“ಅಷ್ಟರಲ್ಲಿ ಫಕ್ಕನೆ ಕೋಟೆಯ ಕಾಪಿನಲ್ಲಿ ಕಹಳೆಯ ಕೂಗು ಕೇಳಿತು. ಕೋಟೆಯಲ್ಲಿ ಕೋಲಾಹಲವೆದ್ದಿತು. ವಿಜಯನಗರದ ದಂಡು ಕೋಟೆಯ ಕಡೆಗೆ ಬರದಿಂದ ಬರುತ್ತಿದ್ದಿತು. ಜೈ ಕರ್ಣಾಟಕ ಸಮ್ರಾಟ ಎಂಬ ಜಯಕಾರವು ಕೋಟೆಯ ಗೋಡೆಗಳಿಗೆ ಬಡಿದು ಮಾರ್ದನಿಗೊಟ್ಟಿತು. ಕನಲಿ ಬುಸುಗುಟ್ಟುತ್ತಿದ್ದ ತುಳುಪಡೆಯು, ಈ ಘೋಷವನ್ನು ಕೇಳುತ್ತಲೇ ಗಾರುಡಿಗನ ಮಂತ್ರಕ್ಕೆ ಮಣಿವ ಹಾವಿನಂತೆ ತಲೆ ತಗ್ಗಿಸಬೇಕಾಯಿತು”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು‘ ಸರಣಿಯ ಮೊದಲ ಕತೆ ಈ ಭಾನುವಾರದ ನಿಮ್ಮ ಓದಿಗಾಗಿ.

 

ವಿಜಯನಗರದಲ್ಲಿ ಚಿನ್ನದೇವರಾಯನು ಸಾಮ್ರಾಟನಾಗಿ ಮರೆಯುತ್ತಿದ್ದನು. ಅವನ ದಯೆ, ಪರಾಕ್ರಮ, ಪ್ರತಿಭೆಗಳ ಕೀರ್ತಿಯು ದೇಶದಲ್ಲೆಲ್ಲ ಹಬ್ಬಿತ್ತು. ಆ ಕಾಲಕ್ಕೆ ತುಳುನಾಡು ಅವನ ಕೈಯೊಳಗೆ ಅಡಗಿತ್ತು. ಆಗಲೇ ಕಾರ್ಕಳದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗಿದ ಗೊಮ್ಮಟನ ಪ್ರತಿಷ್ಠೆಯ ಮಹೋತ್ಸವಕ್ಕೆ ಅವನು ಸ್ವತಃ ವಿಜಯ ಮಾಡಿದ್ದನು. ಆಗ ತುಳುನಾಡಿನ ಸೊಬಗನ್ನೂ, ಐಸಿರಿಯನ್ನೂ ಕಂಡು ಸಂತಸ ಪಡೆದಿದ್ದನು. ಆದರೆ ತುಳು ರಾಯರ ತೆಗಲೆಯು ಎಲ್ಲಿ ಮಿತಿಮೀರಿಬಿಡಬಹುದೋ ಎಂದು ಶಂಕಿಸಿ, ಅವರಲ್ಲಿ ನಂಬಿಕೆ ಸಾಲದೆ, ಅವರ ಮೇಲಿನ ಹಿಡಿತವನ್ನು ಬಿಗಿದನು. ಅವರು ಕೊಡತಕ್ಕ ಕಪ್ಪಕಾಣಿಕೆಗಳನ್ನು ಏರಿಸಿದನು. ಎಲ್ಲರೂ ವಿಜಯನಗರದ ಕಟ್ಟಳೆಯಂತೆ ಸೀಮೆಗಳನ್ನು ಆಳುತ್ತ , ಸಮ್ರಾಟನೊಡನೆ ಸ್ನೇಹ ಸಂಪ್ರೀತಿಯಿಂದ ನಡೆದುಕೊಳ್ಳುತಕ್ಕುದೆಂದು ಶಾಸನ ಬರೆಸಿದನು. ವೈರಿಗಳು ಅರಸು ಅನುಸರಿಗಳ ಕೊಂಡು ಮೋಹರಿಸಿ ಬಹಾಗ, ಆಳು, ಕುದುರೆ, ಅರ್ಥ, ಪ್ರಾಣ ವೆಚ್ಚಿಸಿ ಕಾದುವುದಕ್ಕೆ ತಪ್ಪಲಾಗದೆಂದು ಕೌಲು ಮಾಡಿದನು. ಅವರ ಮೇಲೆ ಕಣ್ಣಿಡುವಂತೆಯೂ, ಸೀಮೆಗಳ ಕರಕಂದಾಯ, ವಂತಿಗೆ ವರಾಡವನ್ನು ವಸೂಲು ಮಾಡುವಂತೆಯೂ ಬಾರ್ಕೂರು ಹೋಬಳಿಯಲ್ಲಿ ಒಬ್ಬ ಒಡೆಯನನ್ನು ನೇಮಿಸಿದನು.

ಒಂದು ದಿನ ಹೋಬಳಿಯ ಕಛೇರಿಯಲ್ಲಿ ಒಡೆಯ ಚಂದರಸನು ಸೀಮೆಗಳ ಲೆಕ್ಕ ಪಟ್ಟಿಗಳನ್ನು ನೋಡುತ್ತಿದ್ದನು. ಮೂಡುಬಿದರೆಯ ಚೌಟರಸನ ಲೆಕ್ಕಪಟ್ಟಿಗಳೂ ಬಂದಿದ್ದುವು. ಆಗಿನ ಜೈನರಾಯರಲ್ಲೆಲ್ಲ ಮೂಡುಬಿದರೆಯ ಚೌಟ ಅರಸನಾದ ಚಿನ್ನದೇವರಾಯನೇ ಗಣ್ಯನಾಗಿದ್ದನು. ಅವನ ಸೀಮೆ ಏಳಿಗೆಯಲ್ಲಿತ್ತು. ಜನ ನೆಮ್ಮದಿಯಿಂದಿತ್ತು. ಶಾಂತಿ ನೆಲೆಗೊಂಡಿತ್ತು. ಅವನು ವಿಜಯನಗರಕ್ಕೆ ಸಾವಿರ ಹೊನ್ನುಗಳ ಕಪ್ಪ ಕೊಡುತ್ತಿದ್ದನು. ಚಂದರಸನು ಲೆಕ್ಕದೋಲೆಗಳನ್ನು ಪರೀಶೀಲಿಸುತ್ತಿದ್ದಂತೆ, ಧರ್ಮ ಸಮ್ರಾಜ ಚಿನ್ನದೇವರಾಯ ಎಂಬ ಒಪ್ಪವು ಅವನ ಕಣ್ಣು ಕುಕ್ಕಿತು. ಎಲ್ಲ ಓಲೆಗಳಲ್ಲೂ ಅದೇ ಕೈವೊಪ್ಪ, ಅದೇ ಮುದ್ರೆ. ಮುಂದೆ ಓದಲು ಅವನಿಗೆ ಕಣ್ಣೇ ಕಾಣಿಸಲಿಲ್ಲ. ಹಿಡಿದ ಓಲೆ ಹಿಡಿದಲ್ಲೆ. ಮನಸ್ಸಿನಲ್ಲಿ ಯೋಚನೆಗಳೆದ್ದುವು. ಧರ್ಮ ಸಾಮ್ರಾಟ ಚಿನ್ನದೇವರಾಯ ಅಬ್ಬ! ಇವನೇ ಸಾಮ್ರಾಟ! ಇವನೇ ಚಿನ್ನದೇವರಾಯ! ಇನ್ನೇನು ಉಳಿಯಿತು! ಸಾಮ್ರಾಟರ ಬಿರುದು ಈ ಪಾಳಯ ಪಟ್ಟಿನ ಚೌಟಗೆ, ಹೌದು! ಕೇಳುವವರಿಲ್ಲದಿದ್ದರೆ ಯಾವ ಹೆಸರಿಟ್ಟು ಕೊಂಡರೇನು? ಹೇಗೆ ಒಪ್ಪವನ್ನು ಹಾಕಿದರೇನು? ಈ ಚೌಟನ ಅಟ್ಟಹಾಸ ಹದ್ದುಮೀರಿತು. ಇವನೆಷ್ಟು ಕೈಮೀರಿದನೆಂದು ಈ ಕೈವೊಪ್ಪಗಳೇ ಹೇಳುವುದಿಲ್ಲವೇ! ಸಾಮ್ರಾಟರ ಬಿರುದನ್ನು ಲಕ್ಷಿಸದವನು ನನ್ನಂಥ ಹೋಬಳಿಯ ಒಡೆಯನನ್ನು ಗಣ್ಯ ಮಾಡುವನೇಕೆ? ಈತನನ್ನು ಹೀಗೆಯೇ ಬಿಡುವುದು ಸರಿಯಲ್ಲ; ಎನ್ನುತ್ತ, ಯೋಚನೆಯಲ್ಲಿ ಮುಳುಗಿದನು.

ಚಂದರಸನು ಲೆಕ್ಕದೋಲೆಗಳನ್ನು ಪರೀಶೀಲಿಸುತ್ತಿದ್ದಂತೆ, ಧರ್ಮ ಸಮ್ರಾಜ ಚಿನ್ನದೇವರಾಯ ಎಂಬ ಒಪ್ಪವು ಅವನ ಕಣ್ಣು ಕುಕ್ಕಿತು. ಎಲ್ಲ ಓಲೆಗಳಲ್ಲೂ ಅದೇ ಕೈವೊಪ್ಪ, ಅದೇ ಮುದ್ರೆ. ಮುಂದೆ ಓದಲು ಅವನಿಗೆ ಕಣ್ಣೇ ಕಾಣಿಸಲಿಲ್ಲ. ಹಿಡಿದ ಓಲೆ ಹಿಡಿದಲ್ಲೆ. ಮನಸ್ಸಿನಲ್ಲಿ ಯೋಚನೆಗಳೆದ್ದುವು. ಧರ್ಮ ಸಾಮ್ರಾಟ ಚಿನ್ನದೇವರಾಯ ಅಬ್ಬ! ಇವನೇ ಸಾಮ್ರಾಟ! ಇವನೇ ಚಿನ್ನದೇವರಾಯ! ಇನ್ನೇನು ಉಳಿಯಿತು! ಸಾಮ್ರಾಟರ ಬಿರುದು ಈ ಪಾಳಯ ಪಟ್ಟಿನ ಚೌಟಗೆ, ಹೌದು!

ಚೌಟನು ಸೀಮೆಯನ್ನು ವಿಸ್ತರಿಸಿ, ಗಡಿಗಳಲ್ಲಿ ಕೋಟೆಗಳನ್ನು ಕಟ್ಟಿಸಿ ಮಂದಿ ಮಾರ್ಬಲಗಳನ್ನು ಹೆಚ್ಚಿಸುತ್ತಿರುವನು! ಮಣೇಲ ಸಾವಿರ ಸೀಮೆಯ, ಪೊರಲ ದೇವಿಯ, ಆಯ ದಾಯ ಕೊಡಿ ಚೆಂಡುಗಳ ಪಾರುಪತ್ಯವನ್ನೆಲ್ಲ ತನ್ನ ಕೈಗೇ ತೆಗೆದುಕೊಂಡಿರುವನು! ಜಾತ್ರೆಗೆ ಬರುವಾಗ ಅರ್ಕುಳ ನಾನೂರಾಳರು, ಅಮ್ಮುಂಜೆ ಆರುನೂರಾಳರು ಕೂಡಿ ಮಣೇಲ ಪಟ್ಟಣಸೆಟ್ಟಿ ಸಹಿತ ಮಿಜಾರ ಗಡಿಯಲ್ಲಿ ಮಾನ ಮರ್ಯಾದೆ, ಮೇರುವೆ, ತೋರಣಗಳಿಂದ ತನ್ನನ್ನು ಇದಿರುಗೊಳ್ಳಬೇಕೆಂದು ಕಟ್ಟು ಮಾಡಿರುವನು! ಮಾಗಣೆಗಳ ಸೀಮೆ ಸಾಮ್ಯ ಮೊದಲಾಗಿ ಬಡ್ಡಿ ಸಿದ್ಧಾಯ ಮುಂತಾದುವುಗಳೆಲ್ಲ ತನ್ನ ಬೊಕ್ಕಸಕ್ಕೆ. ಸೀಮೆಯು ಸಂಪತ್ತು ತುಂಬಿ ತುಳುಕುತ್ತಿದೆ! ಆ ಸಾವಿರ ಕಂಬದ ಬಸದಿಗಾಗಿ ಜೈನ ಸೆಟ್ಟರು ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾರೆ! ಹೀಗೆ ಹಲವು ಬಗೆಗಳಿಂದ ಸೊಕ್ಕೇರಿದ ಈ ಚೌಟನು ಸಮ್ರಾಜನೆಂದು ಕರೆದುಕೊಳ್ಳದೆ ಇದ್ದಾನೇ? ಸಾಮ್ರಾಟರ ಪಟ್ಟದ ಹೆಸರನ್ನು ಬಿಟ್ಟಾನೇ? ಇಲ್ಲ. ಇಲ್ಲ ಇವನ ಠೀವಿಯೇನು! ಠೇಂಕಾರವೇನು! ಹೋಬಳಿಯ ಒಡೆಯ ಎಂದರೆ ಅವನ ಕಾಲ ಕಸವೆಂದೆಣಿಸಿದ್ದಾನೆ! ಇವನಿಗೆ ಲಂಗು ಲಗಾಮು ಒಂದೂ ಇದ್ದಂತೆ ಕಾಣುವುದಿಲ್ಲ. ಈ ತುಟಿ ಮೀರಿದ ಹಲ್ಲನ್ನು ಕಿತ್ತೊಗೆಯದಿದ್ದರೆ ಪರಿಣಾಮವಿಲ್ಲ. ಹುಂ! ಇವತ್ತು ಬಿರುದಿಗೆ ಕೈಹಾಕಿದ. ನಾಳೆ ಸತ್ತಿಗೆಗೆ, ನಾಡಿದ್ದು ಸದ್ರಿಗೆ. ಮತ್ತೆ ಯಾವುದಕ್ಕೆ ಕೈಯಿಕ್ಕುವನೋ ದೇವರೇ ಬಲ್ಲ! ಪಟ್ಟದ ಕತ್ತಿಗೇ ಕೈಯಿಕ್ಕಿಯಾನು. ರನ್ನ ಗದ್ದುಗೆಗೇ ಕಣ್ಣಿಟ್ಟಾನು. ಇದನ್ನೆಲ್ಲ ಕಂಡೂ ಕಾಣದಂತೆ ನಾನು ಹೇಗಿರಲಿ? ಇದ್ದುದನ್ನೆಲ್ಲ ಇದ್ದಂತೆ ಹುಜೂರಿಗೆ ತಿಳಿಸಿ ಬಿಟ್ಟರೆ ನನ್ನ ಭಾರವು ತಪ್ಪಿತು. ಮೇಲಿನವರಿಗೆ ಮೆಚ್ಚಿಗೆಯಾದರಂತೂ ನನ್ನ ಭಾಗ್ಯವೇ! ಹೀಗೆ ಮನಸ್ಸಿನಲ್ಲಿ ತೆರೆತೆರೆಯಾಗಿ ಎದ್ದ ಯೋಚನೆಗಳು ಓಲೆಗಿಳಿದುವು. ಬಣ್ಣಗೊಂಡು ರೆಕ್ಕೆ ತಾಳಿದ ಹಲವು ದೂರೊಕ್ಕಣೆಗಳು ಹುಜೂರಿಗೆ ಹರಿದುವು. ಮೊದಲೇ ಸಂಶಯ ತಾಳಿದ್ದ ಸಾಮ್ರಾಟನು ಚೌಟನ ನಿರಂಕುಶ ವರ್ತಮಾನವನ್ನು ಕೇಳಿ, ಕೆರಳಿ ಕೋಪಗೊಂಡನು. ಕೂಡಲೆ ಅವನ್ನು ಸೆರೆಹಿಡಿದು ತರುವಂತೆ ತನ್ನ ಸ್ವಂತ ಸೋದರಳಿಯನನ್ನೇ ದಂಡಿನೊಡನೆ ಮೂಡುಬಿದರೆಗೆ ಕಳುಹಿಸಿದನು???

(ರೇಖಾಚಿತ್ರ ಕಲೆ: ಶ್ರೀ ಚಂದ್ರನಾಥ ಆಚಾರ್ಯ)

ಬೆಳದಿಂಗಳ ರಾತ್ರೆ. ಹಾಲು ಚೆಲ್ಲಿದಂತಿದೆ ತಿಂಗಳ ಬೆಳಕು. ಆ ಬೆಳ್ಳಿ ಹೊನಲಿನಲ್ಲಿ ಮಿಂದೆದ್ದು ನಿಂತಿದೆ ಮೂಡುಬಿದರೆಯ ಅರಮನೆ. ಕಂಡಿ ಕವಾಟುಗಳಿಂದ ಹೊರಸೂಸುತ್ತಿದ್ದ ದೀವಿಗೆಗಳ ಬೆಳಕು ಅದಕ್ಕೆ ಒಪ್ಪವಿಡುತ್ತಿದ್ದಿತು. ಹೊರವಲಯದಲ್ಲಿ ಕೋಟೆಯ ಪಾಗಾರಗಳು ಕರ್ರಗಾಗಿ ಕರಾಳವಾಗಿ ಬಳಿಸಿದ್ದುವು. ಅರಮನೆಯ ಮುಂಗಡೆ ವಿಶಾಲವಾದ ರಾಜಾಂಗಣ. ಅದನ್ನು ದಾಟಿ ಒಳಕ್ಕೆ ನಡೆದರೆ, ಅಂದವಾದ ಹುಲಿಮೊಗದ ಗೋಪುರ. ಅದರಾಚೆಗೆ ಒಳ ಅಂಗಣ. ಅದರ ಸುತ್ತ ಚಾವಡಿಗಳು, ನಡುವಿನಲ್ಲಿ ಚಿತ್ತಾರದ ಪಟ್ಟದ ಚಾವಡಿ. ತೆಂಕು ದಿಕ್ಕಿಗೆ ಜಾನಕಿ ಕೋಟೆ. ಪಡುದಿಕ್ಕಿಗೆ ಕುಲದೇವರ ಗುಡಿ. ಬಡಗು ದಿಕ್ಕಿನಲ್ಲಿ ಕಲ್ಲು ಕಟ್ಟಿದ ಕೊಳ. ಕೊಳದ ಕೆಲದಲ್ಲಿ ಕಂಗೊಳಿಸುವ ಉದ್ಯಾನ. ಅಲ್ಲೇ ಹಾಲುಗಲ್ಲಿನ ಮಂಡಪದ ಮೇಲೆ ಚೌಟರಸ ಚಿನ್ನದೇವರಾಯನು ವಿರಮಿಸಿದ್ದನು. ವೃದ್ಧನೂ ಆದ ಪ್ರಧಾನಿ ನರ್ಸಪ್ಪಯ್ಯನು ತುಸು ದೂರದಲ್ಲಿ ಕುಳಿತಿದ್ದನು. ಹೂಗಳ ತನಿಗಂಪಿನೊಡನೆ ತಂಗಾಳಿ ಸುಳಿಯುತ್ತಿತ್ತು. ಆಗಸದಲ್ಲಿ ಚಂದ್ರನು ತಾರೆಗಳ ಗುಂಪಿನಲ್ಲಿ ಸಿಕ್ಕಿಬಿದ್ದು ಗಹಗಹನೆ ನಗುತ್ತಿದ್ದನು. ಸುತ್ತಲೂ ಶಾಂತಿಯು ತುಂಬಿ ತೇಲುತ್ತಿತ್ತು. ಪ್ರಕೃತಿಯ ಸೊಬಗನ್ನು ನೋಡುತ್ತ ಎಳೆ ಹರೆಯದ ಚೌಟ ರಾಯನು ಮೈಮರೆತಿದ್ದನು. ಈ ತುಂಬು ಶಾಂತಿಯಲ್ಲಿ ವೃದ್ಧ ಪ್ರಧಾನಿಯೂ ತನ್ಮಯನಾಗಿದ್ದನು.

ಅಷ್ಟರಲ್ಲಿ ಫಕ್ಕನೆ ಕೋಟೆಯ ಕಾಪಿನಲ್ಲಿ ಕಹಳೆಯ ಕೂಗು ಕೇಳಿತು. ಕೋಟೆಯಲ್ಲಿ ಕೋಲಾಹಲವೆದ್ದಿತು. ವಿಜಯನಗರದ ದಂಡು ಕೋಟೆಯ ಕಡೆಗೆ ಬರದಿಂದ ಬರುತ್ತಿದ್ದಿತು. ಜೈ ಕರ್ಣಾಟಕ ಸಮ್ರಾಟ ಎಂಬ ಜಯಕಾರವು ಕೋಟೆಯ ಗೋಡೆಗಳಿಗೆ ಬಡಿದು ಮಾರ್ದನಿಗೊಟ್ಟಿತು. ಕನಲಿ ಬುಸುಗುಟ್ಟುತ್ತಿದ್ದ ತುಳುಪಡೆಯು, ಈ ಘೋಷವನ್ನು ಕೇಳುತ್ತಲೇ ಗಾರುಡಿಗನ ಮಂತ್ರಕ್ಕೆ ಮಣಿವ ಹಾವಿನಂತೆ ತಲೆ ತಗ್ಗಿಸಬೇಕಾಯಿತು. ಸಮ್ರಾಟನ ಸೈನ್ಯವನ್ನು ಸಾಮಂತನ ಸೇನೆಯು ಇದಿರಿಸುವುದು ಕೌಲಿಗೆ ವಿರೋಧ. ಚೌಟನೂ, ಪ್ರಧಾನಿಯೂ ಗಾಬರಿಗೊಂಡು ಹೆಬ್ಬಾಗಿಲತ್ತ ನಡೆದರು. ನಾಲ್ಕು ಹೆಜ್ಜೆ ಹೋಗುವಷ್ಟರಲ್ಲಿ ಬಾರ್ಕೂರು ಹೋಬಳಿಯ ಚಂದರಸ ಒಡೆಯನೂ, ವಿಜಯನಗರದ ಸೇನಾಧಿಪತಿಯೂ ಅವರನ್ನು ತಡೆಗಟ್ಟಿದರು. ಸಮ್ರಾಟನಾಣೆ! ನಿಲ್ಲಲ್ಲಿ! ಸ್ವಾಮಿ ದ್ರೋಹಿ! ನಿನ್ನನ್ನು ಸೆರೆಹಿಡಿದು ತರುವಂತೆ ಸಾಮ್ರಾಟರ ಅಪ್ಪಣೆಯಾಗಿದೆ. ಸೀಮೆಯನ್ನು ಈ ಚಂದರಸ ಒಡೆಯರಿಗೆ ಒಪ್ಪಿಸಿಕೊಟ್ಟು, ನೀನು ಈ ಕ್ಷಣ ನಮ್ಮೊಂದಿಗೆ ಹೊರಡತಕ್ಕದ್ದು ಎಂದು ದಳವಾಯಿ ಜಬರಿಸಿದನು. ಚೌಟನು ಹೌಹಾರಿದನು. ಮುದಿ ಪ್ರಧಾನಿಯ ತಲೆಮೇಲೆ ಆಗಸವೇ ಬಿರಿದು ಬಿದ್ದಂತಾಯಿತು. ಹೇಗೂ ಚೇತರಿಸಿಕೊಂಡು ಸ್ವಾಮಿ! ಸ್ವಲ್ಪ ಶಾಂತರಾಗಬೇಕು. ಹಿಂದು ಮುಂದನ್ನು ವಿಚಾರಿಸಿ ದಯೆದೋರಬೇಕು ಎಂದು ದೈನ್ಯದಿಂದ ಬೇಡಿಕೊಂಡನು. ಎಷ್ಟು ಬೇಡಿಕೊಂಡರೂ ಸೇನಾಪತಿಗೆ ದಯೆ ಹುಟ್ಟಲಿಲ್ಲ. ಅವನ ವರಾತ ಹೆಚ್ಚಿತು. ಉಪಾಯವಿಲ್ಲದೆ ಚೌಟನು, ಅಲ್ಲಿಂದಲೇ, ಉಟ್ಟಬಟ್ಟೆಯಲ್ಲೇ ಹೊರಟನು. ಏನು ಕೆಡುಗಾಲ ಬಂತಪ್ಪಾ ಎನ್ನುತ್ತ ಆ ನಂಬಿಗೆಯ ಮುದುಕನೂ ತನ್ನೊಡೆಯನ ಹಿಂದೆಯೇ ನಡೆದನು. ಸೇನೆಯು ರಣವಾದ್ಯದೊಡನೆ ಶಿಸ್ತಿನಿಂದ ಹೆಜ್ಜೆ ಹಾಕುತ್ತ ಮುನ್ನಡೆಯಿತು. ಅರಮನೆಯ ಆಳುಗಳೆಲ್ಲ ಬಾಯಿ ಬಾಯಿಬಿಟ್ಟು ನೋಡುತ್ತಿದ್ದರು. ಏನು ಎಂಥದೆಂದು ಒಂದು ನರಪಿಳ್ಳೆಗೂ ತಿಳಿಯಲಿಲ್ಲ. ಚಂದರಸನು ಅರಮನೆಯಲ್ಲಿ ತನ್ನ ಕಛೇರಿಯನ್ನು ಮಾಡಿದನು

ಅಲ್ಲೇ ಹಾಲುಗಲ್ಲಿನ ಮಂಡಪದ ಮೇಲೆ ಚೌಟರಸ ಚಿನ್ನದೇವರಾಯನು ವಿರಮಿಸಿದ್ದನು. ವೃದ್ಧನೂ ಆದ ಪ್ರಧಾನಿ ನರ್ಸಪ್ಪಯ್ಯನು ತುಸು ದೂರದಲ್ಲಿ ಕುಳಿತಿದ್ದನು. ಹೂಗಳ ತನಿಗಂಪಿನೊಡನೆ ತಂಗಾಳಿ ಸುಳಿಯುತ್ತಿತ್ತು. ಆಗಸದಲ್ಲಿ ಚಂದ್ರನು ತಾರೆಗಳ ಗುಂಪಿನಲ್ಲಿ ಸಿಕ್ಕಿಬಿದ್ದು ಗಹಗಹನೆ ನಗುತ್ತಿದ್ದನು. ಸುತ್ತಲೂ ಶಾಂತಿಯು ತುಂಬಿ ತೇಲುತ್ತಿತ್ತು. ಪ್ರಕೃತಿಯ ಸೊಬಗನ್ನು ನೋಡುತ್ತ ಎಳೆ ಹರೆಯದ ಚೌಟ ರಾಯನು ಮೈಮರೆತಿದ್ದನು. ಈ ತುಂಬು ಶಾಂತಿಯಲ್ಲಿ ವೃದ್ಧ ಪ್ರಧಾನಿಯೂ ತನ್ಮಯನಾಗಿದ್ದನು.

ಸೇನಾಧಿಪತಿಯು ಬಂದಿಗಳೊಡನೆ ಸೀಮೆಯ ಗಡಿಯನ್ನು ದಾಟಿದನು. ಪಯಣವು ಮುಂದೆ ಮುಂದೆ ಸಾಗಿತು. ಅನೇಕ ನಗರ, ಪಟ್ಟಣ, ಹಳ್ಳಿ ಗ್ರಾಮಗಳನ್ನು ಹಾಯ್ದು ರಾಜಧಾನಿಯನ್ನು ಸಮೀಪಿಸಿದನು. ಅಗಲವಾದ ಬೀದಿಯು ಸಿಕ್ಕಿತು. ಕಣ್ಣು ಹರಿದಲ್ಲೆಲ್ಲ ಹರಿಗಾಲುವೆಗಳು ಹರಿಯುತ್ತಿದ್ದುವು. ಎಲ್ಲೆಲ್ಲೂ ನೆಲ್ಲುಗದ್ದೆಗಳು ಹಸುರು ಜಮಖಾನೆ ಹಾಸಿದಂತೆ ಕಂಗೊಳಿಸುತ್ತಿದ್ದುವು. ಅಲ್ಲಲ್ಲಿ ಬೆಳೆದ ಬೆಳ್ಗಬ್ಬುಗಳ ಬೆಡಗು ಬಾಯಲ್ಲಿ ನೀರು ತರುತ್ತಿದ್ದಿತು. ದಾರಿಯುದ್ದಕ್ಕೂ ತಿಳೀನೀರಿನ ಕೊಳಗಳು, ಉದ್ಯಾನಗಳು, ಹೊಂಗಳಸದ ದೇಗುಲಗಳು. ರಾಜಧಾನಿಯ ಸುತ್ತ ಏಳುಸುತ್ತಿನ ಕೋಟೆಯು ಸುತ್ತಿತ್ತು. ಎಂಟು ದಿಕ್ಕುಗಳಲ್ಲೂ ಕೊತ್ತಳಗಳು ಆಗಸವನ್ನು ತುಡುಕುತ್ತಿದ್ದುವು. ಹುಲಿ ಮೊಗವು ಭೀಕರವಾಗಿ ಬಾಯಿ ತೆರೆದುಕೊಂಡಿದ್ದಿತು. ಹೆಬ್ಬಾಗಿಲನ್ನು ಹೊಕ್ಕು, ಬೀದಿಗಳಿಯಲು ಒಂದು ಕಡೆಯಲ್ಲಿ ದವಸ ಧಾನ್ಯದ ಅಂಗಡಿಗಳು, ಜವುಳಿಯ ಸಾಲು ಮಳಿಗೆಗಳು, ಚಿನಿವಾರ ಕಟ್ಟೆಗಳು, ಪಣ್ಪಸರಗಳು ಎಸೆಯುತ್ತಿದ್ದವು. ಇನ್ನೊಂದು ಕಡೆಯಲ್ಲಿ ಕಂಚುಗಾರರ, ಕೈದುಗಾರರ, ಗುಡಿಗಾರರ, ಬಳೆಗಾರರ ಕೇರಿಗಳು. ಅಗಲವೂ ನಿರ್ಮಲವೂ ಆದ ಬೀದಿಗಳಲ್ಲಿ ಜನರು ಕಿಕ್ಕಿರಿದಿದ್ದರು. ಮುಂದೆ ಹೋದಂತೆ ಮಂತ್ರಿಮನ್ನೆಯರ ಹರ್ಮ್ಯ ಪ್ರಾಸಾದಗಳು ವಿರಾಜಿಸುತ್ತಿದ್ದುವು. ದೂರದಲ್ಲಿ ಅರಮನೆಯ ಹೊಂಗಳಸಗಳೂ ಮಿರುಗಿನ ಗೋಲಗಳೂ ಥಳಥಳಿಸುತ್ತಿದ್ದುವು. ಪಯಾಣದಿಂದ ದಣಿದಿದ್ದ ಸೇನಾಧಿಪನು ಚೌಟನನ್ನೂ, ಪ್ರಧಾನಿಯನ್ನೂ ನೆಟ್ಟಗೆ ಸೆರೆಮನೆಯೊಳಕ್ಕೆ ತಳ್ಳಿ ಮನೆಯನ್ನು ಸೇರಿದನು. ಸೇನೆಯು ಚದುರಿತು.

ದುರ್ದೈವಿಯಾದ ಚೌಟರಾಯನೂ ಅವನ ಪ್ರಧಾನಿಯೂ ಸೆರೆಮನೆಯಲ್ಲಿ ಸೊರಗುತ್ತಿದ್ದರು. ಸಾಮ್ರಾಟನಿಗೆ ಅವರ ಸುದ್ದಿ ಮರೆತೇ ಹೋಗಿದ್ದಿತು. ನೆನಪುಗೊಡುವ ಕೆಚ್ಚಾದರೂ ಯಾರಿಗೂ ಇರಲಿಲ್ಲ. ದಿನದ ಮೇಲೆ ದಿನ ಉರುಳಿತು. ಒಂದು ವರ್ಷಕ್ಕೆ ಮುಟ್ಟಿತು. ದಸರೆ ಬಂತು. ನಾಡಹಬ್ಬವೆಂದು ನಾಡೆಲ್ಲ ನಲಿಯುತ್ತಿದ್ದಿತು. ಅರಮನೆಯು ಬಣ್ಣ ಬೆಡಗುಗಳಿಂದ ಬೆಳಗುತ್ತಿದ್ದಿತು. ಮಾನೌಮಿಯ ಕಟ್ಟುಕಟ್ಟಳೆಗಳೆಲ್ಲ ಕಳೆದುವು. ವಿಜಯದಶಮಿಯ ದಿನ ಸಮ್ರಾಟನ ಒಡ್ಡೋಲಗ. ಓಲಗಸಾಲೆಯು ಜಗಜಗಿಸುವಂತೆ ನಿರ್ಮಿತವಾಗಿತ್ತು. ಚಿತ್ತಾರದ ಚಿನ್ನದ ಮುಲಾಮಿನ ಕಂಬ ಬೋದಿಗೆಗಳು ರಂಜಿಸುತ್ತಿದ್ದುವು. ತೊಲೆ ನಾಗವಂದಿಗೆಗಳ ಮೇಲೆ ಕೆತ್ತಲ್ಪಟ್ಟ ಗುಲಾಬಿ, ಕಮಲ ಮೊದಲಾದ ಹೂಗಳು ಕಳೆಬೀರುತ್ತಿದ್ದುವು. ಸುತ್ತಲೂ ಮಿಸುನಿಯ ಪಟ್ಟೆಗಳು ಇಳಿಬಿಟ್ಟಿದ್ದುವು. ಬೆಳ್ಳನೆಯ ಮೇಲ್ಗಟ್ಟುಗಳಿಂದ ಮುತ್ತು ರತ್ನಗಳ ಸೂಸಕಗಳು ನೇಲುತ್ತಿದ್ದುವು. ಜಾಜಿ, ಸಂಪಿಗೆ, ಗುಲಾಬಿ ದಂಡೆಗಳ ಜಲ್ಲಿ ಬಿಟ್ಟಿತ್ತು. ರನ್ನ ಗದ್ದುಗೆಯು ಸೆಯಿಗೂಡಿ ಎದ್ದು ನಿಂತಿತ್ತು. ಗದ್ದುಗೆಯ ಮೇಲೆ ಬಿರುದಿನ ಬೆಳ್ಗೊಡೆಯು ಪ್ರಭೆಯನು ಬೀರುತ್ತಿತ್ತು. ತರತರದ ವಾಲಗಗಳ ಮೊರೆತದೊಡನೆ ಕರ್ಣಾಟಕ ರಮಾರಮಣನು ಗದ್ದುಗೆಯನ್ನೇರಿದನು. ಅವನು ಜರತಾರಿಯ ನಿಲುವಂಗಿಯನ್ನು ತೊಟ್ಟಿದ್ದನು. ಪೊನ್ಜರಿಯ ದೊಡ್ಡ ಮುಂಡಾಸಿನ ಮುತ್ತಿನ ತುರಾಯಿಯು ಕೆನ್ನೆಯ ಮೇಲೆ ಆಡುತ್ತಿತ್ತು. ಕೊರಳಲ್ಲಿ ಹಾರ ಪದಕಗಳು ಶೋಭಿಸುತ್ತಿದ್ದವು. ಪಟ್ಟೆದಟ್ಟಿಯಲ್ಲಿ ರತ್ನದ ಹಿಡಿಯ ಪಟ್ಟದ ಕತ್ತಿಯು ಒಪ್ಪುತ್ತಿತ್ತು. ಮುಖವು ಗಂಭೀರವಾಗಿ ತೇಜಃ ಪುಂಜವಾಗಿದ್ದಿತು. ಅವನ ಎಡಬಲಗಳಲ್ಲಿ ಬೆಡಗಿನ ಬೀಸಣಿಗೆಗಳು ಬೀಸುತ್ತಿದ್ದುವು. ಹಗಲು ದೀವಟಿಗೆಗಳು ಬೆಳಗುತ್ತಿದ್ದುವು. ಚಾಮರದ ಎಳವೆಂಗಳು ಚಾಮರವನ್ನು ಡಾಳಿಸುತ್ತಿದ್ದರು. ಕುಂಚ, ಕಾಳಂಜಿ, ಪಾವಡ, ಕನ್ನಡಿ, ಕಟ್ಟಿಗೆಕೋಲುಗಳನ್ನು ಹಿಡಿದ ಊಳಿಗದವರ ಬಳಗವು ಸಾಲುಗೊಂಡು ನಿಂತಿದ್ದಿತು. ಕಾಲ ಕಡಗ, ಕಚ್ಚಳಿ, ಪೆಂಡೆಯ, ವೀರಸಂಕಲೆ ಮೊದಲಾದ ಬಿರುದಿನ ಮಾಂಡಲಿಕರು, ದಳಪತಿಗಳು, ಆಪ್ತಮಂತ್ರಿಗಳು ಉಚಿತಾಸನಗಳಲ್ಲಿ ಮಂಡಿಸಿದ್ದರು. ಕರಣಿಕರು, ಕವಿಗಳು, ಗಾಯಕರು ನೆರೆದಿದ್ದರು. ಸಾಮ್ರಾಟನ ಅಪ್ಪಣೆಯಿಂದ ಹೆಣ್ಮಕ್ಕಳ ಕೋಲಾಟವಾಯಿತು. ನಟಿಯರ ನರ್ತನವಾಯಿತು. ಗಾಯಕರ ಗಾಯನ ನಡೆಯಿತು. ಬಳಿಕ ತೆಲುಗ, ತಿರುಕೊಂಕಣ, ಕೊಂಗ, ತಿಗುಳ, ಕೊಡಗ, ತುಳುವ ಸಾಮಂತರು ಕ್ರಮವಾಗಿ ನಜರು ಕಾಣಿಕೆಗಳನ್ನು ಒಪ್ಪಿಸಿದರು.

ತುಳುವ ಸಾಮಂತರಲ್ಲಿ ಮೂಡುಬಿದರೆಯ ಚೌಟನು ಇಲ್ಲದಿದ್ದುದನ್ನು ಕಂಡು ಸಾಮ್ರಾಟನು ಕೋಪಗೊಂಡು ಚೌಟನೆಲ್ಲಿ? ಎಂದು ಕೇಳಿದನು. ಮಹಾಪ್ರಧಾನಿಯು ಅವನನ್ನು ಸೆರೆಯಲ್ಲಿಟ್ಟ ಸಂಗತಿಯನ್ನು ಬಿನ್ನವಿಸಿಕೊಂಡನು. ಕೂಡಲೆ, ಕರೆತರುವಂತೆ ಅಪ್ಪಣೆಯಾಯಿತು. ರಾಜದೂತರು ಚೌಟನನ್ನೂ ಅವನ ಪ್ರಧಾನಿಯನ್ನೂ ತಂದು ಮುಂದೆ ನಿಲ್ಲಿಸಿದರು. ಇಬ್ಬರೂ ಅಡ್ಡಬಿದ್ದು ಕೈಮುಗಿದು ನಿಂತರು. ಸಾಮ್ರಾಟನು ಒಮ್ಮೆ ಅತ್ತ ಕಣ್ಣು ಹರಿಯಿಸಿದನು. ಮುಖವು ಕೆಂಪೇರಿತು. ಚೌಟನಿಗೆ ನಡುಕ ಹತ್ತಿತು. ದಿಕ್ಕೇ ತೋರದಾಯಿತು. ಅನುಭವಶಾಲಿಯಾದ ತನ್ನ ಪ್ರಧಾನಿಯು ಏನಾದರೊಂದು ಉಪಾಯ ಕಂಡುಹಿಡಿಯದಿರಲಾರನೆಂದು ಅವನನ್ನೇ ನಂಬಿಕೊಂಡಿದ್ದನು. ಪ್ರಧಾನಿಯಾದರೋ ಒಡೆಯನನ್ನು ವಿಪತ್ತಿನಿಂದ ಹೇಗೆ ಪಾರುಗೊಳಿಸಲಿ ಎಂದು ಚಿಂತೆಯಿಂದ ನೆಲಕ್ಕಿಳಿದು ಹೋಗಿದ್ದನು.

ಸಾಮ್ರಾಟನು ಗಂಭೀರವಾಣಿಯಿಂದ ಎಲ್ಲವೊ ಚೌಟ! ಸಾವಿರ ಹೆಸರುಗಳಿದ್ದರೂ ನೀನು ನಮ್ಮ ಬಿರುದನ್ನೇ ಇಟ್ಟುಕೊಂಡಿರುವುದು ನಿನ್ನ ಸೊಕ್ಕಲ್ಲವೇ? ಎಂದು ಪ್ರಶ್ನಿಸಿದನು.
ಚೌಟ : ಜೀಯಾ! ಜೈನ ಅರಸರಲ್ಲಿ ಯೋಗ್ಯನಾದೊಬ್ಬನನ್ನು ಧರ್ಮದರ್ಶಿಯನ್ನಾಗಿ ಜೈನಗುರುಗಳು ನೇಮಿಸುವ ಪದ್ಧತಿಯಿದೆ. ಆ ಧರ್ಮದರ್ಶಿಯನ್ನು ಧರ್ಮ ಸಮ್ರಾಜನೆಂದು ಕರೆಯುವ ರೂಢಿ ಪರಂಪರೆಯಾಗಿ ಬಂದಿದೆ. ಇದೇ ಮೇರೆಗೆ ತುಳುನಾಡಿನಲ್ಲಿ ನನ್ನನ್ನು ಧರ್ಮಸಮ್ರಾಜನೆಂದು ಕರೆಯುವರು. ಅದು ಬರೇ ಧರ್ಮಸಂಬಂಧ ಸೂಚಕವಾದ ಹೆಸರಲ್ಲದೆ ರಾಜಕೀಯ ಅರ್ಥವುಳ್ಳದಲ್ಲ. ಚಿನ್ನದೇವರಾಯ ಎಂಬ ಹೆಸರನ್ನು ನನ್ನ ಹೆತ್ತವರಿಟ್ಟರು. ಯಾವ ಕಾರಣದಿಂದ ಅವರು ಆ ಹೆಸರನ್ನಿಟ್ಟರೋ ನನಗೆ ತಿಳಿಯದು. ನನ್ನ ಜನನದ ಪೂರ್ವದಿಂದಲೇ ಇರುವ ಈ ವೃದ್ಧನು ತಿಳಿದಿರುವನೋ ಏನೋ. ಆದರೆ ಪರಾಕೆ! ಮನೋವಾಕ್ಕಾ ಯಗಳಲ್ಲಿ ನಾನು ಸಮ್ರಾಟರಿಗೆ ಎರಡೆಣಿಸಿದವನಲ್ಲ.
ಸ : (ವೃದ್ಧ ಪ್ರಧಾನಿಯನ್ನು ನೋಡಿ) ನೀನು ತಿಳಿದಿರುವೆಯೋ?
ಪ್ರಧಾನಿ : ಹಸಾದ! ತಿಳಿದಿರುವೆನು. ಆ ಹೆಸರಿಗೆ ಸಾಮ್ರಾಟರೇ ಹೊಣೆ. ಹೆಸರಿಟ್ಟವರೂ ಅಲ್ಲ; ಹೆಸರಿಡಿಸಿಕೊಂಡವರೂ ಅಲ್ಲ….
ಸು : ಏನು! ಈ ಚೌಟನ ಉಡಾಳತನಕ್ಕೆ ನಾವು ಹೊಣೆಯೆ? ಮುದಿಯಾ! ಯಾರೊಡನೆ ಮಾತಾಡುತ್ತಿರುವೆ? ಜೋಕೆ!

ತುಳುವ ಸಾಮಂತರಲ್ಲಿ ಮೂಡುಬಿದರೆಯ ಚೌಟನು ಇಲ್ಲದಿದ್ದುದನ್ನು ಕಂಡು ಸಾಮ್ರಾಟನು ಕೋಪಗೊಂಡು ಚೌಟನೆಲ್ಲಿ? ಎಂದು ಕೇಳಿದನು. ಮಹಾಪ್ರಧಾನಿಯು ಅವನನ್ನು ಸೆರೆಯಲ್ಲಿಟ್ಟ ಸಂಗತಿಯನ್ನು ಬಿನ್ನವಿಸಿಕೊಂಡನು. ಕೂಡಲೆ, ಕರೆತರುವಂತೆ ಅಪ್ಪಣೆಯಾಯಿತು. ರಾಜದೂತರು ಚೌಟನನ್ನೂ ಅವನ ಪ್ರಧಾನಿಯನ್ನೂ ತಂದು ಮುಂದೆ ನಿಲ್ಲಿಸಿದರು. ಇಬ್ಬರೂ ಅಡ್ಡಬಿದ್ದು ಕೈಮುಗಿದು ನಿಂತರು. ಸಾಮ್ರಾಟನು ಒಮ್ಮೆ ಅತ್ತ ಕಣ್ಣು ಹರಿಯಿಸಿದನು. ಮುಖವು ಕೆಂಪೇರಿತು. ಚೌಟನಿಗೆ ನಡುಕ ಹತ್ತಿತು. ದಿಕ್ಕೇ ತೋರದಾಯಿತು. ಅನುಭವಶಾಲಿಯಾದ ತನ್ನ ಪ್ರಧಾನಿಯು ಏನಾದರೊಂದು ಉಪಾಯ ಕಂಡುಹಿಡಿಯದಿರಲಾರನೆಂದು ಅವನನ್ನೇ ನಂಬಿಕೊಂಡಿದ್ದನು. ಪ್ರಧಾನಿಯಾದರೋ ಒಡೆಯನನ್ನು ವಿಪತ್ತಿನಿಂದ ಹೇಗೆ ಪಾರುಗೊಳಿಸಲಿ ಎಂದು ಚಿಂತೆಯಿಂದ ನೆಲಕ್ಕಿಳಿದು ಹೋಗಿದ್ದನು.

ಪ್ರ : ಮಹಾಪ್ರಭು! ಆ ಹೆಸರಿನ ಕತೆ ದೊಡ್ಡದಿದೆ. ಲಾಲಿಸಬೇಕು! ಈ ನನ್ನೊಡೆಯನ ತಾಯಿ ಆಳಿದ ಪದುಮಲಾ ದೇವಮ್ಮಣ್ಣಿಯವರು. ತಂದೆ ವರದಪ್ಪರಸರು. ಅಮ್ಮಣ್ಣಿಯವರಿಗೆ ಹದಿನೆಂಟು ಮಂದಿ ಮಕ್ಕಳು. ಈ ರಾಯರೇ ಹದಿನೆಂಟನೆಯ ಮಗು. ಆ ಹದಿನೆಂಟು ಮಂದಿ ಮಕ್ಕಳಲ್ಲಿ ಉಳಿದಿರುವುದು ಇದೊಂದೇ ಮಗು. ಚೊಚ್ಚಲ ಕೂಸು ಹುಟ್ಟಿದಾಗ. ಮುದ್ದಿನಿಂದ ಅದಕ್ಕೆ ಬಿರ್ಮಣ ಶೇಖ ಎಂದು ಹೆಸರಿಟ್ಟರು. ಒಂದು ತಿಂಗಳಲ್ಲಿ ಅದು ತೀರಿಹೋಯಿತು. ಎರಡನೆಯ ಕೂಸು ಹುಟ್ಟಿತು. ಅದಕ್ಕೆ ಹಮ್ಮಣ ಶೇಖ ಎಂದು ಹೆಸರಿಟ್ಟರು. ಅದೂ ಹೆಚ್ಚುದಿನ ಬದುಕಲಿಲ್ಲ. ಮೂರನೆಯ ಮಗು ಹುಟ್ಟಿತು. ಅದಕ್ಕೆ ಮಾರಣ್ಣ ಶೇಖ ಎಂದು ಹೆಸರಿಟ್ಟರು. ಅದೂ ಉಳಿಯಲಿಲ್ಲ. ಒಂದು ವಾರದೊಳಗೇ ಸತ್ತಿತು. ಮಹಾಪ್ರಭು! ಹೀಗೆ ಹದಿನೇಳು ಮಕ್ಕಳು ಹುಟ್ಟಿದುವು. ಹದಿನೇಳು ಹೆಸರಿಟ್ಟರು. ಹದಿನೇಳೂ ಹೆಸರಳಿದು ಹೋದವು. ಒಂದೂ ಬಾಳಲಿಲ್ಲ. ಅರಸರೂ ಅಮ್ಮಣ್ಣಿಯವರೂ ಅತ್ತು ಕರೆದು ಗೋಳಾಡಿದರು. ಇದ್ದ ದೈವದೇವರುಗಳಿಗೆಲ್ಲ ಹರಿಕೆ ಹೊತ್ತರು. ಸ್ವಲ್ಪ ಕಾಲ ಕಳೆಯಲು ದೇವರು ಕಣ್ಣುಬಿಟ್ಟು. ಈ ಹದಿನೆಂಟನೆಯ ಮಗು ಹುಟ್ಟಿತು. ಸಮ್ರಾಟರು ಈ ರತ್ನ ಸಿಂಹಾಸನವನ್ನೇರಿದ ಶುಭಗಳಿಗೆಯಲ್ಲಿಯೇ ಇದರ ಜನನವಾಯಿತು. ನನ್ನೊಡತಿಯ ಹೊಟ್ಟೆ ತಣ್ಣಗಾಯಿತು. ಕನ್ನಡದ ಮಹಾಮಂಡಲೇಶ್ವರರು ಪಟ್ಟವೇರುವ ಗಳಿಗೆಯಲ್ಲಿ ಜನಿಸಿದ ಮಗುವಿಗೆ ಯಾವ ದಿಟ್ಟಿಬಿಸವೂ ಸೋಂಕದೆಂದು ಅವರು ನಂಬಿದರು. ಮಗುವಿನ ರಕ್ಷೆಗಾಗಿ ಮಹಾಪ್ರಭುಗಳ ಪುಣ್ಯನಾಮವನ್ನೇ ಇಡಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡರು. ಹಾಗೆಯೇ ಹೆಸರಿಡುವ ದಿನವೂ ಬಂತು. ಯಾವ ಹೆಸರಿಡುವ? ಎಂದು ರಾಣಿಯವರು ಅರಸರನ್ನು ಕೇಳಿದರು. ನಾನು ಅಲ್ಲೇ ಬಳಿಯಿಲ್ಲಿದ್ದೆ. ಅರಸರು ಬಹಳ ಹೊತ್ತು ಯೋಚಿಸಿ ದೇವರ ಶೇ….. ಎನ್ನುವಷ್ಟರಲ್ಲಿ ರಾಣಿಯರು ಬೆಚ್ಚಿ, ಅಲ್ಲಪ್ಪ…..ಶೇ…..ಅಲ್ಲ…. ಎಂದು ಕೂಗಿದರು.

ಅಲ್ಲಪ್ಪ ಶೇಖ ಎಂತಾದರೆ, ಅಲ್ಲಪ್ಪ ಶೇಖ ಆಗಲಿ ಎಂದು ಅರಸರು ನಕ್ಕರು. ಅಲ್ಲಪ್ಪ ಶೇಖ, ಹೌದಪ್ಪ ಶೇಖ – ಹದಿನೇಳು ಶೇಖ ಅಳಿದ ಮೇಲೂ ಅದೇ ಸುಟ್ಟ ಶೇಖ! ಒಳಿತು! ಎಂದು ನಾಲಗೆ ಕಚ್ಚಿ, ಬಾಳುವ ಹೆಸರು ಕರೆಯಿರೀಂದ್ರೆ ಎಂದು ರಾಣಿಯವರು ಛಲ ಮಾಡಿದರು.
ಹಾಗಾದರೆ ಆ ಅನಿಷ್ಟದ ಶೇಖ ಬೇಡ. ನಮ್ಮ ಸಾಮ್ರಾಟರು ಪಟ್ಟವೇರಿ ಕನ್ನಡದ ನೆಲಕೆಲ್ಲ ದೊರೆಯೆನಿಸಿದ ಮುಹೂರ್ತದಲ್ಲೇ ಈ ಮಗು ನೆಲಕ್ಕೆ ಬಿತ್ತಾದ ಕಾರಣ, ಇದಕ್ಕೆ ಅವರ ಪುಣ್ಯನಾಮವನ್ನೇ ಇಡೋಣ ಎಂದು ಅರಸರು ಹೇಳಿದರು.
ನನ್ನ ಹರಕೆಯೂ ಅದೇ ಆಗಿತ್ತು. ಅವರ ಹೆಸರಿನ ಪುಣ್ಯದಿಂದಾದರೂ ಈ ಮಗು ಬಾಳಲಿ ಎನ್ನುತ್ತ ನನ್ನ ಕಡೆಗೆ ನೋಡಿ, ಏನು ನರ್ಸಣ್ಣನವರು ಮಾತಾಡುವುದಿಲ್ಲ ಎಂದು ಕೇಳಿದರು.
ಏನಿಲ್ಲಮ್ಮ , ಆ ಗಿಡದ ಮೇಲೆ ಒಂದು ಹಾಲಕ್ಕಿ ಶಕುನ ನುಡೀತಾ ಇತ್ತು. ಅದನ್ನು ಕೇಳ್ತಾ ಇದ್ದೆ ಎಂದೆ.
ಏನೆಂತ ನುಡಿಯಿತದು?
ಬಾಳ್ತೈತೆ! ಬದುಕ್ತೈತೆ! ಉದ್ಧಾರವಾಗ್ತೈತೆ! ಎಂತ ನುಡೀತಮ್ಮಾ ಎಂದೆ.
ಏನು ಪ್ರಧಾನಿಗಳು ಹಾಲಕ್ಕಿ ನರ್ಸಣ್ಣನಾದುದು ಯಾವಾಗ? ಎಂದು ಅರಸರು ನಗುತ್ತಾ ನನ್ನನ್ನು ಕೇಳಿದರು.
ಪ್ರಧಾನಿಗಳು ಎಲ್ಲಾ ವೇಷ ಕಟ್ಟಬೇಕು. ಯಾವ ತಾಳಕ್ಕಾದರೂ ಕುಣಿಯಬೇಕು ಅರಸುಗಳೆ ಎಂದೆ.
ನರ್ಸಣ್ಣ ಅಂತ ಸಲುಗೆಯಿಂದ ಕರೆದೆ; ಪ್ರಧಾನಿಗಳೆ, ಸಿಟ್ಟು ಬಂತೇ? ಎಂದರು ಅಮ್ಮಣ್ಣಿಯವರು.
ಸಿಟ್ಟು ಯಾಕಮ್ಮ! ನರ್ಸನಿಗೆ ಅಪ್ಪ, ಅಯ್ಯ, ಅಣ್ಣ ಅಂತ ಯಾವ ಬಾಲ ಇಟ್ಟರೂ ಚೆನ್ನಾಗಿ ಹಿಡಿಯುತ್ತದೆ. ಬಾಲಕ್ಕಾಗಿ ಬಡಿದಾಡುವವನಲ್ಲ ಈ ನರ್ಸ.
ಹಾಗಾದರೆ ಚಿನ್ನದೇವರಾಯ ಎಂಬ ಹೆಸರನ್ನಿಡುವುದಲ್ಲವೇ ಪ್ರಧಾನಿಗಳೇ? ಎಂದು ಅರಸರು ಕೇಳಿದರು.
ಹೌದೌದು. ದೇವರ ಹೆಸರೇ ಬಾಳುವ ಹೆಸರು ಎಂದು ಕೈಮುಗಿದೆ.
ಅರ್ತಿಯಿಂದ ಅರಸರು ಸಾಮ್ರಾಟರ ಚರಣಗಳನ್ನು ಸ್ಮರಿಸುತ್ತ ಚಿನ್ನದೇವರಾಯ ಎಂಬ ಶುಭನಾಮವನ್ನು ಮೂರುಬಾರಿ ಕರೆದರು, ಚಿರಕಾಲ ಬಾಳಲಿ ಎಂದು ಎಲ್ಲರೂ ಹರಸಿದರು. ನಾನೂ ಹರಸಿದೆ.

ಸ : ನೀನು ನಿಜಕ್ಕೂ ನರ್ಸಣ್ಣನೆ, ಬುಡುಬುಡಿಕೆ ಚೆನ್ನಾಗಿ ಬಾರಿಸುವೆ.
ಪ್ರ : ಪರಾಕೆ! ನರ್ಸಣ್ಣನಿದ್ದರೂ ಇರಬಹುದು. ನನ್ನ ಹುಟ್ಟು ನನಗೆ ತಿಳಿಯದು. ಆದರೆ ನನ್ನೊಡೆಯರ ಜನ್ಮದ ವೃತ್ತಾಂತವು ನಿಜವು. ನಾನು ಕಣ್ಣಾರೆ ಕಂಡುದನ್ನೇ ಅರಿಕೆ ಮಾಡಿರುವೆನು. ಇದು ಸತ್ಯ! ಸತ್ಯ!!
ಸ : ಕತೆ ಮುಗಿಯಿತೇ?

ಪ್ರ : ಸ್ವಲ್ಪ ಉಳಿದಿದೆ, ಪ್ರಭು ! ಆ ಮಗು ಬದುಕಿತು. ಬಾಲಕನಾಗಿ ಬೆಳೆಯಿತು. ಸಮ್ರಾಟರು ಈ ರತ್ನ ಸಿಂಹಾಸನದಲ್ಲಿ ಜಯಾಭ್ಯುದಯ ಹೊಂದುತ್ತಾ ಬಂದಂತೆ ಈ ಬಾಲನೂ ಮೂಡುಬಿದರೆಯ ಅರಮನೆಯಲ್ಲಿ ವರ್ಧಮಾನನಾಗುತ್ತಾ ಬಂದನು. ತಕ್ಕ ಹರಯದಲ್ಲಿ ರಾಣಿಯರ ಪಟ್ಟವನ್ನೇರಿ, ಈ ವರೆಗೆ ಸೀಮೆಯನ್ನಾಳಿ, ಬಾಳಿದನು. ಈಗ ಸನ್ನಿಧಾನದಲ್ಲಿ ಅಪರಾಧಿಯಾಗಿ ನಿಂದಿರುವನು. ಅವನ ಉಳಿವು ಅಳಿವು ತಮ್ಮ ಕೈಯಲ್ಲಿದೆ. ಉಳಿದರೆ ತಮ್ಮ ಬಾಳ್ಕೆಯ ಹೆಸರು ಬಾಳಿ ದಂತಾಗುವುದು. ಅಳಿದರೆ ತಮ್ಮ ಪುಣ್ಯನಾಮವೂ ಅವನನ್ನು ಬಾಳಿಸಲಿಲ್ಲ ವೆಂದಾಗುವುದು.
ಮಹಾಪ್ರಭು! ಅಷ್ಟು ಮಾತ್ರವಲ್ಲ. ಸಮ್ರಾಟರ ಊರ್ಜಿತದೇಳ್ಗೆಯು ಚೌಟರ ಏಳಿಗೆಯೆಂದೂ, ಅವರ ಕೀರ್ತಿಯು ಸನ್ನಿಧಾನದ ಕೀರ್ತಿಯೆಂದೂ ಜನಪ್ರತೀತಿ ಹರಡಿದೆ. ಈಗ ಅವರ ಏಳ್ಗೆಯ ಕುಡಿಯು ಕಡಿಯಿತೆಂದರೆ…. ಅಯ್ಯೋ- ಕರ್ನಾಟಕದ ಕೀರ್ತಿಯ ಕುಡಿ ಏನಾಗುವುದೋ ಎಂದು ಭಯವಾಗುತ್ತಿದೆ ಎನ್ನೊಡೆಯಾ!
ಸಾಮ್ರಾಟನ ಮುಖದಲ್ಲಿ ಕಿರುನಗೆಯೊಂದು ಹೊಳೆಯಿತು. ಪ್ರಧಾನಿಗಳೇ! ನಿಮ್ಮ ಕತೆ ಬಹಳ ಸ್ವಾರಸ್ಯವಿದೆ. ನಿಮ್ಮ ಒಡೆಯನಲ್ಲಿ ನಮಗಿನ್ನು ಸಂದೇಹವಿಲ್ಲ. ಬಾರಕೂರಿನ ಒಡೆಯರು ಬರೆದುಕೊಂಡ ದೂರುಗಳು ನಿರಾಧಾರವಾದುದೆಂದು ನಮಗೀಗ ಖಚಿತವಾಯಿತು. ನೀವಿನ್ನು ಚಿಂತಿಸದಿರಿ.

ಮಂತ್ರಿಮನ್ನೆಯರೆ, ಮೂಡುಬಿದರೆಯ ಈ ಧರ್ಮ ಸಮ್ರಾಜ ಚಿನ್ನ ದೇವರಾಯರು ಇನ್ನು ಮುಂದೆ ನಮ್ಮ ಪರಮ ಮಿತ್ರರು. ನಿಮ್ಮ ಸಾಮ್ರಾಟನ ಏಳಿಗೆಯು ಈ ಚಿನ್ನದೇವರಾಯರ ಏಳಿಗೆಯನ್ನು ಹೊಂದಿಕೊಂಡಿದೆ. ಅವರ ಹೆಸರೇ ನಮ್ಮ ಹೆಸರು. ಅವರ ಕೀರ್ತಿಯೇ ನಮ್ಮ ಕೀರ್ತಿ. ಚಿನ್ನ ದೇವರಾಯರೇ! ಮುಂದೆ ಬನ್ನಿ ಎಂದು ಗದ್ದುಗೆಯಿಂದಿಳಿದು ಬಾಹುಗಳನ್ನು ನೀಡಿದನು. ಇಬ್ಬರೂ ಬಿಗಿಯಾಗಿ ಅಪ್ಪಿಕೊಂಡರು. ಅದನ್ನು ನೋಡುತ್ತಿದ್ದ ಪ್ರಧಾನಿ ನರ್ಸಪ್ಪಯ್ಯನು ಆನಂದಾಶ್ರುವನ್ನು ಸುರಿಸುತ್ತ ಚೌಟ ಸಾಮ್ರಾಟರಿಬ್ಬರೂ ಹೀಗೆಯೇ ಸ್ನೇಹ ಸಂಪ್ರೀತಿಯಿಂದ ಬಾಳಲಿ ಎಂದು ಹರಸಿದನು.
ಓಲಗವು ಹಿರಿವ ಸಮಯದಲ್ಲಿ ಸಮ್ರಾಟನು ಸಭಿಕರಿಗೆ ವೀಳೆಯ ಉಡುಗೊರೆಗಳನ್ನಿತ್ತು ಸತ್ಕರಿಸಿದನು. ಬಳಿಕ ಚೌಟರಾಯನನ್ನೂ ಅವನ ಪ್ರಧಾನಿಯನ್ನೂ ಆದರದಿಂದ ಉಪಚರಿಸಿ, ಅಡ್ಡಪಾಲಕಿ, ಹಸುರು ಪಕ್ಕೆ, ಜಾಲಿಸತ್ತಿಗೆ, ನೆಗಳಬಾಯಿ, ಪಂಚದೀವಟಿಗೆ, ವಾಲಗದ ಮೇಳ ಮೊದಲಾದ ತಾಜೀಮುಗಳನ್ನು ಕೊಟ್ಟು ಬೀಳ್ಕೊಟ್ಟನು.

(ರೇಖಾಚಿತ್ರ ಕಲೆ: ಶ್ರೀ ಚಂದ್ರನಾಥ ಆಚಾರ್ಯ)

 

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ:
ಬೇಕಲ ರಾಮನಾಯಕರು ವಸಾಹತುಪೂರ್ವ ಇತಿಹಾಸಕ್ಕೆ ಸಂಬಂಧಿಸಿದ ಬಾಳಿದ ಹೆಸರು (ಕರಾವಳಿ ಜಿಲ್ಲೆಯು ವಿಜಯನಗರದ ವಸಾಹತಾಗಿದ್ದ ಕಾಲದ ಕತೆ) ಮತ್ತು ದೊಡ್ಡಮನೆ ಈಶ್ವರಯ್ಯ (ಕೆಳದಿಯವರ ವಸಾಹತಾಗಿದ್ದ ಕಾಲದ ಕತೆ) ಮುಂತಾದ ಐತಿಹ್ಯ ಕತೆಗಳನ್ನು ಬರೆದಿದ್ದಾರೆ. ಕಾಸರಗೋಡಿನಲ್ಲಿ ಅಧ್ಯಾಪಕರಾಗಿದ್ದ ಬೇಕಲ ರಾಮ ನಾಯಕರು (೧೯೦೨ – ೧೯೬೯) ಐತಿಹ್ಯಗಳನ್ನು ಮತ್ತು ಇತಿಹಾಸ ಕತೆಗಳನ್ನು ನಿರೂಪಿಸಿ ಈ ದಿಕ್ಕಿನಲ್ಲಿ ಕೆಲಸ ಮಾಡಿದ ಒಬ್ಬ ಅಪೂರ್ವ ಸಾಹಿತಿಯಾಗಿದ್ದಾರೆ. ಅವರ ಕೃತಿಗಳ ಮೂಲಕ ಜನಸಮುದಾಯದ ಸ್ಮೃತಿಲೋಕದಲ್ಲಿ ದಾಖಲಾಗಿದ್ದ, ಕ್ರಮೇಣ ವಿಸ್ಮೃತಿಗೆ ಸಂದುಹೋಗಬಹುದಾಗಿದ್ದ ಹಲವಾರು ಐತಿಹ್ಯಗಳು ಉಳಿದುಕೊಂಡಿವೆ. ಇಂತಹ ಕಥಾನಕಗಳ ಸೃಜನಾತ್ಮಕ ದಾಖಲೀಕರಣವಲ್ಲದೆ ರಾಮನಾಯಕರು ಕವಿಯೂ, ನಾಟಕಕಾರರೂ ಆಗಿದ್ದರು. ಅವರ ಕೃತಿಗಳು : ಕೋಟೆಯ ಕತೆಗಳು (೧೯೩೪), ತೌಳವ ಸ್ವಾತಂತ್ರ್ಯ (೧೯೩೭), ಧ್ವಜ ವಂದನೆ (೧೯೪೦), ಬಾಲಗೀತೆ (೧೯೪೩), ಬಾಳಿದ ಹೆಸರು ಮತ್ತು ಇತರ ಐತಿಹ್ಯಗಳು (೧೯೫೩), ಸೌಭಾಗ್ಯ ರತ್ನ (೧೯೬೨), ವಾಸಿಷ್ಠ ರಾಮಾಯಣ (೧೯೬೪), ಕೆಚ್ಚಿನ ಕಿಡಿಗಳು (೧೯೬೬), ಪುಳ್ಕೂರು ಬಾಚ (೧೯೬೬), ಕೇತು ಭಂಗ (೧೯೬೭), ಸತ್ಯ ಪರೀಕ್ಷೆ (೧೯೬೯), ನಾಡ ಕತೆಗಳು (೧೯೬೯), ತೆಂಕನಾಡ ಐತಿಹ್ಯಗಳು (೧೯೬೯).
ಇಂತಹ ಐತಿಹ್ಯಗಳ ಮೌಲ್ಯ ಬಹಳ ಹೆಚ್ಚಿನದು. ಒಂದು ಜನಸಮುದಾಯ ತನ್ನ ಸ್ಮೃತಿಯಲ್ಲಿ ಕಾಪಾಡಿಕೊಂಡು ಬರುವ (ಬರುತ್ತಿದ್ದ) ಇಂತಹ ಐತಿಹ್ಯಗಳಲ್ಲಿ ಆ ಜನಸಮುದಾಯದ ಆಶೋತ್ತರಗಳು ಸಹಜವಾಗಿ ದಾಖಲಾಗಿರುತ್ತವೆ. ಬಾಳಿದ ಹೆಸರು ಕತೆಯಲ್ಲಿ ವಿಜಯನಗರದ ಅರಸನೊಬ್ಬ (ಚಿನ್ನದೇವರಾಯ) ತುಳುನಾಡಿನ ಚೌಟ ಅರಸನನ್ನು (ಅವನ ಹೆಸರೂ ಚಿನ್ನದೇವರಾಯ) ಕ್ಷುಲ್ಲಕ ಕಾರಣವೊಂದಕ್ಕಾಗಿ (ಚಿನ್ನದೇವರಾಯ ಎಂಬ ಹೆಸರು ಇಟ್ಟುಕೊಂಡದ್ದಕ್ಕೆ) ಹಲವು ತಿಂಗಳುಗಳ ಕಾಲ ಸೆರೆಮನೆಯಲ್ಲಿ ಬಂಧಿಸಿ ಇಟ್ಟ ಸಂಗತಿ ಬರುತ್ತದೆ. ಬಾರಕೂರಿನ ರಾಜ್ಯಪಾಲನು ಚೌಟ ಅರಸ ತನ್ನನ್ನು ಸಾಮ್ರಾಟ ಎಂದು ಕರೆದುಕೊಳ್ಳುತ್ತಿದ್ದಾನೆ ಎಂದು ಸುಳ್ಳು ವರದಿ ಕಳುಹಿಸಿದ್ದರಿಂದ ವಿಜಯನಗರದ ಅರಸನು ಅವನನ್ನು ಬಂಧಿಸಿ ತರಲು ಆಜ್ಞೆ ಮಾಡಿರುತ್ತಾನೆ. ಕೊನೆಗೆ ವೃದ್ಧ ಸೇನಾಧಿಪತಿಯ ಉಪಾಯದಿಂದ ಅರಸನು ಚೌಟರಸನನ್ನು ಬಿಡುಗಡೆಗೊಳಿಸಿ ಬಿರುದು ಬಾವಲಿಗಳನ್ನು ಕೊಟ್ಟು ಕಳುಹಿಸಿಕೊಡುತ್ತಾನೆ. ಆಗ ಚೌಟರಸನು ಜತೆಯಲ್ಲಿ ತಂದಿದ್ದ ಸುಬ್ರಾಯ ದೇವರ ವಿಗ್ರಹವನ್ನು ಕಡಂದಲೆಯಲ್ಲಿ ಸ್ಥಾಪಿಸುತ್ತಾನೆ. ಬೋವಿ ಜನಾಂಗದವರಿಗೆ ಮೂಡಬಿದಿರೆಯಲ್ಲಿ ಮಾರಿ ಗುಡಿ ಕಟ್ಟಿಸಿಕೊಡುತ್ತಾನೆ.

(ಮುಂದಿನ ಕಂತಿನಲ್ಲಿ: ಕರ್ನಲ್ ಕಾಲಿನ್ ಮೆಕೆಂಜಿ ಬರೆಸಿದ ಚೌಟ ಅರಸರ ಕೈಫಿಯತ್ತು)

ಜನಾರ್ದನ ಭಟ್ ಸಾದರಪಡಿಸುವ ‘ಓಬೀರಾಯನ ಕತೆಗಳು’ ಸರಣಿಯ ಪ್ರಸ್ತಾವನೆಗಾಗಿ ಇಲ್ಲಿ ಕ್ಲಿಕ್ಕಿಸಿ.