ಇತ್ತ ಇದಿನಬ್ಬನಿಗಾಗಿ ಮನೆಯವರ ಹುಡುಕಾಟ ತೀವ್ರ ಗತಿಯಲ್ಲಿತ್ತು. ಆ ದಿನ ಮೀನಿಗೆ ಹೋಗಿದ್ದ ಪೆರ್ನು, ಅಜಿಲ ಮೊಗರುವಿನಲ್ಲಿ ಇಳಿದು ತೋಟಗಳ ನಡುವೆ ನುಸುಳಿಕೊಂಡು ಆ ಮಣ್ಣಿನ ಮನೆಯೆದರು ಬಂದು ನಿಂತ. ಒಳಗೇನೋ ಕೆಲಸದಲ್ಲಿ ನಿರತರಾಗಿದ್ದ ಹಲೀಮಾರು ಪೆರ್ನುವನ್ನು ನೋಡಿ ಹೊರಗೆ ಬಂದರು. ಇದಿನಬ್ಬ ತನ್ನಕ್ಕನ ಮನೆಯಲ್ಲಿ ಇಲ್ಲ ಎಂಬ ವಿಷಯ ಕೇಳಿದ ಕೂಡಲೇ ಹಲೀಮಾ ಕುಸಿದು ಕುಳಿತರು. ಮಗನ ಮುಖ ಒಮ್ಮೆಯಾದರೂ ನೋಡಬೇಕು ಎಂಬ ಆಸೆಯಿಂದ ಅವರ ಮಾತೃಹೃದಯ ನೋಯತೊಡಗಿತು.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ಮೂರನೆಯ ಕಂತು.

‘ಸ್ವಲ್ಪ ಆ ಚಿಮಿಣಿ ಹತ್ತಿರ ಇಡು’ ಅಜ್ಜ ಹೇಳಿದಾಗ, ಅಕ್ಕ ಮೆಲ್ಲನೆತ್ತಿ ಅದನ್ನು ಅವರ ಕಡೆಗಿಟ್ಟಳು‌. ಕಿಸೆಯಿಂದ ಇನ್ನೊಂದು ಬೀಡಿ ತೆಗೆದವರೆ, ಚಿತಾಗಾರಕ್ಕೆ ಶವ ನೂಕಿದಂತೆ ಬೀಡಿಯ ತಲೆಯನ್ನು ಬೆಂಕಿಗೆ ಹಿಡಿದರು. ಅದು ಹೊತ್ತಿಕೊಂಡ ಬಳಿಕ, ಹೊಗೆಯೆಳೆದ ಅಜ್ಜ, ‘ನಿಮಗೆ ಪರಿಸ್ಥಿತಿ ಗಂಭೀರತೆ ಗೊತ್ತಿರ್ಲಿಕ್ಕಿಲ್ಲ. ಹಿಂದೆ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಪೋಷಕರಿಲ್ಲದ ಮಕ್ಕಳೆಂದು ತಿಳಿದ ಕೂಡಲೇ ಅಂತಹ ಮಕ್ಕಳನ್ನು ಗುಲಾಮರನ್ನಾಗಿ ಮಾಡುತ್ತಿದ್ದರು. ಹಣದ ಅವಶ್ಯಕತೆ ನೀಗಿಸಲು ಕಂಡ ಕಂಡವರಿಗೆಲ್ಲಾ ಮನುಷ್ಯನನ್ನು ಪ್ರಾಣಿಗಳಂತೆ ಮಾರುವ ಸಂಪ್ರದಾಯ ಆಗ ಚಾಲ್ತಿಯಲ್ಲಿತ್ತು’.

‘ಮನೆ ಬಿಟ್ಟು ಹೋದವರು ತಿರುಗಿ ಬರುವುದೆಂದರೆ ಅಂದು ಕನಸಿನ ಮಾತು. ಅಷ್ಟಕ್ಕೂ ಊರನ್ನು ಹುಡುಕಿ ಬಂದರೆ ಪೇಟೆಗಳಿಗಷ್ಟೇ ತಲುಪಬಹುದು. ಮುಂದೆ ಕಾಡು ದಾರಿಗಳನ್ನು ಹುಡುಕಿ ಮನೆ ಸೇರುವುದು ಸುಲಭದ ಮಾತೇನೂ ಅಲ್ಲ’

ಮರುದಿನ ಇಡೀ ಊರೆಲ್ಲಾ ಒಂದೇ ಮಾತು. ‘ಹುಡುಗ ಇಲ್ವಂತೆ; ಬಸಳೆ ಮಾರುವವನ ಹಿಂದೆ ಹೋಗಿದ್ದಂತೆ’ ಅಂತೆ ಕಂತೆ ಸಂತೆಗಳ ಕಿನ್ನರಿ ಜೋರಾಯಿತು. ಕೆಲವರು ದೆವ್ವಕ್ಕೂ, ಹಾವಿಗೂ ಸತತವಾಗಿ ಬಯ್ಯುತ್ತಾ ಕಥೆ ಕಟ್ಟತೊಡಗಿದರು. ಇನ್ನು ಕೆಲವರು ನದಿ,ಕೆರೆ, ಹಳ್ಳಗಳಲ್ಲೆಲ್ಲಾ ಜಾಲಾಡಿದರು. ಯಾರಿಗೂ, ಯಾವೊಬ್ಬನಿಗೂ ಇದಿನಬ್ಬನ ಸುಳಿವೇ ಸಿಗಲಿಲ್ಲ. ಹುಡುಗ ಕಣ್ಮರೆಯಾದ ವಿಚಾರ ಕಾಡ್ಗಿಚ್ಚಿನಂತೆ ಹಬ್ಬತೊಡಗಿತು. ಹುಡುಗನ ನಾಪತ್ತೆ ಸುದ್ದಿ ನದಿ ದಾಟಿ ತಂದೆ ತಾಯಿಗೂ ತಲುಪದಿರಲಿಲ್ಲ.
ಇತ್ತ ಇದಿನಬ್ಬನಿಗೆ ಅಗ್ನಿ ಪರೀಕ್ಷೆ ಕಾದಿತ್ತು.

*****

“ಓಯ್ ಅಣ್ಣಾ, ಬಸಳೆ ಬೇಕು”

ಓಡುತ್ತಾ ಹಿಂದೆ ಬರುತ್ತಿದ್ದ ಹುಡುಗನನ್ನು ಕಂಡ ಕೂಡಲೇ ಬಸಳೆ ಮಾರುವವ ಚುರುಕಾಗಿದ್ದ. ಇದಿನಬ್ಬ ಕೊಟ್ಟ ಒಂದಾಣೆ ಪಡೆದು ಒಂದು ಕಟ್ಟು ಬಸಳೆ ನೀಡಲೆಂದು ಹೊತ್ತಿದ್ದ ಬಸಳೆ ಕಟ್ಟನ್ನು ಕೆಳಗಿಳಿಸಿದ. ಇದಿನಬ್ಬ ಊರಿನ ಸರಹದ್ದು ದಾಟಲೆಂದೇ ಪೂರ್ವಯೋಜನೆ ಹಾಕಿಕೊಂಡೇ ಬಸಳೆ ಮಾರುವವನು ಕೇಳಿದರೂ ಕೇಳಿಸಿಕೊಳ್ಳದವನಂತೆ ನಡೆದಿದ್ದ.

“ನಿನ್ನ ಹೆಸರೇನು”

ಬಸಳೆ ಮಾರುವವನ ಖಾಸಗಿ ಮಾತುಕತೆ ಶುರುವಾಯಿತು.

“ಇದಿನಬ್ಬ”

‘ಮನೆ ಎಲ್ಲಿ, ಇದುವರೆಗೂ ನಿನ್ನನ್ನು ಇಲ್ಲಿ ಕಂಡೇ ಇಲ್ಲವಲ್ಲಾ’

ಸಂಶಯ ತೋಡಿಕೊಂಡಾಗ ಇದಿನಬ್ಬ ತನ್ನ ಚರಿತ್ರೆ ಹೇಳತೊಡಗಿದ.

ಮೂತಮನ ಜೊತೆ ಇಲ್ಲಿ ತಲುಪಿದ್ದೇನೆಂದೂ, ಅಮ್ಮ ಅಪ್ಪ ಅಜಿಲಮೊಗರಲ್ಲಿರುವುದೆಂದೂ ಹೇಳಿದಂತೆ ಬಸಳೆ ಮಾರುವವನಿಗೆ ವಿಕೃತ ಆಲೋಚನೆಯೊಂದು ಮನಸ್ಸಿನೊಳಗೆ ಹೊಳೆಯತೊಡಗಿತು.

‘ನೀನು ನನ್ನೊಡನೆ ಬರುತ್ತೀಯಾ” ತಟಕ್ಕನೆ ಕೇಳಿಯೇ ಬಿಟ್ಟ. ಪ್ರಶ್ನೆ ಕೇಳಿ ಹುಡುಗ ತಬ್ಬಿಬ್ಬಾಗಿದ್ದ. ಸುಧಾರಿಸಿಕೊಂಡು ಇದಿನಬ್ಬ ಶತಾಯಗತಾಯ ವಿರೋಧಿಸುವವನಂತೆ, ‘ಇಲ್ಲ, ಮನೆಗೆ ಬಸಳೆ ಕೊಂಡು ಹೋಗಬೇಕು, ಮೂತಮ ಕಾಯುತ್ತಿದ್ದಾರೆ’ ಎಂದು ತೋಡಿಕೊಂಡ. ಅಷ್ಟಕ್ಕೇ ಬಸಳೆ ಮಾರುವವನು ಬಿಟ್ಟು ಬಿಡುವನೆಂದು ತೋರಲಿಲ್ಲ.

‘ಸಂಜೆ ನಾನೇ ಇಲ್ಲೇ ಮನೆಗೆ ಬಂದು ಬಿಡುತ್ತೇನೆ, ಕೈ ತುಂಬಾ ಹಣ ಕೂಡ ಕೊಡ್ತೇನೆ’ ಎಂದು ಇನ್ನಷ್ಟು ಪುಸಲಾಯಿಸತೊಡಗಿದ. ಬೇಡ ಬೇಡವೆಂದು ಎಷ್ಟು ಗೋಗರೆದರೂ, ಆತ ಇದಿನಬ್ಬನ ಕೈ ಹಿಡಿದು ಪರಿಚಯವಿಲ್ಲದ ದಾರಿಯಷ್ಟು ದೂರ ಅದಾಗಲೇ ಬೆದರಿಸುತ್ತಾ ಕ್ರಮಿಸಿದ್ದ.

‘ಅಣ್ಣಾ ಮನೆಗೆ ಬಸಳೆ ಮುಟ್ಟಿಸಬೇಕು, ಮೂತಮ್ಮ ಕಾಯುತ್ತಿದ್ದಾರೆ’ ಎಂದು ತಪ್ಪಿಸಿಕೊಳ್ಳುವ ನೆಪ ಇದಿನಬ್ಬನದ್ದಾಯಿತು.

‘ಬಸಳೆ ನಾನು ಮುಟ್ಟಿಸುತ್ತೇನೆ, ನೀನು ಮರ್ಯಾದೆಯಿಂದ ನನ್ನ ಹಿಂದೆ ಬಾ…’ ಈಗ ಬಸಳೆ ಮಾರುವ ಆಗಂತುಕನ ಶಬ್ದದಲ್ಲಿ ಅಧಿಕಾರವಾಣಿ ಇತ್ತು. ಇದಿನಬ್ಬ ಸಂಪೂರ್ಣ ಕುಸಿದೇ ಹೋದ. ತಪ್ಪಿಸಿಕೊಂಡು ಬರುವಷ್ಟು ರಟ್ಟೆಯಲ್ಲಿ ತಾಕತ್ತಿಲ್ಲ. ಅಸಾಹಯಕನಂತೆ ಸುಮ್ಮನೆ ಬಸಳೆ ಮಾರುವವನನ್ನು ಹಿಂಬಾಲಿಸುವುದಲ್ಲದೆ ಅನ್ಯ ಮಾರ್ಗವಿರಲಿಲ್ಲ.

ಸುಮಾರು ಮೈಲಿಗಳು ಅವನ ಜೊತೆಗೆ ಹಿಂದೆಯೇ‌ ನಡೆಯಿಸಿದ. ಊರ ಸುಪರ್ದಿ ಮುಗಿದು ಇನ್ನು ಕಾಡು ದಾರಿಯಲ್ಲೇ ನಡೆಯಬೇಕಿತ್ತು. ದಟ್ಟ ಮರಗಳ ನೆರಳಲ್ಲಿ ಅವರಿಬ್ಬರೂ ಸಾಗುತ್ತಿದ್ದರು. ಬೀಟೆ- ದೇವದಾರು ಭೀಮಕಾಯದ ಮರಗಳ ನೆರಳು ಆ ಮಧ್ಯಾಹ್ನದಲ್ಲೂ ರಸ್ತೆಯನ್ನು ಪೂರ್ತಿ ಕತ್ತಲಾಗಿಸಿತ್ತು. ಝರಿಗಳನ್ನು ದಾಟಿದರು, ದಿಣ್ಣೆ ಹತ್ತಿದರು. ಇಳಿದರು. ಕಾಡು ದಾರಿಯಲ್ಲಿ ಇವು ಸಾಮಾನ್ಯ.
ಚೀಂಗುಟ್ಟುವ ಪಕ್ಷಿಗಳ ಧ್ವನಿ, ಆ ನಿಶ್ಯಬ್ದ ಕಾಡಿನಲ್ಲೆಲ್ಲಾ ಇದಿನಬ್ಬನಿಗೆ ಭೀತಿ ಹುಟ್ಟಿಸುತ್ತಿತ್ತು. ಹಾವುರಾಣಿ, ಓತಿಕ್ಯಾತಗಳ ತರಗೆಲೆ ಪರ- ಪರಗೈಯ್ಯುವ ಸದ್ದು ಆ ನಿಶ್ಯಬ್ದಕ್ಕೆ ಇನ್ನಷ್ಟು ಭಯ ತುಂಬುತ್ತಿದ್ದವು. ಒಂದು ಗುಡ್ಡ ಮುಗಿದು ಸಣ್ಣ ಕಾಲು ದಾರಿ ಬಂತು. ಅದೂ ಕಳೆದಾಗ ದೂರದಲ್ಲಿ ಹೊಗೆ ಸೂಸುತ್ತಿರುವ ಹುಲ್ಲಿನ ಗುಡಿಸಲೊಂದು ಗೋಚರವಾಗತೊಡಗಿತು. ಪ್ರಕೃತಿಯೇ ಬೀಡಿ ಎಳೆಯುತ್ತಾ ಅಮಾಯಕ ಕುರಿಗಾಗಿ ಕಾಯುವ ಕಟುಕನಂತೆ ಇದಿನಬ್ಬನಿಗೆ ಭಾಸವಾಗತೊಡಗಿತು.

ನಡೆದೂ ನಡೆದು ಅವರು ಬಹುಶಃ ಈಗಿನ ಗಡಿಯಾರ್ ತಲುಪಿರಬೇಕು. ಆ ಊರು ಈಗ ಮಂಗಳೂರು ಮತ್ತು ಉಪ್ಪಿನಂಗಡಿ ಮಧ್ಯೆ ಹಾದು ಹೋಗುವ ಹೆದ್ದಾರಿಯ ಪಕ್ಕದಲ್ಲಿ ಬರುತ್ತದೆ.

ನಡೆಯುತ್ತಾ ಗುಡಿಸಲಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಂತೆ ಇದಿನಬ್ಬನ ಮನದೊಳಗೆ ಭಯಮಿಶ್ರಿತ ಕುತೂಹಲ. ಗುಡಿಸಲಿಗೆ ತೀರಾ ಹತ್ತಿರವಾದಂತೆ ಅದು ಮನೆಯಲ್ಲ, ಮನೆಯೊಂದಿಗೆ ಸೇರಿಕೊಂಡ ದಾರಿ ಹೋಕರಿಗಿರುವ ಸಣ್ಣ ಉಪಹಾರದ ಹೋಟೇಲೆಂದು ತಿಳಿಯಿತು. ಆ ಕಾಲದಲ್ಲಿ ಮನೆಗೆ ಸೇರಿಕೊಂಡು ಅಂಗಡಿ, ಹೋಟೆಲ್‍ಗಳನ್ನು ನಿರ್ಮಿಸುತ್ತಿದ್ದುದು ರೂಢಿ. ಹುಲ್ಲು ಹೊದೆಸಿದ ಅಗಲವಾದ ಮಣ್ಣಿನ ಗೋಡೆಗಳು. ಕುಳಿತುಕೊಳ್ಳಲು ಚಪ್ಪಡಿಗಳು. ಒಂದಷ್ಟು ಜನ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ವಿವಿಧ ವೇಷದ ಜನರು ಅಲ್ಲಿದ್ದಾರೆ. ಮೇಲ್ನೋಟಕ್ಕೆ ಅದೊಂದು ವಿವಿಧ ಊರಿನ ಜನರು ಸೇರುವ ಸಣ್ಣ ವ್ಯಾಪಾರ ಕೇಂದ್ರ.

‘ನಮಸ್ಕಾರ, ಹೇಗಿದೆ ವ್ಯಾಪಾರ’ ಬಸಳೆ ಮಾರುವವ ಹೋಟೇಲ್ ಮಾಲಿಕನನ್ನು ದೂರದಿಂದ ಕಾಣುತ್ತಿದ್ದಂತೆ ಪರಿಚಯದ ಕೈ ಬೀಸುತ್ತಾ ಮಾತಿಗೆ ಮುನ್ನುಡಿಯಿಟ್ಟ.

‘ಎಂಥ ಹೇಳ್ತಿ ಮಾರಾಯ, ಸ್ವಲ್ಪ ಪರ್ವಾಗಿಲ್ಲ, ಹಾಗೆ ದಿನ ಹೋಗ್ತದೆ. ಅಲ್ಲ, ಈಗೀಗ ನೋಡ್ಲಿಕ್ಕೇ ಅಪರೂಪ ನೀನು, ಹೋ ಅದಿರ್ಲಿ ಇದ್ಯಾವುದು ಹೊಸ ಮಾಲು?’ ಹುಡುಗನನ್ನು ಕಣ್ಣಲ್ಲೇ ಅಳತೆ ಮಾಡುತ್ತ ಕೇಳಿದ.

‘ಹಾ, ಒಂದರ್ಥದಲ್ಲಿ ಹಾಗೆಯೇ ಅಂತಿಟ್ಕೋ’

ಇದಿನಬ್ಬ ಕಾಣಿಸಿದಂತೆ ಕಣ್ಣು ಮಿಟುಕಿಸುತ್ತಾ ಬಸಳೆ ಮಾರುವವ ಉತ್ತರಿಸಿದ. ಇಬ್ಬರ ಮಾತುಕತೆ ಬಿರುಸಾಯಿತು. ಇದಿನಬ್ಬ ಅವನ್ನೆಲ್ಲಾ ಕಿವಿಗೆ ಹಾಕಿಕೊಳ್ಳಲಿಲ್ಲ. ತುಳು – ಮಿಶ್ರಿತ ಬ್ಯಾರಿ ಬಾಷೆಯಲ್ಲಿ ಅವರಿಬ್ಬರು ವ್ಯಾಪಾರ ಮಾಡುತ್ತಿದ್ದರು. ಇದಿನಬ್ಬ ಸುಮ್ಮನೇ ಅಲ್ಲಿ ಸುತ್ತುವರಿದ ಎಲ್ಲರನ್ನೂ ವೀಕ್ಷಿಸುತ್ತಿದ್ದ. ಯಾರೊಬ್ಬರೂ ಇದಿನಬ್ಬನನ್ನು ಗಮನಿಸಲೇ ಇಲ್ಲ.

ಸ್ವಲ್ಪ ಸಮಯದ ತರುವಾಯ “ಸರಿ” ಎಂದು ಜೋರಾಗಿ ಹೋಟೇಲ್ ಮಾಲಿಕ ಉದ್ಗರಿಸಿದ. ಅದನ್ನೇ ಕಾದವನಂತೆ
“ನನ್ಗೂ ಬೇಡ, ನಿನ್ಗೂ ಬೇಡ” ಬಸಳೆ ಮಾರುವವ ಚೌಕಾಸಿ ಮಾಡುವವನಂತೆ ವ್ಯಾಪಾರದ ವರಸೆಯಲ್ಲಿ ಮಾತು ಮುಗಿಸಿದ. ಇಬ್ಬರೂ ಪರಸ್ಪರ ಕೈ ಕುಲುಕಿದರು.

ಇದ್ಯಾವುದೂ ಅರ್ಥವಾಗದ ಭಾವದಲ್ಲಿ ಇದಿನಬ್ಬ ದೂರದಲ್ಲೇ ಕಲ್ಲಾಗಿ ನಿಂತಿದ್ದ. ಒಂದಿಷ್ಟು ಚಿಲ್ಲರೆ ಹಣವನ್ನು ಒಟ್ಟುಗೂಡಿಸಿ ಚರ್ಮದ ಥೈಲಿಯೊಂದರಲ್ಲಿ ಹಾಕಿ ಹೋಟೇಲ್ ಮಾಲಿಕ ಬಸಳೆ ಮಾರುವವನಿಗೆ ನೀಡಿದ.

ಕೃತಜ್ಞತಾ ಭಾವ ಬಸಳೆ ಮಾರುವವನ ಕಣ್ಣಲ್ಲಿ ಲಾಸ್ಯವಾಡುತ್ತಿತ್ತು. ಲಗುಬಗೆಯಿಂದ ಹೊರಡುತ್ತಾ, ಹುಡುಗನ ಬಳಿ ಬಂದು ಕಿವಿಯ ಬಳಿ ‘ಸಂಜೆ ಬಂದು ಕರೆದುಕೊಂಡು ಹೋಗುತ್ತೇನೆ’ ಎಂದು ಮೆಲ್ಲನೆ ಪಿಸುಗುಟ್ಟಿ ಬಸಳೆ ಮಾರುವವ ಹೋಟೇಲ್ ಮಾಲಿಕನಿಗೆ ಕೈ ಬೀಸಿ ಅಲ್ಲಿಂದ ಹೊರಟು ಹೋದ.

ಅವನು ದೂರವಾಗುತ್ತಿದ್ದಂತೆ ಉಚ್ಫಸ್ಚರದಲ್ಲಿ ‘ಇನ್ನು ಬೇರೆ ಯಾವುದಾದ್ರೂ ಇದ್ರೆ ಹೇಳು, ನೋಡಿ ಒಳ್ಳೆಯ ಗಿರಾಕಿ ಮಾಡಿಸುವ’ ಹೋಟೆಲಿನವ ಕೂಗಿ ಹೇಳಿದ.

‘ಆಯ್ತಾಯ್ತು’ ಎರಡು ಗುಡ್ಡಗಳಿಗೆ ಬಡಿಬಡಿದು ಬಸಳೆ ಮಾರುವವನ ಉತ್ತರ ಪ್ರತಿಧ್ವನಿಸಿತು. ತಿರುವು ಮುರುವು ರಸ್ತೆಯಲ್ಲಿ ಆತ ಕರಗುತ್ತಾ ಮಾಯವಾದ.

‘ಹೆಸರೇನು?’

ಹೊರಟು ಹೋದ ಬಸಳೆ ವ್ಯಾಪಾರಿಯ ದಾರಿಯನ್ನು ನೋಡುತ್ತಾ ನಿಂತಿದ್ದ ಇದಿನಬ್ಬ ಪ್ರಶ್ನೆಗೆ ಬೆಚ್ಚಿ
‘ಇದಿ… ಇದ್ದಿನಬ್ಬ’ ಎಂದು ನಡುಗುವ ಕಂಠದಿಂದಲೇ ಉತ್ತರಿಸಿದ.

‘ಸರಿ, ಬಾ ಕೆಲಸ ಮಾಡು’ ಅಷ್ಟಕ್ಕೆ ಮಾತು ನಿಲ್ಲಿಸಿ ಮಾಲಿಕ ಇತರ ಗಿರಾಕಿಗಳ ಜೊತೆ ವ್ಯವಹಾರದಲ್ಲಿ ತಲ್ಲೀನನಾದ. ಸುತ್ತಲೂ ಕಾಡು, ಮಧ್ಯೆ ಬೈತಲೆ ಹಾಕಿದಂತಿರುವ ಅಗಲವಾದ ದಾರಿ. ದಾರಿ ಬದಿಗೆ ತೆರೆದು ನಿಂತ ಈ ಹೊಟೇಲು ಬಿಟ್ಟರೆ ಅಲ್ಲಿ ಇನ್ನೇನೂ ಇಲ್ಲ. ಉದ್ದವಾದ ಈಚಲು ಮರಗಳು ರಾಕ್ಷಸನಂತೆ ನಿಂತು ಇದಿನಬ್ಬನ ಮುಖ ನೋಡಿ ಗಹಗಹಿಸುವಂತೆ ತೋರಿತು.

ಅಂಗಡಿಯ ಕೆಲಸದವನೊಬ್ಬ ಇದಿನಬ್ಬನನ್ನು ಒಳಗೆ ಕರೆದುಕೊಂಡು ಹೋಗಿ ಕೆಲಸ ಹೇಳಿದ. ಮತ್ತೆ ಶುರುವಾಯಿತು; ಹುಡುಗನಿಗೆ ಬಿಡುವಿಲ್ಲದ ಕೆಲಸ. ಆಗಾಗ್ಗೆ ಬರುವ ಗಿರಾಕಿಗಳಿಗೆ ತಟ್ಟೆಯಲ್ಲಿ ಊಟ, ಸಾರು ಮುಗಿದರೆ ತಂದು ಹಾಕುವುದು, ಅವರ ತಟ್ಟೆ ತೊಳೆಯುವುದು. ಆಗಾಗ್ಗೆ ಬರುವ ಎತ್ತಿನ ಗಾಡಿಯ ಜನರು, ನಡೆದು ಬರುವ ಯಾತ್ರಿಕರಿಗೆ ಊಟ ಕೊಟ್ಟು ಸಮಯ ಮೀರಿದ್ದೇ ತಿಳಿಯಲಿಲ್ಲ. ಗಿರಾಕಿಗಳು ಕರಗುತ್ತಾ ಬಂದಂತೆ ಹೋಟೇಲಿನ ಕೆಲಸಗಾರರು ಮನೆಗೆ ಹೊರಡತೊಡಗಿದರು.

‘ಹೋಗು, ಊಟ ಮಾಡು’ ಮಾಲಿಕ ಇದಿನಬ್ಬನಲ್ಲಿ ಅಜ್ಞಾಪಿಸಿದ.

‘ವ್ಹಾವ್….ಇನ್ನೇನು ಕೆಲಸಗಳು ಮುಗಿದವು, ಮನೆಗೆ ತೆರಳಬಹುದು’ ಹುಡುಗ ಮನದೊಳಗೆ ಮಂಡಿಗೆ ಮೆಲ್ಲುತ್ತಾ ಭರ್ಜರಿಯಾಗಿ ಊಟ ಮುಗಿಸಿದ.

ಊಟ ಮುಗಿದು ಕೈ ತೊಳೆದು ಹೊರಟು ನಿಂತವನಂತೆ ಮಾಲಿಕನ ಮುಂದೆ ಬಂದು ನಿಂತ. ಕಾದು ಕಾದು ಅದಾಗಲೇ ಸಂಜೆ ಕಳೆದು ರಾತ್ರಿಯಾಗುತ್ತಿದ್ದುದರಿಂದ ಕರೆದುಕೊಂಡು ಹೋಗಲು ಬರುತ್ತೇನೆಂದು ಹೇಳಿದ ಬಸಳೆ ಮಾರುವವ ಮೋಸ ಮಾಡಿದ್ದು ಹುಡುಗನಿಗೆ ಹೇಗೆ ತಾನೇ ಅರ್ಥವಾದೀತು ಪಾಪ!

‘ಧನೀ ಮನೆಗೆ ಹೋಗ್ಬೇಕು, ಸಂಬಳ ಕೊಡಿ’ ಹುಡುಗ ಅಂಗಡಿಯ ಮುಂಬಾಗಿಲಿನಲ್ಲಿ ಬಂದು ನಿಂತ.

‘ಬಿಕ್ನಾಸಿ…ಎಲ್ಲಿಗೆ ಸಾಯಲು ಹೋಗುವುದು’ ಮಾಲಿಕನ ಗರ್ಜನೆಗೆ ಬಾಲಕ ಕಂಪಿಸಿದ.

‘ಮನೆಗೆ ಹೋಗ್ಬೇಕು, ಸಂಬಳ ಕೊಡಿ’ ದೈನೇಸಿಯಾಗಿ ಹುಡುಗ ಮತ್ತೊಮ್ಮೆ ಬೇಡಿಕೊಂಡ.

‘ಹಣಾನೂ ಇಲ್ಲ, ಋಣಾನೂ ಇಲ್ಲ, ಮೂಗಿನ ಮಟ್ಟ ತಿಂದು ಮುಗೀತಲ್ವಾ? ಹೋಗಿ ಪಾತ್ರೆ ತೊಳೆ’ ಎಂದಾಗ ಹುಡುಗ ಸಂಪೂರ್ಣ ಕುಸಿದೇ ಹೋದ.

ಹಳದಿ ಮಿಶ್ರಿತ ಆ ಸಂಜೆ ಸೂರ್ಯನಿಗೆ ಮೋಸ ಮಾಡಿ ಕಬಳಿಸಿದಂತೆ ಇದಿನಬ್ಬನಿಗೆ ಭಾಸವಾಗುತ್ತಿತ್ತು. ಕತ್ತಲಾವರಿಸಿದಂತೆ ನಿರ್ಜನ ದಾರಿ ಬದಿಯ ಆ ಗುಡಿಸಲಲ್ಲಿ ಚಿಮಿಣಿ ಬೆಳಕು ಪ್ರಕಾಶಿಸತೊಡಗಿತು. ಹುಡುಗ ರಾಶಿ ಹಾಕಿದ ಪಾತ್ರೆ ಪಗಡಗಳನ್ನೆಲ್ಲಾ ತೊಳೆಯಲಾರಂಭಿಸಿದ. ತೊಳೆದು ಮುಗಿಯುತ್ತಲೇ ಇನ್ನಷ್ಟು ಪಾತ್ರೆಗಳ ರಾಶಿ ಬಂದು ಬೀಳುತಿತ್ತು. ಸೊಳ್ಳೆಗಳ ಕಾಟ, ಜೀರುಂಡೆಯ ಅಸಹನೀಯ ಸದ್ದು ಆ ರಾತ್ರಿ ಹುಡುಗನನ್ನು ಇನ್ನಷ್ಟು ಭೀಕರತೆಗೆ ತಳ್ಳುತ್ತಲೇ ಇತ್ತು. ದೂರದಲ್ಲೆಲ್ಲೋ ಕಾಡು ನಡುಗಿಸುವ ಹುಲಿಯ ಘರ್ಜನೆಯೂ ಕಿವಿಗಡಚಿಕ್ಕುತ್ತಿದ್ದವು.

‘ಡಣ್, ..ದಡಾಳ್…’ ಪಾತ್ರೆಗಳ ಸದ್ದು.

ಮತ್ತೆ ಮತ್ತೆ ತೂತು ಗೋಡೆಯ ಸುತ್ತೆಲ್ಲಾ ಪ್ರತಿಧ್ವನಿಸುತ್ತಲೇ ಇತ್ತು. ಸುಮಾರು ಹೊತ್ತಿನ ಬಳಿಕ ಆ ಸದ್ದು ತಣ್ಣಗಾಯಿತು. ಅಷ್ಟೊತ್ತಿಗೆ ಮುಸುರೆ ತಿಕ್ಕಿ ಹುಡುಗನ ಅರ್ಧ ಜೀವ ಬತ್ತಿ ಹೋಗಿತ್ತು.

‘ಉಸ್ಸಪ್ಪ…’ ಎನ್ನುತ್ತಾ ಬೆವರ ಹನಿಗಳು ಒರೆಸುವ ಹೊತ್ತಿಗೆ ಅರ್ಧ ರಾತ್ರಿ ಮುಗಿದೇ ಹೋಗಿತ್ತು.

ಇದಿನಬ್ಬ ಕೊಟ್ಟ ಒಂದಾಣೆ ಪಡೆದು ಒಂದು ಕಟ್ಟು ಬಸಳೆ ನೀಡಲೆಂದು ಹೊತ್ತಿದ್ದ ಬಸಳೆ ಕಟ್ಟನ್ನು ಕೆಳಗಿಳಿಸಿದ. ಇದಿನಬ್ಬ ಊರಿನ ಸರಹದ್ದು ದಾಟಲೆಂದೇ ಪೂರ್ವಯೋಜನೆ ಹಾಕಿಕೊಂಡೇ ಬಸಳೆ ಮಾರುವವನು ಕೇಳಿದರೂ ಕೇಳಿಸಿಕೊಳ್ಳದವನಂತೆ ನಡೆದಿದ್ದ.

ಮರು ದಿನವೂ ಇದೇ ದಿನಚರಿ. ಬಿಡುವಿಲ್ಲದ ಕೆಲಸ, ಮಾಲಕನಿಗೆ ಎದುರಾಡುವ ಶಕ್ತಿ ಇದೆಯೇ, ದಿನಗಳೆದಂತೆ ಮೌನವಾಗಿಯೇ ಎಲ್ಲಾ ಕೆಲಸಗಳನ್ನು ಮುಗಿಸುವುದು ಇದಿನಬ್ಬನಿಗೆ ಅಭ್ಯಾಸವಾಗುತ್ತಾ ಬಂತು. ಎಲ್ಲಾ ಸಂಜೆಗಳನ್ನು ಇದಿನಬ್ಬ ಬಸಳೆ ಮಾರುವವನಿಗಾಗಿಯೂ, ಮನೆ ದಾರಿಗೆ ತಲುಪಿಸುವವನಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದ. ಆದರೆ, ಯಾರೂ ಅವನನ್ನು ಹುಡುಕಿ ಬರಲೇ ಇಲ್ಲ. ಕಾಲದ ಪರಿಭ್ರಮಣೆಗೆ ಅಂಕುಶ ಹಾಕಲಾದೀತೇ? ಮನೆ ಬಿಟ್ಟು ತಿಂಗಳುಗಳೇ ದಾಟಿದ್ದವು.

*****

ಇತ್ತ ಇದಿನಬ್ಬನಿಗಾಗಿ ಮನೆಯವರ ಹುಡುಕಾಟ ತೀವ್ರ ಗತಿಯಲ್ಲಿತ್ತು. ಆ ದಿನ ಮೀನಿಗೆ ಹೋಗಿದ್ದ ಪೆರ್ನು ಅಜಿಲ ಮೊಗರುವಿನಲ್ಲಿ ಇಳಿದು ತೋಟಗಳ ನಡುವೆ ನುಸುಳಿಕೊಂಡು ಆ ಮಣ್ಣಿನ ಮನೆಯೆದರು ಬಂದು ನಿಂತ. ಒಳಗೇನೋ ಕೆಲಸದಲ್ಲಿ ನಿರತರಾಗಿದ್ದ ಹಲೀಮಾರು ಪೆರ್ನುವನ್ನು ನೋಡಿ ಹೊರಗೆ ಬಂದರು. ‘ಹಾ ಪೆರ್ನು, ಏನು ಸಮಾಚಾರ’ ಪರಿಚಯದ ನಗೆ ಚೆಲ್ಲಿ ಕೆಲಸದವನನ್ನು ವಿಚಾರಿಸಿದರು. ‘ಅಲ್ಲ, ನಚ್ಚೋಟಿನ ಫಾತಿಮಾದ ಕಳಿಸಿದ್ದು, ನಿಮ್ಮ ಮಗ ಇದ್ದಿ ಏನಾದರೂ ಈ ಕಡೆ ಬಂದಿದ್ದಾನಾ ಅಂತ ಕೇಳಲು ಹೇಳಿದ್ರು.’

‘ಇಲ್ಲ ಪೆರ್ನು, ಅವನು ಇಲ್ಲಿಗೆ ಬಂದಿಲ್ಲ, ಎಂತ ವಿಷಯ’ ಅವರ ಸ್ವರದಲ್ಲೊಂದು ಅಳುಕಿತ್ತು. ‘ಹೌದು, ಎರಡ್ಮೂರು ದಿನ ಆಯ್ತು ಇದ್ದಿಯನ್ನು ಕಾಣುತ್ತಿಲ್ಲ, ಇಲ್ಲೇನಾದ್ರೂ ಬಂದಿದ್ದಾನ ಅಂಥ ನೋಡ್ಕೊಂಡು ಬಾ’ ಅಂಥ ಕಳಿಸಿದ್ರು. ‘ಯಾ ಅಲ್ಲಾಹ್?!’ ಆಮಾತೃ ಹೃದಯ ಚೀರಿತು. ಉಕ್ಕಿ ಬರುವ ಅಳುವಿನ ಕಟ್ಟೆ ತಡೆಯಲಾಗದೆ ಹಲೀಮಾ ನಿಂತಲ್ಲೇ ಕುಸಿದರು. ಆರು ತಿಂಗಳ ಹಿಂದೆ ಮನೆಯಿಂದ ಹೊರ ಬಿದ್ದಿದ್ದ ಮಗನನ್ನು ಒಂದು ಬಾರಿ ಕೂಡ ಮುಖ ನೋಡಲಾಗದ ವಿರಹದ ನೋವು ಅವರನ್ನು ಮತ್ತಷ್ಟು ಕಾಡಿತು.

*****

ಇತ್ತ ಕೆಲಸದ ನಡುವೆ ಆಗಾಗ್ಗೆ ಸಿಗುವ ಬೈಗುಳ, ಹೊಡೆತ ಮಾಮೂಲಾಗತೊಡಗಿತು. ಮನೆಯಿಂದ ಬರುವಾಗ ಸೊಂಟದಲ್ಲಿದ್ದ ಕಪ್ಪು ಉಡಿದಾರ ಬಿಳಿ ಬಣ್ಣಕ್ಕೆ ತಿರುಗತೊಡಗಿತ್ತು. ಇದಿನಬ್ಬನಿಗೆ ಸೂರ್ಯ ಚಂದ್ರರ ಪರಿಭ್ರಮಣೆಯನ್ನು ನೆನಪಿನಲ್ಲಿಟ್ಟು ತಿಂಗಳುಗಳನ್ನು ಲೆಕ್ಕ ಹಾಕುವ ಜ್ಞಾನವಿತ್ತು.

ಹಾಗೆಯೇ ಹೋಟೇಲಿನ ಪಾಕಶಾಸ್ತ್ರವನ್ನು ಇದಿನಬ್ಬ ಬಹುಬೇಗನೆ ಕರಗತ ಮಾಡಿಕೊಳ್ಳತೊಡಗಿದ. ಇದಿನಬ್ಬನ ಕಾಲ ಜ್ಞಾನದ ಪ್ರಕಾರ ಸುಮಾರು ಒಂದುವರೆ ತಿಂಗಳೇ ಸವೆದು ಹೋದವು. ಅದೊಂದು ಸಂಜೆ ಆಗಂತುಕ ಗಿರಾಕಿಯೊಬ್ಬ ಪ್ರತ್ಯಕ್ಷಗೊಂಡ. ನೋಡಿದರೆ ಹತ್ತಿರದ ಪರಿಸರದವನಲ್ಲ ಎಂಬುವುದನ್ನು ಅವನ ವೇಷವಿಧಾನ ಹೇಳುತ್ತಿತ್ತು. ಬೆವರೊರೆಸುತ್ತಾ ಸೀದಾ ಹೋಟೇಲಿಗೆ ಬಂದ. ಅಲ್ಲೇ ಇದ್ದ ಬಿಂದಿಗೆಯ ನೀರನ್ನು ಗಟ ಗಟನೆ ಕುಡಿದು ಮಣ್ಣಿನ ದಿಬ್ಬದಲ್ಲಿ ಕುಳಿತು,
‘ಓಯ್ ಯಾರಿದ್ದೀರಿ….ತಿನ್ನಲು ಏನಿದೆ?’ ಅರೆಬರೆ ತುಳುವಿನಲ್ಲಿ ಅವನು ಕೇಳಿದ. ಆಸನದಲ್ಲಿ ಕುಳಿತ ಆಗಂತುಕನಲ್ಲಿ ಮಾಲಿಕ ನಮ್ರತೆಯಿಂದ ‘ಗಂಜಿ ಇದೆ ಸ್ವಾಮಿ’ ಎಂದುತ್ತರಿಸಿದ.

‘ಸರಿ, ಬಡಿಸು’ ಆಗಂತುಕ ಆಜ್ಞೆಯಿತ್ತ.

ಕೈ ತೊಳೆಯುತ್ತಾ ಬೈರಾಸಿಗೆ ತನ್ನ ಕೈಯುಜ್ಜಿ ಊಟಕ್ಕೆ ಕುಳಿತು ಕೊಳ್ಳಲು ಅಣಿಯಾಗುವಷ್ಟಕ್ಕೆ ಗಂಜಿಯೊಂದಿಗೆ ಮಾವಿನ ಉಪ್ಪುನೀರು ತಯ್ಯಾರು ಮಾಡಿ ಇದಿನಬ್ಬ ಆಗಂತುಕನ ಹತ್ತಿರ ತಲುಪಿದ್ದ. ಗಂಜಿ ಸ್ವೀಕರಿಸಿದವನೇ ಗಡದ್ದಾಗಿ ಉಂಡ ಆಗಂತುಕ ಇದಿನಬ್ಬನ ಉಪಚಾರಕ್ಕೆ ಮಾರು ಹೋಗಿದ್ದ. ಊಟ ಮುಗಿಯುವಷ್ಟರಲ್ಲೇ ಬಿಂದಿಗೆ ತುಂಬಾ ಬಿಸಿ ನೀರು ತುಂಬಿ ಇದಿನಬ್ಬ ಕಾಯುತ್ತಿದ್ದ. ಊಟ ಮುಗಿಸಿ ಕೈತೊಳೆದ ಕೂಡಲೇ

‘ಏ ಹುಡುಗಾ, ಇಲ್ಲಿ ಬಾರೋ?’ ಆ ವ್ಯಕ್ತಿ ಹತ್ತಿರ ಕರೆದ.

ಸೌಮ್ಯವಾಗಿ ಇದಿನಬ್ಬ ಅವನ ಹತ್ತಿರ ಎರಡೂ ಕೈ ಕಟ್ಟಿ ಬಾಗಿ ನಿಂತ.

‘ಎಲ್ಲಿ ನಿನ್ನ ಊರು?’ ಮತ್ತೆ ಪೂರ್ವಾಪರಗಳನ್ನೆಲ್ಲಾ ಕೇಳಿದ. ಮೀಸೆ ಮೂಡದ ಸಣ್ಣ ಹುಡುಗ ತನ್ನ ಹಿನ್ನಲೆಗಳನ್ನು ಬಿಚ್ಚಿ ಹೇಳತೊಡಗಿದ. ಕಥೆಗಳು ಕೇಳಿ ಮುಗಿದಂತೆ ಆಗಂತುಕ ಸ್ವಲ್ಪ ಹೊತ್ತು ಮೌನ ತಾಳಿದ. ಏನೋ ಹೊಳೆದಂತೆ ತಟ್ಟನೆ,
‘ನೀನು ನನ್ನ ಜೊತೆ ಬರ್ತೀಯಾ?’ ಕೇಳಿಯೇ ಬಿಟ್ಟ.

ಹುಡುಗನಿಗೆ ಒಮ್ಮೆ ಗರಬಡಿದಂತಾದರೂ, ಸ್ವಲ್ಪ ಹೊತ್ತು ಚಿಂತಿಸುತ್ತಾ, ಇಲ್ಲಿದ್ದರೆ ದಿನವೂ ಕೆಲಸ ಬೇರೆ, ಮನೆಗೆ ಹೋಗುವ ದಾರಿ ಹುಡುಕುವುದು ಕಷ್ಟ ಸಾಧ್ಯ. ಒಂದು ವೇಳೆ ಹೋದರೆ, ಇಷ್ಟರ ತನಕ ಎಲ್ಲಿ ಹೋಗಿದ್ದೆ ಎಂದು ಕೇಳಿ ಮತ್ತೆ ಬೆನ್ನು ಪುಡಿಯಾಗುವವರೆಗೂ ಬಾಸುಂಡೆ ಬೀಳಬಹುದು ಎಂಬ ಹೆದರಿಕೆಯಿಂದ, ಅದಕ್ಕಿಂತ ಇದು ಎಷ್ಟೋ ಪಟ್ಟು ಒಳಿತು ಎಂಬ ತೀರ್ಮಾನವೊಂದಕ್ಕೆ ಬಂದ.

‘ಹಾ ಬರ್ತೀನಿ ಸ್ವಾಮೀ’ಎಂದು ಮೆಲ್ಲನೆ ಉಸುರಿದ. ಅಷ್ಟು ಕೇಳಿದ್ದೇ ತಡ, ಆಗಂತುಕ ಹೊಟೇಲು ಮಾಲಿಕನ ಬಳಿ ದೌಡಾಯಿಸಿದ. ಇಬ್ಬರೂ ಮತ್ತೆ ಚೌಕಾಸಿಗಿಳಿದಂತೆ ಕಂಡರು.

‘ಎಷ್ಟು ಕೊಟ್ಟೆ ಇದಕ್ಕೆ?’

‘ಬಸಳೆಯವನು ಮಾರಿದ್ದು, ಇನ್ನೂ ಮೂರು ತಿಂಗಳು ಬಾಕಿಯಿದೆ?’

ಹೊಟೇಲ್ ಮಾಲಿಕ ತಗ್ಗಿದ ಧ್ವನಿಯಲ್ಲಿಯೇ ಉತ್ತರಿಸುತ್ತಿದ್ದ. ಆಗಂತುಕನ ಠೀವಿ ಘನತೆ ಗಾಂಭೀರ್ಯ, ಹೊಟೇಲ್ ಮಾಲಿಕನಿಗಿಂತ ಹೆಚ್ಚಿನ ಶ್ರೀಮಂತಿಕೆಯನ್ನು ತೋರಿಸುತ್ತಿತ್ತು.

‘ಅಷ್ಟು ಕೊಟ್ಟರೆ ನಿನಗೆ ಕಮ್ಮಿಯಾಗುವುದಿಲ್ಲ, ನೀನೆ ಹೇಳು’ ಹೀಗೆಲ್ಲಾ ಸುಮಾರು ಹೊತ್ತು ಇಬ್ಬರು ಚರ್ಚಿಸುತ್ತಲೇ ಇದ್ದರು.
ಸ್ವಲ್ಪ ಸಮಯದ ಬಳಿಕ ಆಗಂತುಕ ಒಂದು ಹಣದ ಥೈಲಿ ಹಸ್ತಾಂತರಿಸಿದ.

‘ಸರಿ ಹೊರಡೋಣವೇ’ ಹುಡುಗನ ಕಡೆ ತಿರುಗುತ್ತಾ ಆಗಂತುಕ ಪ್ರಶ್ನಿಸಿದ. ಪ್ರಶ್ನಾರ್ಥಕವಾಗಿ ಇದಿನಬ್ಬ ಹೋಟೇಲು ಮಾಲಿಕನ ಮುಖಕ್ಕೊಮ್ಮೆ ಕಣ್ಣಿಟ್ಟ.

‘ಹೊರಡಲು ತಯ್ಯಾರಾಗು, ಅವರಿನ್ನು ಮುಂದೆ ನಿನ್ನನ್ನು ನೋಡಿಕೊಳ್ಳುವರು’ ಎಂದು ಅಧಿಕಾರ ಧ್ವನಿಯಲ್ಲೇ ಸಮ್ಮತಿ ಬಂತು.
ಮಾಲಿಕ ಖರೀದಿಸಿ ಕೊಟ್ಟ ತನ್ನೆಲ್ಲಾ ದಿನವಹಿ ಸರಂಜಾಮುಗಳನ್ನು ಚೀಲವೊಂದಕ್ಕೆ ತುಂಬಿ ಇದಿನಬ್ಬ ಹೊರಟು ನಿಂತ. ಹೊರಡುವ ದಾರಿಗೆ ಇಳಿಯುತ್ತಿದ್ದಂತೆ, ಇದಿನಬ್ಬ ಹೊಟೇಲ್ ಮಾಲಿಕನ ಬಳಿ ಕೇಳಿದ: ‘ಸ್ವಾಮಿ, ನನ್ನ ಸಂಬಳ ಕೊಟ್ಟು ಬಿಡಿ, ನಾನು ಹೊರಡುತ್ತಿದ್ದೇನೆ’

‘ಓ, ಯಾವ ಸಂಬಳ, ಯಾವ ಲೆಕ್ಕದ್ದು, ನಿನ್ನ ಸಂಬಳ ನಿನ್ನ ಮಾರಿದವನಲ್ಲೇ ಕೊಟ್ಟಿದ್ದೇನೆ, ನಿನ್ನ ಋಣ ಇನ್ನೂ ತೀರಿಲ್ಲ. ಹೋಗ್ಹೋಗು’ ಎಂದು ಮಾಲಿಕ ಮೂದಲಿಸಿದವನಂತೆ ಹೇಳಿಯೇ ಬಿಟ್ಟ. ಸಂಪೂರ್ಣವಾಗಿ ಕುಸಿದೇ ಹೋಗಿದ್ದ ಇದಿನಬ್ಬ ಭಾರದ ಹೆಜ್ಜೆಗಳೊಂದಿಗೆ ಆಗಂತುಕನ ಜೊತೆ ಹೊರಟು ನಿಂತ.

(ಈ ಕಾದಂಬರಿಯ ಮುಂದಿನ ಕಂತು, ಮುಂದಿನ ಭಾನುವಾರ ಪ್ರಕಟವಾಗುವುದು)