ಈ ರಾತ್ರಿಯ ಹುಣ್ಣಿಮೆ
ತೀರದ ಸಮುದ್ರದ ಅಲೆಗಳ ಸದ್ದು
ಕರೆಯುತ್ತಿವೆ ಮೋಹಕವಾಗಿ
ತೆಂಗಿನ ಗರಿಗಳ ಸ್ಪರ್ಶಿಸುವ ಗಾಳಿ
ನನ್ನ ಸುತ್ತಾ ತಿರುವಿ
ತರುತ್ತಿವೆ ನಿನ್ನ ನೆನಪಿನ ತಂಪನು.

ನೀ ಆ ತೀರದಲ್ಲಿದ್ದರೂ
ನಾನು ಈ ತೀರದಲ್ಲಿದ್ದರೂ
ಮನ ಸುತ್ತುತ್ತಿದೆ ಒಂದೇ ತೀರದಲ್ಲಿ.

ಈ ಗಳಿಗೆ
ನಿನ್ನ ಬಾಹುಗಳಲ್ಲಿ ಹೊದ್ದು
ತೀಡುತ್ತಾ ನಿನ್ನ ಮುಂಗುರುಳ
ಕಡಲ ಅಲೆಗಳ ನಿಶ್ಯಬ್ದ, ಸಶಬ್ದದಲ್ಲಿ
ಈ ರಾತ್ರಿಯ ಕಳೆವ ಬಯಕೆ ಗಾಢವಾಗಿದೆ

ಹಾಗೂ ಇದು ಪ್ರೇಮಿಸುವ ಬಗೆಯಾಗಿರದೆ
ಇದು ಕೂಡಾ ಧ್ಯಾನವೇ ಅನಿಸುತಿದೆ.

 

 

 

 

 

 

ಹಣ್ಣೆಲೆಗಳು ಒಣಗಿ ಉದುರಿವೆ
ಹಸಿರೆಲೆಗಳು ಚಿಗುರಿವೆ
ಕಾಲ ತಿರುಗುತ್ತಲಿದೆ.
ನಮ್ಮ ನಡುವಿನ ಕಾಲಚಕ್ರವೂ
ಹೊತ್ತು ಸಾಗಿದೆ ನಮ್ಮನ್ನು ದೂರಕೆ.

ಒಣ ಪುರಲೆಗಳಂತೆ ನೆನಪುಗಳು
ಅಲ್ಲಲ್ಲಿ ಸುಳಿದು ಚದುರಿ
ಕರಗಿವೆ ನೆಲದ ಮಣ್ಣಲ್ಲಿ.

ಸವೆದ ದಾರಿಗಳು
ಮಳೆಗಾಲಕ್ಕೆ ಅಳಿದಿವೆ
ಮತ್ತೆ ಹೊಸದಾಗಿ ಹುಟ್ಟಿವೆ.

ಜಗ ಮಾತ್ರ ಬದಲಾಗಲಿಲ್ಲ-
ನಾನು ಮತ್ತು ನೀನು
ಪ್ರೇಮದ ಉತ್ಕಟತೆಯು
ಎದೆಯ ಬಡಿತದ ಕಾರಣವೂ.

ನಾವೀಗ ಸಾಗಿ ಬಂದಿರುವೆವು ಬಹಳ ದೂರ
ಮುಪ್ಪಿನ ಕಡೆಗೆ
ನಿಧಾನ ಹೆಜ್ಜೆಗಳಲ್ಲಿ
ಸುಳಿವಿಲ್ಲದೆ ಬಸವಳಿಯುತ್ತಾ.

ಮೈ ಮರೆವಾಗಿದ್ದು
ಎಷ್ಟರ ಮಟ್ಟಿಗೆಂದರೆ
ದಾರಿ ಸೀಳಿದ್ದು
ದಾರಿಯು ಹೇಳಲಿಲ್ಲ
ನಮಗೂ ತಿಳಿಯಲಿಲ್ಲ

ಈಗ ದಡಗಳು ಎಷ್ಟು ದೂರ ತಲುಪಿವೆಯೆಂದರೆ
ನೋಟ ಬೆರೆಸಲಾಗದಷ್ಟು
ಕೊನೆಯ ಬಾರಿ ಪ್ರೇಮದಿಂದ ಆಲಂಗಿಸಲಾಗದಷ್ಟು-

ಈ ಪ್ರೇಮ
ವಿರಹ ಕವಿತೆಯಾಗಿ ಉಳಿಯುವಷ್ಟು!!

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)