ಒಬ್ಬ ಗುರು ನಮ್ಮ ಜೀವನದಲ್ಲಿ ಖಂಡಿತ ಮಹಾವ್ಯಕ್ತಿಯೇ  ಆಗಿರುತ್ತಾನೆ ಅಂಬೋದು ಅಕ್ಷರಶಃ ಸತ್ಯ. ಒಂದಕ್ಕರ ಕಲಿಸಿದಾತನೂ ಗುರುವೇ ಅಂತಾರೆ, ಹೀಗಾಗಿ ಪಾಠ ಮಾಡಿದ ಗುರುಗಳ ನಂತರ ಬರುವವರೇ ನಿಜ ಜೀವನದ ಪಾಠ ಕಲಿಸುವ ಗುರುಗಳು! ಅವರಿಗೆಲ್ಲ ನಾವು ನಿಜವಾಗಿಯೂ ಕೃತಜ್ಞರಾಗಿರಬೇಕು. ಅಂತಹ ಕೆಲವು ಗುರುಗಳು ನನ್ನ ಜೀವನದಲ್ಲಿ ಬಂದು ಮಾರ್ಗದರ್ಶನ ನೀಡಿದವರು. ಅವರಲ್ಲಿ ಕೃಷಿ ಪಾಠವನ್ನುಚೆನ್ನಾಗಿಯೇ ಕಲಿಸಿದ ದೇವೇಂದ್ರ ಕೂಡ ಒಬ್ಬ. – ಅವನು ತಮ್ಮ ಪಾಲಿಗೆ ದೇವದೂತನಾದ ಕತೆಯನ್ನು  ನಿಮ್ಮೊಡನೆ ಹಂಚಿಕೊಂಡಿದ್ದಾರೆ 
ಗುರುಪ್ರಸಾದ್‌ ಕುರ್ತಕೋಟಿ.

 

ಆಗತಾನೆ ಕಾಲೇಜಿನಿಂದ ಹೊರಬಿದ್ದು ಯಾವ ದಾರಿ ಹಿಡಿಯಬೇಕು ಎಂದು ಕಕ್ಕಾಬಿಕ್ಕಿಯಾಗಿದ್ದ ದಿನಗಳವು. ನಾವೇ ಹೊರಬಿದ್ದಿದ್ದೆವೋ ಕಾಲೇಜಿನವರೇ ನಮ್ಮನ್ನು ಆಚೆ ದಬ್ಬಿದ್ದರೋ ಒಟ್ಟಿನಲ್ಲಿ ಹೊರಬಂದ ನನಗೆ ದಾರಿಕಾಣದೆ ಮುಂದೇನು ಎಂಬ ದೊಡ್ಡ ಪ್ರಶ್ನೆ ಎದುರಾದಾಗ ಇರಲಿ ಅಂತ ಕೆಲವು ಕಂಪ್ಯೂಟರ್ ಕೋರ್ಸ್ ಗಳನ್ನು ಮಾಡಿಕೊಂಡಿದ್ದೆ. ಅವೆಲ್ಲ ಮುಗಿದ ಮೇಲೂ ಅಪ್ಪನ ಎದುರು ಎಷ್ಟು ಅಂತ ದುಡ್ಡಿಗೆ ಕೈ ಚಾಚೋದು? ಹೀಗೆ ಒಂದು ದಿನ ಪೇಪರ್ ನಲ್ಲಿ ಒಂದು ಜಾಹಿರಾತು ಕಣ್ಣಿಗೆ ರಾಚಿತು. ಒಂದು ಹೊಸ ಕಂಪ್ಯೂಟರ್ ಕೋಚಿಂಗ್ ಸೆಂಟರ್ ಗೆ ಕಲಿಸಲು ಕೆಲವು ಶಿಕ್ಷಕರು ಬೇಕಾಗಿದ್ದಾರೆ ಅಂತ. ನಾನೂ Tip Top ಆಗಿ ಜೀನ್ಸ್‌ ಹಾಕ್ಕೊಂಡು ಹೋಗಿದ್ದೆ. ಒಂದೆರಡು ಪ್ರಶ್ನೆ ಕೇಳಿ ನನ್ನನ್ನು ಆರಿಸಿಯೇ ಬಿಟ್ಟರು! ಶಬ್ಭಾಶ್ ಮಗನೆ ಅಂತ ನನ್ನದೇ ಬೆನ್ನು ಚಪ್ಪರಿಸಿಕೊಂಡು ನಾನೂ ಮಾಸ್ತರ್ ಆಗಿದ್ದೆ! ಕಲಿಸುವುದು ನನಗೆ ಅಷ್ಟೊಂದು ಕಷ್ಟ ಅನಿಸಲಿಲ್ಲ. ಯಾಕೆಂದರೆ ಕಲಿಯಲು ಬರುವವರಿಗೆ ನನಗಿಂತಲೂ ಜಾಸ್ತಿ ಗೊತ್ತಿರುವ ಸಾಧ್ಯತೆ ಇರಲೇ ಇಲ್ಲ! ಅವರಿಗೆ ಕಲಿಸುತ್ತಲೇ ನಾನೂ ಕೆಲವು ಹೊಸ ಸಂಗತಿ ಕಲಿಯುತ್ತಿದ್ದೆ.

ನಾನೂ ಆಗ ತಾನೇ ಪದವೀಧರ ಆಗಿದ್ದರಿಂದ ನನ್ನ ಶಿಷ್ಯಂದಿರಲ್ಲಿ ಅನೇಕರು ಹೆಚ್ಚು ಕಡಿಮೆ ನನ್ನ ವಯಸ್ಸಿನವರೆ ಆಗಿರುತ್ತಿದ್ದರು. ಅದರಲ್ಲೊಬ್ಬ ಸುನಿಲ್ ಅನ್ನುವವ ಶಿಷ್ಯನಿಗಿಂತ ಮಿಗಿಲಾಗಿ ನನ್ನ ಗೆಳೆಯನಾಗಿದ್ದ. ಅವನು ಸ್ವಲ್ಪ ತಮಾಷೆ ಸ್ವಭಾವದವನು ಕೂಡ. ಒಮ್ಮೆ ನಾನು, ಅವನು ಇನ್ನೊಂದಿಬ್ಬರು ಮಾತಾಡುತ್ತ ರೋಡಿನಲ್ಲಿ ನಿಂತಿದ್ದಾಗ ಇವನು ತನ್ನ ಎರಡೂ ಕೈಗಳನ್ನು ನನ್ನ ಎದಿರು ಮುಗಿದು “ಗುರು ಬ್ರಹ್ಮಾ ಗುರು ವಿಷ್ಣು..” ಅಂತ ಶುರು ಹಚ್ಚಿಕೊಂಡಾಗ ನನಗೂ ಮೈ ರೋಮಾಂಚನವಾಗಿ, ಬಲಗೈ ಮೇಲೆತ್ತಿ ಅವನಿಗೆ ಆಶೀರ್ವದಿಸುವವನಂತೆ ನಿಂತೆ. ಇದೇನು ಈ ಪೋರ ನನಗೆ ಇಷ್ಟೊಂದು ಮರ್ಯಾದೆ ಕೊಡುತ್ತ ಗುರು ಸ್ಥಾನದಲ್ಲಿ ಏರಿಸಿ ಕೂಡಿಸುತ್ತಿದ್ದಾನೆ ಅಂತ ನಾನು ಆಶ್ಚರ್ಯ ಪಡುತ್ತಿರುವಾಗಲೇ, “ಗುರು ಸಾಕ್ಷಾತ್ ಪರಬ್ರಹ್ಮ” ಅಂತ ಮುಂದುವರಿದ.. ನಾನು ಮಂತ್ರಮುಗ್ಧನಾಗಿ ನಿಂತಿದ್ದೆ … ಕೊನೆಗೆ “ಗುರುವೇ ನಮಃ” ಅಂತಾನೆ ಅಂತ ಕಾದಿದ್ದರೆ …“ಗುರುವೇನ್ ಮಹಾ!” ಅಂತ ಹೇಳಿ ಮುಗಿಸಿ ಮುಸಿ ಮುಸಿ ನಕ್ಕಾಗಲೇ ಅರಿವಾಗಿದ್ದು ಅವನು ತಮಾಷೆ ಮಾಡುತ್ತಿದ್ದ ಅಂತ! ನನ್ನ ಹೆಸರು ‘ಗುರು’ ಎಂದು ಇದ್ದದ್ದು ಅವನ ತಮಾಷೆಗೆ ಇನ್ನೂ ಇಂಬು ಕೊಟ್ಟ ವಿಷಯವಾಗಿತ್ತು!

ನಾವೆಲ್ಲಾ ಆಗ ನಕ್ಕೆವಾದರೂ ಒಬ್ಬ ಗುರು ನಮ್ಮ ಜೀವನದಲ್ಲಿ ಖಂಡಿತ “ಮಹಾ”ನೆ ಆಗಿರುತ್ತಾನೆ ಅಂಬೋದು ಅಕ್ಷರಶಃ ಸತ್ಯ. ಒಂದಕ್ಕರ ಕಲಿಸಿದಾತನೂ ‘ಗುರುವೇ’ ಅಂತಾರೆ, ಹೀಗಾಗಿ ಪಾಠ ಮಾಡಿದ ಗುರುಗಳ ನಂತರ ಬರುವವರೆ ನಿಜ ಜೀವನದ ಪಾಠ ಕಲಿಸುವ ಗುರುಗಳು! ಅವರಿಗೆಲ್ಲ ನಾವು ನಿಜವಾಗಿಯೂ ಕೃತಜ್ಞರಾಗಿರಬೇಕು. ಅಂತಹ ಕೆಲವು ಗುರುಗಳು ನನ್ನ ಜೀವನದಲ್ಲಿ ಬಂದು ಮಾರ್ಗದರ್ಶನ ನೀಡಿದವರು. ಅವರಲ್ಲಿ ಒಬ್ಬನು ದೇವೇಂದ್ರ. ಅವನು ನನ್ನ ಮಟ್ಟಿಗೆ ದೇವದೂತ!

ದೇವೇಂದ್ರ ಎಂಬ ಗುರು ನನ್ನ ಜೀವನದಲ್ಲಿ ಬಂದಾಗ ನಾನಿನ್ನೂ ಒಬ್ಬ ಹಠಮಾರಿ ಹಸುಳೆ ರೈತ. ನನಗೆ ಮೊದಲಿನಿಂದಲೂ ಒಂದು ತೋಟ ಮಾಡಬೇಕು, ರೈತನಾಗಬೇಕು, ನನಗೆ ಬೇಕಾದ ಹಣ್ಣು ಹಂಪಲ, ತರಕಾರಿ ನಾನೇ ಬೆಳೆದು ತಿನ್ನಬೇಕು ಎಂಬ ಹಂಬಲ. ಹೀಗಾಗಿ ನಾನು ಹೇಗೋ ನನ್ನ ಕೂಡಿಟ್ಟ ಹಣವೆಲ್ಲಾ ತೆಗೆದು ಒಂದು ಹೊಲ ಮಾಡಿಯೇಬಿಟ್ಟೆ. ಈ ತರಹದ ಹಂಬಲಕ್ಕೆ ಹಣಬಲ ಒಂದಿದ್ದರೆ ಸಾಲದು, ಸರಿಯಾದ ಬೆಂಬಲವೂ ಬೇಕು!

ಆಗಿಂದಲೂ ಒಂದೇ ಸಮನೆ ಹೊಲ ಮಾಡುವ ಹಠ ಇತ್ತಾದರೂ ಹೇಗೆ ಮಾಡಬೇಕು ಎಂಬುದೇ ತಿಳಿದಿರಲಿಲ್ಲ. ನನಗೆ ತಿಳಿದಿಲ್ಲ ಅಂಬೋದು ಅನೇಕ ಜನರಿಗೆ ಗೊತ್ತಾಗಿತ್ತು. ಹಳ್ಳಿಗೆ ಹೋದಾಗಲೊಮ್ಮೆ ಕಳೆ ಬೆಳೆದ ನನ್ನ ಜಮೀನು ನೋಡಿ ಕರುಳು ಕಿವುಚಿದಂತಾಗುತ್ತಿತ್ತು. ನನಗೆ ಅಲ್ಲಿ ಹೋಗಿ ಏನೂ ಮಾಡಲು ಆಗುತ್ತಿಲ್ಲ ಎಂಬ ಹತಾಶೆ ಕೋಪ ಎಲ್ಲವೂ ಬಂದುಬಿಡುತ್ತಿತ್ತು. ಹಾಗಾದಾಗಲೆಲ್ಲ ಏನು ಮಾಡೋದು ಎಂಬ ಪ್ರಶ್ನೆ ಕಾಡಿದಾಗ ಅದಕ್ಕೊಂದು ಸಿದ್ಧ ಉತ್ತರ ಯಾರಿಗಾದರೂ ಸ್ಥಳೀಯ ರೈತರಿಗೆ ಮಾಡಲು ಕೊಡೋದು. ‘ಹಾಗೆ ಕೃಷಿ ಮಾಡುತ್ತೇನೆ’ ಎಂದು ಬರುವ ರೈತರಿಗೆ ನನ್ನ ಜಮೀನಿಗಿಂತ ನೀರಿನ ಮೇಲೆ ಕಣ್ಣು! ಸುತ್ತಮುತ್ತಲು ಅಷ್ಟೆಲ್ಲ ನೀರು ಯಾರದೂ ಇರಲಿಲ್ಲ. ತಮ್ಮ ನೀರನ್ನು ಅಡ್ಡಾದಿಡ್ಡಿ ಬಳಸಿ ಖಾಲಿ ಮಾಡಿಕೊಂಡವರು ಅವರು. ಅಲ್ಲಿನ ವ್ಯವಸ್ಥೆ ಹೇಗೆ ಅಂದ್ರೆ, ವಿದ್ಯುತ್ ಅಂತೂ ಉಚಿತ. ಅದೂ ಹೆಚ್ಚು ಕಡಿಮೆ ಎಲ್ಲರದೂ ಅಕ್ರಮ ಸಂಪರ್ಕ. ನಾನು ಮೀಟರ್ ಗೆ ಅರ್ಜಿ ಸಲ್ಲಿಸಿದಾಗ ಅಲ್ಲೊಬ್ಬ ರೈತ ಹೇಳಿದ್ದ. “ಕರೆಂಟ್ ಫ್ರೀ ಇದೆ ಮೀಟರ್ ಯಾಕೆ ಹಾಕಸ್ತೀರ” ಅಂತ. ಇದು ಅವರ ಮನಸ್ಥಿತಿ.

ಹೀಗಿರುವಾಗ ಒಂದು ಟೈಮರ್ ಹಾಕಿ ಕರೆಂಟ್ ಬಂದಾಗೆಲ್ಲ ನೀರು ಹೊಲದಲ್ಲೆಲ್ಲ ಸುರಿವ ಹಾಗೆ ವ್ಯವಸ್ಥೆ ಮಾಡಿ ಬಿಟ್ಟಿರುತ್ತಿದ್ದರು. ಈ ರೀತಿಯ ನೀರಿನ ಹಾಗೂ ವಿದ್ಯುತ್ತಿನ ದುರುಪಯೋಗ ನೋಡಿದರೆ ಹೊಟ್ಟೆ ಉರಿಯುತ್ತದೆ. ಉಚಿತವಾಗಿ ವಿದ್ಯುತ ಕೊಡಲೇಬಾರದು. ಕೊಟ್ಟರೂ ಅದಕ್ಕೊಂದು ಲಿಮಿಟ್ ಇರಲೇ ಬೇಕು. ಇಲ್ಲದಿದ್ದರೆ ಯಾರಿಗೂ ಜವಾಬ್ದಾರಿಯೇ ಇರುವುದಿಲ್ಲ. ಮುಂದಿನ ದಿನಗಳು ಭಯಂಕರ ಆಗುವುದರಲ್ಲಿ ಎರಡು ಮಾತಿಲ್ಲ ಎನಿಸುತ್ತಿತ್ತು. ಹೀಗೆ ನನ್ನ ಭೂಮಿಯಲ್ಲಿರುವ ನೀರಿನ ಒರತೆಯನ್ನೇ ಗುರಿಯಾಗಿಸಿಕೊಂಡು ನನ್ನ ಹೊಲವನ್ನು ಗೇಣಿಗೆ ಪಡೆದ ರೈತರು ಆ ನೀರ ಹರಿವನ್ನು  ತಮಗಷ್ಟೇ ಅಲ್ಲದೆ ಎಲ್ಲೆಲ್ಲೋ ಇತರ  ಚಟುವಟಿಕೆ, ವಹಿವಾಟುಗಳಿಗೆ  ಹರಿಸಿಕೊಳ್ಳುತ್ತಿದ್ದರು, ನಮಗೆ ಹೇಳುತ್ತಲೂ ಇರಲಿಲ್ಲ. ನಮಗೆ ಹೇಳಿ ಮಾಡಿದರೆ ನಾವು ಬಿಡುತ್ತಿರಲಿಲ್ಲ ಅಂತ ಗೊತ್ತಿರದಷ್ಟು ಮುಗ್ಧರೆ ಅವರು?

ಈ ಎಲ್ಲ ಕಾರಣಗಳಿಂದ ನಾನು ಅಕ್ಕಪಕ್ಕದವರ ಸಹವಾಸವೇ ಬೇಡ ಬೇರೆ ಕಡೆಯಿಂದಲೇ ಒಬ್ಬ ರೈತನನ್ನು ಹುಡುಕಿ ತರಬೇಕು ಎಂಬ ಪಣ ತೊಟ್ಟಾಗ ಅಲ್ಲೊಬ್ಬ ಕೃಷಿ ಆಸಕ್ತಿಯ ರೈತ ಇದ್ದಾನೆ ಎಂಬ ಸುದ್ದಿ ಬಂತು. ನನ್ನ ಇಬ್ಬರು ಹಿತೈಷಿಗಳ ಜೊತೆ ಅವನನ್ನು ಹುಡುಕಿ ಹೊರಟಾಗ, ಅಲ್ಲಿ ನಮಗೆ ಸಿಕ್ಕವನೇ ದೇವೇಂದ್ರಪ್ಪ. ನನ್ನ ಹೊಲದ ಕುರಿತು ಹೀಗೀಗೆ ಎಂಬ ವಿಷಯ ಹೇಳಿ, ಹೊಲ ಮಾಡಬೇಕು ಬರ್ತೀಯ ಅಂತ ಕರೆದಾಗ, ‘ಬರ್ರಿ’ ಅಂತ ಬೈಕ್ ಏರಿ ಒಂದಿಷ್ಟು ಜನರನ್ನು ಸೇರಿಸಿ ನಮ್ಮ ಹೊಲಕ್ಕೆ ಬಂದೆ ಬಿಟ್ಟ.

ಎಲ್ಲೆಲ್ಲೂ ಎದೆಯೆತ್ತರ ಬೆಳೆದ ಹುಲ್ಲು ನಮ್ಮ ಹೊಲದ ಸ್ಥಿತಿಗೆ ಕನ್ನಡಿಯಾಗಿತ್ತು. ಅವನು ಹೇಳಿದ: ‘ ಇದನ್ನು ಸರಿ ಮಾಡಲು ತುಂಬಾ ಖರ್ಚಾಗುತ್ತೆ. ಅಷ್ಟು ಸಾಲ ತೊಗೊಂಡೇ ಮಾಡಬೇಕು,  ತಾನೂ ಬಡವ ಆದ್ದರಿಂದೆ ನೀವೇ ಇಷ್ಟು ದುಡ್ಡು ಕೊಡಿ, ಬೆಳೆ ಬಂದ ಮೇಲೆ ನಾನು ಕೊಟ್ಟ ದುಡ್ಡು ಮತ್ತು ಬೆಳೆಯಲ್ಲಿ ಮೂರು ಭಾಗದಲ್ಲಿ ಒಂದು ಭಾಗ ಕೊಡುವೆ’.

ಅವನು ಅಷ್ಟು ಬೇಗನೆ ಹೊಲ ನೋಡಲು ಬಂದದ್ದಕ್ಕೆನೆ ನಾನು ಮನಸೋತು ಹೋಗಿದ್ದೆ.  ಹೀಗಾಗಿ, ‘ಆಯ್ತು’ ಅಂತ ನಿಗದಿ ಆದ ದುಡ್ಡು ಕೊಟ್ಟೆ.

ಮರುದಿನ ಹೋದಾಗ ನನ್ನ ಕಣ್ಣೆ ನಂಬಲಾರದಷ್ಟು ಆಶ್ಚರ್ಯ ನನಗಾಗಿತ್ತು. ನನ್ನ ಹೊಲಕ್ಕೆ ಟ್ರಾಕ್ಟರ್ ಹೊಡೆದು ಪೂರ್ತಿ ಚೊಕ್ಕ ಮಾಡಿ ಜೋಳ ಬಿತ್ತಲು ಸಕಲ ಸಿದ್ಧತೆ ಮಾಡಿಕೊಂಡಿದ್ದ. ನನಗೆ ಈ ಪುಣ್ಯಾತ್ಮ ಸಿಕ್ಕಿದ್ದು ಒಳ್ಳೇದೆ ಆಯ್ತು ಅಂತ ಆ ಕ್ಷಣಕ್ಕೆ ಅನಿಸಿತು.

ಕೆಲವೇ ದಿನಗಳಲ್ಲಿ ಕೃಷಿ ಪ್ರಗತಿ ಕಾಣತೊಡಗಿತು. ಜೋಳ ಬೆಳೆಯುವುದನ್ನು ನೋಡುವುದೇ ಒಂದು ಖುಷಿಯ ಸಂಗತಿಯಾಗಿತ್ತು. ಅದು ಇನ್ನೇನು ಕಟಾವಿಗೆ ಬರುತ್ತೆ ಅನ್ನುವ ಸಮಯದಲ್ಲಿ ಕೊರೊನಾ ಉತ್ತುಂಗ ಸ್ಥಿತಿಗೆ ತಲುಪಿ ನನಗೆ ಊರಿಗೆ ಬರಲಾಗಲಿಲ್ಲ. ದೇವೇಂದ್ರ ಅಷ್ಟರಲ್ಲೇ ಒಂದಿಷ್ಟು ಭತ್ತವನ್ನೂ ಬಿತ್ತಿ ಅದೂ ಕೂಡ ಕಟಾವಿಗೆ ಬಂದಿತ್ತು. ನನಗೆ ಎಷ್ಟು ಹುರುಪು ಇತ್ತು ಅಂದ್ರೆ ವರ್ಣಿಸಲು ಅಸಾಧ್ಯ. ಮೊತ್ತ ಮೊದಲ ಬಾರಿಗೆ ನನ್ನ ಹೊಲದಲ್ಲಿ ಬೆಳೆದ ಅಕ್ಕಿಯನ್ನು ನಾನು ತಿನ್ನುತ್ತೇನೆ ಎಂಬುದನ್ನು ನೆನೆದು ನಾನು ರೋಮಾಂಚನಕ್ಕೊಳಗಾಗಿದ್ದೆ.

ನನಗೆ ಹೊಲ ಮಾಡುವ ಹಠ ಇತ್ತಾದರೂ ಹೇಗೆ ಮಾಡಬೇಕು ಎಂಬುದೇ ತಿಳಿದಿರಲಿಲ್ಲ. ನನಗೆ ತಿಳಿದಿಲ್ಲ ಅಂಬೋದು ಅನೇಕ ಜನರಿಗೆ ಗೊತ್ತಾಗಿತ್ತು. ಹಳ್ಳಿಗೆ ಹೋದಾಗಲೊಮ್ಮೆ ಕಳೆ ಬೆಳೆದ ನನ್ನ ಜಮೀನು ನೋಡಿ ಕರುಳು ಕಿವುಚಿದಂತಾಗುತ್ತಿತ್ತು. ನನಗೆ ಅಲ್ಲಿ ಹೋಗಿ ಏನೂ ಮಾಡಲು ಆಗುತ್ತಿಲ್ಲ ಎಂಬ ಹತಾಶೆ ಕೋಪ ಎಲ್ಲವೂ ಬಂದುಬಿಡುತ್ತಿತ್ತು.

ಲಾಕ್ ಡೌನ್  ಸಂಭ್ರಮಗಳು ಮುಗಿದು ಹಳ್ಳಿಗೆ ಹೋದಾಗ ನನಗೆ ಆಘಾತ ಕಾದಿತ್ತು. ಎಲ್ಲವನ್ನೂ ಬಳಿದುಕೊಂಡು ಆತ ಎಲ್ಲೋ ಮಾರಿಬಿಟ್ಟಿದ್ದ! ನನಗೆ ಅದರ ಸುದ್ದಿಯೂ ಇರಲಿಲ್ಲ. ಅಷ್ಟೊತ್ತಿಗೆ ದಾರಿಯಲ್ಲಿ ಸಿಕ್ಕ ಹಳ್ಳಿಯ ಪ್ರತಿಯೊಬ್ಬನೂ, ‘ತಾನು ಅವನಿಗೆ ದುಡ್ಡು ಕೊಟ್ಟಿರುವೆ, ಜೋಳ ಬಂದ ಮೇಲೆ ಕೊಡುವೆ ಅಂತ ಹೇಳಿದ್ದಾನೆ’ ಅಂತ ಹೇಳುತ್ತಿದ್ದರು. ಅಲ್ಲಿನವರು ಯಾರಿಗೂ ದುಡ್ಡು ಬಿಚ್ಚುವ ಜನರೇ ಅಲ್ಲ. ಎಲ್ಲರಿಂದಲೂ ಅವರೇ ಪೀಕುವವರು. ಅಂಥವರು ಇವನಿಗೆ ದುಡ್ಡು ಕೊಟ್ಟಿದ್ದಾರೆ ಎಂದರೆ, ಇವನು ಅವರಿಗೆಲ್ಲ ಏನೇನು ಮಹದುಪಕಾರ ಮಾಡಿರಬಹುದು ಎಂಬ ಚಿಂತೆ ಮಾಡಿದಾಗ, ವಿಚಾರಿಸಲು ಶುರು ಮಾಡಿದೆ. ಆಗ ತಿಳಿದ ವಿಷಯಗಳ ಕೇಳಿ ನಾನು ಹೌಹಾರಿದೆ.

ಅವನಿಗೆ ಫೋನ್ ಮಾಡಿದರೆ ಅದು ಬಡಿದುಕೊಳ್ಳುತ್ತಿತ್ತು ಆಮೇಲೆ ಅವನು ಸ್ವಿಚ್ ಆಫ್ ಮಾಡುತ್ತಿದ್ದ. ಅವನು ಆ ಜೋಳವನ್ನು ಎಲ್ಲಿ ಇಟ್ಟಿದ್ದಾನೆ ಅಂತ ಪತ್ತೆ ಹಚ್ಚಿ ಆ ಊರಲ್ಲಿಯೇ ಇದ್ದ ಓರ್ವ ವ್ಯಾಪಾರಿಯ ಬಳಿ ಹೋದೆವು.

“ಅವನೌನ್ ನಿಮಗ ಮೋಸ ಮಾಡ್ಯಾನೇನ್ರಿ. ಅವನ ಜೋಳ ನನ್ನ ಹತ್ರ ಐತಿ. ಆದ್ರ ೫೦ ಸಾವಿರ ನನ್ನ ಹತ್ರ ತೊಗೊಂಡಾನ್ ನೋಡ್ರಿ” ಅಂತ ಹೇಳಿದ ಆ ಮಹಾನುಭಾವ.

“ಅವನ್ ನಂಬರ್ ಕೊಡ್ರಿ ಇಲ್ಲೇ. ಅಂತ ನಮ್ಮ ಬಳಿಯೇ ಅವನ ನಂಬರ್ ಇಸಿದುಕೊಂಡ. ಅವನ ನಂಬರ್ ಕೂಡ ಇಲ್ಲದೇ, ಅವನಿಗೆ ೫೦ ಸಾವಿರ ಸಾಲ ಕೊಟ್ಟ ಸಾಹುಕಾರ ಇವನು ಎಂಬುದಾಗಿ ನಂಬುವಷ್ಟು ಮೂರ್ಖರೇ ನಾವು ? ಅಂಗಡಿಯವನಂತೂ ನಾವು ಮೂರ್ಖರು ಎಂದೇ ತಿಳಿದುಕೊಂಡಿದ್ದ. ಆದರೆ ಅದು ಗೊತ್ತಿದ್ದೂ ಏನು ಮಾಡಲಾರದಷ್ಟು ನಾವು ಹತಾಶರು ಅಂತ ಗೊತ್ತಿತ್ತೋ ಏನೋ. ಅದಿರಲಿ, ಒಟ್ಟಿನಲ್ಲಿ ನಾವು ಮೋಸ ಹೋಗಿದ್ದೆವು!

ನಮ್ಮೆದುರು ಅವನಿಗೆ ಫೋನ್ ಮಾಡಿ ಹಿಗ್ಗಾ ಮುಗ್ಗಾ ಬೈಯುತ್ತಾನೆ ಅಂದುಕೊಂಡಿದ್ದೆವು. ಆದರೆ ಅವನು ತುಂಬಾ ಪ್ರೀತಿಯಿಂದ ಹೇಳಿದ “ಅವರ ದುಡ್ಡು ಕೊಡಪಾ.. ಪಾಪ ಅಲ್ಲಿಂದ ಬಂದಾರ..” ಅಂತ ಹೇಳುವಾಗ ನನಗೆ ನಗಬೇಕೋ ಅಳಬೇಕೋ ಎಂಬ ದ್ವಂದ್ವ! ಇವನೂ ಅವನೂ ಗಳಸ್ಯ ಕಂಠಸ್ಯ ಅಂತ ನಮಗೆ ಕೂಡಲೇ ಗೊತ್ತಾಯ್ತು. ಅವನು ಸುಮ್ಮನೆ ನಮ್ಮೆದುರು ನಾಟಕ ಮಾಡುತ್ತಿದ್ದ.
ಮುಂದೆ ನಡೆದದ್ದು ಇತಿಹಾಸ. ದೇವೇಂದ್ರ ಮತ್ತೆ ಪ್ರತ್ಯಕ್ಷನಾದ. ಅತ್ತು ಕರೆದು ಮಾಡಿದ.

“ನಾನು ಭಾಳ ಸಾಲ ಮಾಡೀನ್ರಿ. ಮಳಿ ಬಂದು ಜ್ವಾಳಾ ಎಲ್ಲಾ ಹಾಳಾಗೈತಿ. ಇನ್ನೊಂದ್ ಸಲಾ ಕೊಡ್ರಿ .. ನೀವು ಕೊಟ್ಟಿದ್ ದುಡ್ಡು ಕೊಡ್ತೀನಿ. ಮುಂದಿನ ಸಲಾ ಬೆಳಿ ಬಂತಂದ್ರ ಅದ್ರಾಗೂ ಪಾಲು ಕೊಡ್ತೀನ್ರಿ. ನಾವ್ ಮೋಸಾ ಮಾಡಂಗಿಲ್ಲ..” ಅಂತ ಗೋಗರೆದ.. ನಾನು ಅವನಿಗೆ ಕನಿಕರ ತೋರುವ ಸ್ಥಿತಿಯಲ್ಲಿ ಇರಲಿಲ್ಲ. ಅಷ್ಟರಲ್ಲಿ ಪಕ್ಕದ ಹೊಲದ ಗೌಡ ಆಕಸ್ಮಿಕವಾಗಿ ಎಂಬಂತೆ ಅಲ್ಲಿಗೆ ಬಂದ.

“ಏನಾತ್ ಏನಾತ್…” ಅನ್ನುತ್ತ… ಅವನಿಗೆ ಸರಿಯಾಗ್ ಬೈದ. “ಹಂಗೆಲ್ಲ ಮಾಡಬಾರ್ದೋ.. ದುಡ್ಡು ಯಾವಾಗ್ ಕೊಡ್ತಿ ಹೇಳು?” ಅಂತ ಒಂದು ದಿನಾಂಕ ನಿಗದಿ ಮಾಡಿದ. ನಮಗೋ ಗೌಡ ಒಬ್ಬ ಅಪದ್ಭಾಂದವನಂತೆ ಕಂಡ! ಒಂದು ದಿನಾಂಕ ಅಂತ ನಿಗದಿ ಮಾಡಿ ಅಲ್ಲಿಂದ ಹೊರಟೆ. ಈ ಸಲ ನನ್ನ ಹೊಲದ ಜೋಳವನ್ನಾದರೂ ತಿನ್ನೋಣ ಎಂಬ ನನ್ನ ಕನಸನ್ನು ಇನ್ನೂ ಜೀವಂತ ಇಟ್ಟಿದ್ದ ನಮ್ಮ ದೇವಣ್ಣ!

ಕೆಲವೇ ತಿಂಗಳಲ್ಲಿ ಬಂಪರ್ ಬೆಳೆ ತೆಗೆದಿದ್ದ. ಮತ್ತೆ ಕೊರೊನಾ ವಕ್ಕರಿಸಿತು. ನನಗೆ ಹೋಗಲಾಗಲಿಲ್ಲ.

ಅವತ್ತೊಂದು ದಿನ ದೇವಣ್ಣ ಫೋನ್ ಮಾಡಿದ. ನಿಮ್ಮ ಅಕೌಂಟ್ ನಂಬರ್ ಕಳಿಸಿ ಎಂದ. ನಾನು ನಕ್ಕೆ. ದುಡ್ಡು ಹಾಕುತ್ತಾನೆ ಅಂತ ನಾನು ನಂಬುತ್ತೇನೆ ಎಂದು ಅವನು ಅಂದುಕೊಂಡಿದ್ದು ತಪ್ಪಲ್ಲ. ಯಾಕೆಂದರೆ ಎರಡೂ ಸಲ ಒಂದೇ ವ್ಯಕ್ತಿಯ ಕಡೆ ಮೋಸ ಹೋಗಿದ್ದೆನಲ್ಲ! ಪ್ರತಿ ಮೋಸದ ಹಿಂದೆ ನಮ್ಮ ದೌರ್ಬಲ್ಯ ಇರುತ್ತದೆ. ನನಗೆ ಅಲ್ಲಿ ಹೋಗಿ ಇರಲಾಗುವುದಿಲ್ಲ ಎಂಬುದು ನನ್ನ ಆಗಿನ ದೌರ್ಬಲ್ಯವಾಗಿತ್ತು. ನನ್ನ ದುಡ್ಡು ಹೋಗಿತ್ತು, ಎರಡು ಸಲದ ಬೆಳೆಯೂ ಹೋಗಿತ್ತು. ನನ್ನ ಪಾಲಿಗೆ ಒಂದಿಷ್ಟು ಜೋಳದ ತೆನೆ ಸಿಕ್ಕಿದ್ದವು! ಒಂದೊಂದರ ಬೆಲೆ ೨೦ ಸಾವಿರ ರೂಪಾಯಿ ಅಂತ ನಾನು ಹೇಳುತ್ತಿರುತ್ತೇನೆ. ಒಂದೆರಡು ತೆನೆಗಳನ್ನು ಇನ್ನೂ ಇಟ್ಟುಕೊಂಡಿದ್ದೇನೆ. ಅವು ನಾನು ಕಲಿತ ಪಾಠಕ್ಕೆ ಒಂತರಹದ ಪ್ರಮಾಣ ಪತ್ರ ಇದ್ದಂಗೆ!

*

ಗೌಡ ಅವನ ದೋಸ್ತ ಅಂತ ಬಹು ಬೇಗನೆ ಅರ್ಥ ಆಗಿತ್ತು. ಇವನ ಬಳಿ ನನ್ನ ಹೊಲದ ಪುಗಸಟ್ಟೆ ನೀರು ತೆಗೆದುಕೊಂಡ ಅನೇಕರು ಅಲ್ಲಿ ಇವನ ಮಿತ್ರರಾಗಿದ್ದರು. ಅವರೆಲ್ಲರಿಗೂ ದೇವಣ್ಣ ದುಡ್ಡು ಕಿತ್ತುಕೊಂಡು ಬದಲಿಗೆ ನೀರು ಕೊಡುತ್ತಿದ್ದ. ಯಾರದೋ ಗಂಟು; ಎಲ್ಲರೂ ಎಲ್ಲಮ್ಮನ ಜಾತ್ರೆಯಲ್ಲಿ ನಿರತರಾಗಿದ್ದರು! ಅಲ್ಲಿನವರ ಮನಸ್ಥಿತಿ ಹೇಗಿದೆ ಅಂದರೆ, ಪುಗಸಟ್ಟೆ ಏನೇ ಸಿಕ್ಕರೂ ಅದನ್ನು ತೆಗೆದುಕೊಳ್ಳುವುದು ಅವರ ಜಾಯಮಾನ ಆಗಿಬಿಟ್ಟಿದೆ. ಬೆಂಗಳೂರಿನಿಂದ ಬಂದವರ ಬಳಿ ದುಡ್ಡು ಗೆದ್ದಲು ಹಿಡಿದಿರುತ್ತೆ ಅಂತ ಅಲ್ಲೊಬ್ಬ ರೈತ ಹೇಳುತ್ತಿದ್ದ. ಹಾಗಂತ ಅವನದೂ ಹತ್ತಾರು ಎಕರೆ ಜಮೀನಿದೆ. ಶುಂಟಿ ಬೆಳಯಲು ಹತ್ತಾರು ಲಕ್ಷ ಹಾಕಿ ಕೈ ಸುಟ್ಟುಕೊಂಡೆ ಅನ್ನುತ್ತಲೇ ಮತ್ತೆ ಮತ್ತೆ ದುಡ್ಡು ಹಾಕಿ ತೆಗೆಯುತ್ತಾನೆ, ಆದರೂ ಅಳುತ್ತಾನೆ. ಎಲ್ಲರ ಮನೆಯಲ್ಲೂ ಬೈಕುಗಳು, ಪೆಟ್ರೋಲ್ ಬೆಲೆ ಜಾಸ್ತಿ ಅನ್ನುತ್ತಲೇ ಅಡ್ಡಾಡುವ ಹೈಕ್ಳು! ಅವರಿಗೆ ಹೊರಗಿನವರು ಬಂದು ಇಲ್ಲಿ ಬೇರು ಬಿಡುವುದು ಬೇಡಾ. ಹೊಸದನ್ನು ಕಲಿಯುವುದು ಬೇಡ.

ಹೀಗೆ ನವಕೃಷಿಕರ ಲೋಕದಲ್ಲಿ, ವಿಷವನ್ನು ಉಣಿಸಿ ಉಣಿಸಿ ಭೂಮಿಯನ್ನು ಬರಡುಗೊಳಿಸುವಲ್ಲಿ ಸಾಂಘಿಕ ಪ್ರಯತ್ನ ನಡೆದಿದೆ. ಎಲ್ಲಿಯವರೆಗೆ ಆ ಮನಸ್ಥಿತಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಅವರು ಉದ್ಧಾರ ಆಗಲಾರರು. ಆದರೂ ಮನದ ಮೂಲೆಯಲ್ಲಿರುವ ಆಶಾ ಕಿರಣದಂತೆ ಅಲ್ಲೊಬ್ಬ ಇಲ್ಲೊಬ್ಬರು ಸಾವಯವ ಪದ್ಧತಿಯಲ್ಲಿ ಸರಿಯಾದ ಬದುಕನ್ನು ರೂಪಿಸಿಕೊಂಡವರೂ ಇದ್ದಾರೆ.

ಆಗ ನಾನು ನಿರ್ಧರಿಸಿದೆ. ಇನ್ನು ನಾನು ಯಾರಿಗೂ ಹೊಲ ಕೊಡಲಾರೆ. ಅದು ನನ್ನ ಭೂಮಿ. ನಾನು ಇಷ್ಟ ಪಟ್ಟು, ಕಷ್ಟ ಪಟ್ಟು ಸಂಪಾದಿಸಿದ ಭೂಮಿ. ಅಲ್ಲಿ ಹೋಗಿ ನಾನು ಉಳಿಮೆ ಮಾಡದಿದ್ದರೆ ಬೇರೆ ಯಾರು ಮಾಡಲು ಸಾಧ್ಯ? ಅಲ್ಲೊಂದು ಮನೆ ಮಾಡಿದೆ. ನನ್ನೊಂದಿಬ್ಬರು ಶಿಷ್ಯರು ಕೂಡ ನನ್ನ ಜೊತೆಗೆ ಬರುತ್ತೇವೆ ಅಂತ ಬಂದರು. ಅವರಿಗೂ ಕಲಿಕೆ ಆಯಿತು. ಇವರ ಎದುರು ಅಲ್ಲಿನವರ ಆಟಗಳು ನಡೆಯುತ್ತಿಲ್ಲ ಯಾಕೆಂದರೆ ಇವರು ನನ್ನ ನಂಬಿಕೆಯ ಬಂಟರು, ನನ್ನ ಮಾತುಗಳನ್ನು ಕೇಳೋರು. ನಾನು ಹಳ್ಳಿಗೆ ಹೋಗಲು ಕಾರಣನಾದವನು ದೇವೇಂದ್ರ ಮತ್ತು ಅವನ ಥರದವರು. ವ್ಯವಸಾಯ ಮಾಡಬೇಕು ಅಂದರೆ ಹೊಲದ ಪಕ್ಕದಲ್ಲೇ ಇರಬೇಕು ಎಂಬುದರ ಅರಿವು ಕೊಟ್ಟ ದೇವೇಂದ್ರ ನಮ್ಮ ಗುರುವೇ ತಾನೇ! ನನಗೆ ಬುದ್ಧಿ ಕಲಿಸಲು ದೆವರೇ ಅವನನ್ನು ಕಳಿಸಿದ್ದು ಅನ್ನೋದು ನನ್ನ ಬಲವಾದ ನಂಬಿಕೆ. ಹೀಗಾಗಿ ಅವನು ನನ್ನ ಪಾಲಿಗೆ ಗುರು ಹಾಗೂ ದೇವದೂತ ಎರಡೂ ಆಗಿದ್ದಾನೆ. ಅವನಿಗೆ ನಾನು ಚಿರ ಋಣಿ!