ಬಿಕ್ಕುವ ಜೋಗುಳ

ಕಚ್ಚಲು ಬೆದೆಗೊಂಡಿರುವ ಹುಚ್ಚುನಾಯಿ
ಜೊಲ್ಲ ಸುರಿಸುತ್ತಾ ಅಟ್ಟಾಡಿಸುತ್ತಿದೆ
ನಾಲಿಗೆಯನಿಳಿಬಿಟ್ಟು
ಊಳಿಡುತಿದೆ ಕಗ್ಗತ್ತಲೆಯ ಮುಸುಕಿನಲ್ಲಿ
ಮುರುಕು ಮಂಟಪದಲಿ ಸುಳಿವ ಗಾಳಿಯಂತೆ

ಖಾಲಿಯಾಗಿದೆ ಮುರಳಿಯ ಉಸಿರು
ಖಾಲಿ ತೊಟ್ಟಿಲಿಗೆ ಬಿಕ್ಕುವ ಜೋಗುಳ
ತೂಗುವ ಕೈಗಳೆ ನೇಣಿನ ಕುಣಿಕೆ
ಹಸುಳೆಯ ಹೆಣ ದಡದಲ್ಲಿ ಮಕಾಡೆ
ಬಣ್ಣಬಣ್ಣದ ಬಟ್ಟೆ ಆವಾರದಿ ತೇಲಿ
ಅನಾಹತ ಆಕ್ರಂದನ

ಮಗುಚಿಕೊಂಡ ಮರದ ಫಲಪುಷ್ಪ
ಸೊರಸೊರ ಹೀರಿದ ಸರಕಾರ
ನೀಗಿಸಲಾಗದ ಹಸಿವೆಯ ಮರಣ

ಬರಿದಾದ ಬತ್ತಳಿಕೆ
ಹೊರೆಹೊತ್ತ ಗರ್ಭ
ಪಾಷಾಣದ ಕವಚ

ಚಿಟ್ಟೆಯ ರೆಕ್ಕೆ ಒಣಗಿದ ಜಾಲಂದ್ರ
ಜಾಲಂದ್ರದ ಕಣ್ಣಲಿ ಸಾವಿರ ಗೋರಿ
ಗೋರಿಯ ಒಳಗೆ ದುಡಿಯುವ ಮನಸು
ಮನಸು ನಡೆದಿದೆ ಮಿಣುಕುಹುಳದ ಬೆಳಕಲಿ

ಕಾಲಬೇಕು, ಕಾಯಬೇಕು
ಮೆಟ್ಟಿಲ ಮೆಟ್ಟುವ ಮೆಟ್ಟುಗಳಿಗೆ
ಕುಸಿದ ಕೆಡವಿದ ಕಲ್ಯಾಣ ಚಿಗುರಲು
ಕಳಚಿದಾಸರೆಯ ನಿಲ್ಲಿಸಿ ಹಬ್ಬಲು ಹಂದರ

ಇವು
ಅನ್ನದ ಮಾತುಗಳಲ್ಲ
ಚಿನ್ನದ ಮಾತುಗಳೂ ಅಲ್ಲ
ಓಟಿನ ಮಾತುಗಳೂ ಅಲ್ಲ
ಜೀವದ ಮಾತುಗಳು

ಮೈಸೂರು ಮೂಲದ ಪರಮೇಶ್ವರ ಗುರುಸ್ವಾಮಿ ಬೆಂಗಳೂರುವಾಸಿ.
ಸಿನೆಮಾ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಆಸಕ್ತಿ.
ಸಿನೆಮಾ ತಾಂತ್ರಿಕತೆ ಮತ್ತು ಸಾಹಿತ್ಯದಲ್ಲಿ ಕಥನ ಪ್ರಯೋಗಗಳ ಬಗ್ಗೆ ವಿಶೇಷ ಆಸಕ್ತಿ.

 

(ಕಲೆ: ರೂಪಶ್ರೀ ಕಲ್ಲಿಗನೂರ್)