ಆಮೇಲೆ ನಾನು ಆ ಕೋಣೆಯ ಕಿಟಕಿಯ ಮುಂದೆ ಕುಳಿತು ಪಾಠ ಕೇಳುತ್ತಿದ್ದೆ. ಒಂದು ಸಲ ಕಪ್ಪು ಹಲಗೆಯ ಮೇಲೆ ಗಣಿತ ಸಮಸ್ಯೆಯೊಂದನ್ನು ಬರೆದು ಉತ್ತರ ಬರೆಯಲು ತಿಳಿಸಿದರು. ನಾನು ಮನದಲ್ಲೇ ಕೂಡಿಸಿ ಕಳೆದು ಭಾಗಿಸಿ ಥಟ್ಟನೆ ಉತ್ತರ ಹೇಳಿದೆ. ಹೀಗೆ ಹೇಳಲು ಕಾರಣವೂ ಇತ್ತು. ನನ್ನ ಬಳಿ ಕಚ್ಚಾ ನೋಟಬುಕ್ ಕೂಡ ಇರಲಿಲ್ಲ. ಹೀಗಾಗಿ ಮನದಲ್ಲೇ ಲೆಕ್ಕಾಚಾರ ಮಾಡುವುದು ಅನಿವಾರ್ಯವಾಗಿತ್ತು. ನನ್ನ ಉತ್ತರದಿಂದ ಮಾಸ್ತರರಿಗೆ ಖುಷಿಯಾಯಿತು. ನನಗೆ ಒಳಗೆ ಕರೆದರು. ನಂತರ ಸಮವಸ್ತ್ರದ ವಿಚಾರ ತಂದೆಗೆ ಹೇಳಿದೆ. ಅವರು ಬೇಗನೆ ಸಮವಸ್ತ್ರದ ವ್ಯವಸ್ಥೆ ಮಾಡಿದರು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿನಾಲ್ಕನೇ ಕಂತು ಇಲ್ಲಿದೆ.

 

ನಾನು ವಿಜಾಪುರದ ತೆಗ್ಗಿನ ಶಾಲೆಯಲ್ಲಿ (ಈ ಶಾಲೆ ಶ್ರೀ ಸಿದ್ಧೇಶ್ವರ ಹೈಸ್ಕೂಲಿನ ಭಾಗವಾಗಿತ್ತು. ಹೈಸ್ಕೂಲಿನ ಮುಖ್ಯ ಕಟ್ಟಡದ ಬಲತುದಿಯ ತೆಗ್ಗಿನಲ್ಲಿ ಇದ್ದುದರಿಂದ ‘ತೆಗ್ಗಿನ ಶಾಲೆ’ ಎಂದೇ ಪ್ರಸಿದ್ಧವಾಗಿತ್ತು. ಅದರ ನಿಜವಾದ ಹೆಸರು ‘ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲೆ’. ಕೆಲವರು ಎಸ್.ಎಸ್. ಪ್ರೈಮರಿ ಸ್ಕೂಲ್ ಎಂದು ಕರೆಯುತ್ತಿದ್ದರು.) ನಾಲ್ಕನೆಯ ಇಯತ್ತೆ ಓದುವಾಗ ಜಗದೀಶ ಯಳಮೇಲಿ, ಬಾಪೂಗೌಡ ಪಾಟೀಲ, ಬಸವರಾಜ ಕೋಡಿಕೊಪ್ಪಮಠ ಮುಂತಾದವರು ಹೆಚ್ಚು ಆತ್ಮೀಯರಾದರು. ಸೂರ್ಯಕಾಂತ (ಕಾಂತು) ಸಾರವಾಡ ಮತ್ತು ಕುಂಬಾರ ಎಂಬುವವರು ಮೊದಲಿನಿಂದಲೂ ನನ್ನ ಜೊತೆಗೇ ಇರುತ್ತಿದ್ದರು.

ಕಾಂತು ನನ್ನ ನೆರೆಮನೆಯವನಾಗಿದ್ದ. ಕುಂಬಾರ ನಮ್ಮ ಪಕ್ಕದ ಗಲ್ಲಿಯವನಾಗಿದ್ದ. ಹೀಗಾಗಿ ನಾವು ಹೆಚ್ಚಾಗಿ ಕೂಡಿಯೆ ಶಾಲೆಗೆ ಬರುವುದು ಮತ್ತು ಹೋಗುವುದನ್ನು ಮಾಡುತ್ತಿದ್ದೆವು. ನಾವು ಹೆಚ್ಚು ಆತ್ಮೀಯರಾಗಲು ಇವೆಲ್ಲ ಕಾರಣಗಳಿದ್ದವು. ಎಲ್ಲಕ್ಕೂ ಹೆಚ್ಚಾಗಿ ಅವರಿಬ್ಬರ ಸೌಮ್ಯ ಸ್ವಭಾವ ನನಗೆ ಬಹಳ ಹಿಡಿಸಿತ್ತು.

ಕಾಂತು ನನ್ನ ಜೊತೆಗೇ ಇರುತ್ತಿದ್ದ. ಆತ ಬಹಳ ಸಂಭಾವಿತನಾಗಿದ್ದರ ಜೊತೆ ನನ್ನ ಬಗ್ಗೆ ಹೆಚ್ಚು ಕಾಳಜಿ ತೋರಿಸುವವನಾಗಿದ್ದ. ನಾನು ಹೇಳಿದ್ದಕ್ಕೆಲ್ಲ ಆತ ಹೂಂಗುಟ್ಟುತ್ತಿದ್ದ. ನನಗೆ ಅದು ಸರಿ ಕಾಣಿಸುತ್ತಿರಲಿಲ್ಲ. ‘ನಾನು ಹೇಳಿದ್ದೆಲ್ಲ ಸರಿ ಎನಬೇಡ. ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸು’ ಎಂದು ಮುಂತಾಗಿ ನನ್ನದೇ ರೀತಿಯಲ್ಲಿ ಹೇಳಿದೆ. ಆತ ಅದಕ್ಕೂ ‘ಸರಿ’ ಎಂದು ಹೇಳಿದ. ಅವನಿಗೆ ಹೇಳಿ ಪ್ರಯೋಜನವಿಲ್ಲ ಎಂದು ಮತ್ತೆ ಹೇಳಲಿಕ್ಕೆ ಹೋಗಲಿಲ್ಲ.

ಅವರ ತಂದೆ ಮತ್ತು ಅಣ್ಣ ಸಿದ್ಧೇಶ್ವರ ಗುಡಿಯ ಸಮೀಪದ ಸರಳಾಯ ಅವರ ಹೋಟೆಲ್ (ಅದರ ಹೆಸರು ‘ಕೆಫೆ ಲೈಟ್’ ಎಂದು ನೆನಪಾಗುತ್ತಿದೆ) ಎದುರು ದಿಲೀಪ ಹೇಯರ್ ಕಟಿಂಗ ಸಲೂನ್ ನಡೆಸುತ್ತಿದ್ದರು. ನಾವಿಗಲ್ಲಿಯಲ್ಲಿ ಹಡಪದ ಸಮಾಜದ ಎರಡು ಮನೆತನಗಳಿದ್ದವು. ಕಾಂತೂನ ಮನೆತನದವರು ಮಾತ್ರ ಅಂಗಡಿ ಹೊಂದಿದ್ದರು. ಇನ್ನೊಬ್ಬ ಶಿವಪ್ಪ ಎಂಬಾತ. ಆತ ಹಡಪ ಹಿಡಿದುಕೊಂಡು ಓಣಿ ಓಣಿ ಸುತ್ತುತ್ತ ಹಡಪದ ಕಾಯಕ ಮಾಡುತ್ತಿದ್ದ. ಉಳಿದ ಕ್ಷೌರಿಕರು ಮರಾಠಿ ಮಾತನಾಡುವ ನಾವಿ ಸಮಾಜದವರಾಗಿದ್ದರು. ಕಾಂತೂನ ಅಂಗಡಿಯಲ್ಲಿ ಸಂಯುಕ್ತ ಕರ್ನಾಟಕ, ಅದೇ ಸೈಜಿನ ಆದರೆ ಹೆಚ್ಚು ಪುಟಗಳಿರುವ ‘ಸ್ಕ್ರೀನ್’ ಎಂಬ ಹಿಂದಿ ಸಿನಿಮಾಗಳ ಕುರಿತ ಇಂಗ್ಲಿಷ್ ಭಾಷೆಯ ಪತ್ರಿಕೆ (ಇದು ಪಾಕ್ಷಿಕ ಪತ್ರಿಕೆ ಅಥವಾ ವಾರಪತ್ರಿಕೆ) ಮತ್ತು ಇನ್ನಾವುದೋ ಕನ್ನಡ ವಾರ ಪತ್ರಿಕೆ ‘ಪ್ರಜಾಮತ’ ಅಥವಾ ‘ಹಿಂದೂನೇಷನ್’ ಇರಬಹುದು. ಪ್ರಜಾಮತ ಪ್ರಸಿದ್ಧವಾಗಿತ್ತು. (ನಂತರ ಅದು ಗುಪ್ತ ಸಮಾಲೋಚನೆಯಿಂದಾಗಿ ಜನರ ಬಾಯಲ್ಲಿ ‘ಮಜಾಮತ’ ಆಯಿತು.) ಹಿಂದೂನೇಷನ್‌ನಲ್ಲಿ ಹೆಚ್ಚಾಗಿ ಸಿನಿಮಾ ನಟನಟಿಯರ ರೋಚಕ ಘಟನೆಗಳು ಪ್ರಕಟವಾಗುತ್ತಿದ್ದವು. ಇವೆಲ್ಲವುಗಳ ಮೇಲೆ ಕಣ್ಣು ಹಾಸುತ್ತಿದ್ದೆ. ಆದರೆ ಅರ್ಥ ಆಗುತ್ತಿರಲಿಲ್ಲ.

ಸಂಯುಕ್ತ ಕರ್ನಾಟಕ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದ ಪತ್ರಿಕೆ. ನಾನು ಬಾಲ್ಯದಲ್ಲಿ ಪತ್ರಿಕೆಯನ್ನು ಓದಲು ಕಲಿತದ್ದೇ ಕಾಂತೂನ ಅಂಗಡಿಯಲ್ಲಿ. ಬಹುಶಃ ನನಗೆ ಪತ್ರಿಕಾರಂಗದ ಆಕರ್ಷಣೆ ಇಲ್ಲಿಂದಲೇ ಪ್ರಾರಂಭವಾಗಿರಬಹುದು.

ಕಾಂತು ಕಟಿಂಗ್ ಮಾಡಲು ಕಲಿತದ್ದು ನನ್ನ ತಲೆಯಿಂದಲೇ. ಅವರ ಅಣ್ಣ ರೇವಣಸಿದ್ಧನ ಮಾರ್ಗದರ್ಶನದಲ್ಲಿ ಕಟಿಂಗ್ ಮಾಡುತ್ತಿದ್ದ. ಅವನು ಭಯದಿಂದ ಬಹಳ ಸಾವಕಾಶವಾಗಿ ಕಟಿಂಗ್ ಮಾಡುತ್ತಿದ್ದ. ಆಗ ನಾನು ಕುರ್ಚಿಗೆ ತಲೆಕೊಟ್ಟು ಎಷ್ಟೋ ಸಲ ನಿದ್ರೆ ಹೋದದ್ದುಂಟು. ನಂತರ ಚೆಂದಾಗಿ ಕ್ರಾಪು ಮಾಡಿಕೊಂಡು ಮನೆಗೆ ಹೋಗಿ ಸ್ನಾನ ಮಾಡುತ್ತಿದ್ದೆ. ಈ ವೈಭವ ಎರಡೇ ದಿನ. ತಿಂಗಳು ಮುಗಿಯುವುದರೊಳಗಾಗಿ ಹಡಪ ಹಿಡಿದುಕೊಂಡು ತಮ್ಮಣ್ಣ ಬರುತ್ತಿದ್ದ. ತಂದೆಯ ಆದೇಶದಂತೆ ಪನ್ನಾ ಕಟ್ ಹೊಡೆದು ಬಾಚಣಿಕೆ ಬಳಸಲಿಕ್ಕಾಗದಷ್ಟು ಕೂದಲನ್ನು ಕತ್ತರಿಸುತ್ತಿದ್ದ.

ನಮ್ಮ ತೆಗ್ಗಿನ ಶಾಲೆ ಎಸ್.ಎಸ್. ಹೈಸ್ಕೂಲಿನ ಮುಖ್ಯ ಕಟ್ಟಡದಲ್ಲಿತ್ತು. ಅದರ ಹಿಂದೆ ಅಷ್ಟೇ ಉದ್ದದ ಕಟ್ಟಡವಿದೆ. ಆದರೆ ಅದನ್ನು ಕರಿಕಲ್ಲಿನಿಂದ ಕಟ್ಟದೆ ಗಾರೆಯಿಂದ ಕಟ್ಟಿದ್ದಾರೆ. ಆ ಗಾರೆ ಕಟ್ಟಡದ ಹಿಂದೆ ಸ್ವಲ್ಪ ದೂರದಲ್ಲಿ ಹೈಸ್ಕೂಲು ಆವರಣದ ಗೋಡೆ ಇದೆ. ಆ ಗೋಡೆ ದಾಟಿದರೆ ಸಾರ್ವಜನಿಕ ದಾರಿ ಬರುವುದು. ಅದನ್ನು ದಾಟಿದರೆ ಅರ್ಜುನ ಮಾಮಾನ ತೋಟ ಬರುವುದು. ಅರ್ಜುನ ಮಾಮಾ ಮತ್ತು ನನ್ನ ತಂದೆ ಅಣ್ಣ ತಮ್ಮಂದಿರ ಹಾಗೆ ಇದ್ದವರು. ಹೀಗಾಗಿ ನಾನು ಹೆಚ್ಚಾಗಿ ತೋಟಕ್ಕೆ ಹೋಗಿ ಸ್ವಲ್ಪ ಹೊತ್ತು ಕಳೆದ ನಂತರ ಮನೆಗೆ ಹೋಗುತ್ತಿದ್ದೆ. ಆಗ ನನ್ನ ಜೊತೆ ಬಹಳ ಸಲ ಕಾಂತು ಮತ್ತು ಕಂಬಾರ ಇರುತ್ತಿದ್ದರು.

ನಾವು ಹೈಸ್ಕೂಲ್ ಆವರಣ ಗೋಡೆ ಜಿಗಿದು ತೋಟಕ್ಕೆ ಹೋಗುತ್ತಿದ್ದೆವು. ಹಾಗೆ ಹೋಗಲು ಇನ್ನೊಂದು ಕಾರಣ ಇತ್ತು. ಅಲ್ಲಿನ ದೊಡ್ಡ ಇಲಾಚಿ ಹುಣಸೆ ಮರದಲ್ಲಿ ದಪ್ಪನೆಯ ಮತ್ತು ರುಚಿಕಟ್ಟಾದ ಹುಣಸೆ ಹಣ್ಣು ತಿನ್ನುವ ಆಸೆಯಾಗುತ್ತಿತ್ತು. ನಾನು ಕೊಯ್ತಾ ತೆಗೆದುಕೊಂಡು ನನ್ನ ಇಬ್ಬರೂ ಗೆಳೆಯರಿಗೆ ಹಣ್ಣು ಹರಿದು ಕೊಡುತ್ತಿದ್ದೆ. ಅವುಗಳನ್ನು ಜಾಸ್ತಿ ತಿಂದರೆ ಪಿತ್ತ ಆಗುತ್ತಿತ್ತು. ಆದರೂ ತಿನ್ನುತ್ತಿದ್ದೆವು.

ಒಂದು ಸಲ ಮೂವರೂ ತೋಟದ ಕಡೆಗೆ ಹೋಗುವಾಗ ಗಂಡಾಂತರವನ್ನು ಎದುರಿಸಿದೆವು. ಅದೇನೆಂದರೆ ನಮ್ಮ ಕ್ಲಾಸಿನಲ್ಲಿ ಖಗ್ಯಾ ಎಂಬ ಹುಡಗನಿದ್ದ. ಆತ ತೆಳ್ಳಗಿದ್ದರೂ ಬಹಳ ಜಿಗುಟು ಸ್ವಭಾವದ ಹುಡುಗ. ಕ್ಲಾಸಿನಲ್ಲಿ ಎಲ್ಲರನ್ನೂ ಅಂಜಿಸುತ್ತಿದ್ದ. ಆದರೆ ನಾನು ಅವನಿಗೆ ಕ್ಯಾರೆ ಎನ್ನುತ್ತಿರಲಿಲ್ಲ. ಕಾಲು ಕೆದರಿ ಜಗಳಕ್ಕೆ ಬಂದರೆ ಬಿಡುತ್ತಿರಲಿಲ್ಲ. ಒಂದು ಸಲ ಜಗಳವಾಡಿದಾಗ ನನ್ನ ಕಾಲರ್ ಹಿಡಿದು ಎಳೆದ. ಆಗ ನಾನು ಅವನಿಗೆ ಹೊಡೆದ ನೆನಪು. ಅಂದೇ ಅದು ಹೇಗೋ ನನ್ನ ವಿರುದ್ಧ ಒಂದಿಷ್ಟು ಹುಡುಗರನ್ನು ಒಗ್ಗೂಡಿಸಿದ್ದ.

ನಾವು ಮೂವರು ಗೆಳೆಯರು ಶಾಲೆ ಬಿಟ್ಟ ಕೂಡಲೆ ತೋಟದ ಕಡೆ ಹೊರಟೆವು. ಆ ಸಂದರ್ಭದಲ್ಲಿ ಆವರಣದ ಗೋಡೆಗೆ ಹಚ್ಚಿ ಉಸುಕು ಹಾಕಿದ್ದರು. ಉಸುಕಿನ ರಾಶಿ ಗೋಡೆಯ ತುದಿಯವರೆಗೆ ಇದ್ದ ಕಾರಣ ನಮಗೆ ಗೋಡೆ ಹತ್ತುವ ಶ್ರಮ ತಪ್ಪಿತ್ತು. ಹೀಗೆ ಗೋಡೆ ಹತ್ತಿದ ಮೇಲೆ ಜಿಗಿಯುವುದೊಂದೇ ಬಾಕಿ. ನಾವು ಮೂವರು ಗೋಡೆ ಜಿಗಿದು ರಸ್ತೆ ದಾಟಿದ ನಂತರ ಸಿಗುವ ಸ್ವಲ್ಪ ದೊಡ್ಡದಾದ ಗಟರ್ ದಾಟುವ ಸಂದರ್ಭದಲ್ಲಿ ಗೋಡೆಯ ಆಚೆ ಕಡೆಯಿಂದ ಖಗ್ಯಾ ಮತ್ತು ಅವನ ಗುಂಪಿನಿಂದ ನಮ್ಮೆಡೆಗೆ ಕಲ್ಲುಗಳು ಬರತೊಡಗಿದವು. ನಾನು ಕೂಡಲೆ ನನ್ನ ತಗಡಿನ ಪಾಟಿಯನ್ನು ಚೀಲದಿಂದ ಹೊರ ತೆಗೆದು ಎಡಗಾಲ ಮಡಚಿ ಬಲಗಾಲ ಮುಂದಿಟ್ಟು ಹನುಮಾನಾಸನದಲ್ಲಿ ಕುಳಿತೆ. ನನ್ನ ಹಿಂದೆ ಕಾಂತುಗೆ ಕೂಡಲು ತಿಳಿಸಿ ಅವನ ಹಿಂದೆ ಕುಂಬಾರಗೆ ಕೂಡಲು ಹೇಳಿದೆ. ಕುಳಿತಲ್ಲಿಂದಲೇ ಚಿಕ್ಕ ಚಿಕ್ಕ ಕಲ್ಲು ಆರಿಸಿ ಕಾಂತು ಕೈಯಲ್ಲಿ ಕೊಡುವ ಕೆಲಸ ಕುಂಬಾರನದಾಗಿತ್ತು. ನನಗೆ ಆ ಕಲ್ಲುಗಳನ್ನು ಕೊಡುವ ಕೆಲಸ ಕಾಂತುನದು. ನಿರಂತರವಾಗಿ ಕಲ್ಲು ಎಸೆಯುವ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೆ. ಇದು ನನ್ನ ಯುದ್ಧ ತಂತ್ರ.

ಗೋಡೆಗೆ ಹತ್ತಿಕೊಂಡಿರುವ ಉಸುಕು (ಮಳಲು – ಮರಳು) ಗುಡ್ಡೆಯ ಮೇಲೆ ನಿಂತು ನಮ್ಮ ಕಡೆಗೆ ಕಲ್ಲು ಎಸೆಯುವುದು ಖಗ್ಯಾನ ಯುದ್ಧತಂತ್ರ ಆಗಿತ್ತು. ನಿಜವಾಗಿಯೂ ಇದೊಂದು ಹಳೆಯ ಕಾಲದ ಯುದ್ಧದ ಹಾಗೆಯೆ ಇತ್ತು. ನನ್ನ ತಗಡಿನ ಪಾಟಿಯೇ ನನ್ನ ಡಾಲು ಆಗಿತ್ತು. ಎಡಗೈಯಲ್ಲಿ ಪಾಟಿಯನ್ನು ಮುಖಕ್ಕೆ ಅಡ್ಡ ಹಿಡಿದು ಬಲಗೈಯಿಂದ ಜೋರಾಗಿ ಕಲ್ಲು ಎಸೆಯುತ್ತಿದ್ದೆ. 100 ಅಡಿಗಳಷ್ಟು ದೂರದಲ್ಲಿದ್ದ ಅವರಲ್ಲಿಗೆ ನನ್ನ ಕಲ್ಲುಗಳು ರಭಸದಿಂದ ಹೋಗುತ್ತಿದ್ದವು. ಅವರ ಕಡೆಯಿಂದ ಕೂಡ ಅಷ್ಟೇ ರಭಸದಿಂದ ಕಲ್ಲುಗಳು ಬಂದು ನನ್ನ ಪಾಟಿಗೆ ಬಡಿಯುತ್ತಿದ್ದವು. ಆ ತಗಡಿನ ಪಾಟಿಗೆ ಎಷ್ಟೊಂದು ಕಲ್ಲುಗಳು ಬಡಿದಿದ್ದವೆಂದರೆ ಅದರ ತುಂಬೆಲ್ಲ ತೂತುಗಳು ಬಿದ್ದಿದ್ದವು.

ಸ್ವಲ್ಪ ಹೊತ್ತಿನ ನಂತರ ಆ ಕಡೆಯಿಂದ ಕಲ್ಲುಗಳು ಬರುವುದು ನಿಂತಿತು. ನಾವು ತೋಟದೊಳಗೆ ಹೋದೆವು. ಮನದಲ್ಲಿ ದುಗುಡ ಮನೆ ಮಾಡಿದ್ದರೂ ಈ ವಿಚಾರವನ್ನು ಅರ್ಜುನ ಮಾಮಾಗೆ ಹೇಳಲಿಲ್ಲ. ಎಂದಿನಂತೆ ಇಲಾಚಿ ಹುಣಸೆಕಾಯಿ ಹರಿದು ತಿಂದೆವು. ನನ್ನ ಇಬ್ಬರು ಗೆಳೆಯರು ನನ್ನ ಧೈರ್ಯವನ್ನು ಬಹಳ ಮೆಚ್ಚಿದರು. ನನ್ನ ಬೆನ್ನಹಿಂದೆ ಇಬ್ಬರೂ ಗೆಳೆಯರನ್ನು ರಕ್ಷಿಸುತ್ತ ಆ ‘ಯುದ್ಧ’ವನ್ನು ಎದುರಿಸಿ ಗೆದ್ದ ಹೆಮ್ಮೆ ನನಗಾಗಿದ್ದರೂ ನಾಳೆ ಶಾಲೆಗೆ ಹೋದಾಗ ಏನಾಗುವುದೋ ಎಂಬ ಚಿಂತೆ ಕಾಡುತ್ತಿತ್ತು.

ಕಲ್ಲಿನ ಪಾಟಿ ಒಡೆದುಹೋದ ಕಾರಣದಿಂದ ತಂದೆ ತಗಡಿನ ಪಾಟಿ ಕೊಡಿಸಿದ್ದರು. ಅದೀಗ ರಂಧ್ರಗಳ ಆಗರವಾಗಿದೆ! ಅದನ್ನು ಯಾರಿಗೂ ತೋರಿಸುವ ಹಾಗಿಲ್ಲ, ಹೇಳುವ ಹಾಗಿಲ್ಲ. ‘ಈ ವಿಷಯ ಮನೆಯಲ್ಲಿ ಹೇಳಬಾರದು’ ಎಂದು ಇಬ್ಬರೂ ಗೆಳೆಯರಿಗೆ ತಿಳಿಸಿ ಮನೆಗೆ ಹೋದೆ.

ಮರುದಿನ ಶಾಲೆಗೆ ಹೋಗುವುದರೊಳಗಾಗಿ ಐದಾರು ಮಂದಿ ತಾಯಂದಿರು ಹಣೆಗೆ ಪಟ್ಟಿ ಕಟ್ಟಿಕೊಂಡ ಮಕ್ಕಳ ಜೊತೆ ಬಂದು ಪಾಟೀಲ ಸರ್ ಮುಂದೆ ಕಂಪ್ಲೇಂಟ್ ಮಾಡುತ್ತಿದ್ದರು. ನನ್ನ ನೋಡಿದ ಕೂಡಲೆ ಪಾಟೀಲ ಸರ್‍ಗೆ ಸಿಟ್ಟು ಬಂದಿತು. ‘ಇವರ ತಲೆ ಏಕೆ ಒಡೆದೆ’ ಎಂದು ಸಿಟ್ಟಿನಿಂದ ಕೇಳಿದರು. ನಾನು ಏನೂ ಮಾತನಾಡಲಿಲ್ಲ. ನನ್ನ ತಗಡಿನ ಪಾಟಿಯನ್ನು ಚೀಲದಿಂದ ಹೊರತೆಗೆದು ಅವರಿಗೆ ತೋರಿಸಿ ನಡೆದ ಘಟನೆಯನ್ನು ವಿವರಿಸಿದೆ. ಅವರು ಬಹಳ ನೊಂದುಕೊಂಡರು. ಮಕ್ಕಳ ತಾಯಂದಿರರಿಗೂ ತಮ್ಮ ಮಕ್ಕಳ ತಪ್ಪಿನ ಅರಿವಾಯಿತು.

ಮಕ್ಕಳಿಗೆ ಕಲಿಯಲು ಕಳಿಸುವ ತಂದೆ ತಾಯಿಗಳ ಮೇಲೆ ಇಂಥ ಘಟನೆಗಳು ಎಂಥ ಪರಿಣಾಮ ಬೀರಬಹುದು, ಏನಾದರೂ ಅನಾಹುತ ಆಗಿದ್ದರೆ ಯಾರು ಜವಾಬ್ದಾರಿ ಮುಂತಾದ ವಿಚಾರಗಳನ್ನು ಸರ್ ವ್ಯಕ್ತಪಡಿಸಿದರು. ಆದರೆ ಖಗ್ಯಾ ಅಂದು ಶಾಲೆಗೆ ಬರಲಿಲ್ಲ. ಆತ ಹೀಗೆ ಬಹಳ ಸಲ ಸಾಲಿ ತಪ್ಪಿಸುತ್ತಿದ್ದ. ಆತನ ಹುಂಬತನದ ಬಗ್ಗೆ ಪಾಟೀಲ ಸರ್‍ಗೆ ಬೇಸರವಿದ್ದರೂ ಭಜಂತ್ರಿ ಜನಾಂಗದ ಆ ಹುಡುಗ ಚೆನ್ನಾಗಿ ಕಲಿಯಬೇಕೆಂಬ ಕಾಳಜಿ ಅವರದಾಗಿತ್ತು.

ಮಾಸ್ತರರು ಭೂಗೋಳದ ಬಗ್ಗೆ ಪಾಠ ಹೇಳುವಾಗ ನನಗೊಂದು ಪ್ರಶ್ನೆ ಕಾಡುತ್ತಿತ್ತು. ಸೂರ್ಯ, ಚಂದ್ರ, ನಕ್ಷತ್ರ ಮುಂತಾದವುಗಳನ್ನು ಒಳಗೊಂಡ ಈ ಆಕಾಶ ಎಷ್ಟು ದೊಡ್ಡದಿರಬಹುದು! ಈ ಆಕಾಶದಾಚೆ ಏನಿದೆ? ಅದಕ್ಕೆ ಗೋಡೆಗಳೇ ಇಲ್ಲವೆಂದಮೇಲೆ ‘ಅದರಾಚೆ ಎನ್ನುವುದು’ ಹೇಗೆ ಇರಲು ಸಾಧ್ಯ? ಎಂಬ ವಿಚಾರಗಳು ನನಗೆ ಬಹಳ ಕಿರಿಕಿರಿ ಉಂಟುಮಾಡಿದವು. ಒಂದು ಸಲ ನಮ್ಮ ಕ್ಲಾಸ್ ಟೀಚರ್‍ಗೆ ಕೇಳಿಯೇ ಬಿಟ್ಟೆ. ‘ನೀನು ದೊಡ್ಡವನಾದಮೇಲೆ ಗೊತ್ತಾಗುವುದು’ ಎಂದು ಅವರು ಹೇಳಿದರು. (ಆದರೆ ಇಂದಿಗೂ ಅದು ಗೊತ್ತಾಗದೆ ಉಳಿದಿದೆ.)

ಕಾಂತು ಕಟಿಂಗ್ ಮಾಡಲು ಕಲಿತದ್ದು ನನ್ನ ತಲೆಯಿಂದಲೇ. ಅವರ ಅಣ್ಣ ರೇವಣಸಿದ್ಧನ ಮಾರ್ಗದರ್ಶನದಲ್ಲಿ ಕಟಿಂಗ್ ಮಾಡುತ್ತಿದ್ದ. ಅವನು ಭಯದಿಂದ ಬಹಳ ಸಾವಕಾಶವಾಗಿ ಕಟಿಂಗ್ ಮಾಡುತ್ತಿದ್ದ. ಆಗ ನಾನು ಕುರ್ಚಿಗೆ ತಲೆಕೊಟ್ಟು ಎಷ್ಟೋ ಸಲ ನಿದ್ರೆ ಹೋದದ್ದುಂಟು.

ಇಂಥ ಸಮಸ್ಯೆಗಳಿಗಿಂತ ನನಗೆ ಯೂನಿಫಾರ್ಮ್‌ದೇ ದೊಡ್ಡ ಸಮಸ್ಯೆಯಾಗಿತ್ತು. ‘ಮಕ್ಕಳಿಗೆ ಯೂನಿಫಾರ್ಮ್ ಅವಶ್ಯ’ ಎಂಬುದರ ಹಿಂದೆ ಉದಾತ್ತವಾದ ಉದ್ದೇಶವಿದೆ. ಶ್ರೀಮಂತ ಮಕ್ಕಳು ಬೆಲೆಬಾಳುವ ಬಟ್ಟೆಗಳನ್ನು ಹಾಕಿಕೊಂಡು ಬಂದರೆ ಬಡಮಕ್ಕಳು ಕೀಳರಿಮೆ ಅನುಭವಿಸಬಹುದು ಎಂಬ ಉದ್ದೇಶದಿಂದ ಮತ್ತು ಶಾಲೆಯ ಐಡೆಂಟಿಟಿಯೊಂದಿಗೆ ಶಿಸ್ತು ಮೂಡುವ ಕಾರಣದಿಂದ ವಿದ್ಯಾರ್ಥಿಗಳಿಗೆ ಯೂನಿಫಾರ್ಮ್ ವ್ಯವಸ್ಥೆ ಬಂದಿದೆ.

ಆ ಕಾಲದಲ್ಲಿ, ಬಡಮಕ್ಕಳ ತಂದೆ ತಾಯಿಗಳು ಕೊಳ್ಳಲು ಸಾಧ್ಯವಾಗುವಂಥ ಬಟ್ಟೆಯೆ ಯೂನಿಫಾರ್ಮ್ ಬಟ್ಟೆಯಾಗಿರುತ್ತಿತ್ತು. ಜೊತೆಗೆ ಅದರಿಂದ ವಿದ್ಯಾರ್ಥಿಗಳಲ್ಲಿ ಗಾಂಭೀರ್ಯ ಮೂಡುತ್ತಿತ್ತು. ಆದರೆ ನನಗೆ ಯೂನಿಫಾರ್ಮ್ ಹೊಲಿಸಲು ಕೂಡ ಸಾಧ್ಯವಾಗದಷ್ಟು ಬಡತನ ಆವರಿಸಿತ್ತು. ಮನೆಯ ಪರಿಸ್ಥಿತಿಯಿಂದಾಗಿ ತಂದೆಗೆ ಹೇಳಲು ಕೂಡ ಮನಸ್ಸಾಗುತ್ತಿರಲಿಲ್ಲ.

ಈ ಸಮವಸ್ತ್ರದ ಸಂಬಂಧವಾಗಿ ಕ್ಲಾಸ್ ಟೀಚರ್ ದಿನವೂ ಗದರಿಸುತ್ತಿದ್ದರು. ಪ್ರತಿದಿನ ಅಂಜುತ್ತಲೇ ಶಾಲೆಗೆ ಹೋಗುತ್ತಿದ್ದೆ. ಒಂದು ದಿನ ಟೀಚರ್ ನನಗೆ ಬೈದು ಹೊರಗೆ ಹಾಕಿದರು. ಆಮೇಲೆ ನಾನು ಆ ಕೋಣೆಯ ಕಿಟಕಿಯ ಮುಂದೆ ಕುಳಿತು ಪಾಠ ಕೇಳುತ್ತಿದ್ದೆ. ಒಂದು ಸಲ ಕಪ್ಪು ಹಲಗೆಯ ಮೇಲೆ ಗಣಿತ ಸಮಸ್ಯೆಯೊಂದನ್ನು ಬರೆದು ಉತ್ತರ ಬರೆಯಲು ತಿಳಿಸಿದರು. ನಾನು ಮನದಲ್ಲೇ ಕೂಡಿಸಿ ಕಳೆದು ಭಾಗಿಸಿ ಥಟ್ಟನೆ ಉತ್ತರ ಹೇಳಿದೆ. ಹೀಗೆ ಹೇಳಲು ಕಾರಣವೂ ಇತ್ತು. ನನ್ನ ಬಳಿ ಕಚ್ಚಾ ನೋಟಬುಕ್ ಕೂಡ ಇರಲಿಲ್ಲ. ಹೀಗಾಗಿ ಮನದಲ್ಲೇ ಲೆಕ್ಕಾಚಾರ ಮಾಡುವುದು ಅನಿವಾರ್ಯವಾಗಿತ್ತು. ನನ್ನ ಉತ್ತರದಿಂದ ಮಾಸ್ತರರಿಗೆ ಖುಷಿಯಾಯಿತು. ನನಗೆ ಒಳಗೆ ಕರೆದರು. ನಂತರ ಸಮವಸ್ತ್ರದ ವಿಚಾರ ತಂದೆಗೆ ಹೇಳಿದೆ. ಅವರು ಬೇಗನೆ ಸಮವಸ್ತ್ರದ ವ್ಯವಸ್ಥೆ ಮಾಡಿದರು.

(ಆತ್ಮಸ್ಥೈರ್ಯ ತುಂಬಿದ ಕಿಟಕಿ)

(ಕೆಲ ದಶಕಗಳ ಹಿಂದೆ ವಿಜಾಪುರಕ್ಕೆ ಹೋದಾಗ ಆ ಕಿಟಕಿಯ ಬಳಿ ಹೋಗಿ ನಿಂತೆ. ಮೊದಲು ಬರಿ ಸರಳುಗಳಿದ್ದವು. ಆದರೀಗ ಕಿಟಕಿಗೆ ಜಾಲರಿ ಹಾಕಿದ್ದಾರೆ. ಈಗ ಅಲ್ಲಿ ಶಾಲೆ ಇಲ್ಲ. ನಾನು ಹೀಗೆ ಭೇಟಿ ಮಾಡಿದ ಸಂದರ್ಭದಲ್ಲಿ ಬಡಗಿಗಳು ಶಿಕ್ಷಕರಿಗಾಗಿ ಕುರ್ಚಿ, ಮೇಜು ಮತ್ತು ವಿದ್ಯಾರ್ಥಿಗಳಿಗಾಗಿ ಬೆಂಚ್ ತಯಾರಿಸುವ ತಾಣ ಅದಾಗಿತ್ತು. ಆ ಶಾಲೆ ಮತ್ತು ಈ ಕಿಟಕಿಯ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಆ ಕಿಟಕಿ ನನ್ನ ಕಲಿಯುವ ದಾಹವನ್ನು ಹೆಚ್ಚಿಸಿತು. ಯೂನಿಫಾರ್ಮ್ ಇಲ್ಲದ ಕಾರಣ ಅಪಮಾನಿತನಾದರೂ ಆ ಕಿಟಕಿಯ ಮೂಲಕ ಗಣಿತ ಸಮಸ್ಯೆಗೆ ಸರಿಯಾದ ಉತ್ತರ ಹೇಳಿ ಶಾಲೆಯೊಳಗೆ ಪ್ರವೇಶ ಪಡೆದದ್ದರಿಂದ ಅದು ನನಗೆ ಈಗಲೂ ಆಪ್ತಮಿತ್ರನ ಹಾಗೆ ಅನಿಸುತ್ತದೆ.)

ಶಾಲೆಯ ಮುಂದುಗಡೆ ಸ್ವಲ್ಪದೂರದಲ್ಲಿ ಆದಿಲಶಾಹಿ ಕಾಲದ ಮಸೀದಿ ಮತ್ತು ಬಾವಿ ಇವೆ. ನಾನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಆ ಮಸೀದಿಯಲ್ಲಿ ಒಂದು ಮುಸ್ಲಿಂ ಕುಟುಂಬದ ಬಡಗಿಗಳು ಎಸ್.ಎಸ್. ಹೈಸ್ಕೂಲಿಗೆ ಬೇಕಾದ ಬೆಂಚು, ಖುರ್ಚಿ ಮತ್ತು ಟೇಬಲ್‌ಗಳನ್ನು ತಯಾರಿಸುತ್ತಿದ್ದರು. ಅವರು ವರ್ಷವಿಡೀ ಒಂದಿಲ್ಲೊಂದು ಉಪಕರಣಗಳ ತಯಾರಿಕೆ ಅಥವಾ ರಿಪೇರಿ ಮಾಡುವುದರಲ್ಲಿ ತಲ್ಲೀನರಾಗಿರುತ್ತಿದ್ದರು.

ಹೈಸ್ಕೂಲಿನ ವಾತಾವರಣದಲ್ಲಿ ನಮ್ಮ ತೆಗ್ಗಿನ ಶಾಲೆ ಇದ್ದುದರಿಂದ ಹೈಸ್ಕೂಲ್ ವಿದ್ಯಾರ್ಥಿಗಳ ಎಲ್ಲ ಚಟುವಟಿಕೆಗಳನ್ನು ನೋಡುವ ಅವಕಾಶ ಸಿಗುತ್ತಿತ್ತು. ಆ ಹೈಸ್ಕೂಲು ಕಟ್ಟಡ ಯಾವ ವಿಶ್ವವಿದ್ಯಾಲಯದ ಕಟ್ಟಡಕ್ಕಿಂತ ಕಡಿಮೆಯಾದುದಲ್ಲ. ಅಲ್ಲಿ ಎಲ್ಲ ವ್ಯವಸ್ಥೆ ಇತ್ತು. ಪ್ರಾಥಮಿಕ ಶಾಲೆ ಸೇರಿದ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ. ಮುಗಿಸಿಕೊಂಡು ಎಫ್.ವೈ. (ಆಗ ಪಿ.ಯು.ಸಿ. ಈಗಿನಂತೆ ಎರಡು ವರ್ಷದವರೆಗೆ ಇರದೆ ಒಂದೇ ವರ್ಷಕ್ಕೆ ಸೀಮಿತವಾಗಿತ್ತು. ಅದಕ್ಕೆ ಎಫ್.ವೈ. ಅಂದರೆ ಫಸ್ಟ್ ಇಯರ್ ಎಂದು ಹೇಳುತ್ತಿದ್ದರು.) ವರೆಗೆ ಓದುವ ವ್ಯವಸ್ಥೆ ಅಲ್ಲಿತ್ತು. ನಂತರ ಅದೇ ಬಿ.ಎಲ್.ಡಿ.ಇ. ಸಂಸ್ಥೆಗೆ ಸಂಬಂಧಿಸಿದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಯವರೆಗೆ ಓದು ಸೌಲಭ್ಯವನ್ನು ಆ ಕಾಲದಲ್ಲೇ ಕಲ್ಪಿಸಲಾಗಿತ್ತು.)

(ಶಾಲೆಯೆಡೆಗೆ ನಡಿಗೆ)

ಅರ್ಜುನ ಮಾಮಾನ ತೋಟಕ್ಕೆ ಹೋಗುವ ಮೊದಲು ಕೆಲವೊಂದು ಸಲ ಹೈಸ್ಕೂಲ್ ತುಂಬೆಲ್ಲ ಸುತ್ತಾಡುವುದು ಸಾಮಾನ್ಯವಾಗಿತ್ತು. ಎರಡು ಉದ್ದನೆಯ ಕಟ್ಟಡಗಳು. ಹೆಡ್ ಮಾಸ್ಟರ್ ಮತ್ತು ಆಡಳಿತ ಕಚೇರಿ ಇರುವ ಕಟ್ಟಡ, ಲೈಬ್ರರಿ, ಪ್ರಯೋಗಶಾಲೆ, ಆ ಕಾಲದ ಎಲ್ಲ ಕಸರತ್ತಿನ ಉಪಕರಣಗಳೊಂದಿಗೆ ಸುಸಜ್ಜಿತವಾದ ವ್ಯಾಯಾಮಶಾಲೆ, ಕುಡಿಯುವ ನೀರಿನ ವ್ಯವಸ್ಥೆ, ಬಯಲು ರಂಗಮಂದಿರ, ಚಿತ್ರಕಲಾಶಾಲೆ, ಸಂಗೀತಶಾಲೆ, ಜ್ಯೂನಿಯರ್ ಎನ್.ಸಿ.ಸಿ. ಕಟ್ಟಡ, ಫುಟ್‍ಬಾಲ್ ಗ್ರೌಂಡ್, ಟೆನಿಸ್ ಕೋರ್ಟ್, ಟೇಬಲ್ ಟೆನಿಸ್, ಗಾರ್ಡನ್, ವಾಚಮನ್ ಮನೆಗಳು ಹೀಗೆ ಒಂದು ಹೈಸ್ಕೂಲ್ ಎಲ್ಲರೀತಿಯ ವ್ಯವಸ್ಥೆಯನ್ನು ಹೊಂದಿದ್ದನ್ನು ನಾನು ಮತ್ತೆಲ್ಲೂ ನೋಡಲಿಲ್ಲ.

ಅರ್ಜುನ್ ಮಾಮಾ ಒಂದು ಕುದುರೆ ಸಾಕಿದ್ದ. ಅದರ ಹೆಸರು ಚಮೇಲಿ. ಅವುಗಳ ಜೊತೆ ನನ್ನ ಒಡನಾಟ ಜಾಸ್ತಿ ಇತ್ತು. ತೋಟದಲ್ಲಿ ಚಮೇಲಿ, ನಾಯಿ ಬಾಳ್ಯಾ ಮತ್ತು ನಾನು ಜೊತೆಯಲ್ಲಿರುತ್ತಿದ್ದೆವು. ಚಮೇಲಿ ನೋಡಲು ಹೇಳಿಕೊಳ್ಳುವಂಥ ಕುದುರೆ ಅಲ್ಲ. ಅದರ ಸೈಜು ಕತ್ತೆಯಷ್ಟಿತ್ತು. ಆದರೆ ಕತ್ತೆಯ ಹಾಗೆ ದಪ್ಪಗಿರಲಿಲ್ಲ. ಸಾಧಾರಣ ಮೈಕಟ್ಟಿನ ರೋಗಿಯೊಬ್ಬ ಆಸ್ಪತ್ರೆಯಿಂದ ಗುಣಮುಖವಾಗಿ ಬಂದ ಹಾಗೆ ಕಾಣುತ್ತಿತ್ತು. ಆದರೆ ಬಹಳ ಚುರುಕಾದ ಕುದುರೆ.

ತೋಟದ ಮುಂದೆ ಸಾಕಷ್ಟು ಮುನ್ಸಿಪಾಲಿಟಿ ಬಯಲು ಜಾಗವಿತ್ತು. ತೋಟಕ್ಕೆ ಹೋಗಬೇಕಾದರೆ ನಾಲ್ಕು ಮೆಟ್ಟಿಲನ್ನು ಹತ್ತಬೇಕಿತ್ತು. ನಾನು ಹೋದೊಡನೆ ಚಮೇಲಿ ನನ್ನ ಬಳಿ ಬರುತ್ತಿತ್ತು. ನಾನು ಅದರ ಮೇಲೆ ಹತ್ತಿ ಕೂಡುವವರೆಗೆ ಸಹಕರಿಸುತ್ತಿತ್ತು. ಆ ಮೇಲೆ ಕುದುರೆ ಓಡಿಸುತ್ತಿದ್ದೆ. ನಾನು ಏಕೆ ಓಡಿಸುತ್ತೇನೆ ಎಂಬುದು ಅದಕ್ಕೆ ಗೊತ್ತಿತ್ತು. ಅದು ಜೋರಾಗಿ ಓಡುತ್ತ ನಾಲ್ಕೂ ಕಟ್ಟೆಗಳನ್ನು ಹಾರಿ ನಿಲ್ಲುತ್ತಿತ್ತು. ಅದು ಹಾರುವಾಗ ನಾನು ಬಾಗಿ ಗಟ್ಟಿಯಾಗಿ ಕುದುರೆಯನ್ನು ಹಿಡಿಯುತ್ತಿದ್ದೆ. ಅಷ್ಟೊತ್ತಿಗೆ ಬಾಳ್ಯಾ ಬಂದು ನಿಂತಿರುತ್ತಿದ್ದ. ಆ ಮೇಲೆ ಮೂವರೂ ತೋಟವನ್ನು ಸುತ್ತುತ್ತಿದ್ದೆವು. ನಾನು ಚಮೇಲಿ ಮೇಲೆ, ಬಾಳ್ಯಾ ಚಮೇಲಿ ಮುಂದೆ. ಹೀಗೇ ಸಾಗಿತ್ತು ಜೀವನ.

ಒಂದು ದಿನ ಹೀಗೇ ಹೋಗುವಾಗ ಪಪಾಯಿ ಗಿಡದಲ್ಲಿ ಒಂದು ಕಾಯಿ ಹಣ್ಣಾಗಿದ್ದು ನೋಡಿದೆ. ಕೂಡಲೇ ಇಳಿದು ಅದನ್ನು ಕೀಳಲು ಪಪಾಯಿ ಗಿಡ ಹತ್ತಿದೆ. ಹಣ್ಣನ್ನು ಕೀಳು ಸಂದರ್ಭದಲ್ಲಿ ಜಾರಿ ಬಿದ್ದೆ. ಆಗ ಬಲಗೈನ ಮೊಣಕೈನಲ್ಲಿ ತರಚಿದ ಗಾಯವಾಯಿತು. ಗಾಯ ಮಾಯ್ದಾಗ ಭಾರತದ ನಕಾಶೆಯ ಹಾಗೆ ಕಲೆ ಬಿದ್ದಿತು. ಆ ಕಲೆಯನ್ನು ಎಲ್ಲ ಗೆಳೆಯರಿಗೆ ಹೆಮ್ಮೆಯಿಂದ ತೋರಿಸುತ್ತಿದ್ದೆ. ಅವರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. (ಇದೀಗ ನೆನಪಾಗಿ ಮತ್ತೆ ನೋಡಿದೆ.)

ತೋಟದಲ್ಲಿ ತೆಂಗಿನಮರಗಳ ಸಾಲು ಬಹಳ ಸುಂದರವಾಗಿತ್ತು. ಅದು ಅರ್ಜುನ ಮಾಮಾ ಮತ್ತು ಗೋಪಾಳ ಮಾಮಾ ಸಹೋದರರ ತೋಟಗಳ ಬಾರ್ಡರ್ ಆಗಿತ್ತು. ಪಪಾಯಿ, ಪೇರು, ಕಾಶಿ ಬಾರಿಕಾಯಿ, ಇಲಾಚಿ ಹುಣಸಿಕಾಯಿ, ದಾಳಿಂಬೆ, ಕಂಚಿಕಾಯಿ ಗಿಡಗಳು ಕೂಡ ಇದ್ದವು.

ಹಳೆ ಬಾವಿಯ ಮಟ್ಟಿಬಾರಿ ಪಕ್ಕದಲ್ಲಿ ಕಾಶಿ ಬಾರಿಕಾಯಿ ಗಿಡ ಇತ್ತು. ಅದು ಬಹಳ ಎತ್ತರ ಬೆಳೆದದ್ದರಿಂದ ಕೆಳಗೆ ಬಿದ್ದ ಕಾಯಿಗಳನ್ನು ಮಾತ್ರ ತಿನ್ನಲು ಸಾಧ್ಯವಿತ್ತು. ಒಂದು ಸಲ ಅಲ್ಲಿಗೆ ಹೋದಾಗ ನಾಲ್ಕಾರು ಕಾಯಿಗಳು ಬಿದ್ದಿದ್ದವು. ಅವು ಬಹಳ ದಪ್ಪ ಮತ್ತು ರುಚಿಯಾಗಿದ್ದವು. ನಾನು ಆರಿಸಿಕೊಂಡು ತಿನ್ನುತ್ತ ಬಾರಿಗಿಡದ ಕಾಂಡಕ್ಕೆ ತಾಗಿ ಕಾಲು ಜೋಡಿಸಿಕೊಂಡು ನಿಂತ ವೇಳೆ ಮುದಿ ಹಾವೊಂದು ನನ್ನ ಕಡೆ ಬರುತ್ತಿತ್ತು. ಆಗ ನನ್ನ ಸುತ್ತಮುತ್ತ ಯಾರೂ ಇರಲಿಲ್ಲ. ಚೀರಲು ಭಯವಾಯಿತು. ಹಾವಿನ ಮೇಲೆ ಬಿಡಿಬಿಡಿಯಾಗಿ ಕೂದಲುಗಳಿದ್ದವು. ನಾನು ನಿಶ್ಚಲನಾಗಿ ನಿಂತೆ. ಅದು ನನ್ನ ಪಾದಗಳ ಮೇಲಿಂದ ಹಾಯ್ದು ಹೋಯಿತು. ನಂತರ ನಾನು ಅಲ್ಲಿಂದ ಓಡಿ ಹೋದೆ. ತೋಟದಲ್ಲಿ ಶರವೇಗದಲ್ಲಿ ಹೋಗುವ ನಮೂನೆ ನಮೂನೆಯ ಹಾವುಗಳಿದ್ದವು. ಅವುಗಳ ಮುಂದೆ ಇದು ಪಾಪದ ಹಾವು ಆಗಿತ್ತು. ನಾಗರಹಾವು, ಕೇರೆಹಾವು, ರಬ್ಬರಂತೆ ಕಾಣುವ ಸುಸ್ತಾದ ಮಣ್ಮುಕ್ ಹಾವು, ಗಂಭೀರವಾಗಿ ಸಾಗುವ ಹೆಬ್ಬಾವು ಮುಂತಾದ ಹಾವುಗಳನ್ನು ನಾನು ಅಲ್ಲಿಯೇ ನೋಡಿದ್ದು. ಬಾವಿಯಲ್ಲಿ ಈಜುವ ಮುಂದೆ ಕೂಡ ಒಂದು ಸಲ ನೀರಲ್ಲಿ ಹಾವು ನೋಡಿದ್ದೆ.

ಬಾವಿಯ ದಂಡೆಯಲ್ಲಿ ಸಮುದ್ರಪಾಳಿ ಎಂಬ ಬಳ್ಳಿ ದಟ್ಟವಾಗಿ ಬೆಳೆದಿತ್ತು. ಅದರ ಎಲೆಗಳು ನಾಲ್ಕು ಬೆರಳಿನಷ್ಟು ಅಗಲವಾಗುವವರೆಗೆ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ನಂತರ ಅವು ಬೇರ್ಪಡುತ್ತವೆ. ಅವು ಬೇರ್ಪಡುವ ಮೊದಲೇ ನಾವು ಹುಡುಗರು ಅವುಗಳನ್ನು ಬೇರ್ಪಡಿಸಲು ಯತ್ನಿಸುತ್ತಿದ್ದೆವು. ಅವುಗಳನ್ನು ಸೂಕ್ಷ್ಮವಾಗಿ ಬೇರ್ಪಡಿಸಬೇಕು. ಹಾಗೆ ಎಲೆ ಹರಿಯದಂತೆ ಬೇರ್ಪಡಿಸಿದರೆ ನಾವು ಪರೀಕ್ಷೆಯಲ್ಲಿ ಪಾಸಾಗುವುದು ಗ್ಯಾರಂಟಿ ಎಂಬ ನಂಬಿಕೆ ಇತ್ತು. ಆಕಸ್ಮಿಕವಾಗಿ ಎಲೆ ಹರಿದರೆ ಫೇಲಾಗುತ್ತೇವೆ ಎಂಬ ಆತಂಕ ಉಂಟಾಗುತ್ತಿತ್ತು.

ತೊಂಡಿಕಾಯಿ ಬಳ್ಳಿ, ತೊಟ್ಟಿಲಕಾಯಿ ಕಂಟಿ ಮತ್ತಿತರ ಗಿಡಗಂಟಿಗಳಿಂದ ಬಾವಿಯ ದಂಡೆ ತುಂಬಿಕೊಂಡಿತ್ತು. ತೊಟ್ಟಿಲಕಾಯಿ ಈಗ ಜನಮಾನಸದಿಂದ ಮರೆಯಾಗಿರಬಹುದು. ಅದು ದುಂಡಗೆ ದೊಡ್ಡ ಲಿಂಬಿಕಾಯಿಯ ಹಾಗೆ ಇರುವುದು. ಗಟ್ಟಿಯಾಗಿದ್ದು ಗಾಢ ಹಸಿರುಬಣ್ಣ ಹೊಂದಿರುವುದು. ಕಹಿಯಾಗಿರುವುದರಿಂದ ಅದನ್ನು ಸೀಳಿ ಚೆನ್ನಾಗಿ ಕುದಿಸಿದ ಮೇಲೆ ಆ ನೀರನ್ನು ಚೆಲ್ಲಿದ ನಂತರ ಒಣಗಿ (ಪಲ್ಯೆ) ಮಾಡುತ್ತಿದ್ದರು. ಬತ್ತೀಸಮೋಗ್ರಾ ಹೂಗೊಂಚಲು ಆಕರ್ಷಕವಾಗಿ ಕಾಣುತ್ತಿದ್ದವು. ಆದರೆ ವಾಸನೆ ಮನಸ್ಸಿಗೆ ಮುದ ನೀಡುತ್ತಿರಲಿಲ್ಲ. ಬಾವಿಯ ಒಳಗಡೆ ಬಾಗಿದ ಗಿಡಗಳ ರೆಂಬೆಗಳಲ್ಲಿ ಗುಬ್ಬಿಗೂಡುಗಳು ಮತ್ತು ಮಟ್ಟಿಬಾರಿ ಮತ್ತು ಸುತ್ತಲೂ ಹಸಿರಿನಿಂದ ಕಂಗೊಳಿಸುವ ಐತಿಹಾಸಿಕ ಬಾವಿ ಗತವೈಭವವನ್ನು ನೆನಪಿಗೆ ತರುತ್ತಿತ್ತು.

ಆ ದೊಡ್ಡದಾದ ತೋಟದಲ್ಲಿ ಅರ್ಜುನ ಮಾಮಾನದು ಒಂದು ಭಾಗವಾದರೆ ಗೋಪಾಳ ಮಾಮಾನದು ಇನ್ನೊಂದು ಭಾಗವಾಗಿತ್ತು. ಅವರ ಇನ್ನಿಬ್ಬರು ಅಣ್ಣಂದಿರ ಪಾಲೂ ಅದರಲ್ಲಿತ್ತು. ಆದರೆ ಅವರು ಆಗ ಇನ್ನೂ ಭಾಗ ಕೇಳಿರಲಿಲ್ಲ. ಇವರ ಪಕ್ಕದಲ್ಲೇ ಸಂಬಂಧಿಕರಾದ ದಾದಾಮಾಮಾ ಅವರ ತೋಟಪಟ್ಟಿ ಇದ್ದು ಇಡೀ ಪಟ್ಟಿಗೆ ಅವರೇ ಒಡೆಯರಾಗಿದ್ದರು. ತೋಟದ ಒಂದು ಭಾಗ ಗಜಗದ ಕಂಟಿಯಿಂದ ಕೂಡಿದ ಬೇಲಿಯನ್ನು ಹೊಂದಿತ್ತು. ಮುಳ್ಳಿನ ಮುಸುಕಿನ ಕಾಯಿಯೊಳಗೆ ಇರುವ ಗಜಗಗಳನ್ನು ಸಂಗ್ರಹಿಸುತ್ತಿದ್ದೆ. ಒಣ ಕಾಯಿಗಳನ್ನು ಆರಿಸಿಕೊಳ್ಳಲು ಕಂಟಿಯ ಒಳಗೆ ಹುಷಾರಾಗಿ ನೆಲಕ್ಕೆ ಅಂಟಿಕೊಂಡಂತೆ ಹೋಗಬೇಕಿತ್ತು. ಅವುಗಳನ್ನೆಲ್ಲ ಹರಿದು ತಂದ ನಂತರ ಒಡೆದು ಬೀಜಗಳನ್ನು ಹೊರ ತೆಗೆಯುತ್ತಿದ್ದೆ. ಅಂಥ ಬೀಜಗಳು ಸಾಮಾನ್ಯವಾಗಿ ಎಲ್ಲ ಹುಡುಗರ ಮನೆಗಳಲ್ಲಿ ಇರುತ್ತಿದ್ದವು. ಅವುಗಳನ್ನು ಆಟದಲ್ಲಿ ಪಣಕ್ಕೆ ಹಚ್ಚಿ ಗೆಲ್ಲುವುದು ಮತ್ತು ಸೋಲುವುದು ನಡೆದೇ ಇರುತ್ತಿತ್ತು. ಅದೇ ರೀತಿ ಸೀಜನ್‌ನಲ್ಲಿ ಮಾವಿನ ಗುಟ್ಲಿ (ಓಟೆ – ಗೊರಟೆ)ಗಳನ್ನು ಸಂಗ್ರಹಿಸುತ್ತಿದ್ದೆವು. ಚಣ್‍ಚಣ್ ವಟ್ಟಾದಿಂದ ಅದೇನೋ ಆಟವಾಡುತ್ತಿದ್ದೆವು. ತೆಳ್ಳನೆಯ ಗುಟ್ಲಿಗೆ ಬಹಳ ಬೇಡಿಕೆ ಇತ್ತು.

(ಲಗೋರಿ)

ಏಕೆಂದರೆ ಚಣ್‍ಚಣ್ ವಟ್ಟಾದಿಂದ ಹೊಡೆದು ಅದನ್ನು ಪಡೆಯಲಿಕ್ಕಾಗುತ್ತಿರಲಿಲ್ಲ. ಇಂಥ ಅನೇಕ ಬಾಲ್ಯದ ಆಟಗಳು ಈಗ ಕಣ್ಮರೆಯಾಗಿವೆ. ಗೋಠಿ, ಲಗೋರಿ, ಬಗ್ಗು-ಹಾರು, ಚಿಣ್ಣಿದಾಂಡುಗಳಂಥ ಆಟಗಳೂ ಕಾಣಸಿಗುತ್ತಿಲ್ಲ. ಮಳೆ ಬಂದ ನಂತರ ಮಣ್ಣಿನ ಹಾದಿಯ ದಂಡೆಯಲ್ಲಿ ಸಂಗ್ರಹವಾಗುವ ಸೂಸುಮಣ್ಣಿನಿಂದ ಪಾದದ ತುಂಬ ಮಣ್ಣು ಮುತ್ತಿ ಗುಬ್ಬಿಮನಿ ಮಾಡುತ್ತಿದ್ದೆವು. ನಮಗೆ ಎಷ್ಟೊಂದು ಆಟಗಳು ಗೊತ್ತಿದ್ದವು. ಈಗ ಅವೆಲ್ಲ ಎಲ್ಲಿ ಹೋದವೋ!

ಹೋಳಿಹುಣ್ಣಿಮೆ ಬಂದರೆ ನನ್ನ ಓರಗೆಯವರಿಗೆ ಬಹಳ ಖುಷಿ. ಹಲಗೆ ಹೊಡೆಯುವ ಆನಂದವೇ ಬೇರೆ. ಹೋಳಿ ಹುಣ್ಣಿಮೆ ಪ್ರಾರಂಭವಾಗುವ ಒಂದು ವಾರ ಮೊದಲೇ ಹಲಗೆ ಹೊಡೆಯುವ ಹುಮ್ಮಸ್ಸು ಶುರುವಾಗುತ್ತಿತ್ತು. ಗಲ್ಲಿ ಗಲ್ಲಿಗಳಲ್ಲಿ ರಸ್ತೆ ಬದಿ ಅಲಂಕರಿಸಿದ ಸ್ಟೇಜ್ ಹಾಕಿ ಸಾರ್ವಜನಿಕ ಕಾಮ-ರತಿಯರ ಮೂರ್ತಿಗಳನ್ನು ಕೂಡಿಸುತ್ತಿದ್ದರು. ಅವುಗಳನ್ನು ನೋಡಲು ಜನ ಬೇರೆ ಬೇರೆ ಗಲ್ಲಿಗಳಿಗೆ ತಂಡೋಪತಂಡವಾಗಿ ಹೋಗುತ್ತಿದ್ದರು.

ಜನರು ಹೋಳಿ ಹುಣ್ಣಿಮೆ ದಿನ ಕಾಮಣ್ಣನನ್ನು ಸುಡಲು ಕಟ್ಟಿಗೆ ಮುಂತಾದ ವಸ್ತುಗಳನ್ನು ಕಳ್ಳತನ ಮಾಡುವುದು ಮಾತ್ರ ನನಗೆ ಸೇರುತ್ತಿರಲಿಲ್ಲ. ಯುವಕರು ಕುಳ್ಳು, ಕಟ್ಟಿಗೆ, ಸಣ್ಣಪುಟ್ಟ ದಿಮ್ಮಿ ಮುಂತಾದವುಗಳನ್ನು ರಾತ್ರಿ ಸಾಹಸದಿಂದ ಕಳ್ಳತನ ಮಾಡುತ್ತಿದ್ದರು. ಅವುಗಳನ್ನೆಲ್ಲ ನಡುಬೀದಿಯಲ್ಲಿ ಗುಂಪು ಹಾಕಿ ಹೋಳಿಹಬ್ಬದ ದಿನ ಸುಡುತ್ತಿದ್ದರು. ಆ ರಾತ್ರಿ ಬಹಳ ಹೊತ್ತಿನವರೆಗೆ ಯುವಕರು ಮತ್ತು ಮಧ್ಯವಯಸ್ಕರು ಅಶ್ಲೀಲ ಹಾಡುಗಳನ್ನು ಹಾಡುತ್ತಿದ್ದರು.

ವಿಜಾಪುರದಲ್ಲಿ ಹೋಳಿಹುಣ್ಣಿಮೆ ಮರುದಿನ ಬೆಳಿಗ್ಗೆ ಮತ್ತು ಐದನೇ ದಿನಕ್ಕೆ ಬಣ್ಣ ಆಡುತ್ತಿದ್ದರು. (ಐದನೇ ದಿನದ್ದು ರಂಗಪಂಚಮಿ) ಸಂಪ್ರದಾಯಸ್ಥ ಮುಸ್ಲಿಮರಿಗೆ ಮತ್ತು ಹೆಣ್ಣುಮಕ್ಕಳಿಗೆ ಯಾರೂ ಬಣ್ಣ ಹೊಡೆಯುತ್ತಿರಲಿಲ್ಲ. ಕೆಲವೊಂದು ಕಡೆ ಹೆಣ್ಣುಮಕ್ಕಳೇ ತಮ್ಮ ಪಾಡಿಗೆ ಬಣ್ಣ ಆಡುತ್ತಿದ್ದರು.

ಬಣ್ಣದ ದಿನ ಬೆಳಿಗ್ಗೆ ನಾವು ಹುಡುಗರು ಹಳೆಯ ಬಟ್ಟೆ ಹಾಕಿಕೊಂಡು ಬಣ್ಣ ಆಡಲು ಹೋಗುತ್ತಿದ್ದೆವು. ಒಂದು ಬಾಟಲಿಯಲ್ಲಿ ಬಣ್ಣ ತುಂಬಿಕೊಂಡು ಪಿಚಕಾರಿ ಹಿಡಿದು ಬಣ್ಣ ಸಿಡಿಸುತ್ತ ಗುಂಪು ಗುಂಪಾಗಿ ಸುತ್ತುತ್ತಿದ್ದೆವು. ಎಲ್ಲ ಓಣಿಗಳಲ್ಲಿ ದೊಡ್ಡವರು ಡ್ರಂನಲ್ಲಿ ಬಣ್ಣ ತುಂಬಿ ಸಿಕ್ಕ ಸಿಕ್ಕವರ ಮೇಲೆ ಸುರಿಯುತ್ತಿದ್ದರು. ಬಜಾರದಲ್ಲಿ ಬಣ್ಣ ಬಹಳ ಜೋರಾಗಿರುತ್ತಿತ್ತು. ಮಧ್ಯಾಹ್ನದ ವರೆಗೆ ಆಡಿ ಸುಸ್ತಾಗಿ ಮನೆಗೆ ಬಂದು ತಿಕ್ಕಿ ತಿಕ್ಕಿ ಸ್ನಾನ ಮಾಡಿದರೂ ಬಣ್ಣ ಪೂರ್ತಿಯಾಗಿ ಹೋಗುತ್ತಿರಲಿಲ್ಲ.

(ಬಗು-ಹಾರು)

ನಾನು ವಿವಿಧ ಗಲ್ಲಿಗಳಿಗೆ ಕಾಮಣ್ಣನನ್ನು ನೋಡಲು ಹೋಗುವ ಗತ್ತೇ ಬೇರೆ ಇತ್ತು. ‘ನಾನೇ ರಾಜಕುಮಾರ’ ಎನ್ನುವ ಹಾಗೆ ನನ್ನ ಗತ್ತು ಇತ್ತು. ಹರಕು ಚೆಡ್ಡಿಯಲ್ಲಿ ಚಮೇಲಿ ಮೇಲೆ ಹತ್ತಿ ಕೂಡುತ್ತಿದ್ದೆ. ಮುಂದೆ ಬಾಳ್ಯಾ ಹೆಜ್ಜೆ ಹಾಕುತ್ತಿದ್ದ. ಅದರ ಮುಂದೆ ಹಲಗೆ ಬಾರಿಸುತ್ತ ನನ್ನ ಗೆಳೆಯ ಸಾಗುತ್ತಿದ್ದ. ಅವನ ಹಿಂದೆ ಬಾಳ್ಯಾ ಹೋಗುತ್ತಿದ್ದ. ಚಮೇಲಿ ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಳು. ಹುಡುಗರು ಬಾಳ್ಯಾಗೆ ಅಂಜಿ ನನ್ನ ಮೆರವಣಿಗೆಯನ್ನು ದೂರದಿಂದಲೇ ನೋಡುತ್ತಿದ್ದರು.

ಚಮೇಲಿ ಮತ್ತು ಬಾಳ್ಯಾ ಎಂಥ ಅದ್ಭುತ ಎಂದರೆ ಅವು ಯಾವ ಸಪ್ಪಳಕ್ಕೂ ಯಾರಿಗೂ ಹೆದರುತ್ತಿರಲಿಲ್ಲ. ಹಲಗೆ ಬಾರಿಸುವ ಹುಡುಗ ಸಮೇತ ನಾವು ನಾಲ್ವರು ನಮ್ಮದೇ ಜಗತ್ತಿನಲ್ಲಿ ಇದ್ದೆವು. ಆ ಹಲಗೆ ಬಾರಿಸುವ ಹುಡುಗನ ಮುಖಚರ್ಯೆ ಮತ್ತು ಹೆಸರು ಮರೆತುಹೋಗಿದೆ. ಆದರೆ ಆತ ವೀರಯೋಧನಂತೆ ಹಲಗೆ ಬಾರಿಸುತ್ತ ಹುರುಪಿನಿಂದ ಸಾಗುತ್ತಿದ್ದುದು ನೆನಪಿದೆ. ಎಲ್ಲೆಡೆ ಸುತ್ತಾಡಿದ ನಂತರ ತೋಟಕ್ಕೆ ಮರಳುತ್ತಿದ್ದೆವು. ಮಾನವ ಮತ್ತು ಪ್ರಾಣಿಗಳ ಗಾಢ ಸಂಬಂಧದ ಅರಿವು ನನಗೆ ಹೀಗೆ ಬಾಲ್ಯದಲ್ಲೇ ಆಯಿತು.
ಕೆಲ ಸಮಯದ ನಂತರ ಚಮೇಲಿ ಬೇನೆ ಬಿದ್ದಳು. ಅವಳನ್ನು ಉಳಿಸಿಕೊಳ್ಳಲು ಅರ್ಜುನ ಮಾಮಾ ಪ್ರಯತ್ನ ಪಟ್ಟರೂ ಆಗಲಿಲ್ಲ. ಸತ್ತನಂತರ ಗಾಡಿಯಲ್ಲಿ ಹಾಕಿಕೊಂಡು ಕೋಟೆಗೋಡೆ ಹೊರಗಡೆಯ ಬಯಲಲ್ಲಿ ಮೃತದೇಹವನ್ನು ಇಳಿಸಿ ಬಂದರು. ನನ್ನ ದುಃಖ ಹೇಳತೀರದಷ್ಟಾಯಿತು. ಚಮೇಲಿ ಮತ್ತು ಬಾಳ್ಯಾ ನನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಸತ್ತ ಚಮೇಲಿಯನ್ನು ಹಾಗೆ ಬಿಟ್ಟು ಬರುವಾಗ ದುಃಖ ಉಮ್ಮಳಿಸಿ ಬರುತ್ತಿತ್ತು. ನಮ್ಮ ಕೂಡ ಬಂದಿದ್ದ ಬಾಳ್ಯಾನನ್ನು ಎಳೆದುಕೊಂಡು ಬಂದೆವು.

ಮರುದಿನ ಬಾಳ್ಯಾ ಮಾಯವಾಗಿದ್ದ. ಎಲ್ಲರೂ ಗಲಿಬಿಲಿಗೊಂಡು ಹುಡುಕಿದೆವು. ಆತನ ಹಾಗೆ ಆ ತೋಟದ ಮನೆ ಮತ್ತು ತೋಟ ಕಾಯುವ ನಾಯಿ ಸಿಗುವುದು ದುರ್ಲಭ. ಎಲ್ಲೆಡೆ ಹುಡುಕಿದರೂ ಸಿಗಲಿಲ್ಲ. ಅವನನ್ನು ಯಾರೂ ಹಾಗೆ ಒಯ್ಯಲು ಸಾಧ್ಯವಿಲ್ಲ. ಹಾಗೆ ಒಯ್ಯುವಂಥ ಚಿಕ್ಕ ವಯಸ್ಸೂ ಅವನದಾಗಿರಲಿಲ್ಲ. ನಾನಂತೂ ಹುಡುಕಿ ಹುಡುಕಿ ಬೇಸತ್ತೆ. ಮೂರ್ನಾಲ್ಕು ದಿನ ಕಳೆದ ನಂತರ ಚಮೇಲಿಯ ಕಳೇಬರವನ್ನು ನೋಡಬೇಕೆನಿಸಿತು. ಕೋಟೆಗೋಡೆ ದಾಟಿ ಹೋಗಿ ನೋಡಿದರೆ ಬಾಳ್ಯಾ ಅನ್ನನೀರಿಲ್ಲದೆ ಅಲ್ಲೇ ಕುಳಿತಿದ್ದಾನೆ! ಚಮೇಲಿಯ ದೇಹವನ್ನು ತಿನ್ನಲು ಯಾವ ನಾಯಿ ಮತ್ತು ರಣಹದ್ದುಗಳಿಗೂ ಬಿಟ್ಟಿಲ್ಲ. ಆ ದೇಹ ಉಬ್ಬಿ ರಕ್ತ ಸೋರಿ ಕಪ್ಪುಗಟ್ಟಿತ್ತು.


ಬಾಳ್ಯಾನ ಸಾಂಗತ್ಯನಿಷ್ಠೆ ನೋಡಿ ಹೃದಯ ತುಂಬಿ ಬಂದಿತು. ಮೂರ್ನಾಲ್ಕು ದಿನಗಳಿಂದ ಆತ ಏನನ್ನೂ ಸೇವಿಸದೆ ಅಲ್ಲೇ ಕುಳಿತಿದ್ದ. ಅವನನ್ನು ಕರೆದುಕೊಂಡು ಬರಲು ಬಹಳ ಹೊತ್ತಿನ ವರೆಗೂ ಶತಪ್ರಯತ್ನ ಮಾಡಿ ವಿಫಲನಾದೆ. ವಾಪಸ್ ಬಂದು ಅರ್ಜುನ್ ಮಾಮಾಗೆ ಹೇಳಿದೆ. ಆಗ ಹೊತ್ತು ಮುಳುಗುವ ಸಮಯವಾಗಿದ್ದರಿಂದ ಮರುದಿನ ಅರ್ಜುನ ಮಾಮಾನ ಜೊತೆ ಅಲ್ಲಿಗೆ ಹೋದೆ. ನೋಡಿದರೆ ಬಾಳ್ಯಾ ಕೂಡ ಸತ್ತುಬಿದ್ದಿದ್ದ!

(ಚಿತ್ರಗಳು: ಸುನೀಲಕುಮಾರ ಸುಧಾಕರ)