ಎರಡು ವರ್ಷಗಳ ಹಿಂದೆ ಇಂತಹುದೇ ಒಂದು ದಿನ ಮಧ್ಯಾಹ್ನ ನಾನು ವಿಭಾಗದ ಕೋಣೆಯಲ್ಲಿ ಕುಳಿತಿರುವಾಗ, ಮಿತ್ರರೊಬ್ಬರು ‘ನೊಸಂತಿಯವರಿಗೆ ಹೃದಯಾಘಾತ ಆಯಿತಂತೆ. ಚೇಂಬರಿನಲ್ಲಿಯೇ ಕುಸಿದು ಪ್ರಾಣಬಿಟ್ಟರಂತೆ. ನೀವು ಅವರ ವಿದ್ಯಾರ್ಥಿಯಂತಲ್ಲ? ನಿಮಗೆ ತಿಳಿಸಲು ಸಹ್ಯಾದ್ರಿ ಕಾಲೇಜಿನವರು ಹೇಳಿದ್ದಾರೆ’ ಎಂದರು. ನಾನು ದಿಕ್ಕೆಟ್ಟು ಸುಮ್ಮನೆ ಕೂತುಬಿಟ್ಟೆ. ೬೦-೭೦ರ ವಯಸ್ಸು ಸಮೀಪಿಸುತ್ತಿರುವ ನನ್ನ ಗುರುಗಳು ಒಬ್ಬೊಬ್ಬರೇ ನಿರ್ಗಮಿಸುತ್ತಿರುವ ಸುದ್ದಿಗಳು ಕಳೆದ ಐದಾರು ವರುಷಗಳಿಂದ ಅಪ್ಪಳಿಸುತ್ತಲೇ ಇವೆ. ಪುಣೇಕರ್ ತೀರಿಕೊಂಡರು; ಎಚ್.ಎಂ. ಚನ್ನಯ್ಯನವರು ತೀರಿಕೊಂಡರು. ಈಗಣ ದಿನಮಾನದಲ್ಲಿ ೬೦ ಸಮೀಪಿಸುತ್ತಿರುವ ಮಧ್ಯಮವರ್ಗದ ಯಾರಿಗಾದರೂ ಹೃದಯಾಘಾತವಾದರೆ, ಅದು ಅನಿರೀಕ್ಷಿತ ಸುದ್ದಿಯೇ ಅಲ್ಲವೆಂಬಂತಾಗಿದೆ. ಆದರೂ ನೊಸಂತಿಯವರ ಮಟ್ಟಿಗೆ ಸಾವನ್ನು ನಂಬಲು ಮನಸ್ಸು ಒಪ್ಪಲಿಲ್ಲ. ನನ್ನ ಕಣ್ಣಲ್ಲಿರುವ ಅವರ ಚಿತ್ರಕ್ಕೆ ಮುಪ್ಪಡರಲು ಸಾಧ್ಯವಿಲ್ಲ. ಇನ್ನು ಸಾವೆಂತು ಮುಟ್ಟೀತು? ಕಡೆತನಕವೂ ಕಾಲ ಅವರ ಚೆಲುವನ್ನು ಕೆಡಿಸಿದಂತಿರಲಿಲ್ಲ. ಲವಲವಿಕೆಯನ್ನು ಕಳೆದಿರಲಿಲ್ಲ. ಅವರ ಮೊಗದ ಮೇಲೆ ಸದಾ ಸುಳಿದುಕೊಂಡಿದ್ದ ನಗುವನ್ನೂ ತುಂಟತನವನ್ನೂ ಕಲಿಯುವ ವಿದ್ಯಾರ್ಥಿತನವನ್ನೂ ಕಿತ್ತುಕೊಂಡಿರಲಿಲ್ಲ. ಹೀಗಾಗಿ ಅವರಿಗೆ ಮೃತ್ಯುಮುಟ್ಟಿತು ಎಂದರೆ ಮನಸ್ಸು ಒಪ್ಪಲಿಲ್ಲ.

ಕೂಡಲೆ ಹೊರಡಲೆ ಎಂದು ಯೋಚಿಸಿದೆ. ಯಾಕೋ ದೇಹ ಮತ್ತು ಮನಸ್ಸು ಸಹಕರಿಸಲಿಲ್ಲ. ಅವರ ಮುಖದರ್ಶನ ಮಾಡದಿರುವುದೇ ಒಳ್ಳೆಯದು ಅನಿಸತೊಡಗಿತು. ನನಗೆ ಪ್ರಿಯರಾದವರು ಸತ್ತು ಕಣ್ಮುಚ್ಚಿ ಮಲಗಿರುವುದನ್ನಾಗಲಿ, ಅವರ ದೇಹವನ್ನು ಬಿಳಿಬಟ್ಟೆಯಲ್ಲಿ ಸುತ್ತಿ ತೋಡಿದ ಗುಂಡಿಯಲ್ಲಿ ಮಲಗಿಸಿ ಮಣ್ಣು ಎಳೆಯುವುದನ್ನಾಗಲಿ, ಚಿತಾಗಾರದ ಸುಡುಗೂಡಲ್ಲಿ ತಳ್ಳುವುದನ್ನಾಗಲಿ ನಾನು ನೋಡಲಾರೆ. ಆ ಗಳಿಗೆಯಲ್ಲಿ ದೂರ ಹೋಗುತ್ತೇನೆ. ನೊಸಂತಿ ಅವರು ತೀರಿಲ್ಲ ಎಂದು ಪ್ರಯತ್ನ ಪೂರ್ವಕವಾಗಿ ನನ್ನನ್ನೆ ನಂಬಿಸಿಕೊಳ್ಳಲು ಯತ್ನಿಸಿದೆ; ನನ್ನ ಜೀವನದಲ್ಲಿ ಪ್ರಭಾವ ಬೀರಿದ, ನನ್ನನ್ನು ರೂಪಿಸಿದ ಮೇಷ್ಟರಲ್ಲಿ ಅವರೊಬ್ಬರು. ಅವರನ್ನು ನನ್ನ ಕಲ್ಪನೆಯಲ್ಲಾದರೂ ಸಾಯಗೊಡಬಾರದು ಎಂದುಕೊಂಡೆ. ಮನೆಗೆ ಬಂದು ಅವರು ನನಗೆ ಬರೆದಿದ್ದ ಪತ್ರಗಳನ್ನು ಓದುತ್ತ ಕುಳಿತುಬಿಟ್ಟೆ.

‘ನೊಸಂತಿ’ ಎಂಬುದು ನೊಣವಿನಕೆರೆ ಸಂಗಯ್ಯ ತಿಮ್ಮೇಗೌಡ ಎಂಬುದರ ಕಿರುರೂಪ. ಅವರು ನಮ್ಮ ಕ್ಲಾಸಿಗೆ ಬಂದ ಮೊದಲ ಪಿರಿಯಡ್ಡು ಚೆನ್ನಾಗಿ ನೆನಪಿದೆ. ಅವರು ತುಮಕೂರಿನಿಂದ ವರ್ಗವಾಗಿ ಬಂದಿದ್ದರು. ನಾನಾಗ (೧೯೮೦) ಎರಡನೇ ಬಿ.ಎ. ಓದುತ್ತಿದ್ದೆ. ಬ್ರಿಟಿಷರ ಕಾಲದ ದೊಡ್ಡಕೋಟೆಯಂತಿರುವ ಬೂದುಬಣ್ಣದ ಸಹ್ಯಾದ್ರಿ ಕಾಲೇಜಿನ ದೊಡ್ಡದೊಂದು ಲೆಕ್ಚರ್ ಹಾಲು; ೧೫೦ ಹುಡುಗ ಹುಡುಗಿಯರು ಕಿಕ್ಕಿರಿದು ತುಂಬಿದ್ದರು. ಅವರಲ್ಲಿ ಬಹಳಷ್ಟು ಜನ ಹೊಸ ಮೇಷ್ಟರು ಬಂದಾಗ ರಾಗಿಂಗ್ ಮಾಡಲು ಬಂದ ಸೀನಿಯರ್ ವಿದ್ಯಾರ್ಥಿಗಳು. ನೊಸಂತಿ ಕೋಣೆಯೊಳಗೆ ಬಂದೊಡನೆ, ತರಗತಿಯಿಂದ ‘ಹಾ’ ಎಂಬ ಉದ್ಗಾರ ಹೊರಟಿತು. ೩೩-೩೪ರ ಯುವಕ. ಚಿತ್ರೀಕರಣವನ್ನು ಅರ್ಧಕ್ಕೆ ಬಿಟ್ಟು ಬಂದ ಸಿನಿಮಾ ನಟನಂತಿದ್ದರು; ‘ಹುಟ್ಟಾಯಾಂವ ನಗೀ ಕ್ಯಾದಿಗೆ ಮುಡಿಸಿಕೊಂಡ’ವರಂತೆ ಮುಖದ ಮೇಲೆ ಲಾಸ್ಯವಾಡುವ ನಗು. ಹಣೆಗೆ ಬಂದು ಮುಸುಕುತ್ತಿದ್ದ ಕೂದಲನ್ನು ಕುತ್ತಿಗೆ ಕುಣಿಸಿ ತಲೆಮೇಲೆ ಮರಳಿ ಕೂರಿಸುತ್ತಿದ್ದರು. ಗೋಧಿಬಣ್ಣದ ಫುಲ್‌ಸೂಟು. ಕನ್ನಡ ಮೇಷ್ಟರನ್ನು ಇಷ್ಟೊಂದು ಆಧುನಿಕ ರೂಪದಲ್ಲಿ ನೋಡುವುದು ನಮಗೆ ಹೊಸತು. ಸಾಹಿತ್ಯದ ಮಹತ್ವವನ್ನು ಕುರಿತು ನೊಸಂತಿ ಮಾತಾಡಿದರು. ಇದು ಎಲ್ಲ ಕನ್ನಡ ಮೇಷ್ಟರು ಮೊದಲನೇ ಗಂಟೆ ಇಡೀ ವರುಷಕ್ಕೆ ಬೇಕಾದ ಮನಸ್ಥಿತಿಯನ್ನು ಸೃಷ್ಟಿಮಾಡಿಕೊಳ್ಳಲು ಎಚ್ಚರಿಕೆಯಿಂದ ಮಾಡುವ ಮತಾಂತರಿ ಭಾಷಣ. ನೊಸಂತಿ ಮಾತು ಕೊಂಚ ವೇಗ. ರನ್ನನ ಗದಾಯುದ್ಧದಿಂದ ಒಂದು ಪದ್ಯ ತೆಗೆದು, ಭೀಮ ದುರ್ಯೋಧನ ಇಬ್ಬರೂ ಮಾಡುವ ವಾಗ್ವಾದವನ್ನು ನಾಟಕೀಯವಾಗಿ ಅಭಿನಯಿಸಿದರು; ತಮಾಶೆ ಮಾಡಿ ನಗಿಸಿದರು. ಪಾಠ ಮುಗಿದ ಮೇಲೆ ಏನಾದರೂ ಪ್ರಶ್ನೆಯಿದ್ದರೆ ಕೇಳಿ ಎಂದರು. ಒಂದು ಹುಟ್ಟುತರಲೆ ಎದ್ದುನಿಂತು ‘ಸಾರ್ ಈ ಸೆಖೆಯಲ್ಲಿ ಈ ಕೋಟು ಕಷ್ಟವಾಗುತ್ತಿಲ್ಲವಾ?’ ಎಂದಿತು. ಅವರ ಮುಖ ನಾಚಿಕೆಯಿಂದ ಕೆಂಪಾಯಿತು. ‘ಏನಾದರೂ ಪ್ರಶ್ನೆ ಕೇಳಿ ಅಂದರೆ ಇಂತಹದನ್ನಾ ಕೇಳುವುದು?’ ಹುಸಿಕೋಪ ಮಾಡಿಕೊಂಡು ತರಗತಿ ಬರಖಾಸ್ತು ಮಾಡಿ ಹೊರಟುಹೋದರು.

ಮೊದಲ ದಿನವೇ ನಾವು ಅವರ ಅಭಿಮಾನಿಗಳಾದೆವು. ನನಗೆ ತಿಳಿದಂತೆ ಅವರ ತರಗತಿಗಳಿಗೆ ಸಂಸ್ಕೃತ ಹಿಂದಿ ವಿದ್ಯಾರ್ಥಿಗಳೂ ಬಂದು ಕೂರುತ್ತಿದ್ದರು. ಕಾಲೇಜಿನ ಬಹುಪಾಲು ಹುಡುಗಿಯರು ಬಿಡುವಿನ ವೇಳೆ ಗುಂಪಾಗಿ ಕುಳಿತುಕೊಂಡು ಅವರ ಬಗ್ಗೆ ಚರ್ಚಿಸುತ್ತಿದ್ದರು. ಸಾಕಷ್ಟು ಹುಡುಗಿಯರು ಅವರನ್ನು ಗುಪ್ತವಾಗಿ ಪ್ರೇಮಿಸುತ್ತಿದ್ದರು ಕೂಡ. ಮುಂದೆ ಅವರ ಸಹ್ಯೋದ್ಯೋಗಿಯಾಗಿ ಕೆಲಸ ಮಾಡುವ ಅವಕಾಶ ಬಂದಾಗ, ಕೊಂಚ ಸಲಿಗೆ ವಹಿಸಿ ಅಸೂಯೆಯಿಂದ ಕೇಳಿದೆ: ‘ಸಾರ್, ನಿಮಗೆ ಈಗಲೇ ಇಷ್ಟು ಫ್ಯಾನ್‌ಗಳು. ಹತ್ತು ವರ್ಷದ ಹಿಂದೆ ಹೇಗಿತ್ತು?’; ಆಗವರು ಮುಖವನ್ನು ಬಾಡಿಸಿ, ವಿಷಾದ ನಟಿಸುತ್ತ ‘ಏಏ! ಅವನ್ನೆಲ್ಲ ನೆನಪಿಸಬೇಡ. ಕಳೆದುಹೋದವು ಕಳೆದುಹೋದವು ಹಳೆಯ ಪಳಕೆಯ ಮುಖಗಳು’ ಎಂದು ಬಿಎಂಶ್ರೀಯವರ ‘ಇಂಗ್ಲಿಷ್ ಗೀತಗಳು’ ಸಂಕಲನದ ಸಾಲು ಹೇಳಿ ತಪ್ಪಿಸಿಬಿಟ್ಟರು. ಅವರು ಯಾಕೆ ವಿದ್ಯಾರ್ಥಿಗಳಿಗೆ ಅಷ್ಟು ಪ್ರಿಯವಾದ ಅಧ್ಯಾಪಕರಾಗಿದ್ದರು ಎಂಬುದಕ್ಕೆ ಅವರ ಸ್ಫುರದ್ರೂಪ ನಿಜವಾದ ಕಾರಣವೇನಲ್ಲ. ಬೇರೆ ಗುಪ್ತಕಾರಣಗಳಿದ್ದವು. ಅವು ಬಹುಶಃ ಇವು:

೧. ಪಾಠ ಮಾಡಲೆಂದು ಅವರು ರೂಪಿಸಿಕೊಂಡಿದ್ದ ತರಗತಿ ಭಾಷೆ. ‘ತರಗತಿಯ ಭಾಷೆ’ ಎಂದರೆ ಅಧ್ಯಾಪಕರು ಪಾಠ ಮಾಡಲು ಬಳಸುವ ಕೇವಲ ಭಾಷೆಯಲ್ಲ. ವಿಷಯವನ್ನು ವಿವರಿಸಲು ಕೊಡುವ ನಿದರ್ಶನ, ಬೆರೆಸುವ ತಮಾಶೆ, ಧ್ವನಿಯ ಏರಿಳಿತ, ಹಾವಭಾವ ಪೂರ್ಣವಾದ ದೈಹಿಕ ಚಲನೆ, ಅದರೊಳಗೆ ಹುದುಗಿಸುವ ಜೀವನ ಮೌಲ್ಯ ಮುಂತಾದವೆಲ್ಲ ಸೇರಿದ ಒಂದು ನುಡಿಗಟ್ಟು ಎನ್ನಬಹುದು. ಸಾಮಾನ್ಯವಾಗಿ ಅಧ್ಯಾಪಕ ಲೋಕದಲ್ಲಿರುವ ಈ ‘ತರಗತಿ ಭಾಷೆ’ ಗುರು-ಶಿಷ್ಯರ ನಡುವೆ ಕೃತಕ ದೂರವನ್ನು ಸೃಷ್ಟಿಸಿದೆ. ಅದು ವಯಸ್ಸಿನ ಮತ್ತು ತಿಳಿವಳಿಕೆಯ ಅಂತರ; ಅಧ್ಯಾಪಕರು ಎತ್ತರವಾದ ಕಟ್ಟೆಯ ಮೇಲೆ ನಿಲ್ಲುವ ಭೌತಿಕ ಅಂತರ ಕೂಡ. ಹಳಗನ್ನಡ ಪಾಠವಾದರೆ ಅಥವಾ ಇಂಗ್ಲಿಷ್ ಮಾಧ್ಯಮವಾದರೆ, ಮತ್ತೆ ಬೇರೆಬಗೆಯ ಅಂತರ. ಈ ಅಂತರಗಳನ್ನು ಹಲವು ಅಧ್ಯಾಪಕರು ಎಚ್ಚರದಿಂದ ಕಾಯ್ದುಕೊಳ್ಳುತ್ತಿದ್ದರು. ಆದರೆ ನೊಸಂತಿಯವರ ‘ತರಗತಿಯ ಭಾಷೆ’ ಈ ಅಂತರವನ್ನು ಮೊದಲಿಗೇ ಭಗ್ನ ಮಾಡುತ್ತಿತ್ತು. ಹೀಗಾಗಿ ಅವರ ಪಾಠದಲ್ಲಿ ಹಳಗನ್ನಡದಲ್ಲಿ ಮಾತಾಡುವ ರನ್ನನ ದುರ್ಯೊಧನ, ದ್ವಾಪರಯುಗವನ್ನು ದಾಟಿ, ಅಪೌರಾಣೀಕರಣಗೊಂಡು, ನಮ್ಮೂರ ಬೀದಿಯಲ್ಲಿ ಎದುರಾಗುವ ಸಾಮಾನ್ಯ ಮನುಷ್ಯನಾಗಿ ರೂಪಾಂತರ ಪಡೆಯುತ್ತಿದ್ದನು. ಪುರಾಣದ ದುಷ್ಯಂತ ಶಕುಂತಲೆಯರು ಶಿವಮೊಗ್ಗೆಯ ನೆಹರೂ ಸಾರ್ವಜನಿಕ ಪಾರ್ಕಿನಲ್ಲಿ ಕದ್ದುಮುಚ್ಚಿ ಕೂಡುವ ಪ್ರೇಮಿಗಳಾಗಿ ಬಿಡುತ್ತಿದ್ದರು. ಪಠ್ಯದಲ್ಲಿರುವ ಯಾವುದೇ ವಿಷಯವೂ ನಮ್ಮ ಸುತ್ತಲಿನ ನಿತ್ಯ ಜೀವನಕ್ಕೆ ಸಂಬಂಧಿಸಿದ್ದು ಎಂಬ ಅವರ ನಿಲುವು, ಅಪರಿಚಿತತೆಯನ್ನು ಹೊಡೆದೋಡಿಸುತ್ತಿತ್ತು. ಈ ಅಂತರವನ್ನು ಇಂಗ್ಲಿಷನ್ನು ಕನ್ನಡದಲ್ಲೂ ಹಳಗನ್ನಡವನ್ನು ಇಂಗ್ಲಿಷಿನಲ್ಲೂ ಬೆರೆಸಿ ಸೃಷ್ಟಿಸಿಕೊಳ್ಳುತ್ತಿದ್ದ ಬೆರಕೆ ಭಾಷೆಯ ಮೂಲಕವೂ ಅವರು ಮುರಿದು ಹಾಕುತ್ತಿದ್ದರು. ಈ ವಿಶಿಷ್ಟ ‘ತರಗತಿ ಭಾಷೆ’ಯಿಂದ ಕೆಲವೊಮ್ಮೆ ವಿಷಯದ ಗಂಭೀರತೆ ಮತ್ತು ಸಂಕೀರ್ಣತೆ ಕಡಿಮೆಯಾಗುತ್ತಿತ್ತು. ಆದರೆ ಬೇರೆಬೇರೆ ಹಿನ್ನೆಲೆಯಿಂದ ಬಂದ ನೂರಾರು ವಿದ್ಯಾರ್ಥಿಗಳು ತುಂಬಿರುವ ಲಾಂಗ್ವೇಜ್ ಕ್ಲಾಸುಗಳಲ್ಲಿ ಇದು ಅನಿವಾರ್ಯವಾಗಿತ್ತು; ಅವರ ಈ ವಿಶಿಷ್ಟ ‘ತರಗತಿ ಭಾಷೆ’ ವಿದ್ಯಾರ್ಥಿಗಳನ್ನು ಅವರ ಗೆಳೆಯರನ್ನಾಗಿ ಮಾಡಿಕೊಳ್ಳುತ್ತಿತ್ತು. ಕಲಿಕೆಗೂ ಬದುಕಿಗೂ ನೇರಸಂಬಂಧ ಏರ್ಪಡಿಸುತ್ತಿತ್ತು. ಬಹಳ ಗಂಭೀರವಾದುದನ್ನೂ ಆಟವಾಡಿಕೊಂಡು ಕಲಿಯಬಹುದು ಎಂದು ಹೇಳುತ್ತಿತ್ತು. ಇದು ಅವರ ಜನಪ್ರಿಯತೆಗೆ ಕಾರಣವಾಗಿತ್ತು. ಇದಕ್ಕೆಲ್ಲ ಪ್ರೇರಣೆ ತಮ್ಮ ಗುರುಗಳಾದ ಎಸ್.ವಿ. ಪರಮೇಶ್ವರಭಟ್ಟರು ಎಂದು ಅವರು ಹೇಳುತ್ತಿದ್ದರು.

ನೊಸಂತಿ೨. ಸಹ್ಯಾದ್ರಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳ ಸಾಮಾಜಿಕ ಆರ್ಥಿಕ ಹಿನ್ನೆಲೆಗಳಲ್ಲಿರುವ ಯಾವುದೊ ಸುಖದುಃಖದ ಬಿಂದುಗಳನ್ನು ಮೇಷ್ಟ್ರು ಮುಟ್ಟುತ್ತಿದ್ದುದು. ಸಹ್ಯಾದ್ರಿ ಕಾಲೇಜು ಒಂದು ಸರಕಾರಿ ಸಂಸ್ಥೆ; ಶಿವಮೊಗ್ಗೆಯಲ್ಲಿ ಖಾಸಗಿ ಕಾಲೇಜುಗಳಿಗೆ ಹೋಗುವ ಪ್ರತಿಷ್ಠಿತರ ಮಕ್ಕಳು ಇದನ್ನು ‘ದೊಡ್ಡಿ’ ಎಂದು ಹೆಸರಿಟ್ಟಿದ್ದರು. ಇದಕ್ಕೆ ಅಲ್ಲಿನ ಅತಿಸಂಖ್ಯೆ ಮತ್ತು ಅಶಿಸ್ತು ಎಂಬರ್ಥ ಒಂದಿತ್ತು; ಅಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳು ದಡ್ಡರು ಎಂಬ ವ್ಯಂಗ್ಯ ಇನ್ನೊಂದಿತ್ತು. ಸಹ್ಯಾದ್ರಿ ಕಾಲೇಜಿಗೆ ಬರುತ್ತಿದ್ದ ಹೆಚ್ಚಿನ ವಿದ್ಯಾರ್ಥಿಗಳು ಕೂಡ ಹಳ್ಳಿಯ, ಕೆಳಜಾತಿಯ ಹಾಗೂ ತಳವರ್ಗಕ್ಕೆ ಸೇರಿದವರು. ಈಗಲೂ ಈ ಸ್ಥಿತಿ ಹೆಚ್ಚು ಬದಲಾಗಿಲ್ಲ ಅನಿಸುತ್ತದೆ. ನಾವು ಬೀರೂರು ತರೀಕೆರೆ ಭದ್ರಾವತಿಗಳ ಮೂಲಕ ಬರುತ್ತಿದ್ದ ರೈಲಿನಲ್ಲಿ ಕಾಲೇಜಿಗೆ ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದೆವು. ಕೋರನಹಳ್ಳಿ ಮಸರಹಳ್ಳಿ ಬಿದರೆ ಶಿವಪುರ ಮುಂತಾದ ಹಳ್ಳಿಗಳಿಂದ ಓಡೋಡಿ ಬಂದು ರೈಲು ಹತ್ತುತ್ತಿದ್ದ ವಿದ್ಯಾರ್ಥಿಗಳು ಹೊಳೆ ಸ್ಟೇಶನ್ನಿನಲ್ಲಿ ಇಳಿದು ಮೈಲು ದೂರದ ಕಾಲೇಜಿಗೆ ಹೊರಟರೆ, ಶಿವಪ್ಪನಾಯಕನ ದಂಡು ಹೊರಟಂತೆ ಕಾಣುತ್ತಿತ್ತು.

ಕಾಲೇಜಿನಲ್ಲಿ ನಮ್ಮ ದಡ್ಡತನ ಸಾಬೀತು ಪಡಿಸಲು ಇಂಗ್ಲಿಷೆಂಬ ಒಂದು ಸಬ್ಜೆಕ್ಟು ಕಾಯುತ್ತಿತ್ತು. ಅದರಲ್ಲಿ ನಾವು ಫೇಲಾಗುತ್ತಿದ್ದೆವು ಇಲ್ಲವೇ ಕನಿಷ್ಟ ಮಾರ್ಕು ಪಡೆದು ಪಾಸಾಗುತ್ತಿದ್ದೆವು. ಇದಕ್ಕೆ ತಕ್ಕಂತೆ ಆ ಭಾಷೆಯನ್ನು ಮತ್ತಷ್ಟು ಪರಕೀಯಗೊಳಿಸಿ ಪಾಠಮಾಡುತ್ತಿದ್ದ ಇಂಗ್ಲೆಂಡಿನಿಂದ ಇಳಿದುಬಂದಂತಿದ್ದ ಹಳೆಗಾಲದ ಮೇಷ್ಟರುಗಳಿದ್ದರು. ಹೀಗಾಗಿ ನಮಗೆ ಈಶ್ವರಮೂರ್ತಿ ಎಂಬ ಮೇಷ್ಟರು ಬಹಳ ಪ್ರಿಯವಾಗಿದ್ದರು. ಸಿಡುಬು ಕಲೆಗಳಿದ್ದ ಎತ್ತರದ ದೇಹದ, ತುಂಬ ಸಿಗರೇಟು ಸೇದುತ್ತಿದ್ದ ಈಶ್ವರಮೂರ್ತಿಗಳ ಪಾಠ ಎಂದರೆ, ನಮ್ಮ ಕೀಳರಿಮೆ ಕಳೆದುಕೊಂಡು ಇಂಗ್ಲಿಷಿನ ಜತೆ ಗುದ್ದಾಡಲು ಶಕ್ತಿ ಪಡೆದುಕೊಳ್ಳುವ ಅಖಾಡ. ಅವರು ಮೊದಲು ಇಂಗ್ಲಿಷಿನ ಬಗ್ಗೆ ನಮ್ಮಲ್ಲಿದ್ದ ಭಯವನ್ನು ಕಳೆಯುತ್ತಿದ್ದರು. ‘ತಪ್ಪು ನಿಮ್ಮಲ್ಲಿಲ್ಲ ಕಂಡ್ರೊ. ಇಂಗ್ಲಿಷಿನಲ್ಲೂ ಇಲ್ಲ. ಅದನ್ನು ಕಲಿಯೊ ವಿಧಾನದಲ್ಲಿದೆ’ ಎಂದು ಹೇಳುತ್ತ, ನಮ್ಮನ್ನು ದಡ್ಡತನದ ಅಪರಾಧದಿಂದ ಖುಲಾಸೆ ಮಾಡುತ್ತಿದ್ದರು. ನೊಸಂತಿ ಇದೇ ಕೆಲಸವನ್ನು ಸಾಮಾಜಿಕವಾಗಿ ಮಾಡುತ್ತಿದ್ದರು. ಬಡವರ ಆಹಾರ ಪದ್ಧತಿ, ಭಾಷೆ, ಹೆಸರುಗಳಿಗೆ ಅಂಟಿಕೊಂಡಿರುವ ಕೀಳರಿಮೆಗಳು ಎಲ್ಲಿಂದ ಬಂದಿವೆ ಎಂದು ಅವರು ವಿವರಿಸುತ್ತಿದ್ದರು. ಕೆಲವೊಮ್ಮೆ ಈ ಥಿಯರಿಯನ್ನು ತಮಗೂ ಅನ್ವಯ ಮಾಡಿಕೊಂಡು ‘ನೋಡಿ, ನೋಡೋಕೆ ಎಷ್ಟೆ ಚೆನ್ನಾಗಿರಲಿ, ನಮ್ಮ ಅಪ್ಪ ಅಮ್ಮ ತಿಮ್ಮ, ತಿಪ್ಪ, ಹನುಮಂತ ಎಂದೆಲ್ಲ ಹೆಸರಿಟ್ಟಿದ್ದಾರೆ’ ಎಂದು ಬೇಸರದ ಅಭಿನಯ ಮಾಡುತ್ತಿದ್ದರು. ಕೊನೆಗೆ ಗಂಭೀರವಾಗಿ ನಮ್ಮ ಹೆಸರು, ಜಾತಿ, ಬಣ್ಣ, ಊಟ, ಊರುಗಳಿಂದ ನಾವೇಕೆ ಮುಜುಗರ ಪಡಬೇಕು? ಇವು ನಮ್ಮ ಐಡೆಂಟಿಟಿಗಳಲ್ಲವಾ? ಇವನ್ನು ಪ್ರೀತಿಸುವ ಮೂಲಕವೇ ಬದುಕಬೇಕಲ್ಲವಾ?’ ಎಂದು ಪ್ರತಿವಾದ ಮಾಡುತ್ತಿದ್ದರು. ಇವೆಲ್ಲ ಈಗ ದೊಡ್ಡ ಥಿಯರಿ ಅನಿಸದೆ ಇರಬಹುದು. ಆಗ ಹಳ್ಳಿಗಾಡಿನಿಂದ ಬಂದ ಸಾವಿರಾರು ವಿದ್ಯಾರ್ಥಿಗಳಿಗೆ ಅದು ವಿಚಿತ್ರ ಆತ್ಮವಿಶ್ವಾಸ ಕೊಡುತ್ತಿತ್ತು.

ನಾನು ಅವರ ವಿದ್ಯಾರ್ಥಿಯಾಗಿದ್ದಾಗ ಮಾತ್ರವಲ್ಲ, ಮೈಸೂರಲ್ಲಿ ಎಂ.ಎ. ಮುಗಿಸಿ ಸಹ್ಯಾದ್ರಿ ಕಾಲೇಜಿಗೆ ಪಾಠ ಮಾಡಲು ಬಂದಾಗಲೂ ಅವರಿಂದ ಕಲಿತೆ. ಹಾಗೆ ನಾನು ಕಾಲೇಜಿಗೆ ಬರಲು ನೊಸಂತಿ ಮತ್ತು ಹಾಲೇಶ್ ಎಂಬ ಪ್ರೀತಿಯ ಮೇಷ್ಟರುಗಳ ‘ಪಿತೂರಿ’ಯೂ ಕಾರಣವಾಗಿತ್ತು. ಹೊಸ ಅಧ್ಯಾಪಕನಾದ ನನ್ನನ್ನು ಅವರು ಸರಿಸಮಾನನೆಂಬಂತೆ ನಡೆಸಿಕೊಂಡ ಬಗೆ, ತೋರಿದ ಸಲಿಗೆ, ಕೊಟ್ಟ ಪ್ರೀತಿ, ಕಳೆದ ಸಂಕೋಚ ಮರೆಯಲಾರೆ. ನಾನು ಮುಂದೆ ಶಿವಮೊಗ್ಗೆಯ ಇನ್ನೊಂದು ಕಾಲೇಜಿಗೆ ಹೋದೆ. ನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದೆ. ಎಲ್ಲಿ ಹೋದರೂ ನನ್ನ ಮೇಲಣ ಅವರ ಪ್ರೀತಿ ಹಿಂಬಾಲಿಸುತ್ತಲೇ ಇತ್ತು. ನನ್ನ ಲೇಖನಗಳನ್ನು ಓದಿ ಪತ್ರ ಬರೆಯುತ್ತಿದ್ದರು.

ಖಾಸಗೀಕರಣದ ಗಾಳಿಯ ಈ ದಿನಗಳಲ್ಲಿ, ಹಿಂದುಳಿದ ಸಾಮಾಜಿಕ ಆರ್ಥಿಕ ಸ್ತರದಿಂದ ವಿದ್ಯಾರ್ಥಿಗಳು ಕಲಿಯುವ ಸಾರ್ವಜನಿಕ ಸಂಸ್ಥೆಗಳನ್ನು ಅನಾಥವಾಗಿಸುವ ದೃಶ್ಯಗಳು ಎಲ್ಲೆಡೆ ಕಾಣುತ್ತವೆ. ಇಂತಹ ಹೊತ್ತಲ್ಲಿ ಕಾಲೇಜನ್ನು ಹೊಣೆಗಾರಿಕೆಯಿಂದ ಕಟ್ಟುವ ನೊಸಂತಿಯವರ ಶ್ರದ್ಧೆ ಅಪೂರ್ವವಾಗಿತ್ತು; ನೂರಾರು ವಿದ್ಯಾರ್ಥಿಗಳು ಅವರು ತುಂಬಿದ ನೈತಿಕ ಸ್ಥೈರ್ಯದಿಂದ ಬೆಳೆದು ದೊಡ್ಡವರಾಗಿದ್ದಾರೆ. ಸಹ್ಯಾದ್ರಿ ಕಾಲೇಜಿಗೆ ಪ್ರಿನ್ಸಿಪಾಲರಾದ ಮೇಲೆ ಅವರು ಅದೊಂದು ಚಳುವಳಿ ಎಂಬಂತೆ ಕೆಲಸ ಮಾಡುತ್ತಿದ್ದರು. ಅವರು ದುಡಿಮೆಯಲ್ಲಿ ಇರುವಾಗಲೇ ಪ್ರಾಣಬಿಟ್ಟರು.

ಒಮ್ಮೆ ಅವರು ‘ಏ ರಹಮತ್ತೂ, ಆ ಕಡೆ ಹೋದರೆ ತುಮಕೂರು ಗೌರ್ಮೆಂಟ್ ಕಾಲೇಜು ಕ್ಯಾಂಪಸ್ಸಿನ ಮರಗಳನ್ನು ನೋಡು’ ಅಂದಿದ್ದರು. ಅವು ಅವರು ಅಲ್ಲಿದ್ದಾಗ ನೆಡಿಸಿದ ಮರಗಳಂತೆ. ಈ ಮಾತು ಹೇಗೋ ನನ್ನ ಮನಸ್ಸಲ್ಲಿ ಕೂತಿದೆ; ಈಗಲೂ ಬೆಂಗಳೂರಿಗೆ ಆ ಹಾದಿಯಲ್ಲಿ ಹೋಗುವಾಗೆಲ್ಲ ಆ ಮರಗಳನ್ನು ಅಯತ್ನವಾಗಿ ನೋಡುತ್ತೇನೆ. ಅವು ನನ್ನಂತೆಯೇ ಮೇಷ್ಟರ ವಿದ್ಯಾರ್ಥಿಗಳು ಅನಿಸುತ್ತದೆ.