಲಿ ಸಹಿ ಹಾಕೆಂದರೆ ಹಾಕುತ್ತಿದ್ದವರವರು! ಬೆಳಗಿನಜಾವ ಬೇಗನೆ ಎದ್ದು ಸ್ನಾನ ಸಂಧ್ಯಾನ ಪೂಜೆ ಮುಗಿಸಿ, ಉಪಹಾರ ಸೇವಿಸಿ ಕಚ್ಚೆ ಮೇಲಕ್ಕೆತ್ತಿ ಕಟ್ಟಿ, ಕೈಯ್ಯಲ್ಲೊಂದು ಕತ್ತಿ, ಕೊಡೆ ಹಿಡಿದು ಮಠದ ತೋಟದೆಡೆ ನಡೆದಾರು. ಕೆಲಸಗಾರರ ಜೊತೆಗೆ ತಾವೂ ಕೈಜೋಡಿಸಿ, ಹುಲ್ಲು ಹೆರೆದು, ಅಡಿಕೆ ಹೆಕ್ಕಿ ಸ್ವತಃ ದುಡಿದಾರು! ನಡು ಹೊತ್ತಿಗೆ ಹಿಂತಿರುಗಿ, ಕೈಕಾಲು ತೊಳೆದು, ಮಡಿಯುಟ್ಟು ಮಠದ ದೇವರ ಪೂಜೆ ನಡೆಯುವಲ್ಲಿಗೆ ಬಂದು ಪೂಜಾ ಕಾರ‍್ಯ ಪೂರ್ತಿ ಮುಗಿಯುವತನಕ ಅವರೊಬ್ಬರೆ ವೇದ ಸೂಕ್ತಗಳ ಪಾರಾಯಣ ಮಾಡಿದರೆ, ಎಲ್ಲರೂ ಮೌನವಾಗಿ ಆಲಿಸುವವರೇ! ‘ಕೇಶೀಸೂಕ್ತ’ದ ಆ ವೇದ ಪಾರಾಯಣ ಅದೆಷ್ಟು ಚಂದ!  ಮಧುರ-ಸ್ಪಷ್ಟ! ನಾನು ತುಂಬ ಇಷ್ಟಪಟ್ಟು ಕೇಳುತ್ತಿದ್ದ ಅವರ ಆ ವೇದಪಠಣ ಇಷ್ಟು ವರುಷಗಳ ಬಳಿಕವೂ ‘ಕರ್ಣೇಷು ಅಟತಿ’. ಮಧ್ಯಾಹ್ನದ ಊಟ- ಲಘು ವಿಶ್ರಾಂತಿಯ ನಂತರ ಸಂಜೆ ತನಕ ಮತ್ತೆ ಅದೇ ಕೃಷಿಕಾಯಕ! ನಾವು ಭಾರ್ಗವ ಗೋತ್ರದವರು. ನಮ್ಮಜ್ಜನಿಗೆ ಅಂತೆಯೇ ಕೋಪ ಜಾಸ್ತಿ! ಚಿಕ್ಕಂದಿನಲ್ಲಿ ನಾನಾಗಲೀ, ನನ್ನ ಅಣ್ಣನಾಗಲಿ ಅವರೆದುರು ಜಪ-ಸಂಧ್ಯಾವಂದನೆ ಮಾಡುತ್ತಲೇ ಇರಲ್ಲಿಲ್ಲ! ಏನಾದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆವು.  ಏಕೆಂದರೆ ಕೆಲವೊಮ್ಮೆ ಅವರು ನಮ್ಮ ಜಪ ಪರೀಕ್ಷೆ ಮಾಡುವುದಿತ್ತು.  ಸರಿಯಾಗಿ ಒಪ್ಪಿಸದಿದ್ದರೆ ಸಿಟ್ಟಿನಲ್ಲಿ ಹೊಡೆದೇಬಿಡುತ್ತಿದ್ದರು. ಹೆಚ್ಚು ಬಯಸಿದವರಲ್ಲ. ಮಠದ ಸೇವೆಗೆಂದು ಬಂದರು, ಅದನ್ನು ಚೆನ್ನಾಗಿ ನಿರ್ವಹಿಸಿದರು, ಅಷ್ಟೇ! ನಾನು ಸ್ವಾಮಿಯಾದ ಮೂರು ವರ್ಷಗಳಲ್ಲಿ ಅವರು ತೀರಿಕೊಂಡರು. ಅಂತ್ಯಕಾಲದಲ್ಲಿ ನನ್ನನ್ನು ತುಂಬ ನೆನೆಸಿಕೊಂಡರಂತೆ, ನೋಡಬೇಕೆಂದು ಹಂಬಲಿಸಿದರಂತೆ. ನಾನಾಗ ಉಡುಪಿಯಲ್ಲಿದ್ದೆ. ಚಾತುರ್ಮಾಸ್ಯದ ಅವಧಿಯಾದುದರಿಂದ ಬರಲಾಗಲಿಲ್ಲ. ಅವರನ್ನು ಮತ್ತೆ ನೋಡಲಾಗಲಿಲ್ಲ!

ಕುಕ್ಕೆಯಲ್ಲಿ ಮಠದ ದೇವಸ್ಥಾನದ ಪ್ರಧಾನ ದೇವರ ಪೂಜೆಗೆ ಸ್ವಾಮಿಗಳು, ಅರ್ಚಕರು ಮೂರು ಹೊತ್ತು ನದಿಯಲ್ಲಿ ಮುಳುಗಿ ಸ್ನಾನಮಾಡಬೇಕು. ನದಿಗಳಲ್ಲಿ, ಪುಷ್ಕರಣಿಗಳಲ್ಲಿ ಅವಗಾಹನ ಸ್ನಾನವೆನ್ನುವುದು ನಮ್ಮ ನಾಡಿನ ಬಾಹ್ಯ ಸದಾಚಾರಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ದೇವಸ್ಥಾನದ ಎದುರು ಸದಾ ಹರಿಯುವ ಹೊಳೆಯಲ್ಲಿ ಸ್ನಾನಮಾಡಿ ಮಡಿಯಲ್ಲಿ ಮಂದಿರಕ್ಕೆ ಬಂದು ದೇವರ ಪೂಜೆ ಕೈಂಕರ‍್ಯ ಮಾಡಬೇಕು. ನೂರಾರು ವರ್ಷಗಳಿಂದಲು ಈ ಪದ್ಧತಿ ನಡೆದು ಬಂದಿದೆ.  ಜೊತೆಗೆ ಇಲ್ಲಿ ‘ಕಲ್ಲುಮಡಿ’ಯೆಂಬ ಒಂದು ಮಡಿ ಪ್ರಚಾರವಿದೆ! ಇದು ಮಠ-ದೇವಸ್ಥಾನ ಎರಡೂ ಕಡೆ ರೂಢಿಯಲ್ಲಿದೆ. ಪೂಜೆಗೆಂದು ಮಿಂದು, ಮಂದಿರದ ತನಕ ಅಂಗಳದಲ್ಲಿ ಹಾಸಿದ ಕಲ್ಲುಗಳನ್ನು ಮೆಟ್ಟಿ ನಡೆವಾಗ ಒಂದೇ ಕಲ್ಲಿನಲ್ಲಿ ಮೈಲಿಗೆಯವನೊಬ್ಬ, ಅಥವಾ ಅಂತಹ ಯಾವುದೇ ವಸ್ತುವಿದ್ದರೂ ಮಡಿಗೆ ಮಿಂದವನು ಮೈಲಿಗೆಯವನಾಗಬಲ್ಲನು! ಅವನು ಮತ್ತೊಮ್ಮೆ ನದಿಯಲ್ಲಿ ಮಿಂದುಬರಬೇಕು. ಒಮ್ಮೊಮ್ಮೆ ಇದೆಲ್ಲ ಅತಿಯಾಯಿತೋ ಅನಿಸಿದರೂ, ಇದಕ್ಕೊಂದು ಉದ್ದೇಶವಿರಬಹುದೂ ಎಂದೆನಿಸುತ್ತದೆ. ಅತಿ ಎನ್ನಿಸುವಂತಹುದು ಮಿತಿಯ ರಕ್ಷಣೆಗೂ ಇರಬಹುದು! ಏನಿದ್ದರೂ, ಪ್ರತಿದಿನವೂ ಜನಜಾತ್ರೆಯೇ ಇರುವ ಈಗಿನ ದಿನಗಳಲ್ಲಿ ಇಂತಹ ಆಚರಣೆಗಳು ತೀರ ಕಷ್ಟಸಾಧ್ಯ. ಮಂದಿರದ ಎದುರಿಗಿರುವ ಸಣ್ಣ ನದಿಯ ಹೆಸರು ‘ದರ್ಪಣತೀರ್ಥ’. ‘ಕನ್ನಡಿ ಹೊಳೆ’- ‘ಕನ್ನಟಿ ಹಾರ್-ಸಾರ್’ ಎಂದೂ ಸ್ಥಳೀಯವಾಗಿ ಕರೆಯುವರು. ದೇವರ ಪೂಜೆಗೆಂದಿರುವ ‘ದರ್ಪಣ’ ಮತ್ತು ‘ಅಕ್ಷಯಪಾತ್ರೆ’ ಈ ಹೊಳೆಯಲ್ಲಿ ತೇಲಿಬಂತೆಂದೂ, ಅದಕ್ಕಾಗಿ ಈ ಹೆಸರೆಂದೂ ಕತೆಯಿರುವುದಾದರೂ, ನಿಜದಲ್ಲಿ ಕನ್ನಡಿಯಂತೆ ಸ್ವಚ್ಛ ನೀರು ಸದಾ ಜುಳುಜುಳು ಹರಿಯುತ್ತಿದ್ದ ಸುಂದರ ಉಪನದಿಯದು! ಊರ ವಿಪರೀತ ಜನ ಸಂದಣಿಯ, ಕೊಳಕು ವಿಸರ್ಜನೆಯ ಕಾರಣಕ್ಕೆ, ನದಿಯ ನೀರನ್ನು ತೋಟಗಳಿಗೆ ಉಪಯೋಗಿಸಲೆಂದು ಮೇಲ್ಭಾಗದಲ್ಲಿ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವುದರ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ನದಿ ತನ್ನ ಹೆಸರನ್ನು ಉಳಿಸಿಕೊಂಡಿಲ್ಲ! ನನ್ನ ಆಶ್ರಮದ ಹೊಸತರಲ್ಲಿ, ಅದೂ ಮಳೆಗಾಲವಾದುದರಿಂದ ನದಿಯಲ್ಲಿ ನೀರು ಸಮೃದ್ಧ, ಸ್ಫಟಿಕ ಸ್ವಚ್ಛ! ಪೂಜೆಗೆಂದು ನಾನೂ ಅಲ್ಲೇ ಅವಗಾಹನ ಸ್ನಾನ ಮಾಡುತ್ತಿದ್ದೆ. ನನಗದು ಇಷ್ಟವೇ ಆಗುತ್ತಿತ್ತು. ಅದರಲ್ಲು ಪ್ರತಿಸಂಜೆ ಬೇಗನೇ ನದಿಯಲ್ಲಿ ಮಿಂದು ಪಂಡಿತಾಚಾರ‍್ಯರ ಶಿವಸ್ತುತಿಯನ್ನು ಪಠಿಸುತ್ತಾ ಬರುವುದೆಂದರೇ ಏನೋ ಉತ್ಸಾಹ! ‘ಸ್ಫುಟಂ ಸ್ಫಟಿಕಸಪ್ರಭಂ’- ‘ನಮಃ ಶಿವ ಶಿವಾ ಶಿವಾ ಶಿವ ಶಿವಾರ್ಧಕೃಂತಾ ಶಿವಂ’ ಎಂಬ ನುಡಿಗಳನ್ನು ಕೇಣ್ಮೆಯ ‘ರೇವತಿ’ ರಾಗದೊಂದಿಗೆ ನನ್ನಷ್ಟಕ್ಕೆ ಹಾಡಿಕೊಂಡು ಬಂದೆನೆಂದರೆ ಉತ್ಸಾಹ ಪುಟಿದೇಳುವ ಸಮಯ! ಮತ್ತೆ ‘ಕಲ್ಲು ಮಡಿ’ ನಾನೂ ಆಚರಿಸಬೇಕಿತ್ತು. ಮಡಿ ಕಾಪಾಡಲು ಕಲ್ಲಿಂದ ಕಲ್ಲಿಗೆ ಹಾರುವ ಕಾಯಕದಲ್ಲಿ ತೊಡಗಿದರೆ ದಾಸರ ‘ಮಡಿ ಮಡಿ ಮಡಿಯೆಂದು  ಅಡಿಗಡಿಗ್ಹಾರುತಿ’ ಹಾಡು ನೆನಪಿಗೆ ಬರುತ್ತಿತ್ತು! ಬ್ರಾಹ್ಮಣರಿಗೆ ಹಾರುವರೆಂದು ಕರೆಯುವುದು ಇದಕ್ಕೇ ಏನೋ ಎಂಬ ಶಬ್ಧನಿಷ್ಪತ್ತಿಚಿಂತನೆಯೊಂದಿಗೆ, ಈ ಮಡಿ ಹಾರಾಟ ನೋಡಿ ಯಾರಾದರೂ ಸಣ್ಣಗೆ ನಗುತಿರಬಹುದೇ? ಎಂಬ ಸಂಕೋಚವೂ ನನಗಿರುತ್ತಿತ್ತು!

ವಿದ್ಯಾಭೂಷಣ ನೆನಪ ಸಂಗೀತ:‘ಶುದ್ಧನಾಗಿರಬೇಕು ಕರಣತ್ರಯಗಳಲಿ’

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ

ಕಲ್ಯಾಣಿ ರಾಗದಲ್ಲಿ; ದಾಸರ ಈ ಹಾಡನ್ನು ಹಾಡುವಾಗಲೆಲ್ಲ ನನ್ನ ಮೈ ನಾನೇ ಮುಟ್ಟಿ ನೋಡಿಕೊಳ್ಳುವೆ; ನಡೆ-ನುಡಿ-ಆಲೋಚನೆಯಲ್ಲಿ ಪರಿಶುದ್ಧಿ ಜೀವ ಜಾತದ ಜೀವನಾದರ್ಶ! ಯತಿಯಾದವನಿಗೆ, ಅಧ್ಯಾತ್ಮಸಾಧನೆಗೆಂದೇ ಮುಡಿಪಾದವನಿಗೆ, ಲೋಕಕ್ಕೆ ಆದರ್ಶನೂ- ಮಾರ್ಗದರ್ಶಕನೂ ಆಗಬೇಕೆಂಬವನಿಗೆ ಈ ತೆರದ ಪರಿಶುದ್ಧಿ ಇರಬೇಕಾದುದೇ ತಾನೇ? ಇಷ್ಟಲ್ಲದೆ ಹಣ-ಹೆಣ್ಣು-ಹೆಸರು ಈ ಮೂರಕ್ಕೆ ಸೋಲದವನಾದರೂ ಯಾರು? ಕನಿಷ್ಟ ಒಂದಲ್ಲ ಒಂದಕ್ಕೆ ಅವನು ಶರಣನೇ!  ಕಾಮಿನೀಮರುಳ ಯತಿಗಳೊಬ್ಬರು, ಹಾಗಲ್ಲದ ನಿಷ್ಠ ಯತಿಗಳೊಬ್ಬರನ್ನು ಜರೆಯುವುದಿತ್ತು- ನಾನು ಹೆಣ್ಹುಚ್ಚ! ನೀವು?…. ಹೆಸರ‍್ಹುಚ್ಚ! ಮತ್ತೆ- ಹಣದ್ಹುಚ್ಚ! ಅಲ್ಲವೆನ್ನುವ ಧೈರ್ಯವಾದರೂ ಯಾರಿಗೆ? ಅದರಲ್ಲು ಹಣ ಬಿಡಬಹುದು, ಹೆಣ್ಣನ್ನೂ ತ್ಯಜಿಸಬಹುದು! ಆದರೆ ಹೆಸರನ್ನು? ಊಹೂಂ!- ಮುನಿಗಳು ಸಹಿತಾಗಿ ಮೋಸಹೋದರು ಇದಕೆ- ನಾಮದ ಬೇಲಿಯ ದಾಟಲು ಬಲು ಕಷ್ಟ ಕಷ್ಟ! ಪರಿಶುದ್ಧಿಯ ಪಥದಲ್ಲಿ ನಿರಂತರ ಮನದ ಶೋಧನೆ- ಅನಿವಾರ್ಯಸಾಧನೆ!

ಮನವ ಶೋಧಿಸಬೇಕು ನಿಚ್ಚ
ಅನುದಿನ ಮಾಡುವ ಪಾಪಪುಣ್ಯದ ವೆಚ್ಚ

ನಮ್ಮ ನೆರವಿಗೆ ಬರುವಂತಹುದು ‘ಭಗವನ್ನಿವೇದನೆಯ ತಂತ್ರ’. ನಮ್ಮೆಲ್ಲ ಒಳಹೊರಗನ್ನು ಮೊದಲೇ ಬಲ್ಲ ಭಗವತ್ತತ್ವದಲ್ಲಿ ದೌರ್ಬಲ್ಯವನ್ನು ಏನೂ ಉಳಿಯದಂತೆ ಬಿನ್ನವಿಸಿಕೊಳ್ಳುವುದೊಂದೇ ನಿತ್ಯಮಂತ್ರ!  ಹಾಗಿದ್ದರೂ, ಮತ್ತೆ ಏನಿದ್ದರೂ ಜೀವಕ್ಕೆ ಮುಗಿಯದ ಚಿಂತೆ, ಬಿಡದ ಚಡಪಡಿಕೆ!  ಯಾರನ್ನು ಮೆಚ್ಚಿಸಲೆಂದು ತಾನಿಂಥ ಮುಖವಾಡ ಧರಿಸಿದೆನೋ, ಅಂತಹ ಪ್ರಪಂಚಕ್ಕೆ ತನ್ನ ನಿಜದ ಒಳಗನ್ನು ತೆರೆದಿಡದೆ ಬರಿಯ ದೈವದೆದುರು ತೆರೆದಿಟ್ಟೆವೆಂದರೂ ಜೀವಕ್ಕೆ ಶಾಂತಿಯಿರದು!  ಸುಲಭನೋ ಹರಿ! – ಆದರೆ ಜಗತ್ತು ಸುಲಭವಲ್ಲ! ಮತ್ತು ಸತ್ಯವೆಂಬುದು ನಿಷ್ಠುರವಾದುದು! ಒಂದೊಮ್ಮೆ ಇಡಿಯ ಪ್ರಪಂಚದೆದುರು ಬಿಚ್ಚಿಡಲಾಗದಿದ್ದರೂ, ಅಂತಹ ಪ್ರಪಂಚದ ಪ್ರತಿನಿಧಿಯೆನಿಸುವ ಒಂದೇ ಒಂದು ಸಹೃದಯ ಆತ್ಮದೊಂದಿಗಾದರು ತನ್ನದನ್ನು ತೋಡಿಕೊಳ್ಳಬೇಕು – ತೋಡಿಕೊಳ್ಳಲೇ ಬೇಕು!  ಅದು ಜೀವ – ಅದು ಜೀವನ!  ಜಾತಕದಲ್ಲೋ, ಹಣೆಯ ಬರಹದಲ್ಲೋ ಯತಿ ಜೀವನ ತನ್ನದಲ್ಲವೆಂದೋ ಬರೆದಿದ್ದರೆ – ಮತ್ತದು ನಿಜಜೀವನದಲ್ಲಿ ಸತ್ಯವೇ ಆಗಿದ್ದರೆ – ನಾನದನ್ನು ನನ್ನ ದೈವದಲ್ಲಿ, ಸುತ್ತಲ ಜಗತ್ತಿನಲ್ಲಿ ಒಪ್ಪಿಸಿಕೊಳ್ಳಲೇಬೇಕು!

ಹೊರಗೆ ಮಿಂದು ಒಳಗೆ ಮೀಯದವರ ಕಂಡು |ಶ್ರೀ ಶ್ರೀ 108 ಭಂಡಾರಕೇರಿ ಮಠದ ವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರು ಶ್ರೀ ಶ್ರೀ 108 ಸುಬ್ರಹ್ಮಣ್ಯ ಮಠದ ಶ್ರೀ ವಿಶ್ವಜ್ಞತೀರ್ಥ ಶ್ರೀಪಾದಂಗಳವರು ಮತ್ತು ಶ್ರೀ ಶ್ರೀ 108 ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು
ಬೆರಗಾಗಿ ನಗುತಿದ್ದ ನಮ್ಮ ಪುರಂದರವಿಠಲ ||

ವೇದವ್ಯಾಸರು ಮಹಾಭಾರತವನ್ನು ರಚಿಸಿದವರು- ಭಾಗವತವನ್ನು, ಹದಿನೆಂಟು ಪುರಾಣಗಳನ್ನು, ವಾಙ್ಮಯ ಸಮೂಹವನ್ನೆ ನೀಡಿದವರು- ಜಗತ್ತಿಗೇ ಬೆಳಕಾದವರು!  ಮತ್ತೆ ದೇವರೇ ಆದವರು!  ಆದರೆ ಅವರೆಂದೂ ತನ್ನ ಹುಟ್ಟನ್ನು- ತನ್ನ ಇಡಿಯ ಬದುಕನ್ನು ಮುಚ್ಚಿಟ್ಟವರಲ್ಲ! ಸತ್ಯಕಾಮನಂತೆ ಅವರ ಜೀವನ, ತೆರೆದ ಪುಸ್ತಕ!

ಗುರುಗಳಾದ ವಿದ್ಯಾಸಿಂಧುತೀರ್ಥರು, ಪರಮಗುರುಗಳಾದ ವಿಶ್ವಜ್ಞರು, ಇಬ್ಬರೂ ಪೂರ್ವಾಶ್ರಮದಲ್ಲಿ ನನ್ನ ಅಜ್ಜಂದಿರೆ.  ಅವರು ಖಾಸಾ ಅಣ್ಣತಮ್ಮಂದಿರು.  ಆದರೆ ಸ್ವಭಾವದಲ್ಲಿ ವಿರುದ್ಧರು!  ಒಳ್ಳೆಯ ಸಂಸ್ಕೃತ ವಿದ್ವಾಂಸರಾಗಿದ್ದ ವಿದ್ಯಾಸಿಂಧುತೀರ್ಥರು, ಆಗಿನ ಕಾಲದ ಬಹುದೊಡ್ಡ ವಿದ್ವಾಂಸರೂ, ವಿದ್ವಜ್ಜನಪ್ರಿಯರೂ, ಬಹು ಉದಾರರೂ ಆಗಿದ್ದ ಉತ್ತರಾದಿಮಠದ ಸತ್ಯಧ್ಯಾನತೀರ್ಥರಲ್ಲಿ ಸುಧಾಂತ ಅಧ್ಯಯನ ಮಾಡಿದವರು.  ಇವರ ಸಾತ್ವಿಕ ಹಾಗು ಸರಳ ಸಜ್ಜನಿಕೆ ಸತ್ಯಧ್ಯಾನರಿಗೆ ಪ್ರಿಯವೂ ಆಗಿತ್ತಂತೆ!  ವಿದ್ವಾಂಸರಾಗಿದ್ದ ಮಾಹುಲಿ ಗೋಪಾಲಾಚಾರ್ಯರು ಇವರ ಸತೀರ್ಥರಾಗಿದ್ದು, ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದವರಂತೆ! ಗೋಪಾಲಾಚಾರ್ಯರು ಆದಿನಗಳನ್ನು ನನ್ನಲ್ಲಿ ಸ್ಮರಿಸಿಕೊಂಡಿದ್ದರು.  ವಿದ್ಯಾಸಿಂಧುತೀರ್ಥರು ನಿತ್ಯಕರ್ಮಾನುಷ್ಠಾನ, ಪೂಜಾರಾಧನೆಯೊಂದಿಗೆ, ಸದಾ ಗೀತಾಧ್ಯಯನ, ಪಾರಾಯಣಗಳಿಂದ ದಿನಗಳನ್ನು ಸಾರ್ಥಕವಾಗಿ ಕಳೆಯುತ್ತಿದ್ದವರು.  ಹಣವನ್ನು ಹಿಡಿತದಿಂದ ಖರ್ಚು ಮಾಡುವವರಾದರೂ, ಯಾವುದೂ ಅತಿಯೂ, ವ್ಯರ್ಥವೂ ಆಗದಂತೆ ಮಠ ಸಂಪ್ರದಾಯದ ರಕ್ಷಣೆಯಲ್ಲಿ, ಶಿಸ್ತು- ಸಂಯಮದಿಂದ ತೊಡಗಿಸಿಕೊಂಡವರು!  ಪಕ್ಕದ ದೇವಸ್ಥಾನದೊಂದಿಗಿನ ಸಂಬಂಧ ನಿತ್ಯ ಕೋರ್ಟು-ಕಛೇರಿಯ, ವ್ಯಾಜ್ಯದ ಕಿರಿಕಿರಿ-ರಗಳೆ ಮನಸ್ಸಿನ ನೆಮ್ಮದಿ ಕೆಡಿಸುತ್ತಿತ್ತಾದರೂ, ಪರಿಪೂರ್ಣ ದಕ್ಷತೆಯಿಂದ ಅದನ್ನೆದುರಿಸಿ ಮಠದ ಹಿತವನ್ನು ಕಾಪಾಡಿದವರವರು! ಸತ್ಯಪರರು! ನಿಷ್ಠುರರು!  ಯೌವನದಲ್ಲಿ ಸುಂದರಾಂಗರೂ- ಆದರೆ ಸರಳರು!  ದೇಹದಲ್ಲಿ ಶಕ್ತಿಯಿರುವ ತನಕವೂ ನಾಡಿನುದ್ದಗಲಕ್ಕೂ ಸಂಚರಿಸಿ, ಧರ್ಮಪ್ರಚಾರದೊಂದಿಗೆ ಮಠದ ಪುನಃ ಸ್ಥಾಪನೆಗೆ ಪರಿಶ್ರಮಿಸಿದರು.  ಪ್ರಾಯ ಸಂದಂತೆ, ಸ್ವಲ್ಪ ಅಕಾಲಿಕವಾಗಿಯೇ ವಾತಬಾಧೆಯಿಂದ ಬಹಳವಾಗಿಯೇ ಬಳಲಿದರು.  ನಿತ್ಯಾನುಷ್ಠಾನ, ದೇವರ ಪೂಜಾದಿಗಳಿಗೂ ಅಡ್ಡಿಯಾಗುವಷ್ಟು ಅನಾರೋಗ್ಯ ಅವರನ್ನು ಬಾಧಿಸಿತು.  ಅದಕ್ಕೆಂದೇ ನನ್ನ ಸಂನ್ಯಾಸಾಶ್ರಮ ಪ್ರವೇಶ ತ್ವರೆಯಿಂದ ನಡೆಯಬೇಕಾಯಿತು!

ನನ್ನೊಡನೆ ಸತೀರ್ಥನಾಗಿ ಬಂದ ಗೆಳೆಯ ಲಕ್ಷ್ಮೀಶ ತೋಲ್ಪಾಡಿ, ಪ್ರತಿರಾತ್ರಿ ಗುರುಗಳಾದ ವಿದ್ಯಾಸಿಂಧುತೀರ್ಥರ ಬಳಿಗೆ ಅವರ ಸೇವೆ ಮಾಡಲೆಂದು ಹೋಗುತ್ತಿದ್ದ.  ಅವರು ರಾತ್ರಿಯ ಲಘು ಉಪಹಾರ ಸೇವಿಸಿದ ಬಳಿಕ, ಮಲಗುವ ಮುಂಚೆ ಅವರ ಕೈಕಾಲುಗಳಿಗೆ- ಬೆನ್ನಿಗೆ ಎಣ್ಣೆ ಹಚ್ಚಿ, ಒತ್ತಿ ಚೆನ್ನಾಗಿ ಶುಶ್ರೂಷೆ ಮಾಡಿ ಮಲಗಿಸಿ ಬರುತ್ತಿದ್ದ!  ತುಂಬ ಹೊತ್ತು ನಡೆಯುತ್ತಿತ್ತು ಈ ಕಾಯಕ.  ಅಷ್ಟು ಹೊತ್ತು ಅವರಿಬ್ಬರೂ ‘ಕಾವ್ಯಶಾಸ್ತ್ರ ವಿನೋದ’ದಿಂದ ಕಾಲ ಕಳೆಯುತ್ತಿದ್ದರು!  ಆಗ ಅವರಿಬ್ಬರ ವಯಸಿನ ಅಂತರ ಬಹುಶಃ ಐವತ್ತು!  ಆದರೆ ಅವರಿಬ್ಬರು ಪರಸ್ಪರ ಅತ್ಯಂತ ಆಪ್ತರಾಗಿಬಿಟ್ಟಿದ್ದರು!  ಗುರುಗಳಿಗೆ ಲಕ್ಷ್ಮೀಶನಲ್ಲಿ ಎನೋ ವಿಶ್ವಾಸ!  ನನಗೋ ಸಣ್ಣಗೆ ಹೊಟ್ಟೆಯುರಿ!  ಸ್ವತಃ ಪಟ್ಟ ಶಿಷ್ಯನೇ ಬಳಿಯಿರುವಾಗ ಇವನಲ್ಲೇನು ಇವರಿಗೆ? ಎಂದು!  ಆದರೆ ಅದು ಅವರೀರ್ವರ ಜನ್ಮಜನ್ಮದ ಋಣಾನುಬಂಧವಾಗಿತ್ತು!  ಗುರುಗಳಿಗೆ ಅವರ ಪೂರ್ವಾಶ್ರಮದ ಬಂಧುಗಳಿದ್ದರು- ಸೇವೆಗೆಂದೇ ಜೊತೆಗಿದ್ದವರಿದ್ದರು!  ಆದರೆ ಅವರಾರಲ್ಲೂ ಗುರುಗಳಿಗೆ ತನ್ನ ಅಂತರಂಗವನ್ನು ತೋಡಿಕೊಳ್ಳಲಾಗಿರಲಿಲ್ಲ.  ತೋಡಿಕೊಳ್ಳಬೇಕಿತ್ತು!  ಒಬ್ಬ ಸಹೃದಯಿ, ವಿಶ್ವಾಸಿಗನಲ್ಲಿ ಎಲ್ಲವನ್ನೂ ಬಿಚ್ಚಿಕೊಳ್ಳಬೇಕಿತ್ತು.  ಅದು ಅವರಿಗೆ ಲಕ್ಷ್ಮೀಶನಲ್ಲಿ ಸಿದ್ಧಿಸಿತ್ತು!

ಸ್ನಿಗ್ಧ ಜನ ಸಂವಿಭಕ್ತಂ ಹಿ ದುಃಖಂ ಸಹ್ಯವೇದನಂ ಭವತಿ!
ಅವರು ಅದೇನು ಮಾತನಾಡಿಕೊಂಡರೋ ನನಗೆ ತಿಳಿಯದು.  ನಾನೂ ಗೆಳೆಯನಲ್ಲಿ ಕೇಳಲಿಲ್ಲ.  ಅವನಿಷ್ಟೇ ಹೇಳಿದ್ದ- ಅವರು ನನ್ನಲ್ಲಿ ಎಲ್ಲವನ್ನು ಮನಬಿಚ್ಚಿ ಹೇಳಿಬಿಟ್ಟರು- ಅಷ್ಟೇ!

ಪಲಿಮಾರು ಶ್ರೀ ವಿದ್ಯಾಮಾನ್ಯತೀರ್ಥರ ಜತೆ ಅಧ್ಯಯನನಿರತ ಶ್ರೀ ವಿಶ್ವೇಶತೀರ್ಥರುಗುರುಗಳಿಗೆ ವೈರಾಗ್ಯ ಎಂದೂ ಪ್ರದರ್ಶನದ ಸರಕಾಗಿರಲಿಲ್ಲ!  ಅವರೆಂದೂ ಯಾರನ್ನೂ ಸುಳ್ಳುಸುಳ್ಳೇ ಮೆಚ್ಚಿಸುತ್ತಿರಲಿಲ್ಲ!  ಎಂದೂ ಅವರಿಗೆ ಏಕಾಂತವೇ ಪ್ರಿಯ.  ಅನಗತ್ಯ ಜನಜಂಗುಳಿಯಲ್ಲಿ ಬೆರೆಯುವುದು ಅಸಹನೀಯ.  ಅವರಾಯಿತು- ಅವರ ಗೀತಾನುಸಂಧಾನವಾಯಿತು.  ಪರಂಪರೆಯಲ್ಲಿ ಅಪಾರ ಗೌರವ ಅವರಿಗೆ.  ಮಾಡುವ ಸತ್ಕರ್ಮಗಳಲ್ಲಿ ತುಳುಕುವ ಶ್ರದ್ಧೆ!  ಹಸುಗಳೆಂದರೆ ಪ್ರೀತಿ- ಹಸುವಿನಷ್ಟೇ ಮುಗ್ಧತೆ, ಸಾಧುತನ!  ಆಡಂಬರ, ಥಳಕು ಫಳಕು ಸೇರುತ್ತಿರಲಿಲ್ಲ- ಶುಚಿಯಾದ ಸರಳ ವಸ್ತ್ರಧಾರಿ- ಮನಸೂ ಅಷ್ಟೇ!  ಆದರೆ ಸಂನ್ಯಾಸ, ಮಠಾಧಿಪತ್ಯ ಅವರನ್ನು ನಜ್ಜುಗುಜ್ಜಾಗಿಸಿತ್ತು- ಅಸಹಜವಾಗಿ ಹಣ್ಣಾಗಿಸಿತ್ತು!

ನನ್ನ ಬದುಕಿನಲ್ಲಿ, ವಿಶೇಷವಾಗಿ ಬಂದವರು ವಿದ್ಯಾ ಗುರುಗಳಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು!  ಅವರಾದರೋ ಪೂರ್ವಾಶ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶಿಷ್ಯವರ್ಗಕ್ಕೆ ಸೇರಿದವರೇ, ತಮ್ಮ ಎಂಟನೆಯ ವಯಸ್ಸಿನಲ್ಲೇ ಸಂನ್ಯಾಸಾಶ್ರಮಕ್ಕೆ ಕಾಲಿಟ್ಟವರು!  ಆಶ್ರಮ ಸ್ವೀಕಾರಕ್ಕೆಂದು ಹಂಪೆಯ ಚಕ್ರತೀರ್ಥಕ್ಕೆ ತೆರಳುವ ಮುನ್ನ, ಅವರ ಹಿರಿಯರು, ಸುಬ್ರಹ್ಮಣ್ಯ ಮಠದ ವಿಶ್ವಜ್ಞತೀರ್ಥರಿಂದ ಆಶೀರ್ವಾದ ಮಂತ್ರಾಕ್ಷತೆ ಕೊಡಿಸಲೆಂದು ಕರೆತಂದಿದ್ದರಂತೆ.  ಇನ್ನೂ ಎಳೆಯ ಬಾಲಕನನ್ನು ಕಂಡು ವಿಶ್ವಜ್ಞರು ಮನಕರಗಿ, ಏನು ಹುಚ್ಚೇ ನಿಮಗೆ?  ಮಗುವಿಗೆ ಆಶ್ರಮ ಕೊಡಿಸುತ್ತೀರಲ್ಲ!? ಎಂದು ಗದರಿಸಿದ್ದರಂತೆ!  ಆದರೆ ಸಂನ್ಯಾಸಾಶ್ರಮವಾಯಿತು!  ವೆಂಕಟರಮಣ ವಿಶ್ವೇಶರಾದರು!  ಶ್ರೇಷ್ಠ ವಿದ್ವಾಂಸರೂ, ತಪಸ್ವಿಗಳೂ ಆಗಿದ್ದ ಭಂಡಾರಕೇರಿಯ ವಿದ್ಯಾಮಾನ್ಯರಿಂದ ವಿದ್ಯಾಭ್ಯಾಸ, ತರಬೇತಿ ಪಡೆದು, ತಮ್ಮ ಚತುರಮತಿ, ಘನವಿದ್ವತ್ತೆ, ಸದಾಚಾರ, ಅದ್ಭುತ ಸಂಘಟನಾ ಚಾತುರ್ಯ, ಸಾಮಾಜಿಕ ಕಳಕಳಿ, ಸತತ ಚಟುವಟಿಕೆಗಳಿಂದ ಇಡಿಯ ಮಾಧ್ವ ಸಮಾಜವಲ್ಲದೆ, ನಾಡಿನುದ್ದಗಲ ಅಪಾರ ಕೀರ್ತಿಯೊಂದಿಗೆ ಮೆರೆದಾಗ, ಅದೇ ವಿಶ್ವಜ್ಞರೇ ಅಂದಿದ್ದರಂತೆ- ಮಧ್ವಾನುಜರಾದ ವಿಷ್ಣುತೀರ್ಥರೆ ವಿಶ್ವೇಶರಾಗಿ ಮತ್ತೆ ಬಂದಂತಿದೆ ಎಂದು!

ನನ್ನ ಆಶ್ರಮವಾದ ಕೆಲವೇ ತಿಂಗಳಲ್ಲಿ (೧೯೬೮ರ ಜನವರಿ ೧೮) ಅವರು ಎರಡನೇ ಸಲ ಉಡುಪಿಯ ಕೃಷ್ಣಪೂಜೆಯ ಪರ್ಯಾಯ ಪೀಠವನ್ನೇರಿದರು!  ಈ ಕುರಿತಾದ ಭಾರೀ ಪೂರ್ವಭಾವೀ ಸಿದ್ಧತೆಗಳು ನಡೆಯುತ್ತಿರುವುದರ ಸುದ್ದಿ ನಮ್ಮಲ್ಲಿಗು ಬರುತ್ತಿತ್ತು.  ಅವರ ಮಿಂಚಿನ ಸಂಚಾರ, ನಾಡಿನಾದ್ಯಂತ ಅವರಿಗೆ ನಡೆಯುತ್ತಿದ್ದ ಸ್ವಾಗತ ಸಭೆ ಸಮಾರಂಭಗಳು, ಅವರ ಪ್ರವಚನ ವೈಖರಿ, ಎಲ್ಲವು ವಿಶೇಷ ಸುದ್ದಿಯಲ್ಲಿದ್ದವು!  ಅದೇಕೋ ವಿಚಿತ್ರ ಕುತೂಹಲ ಸಂಭ್ರಮ ನನಗು, ಸಂಬಧಪಟ್ಟವರೆಲ್ಲರಿಗು!  ನೀವು ಇವರಲ್ಲಿ ಶಾಸ್ತ್ರಾಧ್ಯಯನ ಮಾಡಬೇಕು – ಇವರ ಗರಡಿಯಲ್ಲಿ ಪಳಗಬೇಕು- ಇವರಂತೆ ನೀವೂ ಮುಂದಕ್ಕೆ ಬೆಳಗಬೇಕು! ಎಲ್ಲರೂ ನನಗೆ ಹೇಳುವವರೇ!

ಪರ್ಯಾಯಕ್ಕೆ ಕೆಲವು ದಿನಗಳ ಮೊದಲು ಶ್ರೀಪಾದರು ಪದ್ಧತಿಯಂತೆ ಕುಕ್ಕೆಗು ಆಗಮಿಸಿದರು.  ಕ್ಷೇತ್ರದ ಸುಬ್ರಹ್ಮಣ್ಯನ, ಆಚಾರ್ಯ ಕರಾರ್ಚಿತ ಸಂಪುಟ ನರಸಿಂಹನ ದರ್ಶನ ಪಡೆದರು.  ಶ್ರೀಮಠದಲ್ಲಿ ಪೂಜೆ, ಭಿಕ್ಷೆ ನಡೆಸಿ ಯಥೋಚಿತ ಉಪಚಾರ ಗೌರವಗಳನ್ನು ಪಡೆದು ಪರ್ಯಾಯಕ್ಕೆ ಬರಲೆಂದು ಸ್ವಾಮಿಗಳನ್ನು, ಊರವರೆಲ್ಲರನ್ನು ಆಹ್ವಾನಿಸಿದರು.  ಇದೆಲ್ಲ ಹಿಂದಿನಿಂದ ನಡೆದುಬಂದ ಸಂಪ್ರದಾಯ-ಪದ್ಧತಿ! ಶ್ರೀಪಾದರು ನನ್ನನ್ನೂ ಪರ್ಯಾಯಾವಧಿಯಲ್ಲಿ ಕೃಷ್ಣದರ್ಶನಕ್ಕೆ ಉಡುಪಿಗೆ ಬರಲು ಆಹ್ವಾನಿಸಿದರು!  ನಾನು ಗುರುಗಳ ಕಡೆ ನೋಡಿದೆ.  ಅವರೂ ಕಳಿಸಿಕೊಡುತ್ತೇವೆಂದು ಸಮ್ಮತಿ ಸೂಚಿಸಿದರು.  ಈ ಘಟನೆ ಮುಂದೆ ಪೇಜಾವರ ಶ್ರೀಪಾದರೊಂದಿಗಿನ ನನ್ನ ಗುರುಶಿಷ್ಯ ಸಂಬಂಧಕ್ಕೆ ನಾಂದಿಯಾಯಿತು!

ನಾನಾಗಲೇ ಊರ ಹಾಗು ಸುತ್ತಲಿನ ಚಿಕ್ಕಪುಟ್ಟ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಆರಂಭಿಸಿದ್ದೆ.  ಐದು-ಹತ್ತು ನಿಮಿಷಗಳ ಪುಟ್ಟಪುಟ್ಟ ಭಾಷಣಗಳನ್ನು ಮಾಡುತ್ತಿದ್ದೆ.  ಸಂದರ್ಭಕ್ಕೆ ತಕ್ಕಂತೆ ವಿಷಯಗಳನ್ನು ಆಯ್ಕೆ ಮಾಡಿ ಚುಟುಕಾಗಿ, ಕೆಲವೇ ವಾಕ್ಯಗಳಲ್ಲಿ, ಆದರೆ ಅಚ್ಚುಕಟ್ಟಾಗಿ ನನ್ನ ಉಪನ್ಯಾಸ ಮುಗಿಯುತ್ತಿತ್ತು!  ನನ್ನ ಮಾತುಗಾರಿಕೆಯ, ನನ್ನ ತಿಳುವಳಿಕೆಯ ಮಿತಿಗನುಗುಣವಾಗಿ ಇದು ನಡೆಯುತ್ತಿತ್ತು!  ಎಷ್ಟೋ ಸಲ ಇಂತಹ ಚಿಕ್ಕಚಿಕ್ಕ ಭಾಷಣಗಳೇ ಜನರಿಗೆ ಇಷ್ಟವಾಗುತ್ತಿದ್ದವು!  ಅಷ್ಟಲ್ಲದೆ ಪ್ರತಿಸಲವೂ ಪೂರ್ತಿಯಾಗಿ ಬೇರೆಯೇ ಆದ ವಿಷಯ-ಪ್ರತಿಪಾದನೆಯಿಂದ ಕೂಡಿದ ಉಪನ್ಯಾಸ ಮಾಡುತ್ತಿದ್ದೆ.  ವಿಷಯ ಸಂಗ್ರಹಣೆಯ ದೃಷ್ಟಿಯಿಂದ ಈ ಕ್ರಮ ನನಗೆ ತುಂಬ ಉಪಯುಕ್ತವಾಗಿ ಒದಗಿಬಂತು!  ಕರಾವಳಿಯ ಉದ್ದಗಲ, ಮುಂದಿನ ಇಪ್ಪತ್ತು-ಇಪ್ಪತೈದು ವರುಷಗಳಲ್ಲಿ, ನಡೆಯುತ್ತಿದ್ದ ವರ್ಷಪೂರ್ತಿ ವಿವಿಧ ಸಾಂಸ್ಕ್ರತಿಕ ಸಭೆ ಸಮಾರಂಭಗಳಲ್ಲಿ ಧಾರ್ಮಿಕ ನೇತಾರರಾಗಿ, ಪೇಜಾವರ-ಎಡನೀರು ಮಠಗಳ ಶ್ರೀಪಾದರುಗಳು, ಧರ್ಮಸ್ಥಳ ಹೆಗ್ಡೆಯವರು, ಮತ್ತು ನಾನು, ಇವರೇ ಅಥವಾ ಇವರಲ್ಲೊಬ್ಬರು ಭಾಗವಹಿಸುತ್ತಿದ್ದುದು ಅಥವಾ ಇವರಿಲ್ಲದ ಅಂತಹ ಕಾರ್ಯಕ್ರಮಗಳೇ ವಿರಳವಾಗಿರುತ್ತಿದ್ದುದು ನಿಜವೇ!

ಪೇಜಾವರ ಶ್ರೀಪಾದರ ಪರ್ಯಾಯ ಪೀಠಾರೋಹಣ ಬಹು ಸಂಭ್ರಮದಿಂದ ನಡೆಯಿತು! ಅವರ ಪರ್ಯಾಯಾವಧಿಯೆಂದರೆ ಪೂಜೆ-ಉತ್ಸವ-ಭೂರಿ ಭೋಜನ ಮಾತ್ರವಲ್ಲ! ಎರಡು ವರ್ಷಗಳಲ್ಲಿ ಉದ್ದಕ್ಕೂ ನಾಡಿನ ಅತ್ಯುತ್ತಮ ಕಲಾವಿದರಿಂದ, ವಿದ್ವಾಂಸರಿಂದ ಸಾಂಸ್ಕ್ರತಿಕ ಸಂಭ್ರಮ!  ಆ ವರ್ಷದ ಜನ್ಮಾಷ್ಟಮಿಯ ಸಡಗರಕ್ಕೆ, ಉಡುಪಿಗೆ ನಮ್ಮ ಗುರುಗಳೂ ತೆರಳಿದ್ದರು.  ಅಲ್ಲವರು ನಾಡಿನ ಅದ್ಭುತ ಕಲಾವಿದರಾಗಿದ್ದ ಮಹಾಲಿಂಗಂ ಅವರ ವೇಣುವಾದನವನ್ನು ಆಲಿಸಿದ್ದರು.  ತುಂಬ ಪ್ರಭಾವಿತರೂ ಆಗಿದ್ದರು!  ಅಲ್ಲಿಂದ ಹಿಂದಿರುಗಿದವರೇ, ಆ ಕುರಿತಾಗಿ ಅವರೆತ್ತಿದ ಉದ್ಗಾರ ಇನ್ನೂ ನನಗೆ ನೆನೆಪಿದೆ.

ಹಕ್ಕಿ ನುಡಿದಂತೆ ನುಡಿಸುತ್ತಾನವನು! ಹೌದು ಮಹಾಲಿಂಗಂರ ವೇಣುನಾದ- ನಿಷ್ಕಳಂಕ ಪ್ರಕೃತಿಯಲ್ಲಿ ಹಕ್ಕಿಯೊಂದು ನಿರಾಳವಾಗಿ ಉಲಿದಂತೆ!

ಪರ್ಯಾಯದ ಎರಡನೇ ವರುಷದಲ್ಲಿ ಪೇಜಾವರರು ಮಾಧ್ವಸಮ್ಮೇಳನವನ್ನು ಆಯೋಜಿಸಿದ್ದರು.  ನನ್ನನ್ನೂ ಕರೆದಿದ್ದರು.  ಸಭಾಮಂಟಪದ ಅಲಂಕಾರ- ವೈಭವ, ಸ್ವಾಮೀಜಿಗಳ ಆಗಮನ, ಆ ಜನಸಂದಣಿ, ಸೇರಿದ್ದ ಘಟಾನುಘಟಿ ತರ್ಕವೇದಾಂತ ಪಂಡಿತರು, ಉಡುಪಿಯ ಸಡಗರ, ಒಂದೇ ಎರಡೇ- ನಾನಂತು ದಿಗ್ಭ್ರಮೆಗೊಳಗಾಗಿದ್ದೆ!  ಕಾಶಿಯಿಂದ ಪ್ರಕಾಂಡ ಪಂಡಿತ ರಾಜೇಶ್ವರ ಶಾಸ್ತ್ರಿಗಳು ಬಂದಿದ್ದರು.  ವಾಕ್ಯಾರ್ಥ ಸಭೆಯನ್ನು ಮಾಹುಲಿ ಗೋಪಾಲಾಚಾರ್ಯರು ನಿಯಂತ್ರಿಸುತ್ತಿದ್ದರು. ವಿದ್ಯಾಮಾನ್ಯರು, ವಿಶ್ವೇಶತೀರ್ಥರು ಸ್ವತಃ  ವಾಕ್ಯಾರ್ಥಗೋಷ್ಠಿಯಲ್ಲಿ ಪಂಡಿತರೊಂದಿಗೆ ಭಾಗವಹಿಸಿದ್ದರು!  ನನ್ನಮಟ್ಟಿಗೆ ಯಾವುದೂ ಅರ್ಥವಾಗದ ಸನ್ನಿವೇಶವದು!  ಆ ದೊಡ್ಡ ಸಭೆಯಲ್ಲಿ ನಾನೂ ಒಂದು ಭಾಷಣ ಮಾಡಿದೆ.  ಲಕ್ಷ್ಮೀಶ ಬರೆದುಕೊಟ್ಟಿದ್ದ.  ಉರು ಹೊಡೆದುದನ್ನು, ಕೆಲವೊಮ್ಮೆ ಓದಿ ಉಪನ್ಯಾಸ ನಡೆಯಿತು! ಈ ಉಪನ್ಯಾಸದಿಂದಾಗಿ ಅದರ ಮೊದಲಿನ ಯಾವೊಂದು ಕಾರ್ಯಕ್ರಮವನ್ನೂ ನಿರಾತಂಕವಾಗಿ ನನ್ನಿಂದ ಅನುಭವಿಸಲಾಗಲಿಲ್ಲ!  ಆ  ರಾತ್ರಿ ಆ ‘ಸುಧರ್ಮ’ ಸಭೆಯಲ್ಲಿ ಮಧುರವೂ, ಭಾವಪೂರ್ಣವೂ ಆದ ಸಂಗೀತ ಕಾರ್ಯಕ್ರಮವೊಂದು ನಡೆಯಿತು.  ಅಂದು ಶತಮಾನದ ಕಲಾವಿದೆ, ಶ್ರೀಮತಿ ಎಂ. ಎಸ್. ಸುಬ್ಬುಲಕ್ಷ್ಮಿಯವರು ಈ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು.  ನನ್ನ ಅಂತರಂಗವನ್ನು ಬಹುವಾಗಿ ಸೆಳೆದ ಸಂದರ್ಭವದು!  ಪರವಶನಾಗಿ ಆ ಗಾಯನವನ್ನು ಆಲಿಸಿದೆ, ಅನುಭವಿಸಿದೆ! ಎಷ್ಟೋ ದಿನಗಳು ಅದೇ ಗುಂಗಿನಲ್ಲಿದ್ದೆ!  ಆ ರಾತ್ರಿ ಗಾಯನ ಕೇಳಿ ನಮ್ಮ ನಿವಾಸಕ್ಕೆ ಹಿಂತಿರುಗಿ ಮಲಗಿದಲ್ಲಿಗೇ ದೂರದಿಂದ ಮತ್ತೊಂದು ಮಧುರವೂ, ಆಕರ್ಷಕವೂ ಆದ ಗಾಯನ ಕೇಳಿಬರುತ್ತಿತ್ತು!  ಮಧ್ಯೆಮಧ್ಯೆ ಮಾತುಗಳು!  ಅರೇ ಅದು ನಮ್ಮ ಹಂಡೆ ಗುರುವೇದವ್ಯಾಸಾಚಾರ್ಯರದ್ದು!  ದಾಸರಿಗಿನ್ನೂ ಯೌವನ!  ತುಂಬು ಉತ್ಸಾಹ!  ಆ ಶಾರೀರ, ಕಥೆಯ ಓಘ ಎಲ್ಲವೂ ಅನುಪಮ!ಅಪೂರ್ವಕ್ಷಣ: ಶ್ರೀ ಪೇಜಾವರ ಅಧೋಕ್ಷಜ ಮಠಾದೀಶರಾದ ಶ್ರೀ ವಿಶ್ವಮಾನ್ಯತೀರ್ಥರಿಂದ ಸನ್ಯಾಸ ಸ್ವೀಕರಿಸಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು

ಉಡುಪಿಯಾತ್ರೆ ಮುಗಿಸಿ ಕುಕ್ಕೆಗೆ ಹಿಂತಿರುಗಿದರೆ ‘ಉಸ್ಸಪ್ಪಾ’ ಎನಿಸಿತು.  ಬ್ರಹ್ಮಾಂಡದೊಳಗೆ ಅರಸಿ ನೋಡಿದರೆ ನಮ್ಮೂರೆ ವಾಸಿ! ಎನಿಸಿತು.  ಕೆಲವೇ ದಿನಗಳಲ್ಲಿ ಪತ್ರಿಕೆಯಲ್ಲಿ ಓದಿದೆ!  ಉಡುಪಿಯ ಪಲಿಮಾರು ಮಠದ ರಘುವಲ್ಲಭತೀರ್ಥರಿಂದ ಪೀಠ-ಸಂನ್ಯಾಸ ತ್ಯಾಗ!  ಅಚ್ಚರಿಯೆನಿಸಿತು!  ಅದೇ ತಾನೇ ಉಡುಪಿಯ ಸಮ್ಮೇಳನದಲ್ಲಿ ಅವರನ್ನು ಕಂಡಿದ್ದೆ.  ಕೈಹಿಡಿದು ಮಾತನಾಡಿಸಿದ್ದರು.  ಅದಕ್ಕೆ ಮೊದಲು ನಮ್ಮೂರ ಕಿರುಷಷ್ಠಿಯ ಧರ್ಮಸಮ್ಮೇಳನಕ್ಕೆ ಬಂದವರನ್ನು, ಬನ್ನಂಜೆ ಆಚಾರ್ಯರ ಜೊತೆಗೆ ಮೊದಲಸಲ ಕಂಡಿದ್ದೆ!  ಅವರಿಬ್ಬರೂ ಒಳ್ಳೆಯ ಸ್ನೇಹಿತರಂತೆ.  ರಘುವಲ್ಲಭರು ‘ಎಸ್. ಎಲ್. ರಾವ್’ ಆಗಿದ್ದರು!  ತುಂಬ ಸಜ್ಜನ, ಪ್ರಾಮಾಣಿಕ, ಪ್ರೀತಿ ತುಂಬಿದ ಚೇತನ ಅವರು!  ಒಮ್ಮೆ ಛೇ! ಅನಿಸಿತು.  ಮತ್ತೊಮ್ಮೆ ಏನೂ ಅರ್ಥವಾಗಲಿಲ್ಲ!  ತೋಲ್ಪಾಡಿ ಸುದ್ದಿ ಓದಿ ಅಂದ ನೀವಿನ್ನು ಯಾವಾಗ ಬಿಡುತ್ತೀರೋ?  ನಾನಂದೆ- ಛೆ ಛೇ ಹಾಗೇನೂ ಇಲ್ಲ, ಹಾಗೆಲ್ಲ ಹೇಳಬೇಡ.  ಆದರೂ ಹಿಡಿದ ಸಂನ್ಯಾಸವನ್ನು ಬಿಡಲೂಬಹುದು?!

ಪುಟ್ಟ ಅಲೆಯೊಂದು ಮನದಲ್ಲಿ ತೇಲಿಹೋದುದು ಸುಳ್ಳಲ್ಲ!

ನೆನಪೇ ಸಂಗೀತ೭::ಬಾಲಕನ ಕಲಭಾಷೆ ಜನನಿಯು ಕೇಳಿ ಸುಖಬಡುವಂತೆ

ಬೊಮ್ಮ ಮಾಡಿದ ತನು ಬಿಟ್ಟು | ವಿಶ್ವ|
ಕರ್ಮನು ಮಾಡಿದ ಬೊಂಬೆಯ ನಿಟ್ಟು|
ಸುಮ್ಮನೆ ಕೂಗುಗಳಿಟ್ಟು- ಅದ
ನಂಬುವನೆಂಬೋನು ಹೋಹ ಕಂಗೆಟ್ಟು||

ಶಿಲ್ಪಿ ಮಾಡಿದ ವಿಗ್ರಹವೇ ದೇವರಲ್ಲ. ವಿಗ್ರಹದಲ್ಲಿ ದೇವರ ಆರಾಧನೆ ಉಪಾಸನೆಯಲ್ಲಿ ಮೊದಲ ಮೆಟ್ಟಿಲು. ಬಹಿರ್ಮುಖವಾದ ಇಂದ್ರಿಯಗಳನ್ನು ಒಳಮುಖಗೊಳಿಸಿ ಅಂತರಂಗದಲ್ಲಿ ದೇವರನ್ನು ಕಾಣುವ ಉಪಾಸನೆ ಅಧ್ಯಾತ್ಮದ ನಿಜ ಸಾಧನೆ! ಐದು ದಿನಗಳ ಕಾಲ ನಡೆಯುವ ನರಸಿಂಹ ಜಯಂತೀ ಮಹೋತ್ಸವ ನಮ್ಮ ಮಠದ ವಾರ್ಷಿಕ ಸಂಭ್ರಮ.  ಊರವರು, ಪರವೂರಿನ ಮಠದ ಹಿತೈಷಿಗಳು, ಶಿಷ್ಯವರ್ಗದವರು ಮಾತ್ರವೇ ಸೇರುವ, ಜನಸಂದಣಿಯ ದೃಷ್ಟಿಯಿಂದ ಸುಬ್ರಹ್ಮಣ್ಯನ ಷಷ್ಠೀ ಜಾತ್ರೆಗೆ ಹೋಲಿಸಿದರೆ ಏನೇನೂ ಅಲ್ಲದ ಆದರೆ ಸಂಬಂಧಿಸಿದ ಎಲ್ಲರು ತುಂಬ ಇಷ್ಟಪಟ್ಟು ಭಾಗವಹಿಸಿ ಭಕ್ತಿಯಿಂದ ನಡೆಸುವ, ಸಂತೋಷಪಡುವ ಒಂದು ಸಾತ್ವಿಕ ಸಾಂಸ್ಕೃತಿಕ ಸಂಭ್ರಮವದು! ಅಷ್ಟು ದಿವಸಗಳು ನರಸಿಂಹ ದೇವರಿಗೆ ವಿಶೇಷ ಪೂಜೆ, ಉತ್ಸವ-ರಥೋತ್ಸವ, ಭೋಜನ ಪ್ರಸಾದ- ವಸಂತ ಪನಿವಾರ ವಿತರಣೆ ನಡೆಯುತ್ತವೆ.

ಉತ್ಸವವೆಂದಮೇಲೆ ವಿಶೇಷ ವಾದ್ಯತಂಡವನ್ನು, ಹೂವಿನ ಅಲಂಕಾರದವರನ್ನು ಪರವೂರಿನಿಂದ ತರಿಸಲಾಗುತ್ತದೆ.  ವಿದ್ಯುದೀಪದ ಅಲಂಕಾರ, ಧ್ವನಿವರ್ಧಕಗಳು ಇತ್ತೀಚಿನ ಸೇರ್ಪಡೆ ಅಷ್ಟೇ! ಆದರೆ ಇಷ್ಟಕ್ಕೇ ಅಡಚಣೆ ಆಗಿದ್ದ ಕಾಲವಿತ್ತು. ಹಿಂದೊಮ್ಮೆ ಪರಿಸ್ಥಿತಿ ಚೆನ್ನಾಗಿರದ ಸಂದರ್ಭ, ಒಂದು ವರ್ಷ ಜಯಂತಿ ಉತ್ಸವ ನಿಂತೇ ಹೋಗಿತ್ತಂತೆ. ಗುರುಗಳು ಅದನ್ನು ತುಂಬಾ ವಿಷಾದದಿಂದ ಹೇಳಿಕೊಳ್ಳುವುದಿತ್ತು. ಅಷ್ಟಲ್ಲದೆ ಅನಂತರದ ವರ್ಷಗಳಲ್ಲಿ ಈ ಉತ್ಸವಕ್ಕೆ ಸಂಬಂಧಿಸಿ ಕೋರ್ಟು-ವ್ಯಾಜ್ಯವೆಂದು ಹೋರಾಟವೂ ನಡೆದು, ಅದರಲ್ಲಿ ಜಯವು ಲಭಿಸಿ, ಜಯಂತಿಯ ಉತ್ಸವ ನಡೆಸುವುದು ಮಠದ ಪಾಲಿಗೆ ಪ್ರತಿಷ್ಠೆಯ ಸಂಕೇತವೂ ಆಗಿತ್ತು. ಒಟ್ಟಿನಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದ್ದ ಸಮಾರಂಭವದು.

ಭಕ್ತಜನರನ್ನು ಸೇರಿಸುವ ಇಂತಹ ಉತ್ಸವಗಳನ್ನು ಬೇರೊಂದೇ ರೀತಿಯಿಂದ ಸಂಘಟಿಸಬೇಕೆನ್ನುವ ಅಸ್ಪಷ್ಟ ವಿಚಾರಗಳು ನನ್ನಲ್ಲಿ ಆಗಲೇ ಮೂಡುತ್ತಿದ್ದವು. ಉತ್ಸವಗಳು ಜನಮರುಳೊ ಜಾತ್ರೆ ಮರುಳೋ ಎಂಬಂತಾಗಬಾರದು. ಮೌಢ್ಯ ಬಿತ್ತುವ ಬರಿಯ ಬೊಂಬೆಯಾಟವಾಗಬಾರದು.  ಉತ್ಸವಗಳು ಸದಭಿರುಚಿಯನ್ನು ಬೆಳೆಸುವ, ಎಲ್ಲ ಸಣ್ಣತನಗಳನ್ನು ಹೋಗಲಾಡಿಸಿ ಹೃದಯ ವೈಶಾಲ್ಯವನ್ನುಂಟುಮಾಡುವ, ಸಾತ್ವಿಕ ಆನಂದದಾಯಿಯಾದ, ರಚನಾತ್ಮಕ ಚಟುವಟಿಕೆಯಾಗಿ ರೂಪುಗೊಳ್ಳಬೇಕೆಂದು ನನ್ನ-ನಮ್ಮೆಲ್ಲರ ಆಶಯವಾಗತೊಡಗಿತು. ನಂಬಿಕೆಯ ಮಾಮೂಲಿ ನಡವಳಿಕೆಯಾಗದೇ ಶೈಕ್ಷಣಿಕವೂ, ಚಿಂತನೆಗೆ ಪ್ರೇರೇಪಿಸುವಂತಹುದೂ ಆದ ಅರ್ಥಪೂರ್ಣ ಕಾರ್ಯಕ್ರಮಗಳಿಂದ ಉತ್ಸವ ನಡೆಸಬೇಕೆಂಬ ಇಚ್ಛೆ ಬಲವಾದಂತೆ ನಾನೂ, ತೋಲ್ಪಾಡಿ ಮೊದಲ ವರ್ಷಕ್ಕೆ ಚಿಕ್ಕದೊಂದು ಯೋಜನೆ ಹಾಕಿಕೊಂಡೆವು. ಆ ವರ್ಷದ (೧೯೬೯ನೇ ಇಸವಿ) ನರಸಿಂಹ ಜಯಂತೀ ಉತ್ಸವಕ್ಕೆ ಹರಿಕಥೆ ಮಾಡುವವರನ್ನು, ಶ್ರೀಶದಾಸರನ್ನು ಕರೆಸಿದೆವು. ಅವರಿಂದ ಹರಿಕಥೆ, ಆಗಲೇ ಬಂದಿದ್ದ ವಿದ್ವಾಂಸರೊಬ್ಬರಿಂದ ಉಪನ್ಯಾಸ, ಹೀಗೆ ಕಾರ್ಯಕ್ರಮ ನಡೆಯಿತು.ಬೆಟ್ಟದ ಮೇಲಿಂದ ಕಾಣುವ ಸುಬ್ರಹ್ಮಣ್ಯ

ಇಂತಹ ಒಂದು ಹೊಸ ಬೆಳವಣಿಗೆಯನ್ನು ನೋಡಿ ನಮ್ಮ ಗುರುಗಳ ಎದೆ ಧಸಕ್ಕೆಂದಿತು! ಮಠದ ಏಳುಬೀಳುಗಳನ್ನು ವರ್ಷಗಳಿಂದ ನೋಡುತ್ತಲೇ ಬಂದಿರುವ, ವಾರ್ಷಿಕ ಉತ್ಸವವನ್ನು ಜತನದಿಂದ ಮೊದಲೇ ತೆಗೆದಿರಿಸಿದ ಹಣದಿಂದ ನ್ಯೂನಾತಿರಿಕ್ತವಾಗಿ ನಡೆಸುವ ರೂಢಿಯಲ್ಲಿದ್ದ ಅವರಿಗೆ ಈ ಹೆಚ್ಚಿನ ಚಟುವಟಿಕೆ ಇದೆಲ್ಲಾ ಎಲ್ಲಿಗೆ ಮುಟ್ಟೀತೋ ಎಂಬ ಯೋಚನೆ ಮೂಡಿಸಿದ್ದರಲ್ಲಿ ಅಚ್ಚರಿಯೇನಿಲ್ಲ.  ಅಷ್ಟಲ್ಲದೆ ಉತ್ಸವಕ್ಕೆಂದು ಬಂದಿರುತ್ತಿದ್ದ ಊರ-ಪರವೂರ ಭಕ್ತಾದಿಗಳಿಗೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನೋಡಿ ಕೇಳಿ, ಆನಂದಿಸುವ ಪರಿಪಾಠವೂ ಕಮ್ಮಿಯೇ. ಅವರು ಮಧ್ಯಾಹ್ನ ನಡೆಯುವ ಪ್ರಸಾದ ಭೋಜನಕ್ಕೆ ಬಂದಾರು. ಮತ್ತೆ ರಾತ್ರಿ ನಡೆಯುವ ಉತ್ಸವದಲ್ಲಿ ಪಾಲ್ಗೊಂಡಾರು. ಮಧ್ಯೆ ನಡೆಯುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂಭವ ಕಡಿಮೆ. ಅದಕ್ಕೆಂದೇ ಪ್ರಸಾದ ಭೋಜನದ ವೇಳೆಯೇ ಮುಂದಾಗಿಯೇ ಆ ಕುರಿತು ಧ್ವನಿವರ್ಧಕದಲ್ಲಿ ಪ್ರಚುರಪಡಿಸುತ್ತಿದ್ದೆವು. ಆದರೆ ಕಾರ್ಯಕ್ರಮದ ವೇಳೆ ಸಮೀಪಿಸುತ್ತಿದ್ದಂತೆ, ಸಭೆ ಖಾಲಿ ಖಾಲಿ ಕಾಣಿಸುತ್ತಿದ್ದಂತೆ, ಮತ್ತೆ ನಾವೇ (ನಾನೇ) ಕೆಲವರು ಮಠದ ಆಸುಪಾಸಿನಲ್ಲಿ ಸುತ್ತಾಡಿ, ಅಲ್ಲಿ ಇಲ್ಲಿ ಗೋಡೆಗೆ ತಲೆಕೊಟ್ಟು ನಿದ್ರಿಸುತ್ತಿದ್ದವರನ್ನು, ಹರಟೆ ಹೊಡೆಯುತ್ತಿದ್ದವರನ್ನು ಬಲವಂತವೆಂಬಂತೆ ಎಬ್ಬಿಸಿ, ಪುಸಲಾಯಿಸಿ ಕರೆತಂದು, ಜನ ಸೇರಿಸಿ ಕಾರ್ಯಕ್ರಮ ನೆರವೇರಿಸಿದ್ದೆವು. ಪೂರ್ವಾಶ್ರಮದವರ ಮನೆಯಲ್ಲು ಉತ್ಸವಕ್ಕೆಂದು ಆಗಮಿಸಿದ್ದ, ಪ್ರಸಾದ ಭೋಜನದ ವೇಳೆ ಎಲ್ಲರಿಗು ಬಡಿಸಿ, ಸುಸ್ತಾಗಿ, ಕಾಲುಚಾಚಿ ಲಘುವಾಗಿ ವಿಶ್ರಾಂತಿ, ಹರಟೆ ನಡೆಸುತ್ತಿದ್ದ ಬಂಧುಗಳನ್ನೂ ಬಿಡದೆ ಕರೆತಂದು ಅಂತು ಕಾರ್ಯಕ್ರಮ ನಡೆಯಿತು! ಮರುವರ್ಷ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಜೋಡಿಸಿದ್ದೆವು.

ಕಾರ್ಯಕ್ರಮವೊಂದರಲ್ಲಿ ಪೇಜಾವರ ಮತ್ತು ಜೇಸುದಾಸ್ನಾವು ಈ ರೀತಿ ನಡೆಸುವ ಚಟುವಟಿಕೆಗಳನ್ನು ಶ್ರೀಮದಾನಂದತೀರ್ಥ ತತ್ವದರ್ಶಿನೀ ಸಭಾ ಎಂಬ ಶೀರ್ಷಿಕೆಯಡಿ ನಡೆಸಿದೆವು. ಆ ಸಲ ಹರಿಕಥೆ ಮಾತ್ರವಲ್ಲದೆ ವಾಚನ-ಪ್ರವಚನ, ವೇಣುವಾದನ, ವಿದ್ವಾಂಸರಿಂದ ಉಪನ್ಯಾಸ, ಸ್ವಾಮಿಗಳ ಆಶೀರ್ವಚನವೆಂದು ಉತ್ಸವ ಪೂರ್ತಿ ಇಂತಹ ವೈವಿಧ್ಯಗಳೇ. ಸಭೆ ಸಮಾರಂಭಗಳ ಜವಾಬ್ದಾರಿ ನಿರ್ವಹಿಸಿದ್ದ ತೋಲ್ಪಾಡಿ ‘ಫುಲ್ಲ್ ಬ್ಯುಸಿ’. ಹೀಗೆ ಚಿಕ್ಕದಾಗಿ ಆರಂಭವಾದ ಜಯಂತಿಯ ಈ ಸಾಂಸ್ಕೃತಿಕ ಸಂಭ್ರಮ ವರ್ಷವರ್ಷ ವೈವಿಧ್ಯಪೂರ್ಣವಾಗಿ ಐದಲ್ಲ ಹತ್ತು ದಿನಗಳ ಕಾಲ ನಡೆಯಿತು. ಅಂಥ ಪುಟ್ಟ ಹಳ್ಳಿಗೆ, ದೂರದ ಚೆನ್ನೈನಿಂದ, ಬೆಂಗಳೂರಿನಿಂದ, ಮುಂಬೈನಿಂದಲೂ ಬಾಲಮುರಳಿಕೃಷ್ಣ, ಟಿ.ವಿ. ಗೋಪಾಲಕೃಷ್ಣನ್, ಜೇಸುದಾಸ್, ಟಿ.ಎನ್. ಕೃಷ್ಣನ್, ಪಂಡಿತ್ ಜಸ್‌ರಾಜ್, ಎಂ.ಎಸ್.ಜಿ., ಆರ್.ಕೆ. ಶ್ರೀಕಂಠನ್, ದೊರೆಸ್ವಾಮಿ ಅಯ್ಯಂಗಾರ್ ರಂತಹ ಘಟಾನುಘಟಿ ಸಂಗೀತ ಕಲಾವಿದರಲ್ಲದೆ, ನಾಡಿನ ಶ್ರೇಷ್ಠ ಸಾಹಿತಿಗಳೂ, ಪಂಡಿತ, ವಿದ್ವಾಂಸರುಗಳೂ ಬರುವಂತಾದುದು ಮುಂದಿನ ಇಪ್ಪತ್ತೈದು-ಮುವ್ವತ್ತು ವರ್ಷಗಳ ಕಾಲ, ಊರ-ಆಸುಪಾಸಿನ ಊರುಗಳು ಮಾತ್ರವಲ್ಲದೇ ಇಡಿಯ ಜಿಲ್ಲೆಯ ಸಹೃದಯರ ಗಮನ ಸೆಳೆದುದು, ಮೆಚ್ಚಿಗೆಗೆ ಪಾತ್ರವಾದುದು ಮಾತ್ರ ಭವ್ಯ ಇತಿಹಾಸ!

ಪೇಜಾವರರ ಪರ್ಯಾಯದ ಎರಡನೇ ವರ್ಷವದು. ಆ ಸಲದ ನರಸಿಂಹ ಜಯಂತಿಯ ಉತ್ಸವ ಸಂಪನ್ನವಾಗುತ್ತಿದ್ದಂತೆ ಮಳೆಗಾಲ ಮೆಲ್ಲ ಮೆಲ್ಲನೆ ಅಡಿಯಿಟ್ಟಿತು. ಮೊದಲೇ ಯೋಚಿಸಿದ್ದಂತೆ ವೇದಾಂತ ವಿದ್ಯಾಭ್ಯಾಸಕ್ಕೆಂದು ಪೇಜಾವರ ಶ್ರೀಪಾದರಲ್ಲಿಗೆ, ಉಡುಪಿಗೆ ಬಂದೆ. ನನ್ನ ಜೊತೆ ಸತೀರ್ಥರಾದ ತೋಲ್ಪಾಡಿ ಮತ್ತು ಸುಬ್ರಹ್ಮಣ್ಯ ಹೆಬ್ಬಾರ್. ನಮಗೆ ಕೃಷ್ಣಮಠದ ಪಕ್ಕದಲ್ಲೇ, ಕಿಟಕಿಯಿಂದ ಮಧ್ವಸರೋವರ ಕಾಣುವಂತೆ ವಸತಿ. ಸಮೀಪದ ವಸಂತ ಮಂಟಪದಲ್ಲಿ ಪೇಜಾವರರ ವಾಸ್ತವ್ಯ. ಅವರು ಕರೆದಾಗಲೆಲ್ಲ ಅಲ್ಲಿ ತೆರಳಿ ಅವರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದೆವು. ಒಂದು ಒಳ್ಳೆಯ ದಿನ ಗುರುಗಳು ಪಾಠ ಪ್ರಾರಂಭಿಸಿದರು. ತರ್ಕಶಾಸ್ತ್ರ ಮತ್ತು ವೇದಾಂತದ ಶಿಕ್ಷಣ ಸ್ವತಃ ಅವರಿಂದಲೇ. ವ್ಯಾಕರಣ ಮತ್ತು ಕಾವ್ಯದ ಪಾಠಕ್ಕೆಂದು ಮತ್ತಿಬ್ಬರು ವಿದ್ವಾಂಸರನ್ನು ನೇಮಿಸಿದ್ದರು. ಮುಂದಿನ ಆರೇಳು ವರ್ಷಗಳು ಅಧ್ಯಯನದ ಉದ್ದಿಶ್ಯವಾಗಿಯೇ ಪೇಜಾವರ ಶ್ರೀಪಾದರ ಜೊತೆಗೇ ಇದ್ದೆ.ಕುಮಾರಪರ್ವತ

ದಾಕ್ಷಿಣ್ಯ-ಸಂಕೋಚದ ಮುದ್ದೆಯಾಗಿದ್ದ ನನಗೆ ಮೊದಮೊದಲು ಉಡುಪಿಯಲ್ಲಿ ಬಹಳ ಕಷ್ಟವೆನಿಸಿತು. ಆದರೆ ಮಠದಲ್ಲಿ ಎಲ್ಲರು ಬಲು ಪ್ರೀತಿಯಿಂದ, ಆದರದಿಂದ ನೋಡಿಕೊಳ್ಳುತ್ತಿದ್ದರು. ಪಕ್ಕದ ಕೃಷ್ಣಮಠದಲ್ಲೇ ನನ್ನ ಅನುಷ್ಟಾನ, ದೇವರ ಪೂಜಾರಾಧನೆಗಳಿಗೆ, ಆಹಾರಕ್ಕೆ ವ್ಯವಸ್ಥೆ ಇರುತ್ತಿತ್ತು. ಯಾವ ಕೊರತೆಯೂ ಆಗದಂತೆ ಪೂಜ್ಯ ಗುರುಗಳು ವಾತ್ಸಲ್ಯದಿಂದ ನನ್ನನ್ನು ಕಾಣುತ್ತಿದ್ದರು. ದಿನವಿಡೀ ಪೂಜೆ-ಪಾಠ-ಪ್ರವಚನ. ಸಂಜೆ-ರಾತ್ರಿ, ಯಕ್ಷಗಾನ, ನಾಟಕ, ಸಂಗಿತವೆಂದು ಕಲಾ ಕಾರ್ಯಕ್ರಮಗಳು. ದಿನಗಳು ಸರಿದುದೇ ತಿಳಿಯಲಿಲ್ಲ. ತಿಂಗಳ ಅಂತ್ಯದಲ್ಲಿ ಅನಧ್ಯಯನದ ದಿನಗಳಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ಹೋಗುತ್ತಿದ್ದೆ. ಉಡುಪಿಯಲ್ಲಿ ಪ್ರಸಾದ ಭೋಜನದ ಸಂದರ್ಭ ಪ್ರತಿ ಮಧ್ಯಾಹ್ನ ನೆರೆಯುತ್ತಿದ್ದ ಪಂಡಿತಗಡಣ, ಅವರು ನಡೆಸುತ್ತಿದ್ದ ಶಾಸ್ತ್ರಾರ್ಥ ಚಿಂತನ, ವಾಕ್ಯಾರ್ಥ ಮಧ್ಯೆ ಹುಸಿ ಜಗಳ ಇವನ್ನೆಲ್ಲ ಮೂಕವಿಸ್ಮಿತನಾಗಿ ವೀಕ್ಷಿಸುತ್ತಿದ್ದೆ. ಆಗೆಲ್ಲ ನನಗೇನೂ ಗೊತ್ತಿಲ್ಲವೆಂಬ ಭಾವ ಗಾಢವಾಗಿ ಆವರಿಸಿಬಿಡುತ್ತಿತ್ತು. ಅಲ್ಲಾಗ ಮಂಗಳೂರು ಸಮೀಪದ ಚಿತ್ರಾಪುರ ಮಠದ ಸ್ವಾಮಿಗಳೂ ಇರುತ್ತಿದ್ದರು. ಅವರು ಪೇಜಾವರ ಶ್ರೀಪಾದರಲ್ಲಿ ವೇದಾಂತದ ಅಧ್ಯಯನ ನಡೆಸಿದ್ದರು. ನನ್ನನ್ನು ತುಂಬಾ ಸ್ನೇಹದಿಂದ ಕಂಡಿದ್ದರು. ಮತ್ತೆ ನಿಧನಿಧಾನವಾಗಿ ಉಡುಪಿಯ ಮಠೀಯ ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದೆ! ಅಲ್ಲಿದ್ದಾಗ ಅದೆಷ್ಟು ವಿದ್ವಾಂಸರನ್ನು, ಸಾಹಿತಿ- ಕವಿಗಳನ್ನು, ಕಲಾವಿದರನ್ನು ಮತ್ತೆ ವಿಧ ವಿಧ ಜನರನ್ನು ಕಂಡೆನೋ!?

ಗೆಳೆಯರಿಬ್ಬರೂ, ಲಕ್ಷ್ಮೀಶ ತೋಲ್ಪಾಡಿ- ಸುಬ್ರಹ್ಮಣ್ಯ ಹೆಬ್ಬಾರ್ ಮೆಲ್ಲ ಮೆಲ್ಲನೆ ನನ್ನಿಂದ ಕಳಚಿಕೊಳ್ಳತೊಡಗಿದರು! ಈ ಮಠೀಯ ವಾತಾವರಣದಲ್ಲಿ ಅವರಿಗೆ ಅದೇನು ಭ್ರಮನಿರಸನವಾಯಿತೋ- ತಿಳಿಯದು. ಲಕ್ಷ್ಮೀಶ ಆಗಲೇ ಚೆನ್ನಾಗಿ ಓದಿಕೊಂಡಿದ್ದ. ಕವಿತೆ- ಕಥೆ- ಪ್ರಬಂಧಗಳನ್ನು ಪ್ರಬುದ್ಧವಾದುವುಗಳನ್ನು ರಚಿಸಬಲ್ಲವನಾಗಿದ್ದ. ಅವನಿಗೆ ಅನೇಕ ಸಾಹಿತಿ ಮಿತ್ರರಿದ್ದರು. ಯಕ್ಷಗಾನ ಕಲಾವಿದರ ಸಂಪರ್ಕ, ಸ್ನೇಹವಿದ್ದಿತು. ಉಡುಪಿಯಲ್ಲಿದ್ದಾಗಲೇ ಅವನೊಮ್ಮೆ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಹೋಗಿಬಂದ. ಅವನಲ್ಲೇನೋ ತೀವ್ರ ಬದಲಾವಣೆ ಆಗಿದೆ ಎಂದು ನನಗನಿಸುತ್ತಿತ್ತು. ಮತ್ತೂ ಕೆಲವು ತಿಂಗಳು ನಮ್ಮೊಡನಿದ್ದ.  ಪಾಠ ಹೇಳಿಸಿಕೊಳ್ಳುತ್ತಲೂ ಇದ್ದ. ಮತ್ತೊಂದು ದಿನ ನಮ್ಮ ಒಡನಾಟ ಬಿಟ್ಟೇಬಿಟ್ಟ! ಬೆಂಗಳೂರಲ್ಲಿ ನೆಲೆಸಿದ. ಸುಬ್ರಹ್ಮಣ್ಯನೂ ಅಷ್ಟೇ. ಯಾಕೋ ಪಾಠ ಹೇಳಿಸಿಕೊಳ್ಳುವುದನ್ನು ನಿಲ್ಲಿಸಿದ. ಪೇಜಾವರ ಶ್ರೀಪಾದರಲ್ಲೇ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡಲು ತೊಡಗಿದ. ನಾನು ಇದ್ದಕ್ಕಿದ್ದಂತೆ ಒಂಟಿಯಾಗಿಬಿಟ್ಟೆನೆನಿಸಿತು! ಎದೆ ತುಂಬ ನೋವು. ಎಲ್ಲೋ ಮನದ ಮೂಲೆಯಲ್ಲಿ ಅವಿತಿದ್ದ ಬಿಡುಗಡೆಯ ಹಂಬಲ ಕಾಡತೊಡಗಿತು.

ಪೇಜಾವರ ಗುರುಗಳು ತಮ್ಮ ಪರ್ಯಾಯಾವಧಿ ಮುಗಿಯುತ್ತಲೇ, ಧಾರ್ಮಿಕ ಪ್ರವಾಸ ಕೈಗೊಂಡರು. ಈಗಿನಂತೆ ಅತಿಯಾದ ಸಂಚಾರ ಆಗ ಅವರಿಗಿದ್ದಿಲ್ಲವಾದರೂ ಪ್ರತಿದಿನವೆಂಬಂತೆ ಬೇರೆಬೇರೆ ಊರುಗಳಿಗೆ ಸಂಚರಿಸುತ್ತಿದ್ದರು. ನಾನೂ ಅವರ ಜೊತೆಗಿದ್ದೆ. ಪ್ರವಾಸದಲ್ಲೇ ಪಾಠಪ್ರವಚನ ನಡೆಯುತ್ತಿತ್ತು! ಅದಾಗಲೇ ನನಗೆ ಸಂಗೀತದಲ್ಲಿ ಆಸಕ್ತಿಯಿದ್ದುದು, ನನ್ನಷ್ಟಕ್ಕೆ ಹಾಡುಗಳನ್ನು ಗುನುಗುತ್ತಿದ್ದುದು ಗುರುಗಳಿಗೆ, ಮಠದವರಿಗೆ ತಿಳಿದು ಹೋಗಿತ್ತು. ಅವರ ಒತ್ತಾಯಕ್ಕೆ ಕಟ್ಟು ಬಿದ್ದು ಭೋಜನದ ವೇಳೆ ಅನೇಕ ಸಲ ಚೂರ್ಣಿಕೆಗಳನ್ನು ಅಲ್ಪಸ್ವಲ್ಪ ಸಂಗೀತದ ಬಣ್ಣ ಬೆರೆಸಿ ಹಾಡಿದ್ದೆ. ಸಭೆಗಳಲ್ಲು ಸಂದರ್ಭಾನುಸಾರ ಶ್ಲೋಕಗಳನ್ನು ತಿಳಿದಂತೆ ಹಾಡತೊಡಗಿದ್ದೆ. ಒಮ್ಮೆ ಹೈದಾರಬಾದಿನಲ್ಲಿ ಚಾತುರ್ಮಾಸವ್ರತ ದೀಕ್ಷೆಗೆಂದು ಗುರುಗಳು ಹೊರಟಿದ್ದರು. ನಾನೂ ಜೊತೆಗಿದ್ದೆ. ಇದ್ದಕ್ಕಿದ್ದಂತೆ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರಿಂದ ಪೇಜಾವರ ಶ್ರೀಪಾದರಿಗೆ ಫೋನ್ ಕರೆ. ಮಾತುಕತೆ ನಡೆದು ಕೊನೆಯಲ್ಲಿ ವಿದ್ಯಾಮಾನ್ಯರು ಅಪ್ಪಣೆಕೊಟ್ಟಂತೆ ಅಂದುಬಿಟ್ಟರು.  ಚಾತುರ್ಮಾಸ ಕಾಲದಲ್ಲಿ ಭಾಗವತ ಪ್ರವಚನ ವಿಶೇಷವಾದುದು. ನೀವು ಪ್ರವಚನ ಮಾಡಿರಿ. ವಿದ್ಯಾಭೂಷಣರು (ಸುಬ್ರಹ್ಮಣ್ಯ ಸ್ವಾಮಿಗಳು) ವಾಚನ ಮಾಡಲಿ. ಬಹಳ ಚೆನ್ನಾಗಿರುತ್ತದೆ. ಕೇಳುಗ ಜನರಿಗೆ ಸಂತೋಷವಾಗುತ್ತದೆ  ಮತ್ತು ಬಹಳ ಪರಿಣಾಮಕಾರಿಯಾಗಿರುತ್ತದೆ. ಹಿಂದೆ ಆಚಾರ್ಯ ಮಧ್ವರು ಭಾಗವತ ಪ್ರವಚನ ಮಾಡುತ್ತಿದ್ದರು. ಅವರ ನಿಜ ಶಿಷ್ಯರಾದ ಹೃಷಿಕೇಶತೀರ್ಥರು ವಾಚನ ಮಾಡುತ್ತಿದ್ದರಂತೆ. ನಿಜಶಿಷ್ಯ ಪ್ರವರೇಣ ವಾಚ್ಯಮಾನೇ|| ಇಲ್ಲಿ ನಡೆಯಲಿ ಮತ್ತೊಮ್ಮೆ ಈ ಕಾರ್ಯ ಎಂದು.

ವಿದ್ಯಾಮಾನ್ಯರ ಬದುಕಿಡೀ ಶಾಸ್ತ್ರಾಧ್ಯಯನ- ಪ್ರವಚನ, ತಪ್ಪಸ್ಸಿನಿಂದ ಪಾವನವಾದುದು. ಅವರ ನಾಲಿಗೆ ಮಂತ್ರಪೂತವಾದುದು. ಯಾವ ಅಮೃತ ಘಳಿಗೆಯಲ್ಲಿ ಅವರು ಈ ಮಾತನಾಡಿದರೋ, ಆದೇಶ ನೀಡಿದರೋ ನಾ ಕಾಣೆ!  ನನ್ನ ಬದುಕಿನ ರೂಪವೇ ಬದಲಾಗಿಬಿಟ್ಟಿತು!

ಕುಮಾರ ಪರ್ವತಕ್ಕೆ ದಾರಿಭಾಗವತ ಪ್ರವಚನ ಆರಂಭವಾಗಿಬಿಟ್ಟಿತು! ವಾಚನ ಮಾಡುವ ನನಗೆ ಆಗ ನಾಲಕ್ಕೇ ರಾಗಗಳ ಆರಬಿ- ಮೋಹನ- ಆಭೇರಿ- ಹಂಸಧ್ವನಿಗಳ ರಾಗಛಾಯೆಯ ಪರಿಚಯವಷ್ಟೇ. ಅದೇ ಬಂಡವಾಳ! ಆದರೆ ಅದೇನು ಹುಚ್ಚುಧೈರ್ಯ! ಗುರುಗಳು ಭಾಗವತದ ಆಯ್ದ ಶ್ಲೋಕಗಳನ್ನು (ದಿನಕ್ಕೆ ಎಂಟೋ-ಹತ್ತೋ) ಗುರುತು ಮಾಡಿಕೊಡುತ್ತಿದ್ದರು. ಭಾವವನ್ನು ಗ್ರಹಿಸಿ, ಇವೇ ರಾಗಗಳನ್ನು ಮತ್ತೆಮತ್ತೆ ಬಳಸಿ ಹಾಡುತ್ತಿದ್ದೆ! ಬಾಲಕನ ಕಲಭಾಷೆ ಜನನಿಯು ಕೇಳಿ ಸುಖಬಡುವಂತೆ ಸ್ವಾಮೀಜಿಯೊಬ್ಬರು ಹಾಡುವರೆಂದರೆ!?  ಅದು ಅಲ್ಲಿನ ಕೇಳುಗರಿಗೆ ಕಂಡು ಕೇಳರಿಯದ ಸಂಗತಿ! ಪ್ರಾಯಃ ಅದಕ್ಕೆಂದೇ ಅವರು ಸಹಿಸಿದರು! ಮನ್ನಿಸಿದರು! ಎರಡು ತಿಂಗಳು ಈ ರೀತಿಯ ಕಾರ್ಯಕ್ರಮ ಸಾಂಗವಾಗಿ ಸಾಗಿತು. ಉಡುಪಿಯ ಶ್ರೀಶದಾಸರು ಆಗ ಶ್ರೀಪಾದರ ಸೇವೆಗೆಂದು ಜೊತೆಗಿದ್ದವರು, ನನ್ನನೆರವಿಗೆ ಬಂದರು. ಹರಿದಾಸರಾದ ಅವರು ಈ ಅವಧಿಯಲ್ಲಿ ಹಲವು ರಾಗಗಳನ್ನು ಪರಿಚಯಿಸಿದರು. ನಮ್ಮಪ್ಪಯ್ಯ ಚಿಕ್ಕಂದಿನಲ್ಲಿ ಹೇಳಿಕೊಟ್ಟ ಹರಿದಾಸರ ಹಾಡುಗಳ, ಹಾಗೆಯೇ ನಾನು ಸಣ್ಣಂದಿನಲ್ಲಿ ಮೆಚ್ಚಿ ಗುನುಗುನಿಸುತ್ತಿದ್ದ, ಶಾಸ್ತ್ರೀಯ ಮಟ್ಟಿನ ಸಿನಿಮಾ ಹಾಡುಗಳ ಜಾಡು ಹಿಡಿದು,  ಅನುಕರಿಸಿ, ಶ್ಲೋಕಗಳಿಗೆ, ರಾಗ ಸಂಯೋಜಿಸಿ ಆ ದಿನಕ್ಕೆ ಸಿದ್ಧನಾಗಿ ವಾಚನ ಮಾಡುತ್ತಿದ್ದೆ! ಎರಡು ತಿಂಗಳ, ಹೈದಾರಾಬಾದ್‌ನ ನಮ್ಮ ವಾಸ್ತವ್ಯದ ಅವಧಿ ಮುಗಿದಾಗ ಹತ್ತನ್ನೆರಡು ರಾಗಗಳ ಪರಿಚಯ, ಅವುಗಳ ಸಲ್ಪಮಟ್ಟಿನ ಪ್ರಯೋಗ ಪರಿಣತಿ ನನಗಾಗಿತ್ತು! ಈ ಮಧ್ಯೆ ಎರಡು ಪುಟ್ಟಪುಟ್ಟ ದೇವರನಾಮಗಳ (ನಮ್ಮ ತಂದೆಯವರು ಹಿಂದೆ ಹೇಳಿಕೊಟ್ಟಿದ್ದ) ಕಛೇರಿಗಳನ್ನು ಶ್ರೀಶದಾಸರ ತಬಲಾವಾದನದೊಂದಿಗೆ ಅಲ್ಲಿ ಮಾಡಿದ್ದೆ! ಅಷ್ಟಲ್ಲದೆ ಆಗ ಅಲ್ಲಿನ ರೇಡಿಯೋ ನಿಲಯದಲ್ಲಿ, ಕನ್ನಡ ವಿಭಾಗದಲ್ಲಿದ್ದ ರಾಘವೇಂದ್ರ ಇಟಗಿ ಎಂಬುವರು ಹದಿನೈದು ನಿಮಿಷಗಳ, ದೇವರನಾಮಗಳ ಧ್ವನಿಮುದ್ರಣ ಮಾಡಿಸಿ ಪ್ರಸಾರ ಮಾಡಿದರು. ಅದೇ ಸಮಯಕ್ಕೆ ನಮ್ಮ ತಂದೆಯವರು ಯಾರದೋ ಒತ್ತ್ತಾಯಕ್ಕೆ ಕಂತಿನಲ್ಲಿ ಒಂದು ‘ರೆಮ್ಕೋ’ ರೇಡಿಯೋ ಕೊಂಡು ಮನೆಯಲ್ಲಿ ಸ್ಥಾಪಿಸಿದ್ದರು. ರೇಡಿಯೋದಲ್ಲಿ ನನ್ನ ಹಾಡುಗಳ ಪ್ರಸಾರದ ದಿನವನ್ನು ಮೊದಲೇ ತಿಳಿಸಿದ್ದೆನಾಗಿ ಆ ಹೊತ್ತಿಗೆ ನಮ್ಮೂರಲ್ಲಿ ರೇಡಿಯೋ ಮುಂದೆ, ಮಠದವರು, ಮನೆಯವರು ಎಲ್ಲರು ಜಮಾಯಿಸಿದ್ದರು! ನಮ್ಮ ಗುರುಗಳೂ ಬಂದು ಕೇಳಿದರಂತೆ! ಅವರೆಲ್ಲರಿಗು ಅದೊಂದು ಅಪೂರ್ವ ಸಂಭ್ರಮದ ಕ್ಷಣವಾಗಿತ್ತು!  ಸ್ವತಃ ಸಂಗೀತಗಾರರಾಗಿದ್ದ ನಮ್ಮಪ್ಪಯನಿಗಂತು ತಾವು ತಮ್ಮ ಬಗ್ಗೆ ಕಂಡ ಕನಸು ನನ್ನ ಮೂಲಕ ನನಸಾಗಿತ್ತು! ಶತಶ್ಲೋಕೇನ ಪಂಡಿತಃ ಎಂಬಂತೆ ನಾನೂ ಒಬ್ಬ ಪುಟ್ಟ ಸಂಗೀತಗಾರನಾಗಿ ಹೊರಹೊಮ್ಮಿದ್ದೆ!

ನೆನಪೇ ಸಂಗೀತ ೮:ಮೊದಲು ಮಧುರಸುಖ, ಕಡೆಯಲಿ ದುಃಖ ಅನೇಕ

ಆಕಾಶವಾಣಿಯಲ್ಲಿ ನನ್ನ ಈ ಮೊತ್ತಮೊದಲ ಕಾರ್ಯಕ್ರಮಕ್ಕೆಂದು ಸಂಭಾವನೆಯಾಗಿ ಇಪ್ಪತ್ತೈದು ರೂಪಾಯಿಗಳ ಚೆಕ್ ನೀಡಿದರು. ಸಣ್ಣ ಮೊತ್ತವೇ ಆಗಿದ್ದರೂ, ಅದು ನನ್ನ ಮೊದಲ ಸ್ವಂತ ಸಂಪಾದನೆಯಾಗಿದ್ದು, ಖುಷಿಯೆನಿಸಿತು. ಮುಂದೆ ಅದಮಾರು ಮಠದ ಹಿರಿಯ ಶ್ರೀಗಳಾದ ವಿಬುಧೇಶತೀರ್ಥರು ಈ ಕುರಿತು ನನಗದೇ ಮಾತಂದಿದ್ದರು. ಈ ಇಪ್ಪತ್ತೈದು ರೂಪಾಯಿಗಳು ಚಿಕ್ಕಮೊತ್ತವೆಂದುಕೊಳ್ಳಬೇಡಿ. ಇದು ನಿಮ್ಮ ಸ್ವಂತ ಪ್ರತಿಭೆಯಿಂದ, ಕಾಯಕದಿಂದಾದ ಸಂಪಾದನೆ. ಬಹಳ ಬೆಲೆಯುಳ್ಳದು!”

ನೀವ್ಯಾಕೆ ಹಿಂದೂಸ್ತಾನಿ ಸಂಗೀತವನ್ನು ಕ್ರಮದಂತೆ ಅಭ್ಯಸಿಸಬಾರದು? ನಿಮ್ಮ ಕಂಠಧ್ವನಿ ಆ ಪದ್ಧತಿಗೆ ಚೆನ್ನಾಗಿ ಹೊಂದುತ್ತದೆ ಎಂಬ ಆತ್ಮೀಯ ಸಲಹೆಯನ್ನು ನನಗೆ ನೀಡಿದವರಿದ್ದರು. ನನ್ನ ಸಂಗೀತ ಕಾರ್ಯಕ್ರಮ ಚೆನ್ನಾಗಿ ನಡೆಯಬೇಕೆಂದು ಹಾರೈಸಿದವರಿದ್ದರು. ಹಾಗೆಂದೇ ರಾಘವೇಂದ್ರ ಗುರುಗಳಿಗೆ  ಹರಕೆ ಹೊತ್ತು ಹೆಜ್ಜೆ ಹೆಜ್ಜೆ ನಮಸ್ಕಾರ ಸಲ್ಲಿಸಿದವರಿದ್ದರು! ತುಂಬ ಪ್ರೀತಿ ತೋರಿದ ಅಲ್ಲಿನ ಜನ, ಚಾತುರ್ಮಾಸ ಮುಗಿದು ನಮ್ಮನ್ನು ಬೀಳ್ಕೊಟ್ಟುದು ಒಂದು ಹೃದಯಸ್ಪರ್ಶಿ ಅನುಭವವೆನಿಸಿತು!

ನನಗೆ ಈಜುವುದು ಇಷ್ಟದ ಕ್ರೀಡೆಯಾಗಿತ್ತು, ವ್ಯಾಯಾಮವಾಗಿತ್ತು.  ನಮ್ಮೂರಿನ ‘ದರ್ಪಣ ತೀರ್ಥ’ದ ಸಣ್ಣ ಹೊಳೆಗೆ ಬೇಸಿಗೆಯಲ್ಲಿ ‘ಕಟ್ಟ’ (ಪುಟ್ಟ ಅಣೆಕಟ್ಟು) ಕಟ್ಟಿದರೆ, ಮೊದಲ ಒಂದು ತಿಂಗಳು ನೀರು ನಿರ್ಮಲವಾಗಿರುತ್ತಿದ್ದು, ಬೆಳಿಗ್ಗೆ-ಸಂಜೆ ತುಂಬ ಹೊತ್ತು ಈಜುತ್ತಿದ್ದೆ. ಇತರ ಲಘು ವ್ಯಾಯಾಮವನ್ನು ಪ್ರತಿದಿನವೆಂಬಂತೆ ರೂಢಿಸಿಕೊಂಡಿದ್ದೆ. ಗುರುಗಳ ಜೊತೆ ಸಂಚಾರದಲ್ಲಿದ್ದಾಗಲು ಬೆಳಗಿನ ಅವಗಾಹನ ಸ್ನಾನಕ್ಕೆಂದು ಯಾವುದಾದರು ಕಲ್ಯಾಣಿ, ನದಿಗಳನ್ನು ಅರಸಿಕೊಂಡು ಹೋಗುತ್ತಿದ್ದೆವು. ಗುರುಗಳು ಸ್ನಾನ ಮಾಡಿ ಆಹ್ನಿಕದಲ್ಲಿ ಮಗ್ನರಾಗಿದ್ದರೆ, ನಾನು ಸುಸ್ತಾಗುವ ತನಕ ಚೆನ್ನಾಗಿ ಈಜಾಡುತ್ತಿದ್ದೆ.  ವಾರಕ್ಕೆರಡು ಅಭ್ಯಜನ ಸ್ನಾನ ನನ್ನ ತುಂಬ ಇಷ್ಟವಾದ ಹವ್ಯಾಸವಾಗಿತ್ತು. ಆ ದಿನಗಳಲ್ಲಿ ನನ್ನ ಅಂಗಸೌಷ್ಟವದ ಬಗ್ಗೆ, ಆಕರ್ಷಕವಾಗಿ ಕಾಣಬೇಕೆಂಬುವ ಬಗ್ಗೆ ಕಾಳಜಿ ವಹಿಸುತ್ತಿದ್ದೆ. ಇಪ್ಪತ್ತು ಇಪ್ಪತ್ತೈದರ ಆಸುಪಾಸಿನ ಆ ಯೌವನದಲ್ಲಿ ನನಗದು ಸಹಜವೇ ಆಗಿತ್ತು. ಆಗೊಮ್ಮೆ ಯಾವುದೋ ಊರಲ್ಲಿ ನಾವು ಗುರುಶಿಷ್ಯರ ವಾಸ್ತವ್ಯವಿದ್ದಾಗ, ವಾಚನ-ಪ್ರವಚನ ನಡೆಯುತ್ತಿದ್ದ ದಿನಗಳಲ್ಲಿ, ಒಂದು ಕಡೆ ನಾವಿಬ್ಬರೇ ಕುಳಿತಿದ್ದಾಗ, ಯಜಮಾನರೊಬ್ಬರು ಬಂದು, ಸ್ವಾಮಿಗಳೇ ನಿಮ್ಮ ವಾಚನ ಪ್ರವಚನ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತದೆ.  ಜನರಿಗೆ ತುಂಬ ಇಷ್ಟವಾಗಿಬಿಟ್ಟಿದೆ. ಇವರ (ನನ್ನನ್ನು ತೋರಿಸಿ) ಪದವಂತು ಹೆಂಗಸರಿಗೆಲ್ಲ ತುಂಬ ಇಷ್ಟ ಎಂದುಬಿಟ್ಟರು! ನನಗೆ ಸಂಕೋಚವೆನಿಸಿತು. ಆ ಮಹನೀಯರು ಅತ್ತ ತೆರಳಿದರೆ ಕೂಡಲೆ ಗುರುಗಳು ನನ್ನನ್ನು ಕುರಿತು ನಿಮ್ಮ ಶರೀರ-ಶಾರೀರ (ಕಂಠಧ್ವನಿ) ಎರಡರಿಂದಲು ನೀವು ಹೆಂಗಸರಿಗೆ ಆಕರ್ಷಣೀಯರಾಗಿಬಿಟ್ಟಿದ್ದೀರಿ ಎಂದು ಅಂದುಬಿಟ್ಟರು. ಅದು ವ್ಯಂಗ್ಯವೋ, ತಮಾಷೆಯೋ ಅರಿಯದಾದೆ. ಸುಮ್ಮನೆ ಅವರನ್ನು ನೋಡಿದೆ. ಮತ್ತೆ ಮೌನವಾಗಿ ನಕ್ಕೆ!

ನಮ್ಮ ‘ವಾಚನ ಪ್ರವಚನ’ ಕಾರ್ಯಕ್ರಮಗಳು ನಿಜವಾಗು ಜನಪ್ರಿಯವಾಗಿದ್ದುವು.  ಸ್ವಾಮಿಗಳಿಬ್ಬರು ಜತೆಗೂಡಿ ಅಂತಹ ಕಾರ್ಯಕ್ರಮ ನಿರ್ವಹಿಸುವರೆಂದರೆ ಅದೊಂದು ಅಪೂರ್ವ ಸಂಗತಿ ತಾನೆ? ಚಾತುರ್ಮಾಸದ ಸಂದರ್ಭ ಶ್ರೀಮದ್ಭಾಗವತ, ಇತರ ಸಂದರ್ಭ ರಾಮಾಯಣ, ಭಗವದ್ಗೀತೆ, ಹರಿಕಥಾಮೃತಸಾರವೆಂದು ವಿಷಯಗಳನ್ನು ಆಯ್ದು ವಾಚನ-ಪ್ರವಚನದ ಅನೇಕ ಆವೃತ್ತಿಗಳು ಬೇರೆಬೇರೆ ಊರುಗಳಲ್ಲಿ ಆಗಿಹೋದುವು!  ಭಾಗವತವನ್ನು ಪರೀಕ್ಷಿತನಿಗೆ ಬೋಧಿಸಿದವನು ವೇದವ್ಯಾಸರ ಮಗನಾದ ‘ಶುಕಮುನಿ’. ಭಾಗವತವನ್ನು ಹೃದಯಂಗಮವಾಗಿ ಪ್ರವಚನಗೈವ ನಮ್ಮ ಗುರುಗಳನ್ನು ಭಕ್ತಜನ ‘ಶುಕಮುನಿ’ಗಳೆಂದು ಕೊಂಡಾಡಿತು! ಹಾಡುವ ನನ್ನನ್ನು ‘ಪಿಕಮುನಿ'(ಕೋಗಿಲೆ)ಯೆಂದು ಬಣ್ಣಿಸಿತು! (ಮನಸನ್ನು ನೇರವಾಗಿ ಓದುವ ವಿದ್ಯೆ ತಿಳಿದಿದ್ದರೆ ಜನ ಚಂಚಲಮನದ ನನ್ನನ್ನು ‘ಕಪಿಮುನಿ’ಯೆಂದು ಬದಲಿಸಿ ಬಣ್ಣಿಸುತ್ತಿದ್ದರೇನೋ? ಸದ್ಯ ಹಾಗಾಗಲಿಲ್ಲ!). ಬೆಂಗಳೂರಿನ ನಿಯತಕಾಲಿಕವೊಂದು ನಮ್ಮನ್ನು ‘ಅಪೂರ್ವ ಜೋಡಿ’ಯೆಂದು ಹೆಸರಿಸಿತು!  ಮುಂದೆ ಸ್ವತಃ ಗುರುಗಳಾದ ಪೇಜಾವರರೇ, ಅವರಿಗೆ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಹೆಚ್ಚು ಹೆಚ್ಚು ವಿಮಾನದಲ್ಲಿ ಪ್ರಯಾಣಿಸಬೇಕಾಗಿ ಬಂದಾಗ ನಾವು ಹಾರುವ ಸ್ವಾಮಿಗಳು- ವಿದ್ಯಾಭೂಷಣರು ಹಾಡುವ ಸ್ವಾಮಿಗಳು  ಎಂದು ಹೇಳುತ್ತಿದ್ದರು. ಏನೇ ಇರಲಿ ಇದರಿಂದ ನನಗಾದ ಲಾಭ ದೊಡ್ಡದೇ. ಈ ನೆವದಲ್ಲಿ ಭಾಗವತ-ರಾಮಾಯಣದಂತಹ ಉದ್ಗ್ರಂಥಗಳನ್ನು ಅವಲೋಕಿಸುವ, ಅವುಗಳ ವಿವರಣೆಯನ್ನು ಗುರುಗಳ ಮುಖದಿಂದಲೇ ಕೇಳುವ ಅವಕಾಶ ನನಗಾಯಿತು. ಅಲ್ಲದೆ ಅನಿವಾರ್ಯವೆಂಬಂತೆ ಬೇರೆಬೇರೆ ರಾಗಗಳನ್ನು ಕಲಿತು, ಸಂಸ್ಕೃತ ಶ್ಲೋಕಗಳಿಗೆ, ಹರಿದಾಸರ ಪದಗಳಿಗೆ ಸಂಯೋಜಿಸುವ ಕಲೆ ನಿಧನಿಧಾನವಾಗಿ ನನಗೆ ಸಿದ್ಧಿಸಿತು. ಇವೆಲ್ಲ ಮುಂದೆ ನಾನೇ ಸ್ವತಃ ವಾಚನ-ಪ್ರವಚನ ಮಾಡಲು ಒದಗಿಬಂತು. ಪ್ರಾಯಃ ಈ ಕಾಲದಲ್ಲೆ ಮುಂದೆ ಜನಮೆಚ್ಚಿದ, ಪಿಳ್ಳಂಗೋವಿಯ ಚೆಲ್ವ ಕೃಷ್ಣನ, ನಮ್ಮಮ್ಮ ಶಾರದೆ, ಮಧುಕರ ವೃತ್ತಿ ಎನ್ನದು, ಕಾಡ ಬೆಳದಿಂಗಳು ಮುಂತಾದ ಹರಿದಾಸರ ಹಾಡುಗಳಿಗೆ ರಾಗ ಸಂಯೋಜಿಸಿದ್ದೆ.  ಆಗೆಲ್ಲ ನನ್ನ ನೆರವಿಗೆ ಬಂದವರು ಕಾಸರಗೋಡಿನ ಬಾಬುರೈಗಳು, ಉಡುಪಿಯ ಶ್ರೀಶದಾಸರು.ಹಾಡುತ್ತಿರುವ ವಿದ್ಯಾಭೂಷಣ

ಆಚಾರ್ಯ ಮಧ್ವರ ‘ದ್ವಾದಶ ಸ್ತೋತ್ರ’ ಆಚಾರ್ಯರು ಸಂದರ್ಭಾನುಸಾರ ರಚಿಸಿದ ಹನ್ನೆರಡು ಸಂಸ್ಕೃತ ಸ್ತೋತ್ರಗಳ ಸಂಗ್ರಹ. ತುಂಬ ಸುಂದರವಾದ ಹಾಡುಗಬ್ಬಗಳಿವು. ಇವುಗಳಲ್ಲಿನ ಕೆಲವು ರಚನೆಗಳಲ್ಲಿ ಸಮೂಹಗಾನದಲ್ಲಿ ಹಾಡಲಾಗುವ ಪಲ್ಲವಿಯಂತಹ ಸಾಲುಗಳಿವೆ. ಆಚಾರ್ಯರು ತಮ್ಮ ಕಾಲ್ನಡಿಗೆಯ ಪ್ರವಾಸ ಕಾಲದಲ್ಲಿ ಶಿಷ್ಯರೊಂದಿಗೆ ಈ ಸ್ತೋತ್ರಗಳನ್ನು ಹಾಡುತ್ತಾ ಹೆಜ್ಜೆಯಿಟ್ಟರಂತೆ. ಮಲ್ಪೆಯ ಸಮುದ್ರ ತೀರದಿಂದ ಉಡುಪಿಯ ಮಠದ ತನಕ, ಕೃಷ್ಣ ಪ್ರತಿಮೆಯನ್ನು ಹೊತ್ತು ತರುತ್ತಾ, ಈ ಸ್ತೋತ್ರಗಳನ್ನು ಹಾಡುತ್ತಾ, ನಲಿಯುತ್ತಾ ಬಂದರಂತೆ! ಮಾಧ್ವ ಸಮುದಾಯದಲ್ಲಿ ಈ ಸ್ತೋತ್ರಗಳ ಪಠಣ, ಹಾಡಿಕೆಗೆ ಬಹಳ ಮಹತ್ವವಿದೆ. ಹರಿದಾಸರು ಕೀರ್ತನೆಗಳನ್ನು ರಚಿಸುವಲ್ಲಿ ಈ ಸರಳ, ಸುಂದರ, ಅರ್ಥಗರ್ಭಿತ ಸ್ತೋತ್ರಗಳಿಂದ ಸ್ಪೂರ್ತಿ ಪಡೆದರೆಂಬ ಪ್ರತಿಪಾದನೆಯಿದೆ. ಮಠ ಸಂಪ್ರದಾಯದಲ್ಲಿ, ಪೂಜಾಕಾಲದಲ್ಲಿ, ನೈವೇದ್ಯ ಸಮರ್ಪಣೆಯ ಸಂದರ್ಭ ಭಾಗವತರು ಚೂರ್ಣಿಕೆಯ ರಾಗಾಲಾಪನೆಯ ಶೈಲಿಯಲ್ಲಿ, ಅನಿಬದ್ಧವಾಗಿ, ನಡುನಡುವೆ ಚಕ್ರತಾಳವನ್ನು ಉರುಟುರುಟಾಗಿ ತಟ್ಟುತ್ತಾ ಸುಂದರವಾಗಿ ಹಾಡುತ್ತಾರೆ. ನಮ್ಮ ಹಿರಿಯರು ಹಾಡುತ್ತಿದ್ದುದನ್ನು ಅನುಕರಿಸಿ ನಾನೂ ಹಾಡುತ್ತಿದ್ದೆ. ಪ್ರಸಿದ್ಧ ವಾಗ್ಗೇಯಕಾರರಾಗಿದ್ದ ಮೈಸೂರು ವಾಸುದೇವಾಚಾರ್ಯರು ನಿಬದ್ಧವಾಗಿ ರಾಗ ಸಂಯೋಜಿಸಿ, ಸ್ವರಪಡಿಸಿ ಈ ಸ್ತೋತ್ರಗಳನ್ನು ಶಿಷ್ಯರಿಂದ ಹಾಡಿಸಿದ್ದರು. ನಾನೂ ಕೆಲವು ಸ್ತೋತ್ರಗಳನ್ನು ಆಯ್ದು ನನ್ನದೇ ಆದ ರೀತಿಯಲ್ಲಿ ನಿಬದ್ಧವಾಗಿ ರಾಗ ಸಂಯೋಜಿಸಿ ಹಾಡಿ ಕೊಳ್ಳುತ್ತಿದ್ದೆ. ಆ ವರ್ಷ ಹೈದ್ರಾಬಾದ್ ನಲ್ಲಿ ಗುರುಗಳಾದ ಪೇಜಾವರರು ಅಖಿಲ ಭಾರತ ಮಟ್ಟದಲ್ಲಿ ಮಾಧ್ವ ಸಮ್ಮೇಳನವನ್ನು ಸಂಘಟಿಸಿದ್ದರು. ಅಲ್ಲಿನ ಮಹಾ ಸಭೆಯಲ್ಲಿ, ಪ್ರೀಣಯಾಮೋ ವಾಸುದೇವಂ ಎಂಬ ಸ್ತೋತ್ರವನ್ನು, ಮೋಹನ ರಾಗದಲ್ಲಿ ಸಂಯೋಜಿಸಿದುದನ್ನು, ತಕ್ಕ ಪಕ್ಕವಾದ್ಯಗಳೊಂದಿಗೆ ಹಾಡಿಯೂ ಹಾಡಿದೆ. ನೆರೆದ ಜನ ಆಚಾರ್ಯ ಮಧ್ವರ ದ್ವಾದಶ ಸ್ತೋತ್ರವನ್ನು ಈ ರೀತಿ ಹಾಡಿದುದನ್ನು ಮೆಚ್ಚಿ ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ಮಾಧ್ವ ಸಮುದಾಯಗಳಲ್ಲಿ, ಕೆಲವು ಮಠಗಳಲ್ಲು ಈ ಸ್ತೋತ್ರಗಳನ್ನು ನಾನು ಹಾಡಿದ ರೀತಿಯಲ್ಲೆ ಹಾಡಿಕೊಂಡು ಬಂದರು!

ಈ ಮಧ್ಯೆ ಹೆಚ್ಚು ಹೆಚ್ಚು ಸಂಗೀತ ಕಛೇರಿಗಳನ್ನು ಆಲಿಸುವುದನ್ನು ರೂಢಿಸಿಕೊಂಡಿದ್ದೆ, ಕುಕ್ಕೆಯಲ್ಲಿ ನರಸಿಂಹ ಜಯಂತಿಯ ಸಂದರ್ಭ ನಡೆಸುತ್ತಿದ್ದ ವಿದ್ವಾಂಸರ ಕಛೇರಿಗಳಲ್ಲದೆ, ಬೆಂಗಳೂರಿನ ಶ್ರೀರಾಮ ನವಮಿಯ ಕಾಲದಲ್ಲಿ ನಡೆಯುತ್ತಿದ್ದ, ದೇಶದ ಅತ್ಯುತ್ತಮ ಸಂಗೀತಗಾರರ ಕಛೇರಿಗಳನ್ನು ಕೇಳುತ್ತಿದ್ದೆ.  ಸಂಜೆಯ ಪೂಜಾಹ್ನಿಕಗಳನ್ನು ಬೇಗ ಬೇಗನೆ ಪೂರೈಸಿ, ಸ್ಥಳಕ್ಕೆ ಧಾವಿಸಿ, ಕುಳಿತು ಕೇಳುತ್ತಿದ್ದೆ. ಭಕ್ತರೊಬ್ಬರು ಪುಟ್ಟ ಟೇಪ್ ರೆಕಾರ್ಡರ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ದೇವರ ಪೆಟ್ಟಿಗೆಯಂತೆ ಸದಾ ಬಗಲಲ್ಲಿಟ್ಟುಕೊಂಡು, ಕಛೇರಿಯು ನಡೆಯುತ್ತಿದ್ದಲ್ಲಿಗೆ ಕೊಂಡೊಯ್ದು, ಧ್ವನಿಮುದ್ರಿಸಿಕೊಳ್ಳುತ್ತಿದ್ದೆ. ಕೇಳಿದುದನ್ನು ಮತ್ತೆಮತ್ತೆ ಕೇಳುತ್ತಿದ್ದೆ. ಕೇಣ್ಮೆ ರಂಜನೆಯೊಂದಿಗೆ ಸಂಗೀತದ ಕುರಿತಾಗಿ ಉತ್ತಮ ಸಂಸ್ಕಾರ ನೀಡುವಂತಹುದು ತಾನೆ? ಅಲ್ಲದೆ ನಾನೂ ಕ್ರಮವರಿತು, ಯೋಗ್ಯ ಗುರುಗಳಲ್ಲಿ ಸಂಗೀತ ಶಿಕ್ಷಣ ಪಡೆಯಲೇಬೇಕೆಂಬ ಆಸೆ ಬಲವಾಗುತ್ತಿತ್ತು ಮತ್ತು ಅದಕ್ಕೆ ದಿನಗಳು ಸಮೀಪಿಸುತ್ತಲೂ ಇದ್ದುವು.

ನಮ್ಮ ಗುರುಗಳು ವೃದ್ಧರಾಗಿದ್ದು, ಸಹಜವಾಗಿ ಅವರ ಆರೋಗ್ಯವೂ ಕ್ಷೀಣಿಸುತ್ತಿತ್ತಾಗಿ, ಆದಷ್ಟು ಶೀಘ್ರ ಪೇಜಾವರ ಶ್ರೀಪಾದರಲ್ಲಿ ನನ್ನ ಒಂದು ಹಂತದ ವಿದ್ಯಾಭ್ಯಾಸವನ್ನು ಸಂಪನ್ನಗೊಳಿಸಬೇಕಿತ್ತು. ಅದಕ್ಕೆಂದೆ ನ್ಯಾಯಸುಧಾಗ್ರಂಥದ ಪಾಠವನ್ನು ಶ್ರೀಪಾದರು ನನಗೆ ಮಾಡತೊಡಗಿದರು!  ನ್ಯಾಯಸುಧಾಪಾಠವೆಂದರೆ ಪ್ರತಿದಿನ ಬಿಡದೆ ಮಾಡಿದರು ಮುಗಿಯಲು ಎರಡು ವರ್ಷಗಳ ಅವಕಾಶ ಬೇಕು. ಆಚಾರ್ಯ ಮಧ್ವರ ಸೂತ್ರಭಾಷ್ಯ, ಅನುವ್ಯಾಖ್ಯಾನಗಳ ವಿಸ್ತೃತ ಟೀಕೆಯಾದ ಈ ಉದ್ಗ್ರಂಥದ ಅಧ್ಯಯನವೆಂದರೆ ಮಾಧ್ವವೇದಾಂತ ಜಿಜ್ಞಾಸುಗಳಲ್ಲಿ ಒಂದು ಉನ್ನತಮಟ್ಟವನ್ನು ತಲುಪಿದ ಧನ್ಯತೆ! ಇಂತಹ ಗ್ರಂಥದ ಅಧ್ಯಾಪನವನ್ನು ಪೇಜಾವರ ಶ್ರೀಪಾದರು ಬಹಳ ವರ್ಷಗಳ ತಮ್ಮ ಅನುಭವ, ಶಾಸ್ತ್ರಪಾಂಡಿತ್ಯ, ಪ್ರತಿಭೆಗಳಿಂದ ಅತಿ ಸುಲಭವಾಗಿ ಮಾಡಬಲ್ಲರು! ಹಾಗಿದ್ದರು ಗುರುಗಳ ಅನಾರೋಗ್ಯ ನಿಮಿತ್ತ, ಸಹಾಯಕ್ಕೆಂದು ಕುಕ್ಕೆಗೆ ಹೆಚ್ಚು ಹೆಚ್ಚು ಬಂದಿರಬೇಕಿತ್ತು. ಹೀಗೆ ಸುಧಾಪಾಠ ನಿಧಾನವಾಗಿ ಸಾಗಹತ್ತಿತು. ಇಂಥ ಒಂದು ಸಂದರ್ಭ ಪೇಜಾವರ ಶ್ರೀಪಾದರು ನನಗೆ ಪಾಠ ಹೇಳಲೆಂದೇ, ಆ ವರ್ಷದ ಚಾತುರ್ಮಾಸ ವ್ರತವನ್ನು ಕುಕ್ಕೆಯಲ್ಲೇ ಕೈಗೊಂಡರು. ಅಷ್ಟುಕಾಲ, ಸದಾ ಚಟುವಟಿಕೆಯಿಂದಿರುವ ಗುರುಗಳು ಪುಟ್ಟ ಊರಾದ ಸುಬ್ರಹ್ಮಣ್ಯವನ್ನು ಬಿಟ್ಟು ಹೊರಹೋಗಕೂಡದು. ನದಿ ದಾಟಬಾರದು. ಪ್ರಾಯಃ ಇಡಿಯ ಸುಬ್ರಹ್ಮಣ್ಯ ಮಠದ, ಕ್ಷೇತ್ರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಅನ್ಯ ಮಠಾಧೀಶರೊಬ್ಬರು, ಇಲ್ಲಿ ಈ ವ್ರತ ಕೈಗೊಂಡುದುದಾಗಿತ್ತು!

ಪೇಜಾವರರೊಂದಿಗೆ ವಿದ್ಯಾಭೂಷಣಆದರೆ ನಾನು. ಇಂತಹ ದೊಡ್ಡವರ ಮಾರ್ಗದರ್ಶನ ನನಗೆ ಲಭಿಸಿತ್ತು.  ಆದರೂ ವ್ಯಾಸಂಗದಲ್ಲಿ ತತ್ಪರತೆ ನನಗೆ ಮೊದಲಿಂದಲೂ ಒದಗಿಬರಲಿಲ್ಲ.  ವೇದಾಂತವು ನನಗೆ ಆಸಕ್ತಿಯ ವಿಷಯವೇ ಆಗಿತ್ತಾದರೂ, ಅಧ್ಯಯನದಲ್ಲಿ ತೀವ್ರತೆ ಇರಲಿಲ್ಲ. ‘ಮನಶುದ್ಧಿ ಇಲ್ಲದವಗೆ ಮಂತ್ರದ ಫಲವೇನು’. ಮನವನ್ನು ಆವರಿಸಿದ್ದ ಲೌಕಿಕ ಕಾಮನೆಗಳು, ನನ್ನ ಜವಾಬ್ದಾರಿಯ ಧರ್ಮದ ಅನುಸಂಧಾನದಲ್ಲಿ, ಸ್ವಾಧ್ಯಾಯ ಅಭ್ಯಸನಗಳ ತಪದ ಸಾಧನೆಯಲ್ಲಿ ಅಡ್ಡಿಯಾಗಿ ಬಂದಿದ್ದವು. ಕಾಮಿನೀ ಜಿಜ್ಞಾಸೆಯು ಬ್ರಹ್ಮ ಜಿಜ್ಞಾಸೆಗೆ ಬಹುದೊಡ್ಡ ತಡೆಯಂತೆ! ನನ್ನದಲ್ಲದ ಈ ಧರ್ಮಪೀಠದಲ್ಲಿದ್ದು ನನಗದಾವುದೂ ಬೇಡವಾಗಿತ್ತು. ನಾನು ಮೊದಲಿಂದಲೂ ಪರರ ದಾಕ್ಷಿಣ್ಯಕ್ಕೆ ಒಳಗಾಗಿ ನಾನಾಗಿಯೇ ಇಂತೆಲ್ಲ ತೊಡಕಿಗೆ ಸಿಲುಕಿಕೊಂಡೆ. ಸುಮ್ಮಸುಮ್ಮನೆ ಜನಾನುರಾಗಕ್ಕೆ ಒಳಗಾದೆ. ಪೇಜಾವರ ಶ್ರೀಪಾದರಂತಹ ಸಮಾಜದ ಅತ್ಯುನ್ನತ ಧಾರ್ಮಿಕ ನೇತಾರರ ಶಿಷ್ಯನಾಗಿ ಜನರ ಮನದಲ್ಲಿ ಬಿಂಬಿತನಾದೆ. ಕ್ಷುಲ್ಲಕ ಸೊಳ್ಳೆಯೊಂದು ಒಂದೊಮ್ಮೆ ಸೊಳ್ಳೆ ಪರದೆಯ ಒಳಸೇರಿದರೆ, ಸುಲಭವಾಗಿ ದೊರೆಯುವ ರಕ್ತ ಹೀರದು! ಬದಲು ಎಷ್ಟು ಬೇಗ ಸಾಧ್ಯವೋ ಅಷ್ಟು ತ್ವರಿತವಾಗಿ ಹೊರಬರಲು ಪ್ರಯತ್ನಿಸೀತು! ಆದರೆ ನಾನು ಅಥವಾ ನನಗರಿಯದೆಯೇ ನನಗೂ ಹೆಸರ್ಹುಚ್ಚೇ? ಛೇ! ನನಗ್ಯಾಕೀ ದೌರ್ಬಲ್ಯ? ಇನ್ನೂ ಇನ್ನೂ ನಾನು ತೊಡಕಿಗೆ ಸಿಲುಕಿಕೊಳ್ಳಬಾರದು. ಮುಂದೆ ‘ಸುಧಾಮಂಗಳ’ದಂತಹ ಉತ್ಸವ ನಡೆದರೆ ಇನ್ನಷ್ಟು ಜವಾಬ್ದಾರಿ, ಬಂಧನ ನನಗಾಗಲಿದೆ. ನಾನು ಹೊರ ಬರಬೇಕು- ಬರಲೇಬೇಕು.

ಗುರುಗಳಾದ ಪೇಜಾವರ ಶ್ರೀಪಾದರಿಗೆ ನನ್ನ ಒಳತುಮುಲಗಳೆಲ್ಲ ಎಂದೋ ಅರ್ಥವಾಗಿದ್ದವು. ಆದರೆ ಅವರೆಂದೂ ಸಂನ್ಯಾಸ ತ್ಯಾಗಕ್ಕೆ ನನಗೆ ಒಪ್ಪಿಗೆ ನೀಡುವವರಲ್ಲ. ‘ಸುಧಾಮಂಗಳ’ದ ದಿನಗಳು ಸಮೀಪಿಸುತ್ತಿದ್ದವು.  ತಂದೆಯವರಲ್ಲಿ ಮೊದಲ ಬಾರಿಗೆ ವಿಷಯ ಪ್ರಸ್ತಾಪಿಸಿದೆ. ಅನೀರಿಕ್ಷಿತವಾದ ಮಾತು ಅವರಿಗದು- ಆಘಾತಕಾರಿಯಾಗಿತ್ತು! ಏನು ಗತಿ?- ಎಂಬಂತೆ ತಡವರಿಸಿದರವರು! ಅವರಿಗದೊಂದು ನಿಶ್ಚಯವಾಗು ಅಸಹನೀಯ ಸಂಗತಿಯಾಗಿತ್ತು. ಒಂದೆರಡು ನಿಮಿಷಗಳು ನಾವಿಬ್ಬರು ಸುಮ್ಮನಿದ್ದೆವು. ಮತ್ತೆ ಮೆಲ್ಲನೆ ಅಲ್ಲಿಂದ ಹೊರಬಂದೆ!

ಮರುದಿನ ಗುರುಗಳು ನನ್ನನ್ನು ಕರೆಸಿಕೊಡರು. ಗೋವಿಂದ ಹೇಳಿದ, ಅವರಂದರು- ಈಗ ನೀವು ಆಶ್ರಮ ಬಿಟ್ಟರೆ ಚೆನ್ನಾಗಿರುವುದಿಲ್ಲ. ನಮ್ಮ ಸುತ್ತಮುತ್ತ ನಮಗಾಗುವವರಿಲ್ಲ! ನೀವು ಬಿಟ್ಟರೆ ಅವರೆಲ್ಲ ನಗುವವರೇ! ಅಪಹಾಸ್ಯ ಮಾಡುವವರೇ! ಎಷ್ಟೊಂದು ಅವಮಾನ ನಮಗೆಲ್ಲ! ಒಂದು ವೇಳೆ ಬಿಟ್ಟ ಮೇಲೂ ನೀವು ಚೆನ್ನಾಗಿ ಬಾಳಿ ಬದುಕಬೇಕು. ಅದು ಸಾಧ್ಯವೇ? ಯೋಚಿಸಿ ನೋಡಿ. ‘ಮೊದಲು ತೋರುತದೆ ಮಧುರ ವಿಷಯ ಸುಖ- ಕಡೆಯಲಿ ದುಃಖ ಅನೇಕ’. ಅವರದು ಅನುಭವದ ಮಾತು. ನಾನು ಸುಮ್ಮನಾದೆ.

ಮತ್ತೆರಡು ದಿನಗಳಲ್ಲಿ ಯಾಕೋ, ಏನೋ ಸಂದರ್ಭ ಪೇಜಾವರ ಶ್ರೀಪಾದರು ನಮ್ಮಲ್ಲಿದ್ದರು. ಅವರಿಗು ವಿಷಯ ತಿಳಿಯಿತು. ಅವರಿಗೆ ತಿಳಿಯಿತೋ ಅವರ, ಮಠದ ಶಿಷ್ಯವರ್ಗದವರಿಗೂ ತಿಳಿಯಿತು. ಅವರಿಗೆಲ್ಲ ನನ್ನಲ್ಲಿ ತುಂಬಿದ ಅಭಿಮಾನ, ಪ್ರೀತಿ, ಗೌರವ. ಅವರೆಲ್ಲ ಸಹಜವಾಗೆ ಪ್ರತಿಭಟಿಸಿದರು!  ಅಷ್ಟೊತ್ತಿಗಾಗಲೇ ಯಾರೋ ನಮ್ಮಮ್ಮನನ್ನು ನನ್ನೆಡೆಗೆ ‘ಛೂ’ ಬಿಟ್ಟಿದ್ದರು!  ಗೋಳಾಟದೊಂದಿಗೆ ನಾವಿದ್ದಲ್ಲಿಗೆ ಬಂದಿದ್ದಳು. ‘ಯಾಕೆ ನೀವೀಥರ ಮಾಡುತ್ತೀರಿ? ಹಾಗೇನಾದರು ಆದರೆ ನಾನಿರುವುದಿಲ್ಲ’ -ಅಳುತ್ತಾ ಬೆದರಿಸಿದಳು! ನಾನು ನನ್ನ ವಸತಿಯ ಕೊಠಡಿಗೆ ಹಿಂತಿರುಗಿದೆ. ಪೇಜಾವರರು ನನ್ನ ಜತೆ ಬಂದರು. ನನ್ನಿಬ್ಬರು ತಮ್ಮಂದಿರು ಹಿಂಬಾಲಿಸಿದರು. ತುಂಬ ಹೊತ್ತು ಸುಮ್ಮನಿದ್ದೆ. ಮತ್ತೆ ಒಮ್ಮೆಲೇ ತಡೆಯಲಾರದೆ ಅತ್ತುಬಿಟ್ಟೆ! ಜತೆಗೆ ನನ್ನ ತಮ್ಮಂದಿರೂ ಅತ್ತರು! ಪೇಜಾವರರು ನನ್ನ ಬೆನ್ನನ್ನು ವಾತ್ಸಲ್ಯದಿಂದ ತಡವಿ ನೇವರಿಸಿ ಮತ್ತೆ ಹೊರನಡೆದರು.

ದಿನಾಂಕ ೦೪-೦೫-೧೯೭೪ರಂದು ವಿಜೃಂಭಣೆಯಿಂದ ನನ್ನ ‘ಸುಧಾಮಂಗಳ ಕಾರ್ಯ’ ನಡೆಯಿತು!

ನೆನಪೇ ಸಂಗೀತ-೯: ಗಣಪತಿ ಮದುವೆ ನಾಳೆ!ಪಲಿಮಾರು ಸ್ವಾಮಿಗಳು

ನ್ಯಾಯಸುಧಾಮಂಗಳವನ್ನು ಶ್ರೀಮಠದ ವಾರ್ಷಿಕ ನರಸಿಂಹ ಜಯಂತಿಯ ಉತ್ಸವಗಳ ಮಧ್ಯೆಯೇ ಇರಿಸಿಕೊಳ್ಳಲಾಗಿತ್ತು. ಉಡುಪಿಯಿಂದ ಗುರುಗಳಾದ ಪೇಜಾವರ ಶ್ರೀಪಾದರು, ವಿಶೇಷವಾಗಿ ಹಿರಿಯ ಪಲಿಮಾರು ಸ್ವಾಮಿಗಳು ಆಗಮಿಸಿದ್ದರು. ವಿದ್ವಾಂಸರು, ಭಕ್ತರು, ಅಭಿಮಾನಿಗಳು ಸೇರಿದ್ದ ಸಂಭ್ರಮವದು.  ಬೆಳಗಿನಲ್ಲಿ ಮಂಗಳ ಮಹೋತ್ಸವ, ಪೇಜಾವರರಿಂದ ಸುಧಾನುವಾದ, ವ್ಯಾಸಪೂಜೆ. ಸಂಜೆ ವಿದ್ವತ್ ಸಭೆ. ಅಂತಹ ಧಾರ್ಮಿಕ-ವಿದ್ವತ್ ಸಭೆಯಲ್ಲಿ ಗುರುಗಳಾದ ಪೇಜಾವರರ ಆದೇಶದಂತೆ ನಾನೂ ಸುಧಾನುವಾದ ಮಾಡಿದ್ದೆ!  (ಆ ಬೃಹತ್ ಗ್ರಂಥದಿಂದ ವಿಷಯವೊಂದನ್ನು ಆಯ್ದು, ಅಲ್ಲಿ ಪ್ರತಿಪಾದಿತ ಪ್ರಮೇಯ-ಪ್ರಮಾಣಗಳನ್ನು ನಿರ್ದುಷ್ಟವಾಗಿ ಮರುನಿರೂಪಣೆ ಮಾಡುವ ಬಗೆಯದು. ಅನುವಾದಕನ ಅಧ್ಯಯನ-ಅಧ್ಯಾಪನ ಸಾಮರ್ಥ್ಯದ ಮಾನದಂಡವೂ ಹೌದದು!) ನಾನು ಮಾಡಿದ ಅನುವಾದವನ್ನು ಗುರುಗಳು-ವಿದ್ವಾಂಸರು ಮೆಚ್ಚಿಕೊಂಡಿದ್ದರು. ಸಮಾರಂಭಗಳೆಲ್ಲ ಅಚ್ಚುಕಟ್ಟಾಗಿ, ಚೆನ್ನಾಗಿಯೇ ನಡೆದವು. ವಿದ್ವಾಂಸರಿಂದ ಉಪನ್ಯಾಸಗಳು, ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಕಳೆ ನೀಡಿದವು. ಈ ವಿಶೇಷ ಉತ್ಸವದಿಂದ ಪ್ರೇರಣೆ ಪಡೆದಂತೆ, ಪಕ್ಕದ ದೇವಸ್ಥಾನದ ಆಡಳಿತ ಮಂಡಳಿಯವರು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ, ಮಧ್ಯೆ ಹಲವು ವರ್ಷ ನಿಂತೇಹೋಗಿದ್ದ, ಉಭಯ ದೇವರುಗಳ ಜೋಡಿಪಲ್ಲಕ್ಕಿ ಉತ್ಸವವನ್ನು ಆವರ್ಷ ವಿಶೇಷ ಉತ್ಸಾಹದಿಂದ ಮತ್ತೆ ನಡೆಸಿಕೊಟ್ಟರು! ನೆರೆದ ಜನರಂತು ತುಂಬು ಸಂತಸ, ಸಂಭ್ರಮ, ಧನ್ಯತೆ ಅನುಭವಿಸಿದರು! ಜನರು ನೆರೆದರು! ಉತ್ಸವ ವಿಜೃಂಭಿಸಿತು! ಉತ್ಸವ ಮುಗಿದೂ ಹೋಯಿತು! ಮತ್ತೆ ಬಂದ ಜನ ಬಂದಂತೆ ತೆರಳಿದರು ಕೂಡ!

ಮುಂದಿನ ದಿನಗಳಲ್ಲಿ ಶಾಸ್ತ್ರಾಧ್ಯಯನವನ್ನು ಮಿಗಿಲಾಗಿ ಮುಂದುವರಿಸಿದ್ದರೆ, ಗುರುಮುಖೇನ ನಡೆಸಿದ ಶ್ರವಣವನ್ನು ಅಧ್ಯಯನ-ಅಧ್ಯಾಪನದ ಮೂಲಕ ಮನನದಲ್ಲಿ ತೊಡಗಿಸಿಕೊಂಡಿದ್ದರೆ, ನಾನೂ ಒಬ್ಬ ದೊಡ್ಡ ವೇದಾಂತ ವಿದ್ವಾಂಸನಾಗಿ ಹೊರಹೊಮ್ಮುತ್ತಿದ್ದೆ! ಪೇಜಾವರರಲ್ಲಿ ಕಲಿಯುತ್ತಿದ್ದಾಗೊಮ್ಮೆ ಗುರುಗಳ ಸಿಂಹಾಸನದ ಕೊಠಡಿಯಲ್ಲಿ ಒಬ್ಬನೇ ಕುಳಿತ್ತಿದ್ದೆ. ಅಲ್ಲೊಂದೆಡೆ ವೃತ್ತ-ವಾರ ಪತ್ರಿಕೆಗಳ ರಾಶಿ. ಹೊತ್ತು ಕಳೆಯಲೆಂದು ಯಾವುದೋ ಒಂದನ್ನು ಕೈಗೆತ್ತಿಕೊಂಡಿದ್ದೆ. ಸುಮ್ಮನೆ ಪುಟ ತಿರುವುತ್ತಿದ್ದೆ. ಆಗಲೇ ಪಲಿಮಾರಿನ ಹಿರಿಯ ಸ್ವಾಮಿಗಳಾದ ವಿದ್ಯಾಮಾನ್ಯರು ಹಿಂಬದಿಯಿಂದ ಬಂದಿದ್ದರು. ನನಗರಿವಿರಲಿಲ್ಲ.  ಏನು ಮಾಡುತ್ತಿದ್ದೀರೀ? ಕೈಯಲ್ಲಿನ ಪತ್ರಿಕೆ ತೋರಿಸಿದೆ. ಪ್ರಪಂಚ ಪತ್ರಿಕೆಯದು! ಯತಿಗಳು ಪ್ರಪಂಚ ಬಿಟ್ಟಿರಬೇಕು! ಅಂದಿದ್ದರು ಕಣ್ಣರಳಿಸಿ ನೋಡುತ್ತಾ, ಮತ್ತೊಂದು ಕಿವಿಮಾತು ಹೇಳಿದ್ದರು. ವೇದಾಂತ ಶಾಸ್ತ್ರದ ಅಧ್ಯಯನ-ಪಾಠ ಪ್ರವಚನಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಿ- ಅದುವೇ ತಪಸ್ಸು- ತದ್ಧಿ ತಪಃ, ತದ್ಧಿ ತಪಃ -ಮತ್ತೆ ನಿಮ್ಮಲ್ಲಿ ಸಂಗೀತವೂ ಇದೆ- ಬಂಗಾರದ ಹೂವಿಗೆ ಪರಿಮಳ ಬಂದಂತೆ! ಆ ಹಿರಿಯ ಸ್ವಾಮಿಗಳ ಪಾಂಡಿತ್ಯ, ತಪಸ್ಸು, ಬಹಳ ದೊಡ್ಡದು! ಅವರೆಂದರೆ ನಮಗೆಲ್ಲ ವಿಶಿಷ್ಟ ಗೌರವ, ಭಯ!

ಬನ್ನಂಜೆ ಗೋಂವಿದಾಚಾರ್ಯರು ನನ್ನ ಮೆಚ್ಚಿನ, ಬಹುಶ್ರುತ ವಿದ್ವಾಂಸರು.  ಅದ್ಭುತವೆನಿಸುವ, ಅಪರೂಪದ ಪಾಂಡಿತ್ಯ ಅವರದು! ಸುಧಾಮಂಗಳಕ್ಕೆಂದು ಬಂದಿದ್ದರು. ತುಂಬ ಉತ್ತಮವಾದ ಉಪನ್ಯಾಸ ನೀಡಿದ್ದರು. ಹಿಂತೆರಳುತ್ತಾ, ತುಸುಹೊತ್ತು ಅದೂ ಇದೂ ಮಾತನಾಡಿ, ಯಾಕೋ ಏನೋ ಇದ್ದಕ್ಕಿದ್ದಂತೆ, ‘ಸಂಗೀತವನ್ನು ಕ್ರಮಬದ್ಧವಾಗಿ ಕಲಿತುಕೊಳ್ಳಿರೆಂದೂ, ನಿಮಗದು ಒಪ್ಪುತ್ತದೆ, ಮುಂದದು ನಿಮಗೆ ವಿಶೇಷವಾಗಿ ಒದಗಿಯೂ ಬಂದೀತು’ ಎಂಬ ಆತ್ಮೀಯ ಸಲಹೆ ಇತ್ತರು! ನಾನಾದರೋ ಅವರ ಮಾತನ್ನು ಗಂಭೀರವಾಗಿಯೇ ಪರಿಗಣಿಸಿದೆ. ಹರಿದಾಸ ಸಾಹಿತ್ಯದ ಮಹತಿಯ ಕುರಿತು ಮಾತೊಂದಿದೆ, ಸುಧಾ ಓದಿ ಪದಾ ಹಾಡು.  ಇದಕ್ಕೆ ವಿಶೇಷಾರ್ಥವಿದೆಯಾದರೂ ಸದ್ಯಕ್ಕಂತು ನನ್ನ ಮಟ್ಟಿಗೆ ಅನ್ವರ್ಥವೆನಿಸಿತು!  ನಿಜವಾದ ನನ್ನ ಸಂಗೀತಾಭ್ಯಾಸ ಸರಳೆವರಸೆಯಿಂದಲೇ ಪ್ರಾರಂಭವಾಯಿತು! ಮತ್ತೆ ಅಕಾರ ಸಾಧನೆ! ಹೊಸ ಉತ್ಸಾಹದಿಂದ ತೊಡಗಿಕೊಂಡೆ. ಸುಧಾಮಂಗಳದ ಬಳಿಕ ಕುಕ್ಕೆಯಲ್ಲೆ ಹೆಚ್ಚು ಕಳೆಯಬೇಕಿದ್ದ ನನಗೆ ಉಡುಪಿಯ ಪಾದೂರಿನ ನಾರಾಯಣ ಐತಾಳರು ಅಲ್ಲಿಗೇ ಬಂದು ಸಂಗೀತ ಶಿಕ್ಷಣ ನೀಡತೊಡಗಿದರು.

ನಾರಾಯಣ ಐತಾಳರು ಉಡುಪಿಯ ಸಂಗೀತ ವಿದ್ವಾಂಸ ಪಿಟೀಲು ಮಂಜುನಾಥಯ್ಯನವರ ಶಿಷ್ಯ ನಮ್ಮ ಐತಾಳರು. ಮಂಜುನಾಥಯ್ಯನವರು ಬಿಡಾರಂ ಕೃಷ್ಣಪ್ಪನವರ ಶಿಷ್ಯರು. ಐತಾಳರು ಮುಂದೆ ಕೇರಳದಲ್ಲಿ ಬಹುಕಾಲ ಚೆಂಬೈ ವೈದ್ಯನಾಥ ಭಾಗವತರಲ್ಲಿ ಶಿಷ್ಯವೃತ್ತಿ ಮಾಡಿದವರು. ಜನಮಾನ್ಯ ಸಂಗೀತಗಾರರು- ಗಾಯಕರು. ಮತ್ತೆ ಒಳ್ಳೆಯ ಶಿಕ್ಷಕರು.  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉದ್ದಗಲ ಸಂಚರಿಸುತ್ತಲೇ ಬೇರೆ ಬೇರೆ ಊರುಗಳಲ್ಲಿ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದವರು. ಅವರಿಗೆ ಬರಿಗಾಲ ಭಾಗವತ ಎಂಬ ಬಿರುದಿತ್ತು! ಪ್ರತಿಫಲದ ವಿಶೇಷ ಅಪೇಕ್ಷೆಯಿಲ್ಲದ (ಬರಿಗೈ ಭಾಗವತ?), ಆದರೆ ಸಂಗೀತ ಪ್ರಚಾರವಾಗಬೇಕೆಂಬ ಸದುದ್ದೇಶವಿದ್ದ ಹಳೆಯ ತಲೆಮಾರಿನ ಹಿರಿಯ ಚೇತನರವರು! ತಮ್ಮ ತಿಂಗಳ ಕ್ರಮವರಿತ ಸಂಚಾರದಲ್ಲಿ ಬಿಡುವು ಮಾಡಿಕೊಂಡು, ನಮ್ಮಲ್ಲಿಗು ಬಂದು ನಾಲ್ಕಾರು ದಿವಸಗಳಿದ್ದು, ದಿನಪೂರ್ತಿ ಜೊತೆಗಿದ್ದು, ಸಂಗೀತಾಭ್ಯಾಸ ಮಾಡಿಸಿ, ಸ್ವಯಂಸಾಧನೆಗೆ ಬೇಕಾದ ಮಾರ್ಗದರ್ಶನ ನೀಡಿ ತೆರಳುತ್ತಿದ್ದರು. ಹೀಗೆ ನಾಲ್ಕೈದು ವರ್ಷಗಳ ಕಾಲ ಬಿಡದೆ ಅವರಲ್ಲಿ ನನ್ನ ಸಂಗೀತಾಭ್ಯಾಸ ನಡೆಯಿತು. ಲಯವಾದ್ಯದೊಂದಿಗೆ ಅಭ್ಯಾಸ ನಡೆಸಿದರೆ ಉತ್ತಮವೆಂದು, ನನ್ನ ಅಭ್ಯಾಸದ ವೇಳೆ ಮೃದಂಗವಾದನ ನೀಡಿ ಪೋಷಿಸಿದವರು ಕಾಸರಗೋಡಿನ ವಿದ್ವಾನ್ ಬಾಬುರೈಯವರು. ಹೇಗೆ ಹಲವಂ ಬಲ್ಲವರಿಂ ಕಲಿತೆ, ಮೈಗೂಡಿಸಿಕೊಂಡೆ. ಆ ದಿನಗಳಲ್ಲಿ ಮಠದ ತುಂಬ ಗುನುಗಿಕೊಂಡೆ ನಡೆದಾಡುತ್ತಿದ್ದೆ!  ಮಠದ ಕಂಬ ಕಂಬದಿಂದ ಸಂಗೀತ, ಮೆಟ್ಟಿಲು ಹತ್ತಿದರೆ ಸಂಗೀತ, ಇಳಿದರೆ ಸಂಗೀತ! ಪಕ್ಕದಲ್ಲೇ ಇದ್ದ ಬಂಧುಗಳ ಮನೆಗೇನಾದರೂ ಬಂದೆನೆಂದರೆ, ಏನನಾದರು ಗುನುಗಿದೆನೆಂದರೆ, ಅದು ಸಾಂಕ್ರಾಮಿಕವಾಗಿ ಪರಿಣಮಿಸುತ್ತಿತ್ತು! ಅಲ್ಲಿರುತ್ತಿದ್ದ ನನ್ನ ತಮ್ಮಂದಿರೋ, ಸಹೋದರಿಯರೋ, ಅವರು ಶುರುಮಾಡಿ ಬಿಡುತ್ತಿದ್ದರು!  ಸರ್ವಂ ಸಂಗೀತಮಯಂ.ತೋಳ್ಪಾಡಿ ಈಗ

ಮಿತ್ರ ತೋಲ್ಪಾಡಿ ಬೆಂಗಳೂರಿನಲ್ಲಿ ಕೆಲವು ಕಾಲವಿದ್ದು, ಅವನ ಊರಿಗೇ, ಶಾಂತಿಗೋಡಿಗೇ, ಹಿಂತಿರುಗಿದ್ದ. ಮನೆತನದ ಕೃಷಿಯನ್ನು ರೂಢಿಸಿಕೊಳ್ಳುವುದು ಅವನ ಹಾದಿಯಾಗಿತ್ತು. ತುಂಬಾ ಸಲ ಅಂದುಕೊಳ್ಳುತ್ತೇನೆ- ಅವನು ಬೆಂಗಳೂರಿನಲ್ಲಿದ್ದೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರೆ ಹೆಚ್ಚು ಉಚಿತವಿತ್ತು, ಅನುಕೂಲವಿತ್ತೆಂದು. ಸೋದರ ಸಂಬಂಧದಲ್ಲಿ ಮದುವೆಯೂ ಆದ.  ಅನುಕೂಲಳಾದ ಸತಿ ಅವನಿಗೆ. ನಮ್ಮಲ್ಲಿ ನಡೆಯುತ್ತಿದ್ದ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದಾಗ ಬಂದು ಹೋಗುತ್ತಿದ್ದ. ಆಗ ಕಾರ್ಯಕ್ರಮಗಳ ನಿರ್ವಹಣೆಯೆಲ್ಲ ಆತನದೇ! ಆ ಸಂದರ್ಭಗಳಲ್ಲಿ ನಾವ್ಯಾರೂ ಮಧ್ಯೆ ಬಾಯಿ ಹಾಕುತ್ತಿರಲಿಲ್ಲ. ಹಾಗೊಮ್ಮೆ ಮಧ್ಯೆ ಮಾತನಾಡಿಸಿದ್ದೆ. ಅವನಂದಿದ್ದ ನನಗೆ ಪುರುಸೊತ್ತಿಲ್ಲ ಮಾರಾಯರೇ ಸಾಯಲೂ ಪುರುಸೊತ್ತಿಲ್ಲ! ನಾನೂ- ಅವನೂ ಶರಶ್ಚಂದ್ರರ ‘ವಿಪ್ರದಾಸ’ ಕಾದಂಬರಿಯನ್ನು ಆಗ ತಾನೇ- ಸ್ವಲ್ಪ ಅಂತರದಲ್ಲಿ- ಓದಿದ್ದೆವು. ಅದರಲ್ಲಿ ಈ ಮಾತು ಇದ್ದುದನ್ನು ನೆನೆದು, ಅವನನ್ನೇ ದಿಟ್ಟಿಸಿ ನಕ್ಕಿದ್ದೆ.  -ಅವನೂ ನಕ್ಕಿದ್ದ! ಶರಶ್ಚಂದ್ರರ ಈ ಮಾತು ಅವನಿಗೆ ತುಂಬ ಇಷ್ಟವಾದುದಂತೆ!  ಅವನು ನಮ್ಮಲ್ಲಿಗೆ ಬಂದನೆಂದರೆ, ಇಡೀ ದಿನ-ರಾತ್ರಿ ನಾವು ಏನಾದರೂ ಮಾತಾನಾಡಿಕೊಂಡೇ ಇರುತ್ತೇವೆ ಎಂಬುದು ಮಠದವರಿಗೆಲ್ಲ ತಿಳಿದಿರುತ್ತಿತ್ತು.  ಎಲ್ಲರಿಗು ಅವನೆಂದರೆ, ಅವನ ಮಾತೆಂದರೆ ಇಷ್ಟವೇ. ಆದರೆ ಈಚೀಚೆಗೆ ನಮ್ಮ ಅಪ್ಪಯ್ಯ ಅವನೆಂದರೆ ಸ್ವಲ್ಪ ಅಸಮಧಾನ- ಭಯ ಪಟ್ಟುಕೊಳ್ಳುತ್ತಿದ್ದರು! ಯಾರೋ ಅವರಲ್ಲಿ ಅಂದಿದ್ದರು, ಲಕ್ಷ್ಮೀಶ (ತೋಲ್ಪಾಡಿ) ಈಗ ಮೊದಲ ಹಾಗಲ್ಲ.  ಬೆಂಗಳೂರಿಗೆ ಹೋಗಿ ಬಂದಮೇಲೆ ಅವನೀಗ ನಾಸ್ತಿಕನಾಗಿಬಿಟ್ಟಿದ್ದಾನೆ! ಜಪ ಬಿಡಿ, ಮೊನ್ನೆ ಉಪಾಕರ್ಮದ ದಿನ ಊರ ದೇವಸ್ಥಾನದಲ್ಲಿ ಬ್ರಹ್ಮಸಭೆಯಲ್ಲಿ ಜನಿವಾರ ಯಾಕೆ ಹಾಕಿಕೊಳ್ಳಬೇಕು? ಹಾಕಿಕೊಳ್ಳುವುದಿಲ್ಲ ಎಂದು ಗಲಾಟೆ ಮಾಡಿ ಎದ್ದು ಹೋಗಿದ್ದಾನಂತೆ! ಅವನೊಂದಿಗೆ ಇನ್ನೂ ಕೆಲವರು ಶಾಂತಿಗೋಡಿನ ಬ್ರಾಹ್ಮಣ ಯುವಕರು ಜನಿವಾರ ತೆಗೆದು ಹಾಕಿದ್ದಾರಂತೆ! ಎಂದು. ನಮ್ಮಪ್ಪಯ್ಯ ಗಾಬರಿಯಾಗಿದ್ದರು. ಇಂಥವ ಪದೇ ಪದೇ ಸ್ವಾಮಿಗಳಲ್ಲಿ ಬಂದು ಹೋಗುತ್ತಿದ್ದರೆ, ಅವನ ಮಾತು ಕೇಳಿ ನಮ್ಮ ಸ್ವಾಮಿಗಳೂ ಪೀಠವೋ, ಸಂನ್ಯಾಸವೋ ಬಿಟ್ಟು ಬಿಟ್ಟರೆ? ಅಷ್ಟಲ್ಲದೆ ಪಲಿಮಾರು ರಘುವಲ್ಲಭರ ತರುವಾಯ ಶಿರೂರು ಮಠದ ಸ್ವಾಮಿಗಳೂ ಪೀಠ ತ್ಯಜಿಸಿ ರಾಜಗೋಪಾಲಾಚಾರ್ಯರಾಗಿದ್ದರು! ಇವೆಲ್ಲ ನಿಜವಾಗು ನಮ್ಮ ತಂದೆಯವರ ನಿದ್ರೆಗೆಡಿಸಿದ ಸಂಗತಿಗಳಾಗಿದ್ದುವು! ಈ ನಮ್ಮಪ್ಪಯ್ಯ- ಗುರುಗಳಾದ ಪೇಜಾವರ ಶ್ರೀಪಾದರು- ಇನ್ನು ನಮ್ಮ ಅಶಕ್ತರು, ವೃದ್ಧರೂ ಆದ ಹಿರಿಯ ಗುರುಗಳ ಕಾರಣಕ್ಕೆ ನನ್ನ ಆಶ್ರಮ ತ್ಯಾಗದ ನಿರ್ಧಾರ, ಒಂದೊಂದೇ ನರಸಿಂಹ ಜಯಂತಿಯ ಗಡುವನ್ನು ದಾಟಿ ಮುಂದೆ ಮುಂದೆ ಹೋಗುತ್ತಿತ್ತು:

ಗಣಪತಿ ಮದುವೆ ನಾಳೆ ಎಂಬಂತೆ!

ಹಾಸನ ಜಿಲ್ಲೆಯ ಕಾವೇರಿಯ ಎಡಬಲದ ರುದ್ರಪಟ್ಣ ಮತ್ತು ಬಸವಾಪಟ್ಣ, ಆ ಪರಿಸರ ಮೊದಲಿಂದಲೂ ಸಂಗೀತಕ್ಕೆ, ವೇದವಿದ್ಯೆಗೆ ಪ್ರಸಿದ್ಧವಾದುದು. ರುದ್ರಪಟ್ಣಂ ಮನೆತನದಲ್ಲಿ ಮೂಡಿಬಂದವರು ಆರ್.ಕೆ. ಶ್ರೀಕಂಠನ್ ಅವರು. ಕರ್ನಾಟಕದ ಮನೆಮಾತಾದ ಶಾಸ್ತ್ರೀಯ ಸಂಗೀತ ವಿದ್ವಾಂಸರು. ಈ ವಯಸ್ಸಲ್ಲು ಕಂಚಿನ ಕಂಠ ಅವರದು! ಅವರ ಶಿಸ್ತಿನ ಅಭ್ಯಾಸ-ಜೀವನ ಎರಡೂ ಕಾರಣ ಅದಕ್ಕೆ. ಎರಡು ವರ್ಷ ಅವರಲ್ಲು ನನ್ನ ಸಂಗೀತಾಭ್ಯಾಸ ನಡೆಯಿತು. ಬೆಂಗಳೂರಿಗೆ ಅಗಾಗ್ಗ ಹೋಗುತ್ತಾ, ಅವರ ಮನೆಯಲ್ಲೇ ಪಾಠ ಹೇಳಿಸಿಕೊಂಡೆ. ಕೆಲವೊಮ್ಮೆ ನನ್ನ ಅನುಕೂಲಕ್ಕೆ ಕುಕ್ಕೆಗೇ ಬಂದು ಹತ್ತು ಹತ್ತು ದಿವಸಗಳಿದ್ದು ದಿನವಿಡೀ ಸಂಗೀತಾಭ್ಯಾಸ ಮಾಡಿಸಿದ್ದರು!   ಆರ್.ಕೆ. ಶ್ರೀಕಂಠನ್

ಖ್ಯಾತ ಮೃದಂಗ ವಿದ್ವಾಂಸರಾದ ಟಿ.ವಿ. ಗೋಪಾಲಕೃಷ್ಣನ್ ಅವರು ಚೆಂಬೈ ವೈದ್ಯನಾಥ ಭಾಗವತರ ಪಟ್ಟ ಶಿಷ್ಯರು. ಉತ್ತಮ ಕರ್ನಾಟಕ ಸಂಗೀತ ಗಾಯಕರು. ಹಿಂದುಸ್ಥಾನೀ ಸಂಗೀತದಲ್ಲು ವಿಶೇಷ ಪರಿಣತಿ ಅವರದು. ಪ್ರತಿವರ್ಷ ಕೊಲ್ಲೂರಿಗೆ ತೆರಳಿ ಸೇವೆ ಸಲ್ಲಿಸುತ್ತಿದ್ದರು. ಆ ಸಲ ನಮ್ಮ ಕುಕ್ಕೆಗು ಬಂದರು. ನನ್ನನ್ನು ಕಾಣಲೂ ಬಂದರು. ‘ಸ್ವಾಮೀಜಿ ಹಾಡುತ್ತಾರೆ’ ಎಂದು, ಯಾರೋ ಅವರಿಗೂ ಹೇಳಿದ್ದರಂತೆ. ಏನಾದರೂ ಹಾಡಿರೆಂದು ಕೇಳಿಕೊಂಡರು. ಉಗಾಭೋಗವೊಂದನ್ನು ಹಾಡಿದೆ.   ಅವರಿಗದು ಬಹಳವೇ ಇಷ್ಟವಾಯಿತು. ಮುಂದೆ ನನ್ನ ಅವರ ಭೇಟಿ ನಿರಂತರವಾಗಿ ನಡೆದುವು. ನಾವು ಸೇರಿದಾಗೆಲ್ಲ, ಬಿಡುವು ಮಾಡಿಕೊಂಡು ಅವರಿಂದ ಸಂಗೀತದ ವಿಶೇಷ ಶಿಕ್ಷಣ ಪಡೆದುಕೊಂಡೆ. ಟಿ.ವಿ.ಜಿ. ದಂಪತಿಗಳಿಬ್ಬರಿಗು ನನ್ನ ಮೇಲೆ ಏನೋ ವಿಶೇಷ ಮಮತೆ. ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸಿ, ಮುಂದೆತರುವಲ್ಲಿ, ಅವರಂಥ ಉದಾರ, ಪರಿಣತ, ಕಲಾ ಶಿಕ್ಷಕ ತುಂಬ ವಿರಳ. ಸಂಗೀತದ ಎಲ್ಲ ಮುಖಗಳ ವಿಶೇಷ ಪರಿಚಯ, ಪರಿಣತಿ ಇರುವ ಅಪರೂಪದ ಶ್ರೇಷ್ಠ ಕಲಾವಿದರವರು! ನನ್ನ ಅವರ ಭೇಟಿಯಾದಂದಿನಿಂದ ಪ್ರತಿವರುಷವೂ ಜಯಂತಿಯ ಸಂಭ್ರಮಕ್ಕೆ ಕುಕ್ಕೆಗೆ ಬರುತ್ತಿದ್ದರು. ತಮ್ಮ ವೈವಿಧ್ಯಮಯ ಕಲಾ ನೈಪುಣ್ಯದಿಂದ ಸ್ವಯಂ ಹಾಗು ನಾಡಿನ ಅನೇಕ ಶ್ರೇಷ್ಠ ಕಲಾವಿದರ ಜೊತೆಗೂ ಕಾರ್ಯಕ್ರಮ ನಡೆಸಿಕೊಟ್ಟು, ಎಲ್ಲರ ಮೆಚ್ಚುಗೆಗೆ ಗೌರವಕ್ಕೆ ಪಾತ್ರರೂ ಆದರು!

ಸ್ವಾಮೀಜಿಯಾಗಿ ಆಗಲೇ ನನ್ನನ್ನು ನಾಡಿನ ಉದ್ದಗಲ ಅನ್ಯಾನ್ಯ ಕಾರ್ಯಕ್ರಮಗಳಿಗೆ ಆಶೀರ್ವಚನ, ಉಪನ್ಯಾಸಕ್ಕೆಂದು ಆಹ್ವಾನಿಸುತ್ತಿದ್ದರು. ಅದರೊಂದಿಗೆ ಅಲ್ಲಲ್ಲಿ ನನ್ನ ಸಂಗೀತ ಕಛೇರಿಗಳೂ ನಡೆಯುತ್ತಿದ್ದವು.

ಚಿಕ್ಕಂದಿನಲ್ಲೇ ಈಜು ಕಲಿತಿದ್ದೆ. ಅದು ಬಲವಂತವಾಗಿ ಬಂದುದಲ್ಲ. ಬಾಲ್ಯದ ಹುಡುಗಾಟಿಕೆಯಲ್ಲಿ, ಸಹಜವಾಗೆಂಬಂತೆ ಕಲಿತುದು. ಆದರೆ ಸಂನ್ಯಾಸದ, ಸಂಗೀತದ ಕಡಲುಗಳ, ಇಳಿದಲ್ಲಾ- ನೋಡಿ ಸವಿಯಲು ತೀರದಲ್ಲಿ ನಿಂತಿದ್ದರೆ, ಯಾರೋ ಹಿಂದಿನಿಂದ ದಬ್ಬಿಬಿಟ್ಟರು! ಇದೆಲ್ಲಾ ಯಾರ ಕೈವಾಡವೆಂಬುದು ನನಗೆ ನಿಚ್ಚಳವಿದೆ! ದಬ್ಬಿದ್ದಕ್ಕೆ, ನೀರಿಗೆ ಬಿದ್ದುದಕ್ಕೆ, ಕೈಕಾಲು ಬಡಿದೆ! ನೀರು ಕುಡಿದೆ! ಈಜಲೂ ಕಲಿತೆ! ಆದರೆ ಹಾಲು ಹಾಲೇ! ನೀರು ನೀರೇ! ಮೀನು ಎಲ್ಲಿರಬೇಕೋ ಅಲ್ಲೇ ಇರಬೇಕು. ನೀರೇ ಅದರ ಉಸಿರು- ಬದುಕು!

ಆ ವರುಷದ ನರಸಿಂಹ ಜಯಂತಿಯೂ ಕಳೆಯಿತು. ೧೯೭೬ರ ಮಳೆಗಾಲದ ಮಧ್ಯೆ ಜ್ಯೇಷ್ಠ ಬಹುಳ ಸಪ್ತಮಿಯಂದು ನಮ್ಮ ಗುರುಗಳು, ವಿದ್ಯಾಸಿಂಧುತೀರ್ಥರು ಪರಂಧಾಮವನ್ನೈದಿದರು! ನಿರೀಕ್ಷಿತವೇ ಆಗಿದ್ದರೂ, ಮಠದ ಪುನರುದ್ಧಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಒಬ್ಬ ನಿರ್ವಂಚನೆಯ, ಸಾಧು ಚಿಂತನೆಯ, ಬಹುಶ್ರುತರೂ, ಮಾರ್ಗದರ್ಶಕರೂ ಆಗಿದ್ದ ನಮ್ಮ ಹಿರಿಯರು ಇಲ್ಲವಾಗಿದ್ದು, ವಿಶೇಷ ವಿಷಾದಕ್ಕೆ ಕಾರಣವಾಗಿತ್ತು. ಪಂಚಮಿ ತೀರ್ಥದ ನದೀ ತಟದಲ್ಲಿ ಗುರುಗಳನ್ನು ವೃಂದಾವನಸ್ಥರನ್ನಾಗಿಸಿ ಹಿಂತಿರುಗಿದ ನಮ್ಮೆಲ್ಲರದು ನಿಜದಲ್ಲಿ ಮೌನದ ಅನುಸಂಧಾನ! ಎಲ್ಲ ಮುಗಿದು ರಾತ್ರಿ ಸುಮ್ಮನೆ ಮಲಗಿದರೆ ಕತ್ತಲೆ ಗುಂಯ್‌ಗುಡುತ್ತಿತ್ತು. ಮತ್ತೆ ಮರುದಿವಸದಿಂದ ವೃಂದಾವನಸ್ಥರಾದ ಗುರುಗಳ ಆರಾಧನೆಯ ಸಿದ್ಧತೆ. ನಮ್ಮ ತಂದೆಯವರ ಸೂಚನೆಯಲ್ಲಿ ಮಠದ ಶಾನುಭೋಗರು, ನಮ್ಮ ದೊಡ್ಡಪ್ಪ ಮತ್ತು ಪರಿವಾರ, ಆರಾಧನೆಗೆಂದು ಪರಿಕರಗಳನ್ನು ಖರೀದಿಸಿ ತಂದು ಜೋಡಿಸಿಕೊಳ್ಳುತ್ತಿದ್ದರು. ಕುತೂಹಲಕ್ಕೆಂದು ನಾನೊಮ್ಮೆ ಆಕಡೆ ತಲೆಹಾಕಿದ್ದೆ. ಅವುಗಳ ವಿತರಣೆ, ವಿನಿಯೋಗದ ಕುರಿತಾಗಿ ಚರ್ಚಿಸುತ್ತಿದ್ದರು. ನನಗೂ ವಿವರಿಸಿದರು. ಸಮೀಪದಲ್ಲೇ ಅಂತಹುದೇ ವಸ್ತುಗಳ ಇನ್ನೊಂದು ಜೋಡಣೆ ಇತ್ತು! ಮತ್ತಿದೆಲ್ಲಾ ಯಾಕೆ? ನಮ್ಮ ದೊಡ್ಡಪ್ಪ ನಗುತ್ತಾ ಮುಂದಿನ ಆಶ್ರಮದ ವ್ಯವಸ್ಥೆ ಆಗಬೇಕಲ್ಲಾ? ಈ ಮಠದಲ್ಲಿ ಯಾವತ್ತೂ ಇಬ್ಬರು ಸ್ವಾಮಿಗಳಿರಬೇಕು.

ಯಾರಿಗೆ ಆಶ್ರಮ ಕೊಡಿಸಬೇಕೆಂದಿರುವಿರಿ?

ಮತ್ತೆ ಯಾರಿಗೆ? ನಿಮ್ಮ ಪೂರ್ವಾಶ್ರಮದ ತಮ್ಮ ಮುರಳಿ ಇದಾನಲ್ಲಾ? ಅವನಿಗೇ! ಎಲ್ಲ ಬಿಸಿ ಬಿಸಿ ಇರುವಾಗಲೇ ಆಗಿಬಿಡಬೇಕು!

ನನಗಂತು ಉರಿದುಹೋಯಿತು! ಈ ಜನರನ್ನು ತಿದ್ದಲು ಸಾಧ್ಯವೇ ಇಲ್ಲ! ಮತ್ತೆ ಮತ್ತೆ ಇನ್ನೊಂದು ಜೀವದೊಂದಿಗೆ ಇವರ ಚೆಲ್ಲಾಟ?!

ಟಿ.ವಿ. ಗೋಪಾಲಕೃಷ್ಣನ್

ನಾನಂದೆ, ಮುರಳಿಗು ಇಲ್ಲ- ಪೂರ್ವಾಶ್ರಮದ ಯಾರಿಗೂ ಆಶ್ರಮ ಕೊಡಲಾರೆ. ಯಾರಿಗಾದರೂ ಆಶ್ರಮ ಕೊಡುವ ನೈತಿಕ ಹಕ್ಕು ನನಗಿಲ್ಲ! ಆಶ್ರಮ ನೀಡುವುದು ಅನಿವಾರ್ಯವೇ ಆಗುವುದಾದರೆ- ಆತನಿಗೆ ವಿವಾಹಯೋಗ್ಯ ವಯಸಿರಬೇಕು. (ಇಪ್ಪತ್ತೆಂಟು-ಮೂವತ್ತರ ವರ್ಷದವನಿರಬೇಕು) ಸಂನ್ಯಾಸದ ಕಷ್ಟ ಸುಖಗಳ ನಿಚ್ಚಳ ಅರಿವಿರಬೇಕು.  ಸದುದ್ದೇಶದಿಂದ, ಸಂತೋಷದಿಂದ ಸ್ವೀಕರಿಸುವವನಾಗಬೇಕು. ಇಲ್ಲಿ ಯಾವುದೇ ಒತ್ತಡವಿಲ್ಲ- ಆಮಿಷವಿಲ್ಲ, ಮುಚ್ಚುಮರೆಯಿಲ್ಲ! ಬಿಟ್ಟುಬಿಡಿ ಈ ಯೋಚನೆ!

ಸಿಟ್ಟು ಯಾತನೆಯೊಂದಿಗೆ ಅಲ್ಲಿಂದ ಹೊರಬಂದೆ! ಆರಾಧನೆಗೆಂದು ಪೇಜಾವರ ಶ್ರೀಪಾದರು ಬಂದಿದ್ದರು. ಇದೇ ವಿಷಯ ಅವರೂ ನನ್ನಲ್ಲಿ ಪ್ರಸ್ತಾಪಿಸಿದರು!     ನಾನಂದೆ ನನ್ನ ವಿಷಯ ತಮಗೆ ತಿಳಿದುದೇ ಆಗಿದೆ. ಚಿಕ್ಕವರಿಗೆ ಸಂನ್ಯಾಸ ನಾನಂತು ಕೊಡಲಾರೆ. ಸದ್ಯಕ್ಕೆ ಹೀಗೇ ಇರಲಿ.

ನಾನೊಮ್ಮೆ ನಿಮ್ಮ ತಮ್ಮನನ್ನು ಕೇಳಿನೋಡುವೆ. ಅವನಿಗೆ ಆಶ್ರಮ ಸ್ವೀಕಾರ ಇಷ್ಟವಾದುದಾಗಿದ್ದರೆ ಯಾಕೆ ಕೊಡಬಾರದು? ಕೇಳಿನೋಡೋಣವಂತೆ.

ನಿಮಗೆ ನಿರಾಶೆ ಕಾದಿರುತ್ತದೆ ಅಂದೆ. ನಕ್ಕರು. ಅವರಿಗೆ ನನ್ನ ಹೃದಯ ಎಂದೋ ಅರ್ಥವಾಗಿತ್ತು! ನನ್ನ ತಮ್ಮನನ್ನು ಕರೆದು ಕೇಳಿದರಂತೆ. ಇದೇ ಮೊದಲು ಮತ್ತು ಕಡೆ. ನನ್ನನ್ನು ಆಶ್ರಮದ ಕುರಿತಾಗಿ ಕೇಳಬೇಡಿ. ನನಗಿಷ್ಟವಿಲ್ಲ! ನನ್ನ ತಮ್ಮನ ಖಡಾಖಂಡಿತ ಉತ್ತರವನ್ನು ನಗುತ್ತಾ ನನ್ನಲ್ಲಿ ತಿಳಿಸಿದರು! ನನಗದು ಮೊದಲೇ ತಿಳಿದಿತ್ತು. ಮತ್ತದು ನನಗಿಷ್ಟವಾದುದಾಗಿತ್ತು!

ನೆನಪೇ ಸಂಗೀತ ೧೦:ಅರಿಯದ ವೈರಾಗ್ಯದ ಕುರಿತು

ಸಂನ್ಯಾಸವೆಂಬುದು ಭಾರತೀಯ ಸಂಸ್ಕೃತಿಯ ಪರಮೋಚ್ಚ ಸಂಕಲ್ಪವೆಂಬುದರಲ್ಲಿ ಎರಡು ಮಾತಿಲ್ಲ. ಅಧ್ಯಾತ್ಮದಲ್ಲಿ ಮೇಲೇರುವ ಚರಮ ಸೀಮೆ. ಸದ್ಯಕ್ಕೆ, ನನ್ನ ಮಟ್ಟಿಗೆ ಸಂನ್ಯಾಸ ಒಲ್ಲದ ಸಂಗತಿಯೇ ಆಗಿದ್ದರೂ, ಆ ಕುರಿತಾಗಿ ನನಗೆ ಅಪಾರ ಗೌರವವಿದೆ!  ಹಾಗೆಂದು ವಿಶ್ವದ ಎಲ್ಲೆಡೆ ಸರ್ವಸಂಗ ಪರಿತ್ಯಾಗವೆಂದರೆ ಪೂಜ್ಯಭಾವವಿದೆ.  ಜಗತ್ತಿನ  ಎಲ್ಲ ಮತಧರ್ಮಗಳಲ್ಲು, ತಮ್ಮ  ಮಕ್ಕಳು  ವಿರಕ್ತರಾಗಿ,  ಧರ್ಮ  ಮುಖಂಡರೆನಿಸುವುದು,  ಅವರ ಹಿರಿಯರಿಗೆ ಹೆಮ್ಮೆಯ ವಿಷಯವೇ ಆಗಿರಬಹುದು. ಆದರದು ಸಹಜವಾದುದಾಗಿರಲೆಂಬುದೇ ನನ್ನ ಆಶಯ. ನಮ್ಮ ಸಂಸ್ಕೃತಿಯಲ್ಲಿ ಹಂತ ಹಂತವಾಗಿ, ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸವೆಂದು ಆಶ್ರಮ ಧರ್ಮಗಳಿವೆ. ನಿಜದಲ್ಲಿ ಇದೊಂದು ಆರೋಗ್ಯಕರ ಜೀವನ ಪದ್ಧತಿಯಾಗಿದೆ ಮತ್ತು ಅಧ್ಯಾತ್ಮ ಮಾರ್ಗವೆನಿಸಿದೆ.

ಶೈಶವೇಭ್ಯಸ್ತ ವಿದ್ಯಾನಾಂ ಯೌವನೇ ವಿಷಯೈಷಿಣಾಂ
ವಾರ್ಧಕೆ ಮುನಿವೃತ್ತೀನಾಂ ಯೋಗೇನಾಂತೇ ತನುತ್ಯಜಾಂ||

ನಮ್ಮ ಪರಂಪರೆಯಲ್ಲಿ ಋಷಿಮುನಿಗಳಾರೂ ಅಕಾಲದಲ್ಲಿ ಸಂನ್ಯಾಸಿಗಳಲ್ಲ. ಬದುಕಿನ ಎಲ್ಲ ಅನುಭವದ ಹಿನ್ನಲೆಯಲ್ಲಿ ಅಧ್ಯಾತ್ಮದ ಅನುಸಂಧಾನ ಅವರದು! ಜೈನ ಬೌದ್ಧರ ಮತ ಪ್ರಚಾರದ ಉಚ್ಛ್ರಾಯದಲ್ಲಿ ಇಂತಹ ವಿರಕ್ತ ಸಂನ್ಯಾಸಿಗಳ ಪಡೆ ತಯಾರಾಗಿದ್ದೀತು. ಮುಂದೆ ಬ್ರಾಹ್ಮಣರಲ್ಲಿ, ಮತ್ತಿತರರಲ್ಲಿ ಮತಧರ್ಮದ ಪ್ರಸಾರಕ್ಕೆಂದು ಅನಿವಾರ್ಯವೆಂಬಂತೆ ಇದರ ಅನುಕರಣೆ ನಡೆದಿದೆ. ಕೌಟಿಲ್ಯನ ಕಾಲದಲ್ಲಿ ಬ್ರಾಹ್ಮಣರು ಸಂನ್ಯಾಸ ಸ್ವೀಕರಿಸುವುದನ್ನು ಗೇಲಿ ಮಾಡಲಾಗುತ್ತಿತ್ತಂತೆ! ಪ್ರಾಯಃ ಚರಿತ್ರೆಯ ಈ ಕಾಲಮಾನದಲ್ಲೇ ವಿಶ್ವದ ಎಲ್ಲೆಡೆ ಅಧ್ಯಾತ್ಮದ ಸಾಧನೆಯ ಜತೆಗೆ, ವಿಶೇಷವಾಗಿ ಮತಧರ್ಮದ ಪ್ರಚಾರಕ್ಕೆಂದೇ ಪ್ರಪಂಚ ವಿಮುಖವಾದ, ಸಮರ್ಪಿತ ಜೀವನದ ಪರಿಕಲ್ಪನೆ ಸಾಕಾರಗೊಂಡಿರುವುದನ್ನು ಗಮನಿಸಬಹುದಾಗಿದೆ!

ಪುರಾಣೇತಿಹಾಸಗಳ ಸಂದರ್ಭ ಶುಕ-ಹನುಮಂತರು ಸಹಜ ವಿರಕ್ತರು! ಅವರದು ಅಸ್ಖಲಿತ ಬ್ರಹ್ಮಚರ್ಯ! ಅಸಂಶಯಿತ ಸಚ್ಚಾರಿತ್ರ್ಯ! ಅವರಿಗೆ ಅವರೇ ಸಾಟಿ! ಧ್ರುವ ನಕ್ಷತ್ರವನ್ನು ಮುಟ್ಟಬೇಕೆಂದು ಯಾರು ಹೇಳಿದರು? ಅದೆಂದೂ ಗಮ್ಯವಲ್ಲ! ದಿಕ್ಸೂಚಿಯಷ್ಟೇ.  ಶಾಸ್ತ್ರಗಳಲ್ಲಿ, ಅದರಲ್ಲು ಕಲಿಯುಗದಲ್ಲಿ ದೀರ್ಘ ಬ್ರಹ್ಮಚರ್ಯ-ಸಂನ್ಯಾಸದಂತಹ ಪ್ರಕ್ರಿಯೆಗಳಿಗೆ ನಿಷೇಧ ವಿಧಿಸಲಾಗಿದೆ. ಸಂನ್ಯಾಸ ಯುಗಧರ್ಮವಲ್ಲ! ಹರಿದಾಸರಂತು, ಈಸಬೇಕು ಇದ್ದು ಜೈಸಬೇಕೆಂದು ಸಾರಿದರು! ಇರಬೇಕು-ಇಲ್ಲದಿರಬೇಕು ಎಂಬ ವಿವೇಕ ತೋರಿದರು! ಅಧ್ಯಾತ್ಮದ ದಾರಿಯಲ್ಲಿ ಅತಿ ಪ್ರಾಪಂಚಿಕತೆ ಬೇಡ ಎಂಬುದಷ್ಟೇ ಮರ್ಮ!

ಶುಕ-ಹನುಮರಲ್ಲಿ ವಿರಕ್ತಿ, ಸ್ಥಾಯೀಭಾವವಾದರೆ, ನಮ್ಮದೆಲ್ಲ ಸಂಚಾರಿ ಭಾವ! ಪುರಾಣ ವೈರಾಗ್ಯ, ಪ್ರಸೂತಿ ವೈರಾಗ್ಯ, ಸ್ಮಶಾನ ವೈರಾಗ್ಯ, ಹಾಗೆಯೇ ಅಭಾವ ವೈರಾಗ್ಯ. ಇವೆಲ್ಲ ಪ್ರತಿದಿನದ, ಪ್ರತಿವ್ಯಕ್ತಿಯ, ಅನುಭವಸಿದ್ಧವೆನಿಸುವ ವಿರಕ್ತಿ ಪ್ರಕಾರಗಳು! ಅರ್ಜುನನದೋ, ರಾವಣನದೋ ಮೋಸದ- ತೋರಿಕೆಯ ವೈರಾಗ್ಯ! ಶಾಟಿಯುಟ್ಟರಾಯಿತೇ? ನಾಮ ಬಳಿದರಾಯಿತೇ? ‘ಸಂನ್ಯಾಸ ಬಲವಂತ ಮಾಘಸ್ನಾನವಲ್ಲ’ ಎಂದೊಬ್ಬರು ನುಡಿದದ್ದು ನೆನಪಾಗುತ್ತದೆ.

ಹರಿದಾಸ ವರೇಣ್ಯರಾದ ಗೋಪಾಲದಾಸರು ತಮ್ಮದೊಂದು ಸುಳಾದಿಯಲ್ಲಿ ಬಣ್ಣಿಸುದುದನ್ನು ಇಲ್ಲಿ ನೋಡಿ!

ಶ್ರೀ ರಮಣನ್ನ ಪಾದ ಆರಾಧಿಸುವುದಕ್ಕೆ
ನಾರಿಯ ಧಾರುಣಿಯ ಧನವ ಬಿಟ್ಟರಾಯಿತೇ
ವೈರಾಗ್ಯವಲ್ಲ ಕಂಡ್ಯ ಧೀರರಿಗೆ
ಶರೀರಕ್ಕಾಪಾದ ಭಸ್ಮ ಧರಿಸಿಕೊಂಡು
ಚೀರವಸ್ತ್ರವನುಟ್ಟು ತಿರುಗಾಡುತ್ತಿರಲಾಗ
ಆರಾದರು ಅವನ ಅವಧೂತನೆಂತೆಂದು
ಸಾರಿ ಸಾರಿಗೆ ಇನ್ನು ಕರೆವರಯ್ಯ
ವೈರಾಗ್ಯವೆಂಬುವಂಥ ವಾರುತಿ ಒಂದಲ್ಲದೆ
ನಾರಾಯಣಗೆ ಇದು ಪ್ರಿಯವಲ್ಲ!

ಗೋಪಾಲದಾಸರದು ನಿಷ್ಠುರದ ನುಡಿ!

ಜನರು ಕಾಂಬ ಹಾಗೆವೆ ಬಾಹಿರ ವೈ-
ರಾಗ್ಯವನ್ನು ಮಾಡೆ ವೈರಾಗ್ಯವಲ್ಲವೋ

ಲಾಂಛನಗಳನ್ನು ಧರಿಸಿ ವೈರಾಗ್ಯ ದರ್ಶಿಸುವವನಲ್ಲಿ ನಿಜ ವಿರಕ್ತಿಯೇ?

ಅರಿಯದ ವೈರಾಗ್ಯ ಹರಹಿ ಕೊಂಬುದಕಿಂತ
ಅರಿತು ಮೊರೆ ಹೋಗಿರೋ ಗೋಪಾಲ ವಿಠಲನ್ನ

ಪೇಜಾವರ ಶ್ರೀಪಾದರು ಆಗತಾನೇ, ಕೆನ್ನೆಗಳಲ್ಲಿ ಹಾಲು ಆರದ, ಇನ್ನೂ ಮೀಸೆ ಮೂಡದ ವಟುವೊಬ್ಬನನ್ನು, ತಮ್ಮ ಉತ್ತರಾಧಿಕಾರಿಯೆಂದು ಆಯ್ಕೆ ಮಾಡಿ, ಸಂನ್ಯಾಸ ನೀಡಿ ತಮ್ಮ ಜೊತೆಗಿರಿಸಿಕೊಂಡಿದ್ದರು. ಬಾಲಯತಿಯ ಮುಖದಲ್ಲಿ ಅಪೂರ್ವ ತೇಜಸ್ಸು! ಅವರದು ಅಪೂರ್ವ ಪ್ರತಿಭೆಯೂ ಹೌದು! ಪೇಜಾವರ ಶ್ರೀಪಾದರನ್ನು ಭೇಟಿಯಾಗಲೆಂದು ಶತಾಯುಷ್ಯ ಸಮೀಪಿಸುತ್ತಿದ್ದ, ಕನ್ನಡದ ಆಸ್ತಿ- ಮಾಸ್ತಿಯವರು ಬಂದಿದ್ದರು. ಶ್ರೀಪಾದರ ಜೊತೆ ನಾನೂ ಇದ್ದೆ. ಮಾಸ್ತಿಯವರಿಗೆ ನಮ್ಮೆಲ್ಲರನ್ನು ಶ್ರೀಪಾದರು ಪರಿಚಯಿಸಿದರು. ಜೊತೆಗೆ ಹೊಸ ಸ್ವಾಮಿಗಳನ್ನೂ. ಮಾಸ್ತಿಯವರು ಹೊಸ ಸ್ವಾಮಿಗಳನ್ನು ದಿಟ್ಟಿಸಿ ನೋಡಿದರು- ಮತ್ತೂ ನೋಡಿದರು! ಅಯ್ಯೋ ಪಾಪ ಎಂದು ಸುಮ್ಮನಾದರು. ಕೂಡಲೇ ಹಿರಿಯ ಶ್ರೀಪಾದರು ಪ್ರತಿಕ್ರಿಯಿಸುತ್ತಾ, ಇಲ್ಲ ಇಲ್ಲಾ, ಅವರಿಗೆ ಒಳ್ಳೆಯ ತರಬೇತಿ ನೀಡುವೆವು, ಪಾಠ ಪ್ರವಚನ ಮಾಡಿ ಯೋಗ್ಯ ರೀತಿಯಿಂದ ಅವರನ್ನು ಸಿದ್ಧಪಡಿಸುವೆವು ಎಂದರೆ ಮಾಸ್ತಿಯವರಾದರೋ ಇಲ್ಲ ಇಲ್ಲ- ನನಗಿದರಲ್ಲಿ ನಂಬಿಕೆಯಿಲ್ಲ: ಸರಿ- ಸರಿ ಇರಲೀ ಎನ್ನುತ್ತಾ ಸ್ವಲ್ಪ ಹೊತ್ತು ಸುಮ್ಮನಾಗಿ, ಕೈಯಾಡಿಸಿ ವಿಷಯಾಂತರಗೊಂಡರು! ನಾನೂ ನೋಡುತ್ತಲೇ ಇದ್ದೆ!

ಒಮ್ಮೆ ಪಲಿಮಾರಿನ ವಿದ್ಯಾಮಾನ್ಯರು ಮತ್ತು ಪೇಜಾವರರು ಜತೆಗೂಡಿ ಚರ್ಚಿಸುತ್ತಿದ್ದರು. ನಾನೂ ಜೊತೆಗಿದ್ದೆ. ಇಷ್ಟೊಂದು ಮಠಗಳು, ಅಲ್ಲಿನ ಬಾಲಸಂನ್ಯಾಸ ಪದ್ಧತಿ, ಮತ್ತಲ್ಲಿನ ಭ್ರಷ್ಟತೆ ಈ ವಿಷಯಗಳ ಸುತ್ತ ಚರ್ಚೆ ನಡೆಯುತ್ತಿತ್ತು. ಆಚಾರ್ಯ ಮಧ್ವರು ಇಷ್ಟೊಂದು ಮಠಗಳನ್ನೇಕೆ ಸ್ಥಾಪಿಸಿದರು? ಅವರು ಸರ್ವಜ್ಞರಲ್ಲವೇ? ಅವರ ಕಾಲಕ್ಕಂತು ಎಲ್ಲವೂ ಸರಿಯಾಗಿತ್ತು. ಆದರೆ ಕಾಲ ಸರಿದಂತೆ ಎಷ್ಟೊಂದು ಕೆಟ್ಟುಹೋಯಿತು?! ಎಲ್ಲ ತಿಳಿದಿದ್ದ ಅವರಿಗೆ- ಇದು, ಈ ಮುಂದಿನ ಅನಾಹುತ, ಈ ಪದ್ಧತಿಯ ವೈಫಲ್ಯ ಅರಿವಾಗದೇ ಹೋಯಿತೇ? ಸ್ವಾಮಿಗಳಿಬ್ಬರದೂ ಕಳಕಳಿಯ ಚಿಂತನೆ. ಮತ್ತೆ ಅವರಿಬ್ಬರದೂ ಅತಿಬಾಲ್ಯದಲ್ಲೇ ಸಂನ್ಯಸ್ತವಾದ, ಆದರೆ ತುಂಬುಚಾರಿತ್ರ್ಯದ, ನಿಷ್ಕಳಂಕ ಯತಿಜೀವನ! ಒಬ್ಬರಂದರು ಹತ್ತು ಹಲವು ಮಂದಿ ಸಂನ್ಯಸ್ತರಾದರೆ, ಯತಿಗಳೆನಿಸಿದರೆ, ಅದರಲ್ಲಿ ಒಂದಿಬ್ಬರಾದರೂ ಉತ್ತಮರೆನಿಸಿದರೆ, ಯೋಗ್ಯರಾಗಿ ಮೂಡಿಬಂದರೆ ಅಷ್ಟು ಲಾಭ! ಸಮಾಜಕ್ಕೆ ಅಷ್ಟಾದರೂ ಒದಗಿಬಂತಲ್ಲವೆ?!  ಅವರದು ಸಮಾಧಾನಕರ ಬಹುಮಾನದ ನುಡಿ! ಕೇಳಿದ ಕೂಡಲೆ ಮತ್ತೊಬ್ಬರಂದರು ಹತ್ತರಲ್ಲಿ ಎರಡು ಒಳಿತಾಯಿತು- ಮತ್ತೆಂಟು ಕೆಟ್ಟು ಸಮಾಜಕ್ಕೆ ಹಾಗು ವೈಯಕ್ತಿಕವಾಗಿ ಕೆಡುಕಾಯಿತು! ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಒಂದು ವಿಷಾದಪೂರ್ಣ ನಗೆಯೊಂದಿಗೆ ಸಭೆ ಬರ್ಖಾಸ್ತಾಯಿತು!

ಯೋಗೀಂದ್ರಜ್ಜ ತಮ್ಮ ಮಕ್ಕಳಿಗೆ ಸಂನ್ಯಾಸವೆಂದಾಗ ಎಷ್ಟೊಂದು ಒದ್ದಾಡಿಬಿಟ್ಟರು. ಮಕ್ಕಳಿಗೆ ಸಂನ್ಯಾಸವೆಂಬುದು, ಮತ್ತೆ ಗುರುಮಠದ ಆದೇಶವೆಂಬುದು ನುಂಗಲಾರದ ತುತ್ತಾಗಿತ್ತು ಅವರಿಗೆ. ಆದರೆ ನಮ್ಮಪ್ಪಯ್ಯನಿಗೆ ಯಾಕೆ ಏನೂ ಅನ್ನಿಸಲಿಲ್ಲ? ಒಲ್ಲದ ಬಾಲಸಂನ್ಯಾಸ ಎಷ್ಟು ಅನಿಷ್ಟ, ದುರದೃಷ್ಟಕರವೆಂಬುದಕ್ಕೆ ನಾನೇ ದೊಡ್ಡ ಉದಾಹರಣೆಯಾಗಿ ಎದುರಿಗಿರುವಾಗ ಅದರ ಅಹಿತಕರ ಪರಿಣಾಮ ಅವರನ್ನು ಜೋರಾಗಿಯೇ ತಟ್ಟಿರುವಾಗ ಮತ್ತೇಕೆ ಇನ್ನೊಬ್ಬ ಮಗನ ಕುರಿತೂ, ಅದೇ ತಪ್ಪನ್ನು ಮಾಡಲು ಯೋಚಿಸಿದರು- ಯೋಜಿಸಿದರು? ನನಗಿನ್ನೂ- ಇನ್ನೂ ಅರ್ಥವಾಗದ ವಿಷಯವಿದು!

‘ಯದಹರೇವ ವಿರಜೇತ್- ತದಹರೇವ ಪ್ರವ್ರಚೇತ್’

ಶಾಸ್ತ್ರ ವಚನವಿದು. ವೈರಾಗ್ಯವಿದ್ದರೇನೆ ಪಾರಿವ್ರಾಜ್ಯ. ಆಚಾರ್ಯ ಮಧ್ವರು (ಇನ್ನೂ ಚಿಕ್ಕ ವಯಸ್ಸಿನಲ್ಲಿ) ಸಂನ್ಯಾಸಿಯಾಗುವೆನೆಂದು ಹೊರಟರೆ ಅವರ ಅಪ್ಪ-ಅಮ್ಮ ಒಪ್ಪಿಗೆ ನೀಡಲಿಲ್ಲವಂತೆ! ‘ಇನ್ನೊಬ್ಬ ಮಗನನ್ನು ಪಡೆದ ಮೇಲೆಯೇ ನಿನಗೆ ಸಂನ್ಯಾಸಕ್ಕೆ ನಮ್ಮ ಸಮ್ಮತಿ’ ಎಂಬ ಮಾತಿಗೆ ಕಟ್ಟುಬಿದ್ದು, ತಮಗೊಬ್ಬ ಸಹೋದರ ಜನಿಸಿದ ಮೇಲೆಯೇ ಆಚಾರ್ಯರು ಸಂನ್ಯಸ್ತರಾದರಂತೆ! ಆ ಮಧ್ವಾನುಜರೇ ಮುಂದೆ ಎಷ್ಟೋ ವರುಷಗಳ ಬಳಿಕ, ಸಂಸಾರದ ಎಲ್ಲಾ ಸಿಹಿ-ಕಹಿಗಳನ್ನು ಅನುಭವಿಸಿ ಸಾಕಾಗಿ ಆಚಾರ್ಯರಲ್ಲೇ ಬಂದು ತನಗೆ ಸಂನ್ಯಾಸ ನೀಡಿರೆಂದು ಅಧ್ಯಾತ್ಮದ ಅನುಗ್ರಹ ಬೇಡಿದರೆ, ತಮ್ಮ ನಿಜ ಸಹೋದರನೆಂಬ ಯಾವ ದಾಕ್ಷಿಣ್ಯಕ್ಕೂ ಒಳಗಾಗದೆ, ನಿನಗೆ ಇನ್ನೂ ವೈರಾಗ್ಯ ಬಂದಿಲ್ಲ, ಸಂನ್ಯಾಸಾಶ್ರಮ ಕೊಡಲಾರೆನೆಂದು ಹಿಂದೆ ಕಳಿಸಿದರಂತೆ. ಯದಾ ವಿರಕ್ತಃ ಪುರುಷಃ ಪ್ರಜಾಯತೇ, ತದೈವ ಸನ್ನಾ ಸ ವಿಧಿಃ  ಶ್ರುತೌ ಶುತಃ! ಮುಂದೆ ಎಂದೋ ತಮ್ಮ ಸಹೋದರ ನಿಜವಾಗು ವಿರಕ್ತನಾಗಿರುವನೆಂದು ನಿಶ್ಚಿತವಾದಾಗ ಸಂನ್ಯಾಸಾಶ್ರಮ ನೀಡಿ ವಿಷ್ಣುತೀರ್ಥರೆಂದು ಹೆಸರಿಸಿ, ಅಧ್ಯಾತ್ಮ ರಹಸ್ಯ ತಿಳಿಸಿದರಂತೆ!

ಬದುಕಿಗೆ ಆಧಾರವೆನಿಸುವ ಸದ್ವಿಚಾರಗಳು, ಮೌಲ್ಯಗಳು, ನುಡಿ, ನಡೆಗಳು ಮೂಲಸ್ವರೂಪದಲ್ಲೇ ಇರಬೇಕು! ಆದರ್ಶಗಳು ಸಂಸ್ಥೆಯ ರೂಪ ತಳೆದಾಗಲೆ ಎಲ್ಲ ಅನಾರೋಗ್ಯಕರ ಬೆಳವಣಿಗೆ! ಆಶ್ಚರ್ಯವೆಂದರೆ, ಎಲ್ಲಬಿಟ್ಟ ಸಂನ್ಯಾಸಿಗಳು ಮಠ ಕಟ್ಟಿದರು! ಇಲ್ಲಿದ್ದು ಈಸಿ ಜೈಸಬೇಕೆನ್ನುವ ಶರಣರು, ಸಂತರು, ಹರಿದಾಸರು ಮಠ ಕಟ್ಟಲಿಲ್ಲ, ಸಂಸ್ಥೆ ಸ್ಥಾಪಿಸಲಿಲ್ಲ! ಸದ್ವಿಚಾರಗಳ ಸನ್ನಡತೆಯ ಜೀವಂತ ಉದಾಹರಣೆಗಳಾಗಿ ಮನೆಮನೆಗೆ, ಮನಮನಗಳಿಗೆ ಜ್ಞಾನ, ಭಕ್ತಿ, ವೈರಾಗ್ಯಗಳ, ಜೀವನಮೌಲ್ಯಗಳ ಹರಿಕಾರರಾದರು! ಸ್ಥಾವರಕ್ಕಳಿವುಂಟು-ಜಂಗಮಕ್ಕಳಿವಿಲ್ಲ!

ಸ್ವಯೋಗ್ಯತೆಯೊಳಗೆ ಆಯತವಾದದ್ದು
ನೋಯದೆ ಉಣುವುದೆ ನ್ಯಾಯದ ವೈರಾಗ್ಯ

ಸ್ನೇಹದಿ ಹರಿಕೊಟ್ಟ ಕರ್ತೃತ್ವವು ಎನಗೆ
ನೀ ಇಲ್ಲದೆ ಎನ್ನಿಂದಾಗದೆಂತಿಪ್ಪುದೆ ನ್ಯಾಯದ ವೈರಾಗ್ಯ

ಆಯಾಸ ಬಡದೆ ಪರರ ಶ್ರೇಯಸು ನೋಡಿ
ಶ್ರೀಯರಸನಿತ್ತ ನೆಂಬುದೆ ವೈರಾಗ್ಯ

ಮಾಯಾರಹಿತ ದೇವ ಗೋಪಾಲವಿಠಲನ್ನ
ಪ್ರಿಯದಿ ನೆಚ್ಚಿ ಅನ್ಯಕ್ಕೆರಗದಿಪ್ಪುದೆ ವೈರಾಗ್ಯ

ಮಧ್ವಾಚಾರ್ಯರುಭಗವದನುಸಂಧಾನದೊಂದಿಗೆ, ತನ್ನ ಯೋಗ್ಯತೆಗನುಗುಣವಾಗಿ ಲಭಿಸುದುದನ್ನು ಭಗವದ್ದತ್ತವಾದುದೆಂದು ತಿಳಿದು, ಅನ್ಯರ ಅಪೇಕ್ಷೆಯಿಲ್ಲದೆ, ಅನ್ಯರ ಭಾಗ್ಯಕ್ಕೆ ಕಿಚ್ಚಿಲ್ಲದೆ, ಎಲ್ಲವೂ ಭಗವದಧೀನವೆಂಬ ನಂಬಿಕೆಯಿಂದ, ಅನ್ಯಕ್ಕೆರಗದೆ, ಬದುಕುವುದೇ ನ್ಯಾಯದ ವೈರಾಗ್ಯವೆನ್ನುವ ಹಿರಿಯರ ಮೇಲಿನ ಮಾತು ಎಷ್ಟೊಂದು ಸುಂದರ! ಅರ್ಥಪೂರ್ಣ!

ಪ್ರಿಯ ಓದುಗ ಅವಸರಿಸದಿರು! ನಾನಿನ್ನೂ ಇದ್ದಲ್ಲೇ, ಇಲ್ಲೇ ಇರುವೆ! ಬಿಟ್ಟೆನೆಂದರೂ ಬಿಡದೀ ಮಾಯೆ!

ಕುಕ್ಕೆಯಲ್ಲಿದ್ದಾಗಲೆಲ್ಲ ಮಧ್ಯಾಹ್ನದ ಆಲಸ್ಯದ ನಿದ್ದೆ ಕಳೆಯಿತೆಂದರೆ, ಮಠದಲ್ಲಿದ್ದ ಯಾರಾದರಿಬ್ಬರು ಶಿಷ್ಯರನ್ನು ಜೊತೆಮಾಡಿಕೊಂಡು ಕುಮಾರಧಾರಾ ನದಿಯ ಕಡೆಗೆ ನಡೆಯುತ್ತಿದ್ದೆ. ಸಂಪುಟತೀರ್ಥದ ಮಡುವಿನಲ್ಲಿ ಕತ್ತಲು ಕವಿಯುವತನಕ ಈಜುತ್ತಿದ್ದೆವು! ರವಿವಾರಗಳಲ್ಲಂತು ನನ್ನ ತಮ್ಮಂದಿರೋ, ಅಥವಾ ಇನ್ನಷ್ಟು ಪಡ್ಡೆ ಹುಡುಗರೋ ಜೊತೆಗಿದ್ದರೆ, ಈಜಿನ ಜೊತೆಗೆ, ನದಿತಟದ ಮಳಲರಾಶಿಯಲ್ಲಿ ಕಬಡ್ಡಿ ಆಡುತ್ತಿದ್ದೆವು! ಕೆಲವು ದಿವಸಗಳಲ್ಲಿ ಈ ಹೊತ್ತಿನಲ್ಲಿ ಸುತ್ತಲ ಕಾಡಿನಲ್ಲಿ ಎಲ್ಲೆಂದರಲ್ಲಿ ಸುತ್ತುತ್ತಿದ್ದೆವು. ಎಷ್ಟು ಚೆಂದ ಆ ದಿನಗಳು!

ಒಮ್ಮೆ ದೇರಾಜೆ ಸೀತಾರಾಮಯ್ಯನವರು (ಪ್ರಸಿದ್ಧ ಅರ್ಥಧಾರಿಗಳು) ಕಂಡಾಗ, ಏನೇಕಲ್ಲಿನಿಂದ ಸುಬ್ರಹ್ಮಣ್ಯದ ತನಕದ ನೀರು ಸ್ವಲ್ಪ ದಪ್ಪ! ಕುದಿಸಿದರೆ ಅರ್ಧ ಲೋಟವಿದ್ದುದು ಮುಕ್ಕಾಲು ಲೋಟಕ್ಕೆ ಹಿಗ್ಗುತ್ತದೆ! ಎಂದು ನುಡಿದಿದ್ದರು.  ಅವರದು ಎಂದೂ ಮರ್ಮದ ಮಾತೇ. ನನಗೂ ಅನಿಸಿತು- ನರಸಿಂಹ ಜಯಂತಿಯಲ್ಲಿ ಮಾತ್ರ ಕಾರ್ಯಕ್ರಮಗಳು ಯಾಕೆ? ವರ್ಷವಿಡೀ ಹದಿನೈದು ದಿವಸಗಳಿಗೆ ಏನಾದರೊಂದು ಕಾರ್ಯಕ್ರಮಗಳು ನಡೆಯುತ್ತಿದ್ದರೆ ಚೆನ್ನಾಗಿರುತ್ತದೆಯೆಂದು. ‘ಜಿಜ್ಞಾಸು ಸಂಘ’ ಎಂಬ ಹೆಸರಿನಿಂದ, ಊರ ನಾವೆಲ್ಲ ಸಂಜೆ ಮಠದಲ್ಲಿ ಸೇರುತ್ತಿದ್ದೆವು. ಊರಿನ ಶಾಲಾ ಕಾಲೇಜಿನ ಶಿಕ್ಷಕರು ಖಾಯಂ ಸಭಿಕರು. ಕೆಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು. ಏನಾದರೊಂದು ವಿಷಯದಲ್ಲಿ ವಿಚಾರ ವಿನಿಮಯ, ಉಪನ್ಯಾಸ, ಸುಗಮ ಸಂಗೀತವೆಂದು ಕಾರ್ಯಕ್ರಮಗಳು ನಡೆಯುತ್ತಿದ್ದವು. ಮೊದಮೊದಲು ಐದು-ಹತ್ತು ಮಂದಿಯಿದ್ದುದು ಐವತ್ತು-ನೂರರ ತನಕ ಜನ ಸೇರತೊಡಗಿದರು. ನಿರಾಡಂಬರ ಕಾರ್ಯಕ್ರಮಗಳವು. ನೇರ ವಿಷಯಕ್ಕೇ ಸಂಬಂಧಿಸಿರುತ್ತಿದ್ದುವು. ಎಲ್ಲ ಮುಕ್ತ- ಮುಕ್ತ. ಉಪನ್ಯಾಸ- ವಿಚಾರ ಸಂಕಿರಣಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ದೂರದೂರಿನಿಂದಲೂ ಕರೆಸುತ್ತಿದ್ದೆ. ಈ ನಮ್ಮ ಕಾರ್ಯಕ್ರಮಗಳಿಗೆ, ಹತ್ತೋ ಇಪ್ಪತ್ತೋ ಎಷ್ಟಾದರು ಜನ ಸೇರಲಿ, ಕಾರ್ಯಕ್ರಮಗಳು ನಡೆಯುತ್ತಿರಲಿ, ನಿಲ್ಲಿಸದಿರಿ ಎಂದು ಡಾ| ಕಾರಂತರಂತಹ ಹಿರಿಯರು ಪ್ರೋತ್ಸಾಹಿಸಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ಮೊದಲಿಂದಲು ನನ್ನ ಜೊತೆಗಿದ್ದವರು, ಊರಿನ ಡಾ| ನೇರಳಗದ್ದೆ ಗೋಪಾಲಕೃಷ್ಣಭಟ್ಟರು. ಅವರು ನಮ್ಮಪ್ಪನ ಪ್ರಿಯಸ್ನೇಹಿತರೂ ಹೌದು. ಪ್ರತಿವರ್ಷದಂತೆ ಆ ಸಲವೂ ಶ್ರೀರಾಮನವಮಿ ಬಂದಿತ್ತು. ಇದ್ದಕ್ಕಿದ್ದಂತೆ ನಮಗೆ ರಾಮಭಕ್ತಿ ಉಕ್ಕಿ ಕಾರ್ಯಕ್ರಮ ಹಮ್ಮಿಕೊಂಡೆವು!  ಬನ್ನಂಜೆಯವರ ಅಧ್ಯಕ್ಷತೆಯಲ್ಲಿ ರಾಮಾಯಣ ಪಾತ್ರ ಚಿತ್ರಣ ವಿಚಾರ ಸಂಕಿರಣ!  ಮರುವರ್ಷವೂ ರಾಮೋತ್ಸವವನ್ನೇ ಮಾಡಬೇಕೆಂಬ ಇರಾದೆಯೇನೂ ನಮ್ಮದಲ್ಲ! ಕುಮಾರಧಾರ ನದಿ

ಮತ್ತೊಂದು ವರ್ಷ ಪೇಜಾವರರ ಕುರಿತಾದ ಯಾವುದೋ ವಿಶೇಷ ಸಂದರ್ಭ. ಜಿಜ್ಞಾಸು ಸಂಘ ಮಾತ್ರವಲ್ಲ ಇಡಿಯ ತಾಲ್ಲೂಕು ಮಟ್ಟದ ಸಮಿತಿ ರಚಿಸಿ ಕುಕ್ಕೆಯಲ್ಲೇ ದೊಡ್ಡಮಟ್ಟದಲ್ಲೊಂದು ಕಾರ್ಯಕ್ರಮ! ನಾಡಿನ ಹಿರಿಯ ಸಾಹಿತಿಗಳಿಂದ ಕವಿಗೋಷ್ಠಿ- ವಿಚಾರ ಸಂಕಿರಣ, ಪೇಜಾವರರಿಗೆ ಸನ್ಮಾನ, ಪ್ರಸಿದ್ಧ ಗಾಯಕ ಜೇಸುದಾಸರಿಂದ ಗಾಯನ! ಸಂಭ್ರಮವೋ- ಸಂಭ್ರಮ! ಇನ್ನೊಮ್ಮೆ ‘ಜಾತಿಪದ್ಧತಿಯ ಕುರಿತಾಗಿ’ ಪೇಜಾವರರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ. ಬಿಸಿಬಿಸಿ ಚರ್ಚೆ ನಡೆದರೆ, ಮುಖ್ಯ ಅತಿಥಿಯಾಗಿ ಬಂದಿದ್ದ ಪ್ರತಿಷ್ಠಿತ ಧಾರ್ಮಿಕ ಮುಖಂಡರೊಬ್ಬರು ಕಂಗಾಲು!  ರಾಮ- ರಾಮಾ! ಮಠದಲ್ಲಿ ಇಂತಹ ವಿಚಾರಗಳೆ- ಚರ್ಚೆಯೇ? ನಮಗೆಲ್ಲ ಏನೋ ದೊಡ್ಡದನ್ನು ಸಾಧಿಸುತ್ತಿದ್ದೇವೆ ಎಂಬ ಧನ್ಯತೆಯಾದರೆ, ಕೆಲವೊಮ್ಮೆ ಇದೆಲ್ಲ ಬರಿಗುಲ್ಲು-ನಿದ್ದೆಗೇಡು ಎಂಬ ಭಾವವೂ ಸುಳಿಯದಿರುತ್ತಿರಲಿಲ್ಲ! ಏನಿದ್ದರೂ ದಿನವಿಡೀ, ವರ್ಷವಿಡೀ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಿದ್ದುದು, ಒಳಗಿನ ಏನನ್ನೋ ತಾತ್ಕಾಲಿಕವಾಗಿಯಾದರೂ ಮರೆಮಾಚಲು, ಮರೆಯಲು ಒದಗಿ ಬರುತ್ತಿತ್ತು!

ವಿದ್ಯಾಭೂಷಣ ನೆನಪ ಸಂಗೀತ:ವಿಷಮ ಪರಿಸ್ಥಿತಿಯ ದಿನಗಳು

ದೇಶದಲ್ಲಿ ರಾಜಕೀಯವಾಗಿ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಸಮಯವದು.  ರಾಜಕೀಯ ಸಂಘಟನೆಗಳು, ಪತ್ರಿಕೆಗಳವರು, ವಿಚಾರವಾದಿಗಳು, ಸಂಘ ಪರಿವಾರ, ಮತ್ತೆ ಹಲವು ಮಠಾಧೀಶರೂ ಇದಕ್ಕೆ ತೀವ್ರವಾಗಿ ವಿರೋಧ ಪ್ರತಿಕ್ರಿಯಿಸಿದ್ದರು.  ವಿರೋಧಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿಕೆ, ಪತ್ರಿಕೆಗಳಲ್ಲಿ ಹೇಳಿಕೆಗಳು, ಜೊತೆಗೆ ಸ್ವತಃ ಇಂದಿರಾ ಗಾಂಧಿಯವರಿಗೇ ಪತ್ರ ಬರೆಯೋಣ ಮುಂತಾದ ಚಟುವಟಿಕೆಗಳಲ್ಲಿ ಪೇಜಾವರ ಶ್ರೀಪಾದರೂ ಪರವಶ!  ನಾನೂ ಅಲ್ಪಸ್ವಲ್ಪ ಇಂಥಹ ವಿರೋಧೀ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆನೆನ್ನಿ!  ನಮ್ಮ ರಾಜ್ಯದಲ್ಲಿ ಕೆಲವು ಸ್ವಾಮಿಗಳು, ಧಾರ್ಮಿಕ ಮುಖಂಡರು ಇಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಇನ್ನೆಷ್ಟೋ ಮಂದಿಯದ್ದು ಜಾಣಮೌನವೂ! ಅಲ್ಲದೇ, ನನ್ನಂತಹ ಎಷ್ಟೋ ಮಂದಿಗೆ ಮತ್ತು ಈ ರೀತಿಯ ಚಳುವಳಿಯಲ್ಲಿ ತೊಡಗಿಸಿಕೊಂಡ ಎಷ್ಟೋ ಜನಸಾಮಾನ್ಯರಿಗು, ಇಂತಹ ವಿಷಯಗಳಲ್ಲಿ ಎಷ್ಟು ತಿಳುವಳಿಕೆಯಿತ್ತು? – ತೀವ್ರತೆಯಿತ್ತು? ಎನ್ನುವುದೂ ಅನುಮಾನವೇ!  ತಾವು ಒಪ್ಪಿಕೊಂಡ ಮುಖಂಡರುಗಳ ಅಭಿಪ್ರಾಯಗಳನ್ನು, ಆದೇಶಗಳನ್ನು ಸುಮ್ಮನೆ ಒಪ್ಪಿಕೊಂಡು ಪಾಲಿಸುವ ಸಾಮಾನ್ಯ ಜನರೇ ತಾನೆ ಎಲ್ಲ ಸಂಘಟನೆಗಳ ಬಂಡವಾಳ! ನಮ್ಮ ಆಗಿ ಹೋದ ಗುರುಗಳು ಯಾವಾಗಲೂ ಹೇಳುವುದಿತ್ತು.  `ಗತಾನು ಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ’.  ಗುಂಪಿನಲ್ಲಿ ಗೋವಿಂದ ಎಂಬಂತೆ ಎಲ್ಲರೂ ಬೊಬ್ಬೆ ಹೊಡೆದರೆ ನನ್ನದೂ ಒಂದಿರಲಿ, ಎಂದು ವ್ಯವಹರಿಸುವ, ಗುಂಪಿನಲ್ಲಿ ಕಳೆದು ಹೋಗುವ ಜನ ನಾವು!

ವಿಷಮ ಪರಿಸ್ಥಿತಿ ಕಳೆದು, ದೇಶವಿಡೀ ಸಡಗರದಲ್ಲಿದ್ದಾಗ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ, ಮಾತನಾಡಿದ್ದೆ.  ನಾನು ಅನ್ಯಾನ್ಯ ಕಾರ್ಯಕ್ರಮಗಳಲ್ಲಿ ಮಾತನಾಡುತ್ತಿದ್ದೆನಾದರೂ, ಎಂದೂ ದನಿಯೇರಿಸಿ ಉದ್ವೇಗದಿಂದ, ಉದ್ರೇಕಕಾರಿಯಾಗಿ ಮಾತನಾಡುತ್ತಿರಲಿಲ್ಲ.  ಮಾತನಾಡಲು ಗೊತ್ತೂ ಇರಲಿಲ್ಲ!  ಅದೆಲ್ಲ ನನಗೆ ಮುಜುಗರದ ಸಂಗತಿ. ಆದರೆ ಆ ದಿನ ಉತ್ಸಾಹದಲ್ಲಿ ಸ್ವಲ್ಪ ದನಿ ಎತ್ತರಿಸಿ ಇತಿಹಾಸ ಪುರಾಣಗಳ ಯಾವುದೋ ಸಂದರ್ಭ ಉಲ್ಲೇಖಿಸಿ ಮಾತನಾಡಿದ್ದೆ.  ಮರುದಿನವೇ ಪತ್ರಿಕೆಯೊಂದರ ಸಂಪಾದಕರಿಂದ ನನಗೊಂದು ಪತ್ರ.  ಅವರಾದರೋ ಶ್ರೀಮತಿ ಇಂದಿರಾ ಗಾಂಧಿಯವರ, ಆ ಪಕ್ಷದ ಕಟ್ಟಾ ಬೆಂಬಲಿಗರೇ ಆಗಿದ್ದರು.  ನೀವು ಸ್ವಾಮಿಗಳು!  ಹೀಗೆಲ್ಲಾ ಮಾತನಾಡಿದಿರಿ.  ತುರ್ತು ಪರಿಸ್ಥಿತಿಯಿಂದ ನಿಮ್ಮ ಧಾರ್ಮಿಕ ಚಟುವಟಿಕೆಗಳಿಗೆ, ಮಠದ ಪೂಜೆ ಆರಾಧನೆಗಳಿಗೆ. ಪಾಠ ಪ್ರವಚನಗಳಿಗೆ ಏನಾದರೂ ಅಡ್ಡಿಯಾಯಿತೆ? – ಚ್ಯುತಿ ಬಂದಿತ್ತೇ?  ನೀವು ಇಂತಹ ಚಟುವಟಿಕೆಯಲ್ಲಿ ಭಾಗವಹಿಸಬೇಕಿತ್ತೇ?  ಇವೆಲ್ಲ ಆಗಿಂದಾಗ್ಗೆ ಒದಗಿ ಬರುವ ರಾಜಕೀಯ ಸಂಗತಿಗಳು.  ನಿಮ್ಮಂಥವರಿಗೆ ಏನೇನೂ ಸಂಬಂಧಿಸದ್ದು. ಎಂಬರ್ಥ ಬರುವಂತೆ ಅವರ ಒಕ್ಕಣೆಯಿತ್ತು.

ತುರ್ತು ಪರಿಸ್ಥಿತಿಯಲ್ಲಿ ಜನರು ಬಹಿರಂಗವಾಗಿ ಸೇರಲು, ಭಾಷಣಕಾರರು ಓರೆಯಿಂದ ಮಾತನಾಡಲು ಅನುಕೂಲಿಸುವಂತೆ ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಪೂಜೆಗಳು, ಧಾರ್ಮಿಕ ಸಮಾರಂಭಗಳು ಹುಟ್ಟಿಕೊಂಡವು.  ಅಂದು ಪ್ರಾರಂಭವಾದ ಇಂತಹ ಪೂಜೆಗಳು ಪ್ರತಿವರ್ಷವೆಂಬಂತೆ ಇಂದಿಗು ಹಲವಾರು ಕಡೆ ನಡೆಯುತ್ತಿವೆ.  ಈ ಪರಿಕಲ್ಪನೆ ಸ್ವಾತಂತ್ರ್ಯಪೂರ್ವ ಹೋರಾಟದಲ್ಲಿ ತಿಲಕರು ಆರಂಭಿಸಿದ ಗಣಪತಿ ಹಬ್ಬವನ್ನು ನೆನಪಿಗೆ ತರುತ್ತಿತ್ತು.  ಬಹಳ ಕಡೆ ಇಂತಹ ಸಮಾರಂಭಗಳಲ್ಲಿ ಆಹ್ವಾನಿತನಾಗಿ ಬಾಗವಹಿಸುತ್ತಿದ್ದೆ.  ಮಾತನಾಡುತ್ತಿದ್ದೆ.  ವಿರೋಧಿ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದವರಲ್ಲಿ ನನ್ನ ಕೆಲವು ಬಂಧುಗಳೂ, ಮಿತ್ರರೂ ಇದ್ದರು.  ಬಹಿರಂಗ ಸಭೆಗಳಲ್ಲಿ ಭಾಗವಹಿಸಿ, ಛಡಿಯೇಟಿನ ರುಚಿ ನೋಡಿ ಹಿಂತಿರುಗಿದವರಿದ್ದರು.  ಹಾಗೆ ಜೈಲು ಸೇರಿದ್ದ ತೋಲ್ಪಾಡಿ ಹಾಗು ಇನ್ನಿತರ ಚಳುವಳಿ ಮಿತ್ರರನ್ನು ನೋಡಲೆಂದು ಮಂಗಳೂರಿನ ಜೈಲಿಗೂ ಒಮ್ಮೆ ಸವಾರಿ ಬಿಟ್ಟಿದ್ದೆ!  ಅಂದಿನ ದಿನಗಳಲ್ಲಿ ಸುಮ್ಮನೆ ಏನೋ ಸಾಧಿಸುತ್ತಿದ್ದೇವೆಂಬ ಉತ್ಸಾಹ!  ಅಥವಾ ದೊಡ್ಡ ಗುಂಪಿನಲ್ಲಿ ಹಿಂದಿನವರು ದಬ್ಬುತ್ತಿದ್ದರೆ ನಿಂತವರು ಮುಂದೆ ಸರಿದಂತೆ, ಏನೇನೂ ಪರಮಗಮ್ಯವಿಲ್ಲದ, ಬದುಕಿನ ಗತಿ ಅದು?

ವಸ್ತುತಃ ನನ್ನ ಮಟ್ಟಿಗು ಆಗ ಇದ್ದದ್ದು ವಿಷಮ ಪರಿಸ್ಥಿತಿಯೇ!  ಆಗ ನಾನಿದ್ದ ಪರಿಸ್ಥಿತಿಗು, ನನ್ನ ಮನಃಸ್ಥಿತಿಗು ತಾಳೆ ಹೊಂದುತ್ತಿರಲಿಲ್ಲ.  ದೇಶಕ್ಕೆ ಕೆಲವು ತಿಂಗಳುಗಳಾದರೆ, ನನಗೋ ವರ್ಷಾನುಗಟ್ಟಲೆ!  ಒಬ್ಬ ಭಯಂಕರ ಸಮಾಜ ಸುಧಾರಕನಾಗಿ ಹೊರಹೊಮ್ಮಿ, ಜನತೆಯ ಉದ್ಧಾರ ಮಾಡಿಬಿಡಬೇಕೆಂಬ ಉದ್ದೇಶವೇ, ಮಹತ್ವಾಕಾಂಕ್ಷೆಯೇ ನನಗಿರಲಿಲ್ಲ!  ಅದು ನನ್ನಿಂದ ಆಗುವ ಹೋಗುವ ಸಂಗತಿಯೇ ಆಗಿರಲಿಲ್ಲ!  ಒಬ್ಬ ಜನ ಸಾಮಾನ್ಯನ – ಇನ್ನೂ ಸ್ವಲ್ಪ ಮರ್ಯಾದೆ ಕೊಟ್ಟು ಹೇಳುವುದಾದರೆ ಶ್ರೀ ಸಾಮಾನ್ಯನ – ಸರ್ವೇಸಾಧಾರಣವಾದ ಜೀವನ್ಮುಖಿಯಾದ ಆಸೆ ಅಕಾಂಕ್ಷೆಗಳು ನನ್ನವು.  ಮೆಚ್ಚಿನ ಮಡದಿ – ಬೆಚ್ಚನೆ ಮನೆ – ಮತ್ತೆ ವೆಚ್ಚಕ್ಕೆ ಹೊನ್ನು, ಇಷ್ಟೇ ನನ್ನ ಜೀವನದ ಗುರಿ. ಎಲ್ಲರಂತೆಯೇ!  ಜೊತೆಗಿಷ್ಟು ಸಂಗೀತ – ಸಾಹಿತ್ಯ, ಸಾಲದೇ?  ಆದರೆ ಇವೆಲ್ಲವೂ ಸಾತ್ವಿಕ ಮಾರ್ಗದಿಂದ ಬಂದುದಾಗಿರಲಿ ಎಂಬ ಸಣ್ಣ ಆದರ್ಶ ಇಷ್ಟೇ ನನ್ನ ಗುರಿಯಾಗಿದ್ದುದು.  ನಾನು ಪೀಠದಲ್ಲಿದ್ದೇ ಗುಟ್ಟಾಗಿಯೋ, ಅಥವಾ ಮರ್ಯಾದೆಗೆಟ್ಟರೆ ಬಹಿರಂಗವಾಗಿಯೋ ಇದನ್ನೆಲ್ಲ ಪಡೆಯಬಹುದಿತ್ತು!  ಅದಕ್ಕಾಗಿ ಇಷ್ಟೊಂದು ಮಾನಸಿಕ ತೊಳಲಾಟಕ್ಕೆ ಒಳಗಾಗಬೇಕಿರಲಿಲ್ಲ.  ಆದರೆ ಹಾಗೆ ಮಾಡಲು ನನ್ನ ಮನ ಒಪ್ಪಲೇ ಇಲ್ಲ.  ನಮ್ಮ ತಂದೆಯವರಲ್ಲಿದ್ದ ಸಮಾಜದ ಕುರಿತಾದ ಅಂಜಿಕೆ, ಮೌಲ್ಯಗಳ ಕುರಿತಾದ ಗೌರವ ಬುದ್ಧಿ, ನನ್ನಲ್ಲಿದ್ದ ಆದರ್ಶ ಬದುಕಿನ ಕಲ್ಪನೆ ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ.  ಅದು ಹಿರಿಯರ ಪುಣ್ಯ!

ಆರು ಹಿತವರು ನಿನಗೆ ಈ ಮೂವರೊಳಗೆ? ಧಾರುಣಿಯೋ, ಮಾನಿನಿಯೋ, ಬುಹುಧನದ ಸಿರಿಯೋ? ಹರಿದಾಸರ ಈ ಪಲ್ಲವಿಗೆ ನನ್ನ ಉತ್ತರ ಹೀಗಿತ್ತು.  ಯೌವನದ ಬಿಸಿಗೆ ನನಗೆ ಈ ಮೂರೂ ಬೇಕಿತ್ತು!  ಇವು ಮೂರೂ ಎಲ್ಲರಿಗು ಹಿತಕರವಾಗಿಯೇ ಪರಿಣಮಿಸೀತೆಂದು ಭಾವಿಸಲಾಗದು. ಹಣ – ಹೆಣ್ಣು – ಮಣ್ಣು ಎಲ್ಲವೂ ಚೆನ್ನಾಗಿ ಒದಗಿ ಬಂದೀತು, ಕೆಲವರಿಗೆ!  ಇವುಗಳಲ್ಲಿ ಕೆಲವು, ಇನ್ನು ಕೆಲವರಿಗೆ!  ಮತ್ತೆ ಕೆಲವರಿಗೆ, ಯಾವುದೂ ಒದಗಿ ಬರದು!  ಹಾಗೆಂದೇ ಹರಿದಾಸರ ದೃಷ್ಟಿಯಲ್ಲಿ ಅವು ಯಾವುವೂ ನಂಬಿಕೆಯವಲ್ಲ.  ಆದರೆ ಆ ಭಾವ ಮೂಡುವ ಹೊತ್ತಿಗೆ ತುಂಬಾ – ತುಂಬಾ ತಡವಾಗಿರುತ್ತದೆ!  ಮತ್ತದು ಬದುಕಿನ ಬಟ್ಟೆಯಲ್ಲಿ ಮಾಗುವ ಸ್ಥಿತಿಯೂ!  ಇರಲಿ.

ನಾನು ಹುಡುಗಿಯರನ್ನು ನೋಡುತ್ತಿದ್ದೆ.  ಊರಲ್ಲಿದ್ದೋ, ಧರ್ಮ ಪ್ರವಚನಗಳಿಗೆಂದು ಊರೂರು ಅಲೆಯುವಾಗಲೂ, ಹುಡುಗಿಯರನ್ನು ಬೆಚ್ಚನೆಯ ದೃಷ್ಟಿಯಿಂದಲೇ ನೋಡುತ್ತಿದ್ದೆ.  ನನಗದು ಇಷ್ಟವಾದುದಾಗಿತ್ತು.  ಯುವಕನಾದ ನನ್ನನ್ನು ಅವರೂ ನೋಡುತ್ತಿದ್ದರು. ಕೆಲವೊಮ್ಮೆ ನೋಡಲೆಂದೇ ಬರುತ್ತಿದ್ದರು.  ಕೆಲವೊಮ್ಮೆ ಹಾಗೆ ನೋಡಲೆಂದೇ ನಾನೂ ಹೋಗಿರುತ್ತಿದ್ದೆ.  ಆಗ ನಾವು ಪರಸ್ಪರ ಯೋಗಕ್ಷೇಮವಷ್ಟೇ ಮಾತನಾಡುತ್ತಿದ್ದೆವು.  ಮಾತನಾಡಲೊಂದು ನೆವ.  ಇಷ್ಟಕ್ಕಾದರೂ ಅಪರಾಧಿ ಮನೋಭಾವ ಆಗೊಮ್ಮೆ ಈಗೊಮ್ಮೆ ಸುಳಿದಾಡಿದರೂ, ಎಂದೂ ಬಲವಾಗಿ ಕಾಡಿರಲಿಲ್ಲ!

ನವಯೌವನ ಮೋಹನಾಂಗೇರ ರೂಪವ
ಎವೆಯಿಕ್ಕದಲೆ ನೋಡ್ವ ನೋಟ ನಿನ್ನದಯ್ಯ ||

ಕನಕದಾಸರ ಈ ನುಡಿ ನೆರವಿಗೆ ಬರುತ್ತಿತ್ತು!  ಮತ್ತು ಲಕ್ಷ್ಮಣ ರೇಖೆಯನ್ನು ಎರಡೂ ಕಡೆಯಿಂದ ಯಾರೂ, ಎಂದೂ ಮೀರಿದ್ದಿಲ್ಲ ಬಿಡಿ!  ಮತ್ತೆ ಈ ವ್ಯವಹಾರವೆಲ್ಲ ಭಕ್ತರು ಸೇರಿದ ಗುಂಪಿನಲ್ಲೇ – ಬಹಿರಂಗವಾಗಿಯೇ!

ನಾನು ನನ್ನದು ಎಂಬ ಭಾವ ಜೀವ ಸಾಮಾನ್ಯವಾದ ಭಾವ.  ಅದು ಬದುಕಿನ ಸಹಜ ನಡೆಯು ಕೂಡ.  ಅದು ಅಷ್ಟಕ್ಕೆ ಸಿಮಿತವಾದರೆ ಎಲ್ಲರಿಗು ಕ್ಷೇಮ.  ನಾನೇ ನನಗೇ ಎಂದಾಗ ಮಾತ್ರ ಒಳ್ಳೆಯ ಪರಿಣಾಮವಿಲ್ಲ.   ಮಾನವ, ಸಹಜವಾಗಿ ಹಣದ ಅನುಕೂಲತೆಯನ್ನು ಬಯಸುತ್ತಾನೆ.  ಒಳ್ಳೆಯ ಬದುಕಿಗಾಗಿ.  ಸಂಪನ್ಮೂಲವಾಗಿ ಒಳ್ಳೆಯ ಭೂಮಿಯನ್ನೋ, ಯೋಗ್ಯ ಉದ್ಯೋಗವನ್ನೋ ಅರಸುತ್ತಾನೆ.  ಸುಂದರವಾದ, ಫಲವತ್ತಾದ ಭೂಮಿಯನ್ನು ಕಂಡರೆ ನನ್ನದಾಗಬಾರದೇ? ಎಂದು ಆಶಿಸುತ್ತಾನೆ.  ಸದಭಿರುಚಿಯವನಾದರೆ, ಪ್ರಕೃತಿ ಪ್ರೇಮಿಯಾದರಂತು ಅದಕ್ಕನುಗುಣವಾಗಿಯೇ ಆಯ್ದುಕೊಳ್ಳುತ್ತಾನೆ.  ಯೌವನದಲ್ಲಿ ಸುಂದರಾಂಗಿಯರಾದ ಹುಡುಗಿಯರನ್ನು ಕಂಡರೆ, ಯಾರನ್ನೇ ಕಂಡರೆ, ಈಕೆ ನನ್ನವಳಾಗಬಾರದೇ – ಇವಳನ್ನೇ ನಾನು ಮನೆ ತುಂಬಿಸಿಕೊಳ್ಳಲಾಗದೇ ಎಂದು ಹಂಬಲಿಸುತ್ತಾನೆ.  ಯಾವುದೇನೂ ತಪ್ಪಲ್ಲ – ಸಹಜವಾದುದು!  ಅದು ಸಮುಚಿತವಾಗಿ ಬರಬೇಕು – ಪರಿಣಮಿಸಬೇಕು ಅಷ್ಟೇ!  ಇಂತಹ ಹಲವಾರು ನನ್ನ ಮನಸಿನ ಮಂಡಿಗೆಗಳು ಕಾಲಕಾಲಕ್ಕೆ ಯಾರ್ಯಾರದೋ ಸೊತ್ತಾಗಿ, ನನ್ನ ವಿಷಾದಯೋಗಕ್ಕೆ ಕಾರಣವಾದುದು ಮಾತ್ರ ಸತ್ಯ.  ಕಾಲ ಯಾರನ್ನೂ ಕಾಯದು.  ನಮ್ಮ ಕುಮಾರಧಾರೆಯಲ್ಲಿ ಪ್ರತಿದಿನವು, ಪ್ರತಿ ಕ್ಷಣವು ನೀರು ಹರಿದು ಹೋಯಿತೇ!

ಎಂದಾದರು, ಎಂತಾದರು ನಾನು ಈ ಪೀಠ – ಸಂನ್ಯಾಸ ಎಲ್ಲವನ್ನು ತ್ಯಜಿಸುವವನೇ ಎಂಬ ಇರಾದೆಯಿಂದ, ಮಠದ ಸೊತ್ತು, ಸಂಪತ್ತು ಬಿಟ್ಟು ನನ್ನದೇ ಆದ ಏನೊಂದೂ ಇಲ್ಲದ ನಾನು, ಅರ್ಧಕ್ಕೆ ಬಿಟ್ಟಿದ್ದ ಲೌಕಿಕ ಶಿಕ್ಷಣವನ್ನು ಮುಂದುವರಿಸಲೆಂದು, ಅಂಚೆ ಮತ್ತು ತೆರಪಿನ ಶಿಕ್ಷಣ ಯೋಜನೆಯಲ್ಲಿ ಪರೀಕ್ಷೆಗಳನ್ನು ಕಟ್ಟಿದೆ.  ಪರಿಕ್ಷೆಯ ಸಮಯ ಪ್ರತಿದಿನವೂ ಮಠದಲ್ಲಿ ಪೂಜಾದಿಗಳನ್ನು ಬೇಗನೇ ಮುಗಿಸಿ, ಕಾರಿನಲ್ಲಿ ಎರಡು ಘಂಟೆಯ ಪಯಣದಷ್ಟು ದೂರದ ಮಡಿಕೇರಿಯ ಪರೀಕ್ಷಾ ಕೇಂದ್ರದಲ್ಲಿ ಎಲ್ಲರೊಂದಿಗೆ ಕುಳಿತು ಪರೀಕ್ಷೆ ಬರೆಯುತ್ತಿದ್ದೆ.  ಚಿಕ್ಕಂದಿನಲ್ಲಿ ಯಾವುದಾದರು ತಾಂತ್ರಿಕ ಶಿಕ್ಷಣದಲ್ಲಿ ಸಾಗಬೇಕೆಂದಿತ್ತಾದರು, ಅಂಚೆ ಮತ್ತು ತೆರಪಿನ ಶೀಕ್ಷಣದಲ್ಲಿ ಅದಕ್ಕೆ ಅವಕಾಶವಿಲ್ಲದಿದ್ದುದರಿಂದ, ಸಮಾಜ ಶಾಸ್ತ್ರ ಮತ್ತು ಇಂಗ್ಲಿಷ್‌ನ್ನು ಇಷ್ಟಪಟ್ಟು ಅದಕ್ಕನುಗುಣವಾಗಿ ಅಭ್ಯಸಿಸಿ ಪರೀಕ್ಷೆ ಕಟ್ಟಿದೆ.  ಯಶಸ್ವಿಯೂ ಆದೆ. ಇವನಿಗ್ಯಾಕಪ್ಪ ಇಂತಹ ಲೌಕಿಕ ಪರೀಕ್ಷೆಗಳ ತಳ್ಳಿ? ಎಂದು ಯಾರಾದರೂ ಸಂಶಯಿಸಿದರೂ, ಆಕ್ಷೇಪಿಸದರೂ ನಾನು ಗಣನೆಗೇ ತೆಗೆದುಕೊಳ್ಳಲಿಲ್ಲ.  ಆದರೆ ಯಾಕೋ ಏನೋ ಈ ಶಿಕ್ಷಣವನ್ನು – ಪದವಿಯನ್ನು ಪೂರ್ತಿಯಾಗಿ ಸಾಧಿಸಿಕೊಳ್ಳುವುದು ನನಗಾಗಲಿಲ್ಲ.  ಆದರೆ ಕಲಿತದ್ದು ಜ್ಞಾನಕ್ಕಾಯಿತು – ಅಷ್ಟಾದರೂ ತೃಪ್ತಿ!

ಈ ಮಧ್ಯೆ ಮಠದ ಪರಂಪರೆಗೆ, ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಒಂದು ಒಳ್ಳೆಯ ಕಾಲೋಚಿತ ಮಾರ್ಪಾಡನ್ನು – ಸುಧಾರಣೆಯನ್ನು ಮಾಡಬೇಕಾಯ್ತು.  ಅದು ತನಕ ನಮ್ಮ ಕುಕ್ಕೆಯ ಮಠ ಪರಂಪರೆಯಲ್ಲಿ ಎಂದೂ ಇಬ್ಬರು ಸ್ವಾಮಿಗಳು.  ಈ ರೀತಿಯ ವ್ಯವಸ್ಥೆಗೆ ಕಾರಣ, ಉಳಿದ ಮಾಧ್ವ ಮಠಗಳಲ್ಲಿಯಂತೆ ನಮ್ಮ ಮಠದ, ಆಚಾರ್ಯ ಮಧ್ವ ಕರಾರ್ಚಿತ ದೇವರ ವಿಗ್ರಹಗಳನ್ನು ಶತಮಾನಗಳಿಂದಲು, ಮಠದ ಆವರಣವನ್ನು ಬಿಟ್ಟು ಕದಲಿಸದೇ ಇದ್ದುದು.  ಒಬ್ಬ ಸ್ವಾಮಿಗಳು ಮಠದಲ್ಲೇ ಇದ್ದು ಪೂಜೆ – ಅಧ್ಯಯನಾದಿಗಳನ್ನು, ಮಠದ ನಿತ್ಯ – ನೈಮಿತ್ತಿಕ ವ್ಯವಹಾರಗಳನ್ನು ಗಮನಿಸುತ್ತಿರಬೇಕು – ನಡೆಸುತ್ತಿರಬೇಕು.  ಮತ್ತೊಬ್ಬರು ಧರ್ಮ ಪ್ರಚಾರಕ್ಕೆಂದು ನಾಡಿನೆಲ್ಲೆಡೆ ಸಂಚರಿಸುತ್ತಿರಬೇಕು.  ಈ ಸಂಚಾರ, ಧರ್ಮ ಪ್ರಚಾರದ ಜೊತೆಗೆ, ಮಠದ ಆರ್ಥಿಕ ಅನುಕೂಲತೆಗೂ ಒದಗಿ ಬರುತ್ತಿತ್ತು.  ನಾನು ಮೊದಲಿಂದಲು ಇನ್ನೊಬ್ಬ ಸ್ವಾಮಿಗಳ ಶಿಷ್ಯ ಸ್ವೀಕಾರವನ್ನು, ಮತ್ತೆ ಈ ಇಬ್ಬರು ಸ್ವಾಮಿಗಳ ವ್ಯವಸ್ಥೆಯನ್ನು ಒಪ್ಪಿಕೊಂಡಿರಲಿಲ್ಲ.  ನಮ್ಮ ಗುರುಗಳು ಕಾಲವಾದರು.  ಒಂದೆರಡು ವರುಷ ಕಾದೆ.  ನಮ್ಮ ಮಠ – ದೇವಸ್ಥಾನಗಳ ಬಹುಕಾಲದ ಕೆಲವು ಕೋರ್ಟು ಕಛೇರಿಯ ಕಲಾಪಗಳು ರಾಜಿಯಲ್ಲಿ ಪರ್ಯವಸಾನಗೊಂಡವು.  ನನಗೆ ಅನುಕೂಲವೆನಿಸಿತು.  ಶತಮಾನಗಳ ಈ ವ್ಯವಸ್ಥೆಯನ್ನು ಮುರಿಯಲು ನನಗೆ ಅನುವು ಮಾಡಿಕೊಟ್ಟವು. ಆದರೆ ಮಠದ ಪರಿವಾರ, ಹತ್ತಿರದ ಬಂಧುಗಳು, ಇಂತಹ ಒಂದು ಬದಲಾವಣೆಯ ಸಾಹಸಕ್ಕೆ ಕೈ ಹಾಕಿದರೆ ನನಗೇನಾದರೂ ಅನಿಷ್ಟ ಸಂಭವಿಸೀತೋ, ಜೀವ ಹಾನಿಯಾಗಬಹುದೇ? – ಎಂದು ನಿಜವಾಗು ಭಯಪಟ್ಟರು!  ಆದರೆ ನನಗೆ ಹಾಗೇನೂ ಅನಿಸಲಿಲ್ಲ! ಹಾಗೇನಾದರೂ ಸಂಭವಿಸಿತೋ ಅದು ನನಗೇ ತಾನೆ? – ನಾನೊಬ್ಬ ಹಿಂದಿಲ್ಲ – ಮುಂದಿಲ್ಲದವ!  ಮದುವೆಯಾಗುವ ತನಕ ಬೈಕ್ ರೈಡ್ ಮಾಡುವ ಯುವಕರು ನೂರಿಪ್ಪತ್ತಕ್ಕಿಂತ ಕಡಿಮೆ ಓಡಿಸುವ ಕ್ರಮವಿಲ್ಲ!  ಒಮ್ಮೆ ಮದುವೆಯಾಯಿತೋ – ಮಕ್ಕಳಾಯಿತೋ ಹಾಗೆಲ್ಲ ಓಡಿಸುವ ಕ್ರಮವೂ ಇಲ್ಲ!  ನನಗೆ ನನ್ನ ದೇವರಲ್ಲಿ ಪರಮ ಶ್ರದ್ಧೆ!  ನಾನು ನನ್ನ ನರಸಿಂಹನಲ್ಲಿ ಪ್ರಾರ್ಥಿಸಿದೆ.  ಅವನನ್ನು ನನ್ನ ತೊಡೆಯ ಮೇಲಿರಿಸಿಕೊಂಡೆ.  ನನಗೆ ನನ್ನ ಗುರುಗಳಾದ ಪೇಜಾವರರ, ಪಲಿಮಾರು ದೊಡ್ಡವರ ಬೆಂಬಲವಿತ್ತು.  ಅವರು ಮನಃಪೂರ್ತಿ ಆಶೀರ್ವದಿಸಿದರು.  ನನ್ನ ತಾಯಿಗೆ ವಂದಿಸಿದೆ.  ಕ್ಷೇತ್ರದ ಎಲ್ಲ ದೇವರಿಗು ಎರಗಿದೆ.  ಕಾರು ಹತ್ತಿ ಹೊರಟೇ ಬಿಟ್ಟೆ!  ನಮ್ಮ ತಂದೆಯವರಾದಿಯಾಗಿ ಮಠದ ಪರಿವಾರ, ಬಂಧು ಮಿತ್ರರು ಹಾಗು ಊರ ಜನರು, ಭಯ – ಆತಂಕಗಳಿಂದ, ಒಂದು ಅದ್ಭುತವನ್ನು ನೋಡುವಂತೆ, ಪ್ರೀತಿ ಗೌರವಗಳಿಂದ, ಕಣ್ದುಂಬಿ ಹರಸಿ ಕಳಿಸಿದರು!  ಮೊದಲ ಪರೀಕ್ಷಾ ಯಾತ್ರೆಯಾಗಿ ಉಡುಪಿಯ ಕೃಷ್ಣನ ತನಕ ತೆರಳಿ, ಆಸುಪಾಸಿನಲ್ಲಿ ನಾಲ್ಕೈದು ದಿನ ಸಂಚರಿಸಿ, ಏನೂ ಹಾನಿಯಾಗದೆ ಮರಳಿ ಕುಕ್ಕೆಗೇ ಬಂದರೆ ಎಲ್ಲರಿಗು ಸಮಾಧಾನದ ನಿಟ್ಟುಸಿರು!  ಮತ್ತೆ ಪರಮಾನಂದ!

ಧಾರ್ಮಿಕ ಪ್ರವಚನಗಳ ಜೊತೆಗೆ ಅಲ್ಪಸ್ವಲ್ಪ ಸಂಗೀತದ ಪ್ರಯೋಗವೂ ನಡೆದು ಜನರಿಗೆ ಇಷ್ಟವಾಗುತ್ತಿದ್ದವು.  ಜತೆಗೆ ತನಿಯಾಗಿಯೂ ನನ್ನ ಸಂಗೀತ ಕಛೇರಿಗಳು ನಡೆಯತೊಡಗಿದವು.  ನನ್ನಿಂದ ಧರ್ಮೋದ್ಧಾರವಾಯಿತೋ – ಇಲ್ಲವೋ ನನಗೆ ತಿಳಿಯದು.  ಆದರೆ ಎಡಬಿಡದ ಜನಸಂಪರ್ಕದಿಂದ, ಜನರ ಅಪಾರ ಪ್ರೀತಿ ನನಗೆ ಒದಗಿ ಬಂತು.  ಅದು ನಿರ್ವ್ಯಾಜವೂ, ಉದಾರವೂ ಆದುದಾಗಿತ್ತು!

ಒಮ್ಮೆ ಮದ್ರಾಸಿಗೆ ತೆರಳಿದ್ದೆ.  ವಾದಿರಾಜ್ – ಜವಹರ್ ಜೋಡಿಯ ಜವಹರ್ ಮತ್ತು ಸಂಗೀತಾ ಕಂಪೆನಿಯ ಮಹೇಶ್ ಅವರು ನಾನಿದ್ದಲ್ಲಿಗೆ ಬಂದು, ನಿಮ್ಮದೊಂದು ಧ್ವನಿ ಸುರುಳಿ ತಯಾರಾಗಬೇಕು, ಹರಿದಾಸರ ಹಾಡುಗಳದ್ದು ಎಂದು ಕೇಳಿಕೊಂಡರು.  ಒಪ್ಪಿದೆ.  ನನ್ನ ಗುರುಗಳೇ ಆದ ಟಿ. ವಿ. ಗೋಪಾಲಕೃಷ್ಣನ್ ಅವರ ಸಂಗೀತ ನಿರ್ದೇಶನ.  ಮೊದಲೇ ನಾನು ರಾಗ ಸಂಯೋಜಿಸಿದ, ಹಾಗು ನಮ್ಮ ತಂದೆಯವರು ಕಲಿಸಿಕೊಟ್ಟಿದ್ದ ಹಾಡುಗಳಾದುದರಿಂದ ಹೆಚ್ಚಿನ ಪೂರ್ವತಯಾರಿ ಬೇಕಿರಲಿಲ್ಲ.  ಧ್ವನಿಮುದ್ರಣ ನಡೆಯಿತು.  ಸಮಯಾಭಾವದಿಂದ ಕೊನೆಯಲ್ಲಿ ಅವಸರವಸರವಾಗಿ ಮುಗಿಯಿತು.  ನನಗ್ಯಾಕೋ ಸಮಾಧಾನವಿರಲಿಲ್ಲ.  ಮತ್ತೆ ಕೆಲವು ದಿವಸಗಳಲ್ಲಿ ಕಟ್ಟೊಂದು ಅಂಚೆಯಲ್ಲಿ ನಮ್ಮ ಕುಕ್ಕೆಗೆ ಬಂತು.  ಬಿಚ್ಚಿದರೆ ಮದ್ರಾಸಿನಿಂದ ಕ್ಯಾಸೆಟ್ಟುಗಳು.  ಕೇಳಿದರೆ ನನಗೇ ತೀರ ಕೆಟ್ಟದೆನಿಸಿತು.  ಅದರ ಎಡಿಟಿಂಗ್ ಸರಿಯಾಗಿರಲಿಲ್ಲ. ಸ್ಖಾಲಿತ್ಯಗಳು ಹಾಗೇ ಉಳಿದಿದ್ದುವು.  ಮತ್ತೊಮ್ಮೆ ಅವುಗಳನ್ನು ಕೇಳಲೇ ಹೋಗಲಿಲ್ಲ! ಮೂಲೆಗಿಟ್ಟು ಬಿಟ್ಟೆ!  ತಪ್ಪುಗಳನ್ನು ಆಮೇಲೆ ಸರಿಪಡಿಸಿದರೆನ್ನಿ.  ಆದರೆ ಆ ಧ್ವನಿಸುರುಳಿ ಅತ್ಯಂತ ಜನಪ್ರಿಯವಾಗಿ ಲಕ್ಷಾಂತರ ಪ್ರತಿಗಳ ಮಾರಾಟವಾಯಿತು.  ಅಲ್ಲಿನ ಹಾಡುಗಳನ್ನು ಜನ ತುಂಬ ಇಷ್ಟಪಟ್ಟರು.  ನಮ್ಮಮ್ಮ ಶಾರದೆ, ಪಿಳ್ಳಂಗೋವಿಯ, ಮಧುಕರ ವೃತ್ತಿ ಹಾಡುಗಳನ್ನು ಇಂದಿಗು ಜನರು ಇಷ್ಟಪಟ್ಟು ಕೇಳುವಂತಾಯ್ತು!  ಧ್ವನಿಸುರುಳಿಯ ಹೊಸ ಆವಿಷ್ಕಾರ,  ಆ ಕ್ಷೇತ್ರಕ್ಕೆ ನನ್ನ ಪ್ರವೇಶ, ಮುಂದಿನ ದಿನಗಳಲ್ಲಿ ನಾನು ಹರಿದಾಸರ ಹಾಡುಗಳನ್ನು ಹೆಚ್ಚು ಹೆಚ್ಚು ಹಾಡಲು ನಾಂದಿಯಾಯಿತು!

ವಿದ್ಯಾಭೂಷಣ ನೆನಪ ಸಂಗೀತ ಮುಂದುವರಿದ ಭಾಗ ಇಲ್ಲಿದೆ