ಹಿಂದೆಲ್ಲಾ ದೀಪಾವಳಿಯೆಂದರೆ ಹೊಸ ಬಟ್ಟೆಯ ಹಬ್ಬ. ವರುಷಕ್ಕೊಮ್ಮೆ ಹೊಸ ಬಟ್ಟೆ. ಅದು ದೀಕುಂಕುಮ ಅವಿಭಕ್ತ ಕುಟುಂಬ ಪರಂಪರೆಯ ಮನೆಗಳು. ದೂರದೂರಿನಲ್ಲಿರುವ ಬಂಧುಗಳು ದೀಪಾವಳಿ ಬರುತ್ತಿದ್ದಂತೆ ಮನೆಗೆ ಬರುತ್ತಿದ್ದರು. ಜೊತೆಗೆ ಮನೆ ಮಕ್ಕಳಿಗೆ ಹೊಸ ಬಟ್ಟೆ, ಅಂಗಿ… ಹೊಸತನದ ಘಮ…. ಮನೆಯ ತುಂಬೆಲ್ಲ ಪಸರಿಸುತ್ತಿತ್ತು. ತ್ರಯೋದಶಿ ಸಂಜೆ ಗಂಗಾ ಪೂಜೆ… ನೀರು ತುಂಬುವ ಹಬ್ಬ. ಬಚ್ಚಲುಮನೆ ಶುಚಿಗೊಳಿಸಿ, ಹಂಡೆ ತಿಕ್ಕಿ ತೊಳೆದು ಫಳಫಳ ಹೊಳೆದು ಬಳಪದಿಂದ ಗೆರೆ ಎಳೆದು ಹಂಡೆಯ ಕೊರಳಿಗೆ ಗೊಂಡೆ ಹೂ(ಚೆಂಡು ಹೂ)ಗಳ ಮಾಲೆ ಹಾಕಿ….
ಬಾಲ್ಯಕಾಲದಲ್ಲಿ ದೀಪದ ಹಬ್ಬದ ಆಚರಣೆಗಳು ಹೇಗಿದ್ದವು.. ಅದರ ಮಹತ್ವವೇನು ಎಂಬುದರ ಕುರಿತು ಬರೆದಿದ್ದಾರೆ ಪೂರ್ಣಿಮಾ ಸುರೇಶ್

ಹಬ್ಬಗಳ ರಾಜನೆಂದೇ ಕರೆಯಿಸಿಕೊಳ್ಳುವ ಹಬ್ಬ ದೀಪಾವಳಿ. ದೀಪಾವಳಿ ಮತ್ತೆ ಬಂದಿದೆ. ಮೊನ್ನೆಮೊನ್ನೆಯಷ್ಟೆ ನವರಾತ್ರಿ, ದಸರಾ ಸಂಭ್ರಮ ಉಂಡದ್ದು.. ಆಗಲೇ ದೀಪಾವಳಿ. ಹಳೆಯ ಕಪಾಟಿನಲ್ಲಿ ಕಟ್ಟಿಟ್ಟ ಹಣತೆಗಳನ್ನು ಹೊರತೆಗೆಯಬೇಕು. ನೀರಿನಲ್ಲಿ ಮುಳುಗಿಸಿ ತೆಗೆದು, ಒರೆಸಿಡಬೇಕು. ಕತ್ತಲ ಬಸಿರಿನಲ್ಲಿ ಹರಿದಾಡುವ ಬೆಳಕಿನ ಬಿತ್ತು. ತಮ ಹೆತ್ತ ಜ್ಯೋತಿ. ಇಳೆಗಿಳಿದು ಬರುವ ಚುಕ್ಕಿ ಪ್ರಪಂಚ. ಮಾನವ ಚೈತನ್ಯವು ಪ್ರಕೃತಿ ಹಾಗೂ ಅಲೌಕಿಕ ದೈವಿಕ ಶಕ್ತಿಯೊಂದಿಗೆ ಸಂಧಿಸುವ ಸಂಕ್ರಮಣ ಕಾಲ. ಶ್ರೀರಾಮಚಂದ್ರ ತನ್ನ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದ ಪರ್ವಕಾಲ ಈ ದೀಪಾವಳಿ.

ಹೊಸ ಆರ್ಥಿಕ ವರ್ಷವಾಗಿ ವ್ಯಾಪಾರಿಗಳು ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಮನೆಮನೆಗಳು, ಮಠ ಮಂದಿರಗಳು ತಮ್ಮೊಳಗೆ ಅವಿತಿಟ್ಟ ಕಸ, ಬಲೆ ಕೊಡವಿ ಬೆಳಕಿನತ್ತ ಪ್ರಯಾಣ.

ದೀಪಾವಳಿ ಹಬ್ಬ ಆರಂಭಗೊಳ್ಳುವುದೇ ನೀರು ತುಂಬುವುದರಿಂದ. ನೀರು ತುಂಬುವ ಹಬ್ಬ, ಬೆಳಕು ಇಡುವ ಹಬ್ಬ. ಮಣ್ಣ ಪೂಜಿಸುವ ಹಬ್ಬ. ಪ್ರಕೃತಿಯ ಆರಾಧನೆಯ ಹಬ್ಬ. ಗೋವುಗಳ ಆರಾಧಿಸುವ, ಪೂಜಿಸುವ ಹಬ್ಬ. ಅಂಗಡಿ ಪೂಜೆ, ವಾಹನ ಪೂಜೆ, ಧಾನ್ಯಲಕ್ಷ್ಮೀ, ಧನಲಕ್ಷ್ಮೀ ಪೂಜೆ.. ಆಹಾಹಾ.. ಎಷ್ಟೊಂದು ಆಯಾಮಗಳು.

ಹಿಂದೆಲ್ಲಾ ದೀಪಾವಳಿಯೆಂದರೆ ಹೊಸ ಬಟ್ಟೆಯ ಹಬ್ಬ. ವರುಷಕ್ಕೊಮ್ಮೆ ಹೊಸ ಬಟ್ಟೆ. ಅದು ದೀಕುಂಕುಮ ಅವಿಭಕ್ತ ಕುಟುಂಬ ಪರಂಪರೆಯ ಮನೆಗಳು. ದೂರದೂರಿನಲ್ಲಿರುವ ಬಂಧುಗಳು ದೀಪಾವಳಿ ಬರುತ್ತಿದ್ದಂತೆ ಮನೆಗೆ ಬರುತ್ತಿದ್ದರು. ಜೊತೆಗೆ ಮನೆ ಮಕ್ಕಳಿಗೆ ಹೊಸ ಬಟ್ಟೆ, ಅಂಗಿ… ಹೊಸತನದ ಘಮ…. ಮನೆಯ ತುಂಬೆಲ್ಲ ಪಸರಿಸುತ್ತಿತ್ತು. ತ್ರಯೋದಶಿ ಸಂಜೆ ಗಂಗಾ ಪೂಜೆ… ನೀರು ತುಂಬುವ ಹಬ್ಬ. ಬಚ್ಚಲುಮನೆ ಶುಚಿಗೊಳಿಸಿ, ಹಂಡೆ ತಿಕ್ಕಿ ತೊಳೆದು ಫಳಫಳ ಹೊಳೆದು ಬಳಪದಿಂದ ಗೆರೆ ಎಳೆದು ಹಂಡೆಯ ಕೊರಳಿಗೆ ಗೊಂಡೆ ಹೂ(ಚೆಂಡು ಹೂ)ಗಳ ಮಾಲೆ ಹಾಕಿ, ಅರಶಿನ, ಕುಂಕುಮ ಹಚ್ಚಿ ರಂಗೋಲಿ ಬರೆದು ಕೊಡತಂಬಿಗೆ ಸಿಂಗರಿಸಿ ದೀಪ ಹಚ್ಚಿಟ್ಟು ತುಂಬಬೇಕು ಹೊಸ ನೀರು. ಗಂಗೆಯ ಆರಾಧನೆ. ಬಾವಿ ಕಟ್ಟೆಯ ಸುತ್ತ ದೀಪಗಳ ಪರಿಮಳ. ಗಂಟೆಜಾಗಟೆಗಳ ಧ್ವನಿ ಬಾವಿಕಟ್ಟೆಯಿಂದ ಒಳಮನೆಯವರೆಗೆ.

ನಮ್ಮ ಬಾಲ್ಯದಲ್ಲಿ ಒಮ್ಮೆ ಹೊಸ ನೀರು ಹಂಡೆಗೆ ತುಂಬಿದ ನಂತರ ಆ ದಿನ ಅದನ್ನು ಬಳಸುವಂತಿರಲ್ಲ. ಮರುದಿನ ಪ್ರಾತಃಕಾಲದಲ್ಲೆದ್ದು ಅಭ್ಯಂಜನ. ಅರಿಶಿನ ಪುಡಿಯೊಂದಿಗೆ ಹದಬಿಸಿ ತೆಂಗಿನೆಣ್ಣೆ ಬೆರೆಸಿ ಮೈಗೆಲ್ಲ ಪೂಸಿ ಸ್ನಾನ. ಹಿಂದಿನ ರಾತ್ರಿಯೇ ಬಚ್ಚಲೊಲೆಗೆ ತುಂಬಿದ ಕಟ್ಟಿಗೆ, ತೆಂಗಿನಸಿಪ್ಪೆಯಿಂದ ಎದ್ದ ಉರಿಗೆ ನೀರು ಕುದಿಯುತ್ತಿರುತ್ತದೆ. ಬಚ್ಚಲು ಮನೆತುಂಬ ಹೊಗೆಯೊಂದಿಗೆ ಅನೂಹ್ಯ ಪರಿಮಳದ ಸಾತ್ವಿಕ ಛಾಯೆ. ಬಾಗಿಲಿಗೆ ತಳಿರು ತೋರಣ, ಅಂಗಳಕೆ ಸೆಗಣಿ ನೀರು ಸಾರಿಸಿ, ಬಣ್ಣಬಣ್ಣದ ರಂಗೋಲಿಯ ಚಿತ್ತಾರ. ದೇವರಿಗೆ ಬಗೆಬಗೆಯ ಹೂಗಳ ಅಲಂಕಾರ, ಮಾಲೆಗಳು. ಈ ಎಲ್ಲ ಮೋಹಕ ಖುಷಿಗಳನ್ನು ಹೊಸಬಟ್ಟೆ ಧರಿಸುವ ಸಂಭ್ರಮದೊಂದಿಗೆ ಹೀರಿಕೊಳ್ಳುತ್ತ, ಮನೆಯಲ್ಲಿರುವ ಹಿರಿಯರೆಲ್ಲರಿಗೆ ನಮಸ್ಕರಿಸುವುದು. ದೇವರಿಗೆ ಮನೆಯ ಹಿರಿಯರು ಮಾಡಿದ ಸಿಹಿ ನೈವೇದ್ಯ ಮಾಡಿ ಮನೆಮಂದಿಯೆಲ್ಲ ಜೊತೆ ಸೇರಿ ಉಣ್ಣುವ ಸಂತಸ. ಕಾಯಿಹಾಲು, ಸೇಮಿಗೆ.. ಉದ್ದಿನ ದೋಸೆ. ಆ ದಿನಕ್ಕೆ ವಿಶಿಷ್ಟ ರುಚಿ. ಒಂದು ವರ್ಷವಿಡೀ ಮೆಲ್ಲುವಂತೆ ಸಂಪನ್ನಗೊಳ್ಳುತ್ತಿತ್ತು.

ತವರಿಗೆ ಬರುವ ಹೆಣ್ಣುಮಕ್ಕಳು, ಉಡುಗೊರೆ, ಎಲ್ಲರೂ ಸೇರಿ ತಯಾರಿಸುವ ಖಾದ್ಯಗಳು ಅಡುಗೆಮನೆಯ ಗಲಗಲ… ಅದು ಹಬ್ಬ. ಅದು ಬೆಳಕು ತುಂಬುವ ಹಬ್ಬ. ಅಜ್ಞಾನ ತೊಡೆದು ಜ್ಞಾನ ದೀವಿಗೆ ಬೆಳಗುವ ಹಬ್ಬ. ತಮದ ಮಡಿಲಿನಿಂದ ಟಿಸಿಲೊಡೆದು ಬರುವ ಜ್ಯೋತಿ. ಅಲ್ಲಿ ಋಣಾತ್ಮಕತೆಗೆ ಎಡೆಯಿಲ್ಲ. ಅಸತ್ಯದಿಂದ ಸತ್ಯ… ಕುಟುಂಬಗಳ ಬಾಂಧವ್ಯ, ನಂಟಿನ ಅಂಟು ಗಟ್ಟಿಗೊಳಿಸುವ ದೀವಿಗೆ. ಹೆಂಡತಿ, ಗಂಡನಿಗೆ, ತಾಯಿ ಮಕ್ಕಳಿಗೆ ಎಣ್ಣೆಯ ನೆಪದಲ್ಲಿ ಪ್ರೀತಿಯನ್ನು ಮೈಮನಸ್ಸಿಗೆ ನೇವರಿಸುತ್ತಾಳೆ. ಸಂಬಂಧಗಳ ಬಂಧಕೆ ನವಸ್ಪರ್ಶ ನೀಡಿ ಆಘ್ರಾಣಿಸುವ ಕಾಲ. ಮುನಿಸುಗಳ ಮುರಿದು ಸಂಭ್ರಮಿಸುವ ಕಾಲ. ಅದುವರೆಗಿನ ಋತುಕಾಲದ ಜಡತ್ವ, ಜಾಡ್ಯ, ಮಂಕುತನ ಜಾಡಿಸಿ ದೀಪಗಳು ಸೇರಿ ಬೆಳಕು ತುಂಬಿ ತಿಮಿರವನ್ನು ಹೊಡೆದು ಉತ್ಸಾಹ ಚಿಲುಮೆ ಚಿಮ್ಮಿಸುವ ಸಂಕೇತವೇ ಈ ದೀಪಾವಳಿ.

ಅಮಾವಾಸ್ಯೆಯ ಲಕ್ಷ್ಮೀಪೂಜೆ.ಅಂಗಡಿಆಫೀಸುಗಳು ತಮ್ಮ ಒಡಲ ಭಾರ ಆಚೆಗಿಟ್ಟು ಶುಚಿಯಾಗಿ ಅಲಂಕಾರಗೊಂಡು, ಪೂಜೆಗೊಳ್ಳುತ್ತ ಲಕ್ಷ್ಮಿಯನ್ನು ತಮ್ಮೊಳಗೆ ಬರಮಾಡಿಕೊಳ್ಳುವ ಆವಾಹಿಸಿಕೊಳ್ಳುವ ಖಷಿ. ಬಲಿಪೂಜೆಯೂ ಅಮಾವಾಸ್ಯೆಯ ಸಂಜೆ ಗದ್ದೆಗಳಿಗೆ ದೀಪವಿಡುವ ಹಬ್ಬ. ದೊಂದಿ,(ಸೊಡರು, ತೂಟೆ) ತೆಂಗಿನ ಒಣ ಮಡಲಿನಿಂದ ತಯಾರಿಸಿ, ಬಿದಿರ ಕಡ್ಡಿಗೆ ಬಟ್ಟೆ ಸುತ್ತಿ ಅದನ್ನು ಎಣ್ಣೆಯಲ್ಲಿ ಮುಳುಗಿಸಿ ತಯಾರಾಗುವ ದೀವಟಿಕೆಗಳು. ಕೇಪಳ ಹೂ, ಕುರುಡು ಹೂ, ಗಮ್ಮನ ಹೂ ಎಂದು ಹಳ್ಳಿಯ ರೈತಾಪಿ ಜನರ ಚಿರಪರಿಚಿತ ಹೂ ಎಲೆಗಳನ್ನು ತುಂಬಿಕೊಂಡು ಅವಲಕ್ಕಿ, ಕುಚ್ಚಲಕ್ಕಿ ಹಿಡಿದು ಬಲೀಂದ್ರನನ್ನು ಕರೆಯುತ್ತಾರೆ. ಬಲೀಂದ್ರಾ.. ಓ ಬಲೀಂದ್ರಾ.. ಕ್ಹೂ.. ಎನ್ನುತ್ತಾ.. ಗದ್ದೆ ಬದುಗಳಿಗೆ ದೀವಟಿಗೆ ಊರುತ್ತಾ ಅಕ್ಕಿ, ಅವಲಕ್ಕಿ, ಹೂ ಎಲೆಗಳನಿಟ್ಟು ಪ್ರಾರ್ಥಿಸಿ ಮುಂದುವರೆಯುತ್ತಾರೆ. ಗದ್ದೆಯ ಬದಿಯಲ್ಲಿರುವ ನಾಗನ ಕಲ್ಲುಗಳಿಗೆ ದೀಪ, ತುಳಸಿಗೆ ದೀಪ ದೈವಗಳಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಗೋಪೂಜೆ. ಗೋವುಗಳ ಮೈ ತೊಳೆದು ಅಲಂಕರಿಸಿ ಸೇಡಿ, ಕೆಂಪು ಮಣ್ಣಿನ ವೃತ್ತಗಳ ಮೈಗೆ ಬರೆದು ಪಾದ ತೊಳೆದು ನಮಸ್ಕರಿಸಿವುದು. ವಿವಿಧ ಖಾದ್ಯ, ಸಿಹಿ ಉಣಬಡಿಸಿ, ಆರತಿ ಪೂಜೆ.

ಎಂತಹ ಸುಂದರ ಆಚರಣೆಗಳು ನಮ್ಮದು. ಪ್ರಕೃತಿ, ಕಲ್ಲು, ಮಣ್ಣು, ಪ್ರಾಣಿಗಳೆಡೆ ಪ್ರೀತಿ, ಆರಾಧನೆ. ನಮ್ಮಪರಂಪರೆ, ಸಂಸ್ಕೃತಿಗಳು ಬಾಂಧವ್ಯಗಳನ್ನು ಬಿಗಿಗೊಳಿಸಲಿರುವ ಭಾವಸೇತುವೆಗಳು. ಅಂತಹ ಹಬ್ಬಗಳಲ್ಲಿ ಮಹತ್ವದ ಹಬ್ಬ ದೀಪಾವಳಿ.

ಇಂದಿನ ವಿಭಕ್ತ ಕುಟುಂಬಗಳಲ್ಲಿ ಹಿಂದಿನಷ್ಟು ಪರಿಣಾಮಕಾರಿ ಆಚರಣೆ ಕಷ್ಟವಾದರೂ ನಾವು ಈ ಹಬ್ಬಗಳನ್ನು ಆಚರಿಸಬೇಕು. ಇವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು, ದಾಟಿಸಬೇಕು. ಈ ಹಬ್ಬಗಳ ಹಿನ್ನೆಲೆ, ಕಥೆಗಳನ್ನು ನಮ್ಮ ಮಕ್ಕಳಿಗೂ ತಿಳಿಹೇಳಬೇಕು. ಅವರಿಗೂ ನಮ್ಮ ಆಚರಣೆಗಳ ಬಗ್ಗೆ ಆಸಕ್ತಿಯನ್ನು ಬೆಳೆಸಬೇಕು.

ದೀಪಾವಳಿ ಮನೆಮನಗಳಲ್ಲಿ ಅರಿವಿನ ಜ್ಯೋತಿ ಸಂತಸ, ಸಂಭ್ರಮಗಳನ್ನು ಹೆಚ್ಚಿಸಲಿ.