ಇದೆಲ್ಲವನ್ನೂ ನೋಡುತ್ತಿರುವಾಗ ಇಗೋ ಜನವರಿ ೨೬ ಬರುತ್ತಿದೆ. ಅಂದು ಆಸ್ಟ್ರೇಲಿಯಾ ಡೇ – ಕ್ಯಾಪ್ಟನ್ ಜೇಮ್ಸ್ ಕುಕ್ ಸಿಡ್ನಿ ಸಮುದ್ರತೀರಕ್ಕೆ ಬಂದು, ಅವನ ಹಡಗು ಅಲ್ಲಿ ಲಂಗರು ಹಾಕಿ, ಓಹೋ ಈ ಜಾಗದಲ್ಲಿ ಯಾರೂ ಮನುಷ್ಯರು ಇಲ್ಲ, ಆದ್ದರಿಂದ ಇದು ತಮಗೆ ಸೇರಿದ್ದು, ಬ್ರಿಟಿಷರಿಗೆ ಸೇರಿದ ನಾಡು, ಎಂದು ಘೋಷಿತವಾದ ದಿನ. ಅಲ್ಲಿಂದ ಹೊಸ ಆಸ್ಟ್ರೇಲಿಯದ ಹುಟ್ಟು, ಬೆಳವಣಿಗೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಆಸ್ಟ್ರೇಲಿಯಾದ ಉತ್ತರ-ಪೂರ್ವದಲ್ಲಿರುವ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಉತ್ತರ ಭಾಗದಲ್ಲಿ ಸೈಕ್ಲೋನ್ ಕೋಜಿ ಬಂದಿಳಿದು, ಚಂಡಮಾರುತದೊಡನೆ ಪ್ರವಾಹವುಕ್ಕಿದೆ. ಅದೇ ಸಮಯದಲ್ಲಿ ದೇಶದ ದಕ್ಷಿಣದಲ್ಲಿರುವ ವಿಕ್ಟೋರಿಯಾ ರಾಜ್ಯದಲ್ಲಿ ಕಾಡು/ಪೊದೆ ಬೆಂಕಿಯ ಹಾವಳಿ ಮುಂದುವರೆದಿದೆ. ಎಷ್ಟು ಎಂದರೆ ಬೆಂಕಿಯ ಪ್ರಮಾದವಿರುವ ಊರುಗಳಲ್ಲಿ ತುರ್ತುಪರಿಸ್ಥಿತಿ ಆದೇಶವಿದೆ. ಇದು ಪ್ರಕೃತಿಯ ವಿಕೋಪ ಎನ್ನಲು ಇಷ್ಟವಾಗುತ್ತೋ ಇಲ್ಲವೋ.
ಇಂತಹ ಬೃಹತ್ ಪ್ರಮಾಣದ ಪ್ರಾಕೃತಿಕ ಕಲಾಪಗಳನ್ನು ಎದುರಿಸಲು ಎರಡೂ ರಾಜ್ಯಗಳಲ್ಲಿ ಸಾಕಷ್ಟು ಸಿದ್ಧತೆ ನಡೆದಿತ್ತು. ಅದರಲ್ಲೂ ನಮ್ಮ ರಾಣಿರಾಜ್ಯದಲ್ಲಿ (ಕ್ವೀನ್ಸ್‌ಲ್ಯಾಂಡ್) ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದರು – ಪ್ರವಾಹ ಪೀಡನೆಗೆ ಒಳಗಾಗುವ ಪ್ರದೇಶಗಳಲ್ಲಿ ವಾಸಿಸುವ ಎಲ್ಲರೂ ಜಾಗ ಖಾಲಿ ಮಾಡಬೇಕು. ಸರ್ಕಾರ, ರೆಡ್ ಕ್ರಾಸ್, ಮತ್ತಿತರ ಸಂಸ್ಥೆಗಳು ಏರ್ಪಡಿಸಿರುವ ತಾತ್ಕಾಲಿಕ ತಂಗುದಾಣಗಳಿಗೆ ಹೋಗಿ, ಅವಶ್ಯವಿರುವ ಸೇವಾಸೌಲಭ್ಯಗಳನ್ನು ಪಡೆಯಬೇಕು. ಅದೃಷ್ಟಕ್ಕೆ ಜನರೇನೊ ಅವರ ಮಾತು ಕೇಳಿ ಜೀವ ಉಳಿಸಿಕೊಂಡಿದ್ದಾರೆ. ಸೈಕ್ಲೋನ್ ಕೋಜಿ ಪ್ರಭಾವ ಕಡಿಮೆಯಾಗಿದೆ. ದುರಾದೃಷ್ಟವೆಂದರೆ ಸಾವಿರಾರು ಕಿಲೋಮೀಟರ್ ಗಟ್ಟಲೆ ಇರುವ ಪ್ರವಾಹಪೀಡಿತ ಪ್ರದೇಶಗಳಲ್ಲಿನ ಅಷ್ಟೇ ಸಂಖ್ಯೆಯ ಪ್ರಾಣಿಗಳು, ಜಾನುವಾರು, ಇತ್ಯಾದಿ ಸತ್ತಿವೆ. ರೈತರಿಗೆ ಬಹಳ ನಷ್ಟ. ಇದರಿಂದ ಉಂಟಾಗುವ ಮನಃಕ್ಲೇಶ, ಮಾನಸಿಕ ಅನಾರೋಗ್ಯವನ್ನು ಹೇಗೆಲ್ಲಾ ನಿರ್ವಹಿಸುವುದು ಎಂದು ಮಾತು ನಡೆಯುತ್ತಿದೆ.
ಇತ್ತ ದಕ್ಷಿಣದಲ್ಲಿ ವಿಕ್ಟೋರಿಯಾ ರಾಜ್ಯದಲ್ಲೂ ಕೂಡ ಹಾಗೆಯೆ. ಆದರೆ ಅಲ್ಲಿ ಬೆಂಕಿ. ನೂರಾರು ಕಿಲೋಮೀಟರ್ ಉದ್ದಗಲಕ್ಕೂ ಪೊದೆಬೆಂಕಿ ಹತ್ತಿ ಉರಿಯುತ್ತಾ, ಜನರು, ಪ್ರಾಣಿಪಕ್ಷಿಗಳು, ಜಾನುವಾರು ಇತ್ಯಾದಿಗಳು ಇನ್ನೂ ಅಪಾಯಸ್ಥಿತಿಯಲ್ಲೇ ಇದ್ದಾರೆ. ಈಗಾಗಲೇ ಒಬ್ಬ ವ್ಯಕ್ತಿ ಸತ್ತಿರುವುದು ವರದಿಯಾಗಿದೆ. ಬೆಂಕಿಯ ಬಿಸಿಯಿಂದ ರಾಜ್ಯ ಸರ್ಕಾರಕ್ಕೆ ಕೆಲಸವೋ ಕೆಲಸ.
ಹೀಗೆಯೇ ಹಲವಾರು ಸಮಸ್ಯೆಗಳ ತೀವ್ರತೆ ಕೇಂದ್ರ ಸರ್ಕಾರಕ್ಕೂ ಬಿಸಿ ಮುಟ್ಟಿಸಿ ಕೆಲಸ ಹೆಚ್ಚಿದೆ. ಹೆಚ್ಚಿದೆ ಎನ್ನುವುದಕ್ಕಿಂತಲೂ ವಿಪರೀತವಾಗಿದೆ ಅನ್ನುವುದೇ ಸೂಕ್ತ. ಎರಡು ತಿಂಗಳ ಹಿಂದೆ ಪ್ರಧಾನಮಂತ್ರಿ ಆಲ್ಬಾನೀಸಿ ಸರ್ಕಾರಕ್ಕೆ ಕೆಲಸ ತುಸು ಹೆಚ್ಚಿದ್ದು ಅವರು ಹದಿನಾರು ವರ್ಷ ವಯಸ್ಸಿನೊಳಗೆ ಇರುವ ಮಕ್ಕಳು ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವುದನ್ನು ತಡೆಗಟ್ಟಿದ್ದು, ಈ ವಯಸ್ಸಿನ ಮಕ್ಕಳು cyber bullying ಗೆ ಒಳಗಾಗುತ್ತಿರುವುದು, ಆತ್ಮಹತ್ಯೆ ಪ್ರಕರಣಗಳು, ಖಿನ್ನತೆ-ಆತಂಕ-ತೀವ್ರ ಒತ್ತಡ ಮುಂತಾದ ಮಾನಸಿಕ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ರೀತಿಯ ಬ್ಯಾನ್ ಜಾರಿಗೆ ಬಂತು.
ಸೋಶಿಯಲ್ ಮೀಡಿಯಾ ಬಳಕೆ ಬ್ಯಾನ್ ಆದ ಹೊಸತರಲ್ಲಿ Gen Z ಮಕ್ಕಳು ಆಲ್ಬಾನೀಸಿ ಮತ್ತು ಅವರ ಸರ್ಕಾರದ ಮೇಲೆ ಖಾರ ಕಾರಿದರು. ಇನ್ಸ್ಟಾಗ್ರಾಮ್, ಟಿಕ್ ಟಾಕ್, ಸ್ನ್ಯಾಪ್‌ಚಾಟ್ ಮುಂತಾದವುಗಳ ಬಳಕೆ ಇಲ್ಲದೇ ಬದುಕುವುದು ಹೇಗೆ ಎಂದು ಪರದಾಡಿದರು. ಎಷ್ಟೇ ಬ್ಯಾನ್ ಮಾಡಿದರೂ ನೋಡಿ ನಾವು ಸೋಲಲ್ಲ, ಎಂದು ಜಂಬದಿಂದ ತಮ್ಮ ಸೋಶಿಯಲ್ ಮೀಡಿಯಾ ಬಳಕೆಯ ಟ್ರಾಕಿಂಗ್ ರೆಕಾರ್ಡ್ ತೋರಿಸಿದರು. ನೀವೇ ಜಾಣರು, ನಮ್ಮನ್ನು ನಿಯಂತ್ರಿಸಬಹುದು ಎಂದು ಹಿಗ್ಗಬೇಡಿ, ನಾವು Gen Z ಪೀಳಿಗೆಯವರು, ನಿಮ್ಮನ್ನು ನಿಯಂತ್ರಿಸುತ್ತೀವಿ ನೋಡುತ್ತಾ ಇರಿ, ಎಂದು ಬೆದರಿಸಿದರು. ರಾಜಾರೋಷವಾಗಿ ಆಲ್ಬಾನೀಸಿ ಅವರಿಗೆ ಮತ ಹಾಕುವುದಿಲ್ಲ, ಅವರ ಸರ್ಕಾರವನ್ನು ಕೆಡವುತ್ತೀವಿ, ಎಂದೆಲ್ಲಾ ಮಾಧ್ಯಮಗಳ ಜೊತೆ ಮಾತನಾಡಿದರು. ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ಕೆಲವರು. ಆದರೂ ಕೂಡ ಪ್ರಧಾನಿ ಆಲ್ಬಾನೀಸಿ ನಗುನಗುತ್ತಲೇ ಇದ್ದರು. ಇದೆಲ್ಲಾ ನಾವು ನಿರೀಕ್ಷಿಸಿದ್ದೆವು, ನಿಭಾಯಿಸುತ್ತಿದ್ದೇನೆ, ಎಂದರು.
ಆದರೆ ಅವರ ನಗು ಹೆಚ್ಚುಕಾಲ ಉಳಿಯಲಿಲ್ಲ. ಅವರ ಮುಖದಲ್ಲಿ ನಗು ಮಾಸಿದ್ದು Bondi ಬೀಚ್ ಪ್ರಕರಣ ನಡೆದಾಗ. ಯಾರೂ ಕೂಡ ನಿರೀಕ್ಷಿಸಿರದ ಘಟನೆಯದು. ಅದು ಆಸ್ಟ್ರೇಲಿಯಾವನ್ನು ಅಲ್ಲಾಡಿಸಿತು. ಪ್ರಧಾನಿಯ ನಿದ್ದೆಯನ್ನು ಕಸಿಯಿತು. ಹೊಸದಾಗಿ ಮದುವೆಯಾಗಿದ್ದ ಪ್ರಧಾನಿ ಆಲ್ಬಾನೀಸಿ ಅರೆಕ್ಷಣವೂ ಕೂರದೇ ಕೆಲಸ ಮಾಡಿದರು. ಅವರತ್ತ ಆರೋಪಗಳು, ನಿಂದನೆಗಳು, ಬೈಗುಳ, ಅಸಮಾಧಾನದ ಕ್ಷಿಪಣಿಗಳು, ತೆಗಳಿಕೆ, … ಏನೆಲ್ಲಾ ತೂರಿಬಂದರೂ ಪ್ರಧಾನಿ ಸಮಚಿತ್ತದಿಂದ ಮಾತನಾಡಿದರು. ಇಸ್ರೇಲ್-Palestine ಜಗಳದ ನೆರಳು ಇಲ್ಲಿ ಬೇಡ ಎಂದರು. ದ್ವೇಷ ಬೇಡ, ತಾಳ್ಮೆಯಿರಲಿ, ಒಗ್ಗಟ್ಟಿರಲಿ, ಸಮಾಧಾನ ತಂದುಕೊಳ್ಳಿ, ದುಡುಕುವುದು ಬೇಡ, ಪರಸ್ಪರ ಗೌರವ ಇರಲಿ, ಎಂದರು. ಅದನ್ನು ಉಪೇಕ್ಷಿಸಿದವರೇ ಜಾಸ್ತಿ. ಈ ನಾಜೂಕು ಸಮಯದಲ್ಲಿ, ಉದ್ವಿಗ್ನ ಸನ್ನಿವೇಶದಲ್ಲಿ ತಮ್ಮ ಬೇಳೆ ಬೇಯಿಸಿಕೊಂಡ ರಾಜಕೀಯ ಮುಖಂಡರಿಗೆ ಕೆಲವರು ಛೀಮಾರಿ ಹಾಕಿದರು, ಇದು ಸರಿಯಾದ ನಡೆ. ಆದರೆ Bondi ಬೀಚ್ ದುರಂತದಲ್ಲಿ ನೊಂದ ಜ್ಯುಯಿಷ್ ಜನಸಮುದಾಯಕ್ಕೆ ಸಮಾಧಾನವಾಗಲಿಲ್ಲ.

ಬಹುಕಾಲದ ನಂತರ ಹೀಗೊಂದು ದುಷ್ಕೃತ್ಯವನ್ನು ನೋಡಿದ, ಕೇಳಿದ ಆಸ್ಟ್ರೇಲಿಯಾದ ಜನರು ಸಮಾಧಾನದಿಂದ ಇರಲು ಸಾಧ್ಯವಾಗಲಿಲ್ಲ. ಎಲ್ಲರಲ್ಲೂ ಅದೇನೋ ಚಡಪಡಿಕೆ. ಅದು ಆತಂಕವೆ, ತಲ್ಲಣವೆ ಎನ್ನುವುದು ಸ್ಪಷವಾಗಿಲ್ಲ. ಒಂದಂತೂ ಸ್ಪಷ್ಟವಾಗಿದೆ- ಭಯ, ಹೆದರಿಕೆ. ಬಹು ಸಣ್ಣಮಟ್ಟದಿಂದ ಹಿಡಿದು ಯಾರೋ ಬಂದು ನಮ್ಮ ಮೇಲೆ ಗುಂಡು ಹಾರಿಸಿಬಿಟ್ಟರೆ! ಎನ್ನುವ ದೊಡ್ಡ ಮಟ್ಟದ ಪುಕಪುಕ ಎದೆ.
ಈ ಡೌನ್ ಅಂಡರ್ ಪಾತಾಳಲೋಕದಲ್ಲಿ ಯಾರ ಮೇಲೆ ಯಾರೂ ಗುಂಡು ಹಾರಿಸುವುದಿಲ್ಲ, ಭಯೋತ್ಪಾದಕ ದುಷ್ಕೃತ್ಯ ಇಲ್ಲಿ ನಡೆಸುವುದಿಲ್ಲ ಎನ್ನುವುದು ಆಸ್ಟ್ರೇಲಿಯಾದ ಜನರಲ್ಲಿ ಬೇರೂರಿತ್ತು. ಈಗ ಅದು ಸುಳ್ಳಾಗಿದೆ.
ತಮ್ಮ ಭದ್ರಬುಡವನ್ನು ಅಲ್ಲಾಡಿಸಿದ Bondi ಬೀಚ್ ದುಷ್ಕೃತ್ಯದಿಂದ ಅನೇಕರು ಈ ಘಟನೆಯ ಬಗ್ಗೆ ರಾಯಲ್ ಕಮಿಷನ್ ತನಿಖೆಯನ್ನು ಏರ್ಪಡಿಸಬೇಕು, ಸರ್ಕಾರವು ಹೇಗೆ ಎಲ್ಲಿ ಎಡವಿತು, ಪ್ರಜೆಗಳನ್ನು ರಕ್ಷಿಸುವಲ್ಲಿ ಯಾಕೆ ಸೋತಿತು ಎನ್ನುವುದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು, ಎಂಬ ಒತ್ತಡಕ್ಕೆ ಪ್ರಧಾನಿ ಮಣಿದಿದ್ದಾರೆ. ದುರಂತದ ಆರಂಭದಲ್ಲಿ ಅವರು ಹೇಳಿದ್ದು ಹಿಂದಿನ ಕೆಲ ಸರ್ಕಾರಗಳ ಸಮಯದಲ್ಲಿ ಪ್ರಜೆಗಳು ಸತ್ತ ಎರಡು ದೊಡ್ಡ ದುಷ್ಕೃತ್ಯಗಳು ನಡೆದಿವೆ, ಆದರೂ ಆಗೆಲ್ಲಾ ರಾಯಲ್ ಕಮಿಷನ್ ತನಿಖೆಯನ್ನು ಏರ್ಪಡಿಸುವ ಮಾತೇ ಬರಲಿಲ್ಲ. ಆದರೆ ಈಗ ಎದ್ದಿರುವ ಕೂಗು, ಒತ್ತಾಯ ಆಶ್ಚರ್ಯವಾಗಿದೆ. ಜನರ ಒತ್ತಾಯಕ್ಕೆ ತಮ್ಮ ಸರ್ಕಾರ ಬಾಗಿದೆ, ಎಂದಿದ್ದಾರೆ. ತಮ್ಮ ಹೇಳಿಕೆಗಳಿಂದ ಮತ್ತಷ್ಟು ಅಪನಿಂದನೆ, ಖಂಡನೆ, ಅವಹೇಳನೆಗೆ ಗುರಿಯಾಗಿದ್ದಾರೆ.
ರಾಯಲ್ ಕಮಿಷನ್ ತನಿಖೆಗಾಗಿ ಹಿಂದೆ ಎದ್ದಿರದ ಒತ್ತಾಯದ ಕೂಗು ಅದ್ಯಾಕೆ ಈಗ ದೊಡ್ಡದಾಗಿ ಮುನ್ನೆಲೆಗೆ ಬಂದಿದೆ ಎನ್ನುವುದು ಕುತೂಹಲದ ವಿಷಯ. ಅದರಲ್ಲಿ ಸ್ವಲ್ಪ Gen Z ಪ್ರಭಾವ ಇರುವುದು ತೋರುತ್ತಿದೆ. ಇವರಿಗೆಲ್ಲಾ ಎರಡು ದಶಕಗಳ ಹಿಂದೆ ನಡೆದ Cronulla ಗಲಭೆಯ ಬಗ್ಗೆ ತಿಳಿದೇ ಇಲ್ಲ. ಅದರ ಪರಿಣಾಮವನ್ನು ಅನುಭವಿಸಿದ ವಲಸೆಗಾರರ ನೋವಿನ ಬಗ್ಗೆಯೂ ಅರಿವಿಲ್ಲ. ಈಗ Bondi ಬೀಚ್ ಘಟನೆಯಲ್ಲಿ ಭಯಭೀತರಾಗಿದ್ದಾರೆ ಎಂದು ತೋರುತ್ತದೆ. ತಾವು ಪ್ರೀತಿಸುವ, ಸದಾ ಓಡಾಡುವ ಬೀಚಿನಲ್ಲಿ ಪಟಕ್ಕನೆ ದಾಳಿ ನಡೆದು ಸತ್ತು ಬೀಳುತ್ತೀವಿ ಎನ್ನುವ ಕಲ್ಪನೆಯೇ ಅವರನ್ನು ಕಂಗೆಡಿಸಿದೆ. ಆಸ್ಟ್ರೇಲಿಯಾ ಎಂದರೆ ಕೂಲ್ ಕಂಟ್ರಿ ಎನ್ನುವ ಗುಳ್ಳೆ ಒಡೆದು ಅವರಿಗೆ ಗಾಬರಿ ತಂದಿದೆ.
ಇದರ ಜೊತೆಗೆ ಇರುವುದು ಬಲವುಳ್ಳ ಜ್ಯುಯಿಷ್ ಸಮುದಾಯ. ನಾನು ಎರಡು ವಾರಗಳ ಹಿಂದೆ Bondi ಬೀಚ್, ಅಪ್ಪ ಮಗ ಜೋಡಿ ಗುಂಡು ಹಾರಿಸಿ ಅಮಾಯಕ ಜನರು ಸತ್ತ ಘಟನೆ ನಡೆದ ಸ್ಥಳ ಎಲ್ಲವನ್ನೂ ನೋಡುತ್ತಾ ಸುತ್ತಾಡಿದಾಗ ಕಂಡಿದ್ದು ಅನೇಕ ಚಿತ್ರಣಗಳು. ಅವಲ್ಲಿ ಒಂದು ಅದೇ ಬೀಚ್ ಪಾರ್ಕಿನ ಪಕ್ಕದಲ್ಲಿ ಸ್ಥಾಪನೆಗೊಂಡಿದ್ದ ಜ್ಯುಯಿಷ್ ಸಮುದಾಯ ಧಾರ್ಮಿಕರು ಮತ್ತವರ ವ್ಯಾನ್, ಯುವಕಯುವತಿಯರು ಅವರಲ್ಲಿಗೆ ಹೋಗುವುದು, ಅವರನ್ನು ಇವರು ಹರಸುವುದು. ಬೀಚಿನ ಪೆವಿಲಿಯನ್ ಮುಂದೆ ಸ್ಥಾಪಿತವಾದ ಸತ್ತವರ ಫೋಟೋಗಳು, ಹೆಸರುಗಳು. ಅಲ್ಲಿಯೂ ಕಂಡದ್ದು ಬಹಳ ಭಾವಪೂರಿತರಾಗಿದ್ದ ಯುವಕಯುವತಿಯರು. ಅಳುತ್ತಿದ್ದವರು. ಅಲ್ಲಲ್ಲಿ ಪಿಸುಮಾತುಗಳು- ನ್ಯಾಯ ಸಿಗಬೇಕು.

ಈಗ ರಾಯಲ್ ಕಮಿಷನ್ ತನಿಖೆಯನ್ನು ಘೋಷಿಸಿದ್ಧಾರೆ, ಪ್ರಧಾನಿ. ಇದೆ ವರ್ಷ ಡಿಸೆಂಬರ್ ತಿಂಗಳಲ್ಲಿ ತನಿಖೆಯ ವರದಿ ಹೊರಬೀಳುತ್ತದೆ ಎಂದಿದ್ದಾರೆ. ಇವರ ಬಗ್ಗೆಯೂ ಟೀಕೆಗಳು. ಸರಿಯಾದ ನ್ಯಾಯ ಸಿಗುತ್ತಾ ಅನ್ನೋ ಸಂಶಯ.
ಆದರೆ ಯಾರಿಗೆ ನ್ಯಾಯ ಸಿಗಬೇಕು? ಯಾವ ರೀತಿಯ ನ್ಯಾಯವದು? ನ್ಯಾಯದ ತಕ್ಕಡಿಯಲ್ಲಿ ಕೂತಿರುವವರು ಯಾರು? ಪ್ರಾಪಂಚಿಕ ಮಟ್ಟದಲ್ಲಿ ನೋಡಿದರೆ ಯಾರದ್ದು ತಪ್ಪು, ಯಾರು ಸರಿ – ಇಸ್ರೇಲಿನವರೆ ಇಲ್ಲಾ ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಚಳವಳಿಯೇ? ಜ್ಯುಯಿಷ್ ಜನರಿಗೆ ನ್ಯಾಯ ಸಲ್ಲಬೇಕೇ, ಮುಸ್ಲಿಮರಿಗೆ ನ್ಯಾಯ ಕೊಡಬೇಕೇ? ಇವೆಲ್ಲವನ್ನೂ ನಿರ್ಧರಿಸುವವರು ಯಾರು?
ಇದೆಲ್ಲವನ್ನೂ ನೋಡುತ್ತಿರುವಾಗ ಇಗೋ ಜನವರಿ ೨೬ ಬರುತ್ತಿದೆ. ಅಂದು ಆಸ್ಟ್ರೇಲಿಯಾ ಡೇ – ಕ್ಯಾಪ್ಟನ್ ಜೇಮ್ಸ್ ಕುಕ್ ಸಿಡ್ನಿ ಸಮುದ್ರತೀರಕ್ಕೆ ಬಂದು, ಅವನ ಹಡಗು ಅಲ್ಲಿ ಲಂಗರು ಹಾಕಿ, ಓಹೋ ಈ ಜಾಗದಲ್ಲಿ ಯಾರೂ ಮನುಷ್ಯರು ಇಲ್ಲ, ಆದ್ದರಿಂದ ಇದು ತಮಗೆ ಸೇರಿದ್ದು, ಬ್ರಿಟಿಷರಿಗೆ ಸೇರಿದ ನಾಡು, ಎಂದು ಘೋಷಿತವಾದ ದಿನ. ಅಲ್ಲಿಂದ ಹೊಸ ಆಸ್ಟ್ರೇಲಿಯದ ಹುಟ್ಟು, ಬೆಳವಣಿಗೆ.
ಆದರೆ ಪ್ರತಿ ಜನವರಿ ೨೬ ಬರುವ ಮುನ್ನ ಆಸ್ಟ್ರೇಲಿಯಾದ ಮೂಲನಿವಾಸಿಗಳು First Nations ಜನರು ತಮಗಾಗಿರುವ ಅನ್ಯಾಯದ ಬಗ್ಗೆ ದನಿಯೆತ್ತುತ್ತಾರೆ. ತಮಗೆ ಸಲ್ಲಬೇಕಾದ ನ್ಯಾಯ ಇನ್ನೂ ಬಾಕಿಯಿದೆ ಎಂದು ನೆನಪಿಸುತ್ತಾರೆ. ಜನವರಿ ೨೬ ಅವರಿಗೆ Invasion Day ಆಗಿದೆ. ಹೊರಗಿನಿಂದ ಬಂದ ಬ್ರಿಟಿಷರು ತಮ್ಮ ನೆಲವನ್ನು ಬಲವಂತವಾಗಿ ಆಕ್ರಮಿಸಿ ವಶಪಡಿಸಿಕೊಂಡಿದ್ದನ್ನು ನೆನಪಿಸುತ್ತಾರೆ. ಇದು ಕರಾಳ ದಿನ, ಆಕ್ರಮಣದ ದಿನ, ತಮ್ಮ ಮೇಲೆ ದುಷ್ಕೃತ್ಯವು ನಡೆದಿದೆ, ನ್ಯಾಯ ಬೇಕು, ಎನ್ನುತ್ತಾರೆ.

ಇವತ್ತಿಗೂ ಅವರಿಗೆ ನ್ಯಾಯ ಸಂದಿಲ್ಲ. 1788 ರಿಂದ ಅವರು ಕಾಯುತ್ತಲೇ ಇದ್ದಾರೆ. ಅಂದರೆ ಸುಮಾರು ಎರಡೂವರೆ ಶತಮಾನಗಳು. ಅವರ ಅಹವಾಲು ನ್ಯಾಯತಕ್ಕಡಿಯಲ್ಲಿ ಇನ್ನೂ ಹಾಗೇ ಕೂತಿದೆ. ಸುದೀರ್ಘ ಕಾಯುವಿಕೆಯ ಅವಧಿಯಲ್ಲಿ ಅದೆಷ್ಟೋ ಸಾವಿರ ಸಾವಿರ ಅಬೊರಿಜಿನಲ್ ಜನರು ಸತ್ತಿದ್ದಾರೆ. ಅದೆಷ್ಟೋ ಜನಕುಲಗಳು ನಾಶವಾಗಿವೆ. ತಮ್ಮನ್ನು ಮನುಷ್ಯರೆಂದು ಗುರುತಿಸಲು ನಿರಾಕರಿಸಿದ ಬ್ರಿಟಿಷರಿಂದ ಆಳಿಸಿಕೊಳ್ಳುತ್ತಾ ರೇಸಿಸಮ್, ಭಯ, ಪೂರ್ವಗ್ರಹ, ತಾರತಮ್ಯತೆ, ಅನ್ಯಾಯ ತುಂಬಿರುವ ವಾತಾವರಣದಲ್ಲಿ ಅನ್ಯರಾಗಿ ಬದುಕುತ್ತಿದ್ದಾರೆ. ಪ್ರತಿ ಜನವರಿ ೨೬ ರಂದು ಅವರು ಮತ್ತೆಮತ್ತೆ ಸಾಯುತ್ತಾರೆ, ಏಳುತ್ತಾರೆ, ನ್ಯಾಯ ಕೇಳುತ್ತಾರೆ. ಇಲ್ಲಿನ ಮೂಲ ನಿವಾಸಿಗಳಾದ ಅವರಿಗೆ ಸಲ್ಲಬೇಕಿರುವ ನ್ಯಾಯದ ಬಗ್ಗೆ ಇಲ್ಲಿಯವರೆಗೂ ಯಾವ ರಾಣಿಯೂ, ರಾಜನೂ ಸೊಲ್ಲೆತ್ತಿಲ್ಲ. ಆದರೆ ಎಲ್ಲಿಂದಲೋ ಬಂದವರಿಗೆ ಕೇಳಿದ ತಕ್ಷಣ ರಾಯಲ್ ನ್ಯಾಯವಿಚಾರಣೆ ಏರ್ಪಾಡಾಗಿದೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

