ತೇಜಸ್ವಿ ಮತ್ತು ನಾನು ಮನಸ್ಸಿಗೆ ಬಂದಾಗೆಲ್ಲ ಮೈಸೂರಿಗೆ ಹೋಗಿಬರುತ್ತಿದ್ದೆವು. ಮೈಸೂರಿಗೆ ಹೋಗುವುದೆಂದರೆ ಇವರಿಗೆ ಏನೇನು ಕನಸುಗಳು ಕಚಗುಳಿ ಇಡುತ್ತಿದ್ದವೋ ಕಾಣೆ. ಕಣ್ಣ ಮುಂದೆ ಕಾವೇರಿ ನದಿ ದಂಡೆನೇ ಇರುತ್ತಿತ್ತೆಂದು ತೋರುತ್ತೆ.

ನಾವು ಮೈಸೂರು ತಲುಪುತ್ತಿದ್ದಂತೆ ಅಲ್ಲಿ ಹಲವರಿಗೆ ಮಿಂಚಿನ ಸಂಚಾರವಾಗುತ್ತಿತ್ತು. ಇವರ ಬರುವಿಕೆಯ ನಿರೀಕ್ಷೆಯಲ್ಲೇ ಇರುತ್ತಿದ್ದರು. ಅವರೇ ಕೆ.ರಾಮದಾಸ್ ಮತ್ತು ಬಿ.ಎನ್.ಶ್ರೀರಾಂ. ರಾಮದಾಸರಂತೂ ತಮ್ಮ ಪ್ರತಿ ಕಾಗದದಲ್ಲಿ ಕೊರಗಿಕೊಳ್ಳುತ್ತಿದ್ದರು. ‘ಮೀನು ಶಿಕಾರಿಗೆ ಹೋಗದೆ ಬದುಕೇ ಬೋರ್ ಆಗಿದೆ, ಬನ್ನಿ ಸಾರ್’ ಎನ್ನುವರು. ‘ಬಾಯೆಲ್ಲ ಚಪ್ಪೆ ಬಿದ್ದೋಗಿದೆ ಸಾರ್’ ಎನ್ನುವರು ಶ್ರೀರಾಂ. ಇಬ್ಬರಿಗೂ ಫಿಶಿಂಗ್ ಹುಚ್ಚು ಹಿಡಿಸಿದ್ದರು ತೇಜಸ್ವಿ. ಈ ಹುಚ್ಚಿನೊಂದಿಗೆ ಬದುಕಿನ ಹುಚ್ಚನ್ನೂ ತೀವ್ರಗೊಳಿಸಿದ್ದರು ತೇಜಸ್ವಿ.

ಈ ಮೂವರೂ ದೂರದೂರದ ನದಿಗುಂಡಿಗಳನ್ನು ಹುಡುಕಿಕೊಂಡು ಹೋಗುವರು. ಇಡೀದಿನ ಅಂಡಲೆಯವರು. ಬೆಚ್ಚಿ ಬಿದ್ದ ಸಂದರ್ಭನೂ ಉಂಟಂತೆ. ಮೈಸೂರಿನ ಹತ್ತಿರದ ಬಲಮುರಿಯಲ್ಲಿ ಗಾಣಹಾಕಿ ಕೂತಿದ್ದಾಗ ಹಾಗೇ ಸುಮ್ಮನೆ ಕತ್ತು ತಿರುಗಿಸಿದಾಗ ನೋಡ್ತಾರಂತೆ ಒಂದು ಹೆಣ ನೇತಾಡ್ತಿರೋದು ಕಂಡಿತು. ಕೂಡಲೇ ಮೆಲ್ಲಕೆ ಅಲ್ಲಿಂದ ಜಾಗ ಖಾಲಿ ಮಾಡಿದರಂತೆ. ಮನೆಗೆ ಬಂದಾಗ ಒಂದೊಂದು ಸಲ ಒಂದೊಂದು ಕತೆ ಹೇಳೋವ್ರು. ಎಷ್ಟೋ ಸಲ ದೊಡ್ಡ ದೊಡ್ಡ ಮೀನು ಹಿಡಿದು ತಂದು ರಾಮದಾಸರ ಅಮ್ಮನ ಕೈಗೆ ಕೊಡುವರು. ಅವರು ಅತೀ ಉತ್ಸಾಹದಿಂದ ಏರಿದ ಧ್ವನಿಯಲ್ಲಿ ಮಾತಾಡ್ತಾ ಅವುಗಳನ್ನು ಶುಚಿ ಮಾಡುವುದನ್ನೂ ಸಂಭ್ರಮಿಸುತ್ತಿದ್ದರು.

ಒಂದು ಸಲ ಹೀಗೆ ಈ ಮೂವರು ಮಿತ್ರರು ಬೆಳಿಗ್ಗೆ ಹೋದವರು ಕತ್ತಲಾದರೂ ಬಂದಿಲ್ಲ. ಅಣ್ಣ(ಕುವೆಂಪು) ಒಂದೆರಡು ಸಲ ನನ್ನನ್ನು ವಿಚಾರಿಸಿದರು. ‘ತೇಜಸ್ವಿ ಎಲ್ಲೆ, ಇನ್ನೂ ಬಂದಿಲ್ವಲ್ಲ’ ಎಂದರು. ಫೋನ್ ಮಾಡಿ ವಿಚಾರಿಸೆಂದರು. ಆದರೆ ಎಲ್ಲೂ ಸಿಗಲಿಲ್ಲ. ಕೊನೆಗೆ ಪ್ರಭುಶಂಕರ್‌ರವರಿಗೆ ಫೋನ್ ಮಾಡಿದೆ. ಅವರೂ ಬಂದಿಲ್ಲವೆಂದರು. ‘ಅವನು ಬಂದಾಗ ನೀನು ಬಾಗಿಲು ತೆಗಿಬೇಡ. ನಾನೇ ತೆಗಿತೀನಿ’ ಎಂದು ಕಾದುಕೂತರು ಅಣ್ಣ. ಇವರು ರಾತ್ರಿ ತಡವಾಗಿ ಬಂದರು. ಅಣ್ಣ ಬಾಗಿಲು ತೆಗೆದು, ‘ಏನಣ್ಣಾ, ಎಲ್ಲಾ ಕಡೆ ಫೋನ್ ಮಾಡಾಯ್ತು’ ಎಂದರು ಸಣ್ಣ  ಗಡಸು ಧ್ವನಿಯಲ್ಲಿ. ‘ಎಲ್ಲಿಗೆ ಹೋಗ್ತೀನಿ ನಾನು, ಬರೋದು ಲೇಟಾಯ್ತು. ಹಾಗಾಗಿ ರಾಮದಾಸರ ಮನೆಯಲ್ಲೇ ಕೂತೆ’ ಎಂದರು. ಬೆಳಿಗ್ಗೆ ಪ್ರಭುಶಂಕರರು ಫೋನು ಮಾಡಿ ‘ನಿಮ್ಮ ಪತಿಯವರು ಬಂದರೇ’ ಎಂದು ವಿಚಾರಿಸಿದರು ನನ್ನಲ್ಲಿ.

ಹೀಗೆ ಬಿಡುವು ಮಾಡಿಕೊಂಡು ಆರಾಮಾಗಿ ಒಂದು ವಾರ ಮೈಸೂರಿನಲ್ಲಿದ್ದು ತಿರುಗಾಡಿಕೊಂಡು ತೋಟಕ್ಕೆ ಹಿಂದಿರುಗಿದೆವು. (ಸಾಮಾನ್ಯವಾಗಿ ನಾವು ಮೂಡಿಗೆರೆಗೆ ಹೋಗುವಾಗ ತೇಜಸ್ವಿಗೆ ಮನೆಗೆ ಬೀಗ ಹಾಕಿಕೊಂಡು ಹೋಗುವುದು ಕಷ್ಟವೆನಿಸುತ್ತಿತ್ತು. ಹಾಗೇ ಹೋಗುತ್ತಿದ್ದೆವು. ವಾಪಾಸು ಮನೆ ಹತ್ತಿರ ಬಂದಾಗ- ಅಲ್ಲೊಬ್ಬ ಕಳ್ಳ ಸಾಮಾನನ್ನೆಲ್ಲ ಬ್ಯಾಗಿಗೆ ತುಂಬಿಕೊಳ್ತಾಯಿರಬೇಕೆಂದು ಕಲ್ಪಿಸಿಕೊಂಡು ನಗುವರು. ಮೈಸೂರಿಗೂ ಹಾಗೇ ಹೋಗಿದ್ದಾಗ, ನಮ್ಮ ರೈಟ್ರು ಹೆದರಿ ಬೀಗಹಾಕುವ ಅವನದ್ದೇ ವ್ಯವಸ್ಥೆ ಮಾಡಿಕೊಂಡಿದ್ದ) ಮೈಸೂರಿನಿಂದ ಬಂದು ಬೀಗ ತೆಗೆಯುವುದು ಒಂದು ದೊಡ್ಡ ಕೆಲಸವಂತೆ ಅವರಿಗೆ. ನಿಧಾನವಾಗಿ ಒಂದೊಂದೇ ಸಾಮಾನು ಕಾರಿನಿಂದ ಇಳಿಸಿಡುತ್ತಿದ್ದರು ಇವರು. ನಾನೂ ಒಳಗೆ ಇಡುತ್ತಿದ್ದೆ ಅವನ್ನು. ಬಟ್ಟೆ ಬ್ಯಾಗು ಹಿಡುಕೊಂಡು ಮಲಗುವ ಕೋಣೆಗೆ ಹೋದೆ. ಹೋದವಳು, ಸುಮ್ಮನೆ ಗೋಡೆ ಬೀರಿನ ಬಾಗಿಲು ತೆಗೆದೆ. ಒಂದು ಸಲ ಶಾಕ್ ಹೊಡಿತು. ಗೊಳೋ ಎಂದು ಜೋರಾಗಿ ಅಳುತ್ತಿದ್ದೆ.

‘ಯಾಕೆ, ಏನೇ ಆಯ್ತು,’ ಹೀಗೆ ಅಳಕ್ಕೆ ಎಂದು, ರೂಮಿಗೆ ಗದರಿಕೊಂಡೇ ಬಂದರು ತೇಜಸ್ವಿ. ಇನ್ನೂ ಜೋರಾಯಿತು ನನ್ನ ಅಳು. ನನಗೆ ಮಾತೇ ಹೊರಡಲಿಲ್ಲ. ‘ಏನೇ’ ಎಂದು, ಹಾರು ಹೊಡೆದುಕೊಂಡು ಬಿದ್ದಿದ್ದ ಬಾಗಿಲಿನತ್ತ ನೋಡಿದರು. ಬೇಸ್ತು ಬಿದ್ದರು. ನನ್ನ ಸೀರೆಗಳ ಮೇಲೆ ಗೆದ್ದಲು ಹುತ್ತದಂತೆ ಬೆಳೆದಿತ್ತು. ಹಾಗೇ ಸುಮ್ಮನೆ ನೋಡಿದರು. ನನ್ನ ಪಕ್ಕಕೂತು, ‘ಹೋಗಲಿ ಬಿಡೆ ಮಾರಾಯ್ತಿ, ದುಡ್ಡು ಕೊಡ್ತೀನಿ ಸೀರೆ ಕೊಳ್ಳುವಿಯಂತೆ ಅಳಬೇಡ’ ಎಂದರು. ನನ್ನ ಅಳು ನಿಲ್ಲಲಿಲ್ಲ.

ಮೊಮ್ಮೊಗಳ ಚಿತ್ರಕ್ಕೆ ತೇಜಸ್ವಿ ಹಸ್ತಾಕ್ಷರಬೀರು ಶುಚಿ ಮಾಡಲು ಶುರುಮಾಡಿದೆ. ಬಾಳ ದುಃಖ ಆಯ್ತು. ಹದಿನೆಂಟು ಸೀರೆ ಬೀರುನಲ್ಲಿಟ್ಟಿದ್ದವೆಲ್ಲ ಗೆದ್ದಲಿಗೆ ಆಹುತಿಯಾಗಿತ್ತು. ಎಲ್ಲರೂ ಮೆಚ್ಚಿಕೊಂಡಿದ್ದ ಹೊಸ ಕೆಂಪು ಉಡುಪಿ ಸೀರೆ, ಹೊಸ ಕಾಶ್ಮೀರ ಸಿಲ್ಕಿನ ಸೀರೆ, ನನ್ನ ಅಮ್ಮ ಉಡುತ್ತಿದ್ದ ಕಲಾಬತ್ತಿನ ಸೀರೆನೂ ಹೋಗಿತ್ತು. ಮಣ್ಣು ಉದುರಿಸುವಾಗ ಕೈಗೆ ಸಿಕ್ಕ ಜಂಬುಟ್ಟ ಸಿಕ್ಕಿ ತಿಳೀತು ಇವರೇ ಕೊಡಿಸಿದ್ದ ನನ್ನ ಮೆಚ್ಚಿನ ಬನಾರಸ್ ಬುಟ್ಟ ಸೀರೆಯೂ ಹೋಗಿದೆಯೆಂದು.

ನನ್ನ ತಾಯಿಯವರು ಉಡುತ್ತಿದ್ದ ಜರಿಸೀರೆ ಪೂರ್ತಿ ತಿಂದು ಜರಿಮಿಗಿಸಿದ್ದನ್ನು ಸುಟ್ಟು ಸ್ವಚ್ಚ ಮಾಡಿದೆ. ಮೈಸೂರಿಗೆ ಹೋಗಿದ್ದಾಗ ಅಕ್ಕಸಾಲಿಗನಿಗೆ ಕೊಟ್ಟು ಕುಲುಮೆಗೆ ಹಾಕಿಸಿದೆ. ಬೆಳ್ಳಿಸಿಕ್ಕಿತು. ಆ ಕಾಲದಲ್ಲಿಯೆ ಆ ಒಂದು ಸೀರೆಯ ಜರಿಯಿಂದ ೨೮೦ ರೂಪಾಯಿ ಬೆಲೆ ಬಾಳುವ ಬೆಳ್ಳಿತಟ್ಟೆ ದೊರೆಯಿತು. ಇಷ್ಟು ಬೆಳ್ಳಿಯಿರುವ ಸೀರೆಯನ್ನು ಗೋಡೆ ಬೀರುವಿನಲ್ಲಿ ಇಡಬಾರದೆಂದು ಗೊತ್ತಾಗಲಿಲ್ಲವೆ ಎಂದು ಅಲ್ಲಿಗೆ ಬಂದಿದ್ದ ಗಂಡಸರೊಬ್ಬರು ಕೇಳಿದರು.

ನಮ್ಮ ಮನೆಯಲ್ಲಿ ಸ್ಟೀಲ್ ಬೀರು ಇರಲಿಲ್ಲ. ಇವರಿಗೆ ಅದನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವ ಅಗತ್ಯವೇ ಕಾಣಲಿಲ್ಲ. ಅದಕ್ಕೆ ಆದ್ಯತೆ ಇರಲಿಲ್ಲ. ಹಣದ ಮುಗ್ಗಟ್ಟೂ ಇತ್ತು. ಇವರನ್ನು ಒಪ್ಪಿಸಿ ಇವರ ಅಮ್ಮನಿಂದಲೇ ಹಣಪಡೆದು ಚಿಕ್ಕಮಗಳೂರಿನಿಂದ ಒಂದು ಗೋಡ್ರೇಜು ಬೀರು ತಂದುಕೊಂಡೆ. ಕೆಲ ಸಮಯದ ನಂತರ ಹಣ ಒಟ್ಟು ಮಾಡಿ ಹಿಂತಿರುಗಿಸಿದೆ. ನಮಗೇನೂ ತಿಂಗಳ ಸಂಬಳದಂತೆ ಹಣ ಸಿಕ್ಕುತ್ತಿರಲಿಲ್ಲ. ಹಣದ ಬಗ್ಗೆ ಲೆಕ್ಕಾಚಾರ ಇರಲೇಬೇಕಿತ್ತು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಿತ್ತು.

ತೇಜಸ್ವಿಗೆ ನೆನಪಿನಲ್ಲಿರುವಷ್ಟು ದಿನ ನಾನು ಅತ್ತಿದ್ದನ್ನು ಹೇಳಿಕೊಂಡು ಬಿದ್ದೂ ಬಿದ್ದೂ ನಗುತ್ತಿದ್ದರು, ನಾನೂ ನಗುತ್ತಿದ್ದೆ. ಇದು ಇಲ್ಲಿಗೇ ಮುಗೀಲಿಲ್ಲ. ನಾಲ್ಕು ವರ್ಷ ಕಳೆಯಿತು. ಧೈರ್ಯ ಮಾಡಿ ದೊಡ್ಡ ಸ್ಟೀಲ್ ಬೀರುವೊಂದಕ್ಕೆ ಬೆಂಗಳೂರಿನಲ್ಲಿ ಆರ್ಡರ್ ಕೊಟ್ಟೆ, ಅದೂ ಇವರ ಬಟ್ಟೆಗೆಂದು.

ಬೀರು ಬಂತು. ಇವರ ಸಹಾಯವಿಲ್ಲದೇ ಅದಕ್ಕೆ ನಿಯಮಿಸಿದ್ದ ಜಾಗದಲ್ಲಿ ಕೂರಿಸಿದೆ. ಮನೆಗೊಂದು ವಸ್ತು ಬಂತೆನ್ನುವ ಸಂಭ್ರಮ ಪಡುವಷ್ಟರಲ್ಲಿ ತೇಜಸ್ವಿ ಬಂದು ಬೀರು ನೋಡಿ ಗುಡುಗಿದರು. ನಾನು ಅದರ ಮೇಲೆ ಹಣ ವ್ಯಯ ಮಾಡಿದೆನೆಂದಲ್ಲ. ನಾನು ಹಿತಮಿತವಾಗಿಯೇ ಖರ್ಚು ಮಾಡುವವಳು. ಮನೆಯಲ್ಲಿ ವಸ್ತುಗಳನ್ನು ಒಟ್ಟು ಮಾಡಿಕೊಳ್ಳುವುದು ಇವರಿಗೆ ಹಿಡಿಸುತ್ತಿರಲಿಲ್ಲ. ಅದು ಅಗತ್ಯವಿದ್ದರೂ ‘ನನ್ನ ಯಾವುದೇ ಬಟ್ಟೆಯನ್ನು ಅದರೊಳಗೆ ಇಡಬೇಡ, ನನ್ನ ಬಟ್ಟೆಗಳನ್ನೂ ನೀನು ಮುಟ್ಟಲೂ ಬೇಡ’ವೆಂದರು. ಇವರ ಬಟ್ಟೆಗಳು ಬೇರೊಂದು ಗೋಡೆ ಬೀರುನಲ್ಲಿದ್ದವು. ಎಷ್ಟೋ ವೇಳೆ ಒಂದೊಂದು ಮಳೆಗಾಲ ಕಳೆವಾಗಲೂ ಹಲಗೆ ಮೇಲೇ ತಳದಲ್ಲಿದ್ದ ಬಟ್ಟೆ ಥಂಡಿ ತಗೊಂಡು ಭೂಷ್ಟು ಹಿಡಿದು ನವೆದಿರುತ್ತಿತ್ತು. ಇವರ ಗುಡುಗಿನ ನಂತರ ನನ್ನ ಮಳೆ ಬಂತು ರಭಸವಾಗಿಯೇ. ಜೋರಾಗಿ ಅತ್ತೆ ಬೀರು ಮುಂದೆ ಕೂತು. ಆರ್ಡರಾದ ಮೇಲೆ ಆರ್ಡರ್ ತಾನೆ. ಸುಮ್ಮನಾದೆ.

ನಮ್ಮೂರಿನ ತುಂಬ ಥಂಡಿಯಿಂದಾಗಿ ಹೆಚ್ಚು ಹೊದಿಕೆಗಳ ಅಗತ್ಯವಿದೆ. ಆ ಹೊದಿಕೆಗಳನ್ನೆ ಜೋಡಿಸಿದೆ ಬೀರುವಿನಲ್ಲಿ. ಅಲ್ಲದೆ ಇವರ ಕ್ಯಾಮೆರಾ ಫೋಟೋ, ನೆಗೆಟೀವ್ಸ್, ಸ್ಲೈಡ್ಸ್, ೨೨ ರೈಫಲ್ ಅದು ಇದೆಂದು ಜೋಡಿಸಿ ಸುಮ್ಮನಾದೆ.

ಹೀಗೇ ದಿನಗಳು ಕಳೆದವು. ಒಂದು ಸರಿ ರಾತ್ರಿ ‘ಏರಾಜೇಶ್’ ಎಂದು ಕೂಗಿಕೊಂಡರು. ಬಚ್ಚಲಮನೆಯಿಂದ ಎಚ್ಚರಗೊಂಡು ಓಡಿದೆ.

ರಾತ್ರಿ ಮಲಗುವ ಮುನ್ನ ಸಖತ್ ಬಿಸಿನೀರಿನ ಸ್ನಾನ ಮಾಡಿಯೇ ಮಲಗುವುದು ಇವರ ಅಭ್ಯಾಸವಾಗಿತ್ತು. ಮೂಡಿಗೆರೆ ಥಂಡಿಗೆ ಈ ತರಹದ ಬಿಸಿನೀರಿನ ಸ್ನಾನವೇ ಒಂದು ಶ್ರೀಮಂತಿಕೆಯ ಸುಖ ಮಜವೆನ್ನಬಹುದು. ಇವರು ಸ್ನಾನ ಮಾಡಿ ಹೊರಬಂದರೆ ಬಚ್ಚಲಮನೆ ಫೋಗ್ ಕವಿದಂತೆ ಆವಿ ಕವಿದಿರುತ್ತಿತ್ತು. ಸಾಬೂನಿನ ಪರಿಮಳದ ಆ ಆವಿ. ಆಹ್! ಎಷ್ಟು ಚೆನ್ನಾಗಿರುತ್ತೆ ಶುಭ್ರವಾದ ಇಸ್ತ್ರಿ ಅಂಗಿ ಹಾಕ್ಕೊಂಡು ಮಲಗೋದು ಮಾರಾತೀ ಎಂದುಕೊಂಡೇ ದಿಂಬಿಗೆ ಆನಿಸುವರು. ಈಗಾಗಲೆ ಒಂದು ನಿದ್ರೆಯಾಗಿ ಎದ್ದವಳು ನಾನು. ಈಗ ಇವರು ದಿಂಬಿಗೆ ಆನಿಸಿಕೊಂಡು ಆವತ್ತು ಇವರು ಕಂಡುಂಡ ಯಾವುದಾದರೂ ಒಂದು, ಹೀಗೆ ಇವರ ಅಭಿಪ್ರಾಯ ಹೇಳ್ತಾ, ಮೊದಲೇ ತಂದಿಟ್ಟುಕೊಂಡಿದ್ದ ಪುಸ್ತಕ ಓದೇ ಇವರು ನಿದ್ದೆ ಹೋಗುತ್ತಿದ್ದುದು. ಓ.ಕೆ. ಮರುದಿನ ಪೋಸ್ಟಿಗೋ ಬ್ಯಾಂಕಿಗೋ ಮೂಡಿಗೆರೆಗೆ ಹೋಗುವಾಗ ಇಸ್ತ್ರಿ ಅಂಗಿ ಬೇಕೆನ್ನಿಸುತ್ತಲೇ ಇರಲಿಲ್ಲ ಇವರಿಗೆ.

ಇವರಿಗೆ ಬಚ್ಚಲ ಮನೆಯಲ್ಲಿ ಸದಾ ಒಂದು ಟವೆಲ್ಲು ಇರಬೇಕು. ನನ್ನ ಸಹಾಯಕಿಯೋ ಮಡಿಟವೆಲ್ಲು ಹಾಕಿದ್ದನ್ನೂ ಒಗೆಯುವ ಬಟ್ಟೆ ಜೊತೆಗೆ ಒಯ್ಯುವಳು ಒಗೆಯಲೆಂದು. ಇದು ಕಿರಿಕಿರಿ. ಇದಲ್ಲದೆ ಇವರಿಗೆ ಚೂರು ಹೆಚ್ಚಿಗೆ ಸವೆದ ಸಾಬೂನು ಇದ್ದರೆ ಸಹಿಸುತ್ತಿರಲಿಲ್ಲ. ಮೊದಲೇ ಹೊಸ ಸಾಬೂನು ಇಡಬೇಕಿತ್ತು. ಇಲ್ಲದಿದ್ದರೆ ಕೋಪ ನೆತ್ತಿಗೇರಿ ಮಾಡು ಅದುರುವಂಗೆ ಕೂಗು ಹಾಕುತ್ತಿದ್ದರು. ಇವೆರಡೂ ಅತಿಸೂಕ್ಷ್ಮವಾದ ಪಾಯಿಂಟ್ಸ್ ಇವರಿಗೆ ಬಚ್ಚಲ ಮನೆಯಲ್ಲಿ.

ಅವತ್ತು ರಾತ್ರಿ, ಕೂಗಿದ ಕ್ಷಣವೇ ಓಡಿದೆ. ‘ಅಂಡರ್‌ವೇರ್ ತಂದ್ಕೊಡು ಮಾರಾಯ್ತಿ’ ಎಂದರು. ಅಂಡರಿವೆ ಎಂತಲೂ ಹೇಳುವರು. ಗೋಡೆ ಬೀರು ತೆಗೆದೆ. ನೋಡುವುದೇನು! ಹುತ್ತ ಬೆಳೆಯಲು ಇನ್ನೇನು ಕ್ಷಣಗಣನೆ ಎಣಿಸಬೇಕಿತ್ತು. ಆಗಲೇ ತಳದಲ್ಲಿದ್ದ ಹಳೆ ಬಟ್ಟೆಗಳನ್ನು ತಿಂದಾಗಿದೆ. ಚಂದನೆ ಅಂಗಿಗಳಿಗೂ, ಜೀನ್ಸ್ ಪ್ಯಾಂಟುಗಳಿಗೂ ಮಡಿಸಿದ ಭಾಗದಲ್ಲಿ ಹುಡಿಹುಡಿ ಮಣ್ಣು ಹಿಡಿದಾಗಿದೆ. ರಾಮದಾಸರು ಉಡುಗೊರೆ ಕೊಟ್ಟಿದ್ದ ಕಪ್ಪು ವೆಲ್‌ವೆಟ್ ಕಾಡ್ರಾವ ಪ್ಯಾಂಟಿಗೆ ಚೂರು ಹುಡಿಮಣ್ಣು ಹಿಡಿದಿತ್ತು. ಒಂದು ಒಳ್ಳೆ ಜೀನ್ಸ್ ಪ್ಯಾಂಟು… ತೂತ ತೂತ. ಇವರದ್ದು ದೊಡ್ಡ ಅಳತೆ ಬೇರೆ. ಇವರ ಅಳತೆಯ ಉಡುಪುಗಳು ಇವರಿಗೆ ಸಮಾಧಾನವಾಗುವಂತೆ ಎಲ್ಲೂ ಸಿಕ್ಕುತ್ತಿರಲಿಲ್ಲ. ನನ್ನ ಅಕ್ಕನ ಮಗಳು ಒಂದು ಪ್ಯಾಂಟನ್ನು ಮಸ್ಕಾಟ್‌ನಿಂದ ತಂದುಕೊಟ್ಟಿದ್ದಳು. ‘ಆ ದರ್ಜಿ ಎಲ್ಲೋ ಕೂತಿರ‍್ತಾನೆ, ಅದ್ಹೇಗೆ ಇಷ್ಟು ಪರ್ಫೆಕ್ಟ್ ಆಗಿ ಹೋಲೀತಾನೇಂತ!’ ಇವರು ಸೋಜಿಗಪಡುತ್ತಿದ್ದರು. ನಾನು ಯಾರ‍್ಯಾರಿಗೋ ಹೇಳಿ ತರಿಸಿಡುತ್ತಿದ್ದೆ. ಆದರೂ ಇವರನ್ನು ಒಪ್ಪಿಸುವುದು ಕಷ್ಟವಾಗುತ್ತಿತ್ತು.

ಗೆದ್ದಲು ಕೊಡಕಿ ಇವರ ಬಟ್ಟೆಗಳನ್ನು ಸ್ವಚ್ಛ ಮಾಡಿ ಬೀರುವಿನಲ್ಲಿಟ್ಟೆ. ನನಗೆ ಸಮಾಧಾನವಾಯಿತು.

ಮುಂದೆ ಇವರಿಗೆ ಮೋಡಿಮಾಡಿದ್ದ ಕಂಪ್ಯೂಟರ್ ವಸ್ತುಗಳಾದ ಸಿ.ಡಿ, ಸಾಫ್ಟ್‌ವೇರ್, ಫ್ಲಾಪಿ ಇತ್ಯಾದಿ ಎಲ್ಲವನ್ನೂ ಅವರೇ ಆ ಬೀರುವಿನಲ್ಲಿಟ್ಟು ಜೋಪಾನ ಮಾಡುತ್ತಿದ್ದರು.

೨೦೦೦ದಲ್ಲಿ ನಮ್ಮ ಮಗಳು ಈಶಾನ್ಯೆಯ ಹೆರಿಗೆ ಸಮಯದಲ್ಲಿ ಹದಿನೈದು ದಿನಗಳು ನಾನು ಬೆಂಗಳೂರಿನಲ್ಲಿದ್ದೆ. ಆಗೊಂದು ದಿನ ಬೆಳಿಗ್ಗೆ ಎದ್ದು ಬಚ್ಚಲ ಒಲೆಗೆ ಉರಿಮಾಡಲು ತೇಜಸ್ವಿ ನೋಡ್ತಾರೆ ಬೆಂಕಿಪೊಟ್ಟಣ ಖಾಲಿಯಾಗಿದೆಯಂತೆ. ಕೂಡಲೇ ಬೆಂಗಳೂರಿಗೇ ಕೇಳುವಂತೆ “ಏ ರಾಜೇಶ್, ಬೆಂಕಿಪೊಟ್ಟಣ ಎಲ್ಲಿಟ್ಟಿದ್ದೀಯೆ’ ಎಂದು ಫೋನಿನಲ್ಲಿ ಕೂಗು ಹಾಕಿದರು.

ಆ ‘ಏ ರಾಜೇಶ್’ ಕಿವಿಗೆ ಇಂಪಾಗಿ ತೂರಿ ಬರುತ್ತಿರುತ್ತೆ, ಅದನ್ನು ಆಲಿಸಿಕೊಳ್ಳುವೆನು.

(ಚಿತ್ರಕೃಪೆ: ಗೂಗಲ್)