ಹಂಸ
ಕಿಟಕಿಯಂಚಲೊಂದು ಮೌನ ಮಕಾಡೆ ಕುಳಿತಿದೆ
ನಿನ್ನೆಯ ನಗುವನ್ನು ಮಾರಲು ಇಟ್ಟಿದೆ
ಕೊಳ್ಳುವವರು ಕೊಳ್ಳಲಿ ಮಾರುವವರು ಮಾರಲಿ
ನಗು-ಅಳುವಿನ ಶೇಷ ಲೆಕ್ಕಾಚಾರವಲ್ಲಿ
ಸಂತೆ ಮುಗಿದಾದ ಮೇಲೆ
ಬಯಲು ನಿಶಬ್ಧವನ್ನು ಹೊದ್ದಂತೆ
ಕಣ್ಣ ಹನಿಯೊಂದ ಬರೆದುಕೊಂಡಂತೆ
ಕೊರೆದ ಬಿದಿರು ನಾದ ಚೆಲ್ಲಿದಂತೆ
ಒಳಹೊರಗನ್ನು ಕಟ್ಟುತ್ತಿದೆ
ಒಳಗೂ ನೀನೇ
ಹೊರಗೂ ನೀನೇ
ನಡುವೆಲ್ಲೊಂದು ರೂಪ ತೆವಳಾಡಿದೆ
ಅಂಗೈ ರಹದಾರಿಗಳು ತಾವ ಹುಡುಕಿವೆ
ಹೆಣೆಗುಂಟ ಗೆಣೆ ಸದ್ದು ಜಿಕಿಜಿಕಿದಂತೆ
ಜೀವಾತ್ಮ ಮಗ್ಗಲು ಬದಲಾಯಿಸಿದೆ
ಸರಿದ ಕಾಲಕ್ಕೆ ಕುಣಿಕೆ ಬಿಗಿದಿರುವೆ
ಜಗ್ಗಬೇಕಿರುವನು ನೀನೇ
ಹಾದಿಬದಿಯ ನೆರಳ ಬೆರಗು ತುಂಬಬೇಕಿರುವವನು ನೀನೇ
ಹಾರಿ ಹೋಗಿದೆ ಹಂಸ
ಹಾಲು ನೀರನು ಬೇರೆ ಮಾಡಿದಂತೆ
ಕಿಟಕಿಯಂಚಲಿ ಮಕಾಡೆ ಕುಳಿತ ಮೌನ
ಈಗ ಮಾತು ಮುರಿದಿದೆ
ಎಸೆದು ಹೋದ ಹೆಜ್ಜೆ ಎದೆಗೂಡಂಚಲ್ಲಿ ಚಿತ್ತಾರ ಬಿಡಿಸಿದರೆ ಉಸಿರು ಬೊಗಸೆ ಕಟ್ಟಿ ಜೀವ ತೇಯುತ್ತಿದೆ
ಉಸಿರ ಉಯ್ಯಾಲೆ ಹರಿದಂತೆಲ್ಲ
ಜೀವಾತ್ಮ
ಪರಮಾತ್ಮ
ನುಡಿಯೊಂದ ಬರಿದಿದೆ.
ಪಿ .ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು.
ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ