ಮುಖವಾಡದ ಬೆಳಗು

ಬೆಳಕೊಂದು ಹೀಗೆ
ನೆಲದ ವಾಸನೆ ಹೀರಿ ಮೈನವಿರೇಳಿಸಿಕೊಂಡ
ಘಮಲೊಂದು
ಬೃಂದಾವನದ ಹಾಸಿದ ಪಸೆಗೆ ಮುತ್ತಿಡುವ
ನಿರಂತರ ಜೀವಪರತೆ
ಓಹ್
ಎಷ್ಟೊಂದು ಸೊಬಗು ಈ ಬೆಳಗು

ಬೆಂಕಿಯನ್ನೇ ಉಸಿರಾಡಿಕೊಂಡ ಬೃಹತ್ ಸೂರ್ಯ
ಎಲೆಯ ಕೆಣಕಿ ಸೋತ ನೋವು
ಕೊಕ್ಕಿಗೆ ಚುಚ್ಚಿಕೊಂಡ ಕಲ್ಲ ಕಣದ ನೋವಿನಲಿ
ವೇದಿಸುವ ಹಕ್ಕಿಗಾನ
ಬಣ್ಣ ಬದಲಿಸುವ ಆಗಸದ ಕ್ರೌರ್ಯ
ಇದು
ದ್ವಂದ್ವಗಳ ಹೊದ್ದುಕೊಂಡ ಬೆಳಗಿನ
ನಿರಾಕರಣದ ರುಜುವಾತು

ಮೈದುಂಬಿದ ತೊರೆ ಅದರೊಳ ನೊರೆ
ತೇಲಿಹೋಗುವ ಗಡಸು
ಬೆಳಕನೇ ಬಯಸಲಾರವು
ಪರಿಧಿಯಲ್ಲಿ ಪುಟಿಯುವ ದ್ರವ್ಯದ ನೆರಳು
ಗಾಳಿ ಹಿಂಬಾಲಿಸಿ ಬಂದ ಹೆದರಿಕೆಗೆ
ಎಂದಿಗೂ ಸೋಲಲಾರವು

ಕ್ಷಮಿಸಲು
ಕಣ್ಣುಗಳ ಮಿಟುಕಿಸಿಕೊಂಡು ಓಡುವ ಮೋಡದ
ಲೀನತೆ
ಈ ಬೆಳಗಿಗೆ ಸಲ್ಲದ ಅಂತಃಕರಣ ಕೆಣಕುವಾಗ
ಸುಮ್ಮನಿರುವ ಕತ್ತಲ ಕ್ರೌರ್ಯ
ಎದೆಯಲೊಂದು ಎವೆ ತೆರೆದು ಕಾಯುವುದು
ಒಂದು ಬಿನ್ನಾಣ
ಒಂದು ಮಧ್ಯಾಹ್ನದ ಸೊಬಗು
ಒಂದು ಸಂಜೆಯ ಆತ್ಮಹತ್ಯಾ ಸಂಚಿಕೆ
ಒಂದು ಗರಿಕೆಯ ಇಬ್ಬನಿಯ ಹುಟ್ಟು
ಈ ಬೆಳಗಿಗೆ ಏನೆಲ್ಲಾ ವೈಭವತೆ ತರುವುದೋ

ದಾರಿಯಲ್ಲಿ ಸವೆದು ಸೊರಗುವ
ಮರಳ ಕಣದ ಮೇಲೆ
ಹೂವೊಂದು ಬಿದ್ದು ಮೈನರೆವಾಗ
ನಾಚಿಕೊಂಡ ಮಿಂಚು ಹುಳವೊಂದು
ಬೆಳಕ ತಡೆಹಿಡಿವ ನಿಗೂಢ ನಡೆ
ನಿಜ
ಈ ಬೆಳಗಿಗೆ ಎಷ್ಟೊಂದು ಮುಖವಾಡಗಳು

ಬೆತ್ತಲು ಬಿದ್ದ
ನಕ್ಷತ್ರವೊಂದು ಸತ್ತ ಸೂತಕದಲಿದ್ದಂತೆ
ಕಳೇಬರ ಹೊತ್ತು ಸಾಗುವ ಯಮಕಿಂಕರರು
ಸ್ವರ್ಗವೊಂದನು ಹುಡುಕಿ
ಡಫಾನಿಗೆ ಅಣಿಯಾಗುವಾಗ
ತೊಗಟೆಗೆ ಅಂಟಿದ ಮಂಜಿನ ಹನಿಯೊಂದರಲಿ
ರಶ್ಮಿಯೊಂದು ಹುಟ್ಟುತ್ತಿದೆ
ಬೆಳಗಿಗೆ ಮತ್ತೆ ಸೂತಕದ ಬೇಲಿ ಸುತ್ತಿದೆ

ಮೂಲತಃ ಹನೂರು ತಾಲೂಕಿನ ಪೊನ್ನಾಚಿಯ ಪ್ರಕಾಶ್ ಸದ್ಯ ಒಡೆಯರ್ ಪಾಳ್ಯದಲ್ಲಿ
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ
ಓದು ಮತ್ತು ಕವಿತೆಗಳ ರಚನೆ ಇವರ ಹವ್ಯಾಸ

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)