ಇಷ್ಟೆಲ್ಲ ರೂಢಿಗತವಾಗಿರುವ ರೀತಿಯಲ್ಲಿ ಚಿತ್ರದ ಚಲನೆ ಇದ್ದರೂ ನಿರ್ದೇಶಕನ ಆಶಯಕ್ಕೆ ತಕ್ಕ ರೀತಿಯಲ್ಲಿ ನಮ್ಮನ್ನು ಆವರಿಸಿ ಒಳಗೊಳ್ಳುವಂತೆ ಸಾಧ್ಯವಾಗುವುದರಲ್ಲಿ ಚಿತ್ರಕಥೆಯಷ್ಟೇ ಪ್ರಮುಖ ಕೊಡುಗೆ, ದೃಶ್ಯಗಳಲ್ಲಿ `ಅಭಿನಯ’ ಎನ್ನಬಹುದಾದ ನೂರಕ್ಕೆ ನೂರರಷ್ಟು ಸಹಜತೆಯನ್ನು ಮೇಳವಿಸಿಕೊಂಡ ನಟರ ಆಂಗಿಕ ವರ್ತನೆ ಮತ್ತು ಭಾವ ಪ್ರಕಟಣೆಗಳದ್ದು. ಇದರಿಂದಾಗಿ ಅಗತ್ಯವಿರುವಲ್ಲಿ ಭಾವತೀವ್ರತೆ ವ್ಯಕ್ತವಾಗುತ್ತದೆಯೇ ಹೊರತು ಭಾವಾವೇಶವಲ್ಲ. ಕಳೆದ ಎರಡೂವರೆ ವರ್ಷದಿಂದ ಪ್ರಕಟವಾಗುತ್ತಿರುವ
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼಯ ಕೊನೆಯ ಬರಹದಲ್ಲಿ ಇಟಲಿಯ ʻದಿ ಸನ್ಸ್ ರೂಮ್ʼ ಸಿನಿಮಾದ ವಿಶ್ಲೇಷಣೆ
ಮನುಷ್ಯನ ಬಾಳು ವೈಯಕ್ತಿಕ ನೆಲೆಗನುಗುಣವಾಗಿ ಒಂದು ಗೊತ್ತಾದ ಲಯದಲ್ಲಿ ಕ್ರಮಿಸುತ್ತಿರುತ್ತದೆ. ಜೀವನಾವಸ್ಥೆಯ ವಿವಿಧ ಮಜಲುಗಳಲ್ಲಿ ಉಂಟಾಗುವ ಸಣ್ಣ ಪುಟ್ಟ ಪ್ರಾಪಂಚಿಕ ವಿಷಯದ ಏರುಪೇರುಗಳು ಸಾಮಾನ್ಯವಾಗಿ ಇದನ್ನು ಬದಲಾಯಿಸುವಷ್ಟು ಶಕ್ತಿಯುತವಾಗಿರುವುದಿಲ್ಲ. ಏಕೆಂದರೆ ಇದು ಮೂಲಭೂತವಾಗಿ ಮನುಷ್ಯನ ಭಾವಪ್ರಪಂಚಕ್ಕೆ ಅನ್ವಯಿಸಿದ್ದು. ಆದರೆ ಆ ಭಾವಪ್ರಪಂಚಕ್ಕೆ ಧಕ್ಕೆಯುಂಟಾಗುವ ಪ್ರಸಂಗಗಳು ಜರುಗಿದರೆ ಜೀವಿತದ ಲಯ ತಪ್ಪಿ ಬದುಕು ಮೂರಾಬಟ್ಟೆಯಾಗುತ್ತದೆ. ಅವರವರ ಆಂತರಿಕ ನೆಲೆಗಟ್ಟು, ಸೂಕ್ಷ್ಮತೆಯ ಮಟ್ಟ ಮುಂತಾದ್ದನ್ನು ಅನುಸರಿಸಿ ಭಾವತೀವ್ರತೆಗಳು ಉಂಟಾಗುತ್ತವೆ. ಇವೆಲ್ಲವನ್ನು ನಿಭಾಯಿಸುವ ಪ್ರಬುದ್ಧತೆ ಮತ್ತು ಅದಕ್ಕೆ ಪೂರಕವಾದ ಧೈರ್ಯಸ್ಥೈರ್ಯಗಳು ಮನುಷ್ಯನಲ್ಲಿ ಒಗ್ಗೂಡುವುದಾದರೆ ಮೊದಲಿನ ಲಯ ಮತ್ತೆ ತನ್ನ ಕಕ್ಷೆಯಯನ್ನು ಬೇಗನೆ ಕಂಡುಕೊಳ್ಳಲು ಸಾಧ್ಯ. ಇದು ಅಪೇಕ್ಷಣೀಯವಾದರೂ ಸುಲಭ ಸಾಧ್ಯವಲ್ಲ. ಆದರೆ ಕಾಲಗತಿಯಲ್ಲಿ ಕ್ರಮೇಣ ತಕ್ಕಮಟ್ಟಿಗೆ ಮತ್ತೆ ಮೊದಲಿನಂತಾಗುವ ಸಂಭವವೇ ಹೆಚ್ಚು. ಇಂಥ ಆಲೋಚನಾ ಕ್ರಮವನ್ನು ಆಧರಿಸಿ ಸಾಹಿತ್ಯ ಮತ್ತು ವಿವಿಧ ರೀತಿಯ ಸೃಷ್ಟಿ ಕ್ರಿಯೆಯಲ್ಲಿ ಅಭಿವ್ಯಕ್ತಿಯಾಗಿರುವ ಪ್ರಮಾಣ ಅಪಾರ. ದೃಶ್ಯ ಮಾಧ್ಯಮದಲ್ಲಿಯೂ ಅಷ್ಟೆ. ಒಂದು ರೀತಿಯಲ್ಲಿ ನಿರುಮ್ಮಳವಾಗಿ ಸಾಗುತ್ತಿರುವ ಸಂಸಾರವೊಂದರಲ್ಲಿ ಹರೆಯದ ಮಗನ ಆಕಸ್ಮಿಕ ಸಾವು ಉಂಟುಮಾಡುವ ತಕ್ಷಣದ ಪ್ರಭಾವ ಮತ್ತು ಕ್ರಮೇಣ ಕಂಡುಕೊಳ್ಳುವ ನೆಲೆ ಸಾಮಾನ್ಯವಾಗಿ ವಿಶೇಷವೆನಿಸದ ವಸ್ತು. ಈ ವಸ್ತುವನ್ನು ನಿಭಾಯಿಸುತ್ತಲೇ ನಮ್ಮಂತರಂಗದ ವಿವಿಧ ಸೂಕ್ಷ್ಮ ಸ್ತರಗಳನ್ನು ಇಷ್ಟಿಷ್ಟೆ ಇಷ್ಟಿಷ್ಟೆ ಆಕ್ರಮಿಸುತ್ತ ನಮಗೆ ಸ್ವಂತ ಅನುಭವವಿಲ್ಲದಿದ್ದರೂ ಅದರಲ್ಲಿ ಸಂಪೂರ್ಣವಾಗಿ ತನ್ಮಯರಾಗುವಂತೆ ಮಾಡಿ ಯಾವುದೇ ಕ್ಷಣದಲ್ಲೂ ಕಿಂಚಿತ್ ಅಸಹಜತೆಗೆ ಆಸ್ಪದ ಕೊಡದಂತೆ ತನ್ನ ಆಶಯವನ್ನು ಪೂರೈಸುವ ಸಾಮರ್ಥ್ಯ ಹೊಂದಿರುವ ಇಟಲಿಯ ನಾನಿ ಮೊರಟ್ಟಿಯ 99 ನಿ೮ಮಿಷಗಳ ಚಿತ್ರ `ಸನ್ಸ್ ರೂಮ್’ .
ರೋಮ್‌ನಲ್ಲಿ ನೆಲೆಸಿರುವ ನಾನಿ ಮೊರಟ್ಟಿ ಹುಟ್ಟಿದ್ದು 1953ರಲ್ಲಿ. ಬಾಲ್ಯದಿಂದಲೇ ಸಿನಿಮಾ ಮತ್ತು ವಾಟರ್ ಪೋಲೋ ಅಂಟಿಕೊಂಡ ಗೀಳು. ಅದಕ್ಕಾಗಿಯೇ ಹದಿವಯಸ್ಸಿನ ತನಕ ಕೂಡಿಟ್ಟಿದ್ದ ಹಣದಲ್ಲಿ ಖರೀದಿಸಿದ ಸೂಪರ್ 8 ಕ್ಯಾಮೆರಾದಲ್ಲಿ ನಿರ್ಮಿಸಿದ ಮೊದಲ ಚಿತ್ರ 1973ರಲ್ಲಿ. ಮೊದಲ ಪೂರ್ಣ ಪ್ರಮಾಣದ ಚಲನಚಿತ್ರ ನಿರ್ಮಿಸಿದ್ದು 1978. ರಾಜಕೀಯದಲ್ಲೂ ಆಸಕ್ತಿ ಹೊಂದಿರುವ ನಾನಿ ಮೊರಟ್ಟಿಗೆ ಎಡಪಂಥದ ಬಗ್ಗೆ ಒಲವು.
2001ರ ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ ಇತರ ಏಳು ಪ್ರಶಸ್ತಿಗಳನ್ನು ಗಳಿಸಿರುವ ಈ ಚಿತ್ರದ ಕಥಾಹಂದರ ಹೆಚ್ಚು ಉಬ್ಬುಗಳಿಲ್ಲದ ಸ್ವರೂಪದ್ದು. ತನ್ನ ವೃತ್ತಿಯಲ್ಲಿ ಸರಾಗವಾಗಿ ಮುನ್ನಡೆಯುತ್ತಿರುವ ಮನಃಶಾಸ್ತ್ರಜ್ಞ ಗಿಯೊವಾನಿಗೆ ಇಬ್ಬರು ಹರೆಯದ ಮಕ್ಕಳು- ಕಾಲೇಜಿನಲ್ಲಿರುವ ಮಗ ಆಂಡ್ರಿಯ, ಮಗಳು ಇರೀನ್. ಸಂಸಾರದ ಕ್ಷೇಮದಲ್ಲಿ ಹೆಂಡತಿ ಪಾವ್ಲಾ ಸಮಭಾಗಿ. ಗೆಲುವಿನಿಂದ ಕೂಡಿದ್ದರೂ ಸಾಮಾನ್ಯ ಮಟ್ಟದ ಆಂಡ್ರಿಯ ಕಾಲೇಜಿನ ನಡೆದ ಸಣ್ಣ ಕಳ್ಳತನದಲ್ಲಿ ಭಾಗಿ. ಮೊದಲು ಒಪ್ಪಿಕೊಳ್ಳದಿದ್ದರೂ ನಂತರ ಅಮ್ಮನ ಬಳಿ ತಪ್ಪೊಪ್ಪಿಕೊಳ್ಳುತ್ತಾನೆ. ಇರೀನ್ ಕಾಲೇಜಿನ ಬ್ಯಾಸ್ಕೆಟ್ ಬಾಲ್ ತಂಡದಲ್ಲೊಬ್ಬಳು. ಸಮುದ್ರದಲ್ಲಿ ಆಂಡ್ರಿಯನ ಆಕಸ್ಮಿಕ ಸಾವು ಈ ಸುಖೀ ಸಂಸಾರದ ಮೇಲೆ ಅವರ ಬಾಹ್ಯ ಮತ್ತು ಅಂತರಂಗದ ವಿಷಯಗಳ ಮೇಲೆ ತೀವ್ರ ಪ್ರಭಾವ ಬೀರಿ ನೆಲೆ ತಪ್ಪಿಸುತ್ತದೆ. ಗಿಯೊವಾನಿಗೆ ವೃತ್ತಿಯಲ್ಲಿ ಆಸಕ್ತಿ ಕಡಿಮೆಯಾದರೆ ಇರೀನ್‌ಳ ಬ್ಯಾಸ್ಕೆಟ್ ಬಾಲ್ ಆಟದಲ್ಲಿ ಸಂಯಮ ಕಳೆದುಕೊಳ್ಳುತ್ತಾಳೆ. ಈ ವೇಳೆಗೆ ಒಂದಿಷ್ಟು ಕಾಲ ಸವೆಯುವುದರ ಜೊತೆಗೆ ಆಂಡ್ರಿಯಾನಿಗೆ ಆರಿಯಾನ ಎಂಬ ಗೆಳತಿ ಇದ್ದದ್ದು ತಿಳಿಯುತ್ತದೆ. ತನ್ನ ಈಗಿನ ಗೆಳೆಯನೊಂದಿಗೆ ಬರುವ ಅವಳು ಗಿಯೊವಾನಿಯ ಸಂಸಾರದ ಸದಸ್ಯರನ್ನು ಭೇಟಿಯಾಗಿವ ಪ್ರಸಂಗ ಅವರ ಭಾವದ ನೆಲೆಗಳಿಗೆ ಮತ್ತು ಒಟ್ಟಾರೆ ಪ್ರಬುದ್ಧ ಜೀವನದೃಷ್ಟಿಗೆ ಕಾರಣವಾಗುತ್ತಾಳೆ.
ಈ ಕಥೆಯ ಎಳೆಗಳನ್ನು ಬಳಸಿಕೊಂಡು ಗಿಯೊವಾನಿ ರಚಿಸಿರುವ ಚಿತ್ರಕಥೆ ನಿಜಕ್ಕೂ ಅನನ್ಯ. ತಾನು ನಿರ್ವಹಿಸುತ್ತಿರುವ ವಸ್ತುವಿನಲ್ಲಿ ಬೆರಗುಗೊಳಿಸುವ ನಾವೀನ್ಯತೆ ಇಲ್ಲ ಎನ್ನುವುದನ್ನು ಅವನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುವುದು ದೃಶ್ಯ ಸರಣಿಗಳಲ್ಲಿ ಎದ್ದು ಕಾಣುತ್ತದೆ. ಇಲ್ಲಿಯೂ ಕೂಡ ಅವನು ಅನುಸರಿಸಿರುವ ಮಾರ್ಗ ತೀರ ಸರಳ ಹಾಗೂ ನೇರ. ವಿವಿಧ ಸಂಬಂಧಗಳಿರುವ ವ್ಯಕ್ತಿಗಳು ತಾವು ಪ್ರೀತಿಸುವ ವ್ಯಕ್ತಿಯೊಡನೆ ನಡೆದುಕೊಳ್ಳುವ ಮತ್ತು ವ್ಯಕ್ತಪಡಿಸುವ ಭಾವನೆಗಳ ರೀತಿಗಳು-ಇವುಗಳನ್ನು ಪದರು-ಪದರುಗಳಾಗಿ ತೆರೆದಿಟ್ಟಿರುವುದೇ ಅದರ ವಿಶೇಷತೆ. ಜೊತೆಗೆ ಎರಡನೆ ಪ್ರಮುಖ ಅಂಶವಾದ ಪಾತ್ರವರ್ಗವನ್ನು ನಿರ್ಧರಿಸುವುದರಲ್ಲಿ ಗಮನೀಯ ಸಾಮರ್ಥ್ಯ ಕಾಣುತ್ತದೆ. ಕೇವಲ ವಯೋಮಾನದ ದೃಷ್ಟಿಯಿಂದಲ್ಲದೆ ಆಯಾ ಪಾತ್ರಕ್ಕೆ ಪೋಷಕವಾಗುವಂತೆ ನಟರ ಚಹರೆ ಇತ್ಯಾದಿಗಳಿದ್ದರೆ ನಿರ್ದೇಶಕನಿಗೆ ನಿರ್ವಹಣೆ ಸುಲಭ ಎನ್ನುವುದು ಸಾಮಾನ್ಯ ತಿಳಿವಳಿಕೆ. ಗಿಯೊವಾನಿ ಮಾಡಿರುವುದು ಅದನ್ನೇ. ಮಧ್ಯಮ ವಯಸ್ಸಿನ ನಿರ್ದೇಶಕ ನಾನಿ ಮೊರಟ್ಟಿ ತಂದೆಯಾಗಿ ನಟಿಸಿದ್ದಾನೆ.
ನಗರವೊಂದರಲ್ಲಿ ಬೆಳಗಿನ ಜಾಗಿಂಗ್ ಮಾಡುವ ಗಿಯೊವಾನಿಯ ಪಾಸಿಂಗ್ ಶಾಟ್‌ಗಳಿಂದ ಪ್ರಾರಂಭವಾಗುವ ಚಿತ್ರ ಮತ್ತು ಅದರ ಹಿಂದೆಯೇ ಅವನು ಸಮಚಿತ್ತದಿಂದ, ಹಿಂದಕ್ಕೊರಗಿ ಮಲಗಿದ ರೋಗಿಯೊಬ್ಬಳು ತನ್ನ ಕಾಯಿಲೆಯ ಬಗ್ಗೆ ವಿವರಗಳನ್ನು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತ ಅಗತ್ಯ ವಿವರಗಳನ್ನು ಗುರುತು ಹಾಕಿಕೊಳ್ಳುವ ಅವನ ಆಧುನಿಕ ಕ್ಲಿನಿಕ್‌ನ ದೃಶ್ಯಗಳು ಗಿಯೊವಾನಿಯ ಸಮಾಧಾನಕರ ಮನೋಭೂಮಿಕೆಯನ್ನು ಸೂಚಿಸುತ್ತವೆ. ಇಡೀ ಸಂಸಾರ ಸುಖದ ಲಹರಿಯಲ್ಲಿರುವುದನ್ನು ಸೂಚಿಸಲು ಮನೆಯವರೆಲ್ಲ ಕಾರಿನಲ್ಲಿ ಹೋಗುವಾಗ ಗಿಯೊವಾನಿ ಹಾಡೊಂದನ್ನು ಸಂತೋಷದಿಂದ ಗುಣುಗುಣಿಸಲು ಪ್ರಾರಂಭಿಸಿದಾಗ ಕ್ರಮೇಣ ಒಬ್ಬರ ನಂತರ ಮತ್ತೊಬ್ಬರು ದನಿಗೂಡಿಸುತ್ತಾರೆ. ಅನಂತರ ಅವನು ಆಂಡ್ರಿಯ ಓದುವ ಕಾಲೇಜಿನ ಪ್ರಿನ್ಸಿಪಾಲರನ್ನು ಅವನ ಮೇಲೆ ಫಾಸಿಲ್‌ನ ಕಳ್ಳತನದ ಆಪಾದನೆಯ ಬಗ್ಗೆ ಭೇಟಿ ಮಾಡಬೇಕಾಗುತ್ತದೆ. ಅವನು ಉದ್ದುದ್ದ ಇಕ್ಕಟ್ಟಿನ ಕಾರಿಡಾರುಗಳನ್ನು ದಾಟಿ ಹೋಗುವ ಅವನನ್ನು ಹಿಬಾಲಿಸುವ ಕ್ಯಾಮೆರಾದ ಮಿಡ್ ಶಾಟ್‌ಗಳ ಅವಧಿ ಅವನಲ್ಲಿ ತುಂಬಿದ ವ್ಯಾಕುಲತೆಯನ್ನು ಬಿಂಬಿಸುತ್ತದೆ. ಪ್ರಿನ್ಸಿಪಾಲರ ಜೊತೆ ನಡೆಯುವ ಮಾತುಕತೆಯಲ್ಲಿ ಆಂಡ್ರಿಯ ತಾನು ನಿರಪರಾಧಿ ಎಂದು ಹೇಳುವ ದೃಶ್ಯದಲ್ಲಿ ಉಳಿದದ್ದು ಮಿಡ್ ಶಾಟ್‌ಗಳಲ್ಲಿದ್ದರೂ ಪ್ರಿನ್ಸಿಪಾಲ್‌ಗೆ ಅವನ ಮೇಲೆ ಅನುಮಾನವಿದೆ ಎನ್ನುವುದು ಸಮೀಪ ಚಿತ್ರಿಕೆಗಳಲ್ಲಿರುವ ಅವರ ಮುಖಭಾವ ಅವರ ಅಭಿಪ್ರಾಯದ ಗಟ್ಟಿತನವನ್ನು ತೋರಿಸುತ್ತದೆ. ಈ ಪ್ರಕರಣದಿಂದ ಗಿಯೊವಾನಿಯ ಮನಸ್ಸಿನಲ್ಲಿ ಕೊಂಚ ಅಸ್ಥಿರತೆ ಉಂಟಾಗಿದೆ ಎನ್ನುವುದನ್ನು ಸಮರ್ಥವಾಗಿ ಬಿಂಬಿಸಲು ನಾನಿ ಮೊರಟ್ಟಿ ಮನೆಯೊಳಗೆ ಪ್ಯಾಸೇಜುಗಳ ಮೂಲಕ ಹಾದು ಹೋಗಿ ಅವನ ರೂಮನ್ನು ತಲುಪುವ ತನಕ ಮತ್ತೆ ಗಿಯೊವಾನಿಯನ್ನು ಅಷ್ಟುದ್ದಕ್ಕೂ ಕ್ಯಾಮೆರಾ ಹಿಂಬಾಲಿಸುವ ಶಾಟ್ ಬಳಸಿದ್ದಾನೆ. ಈ ಪ್ರಸಂಗವನ್ನು ಕುರಿತು ಆಂಡ್ರಿಯ ತಾಯಿಯ ಹತ್ತಿರ ಅದು ಕೈ ಮೀರಿ ನಡೆದದ್ದೆಂದು ಒಪ್ಪಿಕೊಳ್ಳುತ್ತಾನೆ.
ಗಿಯೊವಾನಿಗೆ ವೃತ್ತಿಯಲ್ಲಿ ಆಸಕ್ತಿ ಕಡಿಮೆಯಾದರೆ ಇರೀನ್‌ಳ ಬ್ಯಾಸ್ಕೆಟ್ ಬಾಲ್ ಆಟದಲ್ಲಿ ಸಂಯಮ ಕಳೆದುಕೊಳ್ಳುತ್ತಾಳೆ. ಈ ವೇಳೆಗೆ ಒಂದಿಷ್ಟು ಕಾಲ ಸವೆಯುವುದರ ಜೊತೆಗೆ ಆಂಡ್ರಿಯಾನಿಗೆ ಆರಿಯಾನ ಎಂಬ ಗೆಳತಿ ಇದ್ದದ್ದು ತಿಳಿಯುತ್ತದೆ. ತನ್ನ ಈಗಿನ ಗೆಳೆಯನೊಂದಿಗೆ ಬರುವ ಅವಳು ಗಿಯೊವಾನಿಯ ಸಂಸಾರದ ಸದಸ್ಯರನ್ನು ಭೇಟಿಯಾಗಿವ ಪ್ರಸಂಗ ಅವರ ಭಾವದ ನೆಲೆಗಳಿಗೆ ಮತ್ತು ಒಟ್ಟಾರೆ ಪ್ರಬುದ್ಧ ಜೀವನದೃಷ್ಟಿಗೆ ಕಾರಣವಾಗುತ್ತಾಳೆ.
ನಾನಿ ಮೊರಟ್ಟಿ ಇಡೀ ಚಿತ್ರದ ದೃಶ್ಯಗಳ ಚಿತ್ರೀಕರಣದಲ್ಲಿ ಒಂದು ತೀರ ವ್ಯವಸ್ಥಿತವಾದ ಬಗೆಯನ್ನು ಅನುಕರಿಸಿದ್ದಾನೆ. ಇದೂ ಕೂಡ ಎಂದಿನಿಂದಲೂ ಪ್ರಚಲಿತದಲ್ಲಿ ಇರುವಂಥದೇ. ಎಲ್ಲಿ ಪಾತ್ರಗಳು ವೈಯಕ್ತಿಕ ಭಾವ ತೀವ್ರತೆಗೆ ಒಳಗಾಗುತ್ತವೆಯೋ ಅಂಥ ಸಂದರ್ಭಗಳಲ್ಲಿ ಅವುಗಳನ್ನು ಇತರೆ ಪಾತ್ರಗಳಿಂದ ಪ್ರತ್ಯೇಕಿಸಿ ಅಗತ್ಯ ಅವಧಿಯ ಕ್ಲೋಸ್ ಶಾಟ್ ಬಳಸಿದ್ದರೆ, ಉಳಿದಂತೆಲ್ಲ ಮಿಡ್ ಶಾಟ್‌ಗಳು. ಇಷ್ಟೆಲ್ಲ ರೂಢಿಗತವಾಗಿರುವ ರೀತಿಯಲ್ಲಿ ಚಿತ್ರದ ಚಲನೆ ಇದ್ದರೂ ನಿರ್ದೇಶಕನ ಆಶಯಕ್ಕೆ ತಕ್ಕ ರೀತಿಯಲ್ಲಿ ನಮ್ಮನ್ನು ಆವರಿಸಿ ಒಳಗೊಳ್ಳುವಂತೆ ಸಾಧ್ಯವಾಗುವುದರಲ್ಲಿ ಚಿತ್ರಕಥೆಯಷ್ಟೇ ಪ್ರಮುಖ ಕೊಡುಗೆ, ದೃಶ್ಯಗಳಲ್ಲಿ `ಅಭಿನಯ’ ಎನ್ನಬಹುದಾದ ನೂರಕ್ಕೆ ನೂರರಷ್ಟು ಸಹಜತೆಯನ್ನು ಮೇಳವಿಸಿಕೊಂಡ ನಟರ ಆಂಗಿಕ ವರ್ತನೆ ಮತ್ತು ಭಾವ ಪ್ರಕಟಣೆಗಳದ್ದು. ಇದರಿಂದಾಗಿ ಅಗತ್ಯವಿರುವಲ್ಲಿ ಭಾವತೀವ್ರತೆ ವ್ಯಕ್ತವಾಗುತ್ತದೆಯೇ ಹೊರತು ಭಾವಾವೇಶವಲ್ಲ. ಜೊತೆಗೆ ಇದು ಆಯಾ ದೇಶಗಳ ಸಾಂಸ್ಕೃತಿಕ ನೆಲೆಗಳನ್ನೂ ಮೀರಿ ಸಕಲರಿಗೂ ಸರಿ ಎಂದು ಮನದಟ್ಟಾಗುವ ಅಂಶ. ಉತ್ತಮ ಚಿತ್ರಗಳಲ್ಲಿ ರೂಢಿಗತವಾಗಿರುವಂತೆ ಕೇವಲ ಸಾಂದರ್ಭಿಕ ಶಬ್ದಗಳನ್ನು ಮಾತ್ರ ಹಿನ್ನೆಲೆ ಸಂಗೀತ(ಸೌಂಡ್ ಟ್ರ್ಯಾಕ್)ದಲ್ಲಿ ಉಪಯೋಗಿಸಿರುವುದು ಎಲ್ಲರ ಗಮನಕ್ಕೆ ಬರುವ ಇನ್ನೊಂದು ಅಂಶ.
ಗಿಯೊವಾನಿ ಮತ್ತು ಪಾವ್ಲಾ ಮಕ್ಕಳ ಹಿತ ಚಿಂತನೆಯಲ್ಲಿರುತ್ತಾರೆ. ಅವರು ಮಗಳು ಇರೀನಾಳ ಪ್ರೇಮ ಸಂಬಂಧವನ್ನು ಬೆಂಬಲಿಸುವಂತೆಯೇ ಅವಳು ಕಾಲೇಜಿನ ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಮುಂದುವರಿಯುವುದನ್ನೂ ಮೆಚ್ಚಿಕೊಳ್ಳುತ್ತಾರೆ. ಆದರೆ ಆಂಡ್ರಿಯ ಸಾಕಷ್ಟು ಗೆಲುವಿನಿಂದಿರುತ್ತಾನಾದರೂ ಅವನಲ್ಲಿ ಉನ್ನತ ಮಟ್ಟಕ್ಕೇರುವ ತುಡಿತವಿಲ್ಲ ಮತ್ತು ಅದಕ್ಕೆ ಮನಸ್ಸಿಟ್ಟು ಪ್ರಯತ್ನಿಸುತ್ತಿಲ್ಲ ಎನ್ನುವ ಆತಂಕ ಕಾಡುತ್ತದೆ. ಆಂಡ್ರಿಯ ಟೆನ್ನಿಸ್ ಆಟದಲ್ಲಿ ಎಂದಿನಂತೆ ತನ್ನ ಸ್ನೇಹಿತನಿಗೆ ಸೋತಾಗ ಅವನು ಆಡುವುದನ್ನೇ ಹೆಂಡತಿಯ ಜೊತೆ ಕುಳಿತು ತದೇಕವಾಗಿ ನೋಡುವ ಗಿಯೊವಾನಿ ಗೆಲ್ಲಲೇಬೇಕೆಂಬ ಅಭಿಲಾಷೆಯೇ ನಿನ್ನಲ್ಲಿಲ್ಲ ಎಂದು ಅವನಿಗೆ ಹೇಳುತ್ತಾನೆ.
ಅದೊಂದು ದಿನ ಆಂಡ್ರಿಯನೊಂದಿಗೆ ಹೋಗಬೇಕೆಂದು ನಿರ್ಧರಿತವಾದದ್ದು ಕೊನೆ ಘಳಿಗೆಯಲ್ಲಿ ಅವನ ಪೇಷಂಟೊಬ್ಬರು ತನ್ನನ್ನು ತಕ್ಷಣವೇ ನೋಡಬೇಕೆಂದು ಒತ್ತಾಯ ಮಾಡುವುರಿಂದ ಅವರಲ್ಲಿಗೆ ಹೋಗಬೇಕಾಗುತ್ತದೆ. ತನಗೆ ಕ್ಯಾನ್ಸರ್ ಆಗಿರಬಹುದೆಂದೂ ಮತ್ತು ಸತ್ತೇ ಹೋಗುತ್ತೇನೆಂದೂ ಆತಂಕಕ್ಕೆ ಒಳಗಾದ ಅವನಿಗೆ ಸಮಾಧಾನ ಹೇಳಿ ಹಿಂತಿರುಗಿ ಬಂದಾಗ ಮನೆಯ ಮುಂದೆ ಕಾರುಗಳ ಸಾಲು ನೋಡಿ ಧಾವಿಸುವ ಅವನಿಗೆ ಆಂಡ್ರಿಯ ಸಮುದ್ರದಲ್ಲಿ ಜರುಗಿದ ಅಪಘಾತದಲ್ಲಿ ಸತ್ತಿರುವುದು ತಿಳಿಯುತ್ತದೆ. ಇದನ್ನು ಇರೀನಳಿಗೆ ತಿಳಿಸಲು ಗಿಯೊವಾನಿ ಅವಳು ಬ್ಯಾಸ್ಕೆಟ್ ಬಾಲ್ ಆಡುತ್ತಿರುವ ಸ್ಥಳಕ್ಕೆ ಹೋದಾಗ ನಾನಿ ಮೊರಟ್ಟಿ ಆ ದೃಶ್ಯವನ್ನು ಸಂಯೋಜಿಸಿರುವ ರೀತಿ ಮೆಚ್ಚುವಂತಿದೆ. ಇದೇ ರೀತಿಯ ಮತ್ತೊಂದು ದೃಶ್ಯ ಆಂಡ್ರಿಯಾನ ಕಾಫಿನ್ ಮೇಲಿನ ಲೋಹದ ಮುಚ್ಚಳವನ್ನು ವೆಲ್ಡ್ ಮಾಡುವಾಗ ಕಾಣುತ್ತೇವೆ. ಕಾಫಿನ್ ಒಮ್ಮೆ ಮುಚ್ಚಿದ ಮೇಲೆ ಮತ್ತೊಮ್ಮೆ ಅರೆಕ್ಷಣ ತೆಗೆಯುವಂತೆ ಇರೀನಾ ಹೇಳುತ್ತಾಳೆ. ಅನಂತರ ಮುಚ್ಚಳವನ್ನು ವೆಲ್ಡ್ ಮಾಡುವ ಅತಿ ಸಮೀಪ ಚಿತ್ರಿಕೆ (ಎಕ್ಸ್ಟ್ರೀಮ್ ಕ್ಲೋಸ್ ಶಾಟ್) ಇದೆ. ಮೊದಲನೆಯದು ಶೋಕಭಾವ ತುಂಬುವ ಪ್ರಕ್ರಿಯೆಗೆ ಪ್ರಾರಂಭ ಮಾಡಿದರೆ ಎರಡನೆಯದು ಅದನ್ನು ಪೂರ್ಣಗೊಳಿಸುತ್ತದೆ.
ಇಂಥ ದೃಶ್ಯಗಳಿಂದ ಸಾಮಾನ್ಯವಾದದ್ದನ್ನೂ ನಿರ್ದೇಶಕ ನಾನಿ ಮೊರಟ್ಟಿ ಮೇಲಿನ ಸ್ತರಕ್ಕೆ ತೆಗೆದುಕೊಂಡು ಹೋಗುತ್ತಾನೆ. ಚಿತ್ರದಲ್ಲಿ ನಂತರದ ದೃಶ್ಯಗಳಲ್ಲಿ ಗೊವಿಯಾನಿ ಸಂಸಾರದ ಒಬ್ಬೊಬ್ಬರ ಮಾನಸಿಕ ಅಸ್ಥಿರತೆ ಪ್ರಕಟಗೊಳ್ಳುತ್ತವೆ. ಗೊವಿಯಾನಿ ಜಾಗಿಂಗ್ ಮಾಡುತ್ತ ಹಿಂಸೆಗೊಳಗಾಗುತ್ತಾನೆ. ಆಗ ಯಾವಾಗಲೂ ಇರುತ್ತಿದ್ದ ಮಗನ ನೆನಪು ಮೊದಲಿನ ದಿನಗಳ ದೃಶ್ಯ ತುಣುಕಗಳಾಗಿ ಅವನನ್ನು ಕಾಡುತ್ತವೆ. ಮನೆಯಲ್ಲಿ ಹೆಂಡತಿ ಮತ್ತು ಮಗಳ ಜೊತೆ ಒಬ್ಬರಿಗೊಬ್ಬರು ಮಾತಿಲ್ಲದೆ ಕುಳಿತ ದೃಶ್ಯದಲ್ಲಿ ಅವನು ಮ್ಯೂಸಿಕ್ ಸಿಸ್ಟಮ್‌ನ ವಾಲ್ಯೂಮನ್ನು ಅಕಾರಣವಾಗಿ ಹೆಚ್ಚಿಗೆ ಮತ್ತು ಕಡಿಮೆ ಮಾಡುತ್ತ ಅನ್ಯಮನಸ್ಕನಾಗಿರುವುದನ್ನು ವ್ಯಕ್ತಪಡಿಸುತ್ತಾನೆ. ಮನೆಯಲ್ಲಿ ಯಾವುದೊಂದು ವಸ್ತುವೂ ಓರಣವಾಗಿಲ್ಲವೆಂದು ಪಾವ್ಲಾಳನ್ನು ದೂರುತ್ತಾನೆ ಮತ್ತು ಅದೇ ದೃಶ್ಯದಲ್ಲಿ ತನಗೆ ತುಂಬ ಪ್ರಿಯವೆಂದು ಹೇಳುವ ಪಿಂಗಾಣಿ ಟೀ-ಪಾಟನ್ನು ಬೀಳಿಸಿ ತುಂಡು ಮಾಡುತ್ತಾನೆ. ಗಿಯೊವಾನಿಯ ತನ್ನ ಕ್ಲಿನಿಕ್‌ನಲ್ಲಿ ಕೆಲಸ ಮಾಡುವಾಗಲೂ ರೋಗಿಯೊಬ್ಬಳು ತನ್ನ ಮಗನ ಬಗ್ಗೆ ಪ್ರಸ್ತಾಪ ಮಾಡಿದಾಗ ಗಿಯೊವಾನಿಯಲ್ಲಿ ದುಃಖ ಒತ್ತರಿಸಿಕೊಂಡು ಬಿಕ್ಕುತ್ತಾನೆ. ತಾನು ಆ ದಿನ ರೋಗಿಯಬ್ಬನನ್ನು ಕಾಣಲು ಹೋಗದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ತನ್ನನ್ನೇ ಶಪಿಸಿಕೊಳ್ಳುತ್ತಾನೆ. ಆ ರೋಗಿ ಮತ್ತೆ ಅವನನ್ನು ಭೇಟಿಯಾಗಿ ತನಗೆ ಜೀವನಾಸಕ್ತಿ ಕುದುರಿರುವುದನ್ನು ತಿಳಿಸುತ್ತಾನೆ. ಚಿತ್ರಕಥೆಯಲ್ಲಿ ಲವಲವಿಕೆಯಿಂದಿದ್ದ ಮಗನ ಸಾವು ಮತ್ತು ಸತ್ತು ಹೋಗುತ್ತೇನೆಂದು ಹೆದರಿದ್ದವನಲ್ಲಿ ಜೀವನಾಸಕ್ತಿ ಇವುಗಳನ್ನು ಹೆಣೆದಿರುವುದು ಮೆಚ್ಚುಗೆ ಗಳಿಸುತ್ತದೆ.
ಆಂಡ್ರಿಯನ ಬಗ್ಗೆ ಮಾತನಾಡುತ್ತ ಗಿಯೊವಾನಿ ಮತ್ತು ಪಾವ್ಲಾ ದಾಂಪತ್ಯ ಜೀವನದಿಂದಲೂ ವಿಮುಖರಾಗುವ ದೃಶ್ಯ ಕಡಿಮೆ ಅವಧಿಯದಾದರೂ ಪರಿಣಾಮಕಾರಿಯಾಗಿದೆ. ಇರೀನಾ ಅಣ್ಣನ ಸಾವಿನಿಂದ ತಲ್ಲಣಗೊಂಡಿದ್ದನ್ನು ಪ್ರಕಟಿಸಲು ನಾನಿ ಮೊರಟ್ಟಿ ಕೊಂಚ ಹೆಚ್ಚಿನ ಅವಧಿಯ ಬ್ಯಾಸ್ಕೆಟ್ ಬಾಲ್ ಆಟದಲ್ಲಿ ನಡೆಯುವ ಪ್ರಸಂಗವನ್ನು ಬಳಸಿದ್ದಾನೆ. ಆಟವಾಡುವಾಗ ಅಂಪೈರ್‌ನೊಂದಿಗೆ ವಾದಕ್ಕಿಳಿಯುವ ಅವಳು ಎದುರಾಳಿಯೊಂದಿಗೆ ಕೈ-ಕೈ ಮಿಲಾಯಿಸಿ ಹೊಡೆದಾಟಕ್ಕೇ ಹೋಗುತ್ತಾಳೆ. ಈ ದೃಶ್ಯದ ಸಂಕಲನದಲ್ಲಿ ಗಳಿಸಿರುವ ಪ್ರೌಢಿಮೆ ನಿಜಕ್ಕೂ ಹೆಗ್ಗಳಿಕೆಯದು. ಇದಕ್ಕೆ ಪ್ರತಿಯಾಗಿ ಕಿರಿದಾದ ಅವಧಿಯ ದೃಶ್ಯದಲ್ಲಿ ಇರೀನಾ ತನ್ನ ಪ್ರೇಮಿಯ ಬಗ್ಗೆ ಅನ್ನಿಸಿಕೆಯನ್ನು ಬದಲು ಮಾಡಿದ್ದನ್ನು ತೀರ ನಿರ್ಭಾವುಕಳಾಗಿ ತಂದೆ-ತಾಯಿಗೆ ಹೇಳುತ್ತಾಳೆ. ಅನಂತರ ಪಾವ್ಲಾಗೆ ಸತ್ತ ಮಗನಿಗೆ ಆರಿಯಾನಾ ಎನ್ನುವ ಗೆಳತಿ ಇದ್ದಳು ಎನ್ನು ಸಂಗತಿ ಗೊತ್ತಾಗುತ್ತದೆ. ಅವಳ ಜೊತೆ ಮಾತನಾಡಲು ತವಕಿಸುವ ಆಕೆಗೆ ಗಿಯೊವಾನಿ ತಾನು ಕಾಗದ ಬರೆಯುತ್ತೇನೆಂದು ಹೇಳಿ ಪೂರೈಸಲಾಗದೆ ಕೈಬಿಡುತ್ತಾನೆ.
ಪಾವ್ಲಾ ಆರಿಯಾನಾಳನ್ನು ಫೋನಿನಲ್ಲಿ ಸಂಪರ್ಕಿಸಿ ಅವನ ಸಾವಿನ ಬಗ್ಗೆ ತಿಳಿಸುತ್ತಾಳೆ. ಅವರ ಮನೆಗೆ ಬರುವ ಅರಿಯಾನಾ ಸತ್ತ ಗೆಳೆಯನ ರೂಮನ್ನು ನೋಡಲು ಬಯಸುತ್ತಾಳೆ. ಮನೆಯವರೆಲ್ಲ ಅವಳನ್ನು ತುಂಬ ಪ್ರೀತಿಯಿಂದ ನೋಡಿಕೊಂಡು ಆ ದಿನ ಅಲ್ಲಿಯೇ ತಂಗಲು ಹೇಳಿದರೂ ತನಗಾಗಿ ಜೊತೆಗೆ ಬಂದಿರುವ ಹೊಸ ಗೆಳೆಯ ಕಾದಿರುವನೆಂದು ಹೇಳುತ್ತಾಳೆ. ಈ ಸಂಗತಿಯನ್ನು ಅತ್ಯಂತ ಸಹಜ ಮತ್ತು ಅಗತ್ಯವಾದ ಬೆಳವಣಿಗೆಯೆಂದು ಗಿವೊಯಾನಿ ಸಂಸಾರದವರು ಸ್ವೀಕರಿಸುತ್ತಾರೆ. ಜೀವನದಿಯ ಚಲನೆಯ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ಪಾತ್ರಗಳ ಮೂಲಕ ವ್ಯಕ್ತಪಡಿಸುವ ಧೋರಣೆಯಿಂದ ನಾನಿ ಮೊರಟ್ಟಿ ಪ್ರಬುದ್ಧತೆಯನ್ನು ಮೆರೆಯುತ್ತಾನೆ. ಹೀಗೆ ಸಾಮಾನ್ಯದಲ್ಲೂ ಅಸಮಾನತೆಯನ್ನು ಕಾಪಾಡಿಕೊಳ್ಳುವ ನಿರ್ದೇಶಕನ ಪ್ರತಿಭಾ ಸಾಮರ್ಥ್ಯವನ್ನು ಮೆಚ್ಚದಿರುವುದು ಅಸಾಧ್ಯ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
ನಿಮ್ಮ ಈ ಅಂಕಣ ಬರಹ ಪುಸ್ತಕ ರೂಪದಲ್ಲಿ ಬರಲಿ. ವರ್ಷ ಗಳಿಂದ ಹಲವು ಚಿತ್ರಗಳ ಬಗ್ಗೆ ವಿಮರ್ಶೆ ಬರೆದ ನಿಮಗೆ ಅಭಿನಂದನೆಗಳು ಜೊತೆಗೆ ಧನ್ಯವಾದಗಳು.