ಪಾಂಡೇಶ್ವರ ಗಣಪತಿರಾವ್‌ ಅಥವಾ ಜಿ.ಆರ್.ಪಾಂಡೇಶ್ವರ ಅವರು ಉಡುಪಿಯ ಬ್ರಹ್ಮಾವರದಲ್ಲಿ ಜನಿಸಿದರು. ಪತ್ರಕರ್ತರಾಗಿ ಕೆಲಸ ಮಾಡಿದ ಅವರು ಕೆಲಕಾಲ ಜಯಕರ್ನಾಟಕ ಪತ್ರಿಕೆಗೆ ಸಂಪಾದಕರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಾಗರಿಕ ಎನ್ನುವ ಪತ್ರಿಕೆ ನಡೆಯಿಸುತ್ತಿದ್ದರು. ೧೭ನೆಯವಯಸ್ಸಿನಲ್ಲಿಯೆ ವಿವೇಕಾನಂದ ಚರಿತಮ್ ಎನ್ನುವ ಕಾವ್ಯ ರಚಿಸಿದರು.೨೦ನೆಯ ವಯಸ್ಸಿನಲ್ಲಿ ಅಂದರೆ ೧೯೨೮ ರಲ್ಲಿ ಫ್ರ್ಯಾಗ್ರಂಟ್ ಬಡ್ಸ್ ಎನ್ನುವಇಂಗ್ಲಿಷ್ ಕವನ ಸಂಕಲನವನ್ನು ಹೊರತಂದರು. ೧೨ ನೆಯ ವಯಸ್ಸಿನಲ್ಲಿಯೆ ‘ವಿವೇಕಾನ೦ದ ಚರಿತಮ್ ‘ ಎನ್ನುವ ಕಾವ್ಯವನ್ನು ರಚಿಸಿದ್ದರು. ಕಥೆ, ಕವನಗಳನ್ನು ಬರೆದ ಅವರಿಗೆ ಪ್ರಕೃತಿಯ ಕಡೆಗೆ ಹೆಚ್ಚಿನ ಒಲವಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಗರಿಕ ಎನ್ನುವ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ಕನ್ನಡ ಕಾವ್ಯ ಕುಸುಮ ಸರಣಿಯಲ್ಲಿ, ಪಾಂಡೇಶ್ವರ ಗಣಪತಿರಾವ್‌ ಬರೆದ ಕನ್ನಡ ತಾಯ ಪಾದಕ್ಕೆ ಎಂಬ ಕವನ ಇಂದಿನ ಓದಿಗಾಗಿ

ಕನ್ನಡ ತಾಯ ಪಾದಕ್ಕೆ

ತಾಯೇ, ಕನ್ನಡದೇವಿ! ಕೈಗೊಳೆನ್ನೀ ಸೇವೆ
ತಾಯೆ, ನಿನಗಳ್ತಿಯಿಂದೀವೆ ನುಡಿದೊಡವ!

ಪಂಪನೊಲು ಕಂಪುಗುವ ಕವನ ಕುಸುಮವನಿತ್ತು
ಸೊಂಪಿನುತ್ಸವದಿ ಪೂಜಿಸಲರಿಯೆನು;

ರನ್ನ, ಕವಿರನ್ನನೊಲು, ರತ್ನರಾಶಿಯನಿತ್ತು,:
ರತ್ನಗರ್ಭೇ ಎಂದು ಹೊಗಳಲರಿಯೆಂ!

ಕನ್ನಡದ ಕವಿಚೂತವನ ಚೈತ್ರನೊಲು ನಿನ್ನ
ಭಾಗೋತ್ಸವಕೆ ಮಧುವ ತರಲಾರೆನು;
ಬಣಗು ಕವಿಗಳನು ಲೆಕ್ಕಿಸದ ಕಬ್ಬಿಗರಾಯ
ನೊಲು ನಿನ್ನ ಕೀರ್ತಿಗಾನವ ಹಾಡೆನು.

ಇನ್ನೆನಿತೊ ಇಂಪಿಂದ ಕವಿಗಳೆನಿಬರೊ ಜನಿಸಿ
ನಿನ್ನ ರೂಪವನು ಬಣ್ಣಿಸಿ ಬರೆದೊಡಂ,
ಮುನ್ನೆಸೆವನಂತಕಾಲವೆ ನುಡಿಯಲಾಂ ನಿನ್ನ
ಬಣ್ಣಿಸಿದೆನೋ ಇಲ್ಲವೆಂಬ ನಿಜವ !