ಅಪರಾಧ ಮಾಡಿದ್ದು ನಿಜವಾದರೆ ಖಂಡಿತ ಬರತಾನೆ. ಬೇರೆಯವರಾಗಿದ್ದರೆ ಬರತಿರಲಿಲ್ಲ, ಇವನು ಮಾತ್ರ, ತಪ್ಪು ಮಾಡಿದ್ದರೆ, ಬಂದೇ ಬರತಾನೆ, ಅಂದುಕೊಂಡೆ. ರಝುಮಿಖಿನ್ ಗುಟ್ಟು ರಟ್ಟು ಮಾಡುವುದರಲ್ಲಿದ್ದ, ಜ್ಞಾಪಕ ಇದೆಯಾ? ನಿನ್ನ ಕೆರಳಿಸಬೇಕು ಅಂತ ಸುದ್ದಿ ಹರಡಿದ್ದು ನಾವೇನೇ. ಆ ಸುದ್ದಿ ಕೇಳಿ ರಝುಮಿಖಿನ್ ನಿನಗೆ ಬಂದು ಹೇಳತಾನೆ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಆರು: ಎರಡನೆಯ ಅಧ್ಯಾಯ

‘ಈ ಸಿಗರೇಟೋ…!’ ಪೋರ್ಫಿರಿ ಸಿಗರೇಟು ಹಚ್ಚಿ, ಸುಧಾರಿಸಿಕೊಂಡು ಕೊನೆಗೂ ಮಾತು ಶುರು ಮಾಡಿದ. ‘ಇದರಲ್ಲಿ ಕೆಟ್ಟದ್ದು ಬಿಟ್ಟರೆ ಇನ್ನೇನೂ ಇಲ್ಲ. ಆದರೂ ಸಿಗರೇಟಿನ ಅಭ್ಯಾಸ ಬಿಡಕ್ಕೆ ಆಗತಾ ಇಲ್ಲ! ಕೆಮ್ಮತೀನಿ, ಗಂಟಲು ಕೆರೆಯತ್ತೆ, ಏದುಸಿರು ಬರತ್ತೆ, ನಿಮಗೆ ಗೊತ್ತಲ್ಲ ನಾನು ಹೇಡಿ, ಪುಕ್ಕಲ. ಅದಕ್ಕೇ ಡಾಕ್ಟರ ಹತ್ತಿರ ಹೋದೆ. ಆ ಡಾಕ್ಟರೋ ಒಬ್ಬೊಬ್ಬ ರೋಗೀನೂ ಅರ್ಧರ್ಧ ಗಂಟೆ ಪರೀಕ್ಷೆ ಮಾಡತಾನೆ. ನನ್ನ ನೋಡಿದ ತಕ್ಷಣ ನಗೋದಕ್ಕೆ ಶುರು ಮಾಡಿದ. ಕುಟ್ಟಿ, ತಟ್ಟಿ, ಕೇಳಿಸಿಕೊಂಡು, ‘ನಿಮಗೆ ಸಿಗರೇಟು ಒಳ್ಳೆಯದಲ್ಲ, ನಿಮ್ಮ ಶ್ವಾಸಕೋಶ ಊದಿಕೊಂಡಿವೆ,’ ಅಂದ. ಹೇಗೆ ಬಿಡಲಿ ಸಿಗರೇಟನ್ನ? ಅದು ಬಿಟ್ಟರೆ ಇನ್ನೇನಿದೆ? ನಾನು ಕುಡಿಯಲ್ಲ, ಅದೇ ಸಮಸ್ಯೆ, ಹೆಹ್ಹೆಹ್ಹೇ- ನಾನು ಕುಡಿಯಲ್ಲ ಅನ್ನೋದೇ ಸಮಸ್ಯೆ! ಎಲ್ಲಾನೂ ಹೋಲಿಕೆಯಲ್ಲಿ ಸರಿ, ತಪ್ಪು, ಒಳ್ಳೇದು, ಕೆಟ್ಟದ್ದು ಅಷ್ಟೇ, ಎಲ್ಲಾನೂ ಬರೀ ಹೋಲಿಕೆ!’

‘ಏನಿದು? ಮತ್ತೆ ಮೊದಲಿನ ಥರಾನೇ ಆಟ ಕಟ್ಟತಾ ಇದಾನಾ, ಏನು ಕಥೆ?’ ರಾಸ್ಕೋಲ್ನಿಕೋವ್ ಮನಸಲ್ಲೇ ಅಂದುಕೊಂಡ. ಕಳೆದ ಭೇಟಿಯ ನೆನಪು ತಟ್ಟನೆ ಬಂದು ಅಸಹ್ಯ ಭಾವದ ಅಲೆ ಮನಸಿನಲ್ಲೆಲ್ಲ ಪ್ರವಾಹವಾಗಿ ಹರಡಿತು.

‘ಎರಡು ದಿನದ ಹಿಂದೆ ನಿಮ್ಮನ್ನು ನೋಡುವುದಕ್ಕೆ ಬಂದಿದ್ದೆ, ಸಾಯಂಕಾಲದ ಹೊತ್ತಿನಲ್ಲಿ—ಗೊತ್ತಾಗಲಿಲ್ಲವಾ ನಿಮಗೆ?’—ಪೋರ್ಫಿರಿ ರೂಮಿನೊಳಗೆ ಸುತ್ತಲೂ ಕಣ್ಣಾಡಿಸುತ್ತ ಮಾತು ಮುಂದುವರೆಸಿದ. ಇದೇ ರೂಮಿಗೆ ಬಂದಿದ್ದೆ. ಇವತ್ತು ಬಂದ ಹಾಗೇ. ಹೀಗೇ ಈ ಕಡೆ ಬಂದಿದ್ದೆ—ಯಾಕೆ ನಿಮ್ಮ ಮನೆಗೆ ಭೇಟಿ ಕೊಡಬಾರದು ಅನ್ನಿಸಿತು. ಬಂದೆ. ಬಾಗಿಲು ತೆಗೆದಿತ್ತು. ಸುತ್ತಲೂ ನೋಡಿದೆ. ಕಾದೆ. ಕೆಲಸದವಳಿಗೂ ಹೇಳಲಿಲ್ಲ. ಸುಮ್ಮನೆ ಹೊರಟು ಹೋದೆ. ನಿಮ್ಮ ರೂಮಿಗೆ ಬೀಗ ಹಾಕಲ್ಲವಾ?’

ರಾಸ್ಕೋಲ್ನಿಕೋವ್‌ನ ಮುಖ ಕಪ್ಪಿಡುತ್ತಿತ್ತು. ಅವನ ಯೋಚನೆ ಏನು ಅನ್ನುವುದನ್ನು ಪೋರ್ಫಿರಿ ಊಹೆ ಮಾಡುತಿದ್ದ ಹಾಗಿತ್ತು. ‘ಪ್ರಿಯ ರೋಡಿಯೋನ್ ರೊಮಾನೊವಿಚ್, ನಿಮಗೆ ವಿವರಣೆ ಕೊಡುವುದಕ್ಕೆ ನಾನೇ ಬಂದಿದೇನೆ, ಅದು ನನ್ನ ಜವಾಬ್ದಾರಿ ಸಾರ್.’ರಾಸ್ಕೋಲ್ನಿಕೋವ್‌ಗೆ ಆಶ್ಚರ್ಯವಾಗುವ ಹಾಗೆ ನಗುತ್ತ, ರಾಸ್ಕೋಲ್ನಿಕೋವ್‌ನ ಮೊಳಕಾಲ ಮೇಲೊಮ್ಮೆ ಪ್ರೀತಿಯಿಂದೆಂಬಂತೆ ತಟ್ಟಿ, ಅದೇ ಹೊತ್ತಿನಲ್ಲಿ ಮುಖವನ್ನು ಗಂಭೀರವಾಗಿಟ್ಟುಕೊಂಡು, ಕಷ್ಟಪಡುತ್ತಿರುವವನ ಹಾಗೆ, ಮುಖದ ಮೇಲೆ ದುಃಖದ ಪರದೆ ಎಳೆದುಕೊಂಡವನ ಹಾಗೆ ಮಾತಾಡಿದ. ಪೋರ್ಫಿರಿಯ ಮುಖ ಹೀಗೂ ಇರಬಹುದೆಂಬ ಕಲ್ಪನೆಯೂ ಇರಲಿಲ್ಲ ರಾಸ್ಕೋಲ್ನಿಕೋವ್‍ಗೆ ‘ಹೋದ ಸಾರಿ ನಮ್ಮ ಭೇಟಿಯಲ್ಲಿ ವಿಚಿತ್ರವಾದ ದೃಶ್ಯ ನೋಡಿದೆವು. ನಮ್ಮ ಮೊದಲನೆಯ ಭೇಟಿ ಕೂಡ ವಿಚಿತ್ರವೇ ಅನ್ನಬೇಕು. ಇರಲಿ, ಒಂದರ ಹಿಂದೆ ಇನ್ನೊಂದು! ವಿಷಯ ಏನಂದರೆ ನಾನು ನಿಮ್ಮ ಮುಂದೆ ತಪ್ಪಿತಸ್ಥನಾಗಿ ನಿಂತಿದೇನೆ, ನಾನು ನಿಮ್ಮ ಕ್ಷಮೆ ಕೋರಬೇಕು. ಹೋದ ಸಾರಿ ನಾವು ಹೇಗೆ ಬೀಳ್ಕೊಂಡೆವು ನೆನಪಿದೆಯಲ್ಲ? ನೀವು ಟೆನ್ಸ್ ಆಗಿದ್ದಿರಿ, ನಿಮ್ಮ ಕಾಲು ನಡುಗುತಿದ್ದವು. ನಾನೂ ಟೆನ್ಸ್ ಆಗಿದ್ದೆ, ನನ್ನ ಕಾಲೂ ನಡುಗುತಿತ್ತು. ಯಾಕೋ ನಮ್ಮಿಬ್ಬರ ನಡುವೆ ತಾಳ ಮೇಳ ಇರಲಿಲ್ಲ, ಜಂಟಲ್‌ಮ್ಯಾನ್‌ಗಳ ನಡುವೆ ಇರುವಂಥ ಹೊಂದಾಣಿಕೆ ಇರಲಿಲ್ಲ. ಎಷ್ಟೇ ಆದರೂ ನಾವು ಜಂಟಲ್‌ಮ್ಯಾನ್‌ಗಳು, ಅಥವಾ ಮೊದಲು ಜಂಟಲ್‌ಮ್ಯಾನ್‍ ಆಮೇಲೆ ಬೇರೆ ಎಲ್ಲಾ. ಅದು ನಮಗೆ ಅರ್ಥವಾಗಬೇಕು, ಸರ್. ಆದರೆ ಈಗ ನೋಡಿದರೆ ಎಲ್ಲಾನೂ ಅಸಭ್ಯ ಅನ್ನುವ ಮಟ್ಟಕ್ಕೆ ಬಂದುಬಿಟ್ಟಿದೆ, ಸರ್.’

ರಾಸ್ಕೋಲ್ನಿಕೋವ್ ಎದ್ದು, ಪೋರ್ಫಿರಿಯನ್ನೇ ದಿಟ್ಟಿಸುತ್ತ, ‘ಏನಾಗಿದೆ ಇವನಿಗೆ? ನನ್ನನ್ನ ಯಾರು ಅಂದುಕೊಂಡಿದಾನೆ?’ ಎಂದು ಮನಸಿನೊಳಗೇ ಕೇಳಿಕೊಂಡ.

‘ಇನ್ನು ಮೇಲೆ ನಾವು ನೇರಾ ನೇರಾ ಇದ್ದು ಬಿಟ್ಟರೆ ವಾಸಿ ಅಂತ ತೀರ್ಮಾನ ಮಾಡಿದೇನೆ,’ ಪೋರ್ಫಿರಿ ತಲೆಯನ್ನು ಸ್ವಲ್ಪವೇ ಹಿಂದೆ ವಾಲಿಸಿ, ರಾಸ್ಕೋಲ್ನಿಕೋವ್‌ಗೆ ಕಸಿವಿಸಿ ಆಗಬಾರದು ಅನ್ನುವ ಹಾಗೆ, ತನ್ನ ಹಳೆಯ ಟ್ರಿಕ್ಕು ತಂತ್ರಗಳ ಬಗ್ಗೆ ತನಗೇ ತಿರಸ್ಕಾರ ಹುಟ್ಟಿದೆ ಅನ್ನುವ ಹಾಗೆ ಕಣ್ಣು ತಗ್ಗಿಸಿ ಮಾತಾಡಿದ. ‘ಹೌದು, ಸಾರ್. ಇಂಥ ಅನುಮಾನ, ಇಂಥ ನಾಟಕ ಬಹಳ ಕಾಲ ನಡೆಯಲಾರವು. ನಮ್ಮ ಸಮಸ್ಯೆಯನ್ನ ಮಿಕೊಲ್ಕಾ ಪರಿಹಾರ ಮಾಡಿದಾನೆ. ಇಲ್ಲದೆ ಇದ್ದಿದ್ದರೆ ನಮ್ಮಿಬ್ಬರ ಮಧ್ಯೆ ಇನ್ನೂ ಏನೇನು ನಡೆಯುತ್ತಿತ್ತೋ. ಆ ಹೊತ್ತಿನಲ್ಲಿ ಆ ದರಿದ್ರ ವ್ಯಾಪಾರಿ ನಮ್ಮ ರೂಮಿನ ಅಡ್ಡಗೋಡೆಯ ಹಿಂದೇನೇ ಕೂತಿದ್ದ. ಗೊತ್ತಾ ನಿಮಗೆ? ಆಗಲೇ ನಿಮಗೆ ಗೊತ್ತಾಗಿರತ್ತೆ, ಬಿಡಿ. ಅವನು ಆಮೇಲೆ ನಿಮ್ಮನ್ನ ನೋಡಕ್ಕೆ ಬಂದಿದ್ದ ಅಂತ ನನಗೆ ವರ್ತಮಾನ ಬಂತು. ಆದರೆ, ಆವಾಗ ನೀವು ಏನು ಅಂದುಕೊಂಡಿರೋ ಅದು ನಿಜ ಅಲ್ಲ. ನಾನು ಯಾರಿಗೂ ಹೇಳಿಕಳಿಸಿರಲಿಲ್ಲ, ಯಾವ ವ್ಯವಸ್ಥೇನೂ ಮಾಡಿರಲಿಲ್ಲ. ‘ಯಾಕೆ?’ ಅಂತ ನೀವು ಕೇಳಬಹುದು. ನಾನೇನು ಹೇಳಲಿ: ನಾನು ತಬ್ಬಿಬ್ಬಾಗಿದ್ದೆ. ವಾಚ್‍ಮ್ಯಾನುಗಳಿಗೆ ಕೂಡ ಹೇಳಿಕಳಿಸಿರಲಿಲ್ಲ. (ನೀವು ಹೋಗತಾ ಅವರನ್ನ ದಾಟಿಕೊಂಡು ಹೋದಿರಿ ಅಂತ ಬೇಕಾದರೆ ಬೆಟ್‍ ಕಟ್ಟತೇನೆ.)

ನನ್ನ ತಲೆಯಲ್ಲಿ ಆಗ ಒಂದು ವಿಚಾರ ಹೊಳೆದಿತ್ತು, ಮಿಂಚಿನ ಹಾಗೆ. ಮನಸಲ್ಲೇ ಗಟ್ಟಿಯಾಗಿತ್ತು, ರೋಡಿಯಾನ್ ರೊಮಾನೊವಿಚ್. ಎಷ್ಟಂದರೂ ಕೈಯಲ್ಲಿರುವ ಈ ಒಂದು ಹಕ್ಕಿ ಪೊದೆಯಲ್ಲಿರುವ ಎರಡು ಹಕ್ಕಿಗಳಿಗಿಂತ ವಾಸಿ. ನನ್ನ ಕೈಗೆ ಸಿಕ್ಕಿಬಿದ್ದಿರೋದನ್ನ ಬಿಡಬಾರದು, ಇನ್ನೊಂದನ್ನ ಆಮೇಲೆ ಹಿಡೀಬಹುದು ಅನ್ನಿಸ್ತು. ನೀವು ಬಹಳ ಬೇಗ ರೇಗತೀರಿ, ರೋಡಿಯಾನ್ ರೊಮಾನೊವಿಚ್. ನಿಮ್ಮ ಸ್ವಭಾವಾನೇ ಹಾಗೆ. ಬಹಳ ಬೇಗಾನೇ ಸಿಟ್ಟಿಗೇಳತೀರಿ. ನಾನು ಅರ್ಥ ಮಾಡಿಕೊಂಡಿರುವ ಹಾಗೆ ನಿಮ್ಮಲ್ಲಿ ಒಳ್ಳೆಯ ಗುಣಗಳು ಬಹಳಾನೇ ಇವೆ. ಅಲ್ಲ, ನನಗೆ ಗೊತ್ತಿರುವ ಹಾಗೆ ಯಾರೂ ತಟ್ಟಂತ ಎದ್ದು ನಿಂತು ತಮ್ಮ ಮನಸಿನಲ್ಲಿ ಅಡಗಿಸಿಟ್ಟಿರುವ ಗುಟ್ಟನ್ನೆಲ್ಲ ಹೇಳಿಬಿಡಲ್ಲ. ಆದರೂ ತಾಳ್ಮೆಯನ್ನ ಕೆಣಕತಾ ಇದ್ದರೆ ಸಿಟ್ಟಗೆದ್ದು ಸತ್ಯ ಒದರತಾರೆ. ಬಹಳ ಅಪರೂಪ ಹೀಗಾಗೋದು. ನನಗೆ ಸಣ್ಣ ಸುಳಿವು ಸಿಕ್ಕರೆ ಸಾಕು, ಚಿಕ್ಕಾತಿ ಚಿಕ್ಕ ಸುಳಿವು ಸಿಕ್ಕರೂ ಸಾಕು, ಅದನ್ನ ಹಿಂಬಾಲಿಸಿಕೊಂಡು ನಿಜವಾದ ಸಾಕ್ಷಿ, ಪುರಾವೆ ಹುಡುಕುತೇನೆ, ಬರೀ ಸೈಕಾಲಜಿನ ನಂಬಿಕೊಳ್ಳಲ್ಲ ಅಂದುಕೊಂಡೆ. ಯಾಕೆ ಅಂದರೆ, ಮನುಷ್ಯ ತಪ್ಪು ಮಾಡಿದ್ದರೆ ಹೇಗಾದರೂ ಸರಿ ಗಟ್ಟಿಯಾದ ಪುರಾವೆ ಸಿಗತ್ತೆ ಅವನಿಂದ, ತೀರ ಊಹೆ ಮಾಡದೆ ಇರುವಂಥಾದ್ದೂ ಗೊತ್ತಾಗಬಹುದು ಅಂದುಕೊಂಡೆ. ನಿಮ್ಮ ಸ್ವಭಾವವನ್ನ ಬಹಳ ನೆಚ್ಚಿಕೊಂಡಿದ್ದೆ ರೋಡಿಯಾನ್ ರೊಮಾನೊವಿಚ್, ಬಹಳ!’

‘ಈಗ… ಈಗ ಯಾಕೆ ಈ ಥರ ನನ್ನ ಹತ್ತಿರ ಮಾತಾಡತಾ ಇದೀರಿ?’ ರಾಸ್ಕೋಲ್ನಿಕೋವ್ ಗೊಣಗಿದ, ಅವನ ಪ್ರಶ್ನೆಯ ಅರ್ಥ ಅವನಿಗೇ ಆಗಿರಲಿಲ್ಲ. ‘ಏನು ಹೇಳತಾ ಇದಾನೆ ಇವನು, ನಾನು ನಿಜವಾಗಲೂ ತಪ್ಪು ಮಾಡಿಲ್ಲ ಅಂದುಕೊಂಡಿದಾನಾ?’ ಅಂತ ಯೋಚನೆ ಮಾಡುತ್ತ ಗೊಂದಲಗೊಂಡಿದ್ದ.

‘ಯಾಕೆ ಹೀಗೆ ಮಾತಾಡತಾ ಇದೀನಿ? ಸಾರ್, ನಾನು ಯಾಕೆ ಹಾಗೆಲ್ಲ ನಡೆದುಕೊಂಡೆ ಅಂತ ವಿವರಿಸತಾ ಇದೇನೆ. ಇಂಥ ವಿವರಣೆ ಕೊಡುವುದು ನನ್ನ ಪವಿತ್ರವಾದ ಕರ್ತವ್ಯ. ನಿಮಗೆ ಎಲ್ಲಾನೂ ಹೇಳಬೇಕು, ಮನಸಿಗೆ ಮುಸುಕಿದ್ದ ಆ ಕಗ್ಗತ್ತಲ ಅವಧಿಯ ಎಲ್ಲ ವಿವರ, ಕೊನೆಯ ಹನಿ ಕೂಡ ನಿಮಗೆ ತಿಳಿಯಬೇಕು. ನೀವು ತುಂಬ ನರಳುವ ಹಾಗೆ ಮಾಡಿಬಿಟ್ಟೆ, ರೋಡಿಯಾನ್ ರೊಮಾನೊವಿಚ್. ನಾನು ರಾಕ್ಷಸ ಅಲ್ಲ. ಸಾರ್. ನನಗೂ ಅರ್ಥ ಆಗತ್ತೆ, ಇಷ್ಟೊಂದೆಲ್ಲ ಭಾರ ಬೆನ್ನ ಮೇಲೆ ಹೊತ್ತುಕೊಂಡು ನಡೆಯುವುದು ಹೆಮ್ಮ ಇರುವ, ಖಿನ್ನನಾದ, ಅಸಹನೆಯ, ಮುಖ್ಯವಾಗಿ ಅಸಹನೆಯ ಮನುಷ್ಯನಿಗೆ ಎಷ್ಟು ಕಷ್ಟ ಆಗತ್ತೆ, ಗೊತ್ತು. ನೀವು ಬಹಳ ಉದಾತ್ತ ಸ್ವಭಾವದವರು, ಮಹಾಪುರುಷರಲ್ಲಿ ಇರುವಂಥ ಸ್ವಭಾವ ಸ್ವಲ್ಪ ನಿಮ್ಮಲ್ಲೂ ಇದೆ ಅಂದುಕೊಂಡಿದೇನೆ. ಹಾಗಂತ ನಾನು ನಿಮ್ಮ ಎಲ್ಲ ವಿಚಾರಗಳನ್ನ, ನಂಬಿಕೆಗಳನ್ನ ಒಪ್ಪಲ್ಲ. ಈ ಮಾತು ಯಾಕೆ ಹೇಳಿದೆ ಅಂದರೆ ನನ್ನ ಮನಸಿನಲ್ಲಿರುವುದನ್ನ ಪ್ರಾಮಾಣಿಕವಾಗಿ ಹೇಳಿಕೊಂಡುಬಿಡಬೇಕು, ನಿಮಗೆ ಮೋಸ ಮಾಡಬಾರದು ಅಂತ ನನ್ನ ಆಸೆ. ನಿಮ್ಮ ಪರಿಚಯ ಆದಮೇಲೆ ನಿಮ್ಮ ಬಗ್ಗೆ ಏನೋ ಸೆಳೆತ ಹುಟ್ಟಿತು. ನಾನು ಹೀಗೆ ಮಾತಾಡುವುದು ಕೇಳಿ ನಿಮಗೆ ನಗು ಬರಬಹುದು ಅಲ್ಲವಾ? ಅದು ನಿಮ್ಮ ಹಕ್ಕು, ಸಾರ್. ಮೊದಲ ಸಾರಿ ನನ್ನ ಭೇಟಿ ಮಾಡಿದಾಗಲೇ ನನ್ನ ಕಂಡರೆ ನಿಮಗೆ ಇಷ್ಟವಾಗಲ್ಲ ಅಂತ ಗೊತ್ತಾಯಿತು. ಇಷ್ಟ ಪಡುವಂಥದ್ದು ನನ್ನಲ್ಲಿ ಏನೂ ಇಲ್ಲವೂ ಇಲ್ಲ. ನೀವು ಏನು ಬೇಕಾದರೂ ಅಂದುಕೊಳ್ಳಿ, ಸಾರ್. ನೀವು ನನ್ನ ಬಗ್ಗೆ ಅಂದುಕೊಂಡಿರುವದನ್ನೆಲ್ಲ ಸರಿಪಡಿಸಬೇಕು, ನಾನು ಹೃದಯವಂತ, ಆತ್ಮಸಾಕ್ಷಿ ಇರುವವನು ಅಂತ ತೋರಿಸಬೇಕು, ನಿಜವಾಗಿ ಹೇಳತಾ ಇದೇನೆ, ಸರ್.’

ಪೋರ್ಫಿರಿ ಪೆಟ್ರೊವಿಚ್ ಮಾತು ನಿಲ್ಲಿಸಿದ. ರಾಸ್ಕೋಲ್ನಿಕೋವ್‍ ಮನಸಿಗೆ ಹೊಸ ಭಯದ ಪ್ರವಾಹ ನುಗ್ಗಿ ಬಂದಿತ್ತು. ತಾನು ಮುಗ್ಧನೆಂದು ಪೋರ್ಫಿರಿ ಭಾವಿಸಿರುವುದು ಹೊಳೆದು ತಟ್ಟನೆ ಭಯ ಹುಟ್ಟಿತ್ತು.

‘ಇಡೀ ಕಥೆಯನ್ನ ಕ್ರಮವಾಗಿ ಮೊದಲಿಂದ ಹೇಳುವುದು ಬೇಕಾಗಿಲ್ಲ. ಹೇಳಬೇಕು ಅಂದರೂ ನನಗೆ ಆಗಲ್ಲ, ಸರ್. ಯಾಕೆ ಅಂದರೆ, ಹೇಗೆ ವಿವರಿಸಲಿ? ಮೊದಲು ಗಾಳಿ ಸುದ್ದಿ ಇದ್ದವು. ಏನವು, ಯಾರು ಹೇಳಿದರು, ಯಾವಾಗ, ಯಾವ ಸಂದರ್ಭ, ಹೇಗೆ ಅವೆಲ್ಲ ನಿಮ್ಮನ್ನು ಬೊಟ್ಟುಮಾಡಿದವು ಅಂತೆಲ್ಲ ಹೇಳುವುದು ಕೂಡ ಬೇಕಾಗಿಲ್ಲ, ಅಂದುಕೊಂಡಿದೇನೆ. ನನ್ನ ಮಟ್ಟಿಗೆ ಹೇಳುವುದಾದರೆ ಇದೆಲ್ಲ ತೀರಾ ಮಾಮೂಲಿ ಸಂಗತಿಯಿಂದ ಶುರುವಾಯಿತು. ಎಷ್ಟು ಮಾಮೂಲಿ ಅಂದರೆ ಅದು ನಡೆಯದೇನೇ ಇರಬಹುದಾಗಿತ್ತು. ಏನದು? ಹ್ಞಂ… ಅದನ್ನ ಹೇಳಬೇಕಾಗಿಲ್ಲ, ಅನ್ನಿಸತ್ತೆ. ಈ ಎಲ್ಲಾ ಗಾಳಿ ಸುದ್ದಿ, ಆಕಸ್ಮಿಕಗಳು ನನ್ನೊಳಗೆ ಸೇರಿ ಒಂದೇ ವಿಚಾರವಾಗಿ ರೂಪ ಪಡೆದುಕೊಂಡವು. ಅದನ್ನ ಪ್ರಾಮಾಣಿಕವಾಗಿ ಒಪ್ಪಿಕೊಳ್ಳತೇನೆ. ತಪ್ಪೊಪ್ಪಿಗೆ ಮಾಡಿಕೊಳ್ಳುವುದಿದ್ದರೆ ಪೂರಾ ಮಾಡಿಕೊಳ್ಬೇಕು. ನೀವೇ ಕೊಲೆಗಾರ ಅಂತ ಮೊದಲು ಅನಿಸಿದ್ದು ನನಗೇನೇ. ಉದಾಹರಣೆಗೆ, ಆ ಮುದುಕಿ ತನ್ನ ಹತ್ತಿರ ಇದ್ದ ವಸ್ತುಗಳಿಗೆ ಲೇಬಲ್ಲು ಹಚ್ಚಿದ್ದಳು ಇತ್ಯಾದಿ, ಇತ್ಯಾದಿ ಎಲ್ಲಾ ನಾನ್ಸೆನ್ಸ್. ಅಂಥ ಸಾಕ್ಷಿಗಳು ನೂರಾರು ಸಿಗತವೆ. ಹಾಗೇ ಪೋಲೀಸು ಸ್ಟೇಷನ್ನಿನಲ್ಲಿ ನಡೆದ ಘಟನೆ ಕೂಡ ವಿವರವಾಗಿ ತಿಳಿಯಿತು, ಅದೂ ಅಕಸ್ಮಾತ್ತಾಗೇ. ಅದೂ ಯಾರೋ ಸುಮ್ಮನೇ ಹೀಗೇ ಹೇಳಿದ್ದಲ್ಲ. ವಿಶೇಷವಾದ ಸಾಕ್ಷಿ. ಅವನು ತನಗೇ ಗೊತ್ತಿಲ್ಲದ ಹಾಗೆ ಎಲ್ಲವನ್ನೂ ಬಹಳ ವಿವರವಾಗಿ ಹೀರಿಕೊಂಡಿದ್ದ. ನನ್ನ ಜೊತೆ ಚರ್ಚೆ ಮಾಡಿದ. ರೋಡಿಯೋನ್ ರೊಮಾನೊವಿಚ್, ಒಂದಕ್ಕೊಂದು, ಒಂದಾದ ಮೇಲೆ ಇನ್ನೊಂದು ಸೇರಿಕೊಳ್ಳತ ಹೋದವು. ನೂರು ಮೊಲ ಸೇರಿ ಕುದುರೆ ಆಗಲ್ಲ, ನೂರು ಅನುಮಾನ ಸೇರಿ ಪುರಾವೆ ಆಗಲ್ಲ ಅನ್ನತ್ತೆ ಇಂಗ್ಲಿಶ್ ಗಾದೆ. ಅದು ಸಾಮಾನ್ಯ ತಿಳಿವಳಿಕೆ. ಆದರೆ ನೋಡಿ, ಭಾವನೆಗಳೂ ಇರತಾವಲ್ಲ, ಅವನ್ನ ಮೀರುವುದಕ್ಕೆ ಪ್ರಯತ್ನಪಟ್ಟು ನೋಡಿ. ಯಾಕೆ ಅಂದರೆ ವಿಚಾರಣಾಧಿಕಾರಿ ಕೂಡ ಮನುಷ್ಯನೇ. ಆಮೇಲೆ, ನಿಮ್ಮ ಪುಟ್ಟ ಲೇಖನ ಜ್ಞಾಪಿಸಿಕೊಂಡೆ. ನಾವು ಮೊದಲ ಸಾರಿ ಭೇಟಿಯಾದಾಗಲೇ ನೀವು ಆ ವಿಷಯ ವಿವರವಾಗಿ ಚರ್ಚೆ ಮಾಡಿದಿರಿ., ನೆನಪಿದೆಯಲ್ಲಾ? ನಾನು ನಿಮ್ಮ ವಿಚಾರಗಳನ್ನ ತಮಾಷೆ ಮಾಡಿದೆ, ನಿಮ್ಮನ್ನ ಕೆರಳಿಸುವುದಕ್ಕೆ. ಹೇಳತೇನೆ ಕೇಳಿ, ನಿಮಗೆ ಅಸಹನೆ ಜಾಸ್ತಿ. ಜೊತೆಗೆ ತುಂಬಾ ಕಾಯಿಲೆ. ಧೈರ್ಯ ಜಾಸ್ತಿ, ಅಭಿಮಾನ ಹೆಚ್ಚು, ಪ್ರಾಮಾಣಿಕತೆಯೂ ಬಲವಾದದ್ದು, ಜೀವನದಲ್ಲಿ ಆಗಲೇ ಬಹಳ ಅನುಭವಿಸಿದ್ದೀರಿ… ಇದೆಲ್ಲವೂ ನನಗೆ ದೀರ್ಘ ಕಾಲದಿಂದಲೂ ಗೊತ್ತಿತ್ತು. ಇವೆಲ್ಲ ಭಾವನೆಗಳು ನನಗೂ ಚೆನ್ನಾಗಿ ತಿಳಿದಿವೆ, ಹಾಗಾಗಿ ನಿಮ್ಮ ಲೇಖನವನ್ನು ‘ಇದೆಲ್ಲಾ ನನಗೂ ಗೊತ್ತು,’ ಅನ್ನುವ ಭಾವದಲ್ಲೇ ಓದಿದೆ. ಆ ಲೇಖನವನ್ನ ನೀವು ನಿದ್ರೆಯಿರದ ರಾತ್ರಿಗಳಲ್ಲಿ, ಎದೆ ದಡಬಡಿಸುತ್ತ, ಉನ್ಮಾದದಂಥ ಹುಚ್ಚಿನ ಸ್ಥಿತಿಯಲ್ಲಿ, ಉತ್ಸಾಹವನ್ನೆಲ್ಲ ಅದುಮಿಟ್ಟುಕೊಂಡು ಬರೆದಿದ್ದೀರಿ. ಯುವಕರಲ್ಲಿ ಅಭಿಮಾನ, ಉತ್ಸಾಹಗಳನ್ನ ಅದುಮಿಟ್ಟುಕೊಳ್ಳುವ ಸ್ಥಿತಿ ಬಹಳ ಅಪಾಯದ್ದು. ಆಗ ನಿಮ್ಮ ಲೇಖನ ತಮಾಷೆ ಮಾಡಿ ನಕ್ಕೆ, ಆದರೆ ಹೇಳತೇನೆ, ಬೆಂಕಿಯ ಉರಿಯಂಥ ಯೌವನದ ಪ್ರಖರತೆ ಇರುವ ಹೊಸ ಬರಹಗಳು ನನಗೆ ಬಹಳ ಇಷ್ಟ. ತುಂಬಿದ ಕಾವಳದಲ್ಲಿ ಎಲ್ಲೋ ಮಿಡಿಯುವ ತಂತಿ ಹಾಗೆ ಇರತ್ತೆ ನಿಮ್ಮ ಬರವಣಿಗೆ. ನಿಮ್ಮ ಲೇಖನದಲ್ಲಿ ಅಸಂಗತವಾದದ್ದೂ ಇದೆ, ಅದ್ಭುತವಾದದ್ದೂ ಇದೆ. ನಿಮ್ಮ ಲೇಖನದಲ್ಲಿ ಪ್ರಾಮಾಣಿಕತೆ ಮಿಂಚುತ್ತದೆ. ಎಂಥ ಯೌವನತುಂಬಿದ ಭ್ರಷ್ಟವಾಗದ ಪ್ರಾಮಾಣಿಕತೆ ಇದೆ, ಅಭಿಮಾನ ಹೆಮ್ಮೆ ಇದೆ, ಧೈರ್ಯ ಇದೆ, ಹತಾಶೆ ಇದೆ. ಮಂಕು ಕವಿಸುವ ಲೇಖನ ಸಾರ್. ಆದರೂ ಒಳ್ಳೆಯದು.

ನಿಮ್ಮ ಪುಟ್ಟ ಲೇಖನ ಓದಿ ಪಕ್ಕಕ್ಕಿಟ್ಟೆ… ಪಕ್ಕಕ್ಕೆ ಇಡತಾ ಯೋಚನೆ ಮಾಡಿದೆ: ‘ಈ ಮನುಷ್ಯ ಇದನ್ನ ಇಲ್ಲಿಗೇ ಮುಗಿಸಲ್ಲ!’ ಸರಿ, ಹೀಗೆಲ್ಲ ಅನಿಸಿದ ಮೇಲೆ ಅನುಮಾನ ಹುಟ್ಟದೆ ಇರತ್ತಾ! ಅಯ್ಯೋ ದೇವರೇ, ಏನು ಮಾತಾಡತಾ ಇದೇನೆ! ಆಪಾದನೆ ಹೊರಿಸತಾ ಇದೇನಾ? ಆ ಹೊತ್ತಿನಲ್ಲಿ ಸುಮ್ಮನೆ ಗಮನಿಸಿದೆ, ಅಷ್ಟೆ. ‘ಏನಿದೆ, ಅದರಲ್ಲಿ?’ ಅಂತ ಕೇಳಿಕೊಂಡೆ. ಏನಿಲ್ಲ, ಧನಾತ್ಮಕವಾದದ್ದು ಏನೇನೂ ಇಲ್ಲ. ವಿಚಾರಣಾ ಅಧಿಕಾರಿಯಾಗಿದ್ದ ನಾನು ಹೀಗೆ ಭಾವಕ್ಕೆ ಸಿಕ್ಕಿ ತೇಲಿ ಹೋಗುವುದು ಒಂದಿಷ್ಟೂ ಸರಿಯಾಗಿರಲಿಲ್ಲ. ಇಗೋ, ಮಿಕೋಲ್ಕಾ ನನ್ನ ಕೈಗೆ ಸಿಕ್ಕಿದಾನೆ, ಇಗೋ ಪುರಾವೆಗಳಿವೆ; ನೀವು ಏನೇ ಹೇಳಿ ಪುರಾವೆ ಅಂದರೆ ಪುರಾವೇನೇ! ಅವನೂ ಅವನದೇ ಸೈಕಾಲಜಿ ಇಟ್ಟುಕೊಂಡಿದಾನೆ. ಅವನಿಗೂ ಸ್ವಲ್ಪ ಗಮನಕೊಡಬೇಕು. ಯಾಕೆಂದರೆ ಇದು ಸಾವು ಬದುಕಿನ ಪ್ರಶ್ನೆ. ಇದನ್ನೆಲ್ಲ ನಿಮಗೆ ಯಾಕೆ ವಿವರಿಸತಾ ಇದೇನೆ ಈಗ? ಯಾಕೆ ಅಂದರೆ ನಾನು ಆ ಹೊತ್ತಿನಲ್ಲಿ ನಿಮ್ಮ ಜೊತೆ ದುಷ್ಟತನದಿಂದ ನಡೆದುಕೊಂಡೆ ಅಂತ ಆಪಾದಿಸರಬಾರದು ನೀವು. ನಿಜವಾಗಿ ಹೇಳತೇನೆ, ನಾನು ದುಷ್ಟ ಆಗಿರಲಿಲ್ಲ ಸಾರ್. ಹೆಹ್ಹೇ! ಹಾಗಾದರೆ, ನಾನು ಸರ್ಚು ಮಾಡುವುದಕ್ಕೆ ಇಲ್ಲಿಗೆ ಯಾಕೆ ಬರಲಿಲ್ಲ ಅಂತ ನಿಮಗೆ ಆಶ್ಚರ್ಯ ಆಗುತ್ತಿದೆಯಾ? ಬಂದಿದ್ದೆ, ಸಾರ್. ಬಂದಿದ್ದೆ, ಹ್ಹೆಹ್ಹೆಹ್ಹೇ, ನೀವು ಇಲ್ಲಿ ಕಾಯಿಲೆ ಬಂದು ಮಲಗಿದ್ದಿರಲ್ಲ ಆಗ ಬಂದಿದ್ದೆ. ಅಂದರೆ ಅಧಿಕೃತವಾಗಿ ಬಂದಿರಲಿಲ್ಲ, ಸ್ವತಃ ನಾನೇ ಬಂದಿರಲಿಲ್ಲ, ತನಿಖೆಗೆ ಕಳಿಸಿದ್ದೆ. ಇಲ್ಲಿರುವ ಎಲ್ಲಾನೂ ಪರೀಕ್ಷೆ ಮಾಡಿ ನೋಡಿದ್ದಾಯಿತು. ಒಂದು ಸಣ್ಣ ಕೂದಲನ್ನೂ ಬಿಡದೆ ನೋಡಿದೆವು. ಸುಳಿವು ಇನ್ನೂ ಹಸಿಯಾಗಿರುವಾಗಲೇ ಹಿಡಿಯಬೇಕು ಅಂತ. ಆದರೆ ಜರ್ಮನ್ ಭಾಷೆಯಲ್ಲಿ ಉಮ್‍ಝಾನ್ಸ್ಟ್ ಅಂತಾರಲ್ಲ ಹಾಗೆ ಎಲ್ಲಾ ವ್ಯರ್ಥ.

ನಾನಂದುಕೊಂಡೆ, ಅವನೇ ಬರತಾನೆ ತಾನಾಗಿ ತಾನೇ ಬಂದೇ ಬರತಾನೆ, ಬೇಗ ಬರತಾನೆ. ಅವನು ಅಪರಾಧ ಮಾಡಿದ್ದು ನಿಜವಾದರೆ ಖಂಡಿತ ಬರತಾನೆ. ಬೇರೆಯವರಾಗಿದ್ದರೆ ಬರತಿರಲಿಲ್ಲ, ಇವನು ಮಾತ್ರ, ತಪ್ಪು ಮಾಡಿದ್ದರೆ, ಬಂದೇ ಬರತಾನೆ, ಅಂದುಕೊಂಡೆ. ರಝುಮಿಖಿನ್ ಗುಟ್ಟು ರಟ್ಟು ಮಾಡುವುದರಲ್ಲಿದ್ದ, ಜ್ಞಾಪಕ ಇದೆಯಾ? ನಿನ್ನ ಕೆರಳಿಸಬೇಕು ಅಂತ ಸುದ್ದಿ ಹರಡಿದ್ದು ನಾವೇನೇ. ಆ ಸುದ್ದಿ ಕೇಳಿ ರಝುಮಿಖಿನ್ ನಿನಗೆ ಬಂದು ಹೇಳತಾನೆ. ಯಾಕೆ ಅಂದರೆ ಅವನು ಸಿಟ್ಟು ತಡಕೊಳ್ಳುವ ಮನುಷ್ಯ ಅಲ್ಲ. ನಿನ್ನ ಕೋಪ, ನಿನ್ನ ಧೈರ್ಯ ಝಮ್ಯೊತೋವ್‌ನ ಮೇಲೆ ಪ್ರಭಾವ ಬೀರಿತ್ತು. ‘ನಾನೇ ಅವಳನ್ನ ಕೊಂದಿದ್ದು!’ ಅಂತ ಹೆಂಡದಂಗಡಿಯಲ್ಲಿ ಒದರಾಡಿದೆಯಲ್ಲ. ಬಹಳ ಧೈರ್ಯ ಬೇಕು ಹಾಗನ್ನುವುದಕ್ಕೆ ಅಂದುಕೊಂಡೆ. ಅವನು ಕೊಂದದ್ದೇ ನಿಜವಾಗಿದ್ದರೆ ಬಹಳ ಗಟ್ಟಿ ಮನಸಿನ ಹೋರಾಟಗಾರ ಅನ್ನಿಸಿತು. ಹಾಗಾಗಿ ಕಾದೆ! ನಾನು ಕಾಯತಿದ್ದೆ, ನಿಮ್ಮ ಧೈರ್ಯದ ದಾಳಿಗೆ ಸಿಕ್ಕಿ ಝಮ್ಯೊತೋವ್ ನಜ್ಜುಗುಜ್ಜಾಗಿದ್ದ.

ಮತ್ತೆ ಏನಪ್ಪ ಅಂದರ ಸೈಕಾಲಜಿ ಅನ್ನುವುದು ಶಾಪಗ್ರಸ್ತವಾದದ್ದು. ಅದು ಎರಡು ಅಲಗಿನ ಕತ್ತಿ. ನಿಮಗಾಗಿ ಕಾಯತಾ ಇದ್ದೆ, ದೇವರೇ ಕಳಿಸಿದ ಹಾಗೆ ನೀವೇ ಬಂದಿರಿ! ಒಂದು ಕ್ಷಣ ನನ್ನೆದೆ ಬಡಿತ ನಿಂತು ಹೋಗಿತ್ತು. ಹ್ಞಾ, ಆ ಕ್ಷಣದಲ್ಲಿ ನೀವು ಬರುವ ಹಾಗೆ ಮಾಡಿದ್ದೇನು? ನೀವು ಒಳಕ್ಕೆ ಬರತಾ ನಕ್ಕಿರಲ್ಲ, ನಗು, ಜ್ಞಾಪಕ ಇದೆಯಾ? ಒಂದೇ ಕ್ಷಣದಲ್ಲಿ ನಿಮ್ಮ ಆಟ ಗೊತ್ತಾಯಿತು ನನಗೆ. ಪಾರದರ್ಶಕ ಗಾಜಿನ ಹಾಳೆಯ ಹಾಗೆ. ಅಷ್ಟೊಂದು ವಿಶೇಷವಾಗಿ ನಿಮಗಾಗಿ ಕಾಯುತ್ತ ಇರದಿದ್ದರೆ ನಿಮ್ಮ ನಗುವಿನಲ್ಲಿ ನಾನು ಏನನ್ನೂ ಗಮನಿಸುತ್ತಿರಲಿಲ್ಲ.
ಸರಿಯಾದ ಮೂಡಲ್ಲಿರೋದು ಅಂದರೆ ಅದೇನೇ. ಮತ್ತೆ, ರಝುಮಿಖಿನ್ ಆಮೇಲೆ—ಆಹ್! ಕಲ್ಲು ಆ ಕಲ್ಲು, ಜ್ಞಾಪಕ ಇದೆಯಾ, ವಸ್ತುಗಳನ್ನೆಲ್ಲ ಬಚ್ಚಿಟ್ಟುಕೊಂಡಿದ್ದ ಕಲ್ಲು? ಯಾರದೋ ಕೈ ತೋಟದಲ್ಲಿ ಇರುವ ಕಲ್ಲು ನನ್ನ ಮನಸಿಗೆ ಕಂಡಿತು—ಹಿತ್ತಿಲ ಕೈ ತೋಟದ ಬಗ್ಗೆ ಝಮ್ಯತವ್‌ಗೆ ಹೇಳಿದಿರಿ, ಆಮೇಲೆ ನನ್ನ ಕಛೇರಿಯಲ್ಲೂ ಹೇಳಿದಿರಿ, ಅಲ್ಲವಾ? ಆಮೇಲೆ ನಿಮ್ಮ ಲೇಖನ ಪರೀಕ್ಷೆ ಮಾಡಿದೆವು, ಅದರಲ್ಲಿ ಎಲ್ಲಾ ಮಾತಿಗೂ ಎರಡು ಅರ್ಥ ಇವೆ, ಒಂದೊಂದು ಪದದ ಹಿಂದೆಯೂ ಇನ್ನೊಂದು ಅರ್ಥ ಅಡಗಿ ಕೂತಿದೆ ಅನ್ನಿಸಿತು! ಹೀಗೆ, ರೋಡಿಯೋನ್ ರೊಮಾನೊವಿಚ್, ನಾನು ಗೋಡೆಗೆ ಡಿಕ್ಕಿ ಹೊಡೆದೆ. ಡಿಕ್ಕಿ ಹೊಡೆದ ಮೇಲೇನೇ ಅಲ್ಲಿ ಗೋಡೆ ಇದೆ ಅಂತ ಗೊತ್ತಾಗಿದ್ದು. ‘ಇದೇನಿದು? ನನಗೇನಾಗಿದೆ! ಒಂದೊಂದು ಅತೀ ಸಣ್ಣ ವಿವರವನ್ನೂ ನೀವು ಬೇಕಾದರೆ ಇನ್ನೊಂದು ಅರ್ಥದಲ್ಲಿ ವಿವರಿಸಬಹುದು, ಅದು ತೀರ ಸಹಜವಾಗಿಯೂ ಕಾಣತ್ತೆ,’ ಅನ್ನಿಸಿತು. ಎಂಥಾ ಹಿಂಸೆ, ಸಾರ್! ‘ಇಲ್ಲ, ಸಣ್ಣದೊಂದು ಸುಳಿವು, ಗಟ್ಟಿ ಪುರಾವೆ ಸಿಗಲಿ,’ ಅಂದುಕೊಂಡೆ. ಬಾಗಿಲ ಗಂಟೆಯ ವಿಷಯ ನನ್ನ ಕಿವಿಗೆ ಬಿದ್ದಾಗ ಎದೆ ಜೋರಾಗಿ ಬಡಿದುಕೊಂಡಿತು, ಮೈ ನಡುಗಿತು.

‘ಈಗ, ಈಗ ಸಿಕ್ಕಿದೆ ಸುಳಿವು! ಇದೇ ಅದು!’ ಅಂದುಕೊಂಡೆ. ಆ ಬಗ್ಗೆ ಯೋಚನೆ ಮಾಡಲಿಲ್ಲ, ಮಾಡಬೇಕು ಅನಿಸಲಿಲ್ಲ. ನಿಮ್ಮನ್ನ ಕೊಲೆಗಾರ ಅಂತ ಕರೆದ ಗಿಡ್ಡ ವ್ಯಾಪಾರಿಯ ಮೇಲೆ ಸಿಟ್ಟಿಗೇಳದೆ, ಪ್ರಶ್ನೆ ಕೇಳದೆ ಸುಮ್ಮನೆ ಅವನ ಜೊತೆಯಲ್ಲೇ ನೂರು ಹೆಜ್ಜೆ ನಡೆದಿರಲ್ಲ, ಒಂದೂ ಮಾತಾಡದೆ, ಅದನ್ನ ನನ್ನ ಕಣ್ಣಾರೆ ನೋಡಕ್ಕೆ ಸಾಧ್ಯ ಆಗಿದ್ದಿದ್ದರೆ ನನ್ನ ಸ್ವಂತದ ಸಾವಿರ ರೂಬಲ್ ಕೊಡುವುದಕ್ಕೆ ಸಿದ್ಧನಾಗಿದ್ದೆ.

ಮತ್ತೆ ನಿಮ್ಮ ಬೆನ್ನು ಹುರಿಯಲ್ಲಿ ಚಳುಕು ಹರಿದದ್ದು? ನಿಮಗೆ ಹುಷಾರಿಲ್ಲದೆ ಇರುವಾಗ ಅರೆ ಎಚ್ಚರದ ಸನ್ನಿಯಲ್ಲಿ ಬಾಗಿಲ ಕರೆಗಂಟೆ ಸದ್ದು ಕೇಳಿಸಿದ್ದು? ಇಷ್ಟೆಲ್ಲ ಆದಮೇಲೆ ರೊಡಿಯಾನ್ ರೊಮಾನೊವಿಚ್, ನಾನು ನಿಮ್ಮ ಜೊತೆ ಆಟಕಟ್ಟಿದ್ದರಲ್ಲಿ ಆಶ್ಚರ್ಯ ಏನಿದೆ? ಆ ಕ್ಷಣದಲ್ಲಿ ನೀವಾಗಿಯೇ ನಮ್ಮ ಕಛೇರಿಗೆ ಯಾಕೆ ಬಂದಿರಿ? ಯಾರೋ ನಿಮಗೆ ಸೂಚನೆ ಕೊಟ್ಟುಹೇಳಿ ಕಳಿಸಿದಾರೆ ಅನ್ನುವ ಹಾಗೆ. ದೇವರೇ. ಮಿಕೋಲ್ಕಾ ಆಗ ನಿಮ್ಮ ನನ್ನ ಮಧ್ಯೆ ಬಂದಿರದಿದ್ದರೆ… ಜ್ಞಾಪಕ ಇದೆ ಅಲ್ಲವಾ, ಮಿಕೋಲ್ಕಾ? ಚೆನ್ನಾಗಿ ಜ್ಞಾಪಕ ಇದಾನಾ? ಸಿಡಿಲು, ಸಿಡಿಲು ಬಡಿದ ಹಾಗಿತ್ತು! ಸಿಡಿಲು ಅನ್ನೋದನ್ನ ಒಪ್ಪಲಿಲ್ಲ ನಾನು, ಆಮೇಲೆ ಕೂಡ, ನೀವು ಹೋದಮೇಲೆ ನಾನು ಕೇಳಿದ ಪ್ರಶ್ನೆಗೆಲ್ಲ ಅವನು ಬಹಳ ಅಚ್ಚುಕಟ್ಟಾಗಿ ಉತ್ತರ ಕೊಡತಾ ಇದ್ದಾಗ ಅವನು ಹೇಳಿದ ಒಂದು ಮಾತಿಗೂ ಕಿಲುಬು ಕಾಸಿನ ಬೆಲೆ ಕೂಡ ಕೊಡಲಿಲ್ಲ ನಾನು. ಬಂಡೆಯ ಹಾಗೆ ಗಟ್ಟಿಯಾಗಿರೋದು ಅಂದರೆ ಅದು, ಸಾರ್. ಮಿಕೋಲ್ಕಾ ಅಪರಾಧಿ ಆಗಿರಕ್ಕೆ ಸಾಧ್ಯವೇ ಇಲ್ಲ ಅಂದುಕೊಂಡೆ.

‘ರಝುಮಿಖಿನ್ ಈಗ ತಾನೇ ಹೇಳತಾ ಇದ್ದ, ನೀವು ನಿಕೊಲಾಯ್ ಕೊಲೆಗಾರ ಅಂತ ತೀರ್ಮಾನ ಮಾಡಿದೀರಿ ಅಂತ…’
ಅವನ ಉಸಿರು ಉಡುಗಿತು. ಮಾತು ಮುಗಿಸಲಿಲ್ಲ. ಮಾತಿನಲ್ಲಿ ಹೇಳಲಾಗದಂಥ ಉದ್ರೇಕ ಅನುಭವಿಸುತ್ತ ಮಾತು ಕೇಳಿಸಿಕೊಂಡಿದ್ದ. ತನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ತಿಳಿದಿರುವ ಮನುಷ್ಯ ತಾನು ತಿಳಿದದ್ದೆಲ್ಲ ತಪ್ಪು ಅನ್ನುತ್ತಿರುವುದನ್ನು ತನ್ನ ತಿಳಿವಳಿಕೆಯನ್ನು ನಂಬಲ್ಲ ಅನ್ನುವುದನ್ನು ಕೇಳಿಸಿಕೊಳ್ಳುತ್ತ ಇದ್ದ. ಅವನ ಮಾತು ನಂಬುವುದಕ್ಕೆ ಹೆದರಿಕೆ ಆಗತಿತ್ತು. ನಂಬಲಿಲ್ಲ. ಅಸ್ಪಷ್ಟವಾದ ಅರ್ಥಗಳಿದ್ದ ಮಾತಿನಲ್ಲಿ ಸ್ಪಷ್ವಾದದ್ದು, ಖಚಿತವಾದದ್ದು ಇದೆಯೇ ಎಂದು ತಡಕುತ್ತಿದ್ದ ರಾಸ್ಕೋಲ್ನಿಕೋವ್.

‘ಹ್ಞಾ, ರಝುಮಿಖಿನ್!’ ಇದುವರೆಗೂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ರಾಸ್ಕೋಲ್ನಿಕೋವ್ ಪ್ರಶ್ನೆ ಕೇಳಿದ್ದಕ್ಕೆ ಸಂತೋಷಪಟ್ಟವನ ಹಾಗೆ. ಪೋರ್ಫಿರಿ ಉದ್ಗಾರ ಮಾಡಿದ. ‘ಹ್ಹೆ ಹ್ಹೆ ಹ್ಹೇ! ರಝುಮಿಖಿನ್‌ನ ದೂರ ಮಾಡಬೇಕಾಗಿತ್ತು, ಇಬ್ಬರಿದ್ದರೆ ಕಂಪನಿ, ಮೂವರಿದ್ದರೆ ಸಂದಣಿ ಅಲ್ಲವಾ? ಅವನ ವಿಚಾರ ಬೇರೆ, ಹೊರಗಿನವನು ಅವನು. ಮುಖ ಕೆಂಪು ಮಾಡಿಕೊಂಡು ನನ್ನ ಹತ್ತಿರಕ್ಕೆ ಓಡಿ ಬರತಾನೆ… ದೇವರು ಒಳ್ಳೆಯದು ಮಾಡಲಿ ಅವನಿಗೆ. ನಮ್ಮ ವಿಚಾರದಲ್ಲಿ ಮಧ್ಯ ಅವನು ಯಾಕೆ? ನಿಮಗೆ ಆ ವಿಷಯ ಕೇಳಕ್ಕೆ ಇಷ್ಟ ಇದೆಯಾ—ಅಂದರೆ ನಾನು ಹೇಗೆ ಅರ್ಥ ಮಾಡಿಕೊಂಡೆನೋ ಹಾಗೆ? ಮೊದಲನೆಯದಾಗಿ ಅವನು [ಮಿಕೋಲ್ಕ?] ಇನ್ನೂ ಪಡ್ಡೆ, ಮಗು. ಹೇಡಿ ಅಂತಲ್ಲ, ಕಲಾವಿದನ ಥರ. ನಿಜವಾಗಲೂ ಸಾರ್. ನಾನು ಅವನನ್ನ ಹೀಗೆ ವರ್ಣನೆ ಮಾಡಿದ್ದು ಕೇಳಿ ನಗಬೇಡಿ. ಮುಗ್ಧ, ಏನು ಹೇಳಿದರೂ ನಂಬತಾನೆ. ಒಳ್ಳೆ ಮನಸ್ಸಿದೆ, ಅದ್ಭುತವಾದ ಕಲ್ಪನೆ ಇದೆ, ಕಲ್ಪಿಸಿಕೊಂಡದ್ದೆಲ್ಲ ನಂಬತಾನೆ. ಹಾಡತಾನೆ, ಡಾನ್ಸು ಮಾಡತಾನೆ ಬಹಳ ಚೆನ್ನಾಗಿ ಕಥೆ ಹೇಳತಾನಂತೆ, ಅವನು ಹೇಳುವ ಕಥೆ ಕೇಳಕ್ಕೆ ದೂರ ದೂರದಿಂದೆಲ್ಲ ಬರತಾರಂತೆ. ಕಾಲೇಜಿಗೂ ಹೋಗಿ ಬಂದಿದಾನೆ. ಯಾರಾದರೂ ಸಣ್ಣ ಜೋಕು ಹೇಳಿದರೂ ಜೋರಾಗಿ ನಗತಾನೆ. ತಲೆಗೆ ಏರುವ ತನಕ ಕುಡೀತಾನೆ. ಕುಡುಕ ಅಲ್ಲ, ಯಾರಾದರೂ ಕೊಡಿಸಿದರೆ ಮಗು ಥರ ಕುಡೀತಾನೇ ಇರತಾನೆ. ವಡವೆ ಡಬ್ಬಿ ಎತ್ತಿಕೊಂಡರೂ ಅದು ಕಳ್ಳತನ ಅಂತ ಅವನಿಗೆ ಗೊತ್ತಿಲ್ಲ.. ನೆಲದ ಮೇಲೆ ಬಿದ್ದಿದ್ದು ತಗೊಂಡೆ, ಅದೆಂಥ ಕಳ್ತನ ಅನ್ನತಾನೆ. ಅವನದು ಸೀಳಿಕೊಂಡ ವ್ಯಕ್ತಿತ್ವ. ಗೊತ್ತಾ? ಪೂರ್ತಿ ಸೀಳಿಕೊಂಡವನೂ ಅಲ್ಲ, ಸೆಕ್ಟೇರಿಯನ್. ಅವರ ಮನೆತನದಲ್ಲಿ ರನರ್ಸ್ ಇದ್ದರು. ಇತ್ತೀಚೆಗಷ್ಟೇ ಅವನು ಪೂರಾ ಎರಡು ವರ್ಷ ಹಳ್ಳೀಲಿ ಕಳೆದು ಬಂದ.

ಯಾರೋ ಗುರುವಿನ ಜೊತೆಯಲ್ಲಿ ಇದ್ದು ಬಂದ. ಇದನ್ನೆಲ್ಲ ಮಿಕೋಲ್ಕನ ಬಾಯಲ್ಲಿ, ಝರೈಸಿಕ್ ಊರಿನ ಅವನ ಗೆಳೆಯರ ಬಾಯಲ್ಲಿ ಕೇಳಿದೇನೆ. ಮತ್ತೇನಂದರೆ, ಅವನು ಮರುಭೂಮಿಗೆ ಓಡಿಹೋಗಬೇಕು ಸಂನ್ಯಾಸಿ ಆಗಬೇಕು ಅಂದುಕೊಂಡಿದ್ದನಂತೆ! ಅವನು ಝೀಲಟ್. ರಾತ್ರಿ ಹೊತ್ತು ಪ್ರಾರ್ಥನೆ ಮಾಡತಾನೆ, ಓದೋದು ನಿಲ್ಲಿಸಕ್ಕೇ ಆಗಲ್ಲ ಅನ್ನೋ ಹಾಗೆ ಓದತಾನೇ ಇರತಾನೆ. ಹಳೆಯ ಗ್ರಂಥಗಳು, ‘ಸತ್ಯ’ದ ಪುಸ್ತಕಗಳು. ಪೀಟರ್ಸ್‌ಬರ್ಗ್‌ ಅವನ ಮೇಲೆ ಬಲವಾದ ಪರಿಣಾಮ ಬೀರಿದೆ. ಅದರಲ್ಲೂ ಹೆಂಗಸರು. ಮತ್ತೆ ಹೆಂಡ ಕೂಡ. ಕಂಡದ್ದೆಲ್ಲ ಅವನ ಮೇಲೆ ಪ್ರಭಾವ ಬೀರತ್ತೆ. ಇಲ್ಲಿಗೆ ಬಂದ ಮೇಲೆ ಹಳ್ಳಿ, ಹಳ್ಳಿಯಲ್ಲಿದ್ದ ಗುರು ಎಲ್ಲಾ ಮರೆತುಬಿಟ್ಟ. ಯಾರೋ ಕಲಾವಿದ ಇವನನ್ನ ಇಷ್ಟಪಟ್ಟನಂತೆ, ಇವನು ಆಗಾಗ ಹೋಗಿ ನೋಡತಿದ್ದನಂತೆ. ಆವಾಗ ಈ ಕೊಲೆ ನಡೆಯಿತು! ಭಯಬಿದ್ದ, ನೇಣು ಹಾಕ್ಕೊಳ್ಳಕೆ ನೋಡಿದ, ಓಡಿ ಹೋಗಬೇಕು ಅಂದುಕೊಂಡ. ನಮ್ಮ ಕಾನೂನು, ನಮ್ಮ ನ್ಯಾಯದ ಬಗ್ಗೆ ಜನಕ್ಕೆ ಏನೇನೋ ಐಡಿಯ ಇದೆ, ನಾವೇನು ಮಾಡಕ್ಕಾಗತ್ತೆ? ಕೆಲವರಿಗೆ ಕಾನೂನು ಅಂದರೇನೇ ಭಯ, ಯಾರ ತಪ್ಪು? ಹೊಸ ಕೋರ್ಟುಗಳಿಂದ ಪರಿಸ್ಥಿತಿ ಬದಲಾಗಬಹುದು, ನೋಡಣ. ದೇವರೇ ಹಾಗಾಗಲಪ್ಪಾ! ಸರಿ, ಸಾರ್. ಒಂದು ಸಾರಿ ಜೈಲಿಗೆ ಬಂದಮೇಲೆ ಅವನು ಗುರುವನ್ನ ಜ್ಞಾಪಿಸಿಕೊಂಡ ಬೈಬಲು ಕೂಡ ನೆನಪಾಯಿತು. ನೋವುಪಡುವುದು, ಸಫರಿಂಗ್ ಅಂದರೆ ಇವರ ಮಟ್ಟಿಗೆ ಏನು ಅರ್ಥ ಗೊತ್ತ ರೋಡಿಯಾನ್ ರೊಮಾನೊವಿಚ್? ಇನ್ನಾರಿಗಾಗಿಯೋ ಅಲ್ಲ, ಸುಮ್ಮನೆ ನೋವುಪಡುವುದು, ನೋವನ್ನ ಅಪ್ಪಿಕೊಳ್ಳುವುದು ಮುಖ್ಯ. ಅದರಲ್ಲೂ ಅಧಿಕಾರಿಗಳಿಂದ ಉಂಟಾಗುವ ನೋವು.

ಆ ಹೊತ್ತಿನಲ್ಲಿ ಆ ದರಿದ್ರ ವ್ಯಾಪಾರಿ ನಮ್ಮ ರೂಮಿನ ಅಡ್ಡಗೋಡೆಯ ಹಿಂದೇನೇ ಕೂತಿದ್ದ. ಗೊತ್ತಾ ನಿಮಗೆ? ಆಗಲೇ ನಿಮಗೆ ಗೊತ್ತಾಗಿರತ್ತೆ, ಬಿಡಿ. ಅವನು ಆಮೇಲೆ ನಿಮ್ಮನ್ನ ನೋಡಕ್ಕೆ ಬಂದಿದ್ದ ಅಂತ ನನಗೆ ವರ್ತಮಾನ ಬಂತು.

ನಾನೊಬ್ಬ ಖೈದಿಯನ್ನ ನೋಡಿದ್ದೆ. ಅವನು ಅತ್ಯಂತ ವಿನಯವಂತ ಖೈದಿ. ಒಂದು ವರ್ಷ ಕಾಲ ಅವನು ಒಲೆಗೂಡಿನ ಬಿಸಿಯಾದ ಗೋಡೆಯ ಮೇಲೆ ಕೂತು ಬೈಬಲ್ ಓದಿದ್ದ. ಎಷ್ಟೊಂದು ಓದಿದ ಅಂದರೆ ಗೋಡೆಯ ಇಟ್ಟಿಗೆ ಕಿತ್ತುಕೊಂಡು ಗೌರ್ನರನ ಮೇಲೆ ಎಸೆದ. ಅವನೇನೂ ತಪ್ಪೇ ಮಾಡಿರದಿದ್ದರೂ. ಹೇಗೆ ಎಸೆದ? ಗೌರ್ನರನಿಗೆ ಏಟು ಬೀಳದ ಹಾಗೆ ಬೇಕಂತಲೇ ಒಂದು ಗಜ ಪಕ್ಕಕ್ಕೆ ಗುರಿ ಇಟ್ಟು ಎಸೆದ. ಅಧಿಕಾರಿಗಳ ಮೇಲೆ ದಾಳಿ ಮಾಡಿದರೆ ಏನಾಗುತ್ತದೆಂದು ಎಲ್ಲರಿಗೂ ಗೊತ್ತು. ಹೀಗೆ ಅವನು ನೋವನ್ನು ಅಪ್ಪಿಕೊಂಡ. ಈಗ ಈ ಮಿಕೋಲ್ಕ ಕೂಡ ‘ನೋವನ್ನು ಅಪ್ಪಿಕೊಳ್ಳಲು’ ಕಾತರ ಪಡುತ್ತಿದ್ದಾನೆ ಅನಿಸತ್ತೆ. ನನಗೆ ಖಚಿತವಾಗಿ ಗೊತ್ತು, ಮತ್ತೆ ಪುರಾವೆಗಳೂ ಇವೆ, ಸಾರ್. ನನಗೆ ಗೊತ್ತಿದೆ ಅಂತ ಅವನಿಗೆ ಗೊತ್ತಿಲ್ಲ, ಅಷ್ಟೆ. ನಮ್ಮ ದೇಶದಲ್ಲಿ ಎಂತೆಂಥಾ ಅದ್ಭುತ ಜನ ಇದಾರೆ, ಎಲ್ಲೆಲ್ಲೂ ಸಿಗತಾರೆ, ಅಲ್ಲವಾ? ಮಿಕೋಲ್ಕಾ ನೇಣು ಹಾಕಿಕೊಳ್ಳದಕ್ಕೆ ಪ್ರಯತ್ನಪಟ್ಟಾಗಿನಿಂದ ಹಿರಿಯ ಗುರಿವನ ಪ್ರಭಾವ ಕೆಲಸ ಮಾಡತಿದೆ ಅವನ ಮೇಲೆ. ಅವನೇ ಬಂದು ನನ್ನ ಹತ್ತಿರ ಎಲ್ಲಾ ಹೇಳಿಕೊಳ್ಳತಾನೆ. ಅವನು ಪಟ್ಟು ಹಿಡೀತಾನೆ ಅಂದುಕೊಂಡಿದೀರಾ? ತಾಳಿ, ಅವನು ಹೇಳಿದ್ದನ್ನೆಲ್ಲ ಅಲ್ಲ ಅನ್ನತಾನೆ. ಅವನು ಯಾವ ಕ್ಷಣದಲ್ಲಾದರೂ ಬರಬಹುದು, ತನ್ನ ಸಾಕ್ಷಿಯನ್ನ ಸುಳ್ಳು ಅನ್ನಬಹುದು. ಈ ಮಿಕೋಲ್ಕ ಮೇಲೆ ನನಗೆ ಬಹಳ ಪ್ರೀತಿ ಹುಟ್ಟಿದೆ, ಅವನನ್ನ ಗಮನಿಸತಾ ಇದೇನೆ, ಗೊತ್ತಾ, ಹ್ಹೆಹ್ಹೆಹ್ಹೇ! ಕೆಲವು ಪ್ರಶ್ನೆಗೆ ಅಚ್ಚುಕಟ್ಟಾಗಿ ಉತ್ತರ ಕೊಟ್ಟ, ಆ ಪ್ರಶ್ನೆಗೆ ಸಂಬಂಧಪಟ್ಟ ಮಾಹಿತಿ ಕೂಡಿಟ್ಟುಕೊಂಡಿದಾನೆ. ಜಾಣತನದಿಂದ ಸಿದ್ಧವಾಗಿದಾನೆ. ಇನ್ನು ಕೆಲವು ಪ್ರಶ್ನೆಯ ತಲೆಬುಡವೇ ಅರ್ಥವಾಗದೆ, ತನಗೆ ಗೊತ್ತಿಲ್ಲ ಅನ್ನುವುದೂ ಕೂಡ ಗೊತ್ತಿಲ್ಲ ಅನ್ನುವ ಹಾಗೆ ಇರತಾನೆ.

ಇಲ್ಲ, ರೋಡಿಯಾನ್ ರೊಮಾನೊವಿಚ್, ಮಿಕೋಲ್ಕಾ ನಮಗೆ ಬೇಕಾದ ಆಸಾಮಿ ಅಲ್ಲ! ಇದು ಅದ್ಭುತವಾದ ಕೇಸು, ಈಗಿನ ಕಾಲದ ಕೇಸು, ಮನುಷ್ಯರ ಮನಸಿನಲ್ಲಿ ಕತ್ತಲು ತುಂಬಿಕೊಂಡಿರುವ ಈ ಕಾಲದ ಕೇಸು. ಮನುಷ್ಯರು ಸುಖಕ್ಕೇ ತೆತ್ತುಕೊಂಡಿರುವ ಈ ಕಾಲದ ಕೇಸು. ಈ ಕೊಲೆಯಲ್ಲಿ ಪುಸ್ತಕ ಓದಿ ಓದಿ ಕಟ್ಟಿಕೊಂಡ ಕನಸು ಇವೆ, ತತ್ವ ಸಿದ್ಧಾಂತಗಳಿಂದ ಘಾಸಿಗೊಂಡ ಹೃದಯವಿದೆ, ಕೊಲೆಗಾರ ಏನೋ ನಿರ್ಧಾರ ಮಾಡಿದಾನೆ—ಗಡಿಯಾರ ಗೋಪುರದಿಂದಲೋ ಬೆಟ್ಟದ ತುದಿಯಿಂದಲೋ ಧುಮುಕಬೇಕು ಅನ್ನುವಂಥ ನಿರ್ಧಾರ. ಆ ನಿರ್ಧಾರದ ಮೊದಲ ಹೆಜ್ಜೆ ಅನ್ನುವ ಹಾಗೆ ಈ ಕೊಲೆ ನಡೆದಿದೆ. ಕೊಲೆಗೆ ಅವನು ಬಂದು ಮುಟ್ಟಿದ್ದು ಹೇಗೆ ಅನ್ನುವುದು ಅವನಿಗೇ ಗೊತ್ತಿಲ್ಲ. ಬೇರೆ ಯಾವುದೋ ಕಾಲು ಅವನನ್ನ ಕೊಲೆಯವರೆಗೆ ನಡೆಸಿಕೊಂಡು ಬಂದಿವೆ. ಮನೆಯೊಳಕ್ಕೆ ಹೋದವನು ಬಾಗಿಲು ಮುಚ್ಚಿಕೊಳ್ಳುವುದು ಮರೆತಿದ್ದಾನೆ. ಇಬ್ಬರನ್ನ ಕೊಂದಿದ್ದಾನೆ—ತನ್ನ ಸಿದ್ಧಾಂತಕ್ಕಾಗಿ. ಕೊಲೆ ಮಾಡಿದ, ದುಡ್ಡು ತಗೊಂಡು ಹೋಗುವುದಕ್ಕೆ ಆಗಲಿಲ್ಲ. ಕೊನೆಗೂ ಒಂದಿಷ್ಟು ಗೆಬರಿಕೊಂಡ, ಅದನ್ನೆಲ್ಲ ತಗೊಂಡು ಹೋಗಿ ಕಲ್ಲಿನ ಕೆಳಗೆ ಬಚ್ಚಿಟ್ಟ. ಯಾರೋ ಬಾಗಿಲು ತಟ್ಟತಾ ಇದ್ದಾಗ ಬಾಗಿಲ ಹಿಂದೆ ನಿಂತು ಹಿಂಸೆ ಅನುಭವಿಸಿದ್ದು ಸಾಕಾಗಲಿಲ್ಲ ಅವನಿಗೆ. ಮತ್ತೆ ಅದೇ ಖಾಲಿ ಮನೆಗೆ ಹೋದ—ಅರ್ಧ ಸನ್ನಿ ಹಿಡಿದ ಸ್ಥಿತಿಯಲ್ಲಿ. ಅವತ್ತು ಕೊಲೆಮಾಡಿದಾಗ ಕೇಳಿದ ಪುಟ್ಟ ಗಂಟೆಯ ಸದ್ದು, ಆ ಮೈ ಥಣ್ಣಗಾದ ಅನುಭವ ಮತ್ತೆ ಆಗಬೇಕು ಅಂತ. ಇರಲಿ, ಅವನಿಗೆ ಆಗ ಹುಷಾರಿರಲಿಲ್ಲ ಅಂತ ಇಟ್ಟುಕೊಳ್ಳೋಣ. ಇನ್ನೊಂದು ವಿಷಯ ಇದೆ. ಅವನು ಕೊಲೆ ಮಾಡಿದ, ಆದರೆ ತಾನು ಪ್ರಾಮಾಣಿಕ ಅಂತಲೇ ತಿಳಿದಿದಾನೆ, ಜನರನ್ನ ತಿರಸ್ಕಾರ ಮಾಡತಾನೆ ದುಃಖದಲ್ಲಿರುವ ದೇವತೆಯ ಹಾಗೆ ಊರೆಲ್ಲ ಸುತ್ತುತಾನೆ—ಇಲ್ಲ, ಮಿಕೋಲ್ಕಾನ ಮರೆತುಬಿಡಿ, ರೊಡಿಯೋನ್ ರೊಮಾನೊವಿಚ್. ಮಿಕೋಲ್ಕಾಗೂ ಇದಕ್ಕೂ ಸಂಬಂಧ ಇಲ್ಲ!’

ನಿರಾಕರಣೆಯ ಹಾಗೆ ಕೇಳಿಸುತ್ತಿದ್ದ ಮೊದಲು ಹೇಳಿದ ಮಾತುಗಳಾದ ಮೇಲೆ ಈ ಕೊನೆಯ ನುಡಿಗಳು ತೀರ ತೀರ ಅನಿರೀಕ್ಷಿತವಾಗಿದ್ದವು. ರಾಸ್ಕೋಲ್ನಿಕೋವ್ ನಡುಗಿದ… ಯಾರೋ ಇರಿದ ಹಾಗೆ….

‘ಹಾಗಾದರೆ… ಯಾರು… ಕೊಂದಿದ್ದು ಅವರನ್ನ?’ ತಡೆಯಲಾರದೆ, ಉಸಿರು ಕಟ್ಟಿದ ದನಿಯಲ್ಲಿ ಕೇಳಿದ.
ಇಂಥ ಅನಿರೀಕ್ಷಿತ ಪ್ರಶ್ನೆ ಕೇಳಿ ಆಶ್ಚರ್ಯವಾಯಿತು ಅನ್ನುವ ಹಾಗೆ ಪೋರ್ಫಿರಿ ಕೂತಿದ್ದ ಕುರ್ಚಿಯಲ್ಲೇ ಹಿಂದಕ್ಕೆ ಚಿಮ್ಮಿದ.

‘ಏನು? ಯಾರು ಕೊಂದರು ಅವರನ್ನ?’ ತನ್ನ ಕಿವಿ ತಾನೇ ನಂಬಲಿಲ್ಲ ಅನ್ನುವ ಹಾಗೆ ಕೇಳಿದ ‘ನೀವೇ ರೋಡಿಯಾನ್ ರೊಮಾನೊವಿಚ್! ನೀವೇ ಅವರನ್ನ ಕೊಂದಿರಿ, ಸಾರ್…’ ಪಿಸುದನಿಯಂಥ ದನಿಯಲ್ಲಿ ಸಂಪೂರ್ಣ ವಿಶ್ವಾಸದಲ್ಲಿ ಹೇಳಿದ.
ರಾಸ್ಕೋಲ್ನಿಕೋವ್ ಥಟ್ಟನೆದ್ದು ನಿಂತ. ಕೆಲವು ಕ್ಷಣ ನಿಂತೇ ಇದ್ದ. ಒಂದೂ ಮಾತಾಡದೆ ಮತ್ತೆ ಕೂತ.. ಮೈಯೆಲ್ಲ ಸೆಳೆತದ ಹಾಗೆ. ದುಃಖದ ಉದ್ರೇಕದ ಅಲೆಗಳು ಮುಖದ ಮೇಲೆ ಹಾದು ಹೋದವು.

‘ನಿಮ್ಮ ತುಟಿ ಅದುರುತಾ ಇದೆ, ಆವತ್ತಿನ ಹಾಗೇ,’ ಪೋರ್ಫಿರಿ ಗೊಣಗಿದ, ಸಹಾನುಭೂತಿ ತೋರಿಸುವವನಂತೆ. ‘ನೀವು ನನ್ನ ಮಾತನ್ನ ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ, ಅನಿಸತ್ತೆ,’ ಅಂದು ಸ್ವಲ್ಪ ಹೊತ್ತು ಸುಮ್ಮನಿದ್ದ. ‘ಅದಕ್ಕೇ ನಿಮಗೆ ಆಶ್ಚರ್ಯ ಆಗಿದೆ, ಈ ಸಾರಿ ಎಲ್ಲಾನೂ ಹೇಳಿಬಿಡಬೇಕು, ಎಲ್ಲಾನೂ ಬಯಲಾಗಬೇಕು ಅನ್ನುವ ಸ್ಪಷ್ಟ ಉದ್ದೇಶ ಇಟ್ಟುಕೊಂಡೇ ಬಂದೆ.’

‘ನಾನಲ್ಲ, ಮಾಡಿದ್ದು,’ ರಾಸ್ಕೋಲ್ನಿಕೋವ್ ಪಿಸುಗುಟ್ಟಿದ. ತಪ್ಪು ಮಾಡುವಾಗ ಸಿಕ್ಕಿಬಿದ್ದ ಮಕ್ಕಳು ಬೆದರಿ ಪಿಸುಗುಡುವ ಹಾಗೆ.

‘ಇಲ್ಲ, ನೀವೇ ಮಾಡಿದ್ದು, ರೋಡಿಯಾನ್ ರೊಮಾನೊವಿಚ್, ನೀವೇ. ನೀವಲ್ಲದೆ ಬೇರೆ ಯಾರೂ ಅಲ್ಲ,’ ಪೋರ್ಫಿರಿ ಕಠಿಣವಾದ ದನಿಯಲ್ಲಿ, ದೃಢವಾಗಿ ಹೇಳಿದ.

ಇಬ್ಬರೂ ಮೌನವಾದರು. ಆ ಮೌನ ವಿಚಿತ್ರ ಅನಿಸುವಷ್ಟು ದೀರ್ಘ ಕಾಲ, ಸುಮಾರು ಹತ್ತು ನಿಮಿಷ, ಹಾಗೇ ಇತ್ತು.
ರಾಸ್ಕೋಲ್ನಿಕೋವ್ ಮೊಳಕೈಗಳನ್ನು ಮೇಜಿನ ಮೇಲೆ ಊರಿದ. ಮಾತಿಲ್ಲದೆ ಬೆರಳುಗಳನ್ನು ತಲೆಗೂದಲಲ್ಲಿ ಆಡಿಸಿದ. ಪೋರ್ಫಿರಿ ಸುಮ್ಮನೆ ಕೂತಿದ್ದ, ಕಾಯುತ್ತಿದ್ದ. ರಾಸ್ಕೋಲ್ನಿಕೋವ್ ಇದ್ದಕಿದ್ದ ಹಾಗೆ ಪೋರ್ಫಿರಿಯನ್ನು ತಿರಸ್ಕಾರದಿಂದ ನೋಡಿದ.

‘ನೀವು ಹಳೇ ಟ್ರಿಕ್ಕುಗಳನ್ನೇ ಮಾಡತಾ ಇದೀರಿ, ಪೋರ್ಫಿರಿ ಪೆಟ್ರೊವಿಚ್! ಅದೇ ಮೆಥಡ್ಡುಗಳಿಗೇ ಅಂಟಿಕೊಂಡಿದೀರಿ.. ಬೇಜಾರಾಗಿಲ್ಲವಾ ನಿಜವಾಗಲೂ ನಿಮಗೆ?’

‘ಹ್ಞಾ! ಕಮಾನ್, ಮೆಥೆಡ್ಡು ಕಟ್ಟಿಕೊಂಡು ನನಗೇನಾಗಬೇಕು ಈಗ! ಇಲ್ಲಿ ಯಾರಾದರೂ ಸಾಕ್ಷಿಗಳಿದ್ದಿದ್ದರೆ ಅದು ಬೇರೆಯ ಮಾತು. ನಾವಿಬ್ಬರೇ ಇದ್ದೇವೆ, ಪಿಸುದನಿಯಲ್ಲಿ ಮಾತಾಡತಿದೇವೆ! ಮೊಲದ ಹಾಗೆ ನಿಮ್ಮನ್ನ ಬೇಟೆ ಆಡಿ ಹಿಡಿಯುವುದಕ್ಕೆ ಬರಲಿಲ್ಲ. ನೀವು ತಪ್ಪು ಒಪ್ಪಿಕೊಳ್ಳತೀರೋ ಬಿಡತೀರೋ, ಎರಡೂ ಒಂದೇ ನನಗೀಗ. ನನ್ನ ಮನಸಿನಲ್ಲಿ ನನಗೆ ದೃಢವಾಗಿದೆ, ಅಷ್ಟು ಸಾಕು.’

‘ಹಾಗಿದ್ದರೆ ಬಂದಿದ್ದು ಯಾಕೆ?’ ರಾಸ್ಕೋಲ್ನಿಕೋವ್ ಕೆರಳಿ ಕೇಳಿದ. ‘ಹಳೆಯ ಪ್ರಶ್ನೆಯನ್ನೇ ಮತ್ತೆ ಕೇಳತೇನೆ—ನಾನು ಅಪರಾಧಿಯಾಗಿದ್ದರೆ ನನ್ನನ್ನ ಯಾಕೆ ಜೈಲಿಗೆ ಹಾಕತಾ ಇಲ್ಲ?’

‘ಎಂಥಾ ಪ್ರಶ್ನೆ! ಒಂದೊಂದು ಪಾಯಿಂಟಿಗೂ ಉತ್ತರ ಹೇಳತೇನೆ. ಈಗ ನಿಮ್ಮನ್ನ ಸೀದಾ ಜೈಲಿಗೆ ಕಳಿಸಿದರೆ ನನಗೆ ಅದರಿಂದ ಲಾಭವಿಲ್ಲ.’

‘ಅದು ಹೇಗೆ! ನಿಮ್ಮ ಮನಸಿಗೆ ದೃಢವಾಗಿದ್ದರೆ, ನೀವು ನನ್ನನ್ನ ಜೈಲಿಗೆ ಕಳಿಸಲೇಬೇಕಾಗಿತ್ತು…’

‘ನನ್ನ ಮನಸಿಗೆ ದೃಢವಾಗಿದ್ದರೆ ಏನು? ಇವೆಲ್ಲಾ ಇನ್ನೂ ಬರೀ ಕನಸು, ಸಾರ್. ಅಲ್ಲದೆ ನಿಮ್ಮನ್ನ ಜೈಲಿಗೆ ಹಾಕಿ ವಿಶ್ರಾಂತಿ ಸಿಗುವ ಹಾಗೆ ಮಾಡಿದರೆ ಏನು ಬಂತು? ಜೈಲಿನಲ್ಲಿ ಮನಸಿಗೆ ಶಾಂತಿ ಇರತ್ತೆ ಅಂತ ನಿಮಗೆ ಗೊತ್ತು, ಅದಕ್ಕೇ ಬಲವಂತ ಮಾಡತಿದೀರಿ. ಉದಾಹರಣೆಗೆ ಆ ವ್ಯಾಪಾರಿಯನ್ನ ಕರಕೊಂಡು ಬಂದು ನಿಮ್ಮ ವಿರುದ್ಧ ಸಾಕ್ಷಿ ಹೇಳಿಸಿದೆ ಅಂತಿಟ್ಟುಕೊಳ್ಳಿ. ಆಗ ನೀವು ಅವನಿಗೆ, ‘ಏನು ಕುಡಿದಿದ್ದೀಯಾ ಹೇಗೆ? ನಿನ್ನ ಜೊತೆಯಲ್ಲಿ ನಾನು ಇರುವುದನ್ನು ನೋಡಿದವರು ಯಾರು? ನಾನು ನಿನ್ನನ್ನ ಯಾರೋ ಕುಡುಕ ಅಂದುಕೊಂಡೆ, ನಿಜವಾಗಲೂ ಆಗ ಕುಡಿದಿದ್ದೆ ನೀನು,’ ಅನ್ನತೀರಿ. ಅದಕ್ಕೆ ನಾನೇನು ಉತ್ತರ ಹೇಳಲಿ? ಯಾಕೆಂದರೆ ನಿಮ್ಮ ಕಥೆ ಹೆಚ್ಚು ನಂಬುವ ಹಾಗೆ ಇರತ್ತೆ. ಅವನದು ಬರೀ ಸೈಕಾಲಜಿ. ಅವನಂಥವರಿಗೆ ಅದು ಒಗ್ಗಲ್ಲ. ನಿಮ್ಮ ಮಾತು ಸತ್ಯ ಅನಿಸುತ್ತೆ. ಯಾಕೆಂದರೆ ಅವನು ಸಿಕ್ಕಾಪಟ್ಟೆ ಕುಡೀತಾನೆ. ಅದು ಎಲ್ಲಾರಿಗೂ ಗೊತ್ತಿದೆ. ಮತ್ತೆ ನಾನೇ ಒಪ್ಪಿಕೊಂಡಿರುವ ಹಾಗೆ ಸೈಕಾಲಜಿ ಅನ್ನುವುದು ಎರಡು ಅಲಗಿನ ಕತ್ತಿ. ನಿಮ್ಮ ಕಡೆಗೆ ಇರುವ ಅಲುಗು ದೊಡ್ಡದಾಗಿದೆ, ನಂಬಿಕೆ ಹುಟ್ಟಿಸುವ ಹಾಗಿದೆ. ಇಲ್ಲಿಯವರೆಗೂ ನಿಮ್ಮ ವಿರುದ್ಧವಾದ ಪುರಾವೆ ಏನೂ ಇಲ್ಲ ನನ್ನ ಕೈಯಲ್ಲಿ. ಹಾಗಾದರೂ, ಮಾಮೂಲಿ ವಿಧಾನ ಕೈ ಬಿಟ್ಟು ನಿಮ್ಮನ್ನ ಜೈಲಿಗೆ ಹಾಕತೇನೆ, ಎಲ್ಲವನ್ನೂ ನಿಮಗೆ ಮೊದಲೇ ನೇರವಾಗಿ ಹೇಳುವುದಕ್ಕೆ ಅದಕ್ಕಾಗಿ ನಾನೇ ಬಂದಿದೇನೆ, (ಇದೂ ಮಾಮೂಲಿ ವಿಧಾನ ಅಲ್ಲ) ಅಲ್ಲದೆ ನಿಮ್ಮನ ಜೈಲಿಗೆ ಹಾಕುವುದು ನನಗೆ ಲಾಭವಿಲ್ಲದ್ದು ಎರಡನೆಯದಾಗಿ ನಾನು ಬಂದಿದ್ದು ಯಾಕೆಂದರೆ…’

‘ಹ್ಞಾಂ, ಹೌದು, ಎರಡನೆಯದಾಗಿ… ಹೇಳಿ…’ ಅನ್ನುವಾಗ ರಾಸ್ಕೋಲ್ನಿಕೋವ್‌ಗೆ ಇನ್ನೂ ಉಸಿರು ಕಟ್ಟಿತ್ತು.

‘ಯಾಕೆಂದರೆ, ನಾನು ಆಗಲೇ ಹೇಳಿದ ಹಾಗೆ, ನಾನು ನಿಮಗೆ ವಿವರಣೆ ನೀಡಬೇಕಾದ ಹೊಣೆ ಇದೆ. ನೀವು ನನ್ನನ್ನ ರಾಕ್ಷಸ ಅಂದುಕೊಳ್ಳುವುದು ಇಷ್ಟವಿಲ್ಲ. ನೀವು ನಂಬಿ, ಬಿಡಿ- ನಿಮ್ಮ, ಬಗ್ಗೆ ನನಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ. ಮೂರನೆಯ ಕಾರಣವೆಂದರೆ, ನಾನು ನಿಮಗೆ ಮುಕ್ತವಾದ ನೇರವಾದ ಒಂದು ಅವಕಾಶ ಕೊಡುತಿದ್ದೇನೆ—ನೀವೇ ಬಂದು ನಿಮ್ಮ ತಪ್ಪು ಒಪ್ಪಿಕೊಳ್ಳಿ. ಅದರಿಂದ ನಿಮಗೆ ಅಪಾರವಾದ ಅನುಕೂಲವಿದೆ. ನನಗೂ ಅನುಕೂಲವಿದೆ. ಏನೆಂದರೆ ಈ ವಿಚಾರಣೆ ನನ್ನ ಬೆನ್ನು ಬಿಟ್ಟು ಇಳಿಯತ್ತೆ. ಈಗ ಹೇಳಿ, ನಾನು ಪ್ರಾಮಾಣಿಕನಾಗಿದ್ದೇನೋ ಇಲ್ಲವೋ?’

ರಾಸ್ಕೋಲ್ನಿಕೋವ್ ಒಂದು ನಿಮಿಷ ಯೋಚನೆ ಮಾಡಿದ.

‘ಪೋರ್ಫಿರಿ ಪೆಟ್ರೊವಿಚ್, ಕೇಳಿ ಇಲ್ಲಿ. ನೀವೇ ಹೇಳಿದಿರಿ, ಎಲ್ಲಾ ಸೈಕಾಲಜಿ ಅಂತ, ಈಗ ಒಂದು, ಎರಡು ಅಂತ ಗಣಿತ ಮಾಡತಿದ್ದೀರಿ. ಈಗ ನೀವು ನಿಜವಾಗಲೂ ತಪ್ಪುತಿಳಿದಿದ್ದರೆ?ʼ

‘ಇಲ್ಲ, ರೋಡಿಯೋನ್ ರೊಮಾನೊವಿಚ್, ನಾನು ತಪ್ಪು ತಿಳಿದಿಲ್ಲ. ನನಗೆ ಸಣ್ಣ ಸುಳಿವು ಸಿಕ್ಕಿದೆ. ದೇವರೇ ಆ ಸುಳಿವು ಸಿಗುವ ಹಾಗೆ ಮಾಡಿದ.’

‘ಯಾವ ಸುಳಿವು?’

‘ಹೇಳಲ್ಲ, ರೋಡಿಯಾನ್ ರೊಮಾನ್ಯಿಚ್. ಅದೆಲ್ಲ ಇರಲಿ, ಇನ್ನೂ ತಡಮಾಡುವುದಕ್ಕೆ ನನಗೆ ಹಕ್ಕಿಲ್ಲ. ನಾನು ನಿಮ್ಮನ್ನ ಸೆರೆಗೆ ಹಾಕುತ್ತೇನೆ. ಯೋಚನೆ ಮಾಡಿ ನೋಡಿ, ನನಗೆ ಈಗ ಎಲ್ಲವೂ ಒಂದೆ. ನಿಮಗಾಗಿ ಹಳೇತಾ ಇದೇನೆ ಯೋಚನೆ ಮಾಡಿ, ರೋಡಿಯಾನ್ ರೊಮಾನೊವಿಚ್.’

ರಾಸ್ಕೋಲ್ನಿಕೋವ್ ತಿರಸ್ಕಾರದ ನಗು ನಕ್ಕ.

‘ಇದು ಹಾಸ್ಯಾಸ್ಪದ. ಅಷ್ಟೇ ಅಲ್ಲ, ನಾಚಿಕೆಗೇಡು. ನಾನು ಒಂದುವೇಳೆ ತಪ್ಪು ಮಾಡಿದ್ದರೆ (ಮಾಡಿದ್ದೀನಿ ಅಂಥ ಹೇಳತಾ ಇಲ್ಲ, ಗಮನಿಸಿ-‘ಮಾಡಿದ್ದರೆ’,) ನಾನೇ ಯಾಕೆ ಬಂದು ತಪ್ಪು ಒಪ್ಪಿಕೊಳ್ಳಬೇಕು? ಏನು ಸಿಗತ್ತೆ? ಅದರಲ್ಲೂ ನನಗೆ ಅಲ್ಲಿ ಶಾಂತಿ ಸಿಗತ್ತೆ ಅಂತ ನೀವೇ ಹೇಳತಿರುವಾಗ?’

‘ಹ್ಙಾ, ರೋಡಿಯಾನ್ ರೊಮಾನೊವಿಚ್, ಪದಗಳನ್ನ ಪೂರಾ ನಂಬಬೇಡಿ. ಬರೀ ಶಾಂತಿಯೇ ಇರಲ್ಲ ಜೈಲಿನಲ್ಲಿ! ಅದು ಬರಿಯ ಥಿಯರಿ. ನನಗೇನು ಅಧಿಕಾರ ಇದೆ? ಈಗಲೂ ಕೆಲವು ವಿಚಾರ ನಿಮ್ಮಿಂದ ಮುಚ್ಚಿಟ್ಟಿರಬಹುದು. ನಾನು ಯಾಕೆ ಬಂದು ಎಲ್ಲಾನೂ ನಿಮಗೆ ಹೇಳಲಿ? ಹ್ಹೆಹ್ಹೇ! ಇನ್ನೊಂದು ಮಾತು—ಏನು ಸಿಗತ್ತೆ ಅಂದರೆ ಏನರ್ಥ? ಅದರಿಂದ ನಿಮ್ಮ ಶಿಕ್ಷೆ ಯಾವ ಪ್ರಮಾಣದಲ್ಲಿ ಕಡಮೆ ಆಗುತ್ತದೆ, ಗೊತ್ತಾ? ಅದಲ್ಲದೆ ಎಂಥ ಹೊತ್ತಿನಲ್ಲಿ ನೀನು ಬಂದು ತಪ್ಪು ಒಪ್ಪಿಕೊಳ್ಳತ ಇದೀಯ ಅದನ್ನ ಯೋಚನೆ ಮಾಡು!
ಯಾವನೋ ಒಬ್ಬ ಬಂದು ನಾನೇ ಅಪರಾಧ ಮಾಡಿದೇನೆ ಅಂತ ಹೇಳಿ ಇಡೀ ಕೇಸನ್ನ ಗೊಂದಲಕ್ಕೆ ಸಿಕ್ಕಿಸಿದ್ದಾನೆ! ದೇವರಾಣೆ ಮಾಡಿ ಹೇಳತೇನೆ, ನಾನು ಎಲ್ಲಾ ವ್ಯವಸ್ಥೆ ಮಾಡತೇನೆ. ನಿಮ್ಮ ತಪ್ಪೊಪ್ಪಿಗೆ ತೀರ ಅನಿರೀಕ್ಷಿತವಾಗಿ ಬಂದದ್ದು ಅಂತ ಕಾಣುವ ಹಾಗೆ ಮಾಡತೇನೆ. ಈ ಎಲ್ಲ ಸೈಕಾಲಜಿ ಬಿಟ್ಟಾಕಣ. ನಿಮ್ಮ ಮೇಲೆ ಇರುವ ಅನುಮಾನಗಳನ್ನೆಲ್ಲ ಮರೆತುಬಿಡತೇನೆ. ನಿಮ್ಮ ಅಪರಾಧವು ಪ್ರಜ್ಞೆಗೆ ಕತ್ತಲು ಕವಿದಿದ್ದಾಗ ನಡೆದ ಸಂಗತಿ ಎಂದು ಕಾಣುವ ಹಾಗೆ ಮಾಡತೇನೆ. ನಿಜವಾಗಲೂ ಆಗ ನಿಮ್ಮ ಪ್ರಜ್ಞೆಯನ್ನು ಕತ್ತಲೆ ಆವರಿಸಿತ್ತು. ನಾನು ಪ್ರಾಮಾಣಿಕ, ರೋಡಿಯಾನ್ ರೊಮಾನೊವಿಚ್. ನನ್ನ ಮಾತು ಉಳಿಸಿಕೊಳ್ಳತೇನೆ.’

ರಾಸ್ಕೋಲ್ನಿಕೋವ್ ದುಃಖ ತುಂಬಿದ ಮೌನಕ್ಕೆ ಜಾರಿದ. ಅವನ ತಲೆ ಬಾಗಿತು. ಬಹಳ ಹೊತ್ತು ಯೋಚನೆ ಮಾಡಿದ. ಕೊನೆಗೆ ಮತ್ತೆ ಹಲ್ಲು ಕಿರಿದ. ಈ ನಗು ದುರ್ಬಲವಾಗಿತ್ತು, ದುಃಖ ತುಂಬಿಕೊಂಡಿತ್ತು.

‘ಹ್ಞಾ? ಬೇಡ!’ ಪೋರ್ಫಿರಿಯ ಜೊತೆಗೆ ಆಟ ಕಟ್ಟುವುದನ್ನು ಪೂರಾ ಬಿಟ್ಟವನ ಹಾಗೆ ಹೇಳಿದ. ‘ಅಷ್ಟೊಂದೆಲ್ಲ ಬೇಕಾಗಿಲ್ಲ. ನನ್ನ ಶಿಕ್ಷೆ ಕಡಮೆಯಾಗುವುದು ಬೇಕಾಗಿಲ್ಲ! ಬೇಡ!’

‘ನನಗೂ ಅದೇ ಭಯ ಇತ್ತು, ಶಿಕ್ಷೆ ಕಡಿಮೆ ಮಾಡಿಸಿಕೊಳ್ಳುವುದಕ್ಕೆ ನೀನು ಒಪ್ಪಲ್ಲ ಅಂತ!’ ರೇಗಿ, ತಟ್ಟನೆ ಅಂದ ಪೋರ್ಫಿರಿ.
ದುಃಖ ತುಂಬಿಕೊಂಡು ಗಂಭೀರವಾಗಿ ನೋಡಿದ ರಾಸ್ಕೋಲ್ನಿಕೋವ್.

‘ಬದುಕನ್ನ ತಿರಸ್ಕಾರ ಮಾಡಬೇಡ! ನಿನ್ನ ಮುಂದೆ ಇನ್ನೂ ಬೇಕಾದಷ್ಟಿದೆ. ಶಿಕ್ಷೆ ಕಡಿಮೆಯಾಗುವುದು ಬೇಡ ಅಂತ ಹೇಗೆ ಹೇಳುತ್ತೀ? ಎಷ್ಟೊಂದು ಆತುರದ ಮನುಷ್ಯ!’ ಚಿಕ್ಕ ಹುಡುಗನಿಗೆ ಬುದ್ಧಿ ಹೇಳುವ ಹಿರಿಯನ ಹಾಗೆ ಮಾತಾಡಿದ ಪೋರ್ಫಿರಿ.

‘ನನ್ನ ಮುಂದೆ ಎಷ್ಟೊಂದು ಏನಿದೆ?’

‘ಬದುಕು! ಏನು ನೀನು ಪ್ರವಾದಿಯೋ? ಭವಿಷ್ಯ ನಿನಗೆಷ್ಟು ಗೊತ್ತು, ಏನು ಗೊತ್ತು? ಹುಡುಕಿರಿ, ಸಿಗುವುದು, ನೀವು ಹೀಗೆ ತನ್ನತ್ತ ಬರಲಿ ಅಂತಲೇ ದೇವರು ಕಾಯುತ್ತಿರುವುದು. ಕೈಗೆ ಹಾಕಿದ ಬೇಡಿ ಶಾಶ್ವತವಲ್ಲ…’

‘ಶಿಕ್ಷೆ ಕಡಿಮೆ ಮಾಡತಾರಾ…’ ರಾಸ್ಕೋಲ್ನಿಕೋವ್ ನಕ್ಕ.

‘ಏನು, ಬೂರ್ಜ್ವಾಗಳ ಥರ ನಾಚಿಕೇನಾ? ನಿನಗೇ ಗೊತ್ತಿಲ್ಲದೆ, ಭಯ, ನಾಚಿಕೆ ಇರಬಹುದು—ನೀನು ಇನ್ನೂ ಯುವಕ! ಆದರೂ ನೀನು ತಪ್ಪು ಒಪ್ಪಿಕೊಳ್ಳುವುದಕ್ಕೆ ನಾಚುವವನಲ್ಲ, ಹೆದರುವವನಲ್ಲ.’

‘ಬದುಕಂತೆ, ಥೂ!’ ರಾಸ್ಕೋಲ್ನಿಕೋವ್ ತಿರಸ್ಕಾರ ತೋರುವ ಹಾಗೆ ಮಾತಾಡಲು ಅಸಹ್ಯಪಡುವ ಹಾಗೆ, ಪಿಸುಗುಟ್ಟಿದ. ಎಲ್ಲೋ ಹೋಗುವವನ ಹಾಗೆ ಸ್ವಲ್ಪ ಎದ್ದು ಮತ್ತೆ ಕೂತ. ತೀರ ಹತಾಶನಾಗಿದ್ದ.

‘ಬದುಕನ್ನ ಥೂ ಅನ್ನುತ್ತೀಯಾ? ನಿಜವಾಗಲೂ! ನಿನಗೆ ವಿಶ್ವಾಸ ಹೋಗಿದೆ, ನಾನು ನಿನ್ನನ್ನ ಸುಮ್ಮನೆ ಹೊಗಳತಾ ಇದೇನೆ ಅಂದುಕೊಂಡಿದೀಯ. ಸರಿ, ಇದುವರೆಗೆ ಎಷ್ಟು ಬದುಕಿದ್ದೀಯ? ನಿನಗೆಷ್ಟು ಅರ್ಥವಾಗಿದೆ? ನೀನು ಒಂದು ಥಿಯರಿ ಮಾಡಿದೆ, ಅದು ವಿಫಲವಾಯಿತು, ಮತ್ತೆ ಒರಿಜಿನಲ್ ಕೂಡ ಅಲ್ಲ ಅಂತ ನಾಚಿಕೆಪಡುತ್ತಿದ್ದೀಯ. ನಿಜ, ಥಿಯರಿ ಕೆಟ್ಟದಾಗಿತ್ತು, ಕ್ಷುಲ್ಲಕವಾಗಿತ್ತು. ಅದರ ಅರ್ಥ ನೀನು ಸ್ಕೌಂಡ್ರಲ್ ಅಂತಲ್ಲ. ಖಂಡಿತ ನೀನು ಸ್ಕೌಂಡ್ರಲ್ ಅಲ್ಲ! ಕೊನೆಯ ಪಕ್ಷ ಅದು ನಿಮ್ಮ ತಲೆಯಲ್ಲೇ ಠಿಕಾಣಿ ಹೂಡಿ ಕೊಳೆತು ವಾಸನೆ ಹೊಡೆಯಲಿಲ್ಲ. ನಿನ್ನ ಥಿಯರಿಯ ಸುಂಕದಕಟ್ಟೆಯ ಬಾಗಿಲನ್ನೂ ಮುಟ್ಟಿದೆ. ನಿನ್ನ ಬಗ್ಗೆ ನಾನೇನು ಅಂದುಕೊಂಡಿದೇನೆ ಗೊತ್ತಾ? ಕೆಲವರು ಇರತಾರೆ, ಹೊಟೆಯ ಕರುಳನ್ನೆಲ್ಲ ಬಗೆದು ತೆಗೆದರೂ ತಮಗೆ ಹಿಂಸೆ ಕೊಟ್ಟವರನ್ನು ನಗುನಗುತ್ತ ನೋಡಿಕೊಂಡು ಸುಮ್ಮನಿರುತ್ತಾರೆ—ಅವರಿಗೆ ಅವರ ದೇವರು ಸಿಕ್ಕಿರಬೇಕು, ಅಷ್ಟೆ. ಅಂಥವನು ನೀನು. ಹೋಗಿ, ನಿನ್ನ ದೇವರನ್ನು ಹುಡುಕಿ, ಬದುಕು.
ಮೊದಲನೆಯದಾಗಿ ನಿನಗೆ ಹವಾ ಬದಲಾವಣೆ ತೀರ ಬೇಕಾಗಿದೆ. ನೋವುಪಡುವುದು ಕೂಡಾ ಒಳ್ಳೆಯದೇನೇ. ಹಾಗಿದ್ದರೆ ನೋವುಪಡಬೇಕು ಅಂತ ಮಿಕೋಲ್ಕ ಇಷ್ಟಪಡುವುದು ಸರಿಯಾಗೇ ಇದೆ. ನಂಬಿಕೆ, ವಿಶ್ವಾಸ ಸುಲಭದಲ್ಲಿ ಬರಲ್ಲ, ನನಗೆ ಗೊತ್ತು. ತೀರ ಜಾಣತನ ತೋರಿಸಬೇಡ. ಬದುಕಿಗೆ ಸುಮ್ಮನೆ ನಿನ್ನನ್ನು ಒಪ್ಪಿಸಿಕೊ, ವಿಚಾರ ಮಾಡಬೇಡ. ಚಿಂತೆ ಮಾಡಬೇಡ, ಬದುಕು ನಿನ್ನನ್ನ ನೆಟ್ಟಗೆ ಕರಕೊಂಡು ಹೋಗಿ ದಡಮುಟ್ಟಿಸುತ್ತದೆ. ನಿಮ್ಮ ಕಾಲಮೇಲೆ ನೀನು ನಿಲ್ಲಬಹುದು. ಯಾವ ದಡ? ನನಗೇನು ಗೊತ್ತು? ವಿಶಾಲವಾದ ಬದುಕು ನಿನ್ನ ಮುಂದಿದೆ ಅನ್ನುವುದು ಗೊತ್ತು. ಇದೆಲ್ಲಾ ನಾನು ಬಾಯಿಪಾಠ ಮಾಡಿಕೊಂಡು ಬಂದ ಭಾಷಣ ಅಂದುಕೊಳ್ಳುತ್ತೀಯ! ಅದೂ ಗೊತ್ತು. ಮುಂದೆ ಯಾವತ್ತಾದರೂ ನೆನಪಾಗತ್ತೆ, ನಿನ್ನ ಉಪಯೋಗಕ್ಕೆ ಬರತ್ತೆ. ಅದಕ್ಕೇ ಹೇಳತಾ ಇದೇನೆ. ನೀನು ಒಬ್ಬ ಮುದುಕಿಯನ್ನು ಕೊಂದೆ, ಒಳ್ಳೆಯದಾಯಿತು. ನಿನಗೆ ಬೇರೆ ಥರ ಥಿಯರಿ ಹೊಳೆದಿದ್ದರೆ ಲಕ್ಷಾಂತರ ಜನರನ್ನ ಹೀಗೇ ವಿಕಾರವಾಗಿ ಕೊಲ್ಲುತ್ತಿದ್ದೆ! ಆ ಕಾರಣಕ್ಕೆ ಈಗಲೂ ನೀನು ದೇವರಿಗೆ ಕೃತಜ್ಞತೆ ತೋರಿಸಬೇಕು. ದೊಡ್ಡ ಕೆಲಸ ಆಗಬೇಕು ನಿನ್ನಿಂದ ಅಂತ ದೇವರು ನಿನ್ನನ್ನ ಕಾಪಾಡಿದಾನೆ ಅನಿಸತ್ತೆ. ಭಯ ಕಡಮೆಯಾಗಲಿ, ಮನಸು ವಿಶಾಲವಾಗಲಿ. ಬಹಳ ದೊಡ್ಡ ಸಾಧನೆ ಮಾಡುವ ಮೊದಲು ಹೇಡಿ ಆಗುತ್ತೀಯಾ? ಇಲ್ಲ, ಈಗ ಹೇಡಿಯಾದರೆ ಅದು ನಾಚಿಕೆಗೇಡು. ಈಗ ಒಂದು ಹೆಜ್ಜೆ ಇಟ್ಟಿದ್ದೀಯ, ದೃಢವಾಗಿ ನಿಲ್ಲು. ನ್ಯಾಯದ ವಿಷಯ ಇದು. ಹೋಗು, ನ್ಯಾಯ ಏನನ್ನು ಬಯಸುತ್ತದೋ ಅದನ್ನು ಮಾಡು. ನಿನಗೆ ನಂಬಿಕೆ ಇಲ್ಲ, ಗೊತ್ತು. ಬದುಕು ನಿನ್ನನ್ನು ಮುಂದೆ ಕರೆದೊಯ್ಯುತದೆ, ನಿನಗೂ ಅದು ಇಷ್ಟ ಆಗತದೆ. ನಿನಗೆ ಹೊಸ ಗಾಳಿ ಬೇಕು ಅಷ್ಟೆ—ಗಾಳಿ, ಗಾಳಿ!’
ರಾಸ್ಕೋಲ್ನಿಕೋವ್ ಮೆಟ್ಟಿಬಿದ್ದ.

‘ನೀವು? ಯಾರು ನೀವು? ಎಂಥ ಪ್ರವಾದಿತನ ಇದು? ಶಾಂತಿಯ ಯಾವ ಪರ್ವತದ ಮೇಲೆ ನಿಂತು ಈ ಭವಿಷ್ಯವಾಣಿ ನುಡಿಯುತ್ತಿದ್ದೀರಿ?’

ನಾನು ಯಾರು? ನಾನು ಎಷ್ಟು ಬೆಳೆಯಬಹುದೋ ಅಷ್ಟು ಬೆಳೆದು ಮುಗಿದಿರುವ ಮನುಷ್ಯ. ಅಷ್ಟೇ. ಚೂರು ಪಾರು ಜ್ಞಾನ ಇದೆ, ಭಾವನೆ ಇವೆ, ಸಹಾನುಭೂತಿ ಇದೆ. ಆದರೂ ಇನ್ನು ಮುಂದೆ ಬೆಳೆಯಲಾರೆ ನಾನು. ನೀನು-ನಿನ್ನ ವಿಷಯ ಬೇರೆ. ದೇವರು ನಿನಗಾಗಿ ತಯಾರು ಮಾಡಿಟ್ಟಿರುವ ಬದುಕು ನಿನ್ನ ಮುಂದಿದೆ. ಯಾರಿಗೆ ಗೊತ್ತು, ನಿನ್ನ ಬದುಕು ಹೊಗೆಯ ಹಾಗೆ ಚದುರಿ ಹೋಗಬಹುದು. ಏನೂ ಆಗದೆಯೂ ಇರಬಹುದು. ನೀನು ಬೇರೆಯದೇ ಮಟ್ಟದ ಮನುಷ್ಯ ಆಗುವುದಾದರೆ ಬದುಕು ಕರಗಿ ಹೋದರೇನಂತೆ? ನೀನು ಸುಖಕ್ಕಾಗಿ ಹಾತೊರೆಯುವವನಲ್ಲ. ಬಹಳ ಕಾಲ ನಿನ್ನನ್ನು ಯಾರು ನೋಡದಿದ್ದರೆ ಏನಾದೀತು? ಕಾಲ ಮುಖ್ಯ ಅಲ್ಲ, ನೀನು ಮುಖ್ಯ. ನೀನು ಸೂರ್ಯ ಆಗು, ಎಲ್ಲರೂ ನಿನ್ನ ನೋಡತಾರೆ. ಸೂರ್ಯನ ಮೊದಲ ಕರ್ತವ್ಯ ಅಂದರೆ ಸೂರ್ಯನಾಗಿ ಇರುವುದೇ. ಯಾಕೆ ಮತ್ತೆ ನಗುತಿದ್ದೀಯ? ನಾನು ಶ್ಖಿಲರ್ ಥರ ಮಾತಾಡತಿದ್ದೇನೆ ಅಂತಲಾ? ನಾನು ನಿನ್ನನ್ನ ಹೊಗಳಿ ಪೂಸಿ ಹೊಡೀತಾ ಇದೇನೆ ಅಂದುಕೊಂಡಿದೀಯ, ಬೆಟ್ ಕಟ್ಟತೇನೆ ಬೇಕಾದರೆ. ಯಾರಿಗೆ ಗೊತ್ತು, ನಾನೀಗ ಅದನ್ನೇ ಮಾಡತಿರಬಹುದು. ಹೆಹ್ಹೆಹ್ಹೇ! ರೋಡಿಯಾನ್ ರೊಮಾನೊವಿಚ್, ನೀನು ನನ್ನ ಮಾತನ್ನ ನಂಬಬಾರದೂ, ಪೂರ್ತಿಯಂತೂ ಯಾವತ್ತೂ ನಂಬಬಾರದು, ಅನಿಸತ್ತೆ. ನನ್ನ ಸ್ವಭಾವಾನೇ ಹೀಗೆ, ಒಪ್ಪುತೇನೆ. ಇಷ್ಟು ಮಾತ್ರ ಹೇಳತೇನೆ,-ನಾನು ಎಷ್ಟರ ಮಟ್ಟಿಗೆ ಆಟ ಕಟ್ಟತೇನೆ, ಎಷ್ಟರ ಮಟ್ಟಿಗೆ ಪ್ರಾಮಾಣಿಕ ಅಂತ ತೀರ್ಮಾನ ಮಾಡುವ ಶಕ್ತಿ ನಿನಗಿದೆ ಅಂದುಕೊಂಡಿದೇನೆ.

‘ನನ್ನ ಯಾವಾಗ ಜೈಲಿಗೆ ಕಳಿಸತೀರಿ?’

‘ಓ, ಒಂದು, ಒಂದೂವರೆ ದಿನ ಕೊಡಬಹುದು. ಸುತ್ತಾಡು, ಯೋಚನೆ ಮಾಡು, ಪ್ರಾರ್ಥನೆ ಮಾಡು. ಇದರಿಂದ ನಿನಗೇ ಲಾಭ, ನಿನಗೇ ಅನುಕೂಲ.’

‘ನಾನು ಓಡಿ ಹೋದರೆ?’ ರಾಸ್ಕೋಲ್ನಿಕೋವ್ ವಿಚಿತ್ರವಾಗಿ ನಗುತ್ತ ಕೇಳಿದ.

‘ನೀನು ಓಡಿ ಹೋಗಲ್ಲ. ರೈತ ಓಡಿ ಹೋಗತಾನೆ. ಫ್ಯಾಶನ್ನಿನ ಸೆಕ್ಟೇರಿಯನ್ ಓಡಿ ಹೋಗತಾನೆ. ಬೇರೊಬ್ಬರ ವಿಚಾರಕ್ಕೆ ಗುಲಾಮನಾಗಿದ್ದವನಿಗೆ ‘ನೀನು ಹೀಗಿದ್ದೀಯ’ ಅಂತ ತೋರಿಸಿಕೊಟ್ಟರೆ ಜೀವಮಾನ ಪರ್ಯಂತ ಏನು ಹೇಳಿದರೂ ಅದನ್ನ ಕೇಳತಾನೆ. ನೀನೀಗ ನಿನ್ನ ಥಿಯರಿಯನ್ನೇ ನಂಬಲ್ಲ. ಮತ್ತೆ ಏನನ್ನು ನಂಬಿ ಓಡಿ ಹೋಗತೀಯ? ತಲೆತಪ್ಪಿಸಿಕೊಂಡು ಹೋಗಿ ಏನು ಮಾಡುತೀಯ? ತಲೆ ತಪ್ಪಿಸಿಕೊಂಡು ಬದುಕುವುದು ಕಡುಕಷ್ಟ. ಮೊದಲಿಗೆ ಬದುಕಿನಲ್ಲಿ ನಿನಗೊಂದು ಖಚಿತವಾದ ಸ್ಥಾನ ಬೇಕು. ಗಾಳಿ ಸರಿಯಾಗಿ ಆಡಬೇಕು. ನೀನು ಓಡಿ ಹೋದರೆ ನೀನೇ ವಾಪಸ್ಸು ಬರತೀಯ. ನಾವಿಲ್ಲದೆ ಬದುಕುವುದು ಅಸಾಧ್ಯ ನಿನಗೆ. ನಿನ್ನನ್ನ ಜೈಲಿನಲ್ಲಿ ಕೂಡಿ ಹಾಕಿದರೆ ಒಂದು, ಎರಡು ಅಥವಾ ಮೂರು ತಿಂಗಳು ಸುಮ್ಮನೆ ಕೂತಿರತೀಯ. ಆಮೇಲೆ, ಇದ್ದಕಿದ್ದ ಹಾಗೆ—ಸರಿಯಾಗಿ ಕೇಳಿಸಿಕೋ—ನಿನ್ನಷ್ಟಕ್ಕೆ ನೀನೇ, ನೀನೊಬ್ಬನೇ, ನಿನಗೂ ಗೊತ್ತೇ ಆಗದಷ್ಟ ಥಟ್ಟನೆ, ನಮ್ಮ ಹತ್ತಿರ ಬಂದು ತಪ್ಪು ಒಪ್ಪಿಕೊಂಡಿರುತೀಯ. ನೀನು ಸಂಕಟವನ್ನು ಅಪ್ಪಿಕೊಳ್ಳುತ್ತೀಯ ಅಂತ ನನಗೆ ಖಚಿತವಾಗಿ ಗೊತ್ತು. ನನ್ನ ಮಾತು ಇವಾಗ ನೀನು ಒಪ್ಪಲ್ಲ, ನೀನೇ ಬರುತೀಯ, ನೋಡತಾ ಇರು. ಯಾಕೆ ಅಂದರೆ ಸಂಕಟ ಅನ್ನುವುದು ಮಹಾ ದೊಡ್ಡ ಸಂಗತಿ. ನನ್ನ ದಪ್ಪ ಮೈ ನೋಡಿ ನಗಬೇಡ. ಸಂಕಟ, ಸಫರಿಂಗ್ ಅನ್ನುವ ಐಡಿಯ ಬಹಳ ದೊಡ್ಡದು. ಮಿಕೋಲ್ಕಾ ಸರಿಯಾಗಿ ಹೇಳಿದ. ಇಲ್ಲಾ! ನೀನು ಓಡಿ ಹೋಗಲ್ಲ, ರೊಡಿಯಾನ್ ರೊಮಾನೊವಿಚ್.’

ರಾಸ್ಕೋಲ್ನಿಕೋವ್ ಎದ್ದು ನಿಂತ. ಕ್ಯಾಪು ಎತ್ತಿಕೊಂಡ. ಪೋರ್ಫಿರಿ ಪೆಟ್ರೊವಿಚ್ ಕೂಡ ಎದ್ದ.
‘ಸುತ್ತಾಡಕ್ಕೆ ಹೊರಟೆಯಾ? ಸಂಜೆ ವಾತಾವರಣ ಚನ್ನಾಗಿದೆ. ಗುಡುಗು ಮಳೆ ಬರದೆ ಇದ್ದರೆ ಸರಿ. ಅಲ್ಲಾ, ಮಳೆ ಬಂದರೆ ಒಳ್ಳೆಯದೇ.
ಧೂಳು ತಗ್ಗಿ ಗಾಳಿ ಸ್ವಚ್ಛ ಆಗತ್ತೆ…’
ಅವನೂ ಕ್ಯಾಪು ಎತ್ತಿಕೊಂಡ

‘ಪೀಟರ್ ಪೆಟ್ರೊವಿಚ್, ನಾನು ಇವತ್ತು ತಪ್ಪೊಪ್ಪಿಗೆ ಮಾಡಿಕೊಂಡಿದ್ದೇನೆ ಅಂತ ದಯವಿಟ್ಟು ನಿಮ್ಮ ತಲೆಗೆ ಬರಬಾರದು. ನೀವು ವಿಚಿತ್ರ ಮನುಷ್ಯ. ಅದಕ್ಕೇ ಕುತೂಹಲದಿಂದ ನಿಮ್ಮ ಮಾತು ಕೇಳಿಸಿಕೊಂಡೆ. ತಪ್ಪೊಪ್ಪಿಗೆ ಮಾಡಿಕೊಂಡಿಲ್ಲ… ಅದು ನೆನಪಿರಲಿ.’

‘ಹೌದು ನನಗೆ ಗೊತ್ತು, ಜ್ಞಾಪಕ ಇರತ್ತೆ—ಅಯ್ಯೋ ನಡುಗುತ್ತಾ ಇದ್ದೀಯಲ್ಲ! ಚಿಂತೆ ಮಾಡಬೇಡ ಗೆಳೆಯ, ನಿನ್ನ ಇಷ್ಟವೇ ನಡೆಯಲಿ. ಸ್ವಲ್ಪ ಸುತ್ತಾಡು. ಬಹಳ ಹೊತ್ತು ಸುತ್ತಾಡಬೇಡ, ಅಷ್ಟೇ. ಅಂಥಾ ಪ್ರಸಂಗ ಬಂದರೆ ನನ್ನ ಪುಟ್ಟ ಕೋರಿಕೆ ನಡೆಸಿಕೊಡಬೇಕು,’ ಅನ್ನುತ್ತ ಪೋರ್ಫಿರಿ ದನಿ ತಗ್ಗಿಸಿ ಮಾತಾಡಿದ. ‘ತುಂಬ ಸೂಕ್ಷ್ಮದ ವಿಚಾರ. ಆದರೂ ಮುಖ್ಯವಾದ ವಿಚಾರ. ಅಕಸ್ಮಾತ್ ಏನಾದರೂ ಆದರೆ, ಆಗತ್ತೆ ಅಂತಾನೂ ಅಲ್ಲ, ನಿನಗೆ ಅಂಥ ಕೆಲಸ ಮಾಡಕ್ಕೆ ಆಗತ್ತೆ ಅನ್ನುವ ನಂಬಿಕೆ ಕೂಡ ನನಗಿಲ್ಲ, ಆದರೂ ನೋಡು, ಇದನ್ನೆಲ್ಲ ಬೇರೆ ಥರ ಮುಗಿಸಬೇಕು, ನಿನ್ನ ನೀನೇ ಇಲ್ಲ ಅಂತ ಮಾಡಿಕೊಂಡುಬಿಡಬೇಕು ಅಂತೇನಾದರೂ ಅನ್ನಿಸಿದರೆ, ಅಲ್ಲಾ, ಇದು ಬಹಳ ಹಾಸ್ಯಾಸ್ಪದ ಯೋಚನೆ ಅನಿಸಿದರೂ ಪರವಾಗಿಲ್ಲ, ದಯವಿಟ್ಟು, ಪ್ಲೀಸ್, ಅಂಥ ಸಂದರ್ಭ ಬಂದರೆ, ಎರಡೇ ಎರಡು ಸಾಲು ಚೀಟಿ ಬರೆದಿಡು, ವಡವೆ ಯಾವ ಕಲ್ಲಿನ ಕೆಳಗೆ ಬಚ್ಚಿಟ್ಟಿದೀಯ ಅಂತ ಹೇಳು. ಸರಿ, ಗುಡ್ ಬೈ… ಒಳ್ಳೆಯ ಯೋಚನೆ ಬರಲಿ, ಹೊಸ ಬದುಕಿನ ಆರಂಭ ಶುಭವಾಗಲಿ!’ಪೋರ್ಫಿರಿ ಹೊರಟು ಹೋದ.

ಯಾಕೋ ಬೆನ್ನು ಬಗ್ಗಿದ ಹಾಗೆ, ಕಾಸ್ಕೋಲ್ನಿಕೋವ್‌ನ ದೃಷ್ಟಿ ತಪ್ಪಿಸಿಕೊಳ್ಳುತಿದ್ದ ಹಾಗೆ ಅನಿಸುತ್ತಿತ್ತು. ರಾಸ್ಕೋಲ್ನಿಕೋವ್ ಕಿಟಕಿಯ ಹತ್ತಿರ ಹೋದ. ರೇಗುತ್ತ ಅಸಹನೆಯಿಂದ ಕಾದ. ಪೋರ್ಫಿರಿ ಈಗ ಬೀದಿಗೆ ಹೋಗಿ ಸಾಕಷ್ಟು ದೂರ ಹೋಗಿರಬಹುದು ಅನ್ನಿಸಿದ ಮೇಲೆ ತಾನೂ ಹೊರಟ.