ಪ್ರೀತಿಯ ಮಕ್ಕಳೆ,

ಇವತ್ತು ಮಕ್ಕಳ ದಿನಾಚರಣೆ, ನಿಮ್ಮ ದಿನ, ಚಾಚಾ ನೆಹರೂ ರವರ ಹುಟ್ಟಿದ ದಿನ. ಮಕ್ಕಳನ್ನು ಕಂಡರೆ ತುಂಬಾ ಇಷ್ಟಪಡುತ್ತಿದ್ದ, ಮಮತೆಯ ಮಳೆಗರೆಯುತ್ತಿದ್ದ ಚಾಚಾ ನೆಹರೂ ಅವರ ಹುಟ್ಟುಹಬ್ಬವನ್ನು ನಿಮ್ಮ ಖುಷಿಗಾಗಿ, ಸಂತೋಷಕ್ಕಾಗಿ, ನಿಮ್ಮ ದಿನವನ್ನಾಗಿ ಆಚರಿಸುವುದು ನಿಮಗೂ ಗೊತ್ತು. ಯಾವಾಗಲೂ ಗಂಭೀರವಾಗಿ ಕವಿತೆಗಳನ್ನು ಬರೆಯುವ ಸಂಸ್ಕೃತಿ ಚಿಂತಕರಾದ ಕೆ.ವಿ. ತಿರುಮಲೇಶ್ ಅವರು ನಿಮಗಾಗಿಯೇ ವಿಶೇಷವಾಗಿ ನಿಮ್ಮ ಮನಸ್ಸನ್ನು ಮುದಗೊಳಿಸುವ ಒಂದಷ್ಟು ಕವನಗಳನ್ನು ರಚಿಸಿದ್ದಾರೆ. ಆ ಕವನಗಳಿಗೆ ಚರಿತಾಅಕ್ಕ ಚಿತ್ರಗಳನ್ನು ಬಿಡಿಸಿದ್ದಾರೆ. ಇವನ್ನೆಲ್ಲ ಒಪ್ಪ ಓರಣವಾಗಿ ಸಿಂಗರಿಸಿದ ಕೆಂಡಸಂಪಿಗೆ ನಿಮಗಾಗಿ ನಳನಳಿಸುತ್ತಿದೆ.

ಎಷ್ಟಾನೆ
ಬೆಟ್ಟದ ಮೇಲಿಂದ ಎಷ್ಟಾನೆ ಬಂದಾವು
ಪುಟ್ಟ ನೀನೆಣಿಸಿದೆಯಾ

ಕಾಡಾನೆ ಊರಾನೆ ನೀರಾನೆ ಬಾರಾನೆ
ಎಷ್ಟಾನೆ ಬಂದಾವು ಎಷ್ಟಾನೆ ಹೋದಾವು
ಒಟ್ಟಾರೆ ಎಷ್ಟಾನೆ ದೇವರಾನೆ
ಪುಟ್ಟ ನೀನೆಣಿಸಿದೆಯಾ

ಪುಟು ಪುಟು ಪುಟ್ಟಾನೆ
ಧುಡು ಧುಡು ದೊಡ್ಡಾನೆ
ಒಂದಾನೆ ಎರಡಾನೆ ನನಗಾನೆ ನಿನಗಾನೆ
ಸೂರ್ಯದೇವರಿಂಗೆ ನೂರಾನೆ

ಹಿಂದೊಂದು ಮುಂದೊಂದು
ಆನೆ ಬಂದಾನೆ
ದುಂಡಾನೆ ಮೊಂಡಾನೆ
ಹಿಂಡು ಹಿಂಡಾನೆ

ದಪ್ಪನೆ ಕಿವಿಯಾನೆ
ಡೊಂಕು ಸೊಂಡಿಲ ಆನೆ
ಕಂಭದ ಕಾಲಾನೆ
ಗುಲಗುಂಜಿ ಕಣ್ಣಾನೆ

ಅಲ್ಲಿ ನೋಡಿದರಾನೆ
ಇಲ್ಲಿ ನೋಡಿದರಾನೆ
ಎಲ್ಲಿ ನೋಡಿದರಲ್ಲಿ
ಆನೆಯೆ ಆನೆ

ಘೀಳುಡುವಾನೆ
ಕಲ್ಮರ ಸೀಳಿಡುವಾನೆ
ತಾಳೆ ಬಾಳೆಗಳ ಹೂಳಿಡುವಾನೆ
ಕಾಲು ಹೂತರೆ ಘೋರ ಗೋಳಿಡುವಾನೆ

ಮದಕರಿ ನಾಯಕಾರ
ಮದ ಬಂದ ಆನೆ
ಎಚ್ಚಮನಾಯಕರ
ಮುದ್ದು ಮುದ್ದಾನೆ

ದೇವ ರಾಯರ ಯುದ್ಧ ಗೆದ್ದಾನೆ
ಸದ್ದಿಲ್ಲದೆ ಕಬ್ಬು ಮೆದ್ದಾನೆ
ಖುಶೀಬತಾನೆ ಮುಸೀಬತಾನೆ
ಹಳ್ಳಕ್ಕೆ ಬಿದ್ದರೆ ಒಂದು ಗುದ್ದಾನೆ

ದುರ್ಗದ ಆನೆ ಸ್ವರ್ಗದ ಆನೆ
ನಿಸರ್ಗದ ಆನೆ ವಿಸರ್ಗದ ಆನೆ
ಅರಮನೆ ಅಂಬಾರಿ ಹೊತ್ತು ಬರುವಾನೆ
ರಾಜಕುಮಾರಿಯ ಕರೆತರುವಾನೆ

ಅಚ್ಚ ಕನ್ನಡದಾನೆ
ಸ್ವಚ್ಛ ಕನ್ನಡದಾನೆ
ದೇಸಿ ಕನ್ನಡದಾನೆ
ಪರದೇಸಿ ಆನೆ

ನಮ್ಮೆಲ್ಲ ಕನಸುಗಳ ತುಂಬ ತುಂಬಾನೆ
ನಮ್ಮೆಲ್ಲ ನೆನಸುಗಳ ಪ್ರತಿಬಿಂಬ ಆನೆ
ಈಗೆಲ್ಲಿ ಆಗೆಲ್ಲಿ ಆನೆ ಬಂತಾನೆ
ಗಲ್ಲಿ ಗಲ್ಲಿಯ ನಮ್ಮ ಮಾಯಾ ಆನೆ

 

ಬೆಕ್ಕಿನ ಗೋಳು
ಬೆಕ್ಕಿನ ಮಾಡಿದಿರಾ ನನ್ನ
ಬೆಕ್ಕಿನ ಮಾಡಿದಿರಾ
ಮುದ್ದಿನ ಬೆಕ್ಕಲ್ಲ ಸೊಕ್ಕಿನ ಬೆಕ್ಕಲ್ಲ
ಬಿದ್ದರೆ ಬೆನ್ನಿಗೆ ಗುದ್ದಿನ ಬೆಕ್ಕು

ಬಿಸಿ ಬಿಸಿ ಹಾಲನು ನನ್ನೆದುರು ಇರಿಸಿ
ಮೂತಿಯನುರಿಸಿದಿರಾ
ಹಾಲೆಂದರೆ ಇನ್ನೆಂದಿಗು ನಾನು
ಭಯ ಪಡುವ ಹಾಗೆ ಮಾಡಿದಿರಾ

ಒಂಭತ್ತು ಜೀವಗಳ ಕತೆಯನು ಕಟ್ಟಿ
ಒಂಭತ್ತು ಸಲವೂ ಕೊಲಿಸಿದಿರಾ
ಎಷ್ಟೆತ್ತರದಿಂದ ಬಿದ್ದರು ಪುಟಿದೇಳುವೆನೆಂದು
ತಾರಸಿಯಿಂದ ಕೆಳ ದೂಡಿದಿರಾ

ಅಡ್ಡಬಂದರೆ ಭಾರೀ ಅಪಶಕುನವೆಂದು
ಜನರಲಿ ನಂಬಿಕೆ ಬರಿಸಿದಿರಾ
ಸರಿದಾರಿಯಲೆಂದೂ ನಾ ನಡೆಯದ ಹಾಗೆ
ಅಡ್ಡದಾರಿಯ ನನಗೆ ಹಿಡಿಸಿದಿರಾ

ಲಡ್ಡುಮಿಠಾಯಿ ಡಬ್ಬವನೆಲ್ಲ
ಅಟ್ಟದ ಮೇಲೆ ಇರಿಸಿದಿರಾ
ಏರುವ ಏಣಿಯ ದೂರಕೆ ಸರಿಸಿ
ಸುಮ್ಮಗೆ ನನ್ನ ಕುಣಿಸಿದಿರಾ

ದಂಡ ಕಮಂಡಲ ಕೈಯಲಿ ಹಿಡಿಸಿ
ಕಳ್ಳ ಸನ್ಯಾಸಿಯೆಂದು ಕರೆಸಿದಿರಾ
ಬೆಣ್ಣೆಯ ತೂಗಲು ಮಂಗನ ನೇಮಿಸಿ
ನನ್ನನೆ ಮಂಗ ಮಾಡಿದಿರಾ

ಮೀಸೆಗೆ ಬೆಣ್ಣೆಯ ಲೇಪಿಸಿ ನಾನೇ
ಕದ್ದವನೆಂದು ದೂರಿದಿರಾ
ಹಾಲಿನ ಪಾತ್ರೆಯ ಹೆಗ್ಗಣ ಕೆಡವಲು
ನನ್ನ ತಲೆಗೇ ಇಕ್ಕಿದಿರಾ

ಬೀದಿಯ ನಾಯನು ಮನೆಯೊಳಗಿರಿಸಿ
ಅತಿ ಮುದ್ದು ತೋರಿದಿರಾ
ಮನೆಯ ಬೆಕ್ಕನು ಹೊರಗಡೆ ನೂಕಿ
ಕದವಿಕ್ಕಿ ಚಿಲಕವ ಹಾಕಿದಿರಾ

ಸ್ವರ್ಗದ ಬಾಗಿಲ ದಾರಂದದಲ್ಲಿ ನಾ
ತಲೆಗೆ ಮೆಟ್ಟುವ ಕತೆ ಕಟ್ಟಿದಿರಾ
ಶ್ವಾನ ಯಜಮಾನರ ಪುಣ್ಯವ ಬೊಗಳುತ
ಹೊಗಳುತ ಬರುವುದ ಕಂಡಿದಿರಾ

ಮಾರ್ಜಾಲ ಕಂಠದ ಮಧುರ ಸಂಗೀತಕ್ಕೆ
ಬೆಲೆಯೇ ಇಲ್ಲದೆ ಮಾಡಿದಿರಾ
ಶ್ವಾನಧ್ವನಿಯೇ ನಿಮ್ಮ ಆವೇಶ
ಕಾಲಾಯ ತಸ್ಮೈ ಎನ್ನುವಿರಾ

ಅಂತೂ ಗಲಾಟೆಯಲಿ ನಿದ್ದೆಯೆ ಇಲ್ಲ
ಇನ್ನೆಲ್ಲಿ ಬೇಸಿಗೆಯ ಸುಖಸ್ವಪ್ನ
ಆದುದರಿಂದಲೆ ಹಗಲು ತೂಕಡಿಕೆ
ಹಟಯೋಗ ಮತ್ತು ಏಕೋ ಧ್ಯಾನ

 

ಗುಮ್ಮರೆ ಗುಮ್ಮ
ಗುಮ್ಮ ಕೂತಿರುವುದು ನಮ್ಮ ಗಿಳಿಬಾಗಿಲಲ್ಲಿ
ಗುಮ್ಮರೆ ಗುಮ್ಮ
ಛೂ ಎಂದರೆ ಹೋಗುವುದಿಲ್ಲ
ಬಾ ಎಂದರೆ ಬರುವುದು ಇಲ್ಲ
ಸತ್ತಂತಿದೆ ಮಾತಾಡದ ಗುಮ್ಮ
ಗುಮ್ಮರೆ ಗುಮ್ಮ

ಎಲ್ಲರ ಜತೆ ನಾ ಎಲ್ಲರಂತಿರಲು
ಪೇಟೆಪಟ್ಟಣಕೆ ತೆರಳಿದರೆ
ಬೆನ್ನು ಬಿಡದ ಜಂಗಮ ಗುಮ್ಮ
ಹಿಂಬಾಲಿಸುವುದು ಮುಂಬಾಲಿಸುವುದು
ಕಿವಿ ಕೊರೆದು ನನ್ನ ಸತಾಯಿಸುವ ಗುಮ್ಮ
ಗುಮ್ಮರೆ ಗುಮ್ಮ

ಊರು ಸಾಕಾಯಿತು ಕಾಡೇ ಸರಿಯೆಂದು
ಕಾಡಿಗೆ ಹೋದರೆ ವನಗುಮ್ಮ
ಘೀಳಿಡುವುದು ಊಳಿಡುವುದು
ಕತ್ತಲ ಮರೆಯಲಿ ಕಾಡಿಸಿ ಪೀಡಿಸಿ
ಊರಿಗೇ ಕಾಲು ಕೀಳಿಸುವ ಗುಮ್ಮ
ಗುಮ್ಮರೆ ಗುಮ್ಮ

ಜಳಕವಾಡಲೆಂದು ನೀರಿಗೆ ಇಳಿದರೆ
ತೆರೆಯಾಗಿ ಹೊಡೆಯುವುದು ಜಲಗುಮ್ಮ
ಮುಳುಗಿಸಿಯೇ ಸರಿಯೆಂದು ಬೆದರಿಸಿಬಿಡುವುದು
ಕ್ಷಣದಲ್ಲೆ ನನ್ನ ದಡ ಸೇರಿಸುವ ಗುಮ್ಮ
ಗುಮ್ಮರೆ ಗುಮ್ಮ

ವಿದ್ವತ್ ಸಭೆಯಲಿ ನಾ ಮಾತಾಡಹೊರಟರೆ
ಗುಸುಗುಸು ಎನುವುದು ತುಟಿಗುಮ್ಮ
ಸರಿಯಾದ ಮಾತಿಗೆ ನಕ್ಕು ತಲೆದೂಗದೆ
ತಪ್ಪು ಮಾತಿಗೆ ಚಪ್ಪಾಳೆ ತಟ್ಟುವ ಗುಮ್ಮ
ಗುಮ್ಮರೆ ಗುಮ್ಮ

ಹವಾಸೇವನೆಗೆ ನಾ ಸುಮ್ಮಗೆ ನಡೆದರೆ
ಬಟಾಬಯಲಲಿ ನೆಲಗುಮ್ಮ
ಮಾಯಾಬಜಾರುಗಳನೆಬ್ಬಿಸಿ ಉಬ್ಬಿಸಿ
ದಾರಿ ತಪ್ಪಿಸುವುದು ಇರುಳೆಲ್ಲಾ ಗುಮ್ಮ
ಗುಮ್ಮರೆ ಗುಮ್ಮ

ಅಗತ್ಯ ಕಾರ್ಯಕೆ ಮನೆಯಿಂದ ಹೊರಟರೆ
ಮಳೆಗರೆಯುವುದು ಆಕಾಶಗುಮ್ಮ
ಆಲಿ ಕಲ್ಲೇನು ಬರಿ ಕಲ್ಲೇನು
ಹೊಡೆದೇ ಬಿಡುವುದು ರಪ ರಪ ಗುಮ್ಮ
ಗುಮ್ಮರೆ ಗುಮ್ಮ

ಗೀತೆಯೊಂದನು ನಾ ರಚಿಸಲು ಕೂತರೆ
ಅಕ್ಷರ ನುಂಗುವುದಕ್ಷರಗುಮ್ಮ
ಪದಗಳ ಭಂಜಿಸಿ ವ್ಯಾಕರಣ ಉಲ್ಲಂಘಿಸಿ
ಅರ್ಥ ಕಿತ್ತಾಕುವ ಅನರ್ಥ ಗುಮ್ಮ
ಗುಮ್ಮರೆ ಗುಮ್ಮ

ಗತಿಯಿಲ್ಲದೆ ನಾ ಬ್ರಹ್ಮನ ಮರೆಹೊಕ್ಕರೆ
ಅಹಂ ಬ್ರಹ್ಮಾಸ್ಮಿ ಎನ್ನುವ ಗುಮ್ಮ
ಸಂಸ್ಕೃತ ಕನ್ನಡ ಗೊತ್ತಿರೋ ಗುಮ್ಮ
ಇಂಗ್ಲಿಷ್‌ನಲ್ಲೂ ಐ ಆಮ್ ಗುಮ್ಮ
ಬ್ರಹ್ಮನಿಗಿಂತಲು ಮೊದಲಿದ್ದ ಗುಮ್ಮ
ಅನಾದಿ ಗುಮ್ಮ ಅನಂತ ಗುಮ್ಮ
ಹೀಗಾದರೆ ನಮ್ಮ ಗತಿಯೇನು ಗುಮ್ಮ
ಗುಮ್ಮರೆ ಗುಮ್ಮ

 

ಪಂಪ್ಕಿನ್
ಮಕ್ಕಳು ಬಂದು ಕೇಳುತ್ತಾರೆ
ಹಾಲೋವಿನ್ ದಿವಸ
ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?
ಪಂಪ್ಕಿನ್ ಅವರ ಕೈಯಲ್ಲಿ

ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆ
ಅದು ಸುಮ್ಮಗಿದೆಯೆಂದರ್ಥವಲ್ಲ
ಸುಮ್ಮಗೆ ಇರಬೋದು ಬಿಮ್ಮಗೆ ಇರಬೋದು
ಅದರೊಳಗೊಂದು ಗುಮ್ಮ ಇರಬೋದು

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆ
ಅದರೊಳಗೊಂದು ಬುದ್ಧನೆ ಇರಬೋದು
ಬುದ್ಧನಿರಬಹುದು ಶುದ್ಧನಿರಬೋದು
ಕಣ್ಣಿಗೆ ಕಾಣದ ಮಹಾಯುದ್ಧವೆ ಇರಬೋದು

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆ
ಅದರೊಳಗೊಂದು ಬೂತ ಇರಬೋದು
ಬೂತವಿರಬಹುದು ಕೆಂಬೂತವಿರಬೋದು
ಭೂತಭವಿಷ್ಯಗಳ ಸರಮಾಲೆ ಇರಬೋದು

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆ
ಅದರೊಳಗೇನೋ ಅರ್ಥವಿರಬೋದು
ಅರ್ಥವಿರಬೋದು ಅದು ಅರ್ಧ ಇರಬೋದು
ಇನ್ನುಳಿದರ್ಥ ಗರ್ಭವಿರಬೋದು

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆ
ಅದು ಯೋಚಿಸೋಲ್ಲವೆಂದರ್ಥವಲ್ಲ
ಯೋಚಿಸಿ ಯೋಚಿಸಿ ಹಣ್ಣಾಗಿರಬೋದು
ಕತ್ತಿಗೆ ಕಾಯುತ್ತಿರಬೋದು

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆ
ಅದು ಸುಮ್ಮಗೆ ಇದೆಯೆಂದರ್ಥವಲ್ಲ
ಕೀಟಗಳದನು ಕೊರೀತಿರಬೋದು
ಹೆಗ್ಗಣವೊಂದು ಕೆರೀತಿರಬೋದು

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆ
ನಾವೂ ಸುಮ್ಮಗೆ ಇರಬೇಕಿಲ್ಲ
ಯಾತಕೆ ಪಂಪ್ಕಿನ್ ಎಲ್ಲಿಯ ಪಂಪ್ಕಿನ್
ಎಂದೆಲ್ಲಾ ಚಿಂತಿಸಬೋದು

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

ಯಾರಿದು ಕರಡಿ ಯಾರಿದು ತೋಳ
ಕುರುಬ ಯಾರು ಕತ್ತೆ ಕಿರುಬ ಯಾರು
ನೀವಿಲ್ಲಿರಿಸಿದ ಮುದ್ದಿನ ಪಂಪ್ಕಿನ್‌ನ
ಕದ್ದವರ‍್ಯಾರು ಈ ಹಾಲೋವಿನ್ ದಿವಸ

ಮಂತ್ರ ಬೇಕೋ ನಿಮಗೆ
ತಂತ್ರ ಬೇಕೋ?

 

ಇರುವೆ ಸಾಲು
ಎಲ್ಲಿಂದೆಲ್ಲಿಗೊ ಹೊರಟಿದೆ ಒಂದು
ಪುಟ್ಟಿರುವೆಗಳ ಸಾಲು
ಸಾಲಿನ ನಡುವೆ ಕೆಲವಿರುವೆಗಳು
ಸಾಗಿಸುತಿವೆಯೊಂದು ಅಕ್ಕೀಕಾಳು

ಪುಟ್ಟವೋ ಅಷ್ಟು ಪುಟ್ಟವು ಅಲ್ಲ
ನಾ ಭೂತಗನ್ನಡಿ ಹಿಡಿದು ಕೂತಿರುವೆ
ಕಟ್ಟು ಮಸ್ತಿನ ಆಳುಗಳೇ ಸರಿ
ಆ ಅಕ್ಕೀಕಾಳೂ ಗಜಗಾತ್ರ

ಕೆಲವಿರುವೆಗಳು ವಾಪಸು ಬರುತಿವೆ
ಅದೇನೊ ಸಂದೇಶವ ಹೊತ್ತು
ಧಾವಂತದಲ್ಲೂ ಅರಬರ ಹಾಗೆ
ನೀಡುತ್ತವೆ ಕೆನ್ನೆಗೆ ಮುತ್ತು

ದಾರಿ ತುಂಬಾ ಬೆಟ್ಟ ಕಣಿವೆಗಳು
ದೈತ್ಯಾಕಾರದ ಬಂಡೆಗಳು
ಏರಿಯೊ ಇಳಿದೋ ಸುತ್ತು ಬಳಸಿಯೊ
ಅಂತೂ ದಾರಿ ಸಾಗಲೆ ಬೇಕು

ನನಗೋ ನೆನಪು ನಾವೂ ಹೀಗೆ
ಗಂಟುಮೂಟೆಗಳ ಕಟ್ಟಿ
ಎತ್ತಣಿಂದೆತ್ತ ರಾತ್ರಿಗೆ ಮೊದಲೆ
ಊರಿಂದೂರಿಗೆ ಸಾಗಿದ ಹಾಗೆ

ಬ್ರಹ್ಮನದೊಂದು ದಿನ
ಮನುಷ್ಯರ ಯುಗವಂತೆ
ನಮ್ಮೊಂದು ದಿನ ಈ ಇರುವೆಗಳಿಗೆಷ್ಟು ದಿನ
ದಿನಕ್ಕೆಷ್ಟು ಗಂಟೆ?

ಕಂಡಿದ್ದೆ ನಾನು ಇನ್ನೊಂದು ದಿನ
ಈ ಇಂಥದೆ ಒಂದು ಸಾಲು
ತಮ್ಮಲ್ಲೊಬ್ಬನ ಕಳೇಬರ ಹೊತ್ತು
ಇವು ಸಾಗಿಸುವಂಥ ರೀತಿ

ಸದ್ದು ಗದ್ದಲವಿಲ್ಲ ಅದೇನು ಯೋಚನೆಯೊ
ಮೌನವೆಂದರೆ ಸ್ಮಶಾನ ಮೌನ!
ಓ ದೇವರೆ! ತೃಣಮಪಿ ನಚಲತಿ ತೇನ ವಿನಾ
ತೇನ ವಿನಾ

ಎಲ್ಲೋ ಬಿರುಗಾಳಿ ಎಲೆಗಳ ಸದ್ದು
ಈ ಇರುವೆಗಳಿನ್ನೂ ನಡುದಾರಿ
ಹೊಡೆದರೆ ಮಳೆ ಈ ಜೀವಗಳ ಗತಿಯೇನು
ನಾನಾದರು ಏನೂ ಮಾಡುವಂತಿಲ್ಲ

ಅಕ್ಕಿಯಾರಿಸುವಾಗ ಕೆಳಗೊಂದು ಬಿದ್ದರೆ
ಅದನಂತೆಯೆ ಬಿಟ್ಟು ಬಿಡೋಣ
ಇಷ್ಟೇ ನಾವು ಮಾಡಬಹುದಾದ್ದು
ಇಷ್ಟೇ ಬಹುಶಃ ನೀನು ಸಹಾ

 

ಯಾರೀ ಗುಮ್ಮ
ಯಾರೀ ಗುಮ್ಮ
ಮುಗುಮ್ಮ

ಸುಮ್ಮನೆ ಕಂಬಳಿ ಹೊದ್ದು
ಕೋಟು ಬೂಟುಗಳ ತೊಟ್ಟು
ಬೆತ್ತಲು ತಿರುಗುತ
ಕತ್ತಲು ಸುತ್ತುತ

ಪಿರಿ ಪಿರಿ ಮಾಡುತ
ಮಾತಾಡದೆ ಮೌನವಾಗಿರುತ
ಯಾವಾಗಲು ಪ್ರಶ್ನೆ ಕೇಳುತ
ಯಾವುದಕೂ ಉತ್ತರ ಕೊಡದಿರುತ

ತನಗೆ ತಾನೇ ನಗುತ
ಅಥವಾ ಎಂದೂ ನಗದಿರುತ
ದೊಡ್ಡಕೆ ಆಕಳಿಸುತ
ಸುಕಾಸುಮ್ಮನೆ ಅಳುತ

ಗ ಗಬ ತಿನುತ
ತನಗೇ ಬೇಕೆನುತ
ಢರ್ರನೆ ತೇಗುತ
ಹೊಟ್ಟೆ ಬೆಳೆಸಿಕೊಂಡು ಬೀಗುತ

ಬಾಗುತ ಸಾಗುತ
ದಾರಿ ಕೇಳಿದವರ ದಾರಿ ತಪ್ಪಿಸುತ
ಥಟ್ಟನೆ ಕಾಣಿಸುತ
ಅಷ್ಟೇ ಬೇಗನೆ ಮಾಯವಾಗುತ

ಹೆಂಗಸು ಮಕ್ಕಳ ಪೀಡಿಸುತ
ಹಾಲಿನ ಪಾತ್ರವ ಕೆಡವುತ
ಮಂಡಿ ಮನೆಯಲಿ ಕಾಯುತ
ತಿಂಡಿ ಪೋತ ಮಹಾ ಕಬೂತ

 

ಪುಟ್ಟನ ಕೈಯಲಿ
ಪುಟ್ಟನ ಕೈಯಲಿ ಗುಮ್ಮ ಸಿಕ್ಕಿದರೆ
ಗುಮ್ಮ ಫಡ್ಚ
ಪುಟ್ಟನ ಛೂಮಂತ್ರ ತುಂಬಾ ಸುಭದ್ರ
ಹಾಕುವುದು ದಿಗ್ಬಂಧ

ಆಮೇಲೆ ಗುಮ್ಮ ಆಚೆಗು ಹೋಗದೆ
ಈಚೆಗು ಬರದೆ
ಚಡಪಡಿಸುವುದು ಮೊರೆಯಿಡುವುದು
ಬಿಟ್ಟುಬಿಡೋ ನನ್ನ ಪುಟ್ಟ

ಇನ್ನೆಂದಿಗು ನಿಮ್ಮೂರ
ತಂಟೆಗೆ ಬರೆನು
ಮನೆಗುಮ್ಮನಾದರು ನೆಲಗುಮ್ಮನಾದರು
ಬೆಟ್ಟಕೆ ಹೋಗಿ ತಲೆ ಮರೆಸಿಕೊಳ್ಳುವೆನು

ಪುಟ್ಟ ಅನ್ನುವನು: ನಿನ್ನ ಮಾತನು
ಎಂದಿಗು ನಾ ನಂಬಲಾರೆ
ಬರಕೊಡು ಹಾಗಿದ್ರೆ ಮುಚ್ಚಳಿಕೆ
ಛಾಪು ಕಾಗದದಲ್ಲಿ ಸಹಿ ಹಾಕಿ

ಮುಚ್ಚಳಿಕೆ ಬರೆದು ಸೀಲು ಮಾಡಿ
ತಾಯಿತದಲ್ಲಿರಿಸಿ ಗುಮ್ಮ ನೀಡುವುದು
ಆಮೇಲೆ ತಾನು ಜೀವವಿದ್ದರೆ
ಬೇಡಿ ತಿನುವೆನೆಂದು ಓಡಿಹೋಗುವುದು

ಆದರು ಕೆಲವು ಸಲ ಮಸುಕಿನ ಸಮಯ
ಗವಾಕ್ಷಿಯಲೊಂದು ರೂಪ
ಕಂಡರೆ ಅಚ್ಚರಿಯಿಲ್ಲ ಅಥವಾ
ಬೇಲಿಯ ಮೇಲೊಂದು ಪಾಪ

ಯಾರೇನೂ ಬೆದರುವ ಕಾರಣವಿಲ್ಲ
ಗುಮ್ಮ ಸಹಿ ಹಾಕಿದ ಮುಚ್ಚಳಿಕೆಯಿದೆ
ಅದು ತಾಯಿತದೊಳಗಿದೆ
ಪುಟ್ಟನ ಕೈಯಲಿ ಭದ್ರವಾಗಿದೆ

 

ಪಾತರಗಿತ್ತಿ
ಪಾತರದವಳೆ ಪಾತರಗಿತ್ತಿ
ಹೂವಿಂದೂವಿಗೆ ಹಾರುವಾಕಿ
ರಂಭೆ ಊರ್ವಶಿ ಮೇನಕಿ
ಏನೀ ಬಣ್ಣದ ಶೋಕಿ

ನಿಂತಲಿ ನಿಲ್ಲದೆ ಆಚಿಂದೀಚೆಗೆ
ಸುಳಿಯುವಿ ನೀ ಬೀಳುವಿ ಜೋಕಿ
ಹೂವಿನೊಳೆಲ್ಲೋ ಗಿಡದಲ್ಲೆಲ್ಲೋ
ಸುಮ್ಮನೆ ಸಿಗಹಾಕಿ

ಹಿಡಿಬೇಕೆಂದರು
ಹಿಡಿಯಲು ಸಿಗದಾಕಿ
ಹಿಡಿದು ಬಿಟ್ಟರೆ
ಕೈಯಲೇನೋ ಬಾಕಿ

ಕೈಯಲಿ ಬಾಕಿ ಮೈಯಲಿ ಬಾಕಿ
ಮನಸಿನಲೂ ಸಹ ಬಾಕಿ
ನಮ್ಮ ತೋಟದಲಿರೆ ಪಾತರಗಿತ್ತಿ
ಸ್ವರ್ಗನರಕಗಳ ಬಿಸಾಕಿ

 

ಕಣ್ಣು
ಕಣ್ಣು ಕಣ್ಣು ಎಷ್ಟೊಂದು ಕಣ್ಣು

ಸೈಕಲಿಗೊಂದೇ ಕಣ್ಣು
ಸೈಕ್ಲೋಪಿಗು ಒಂದೇ ಕಣ್ಣು
ಮೀನಿಗೆ ಎರಡು ಕಣ್ಣು
ಮೀಂಚುಳ್ಳಿಗು ಎರಡು ಕಣ್ಣು
ಬೆಕ್ಕಿಗು ನಾಯಿಗು ಕುದುರೆಗು ಆನೆಗು
ಮನುಷ್ಯರಿಗೆಲ್ಲಾ
ಎರಡೆರಡೇ ಕಣ್ಣು

ತಾಳೆ ಹಣ್ಣಿಗೆ ಮೂರು ಕಣ್ಣು
ಶಿವನಿಗು ಮೂರು ಕಣ್ಣು
ಗಂಡಭೇರುಂಡಕೆ ನಾಲಕು ಕಣ್ಣು
ದೋಸೆಗೆ ಸಾವಿರ ಕಣ್ಣು
ಅಂತರಿಕ್ಷಕೆ ಲಕ್ಷಾಂತರ ಕಣ್ಣು

ಒಳಗಣ್ಣು ಹೊರಗಣ್ಣು
ಒಳಗೊಂದು ಕಣ್ಣು
ಹೊರಗೊಂದು ಕಣ್ಣು
ಎಷ್ಟೊಂದು ಕಣ್ಣು
ಋಷಿಮುನಿ ಜನಕೆ ಅಂತರಂಗದ ಕಣ್ಣು
ತುಬ್ಬುಗಾರರಿಗೆ ಎಲ್ಲೆಲ್ಲು ಕಣ್ಣು
ಇಂದ್ರನಿಗಾದರೆ ಮೈಯೆಲ್ಲಾ ಕಣ್ಣು
ಚಂದ್ರನಿಗೋ ಸೂರ್ಯನೆ ಕಣ್ಣು
ಸೂರ್ಯನಿಗಿಲ್ಲ ಇನ್ನೊಂದು ಕಣ್ಣು
ಸೂರ್ಯನಿಗವನೆ ಕಣ್ಣು

 

ಅವಕಾಶ
ಎಲ್ಲರ ಊಟ ಆಗೇ ಹೋಯ್ತು
ನನ್ನವಕಾಶ ಯಾವಾಗ ಬರತ್ತೆ
ಎನ್ನುತ್ತಾನೆ ಪುಟ್ಟ
ಬರತ್ತೆ ಬರತ್ತೆ ಸುಮ್ಮನಿರೀಗ
ಎನ್ನುತ್ತದೆ ದೈವ

ಎಲ್ಲರ ಪಾಠ ಆಗೇ ಹೋಯ್ತು
ನನ್ನವಕಾಶ ಯಾವಾಗ ಬರತ್ತೆ
ಎನ್ನುತ್ತಾನೆ ಪುಟ್ಟ
ಬರತ್ತೆ ಬರತ್ತೆ ಸುಮ್ಮನಿರೀಗ
ಎನ್ನುತ್ತದೆ ದೈವ

ಎಲ್ಲರ ನೌಕರಿ ಆಗೇ ಹೋಯ್ತು
ನನ್ನವಕಾಶ ಯಾವಾಗ ಬರತ್ತೆ
ಎನ್ನುತ್ತಾನೆ ಪುಟ್ಟ
ಬರತ್ತೆ ಬರತ್ತೆ ಸುಮ್ಮನಿರೀಗ
ಎನ್ನುತ್ತದೆ ದೈವ

ಎಲ್ಲರು ಮನೆಮಠ ಕಟ್ಟಿಸಿ ಆಯ್ತು
ನನ್ನವಕಾಶ ಯಾವಾಗ ಬರತ್ತೆ
ಎನ್ನುತ್ತಾನೆ ಪುಟ್ಟ
ಬರತ್ತೆ ಬರತ್ತೆ ಸುಮ್ಮನಿರೀಗ
ಎನ್ನುತ್ತದೆ ದೈವ

ಎಲ್ಲರು ಮದ್ವೆ ಮಾಡ್ಕೊಂಡಾಯ್ತು
ನನ್ನವಕಾಶ ಯಾವಾಗ ಬರತ್ತೆ
ಎನ್ನುತ್ತಾನೆ ಪುಟ್ಟ
ಬರತ್ತೆ ಬರತ್ತೆ ಸುಮ್ಮನಿರೀಗ
ಎನ್ನುತ್ತದೆ ದೈವ

ಎಲ್ಲರು ಕಾರು ಕೊಂಡ್ಕೊಂಡಾಯ್ತು
ನನ್ನವಕಾಶ ಯಾವಾಗ ಬರತ್ತೆ
ಎನ್ನುತ್ತಾನೆ ಪುಟ್ಟ
ಬರತ್ತೆ ಬರತ್ತೆ ತಾಳ್ಮೆ ತಾಳ್ಮೆ
ಎನ್ನುತ್ತದೆ ದೈವ

ಎಲ್ಲರು ವೋಟು ಚಲಾಯಿಸಿ ಆಯ್ತು
ನನ್ನವಕಾಶ ಯಾವಾಗ ಬರತ್ತೆ
ಎನ್ನುತ್ತಾನೆ ಪುಟ್ಟ
ಲಿಸ್ಟ್ ನಲಿ ನಿನ್ನ ಹೆಸರೇ ಇಲ್ಲ
ಹೊರಟೋಗಯ್ಯ ಎನ್ನುತ್ತದೆ ದೈವ

 

ಕುಂಬಳ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ?

ಬೂದಿಗೊಂದು ಬೂದುಗುಂಬಳ
ಕಾಸಿಗೊಂದು ಕಾಸಿಗುಂಬಳ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ

ಕಂಬಳ ಓಡದ ಕಂಬಳಿ ಹೊದೆಯದ
ಉಂಬುಳು ಕಚ್ಚದ ಸಿಂಬಳ ಸುರಿಸದ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ?

ಕಳ್ಳ ಕುಂಬಳ ಸುಳ್ಳ ಕುಂಬಳ
ಸಿಂಡರೆಲ್ಲಳ ಮಾಯಾಗುಂಬಳ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ?

ಹಾದಿಗುಂಬಳ ಬೀದಿಗುಂಬಳ
ಸಂತೆಗುಂಬಳ ಸೊಂತಗುಂಬಳ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ?

ಆತ್ತಗುಂಬಳ ಇತ್ತಗುಂಬಳ
ಯಾರಿಗಾಗಿ ಸತ್ತಗುಂಬಳ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ?

ಹಾವಗುಂಬಳ ಭಾವಗುಂಬಳ
ರಾತ್ರಿ ತೋಟ ಕಾವಗುಂಬಳ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ?

ಆದಿಗುಂಬಳ ಅನಾದಿಗುಂಬಳ
ಬ್ರಹ್ಮಗುಂಬಳ ಬ್ರಹ್ಮಾಂಡಗುಂಬಳ
ಬೂದುಗುಂಬಳ ಕಾಸಿಗುಂಬಳ
ಏನು ಸಂಬಳ ನಿಮಗೆ?

 

ಪುಟ್ಟನ್ ಕೆಟ್ಟನ್
ನಮ್ಮ ಕೇರಿಯ ಪುಟ್ಟನ್
ಈಚೆಗೆ ತುಂಬ ಕೆಟ್ಟನ್
ಹಾಲೋವಿನ್ ದಿವಸವನ್
ಪುಂಡರ ಜತೆ ಸೇರಿ ಅವನ್
ಹೀಗೆ ಆಚರಿಸುವನ್

ಹುಲಿಯಾಗಿ ಬರುವನ್
ಸುತ್ತಿ ಬೀದಿ ತಿರುವನ್
ಜನರನಚಾನಕ ಬೆದರಿಸುವನ್
ಯಾರೋ ಎಂದರೆ ಗುರ್ರಮ್ ಗುರ್ರಮ್
ಹಲ್ಲು ಮಾತ್ರ ಮರೆತಿರುವನ್

ತೋಳವಾಗಿ ನುಗ್ಗುವನ್
ಬಾಳೆ ಹಣ್ಣಿನ ತೋಟವನ್
ಕುಯ್ಯೋ ಕುಯ್ಯೋ ಕೂಗುವನ್
ಯಾರೋ ಎಂದರೆ ಅಯ್ಯೋ ಅಯ್ಯೋ
ಬಾಲ ಮಾತ್ರ ಮರೆತಿರುವನ್

ಬೆಕ್ಕಾಗಿ ಅಟ್ಟವನ್
ಹತ್ತಿ ಏನೊ ಹುಡುಕುವನ್
ಕರ್ರ್ ಕರ್ರ್ ಸದ್ದನು ಮಾಡುವನ್
ಯಾರೋ ಎಂದರೆ ಮಿಯಾಂ ಮಿಯಾಂ
ಮೀಸೆ ಮಾತ್ರ ಮರೆತಿರುವನ್

ಊಟಕೆ ಬಾರೊ ಪುಟ್ಟನ್ ಎಂದರೆ
ಓಡೋಡಿ ಬರುವನ್ ಪುಟ್ಟನ್
ಎಲ್ಲೋಗಿದ್ದಿಯೊ ಪುಟ್ಟನ್ ಎಂದರೆ
ಪುಟ್ಟನ್? ಯಾರು ಪುಟ್ಟನ್?
ಪುಟ್ಟನ್ ಘಟ್ಟ ಹತ್ತಿದನ್
ನಾ ವೇಷದ ಪುಟ್ಟನ್ ಎನುವನ್!
ಅಡ್ಡಿಯಿಲ್ಲ ಪುಟ್ಟನ ಊಟವನ್
ನಾನೆ ಮಾಡುವೆನ್!

 

ಮಾಯಾ ಕುದುರೆ

ಪುಟ್ಟನಿಗೊಂದು ಮಾಯಾ ಕುದುರೆ
ಎಲ್ಲಿಂದಲೊ ಏನೋ ಸಿಕ್ಕಿಬಿಟ್ಟಿದೆ
ಹೆಂಗೆ ಓಡಿಸ್ತಾನೆ ನೋಡಿದಿರಾ

ಬೆಟ್ಟ ಕಣಿವೆ ಲೆಕ್ಕಕ್ಕಿಲ್ಲ
ಹಳ್ಳ ಕೊಳ್ಳ ಒಂದೇ ಎಲ್ಲ
ಇಳಿಸುತ್ತಾನೆ ಏಳು ಸಮುದ್ರ
ಏಳಿಸುತ್ತಾನೆ ಎಂಟೂ ತೀರ

ಗೊಂಡಾರಣ್ಯಗಳ ನುಗ್ಗಿಸುತಾನೆ
ಬ್ರಹ್ಮಾಂಡಗಳ ಬಗ್ಗಿಸುತಾನೆ
ನಾಕ ನರಕಗಳ ನೂಕಿಸುತಾನೆ
ಸ್ವರ್ಗಕೆ ಲಗ್ಗೆ ಹಾಕಿಸುತಾನೆ

ದಿಗಂತದಾಚೆಗೆ ಆತನ ಕಣ್ಣು
ಚಂದ್ರನೂರಿಗೂ ಹೊರಿಸುವ ಮಣ್ಣು
ಕುದುರೆಗೆ ಕುಡಿಸಿ ತಾಜಾ ಇಬ್ಬನಿ
ಏರಿದವನೇ ಮಹಮ್ಮದ್ ಘಜನಿ

ಜನ ಬೆರಗಿಂದ ಕಾಯುತಿದಾರೆ
ಎಲ್ಲಿ ಪುಟ್ಟ ಎಲ್ಲಿ ಕುದುರೆ
ಕಬ್ಬಿನ ತೋಟದಿ ಕಂಡವರಿದ್ದಾರೆ
ಬಾಳೆಯ ತೋಟದಲು ನೋಡಿದವರಿದ್ದಾರೆ

ಬಾಳೆಗೊನೆಯ ಹೂವಿನ ಒಳಗೆ
ಮಧುವನು ಕದಿಯುವ ಆತುರದಲ್ಲಿ
ಪುಟ್ಟನು ಕುದುರೆಯು ಸಿಕ್ಕಿಬಿದ್ದಿದ್ದಾರೆ
ಬಾಳೆಗೊನೆಯ ಹೂವಿನಲಿ

ಯಾರಾದರು ಹೋಗಿ
ಸಂಜೆಯ ಮೊದಲೆ
ಹೂವನು ಕಿತ್ತು ಬಿಡಿಸದೆ ಇದ್ದರೆ
ಮಾಯಾ ಪುಟ್ಟ ಮಾಯಾ ಕುದುರೆ!

 

ಜಗಳ
ಕಂಟ ಪುಚ್ಚೆ ಮಂಗು ಪುಚ್ಚೆ
ಬೆಳಗಿನಿಂದಲೂ ರಣಾರಣ
ಪ್‌ರ್ರ್ ಎನ್ನುತ್ತವೆ ಗ್‌ರ್ರ್ ಎನ್ನುತ್ತವೆ
ಬೀಳುವಂತೆ ಹೆಣ

ಏನಪಾತಂದರೆ ಹಾತೆಯೊಂದು
ಇಬ್ಬರ ಗುರಿಯಾಗಿದೆ
ಒಂದು ಹೊಂಚು ಹಾಕುತಿದ್ದುದ
ಇನ್ನೊಂದು ಹಿಡಿದು ನುಂಗಿದೆ

ಹಾತೆಗೋಸುಗ ಜಗಳವೆ
ತೋಟ ತುಂಬ ಇಲ್ಲವೆ
ನಿಮಗಂತಾನೆ ಬೆಳೆಸಿದ್ದೇವೆ
ಹುಳ ಹುಪ್ಪಟೆ ಕೂಡ ಅವೆ

ಯಾರು ಯಾವುದ ಹಿಡಿದರೇನು
ಯಾರು ಹಿಡಿದರೊ ಅವರಿಗೆ
ಮಾಡುವ ಮೊದಲೆ ಗೊತ್ತಿದೆಯೇನು
ಯಾವ ಊಟ ಯಾರಿಗೆ

ಮಿಯಾಂ ಅಂತದೆ ಮಂಗು
ಮಿಯಾಂ ಅಂತದೆ ಕಂಟ
ಒಂದು ಮಿಯಾಂ ಹೌದು
ಇನ್ನೊಂದು ಮಿಯಾಂ ಅಲ್ಲ

ಯಾವ ಮಿಯಾಂ ಹೌದು ಮತ್ತು
ಯಾವ ಮಿಯಾಂ ಅಲ್ಲ
ದೇವರಿಗಾದರು ಗೊತ್ತಿದೆಯೇ
ನಮಗಂತೂ ಇಲ್ಲ

 

ಎತ್ತಿಗೆ ಬಂದರೆ ಜ್ವರ
ಎತ್ತಿಗೆ ಬಂದರೆ ಜ್ವರ
ಕೋಣನಿಗ್ಯಾಕೋ ಬರೆ?

ಕೋಣನ ಬೆನ್ನು ಹರವಾಗೈತೆ
ಅಲ್ದೆ ಚರ್ಮ ದಪ್ಪಾಗೈತೆ
ಅದಕ್ಕೇ ಬರೆ ಕೋಣನಿಗೆ
ಎತ್ತಿಗೆ ಬಂದರು ಜ್ವರ

ಪುಟ್ಟನು ಕದ್ದರೆ ಲಡ್ಡು
ಕಿಟ್ಟನಿಗ್ಯಾಕೋ ಗುದ್ದು?

ಆಮೇಲೇಳ್ತೀನೀಗ
ನಿದ್ದೆ ಮಾಡ್ಬೆಕು ಹೊದ್ದು!

 

ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ
ಗವಿಯಲಿ ಯಾರು ಬಾವಿಲಿ ಯಾರು
ಗವಿಯಲಿ ಸಿಂಹ ಬಾವಿಲಿ ಗುಮ್ಮ
ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ

ಕರಡಿ ಕರಡಿ ಪಾತಾಳಗರಡಿ
ಬೆಟ್ಟದಿ ಯಾರು ಬಯಲಲಿ ಯಾರು
ಬೆಟ್ಟದಿ ತೋಳ ಬಯಲಲಿ ಕುರಿ
ಕರಡಿ ಕರಡಿ ಪಾತಾಳಗರಡಿ

ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ
ಒಲೆಯಲಿ ಯಾರು ಬಲೆಯಲಿ ಯಾರು
ಒಲೆಯಲಿ ಅನ್ನ ಬಲೆಯಲಿ ಮೀನು
ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ

ಕರಡಿ ಕರಡಿ ಪಾತಾಳಗರಡಿ
ಸೆರೆಯಲಿ ಯಾರು ಮರೆಯಲಿ ಯಾರು
ಸೆರೆಯಲಿ ಸುಳ್ಳ ಮರೆಯಲಿ ಕಳ್ಳ
ಕರಡಿ ಕರಡಿ ಪಾತಾಳಗರಡಿ

ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ
ಆಲೆಯಲಿ ಯಾರು ಮಲೆಯಲಿ ಯಾರು
ಆಲೆಯಲಿ ಕಬ್ಬು ಮಲೆಯಲು ಮಬ್ಬು
ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ

ಕರಡಿ ಕರಡಿ ಪಾತಾಳಗರಡಿ
ಮರದಲಿ ಯಾರು ನೆಲದಲಿ ಯಾರು
ಮರದಲಿ ಜೇನು ನೆಲದಲಿ ಕರಡಿ
ಕರಡಿ ಕರಡಿ ಪಾತಾಳಗರಡಿ

 

ದೋಸೆ ಪರೀಕ್ಷಕ
ಎಲ್ಲರ ಮನೆ ದೋಸೆ ತೂತು ಅಂತ
ಜನ ಅಂತಾರೆ ನೋಡೋಣಾಂತ
ಬಂದಿಹೆ ನಾನು ದೋಸೆ ಪರೀಕ್ಷಕ
ನಿಮ್ಮನೆ ದೋಸೆ ತೂತೋ ಅಂತ
ನೋಡ್ಕೊಂಡು ಸುಮ್ಮನೆ ಹೋಗೋಣಾಂತ
ದೋಸೆ ಇದ್ದರೆ ಕೊಡಿ ಅತ್ತೆ
ಸ್ವಲ್ಪ ಚಟ್ಣೀನೂ ಸೇರಿಸಿದರೆ ಚೆನ್ನಗಿರತ್ತೆ

ಒಂದನೆ ದೋಸೆ ಗುಳುಂ
ಎರಡನೆ ದೋಸೆ ಖತಂ
ಮೂರನೆ ದೋಸೆ ಗುಳುಂ
ನಾಲ್ಕನೆ ದೋಸೆ ಖತಂ
ಐದನೆ ದೋಸೆ ಗುಳುಂ
ಆರನೆ ದೋಸೆ ಖತಂ
ಏಳನೆ ದೋಸೆ ಗುಳುಂ
ಎಂಟನೆ ದೋಸೆ ಖತಂ
ಒಂಬತ್ನೆ ದೋಸೆ ಗುಳುಂ
ಹತ್ತನೆ ದೋಸೆ ಖತಂ
ನಾಳೆ ನೊಡೋಣ ಇನ್ನುಳಿದುವಂ

 

ದಿವಾಳಿ
ಅಂತಾರಾಷ್ಟ್ರೀಯ ವಣಿಕರ ದಿವಸ
ಎಲ್ಲರು ಏನೋ ಮಾರ‍್ತಿದಾರೆ
ಪುಟ್ಟ ಮಾರೋದೇನನ್ನ?

ಕಬ್ಬು ಮಾರ‍್ತ ಕೂತಿದಾನೆ ಪುಟ್ಟ
ಏನೋ ಪುಟ್ಟ ಕಬ್ಬು ಮಾರ‍್ತಿದೀಯಾ
ನಾಚಿಕೆಯಾಗಲ್ವ ಕಬ್ಬು ಮಾರಾಕೆ
ಎಂದರೆ ಕಬ್ಬನು ಧರ್ಮಕೆ ಕೊಟ್ಟ

ಅಂತಾರಾಷ್ಟ್ರೀಯ ವಣಿಕರ ದಿವಸ
ಎಲ್ಲರು ಏನೋ ಮಾರ‍್ತಿದಾರೆ
ಪುಟ್ಟ ಮಾರೋದೇನನ್ನ?

ಬೆಲ್ಲ ಮಾರ‍್ತ ಕೂತಿದಾನೆ ಪುಟ್ಟ
ಏನೋ ಪುಟ್ಟ ಬೆಲ್ಲ ಮಾರ‍್ತಿದೀಯಾ
ನಾಚಿಕೆಯಾಗಲ್ವ ಬೆಲ್ಲ ಮಾರಾಕೆ?
ಎಂದರೆ ಬೆಲ್ಲವ ಧರ್ಮಕೆ ಕೊಟ್ಟ

ಅಂತಾರಾಷ್ಟ್ರೀಯ ವಣಿಕರ ದಿವಸ
ಎಲ್ಲರು ಏನೋ ಮಾರ‍್ತಿದಾರೆ
ಪುಟ್ಟ ಮಾರೋದೇನನ್ನ?

ಅಂತಾರಾಷ್ಟ್ರೀಯ ವಣಿಕರ ದಿವಸ
ಎಲ್ಲರು ಏನೋ ಮಾರ‍್ತಿದಾರೆ
ಪುಟ್ಟ ಮಾರೋದೇನನ್ನ?

ಹೂವನು ಮಾರ‍್ತ ಕೂತಿದಾನೆ ಪುಟ್ಟ
ಏನೋ ಪುಟ್ಟ ಹೂ ಮಾರ‍್ತಿದೀಯಾ
ನಾಚಿಕೆಯಾಗಲ್ವ ಹೂ ಮಾರಾಕೆ
ಎಂದರೆ ಹೂವನು ಧರ್ಮಕೆ ಕೊಟ್ಟ

ಅಂತಾರಾಷ್ಟ್ರೀಯ ವಣಿಕರ ದಿವಸ
ಎಲ್ಲರು ಏನೋ ಮಾರ‍್ತಿದಾರೆ
ಪುಟ್ಟ ಮಾರೋದೇನನ್ನ?

ಜೌಳಿ ಮಾರ‍್ತ ಕೂತಿದಾನೆ ಪುಟ್ಟ
ಏನೋ ಪುಟ್ಟ ಜೌಳಿ ಮಾರ‍್ತಿದೀಯಾ
ನಾಚಿಕೆಯಾಗಲ್ವ ಜೌಳಿ ಮಾರಾಕೆ
ಎಂದರೆ ಜೌಳಿಯ ಧರ್ಮಕೆ ಕೊಟ್ಟ

ಅಂತಾರಾಷ್ಟ್ರೀಯ ವಣಿಕರ ದಿವಸ
ಎಲ್ಲರು ಏನೋ ಮಾರ‍್ತಿದಾರೆ
ಪುಟ್ಟ ಮಾರೋದೇನನ್ನ?

ಅನ್ನ ಮಾರ‍್ತ ಕೂತಿದಾನೆ ಪುಟ್ಟ
ಏನೋ ಪುಟ್ಟ ಅನ್ನ ಮಾರ‍್ತಿದೀಯಾ
ನಾಚಿಕೆಯಾಗಲ್ವ ಅನ್ನ ಮಾರಾಕೆ
ಎಂದರೆ ಅನ್ನವ ಧರ್ಮಕೆ ಕೊಟ್ಟ

ಅಂತಾರಾಷ್ಟ್ರೀಯ ವಣಿಕರ ದಿವಸ
ಎಲ್ಲರು ಏನೋ ಮಾರ‍್ತಿದಾರೆ
ಪುಟ್ಟ ಮಾರೋದೇನನ್ನ?

ದಿವಾಳಿಯಾಗಿಬಿಟ್ಟ!

 

ಮಂಕು ತಿಮ್ಮ
ಪುಟ್ಟನ ಕ್ಲಾಸ್ ಮೇಟ್ ತಿಮ್ಮ
ಮಂಕಾಗಿರ‍್ತಾನ್ ಯಾವಾಗ್ಲೂನೂ
ಅತ್ತರೆ ಮಂಕು ನಕ್ಕರೆ ಮಂಕು
ಯಾಕೋ ತಿಮ್ಮ ಮಂಕಾಗಿದ್ದೀ
ಅಂದರೆ ಅಂತಾನ್ ನನ್ನ
ಮಂಕ್ತಿಮ್ಮ ಮಾಡಿದ್ದು ಡಿವಿಜಿ
ಅದೇನು ಹಗೆಯೋ ಪೂರ್ವಜನುಮದ್ದು
ನಾನೊಡೆದುದು ಒಂದು ನೀರಿನ ಹೂಜಿ
ಕದ್ದುದು ಎರಡು ಗುಂಡು ಸೂಜಿ
ಅಷ್ಟಕೆ ನನ್ನ ಜನ್ಮ ಜಾಲಾಡಿಸಿ
ಮಂಕ್ತಿಮ್ಮ ಅಂತ ಮಾಡಿಯೆ ಬಿಟ್ಟರು

ನಾ ನಿಮ್ಮಂತೆಯೆ ಇನಿಶಿಯಲ್ ಹಾಕಿ
ಎಂಟಿ ಆಗ್ತೇನೆಂದರೆ ಬಿಡರು
ಎಂಟಿ ನೀ ಆಗಲೆ ಇದ್ದಿ
ಅದ್ನ ಲೋಕಕೆ ಸಾರೋದಕ್ಕೇನೈತೆ
ಎಂಟಿಯು ಒಂದೇ ಮಂಕೂ ಒಂದೇ
ಅಚ್ಚಗನ್ನಡದ ಮಂಕ್ತಿಮ್ಮ ಎಂದೇ
ನೂರ‍್ಕಾಲ ಇಂಗೇ ಇರ‍್ತೀ ನೀನು
ಅಂತ ಆಶೀರ್ವದಿಸಿ ಹೋದರು ನೋಡೋ
ನಾನಿನ್ನೆಲ್ಲೂ ತಿಮ್ಮ ಅನ್ನಂಗಿಲ್ಲ
ದಾಖಲೆಯಲ್ಲೂ ತಿದ್ದಿ ಆಗಿದೆ
ಅತ್ತರೆ ಮಂಕು ನಕ್ಕರೆ ಮಂಕು
ಸಕ್ಕರೆ ಮಿಠಾಯಿ ಎಲ್ಲಾ ಮಂಕು
ಎಳವೆಯಲೇ ಅಧ್ಯಾತ್ಮದ ಮಂಕು
ಅರ್ಥಾತ್ ವೃದ್ಧ್ಯಾಪ್ಯದ ಸೋಂಕು
ನೋಡ್ದೆಯ
ಏನೇನ್ ಮಾಡ್ವುದು ಕವಿಗಳ ಇಂಕು
ನನ್ನ ಕೆರೀಯರ್ ಸಿದ್ಧವೆ ಆಗಿದೆ
ಕೊರಳಿಗೆ ಮಾಲೆ ಕೈಗೆ ಕಂಸಾಳೆ

 

ಜಾತ್ರೆ
ಉತ್ಸವಕಿಂತಲು ಜಾತ್ರೆ ನಂಗಿಷ್ಟ
ಅಂತಾನೆ ಪುಟ್ಟ
ಜಾತ್ರೆಯಲಾದರೆ ಮಡಿ ಮೈಲಿಗೆ ಇಲ್ಲ
ಮನುಷ್ಯ ಮನುಷ್ಯರಿಗೆ ವ್ಯತ್ಯಾಸ ಇಲ್ಲ
ಎಲ್ಲಕ್ಕಿಂತಲು ದೊಡ್ಡದು ಎಂದರೆ
ಮೇಷ್ಟರ ಕಾಣುವ ಭಯ ಇಲ್ಲ

ಜಾತ್ರೆಗಿಂತಲು ಜಾತ್ರೆ ಕಳೆದ ಜಾಗ ನಂಗಿಷ್ಟ
ಅಂತಾನೆ ಪುಟ್ಟ
ಜಾತ್ರೆ ಕಳೆದ ಜಾಗದಲಾದರೆ ಸದ್ದು ಗದ್ದಲ ಇಲ್ಲ
ಸುಮ್ಮಗೆ ಸಿಗುವ ವಸ್ತುಗಳಿಗೆ ಲೆಕ್ಕವೆ ಇಲ್ಲ
ಚೂರು ಪಾರು ಬೇಗಡೆ ಚೂರು ಇಸ್ಪೀಟೆಲೆ ನೂರು ಆರು
ಎಲ್ಲಕ್ಕಿಂತಲು ದೊಡ್ಡದು ಎಂದರೆ
ದುಡ್ಡು ಕೊಡುವ ಅಗತ್ಯವೆ ಇಲ್ಲ

 

ಉಯ್ಯಾಲೆ
ಉಯ್ಯಾಲಪ್ಪೊ ಉಯ್ಯಾಲೆ
ಮುಂದಕೆ ಮುಂದಕೆ ಉಯ್ಯಾಲೆ
ಹಿಂದಕೆ ಹಿಂದಕೆ ಉಯ್ಯಾಲೆ
ಮೇಲಕೆ ಮೇಲಕೆ ಉಯ್ಯಾಲೆ
ಕೆಳ ಕೆಳಕ್ಕೆ ಉಯ್ಯಾಲೆ

ನಿದ್ದೆ ತೂಗಿಸುವ ಉಯ್ಯಾಲೆ
ಕನಸು ತರಿಸುವ ಉಯ್ಯಾಲೆ
ಆಕಾಶ ತೋರಿಸುವ ಉಯ್ಯಾಲೆ
ನಕ್ಷತ್ರ ಎಣಿಸುವ ಉಯ್ಯಾಲೆ

ಸೂರ್ಯದೇವರ ಉಯ್ಯಾಲೆ
ಚಂದ್ರದೇವರ ಉಯ್ಯಾಲೆ
ಕಾಮನ ಬಿಲ್ಲಿನ ಉಯ್ಯಾಲೆ
ಶ್ರೀರಾಮನ ತೂಗಿದ ಉಯ್ಯಾಲೆ

 

ಗುಮ್ಮನ ಗೋಳು
ಎಷ್ಟೋ ಪುಟ್ಟರ ಕಂಡಿದ್ದೇನೆ
ಇಂಥಾ ಪುಟ್ಟನ ಕಂಡಿದ್ದಿಲ್ಲ
ಎನ್ನುತ್ತದೆ ಗುಮ್ಮ

ಅಟ್ಟ ಹತ್ತಿದರು ಪುಟ್ಟ
ಘಟ್ಟ ಹತ್ತಿದರು ಪುಟ್ಟ
ಹಟ ಬಿಡದ ಪುಟ್ಟ ಸ್ವಭಾವ ಬಿಡದ ಪುಟ್ಟ
ತ್ರಿವಿಕ್ರಮ ಪುಟ್ಟ

ಗುಮ್ಮನ ಕಂಡರೆ ಕಿಂಚಿತ್ತು ಭಯವಿಲ್ಲ
ಗುಮ್ಮನೆಂದರೆ ತನ್ನ ತಮ್ಮ ಅಂತಿದ್ದಾನೆ
ಕಿವಿ ಹಿಂಡುತಾನೆ ಬೆನ್ನಿಗೆ ಗುದ್ದುತಾನೆ
ಗೋಳು ಹುಯ್ಯಿಸುತಾನೆ ಸಿಕ್ಕು ಸಿಕ್ಕಲ್ಲಿ ಓಡಿಸುತಾನೆ

ಮರ ಹತ್ತಿ ಕೂತರೆ ಹೊಗೆ ಹಾಕುತಾನೆ
ಬಾವಿಗೆ ಬಿದ್ದರೆ ಕಲ್ಲು ತೂರುತಾನೆ
ಹುಲ್ಲ ಬಣಬೆಯಲಿ ಅಡಗಿದರೆ
ಅಲ್ಲಾಡಿಸುತಾನೆ

ನಾಡಿನಲುಳಿಗಾಲವಿಲ್ಲವೆಂದು
ನಾ ಕಾಡಿಗೆ ಬಂದರೆ
ಇವ ಕಾಡಿನಲ್ಲೂ ನನ್ನ ಕಾಡುವನು
ಮರಗಿಡಗಳ ಒದ್ದು ಜಾಡಿಸುವನು

ನಾನಿನ್ನು ಹೊರಟೆ ವಾರಣಾಸಿಗೆ
ಕಳ್ಳ ಸನ್ಯಾಸಿಯ ವೇಷದಲಿ
ಕಾವಿಯ ಧರಿಸಿ ಗಡ್ಡವ ಅಂಟಿಸಿ
ದಮ್ಮೆಳೆಯುತ್ತ ಕೂಡುವೆ ಅಲ್ಲಿ

ಅಲ್ಲಿಗು ಬಂದು ಗಡ್ಡವ ಹಿಡಿದು
ಗದ್ದಲ ಮಾಡಿದರೆ
ಗಂಗಾಮಾಯಿ ನೀನೇ ಗತಿಯೆಂದು
ನದಿಯಲಿ ಹಾರಿ ಮಾಯವಾಗುವೆ

 

ಗುಮ್ಮನ ಕಂಡಿರೆ
ಗುಮ್ಮನ ಕಂಡಿರೆ ನೀವು ನಮ್ಮ
ಗುಮ್ಮನ ಕಂಡಿರೆ ಅಮ್ಮ

ಕಿಟಿಕಿಯಲಿತ್ತು
ಬಾಗಿಲಲಿತ್ತು
ಹೂವಿನ ಪೊದೆಯಲಿ ಇತ್ತು
ಮಾವಿನ ಮರದಲಿ ಇತ್ತು
ಮಂಗನ ಬೆದರಿಸುತಿತ್ತು
ಅಲ್ಲಿಂದದು ಧುಡುಮ್ಮನೆ ಬಿತ್ತು
ಬಾವಿ ಕಟ್ಟೆಗೆ ನೀರಿಗೆ ಬರುವ
ಅಂಗನೆಯರನು ಗದರಿಸುತಿತ್ತು
ಬೆಳೆದ ಕಬ್ಬನು ಜಗಿಯುತ್ತಿತ್ತು
ಬಾಳೆ ಹಣ್ಣನು ಮೆಲ್ಲುತ್ತಿತ್ತು

ಕಪ್ಪು ಕಂಬಳಿ ಹೊದ್ದಿತ್ತು
ಕುರುಬನ ಹಾಗೆ ತೂಕಡಿಸುತಿತ್ತು
ಕುರಿಗಳ ಬಡಿದು ಓಡಿಸುತಿತ್ತು
ಹಕ್ಕಿಗಳೆಲ್ಲವ ಕಕ್ಕಾಬಿಕ್ಕಿ
ದಿಕ್ಕು ತಪ್ಪಿಸುತಿತ್ತು

ದೋಣಿಯೊಳಗೆ ಸ್ವತಾ ಅಂಬಿಗನಂತೆ
ಹುಟ್ಟು ಹಿಡಿದು ಜನರ ಕರೆಯುತ್ತಿತ್ತು
ನದೀ ಮಧ್ಯದಲವರ ಕೈಬಿಟ್ಟು
ತಮಾಷೆ ನೋಡುತ್ತಿತ್ತು

ಮನೆಯಲಿ ಸಕ್ಕರೆ ಉಪ್ಪಿನ ಡಬ್ಬ
ಬದಲಾಯಿಸಿ ತೊಂದರೆ ಕೊಡುತಿತ್ತು
ಯಾರೂ ಇರದಿರೆ ಸಾರಿಗೆ ಹೆಚ್ಚೇ
ಖಾರದ ಪುಡಿ ಸೇರಿಸುತಿತ್ತು

ಅಟ್ಟದಲೇನೋ ಹುಡುಕಲಿತ್ತು
ಏಣಿಯನೆಲ್ಲೋ ಅಡಗಿಸುತಿತ್ತು
ಸಕ್ಕರೆ ಮಿಠಾಯಿ ಕದಿಯುತ್ತಿತ್ತು
ಕುಡಿಕೆ ಹಣವ ಮಾಯಿಸುತಿತ್ತು

ಬೇಡದ ಕಡೆ ಠಳಾಯಿಸುತಿತ್ತು
ಬೇವಿನ ಗಿಡಗಳ ಸಾಯಿಸುತಿತ್ತು
ಚಪ್ಪಲಿ ಜತೆಯ ಹಾರಿಸುತಿತ್ತು
ಹಿಪ್ಪಲಿ ತಿಂದು ತೂಕಡಿಸುತಿತ್ತು

ಪುಟ್ಟನಿಗೆ ಮಾತ್ರವೆ ಹೆದರುತ್ತಿತ್ತು
ಅವನಿಲ್ಲದ ಸ್ಥಳವ ಹುಡುಕುತ್ತಿತ್ತು
ಮಂಚದ ಕೆಳಗೆ ಸಂಚಿಯ ವಳಗೆ
ಆರಲು ಹಾಕಿದ ಪಂಚೆಯ ಸುಳಿಗೆ

ಗುಮ್ಮನ ಕಂಡಿರೆ ನೀವು ನಮ್ಮ
ಗುಮ್ಮನ ಕಂಡಿರೆ ಅಮ್ಮ
ಬಿಳಿಗಿರಿರಂಗನ ಮುದ್ದಿನ ಗುಮ್ಮ
ಅಳಗಿರಿ ಪುಟ್ಟನ ಗುದ್ದಿನ ಗುಮ್ಮ

 

ಗುಡು ಗುಡು ಗುಮ್ಮಟ ದೇವರು
ಗುಡು ಗುಡು ಗುಮ್ಮಟ ದೇವರು ಬರುವರು
ದಾರಿಬಿಡಿ
ಗುಡು ಗುಡು ಬರುವರು ಧುಡು ಧುಡು ಬರುವರು
ಎದುರು ಸಿಕ್ಕಿದವರ ತುಳಿದು ಹೋಗುವರು

ಸಿಟ್ಟಿನ ದೇವರು ಗುಟ್ಟಿನ ದೇವರು
ಹಟದ ದೇವರು ಕಠೋರ ದೇವರು
ಎಲ್ಲಿಂದ ಬಂದರು ಎಲ್ಲಿಗೆ ಹೋದರು
ಎಲ್ಲೂ ನಿಲ್ಲದ ಉರುಳು ದೇವರು

ಮೀನಿನ ಬುಟ್ಟಿ ಆಚೆಗೆ ಸರಿಸಿ
ಹೂವಿನ ಬುಟ್ಟಿ ಈಚೆಗೆ ಇರಿಸಿ
ಶಾಲಾಮಕ್ಕಳ ಸಾಲಾಗಿ ನಿಲ್ಲಿಸಿ
ಕನ್ನಿಕೆಯರಿಂದ ಆರತಿ ಬೆಳಗಿಸಿ

ಜಾಗಟೆ ಬಡಿಯಿರಿ ಠಣ್ ಠಣ್ ಠಣ್
ನಗಾರಿ ಬಾರಿಸಿ ಢಂ ಢಂ ಢಂ
ತುತ್ತುರಿ ಊದಿರಿ ಪೋಂ ಪೋಂ ಪೋಂ
ತಾಳ ಹಾಕಿ ಚಂ ಚಂ ಚಂ

ಸಿಗದಿದ್ದರೆ ಬರಿ ತಪ್ಪಲೆ ಬಾರಿಸಿ
ಅಥವಾ ಮಕ್ಕಳ ಬೆನ್ನಿಗೆ ಬಾರಿಸಿ
ಪಟಾಕಿ ದುರುಸು ಆಕಾಶಕೆ ಹಾರಿಸಿ
ಬಾವುಟವಿರದಿರೆ ಬಟ್ಟೆನ ಹಾರಿಸಿ

ಈಗೂದದ ಶಂಖ ಇನ್ನು ಯಾವಾಗ ಊದೋದು
ಊದಿರಿ ಭೂಂ ಭೂಂ ಭೂಂ
ಈಗ ಪಠಿಸದ ಮಂತ್ರ ಇನ್ನು ಯಾವಾಗ ಪಠಿಸೋದು
ಪಠಿಸಿರಿ ಹ್ರಾಂ ಹ್ರೀಂ ಹ್ರೂಂ

ಹೊಗಳು ಭಟ್ಟರಿಂದ ಹಾಕಿಸಿ ಪರಾಕು
ತೊಡಿಸಿ ಅವರಿಗೆ ರಂಗಿನ ಪೋಷಾಕು
ಅಂತೂ ಇಂತೂ ಗುಮ್ಮಟ ದೇವರು
ನಮ್ಮೂರ ಹಾದೊಮ್ಮೆ ಹೋದರೆ ಸಾಕು

ಕೋಪಿಸಿಬಿಟ್ಟರೆ ಗುಮ್ಮಟ ದೇವರು
ನಮಗಿನ್ನು ಬೇರೆ ದಾರಿಯೆ ಇಲ್ಲ
ಸಾವಿರ ಸಂಖ್ಯೆಲಿ ಜನ ಸಾಯುವರು
ಉಳಿದವರೆಲ್ಲಾ ಹುಲ್ಲು ಮೇಯುವರು

 

ನವರಾತ್ರಿ ಬೊಂಬೆ
ಹಕ್ಕಿಯ ಮಾಡಿ ಇಟಕೊಂಡಿರುವರು
ನಿಜವಾದ ಹಕ್ಕಿ ಯಾರಿಗು ಬೇಡ

ಬೆಕ್ಕಿನ ಮಾಡಿ ಇಟಕೊಂಡಿರುವರು
ನಿಜವಾದ ಬೆಕ್ಕು ಯಾರಿಗು ಬೇಡ

ನಾಯಿಯ ಮಾಡಿ ಇಟಕೊಂಡಿರುವರು
ನಿಜವಾದ ನಾಯಿ ಯಾರಿಗು ಬೇಡ

ಕುರಿಮರಿ ಮಾಡಿ ಇಟಕೊಂಡಿರುವರು
ನಿಜವಾದ ಕುರಿಮರಿ ಯಾರಿಗು ಬೇಡ

ಅಳಿಲನು ಮಾಡಿ ಇಟಕೊಂಡಿರುವರು
ನಿಜವಾದ ಅಳಿಲು ಯಾರಿಗು ಬೇಡ

ಮೊಲವನು ಮಾಡಿ ಇಟಕೊಂಡಿರುವರು
ನಿಜವಾದ ಮೊಲ ಯಾರಿಗು ಬೇಡ

ಆನೆಯ ಮಾಡಿ ಇಟಕೊಂಡಿರುವರು
ನಿಜವಾದ ಆನೆ ಯಾರಿಗು ಬೇಡ

ಸಿಂಹವ ಮಾಡಿ ಇಟಕೊಂಡಿರುವರು
ನಿಜವಾದ ಸಿಂಹ ಯಾರಿಗು ಬೇಡ

ಹುಲಿಯನು ಮಾಡಿ ಇಟಕೊಂಡಿರುವರು
ನಿಜವಾದ ಹುಲಿ ಯಾರಿಗು ಬೇಡ

ಒಂಟೆಯ ಮಾಡಿ ಇಟಕೊಂಡಿರುವರು
ನಿಜವಾದ ಒಂಟೆ ಯಾರಿಗು ಬೇಡ

ಕುದುರೆಯ ಮಾಡಿ ಇಟಕೊಂಡಿರುವರು
ನಿಜವಾದ ಕುದುರೆ ಯಾರಿಗು ಬೇಡ

ಕತ್ತೆಯ ಮಾಡಿ ಇಟಕೊಂಡಿರುವರು
ನಿಜವಾದ ಕತ್ತೆ ಯಾರಿಗು ಬೇಡ

ಆಕಳ ಮಾಡಿ ಇಟಕೊಂಡಿರುವರು
ನಿಜವಾದ ಆಕಳ ಯಾರಿಗು ಬೇಡ

ಮಂಗನ ಮಾಡಿ ಇಟಕೊಂಡಿರುವರು
ನಿಜವಾದ ಮಂಗ ಯಾರಿಗು ಬೇಡ

ಗೊರಿಲ್ಲನ ಮಾಡಿ ಇಟಕೊಂಡಿರುವರು
ನಿಜವಾದ ಗೊರಿಲ್ಲ ಯಾರಿಗು ಬೇಡ

ಕರಡಿಯ ಮಾಡಿ ಇಟಕೊಂಡಿರುವರು
ನಿಜವಾದ ಕರಡಿ ಯಾರಿಗು ಬೇಡ

ತಿಮಿಂಗಿಲ ಮಾಡಿ ಇಟಕೊಂಡಿರುವರು
ನಿಜವಾದ ತಿಮಿಂಗಿಲ ಯಾರಿಗು ಬೇಡ

ಗುಮ್ಮನ ಮಾಡಿ ಇಟಕೊಂಡಿರುವರು
ನಿಜವಾದ ಗುಮ್ಮ ಯಾರಿಗು ಬೇಡ

ಪುಟ್ಟನ ಮಾಡಿ ಇಟಕೊಂಡಿರುವರು
ನಿಜವಾದ ಪುಟ್ಟ ಯಾರಿಗು ಬೇಡ

ಏನರ್ಥ?
ನವರಾತ್ರಿ ಬೊಂಬೆ ಶಿವಾರಾತ್ರಿ ನಂಬೆ!

 

ನಾಲ್ವರು ಕಳ್ಳರು
ಕಾಕಳ್ಳ ಅರೆಕ್ಕಳ್ಳ
ಮುಕ್ಕಾಕಳ್ಳ ಇಡೀ ಕಳ್ಳ
ನಾಲ್ಕೂ ಕಳ್ಳರು ಕುಳ್ಳರು
ಮನೆ ಕಳ್ಳಲು ಹೊರಟರು

ಕಾಕಳ್ಳ ಹಳ್ಳಕೆ ಬಿದ್ದ
ಅರೆಕ್ಕಳ್ಳ ಕೊಳ್ಳಕೆ ಬಿದ್ದ
ಮುಕ್ಕಾಕಳ್ಳ ಬಾವಿಗೆ ಬಿದ್ದ
ಇಡೀ ಕಳ್ಳ ನೋಡುತ ಇದ್ದ
ಬೀಳೋದಕ್ಕೆ ಜಾಗವೆ ಇಲ್ಲ
ಇಡೀ ಕಳ್ಳ ಮುಗ್ಗರಿಸಿ ಬಿದ್ದ

 

ಬಿರುದೆಂತೆಂಬರ ಗಂಡ
ಒಂದೇ ಕೈಯಲಿ ತೆಂಗಾಯಿ ಸುಲಿದರು
ಎರಡೂ ಕೈಯಲಿ ಆನೆಯ ಹಿಡಿದರು
ಮೂರನೆ ಕೈಯೊಂದು ಇಲ್ಲದ ಕಾರಣ
ಕಾಲಲಿ ಒದ್ದು ಬಂಡೆಯನೊಡೆದರು
ಬಿರುದೆಂತೆಂಬರ ಗಂಡ

ಭತ್ತದ ಕದಿರಿನ ಮೀಸೆ
ನಾರುಡೆ ವೀರಗಾಸೆ
ಕೈಯಲಿ ತಗೊಂಡು ಭೈರವ ಕತ್ತಿ
ದೇಶದ ಗಡಿ ವಿಸ್ತರಿಸಿದರು
ಬಿರುದೆಂತೆಂಬರ ಗಂಡ

ಲಗಾಮಿಲ್ಲದ ಕುದುರೆಯನೇರಿ
ಕರಾಳ ಶಕ್ತಿಗಳ ತೊಡೆ ತಟ್ಟಿ ಕರೆದು
ಎದುರು ಬಂದವರ ತತ್ತರಿಸಿದರು
ಅವರ ಕೊರಳ ಕತ್ತರಿಸಿದರು
ಬಿರುದೆಂತೆಂಬರ ಗಂಡ

ನೀರೇ ಇಲ್ಲದೆ ಸ್ನಾನವ ಮಾಡಿ
ಕನ್ನಡಿಯಿಲ್ಲದೆ ಮೋರೆಯ ನೋಡಿ
ದೇವರೆ ಇಲ್ಲದ ಗುಡಿ ಸುತ್ತುವರು
ತಾನೇ ದೇವರು ಎನ್ನುವರು
ಬಿರುದೆಂತೆಂಬರ ಗಂಡ

ಅಣೆಗಟ್ಟುಗಳನು ಒಡೆದುಹಾಕಿದರು
ಹೊಲಗದ್ದೆಗಳನು ಬಂಜರು ಬಿಟ್ಟರು
ಮರಗಿಡಗಳನು ಕಡಿದು ಸುಟ್ಟರು
ಎಲ್ಲಾ ಬಿಟ್ಟು ಭಂಗಿ ನೆಟ್ಟರು
ಬಿರುದೆಂತೆಂಬರ ಗಂಡ

ಹೇಳಲು ಬಂದವರ ಹೊರಗಟ್ಟಿದರು
ವಿರೋಧಿಸಿದವರ ಸೆರೆಯಲ್ಲಿಟ್ಟರು
ಒಂದೊಂದಾಗಿ ಎಲ್ಲರ ತರಿದರು
ನಂತರ ತನ್ನನು ತಾನೇ ಕೊಂದರು
ಬಿರುದೆಂತೆಂಬರ ಗಂಡ

 

ರಾಮ ರಾಮ
ಇಲ್ಲೊಂದು ಅಳಿತ್ತು ರಾಮ ರಾಮ
ಮೂರು ನಾಮಗಳಿದ್ವು ರಾಮ ರಾಮ

ಮುದ್ದಾಗಿ ಇದ್ದಿತು ರಾಮ ರಾಮ
ಅದು ಮರವೇರಿ ಇಳಿತಿತ್ತು ರಾಮ ರಾಮ

ಏನೇನೋ ತರುತಿತ್ತು ರಾಮ ರಾಮ
ಎಲ್ಲೋ ಬಚ್ಚಿಡುತಿತ್ತು ರಾಮ ರಾಮ

ಏನೆಂದು ಮರೆತಿತ್ತು ರಾಮ ರಾಮ
ಎಲ್ಲೆಂದು ಮರೆತಿತ್ತು ರಾಮ ರಾಮ

ಈಗೆಲ್ಲಾ ಹುಡುಕುತಿದೆ ರಾಮ ರಾಮ
ಎಲ್ಲೂ ಸಿಗುತ್ತಿಲ್ಲ ರಾಮ ರಾಮ

ಚಳಿಗಾಲ ಬರುತಿದೆ ರಾಮ ರಾಮ
ಉಳಿಗಾಲವಿಲ್ಲವೊ ರಾಮ ರಾಮ

ಇನ್ನೇನು ಮಾಡಲಿ ರಾಮ ರಾಮ
ಇನ್ನೆಂತು ಬದುಕಲಿ ರಾಮ ರಾಮ

ಬಚ್ಚಿಟ್ಟ ಜಾಗವ ರಾಮ ರಾಮ
ಎಲ್ಲೆಂದು ತೋರಿಸೊ ರಾಮ ರಾಮ

 

ಯಾರಿಗೆ ಏನುಂಟು
ಯಾರಿಗೆ ಏನುಂಟು ಗಣನಾಯಕ

ನದಿಗೆ ನೀರುಂಟು ನೀರಿಗೆ ಮೀನುಂಟು
ಮೀನಿಗೆ ಕಣ್ಣುಂಟು ಗಣನಾಯಕ

ಕಬ್ಬಿಗೆ ರಸವುಂಟು ರಸಕೆ ಸಕ್ಕರೆಯುಂಟು
ಸಕ್ಕರೆಗೆ ಸಿಹಿಯುಂಟು ಗಣನಾಯಕ

ಗಿಡಕೆ ರೆಂಬೆಗಳುಂಟು ರೆಂಬೆಗೆ ಹೂವುಂಟು
ಹೂವಿಗೆ ಪರಿಮಳವುಂಟು ಗಣನಾಯಕ

ಕಾಯಕ್ಕೆ ಕೈಯುಂಟು ಕೈಗೆ ಬೆರಳುಗಳುಂಟು
ಬೆರಳಿಗುಂಗುರವುಂಟು ಗಣನಾಯಕ

ಹೊಲಕೆ ಪೈರುಂಟು ಪೈರಿಗೆ ತೆನೆಯುಂಟು
ತೆನೆತೆನೆಗೆ ಭತ್ತವುಂಟು ಗಣನಾಯಕ

ಮನೆಗೆ ಕಿಟಿಕಿಯುಂಟು ಕಿಟಿಕಿಗೆ ಸರಳುಂಟು
ಸರಳಿಗೆ ನೆರಳುಂಟು ಗಣನಾಯಕ

ಊರಿಗೆ ಗುಡಿಯುಂಟು ಗುಡಿಗೆ ದೇವರು ಉಂಟು
ದೇವರಿಗೆ ಉತ್ಸವವುಂಟು ಗಣನಾಯಕ

ಹಬ್ಬಕೆ ಶಾವಿಗೆಯುಂಟು ಶಾವಿಗೆಗೆ ಎಳೆಯುಂಟು
ಎಳೆ ಎಳೆಗೆ ರಸಾಯನವುಂಟು ಗಣನಾಯಕ

ಶಾಲೆಗೆ ಕ್ಲಾಸುಂಟು ಕ್ಲಾಸಿಗೆ ಪಾಠವುಂಟು
ಪಾಠಕ್ಕೆ ಆಟವುಂಟು ಗಣನಾಯಕ

ನಿದ್ದೆಗೆ ಕನಸುಂಟು ಕನಸಿಗಾಕಾಶವುಂಟು
ಆಕಾಶಕೆ ನಕ್ಷತ್ರವುಂಟು ಗಣನಾಯಕ

ಮುಂಜಾನೆ ಮಂಜುಂಟು ಮಂಜಿಗಿಬ್ಬನಿ ಉಂಟು
ಇಬ್ಬನಿಗೆ ಮುತ್ತುಂಟು ಗಣನಾಯಕ

 

ತೆಂಗಿನ ಮರಿ
ತೆಂಗಿನ ಮರಿ ತೆಂಗಿನ ಮರಿ
ಎಷ್ಟೊಂದು ಛಂದ ನಿನ್ನ ಗರಿ

ಬೆಳೆಯುವಿ ಸೊಂಪಾಗಿ
ನಿನಗೆ ನೀನೇ ತಂಪಾಗಿ

ಎಷ್ಟೊಂದೆತ್ತರ ಬೆಳೆಯುವುದಿದೆ ನೀ
ಎಷ್ಟೊಂದು ಬಿತ್ತರ ನೋಡುವುದಿದೆ ನೀ

ಹಾರುವ ಹಕ್ಕಿಗಳ ಜತೆ ಮಾತಾಡಿ
ಮೂಡುವ ಚುಕ್ಕಿಗಳ ಚೆಲ್ಲಾಟವಾಡಿ

ತೆಂಕಣ ಗಾಳಿಯ ಉಯ್ಯಾಲೆ ತೂಗಿಸಿ
ಮುಂಗಾರಿನ ಮಳೆ ಮನಮೊಹಕವಾಗಿಸಿ

ಸುಗ್ಗಿಯ ಕರೆಯುವಿ ಮಾಗಿಯ ಕರೆಯುವಿ
ವಸಂತವ ಕರೆಯುವಿ ವೈಶಾಖವ ಕರೆಯುವಿ
ಎಲ್ಲಾ ಋತುಗಳ ಸಮಾನ ಕಾಣುವಿ

ಸಂಜೆಗೆ ಮೊದಲೇ ಸಂಜೆಯ ಕಾಣುವಿ
ಮುಂಜಾನೆಗೆ ಮೊದಲೇ ಮುಂಜಾನೆಯ ಕಾಣುವಿ
ಹಗಲು ರಾತ್ರಿಗು ಸಿಡಿಲು ಮಿಂಚಿಗು
ಕಾಮನ ಬಿಲ್ಲಿಗು ಸೋಮನ ಸೊಲ್ಲಿಗು
ಎಲ್ಲೋ ಬಿದ್ದ ಉಲ್ಕಾಪಾತಕು
ಅಷ್ಟೇನಲ್ಲದ ಇಬ್ಬನಿ ಹುಲ್ಲಿಗು ಮಾಡಿನ ಹೊಗೆಗೂ
ನೀ ಸಾಕ್ಷಿಯಾಗುವಿ

ಕಲ್ಪವೃಕ್ಷವಾಗುವಿ
ಬೇಕಾದವರಿಗೆ ಬೇಡಿದ್ದು ಕೊಡುವಿ
ನಿನ್ನ ಶಿರದ ಸುತ್ತಲು ಗರಿಯಲ್ಲವೋ ಅದು
ದೇವಲೋಕದ ಪ್ರಭಾವಳಿ

ಓ ಮುದ್ದಿನ ಮರಿ
ಓ ತೆಂಗಿನ ಮರಿ

 

ಬರೀ ಪುಟ್ಟ ಬರೀ
ಬರೀ ಪುಟ್ಟ ಬರೀ

ಅಕ್ಷರ ಬರೀ ಅನಕ್ಷರ ಬರೀ
ಪದಾ ಬರೀ ಜನಪದವ ಬರೀ
ವಾಕ್ಯ ವ್ಯಾಕರಣಗಳ ಬರೀ

ಪ್ರಾಣಾಪ್ರಾಣಗಳ ಬರಿ
ವಿಸರ್ಗ ನಿಸರ್ಗಗಳ ಬರಿ
ಅನುಸ್ವಾರ ಬಿಂದುಗಳ ಬರಿ
ಅರ್ಕಾವೊತ್ತು ಬರಿ
ಋಕಾರವ ಪ್ರತ್ಯೇಕ ಬರಿ
ಸ ಶ ಷ ಬರಿ
ಬರಿ ವಸುಧಾವಲಯ ವಿಶದ ವಿಷಯ ವಿಶೇಷಗಳ ಬರಿ

ಗೆರೆಗಳ ಮೇಲೆ ಮುದ್ದಾಗಿ ಬರಿ
ಗೆರೆಯಾಚೆಗೆ ಮುದ್ದಾಂ ಬರಿ
ಚಿತ್ರಗಳ ಬರಿ ವಿಚಿತ್ರಗಳ ಬರಿ
ಜನ ತಲೆದೂಗುವಂತೆ ಬರಿ
ಜನ ಬೆರಗಾಗುವಂತೆ ಬರಿ

ಬರೀ ಪುಟ್ಟ ಬರೀ

ಕವಿತೆ ಕಾವ್ಯಗಳ ಬರಿ
ಕತೆ ಕಾದಂಬರಿಗಳ ಬರಿ
ಲೇಖನಗಳ ಬರಿ
ಕಾಗದದಲ್ಲಿ ಬರಿ ಕಂಪ್ಯೂಟರಿನಲ್ಲಿ ಬರಿ
ಗೆಳೆಯರಿಗೆ ಪತ್ರಗಳ ಪ್ರತ್ಯೇಕ ಬರಿ

ಬರೀ ಚಿತ್ರಗಳ ಬರೀ
ಗಿಡಗಳ ಮೇಲೆ ಹೂವುಗಳ ಬರೀ
ಹುಲ್ಲಿನ ಮೇಲೆ ಗೋವುಗಳ ಬರೀ
ಬರೀ ವಿಚಿತ್ರಗಳ ಬರೀ
ಹಂಡೆಗಳ ಒಳಗೆ ಮನುಷ್ಯರ ಬರೀ
ಬಂಡೆಗಳ ಮೇಲೆ ಮಂಡೆಗಳ ಬರೀ
ದಂಡೆಗಳಿಲ್ಲದ ಸಮುದ್ರಗಳ ಬರೀ
ನೆರಳಿಲ್ಲದ ಮರಗಳ ಬರೀ
ಪ್ರತಿಫಲಿಸದ ಕನ್ನಡಿಗಳ ಬರೀ

ಬರೀ ಪುಟ್ಟ ಬರೀ

ಕಾಮನಬಿಲ್ಲಿಗೆ ಬಣ್ಣವ ಬರೀ
ಆಕಾಶಕ್ಕೆ ಮೋಡವ ಬರೀ
ಜ್ವಾಲಾಮುಖಿಗೆ ಬೆಂಕಿಯ ಬರೀ
ಧೂಮಕೇತುವಿಗೆ ಬಾಲವ ಬರೀ
ಮಳೆಗೆ ಹನಿಗಳ ಬರೀ
ಸಿಡಿಲಿಗೆ ಧ್ವನಿಯ ಬರೀ

ಬರೀ ಪುಟ್ಟ ಬರೀ

ತಂತಿಗೆ ರಾಗವ ಬರೀ
ಮೃದಂಗಕೆ ತಾಳವ ಬರೀ
ವಾದ್ಯವೃಂದಕೆ ನಾದವ ಬರೀ
ಕಾಲಿಗೆ ಹೆಜ್ಜೆಯ ಬರೀ
ಕುಣಿತಕೆ ಗೆಜ್ಜೆಯ ಬರೀ

ಬರೀ ಪುಟ್ಟ ಬರೀ

ಪದಕೆ ಅರ್ಥವ ಬರೀ
ಅರ್ಥಕೆ ಅನರ್ಥವ ಬರೀ
ಪ್ರಶ್ನೆಗೆ ಉತ್ತರ ಬರೀ
ಉತ್ತರಕೆ ದಕ್ಷಿಣ ಬರೀ

ಬರೀ ಪುಟ್ಟ ಬರೀ

ಅಂಕೆಗೆ ಸಂಖ್ಯೆ ಬರೀ
ಸಂಖ್ಯೆಗೆ ಸೊನ್ನೆ ಬರೀ
ಕಳೆತಕೆ ಕೂಡಿಸಿ ಬರೀ
ಗುಣಿತಕೆ ಭಾಗಿಸಿ ಬರೀ

ಬರೀ ಪುಟ್ಟ ಬರೀ